ನೀರವತೆಯ ಮರಣ ಮೃದಂಗ
ಎಲ್ಲೆಲ್ಲೂ
ಶೂನ್ಯತೆ,
ಎಲ್ಲ ಕಡೆ ನಿಶ್ಶಬ್ಧ, ಒಂದು ರೀತಿಯಲ್ಲಿ ಇಡೀ ಪ್ರಪಂಚದ
ಚಲನವಲನವೇ ನಿಂತು ಹೋದ ಹಾಗೆ, ಒಂದು ರೀತಿಯಲ್ಲಿ ಜಗತ್ತಿನ ನರನಾಡಿಗಳೇ ಸ್ತಬ್ಧವಾದ
ಹಾಗೆ. ಬೀಸುತ್ತಿರುವ ಗಾಳಿಯಿಂದ ಹಿಡಿದು,
ಹರಿಯುವ ನೀರಿನವರೆಗೆ, ಪಕ್ಷಿ-ಪ್ರಾಣಿ ಸಂಕುಲಗಳು ಬೆರಗಾಗಿ,
ಗಿಡ-ಮರಗಳೂ ತಮ್ಮನ್ನು ತಾವು ಚಿವುಟಿ ನೋಡಿಕೊಳ್ಳುವ ಹಾಗೆ... ಮನುಕುಲ ಸಂಪೂರ್ಣ
ತಟಸ್ಥಗೊಂಡಿದೆ. ಜೊತೆಗೆ ತನ್ನ ಜೀವಕ್ಕೇ ಕುತ್ತಾಗಿ
ಹೆದರಿಕೊಂಡು ತಾನು ಕಟ್ಟಿಕೊಂಡ ಗೂಡಿನಲ್ಲೇ ಅವಿತು ಕುಳಿತಿದೆ.
ಇವೆಲ್ಲವೂ
ಆಗಿರುವುದು ಯಾವುದೋ ದೈತ್ಯ ಪರಂಪರೆಯ ಬೂಟಾಟಿಕೆಯ ಆಕ್ರಮಣದಿಂದಲ್ಲ, ಯಾವುದೋ ಭೀಕರ ಶಕ್ತಿಯ ಅವ್ಯಾಹತ ಹೊಡೆತದಿಂದಲ್ಲ. ಇವೆಲ್ಲವೂ ಆಗಿರುವುದು ಯಾವುದೋ ನೆರಳಿಗಿಂತಲೂ ಮಿಗಿಲಾದ,
ಮನಸ್ಸಿಗಿಂತಲೂ ವೇಗವಾದ, ಬೆಂಕಿಗಿಂತಲೂ ತೀಕ್ಷ್ಣವಾದ,
ಪ್ರಕಾಶಮಾನವಾದ ಆಯುಧದಿಂದಲ್ಲ... ಎಲ್ಲಕ್ಕೂ ಮಿಗಿಲಾಗಿ ಕಣ್ಣಿಗೆ ಕಾಣದ,
ಇತ್ತ ಕಡೆ ಪೂರ್ಣ ಪ್ರಮಾಣದಲ್ಲಿ ಜೀವವೂ ಇರದ, ಎಲ್ಲೋ ಹುಟ್ಟಿ
ಎಲ್ಲೋ ಪಸರಿಸಿ, ಎಲ್ಲೋ ರೂಪ ಪರಿವರ್ತನೆಯನ್ನು ಪಡೆದು ಪ್ರಪಂಚದಾದ್ಯಂತ
ಇರುವ ಟ್ರಿಲಿಯನ್ನುಗಟ್ಟಲೆ ಜೀವ ಪ್ರಮಾಣದಲ್ಲಿ ಕೇವಲ ಮಾನವನನ್ನು ಆಧರಿಸಿ ಕಾಡುತ್ತಿರುವುದು ಮೈಕ್ರೋಸ್ಕೋಪಿನಲ್ಲೂ
ಕಷ್ಟಪಟ್ಟು ಹುಡುಕಿದರೆ ಕಾಣುವ ಒಂದು ವೈರಾಣು, ಅಷ್ಟೇ!
ಮನುಕುಲದ
ಸರ್ವನಾಶಕ್ಕೆ ಸೆಡ್ಡು ಹೊಡೆದಿರುವವರು ಯಾರು? ಪ್ರಾಣಿಯೂ ಅಲ್ಲ,
ಪಕ್ಷಿಯೂ ಅಲ್ಲ, ಕ್ಷುದ್ರ ಜೀವಿ. ಮನೆಯ ಒಳಗೂ ಹೊರಗೂ ಗಾಳಿ ಇದ್ದಲ್ಲೆಲ್ಲ ಕಡೆ ಇದ್ದು,
ಹಗಲೂ-ರಾತ್ರಿಯೂ ಬೇಧಭಾವ ತೋರದೇ, ಬಡವ-ಶ್ರೀಮಂತರೆಂದು
ಮುಖ-ಮುಸುಡಿ ನೋಡದೇ, ಯಾವುದೇ ವೇಷ-ಭಾಷೆಗಳನ್ನೂ ಮೀರಿ, ಎಲ್ಲರ ಒಳಹೊಕ್ಕು ನಮ್ಮೆಲ್ಲರ ಸೊಕ್ಕನ್ನು ಮುರಿಯಲು ಸೆಡ್ಡು ಹೊಡೆದು ನಿಂತಿದೆ ಈ ಕೊರೋನಾ
ವೈರಸ್ಸು!
***
ಏಳು
ಬಿಲಿಯನ್‌ಗಿಂತಲೂ ಹೆಚ್ಚಿರುವ ನಾವೆಲ್ಲ ನಮ್ಮ ಪರಾಕ್ರಮದ ಉತ್ತುಂಗದಲ್ಲಿದ್ದೆವು. ಪಕ್ಷಿಗಿಂತಲೂ ಮಿಗಿಲಾಗಿ ಹಾರಿದೆವು, ಮೀನಿಗಿಂತಲೂ ವೇಗವಾಗಿ ಈಜಿದೆವು. ಇಡೀ ಭೂಮಂಡಲದ
ಮೂಲೆ-ಮೂಲೆಗಳಲ್ಲಿ ನಮ್ಮ ಉಸಿರಿನ ಸೋಂಕನ್ನು ಪಸರಿಸಿದೆವು. ನಾವು ಯಂತ್ರಗಳನ್ನು ಹುಟ್ಟುಹಾಕಿದೆವು, ತಂತ್ರಗಳನ್ನು ಹೆಣೆದೆವು. ನಮ್ಮ ಇರುವಿಕೆಯನ್ನು
ಪ್ರಶ್ನಿಸುವಷ್ಟರ ಮಟ್ಟಿಗೆ ಆಗಿಂದಾಗ್ಗೆ ಹೊಡೆತಗಳನ್ನೂ ತಿಂದೆವು. ಸುಮಾರು ನೂರು ವರ್ಷಗಳ ಹಿಂದೆ ಜಗತ್ತಿನಾದ್ಯಂತ ಗಾಳಿಯಲ್ಲಿ
ಹರಡಿದ ಫ್ಲೂ (ಸ್ಪಾನಿಷ್ ಫ್ಲೂ) ಐವತ್ತು ಮಿಲಿಯನ್ ಜನರನ್ನು ಬಲಿ ತೆಗೆದುಕೊಂಡ ದಾಖಲೆಗಳಿವೆ. ತದನಂತರ ಐವತ್ತರ ದಶಕದಲ್ಲಿ ಹಾಂಗ್‌ಕಾಂಗ್‌ನಿಂದ ಶುರುವಾಗಿ
ಎಲ್ಲಕಡೆಗೆ ಹರಡಿದ ಏಷಿಯನ್ ಫ್ಲೂ, ಒಂದು ಮಿಲಿಯನ್‌ಗೂ ಹೆಚ್ಚು ಜನರನ್ನು
ಕೊಂದು ಹಾಕಿತು. ತದನಂತರ SARS, H1N1, AIDS ಮೊದಲಾದ
ಖಾಯಿಲೆಗಳಿಂದ ಮನುಕುಲ ಸತತವಾಗಿ ಸಂಕಷ್ಟಕ್ಕೆ ಒಳಗಾಗಿದ್ದರೂ, ಕಳೆದ ನೂರು
ವರ್ಷಗಳಲ್ಲಿ ಇಡೀ ಪ್ರಪಂಚವನ್ನೇ ಬಂದ್ ಮಾಡಿದ ಕೀರ್ತಿ ೨೦೧೯-೨೦ರ ಕೋವಿಡ್ ಕೊರೋನಾ ವೈರಸ್‌ಗೆ ಸಲ್ಲುತ್ತದೆ.
ನಮ್ಮ ಇತಿಹಾಸದಲ್ಲಿ ಬರೀ ಫ್ಲೂ ಖಾಯಿಲೆ ಒಂದೇ ಅಲ್ಲದೇ
ಪ್ಲೇಗ್, ಮೀಸಲ್ಸ್, ಸ್ಮಾಲ್‌ಪಾಕ್ಸ್,
ಮೊದಲಾದವೂ ಕೂಡ ತಮ್ಮ ಶಕ್ತ್ಯಾನುಸಾರ ಮಾನವನನ್ನು ಕಟ್ಟಿಹಾಕಿವೆ. ಇವೆಲ್ಲ ಸರ್ವವ್ಯಾಪಿಯಾಗಿ ಗಾಳಿಯಲ್ಲೇ ಹರಡುವಂಥ ಮಹಾಮಾರಿಗಳ
ವಿಶೇಷವೆಂದರೆ, ಈ ಎಲ್ಲ ಖಾಯಿಲೆಗಳು ಮೂಲತಃ ಕಣ್ಣಿಗೆ ಕಾಣದಷ್ಟು ಚಿಕ್ಕದಾದ ಜೀವ-ನಿರ್ಜೀವ ಹಂತದಲ್ಲಿರುವ
ಕೀಟಾಣು-ಜೀವಾಣುಗಳಿಂದ ಶುರು ಆದಂತವುಗಳು. ಹಾಗೆಯೇ,
ಈ ಎಲ್ಲ ಖಾಯಿಲೆಗಳು ನಮಗೆ ಬಂದಿದ್ದರಿಂದಲೇ ನಮ್ಮ ವೈದ್ಯಕೀಯ ವಿಜ್ಞಾನ ಇಷ್ಟೊಂದು
ಮುಂದುವರೆದಿರುವುದು ಎಂದರೂ ತಪ್ಪಾಗಲಾರದು. ಒಂದು
ರೀತಿಯಲ್ಲಿ ಕಣ್ಣಿಗೆ ಕಾಣದ ಈ ಸೂತ್ರಧಾರಿ ಜೀವ ವೈವಿಧ್ಯ ನಮ್ಮನ್ನು ಕಾಲಕ್ರಮೇಣ ಕುಣಿಸುತ್ತಿರುವುದು.
***
ಮನುಕುಲ
ಇದನ್ನೂ ಗೆದ್ದು ನಿಲ್ಲುತ್ತದೆ. ಆದರೆ, ಈ ಬಾರಿ ವಿಶೇಷವಾದ ಪಾಠವನ್ನು ಕಲಿಯುವುದರ ಮೂಲಕ ಇನ್ನು ಮುಂದಿನ ಐವತ್ತು-ಎಪ್ಪತ್ತೈದು ವರ್ಷಗಳಿಗಾಗುವಷ್ಟರ
ಮಟ್ಟಿನ ಅನುಭವವನ್ನು ಪಡೆಯುತ್ತದೆ. ಉತ್ತುಂಗಕ್ಕೆ
ಏರುತ್ತಿರುವ ನಾವು ಎಷ್ಟು ಚಿಕ್ಕವರು ಎಂಬುದನ್ನು ನೆನಪಿಸುವುದಕ್ಕಾದರೂ ಇದು ಬೇಕಾಗುತ್ತದೆ. ಹಿಂದಿನ ಮಹಾಮಾರಿ ರೋಗಗಳ ಮೂಲದಲ್ಲಿ ಬರೀ ನಿಸರ್ಗದ ಕೈ ಇತ್ತೋ,
ಅಥವಾ ಜಾಗತಿಕ ಯುದ್ಧಗಳಲ್ಲಿ ತನ್ನನ್ನು ತಾನೇ ಹುಡುಕಿಕೊಳ್ಳುತ್ತಿರುವ ಮಾನವ ತನ್ನ
ಸಂತತಿಯನ್ನೇ ಪರೀಕ್ಷೆಗೊಡ್ಡುವ ವಿಷಮ ಹಂತಕ್ಕೆ ಬಂದು ತಲುಪಿದ್ದನೋ ಯಾರು ಬಲ್ಲವರು? ಆದರೆ, ಇಂದಿನ
ದಿನಗಳಲ್ಲಿ ಅಧಿಕವಾಗಿ ಹರಡುತ್ತಿರುವ ಕೋವಿಡ್ ಸಂತತಿಯ
ಹಿನ್ನೆಲೆಯಲ್ಲಿ ಮಾನವನ ಹುನ್ನಾರ ಖಂಡಿತ ಇದೆ - ಇದು, ಒಂದೇ ಮುಗ್ಧ
ಜೀವಿಗಳ ಮಾರಣ ಹೋಮದ ಫಲ, ಅಥವಾ ಯಾವುದೋ ಒಂದು ದೇಶ, ಜಗತ್ತಿನಲ್ಲಿ ತಾನೇ ಶಕ್ತಿಶಾಲಿ ರಾಷ್ಟ್ರವಾಗಿ ಬೆಳೆದು ನಿಲ್ಲಬೇಕು ಎನ್ನುವುದರ ಹುನ್ನಾರ. ಇಂದಿನ ವೈರಸ್ ವಿದ್ಯಮಾನಗಳನ್ನು ಮಾನವ ನಿರ್ಮಿತ ಎಂದುಕೊಂಡರೆ,
ಕೆ.ಎಂ. ಗಣೇಶಯ್ಯನವರ ಶಿಲಾಕುಲ ವಲಸೆಯಲ್ಲಿ ಬರೆದ ಹಾಗೆ, ನಮ್ಮ ಇತಿಹಾಸವನ್ನು, "ಮಾನವ ಹುಟ್ಟಿದ, ಕಾದಾಡಿದ, ಮತ್ತೆ ಸತ್ತ" ಎಂದು ಸಂಕ್ಷಿಪ್ತವಾಗಿ ವರದಿ ಮಾಡಲೇನೂ
ಅಡ್ಡಿಯಿಲ್ಲ. ಇನ್ನೂರು ವರ್ಷಗಳ ಹಿಂದೆ ಬ್ರಿಟೀಷ್ ಸಾಮ್ರಾಜ್ಯ ತನ್ನ ಪ್ರಾಬಲ್ಯವನ್ನು ಎಲ್ಲ ಕಡೆ
ಮೆರೆದಿತ್ತು - ಜನರ ಜಲ, ಕುಲ, ನೆಲೆ,
ಭಾಷೆ, ಸಂಸ್ಕೃತಿ, ಧರ್ಮಗಳನ್ನು
ಬದಿಗೊತ್ತಿ ತನ್ನ "ಧರ್ಮ"ವನ್ನು ಅದು ಹೇರಿತ್ತು. ಆದರೆ, ಆಗ ಜಗತ್ತು ವಿಭಿನ್ನವಾಗಿತ್ತು, ವಿಶ್ವದೆಲ್ಲ ಕಡೆಯ ದೇಶ-ಜನರಲ್ಲಿ ಇಷ್ಟೊಂದು
ಮಟ್ಟದ ಸಾಮರಸ್ಯ ಇರಲಿಲ್ಲ. ಆದರೆ, ಇಂದು ಜಗತ್ತು ಒಂದು ಜಾಗತಿಕ ವಲಯವಾಗಿದೆ, ಪ್ರತಿಯೊಂದು ರೀತಿಯಲ್ಲಿಯೂ
ನಾವು ಮತ್ತೊಬ್ಬರನ್ನುಅವಲಂಬಿಸಿದ್ದೇವೆ. ಈ ಸಂದರ್ಭದಲ್ಲಿ ಜಗತ್ತಿನ ಯಾವುದೋ ಒಂದು ಭಾಗ ತನ್ನ ಹೆಚ್ಚುಗಾರಿಕೆಯನ್ನು
ಇತರರ ಸೋಲಿನಲ್ಲಿ ಪ್ರದರ್ಶಿಸುವುದು ಕಷ್ಟಸಾಧ್ಯ.
***
ಗಾಳಿ
ಇರುವಲ್ಲಿ ಧೂಳು ಇರುವುದು ಸಹಜ. ಆದರೆ, ಆ ಧೂಳೇ ನಮ್ಮನ್ನು ಸಂಕಷ್ಟಕ್ಕೆ ತಳ್ಳದಿರಲಿ.
ವಿಕಾರಿ ನಾಮ ಸಂವತ್ಸರದ ವಿಕಾರತೆ, ಅದರ ಕಾಲ ಅಂತ್ಯವಾದ ನಂತರ ಇನ್ನಾದರೂ
ಕಡಿಮೆ ಆಗಲಿ. ಕಳೆದೊಂದು ವರ್ಷದಿಂದ ಅತಿವೃಷ್ಟಿ,
ಕಾಡಿನ ಬೆಂಕಿ, ಧರ್ಮ ಸಂಬಂಧಿ ಅತ್ಯಾಚಾರ-ಅನಾಚಾರಗಳಲ್ಲಿ
ನೊಂದ ಎಲ್ಲರಿಗೂ ಸಾಂತ್ವನ ಸಿಗಲಿ. ಈ ಕೊರೋನಾ ವೈರಸ್ಸು
ನಮ್ಮ ನಿಜ ಸ್ಥಿತಿಯನ್ನು ಹೊರತರುತ್ತಿದೆ. ಕುಲುಮೆಯಲ್ಲಿ
ಕುದಿಸಿ ಪುಟಗಟ್ಟಿದ ಚಿನ್ನದಲ್ಲೇ ಒಂದು ಆಕರ್ಷಕ ಆಕಾರ ಮತ್ತು ಹೊಳಪು ಬರುವುದು, ಸುಪ್ಪತ್ತಿಗೆಯ ವಲಯ ಸೃಷ್ಟಿಸುವ ಆರಾಮಿನಲ್ಲಿ ಎಂದೂ ಸಂಶೋಧನೆಗಳಾಗಲೀ, ಆವಿಷ್ಕಾರಗಳಾಗಲೀ ನಡೆಯವು. ಹಾಗೆಯೇ,
ಈ ಪ್ರಸ್ತುತ (ದುಃ)ಸ್ಥಿತಿಯಲ್ಲಿ, ಮನುಕುಲ ಮತ್ತೆ ಸೆಡ್ಡು
ಹೊಡೆದು ನಿಲ್ಲುವಂಥ ಸಂಶೋಧನೆಗಳು, ನವನಾವಿನ್ಯತೆಗಳು ಪ್ರಚುರಗೊಳ್ಳುತ್ತವೆ. ಮನುಕುಲ ಹಿಂದಿಗಿಂತಲೂ ಮತ್ತಷ್ಟು ಬಲಶಾಲಿಯಾಗುತ್ತದೆ. ಆದರೆ, ನಾವು ಬಲವಾದಷ್ಟೂ ನಿಸರ್ಗವನ್ನು
ಗೌರವಿಸುವುದನ್ನು ಕಲಿಯಬೇಕು, ಇಲ್ಲವೆಂದಾದರೆ ಇದಕ್ಕಿಂತಲೂ ಹೆಚ್ಚು ಬೆಲೆ
ಕೊಡಬೇಕಾದ ಕಾಲ ಬರುವುದು ದೂರವೇನಿಲ್ಲ.
2 comments:
ವಾಸ್ತವ ಚಿತ್ರಣ ಹಾಗು ಭವಿಷ್ಯದ ಆಶಾವಾದ ಸಮತೋಲನದಲ್ಲಿವೆ.
well said
Post a Comment