Sunday, October 05, 2025

ಕಾಂತಾರ:ಚಾಪ್ಟರ್1 (ವಿಮರ್ಶೆಯಲ್ಲ, ಅನಿಸಿಕೆ)

ಒಬ್ಬ ಸಿನಿಮಾ ರಚನೆಕಾರ, ತನ್ನ ಕಥೆಯೊಳಗಿನ ತನ್ಮಯತೆ, ತನ್ನಲ್ಲಡಗಿದ ಭಕ್ತಿ-ಭಾವಗಳ ಉತ್ತುಂಗ ನಿಲುವಿನ ಅಭಿವ್ಯಕ್ತಿಯಿಂದ ಸ್ವಲ್ಪ ಸರಿದು, ವೈಭವ, ವ್ಯಾಪಾರಗಳ ವಿಪರೀತಗಳಲ್ಲಿ ಸಿಲುಕಿಕೊಂಡಾಗ ಅದರಿಂದ ಹೊರ ಬರುವ ಉತ್ಪನ್ನವನ್ನ ಇತ್ತೀಚೆಗೆ ಬಿಡುಗಡೆಗೊಂಡ "ಕಾಂತಾರ:ಚಾಪ್ಟರ್1"ಗೆ ಹೋಲಿಸಬಹುದು.

ಮೊದಲಿನ ಕಾಂತಾರದಲ್ಲಿ (2022) ಭಕ್ತಿ, ಭಾವುಕತೆ, ಭಯಗಳೆಲ್ಲ ಮೇಳೈಸಿ ಒಂದು ಸುಂದರವಾದ ಕತೆಯ ಹಂದರದಡಿ ಒಂದು ಚಿತ್ರ ಎಲ್ಲರ ಮನಸ್ಸಿನಲ್ಲಿ ಬೆಳೆದು ಬಳ್ಳಿಯಾಗಿ ನಿಂತಿತ್ತು. ಒಮ್ಮೆ ಕನ್ನಡ ಚಿತ್ರವನ್ನು ನೋಡಿದ ಕನ್ನಡೇತರರು, ತರುವಾಯ ತಮ್ಮ ತಮ್ಮ ಭಾಷೆಯಲ್ಲೂ ಈ ಚಿತ್ರವನ್ನು ಡಬ್ ಮಾಡಿ ಬಿಡುಗಡೆಗೊಳಿಸಿ, ಇಡೀ ಚಿತ್ರ ತಂಡಕ್ಕೆ ಅಭೂತಪೂರ್ವ ಯಶಸ್ಸನ್ನು ತಂದಿದ್ದರು.

ಆದರೆ, ಈ ವರ್ಷ ಬಿಡುಗಡೆಗೊಂಡ, ಈ ಹೊಸ ಚಿತ್ರದಲ್ಲಿ, ದೈವದ ಜೊತೆಗೆ ದೊಡ್ಡದಾಗಿ "ಸುದ್ದಿ" ಮಾಡಬೇಕು ಎನ್ನುವ ದಾವಂತವೂ ಇರುವುದು ಮೊದಲಿನಿಂದಲೂ ಗೊತ್ತಾಗುತ್ತದೆ. ಒಂದು ಕಡೆ, ಅದ್ದೂರಿ ಸೆಟ್‌ಗಳಿಂದ, ನೂರಾರು ತಂತ್ರಜ್ಞರ ನೆರವಿನಿಂದ ಬೃಹತ್ ಮೊತ್ತದ ಸಿನಿಮಾ ತಯಾರಾಗಿ ಹೊರಬರುತ್ತದೆ. ಆದರೆ, ಇದು ಅದ್ದೂರಿಯ ದ್ಯೋತಕವಾಗಿ ನಿಲ್ಲುತ್ತದೆಯೇ ವಿನಾ ದೈವ-ದೈವತ್ವದ ಸಂದೇಶದ ಪೂರಕವಾಗಿ ನೆನಪಿನಲ್ಲುಳಿಯದೇ ಹೋಗಬಹುದು ಎಂದು ಸಂಶಯ ಹುಟ್ಟುತ್ತದೆ.

***

ಕಾಂತಾರ:ಚಾಪ್ಟರ್ 1 ನಮ್ಮನ್ನು 4ನೇ ಶತಮಾನದ ಕದಂಬರ ಆಳ್ವಿಕೆಯ ಸಮಯಕ್ಕೆ ಕರೆದೊಯ್ಯುತ್ತದೆ. ಇಲ್ಲೆಲ್ಲಾ ಸಂಪೂರ್ಣ ಮಾಯಾಲೋಕ. ಹಳೆಯ ಕಾಂತಾರದ ಅಂತ್ಯದಿಂದ ಮುಂದುವರೆಸಿ, ದೈವ ಬಂದವರು, ವೇಷ ತೊಟ್ಟವರು, ಏಕೆ ಕಾಡಿನಲ್ಲಿ ಮಾಯವಾಗುತ್ತಿದ್ದರು, ಇದೇ ಜಾಗದಲ್ಲಿ ಏಕೆ, ಎನ್ನುವ ಪ್ರಶ್ನೆಗಳಿಂದ ಜನರನ್ನು ಚಿತ್ರದ ಹಿನ್ನೆಲೆಗೆ ಕರೆದುಕೊಂಡು ಹೋಗುತ್ತದೆ.

ಅಲ್ಲಿಂದ, ಈಶ್ವರನ ಹೂದೋಟದ ಅಮಾಯಕ ಜನರಿಗೂ, ಬಾಂಗ್ರಾ ರಾಜ್ಯದ ಜನ-ಅಧಿಕಾರಿಗಳಿಗೂ ಸಂಘರ್ಷ ಆರಂಭವಾಗಿ, ನಂತರ ದೈವದ ಅಪರಾವತಾರ "ಬೆರ್ಮೆ" (ನಾಯಕ), ಮತ್ತು ಅವನ ಸಂಗಡಿಗರು ಕಾಡಿನಿಂದ ನಾಡಿಗೆ, ನಾಡಿನಿಂದ ಕಾಡಿಗೆ ಬಂದು ಹೋಗುವ ದೃಶ್ಯಗಳ ಹಾಸುಹೊಕ್ಕಾಗಿಸಿಕೊಂಡು, ಚಿತ್ರ ಮುಂದುವರೆಯುತ್ತದೆ.

ಈ ಮುನ್ನೆಲೆಯ ಜೊತೆ ಜೊತೆಗೆ ಒಂದು ಹಳೆಯ ಪ್ರಪಂಚವೂ ಇದರ ಜೊತೆಗೆ ತಳುಕು ಹಾಕಿಕೊಂಡಿರುತ್ತದೆ. ಅದೇ, ಮುಖಕ್ಕೆ, ಮೈಗೆ ಕಪ್ಪು ಬಳಿದುಕೊಂಡು, ಕಾಡುಪಾಪಗಳನ್ನು ಪೋಷಿಸಿ, ಅವುಗಳ ಸಹಾಯದಿಂದ ಆಗಾಗ್ಗೆ ಆಕ್ರಮಣ ಮಾಡಿಕೊಂಡು ಮತ್ತೆ, ಕಾಡು-ನಾಡುಗಳ ನಡುವೆ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳುವ ಮತ್ತೊಂದು ತಂಡ, ಅವರಿಗೊಂದು ಹೆಸರಿರಬಹುದು, ಅದೇನು ಎಂಬುದನ್ನು ಓದುಗರು ಗೊತ್ತಿದ್ದರೆ ಸೂಚಿಸಿ.

***

ನಮ್ಮ ಕನ್ನಡ ಸಿನಿಮಾಗಳನ್ನು ರೂಪಿಸಲು, ಬಾಹುಬಲಿ ಸಿನಿಮಾ, ಪದ್ಮಾವತಿ ಸಿನಿಮಾಗಳಿಂದ ಪ್ರೇರಣೆಯನ್ನು ಪಡೆಯಬೇಕು ಎಂದೇನೂ ಇಲ್ಲ. ಮೊದಲಿನ ಕಾಂತಾರದಲ್ಲಿ ಯಾವ ಅಬ್ಬರವೂ, ಆಡಂಬರವೂ ಇಲ್ಲದೇ, ಎಂತಹ ರೋಚಕವಾದ ಯಶಸ್ಸು ಸಿಕ್ಕಿತ್ತು? ಕನ್ನಡದ ಕೆಜಿಎಫ಼್, ಅದರದ್ದೇ ಆದ ಅಬ್ಬರದಲ್ಲಿ ಜನರನ್ನು ಮುಟ್ಟಿರಲಿಲ್ಲವೇ? ಈ ಚಿತ್ರಗಳ ಹಾಡುಗಳು, ಹಲವು ವರ್ಷವಾದರೂ ನಮ್ಮ ಮನಸ್ಸಿನಲ್ಲಿ ಗುನುಗುನಿಸುತ್ತಿಲ್ಲವೇ? ಆದರೆ, ಕಾಂತಾರ:ಚಾಪ್ಟರ್ 1 ನ ಹಾಡುಗಳನ್ನೇನಾದರೂ ಮನಸ್ಸಿನಲ್ಲಿಟ್ಟುಕೊಳ್ಳುತ್ತೇವೆ ಎಂದುಕೊಂಡರೆ, ಅದು ದುಸ್ಸಾಧ್ಯ ಎಂದು ಮೊದಲೇ ಹೇಳಿಬಿಡುತ್ತೇನೆ.

ವಿಪರೀಟ ಹೊಡೆದಾಟ, ಮಾಸ್ ಬಿಲ್ಡ್ ಅಪ್, ದೊಡ್ಡ ದೊಡ್ಡ ಸೆಟ್‌ಗಳು ನಮ್ಮ ಮಣ್ಣಿನ ಸೊಗಡನ್ನು ಪ್ರತಿನಿಧಿಸಲಾರವು. ಆದರೆ, ಕೆಜಿಎಫ಼್‌ನಲ್ಲಿ ಅದು ಬಂದಾಗ, ಅದಕ್ಕೊಂದು ನೇಟಿವಿಟಿ ಸಹಜವಾಗಿ ಹುಟ್ಟಿತ್ತು. ಆದರೆ, ಇಲ್ಲಿ ಭಕ್ತಿ, ಭಾವನೆಗಳ ಸಮಾಗಮದಲ್ಲಿ ಮಿಂದು ಪುಳಕಗೊಳ್ಳುವ ನಿರೀಕ್ಷೆಯ ಪ್ರೇಕ್ಷಕನಿಗೆ, ಕಾಂತಾರ:ಚಾಪ್ಟರ್ 1 ನಲ್ಲಿ, ಅತಿಯಾದ ತೆಲುಗು, ಹಿಂದಿ ಸಿನಿಮಾಗಳ ಮಸಾಲೆಯನ್ನು ಹಾಕಿ, ಕನ್ನಡತನವನ್ನು ಪೋಷಿಸಿದಂತಿದೆ, ಅಷ್ಟೆ.

***

ನಿರ್ದೇಶನ-ನಟನೆ: ಈ ಎರಡು ವಿಭಾಗಗಳಲ್ಲಿ ರಿಷಬ್ ಶೆಟ್ಟಿಯವರಿಗೆ ಪೂರ್ಣ ಅಂಕಗಳನ್ನು ಕೊಡಬಹುದು. ತಮ್ಮ ಸಂಪೂರ್ಣ ಸಾಮರ್ಥ್ಯವನ್ನು, ನಿರೀಕ್ಷೆಗೂ ಮೀರಿ ಸುಮಾರು ಮೂರು ವರ್ಷಗಳ ಪಟ್ಟ ಕಷ್ಟಕ್ಕೆ ತಕ್ಕಂತೆ ಇಡೀ ಸಿನಿಮಾದುದ್ದಕ್ಕೂ ಅವರ ಛಾಪು ಮೂಡಿದೆ. ಭಾವನಾತ್ಮಕ ಅಭಿನಯವಿರಲಿ, ಹೊಡೆದಾಟವಿರಲಿ, ಕ್ರೌರ್ಯ, ವೀರ, ಕರುಣಾ ರಸಗಳನ್ನು ಪೋಷಿಸುವ ಎಲ್ಲ ಸಂದರ್ಭಗಳಲ್ಲೂ ಅವರು ತಮ್ಮನ್ನು ತಾವು ಪ್ರಶ್ನಿಸಿಕೊಂಡಿದ್ದಾರೆ.

ಒಂದು ಮಹಾನ್ ಸೆಟ್, ನೂರಾರು ತಂತ್ರಜ್ಞರು, ಸಾವಿರಾರು ಕಲಾವಿದರು ಇವರೆಲ್ಲರ ಪೋಷಣೆ, ಬೆಳವಣಿಗೆ ಮತ್ತು ಸಹಕಾರಗಳ ನಡುವೆ ಕಾಂತಾರ:ಚಾಪ್ಟರ್ 1 ಅನ್ನೋ ಸಿನಿಮಾವನ್ನು ತರುವುದು ನಿಜಕ್ಕೂ ಕಷ್ಟಕರವಾದುದು. ಅವರೇ ನಂಬಿಕೊಂಡ ದೈವ ಅವರನ್ನು ಈ ನಿಟ್ಟಿನಲ್ಲಿ ಕೈ ಬಿಟ್ಟಿಲ್ಲ. ಈ ಚಿತ್ರದ ಮೂಲಕ ಕರಾವಳಿ ಪ್ರಾಂತ್ಯಕ್ಕೆ ಒಂದು ಸಿನಿಮಾ "ಸ್ಟುಡಿಯೋ" ಹಾಗೆಯೇ ಅದನ್ನು ನಂಬಿಕೊಂಡ ಒಂದು ಸಂಪೂರ್ಣ ಇಂಡಸ್ಟ್ರಿಯನ್ನು ಬಳುವಳಿಯಾಗಿ ನೀಡಿದ ಶ್ರೇಯ ಅವರಿಗೆ ಸೇರಬೇಕು. ಚಿತ್ರದ ಪ್ರತಿಯೊಂದು ಫ಼್ರೇಮ್ ಅನ್ನು ಹಾಸುಹೊಕ್ಕಾಗಿ ಬೆಸೆದು, ತಂತ್ರಜ್ಞರ ಜೊತೆಗೆ ಕೈ ಜೋಡಿಸಿ ಅತಿಸಹಜ ಎನ್ನುವ ವಿಎಫ಼್‌ಎಕ್ಸ್ ಗ್ರಾಫ಼ಿಕ್ಸ್‌ಗಳನ್ನು ನೋಡುಗರಿಗೆ ಕೊಟ್ಟಿರುವುದು ಬಹಳ ದೊಡ್ಡ ವಿಷಯ.

ಅಂತೆಯೇ, ಸ್ವಯಂ ತಲ್ಲೀನನಾಗುವ ಹಲವಾರು ಸಂದರ್ಭಗಳನ್ನು ಚಿತ್ರದುದ್ದಕ್ಕೂ ಹೊಸೆದು ತನ್ನದೊಂದು ಅಚ್ಚನ್ನು ಜನಮಾನಸದಲ್ಲಿ ನಿಲ್ಲಿಸುವ ಪ್ರಯತ್ನಗಳನ್ನು ನೋಡಬಹುದು. ಉದಾಹರಣೆಗೆ, ಚಿತ್ರದ ಅಂತ್ಯಕ್ಕೂ ಮೊದಲು, ನಾಯಕ ದೈವಾಂಶ ಸಂಭೂತನಾಗಿ ವರಾಹರೂಪಿ (ಬ್ರಹ್ಮರಾಕ್ಷಸ) ಬೃಹತ್ ಮಾನವನ ಜೊತೆಗೆ ಹೋರಾಡುವಾಗ, ಅದರ ಅಂತ್ಯದಲ್ಲಿ ತ್ರಿಶೂಲಧಾರಿಯಾದ ಶಿವನಿಗೆ, ತನ್ನ ಸುತ್ತಲೂ ಕಾಳಿಂಗ ಸುತ್ತಿಕೊಂಡು ಒಂದು ಅನುರೂಪವಾದ ವಿಶುವಲ್ ಅನ್ನು ತೋರಿಸುವ ಅಗತ್ಯವಿತ್ತೇ ಎಂದೂ ಪ್ರಶ್ನಿಸಿಕೊಳ್ಳಬೇಕಾಗುತ್ತದೆ.

ಸುಮಾರು ಎರಡು ಗಂಟೆ, ನಲವತ್ತೈತು ನಿಮಿಷದ ಸಿನಿಮಾವನ್ನು ಕತ್ತರಿಸಿ, ಇನ್ನಷ್ಟು ಮೊನಚುಗೊಳಿಸಬಹುದಿತ್ತು. ಅನಗತ್ಯವಾದ ದೃಶ್ಯ ಮತ್ತು ಹೋರಾಟಗಳನ್ನು ಕಡಿಮೆ ಮಾಡಬಹುದಿತ್ತು.

ಭಾಷೆ: ಚಿತ್ರದ ಕತೆ ಮತ್ತು ಚಿತ್ರಕತೆ ಚೆನ್ನಾಗಿ ಮೂಡಿಬಂದಿದೆ. ಹಾಸ್ಯವನ್ನು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ತುರುಕಿ ಬಿಡುತ್ತೇವೆ ಎಂದು ಸಂಕಲ್ಪಗೊಂಡ ಬರಹಗಾರರ ಸಾಹಸ ಚಿತ್ರದುದ್ದಕ್ಕೂ ಎದ್ದು ಕಾಣುತ್ತದೆ. ನಿಮಗೆ ಎಂತಹ ಸೀರಿಯಸ್ ಸನ್ನಿವೇಶಗಳೇ ಇರಲಿ, ಅವುಗಳಲ್ಲಿ ಒಂದಿಷ್ಟು ಹಾಸ್ಯದ ಎಳೆಗಳು ಗೋಜಲು ಗೋಜಲಾಗಿ ಕಾಣುತ್ತವೆ.

ಚಿತ್ರದ ಪರಿಪೂರ್ಣತೆ ದಕ್ಷಿಣ ಕನ್ನಡ ಸಾಂಸ್ಕೃತಿಕ ವೈಭವವನ್ನು ಅಲ್ಲಿನ ನಡೆನುಡಿಗಳಲ್ಲಿ ಹೇಳುವುದೇ ಮುಖ್ಯವಾದುದರಿಂದ, ಚಿತ್ರದ ಸಂಭಾಷಣೆ ಸ್ಥಳೀಯ ಕನ್ನಡವನ್ನು ಧಾರಾಳವಾಗಿ ಒಳಗೊಂಡಿದೆ. ಆದರೆ, ಪಾತ್ರಗಳ ಮಾತುಕತೆಗಳಲ್ಲಿ ಒಂದು ಸಾಮಂಜಸ್ಯ (consistency), ಸಾಮರಸ್ಯ ತೋರುವುದಿಲ್ಲ. ಉದಾಹರಣೆಗೆ, ಕನಕವತಿಯಾಗಿ ನಟಿಸಿದ ರುಕ್ಮಿಣಿ ವಸಂತ್ ಅವರ ಮಾತಿನ ಶೈಲಿ, ಸಂದರ್ಭಕ್ಕೆ ಅನುಸಾರವಾಗಿ ಬದಲಾಗುವುದನ್ನು ನೀವು ನೋಡಬಹುದು.

ಇನ್ನು ಹಾಸ್ಯವನ್ನು ಎಷ್ಟು ಹೆಣೆಯಬೇಕು, ಎಷ್ಟು ಎಳೆಯಬೇಕು ಎಂಬುದನ್ನು ಚಿತ್ರಕಥೆಯಲ್ಲಿ ಮರೆತಂತಿರುವುದರಿಂದ ಅಲ್ಲಲ್ಲಿ ಅಸ್ಖಲಿತವಾಗಿ ಹಾಸ್ಯವಾಗಿ ಮೂಡಿ ಮರೆಯಾಗಿ, ಇಡೀ ಥಿಯೇಟರಿನಲ್ಲಿ ಎಲ್ಲೋ ಒಂದೆರೆಡು ಕಡೆಗಳಿಂದ ಅದಕ್ಕೆ ಪ್ರತಿಕ್ರಿಯೆ ಸಿಗುವುದನ್ನು ನೀವು ಗಮನಿಸಬಹುದು.

ಸಂಗೀತ, ಹಾಡುಗಳು: ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ, ಅವರ ಅನನುಭವವನ್ನು ಎದ್ದು ತೋರಿಸುತ್ತದೆ. ಹಿನ್ನೆಲೆ  ಸಂಗೀತಕ್ಕೆ ದೃಶ್ಯಗಳ ವೈಭವ ಮತ್ತು ಸಂದರ್ಭದ ಘನತೆಯನ್ನು ಎತ್ತಿಹಿಡಿಯುವ ಶಕ್ತಿ ಇದೆ, ಅದನ್ನು ಇಲ್ಲಿ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗಿದೆ. ಆದರೆ, ಚಿತ್ರದ ಸಂಗೀತದ ಅಬ್ಬರದಲ್ಲಿ ಹಾಡುಗಳು ಕಳೆದುಹೋಗಿವೆ. ಒಂದು ಸಾಲು ಕೂಡ ನೆನಪಿನಲ್ಲಿ ಉಳಿಯದಂತೆ ಆಗಿ ಹೋಗುತ್ತದೆ. ನನ್ನಂಥ ನೇಟಿವ್ ಕನ್ನಡಿಗರೂ ಕೂಡ, ಇಂಗ್ಲೀಷ್ ಸಬ್‌ಟೈಟಲ್ ಅನ್ನು ಬಳಸಿ ಯಾವ ಹಾಡಿನಲ್ಲಿ ಏನು ಸಂದೇಶವನ್ನು ತಲುಪಿಸುತ್ತಿದ್ದಾರೆ ಎಂದು ಯೋಚಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ನಿರಂತರ ಮೊರೆಯುವ ಸಂಗೀತೋಪಕರಣಗಳ ನಾದದ ನಡು ನಡುವೆ ಮಿಂಚಿ ಮರೆಯಾಗುವ ನಿಶ್ಶಬ್ಧವೂ ಕೂಡ ಸಂಗೀತದ ಒಂದು ಭಾಗ ಎಂದು ಅಜನೀಶ್ ಯೋಚಿಸಿಕೊಂಡರೆ, ಅವರ ಮುಂದಿನ ಸಿನಿಮಾಗಳಲ್ಲಿ ಬಹಳಷ್ಟನ್ನು ನಿರೀಕ್ಷಿಸಬಹುದು. ಪ್ರತಿಭಾನ್ವಿತ ಅಜನೀಶ್ ಅವರು, ದೃಶ್ಯಕಾವ್ಯದ ಅಂತರ್ಯಗಳಲ್ಲಿ ಒಳಹೊಕ್ಕು, ಪ್ರೇಕ್ಷಕರ ಅಂತಃಕರಣವನ್ನು ಅಲುಗಾಡಿಸುವ ಪೂರಕ ಮತ್ತು ಪೋಷಕ ಹಿನ್ನೆಲೆ ಸಂಗೀತವನ್ನು ಖಂಡಿತವಾಗಿ ಕೊಡಬಲ್ಲರು.

ಕನ್ನಡದಲ್ಲೆ ಬೇಕಾದಷ್ಟು ಜನಪದ, ವಚನ, ಭಾವಗೀತೆಗಳಿವೆ, ಅವುಗಳನ್ನು ಬಳಸಿಕೊಳ್ಳಿ. ಇಲ್ಲವಾದರೆ ವೈಭವದ ದೃಶ್ಯಗಳಿಗೆ ಅದೆಷ್ಟು ಆದ್ಯತೆಯನ್ನು ಕೊಡುತ್ತೀರೋ ಅಷ್ಟೇ ಆದ್ಯತೆಯನ್ನು ಯೋಗ್ಯ ಸಂಭಾಷಣೆ ಮತ್ತು ಹಾಡುಗಳನ್ನು ಬರೆದು ಅದನ್ನು ಸುಂದರವಾಗಿ ಮತ್ತು ಮನೋಜ್ಞವಾಗಿ ಹಾಡುವವರಿಂದ ಹಾಡಿಸಿ. ಕನ್ನಡನಾಡಿನಲ್ಲಿ ಬೇಕಾದಷ್ಟು ಒಳ್ಳೆಯ ಗಾಯಕ-ಗಾಯಕಿಯರು ಸಿಗುತ್ತಾರೆ, ಹುಡುಕಿನೋಡಿ.

ಛಾಯಚಿತ್ರಗ್ರಹಣ: ವೈಭವದ ಚಿತ್ರಗಳಲ್ಲಿ, ಆ ಚಿತ್ರಗಳ ಜೀವಾಳವೇ ಅದರ ಚಿತ್ರಗ್ರಹಣ. ಈ ನಿಟ್ಟಿನಲ್ಲಿ ಅರವಿಂದ್ ಕಶ್ಯಪ್ ಅವರ ಪರಿಶ್ರಮ ಎದ್ದು ಕಾಣುತ್ತದೆ. ಡ್ರೋನ್ ಬಳಸಿ, ನಾನಾ ಕೋನಗಳಿಂದ, ಎತ್ತರ-ಇಳಿಜಾರು, ನೆಳಲು-ಬೆಳಕಿನ ಈ ಒಂದು ಸಂಕೀರ್ಣ ಸಿನಿಮಾವನ್ನು, ಕಾಡಿನ ಮಡಿಲಲ್ಲಿ ವ್ಯವಸ್ಥಿತವಾಗಿ ಶೂಟ್ ಮಾಡಲಾಗಿದೆ. ಚಿತ್ರದ ಎಡಿಟರ್ ಯಾರು ಎಂದು ಗೊತ್ತಿಲ್ಲ, ಆದರೆ, ಇಡೀ ಚಿತ್ರತಂಡದ ಪರಿಶ್ರಮ ಸುಂದರವಾದ ಎಡಿಟಿಂಗ್‌ನಿಂದ ಅದ್ದೂರಿಯಾಗಿ ಮೂಡಿಬಂದಿದೆ. ಹಲವಾರು ಹೋರಾಟ, ಹೊಡೆದಾಟಗಳ ಆಕ್ಷನ್ ಸೀಕ್ವೆನ್ಸ್‌ಗಳನ್ನು ಚೆನ್ನಾಗಿ ಶೂಟ್ ಮಾಡಿ, ಸುಂದರವಾಗಿ ಪೋಣಿಸಲಾಗಿದೆ. ಈ  ಎರಡು ವಿಭಾಗಗಳಲ್ಲಿ ಈ ಚಿತ್ರ ಪೂರ್ಣ ಅಂಕಗಳನ್ನು ಪಡೆದುಕೊಳ್ಳುತ್ತದೆ.

ಇನ್ನೂ ಉತ್ತರಿಸದೇ ಉಳಿದ ಪ್ರಶ್ನೆಗಳು: ಗುರುವ ಬಂದ ಗುರುವ ಹೋದ ಅಂತ ಅನ್ನಿಸಿದ್ದು, ಈ ಚಿತ್ರದ ಅಂತ್ಯದಲ್ಲಿ. ಅದಕ್ಕಿಂತ ಮೊದಲು ಗುರುವ ಕಂಡನೇ? ಈಗಾಗಲೇ ಹತರಾಗಿ ಹೋದ ಮಕ್ಕಳು, ಮತ್ತೆ ಕೊನೆಯಲ್ಲಿ ಪುನಃ ಬಂದು ಬಿಡುತ್ತಾರೆ ಏಕೆ ಹೀಗೆ? "ಬೆರ್ಮ" ಮತ್ತು ಅವನ ಸಂಗಡಿಗರು ಒಟ್ಟು ಎಷ್ಟು ಜನ? ಅವರು ಒಂದು ಸಂಪೂರ್ಣ ಸೈನ್ಯದ ವಿರುದ್ಧ ಹೋರಾಡುವುದು ನಿಜವೇ? ಕಾಡು ಜನ, ನಾಡಿನ ಜನರ ವಿರುದ್ಧದ ಸಂಘರ್ಷಗಳಲ್ಲಿ ನೀವು ಭಾಹುಬಲಿ ಸಿನಿಮಾದ ತಂತ್ರಗಳನ್ನು ಎರವಲು ಪಡೆದವರ ಹಾಗೆ ಕಾಣುತ್ತೀರಿ. ರಾತ್ರೋ ರಾತ್ರಿ, ಅದೆಲ್ಲವನ್ನು ನಿರ್ಮಿಸಲು, ಕಾಡಿನ ಜನರಿಗೆ ಸಾಧ್ಯವಾದದ್ದಾರೂ ಹೇಗೆ? ಬಾಂಗ್ರಾ ರಾಜರಿಗೂ ಕದಂಬರ ಸಾಮ್ರಾಜ್ಯಕ್ಕೂ ಕೇವಲ ಒಬ್ಬ ರಾಜತಾಂತ್ರಿಕನ ಸಂಬಂಧ ಮಾತ್ರವೇ?

ಹೊಬಾಳೆ ಫ಼ಿಲ್ಮ್ಸ್‌ನವರು ಒಂದು ರೋಚಕ ಕಥೆಯನ್ನು ನಿರ್ಮಿಸಿ, ಗಟ್ಟಿಗೊಳಿಸಿ, ಇಡೀ ಭಾರತದ ಉದ್ದಕ್ಕಷ್ಟೇ ಅಲ್ಲದೇ, ಹೊರದೇಶಗಳಲ್ಲೂ ಬೆಳೆಸುವ ನಿಟ್ಟಿನಲ್ಲಿ ತಮ್ಮ ಸಾಮರ್ಥ್ಯವನ್ನು ಮತ್ತೆ ಪ್ರದರ್ಶಿಸಿದ್ದಾರೆ. ನೀವು ಚಿತ್ರವನ್ನು ನೋಡುತ್ತೀರೋ ಬಿಡುತ್ತೀರೋ, ಈ ಚಿತ್ರ ಈಗಾಗಲೇ ತನ್ನ ಬಂಡವಾಳದ ಹತ್ತರಷ್ಟನ್ನು ದುಡಿದಾಗಿದೆ. ಮೊದಲ ಕಾಂತಾರದ ದೈವ ನಿಮ್ಮನ್ನು ಸದಾ ಹೇಗೆ ಕಾಡುತ್ತದೆಯೋ ಹಾಗೆಯೇ ಎರಡನೆಯ ಕಾಂತಾರ (ಈ ಚಿತ್ರ) ತನ್ನ ವೈಭವಗಳ ಸಹಾಯದಿಂದ ಬೆಳೆದು ನಿಂತಿದೆ. ಮತ್ತೊಂದು ಚಾಪ್ಟರ್ ಮುಂದೆ ಇದೆ, ಎಂದು ತೋರಿಸಿಕೊಳ್ಳುತ್ತ.

***

ರಿಷಬ್ ಶೆಟ್ಟಿಯವರಿಗೆ ಒಂದು ಮಾತು: ನೀವು ನಮ್ಮ ಕರ್ನಾಟಕ ಅಪ್ರತಿಮ ಕಲಾವಿದರು ಮತ್ತು ಆಯೋಜಕ ನಿರ್ದೇಶಕರ ನಿಟ್ಟಿನಲ್ಲಿ ಒಬ್ಬರು. ಈ ಮಾತನ್ನು ನಿಮ್ಮ ಸುಂದರವಾದ ಚಿತ್ರಗಳ ಮೂಲಕ ನೀವು ಈಗಾಗಲೇ ಸರ್ಮರ್ಥಿಸಿಕೊಂಡಿದ್ದೀರಿ. ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಯಂತಹ ಸಿನಿಮಾ ಒಂದೇ ಸಾಕು - ನಿಮ್ಮ ಕನ್ನಡ ಪರ ನಿಲುವು, ನಿಮ್ಮ ಕಳಕಳಿ, ನಿಮ್ಮ ಕರಾವಳಿಯ ಸಾಂಸ್ಕೃತಿಕ ಅವಲೋಕನ ಹಾಗೂ ನಾಡಿನ ಬಗ್ಗೆ ನಿಮ್ಮ ಕಳಕಳಿಯನ್ನು ಸಾರಲು. ವೈಭವೋಪೇತ ಸನ್ನಿವೇಶ, ದೃಶ್ಯಗಳಿಗೆ ಕಟ್ಟು ಬೀಳದೆ, ನಿಮ್ಮ ಆಂತರ್ಯದಲ್ಲಿರುವ ಕತೆಗೆ ಒಂದು ಸಮರ್ಥನೆ ಮತ್ತು ಸಾರ್ಥಕತೆಯನ್ನು ಹುಟ್ಟುಹಾಕಿ. ಮೊದಲ ಸಲ ಕಾಂತರದಲ್ಲಿ ಬಂತಲ್ಲ, ಹಾಗೆ. ನಿಮ್ಮ ಸಿನಿಮಾ, ಕತೆ ಮತ್ತು ನಟನೆ-ನಿರ್ದೇಶನಗಳ ಪೋಷಣೆಗೆ ತಂತ್ರಜ್ಞಾನ, ವ್ಯವಸ್ಥಿತಿತವಾದ ಸೆಟ್‌ಗಳು ಮತ್ತು ದುಡ್ಡು ಹಾಕಿ ತಾವು ಬೆಳೆಯುವ ನಿರ್ಮಾಪಕರು ಇರುವುದು. (Not the other way around.) ಅದು ಹಾಗೆಯೇ ಇರಲಿ. ನಿಮ್ಮ ಹಳೆಯ ಚಿತ್ರಗಳು, ಮತ್ತೆ ಮತ್ತೆ ನೋಡುವಂತೆ ಮಾಡುತ್ತವೆ. ಹಾಗೂ ನಮ್ಮ ಜನಮಾನಸದಲ್ಲಿ ತಮ್ಮ ಆಂತರ್ಯದ ಕಾಳಜಿಗಳಿಂದ ಕಾಡುತ್ತವೆ. ಹೀಗೆ, ನಿಮ್ಮಿಂದ ಇನ್ನೂ ಅನೇಕಾನೇಕ ಸುಂದರವಾದ ಚಿತ್ರಗಳನ್ನ ನಿರ್ಮಿಸುವ ಭರವಸೆಯನ್ನು ಇಟ್ಟುಕೊಂಡಿದ್ದೇವೆ. ದಯವಿಟ್ಟು ನಮ್ಮಿಂದ ಅದನ್ನು ಕಸಿಕೊಳ್ಳಬೇಡಿ.

Saturday, October 04, 2025

ಭೈರಪ್ಪನವರ ಸ್ಮರಣೆ

ಇತ್ತೀಚೆಗೆ ನಮ್ಮನ್ನಗಲಿದ ಎಸ್.ಎಲ್. ಭೈರಪ್ಪ ಅವರು ಕನ್ನಡ ಸಾಹಿತ್ಯದ ಲೋಕಕ್ಕೆ ನೀಡಿದ ಕೊಡುಗೆ ಆರು ದಶಕಗಳಿಗೂ ಮೀರಿದ್ದು. ಆದ್ದರಿಂದ ಅವರನ್ನು ಅನೇಕ ತಲೆಮಾರುಗಳ ಲೇಖಕ ಎನ್ನಬಹುದು. ತಮ್ಮ 90 ರ ಇಳಿ ವಯಸ್ಸಿನಲ್ಲಿಯೂ ಕೂಡ ಅವರು ಸಕ್ರಿಯವಾಗಿ ತೊಡಗಿಕೊಂಡಿದ್ದರು. ನಮ್ಮ ಅಮೇರಿಕದಲ್ಲಿ ನಡೆದ ಅನೇಕ ಸಾಹಿತ್ಯಕ ಚಟುವಟಿಕೆಗಳಲ್ಲಿ ಆಗಿಂದಾಗ್ಗೆ ಭಾಗವಹಿಸಿ, ದೇಶ-ಭಾಷೆ ತೊರೆದು ಬಂದ ಅನಿವಾಸಿಗಳಿಗೂ ಭೈರಪ್ಪನವರಿಗೂ ಒಂದು ರೀತಿಯಲ್ಲಿ ಅವಿನಾಭಾವ ಸಂಬಂಧ ಎನ್ನಬಹುದು. ಅನಿವಾಸಿಗಳ ಬಗೆಗಿನ ರೆಫ಼ೆರೆನ್ಸ್‌ಗಳು ಅವರ ಕಾದಂಬರಿಗಳ ಉದ್ದಕ್ಕೂ ಸಿಗುವುದನ್ನು ನೀವು ನೋಡಬಹುದು.


ಜೀವನದಲ್ಲಿ ಅನೇಕ ಕಷ್ಟ-ಕಾರ್ಪಣ್ಯಗಳನ್ನೆದುರಿಸಿ, ಅವುಗಳ ಕುಲುಮೆಯಲ್ಲಿ ನೊಂದು, ಬೆಂದು, ಎಲ್ಲ ಆಗುಹೋಗುಗಳ ನಡುವೆಯೇ ಪುಟವಿಕ್ಕಿದ ಚಿನ್ನವಾಗಿ ಹೊರಹೊಮ್ಮಿದವರು. 

ಭೈರಪ್ಪನವರ ಕೃತಿಗಳನ್ನು ಓದಿ, ಅವುಗಳ ಅಂತರಾಳವನ್ನು ಕುರಿತು ಯೋಚಿಸುವ ಅಸಂಖ್ಯಾತ ಓದುಗರಲ್ಲಿ ನಾನೂ ಒಬ್ಬ. ಈ ಲೇಖನದ ಮೂಲಕ ಭೈರಪ್ಪ ಎನ್ನುವ ಮಹಾನ್ ಚೇತನದ ಸ್ಮರಣೆಯನ್ನು ಮಾಡುವ ಪ್ರಯತ್ನ ಈ ಲೇಖನದ ಆಶಯ.

***

ನಾನು ಮೊಟ್ಟ ಮೊದಲು ಭೈರಪ್ಪನವರ ಕಾದಂಬರಿಗಳನ್ನು ಓದಲು ಶುರುಮಾಡಿದ್ದು, ನನ್ನ ಶಾಲಾ ದಿನಗಳಲ್ಲಿ. ಆಗೆಲ್ಲಾ ನಮ್ಮ ಮನೆ-ಮನಸ್ಸಿಗೆ ಇನ್ನೂ ಟಿವಿ ನೋಡುವ ಖಾಯಿಲೆ ಅಷ್ಟೊಂದು ಹಿಡಿದಿರಲಿಲ್ಲವಾದ್ದರಿಂದ, ಹೆಚ್ಚಿನ ಮಟ್ಟಿಗೆ ನಮ್ಮ ಮನರಂಜನೆ ಓದುವುದರಿಂದ ಬರುತ್ತಿತ್ತು.

"ದೂರ ಸರಿದರು" ಎನ್ನುವ ಕಾದಂಬರಿಯಲ್ಲೇನಿದೆ ವಿಶೇಷ ಎಂದುಕೊಂಡೇ ಶುರು ಮಾಡಿದ್ದ ನನಗೆ, ಆ ಕಾದಂಬರಿ ಕೊನೆಯವರೆಗೂ ರೋಚಕತೆಯಿಂದ ಓದಿಸಿಕೊಂಡು ಹೋಗಿದ್ದು ವಿಶೇಷ. ಸಚ್ಚಿದಾನಂದ, ವಿನೀತ, ಕುಮಾರ್ ಮತ್ತು ವಸಂತ ಎನ್ನುವ ಮುಖ್ಯ ಪಾತ್ರಗಳ ನಡುವಿನ ಸಂಬಂಧವನ್ನು ತತ್ವಶಾಸ್ತ್ರದ ತಳುಕಿನೊಂದಿಗೆ ಆಪ್ತ ಮತ್ತು ಆಳವಾಗಿ ಬೆಳೆಸುವ ಕತೆ! ಕತೆಯ ಅಂತ್ಯವನ್ನು ತನ್ನ ಟೈಟಲ್‌ನಲ್ಲೇ ಪ್ರಚುರಗೊಳಿಸಿ, ಕತೆಯ ಉದ್ದಕ್ಕೂ ಏಕೆ ಹೀಗೆ? ಮುಂದೇನು? ಎನ್ನುವ ಪ್ರಶ್ನೆಗಳ ಸಹಾಯದಿಂದ ತನ್ನ ಸ್ವಾರಸ್ಯವನ್ನು ಉಳಿಸಿಕೊಳ್ಳುವ ಈ ಕೃತಿ ಎಂಥವರೂ ಓದಲೇ ಬೇಕಾದದ್ದು. ಪ್ರೇಮಕತೆಗಳಿಗೂ ಒಂದು ಪ್ರಬುದ್ಧತೆಯ ಆವರಣದಲ್ಲಿ, ಜಾತಿ-ಧರ್ಮ-ಮನಸ್ಸಿನ ತುಮುಲಗಳ ಸಂಕೀರ್ಣತೆಯಲ್ಲಿ, ಒಂದು ಸುಂದರವಾದ ಚೌಕಟ್ಟನ್ನು ರೂಪಿಸಿದ ಯಶಸ್ವಿ ಪ್ರಯತ್ನ ಈ ಕತೆ.

ಈ ಕಾದಂಬರಿಯ ಕೆಲವು ಸಾಲುಗಳು ಹೀಗಿವೆ:

"ಯಾವುದನ್ನು ನಮ್ಮ ಒಳಿತಿಗೆಂದು ಹುಟ್ಟುಹಾಕಿ ಪೋಷಿಸ್ತೀವೋ ಅದೇ ನಮಗೆ ಮುಳ್ಳಾಗುತ್ತೆ. ವಿಚಿತ್ರವೆಂದರೆ, ಅದು ಮುಳ್ಳು ಅಂತ ತಿಳಿದಮೇಲೂ ಅದನ್ನು ಬಿಡಲಾಗದಂತೆ ಮೋಹದ ಸಂಸ್ಕಾರ ಬಲವಾಗುತ್ತೆ"

"ಯಾವ ತತ್ತ್ವವೂ ಇಲ್ಲದೆ ಇರುವ ಸಾಹಿತ್ಯವಾದರೂ ಯಾವುದು? ತತ್ತ್ವಶಾಸ್ತ್ರದ ಆಳವಾದ ಪರಿಚಯ, ದೃಷ್ಟಿಕೋನ ಇಲ್ಲದ ಯಾವ ಬರಹವೂ ನಿಜವಾದ ಸಾಹಿತ್ಯವಾಗಲಾರದು. ಪ್ರಪಂಚದ ದೊಡ್ಡ ದೊಡ್ಡ ಬರಹಗಾರರೆಲ್ಲರೂ ದೊಡ್ಡವರೆನಿಸಿಕೊಂಡಿರುವುದು ಅವರ ಲೇಖನದಲ್ಲಿ - ಕತೆ, ಕವನ, ನಾಟಕ ಯಾವುದೇ ಇರಲಿ, ಕಾಣುವ ಜೀವನದರ್ಶನದಿಂದ. ಜೀವನದರ್ಶನದಿಂದ ಕನ್ನಡಿಯಷ್ಟು ತಿಳಿಯಾಗಿ, ತರ್ಕಬದ್ಧವಾಗಿ ಹೇಳುವುದು ತಾನೇ ತತ್ತ್ವಶಾಸ್ತ್ರವೆಂದರೆ?"

ಹೀಗೆ, ಮನಸ್ಸಿಗೆ ನೇರವಾಗಿ ತಾಕುವ ಇಂತಹ ನುಡಿಗಳಿಂದ ಭೈರಪ್ಪನವರು ಆಪ್ತರಾಗುತ್ತಾರೆ ಮಾತ್ರವಲ್ಲ. ತಮ್ಮ ಜೀವನದರ್ಶನವನ್ನು ತರ್ಕಬದ್ಧವಾಗಿ ಮತ್ತು ಪಾತ್ರಗಳಲ್ಲಿ ಉನ್ಮತ್ತರಾಗಿ ತೊಡಗಿಸಿಕೊಳ್ಳುವ ಬರಹಗಾರನಂತೆ, ಆಯಾ ಪಾತ್ರಗಳನ್ನು ನಮ್ಮಲ್ಲಿ ನಿರಂತರವಾಗಿ ನಿಲ್ಲಿಸಿಬಿಡಬಲ್ಲ ನೈಪುಣ್ಯತೆ ಅವರಲ್ಲಿ ಸಿದ್ಧಿಸಿತ್ತು.

ಈ ಕೃತಿಯನ್ನು ನೀವು ಈಗಾಗಲೇ ಓದಿರದಿದ್ದರೆ, ಅದನ್ನು ಓದಿ ಮುಗಿಸುವಷ್ಟರಲ್ಲಿ, ನೀವು ಭೈರಪ್ಪನವರ ಭಕ್ತರಾಗಿ ಬಿಡುತ್ತೀರಿ.

ಭೈರಪ್ಪನವರ ಎಲ್ಲ ಕಾದಂಬರಿಗಳೂ ಬ್ಲಾಕ್‌ಬಸ್ಟರ್ ಕೃತಿಗಳೇ. ಅವುಗಳಲ್ಲಿ ಈ ಲೇಖನದ ಚೌಕಟ್ಟಿಗೆ ಒಂದಿಷ್ಟು ಆಯ್ಕೆ ಮಾಡಿಕೊಳ್ಳುವುದಾದರೆ, ನನ್ನನ್ನು ಅತಿಯಾಗಿ ಕಾಡಿ, ಹಲವು ಬಾರಿ ಓದುವಂತೆ ಮಾಡಿದ ಈ ಕೃತಿಗಳ ಬಗ್ಗೆ ಹೇಳಲೇಬೇಕು: ದಾಟು, ತಂತು, ಮತ್ತು ಸಾರ್ಥ.

***

ದಾಟು

"ದಾಟು"ವಿನಲ್ಲಿ ಜಾತಿ-ಜಾತಿಗಳ ನಡುವಿನ ಸಂಘರ್ಷಗಳನ್ನು ಸೂಕ್ಷ್ಮವಾಗಿ ಹೊರ ಹಾಕುತ್ತಲೇ ಬದುಕಿನ ಸಂಕೀರ್ಣತೆಯನ್ನ ಕಟ್ಟಿಕೊಡುವ ಹಾಗೂ ಕಾದಂಬರಿಯ ಎಲ್ಲ  ಪಾತ್ರಗಳ ನಿಲುವುಗಳಲ್ಲಿ ಓದುಗರನ್ನು ತೊಡಗಿಸಿಕೊಂಡು ಅಷ್ಟೇ ಸಮರ್ಪಕವಾಗಿ ಓದಿಸಿಕೊಂಡು ಹೋಗುವ ಒಂದು ಮಹಾನ್ ಬರಹಗಾರರನನ್ನು ನಾವು ಕಾಣಬಹುದು.

ಕಥಾನಾಯಕಿ ಸತ್ಯಾಳ ಪಾತ್ರ, ಆಕೆಯ ವೈಚಾರಿಕತೆ, ಅವಳ ಪ್ರಬುದ್ಧತೆ ನಿಮ್ಮನ್ನು ಸಾಕಷ್ಟು ಯೋಚಿಸುವಂತೆ ಮಾಡುತ್ತದೆ. ಹಾಗೂ ನಿಮಗೆ ಹಲವು ವರ್ಷಗಳ ಕಾಲ ಆ ಪಾತ್ರ ಮನಸ್ಸಿನಲ್ಲಿ ಉಳಿಯುತ್ತದೆ. ಸತ್ಯಾಳ ಪಾತ್ರವನ್ನು ಕೇಂದ್ರದಲ್ಲಿಟ್ಟುಕೊಂಡು ಶ್ರೀನಿವಾಸ, ವೆಂಕಟರಮಣಯ್ಯ, ವೆಂಕಟೇಶ, ಮೀರಾ, ಬೆಟ್ಟಯ್ಯ ಮೊದಲಾದ ಪಾತ್ರಗಳ ಮೂಲಕ ಜಾತಿ, ರಾಜಕೀಯ, ಅಧಿಕಾರ ಪ್ರವೃತ್ತಿ, ಕ್ರಾಂತಿ, ಕಾಮ ಹೀಗೆ ಮೊದಲಾದ ಮೂಲ ಅಂಶಗಳ ಮುಖೇನ ಓದುಗರ ಮನಸ್ಸಿನ ತಳಪಾಯವನ್ನು ಅಲ್ಲಾಡಿಸಿ ಬಿಡುತ್ತಾರೆ. ಜಾತಿಗಳ ಸಂಕೋಲೆಗಳಲ್ಲಿ ಜನಜೀವನ, ಮಾನವೀಯತೆ, ಅಂತಃಕರಣ, ಸಾಮಾಜಿಕ ಕಳಕಳಿ ಜೊತೆಗೆ ವೆಂಕಟರಮಣಯ್ಯ ಹೇಳುವ "ಪ್ರಳಯ"ದ ಹೆದರಿಕೆಯಿಂದ ನಿಮ್ಮನ್ನು ನಿಮ್ಮ ಮೂಲಕ್ಕೆ ಕರೆದೊಯ್ಯುತ್ತಾರೆ.

ನನ್ನನ್ನು ಅತಿಯಾಗಿ ಕಾಡಿದ ವೆಂಕಟರಮಣಯ್ಯನವರ ಒಂದು ಮಾತು ಹೀಗಿದೆ: "ಪ್ರವಾಹದ ನೀರಿನಲ್ಲಿ ಬಿಂಬವೂ ಇಲ್ಲ, ಬಿಂಬಿಯೂ ಇಲ್ಲ!"

ಈ ಮಾತನ್ನು ಕುರಿತು ಒಂದು ನಿಮಿಷ ಯೋಚಿಸಿ, ಅದೆಷ್ಟು ಆಲೋಚನಾ ಲಹರಿಗಳು ನಿಮ್ಮ ಮನಸ್ಸನ್ನು ತುಂಬಿಕೊಳ್ಳುತ್ತವೆ ಎಂದು ನೀವೇ ಊಹಿಸಿ.

***

ತಂತು

ಕಾದಂಬರಿಯಲ್ಲಿ ವ್ಯವಸ್ಥಿತವಾಗಿ ಪೋಷಿಸಿಕೊಂಡ ಪಾತ್ರಗಳ ಕಾರಣದಿಂದ, ನನ್ನನ್ನು ಬಹುವಾಗಿ ಕಾಡಿದ ಮತ್ತೊಂದು ಕೃತಿ: "ತಂತು". ಇಷ್ಟು ದೊಡ್ಡ ಕಾದಂಬರಿಯೇ ಎಂದು ಸುಮಾರು ೯೦೦ ಪುಟಗಳಿರುವ ಕಾದಂಬರಿಯನ್ನು ಕೈಗೆತ್ತಿಕೊಂಡರೆ, ಕೆಳಗಿಡಲು ಮನಸ್ಸೇ ಬಾರದು. ಅಷ್ಟೇ ಅಲ್ಲ, ಈ ಕಾದಂಬರಿಯ ಕಥಾನಾಯಕ ಹೇಮಂತ್, ನಿಮ್ಮ ಜೀವನದುದ್ದಕ್ಕೂ ಒಬ್ಬ ಸ್ನೇಹಿತನಾಗುತ್ತಾನೆ, ಜೊತೆಗೆ ನಿಮ್ಮ ಸೂಕ್ಷ್ಮ  ಮನಸ್ಸಿನ ತಳಮಳಗಳಿಗೆ ಸಾತ್ ಕೊಡುತ್ತಾನೆ, ಖಂಡಿತ. ರವೀಂದ್ರ, ಕಾಂತಿ, ಹೇಮಂತ್, ಅನೂಪ್, ಶೀತಲ್, ರಾಮಭಟ್ಟರು ನಿಮ್ಮನ್ನು ಖಂಡಿತವಾಗಿ ಯೋಚಿಸುವಂತೆ ಮಾಡುತ್ತಾರೆ.

ಇದರಲ್ಲೂ ಸಹ ರಾಜಕೀಯವಿದೆ, ಆದರೆ ಇಲ್ಲಿ ಮುಖ್ಯವಾಗಿ ಹೇಳಲು ಹೊರಟಿರುವುದು ವೈಚಾರಿಕ ಸಂಕೋಲೆಯ ಬಗ್ಗೆ, ಯಾವುದು ಸರಿ, ಯಾವುದು ತಪ್ಪು ಎನ್ನುವುದರ ಬಗ್ಗೆ. ಈ ಪುಸ್ತಕವನ್ನು ಅನಿವಾಸಿ ಭಾರತೀಯರು ಓದಿದರೆ ಹೊಸದೊಂದು ಅರ್ಥವೇ ಬಂದೀತು. ಆಗಿನ ಭಾರತದ ರಾಜಕೀಯ,ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಸಮಗ್ರ ಚಿತ್ರಣವಷ್ಟೇ ಅಲ್ಲ, ಡಾಲರು-ರೂಪಾಯಿಯ ಪರಸ್ಪರ ಸಂಬಂಧಗಳು ಬಗ್ಗೆ ಕೂಡ ಗೊತ್ತಾಗುತ್ತದೆ. 

ಪುಸ್ತಕದ ಹೆಸರೇ ಹೇಳುವಂತೆ, ಜೀವನವೊಂದು ತಂತು’, ಅದರಲ್ಲಿನ ಗೊಂದಲ, ಗೋಜಲುಗಳನ್ನು ಮತ್ತು ಸವಾಲುಗಳನ್ನು ನಾವು ನಾವೇ ಸ್ವೀಕರಿಸಬೇಕು, ನಿರ್ವಹಿಸಬೇಕು ಕೂಡ. ಯಶಸ್ಸಿನ ಹಿಂದೆ ಓಡುವ ನಮ್ಮ ಮನಸ್ಸು ಸದಾ ಸರಿ-ತಪ್ಪುಗಳ ಗೊಂದಲದಲ್ಲಿ ಸಿಲುಕುವುದು ಸಹಜ. ಪ್ರತಿಯೊಂದು ಪಾತ್ರದ ನಿರ್ಣಯದ ಹಿಂದೆಯೂ ಅದರದ್ದೇ ಆದ ಒಂದು ಚಿಂತನೆ, ತಪ್ಪು-ಸರಿಗಳ ವಿಚಾರವಿರುತ್ತದೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಒಂದು ಸಮಜಾಯಿಷಿ ಇರೋದು ಸಹಜ. ನಮ್ಮ ಚಿಂತನೆಗಳು, ವಿಚಾರಗಳು, ಹಾಗೂ ನಿರ್ಣಯಗಳಿಗೆ ನಾವು ಬಾಧ್ಯರು. ಈ ಎಲ್ಲದರ ಸಾರ ಮತ್ತು ಅವುಗಳು ನಮ್ಮ ಮನಸ್ಸಿನಲ್ಲಿ ತಂದೊಡ್ಡುವ ಸಂಘರ್ಷಣೆಗಳ ಒಟ್ಟು ಮೊತ್ತವೇ ತಂತು.

ಸಂಬಂಧಗಳನ್ನು ಕುರಿತು ಹೀಗೊಂದು ಮಾತು ಬರುತ್ತದೆ: "...ಹಾಗೇ ನೇರವಾದ ಕಾಲುವೆಯ ಮಾರ್ಗವಿಡಿದು ಸಂಯಮದಿಂದ ನೀರಿಗೆ ಆಸೆಯಿದ್ದರೂ, ಮಹಾನದಿಯಲ್ಲಿ ಬೆರೆತು ಯಾವುದೋ ಹುಚ್ಚು ಸೆಳೆತಕ್ಕೊಳಗಾಗಿ ಬೇರೆಯದೇ ಆದ ನಿಯಂತ್ರಣಾತೀತವಾದ ದಾರಿಯಲ್ಲಿ ಹೊತ್ತೊಯ್ಯಲ್ಪಟ್ಟು ಎಲ್ಲಿಯೋ ನಿರ್ದಯವಾಗಿ ಹರಿದು ಎಲ್ಲಿಯೂ ನಿಲ್ಲಲಾಗದೇ ಸಮುದ್ರದ ತೆಕ್ಕೆಗೂ ಸಿಗುವ ಮೊದಲೇ ಇಲ್ಲವಾಗುತ್ತದೆ"

ನಮ್ಮ ಖಾಸಗೀ ವ್ಯಸ್ತ ಜೀವನದ ಬಗ್ಗೆ: "ಖಾಸಗಿ ಉದ್ಯಮಗಳಲ್ಲಿ ಜವಾಬ್ದಾರಿಯ ಕೆಲಸಗಳಿರುತ್ತವಲ್ಲ, ದೊಡ್ಡ ಸಂಬಳ, ಕಾರು, ಬಂಗಲೆ, ಆಳುಗಳನ್ನು ಕೊಡೊ ನೌಕರಿ, ನಮ್ಮ ಆಯುಷ್ಯದ ಸಮಸ್ತವನ್ನೂ, ದೇವರ ಪೂಜೆಯ ಸಮಯವನ್ನು, ರಾತ್ರಿ ಕನಸು ಕಾಣುವ ಚಿತ್ತಶಕ್ತಿಯನ್ನು ಖರೀದಿಸಿ ಬಿಟ್ಟಿರ್ತವೆ."

ಜನಮಾನಸ, ಜನಜಾಗೃತಿಯ ಬಗ್ಗೆ ಪ್ರತಿಯೊಬ್ಬ ಮುಖಂಡನೂ ಚಿಂತಿಸಬೇಕಾದ ಮಾತು: "ಜನಗಳಲ್ಲಿ ದೊಡ್ಡಭಾವನೆ ಬಿತ್ತಿ ಬೆಳೆಸೋದು ಕಷ್ಟ. ಹೀನಭಾವನೆ ಪ್ರಚೋದಿಸೋದು ಸುಲಭ."

ನಮ್ಮ ವೃತ್ತಿಪರ ಬದುಕಿನ ಬಗ್ಗೆ: "ಹೆಚ್ಚು ಲಂಚ ಸಿಕ್ಕುವ, ಹೆಚ್ಚು ಕೊಕ್ಕೆ ಹಾಕುವ ಅವಕಾಶವಿರುವ ಇಲಾಖೆಯಲ್ಲಿದ್ದವನಿಗೆ ಹೆಚ್ಚು ಘನತೆ ಗೌರವ ಅಂತ ಅಧಿಕಾರ ವರ್ಗದಲ್ಲಿ ಮಾತ್ರವಲ್ಲ, ಜನಸಾಮಾನ್ಯರಲ್ಲೂ ಭಾವನೆಯಿದೆ. ಕೊಕ್ಕೆ ಹಾಕಿದಷ್ಟು ಜನ ಬಂದು ಕೈಮುಗಿಯುತ್ತಾರೆ. ಈ ಕೈ ಮುಗಿಸಿಕೊಳ್ಳುವ ಬಯಕೆ, ಲಂಚದ ಆಶೆ ಇವೆರಡೂ ಇಲ್ಲದಿದ್ದರೆ ಕಾರ್ಯದರ್ಶಿ, ಜಾಡಮಾಲಿ ಎರಡೂ ಒಂದೇ ಕೆಲಸ. ಸಂಬಳದ ವ್ಯತ್ಯಾಸ, ಬುದ್ಧಿಶಕ್ತಿಯ ಅನ್ವಯಗಳನ್ನು ಬಿಟ್ಟರೆ."

ಜೀವನವನ್ನ ಒಂದೇ ಒಂದು ಸಾಲಿನಲ್ಲಿ ಸರಳವಾಗಿ ವಿವರಿಸುವ ಮಾರ್ಮಿಕವಾದ ಸಾಲು:

"ಎಷ್ಟೇ ಸಂಪಾದನೆ ಮಾಡಿರಲಿ, ಎರಡು ಚಪಾತಿ, ಎರಡು ಹಿಡಿ ಅನ್ನಕ್ಕಿಂತ ಒಂದು ಸಲಕ್ಕೆ ಹೆಚ್ಚು ತಿನ್ನಕ್ಕೆ ಆಗಲ್ಲ, ಒಟ್ಟಿಗೆ ಎರಡು ಶರಟು ಹಾಕುಕ್ಕೆ ಆಗಲ್ಲ, ಒಂದೇ ಸಲ ಎರಡು ಕಾರಿನಲ್ಲಿ ಕೂಡಕ್ಕೆ ಆಗಲ್ಲ, ಅಂತ ಅರ್ಥಮಾಡಿಕೊಂಡರೆ ದುರಾಸೆ ತನಗೆ ತಾನೇ ಇಳಿದು ಹೋಗುತ್ತೆ"

"ಆದರ್ಶವಿಲ್ಲದ ಬದುಕು, ದಿಕ್ಕಿಲ್ಲದ ಸಾಗಣೆ."

"ಸಂಸ್ಕೃತಿಯ ನಾಶವು ಶತ್ರುಗಳಿಂದ ಆಗುವುದಿಲ್ಲ; ಅದು ಒಳಗಿನ ನಿರ್ಲಕ್ಷ್ಯದಿಂದ ಆಗುತ್ತದೆ." 

"ಬಾಹ್ಯ ಶಿಷ್ಟಾಚಾರವಿದೆ, ಆದರೆ ಒಳಗಿನ ನೈತಿಕತೆ ಇಲ್ಲ."

"ಅರ್ಧ ಸತ್ಯವೂ ಪೂರ್ತಿ ಸುಳ್ಳಿಗಿಂತ ಹೀನವಾದದ್ದು"

"ಮೌಲ್ಯಗಳು ಕುಸಿದಾಗ, ಶಿಕ್ಷಣವೂ ರಾಜಕೀಯವೂ ಕೇವಲ ವಾಣಿಜ್ಯವಾಗುತ್ತವೆ."

***

ಸಾರ್ಥ

ಇನ್ನು ಸಾರ್ಥ"ದ ವಿಚಾರಕ್ಕೆ ಬಂದರೆ, ತಂತುವಿನಂತಹ ದಪ್ಪ ಪುಸ್ತಕವನ್ನು ಓದಿ, ಅಯ್ಯೋ ಸಾರ್ಥವೇನು ಚಿಕ್ಕ ಪುಸ್ತಕ ಬೇಗ ಓದಿ ಮುಗಿಸಿಬಿಡಬಹುದು ಎಂದು ಯೋಚಿಸಿ ಬಿಟ್ಟೀರ, ಹಾಗೆ ಖಂಡಿತ ಆಗದು.

ಈ ಕೃತಿಯ ಮೂಲಕ ಭೈರಪ್ಪನವರು ನಮ್ಮನ್ನು ೮ನೇ ಶತಮಾನಕ್ಕೆ ಕರೆದೊಯ್ಯುತ್ತಾರೆ. ಆಗ ಜನರು ಹೇಗಿದ್ದರು, ಹೇಗೆ ವ್ಯವಹರಿಸುತ್ತಿದ್ದರು. ಮೇನೆ, ಸಾರ್ಥಗಳ ಮೂಲಕ ಹೇಗೆ ಪ್ರಯಾಣಿಸುತ್ತಿದ್ದರು ಎನ್ನುವುದನ್ನು ಒಂದು ಐತಿಹಾಸಿಕ ಕಥನವಾಗಿ ಓದುಗರಿಗೆ ಮನಮುಟ್ಟುವಂತೆ ಕಟ್ಟಿಕೊಟ್ಟಿರುವುದು ಒಂದು ಕಡೆ. ಮತ್ತೊಂದು ಕಡೆ ನಾಗಭಟ್ಟ, ಮಂಡನ ಮಿಶ್ರರು, ಕುಮಾರಿಲ ಭಟ್ಟರು, ಭಾರತೀ ದೇವಿ, ಶಿಲ್ಪಿ (ಹೆಸರು) ಇವರೆಲ್ಲರ ಮೂಲಕ ಬದುಕಿನ ಮತ್ತೊಂದು ಮುಖವನ್ನು ಹೊರಹಾಕುತ್ತಾರೆ. ನಾಗಭಟ್ಟನ ಮನಸ್ಸಿನಲ್ಲಿ ಸಮಯದಿಂದ ಸಮಯಕ್ಕೆ ಏಳಬಹುದಾದ ಪ್ರಶ್ನೆಗಳಿಗೆಲ್ಲವೂ ಇಲ್ಲಿ ಉತ್ತರವಿದೆ. ಒಂದು ಚಟ, ಹವ್ಯಾಸ, ಮನದಾಸೆಯನ್ನು ಪೋಷಿಸಿಕೊಂಡು ಹೋಗುವ ಕ್ಲುಪ್ತ ಮನಸ್ಸಿಗೂ ಇಲ್ಲಿ ಒಂದು ಆಸರೆ ಇದೆ. ಧ್ಯಾನದ ಬಗ್ಗೆ, ಬೌದ್ಧ ಧರ್ಮದ ಬಗ್ಗೆ, ನಮ್ಮ ಪುರಾತನ ವಿಶ್ವವಿದ್ಯಾನಿಲಯಗಳ ಬಗ್ಗೆ, ಆಗಿನ ಭರತ ಖಂಡದಲ್ಲಿ ನಡೆಯುತ್ತಿದ್ದ ಧರ್ಮ-ಕಾಮದ ಚರ್ಚೆಗೆಳ ಬಗ್ಗೆ ಸಾಕಷ್ಟು ವಿಷಯಗಳನ್ನು ಸಾರ್ಥ ಒಂದರಲ್ಲಿ ಕಲೆಹಾಕಬಹುದು.

ನಾವು ಸಾರ್ಥದ ಮೂಲಕ ನಮ್ಮ ಹಿಂದಿನ ತಲೆಮಾರಿನ ಜೀವನಶೈಲಿಯ ಬಗ್ಗೆ ತಿಳಿದುಕೊಳ್ಳುವುದಷ್ಟೇ ಅಲ್ಲ, ಅದರ ಜೊತೆಗೆ ನಮ್ಮ ಇಂದಿನ ತಳಮಳ-ತುಮುಲಗಳನ್ನು ಅಂದಿನ ವ್ಯವಸ್ಥೆಯ ಜೊತೆಗೆ ಹೋಲಿಸಿಕೊಳ್ಳಲೂ ಬಹುದು.

ಭೈರಪ್ಪನವರು ಈ ಕೃತಿಯಲ್ಲಿ ಮನಸ್ಸಿನ ಹಿಂದೆ ನಡೆಯುವ ಗೊಂದಲಗಳನ್ನು ವಿಶೇಷವಾಗಿ ಚಿತ್ರಿಸಿದ್ದಾರೆ. ನಾಗಭಟ್ಟನ ಮನದಲ್ಲಿ ನಡೆಯುವ ಆಲೋಚನಾ ವ್ಯಾಪಾರಗಳು ಅನೇಕರನ್ನು ತಮ್ಮ ವಿಚಾರ-ವಿಮರ್ಶೆಯ ಜೊತೆಗೆ ತಳುಕು ಹಾಕಿಕೊಳ್ಳುವಂತೆ ಮಾಡುವುದು ಈ ಕೃತಿಯ ವಿಶೇಷ ಎನ್ನಬಹುದು.

"ಧರ್ಮದ ತಾತ್ವಿಕತೆಯು ತರ್ಕದಿಂದ ಬೆಳೆಯುತ್ತದೆ; ಭಕ್ತಿಯಿಂದ ಮಾತ್ರವಲ್ಲ."

"ಸಾರ್ಥವೆಂದರೆ ಹೊರಗಿನ ಪ್ರಯಾಣವಷ್ಟೆ ಅಲ್ಲ; ಅದು ಆತ್ಮದೊಳಗಿನ ಯಾತ್ರೆಯೂ ಹೌದು."

"ಜ್ಞಾನವು ಬೆಳೆಯಬೇಕಾದರೆ ಅಹಂಕಾರ ಕುಗ್ಗಬೇಕು."

"ಶಿಲ್ಪಿಯ ಕೈಯಲ್ಲಿ ಕಲ್ಲು ಜೀವ ಪಡೆಯುತ್ತದೆ. ಪ್ರತಿ ಹೊಡೆತವು ಕೇವಲ ತಾಂತ್ರಿಕವಲ್ಲ; ಅದು ಶಿಲ್ಪಿಯ ಆತ್ಮದ ಸ್ಪಂದನೆ.         ಕಲ್ಲಿನೊಳಗಿನ ರೂಪವನ್ನು ಹೊರತೆಗೆಯುವುದು ಕಲೆಯಲ್ಲ, ತಪಸ್ಸು."

***

ಭೈರಪ್ಪನವರ ಕೃತಿಗಳೇ ಹಾಗೆ; ಭಿತ್ತಿಯನ್ನೂ ಸೇರಿ ಅವರು ಬರೆದಿರುವ ಕಾದಂಬರಿಗಳು 24, ಅವುಗಳಲ್ಲಿ ಹತ್ತು ಕೃತಿಗಳ ಟೈಟಲ್ ಕೇವಲ ಎರಡೇ ಅಕ್ಷರಗಳು. ಕೃತಿಗಳ ಕಾನ್ಸೆಪ್ಟ್ ಸರಳ, ಆದರೆ ಅವುಗಳನ್ನು ಸಂಶೋಧಿಸಿ, ಆಯಾ ಕಥನಗಳ ಬಗ್ಗೆ ಯಾವೊಂದು ಯೂನಿವರ್ಸಿಟಿಯಲ್ಲೂ ಸಿಗದಷ್ಟು ವಿಷಯ-ವಸ್ತುಗಳನ್ನು ಸಂಗ್ರಹಿಸಿ, ಅವುಗಳ ಸಹಾಯದಿಂದ ಇತಿಹಾಸ-ಕತೆ-ಚಿಂತನೆಗಳ ಪೋಷಣೆಯನ್ನು ಒದಗಿಸಿಕೊಡಬಲ್ಲವರು ಭೈರಪ್ಪನವರು ಮಾತ್ರ.

ಭೈರಪ್ಪನವರು ಕನ್ನಡದ ಕಾದಂಬರಿಕಾರರು ಮಾತ್ರವಲ್ಲ. ಅವರ ಕೃತಿಗಳು ಭಾರತೀಯ ಭಾಷೆಗಳಲ್ಲಿ ತರ್ಜುಮೆಗೊಂಡಿವೆ (ಎಷ್ಟು ಕೃತಿಗಳು ಇಂಗ್ಲೀಷನ್ನೂ ಸೇರಿ, ಎಲ್ಲಾ ಭಾರತೀಯ ಭಾಷೆಗೆ ಅನುವಾದಗೊಂಡಿವೆ?)  ಓದುಗರು ತಮ್ಮ ಮನ-ಮನೆಗಳಲ್ಲಿ, ಭೈರಪ್ಪನವರಿಗೆ ಕೊಟ್ಟಿರುವ ಸ್ಥಾನ-ಮಾನವನ್ನು ಊಹಿಸಿಕೊಂಡರೆ, ಈ ರೀತಿಯ "ಯಶಸ್ಸು" ಕನ್ನಡದ ಮತ್ಯಾವುದೇ ಕಾದಂಬರಿಕಾರರಿಗೆ ದೊರೆತಂತಿಲ್ಲ.

ಭೈರಪ್ಪನವರು ಭೌತಿಕವಾಗಿ ಇಲ್ಲವಾಗಿರಬಹುದು. ಆದರೆ, ತಮ್ಮ ಕೃತಿಗಳಿಂದ ಅವರು ಜನಮಾನಸದಲ್ಲಿ ಇನ್ನೂ ಹತ್ತು-ಹಲವು ತಲೆಮಾರುಗಳ ಮಟ್ಟಿಗೆ ಖಂಡಿತವಾಗಿ ಜೀವಿತರಾಗಿರುತ್ತಾರೆ.

ಈ ಮಹಾನ್ ಲೇಖಕನ ಬಗ್ಗೆ ಯೋಚಿಸಿಕೊಂಡರೇ ಅವರ ಕೃತಿಗಳು, ಪಾತ್ರಗಳು, ವ್ಯವಸ್ಥೆಯ ವಸ್ತು ಚಿತ್ರ ಮತ್ತು ಪ್ರತಿಯೊಂದು ಹಂತದ ವಿವರಗಳೂ ಕಣ್ಣ ಮುಂದೆ ಬರುತ್ತವೆ. ಇದಕ್ಕಾಗಿ ಒಂದು ಚಿಕ್ಕ ಉದಾಹರಣೆಯನ್ನು ಕೊಡುವುದಾದರೆ, "ಅನ್ವೇಷಣ" ಕಾದಂಬರಿಯಲ್ಲಿ ದರ್ಜಿ, ತನ್ನ ಬಟ್ಟೆ ಹೊಲೆಯುವ ಮಿಷನ್ ನಿಂದ ಹೊರಡುವ ಸೌಂಡ್ ಅನ್ನು "ಕ್ಳಕ್ ಕ್ಳಕ್" ಎಂದು ಭೈರಪ್ಪನವರು ವಿವರಿಸುವ ಬಗೆ.  ಹೀಗೆ ಅವರ ಪುಸ್ತಕಗಳ ಉದ್ದಕ್ಕೂ ಅನೇಕ ಪ್ರತಿಮೆಗಳು ನಮಗೆ ದೊರೆಯುತ್ತವೆ. ಸಾರ್ಥದ ಸ್ಥಪತಿಯಾಗಿ, ಪರ್ವದ ಭಾಗಗಳಾಗಿ, ಉತ್ತರಖಾಂಡದ ಸೀತೆಯಾಗಿ ನಮ್ಮನ್ನು ಅನೇಕಾನೇಕ ವಿಚಾರಗಳಿಂದ ಕಾಡುತ್ತಲೇ ಇರುತ್ತಾರೆ. ಹಾಗಾಗಿ, ಭೈರಪ್ಪನವರ ಸ್ಮರಣೆ ಎಂದಿಗೂ ನಮ್ಮ ಮನಸ್ಸಿನಲ್ಲಿ, ನಮ್ಮ ಗುಂಪು ಚರ್ಚೆಗಳಲ್ಲಿ ವಿಶೇಷವಾಗಿರುತ್ತದೆ. ಅದು ಚಿರಂತನವಾಗಿರುತ್ತದೆ, ಕೂಡ.