Wednesday, August 16, 2006

ಹಳ್ಳಿಯಾದರೇನಂತೆ?

ಇತ್ತೀಚೆಗೆ ನಾನು ಗಮನಿಸುತ್ತಿದ್ದಂತೆ ಎರಡು ಮಹತ್ವದ ಬೆಳವಣಿಗೆಗಳು ನಡೆದವು: ಒಂದು, ನಾನು ನೋಡುವ ಮೊದಲೇ ಯಾರೋ ವಿಕಿಮ್ಯಾಪಿಯಾದಲ್ಲಿ ನಮ್ಮ ಊರನ್ನು ಹುಡುಕಿ ಅಲ್ಲಿಯ ರಸ್ತೆ, ಸೇತುವೆ, ಶಾಲೆ, ಕಾಲೇಜು ಮುಂತಾದ ಲ್ಯಾಂಡ್‌ಮಾರ್ಕ್‌ಗಳನ್ನು ಇಲ್ಲಿಂದ ಸೆಟಲೈಟ್ ಚಿತ್ರದಲ್ಲಿ ಗುರುತಿಸಿ ಇಟ್ಟಿದ್ದು, ಮತ್ತೊಂದು ಲೆಬನಾನ್‌ನಲ್ಲಿ, ಅದರಲ್ಲೂ ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ವಾಯುಪಡೆಗಳು ಹಳ್ಳಿ-ಪಟ್ಟಣವೆನ್ನದೆ ಪ್ರತಿಯೊಂದರ ಮೇಲೂ ಬಾಂಬುಗಳನ್ನು ಬಿಸಾಕಿ ನೆಲಸಮ ಮಾಡಿದ್ದು. ಟಿವಿಯಲ್ಲಿ ತೋರಿಸೋ ಚಿತ್ರಗಳ ಮುಖಾಂತರ ಇಸ್ರೇಲ್‌ನವರೂ ದಕ್ಷಿಣ ಲೆಬನಾನ್ ಅನ್ನು ಚೆನ್ನಾಗಿ ಅಧ್ಯಯನ ಮಾಡಿ ವೈರಿಪಡೆ ಅಡಗಿಕೊಂಡಿರಬಹುದಾದ ಅಡಗುತಾಣಗಳ ಮೇಲೆ ನಿರಂತರ ಧಾಳಿ ನಡೆಸಿದ ಸುದ್ದಿಯನ್ನು ಮನವರಿಕೆ ಮಾಡಿಕೊಳ್ಳುತ್ತಿದ್ದಂತೆ ಸುಮ್ಮನೇ ಈ ಯೋಚನೆ ನನ್ನ ತಲೆಯಲ್ಲಿ ಹುದುಗಿತು - ಒಂದುವೇಳೆ ಭಾರತವನ್ನು ಈ ರೀತಿ ಯಾರಾದರೂ ಧಾಳಿ ಮಾಡಿದರೆ, ನಮ್ಮಲ್ಲಿನ ಪ್ರತಿಯೊಂದು ಸೇತುವೆ, ಕಟ್ಟಡಗಳ ಮೇಲೂ ಬಾಂಬುಗಳನ್ನು ಬಿಸಾಡಲು ತೊಡಗಿದರೆ ಏನಾದೀತು ಎಂದು ಯೋಚಿಸುತ್ತಿದ್ದಂತೆ ಊಹೆಯ ಪರಿಸ್ಥಿತಿ ಕೂಡಾ ಗಂಭಿರವಾಗತೊಡಗಿತು. ಇದ್ದಕ್ಕಿದ್ದ ಹಾಗೆ ನಮ್ಮ ಊರಿನ ಮೇಲೆ ಮೋಹ ಹುಟ್ಟಿದ್ದೂ ಅಲ್ಲದೇ ಹಾಗೆ ಯಾರೂ ಧಾಳಿ ಮಾಡಲಾರರು ಎಂದು ಗೊತ್ತಿದ್ದೂ ಹಾಗೆ ಮಾಡಿದವರನ್ನು ಸುಮ್ಮನೇ ಬಿಟ್ಟುಬಿಡಬಾರದು ಎನ್ನುವ ಕೆಚ್ಚೂ ಹುಟ್ಟಿತು. ಕೇವಲ ಐದೇ ಐದು ನಿಮಿಷ ಕಂಪ್ಯೂಟರ್ ಪರದೆಯ ಮೇಲೆ ಉಪಗ್ರಹ ಆಧಾರಿತ ಚಿತ್ರಗಳನ್ನು ಗುರುತಿಸಿ, ಇದು ನಮ್ಮ ಮನೆ, ಇದು ನಾನು ಓದಿದ ಶಾಲೆ, ಇದು ನಾನು ಆಟವಾಡಿದ ಬಯಲು ಎಂದು ಮುಂತಾದ ಹಲವಾರು ಗುರುತುಗಳನ್ನು ಹುಡುಕಿ ಊರಿನ ನೆನಪು ಮನದಲ್ಲಿ ಹುಟ್ಟುತ್ತಿದ್ದಂತೆ ಜೊತೆಯಲ್ಲಿ ಅಷ್ಟೇ ಜೋರಾಗಿ ಬಂದ ರೋಷವದು - ಒಂದು ರೀತಿ ಆಡುವ ಮಗುವಿನ ಕೈಯಿಂದ ಚೆಂಡನ್ನು ಕಸಿದುಕೊಂಡಾಗ ಅದಕ್ಕೆ ಆ ಕ್ಷಣದ ಮಟ್ಟಿಗೆ ಕೋಪ ಬರುವ ಹಾಗೆ. ಅಕಸ್ಮಾತ್ ನಮ್ಮ ಹಿರಿಯರು ಬದುಕಿಬಾಳಿದ ಮನೆ, ನಮ್ಮ ಊರಿನ ಕಟ್ಟಡ-ಸೇತುವೆಗಳ ನೆಲಸಮ ನನ್ನ ಕಣ್ಣಮುಂದೆಯೇ ಆಗಿಯೇ ಬಿಟ್ಟಿತೆಂದರೆ ಅದರ ಜೊತೆಯಲ್ಲೇ ಹುಟ್ಟಿದ ಕೆಚ್ಚಿನ ದೆಸೆಯಿಂದ ನನಗೆ 'ಭಯೋತ್ಪಾದಕ'ನೆಂಬ ಹಣೆಪಟ್ಟಿ ಬಂದುಬಿಡುತ್ತೇನೋ ಎಂದು ಭಯವೂ ಆಯಿತು!

ನನ್ನನ್ನು ಪಕ್ಕಾ ಹಳ್ಳಿಯ ಹಿನ್ನೆಲೆಯವನು ಎಂದು ಊಹಿಸಿಕೊಳ್ಳಲು ಯಾರಿಗೂ ಹೆಚ್ಚು ಹೊತ್ತು ಬೇಕಾಗುವುದಿಲ್ಲ, ಹೋದಲ್ಲಿ ಬಂದಲ್ಲಿ ನೆರೆಹೊರೆಯ ಮೇಲೆ ಕುತೂಹಲ, ಪ್ರೀತಿ ಹುಟ್ಟುವುದೂ ಅಲ್ಲದೇ, ನನ್ನ ನಡವಳಿಕೆಗಳಲ್ಲೂ "ಹಳ್ಳಿತನ" ತೋರಿಬರುತ್ತದೆ. ಒಮ್ಮೆ ಹೀಗೇ ಶೆನಂಡೋವಾ ವ್ಯಾಲಿಯಲ್ಲಿ ಪಿಕ್‌ನಿಕ್‌ಗೆ ಹೋಗಿದ್ದೆವು, ಆಗ ಊಟಕ್ಕೆ ಕುಳಿತಾಗ ನನ್ನ ಮೊದಲು ತುತ್ತನ್ನು ನನಗರಿವಿಗೆ ಬಂದೋ ಬಾರದೆಯೇ ನೆಲಕ್ಕೆ ಹಾಕಿ ಊಟ ಮಾಡಲು ಶುರುಮಾಡಿದೆ, ಅದನ್ನು ನೋಡಿದ ನನ್ನ ಸ್ನೇಹಿತ ಅದರ ಬಗ್ಗೆ ಕೇಳಿದ್ದಕ್ಕೆ ನಾನು ಗದ್ದೆ-ತೋಟದಲ್ಲಿ ಊಟ ಮಾಡೋ ಯಾರಾದರೂ ಮಾಡೋ ಕೆಲಸವದು, ಸಂಪ್ರದಾಯವೇನಲ್ಲ, ಒಂದು ಬಗೆಯ ರೂಢಿ ಎಂದು ಉತ್ತರ ಹೇಳಿದ್ದಕ್ಕೆ ಅವನೂ ಹಾಗೇ ಮಾಡಿದ. ನಮ್ಮದು ರೈತಾಪಿ ಕುಟುಂಬವೇನಲ್ಲ, ಆದರೂ ಅನೇಕ ರೈತ ಕುಟುಂಬಗಳ ನಡುವೆ ಬೆಳೆದ ಬಂದ ನನಗೆ ಅದು ಸಹಜವಾಗಿತ್ತು, ಅದೇ ನನ್ನ ಪಟ್ಟಣದ ಸ್ನೇಹಿತನಿಗೆ ವಿಚಿತ್ರವಾಗಿ ಕಂಡಿರಲಿಕ್ಕೂ ಸಾಕು.

ಇವತ್ತಿಗೂ ಸಹ ಭಾರತವನ್ನು ಪೂರ್ಣವಾಗಿ ಚಿತ್ರಿಸಬೇಕು ಎನ್ನೋದಾದರೆ ಅಲ್ಲಿಯ ಹಳ್ಳಿಯ ಲವಲವಿಕೆಯನ್ನೂ ತೋರಿಸಬೇಕು, ಹಳ್ಳಿಗಳೇ ಭಾರತದ ಜೀವಾಳ, ಇವತ್ತಿಗೂ ಸಹ ರಸ್ತೆ, ವಿದ್ಯುತ್, ಶಾಲೆ, ಮುಂತಾದ ಮೂಲಭೂತ ವ್ಯವಸ್ಥೆಯೂ ಇಲ್ಲದ ಎಷ್ಟೋ ಹಳ್ಳಿಗಳ ಚಿತ್ರಣವನ್ನು ನಾವು ಅಲ್ಲಲ್ಲಿ ಓದುತ್ತಲೇ ಇರುತ್ತೇವೆ. ನಿಜವಾದ ಭಾರತದ ಅಭಿವೃದ್ಧಿ ಎನ್ನೋದೇನಾದರೂ ಇದ್ದರೆ ಅದು ಈ ಹಳ್ಳಿಗಳ ಸಾಮೂಹಿಕ ಬೆಳವಣಿಗೆಯಲ್ಲಿದೆ. ಸ್ವಾತಂತ್ರ್ಯಾ ನಂತರದ ದಿನಗಳಿಂದಲೂ ಪಂಚವಾರ್ಷಿಕ ಯೋಜನೆ ಮತ್ತಿತರ ಹಲವಾರು ಪ್ರಧಾನಮಂತ್ರಿಗಳು ಕನಸು ಕಟ್ಟಿದ ಹಾಗೇ ಬೇಕಾದಷ್ಟು ಮಹಾಯೋಜನೆಗಳು ಬಂದರೂ, ಆರು ದಶಕಗಳ ಕಾಲ ಸರಿದರೂ ಹಳ್ಳಿಗಳು ಇನ್ನೂ ಹಳ್ಳಿಗಳಾಗೇ ಇವೆ. ಜಗತ್ತಿನ ಕಣ್ಣಿಗೆ ಕಾಣುವ ಮಾಹಿತಿ ಅಥವಾ ಜೀವ ತಂತ್ರಜ್ಞಾನವಾಗಲೀ, ಅಲ್ಲಲ್ಲಿ ಹಾರಿಬಿಡುವ ಉಪಗ್ರಹ ಯೋಜನೆಗಳಾಗಲೀ ಇವ್ಯಾವೂ ಹಳ್ಳಿಗಳಿಗೆ ಸಂಬಂಧಿಸಿಲ್ಲವೇನೋ ಎನ್ನುವಂತೆ ಮೇಲ್ಮಟ್ಟಕ್ಕೆ ತೋರಿದರೂ, ಬಸವನ ಹುಳುವಿನ ಗತಿಯಲ್ಲಿ ಬಲುನಿಧಾನವಾಗಿ ಹಳ್ಳಿಗಳೆಡೆಗೂ ಅಭಿವೃದ್ಧಿ ಸುಳಿಯುತ್ತಿದೆ.

ಹಳ್ಳಿಗಳೆಂದರೆ ಎಲ್ಲ ಕಡೆಯೂ ಕಡಿಮೆ ಖರ್ಚು - ಹಾಗೇ ನಮ್ಮೂರಿನಲ್ಲೂ ಇವತ್ತಿಗೂ ಎರಡು ಮಕ್ಕಳ ಒಂದು ಕುಟುಂಬ ಮನಸ್ಸು ಮಾಡಿದರೆ ತಿಂಗಳಿಗೆ ಒಂದು ಸಾವಿರ ರೂಪಾಯಿಯಲ್ಲಿ ಬದುಕಬಹುದು ಎಂಬುದು ನನ್ನ ಅಭಿಪ್ರಾಯ, ಮನೆಯ ಬಾಡಿಗೆಯನ್ನು ಹೊರತುಪಡಿಸಿ. ನಾವೇ ಹಿತ್ತಲಿನಲ್ಲಿ ಬೆಳೆಸಿದ ತರಕಾರಿಗಳಿಂದ ಹಿಡಿದು, ಗಂಗೆ-ಗೌರಿ ಕೊಡುವ ಹಾಲಿನಲ್ಲೂ, ಹೆಚ್ಚೂ ಕಡಿಮೆ ವಿದ್ಯುತ್ ಅನ್ನು ದೀಪ ಉರಿಸಲು ಮಾತ್ರವೇ ಉಪಯೋಗಿಸಿ - ಅದರಲ್ಲೂ ಆಗಾಗ್ಗೆ ರಾತ್ರಿವೇಳೆ ಕರೆಂಟು ಹೋಗೋದರಿಂದ ವಿದ್ಯುತ್ ಬಿಲ್ಲೂ ಕಡಿಮೆ ಬಂದು, ನಲ್ಲಿ ನೀರಿಗೆ ಕಡಿಮೆ ಬೆಲೆಕೊಟ್ಟು ಅಥವಾ ಮನೆಯ ಹಿಂದಿನ ಬಾವೀ ನೀರನ್ನೇ ಎಲ್ಲದ್ದಕ್ಕೂ ಬಳಸಿ, ಮಕ್ಕಳನ್ನು ಯಾವಾಗಲೂ ಅತಿಕಡಿಮೆ ಶುಲ್ಕವಿರುವ ಸರ್ಕಾರಿ ಶಾಲೆಗಳಿಗೆ ಸೇರಿಸಿಬಿಟ್ಟರೆ ಆಗಿ ಹೋಯಿತಲ್ಲ. ಏನಾದರೂ ಓದಬೇಕೆಂದ್ರೆ ಯಾವ್ದಾದ್ರೂ ನ್ಯೂಸ್ ಪೆಪರ್ ತರಿಸಿದ್ರಾಯ್ತು, ಕಂಪ್ಯೂಟರ್ರೂ ಬೇಡ ಮತ್ತೊಂದೂ ಬೇಡ ಹಲವಾರು ಚಾನೆಲ್ಲುಗಳು ಬರೋ ಟಿವಿ ಇರೋವಾಗ!

ನಾನು ಬೆಳೆದು ಹದಿನೈದು ವರ್ಷ ಕಳೆದುಬಂದ ಊರು ನನ್ನ ಹಿಂದಿದೆ, ಆಗ ಹಳ್ಳಿಯಾಗಿದ್ದರೂ ಇಂದು ಸಣ್ಣ ಪಟ್ಟಣವಾಗಿ ಅದಕ್ಕೆ ಭಡ್ತಿ ತೊರೆತಿದ್ದರೂ ಅದು ನನ್ನ ಕಣ್ಣಿಗೆ ಕಾಣುವಂತೆ, ನನ್ನ ಮನಸ್ಸಿನಲ್ಲಿ ಉಳಿಯುವಂತೆ ಹಳ್ಳಿಯಾಗಿಯೇ ಇದೆ. ನಾಗಾಲೋಟದಲ್ಲಿ ಬರುತ್ತಿರುವ ಬೆಳವಣಿಗೆಗಳು ಒಂದುಕಡೆ, ಮಧುರವಾದ ಹಳೆಯ ನೆನಪುಗಳು ಇನ್ನೊಂದುಕಡೆ, ಹಳೆಯದನ್ನ ನೆನಪಿಸಿ ಊರನ್ನು ಚಿಕ್ಕದಾಗಿ ಮಾಡುವ ಆಲೋಚನೆ ಒಂದುಕಡೆ, ವೇಗವಾಗಿ ಬರೋ ಬೆಳವಣಿಗೆಗಳು ಜಗತ್ತನ್ನೇ ಹಳ್ಳಿಯನ್ನಾಗಿ ಮಾಡೋದು ಮತ್ತೊಂದುಕಡೆ - ಹೀಗೆ ಕಾಲ ಬೆಳೆದುಬಂದರೂ ಬೆಳವಣಿಗೆಯ ಜೊತೆಯಲ್ಲಿ ನಮ್ಮನ್ನೆಲ್ಲರನ್ನು ಒಂದಲ್ಲ ಒಂದು ರೀತಿಯಲ್ಲಿ ಹಳ್ಳಿಯವರನ್ನಾಗಿ ಮಾಡುವ ಕುಹಕ ಯಾರದೋ ಪೂರ್ವ ನಿರ್ಧಾರಿತ ಯೋಜನೆಯಂತೆ ಕಂಡುಬರುತ್ತದೆ. ಕಂಪ್ಯೂಟರ್ ಪರದೆಯ ಮೇಲೆ ಅಕ್ಷಾಂಶ-ರೇಖಾಂಶಗಳನ್ನು ಹಿಗ್ಗಿಸಿ ನೋಡಿದಂತೆಲ್ಲ ನಮ್ಮ ಮಹಾ ನಗರವೂ ಒಂದು ಹಳ್ಳಿಯಂತೆಯೇ ಕಂಡುಬರುತ್ತದೆ. ವ್ಯವಸ್ಥಿತವಾದ ಬಡಾವಣೆಗಳು, ಚೌಕಚೌಕದ ಆಕಾರದಲ್ಲಿ ಸೈಟುಗಳನ್ನು ಕತ್ತರಿಸಿಕೊಂಡು ಸಮೂಹವನ್ನು ನಿರ್ಮಿಸಿಕೊಂಡಿದ್ದೇವೆ ಎನ್ನೋ ಭ್ರಮೆಯಲ್ಲಿರುವ ಅದೆಷ್ಟೋ ಚಿತ್ರಗಳೂ ಎತ್ತರದಿಂದ ನೋಡಿದಾಗ ವಕ್ರವಕ್ರವಾಗಿಯೇ ಕಂಡುಬರುತ್ತಿವೆ. ಬರಿಯ ಬೆಂಗಳೂರು, ಬಾಂಬೆಯೇಕೆ ಇಲ್ಲಿಯ ಹಲವಾರು ನೆರೆಹೊರೆಗಳೂ, ರಸ್ತೆಗಳೂ ಬಳುಕಿವೆ, ಒಂದು ರೀತಿ ಹಳ್ಳಿಯಲ್ಲಿ ಕಂಡು ಬರುವ ಅನ್ಯೋನ್ಯತೆಯ ಧ್ಯೋತಕವಾಗಿ ಎಲ್ಲೆಲ್ಲೂ ವಕ್ರಗೆರೆಗಳೇ ಕಾಣುತ್ತಿವೆ!

ಹಳ್ಳಿ ಹಲವಾರು ಅನುಭವಗಳನ್ನು ಕಲಿಸುತ್ತದೆ - ಇದು ಇಂತಹ ಪ್ರಾಣಿ ಎನ್ನೋ ನಿಜ ಜೀವನದ ಅನುಭವದ ಮುಂದೆ ಪೇಟೆಯ ಮಕ್ಕಳು ಮೃಗಾಲಯದಲ್ಲಿ ನೋಡೋ ಸೊರಗಿದ ಪ್ರಾಣಿಗಳ ಚಿತ್ರಣ ಸಪ್ಪೆಯಾಗಿ ಕಂಡುಬರುವಂತೆ ಹಳ್ಳಿಯ ಮಟ್ಟದಲ್ಲಿ ಸಿಗಬಹುದಾದ ಎಲ್ಲ ನೈಸರ್ಗಿಕ ಸಂಪನ್ಮೂಲವೂ ಒಂದಲ್ಲ ಒಂದು ರೀತಿಯಿಂದ ನೆರೆಹೊರೆಯ ಮೇಲಿನ ಪ್ರೀತಿಯನ್ನು ಹೆಚ್ಚಿಸಿವೆ. ಪೊದೆಗಳ ಸಂದಿನಲ್ಲಿ ಗೂಡುಕಟ್ಟಿ ಬದುಕುವ ಸಣ್ಣ ಪಕ್ಷಿಗಳಿಂದ ಹಿಡಿದು ಊರ ಹೊರಗಿನ ಬಯಲಿನಲ್ಲಿ ಸತ್ತ ಜಾನುವಾರುಗಳ ಹಸಿಮಾಂಸವನ್ನು ಕಿತ್ತು ತಿನ್ನುವ ರಣಹದ್ದುಗಳ ದರ್ಶನವೂ ಒಂದೇ ಊರಿನಲ್ಲಿ ಆಗುತ್ತದೆ. ದಿನಬೆಳಗಾದರೆ ಯಾರದ್ದೋ ಮನೆಯ ಕೋಳಿ ಕೂಗುವ ಸದ್ದಿನಿಂದ ಹಿಡಿದು, ರಾತ್ರಿ ಅದೆಷ್ಟೋ ಹೊತ್ತಿನಲ್ಲಿ ಊಳಿಡುವ ನಾಯಿಯೂ ಬದುಕಿನ ಭಾಗವಾಗಿ ಹೋಗುತ್ತದೆ. ಮಳೆ-ಬೆಳೆಯ ಜೊತೆಗೆ ನೇರ ಸಂಪರ್ಕವಿದ್ದು, ಅದನ್ನು ಆಧರಿಸಿದವರ ಗೋಳು ನಮ್ಮ ಗೋಳಾಗುತ್ತದೆ. ಹೀಗೆ ಹಲವಾರು ಪ್ರಿಮಿಟಿವ್ ಅನುಭವಗಳ ನಡುವೆ ನಿಧಾನವಾಗಿ ಬದಲಾಗುವ ಋತುಮಾನಗಳನ್ನೂ ಮನದೊಳಗೇ ಲೆಕ್ಕ ಹಾಕಿಕೊಳ್ಳುವ ಜಾಣತನವನ್ನು ಕಲಿಸುತ್ತದೆ. ದಿನಬೆಳಗಾದರೆ ನೋಡೋದೇ ಇಂತಿಷ್ಟು ಜನಗಳ ಮುಖ ಅಂತಾಗಿ ಬೇಕೋ ಬೇಡವೋ ಹಂಚಿಕೊಂಡು ಬಾಳುವ ವ್ಯವಸ್ಥೆ ತಾನೇ ತಾನಾಗಿ ಪ್ರಭಲವಾಗುತ್ತದೆ.

ಇವತ್ತಿಗೂ ನನ್ನಲ್ಲೇನೂ ಅಂತಹ ಬದಲಾವಣೆಗಳೇನಿಲ್ಲ - 'ಅವನು ಒಳ್ಳೇ ಮನುಷ್ಯ' ಎಂದು ಎಷ್ಟೋ ಸಾರಿ ನಾನು ಕೊಡುವ ವ್ಯಾಖ್ಯೆಗಳಿಗೆ ನನ್ನ ಹುಟ್ಟಿ ಬೆಳೆದ ಪರಿಸರವೇ ಹಿನ್ನೆಲೆಯಾಗಿ ನಿಂತಿದೆ, ನಮ್ಮಲ್ಲಿ ಒಮ್ಮೆ 'ಒಳ್ಳೆಯ'ದಾದರೆ ಆ ವ್ಯಾಖ್ಯೆ ಪದೇ-ಪದೇ ಬದಲಾಗುವಂತದ್ದೇನಲ್ಲ, ಈ ನಂಬಿಕೆ ಬಹಳಷ್ಟು ಸಾರಿ ನನಗೆ ಕಷ್ಟವನ್ನು ತಂದುಕೊಟ್ಟರೂ, ಮಾತಿನಲ್ಲಿ ಹೇಳಲು ಬಾರದ ಕಾರಣಗಳಿಂದಾಗಿ ನಾನು ಜನರನ್ನು ನಂಬುವುದೇ ಹೆಚ್ಚು ಎಂದರೆ ತಪ್ಪೇನೂ ಇಲ್ಲ!

2 comments:

Shiv said...

ಸತೀಶ್,
ಸೊಗಸಾಗಿದೆ ಲೇಖನ...

ನೀವು ಮೊದಲ ತುತ್ತು ಬಗ್ಗೆ ಹೇಳಿದ್ದನ್ನು ಕೇಳಿ ನನಗೆ ನಮ್ಮ ಚಿಕ್ಕಪ್ಪನ ಹೊಲದಲ್ಲಿ ಕೂತು ಉಂಡ ರೊಟ್ಟಿ-ಬುತ್ತಿ ನೆನಪಾಯಿತು..ನಾವು ಹಂಗೆ ಮಾಡ್ತಾ ಇದ್ದ ನೆನಪು..

ಹಳ್ಳಿಗಳು ಮೂಲಭೂತ ಸವಲತ್ತಿಲ್ಲದೆ ಹಳ್ಳಿಯಾಗೇ ಇದೆ..ಆದರೆ ಪಟ್ಟಣೀಕರಣದ ಅನೇಕ ಮಾರಿಗಳು ಹಳ್ಳಿಯ ಸೊಬಗನ್ನು,ಸೊಡಗನ್ನು ಆಳಿಸಿಹಾಕಿವೆ ಅನಿಸುತ್ತೆ

Satish said...

ಶಿವು,

ಒಂದು ಕಡೆ ನಗರೀಕರಣ ಮತ್ತೊಂದು ಕಡೆ ಸೌಲಭ್ಯಗಳಿಲ್ಲದಿರುವುದು ಎಲ್ಲ ರೀತಿಯಿಂದಲೂ ಹಳ್ಳಿಗಳು ಸೊರಗಿವೆ.
ಕೊನೇ ಪಕ್ಷ ಹೊಲದಲ್ಲಿ ಊಟಮಾಡಿದ ನೀವೊಬ್ಬರಾದರೂ ಇದ್ದೀರಲ್ಲ!