Sunday, February 03, 2008

...ಮೆಂಬರ್‌ಶಿಪ್‌ಗೆ ನೀವೂ ಅರ್ಜಿ ಗುಜರಾಯಿಸ್ತೀರೋ ಹೇಗೆ?!

’ಓಹ್, ನಿಮಗೇನ್ರಿ? ನೀವು ಅಮೇರಿಕದಲ್ಲಿದ್ದೀರ ನಿಮಗೇನು ಕಡಿಮೆ!’ ಎಂದು ಇನ್ನು ಮುಂದೆ ಯಾರಾದ್ರೂ ನಿಮಗೆ ಹೇಳಿದರಾದರೆ ಅವರಿಗೆ ನೀವು,

’ಅಮೇರಿಕದಲ್ಲಿ ವ್ಯಕ್ತಿಯೊಬ್ಬ ಒಂದು ವ್ಯವಸ್ಥೆಯಿಂದ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಹೋರಾಡುತ್ತಲೇ ಜೀವನ ಸವೆಸಬೇಕಾಗುತ್ತದೆ!’ ಎಂದು ಉತ್ತರ ನೀಡಿ ಆಗ ಆ ಉತ್ತರವನ್ನು ಕೇಳಿದವರ ಹುಬ್ಬುಗಳು ಗಂಟು ಕಟ್ಟುವುದನ್ನು ನೋಡಿ ಸಂತೋಷ ಪಡಿ.

ಹಿಂದೆ ’ಅಂತರಂಗ’ದಲ್ಲಿ ಇದೇ ವಿಷಯವಾಗಿ ಹಲವಾರು ಸಾರಿ ಬರೆದರೂ ಅದರ ಬಗ್ಗೆ ಮತ್ತೂ ಬರೆಯುವಷ್ಟು ಸ್ಪೂರ್ತಿ ನೀಡುವ ಹಲವಾರು ವಿಷಯಗಳು ಒಟ್ಟೊಟ್ಟಿಗೆ ಸಂಭವಿಸಿದವಾದ್ದರಿಂದ ಮತ್ತೆ ಬರೆಯಬೇಕಾಯಿತು.

***

ನಾನು ಸೆಪ್ಟೆಂಬರ್ ೨೬, ೨೦೦೭ ರ ಶುಭದಿನ ಲ್ಯಾಬ್‌ಕಾರ್ಪ್‌ಗೆ ಖುದ್ದಾಗಿ ಹೋಗಿ ರಕ್ತದಾನ ಮಾಡಿ ಅಲ್ಲಿ ಟೆಕ್ನಿಷಿಯನ್ನ್‌ಗೆ ರಿಪೋರ್ಟಿನ ಒಂದು ಕಾಪಿಯನ್ನು ಮನೆಗೂ ಕಳಿಸುವಂತೆ ಕಿವಿಕಿವಿ ಹೇಳಿ ಅಂಗಾಲಾಚಿದ ಪ್ರಯುಕ್ತ ಆಕೆ ತನ್ನ ಕೋಮಲ ಕೈಗಳಿಂದ ".cc customer" ಎಂದು ಮೊದಲ ಪುಟದಲ್ಲೇ ಬರೆದುಕೊಂಡಳಾದರೂ ನನಗೆ ಇವತ್ತಿಗೂ, ನಾಲ್ಕು ತಿಂಗಳ ಬಳಿಕವೂ ಆ ವರದಿಯ ಕಾಪಿ ಸಿಗದಿದ್ದುದನ್ನು ನೋಡಿ ಅಳಬೇಕೋ ನಗಬೇಕೋ ತಿಳಿಯದಾಗಿದೆ. ಆದರೆ ಆಶ್ಚರ್ಯವೆಂಬಂತೆ ನಾನು ಕೊಡಬೇಕಾದ ೧೫ ಡಾಲರ್ ಕೋ-ಪೇಮೆಂಟ್‌ಗೆಂದು ಅವರು ಮೇಲಿಂದ ಮೇಲೆ ಬಿಲ್ ಕಳಿಸಿಯೇ ಕಳಿಸಿದರು, ಕೊನೆಗೆ ನಾನು ರೋಸಿ ಡಿಸೆಂಬರ್ ೨೬ ರಂದು ಹದಿನೈದು ಡಾಲರ್ ಕೋ-ಪೇಮೆಂಟ್ ಅನ್ನು ಕೊಟ್ಟು ಅದೇ ದಿನ ಲ್ಯಾಬ್‌ಕಾರ್ಪ್ ಕಸ್ಟಮರ್ ಸರ್ವೀಸ್‌ಗೆ ಫೋನ್ ಮಾಡಿ ಮತ್ತೆ ರಿಪೋರ್ಟ್ ಕಳಿಸಲು ಬೇಡಿಕೊಂಡರೆ ಫೋನಿನಲ್ಲಿ ಉತ್ತರಿಸಿದ ಲಲನಾಮಣಿ ’ಆಗಲಿ, ಇನ್ನೆರಡು ವಾರಗಳಲ್ಲಿ ಕಳಿಸುತ್ತೇವೆ’ ಎಂದು ಉತ್ತರ ಕೊಟ್ಟಳಾದರೂ ಈಗ ಒಂದೂವರೆ ತಿಂಗಳ ಬಳಿಕ ಇವತ್ತಿಗೆ ನನ್ನ ಬ್ಲಡ್ ರಿಪೋರ್ಟ್ ಪತ್ತೆಯೇ ಇಲ್ಲ!

ಒಬ್ಬ ಸಾಮಾನ್ಯ ಬಳಕೆದಾರನಾಗಿ ನಾನು ಏನು ಮಾಡೋದು, ಏನು ಬಿಡೋದು...ಮೇಲಿಂದ ಮೇಲೆ ಕಾಲ್ ಮಾಡಿ ತಲೆಕೆಡಿಸಿಕೊಳ್ಳೋಣವೆಂದರೆ ನನಗೆ ಬಿಡುವಿರದ ಆಫೀಸಿನ ಕೆಲಸ, ಜೊತೆಗೆ ಮತ್ತೆ ಜನವರಿಯ ಕೊನೆಯಲ್ಲಿ ಪ್ರಯತ್ನಿಸಿದಾಗ ’ಇನ್ನೆರಡು ವಾರಗಳಲ್ಲಿ ಬಂದೇ ಬಿಡುತ್ತೆ’ ಎಂದು ಇನ್ಯಾರೋ ಆಶ್ವಾಸನೆ ನೀಡಿರೋದರಿಂದ ಮತ್ತೊಂದು ವಾರ ಕಾಯ್ದು ನೋಡೋಣವೆಂದುಕೊಂಡು ನನ್ನ ಬ್ರಹ್ಮಾಸ್ತ್ರಗಳಿಗೆ ಒಂದಿಷ್ಟು ರೆಸ್ಟ್ ಕೊಟ್ಟಿದ್ದೇನೆ ನೋಡಿ.

ನಾವು ದುಡ್ಡು ಕೊಟ್ಟು ನಾವು ಕೊಟ್ಟ ನಮ್ಮ ರಕ್ತದ ವರದಿಯನ್ನು ಕೇಳಲು ಹೋದರೆ ಅದಕ್ಕೆ ನೂರಾ ಎಂಟು ಸೆಕ್ಯೂರಿಟಿ ಪ್ರಶ್ನೆಗಳು. HIPAA (Health Insurance Portability & Accountability Act) ಮಣ್ಣೂ ಮಸಿಯೆಂದು ನಮ್ಮ ತಲೆಯೆನ್ನೆಲ್ಲ ತಿಂಥಾರಲ್ಲ ಶಿವಾ, ಎಂಥಾ ಲೋಕವಯ್ಯಾ ಇದು?

***

ಸೋಶಿಯಲ್ ಸೆಕ್ಯೂರಿಟಿ ನಂಬರ್, ಕ್ರೆಡಿಟ್ ಹಿಸ್ಟರಿ, ಡ್ರೈವರ್ಸ್ ಲೈಸನ್ಸ್ ಮುಂತಾದವುಗಳ ಮೇಲೆ ನಿಂತ ವ್ಯವಸ್ಥೆಯ ವಿರುದ್ಧ ಹೋರಾಡೋದಕ್ಕೆ ನೀವು ರಾವಣರಾಗಬೇಕು, ಅಂದರೆ ನಿಮಗೆ ಹತ್ತು ತಲೆಗಳಿದ್ದರೂ ಸಾಲದು. ಯಾವನೋ ಬರೆದ ಬಿಸಿನೆಸ್ ರೂಲ್ಸ್‌ಗಳು, ಯಾರೋ ಅದೆಲ್ಲಿಯೋ ಕುಳಿತು ಕುಟ್ಟಿದ ಕಂಪ್ಯೂಟರ್ ವ್ಯವಸ್ಥೆ ನಿಮಗೆ ಚೆನ್ನಾಗಿ ನೀರು ಕುಡಿಸಬಲ್ಲದು. ನನ್ನ ಮಾತಿನಲ್ಲಿ ವಿಶ್ವಾಸವಿಲ್ಲದೇ ಹೋದರೆ ಕೇವಲ ಒಂದೇ ಒಂದು ಸಾರಿ ನಿಮ್ಮ ಕ್ರೆಡಿಟ್ ಕಾರ್ಡಿನ ಬಿಲ್ಲನ್ನು ಡ್ಯೂ ಡೇಟ್ ಆಗಿ ಒಂದು ತಿಂಗಳ ನಂತರ ಕಟ್ಟಿ ನೋಡಿ, ಆಗ ನಿಮಗೇ ತಿಳಿಯುತ್ತದೆ. ನೀವು ಸಾವಿರ ವರ್ಷಗಳಿಂದ ನಿರಂತರವಾಗಿ ಬಿಲ್ ಅನ್ನು ಕಟ್ಟಿಕೊಂಡು ಬಂದಿರುತ್ತೀರಿ, ಯಾವುದೋ ಒಂದು ಫ್ಯಾಮಿಲಿ ಎಮರ್ಜನ್ಸಿಯ ಸಂಬಂಧವಾಗಿ ನೀವು ಒಂದು ತಿಂಗಳು ಬಿಲ್ ಅನ್ನು ಕಟ್ಟುವುದನ್ನು ನಿರ್ಲಕ್ಷಿಸುತ್ತೀರಿ ಎಂದುಕೊಳ್ಳಿ - ಅದು ಮಾನವೀಯ ವಿಷಯವೇ ಸರಿ - ಅದನ್ನು ಫೈಟ್ ಮಾಡಬೇಕಾದೀತು, ಹಾಗೆ ಮಾಡುತ್ತಾ ಮಾಡುತ್ತಾ ನಿಮ್ಮ ಕಪ್ಪಗಿನ ಕೂದಲ ಆಯುಷ್ಯವನ್ನು ಬಲಿಕೊಡಬೇಕಾದೀತು, ನಿಮ್ಮ ಮುಖದಲ್ಲಿ ನೆರಿಗೆಗಳನ್ನು ಹೆಚ್ಚಿಸಿಕೊಳ್ಳಬೇಕಾದೀತು.

ದೊಡ್ಡ ದೊಡ್ಡ ಶಾಪ್ಪಿಂಗ್ ಮಾಲ್‌ಗಳಲ್ಲಿ ರೀಟೈಲ್-ಹೋಲ್‌ಸೇಲ್ ಅಂಗಡಿಗಳನ್ನು ಇಟ್ಟುಕೊಂಡಿರುವ ಸಿಯರ್ಸ್ (Sears) ಅಂತಹ ಕಂಪನಿಗಳು ತಮ್ಮ ಗಿರಾಕಿಗಳಿಗೆ ವಸ್ತುಗಳನ್ನು ಮಾರಿ ಅದರಿಂದ ಬರುವ ಲಾಭಕ್ಕಿಂತಲೂ ತಮ್ಮ ಗಿರಾಕಿಗಳು ಕೊಡುವ ಲೇಟ್-ಫೀ, ಬಡ್ಡಿಗಳಿಂದ ಹೆಚ್ಚು ಸಂಪಾದನೆ ಮಾಡುತ್ತವೆ ಎನ್ನುವುದಕ್ಕೆ ನಿದರ್ಶನಗಳು ಬೇಕೇ? ಅಂತಹ ಕಂಪನಿಗಳ ಕ್ರೆಡಿಟ್ ವಿಭಾಗವನ್ನು ಕೊಂಡುಕೊಳ್ಳಲು ಬ್ಯಾಂಕುಗಳು ನಾ ಮುಂದು, ತಾ ಮುಂದು ಎಂದು ಹಾತೊರೆದುದನ್ನು ನಾವು ಕಣ್ಣಾರೆಯೇ ನೋಡಿದ್ದೇವೆ.

ನೀನು ದುಡಿ, ದುಡಿದ ದುಡ್ದಿನಲ್ಲಿ ಮನೆ ಕಟ್ಟಿಸಿ ಅನುಭವಿಸು ಎನ್ನುವ ನಮ್ಮ ತತ್ವಗಳನ್ನು ಹೊಸಕಿ ಹಾಕಿ, ನಿಮಗೆ ಮೈ ತುಂಬಾ ಸಾಲವನ್ನು ಹೊರಿಸುತ್ತೇವೆ, ಆದರೆ ಈ ಮನೆ ಇವತ್ತಿನಿಂದಲೇ ನಿಮ್ಮದು ಎನ್ನುವ ಬಂಡೆಗಲ್ಲಿನಡಿ ನಮ್ಮನ್ನು ನೂಕಿ ನಮ್ಮ ಬಡ್ಡಿ ಹಣದಿಂದ ಬದುಕುವ ವ್ಯವಸ್ಥೆಯ ಕೂಸುಗಳಾಗಿ ಹೋಗಿದ್ದೇವಲ್ಲ ನಾವು ಏನು ಹೇಳೋಣ? ಹಾಸಿಗೆ ಇದ್ದಷ್ಟು ಕಾಲು ಚಾಚಿದ್ದಲ್ಲಿ ಐಶಾರಾಮವಿಲ್ಲದಿದ್ದರೂ ನೆಮ್ಮದಿ ಇದ್ದೀತು, ಮನಸು ಬೇಡಿದಷ್ಟು ಮನೆ ಕೊಂಡು ಇಂದೋ ನಾಳೆಯೋ ಕೆಲಸ ಹೋದರೆ ಎನ್ನುವ ಹೆದರಿಕೆಯ ಗೂಡಿನೊಳಗೆ ಮಲಗುವುದು ಆಧುನಿಕ ಬದುಕಿನ ಬವಣೆಗಳಲ್ಲೊಂದೇ ಎಂದು ನಾನು ಹೇಳೋದು.

***

ಹೇಳಿ - ಇಡೀ ಅಮೇರಿಕದ ವ್ಯವಸ್ಥೆ ಸಾಲದಲ್ಲಿ ನಿಂತಿದೆ! ಇಲ್ಲಿಯ ಕಾರ್ಪೋರೇಷನ್ನುಗಳು ಬಿಲಿಯನ್ನುಗಟ್ಟಲೆ ಸಾಲವನ್ನು ಹೊಂದಿವೆ, ಇಲ್ಲಿ ಜೀವಿಸುವ ಪ್ರಜೆಗೂ ನೇರವಾಗಿಯೋ, ಪರೋಕ್ಷವಾಗಿಯೋ ಸಾಲ ಇದ್ದೇ ಇದೆ. ಹಾಗಾದರೆ ಯಾವ ದೇಶದಲ್ಲಿ ಪರೋಕ್ಷ ಸಾಲವಿಲ್ಲ ಎಂದು ಪ್ರಶ್ನೆ ಕೇಳಿಯೇ ಕೇಳಿರುತ್ತೀರಿ, ಪರೋಕ್ಷ ಸಾಲ ನಮ್ಮನ್ನು ಮೀರಿದ್ದು, ನಾವು ಮೈ ಮೇಲೆ ಹೇರಿಕೊಳ್ಳುವ ಸಾಲ ನಮ್ಮನ್ನು ಮಟ್ಟ ಮಾಡೋದು.

ಏನ್ ಸಾರ್, ಇಷ್ಟೊಂದ್ ದಿನಾ ಅಮೇರಿಕದಲ್ಲಿದ್ದುಕೊಂದು ಒಂದು ಬಾಯ್ ತುಂಬಾ ಒಳ್ಳೇ ಮಾತನಾದ್ರೂ ಹೇಳಬಾರ್ದಾ? ಹೇಳ್ತೀವಿ, ಯಾಕಿಲ್ಲ - ಎಲ್ಲಾ ಕಂಪ್ಯೂಟರ್ ವ್ಯವಸ್ಥೆ ಸ್ವಾಮೀ, ನಿಮ್ಮ ಮನೆಯಲ್ಲಿ ಕಾಫಿ ಪುಡಿ ಇದೆಯೋ ಇಲ್ಲವೋ ಅನ್ನೋದನ್ನೂ ಒಂದು ದಿನ ನೀವು ನಿಮ್ಮ ಕಂಪ್ಯೂಟರ್ ಲಾಗಿನ್ ಆಗಿ ನಿಮ್ಮ ಇನ್ವೆಂಟ್ರೆ ಚೆಕ್ ಮಾಡಿಕೊಂಡೇ ಕಾಫಿ ಡಬ್ಬವನ್ನು ಬೇಸ್‌ಮೆಂಟ್‌ನಲ್ಲಿ ಹುಡುಕಿಕೊಂಡು ಹೋಗೋ ವ್ಯವಸ್ಥೆಗೆ ದಾಸರಾಗ್ತೀರಿ ನೋಡಿ ಆಗ ನಿಮ್ಮನ್ನು ನಾನು ಇದೇ ಪ್ರಶ್ನೆ ಕೇಳ್ತೀನಿ.

***

ಈ ವರ್ಷ ಎಲೆಕ್ಷನ್ನ್ ವರ್ಷ, ನಮ್ಮನೆ-ಕಾರಿನ ರೆಡಿಯೋಗಳಿಗೆ ರಜಾ ಘೋಷಿಸಿಬಿಟ್ಟಿರೋದರಿಂದ ನಾನು ಸ್ವಲ್ಪ ನ್ಯೂಸ್ ಮಾಧ್ಯಮಗಳಿಂದ ಬಿಡುವನ್ನು ಪಡೆದುಕೊಂಡು ಹಾಯಾಗಿ ಇರೋಣಾ ಅಂತ ತೀರ್ಮಾನ ಮಾಡಿಕೊಂಡಿದ್ದೀನಿ. ನಿಮ್ಮ ಅಮೇರಿಕನ್ ಪುರಾಣ ಏನ್ ಬೇಕಾದ್ರೂ ಹೇಳಿ ಆದ್ರೆ ಮಾತ್ರ ಈ ಡೆಮೋಕ್ರಾಟೂ-ರಿಪಬ್ಲಿಕ್ಕೂ ಅಂಥಾ ಮಾತ್ರ ಶುರು ಮಾಡ್‌ಬೇಡಿ. ಕಳೆದ ವರ್ಷ ಈ ಹಾಳೂ ಮೂಳೂ ಸುದ್ಧಿಗಳನ್ನು ಕೇಳೇ ನನ್ನ ಬ್ಲಡ್ ಪ್ರೆಷರ್ ಸ್ವಲ್ಪ ಹೆಚ್ಚಾಗಿದ್ದೂ ಅಂತ ಕಾಣ್ಸುತ್ತೆ, ಅದನ್ನ ಚೆಕ್ಕ್ ಮಾಡೋಣ ಅಂತ ಹೋದ್ರೆ ಡಾಕ್ಟರೇನೋ ದೊಡ್ಡ ರಕ್ತದ ಟೆಸ್ಟ್ ಅನ್ನು ಬರೆದು ಕೊಟ್ರು, ಅಲ್ಲಿ ಹೋಗಿ ರಕ್ತದಾನ ಮಾಡಿ ಬಂದು ಐದು ತಿಂಗಳಾದ್ರೂ ಇನ್ನೂ ನನಗಾಗ್ಲೀ ನನ್ನ ಡಾಕ್ಟರಿಗಾಗ್ಲಿ ರಕ್ತದ ವರದಿಯೇ ಬಂದಿಲ್ಲವಾದ್ರಿಂದ ನನಗೆ ಖಾಯಿಲೆ ಇದ್ಯೋ ಇಲ್ಲವೋ ಅನ್ನೋದನ್ನ ಈ ವ್ಯವಸ್ಥೆಯಿಂದ ತಿಳಿದುಕೊಳ್ಳೋಕೇ ನನಗೆ ಆರು ತಿಂಗಳು ಬೇಕಾಗುತ್ತೆ. ಖಾಯಿಲೆ ಇದ್ಯೋ ಇಲ್ಲವೋ ಅನ್ನೋ ಪರೀಕ್ಷೆಯ ಪಲಿತಾಂಶ ಪ್ರಕಟವಾಗಿಲ್ಲದ್ದನ್ನು ನೋಡಿ ಅದನ್ನು ಹಿಂಬಾಲಿಸಿ, ಫಾಲೋ ಅಪ್ ಮಾಡಿಕೊಂಡು ಶ್ರಮ ವಹಿಸಿದ್ದಕ್ಕೆ ಮತ್ತೇನೇನೋ ಖಾಯಿಲೆಗಳು ಅಂಟಿಕೊಡು ಮತ್ತೆ ಡಾಕ್ಟರ್ ಆಫೀಸಿಗೆ ಹೋಗೋದಕ್ಕೆ ಹೆದರಿಕೆ ಆಗುತ್ತೆ.

ನಾನು ಈ ಒಂಥರಾ ಡಾಕ್ಟರು-ಬ್ಲಡ್ ರಿಪೋರ್ಟಿನ ಚಕ್ಕರದಲ್ಲಿ ಸಿಲುಕಿ ನಾನು ಒದ್ದಾಡ್ತಾ ಇರೋದನ್ನ ನೋಡಿಕೊಂಡು ನನಗೆ ಒಂದೊಂದ್ ಸರ್ತಿ ಅನ್ಸುತ್ತೆ - ಸೀದಾ ಭಾರತದ ಏರ್‌ಪೋರ್ಟಿನಲ್ಲಿ ಹೋಗಿ ಒಂದು ಭೂತ್ ಹಾಕಿ ಬಿಡ್ಲಾ ಅಂತಾ...ಅಲ್ಲಿ ಹಸಿದ ಕಣ್ಣುಗಳನ್ನು ಹೊತ್ತುಕೊಂಡು ಫಾರಿನ್ನಿಗೆ ಹೋಗೋರನ್ನ ತಡೆಯೋ ಒಂದು ಪಡೆಯನ್ನ ಹುಟ್ಟು ಹಾಕಿದ್ರೆ ಹೇಗೆ ಅಂತ ಅನ್ಸೋದು ನಿಜ, ನಮ್ ಭೂತ್‌ನಲ್ಲಿ ಮೆಂಬರ್‌ಶಿಪ್‌ಗೆ ನೀವೂ ಅರ್ಜಿ ಗುಜರಾಯಿಸ್ತೀರೋ ಹೇಗೆ?!

6 comments:

Anonymous said...

"ಸೋಶಿಯಲ್ ಸೆಕ್ಯೂರಿಟಿ ನಂಬರ್, ಕ್ರೆಡಿಟ್ ಹಿಸ್ಟರಿ, ಡ್ರೈವರ್ಸ್ ಲೈಸನ್ಸ್ ಮುಂತಾದವುಗಳ ಮೇಲೆ ನಿಂತ ವ್ಯವಸ್ಥೆ"

ಏನು ಹೇಳೋದು ಸತೀಶ್, ನಾನಂತು ರೋಸಿ ಹೋಗಿದೀನಿ. ದಿನ ಇಡೀ todo list ನೋಡ್ಕೊಂಡೇ ಜೀವನ ನಡಿತಾ ಇದೆ. ಆ customer service ಗೆ ಫೋನ್ ಮಾಡು, ಇಲ್ಲಿ cancel ಮಾಡು, ಅದನ್ನ pay ಮಾಡು. ಕೆಲ್ಸ ಮಾಡೊಕಿಂತ್ running errands ಅಲ್ಲೆ ಮಹಾ tension.

Supreeth.K.S said...

ಬೂತ್ ತೆಗೆಯುವುದು ಪಕ್ಕಾ ಅಂತಾದರೆ ನನ್ನದು ಮೊದಲ ಅರ್ಜಿ!
ಅಮೇರಿಕಾದ ವ್ಯವಸ್ಥೆಯ ಬಗ್ಗೆ ಕುರುಡು ಅಭಿಮಾನದಿಂದ ಪೇಡುವ ಮಾಧ್ಯಮಗಳ ಏಕತಾನದ ವರದಿಯಿಂದ ಕಂಗೆಟ್ಟವರಿಗೆ ಸತ್ಯದ ಮಗ್ಗಲು ದರ್ಶನ ಮಾಡಿಸುವ ನಿಮ್ಮ ಅಂತರಂಗದ ಮಾತು ನಿಜಕ್ಕೂ ವಿಶಿಷ್ಟವೆನಿಸುತ್ತದೆ.
ಅಮೇರಿಕಾದ ಹೆಲ್ತ್ ಕೇರ್ ಬಗ್ಗೆ ಒಂದು ಡಾಕುಮೆಂಟರಿ ನೋಡಿದ್ದೆ, ಸೈಕೊ ಎಂದು. ನಿಮ್ಮ ಬರಹ ಅದರ ಆಶಯವನ್ನು ಪುಷ್ಠೀಕರಿಸುವಂತಿದೆ.
ನಾವೂ ಕಣ್ಣು ಮುಚ್ಚಿಕೊಂಡು ಹಗಲು ಕಂಡ ಬಾವಿಗೆ ಧುಮುಕಲು ಹುಮ್ಮಸ್ಸಿನಿಂದ ಹೊರಟಿರುವುದು ನಿಜಕ್ಕೂ ವಿಷಾದದ ಸಂಗತಿಯಲ್ಲವೇ?

http://uniquesupri.wordpress.com/

ಚಿತ್ರಾ ಸಂತೋಷ್ said...

chitrakarkera@gmail.com ge ondu maiL madi.....nnage nim mail id beku....mathadbeku..kodthira?

Satish said...

createam
ಚೆನ್ನಾಗಿ ಹೇಳಿದಿರಿ, ಎಲ್ಲರ ಕಥೆಯೂ ಹಾಗೇ ಅನ್ಸುತ್ತೆ, ಈ ಒಂದು ವಾರದಲ್ಲೇ ನಾನು ಎಷ್ಟೊಂದು ’ಮೆಂಟೇನೆನ್ಸ್’ ಕರೆಗಳನ್ನು ಮಾಡಿದ್ದೇನೆಂದರೆ...

ಸುಪ್ರೀತ್,
ಸರಿ, ನಿಮ್ಮ ಅರ್ಜಿಯನ್ನು ಸ್ವೀಕರಿಸಿ ಆಗಿದೆ, ಇನ್ನು ಮುಂದಿನ ಪ್ರಾಸೆಸ್ಸಿಂಗ್ ಆಗುವವರೆಗೆ ಕಾಯಿರಿ! :-)
’ಪ್ರತಿಭಾ ಪಲಾಯನ’ದ ಬಗ್ಗೆ ಇನ್ನೊಮ್ಮೆ ಯೋಚಿಸೋಣ, ಏನಂತೀರಿ.

ಚಿತ್ರಾ,
ಸರಿ - ಹಾಗೇ ಆಗಲಿ!

ನಾವಡ said...

ಸತೀಶ್ ಅವರೇ,
ನನಗೆ ಅನ್ನಿಸೋದು, comforts ಹುಟ್ಟು ಹಾಕಿರೋ ರಗಳೆ.
ಜಾಗತೀಕರಣ, ಉದಾರೀಕರಣದ ಪ್ರಭಾವ ಎನ್ನೋ ಕ್ಲೀಷೆನೂ ಹೌದು.
ನಾವಡ

Satish said...

ನಾವಡ ಅವರೆ,
ನೀವು ಹೇಳಿದ ಹಾಗೆ ಇವೆಲ್ಲ ನಾವು-ನಾವೇ ಸೃಷ್ಟಿಸಿಕೊಂಡವುಗಳು ಅನ್ಸಲ್ವಾ? ಜಾಗತೀಕರಣ, ಉದಾರೀಕರಣ ಅನ್ನೋದು ಹೀಗೇ ಇರುತ್ತ್ಯೋ ಇನ್ನು ಮುಂದೇನೂ? ಅಂದ್ರೆ, ಕೇವಲ ಒಂದು ಹತ್ತಿಪ್ಪತ್ತು ವರ್ಷಗಳ ಪ್ರಗತಿಯಾಗಿ ಹೋದ್ರೆ ಸಾಕೆ, ಮುಂದೇನು ಅಂತ?

ಕ್ಷಮಿಸಿ, ಬರೀ ಪ್ರಶ್ನೆಗಳನ್ನು ಕೇಳೋದೇ ನನ್ನ ಸ್ವಭಾವ ಆಗಿ ಹೋಗಿದೆ :-)