ಭಯ ಮತ್ತು ಸೈಕಲಾಜಿಕಲ್ ಸೇಫ಼್ಟಿ
ಸೆಪ್ಟೆಂಬರ್ 19 ರಂದು ಪ್ರೆಸಿಡೆಂಟ್ ಟ್ರಂಪ್ H1B ವೀಸಾಕ್ಕೆ ಸಂಬಂಧಿಸಿದ ರಿಸ್ಟ್ರಿಕ್ಷನ್‌ಗಳನ್ನು ಅಳವಡಿಸಿದಾಗ, ಮೈನ್‌ಸ್ಟ್ರೀಮ್ ಅಮೇರಿಕದ ವೃತ್ತಪತ್ರಿಕೆಗಳಲ್ಲಿ ಈ ನಿಲುವಿಗೆ ಪೂರಕವಾಗಿ ಅನೇಕ ದನಿಗಳು ಎದ್ದಿದ್ದವು. ಹಾಗೇ ಜನರ ಬೆಂಬಲ ಕೂಡ ವ್ಯಕ್ತವಾಗಿತ್ತು. ಹೀಗೆ ಅನೇಕ ಪೋರ್ಟಲ್‌ಗಳನ್ನ ಓದುತ್ತಾ ಬಂದಾಗ, ವಾಲ್‌ಸ್ಟ್ರೀಟ್ ಜರ್ನಲ್‌ನಲ್ಲಿ ಓದಿಕೊಂಡು ಬಂದ ಒಂದು ಲೇಖನಕ್ಕೆ ಉತ್ತರವೆಂಬಂತೆ ಒಂದಿಷ್ಟು ಜನರು ಕಾಮೆಂಟ್ ಹಾಕಿದ್ದು ಗಮನಕೆ ಬಂತು. ಅದರಲ್ಲೊಬ್ಬರು, ಭಾರತದಂತಹ ದೇಶಗಳು ಅಷ್ಟೊಂದು ಇಂಜಿನಿಯರುಗಳನ್ನು ಹುಟ್ಟು ಹಾಕುವುದೇ ಹೌದಾದರೆ, ಆ ದೇಶದಲ್ಲಿ ಅದೇ ಪ್ರಮಾಣದಲ್ಲಿ ಇನೋವೇಷನ್ ಏಕೆ ಇನ್ನೂ ಹುಟ್ಟೋದಿಲ್ಲ ಎನ್ನೋ ರೀತಿಯಲ್ಲಿ ಅನಿಸಿಕೆ ಬರೆದಿದ್ದರು. ಅಂದು ಟ್ರಂಪ್ ಅಡ್ಮಿನಿಸ್ಟ್ರೇಷನ್ ತೆಗೆದುಕೊಂಡ ಈ H1B ವೀಸಾದ ನಿಲುವಿಗೆ ನಮ್ಮ ಸ್ವದೇಶೀ ಬಾಂಧವರೇ ದನಿಗೂಡಿಸಿರುವುದು ವಿಶೇಷ.
ಈ ಸಂಬಂಧ, ನಾವು ಭಾರತೀಯ ಮೂಲದ ಗ್ರಾಜುಯೇಟುಗಳನ್ನು, ಇಂಜಿನಿಯರುಗಳನ್ನು ಕೂಲಂಕುಷವಾಗಿ ನೋಡಿದಾಗ ಹಲವಾರು ಅಂಶಗಳು ಮುನ್ನೆಲೆಗೆ ಬರುತ್ತವೆ. ನಮ್ಮಲ್ಲಿ ಉತ್ಪಾದನೆಗೊಳ್ಳುವ ಗ್ರಾಜುಯೇಟುಗಳು, ಇಂಜಿನಿಯರುಗಳನ್ನು ನಾವು ಸಮರ್ಪಕವಾಗಿ ಬಳಸುತ್ತಿದ್ದೇವೆಯೇ? ಇನ್ನೋವೇಷನ್ ಅನ್ನೋ ವಿಚಾರಕ್ಕೆ ಬಂದರೆ, ಪ್ರಪಂಚದ ಎಲ್ಲ ದೇಶಗಳಿಗೆ ಹೋಲಿಸಿ ನೋಡಿದರೆ ಭಾರತ ಎಷ್ಟನೇ ಸ್ಥಾನದಲ್ಲಿ ನಿಲ್ಲುತ್ತದೆ? ಇತ್ಯಾದಿ.
ಇನ್ನೋವೇಷನ್ ಅನ್ನೋದು ಒಂದು ರೀತಿಯ ಹೊಸ ಕಲ್ಪನೆ, ನಾವೀನ್ಯತೆ, ಹೊಸ ಬದಲಾವಣೆ ಇದ್ದ ಹಾಗೆ. ನಾವುಗಳು ನಮ್ಮ ದೈನಂದಿನ ಜೀವನದಲ್ಲಿ status quo ವನ್ನು ಎಷ್ಟರ ಮಟ್ಟಿಗೆ ಪ್ರಶ್ನಿಸುತ್ತೇವೆ ಎನ್ನುವಲ್ಲಿಯಿಂದ ಈ ಹೊಸ ಶೋಧ ಆರಂಭವಾಗುತ್ತದೆ.
ಹಾಗಾದರೆ, ಬರೀ ಹೀಗೆ ಮಾಡು ಎಂದು ಹೇಳಿಕೊಟ್ಟ ಚೋರ್‌ಗಳನ್ನು ಮಾಡೋದರಲ್ಲಿ ಮಾತ್ರ ನಾವು ನಿಸ್ಸೀಮರೇ?
ಒಂದು ಅಧ್ಯಯನದ ಪ್ರಕಾರ, ಜಗತ್ತಿನ ಅತಿ ಇನ್ನೋವೇಟಿವ್ ದೇಶಗಳಲ್ಲಿ ಸ್ವಿಟ್ಜರ್‌ಲ್ಯಾಂಡ್, ಸ್ವೀಡನ್, ಯು.ಎಸ್.ಎ, ಸೌತ್ ಕೊರಿಯಾ, ಸಿಂಗಪೂರ್, ಯುಕೆ, ಫ಼ಿನ್‌ಲ್ಯಾಂಡ್, ನೆದರ್‌ಲ್ಯಾಂಡ್, ಡೆನ್ಮಾರ್ಕ್ ಹಾಗೂ ಇತ್ತೀಚೆಗೆ ಚೈನಾ ದೇಶದ ಹೆಸರೂ ಕೇಳಿಬರುತ್ತದೆ.
ತಮ್ಮ ತಮ್ಮ ಆಂತರಿಕ ಸ್ಟ್ರಗಲ್‌ಗಳು ಎಷ್ಟೇ ಇರಲಿ, ಈ ದೇಶಗಳಿಗೆ ಯಾವಾಗಲಾದರೂ ಸ್ವಾತಂತ್ರ್ಯ ಬಂದಿದ್ದಿರಲಿ, ಇವುಗಳೆಲ್ಲವೂ ತಮ್ಮ ತಮ್ಮ ನೆಲೆಯಲ್ಲಿ, ಹೊಸದೊಂದನ್ನು ಹುಡುಕಿಕೊಂಡು, ಅದರಲ್ಲಿ ಯಶಸ್ವಿಗೊಂಡವು. ಚೈನಾದಂತಹ ದೇಶದಲ್ಲಿ, ಸರ್ಕಾರವೇ ಈ ಬಗೆಗೆ ಪ್ರಾಶಸ್ತ್ಯ ಕೊಟ್ಟಿರಲೂ ಬಹುದು. ಹೊರಗಿನಿಂದ ನಾವು ಟೆಕ್ನಾಲಜಿಗಳನ್ನು ಆಮದು ಮಾಡಿಕೊಳ್ಳೋದಿಲ್ಲ, ಎನ್ನುವ ಒಂದೇ ಒಂದು ಮೂಲಮಂತ್ರ ಇನ್ನೋವೇಷನ್ ಅನ್ನು ಪ್ರೋತ್ಸಾಹಿಸಬಹುದು.
ಆದರೆ, ಭಾರತದಲ್ಲಿ, ನಾವು ಬೆಳೆದು ಬಂದ ಬಗೆಯನ್ನು ಗಮನಿಸಿದರೆ, ನಮ್ಮನ್ನೆಲ್ಲ ಸೈಕಾಲಜಿ ಮಟ್ಟದಲ್ಲಿ, ಮತ್ತು ಸೈದ್ಧಾಂತಿಕವಾಗಿ ಸದಾ ಹೆದರಿಸಿ ಇಡಲಾಗುತ್ತಿತ್ತು. ಈ ಹೆದರಿಕೆಯಲ್ಲಿ ಕೆಲವೊಮ್ಮೆ ನಾವು ನಿಜ ಹೇಳುವುದಕ್ಕೂ ಹಿಂಜರಿಯುತ್ತಿದ್ದೆವು. ನಾವು ಇನ್ನೋವೇಷನ್ ಅನ್ನೋ ಪರಿಕಲ್ಪನೆಯಲ್ಲಿ ಬೆಳೆದು ಬಂದಿದ್ದೇವೆಯೇ? ದೈನಂದಿನ ಆಗು ಹೋಗು, ಕೆಲಸ ಕಾರ್ಯಗಳನ್ನು ನಾವು ಒಂದು ರುಟೀನ್ ಆಗಿ ಪಾಲಿಸಿಕೊಂಡು ಬರುತ್ತೇವೋ ಅಥವಾ ಅದನ್ನ ಕಾಲದಿಂದ ಕಾಲಕ್ಕೆ ಬದಲಾಯಿಸಿಕೊಳ್ಳುತ್ತೇವೋ? ನಮ್ಮೊಳಗಡಗಿದ ಯಾವುದೋ ಒಂದು ಅವ್ಯಾಹತ ಭಯ ನಮ್ಮನ್ನು ಆಗಾಗ್ಗೆ ಅಸಹಾಯಕರನ್ನಾಗಿ ಮಾಡುತ್ತದೆಯೇ?
***
ನಮ್ಮ ಆಫ಼ೀಸುಗಳಲ್ಲಿ ಮಿಡ್ಲ್ ಮ್ಯಾನೇಜರುಗಳು ಏನಿದ್ದರೂ "ಹೌದಪ್ಪ", "ಹೌದಮ್ಮ" ಎಂದು ತಲೆ ಆಡಿಸುವ ಕೋಲೇ ಬಸವರು ಎಂದು ಅನೇಕ ಬಾರಿ ಅನಿಸಿದ್ದಿದೆ. ನಾವು ನಮ್ಮ ಸುಪೀರಿಯರ್ ಆಫ಼ೀಸರುಗಳನ್ನ ಪ್ರಶ್ನಿಸಬಹುದೇ? ಹಾಗೆ ಮಾಡಿದಾಗ ಅದು, ಉದ್ಧಟತನ, ದಾರ್ಷ್ಟ್ಯ, ಅಥವಾ ಓವರ್ ಕಾನ್ಫ಼ಿಡೆಂಟ್ ಆಗಿ ಕಾಣುವ ಬದಲು, ಒಂದು ವಿವೇಚಿತ ಉತ್ತರ ಅಥವಾ ಪ್ರತಿಕ್ರಿಯೆಯಾಗಿ ಮೂಡಿಬರಬಹುದೇ?
ನಾವು ಆಗಾಗ್ಗೆ ಕುತೂಹಲಿತರಾಗಿ ಎಕ್ಸ್‌ಪೆರಿಮೆಂಟುಗಳನ್ನು ಮಾಡುತ್ತಿರಬೇಕು. ಹಾಗೆ ಮಾಡುತ್ತ ನಮ್ಮ ತಪ್ಪುಗಳಿಂದ ನಾವು ಕಲಿಯುತ್ತೇವೆ, ನಮ್ಮ ವ್ಯಕ್ತಿತ್ವವನ್ನು ಬೆಳೆಸುವ ಅಂತಹ ಇನ್ನೋವೇಷನ್‌ನಿಂದ ನಾವು ಕಲಿಯುವುದು ಸಾಕಷ್ಟಿದೆ. ನನ್ನ ಸಹಪಾಠಿ ಒಬ್ಬ, ತಮ್ಮ ಮನೆಯ ರೇಡಿಯೋ, ಟೇಪ್‌ರೆಕಾರ್ಡರ್ ಮೊದಲಾದ ಎಲೆಕ್ಟ್ರಾನಿಕ್ ವಸ್ತುಗಳನ್ನೆಲ್ಲ ಬಿಚ್ಚಿ ಹರವಿ ಅದರಲ್ಲಿ ಅನೇಕಾನೇಕ ಪ್ರಯೋಗಗಳನ್ನು ಮಾಡುತ್ತಿದ್ದ. ಹೈ ಸ್ಕೂಲ್ ಮುಟ್ಟುವ ಹೊತ್ತಿಗಾಗಲೇ ಅವನಿಗೆ ಒಂದು ರೇಡಿಯೋ ಸ್ಟೇಷನ್ ನಡೆಸುವಷ್ಟು ಪರಿಣಿತಿ ಇತ್ತು. ಮೈಕ್ ಸಿಸ್ಟಂ ಅನ್ನು ನಡೆಸುವುದಾಗಲೀ, ಅದರಲ್ಲಿ ಏನಾದರೂ ಅಡೆತಡೆ ಬಂದರೆ ಅದನ್ನು ಸರಿ ಮಾಡುವುದಾಗಲೀ ಅವನಿಗೆ ಕರತಲಾಮಲಕವಾಗಿತ್ತು. ಮುಂದೆ ಅವನು ಕೈಗೆ ಕಟ್ಟೋ ವಾಚುಗಳನ್ನ ಸರಿ ಮಾಡತೊಡಗಿದ. ಆಗಿನ ಕಾಲದಲ್ಲಿ ಸರಿಯಾದ ಬೆಳಕು, ಉಪಕರಣಗಳಿಲ್ಲದಿದ್ದರೂ, ಯಾವುದೇ ಮ್ಯಾನುವಲ್ ಅಥವಾ ಲರ್ನಿಂಗ್ ಟೂಲ್‌ಗಳಿಲ್ಲದಿದ್ದರೂ ಅವನು ಅನೇಕ ವಸ್ತುಗಳನ್ನು ರಿಪೇರಿ ಮಾಡುವುದರಲ್ಲಿ ಸಿದ್ಧ ಹಸ್ತನೆನಿಸಿ, ಎಲ್ಲರಿಗೂ ಬೇಕಾದವನಾಗಿದ್ದು ನನಗಿನ್ನೂ ಚೆನ್ನಾಗಿ ನೆನಪಿದೆ. ಅವನ ಮನೆಯಲ್ಲಿ, ಯಾವಾಗ ನೋಡಿದರೂ ಒಂದಲ್ಲ ಒಂದು ಸರ್ಕ್ಯೂಟ್ ಬೋರ್ಡ್‌ಗಳು ಬಿದ್ದುಕೊಂಡಿರುತ್ತಿದ್ದವು. ಅವನು ಹೈ ಸ್ಕೂಲಿಗೇ ತನ್ನ ವಿದ್ಯಾಭ್ಯಾಸವನ್ನು ನಿಲ್ಲಿಸಿ, ಮುಂದೆ ರಿಪೇರಿ ಮಾಡುವುದನ್ನೇ ಜೀವನಮಾರ್ಗವಾಗಿ ತೆಗೆದುಕೊಂಡ ಹಾಗೆ ನೆನಪು. ಹಳ್ಳಿಯೊಂದರಲ್ಲಿ ಬೆಳೆದ ಅವನ ಕುತೂಹಲ ಹಾಗೂ ಸೋತು-ಸೋತು ಗೆಲ್ಲುವ ಛಲವನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ಅದಕ್ಕೆ ತದ್ವಿರುದ್ಧ ಎನ್ನುವಂತೆ, ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಮಾಸ್ಟರ್ ಡಿಗ್ರಿ ಪಡೆದ ಎಷ್ಟೋ ಜನರಿಗೆ, ಒಂದು ಹಾಲ್‌ವೇ ನಲ್ಲಿ 3-ವೇ ಸ್ವಿಚ್ ಅನ್ನು ಹಾಕುವುದಕ್ಕೆ ಬರೋದಿಲ್ಲವಲ್ಲ ಎಂಬುದನ್ನು ಕಂಡು ಮಮ್ಮಲ ಮರುಗಿದ್ದೇನೆ. ಹೀಗೆ, ನಮ್ಮ ಜೊತೆಯಲ್ಲಿ ಓದಿ-ಬೆಳೆದ ಘಟಾನುಘಟಿಗಳು: ತಾವು ಕಂಪ್ಯೂಟರ್ ಇಂಜಿನಿಯರ್ ಎಂದುಕೊಂಡವರಿಗೆ ಕಂಪ್ಯೂಟರ್‌ನಲ್ಲಿ ರ‍್ಯಾಮ್ ಯಾವುದು, ಎಲ್ಲಿದೆ ಎಂಬುದು ಕೂಡ ಗೊತ್ತಿಲ್ಲವಲ್ಲ ಎಂದು ಹಲ್ಲು ಕಚ್ಚಿಕೊಂಡಿದ್ದೇನೆ, ಕೂಡ.
ನಾನು ಮೊದಲೇ ಹೇಳಿದ ಹಾಗೆ ಇನ್ನೋವೇಷನ್ ಅಥವಾ ಇನ್ನೋವೇಟಿವ್ ಆಗಿ ಇರೋದನ್ನ ಒಂದು ಹೊಸ ಬದಲಾವಣೆ, ನಾವಿನ್ಯತೆ ಅಂತ ಕರೆದುಕೊಳ್ಳೋಣ. ನಾವೆಲ್ಲರೂ ಹೊಸದೊಂದು ಪ್ರಾಡಕ್ಟ್ ಅನ್ನೇ ಆವಿಷ್ಕಾರ ಮಾಡಿ, ಎಲ್ಲರೂ ಸ್ಟೀವ್ ಜಾಬ್ ಆಗಲೇ ಬೇಕು ಎಂದೇನೂ ಇಲ್ಲ. ನಮ್ಮ ನಮ್ಮ ಕಣ್ಣಳತೆಯಲ್ಲಿ ನಾವು ಎಷ್ಟು ಸೊಫ಼ಿಸ್ಟಿಕೇಟೆಡ್ ಆಗಿ ಬದುಕುತ್ತಿದ್ದೇವೆ? ಹೊಸ ಹೊಸ ಪರಿಕರ/ಉಪಕರಣಗಳನ್ನು ಹೇಗೆ ಬಳಸುತ್ತಿದ್ದೇವೆ? ಹಳತಕ್ಕೆ ಅಂಟಿಕೊಂಡು ಬೆಳೆಯದವರಾಗಿ ಹೋಗಿದ್ದೇವೆಯೋ ಅಥವಾ ಹೊಸತು-ಹಳತಕ್ಕೆ ನಡುವಿನ ಒಂದು ಒಪ್ಪಂದದ ಮೇಲೆ ಬದುಕುತ್ತಿದ್ದೇವೆಯೇ ಎಂದೆಲ್ಲಾ ಯೋಚಿಸಿಕೊಳ್ಳೋಣ. ಮುಖ್ಯವಾಗಿ, ನಾವಾಗಲೀ ನಮ್ಮ ಮಕ್ಕಳಾಗಲೀ ಪ್ರಯತ್ನ ಪಡುವುದನ್ನು ನಿಲ್ಲಿಸಬಾರದು. ನೂರಕ್ಕೆ ಎಂಬತ್ತು ಅಂಶ, ಆ ಪ್ರಯತ್ನದಲ್ಲಿ ಸೋಲಿದ್ದರೂ ಕೂಡ, ಅಲ್ಲಿ ಕಲಿಕೆ ಇದೆ. ಅದು ಬಹಳ ಮುಖ್ಯ. ನಿಮಗೆಲ್ಲ ಗೊತ್ತಿರುವ ಹಾಗೆ, ಒಂದು ಕಾಲದಲ್ಲಿ ವಿಜ್ಞಾನಿ ಎಡಿಸನ್ ಎಲೆಕ್ಟ್ರಿಕ್ ಬಲ್ಬ್ ಒಂದನ್ನು ಕಂಡು ಹಿಡಿದಾಗ, ಆತನೇ ಉದ್ಗರಿಸಿದಂತೆ, "ನಾನು ಸೋತಿಲ್ಲ, ಆದರೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಸಲ ಪ್ರಯತ್ನಿಸಿದ್ದೇನೆ". ಈಗ ನಮಗೆಲ್ಲ ಟ್ರಿವಿಯಲ್ ಆಗಿ ಕಾಣೋ ಲೈಟ್ ಬಲ್ಬ್‌ಗಳ ಆವಿಷ್ಕಾರದ ಹಿಂದೆ ಎಂತಹ ರೋಚಕವಾದ ಕತೆ ಇದ್ದಿರಬಹುದು?!
ಹೊಸದನ್ನು ಕಂಡು ಹಿಡಿಯೋದು, ಅಥವಾ ಹೊಸ ಬದಲಾವಣೆಯನ್ನು ರೂಪಿಸಿಕೊಳ್ಳೋದು ಎಂದಾಕ್ಷಣ ಇರುವುದನ್ನೆಲ್ಲ ಖಂಡಿಸುವುದು ಅಂತ ಅರ್ಥ ಅಲ್ಲ. ಇರುವುದನ್ನು ಒಂದು ತರ್ಕದಲ್ಲಿ ಪ್ರಶ್ನಿಸಿಕೊಳ್ಳುವುದು ಅಷ್ಟೇ. ನಾವು ಚಿಕ್ಕವರಿರುವಾಗ ಬಾವಿಯಿಂದ ನೀರು ಸೇದಿ, ನಮ್ಮ ತೊಟ್ಟಿ, ಹಂಡೆಗಳನ್ನು ತುಂಬಿಸಬೇಕಾಗಿತ್ತು. ಜಾನುವಾರುಗಳಿಗೆ ನೀರು ಕೊಡಬೇಕಾಗಿತ್ತು. ಮುಖ್ಯವಾಗಿ ಹಿತ್ತಲಿನಲ್ಲಿ ಬೆಳೆಯುತ್ತಿದ್ದ ತರಾವರಿ ಗಿಡ, ಬಳ್ಳಿ, ಚಪ್ಪರಗಳಿಗೆ ನೀರುಣಿಸಬೇಕಾಗಿತ್ತು. ನಾವು ಒಮ್ಮೊಮ್ಮೆ ದಿನಕ್ಕೆ ನೂರು ಕೊಡ ನೀರು ತೆಗೆದದ್ದೂ ಇದೆ. ಆಗೆಲ್ಲ ನಮಗೆ ಅದು ರುಟೀನ್ ಆಗಿತ್ತು. ಅದನ್ನ ಎಷ್ಟು ಎಫ಼ಿಷಿಯಂಟ್ ಆಗಿ ಮಾಡಿ, ಕಡಿಮೆ ಸಮಯದಲ್ಲಿ ಮುಗಿಸಿ, ಉಳಿದ ವಿಚಾರಕ್ಕೆ ಟೈಮ್ ಮಾಡಿಕೊಳ್ಳುತ್ತಿದ್ದೆವು. ಆಗೆಲ್ಲ ಸಂಪನ್ಮೂಲಗಳು ಕಡಿಮೆಯೇ. ಅದೇ ವಿಚಾರವನ್ನು ಇಂದು ಯಾರಿಗಾದರೂ ಹೇಳಿದರೆ, ನೀವು ಬಾವಿಗೆ ಒಂದು ಎಲೆಕ್ಟ್ರಿಕ್ ಮೋಟಾರನ್ನು ಯಾಕೆ ಅಳವಡಿಸಿಕೊಳ್ಳಲಿಲ್ಲ ಎಂದು ಸುಲಭವಾಗಿ ಕೇಳಬಹುದು. ನಾವು ಆಗ ಹೀಗೆ ಯೋಚಿಸಲೇ ಇಲ್ಲ. ಅಕಸ್ಮಾತ್ ನಮಗೆ ಸರಿಯಾದ ಸಂಪನ್ಮೂಲಗಳು ಇದ್ದರೂ ಕೂಡ ನಾವು ಹೊಸ ಯೋಚನೆಗಳನ್ನು ಮಾಡಿರುತ್ತಿದ್ದೇವೆಯೇ ಎಂದು ಸಂಶಯವಾಗುತ್ತದೆ.
ಈ ಹೊಸ ಯೋಚನೆಗೆಳು ಅಂದ ಕೂಡಲೆ, ನಮಗೆ ಹೊಸದಾಗಿ ಯೋಚಿಸುವುದಕ್ಕಷ್ಟೇ ಭಯ. ನಾವು ಇರುವುದನ್ನೆಲ್ಲ ಪ್ರಶ್ನಿಸುವುದು ಅಧಿಕಪ್ರಸಂಗತನವಾಗುತ್ತಿತ್ತು. ನಮ್ಮ ಕೆಲಸವನ್ನ ಕಡಿಮೆ ಮಾಡಿಕೊಳ್ಳುವುದು ಮೈಗಳ್ಳತನವಾಗುತ್ತಿತ್ತು. ನಾವು ದೊಡ್ಡವರ ಎದುರು ಮಾತನಾಡಿದರೆ ಅದು ಉದ್ಧಟತನದ ಉದಾಹರಣೆಯಾಗುತ್ತಿತ್ತು. ನಮ್ಮ ಜೀವನವೆಲ್ಲ ನಾವು, "ಹೇಳಿದಂತೆ ಕೇಳುವ ಒಳ್ಳೆಯ ಹುಡುಗ/ಹುಡುಗಿ" ಎಂದು ಕರೆಸಿಕೊಳ್ಳುವುದಕ್ಕೆ ಆದ್ಯತೆ ಕೊಡುತ್ತಿದ್ದೆವೇನೋ ಎಂದೆನಿಸುತ್ತದೆ. ಇವತ್ತಿಗೂ ಕೂಡ ನಮಗೆ ಕೊಟ್ಟ ಕೆಲಸವನ್ನು ನೀಟ್ ಆಗಿ ಮಾಡುವುದರಲ್ಲಿ ನಾವು ನಿಸ್ಸೀಮರಾಗೇ ಕಾಣುತ್ತೇವೆ. ಆದರೆ, ನಮಗೆ ಕೆಲಸವೇ ಇಲ್ಲದೆ ಹೋದರೆ...? ನಮ್ಮಿಂದ ನಮಗೋಸ್ಕರ ಯಾವ ಕೆಲಸವನ್ನು ಹುಟ್ಟುಹಾಕಿಕೊಳ್ಳಲು ಸಾಧ್ಯವಾಗಬಹುದು? ಆದ್ದರಿಂದಲೇ, ಸರ್ಕಾರೀ ಕೆಲಸವಾಗಲೀ, ಅಥವಾ ಕಂಪನಿಯ ಕೆಲಸವಾಗಲೀ, ಇವೆಲ್ಲದರಲ್ಲಿ ರಿಸ್ಕ್ ತೆಗೆದುಕೊಳ್ಳದವರಲ್ಲಿ ನಮ್ಮಂತಹವರು ಎದ್ದು ಕಾಣುತ್ತಾರೆ.
***
"ಹೀಗೆ ಮಾಡು, ಹಾಗೆ ಮಾಡು...", ಎಂದು ಹೇಳೋದನ್ನೆಲ್ಲ ನಮ್ಮ ಕಾಲಕ್ಕೇ ಬಿಡೋಣ. ನಾವು ಅಮೇರಿಕದಲ್ಲಿರುವ ಅನುಕೂಲಗಳನ್ನು ಬಳಸಿಕೊಂಡು ಇನ್ನಾದರೂ ಸೃಜನಶೀಲ ಮನಸ್ಥಿತಿಯಿಂದ ಯೋಚಿಸಿಕೊಳ್ಳದಿದ್ದರೆ ಹೇಗೆ? ನಾವು ನಡೆದು ಬಂದ ಹಾದಿ ಹೇಗಾದರೂ ಇರಲಿ, ನಮ್ಮ ನಮ್ಮ ತಲ್ಲಣಗಳನ್ನ ನಮ್ಮ ಮಕ್ಕಳ ಮೇಲೆ ಹೇರಿ, ಅವರು ಹೀಗೇ ಇರಲಿ, ಹಾಗೇ ಇರಲಿ ಎಂದು ಆಶಿಸುವುದು ಎಷ್ಟರ ಮಟ್ಟಿಗೆ ಸರಿಯಾದೀತು? ಧೈರ್ಯ, ಸೋತು ಗೆಲ್ಲುವ ಛಲ, ಬಿದ್ದು ಏಳುವ ಮನಸ್ಥಿತಿ ಇವೆಲ್ಲ status quo ವನ್ನು ಪಾಲಿಸುವುದರಿಂದ ಬರುತ್ತದೆ ಎಂದು ನಾನಂತೂ ನಂಬಿಕೊಂಡಿಲ್ಲ. ಹಾಗೆಯೇ, ಬದುಕಿಗೆ ವಿನಯ, ವಿದೇಯತೆ, ಗರ್ವ, ಸ್ವಾಭಿಮಾನ ಮೊದಲಾದ ಕ್ವಾಲಿಟಿಗಳು ಅಷ್ಟೇ ಮುಖ್ಯ. ಇವೆರಡರ ನಡುವಿನ ಒಂದು ಬ್ಯಾಲೆನ್ಸ್‌ನ ಸಹಾಯದಲ್ಲಿ ನಮ್ಮೆಲ್ಲರಲ್ಲೂ ಒಂದು ರೀತಿಯ ಇನ್ನೋವೇಟಿವ್ ಮೈಂಡ್‌ಸೆಟ್ ಹುಟ್ಟಲಿ ಎಂದು ಆಶಿಸುತ್ತೇನೆ.

No comments:
Post a Comment