Tuesday, June 17, 2008

ಪಾಪ, ಇಂದಿನ ಮಕ್ಕಳು!

ಆಫೀಸಿನಲ್ಲಿ ನನ್ನ ಅಕ್ಕ ಪಕ್ಕದ ಕ್ಯೂಬಿಕಲ್‌ಗಳಲ್ಲಿ ಕುಳಿತುಕೊಳ್ಳುವ ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿಕೊಂಡ ನಾಲ್ಕು ಸಹೋದ್ಯೋಗಿಗಳಲ್ಲಿ ಕೆಲವು ಸಾಮ್ಯತೆಗಳನ್ನು ಕಂಡುಕೊಂಡಿದ್ದೇನೆ. ಅವರೆಲ್ಲ ವಯಸ್ಸಿನಲ್ಲಿ ಸುಮಾರು ಇಪ್ಪತ್ತನಾಲ್ಕು ವರ್ಷದ ಆಜುಬಾಜಿನವರು, ಭಿನ್ನ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬೆಳೆದು ಓದಿದ್ದೂ ಸಹ ಹಾಗೂ ಇವತ್ತಿಗೂ ತಮ್ಮ ತಂದೆ-ತಾಯಿಯರ ಜೊತೆಗೇ ವಾಸಿಸುತ್ತಿರುವವರು. ಈ ನಾಲ್ಕು ಜನರು ಇಲ್ಲೇ ಹುಟ್ಟಿ ಬೆಳೆದವರಾದರೂ ನಮ್ಮ ಭಾರತೀಯ ಪರಂಪರೆಯಲ್ಲಿ ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಲ್ಲುವವರೆಗೆ ತಮ್ಮ ತಮ್ಮ ಪೋಷಕರನ್ನು ಆಧರಿಸಿಕೊಂಡಿರುತ್ತಿದ್ದುದನ್ನು ಆಗಾಗ್ಗೆ ನೆನಪಿಗೆ ತಂದುಕೊಡುತ್ತಾರೆ. ಇವರನ್ನು ನೋಡಿದ ಬಳಿಕ ಅಮೇರಿಕನ್ ಮಕ್ಕಳು ಸ್ವಾತಂತ್ರ ಪ್ರಿಯರೋ ಅಥವಾ ಹದಿನೆಂಟು ವರ್ಷ ವಯಸ್ಸಾಗುತ್ತಿದ್ದಂತೆ ತಮ್ಮ ಪೋಷಕರನ್ನು ಬಿಟ್ಟು ದೂರ ಹೋಗಬಯಸುವವರೋ ಎಂದೆಲ್ಲ ಯೋಚಿಸಿಕೊಂಡಿದ್ದ ಅಥವಾ ಜೆನರಲೈಜೇಷನ್ನುಗಳ ಬಗ್ಗೆ ಕೇಳಿದ್ದು ಅಲ್ಲವೋ ಹೌದೋ ಎಂದು ಪ್ರಶ್ನೆ ಎದ್ದಿದ್ದಂತೂ ನಿಜ. ತಾವು ತಮ್ಮ ಕಾರುಗಳನು ಚಲಾಯಿಸಬಲ್ಲರಾದರೂ ತಮ್ಮ ಪೋಷಕರೊಡನೆ ಕೂಡಿ ಆಫೀಸಿಗೆ ಬಂದು ಹೋಗುವ ಅಥವಾ ಪೋಷಕರು ಮಕ್ಕಳನ್ನು ಆಫೀಸಿಗೆ ಬಿಟ್ಟು ಕರೆದುಕೊಂಡು ಹೋಗುವುದನ್ನು ನಾನು ನೋಡಿದ್ದು ಕಡಿಮೆಯೇ. ಹಿಂದೆ ನನ್ನ ಅಮೇರಿಕನ್ ಸ್ನೇಹಿತ ಕೆನ್ ಲೆನಾರ್ಡ್‌ನ ಕುಟುಂಬವನ್ನು ನಾನು ನೋಡಿದ ಹಾಗೆ ಎಷ್ಟೋ ರೀತಿಯಲ್ಲಿ ಭಾರತೀಯ ಕುಟುಂಬಗಳನ್ನು ಹೋಲುವಂತೆಯೇ ಆತನೂ ಹಲವಾರು ಗ್ರೌಂಡ್ ರೂಲ್ಸ್‌ಗಳ ಸಹಾಯ/ಆಧಾರದ ಮೇಲೆ ತನ್ನ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದುದರ ಬಗ್ಗೆ ಬರೆದಿದ್ದೆ.

ನನ್ನ ಹಾಗಿನವರು ಬಹಳಷ್ಟು ಜನ ಹತ್ತನೇ ತರಗತಿ ಮುಗಿದ ಬಳಿಕ ಪಿಯುಸಿ ವಿದ್ಯಾಭ್ಯಾಸದಿಂದ ಹಿಡಿದು ತಮ್ಮ ಮುಂದಿನ ಜೀವನವನ್ನು ಪೋಷಕರಿಂದ ದೂರವಿದ್ದೇ ನಡೆಸಿಕೊಂಡು ಬರುತ್ತಿರುವುದು ಭಾರತದಲ್ಲಿ ಸಾಮಾನ್ಯವೆಂದು ಹೇಳಲಾಗದಿದ್ದರೂ ಅಲ್ಲಲ್ಲಿ ನೋಡಲು ಸಿಗುತ್ತದೆ ಎನ್ನಬಹುದಾದ ಅಂಶ. ಹತ್ತನೇ ತರಗತಿ ಮುಗಿದರೂ ನನಗೆ ಒಂದು ಬ್ಯಾಂಕಿಗೆ ಹೋಗಿ ಹತ್ತು ರೂಪಾಯಿ ಡಿಪಾಜಿಟ್ ಮಾಡುವುದು ಹೇಗೆ ಎಂದು ಗೊತ್ತಿರದಿದ್ದುದು ಇಂದಿಗೂ ಆಶ್ಚರ್ಯ ತರಿಸುತ್ತದೆ. ಮೊದಲನೆಯದಾಗಿ ಬ್ಯಾಂಕ್ ವ್ಯವಹಾರಗಳಾಗಲೀ ಹಣಕಾಸು ಸಂಬಂಧಿ ಚರ್ಚೆಗಳಾಗಲೀ ನಮ್ಮ ಅವಿಭಕ್ತ ಕುಟುಂಬಗಳಲ್ಲಿ (ನಮ್ಮೆದುರಿಗೆ) ಆಗುತ್ತಿದ್ದುದು ಕಡಿಮೆ. ಮನೆಯ ಯಜಮಾನನಾದವನು ನಡೆಸಿಕೊಂಡು ಹೋಗಬಹುದಾದ ಚರ್ಚೆ ಹಾಗೂ ವ್ಯವಹಾರಗಳಲ್ಲಿ ನಾವು ಚಿಕ್ಕವರಿಗೆ ಯಾವ ಸ್ಥಾನವೂ ಇದ್ದಿರಲಿಲ್ಲ. ಹೈ ಸ್ಕೂಲು ಮುಟ್ಟುವ ಹೊತ್ತಿಗೆ ಒಂದೆರಡು ಬಾರಿ ಯಾರೋ ಕೊಟ್ಟ ಚೆಕ್ ಡಿಪಾಜಿಟ್ ಮಾಡಿದ್ದೋ ಅಥವಾ ಬ್ಯಾಂಕಿನಿಂದ ಹಣವನ್ನು ತೆಗೆದುಕೊಂಡಿದ್ದನ್ನೋ ಬಿಟ್ಟರೆ ಮತ್ತೇನೂ ವಿಶೇಷ ಅನುಭವಗಳು ನಮ್ಮ ನೆನಪಿನಲ್ಲಿ ಇರಲಾರವು. ಇನ್ನು ಕೆಲವರು ಇಂಜಿನಿಯರಿಂಗ್ ಮುಗಿಯುವವರೆಗೆ, ಕೆಲಸ ಸಿಗುವವರೆಗೆ, ಮದುವೆಯಾಗಿ ಮಕ್ಕಳಾಗುವವರೆಗೂ ಪೋಷಕರನ್ನು ಆಧರಿಸಿಕೊಂಡಿದ್ದನ್ನು ನಾನು ನೋಡಿದ್ದೇನೆ. ಈ ವಿಭಿನ್ನ ವ್ಯವಸ್ಥೆ-ವಿಧಾನಗಳಲ್ಲಿ ತಪ್ಪು ಸರಿ ಯಾವುದು ಎನ್ನುವುದಕ್ಕಿಂತ ಹಲವು ಮನಸ್ಥಿತಿ, ನನ್ನಂತಹವರು ಬೆಳೆದು ಬಂದ ರೀತಿ ಹಾಗೂ ಬದಲಾದ ಕಾಲಮಾನಗಳ ಅವಲೋಕನವನ್ನು ಮಾಡಿಕೊಡುವ ಒಂದು ಪ್ರಯತ್ನವಿದಷ್ಟೇ.

’ಅಮೇರಿಕನ್ ಮಕ್ಕಳು ಬಹಳ ಇಂಡಿಪೆಂಡೆಂಟ್’ ಎನ್ನುವ ನೋಷನ್ನ್ ಅನ್ನು ನಾನು ಎನ್‌ಆರ್‍‌ಐ ಸಮುದಾಯಗಳಲ್ಲಿ, ನಮ್ಮ-ನಮ್ಮ ನಡುವಿನ ಮಾತುಕಥೆಗಳಲ್ಲಿ ಕೇಳಿದ್ದೇನೆ. ಈ ಬಗೆಯ ಜನರಲೈಜೇಷನ್ನಿಗಿಂತ ಇದೇ ಅವಲೋಕನವನ್ನು ಇಲ್ಲಿನ ಹಳ್ಳಿ-ಪಟ್ಟಣ-ನಗರ ಸಮುದಾಯಗಳಲ್ಲಿ ಮಾಡಿದಾಗ ಬೇಕಾದಷ್ಟು ರೀತಿಯ ಫಲಿತಾಂಶಗಳು ಹಾಗೂ ಮುಖ್ಯವಾಗಿ ಜನರಲೈಜೇಷನ್ನಿಗಿಂತ ಭಿನ್ನ ಅಂಕಿ-ಅಂಶಗಳೂ ಸಿಕ್ಕಬಹುದು. ನಮ್ಮ ಪುರೋಹಿತರು ಇಲ್ಲೇ ಹುಟ್ಟಿ ಬೆಳೆದ ಭಾರತೀಯ ಮೂಲದ ಮಕ್ಕಳಿಗೆ ಇಂಗ್ಲೀಷಿನಲ್ಲಿ ಬಾಲಕೃಷ್ಣನ ಲೀಲೆಗಳನ್ನು, ಕೃಷ್ಣ-ಬಲರಾಮರ ಬಗ್ಗೆ ಕಥೆಗಳನ್ನು ಹೇಳುತ್ತಿದ್ದರಂತೆ. ’ಕೃಷ್ಣ ಮತ್ತು ಆತನ ಸ್ನೇಹಿತರು ಬೆಣ್ಣೆಯನ್ನು ಮನೆಯಲ್ಲಿ ಹುಡುಕುತ್ತಿದ್ದರಂತೆ, ಮಡಿಕೆಯ ಕುಡಿಕೆಯನ್ನು ಯಶೋಧೆ ಮಾಳಿಗೆಯ ಕುಡಿಕೆಯಲ್ಲಿ ಬಿಗಿದು ಕಟ್ಟಿದ್ದನ್ನು ಇವರು ಕಂಡು ಹಿಡಿದರಂತೆ...’ ಎಂದು ಕಥೆ ಮುಂದುವರಿಸುತ್ತಿದ್ದಾಗ ಒಬ್ಬ ಹುಡುಗ ’ಅಂಕಲ್, ಅವರು ಬೆಣ್ಣೆಯನ್ನು ಏಕೆ ಹುಡುಕುತ್ತಿದ್ದರು, ಫ್ರಿಜ್ ಬಾಗಿಲು ತೆಗೆದು ನೋಡಿದ್ದರೆ ಅಲ್ಲೇ ಸಿಗುತ್ತಿರಲಿಲ್ಲವೇ?’ ಎಂದು ಮುಗ್ಧವಾಗಿ ಪ್ರಶ್ನೆ ಕೇಳಿದ್ದನ್ನು ಪುರೋಹಿತರು ನಗುತ್ತಲೇ ಇನ್ನೂ ಸ್ವಾರಸ್ಯವಾಗಿ ವಿವರಿಸಿ, ’ಇಂದಿನ ಮಕ್ಕಳು ಬಹಳ ಭಿನ್ನ ನಮ್ಮ ಕಾಲದವರ ಹಾಗಲ್ಲ’ ಎಂದು ಹೇಳಿದ್ದು ನೆನಪಿಗೆ ಬಂತು.

ಇಂದಿನ ಮಕ್ಕಳ ಪ್ರಪಂಚ ಸಣ್ಣದು, ಆದರೆ ಅದರ ಒಳ ವಿಸ್ತಾರ ಬಹಳ ಹೆಚ್ಚು - ಅವರ ಆಟಿಕೆಗಳು ಬೇರೆ, ಅವರ ಪಾಠ-ಪುಸ್ತಕ ಪ್ರವಚನಗಳು ಬೇರೆ, ಅವರ ಬದುಕೇ ಭಿನ್ನ. ಕಂಪ್ಯೂಟರ್ ಕೀ ಬೋರ್ಡಿನಿಂದ ಹಿಡಿದು ವಿಡಿಯೋ ಗೇಮ್ ಆಟಗಳವರೆಗೆ, ಅವರು ಮಾತಿನಲ್ಲಿ ಬಳಸುವ ಶಬ್ದಗಳಿಂದ ಹಿಡಿದು ಅವರವರಲ್ಲೇ ಸಂವಹನಕ್ಕೆ ಬಳಸುವ ಮಾಧ್ಯಮಗಳವರೆಗೆ ಇಂದಿನ ಮಕ್ಕಳು ಬಹಳ ಭಿನ್ನ. ನಮ್ಮ ಪೋಷಕರು ನಾವು ಬೆಳೆಯುತ್ತಿದ್ದಾಗ ಅವರಿಗೂ ನಮಗೂ ಇದ್ದ ಅಂತರಕ್ಕಿಂತಲೂ ನಮಗೂ ನಮ್ಮ ಮಕ್ಕಳಿಗೂ ಇರುವ ಅಂತರ ಹೆಚ್ಚು ಎಂದರೆ ತಪ್ಪಾಗಲಾರದು. ನಮ್ಮ ತಲೆಯಲ್ಲಿ ಬಳಸಿ ಉಳಿದುಹೋದ ಪದಗಳಾದ - ಎತ್ತು ಏರಿ ಕಣ್ಣಿ ಮಿಣಿ ಕಡಗೋಲು ಮಜ್ಜಿಗೆ ಗಿಣ್ಣ ನೊಗ ಗೋಲಿ ಬುಗುರಿ ಚೆಂಡು ಚಿತ್ರ ಪರೀಕ್ಷೆ ಹಾಡು ಹಸೆ ಸ್ನಾನ - ಮೊದಲಾದವುಗಳಿಗೆ ಈಗಿನ ಮಕ್ಕಳ ತಲೆಯಲ್ಲಿ ಪರ್ಯಾಯ ಪದಗಳು ಬಂದಿರಬಹುದು ಅಥವಾ ಅವು ಉಪಯೋಗಕ್ಕೆ ಬಾರದೇ ಇರುವವಾಗಿರಬಹುದು. ಮೆಕ್ಯಾನಿಕಲ್ ಟೈಪ್‌ರೈಟರ್ ಎಂದರೆ ಏನು? ಎನ್ನುವವರಿಂದ ಹಿಡಿದು ತಮ್ಮಿಂದ ಕೇವಲ ಇಪ್ಪತ್ತೇ ಅಡಿ ದೂರದಲ್ಲಿರುವ ಗೆಳೆಯ-ಗೆಳತಿಯರೊಡನೆ ಕೇವಲ ಟೆಕ್ಸ್ಟ್ ಮೆಸ್ಸೇಜ್ ಸಂಭಾಷಣೆಯಲ್ಲೇ ನಿರತರಾಗಿದ್ದುಕೊಂಡು ಅದರ ಮಿತಿಯಲ್ಲೇ ತಮ್ಮ ಆಗುಹೋಗು ಅನಿಸಿಕೆಗಳನ್ನು ಹಂಚಿಕೊಳ್ಳುವವರು. ವಿಶ್ವದ ಎಲ್ಲ ಸಮಸ್ಯೆಗಳನ್ನೂ ಶಾಲಾ ಮಟ್ಟದಲ್ಲೇ ಇವರಿಗೆ ಪರಿಚಯಿಸಿ ಅದರ ಉತ್ತರ ಕಂಡುಹಿಡಿಯುವಂತೆ ಮಾಡುವ ಅಸೈನ್‌ಮೆಂಟ್‌ಗಳು ಇವರವಾಗಿರಬಹುದು. ತಮ್ಮ ಹಿರಿಯರು ಮನೆಗೆ ಬಂದವರು ಅತಿಥಿಗಳು ಮೊದಲಾದವರು ಯಾವುದೋ ಒಂದು ಶುಭ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರೆ ಇವರು ಅದೇ ಹಾಲ್‌ನ ಒಂದು ಮೂಲೆಯ ಸೋಫಾದ ಮೇಲೆ ಕುಳಿತು ಹ್ಯಾಂಡ್‌ಹೆಲ್ಡ್ ಡಿವೈಸ್‌ನಿಂದ ಇಂದೇ ಪ್ರಪಂಚದ ಕೊನೆಯಾದೀತೇನೋ ಎಂಬ ತನ್ಮಯತೆಯಲ್ಲಿ ವಿಡಿಯೋ ಗೇಮ್‌ಗಳನ್ನು ಆಡುವವರು. ವಿಕಾಸವಾದದ ಮುನ್ನಡೆಯಾದಂತೆ ಇವರ ಮಿದುಳು ಪ್ರಚಂಡ ಇನ್‌ಫರ್ಮೇಷನನ್ನು ಸಂಸ್ಕರಿಸುವ ಹಾಗೂ ಒಂದೇ ಸಮಯದಲ್ಲಿ ಹಲವು ಕಾರ್ಯಗಳನ್ನು ಮಾಡುವ ಕ್ಷಮತೆಯನ್ನು ಹೊಂದಿರಬಹುದು ಅಥವಾ ವಿಡಿಯೋ ಗೇಮ್ ಆಡೀ ಆಡೀ ಇವರ ಕೈ ಬೆರಳುಗಳ ಸ್ನಾಯುಗಳು ಬಲಗೊಂಡು ಮುಂದೆ ಬ್ಲಾಕ್‌ಬೆರಿ ಉಪಯೋಗಿಸುವಲ್ಲಿ ನೆರವಾಗಬಹುದು ಅಥವಾ ಅದಕ್ಕೆಂದೇ ಹೊಸ ಸ್ನಾಯುಗಳ ಬೆಳವಣಿಗೆಯಾದರೂ ನನಗೇನೂ ಆಶ್ಚರ್ಯವಾಗೋದಿಲ್ಲ.

ಆದರೆ ಇಂದಿನ ಮಕ್ಕಳನ್ನು ನೋಡಿದರೆ ಕಷ್ಟವಿದೆ ಎನ್ನಿಸುತ್ತೆ, ಅವರ ಬದುಕಿನ ಬಗ್ಗೆ ಅನುಕಂಪ ಖಂಡಿತ ಹುಟ್ಟುತ್ತೆ. ನಾವು ಎಂಭತ್ತರ ದಶಕದಲ್ಲಿ ಸಾಗರದಂತಹ ಪಟ್ಟಣಗಳಲ್ಲಿ ಪಿಯುಸಿ ಓದುತ್ತಿರುವಾಗ ನಮ್ಮ ಕ್ಲಾಸಿನಲ್ಲಿ ಒಂದಿಷ್ಟು ’ಮುಂದುವರೆದ’ ಕುಟುಂಬದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರಥಮ ಪಿಯುಸಿ ಪರೀಕ್ಷೆ ಬರೆದು ಅದರ ಫಲಿತಾಂಶ ಬಂದು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗುವ ಮೊದಲೇ ಮನೆಪಾಠಗಳಲ್ಲಿ ವ್ಯವಸ್ಥಿತವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ನನ್ನಂತಹ ಸಾಧಾರಣ ಹಳ್ಳಿಗಾಡಿನ ವಿದ್ಯಾರ್ಥಿಗಿಂತ ಬಹಳಷ್ಟು ಮುಂದಿರುತ್ತಿದ್ದರು. ಅದು ನನಗೆ ಆಗ ಆಶ್ಚರ್ಯ ತರಿಸಿತ್ತು. ಒಂದು ತರಗತಿಯ ಪರೀಕ್ಷೆಗಳು ಮುಗಿದ ಬಳಿಕ ನನ್ನಂತಹವರು ಅಜ್ಜ-ಅಜ್ಜಿಯ ಜೊತೆ ಸ್ನೇಹಿತರ ಜೊತೆ ಬೇಸಿಗೆ ರಜೆ ಕಳೆಯುವ ಸಂದರ್ಭಗಳಲ್ಲಿ ಮುಂದಿನ ತರಗತಿಗಳಾಗಲೀ ಬದುಕಿನ ಬಗ್ಗೆಯಾಗಲೀ ಯೋಚಿಸಿದ್ದಿರಲಾರೆವು, ಆದರೆ ’ಮುಂದುವರೆದ’ ವಿದ್ಯಾರ್ಥಿಗಳ ಜನರೇಷನ್ನ್ ಅಲ್ಲಿ ನಮಗೆ ವಿಶೇಷವಾಗಿತ್ತು, ಅದರಲ್ಲೂ ನಾವು ಯಾವ ನಿಟ್ಟಿನಲ್ಲಿ ಆಲೋಚಿಸಿಕೊಂಡರೂ ಅವರ ಎದುರಿಗೆ ನಮ್ಮ ಸ್ಪರ್ಧೆ ನೀರಸವಾಗುತ್ತಿತ್ತು. ಇಂದಿನ ಮಕ್ಕಳಿಗೆ ಎಲಿಮೆಂಟರಿ (ಪ್ರಾಥಮಿಕ) ಹಂತದಲ್ಲೆ ಮನೆ-ಪಾಠ (ಪೈವೇಟ್ ಟ್ಯೂಷನ್) ಆರಂಭವಾಗುತ್ತದೆ ಎಂದು ಕೇಳಿದಾಗ, ಅದರ ಬಗ್ಗೆ (ವಿರುದ್ಧವಾಗಿ) ಬೇಕಂತಲೇ ವಾದ ಮಾಡಿದಾಗ ನನ್ನನ್ನು ಮೃಗಾಲಯದ ಪ್ರಾಣಿಯನ್ನು ನೋಡುವ ಹಾಗೆ ಜನರು ನೋಡುವುದನ್ನು ನೆನಪಿಸಿಕೊಳ್ಳುತ್ತೇನೆ. ಅದಕ್ಕೇ ಹೇಳಿದ್ದು ಇಂದಿನ ಮಕ್ಕಳ ಬದುಕು ಕಷ್ಟ ಎಂದು. ನಮ್ಮ ಸರ್ವತೋಮುಖ ಬೆಳವಣಿಗೆ ಎನ್ನುವುದನ್ನು ಅದೆಷ್ಟರ ಮಟ್ಟಿಗೆ ಇಂದಿನ ಸ್ಪರ್ಧಾತ್ಮಕ ವ್ಯವಸ್ಥೆ ಆಧರಿಸುತ್ತದೆ ಎನ್ನುವುದು ಈ ಹೊತ್ತಿನ ಪ್ರಶ್ನೆ - ಅದರ ಬೆನ್ನ ಹಿಂದೆ ಹುಟ್ಟುತ್ತಿರುವುದೇ ಈ ಹೊತ್ತಿನ ತತ್ವ!

ನನ್ನ ಬೆಳವಣಿಗೆ ಹೇಗೇ ಇರಲಿ ಇಂದಿನ ಬದುಕು ಯಾವ ರೀತಿಯಲ್ಲೇ ಇರಲಿ, ನನ್ನ ಬಾಲ್ಯವನ್ನು ಮಾತ್ರ ನಾನು ಯಾವಾಗಲೂ ಬೆಂಬಲಿಸುತ್ತೇನೆ. ನನ್ನ ಮಕ್ಕಳನ್ನು ಇಂದಿಗೆ ಹೋಲುವ ಹಾಗೆ ಅದೇ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬೆಳೆಸುವ ಹಾಗಿದ್ದರೆ ಎಂದು ಯೋಚಿಸುತ್ತೇನೆ. ನಮ್ಮ ನಡುವೆ ಇದ್ದ ಅವಿಭಕ್ತ ಕುಟುಂಬದ ವ್ಯವಸ್ಥೆಯ ಬೆನ್ನೆಲುಬಿನ ಮೇಲೆ ನಿಂತಿದ್ದ ನೀರು-ನಿಡಿ, ಪರಿಸರ-ನೆರೆಹೊರೆ, ನೆಂಟರು-ಇಷ್ಟರು, ಊರು-ಬಳಗ, ಸಂಪ್ರದಾಯ ಮೊದಲಾದವುಗಳನ್ನು ಇಂದಿನ ಮಕ್ಕಳ ಮನಸ್ಸಿಗೆ ಹೇಗೆ ಅನ್ವಯಿಸಬಹುದು ಎಂದು ಚಿಂತಿಸುತ್ತೇನೆ. ಮಕ್ಕಳು ಒಳ್ಳೆಯ ಶಾಲೆಗೆ ಸೇರಿವುದರಿಂದ ಹಿಡಿದು, ಒಳ್ಳೆಯ ಗ್ರೇಡು-ಮಾರ್ಕ್ಸ್‌ಗಳನ್ನು ಪಡೆಯುವವರೆಗೆ, ಅವರಿಗೆ ತಕ್ಕ/ಒಪ್ಪುವ/ದಕ್ಕುವ ಶಿಕ್ಷಣವನ್ನು ಆಧರಿಸುವವರೆಗೆ, ಮುಂದೆ ಉದ್ಯೋಗವನ್ನು ಕಂಡುಕೊಳ್ಳುವವರೆಗೆ, ಸಂಸಾರ ನಡೆಸಿಕೊಂಡು ಹೋಗುವವರೆಗೆ ಎಲ್ಲೆಲ್ಲಿ ನಮ್ಮ ಇನ್‌ಫ್ಲುಯೆನ್ಸ್‌ಗಳು ನಡೆಯುತ್ತವೆ ಎಂದು ಕೊರಗುತ್ತೇನೆ. ಮನೆ-ಪಾಠ, ಕೋಚಿಂಗ್ ಮೊದಲಾದವುಗಳನ್ನು ಕೊಟ್ಟು ಇವರನ್ನು ನಾವು ಮುಂದಿನ ಬದುಕಿಗೆ ತಯಾರು ಮಾಡುವುದು ನಮ್ಮ ಕೈಯಲ್ಲಿದೆಯೋ, ಅಥವಾ ಅವರೇ ತಮ್ಮ ತಮ್ಮ ದಾರಿ/ಗುರಿಯನ್ನು ರೂಪಿಸಿಕೊಳ್ಳುತ್ತಾರೋ, ನಮ್ಮ ಪೋಷಕರು ನಮ್ಮನ್ನು ಬೆಳೆಸಿದ ರೀತಿಯಲ್ಲಿ ನಾವು ಇವರನ್ನು ಬೆಳೆಸಲಾಗದಿದ್ದ ಮೇಲೆ ಇವರನ್ನು ನಾವು ಬೆಳೆಸುವ ರೀತಿಯೇ ಸರಿಯೆಂದು ನಮಗೆ ಗೊತ್ತಾಗುವುದು ಹೇಗೆ ಮತ್ತು ಎಂದು?

2 comments:

Anonymous said...

ನನ್ನ ಬಾಲ್ಯವನ್ನು ಮಾತ್ರ ನಾನು ಯಾವಾಗಲೂ ಬೆಂಬಲಿಸುತ್ತೇನೆ. ನನ್ನ ಮಕ್ಕಳನ್ನು ಇಂದಿಗೆ ಹೋಲುವ ಹಾಗೆ ಅದೇ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬೆಳೆಸುವ ಹಾಗಿದ್ದರೆ ಎಂದು ಯೋಚಿಸುತ್ತೇನೆ
-- ಹೀಗೆ ಬರಿ ಯೋಚಿಸಿದರೆ ಸಾಕೆ? ಅದನ್ನು ನಿಜವಾಗಲು ಮಾಡಿದರೆ, ಈ ಲೇಖನದಲ್ಲಿ ಬರೆದಿರುವ ಕೆಲವು ಸನ್ನಿವೇಶಗಳನ್ನು ಒಪ್ಪಬಹುದು... ಸುಮಾರು ಲಿಪ್ ಸಿಂಪತಿಯ ವರ್ಣಾತೀತ ಅನ್ನಿಸಿತು. ಒಳ್ಳೆಯ ಪ್ರಯತ್ನ

Satish said...

ವೀಣಾ,
ಧನ್ಯವಾದಗಳು.