Sunday, April 03, 2016

...ಸಂಡಾಸ್ ರೂಮ್ ನೋಡೀರೇನು?

ನಾವು ದೋಡ್ಡೋರ್ ಆದ ಮ್ಯಾಲೆ ನಮ್ಮನಿ ಚಿಕ್ಕ್ ಮಕ್ಕಳಿಗೆ "ಹಂಗ್ ಮ್ಯಾಡಬ್ಯಾಡs", "ಹಿಂಗ್ ಮಾಡ್‌ಬ್ಯಾಡಾs" ಅಂತ ಭಾರೀ ಉಪದೇಶ ಏನೋ ಮಾಡ್ತೀವಿ.  ಆದ್ರ, ನಾವು ಚಿಕ್ಕೋರಾಗಿದ್ದಾಗ ಮಾಡಿದ ಚ್ಯಾಷ್ಟೇ-ಕುಚೇಷ್ಟೇಗಳಿಗೆ ಲೆಕ್ಕ ಇಟ್ಟೋರಾರು ಅಂತ ಒಂದ್ ಸರ್ತೀನಾರ್ದೂ ಯೋಚ್ನೇ ಮಾಡೇವೇನು?

"ಹಂಗ್ ಮಾಡಬ್ಯಾಡೋ ತಮ್ಮಾ..." ಅಂತ ನಮ್ಮನಿ ಮಕ್ಕಳಿಗೆ ಈಗ ಹೇಳೋದೇನೋ ಭಾಳ ಐತ್ರಿ, ಆದ್ರ ನಾವ್ ಆಗಿನ್ ಕಾಲದಾಗ ಮಾಡಿದ್ದು ಒಂದೊಂದ್ ಅಲ್ಲ, ಅವನ್ನೆಲ್ಲ ನೆನೆಸಿಕೊಂಡ್ರೆ ಈಗ್ಲೂ ನಗೂ ಬರ್ತತ್ ನೋಡ್ರಿ.
ನಮ್ ಪಾಳ್ಯಾದೊಳಗ ಗಿರಿ ನಮ್ ಲೀಡರ್ರು. ಅವನ ಹಿಂಬಾಲಕರಾಗಿ ನಾವು ನಾಲ್ಕು ಮಂದಿ: ಸುನೀಲ, ರಮೇಶ, ಸುರೇಶ ಮತ್ತ ಹಸುವಿನ ಪ್ರತಿರೂಪ ಅನ್ನೋ ಹಂಗs ನಾನೂ, ಒಂಥರ ಆಟಕ್ಕುಂಟು ಲೆಕ್ಕಕ್ಕಿಲ್ಲ ಅಂತಾರಲ್ಲ ಹಂಗs.  ಗಿರಿ ಆಗಿನ ಕಾಲದ ಬ್ರೇಕ್ ಥ್ರೂ ಮನುಷ್ಯಾ ರೀ.  ಬ್ರೇಕ್ ಥ್ರೂ ಅಂದ್ರ ಬ್ರೇಕೂ ಹೌದು ಥ್ರೂ ನೂ ಹೌದು!  ಅವನ್ದೆಲ್ಲಾ ಕಪಿಚೇಷ್ಟೆಗಿಂತ ಅದರ ಅಪ್ಪನ್ನದ್ದು ಅಂತಾರಲ್ಲ ಹಂಗs.  ಅವನ ಚೇಷ್ಟಿ ಒಳಗ ಕೆಲವೊಂದಿಷ್ಟು ಫಸ್ಟ್ ಕ್ಲಾಸು, ಇನ್ನು ಕೆಲವೊಂದು ಥರ್ಡ್ ಕ್ಲಾಸು.  ಮಂಗ್ಯಾನಂಗ್ ಆಡಬ್ಯಾಡ ಅಂಥಾ ನೀವ್ ಏನ್ ಕರೀತಿರಿ ಅವೆಲ್ಲ ಫಸ್ಟ್ ಕ್ಲಾಸು, ಅವನ ಚೇಷ್ಟೀ ಇಂದ ಯಾವನಾರಾs ಅಳಂಗ್ ಆದ್ರೆ, ಅದು ಥರ್ಡ್ ಕ್ಲಾಸು.  ಇನ್ನು ನಾವಂತೂ ಎಂದೂ ಸೆಕೆಂಡ್ ಕ್ಲಾಸ್ ಚೇಷ್ಟೇ ಅಂದ್ರ ಏನು ಅಂತ ಯಾವತ್ತೂ ಯಾರ್‌ನೂ ಕೇಳಿದ್ದಿಲ್ಲ!

ಗಿರಿ ಮತ್ತು ಅವನ ಗ್ಯಾಂಗಿನ ಕುತಂತ್ರಗಳಿಗೆ ಬಲಿ ಬೀಳದ ನಮ್ಮೂರಿನಾಗ ಜನರೇ ಇಲ್ಲ ಅನ್ನಬಕು. ನೀವು ನಮ್ ಬಂಡ್ ಭಾಳ್ವಿಗಿ ಸಾಕ್ಷಿ ಆಗಿಲ್ಲ ಅಂದ್ರs ಒಂಥರಾ ನಮ್ಮೂರಿನ ಸಿಟಿಜನ್‌ಶಿಪ್ ಪರೀಕ್ಷಾದಾಗ ಫೇಲ್ ಆದಂಗ್ ನೋಡ್ರಿ!  ಒಂದ್ ಊರು ಅಂದ್ರ ಎಲ್ಲಾ ಥರದ ಮಂದಿ ಇರ್ತಾರ, ಆದ್ರ ನಮ್ ಗಿರಿ ಅಂಥಾ ಮನ್ಶ್ಯಾರು ಬಾಳ್ ಮಂದಿ ಇದ್ದಂಗಿಲ್ಲ ಅನ್ನೋದು ನಮ್ ಅಂಬೋಣ.

ನಿಮಗೂ ನಮ್ಮ ತಂಡಕ್ಕೂ ಯಾವತ್ತಾದ್ರೂ ಮುನಿಸಾತು ಅಂದ್ರ, ನಿಮ್ಮ ಮನ್ಯಾಗ ಸೈಕಲ್ಲೋ ಲೂನಾನೋ ಟಿವಿಎಸ್ಸೋ ಇದ್ರs, ಅದ್ರ ಚಕ್ರದಾಗಿನ ಹವಾ ಟುಸ್ಸ್ ಅಂದಂಗs ಅಂಥ ತಿಳಕೊಳ್ರಿ.  ಅದ್ಯಾವ ಮಾಯದಾಗ ಗಿರಿ ಬರ್ತಿದ್ನೋ... ನಿಮ್ಮನಿ ಮುಂದ ನಿಲ್ಸಿರೋ ಟೂ ವ್ಹೀಲರಿನ ಹವಾ ಇದ್ದಕ್ಕಿದ್ದಂಗ ನಾಪತ್ತೆ ನೋಡ್ರಿ!  ಈ ಟೂ ವ್ಹೀಲರ್ ಹವಾ ಕಳೆದುಕೊಂಡ ಮ್ಯಾಲೆ ಅದನ್ನ ತಳ್ಳೋದು ಎಷ್ಟು ಕಷ್ಟ ಅಂಥ ನಿಮಗ ಗೊತ್ತಿರಲಿಕ್ಕಿಲ್ಲ, ಯಾವತ್ತರ ಟ್ರೈ ಮಾಡಿ ನೋಡ್ರಿ.  ಹವಾ ಕಳಕೊಂಡ ಅದರ ಟ್ಯೂಬಿನೊಳಗೆ ವಾಷರ್ ಒಡೆದು ಹೋಗಿರೋ ಸೈಕಲ್ ಪಂಪ್ ಬಳಸಿ, ಪೆಚ್ಚ್ ಮೋರೇ ಹಾಕ್ಕೊಂಡು, ಹವಾ ತುಂಬೋದು ಅಂದ್ರs ಅದರ ಪಜೀತಿ ಯಾವ ವೈರಿಗೂ ಬ್ಯಾಡ.  ಹವಾ ಹೊಡ್ದೂ ಹೊಡ್ದೂ ಕೈ ಮೈ ನೋವ್ ಬಂದಂಗs.
ಯಾರ್ದಾರೂ ಮನಿ ಹಿತ್ಲಾಗ ಬಾಳೆ ಗೊನಿ ಇನ್ನೇನು ಕಟಾವಿಗೆ ಬಂತೂ ಅಂದ್ರ, ಅದು ಅದರ ಹಿಂದಿನ್ ದಿನಾ ಅದು ಮಂಗ್ ಮಾಯಾ ನೋಡ್ರಿ! ನಮ್ ಗಿರಿ ಹತ್ರ ಯಾರ್ ಹಿತ್ಲಾಗ್ ಯಾವ್ ಫಲ ಎಷ್ಟು ದಿನದಾಗ ಕಟಾವಿಗೆ ಬರ್ತತಿ ಅನ್ನೋದರ ಮಾಹಿತಿ ಭಾಳ್ ಛೊಲೋ ಇತ್ ನೋಡ್ರಿ. ಅವನ ತಲೀ ಒಡೋದೇ ಹಂಗs.  ಮಾವಿನ್ ತೋಪ್‌ನ್ಯಾಗೆ ಕಾಯೋರು ನಮ್ಮನ್ನ ನೋಡ್ರಿದ್ರೆ ದೇವ್ರು ಬಂದೋರಂಗ ಆಡೋರು!  ಎಲ್ಲಾರೂ ಗುರಿ ಇಟ್ಟ್ ಕಲ್ ಹೋಡ್ದು ಒಂದು ಫಲ ಉದುರಿಸಿದ್ರೆ, ನಮ್ಮ್ ತಂಡ ಇಡೀ ಮರಾನೇ ಖಾಲೀ ಮಾಡೋದು... ಮರಾ ಒಂದೇ ಅಲ್ಲ್ ಇರ್ತಿತ್ತು, ಯಾಕಂದ್ರ ಮತ್ತ್ ಮುಂದಿನ ವರ್ಷಕ್ಕ್ ಬೇಕ್ ಅಲ?
ಅಷ್ಟೂ ಮಾಡಿ ನಮಗೆಲ್ಲಾ ಅವಾಗ ಛಾಟೀ ಬಿಲ್ಲಿನ ಹುಚ್ಚು ರೀ.  ಅದರೊಳಗ ಪರಿಣಿತ ಅಂದ್ರ ನಮ್ ಗಿರಿ.  ಅವನ ಗುರಿ ಭಾಳಾ ನಿಖರ.  ನಮ್ ಶಾಲೀ ಕಟ್ಟೀ ಮುಂದ ಧ್ವಜಾ ಹಾರ್ಸೋ ಕಂಬಕ್ಕ ಸುಮಾರು ಐವತ್ತ್ ಏನು, ನೂರ್ ಅಡೀ ದೂರ್ದಿಂದ ಗುರಿ ಇಡೋನ್ ರೀ. ಅದು ಒಂದಿನಾನು ತಪ್ಪಿದ್ದು ನಾ ನೋಡಿಲ್ಲ.  ಅಷ್ಟೂ ಮಾಡಿ ನಿಮಗ ಏನಾರಾ ಗಿರಿ ಕಂಡ್ರ ಆಗಂಗಿಲ್ಲ ಅಂದ್ರ, ನಿಮಗೂ ಛಾಟೀ ಬಿಲ್ಲಿನ ಕಲ್ಲಿನ ಏಟು ಕುಂಡೀ ಮ್ಯಾಲ ಬಿತ್ತೂ ಅಂತಾನs ಲೆಕ್ಕ.

ಎಲ್ರೂ ಊಟಕ್ಕೆ ಕುತ್ವಿ ಅಂದ್ರ ಇವ ನಿಂತೇ ಇರ್ತೀನಿ ಅನ್ನೋವ.  ಅವನೇನಾರ ಲಿಂಬಿ ಹಣ್ಣು, ಟೊಮೇಟೋ, ಮುಸಂಬಿ ಹಣ್ಣು ತಿಂತಾನೇ ಅಂದ್ರ ಅವನ ಅಕ್ಕಾ-ಪಕ್ಕಾ ಯಾರೂ ಇರಂಗಿಲ್ಲ ನೋಡ್ರಿ.  ಅವರ ಪಾಡು ದೇವ್ರಿಗೆ ಪ್ರೀತಿ.  ಅವರ ಕಣ್ಣಿನಾಗೆ ಗ್ಯಾರಂಟಿ ಲಿಂಬೀ ಹಣ್ಣಿನ್ ರಸಾ ಬೀಳೋದೆ.  ಈ ಹಣ್ಣಿನ್ ರಸಾ ಎಲ್ಲಾ ಕಡೆ ಒಸರೋ ಹಂಗ, ಹಣ್ಣನ್ನ ಹಿಚುಕಿ-ಹಿಚುಕಿ ಎಲ್ಲಾ ರಸಾ ಮಾಡ್‌ಕ್ಯಂಡ್ ಒಂದ್ ಕಡೆ ತೂತ್ ಮಾಡಿ ಅದನ್ನ ತನ್ನ ಗುರಿಗೆ ಹಿಡಿದು ಮುಖ ಮಾಡಿ ತಿನ್ನೋದರಲ್ಲಿ ನಮ್ ಗಿರಿ ನಿಸ್ಸೀಮ ರೀ.

ಯಾರ್ದಾರ ಮದ್ವೀ ನಡದ್ರ ನಮಗ್ಯಾರೂ ಬರ್ರೀ ಅಂತ ಕರೀದಿದ್ರೂ ನಾವಾs ಹೋಗ್ತಿದ್ವಿ.  ನಮ್ಮೂರಿನಾಗೆ ಮದ್ವಿ ಮುಂಜೀ ಅಂದ್ರ ಒಂಥರ ನಮ್ಮೂರಿನ ಹಬ್ಬಗಳು ಇದ್ದಂಗ, ಅದಕ್ಯಾರು ಬರಬ್ಯಾಡಾ ಹೋಗಬ್ಯಾಡ ಅನ್ನೋರು?  ಅಲ್ಲಿ ವಾಲಗಾ ಊದೋರ ಮುಂದ ನಾವು ಎಳೇ ಹುಣಸೀ ಕಾಯಿ ತಿಂತಿದ್ವಿ, ಅವರು ನಮ್ಮುನ್ನ ಓಡಿಸಿಕ್ಯಂಡ್ ಬರೋರು.  ಹಿಂಗs, ನಮ್ ಮಜಾ ನಡೀತಿತ್ತ್ ನೋಡ್ರಿ.

ಮದ್ವಿ ಅಂದ ಮ್ಯಾಲ ನೆನಪಾತು. ನಮ್ಮೂರಿನ ನಡುಮನಿ ಈರಪ್ಪನ ಮಗಳ ಮದವ್ಯಾಗ ನಮ್ ಗಿರಿ ಮಾಡಿದ ಪರಾಕ್ರಮ ನೆನಸಿಕೊಂಡ್ ಇವತ್ತಿಗೂ ನಗು ಬರ್ತತಿ ನೋಡ್ರಿ.  ನಡುಮನಿ ಈರಪ್ಪ ಅಂಥ ಸಾವ್ಕಾರ ಏನಲ್ಲ, ಆದ್ರೂ ಇದ್ದೊಬ್ಬ ಮಗಳ ಲಗ್ನಾನ ಅಚ್ಚುಕಟ್ಟಾಗಿ ಮಾಡಬಕು ಅಂತ ಮನಿ ಮುಂದ ಬ್ಯಾಡ,
ಊರಿನ ಛತ್ರದಾಗ ಇಟ್ಟುಗೊಣೂನು ಅಂತ, ಅಲ್ಲೇ ಎಲ್ಲಾ ಫಿಕ್ಸ್ ಮಾಡಿದ್ದ ರೀ.  ಹಿರೇಕೇರೂರು ಸಂಬಂಧ, ಅಂಥಾ ದೂರೇನೂ ಇಲ್ಲ, ಆದ್ರ ಮುಂಜಾನೆ ಬೇಗ ಲಗ್ನ ಮಹೂರ್ತ ಐತಿ ಅಂತ ಎಲ್ರೂ ಹಿಂದಿನ್ ದಿನಾನೇ ಬಂದು ಚೌಳ್ಟ್ರಿ ಸೇರಿಕೊಂಡಿದ್ರು ರೀ.  ನಾವು ನಮ್ಮ ತಂಡದ ಸಮೇತ ಈ ಅತಿಥಿಗಳನ್ನ ಮುಗುಳ್ನಕ್ಕು ಬರಮಾಡಿಕೊಂಡಿದ್ವಿ.  ಯಾರು, ಹೆಂಗಾs ಅಂಥ ಗೊತ್ತಾಗಬೇಕಲ? ಅದಕ್ಕಾ.  ರಾತ್ರೀ ಎಲ್ಲಾರು ಸೇರಿ ಸಮಾ ಹರಟಿ ಹೊಡದ್ವಿ...ಅದು ಯಾವಾಗ ಮಲಗಿದ್ವೋ ಅದು ಯಾವನಿಗ್ ಗೊತ್ತು!

ಮರುದಿನ, ಮುಂಜಾನೆ ಒಂಭತ್ತ್ ಘಂಟಿ ಅಭಿಜಿನ್ ಮಹೂರ್ತ ಅಂಥಾ ಕಾಣ್ತತಿ.  ಮದ್ವೀ ಮನಿ ಅಂದ್ರ ಗಡಿಬಿಡಿ, ಗಿಜಿಬಿಜಿ ಇದ್ದದ್ದ.  ಎಲ್ರೂ ಹೊಸ ಬಟ್ಟಿ ಹಾಕ್ಕೊಂಡಾರ.  ಎಲ್ಲಾ ಕಡಿ ಹೂ ಹಣ್ಣು ಕಾಣ್ಸಕ್ ಹತ್ಯಾವ. ಆದ್ರ ಒಂದಾs ಒಂದ್ ಪ್ರಾಬ್ಲಮ್ಮ್ ರೀ.
ಸುಮಾರು ಎಂಟೂವರಿಯಿಂದ ಎಲ್ಲ್ ಹುಡುಕಿದ್ರೂ ಮದುವೀ ಗಂಡಾ ಕಾಣಸಂಗಿಲ್ಲ!  ಕೆಲವೊಂದಿಷ್ಟು ಮಂದಿ ಹುಡುಗಾ ಓಡಿ-ಗೀಡಿ ಹೋಗ್ಯಾನೇನೋ ಅಂತ ಸಂಶಯಾ ವ್ಯಕ್ತಪಡಿಸಿದ್ರು.  ಕೆಲವೊಂದಿಷ್ಟು ಮಂದಿ ಹುಡುಗನ್ ಅಪ್ಪ-ಅಮ್ಮನಿಗಿ ಜೋರ್ ಮಾಡಕ್ ಹಿಡುದ್ರು.  ಒಂದಿಷ್ಟು ಹೆಣ್ ಮಕ್ಳು ಒಂದ್ ಕಡಿ ಅಳಾಕ್ ಹತ್ಯಾವ!  ಒಂಥರಾ ಕಿಲಕಿಲಾ ಅಂಥ ನಕ್ಕೊಂಡಿದ್ ಛತ್ರ ಹೊಟ್ಟಿ ಬ್ಯಾನಿ ಬಂದ್ ರೋಧ್ನ ಮಾಡೋ ಮಗೂ ಹಂಗ ಅಳಾಕ್ ಹತ್ತೈತಿ! ಯಾರೂ ಪೋಲೀಸ್-ಗಿಲೀಸ್ ಅಂದಂಗಿದ್ದಿಲ್ಲ.  ನಡುಮನಿ ಈರಪ್ಪನ ಮರ್ಯಾದೆ ಪ್ರಶ್ನೆ ನೋಡ್ರಿ.  ಅವ ಏನ್ ಮಾಡ್ತಾನ? ಅತ್ಲಾಗಿಂದ್ ಇತ್ಲಾಗ, ಇತ್ಲಾಗಿಂದ್ ಅತ್ಲಾಗ್ ಒಂಥರಾ ಬೋನ್‌ನಾಗಿರೋ ಹುಲೀ ಮರೀ ಮಾಡ್ದಂಗ ಒಡಾಡ್‌ಕೊಂಡ್ ಬುಸುಗುಡಾಕ್ ಹತ್ತಿದ್ದ.  ವಾಲಗದೋರ್ ಅವರ ಕೆಲ್ಸಾ ನಡ್ಸ್ಯಾರ.  ಮೈಕ್ ಸೆಟ್ ರುದ್ರ, ಅದ್ಯಾವ್ದೋ ಬಭ್ರುವಾಹನ ಸಿನಿಮಾ ಹಾಡ್ ಜೋರಾಗ್ ಹಾಕ್ಯಾನ.  ಭೋಜನಶಾಲೆ ಅಡಿಗಿ ಮನೀ ಒಳಗಿಂದ ಶಾವ್ಗೀ ಪಾಯ್ಸದ ವಾಸ್ನಿ ಗಮ್ಮ್ ಅನ್ನಾಕ್ ಹತ್ತಿತ್ತು.  ಒಂದಿಷ್ಟು ಮಂದೀ ನಮಗೇನೂ ಗೊತ್ತೇ ಇಲ್ಲ ಅನ್ನೋ ಹಂಗ ಮದ್ವೀ ಮಂಟಪದ ಮುಂದ ಜಮಖಾನದ ಮ್ಯಾಲೆ ಕುಂತೂ ಹರಟೀ ಹೊಡ್ಯೋದ್ರಾಗ ತಲ್ಲೀನ ಆಗಿದ್ರು.  ಕೆಲವು ಕಡೆ ಒಂಥರ ಕುಮುಟು ಬೆವ್ರು ವಾಸ್ನಿ ಬೇರೆ!

ಇನ್ನೇನು ಲಗ್ನದ ಮಹೂರ್ತ ಬಂತು, ಹತ್ರಾ ಬಂದೇ ಬಿಡ್ತು, ಆದ್ರೂ ಎಲ್ಲಿ ನೋಡ್ರಿದ್ರೂ ಮದ್ವಿ ಗಂಡಿನ ಸುಳಿವೇ ಇಲ್ಲ!  ಹುಡುಗನ ಅಪ್ಪಾ ಅಮ್ಮಾ ಕಂಗಾಲು.  ಜೋಬ್ನಾಗೆ ಹತ್ತ್ ಪೈಸಾ ಇರದಿದ್ರು ನಮ್ಮ್ ಮಂದಿ ಮರ್ಯಾದೆಗೆ ಹೆದ್ರೋ ಜನಾ ನೋಡ್ರಿ.  ಅಷ್ಟೊತ್ತಿಗ್ ಆಗ್ಲೆ ಅವರ ಮುಖಾ ಕಪ್ಪ್ ಹಿಡದ ಕರಟಾ ಆಗಿತ್ತು.  ಹುಡುಗನ್ ಕಡಿ ಬಾಳ ಮಂದಿ ಇದ್ದಂಗಿರ್ಲಿಲ್ಲಾ ಆದ್ರೂ ಪಾಪ ಅವರಿಗೆ ಊರ್ ಹೊಸತು, ಏನ್ ಮಾಡ್ತಾರ, ಏನ್ ಬಿಡ್ತಾರ?

ನಮ್ ತಂಡ ಅಲ್ಲೇ ಇತ್ತು, ನಾವೂ ಹಂಗಾ ಚ್ಯಾಷ್ಟೀ ಮಾಡ್‌ಕೊಂಡು ಹಾಡ್ ಕೇಳ್ತಾ ನಿಂತಿದ್ವಿ.  ಅಷ್ಟ್ರಾಗ ಯಾರೋ ಒಬ್ರು "ಹೇ, ಗಿರಿ, ಸಾಯಾ ಮಾಡ್ರಪ್ಪಾ, ವರಾ ಎಲ್ಲೂ ಕಾಣಸ್ತಾನೇ ಇಲ್ಲ, ಮದ್ವೀ ನಿಂತ್ ಹೋಗೋ ಪರಿಸ್ಥಿತಿ ಬಂದೈತಿ!" ಅಂದ್ರು.  ನಮ್ ಗಿರಿ ಇದ್ದೋನು, "ಅಲ್ರೀ, ಎಲ್ಲಾ ಕಡೆ ನೋಡೀರೇನು? ಅತ್ಲಾಗ್ ಸಂಡಾಸ್ ರೂಮ್ ನೋಡೀರೇನು?" ಅಂದ.
"ಬಚ್ಚಲ್ ಮನಿ ನೋಡ್ರಿ, ಬಚ್ಚಲ್ ಮನಿ ನೋಡ್ರಿ" ಅಂತ ಯಾರ್ ಯಾರೋ ಕೂಗಿದ್ರು, ಕೊನೀಗ್ ನೋಡಿದ್ರ ಹೊಟ್ ಬ್ಯಾನೀನೋ, ಏನ್ ಕರ್ಮಾನೋ ಅಂದಂಗ ಮದ್ವಿ ಗಂಡ್ ಸಂಡಾಸ್ ರೂಮ್‌ನಾಗೆ ಬಾಗ್ಲ್ ಹಾಕ್ಕೊಂಡು ಕುಂತಾನಾ!  ಯಾರೂ ನೋಡೇ ಇಲ್ಲ!  ಕೊನೀಗೂ ಸಿಕ್ಕಿದಾ ಅಂತ ಎರ್ಲೂ ಸಮಾಧಾನ್ ಮಾಡ್‌ಕೊಂಡು ಅವನ್ನ ಎಷ್ಟು ಲಗೂನಾ ಅತೋ ಅಷ್ಟು ಲಗೂ ಕರ್ಕೊಂಡ್ ಬಂದ್, ಕೊನೀಗೆ ಮಹೂರ್ತ ಮೀರೋದ್ರೊಳಗ ತಾಳೀನೂ ಕಟ್ಸ್ ಬಿಟ್ರು ನೋಡ್ರಿ.  ಎಲ್ರೂ ಸಮಾಧಾನ ಪಟ್ರು, ನಡುಮನಿ ಕುಟುಂಬ ಒಂದ್ ದೀಡ್ ಕಡ್ದು ಹಾಕಿದ ಕೆಲ್ಸ ಮಾಡ್ದಂಗ್ ನಿಟ್ಟುಸಿರು ಬಿಡ್ತು.  ಈರಪ್ಪ ಅದ್ಯಾವ್ ದೇವ್ರಿಗೆ ಅದೇನೇನ್ ಹರಿಕಿ ಹೊತ್ತಾ ಅಂತಾ ಕೇಳಬಕು, ಆ ಸ್ಥಿತಿ!

ಅಷ್ಟೂ ಮಾಡಿ, ಮದ್ವಿ ಗಂಡು ಯಾಕ್ ಅಲ್ಲಿ ಹೊಕ್ಕೊಂಡು ಕುಂತಿದ್ದ ಅಂತ ಯಾರೋ ಕೇಳ್ಲಿಲ್ಲ, ಯಾರೂ ಹೇಳ್ಲಿಲ್ಲ! ನಮಗೊಂದಿಷ್ಟು ಮಂದಿಗೆ ಮಾತ್ರ ಗಿರಿ ಹೇಳಿದ ಮ್ಯಾಲೆ ಗೊತ್ತಾತು: ಮದ್ವಿ ಗಂಡು ಎಂಟ್ ಘಂಟಿ ಅಷ್ಟೊತ್ತಿಗೆ ಸಂಡಾಸ್ ರೂಮಿನ್ ಕಡೀಗೆ ಹೋಗೋದನ್ನ ನೋಡಿ, ಗಿರಿ ಅವನ ಫಾಲೋ ಮಾಡಿದ್ನಂತ.  ಆ ಹುಡುಗ, ತನ್ನ ಬಿಳೀ ಪಂಚಿ ಬಿಚ್ಚಿ, ಸಂಡಾಸ್ ರೂಮ್ ಬಾಗ್ಲ್ ಮ್ಯಾಲ ಇಟ್ಟು, ತನ್ನ ಕೆಲ್ಸ ಮುಂದುವರೆಸ್ಯಾನಂತ.  ಅಷ್ಟೊತ್ತಿಗೆ, ಗಿರಿ ಹೋಗಿ ಅವನ ವಸ್ತ್ರ ಅಪಹರಣ ಮಾಡಿ ಮತ್ತೊಂದು ರೂಮಿನಾಗೆ ಇಟ್ಟನಂತ.  ಯಾವ್ದೋ ಊರಿಂದ ಯಾವ್ದೋ ಊರಿಗೆ ಬಂದು, ಸಂಕೋಚದ ಅಪರಾವತರ ಅನ್ನೋ ಹಂಗ್ ಇದ್ದ ಹುಡುಗಾ ಕೂಗೋಕೂ ಆಗ್ದೇ ಹೊರಾಗ್ ಬರೋಕೂ ಅಗ್ದೇ ಅಲ್ಲೇ ಕುಂತಿದ್ನಂತೆ ನೋಡ್ರಿ!

ಇವೆಲ್ಲ ಆಗಿದ್ದು ನಮ್ ಗಿರಿ ಮತ್ತು ಅವರ ತಂಡದ ಕೃಪೆ ಅಂತ ಯಾರಿಗಾದ್ರೂ ಗೊತ್ತಾಗಿದ್ರ ನಮ್ ಪರಿಸ್ತಿತಿ ದಯನೀಯ ಆಗ್ ಹೋಗ್ತಿತ್ತು, ಆ ಸಂಕೋಚದ ಪ್ರವೃತ್ತಿ ಹುಡುಗನ ದೆಸೆಯಿಂದ ನಾವೆಲ್ಲ ಇವತ್ತು ಕೈಕಾಲು ನೆಟ್ಟಗೆ ಇಟಗೊಂಡಿರೋ ಹಂಗಾತು ಅಂತ ನೆನೆದು ಇವತ್ತೂ ನಾವ್ ನಗತೀವ್ ನೋಡ್ರಿ.  ನೀವೇನಾರಾ ನಮ್ಮೂರಿಗೆ ಹೋಗ್ತೀವಂದ್ರ ನಮ್ಮ್ ಗಿರಿ ಕಂಡು ಕುದ್ದ್ ಮಾತಾಕ್ಯಂಬರ್ರಿ, ಅವ ಹಿಂದ್ ಇದ್ದಂಗ್ ಈಗಿಲ್ಲ, ಆದ್ರೂ ಸ್ವಲ್ಪ ಹುಶಾರ್ ಇರ್ರಿ!


***
ಈ ಲೇಖನ ಮಾರ್ಚ್ ತಿಂಗಳ ದರ್ಪಣದಲ್ಲಿ ಪ್ರಕಟವಾಗಿದೆ.

2 comments:

Unknown said...

Tumba chennagidae nimma Subject title.

Eege search (Nuclear Waste subject) thesis maduvaga from https://www.favouriteblog.com/ nimma blog sikkitu.

Bahala vishaya ivae daily noduvae... eegae bariyuttiri ..

Unknown said...

Tumba chennagidae Subject title.

Eege search (Nuclear Waste subject) thesis maduvaga from https://www.favouriteblog.com/ nimma blog sikkitu.

Bahala vishaya ivae daily noduvae... eegae bariyuttiri ..