ಕ್ವಾರ್ಟರ್ರ್ ಮುಗಿತಾ ಬಂತು...
ಮೊನ್ನೆ ಮೊನ್ನೆ ಇನ್ನೂ ಹೊಸ ವರ್ಷ ಸೆಲೆಬ್ರೇಟ್ ಮಾಡಿ ೨೦೧೦ ಫರ್ಫಾರ್ಮೆನ್ಸ್ ಅಬ್ಜೆಕ್ಟೀವ್ಸ್ ಬರೆದಿದ್ದೆವಲ್ಲ, ಈಗಾಗ್ಲೇ ಮೊದಲ ಕ್ವಾರ್ಟರ್ ಮುಗಿಯೋದಕ್ಕೆ ಇನ್ನು ಕೇವಲ ಹದಿನೈದೇ ದಿನ ಬಾಕಿ ಎಂದು ಗೊತ್ತಾದ ಕೂಡಲೇ ಏನಾಯ್ತು ಫರ್ಸ್ಟ್ ಕ್ವಾರ್ಟರ್ಗೆ ಎನ್ನೋ ಚಿಂತೆಯಲ್ಲಿ ಮನಸ್ಸು ಕಳೆದು ಹೋಯ್ತು. ಇನ್ನೊಂದು ವಾರ ಎರಡು ವಾರದಲ್ಲಿ ಈ ಮೂರು ತಿಂಗಳಲ್ಲಿ ಏನೇನು ಮಾಡಿದೆವು ಎಂದು ಲೆಕ್ಕ ಕೊಡಬೇಕು (ಒಂಥರ ಚಿತ್ರಗುಪ್ತರ ಲೆಕ್ಕದ ಹಾಗೆ), ಹಾಗೇ ವರ್ಷದ ಲೆಕ್ಕ, ನಮ್ಮ ಜೀವಮಾನದ ಲೆಕ್ಕ...ಎಲ್ಲರೂ ಲೆಕ್ಕ ಇಡೋರೇ ಇಲ್ಲಿ.
ಇನ್ನೊಂದು ಸ್ವಲ್ಪ ದಿನದಲ್ಲಿ ಚೈತ್ರ ಮಾಸ-ವಸಂತ ಋತು ಬರುತ್ವೆ, ಅವರಿಗೆಲ್ಲ ಯಾರು ಲೆಕ್ಕ ಕೇಳ್ತಾರೆ ಈ ವರ್ಷ ಏನೇನು ಮಾಡ್ತೀರಿ, ಬಿಡ್ತೀರಾ ಅಂತ? ಇನ್ನೂ ಸ್ವಲ್ಪ ದಿನ ವಿಂಟರ್ ಇರುತ್ತೆ, ಅದನ್ನು ಯಾರಾದರೂ ಗದರುತ್ತಾರೆ ಏಕೆ ಈ ವರ್ಷ ಇಷ್ಟೊಂದು ಹಿಮಪಾತವನ್ನು ಮಾಡಿದೆ ಅಂತ? ಈ ಬ್ರಹ್ಮಾಂಡದ ಸಕಲ ಚರಾಚರ ಜೀವರಾಶಿಗಳಿಗಿಲ್ಲದ performance assessment ನಮಗ್ಯಾಕೆ? ಹೀಗೊಂದು ಪ್ರಶ್ನೆಯನ್ನ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯನ್ನು ಅರೆದು ಕುಡಿದಂತೆ ಆಡೋ ನಮ್ಮ ಬಾಸನ್ನ ಕೇಳ್ಬೇಕು ಅಂದುಕೋತೀನಿ ಎಷ್ಟೋ ಸಲ.
ಕೆಲವೊಮ್ಮೆ performance ಇಲ್ಲವೇ ಇಲ್ಲ, ಎಲ್ಲವೂ ಮಕ್ಕೀಕಾ ಮಕ್ಕಿ ಯಾರದ್ದೋ ರಾಜಕೀಯ, ಯಾವುದೋ ಕೆಲಸಗಳ ನಡುವೆ ದಿನ-ವಾರಗಳಲ್ಲಿ ನಮ್ಮನ್ನು ನಾವು ಕಳೆದುಕೊಳ್ಳುವ ಜನ, ಇನ್ನು assessment ಕೊಡೋದಾದ್ರೂ ಹೇಗೆ? ನಾವು ಏನು ಮಾಡಿದ್ರೂ ಹೇಗಿದ್ರೂ ನಮ್ಮ ಕಾರ್ಯ ವೈಖರಿ ಬದಲಾಗೋದಿಲ್ಲ, ಕೆಲಸ ಜಾಸ್ತಿ ಆದ ಹಾಗೆ ಕ್ವಾಲಿಟಿ ಕಡಿಮೆ ಅನ್ನೋದಾದ್ರೆ, ನೀವು ಹೇಗೇ ಕೆಲಸ ಮಾಡಿದ್ರೂ ನಿಮ್ಮನ್ನು expense reduction ಹೆಸರಿನಲ್ಲಿ ಕೆಲಸದಿಂದ ತೆಗೆಯೋದೇ ನಿಜವಾದಲ್ಲಿ - ಈ performance assessment ಎಲ್ಲ ಹಾಸ್ಯಾಸ್ಪದ ಅನ್ಸಲ್ಲಾ?
ಇತ್ತೀಚೆಗೆ ನಮ್ಮ ಬಾಸು ಮತ್ತೊಂದು ಹೊಸ ಡೆಫಿನಿಷನ್ನ್ ಅನ್ನು ಕಂಡುಕೊಂಡಿದ್ದಾರೆ, ವೆಕೇಷನ್ನ್ ಅಂದರೆ it is an opportunity to work from a different location ಅಂತ! ರಜಾ ಇರಲಿ ಇಲ್ಲದಿರಲಿ, ವಾರದ ದಿನಗಳೋ ವಾರಾಂತ್ಯವೋ, ಹಬ್ಬವೋ ಹರಿದಿನವೋ -- ಕೆಲಸ ಮಾತ್ರ ತಪ್ಪೋದಿಲ್ಲ. ನಾವೂ Action items, Project plans, Critical issues, Next steps ಅಂತ ಬರೀತ್ಲೇ ಇರ್ತೀವಿ, ಕೆಲಸ ಮಾತ್ರ ಅದರ ಗತಿಯಲ್ಲಿ ಅದು ಸಾಗ್ತಾ ಇರುತ್ತೆ ಒಂಥರ ಹೈವೇ ಮೇಲಿನ ಕಾರುಗಳ ಹಾಗೆ. ಈ ಕಾಲನಿಗಳನ್ನು ನಂಬಿಕೊಂಡ ಇರುವೆಗಳು ಏನಾದ್ರೂ ಅವುಗಳ ಭಾಷೆಯಲ್ಲಿ ನಮ್ಮ ರೀತಿ ಏನಾದ್ರೂ ಡಾಕ್ಯುಮೆಂಟೇಷನ್ನ್ ಮಾಡ್ತಾವಾ ಅಂತ ಎಷ್ಟೋ ಸರ್ತಿ ಸಂಶಯ ಬಂದಿದೆ. ಇರುವೆ, ಜೇನ್ನೊಣಗಳು ನಮ್ಮನ್ನು ಕಂಡು, ನೋಡಿ ನಾವೇನು ಲೆಕ್ಕ ಇಡದೆ ಹೇಗೆ ಅಚ್ಚುಕಟ್ಟಾಗಿ ಕೆಲಸವನ್ನು ಪಾಲಿಸುತ್ತೇವೆ ಅಂತ ಹಂಗಿಸುತ್ತಾವೇನ್ನೋ ಅಂತ ಹೆದರಿಕೆಯಾಗುತ್ತದೆ.
1 comment:
ಸುಂದರ ಬರಹ
ಹೊಸವರುಷದ ಶುಭಾಶಯಗಳು
Post a Comment