ಅರಸುವ ಬದುಕು
ಮಾನವನ ಬದುಕೇ ಹೀಗೆ, ತನ್ನ ಸುತ್ತಳತೆಯಲ್ಲಿರುವುದನ್ನೆಲ್ಲ ಬಿಟ್ಟು, ದೂರದಲ್ಲಿದ್ದನ್ನು ಅರಸುತ್ತಾ ಹೋಗುವುದು. ಹೀಗನ್ನಿಸಿದ್ದು, ಇತ್ತೀಚೆಗೆ ನಾನು ಓದಿದ ಬಿ.ಜಿ.ಎಲ್. ಸ್ವಾಮಿಯವರ, "ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕ" ಪುಸ್ತಕವನ್ನು ಓದಿದಾಗ. ಒಂದು ಖಂಡದಿಂದ ಮತ್ತೊಂದು ಖಂಡಕ್ಕೆ ತಮ್ಮ ನಿರಂತರ ಪಯಣವನ್ನು ಮುಂದುವರೆಸಿದ್ದಲ್ಲದೇ, ತಮ್ಮ ಜೊತೆಗೆ ಗಿಡ, ಮರ, ಹಣ್ಣು-ಹಂಪಲು, ತರಕಾರಿ, ಪ್ರಾಣಿಗಳನ್ನೂ ತಮ್ಮ ಸಂಸ್ಕೃತಿಯ ಪ್ರತೀಕವಾಗಿ, ತೆಗೆದುಕೊಂಡು ಹೋದರು. ಉಳಿಸಿದರು ಮತ್ತು ಬೆಳೆಸಿದರು. ಈ ನಿಟ್ಟಿನಲ್ಲಿ 15ನೇ ಶತಮಾನ ಮನುಕುಲ ಸಂಸ್ಕೃತಿಯ ಹಂಚಿಕೆಯ ಪ್ರತೀಕವಾಗಿ ಬಹಳ ಮಹತ್ವದ ಶತಮಾನವಾಗಿ ಕಂಡುಬರುತ್ತದೆ. ಕೇವಲ, ಐನೂರು ವರ್ಷಗಳ ಹಿಂದೆಯಷ್ಟೇ ಬಳುವಳಿಯಾಗಿ ಬಂದ ತರಕಾರಿ, ಹಣ್ಣು, ಮತ್ತಿತರ ಗಿಡಮೂಲಿಕೆಗಳು, ಇಂದು ಸಂಪೂರ್ಣವಾಗಿ ನಮ್ಮವೇ ಆಗಿಬಿಟ್ಟಿವೆ!
ಟೊಮೇಟೊ, ಮೆಣಸಿನಕಾಯಿ, ತಿಂಗಳ ಹುರುಳಿಕಾಯಿ (ಬೀನ್ಸ್), ಸೀಮೆ ಬದನೆಕಾಯಿ, ಪಪಾಯ, ಸೀಬೆ, ಸೀತಾಫಲ, ಅವಕಾಡೋ ಮೊದಲಾದವುಗಳು ನಮ್ಮೊಳಗೊಂದಾಗಿ ಹೋಗಿವೆ.
ಸುಮಾರು 15 ಸಾವಿರ ವರ್ಷಗಳ ಹಿಂದೆ, ಪೂರ್ವ ಆಫ಼್ರಿಕಾ ಖಂಡದ ನಾಗರೀಕತೆಯ ತೊಟ್ಟಿಲಿನಿಂದ ವಲಸೆ ಹೋದವರ ಅಗತ್ಯಗಳು ಹಲವಿದ್ದವು. ಒಂದು ಕಾಲದಲ್ಲಿ, ಆಹಾರ, ನೀರು ಮತ್ತು ಬದುಕುಳಿಯುವುದಕ್ಕೊಂದು ತಾವನ್ನು ಅರಸಿಕೊಂಡು ಹೋದ ಮನುಕುಲ ತನ್ನದೇ ಆದ ರೀತಿಯಲ್ಲಿ ಮನುಕುಲದ ವಲಸೆ ಮತ್ತು ಬೆಳವಣಿಗೆಗೆ ಕಾರಣವಾಯಿತು. ಸರಳವಾದ ಆಯುಧ, ಮತ್ತು ಉಪಕರಣಗಳನ್ನು ಬಳಸಿ ಅವರು ಅಂದು ಮಾಡಿದ ಮಹಾನ್ ಸಾಧನೆಯ ದೆಸೆಯಿಂದ ಇಂದು, ಮನುಷ್ಯ ಹೆಜ್ಜೆ ಇಡದ ಸ್ಥಳವೇ ಇಲ್ಲ ಎನ್ನುವಂತಾಗಿದೆ. ಈ ನಿಧಾನವಾದ ವಲಸೆ ಪ್ರಕ್ರಿಯೆ ಒಂದು ರೀತಿಯಲ್ಲಿ, ತೆರೆದ ಪ್ರಪಂಚದ ಅಳತೆಗೋಲಿನಂತಿತ್ತು.
ಆದರೆ, ಮುಂದೆ 15ನೇ ಶತಮಾನದಲ್ಲಿ ವಲಸೆ ಹೋದವರ ಅಗತ್ಯಗಳು ತದ್ವಿರುದ್ಧವ್ವಾಗಿದ್ದವು. ಆರ್ಥಿಕ, ರಾಜಕೀಯ, ಧಾರ್ಮಿಕ ಕಾರಣಗಳು ಈ ನಿಟ್ಟಿನಲ್ಲಿ ಮುಖ್ಯವಾಗಿ ಕಾಣಿಸುತ್ತವೆ. ಇಲ್ಲಿ, ವ್ಯಾಪಾರ-ವಹಿವಾಟು ಎನ್ನುವುದು ಒಂದು ಸಣ್ಣ ನೆಪವಾಗಿ ಕಂಡುಬಂದು, ಮದ್ದುಗುಂಡುಗಳ ಸಹಾಯದಿಂದ ಅನೇಕ ಸಂಸ್ಕೃತಿಗಳ ನಾಶಕ್ಕೂ ಈ ಪ್ರಕ್ರಿಯೆ ಕಾರಣವಾಯಿತು ಎಂದರೆ ತಪ್ಪಲ್ಲ. ಕಗ್ಗತ್ತಲ ಖಂಡದಿಂದ ಆರಂಭವಾದ ಈ ಮನುಕುಲದ ವಲಸೆ, 15 ಸಾವಿರ ವರ್ಷಗಳಲ್ಲಿ, ಯಾವ ಹಂತವನ್ನು ತಲುಪಿತೆಂದರೆ, ಟ್ರೇಡ್, ರಿಲಿಜನ್ ಮತ್ತು ಪವರ್ ಎನ್ನುವ ಹೆಸರಿನಲ್ಲಿ ಬೂಮರ‍್ಯಾಂಗ್‌ನಂತೆ ಮತ್ತೆ ಹಿಂತಿರುಗಿ ಆಫ಼್ರಿಕಾವನ್ನು ಹುಡುಕಿಕೊಂಡು ಬಂದಾಗ, ಆ ವಲಸೆ ಮನೋಭಾವನೆಯಲ್ಲಿ ಅನೇಕ ಸ್ವಾರ್ಥಗಳು ಅಡಕವಾಗಿದ್ದು ಗೊತ್ತಾಗುತ್ತದೆ. ಕೇವಲ ಎರಡು ಸಾವಿರ ವರ್ಷಗಳ ಹಿಂದೆ ಹುಟ್ಟಿ ಬೆಳೆಯುತ್ತಿರುವ ಕೆಲವು ಮತಗಳು, ತಮ್ಮ ಹಿರಿಮೆ-ಗರಿಮೆಯ ಹೆಸರಿನಲ್ಲಿ ಈಗ ಇಡೀ ವಿಶ್ವವನ್ನೇ ಕಬಳಿಸಿಕೊಳ್ಳುತ್ತಿವೆ ಎಂದರೆ ಆಶ್ಚರ್ಯವಾಗುತ್ತದೆ.
ಈ ಎರಡು ಸಾವಿರ ವರ್ಷಗಳಲ್ಲಿ, ಮನುಕುಲ ಅದೆಷ್ಟು ಆಟಾಟೋಪಗಳನ್ನು ಕಂಡಿರಬೇಡ? ಒಂದಾನೊಂದು ಕಾಲದಲ್ಲಿ ವಲಸೆ ಬಂದ ನಮ್ಮ ಪೂರ್ವಿಕರ ಪೂರ್ವಿಕರಿಗೆ ತಮ್ಮ ದೈನಂದಿನ ಅಗತ್ಯಗಳೇ ಪೂರಕ ಕಾರಣಗಳು. ಅವರಿಗೆ ತಮ್ಮತನವನ್ನು ಉಳಿಸಿಕೊಳ್ಳುವುದು ಮುಖ್ಯವಾಗಿತ್ತು. ಆಹಾರ-ಅಗತ್ಯಗಳ ಹೆಸರಿನಲ್ಲಿ, ಅವರು ಪ್ರಕೃತಿಯನ್ನು ಗೋಳು ಹೊಯ್ದುಕೊಳ್ಳಲಿಲ್ಲ. ಪ್ರಕೃತಿಯ ಜೊತೆಗೆ ಎಂದಿಗೂ ಒಂದು ಸಮತೋಲನ ಹಾಗೂ ಸಮಾನಾಂತರವನ್ನು ಬೆಳೆಸಿಕೊಂಡಿದ್ದರು. ಸುತ್ತಲನ್ನು ಹಿಂಡಿ ಹಿಪ್ಪೆ ಮಾಡಿ ತಾವು ಬೆಳೆಯುವುದು ಅವರಿಗೆ ಮುಖ್ಯವಾಗಿರಲಿಲ್ಲ. ಹಾಗೆಯೇ, ಧಾರ್ಮಿಕ ಕಾರಣಗಳೂ, ವ್ಯಾವಹಾರಿಕ ಕಾರಣಗಳೆಲ್ಲ ಇರಲಿಲ್ಲವೆಂದೇ ಹೇಳಬೇಕು. ನಿಧಾನವಾಗಿ ರಾಜಕೀಯ ಪ್ರಜ್ಞೆ ಬೆಳೆಯತೊಡಗಿದಂತೆ, ತಮ್ಮ ಹೆಚ್ಚು-ಕಡಿಮೆಗಳು, ತಮ್ಮಲ್ಲಿನ ಮೇಲು-ಕೀಳುಗಳು ಅವರಿಗವರಿಗೇ ಅರಿವಾಗಿ ಒಂದಿಷ್ಟು ಜನ ತಮ್ಮದರಿಂದ ಮೇಲ್ಮಟ್ಟಕ್ಕೆ ಸರಿದರೆ, ಇನ್ನೊಂದಿಷ್ಟು ಜನ ತಮ್ಮದೇ ಮೇಲು ಎಂದು ಸಾಧಿಸತೊಡಗಿದರು. ತಮ್ಮ ತಮ್ಮ ಇರುವಿಕೆಯನ್ನು ತೂಕ ಮಾಡಿ ನೋಡಿಕೊಳ್ಳುವ ತನಕ, ಮನುಕುಲದಲ್ಲಿ ವ್ಯಾಪಾರಿ ಮನೋಭಾವ ಬೆಳೆದೇ ಇರಲಿಲ್ಲವೇನೋ! ಹಾಗೇ, ಎಲ್ಲಿಯವರೆಗೆ, ತಮ್ಮತನದ ಅರಿವಾಗಿ ಅದೇ ಹೆಚ್ಚು ಎಂದು ಸಾಧಿಸುವ ಮನೋಭಾವನೆ ಹುಟ್ಟಿರಲಿಲ್ಲವೋ, ಅಲ್ಲಿಯವರೆಗೆ ಎಲ್ಲವೂ ಸಾಧುವಾಗಿತ್ತು ಎಂದು ಹೇಳಬಹುದು.
ಈ ಸರಿ-ಸಮಗಳ ಅನುಪಾತ ಬೆಳೆಯುವುದಕ್ಕೆ ಮೊದಲು, ಅಂದರೆ, ಸುಮಾರು ೨ ಸಾವಿರ ವರ್ಷಗಳ ಹಿಂದೆ ಹೋಗಿ ನೋಡಿದರೆ, ಇಂಡಸ್ಟ್ರಿಯಲ್ ರೆವಲ್ಯೂಶನ್ ಆಗುವವರೆಗೆ, ಸುಮಾರು 2 ಬಿಲಿಯನ್ ಅಷ್ಟು ಇದ್ದ ಜನಸಂಖ್ಯೆ, ಅಲ್ಲಿಂದ ಕೆಲವೇ ಕೆಲವು ವರ್ಷಗಳ ತರುವಾಯ (ಅಂದರೆ, 1950ರ ನಂತರ), ಕೇವಲ 75 ವರ್ಷಗಳಲ್ಲಿ, ಐದು ಬಿಲಿಯನ್‌ಗೂ ಹೆಚ್ಚು ಬೆಳೆದುಬಿಟ್ಟಿತು. ಅಂದರೆ, ಎರಡೂವರೆ ಬಿಲಿಯನ್‌ನಿಂದ ಏಳೂವರೆ ಬಿಲಿಯನ್‌ಗೂ ಹೆಚ್ಚು. ಈ ಜನಸಂಖ್ಯಾ ಸ್ಪೋಟ, ಅತ್ಯಂತ ಮಹತ್ವದ ಬೆಳವಣಿಗೆಗಳಲ್ಲೊಂದು. ಇದರ ಹಿನ್ನೆಲೆಯಲ್ಲಿ, ಮನುಕುಲದ ಅನೇಕ ಸಾಧನೆಗಳನ್ನು ನಾವು ಹೆಸರಿಸಬಹುದು. ಒಂದು ಕಡೆ ಕೈಗಾರಿಕಾ ಕ್ರಾಂತಿ, ಮತ್ತೊಂದು ಕಡೆಗೆ ಮನುಷ್ಯನ ರೋಗ ನಿಯಂತ್ರಣ, ಸೋಂಕು, ಮೊದಲಾದ ಪಸರಿಸಬಹುದಾದ ರೋಗಾಣುಗಳ ಮೇಲೆ ಸಾಧಿಸಿದ ಗೆಲುವು ಎದ್ದು ಕಾಣುತ್ತದೆ.
ಇನ್ನು ಕೇವಲ 50 ರಿಂದ 75 ವರ್ಷಗಳಲ್ಲಿ, UNನ ಅಧ್ಯಯನದ ಪ್ರಕಾರ ನಮ್ಮ ಜನಸಂಖ್ಯೆ 10 ಬಿಲಿಯನ್ ದಾಟಿ ಇನ್ನೂ ಮುಂದೆ ಹೋಗುತ್ತದೆ. ನಂತರ, ನಿಧಾನವಾಗುತ್ತದೆ. ಒಂದು ವೇಳೆ, ಮಾನವ ಜನಸಂಖ್ಯೆ ಹೀಗೇ (ಮಿತಿಮೀರಿ) ಬೆಳೆಯುತ್ತಲೇ ಹೋಗಿ, 25 ಬಿಲಿಯನ್ ತಲುಪಿತೆಂದರೆ? ಆಗ ಪ್ರಪಂಚ ಹೇಗಿರಬಹುದು, ಒಮ್ಮೆ ಊಹಿಸಿಕೊಳ್ಳಿ!
ಆದರೆ, ಒಂದು ಕಾಲದಲ್ಲಿ ಪ್ರಪಂಚ ಪರ್ಯಟನೆಗೆ ಹೊರಟು ನಿಂತು ನಿಧಾನವಾಗಿ ಬೆಳೆಯುತ್ತಿದ್ದ ಜನಸಂಖ್ಯೆ, ಕೈಗಾರಿಕಾ ಕ್ರಾಂತಿ ಮತ್ತು ವೈದ್ಯಕೀಯ ಸಂಪನ್ಮೂಲಗಳ ಬೆಳವಣಿಗೆಯ ನಂತರ ಅತಿವೇಗವಾಗಿ ಬೆಳೆದು ಮುಂದೆ, ಕ್ರಮೇಣ ಕಡಿಮೆ ಬೆಳೆಯುವುದು ಎಂದರೆ ನಂಬಲು ಸಾಧ್ಯವೇ? ಕುಂಠಿತಗೊಂಡ ಫ಼ರ್ಟಿಲಿಟಿ, ಆರ್ಥಿಕ ಅಭದ್ರತೆ ಮತ್ತು ಅನಿಶ್ಚಿತತೆ, ಜೊತೆಗೆ ನಮ್ಮ ನಮ್ಮ ಸ್ವಾವಲಂಬನೆಯ ಬೆಳವಣಿಗೆಯೇ ನಮ್ಮ ಸಂತತಿಯ ಬೆಳವಣಿಗೆಯ ವೇಗವನ್ನು ಕಡಿಮೆ ಮಾಡುತ್ತದೆ. ಇವುಗಳಲ್ಲೆದರ ಜೊತೆಗೆ, ಪ್ರತಿ ನೂರು ವರ್ಷಕ್ಕೊಮ್ಮೆ ಅವತರಿಸುವ ಮಹಾಮಾರಿಗಳು, ಸಾಂಕ್ರಾಮಿಕ ರೋಗಗಳೂ ಕೂಡ ನಮ್ಮ ಸಂತತಿಯ ಬೆಳವಣಿಗೆಗೆ ಕಡಿವಾಣ ಹಾಕಬಹುದು. ಎಲ್ಲದಕ್ಕಿಂತ ಮುಖ್ಯ ಮಹಾಯುದ್ಧಗಳು, ಅಣ್ವಸ್ತ್ರಗಳ ಬಳಕೆ ಮೊದಲಾದವುಗಳು ಕೂಡಾ ನಮ್ಮ ನಾಶಕ್ಕೆ ಕಾರಣವಾಗಹುದು.
Population (B)
22 | *
20 | *
18 | *
16 | *
14 | *
12 | *
10 | *
8 |*
2025 2100 2200 2300 2400 2500
***
ಅಕಸ್ಮಾತ್, ಮಾನವ ತನ್ನ ಮೂಲಸ್ಥಾನವನ್ನೇ ಬಿಟ್ಟು ಕದಲದೇ ಇದ್ದಿದ್ದರೆ ಹೇಗಿರುತ್ತಿತ್ತು? ಮನುಕುಲದ ಅಸ್ತಿತ್ವ ಬರೀ ಕಗ್ಗತ್ತಲೆಯ ಖಂಡದಲ್ಲೇ ಹುಟ್ಟಿ, ಅಲ್ಲೇ ಬೆಳೆದು ಅವಸಾನ ಹೊಂದುತ್ತಿತ್ತೇ? ಅಥವಾ ಯಾವುದೋ ರೋಗಾಣುವಿನ ಕಬಂದ ಬಾಹುಗಳಲ್ಲಿ ಸಿಕ್ಕಿ ನಲುಗುತ್ತಿತ್ತೇ? ಅಥವಾ ಇದ್ದಲ್ಲೇ ಬೆಳೆದು, ಕೊಬ್ಬಿ, ನಂತರ ಒಬ್ಬರನ್ನೊಬ್ಬರು ಕಿತ್ತು ತಿನ್ನುವ ಹಂತವನ್ನು ಮುಟ್ಟುತ್ತಿತ್ತೇ? ಈ ಮಾನವನ ಬೆಳವಣಿಗೆಗೆ ಧಾರ್ಮಿಕ ಲೇಪನವಿಲ್ಲದಿದ್ದರೆ ಏನಾಗುತ್ತಿತ್ತು? ವಲಸೆ ಬಂದ ಪ್ರತಿಯೊಂದು ಜೀವಿಯೂ ಅದಕ್ಕೆ ಬೇಕಾದ ಮತವನ್ನು ಸೃಷ್ಟಿಸಿಕೊಳ್ಳಲಿಲ್ಲವಲ್ಲ? ಮತ-ಧಾರ್ಮಿಕ ವಿಧಿವಿಧಾನಗಳ ಸೃಷ್ಟಿ ಮುಂದುವರೆದು, "ತನ್ನದೇ ಹೆಚ್ಚು" ಎನ್ನುವ ಮನೋಸಂಕಲ್ಪದಿಂದ ಅದೆಷ್ಟು ಅನಾಹುತಗಳಾದವು.
ಒಂದಂತೂ ನಿಜ, ಮಾನವ ಮತ್ತು ಆತನ ಸಂಸ್ಕೃತಿಗಳು ನಿಂತ ನೀರಂತೂ ಅಲ್ಲ. ಅದು, ಯಾವಾಗಲೂ ಹರಿಯುವ ಸುಪ್ತವಾದ ನದಿಯಂತೆ. ಈ ಅರಸುವ ಬದುಕು, ನದಿಯ ಒರತೆಯಂತೆ ನಿಲ್ಲದೇ ಸದಾ ಹರಿಯುತ್ತಾ ಒಂದು ಸಾಗರದಿಂದ ಮತ್ತೊಂದು ಮಹಾ ಸಾಗರದೆಡೆಗೆ ಹರಿಯುತ್ತಲೇ ಇರುವುದು. ಅಕಸ್ಮಾತ್, ಭೂಮಿಯಲ್ಲಿ ಸ್ಥಳವಿರದಿದ್ದರೇನಂತೆ, ಅಂತರಿಕ್ಷದಲ್ಲಿ ಜಾಗ ಹುಡುಕುವ ಪ್ರವೃತ್ತಿಯದು.
ಒಂದು ದೃಷ್ಟಿಕೋನದಲ್ಲಿ, ನಾವು ನಾವೇ, ಈ ಅಗಾಧವಾದ ಭೂಮಿಯನ್ನು ಪಸರಿಸಿಕೊಂಡು, ನಮ್ಮ ಸಂಖ್ಯೆಯನ್ನು ಇಮ್ಮಡಿ, ಮುಮ್ಮಡಿ ಮಾಡಿಕೊಂಡು ಉಳಿದದ್ದನ್ನೆಲ್ಲ ನಮ್ಮ ಬಳಕೆಗೆ ಇರುವ ಸಂಪನ್ಮೂಲಗಳೆಂದು ಪರಿಗಣಿಸಿಕೊಂಡು ಬೆಳೆಯುತ್ತಲೇ ಇರುವುದು. ಮತ್ತೊಂದು ದೃಷ್ಟಿಕೋನದಲ್ಲಿ, ಬಿಲಿಯನ್ ಗಟ್ಟಲೆ ವರ್ಷದಿಂದಲೂ ಅಸ್ತಿತ್ವದಲ್ಲಿರುವ ಈ ಆಗಾಧವಾದ ಭೂಮ್ಯಾಕಾಶಗಳಲ್ಲಿ, ನಾವೊಂದು ಧೂಳಿನ ಕಣದ ಸಮಾನ. ನಮ್ಮ ನಿಲುವು-ನೆಲೆಗಳೇನೇ ಇದ್ದರೂ ಅವು, ಈ ಅಗಾಧತೆಯಲ್ಲಿ ಒಂದಾಗಿ, ಎಲ್ಲವೂ ಒಂದು ದಿನ ಸಮತೋಲನಕ್ಕೆ ಬಂದೇ ಬರುತ್ತದೆ ಎನ್ನುವುದು.
ಈ ಎರಡು ದೃಷ್ಟಿಕೋನಗಳ ನಡುವೆ, ನಮ್ಮ ನಮ್ಮ ಅರಸುವ ಬದುಕು ಹಾಗೂ ಅರಸುವ ಮನಸ್ಥಿತಿ ನಿಂತಲ್ಲಿ ನಿಲ್ಲದೆ ಸುತ್ತುತ್ತಲೇ ಇರುತ್ತದೆ ಎನ್ನುವುದು.
