Thursday, August 09, 2012

ಅಣ್ಣಾ, ಹೊಸ ಪಕ್ಷ ಬೇಡಣ್ಣ

ಇಷ್ಟು ದೊಡ್ಡ ದೇಶದಲ್ಲಿ, ಎಷ್ಟೊಂದು ಜನ ಮುತ್ಸದ್ದಿಗಳು, ವಾದಿ-ಪ್ರತಿವಾದಿಗಳು, ವಿಚಾರವಂತರು, ಚಿಂತನಶೀಲರು, ಮುಖಂಡರು, ಪ್ರತಿಭಾವಂತರು ತುಂಬಿ ತುಳುಕಾಡುತ್ತಿರುವಾಗ ಯಾರೊಬ್ಬರೂ ಕೆ.ಬಿ. ಹಜಾರೆ (aka ಅಣ್ಣಾ ಹಜಾರೆ) ಅವರನ್ನು ಬದಿಗೆ ಕರೆದು, 'ನಿಮ್ಮ ನಿಲುವುಗಳೇನೋ ಸತ್ವವುಳ್ಳವು, ಆದರೆ ಅವುಗಳನ್ನು ಪ್ರತಿಪಾದಿಸುವಲ್ಲಿ ನೀವು ಹಿಡಿದಿರುವ ಇಂಪ್ಲಿಮೆಂಟೇಷನ್ನ್ ಮೆಥಡ್ ಅಷ್ಟೊಂದು ಯೋಗ್ಯವಲ್ಲದ್ದು’ ಎಂದು ಯಾರೂ ಏಕೆ ಹೇಳುತ್ತಿಲ್ಲ?

***


(picture source: thecommonspeaks.com)

ನಮ್ಮ ಅಂತರಂಗವನ್ನು ನಾವು ಅವಲೋಕಿಸಿಕೊಂಡರೆ ನಾವೆಲ್ಲರೂ ಒಂದೇ ಒಕ್ಕೊರಲಿನಲ್ಲಿ 'ಭ್ರಷ್ಟಾಚಾರದ ಮೂಲ ರಾಜಕಾರಣಿಗಳು!’ ಎಂದು ಸುಲಭವಾಗಿ ಹೇಳಿಬಿಡಬಲ್ಲೆವು. ರಿಯಲಿ? ನನ್ನ ಜೊತೆ ನೀವೂ ಯೋಚಿಸಿ, ಈ ಲೇಖನವನ್ನು ಓದಿದ ಬಳಿಕವೂ ನೀವು ನಿಮ್ಮ ಅಭಿಪ್ರಾಯವೇ ನಿಜವೆಂದುಕೊಂಡರೆ ಅದರ ಬಗ್ಗೆ ವಿವರವಾಗಿ ಇಲ್ಲ ಸಂಕ್ಷಿಪ್ತವಾಗಿ ನನಗೊಂದು ಸಾಲು ಬರೆಯಿರಿ.

ಉದಾಹರಣೆ 1: ನಾನು ತಾಲೂಕು ಆಫೀಸಿಗೆ ಹೋಗುತ್ತೇನೆ. ಅಲ್ಲಿ ನನಗೊಂದು ಸಣ್ಣ ಕೆಲಸವಾಗಬೇಕಾಗಿದೆ, ಆದರೆ ಆ ಕೆಲಸವನ್ನು ಮಾಡಿಕೊಡಲು ಸುಮಾರು 4 ಘಂಟೆಗಳ ಕಾಲ ತೆಗೆದುಕೊಳ್ಳುತ್ತದೆ ಎಂದು ಅಲ್ಲಿನ ಹೆಡ್‌ಕ್ಲರ್ಕ್ ಹೇಳುತ್ತಾರೆ.
ನಾನು ಪರವಾಗಿಲ್ಲ, ನಾಲ್ಕು ಘಂಟೆಗಳನ್ನು ಬಿಟ್ಟು ಬರುತ್ತೇನೆ ಎಂದು ಹೇಳುತ್ತೇನೆ, ಮತ್ತು ಸರಿಯಾಗಿ ನಾಲ್ಕು ಘಂಟೆಗಳ ನಂತರ ಹೋದರೆ, ಅದೇ ಹೆಡ್‌ಕ್ಲರ್ಕ್ ದೊಡ್ಡ ತಗಾದೆ ತೆಗೆಯುತ್ತಾರೆ.
’ನನಗೆ ಸುಮಾರು 24 ಫೈಲುಗಳನ್ನು ನೋಡಿ ಮುಗಿಸಬೇಕು, ಇನ್ನು ಒಂದು ವಾರ ಬಿಟ್ಟು ಬನ್ನಿ!’

ಆಗ ನನ್ನ ಆಪ್ಷನ್ನುಗಳೇನು?
- option 1 - ಸರಿಯಾಗಿ ಇನ್ನೊಂದು ವಾರ ಬಿಟ್ಟು ಬಂದು ಕೆಲಸವಾಗಿದೆಯೋ ಇಲ್ಲವೋ ಎಂದು ನೋಡುವುದು.
- option 2 - ಅಲ್ಲಿನ ಮತ್ತೊಬ್ಬ ಕ್ಲರ್ಕ್ ಸಲಹೆ ಮಾಡಿದ ಪ್ರಕಾರ 800 ರುಪಾಯಿಗಳನ್ನು ಕೊಟ್ಟರೆ ಅದೇ ದಿನ ಅವರು ಕೆಲಸ ಮಾಡಿಕೊಡುತ್ತಾರೆ, ಬೇಕಾದರೆ ಆ ಮತ್ತೊಬ್ಬ ಕ್ಲರ್ಕ್ ನನ್ನ ಪರವಾಗಿ ಶಿಫಾರಸ್ಸ್ ಮಾಡುತ್ತಾರಂತೆ.

ನಿಮಗೆ ಈ ಕೆಲಸ ಬಹಳ ಮುಖ್ಯವಾದುದು, ನಾಲ್ಕು ಘಂಟೆಗಳನ್ನು ಕಾಯಬಹುದು, ಆದರೆ ನಾಲ್ಕು ದಿನ ಕಾಯುವಂತಿಲ್ಲ, ನನ್ನ ಜಾಗೆಯಲ್ಲಿದ್ದರೆ ನೀವೇನು ಮಾಡುತ್ತೀರಿ?

ಉದಾಹರಣೆ 2: ನೀವು ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಪೋಸ್ಟೆಡ್ ಸ್ಪೀಡ್ ಲಿಮಿಟ್ಟಿಗಿಂತ ಘಂಟೆಗೆ 25 ಮೈಲಿ ಹೆಚ್ಚು ವೇಗದಲ್ಲಿ ಕಾರು ಚಲಾಯಿಸಿ, ದೊಡ್ಡ ತಪ್ಪನ್ನು ಎಸಗಿದ್ದೀರಿ.
ಟ್ರಾಫಿಕ್ ಪೋಲಿಸ್ ರೇಡಾರ್ ಡಿಟೆಕ್ಟರ್ ಮೂಲಕ ನಿಮ್ಮ ತಪ್ಪನ್ನು ಸಾಬೀತುಗೊಳಿಸುವ ರಿಪೋರ್ಟನ್ನು ಕೈಯಲ್ಲಿ ಹಿಡಿದುಕೊಂಡು ನಿಮ್ಮ (ಡ್ರೈವರ್) ಪಕ್ಕದ ಕಿಟಕಿಯಲ್ಲಿ ನಿಂತಿದ್ದಾನೆ.
ಸ್ಥಳದಲ್ಲೇ ದಂಡ ಕಟ್ಟಿದರೆ 8 ಸಾವಿರ ರೂಪಾಯಿ ಆಗುತ್ತದೆ (ಕೊಡದಿದ್ದರೆ ಗಾಡಿ ಬಿಡೋದಿಲ್ಲ ಮುಂದೆ).
ಅದೇ ಸಮಯುಕ್ಕೆ ಮತ್ತೊಬ್ಬ ಪೋಲಿಸ್ ಕಾರಿನ ಇನ್ನೊಂದು ಕಿಟಕಿಯಲ್ಲಿ ಬಂದು, 8 ಸಾವಿರ ಇಲ್ಲದಿದ್ರೆ 4 ಸಾವಿರ ಕೊಡಿ ಪರವಾಗಿಲ್ಲ, ಆದ್ರೆ ನಿಮಗೆ ಕಂಪ್ಯೂಟರ್ ರಶೀದಿ ಸಿಗೋದಿಲ್ಲ ಅಂತಾನೆ.

ನೀವು ಅರ್ಜೆಂಟಾಗಿ ಎಲ್ಲಿಗೋ ಹೋಗಬೇಕು. ಹೆಚ್ಚು ಹೊತ್ತು ತರ್ಕವಾಗಲಿ, ತಕರಾರನ್ನಾಗಲೀ ಮಾಡಲು ವ್ಯವಧಾನವಿಲ್ಲ.
ನೀವು ಪೋಲೀಸ್‌ಗೆ ೮ ಸಾವಿರ ಕೊಡ್ತೀರಾ? ೪ ಸಾವಿರ ಕೊಡ್ತೀರಾ?

***

ನನ್ನ ಹಾಗೆ ನೀವೂ ಸಹ ನಿಮ್ಮ ಬದುಕಿನಲ್ಲಿ ಈಗಾಗಲೇ ಬಹಳ ರಾಜಕೀಯ ಪಕ್ಷಗಳು ಹುಟ್ಟಿ-ಸತ್ತಿದ್ದನ್ನು ನೋಡಿರಬಹುದು. ಕ್ರಾಂತಿರಂಗ, ತೃಣಮೂಲ, ಹೊಟ್ಟೆ, ಸಮಾಜವಾದಿ, ದಳ, ಹಲವಾರು ಬಗೆಯ "ಕಾಂಗ್ರೆಸ್ಸು"ಗಳು, ಲಲ್ಲೂ ಪಕ್ಷ, ಅವನ ಹೆಂಡತಿ ಪಕ್ಷ, ಜಾತಿ-ಜಾತಿಗಳ ಪಕ್ಷ, ಜಾತಿ ಇಲ್ಲದವರ ಪಕ್ಷ - ಹೀಗೆ ಹಲವು...ಈ ಪಟ್ಟಿ ಬಹಳ ಮುಂದುವರೆಯುತ್ತದೆ. ಎಲ್ಲದರ ಪ್ರಣಾಳಿಕೆಗಳು ಒಂದೇ - ದೇಶೋದ್ದಾರ.  66 ವರ್ಷದ ಸ್ವತಂತ್ರ್ಯೋತ್ತರ ಬಾಳ್ವೆಯಲ್ಲಿ ದೇಶದ ಉದ್ದಗಲಕ್ಕೂ ಅಂದಿನ ಮೂಲ ಸಮಸ್ಯೆಗಳು, ಇಂದಿಗೂ ಇವೆ; ಅವುಗಳಲ್ಲಿ ಭ್ರಷ್ಟಾಚಾರವೂ ಒಂದು. ಭ್ರಷ್ಟಾಚಾರ ಮೇಲೆ ಹುಟ್ಟಿ ಕೆಳಗೆ ಹರಿದು ಬರುವಂತದಲ್ಲ, ಕೆಳಗೆ ಹುಟ್ಟಿ ಸರ್ವತೋಮುಖವಾಗಿ ಬೆಳೆಯುವಂತದು. ತಾಲೂಕು ಆಫೀಸಿನಲ್ಲಿ 'ಅಡ್ಜಸ್ಟ್’ ಮಾಡಿಕೊಳ್ಳುವ ನಮ್ಮ ಮೆಂಟಾಲಿಟಿ, ನಾವು ಕಾನೂನನ್ನು ಮುರಿದಾಗ ನಮ್ಮ ಸಹಾಯಕ್ಕೆ ಬರುವ ಅಡ್ಡದಾರಿತನ ಇವುಗಳು ಲಂಚಕೋರತನದ ಮೂಲ ಕಾರಣ (ರೂಟ್‌ಕಾಸ್) ಗಳಲ್ಲೊಂದು. ಲಂಚ ಕೊಡುವವರು ನಾವು, ತೆಗೆದುಕೊಳ್ಳುವವರು ನಾವು - ಇದನ್ನು ಅರಿವಿನಿಂದ, ಬೆಳೆದ ವ್ಯವಸ್ಥೆಯಿಂದ, ಆಧುನಿಕ ಪರಿಕರಗಳಿಂದ ಹೊಡೆಯಬೇಕೇ ವಿನಾ ಮತ್ತೊಂದು ಪಕ್ಷ ಕಟ್ಟುವುದರಿಂದಲ್ಲ.

ಹಜಾರೆ ನಂಬಿಕೊಂಡ ಗಾಂಧಿ ಮಹಾತ್ಮ ಯಾವುದೇ ರಾಜಕೀಯ ಪದವಿಯನ್ನು ಅಲಂಕರಿಸದಿದ್ದರೂ, ಸಮಾಜದಲ್ಲಿ ಬದಲಾವಣೆಗಳನ್ನು ತರಲಿಲ್ಲವೇನು? ಹೊಸ ಪಕ್ಷ ಕಟ್ಟುವುದರಿಂದ ಏನಾದೀತು? ಮತ್ತೆ ಈ ಪಕ್ಷದ ವಕ್ತಾರರು ಇಂದಿನ ಕ್ಷೋಭೆಗಳ ನಡುವೆ ಮುಕ್ತವಾಗಿ ಸ್ಪರ್ಧಿಸಿ, ಗೆದ್ದು ಮೇಲೆ ಬರುವುದು, ಹಾಗೆ ಬಂದ ನಂತರ ಸುಧಾರಣೆಗಳನ್ನು ಮಾಡುವುದು ಅಷ್ಟು ಸುಲಭದ ಕೆಲಸವೇನು?

ನಾವು, ಲಂಚಾವತರಣದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗವಹಿಸುವವರೆಲ್ಲರೂ, ಒಂದು ರೀತಿಯಲ್ಲಿ ಹುಲಿ ಸವಾರಿಯಲ್ಲಿ ತೊಡಗಿದ್ದೇವೆ. ಹುಲಿ ಸವಾರಿಯನ್ನು ನಿಲ್ಲಿಸಿ ಹುಲಿಯಿಂದ ಕೆಳಗಿಳಿದರೆ ಹುಲಿಯೇ ನಮ್ಮನ್ನು ಕಬಳಿಸಿ ಬಿಡುವ ಸಾಧ್ಯತೆ ಇದೆ. ಸಾವಿರಾರು ವರ್ಷಗಳ ಸಮಸ್ಯೆಗೆ ಮತ್ತೊಂದು ಪಕ್ಷ ಕಟ್ಟುವುದು ಉತ್ತರವಲ್ಲ, 'ಅಣ್ಣಾ’ ಎಂದು ಕರೆಯುವವರೆಲ್ಲ, ನಾವು ಇಂದಿನಿಂದ ಭ್ರಷ್ಟರಾಗೋದಿಲ್ಲ ಎಂದು ಪ್ರಮಾಣ ಮಾಡಿ, ಅದಕ್ಕೆ ತಕ್ಕಂತೆ ನಡೆದುಕೊಂಡರೆ ಬಹಳಷ್ಟು ಸುಧಾರಣೆಗಳಾಗುತ್ತವೆ. ಈಗಾಗಲೇ ಇಳಿ ವಯಸ್ಸಿನ ಹಜಾರೆ ಅವರು ತಮ್ಮ ಮೂಲ ಮಂತ್ರ ಬೀಜವನ್ನು ಬಿತ್ತಿ, ಅದರಿಂದ ಹುಲುಸಾಗಿ ಕೃಷಿ ಬೆಳೆಯುವಂತೆ ಮಾಡಿದರೆ ಅದು ಜನಜನಿತವಾಗುತ್ತದೆ, ಹಾಗೂ ಕಾಲನ ಜೊತೆಗೆ ಬೆಳೆಯುತ್ತದೆ. ಅದನ್ನು ಬಿಟ್ಟು ಪಕ್ಷ ಕಟ್ಟಿದರೆ ಅದು ಕಾಲನಿಗೆ ಆಹಾರವಾಗುತ್ತದೆ.

***

ಭ್ರಷ್ಟಾಚಾರ ಕೇವಲ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಮಾತ್ರ ಸೀಮಿತವೇ?
ಬದಲಾಗಬೇಕಾದವರು ಯಾರು ಎಂದು ತಿಳಿಯಬೇಕಾದರೆ, ಹೋಗಿ ಕನ್ನಡಿ ಮುಂದೆ ನಿಲ್ಲಿ!

7 comments:

NANJUNDARAJU said...

ಮಾನ್ಯರೇ, ಎಲ್ಲರೂ ಬಯಸುವುದು. ಪ್ರಮಾಣಿಕತೆಯನ್ನೇ ನಮ್ಮ ದೇಶದ ಪ್ರಜೆಗಳ ದೂರಾದೃಷ್ಟ. ಹೇಗಾದರೂ ಪ್ರಾಮಾಣಿಕತೆ ಚಾಪೆಯ ಕೆಳಗೆ ತೂರಿದರೆ ಭ್ರಷ್ಟಾಚಾರ ರಂಗೋಲಿಯ ಕೆಳಗೆ ತೂರುತ್ತದೆ. ಹೀಗಿರುವಾಗ. ಅ ದೇವರು ಬಂದರೂ ಭ್ರಷ್ಟಾಚಾರ ತಡೆಯಲು ಸಾಧ್ಯವಿಲ್ಲವೇನೋ!ನೀವೇ ತಿಳಿಸಿರುವಂತೆ, ವಾಹನದಲ್ಲಿ ಹೋಗುತ್ತಿರುವಾಗ ತಾಂತ್ರಿಕ ದೋಷದಿಂದಲೋ, ಕಿರುಕುಳದಿಂದಲೋ ಪೋಲೀಸರು ಹಿಡಿದುಕೊಂಡಾಗ, ಸ್ಥಳದಲ್ಲಿ ದಂದಕತ್ತಲು ನಡೆಯೌ ಭ್ರಷ್ಟಚಾರಕ್ಕೆ ಕಡಿವಾಣ ಹಾಕುವುದಾರೂ ಹೇಗೆ ಅ ಕೂಡಲೇ ತಪ್ಪಿತಸ್ತರನ್ನು ಹಿಡಿಯುವುದು ಹೇಗೆ? ಲೋಕಾಯುಕ್ತ ವ್ಯವಸ್ತೆ ಕೂಡ ಏನು ಮಾಡಲಾರದು? ಇದಕ್ಕೆಲ್ಲಾ ಮುಂದಾಗಿಯೇ, ದೂರನ್ನು ನೀಡಬೇಕು ಅಪರಾಧ ನಡೆಯುವಾಗ ಕೂಡಲೇ ಹಿಡಿಯುವವರು ಯಾರು?
ಇನ್ನು ಶ್ರೀ ಅಣ್ಣಾ ಹಜಾರೆಯವರ ಬಗ್ಗೆ ರಾಜಕೀಯ ಪ್ರವೇಶ ಬೇಡ ಎಂದು ಶ್ರೀ ಸಂತೋಷ ಹೆಗಡೆಯವರೇ ಹೇಳಿದ್ದಾರೆ. ಬಹುತೇಕ ಸಾರ್ವಜನಿಕರೂ ಅದೇ ಅಭಿಪ್ರಾಯ ತಿಳಿಸಿದ್ದಾರೆ ಹಾಗು ಅವರು ರಾಜಕೀಯಕ್ಕೆ ಕಾಲಿಟ್ಟರೆ, ನಮ್ಮ ದೇಶದ ರಾಜಕೀಯ ಪಕ್ಷಗಳಲ್ಲಿ ಇವರದು ಒಂದು ಪಕ್ಷ ಎನ್ನ ಬಹುದು. ಈಗಿರುವ ಪ್ರಚಾರದಿಂದ ಗೆದ್ದರೂ ಸಹ ಆರು ತಿಂಗಳು ವರುಷದಲ್ಲಿ ಅವರ ವಿರುದ್ದ ಸಹ ಬೇರೆ ಪಕ್ಷಗಳು ಆರೋಪ ಹೊರಿಸುತ್ತವೆ. ಇದರಿಂದಾಗಿ ಪ್ರಮಾಣಿಕತೆ ಎಂಬುದನ್ನು ಮರೆಯಬೇಕಷ್ಟೆ ಅಲ್ಲವೇ? ನಾನತು ಹತಾಶನಾಗಿದ್ದೇನೆ ನಂಬಿಕೆಯನ್ನು ಕಳೆದುಕೊಂಡಿದ್ದೇನೆ ನಿಮಗೆ ಉಳಿದಿದೆಯೇ?

Unknown said...

ಗುರುಗಳೇ ನೀವು ಹೇಳಿದ ಸಂಗತಿ ಸರಿ. ಇಂದಿನ ಯುವ ಪೀಳಿಗೆ bearaucrasy ಎಂಬ ಜಗತ್ತಿಗೆ ಹೆಚ್ಚಿನ ಮಹತ್ವ ಕೊಟ್ಟು, ದೇಶ ಕಟ್ಟುವ ಕೆಲಸದಲ್ಲಿ ತೊಡಗಬೇಕು.

ಜೈ ಹಿಂದ್.

Sheela Nayak said...

ಬಹಳ ಸಮಯದ ನಂತರ ಬರೆದಿದ್ದಿರಿ ಸತೀಶ್. ಹಾಗೆಯೇ ಸರಿಯಾದ ವಿಷಯವನ್ನೇ ಆರಿಸಿದ್ದಿರಿ...ನನಗೆ ಸ್ವಲ್ಪ ಸಮಯದ ಹಿಂದೆಯೇ ಎಲ್ಲೋ ಅಣ್ಣಾ ಅವರ ರೈಲು ಹಳಿ ತಪ್ಪುತಿದೆ ಅಂತ ಅನಿಸಿತ್ತು..ನನ್ನ ಅಭಿಪ್ರಾಯ ಸಂಪದದಲ್ಲಿ ವ್ಯಕ್ತ ಪಡಿಸಿದಕ್ಕೆ ಬಹಳಷ್ಟು ವಿರೋಧವೂ ಬಂದಿತ್ತು. ಬಹುಶಃ ಅಣ್ಣ ಅವರ ಸುತ್ತ ಇರುವ ಗುಂಪು ಅವರ ಧ್ಯೇಯ ತಪ್ಪಿಸುವಲ್ಲಿ ಸಫಲವಾಗಿದೆ. ಒಟ್ಟಾರೆ ನಮ್ಮ ದುರಾದೃಷ್ಟ. ಇದ್ದ ಸಣ್ಣ ಬೆಳಕೂ ನಂದಿ ಹೋಯಿತು!

ಅಂದ ಹಾಗೆ ನನ್ನ ನೆನಪಿದೆಯಾ? ನನ್ನ ಕುಂಚಗಳಿಗೆ ಮತ್ತೆ ಬಲ ಬಂದಿದೆ. ನನ್ನ ಮನೋಬಲ ಹೆಚ್ಚಿಸದಕ್ಕೆ ತಮಗೆ ಹೃದ್ಪೂರ್ವಕ ನಮನಗಳು!

rashmi said...

i liked the last sentence..very true

seshu said...
This comment has been removed by the author.
seshu said...

thuma chennagi baredhidheere,.. kadeya maatu nammellarigu anvayisutte,satyave.. aadare navu samanyaru nimma akanada udahararane yalle sootu nimmendala "bhrastaru" yendu annisi kondidheve.. aadaru modalu yaaru badalagabeku?? naavo, adikarigalo, rajakaranigalo..
naavo badalaadre naama kelasagallellavu aallale nintuhogutte...
aadikarigalu badaladre bega vargavane agthare innu
rajakaranigalu badaladre .....!!
We have become so secured in the corruption,feel uncomfortable to any change..yet, i hope for some change in this system!

Mohammad Zafar said...

ಬಹಳ ಚೆನ್ನಾಗಿ ಬರಿತೀರಾ, ಈ ವಿಷಯದ ಬಗ್ಗೆ ಎಷ್ಟು ಬರೆದರೂ ಕಡಿಮೆ, ಎಷ್ಟು ವಾದಿಸಿದರೂ ಕಡಿಮೆನೆ. ಒಂದೇ ವಾಕ್ಯದಲ್ಲಿ ಹೇಳ್ಬೇಕು ಅಂದ್ರೆ "ಮೊದಲು ನಾವು ಬದಲಾಗೋಣ ಬನ್ನಿ" ಅನ್ನೋ ಒಂದು ಕೂಗು ಹಾಕ್ದೇ ಬೇರೆ ದಾರಿ ಇಲ್ಲ. ಪ್ರಾಮಾಣಿಕತೆಯಂತಹ ಗುಣಗಳು ಎಲ್ಲಾ ವರ್ಗ್ದ ಅಧಿಕಾರಿಗಳಲ್ಲಿ ಬರಬೇಕು. ಪ್ರಮಾಣಿಕತೆ ಎಂಬುದನ್ನು ಕಲಿಸಬೇಕು, ಬೆಳೆಸಬೇಕು, ಉಳಿಸಬೇಕು. ಇದನ್ನ ಎಲ್ಲಾರೂ ಮಾಡಿದರೆ ಬೇಗ ಏನಾದರೂ ಒಳ್ಳೇದನ್ನ ನೋಡಬಹುದು.