Wednesday, October 28, 2009

ಇನ್‌ಫರ್‌ಮೇಷನ್ನ್ ಓವರ್‌ಲೋಡ್ ಅಂದ್ರೆ ಇದೇನಾ?

ರೇಡಿಯೋ ನ್ಯೂಸ್ ಆಗ್ಲಿ ಅಥವಾ ಬಿಸಿನೆಸ್ ನ್ಯೂಸ್‌ಗಳನ್ನ ಕೇಳ್ತಾ ಹೋದ್ರೆ, ಅಲ್ಲಿ-ಇಲ್ಲಿ ಓದ್ತಾ ಇದ್ರೆ ತುಂಬಾ ತಲೆ ತಿಂತಾರೆ ಅನ್ಸಿದ್ದು ಇತ್ತೀಚೆಗೆ. ಬಹಳಷ್ಟು ಇನ್‌ಫರ್‌ಮೇಷನ್ ಓವರ್‌ಲೋಡ್, ಜೊತೆಗೆ ಸಾವಿರಾರು ಅನಾಲಿಸಿಸ್ಸುಗಳು ರಿಪೋರ್ಟುಗಳು ಇತ್ಯಾದಿ. ಅಬ್ಬಾ, ಸಾಕಪ್ಪಾ ಸಾಕು ಅನ್ಸೋ ಮಟ್ಟಿಗೆ ಒಮ್ಮೊಮ್ಮೆ.

ಯಾವ್ದೇ ಬಿಸಿನೆಸ್ ಚಾನೆಲ್ಲನ್ನ ಹಾಕಿ ನೋಡಿ ಅಲ್ಲಿನ ರಿಪೋರ್ಟರುಗಳು, ಮಾಡರೇಟರುಗಳು ಎಲ್ಲರೂ ತಾರಕ ಸ್ವರದಲ್ಲಿ ಕಿರುಚಿಕೊಳ್ತಾರೇನೋ ಅನ್ನೋ ಮಟ್ಟಿಗೆ ಉದ್ರಿಕ್ತರಾಗಿರ್ತಾರೆ. ಜೊತೆಗೆ ಉನ್ನತ ತಂತ್ರಜ್ಞಾನದ ಸಹಾಯದಿಂದ ಟಿವಿ ಸ್ಕ್ರೀನಿನ ತುಂಬಾ ಎಷ್ಟೊಂದು ಬಾರ್ಕರ್ ಮೆಸ್ಸೇಜುಗಳು, ವಿಡಿಯೋಗಳಲ್ಲೇ ವಿಡಿಯೋಗಳು, ಬ್ಯಾನರುಗಳು, ಗ್ರಾಫ್, ನಂಬರುಗಳು, ಹಲವಾರು ಕಮಾಡಿಟಿಗಳು ಅವುಗಳ ಬೆಲೆಯಲ್ಲಿನ ನಿರಂತರ ಬದಲಾವಣೆಯನ್ನು ನಿಖರವಾಗಿ ತೋರಿಸಿ ಅಳೆಯೋ ಸೂಚಕಗಳು, ಹೀಗೆ ಹಲವಾರು ರೀತಿಯ "ಕಣ್ಸೆಳೆಯುವ" ವಿಧಿವಿಧಾನಗಳು.

ಟಿವಿ ಸ್ಟೇಷನ್ನುಗಳಿಗೆ ಒಮ್ಮೆ ಅಲ್ಲಿಗೆ ಬಂದ ವೀಕ್ಷಕರನ್ನು ಕಟ್ಟಿ ಹಾಕುವ ಚಿಂತೆ. ರಿಪೋರ್ಟರುಗಳಿಗೆ ತಮ್ಮ ಅನಾಲಿಸಿಸ್ಸೇ ದೊಡ್ಡದು ಎಂದು ತೋರಿಸಿಕೊಳ್ಳುವ ಹಂಬಲ. ಜೊತೆಗೆ ಅವರು ತೋರಿಸೋ ಸಂದೇಶಗಳ ಹಿಂದೆ ಸ್ಮಾಲ್ ಪ್ರಿಂಟು. "ನಾವು ನಾಳೆಯನ್ನು ಕಂಡಿಲ್ಲ" ಎನ್ನುವ ಸೂಚನೆಯ ಜೊತೆಗೇ "ನಮ್ಮ ಚಿಂತನೆ ನಾಳೆಯ ಪ್ರತಿರೂಪ" ಎನ್ನುವ ಅಹವಾಲು! ಈ ಅಹವಾಲು, ಕೋರಿಕೆ, ಸಂದೇಶ, ಚಿಂತನೆ ಇವೆಲ್ಲ ನೋಡುಗರ ಮುಂದೆ ದೊಡ್ಡ ಜನರ ಸಂತೆಯಂತೆ ಕಂಡೂ ಅವುಗಳಲ್ಲಿ ಕೆಲವೇ ಕೆಲವು ಒಬ್ಬೊಬ್ಬರಿಗೆ ಲಾಂಗ್‌ಟರ್ಮ್ ಇಂಡಿಕೇಟರ್ ಆಗಬಲ್ಲ ಹುನ್ನಾರ ಅಷ್ಟೇ, ಅದೂ ಏಕೆ - ತೋರಿಸಿದ್ದನ್ನೇ ತೋರಿಸ್ತಾ ಇದ್ರೆ ಇವತ್ತಲ್ಲ ನಾಳೆ ಜನಗಳು ನಂಬಿಯಾರು ಎನ್ನುವ ದೂರಾಲೋಚನೆ.

ಇವುಗಳ ಮಧ್ಯೆ ಹೇಗೆ ಬದುಕೋದು. ಎಲ್ಲದರ ಹತ್ತಿರ ಇದ್ದೂ ದೂರ ಹೇಗೆ ಇರೋದು? ಯಾವೊಂದು ಮಾಧ್ಯಮಕ್ಕೆ ಅಂಟಿಕೊಳ್ಳದೇ ನಮ್ಮ ನಮ್ಮ ರಿಟೈರ್‌ಮೆಂಟ್ ಆಗಲಿ ಹಣಕಾಸಿನ ವಿಚಾರಗಳಲ್ಲಿ ಹುಷಾರಾಗಿರೋದು ಹೇಗೆ? ಯಾರನ್ನ ನಂಬೋದು ಯಾರನ್ನ ಬಿಡೋದು? ಇನ್‌ಫರ್‌ಮೇಷನ್ನ್ ಓವರ್‌ಲೋಡ್ ಅಂದ್ರೆ ಇದೇನಾ?

ಈ ಅನುಭವಗಳ ಮಿತಿಯ ಬಗ್ಗೆ ಹಿಂದೆ ಬರೆದಿದ್ದೆ - ಊರು ಕೊಳ್ಳೆ ಹೊಡೆದ ಮೇಲೆ ದೊಡ್ಡಿ ಬಾಗಿಲು ಮುಚ್ಚಿದ್ರಂತೆ ಹಾಗಾಯ್ತು. ಕಳೆದ ಎರಡು ವರ್ಷಗಳಲ್ಲಿ ಮಾರ್ಕೆಟ್ಟಿನಲ್ಲಿ ಹಣ ಕಳೆದುಕೊಂಡವರ ಸಂಖ್ಯೆ ಹೆಚ್ಚು, ಈಗ ಹಿಂತಿರುಗಿ ನೋಡಿದ್ರೆ ’ಅಯ್ಯೋ, ನಮಗೇಕೆ ಈ ವಿಷಯ ಹೊಳೆದಿರಲಿಲ್ಲ!’ ಅನ್ಸತ್ತೆ. ಹಣ ಕಳೆದುಕೊಂಡು ಚೆನ್ನಾಗಿ ಪಾಠ ಕಲಿತ ಮೇಲೆ, ಅದನ್ನು ಇಂಪ್ಲಿಮೆಂಟ್ ಮಾಡೋವಾಗ ಇನ್ನೊಂದು ಹತ್ತು ವರ್ಷ ಹಿಡಿಯುತ್ತೆ, ಅಷ್ಟರೊಳಗೆ ಮತ್ತೊಂದು ಏರಿಳಿತದ ಸೈಕಲ್ಲ್ ಬಂದಿರುತ್ತೆ. ಹೀಗೆ ಕಲಿತ ಪಾಠ ಹಳೆಯದಾಗುತ್ತಲೇ ಇರುತ್ತೆ.

ನೀವೆಲ್ಲ ಯಾವ ಯಾವ ಮಾಧ್ಯಮಗಳಿಗೆ ಗಂಟು ಬಿದ್ದುಕೊಂಡಿದ್ದೀರಿ? ನಿಮಗೆ ಯಾವ ಮಾಹಿತಿ ಯಾವ ರೂಪದಲ್ಲಿ ಯಾವುದರಿಂದ ದೊರಕುತ್ತೆ? ಅಥವಾ ನೀವೆಲ್ಲರೂ ನನ್ನ ಹಾಗೆ ಓವರ್‌ಲೋಡ್‌ನಿಂದ ಒತ್ತಡದಲ್ಲಿ ಸಿಲುಕಿಕೊಂಡಿದ್ದೀರೋ?

3 comments:

sunaath said...

ಸತೀಶ,
ನಾನು ತುಂಬಾ ದಡ್ಡ ಕಣ್ರೀ. ಯಾವದೂ ಬಿಜಿನೆಸ್ ನ್ಯೂಜ್ ನೋಡಲಿಲ್ಲ ಮತ್ತೂ ಕೇಳಲಿಲ್ಲ. ಅಸಲು, ನನ್ಹತ್ರ ಅಸಲೇ ಇರಲಿಲ್ಲ.(ಈಗಲೂ ಇಲ್ಲ.) ಅಂದ ಮೇಲೆ ಇನ್ವೆಸ್ಟ್ ಮಾಡಿ ಕಳಕೊಳ್ಳೋ ಸಂದರ್ಭವೇ ಬಂದಿಲ್ಲ!

ಸಾಗರದಾಚೆಯ ಇಂಚರ said...

ನಿಮ್ಮ ಮಾತು ನಿಜಾ

Satish said...

ಸುನಾಥ್,
ನಿಮ್ಮದು ಒಳ್ಳೆಯ ಅವಕಾಶ, ಕಳೆದುಕೊಳ್ಳುವ ಪ್ರಮೇಯವೇ ಇಲ್ಲ! :-)

ಸಾಇ,
ಧನ್ಯವಾದಗಳು ನಿಮ್ಮ ಕಾಮೆಂಟ್‌ಗೆ.