Thursday, February 13, 2025

ಈ ವರ್ಲ್ಡ್ ಲೀಡರುಗಳ ಎನರ್ಜಿ ಹಿಂದಿನ ರಹಸ್ಯ ಏನು?

ಇತ್ತೀಚೆಗೆ ನಮ್ಮ ರಾಜಕೀಯ ಮುಖಂಡರನ್ನೆಲ್ಲ ನೋಡಿದ್ರೆ, ಇವ್ರಿಗೆಲ್ಲ ವಯಸ್ಸಾಗ್ತಾ ಇದ್ದಂಗೆ ಒಂದು ರೀತಿಯ ಹರೆಯ-ಹುಮ್ಮಸ್ಸು ಎದ್ದು ಕಾಣಿಸುತ್ತಲ್ಲಾ?

ಕಳೆದ ತಿಂಗಳು ಆಕ್ಟಾಜೆನೇರಿಯನ್ ಅಂದ್ರೆ, ಎಂಭತ್ತರ ಹರೆಯದ ನವಯುವಕ ಬೈಡೆನ್ ಅಧಿಕಾರದಿಂದ ಕೆಳಗಿಳಿದ ಮೇಲೆ, ಅವರಿಗಿಂತ ಸ್ವಲ್ಪವೇ ವಯಸ್ಸಿನಲ್ಲಿ ಕಡಿಮೆ ಇದ್ದು, ಇನ್ನೆರಡು ವರ್ಷಗಳಲ್ಲಿ ಎಂಬತ್ತು ಮುಟ್ಟುವ ನವ ತರುಣ.

ಇವರನ್ನೆಲ್ಲ ನೋಡಿದ್ರೆ ಅನ್ಸುತ್ತೆ, Eighty is new fifty ಅಂತ. ನಮಗೆಲ್ಲ ಒಂದು ದಿನ ಆಫ಼ೀಸಿಗೆ ಹೋಗಿ ಬಂದ್ರೆ ಉಸ್ಸಪ್ಪ ದಸ್ಸಪ್ಪಾ ಅನ್ಸೋವಾಗ, ಇವರಿಗೆಲ್ಲ ಅದು ಎಲ್ಲಿಂದ ಎನರ್ಜಿ ಬರುತ್ತೆ?

ಈ ನಿಟ್ಟಿನಲ್ಲಿ 74 ವರ್ಷದ ಮೋದಿಯವರನ್ನೂ ಸೇರಿಸಿ ಹೇಳ್ಬೇಕು, ಅವರಂತೂ ದಿನದ 24 ಗಂಟೆಯೂ ಕೆಲ್ಸ ಮಾಡೋರ ಹಾಗೆ ಕಾಣಿಸ್ತಾರೆ.

ಯಾವ ಪಕ್ಷದ ಲೀಡರುಗಳೇ ಇರಲಿ, ಈ ರಾಜಕೀಯ ‍ರ್ಯಾಲಿಗಳಲ್ಲಿ ಭಾಗವಹಿಸಿ, ದೊಡ್ಡ ದೊಡ್ಡ ಭಾಷಣಗಳನ್ನು ಬಿಗಿಯೋದಿದೆ ನೋಡಿ, ಅದರಷ್ಟು ಕಷ್ಟದ ಕೆಲಸ ಇನ್ನೊಂದಿಲ್ಲ. ಎಲೆಕ್ಷನ್ ಸಮಯದಲ್ಲಿ ಎಲ್ಲಾ ನಾಯಕರುಗಳು ಪಡೋ ಕಷ್ಟಾ ನೋಡಿ, ನಮಗೇ ಸಾಕಪ್ಪಾ ಅನ್ನಿಸುತ್ತೆ, ಅಂಥಾದ್ದರಲ್ಲಿ, ಅವರು ತಮ್ಮ ಸ್ಕೆಡ್ಯೂಲ್ಡ್ ಪ್ರೋಗ್ರಾಮ್‌ಗಳನ್ನ ಅದು ಹೇಗೆ ನಿಭಾಯಿಸ್ತಾರೋ, ಅನ್ಸುತ್ತೆ.

ನೀವು ಹೇಳ್ಬೋದು, ಅವರಿಗೆ ಸಪೋರ್ಟ್ ಸ್ಟಾಫ಼್ ಇರುತ್ತೆ, ಅವರ ಹತ್ರ ರಿಸೋರ್ಸುಗಳು ಇರುತ್ತೆ ಅಂತ. ಸುಮ್ನೆ ಬರಕೊಂಡ್ ಬಂದ ಭಾಷ್ಣನ ಓದಿದ್ರೆ , ಜನ ಮರುಳಾಗಿ ಓಟ್ ಹಾಕ್ತಾರೆ ಅಂದ್‌ಕೊಂಡಿದ್ದೀರಾ? ರಾಜಕೀಯದಲ್ಲಿ ಗೆಲ್ಲೋದಕ್ಕೆ ಬೇಕಾದಷ್ಟು ಸ್ಟ್ರಾಟೆಜಿಗಳು ಬೇಕು, ಎಲ್ಲಕ್ಕಿಂತ ಮುಖ್ಯವಾಗಿ ಯಾವ ಸಮಯದಲ್ಲಿ ಹೇಗೆ ಮಾತಾಡಬೇಕು ಅನ್ನೋ ಪ್ರಜ್ಞೆ ಇರಬೇಕು.

ಏನೇ ಇರಲಿ, ಮೋದಿ ಆಗ್ಲಿ, ಟ್ರಂಪ್ ಆಗ್ಲಿ, ಈ ವಯಸ್ಸಿನಲ್ಲಿ ಇಷ್ಟೊಂದು ಕೆಲ್ಸ ಮಾಡ್ತಾರಲ್ಲ ಅಂತ ಹೆಮ್ಮೆ ಪಡಬೇಕು.

***

ಈ ವರ್ಲ್ಡ್ ಲೀಡರುಗಳು ನಮ್ಮ ಥರಾ ಸಾಮಾನ್ಯ ಮನುಷ್ಯರು ತಾನೇ? ಜೀವನದಲ್ಲಿ ಮಹತ್ಸಾಧನೆಯ ಉದ್ದೇಶದಿಂದ ಅವರೆಲ್ಲ ಮುಂದೆ ಬಂದಿರ್ತಾರೆ. ಒಂದು ದೇಶಕ್ಕೆ ಒಬ್ಬರೇ ಪ್ರೆಸಿಡೆಂಟು ಅನ್ನೋ ಹಾಗೆ, ಎಲ್ಲರನ್ನು ಹಿಂದಿಕ್ಕಿ ಆ ಅಧಿಕಾರ ಸೂತ್ರ ಹಿಡಿಯೋದು ಅಂದ್ರೆ ಸುಮ್ನೇ ನಾ?

ಇಳೀ ವಯಸ್ಸಿನವರ ಈ ಪಾಡು ಇರಲಿ. ಭಾರತದಲ್ಲಿ ಅದೆಷ್ಟು ಮಹಾ ಪುರುಷರು ತಮ್ಮ ಚಿಕ್ಕ ವಯಸ್ಸಿನಲ್ಲಿ ಎಷ್ಟೊಂದು ಸಾಧನೆ ಮಾಡಿ ಕಾಲವಾಗಿಲ್ಲ. ಉದಾಹರಣೆಗೆ, ರಾಮಾನುಜಾಚಾರ್ಯರು ಬದುಕಿದ್ದು ಕೇವಲ 32 ವರ್ಷ ಮಾತ್ರ - ಅಷ್ಟೇ ಚಿಕ್ಕ ವಯಸ್ಸಿನಲ್ಲಿ ನಮ್ಮ ನೂರು ಜನ್ಮದ ಸಾಧನೆಯನ್ನು ಮಾಡಿದ್ದಾರೆ ಅಂದುಕೋ ಬಹುದು. ಹಾಗೆ, ಸ್ವಾಮಿ ವಿವೇಕಾನಂದ ಬದುಕಿದ್ದೂ ಕೂಡ 39 ವರ್ಷಗಳು ಮಾತ್ರ.

ಯಾಕೆ ಈ ಉದಾಹರಣೆಗಳನ್ನ ಹೇಳ್ತೀನಿ ಅಂದ್ರೆ, ವಯಸ್ಸು ಒಂದು ನಂಬರ್ ಮಾತ್ರ. ಇಂಥವರಿಂದ ಪ್ರೇರೇಪಣೆ ಪಡೆದು ನಾವೂ ಒಂದಿಷ್ಟು ಕಲೀಬೋದು, ಸಾಧಿಸಬಹುದು.

***

ಸುಮ್ನೇ ಹೀಗೆ ಮಾತಾಡ್ತಾ ನನ್ ಫ಼್ರೆಂಡ್ ಸುಬ್ಬನಿಗೆ ಈ ಬಗ್ಗೆ ಪ್ರಶ್ನೆ ಹಾಕಿದ್ದಕ್ಕೆ, ಹಾರಿಕೆ ಉತ್ರ ಕೊಟ್ಟ ನೋಡಿ!

"ಏ, ನೀ ಸುಮ್ನಿರೋ... ನಮ ಥರ, ಬೈಡೆನ್ ಏನು ಬೆಂಡೇಕಾಯಿ ತಿಂತಾನ? ಟ್ರಂಪ್ ಏನು ತೊಂಡೇಕಾಯಿ ತಿಂತಾನ? ಅವರ ಎನರ್ಜಿ ಎಲ್ಲ ಬೇಕನ್-ಪಾಕನ್ ಇಂದ ಬರುತ್ತೋ ಏನೋ ಯಾರಿಗೆ ಗೊತ್ತು?"

ನಿಜವಾಗಿ, ಅವರಿಗೆ ಈ ಇಳಿ ವಯಸ್ಸಿನ್ನಲ್ಲಿ ಅಷ್ಟೊಂದು ಎನರ್ಜಿ ಹೇಗೆ ಬರುತ್ತೆ?

ನಿಮಗೇನಾದ್ರೂ ಗೊತ್ತಾ?

Tuesday, February 11, 2025

I hate ಕನ್ನಡಿಗರು (with use these 3 things)...

ನನಗೆ ಕನ್ನಡಿಗರನ್ನ ಕಂಡ್ರೆ ಪ್ರೀತೀನೆ... ಅದು ನಿಮಗೆಲ್ಲ ಗೊತ್ತೇ ಇರೋ ವಿಷ್ಯಾ... ಆದ್ರೆ, ಈ ಮೂರು ವಿಷಯಗಳಲ್ಲಿ, ಕನ್ನಡಿಗರನ್ನ ಕಂಡ್ರೆ, ಒಂಥರ, ಸಿಟ್ಟು, ಬೇಜಾರು - ತಮ್ಮ ಒರಿಜಿನಾಲಿಟಿನೇ ಇಲ್ದೇ ಇರೋ ಮೂದೇವಿಗಳು ಅಂತ ಜರೀ ಬೇಕು ಅನ್ಸುತ್ತೆ ಇವರ್ನೆಲ್ಲಾ ನೋಡ್ದಾಗ!

ನೇರವಾಗಿ ವಿಷ್ಯಕ್ಕೆ ಬರೋಣ.

ಮೊದಲ್ನೆಯದು: ಸರ್... ಅಲ್ಲಾ ನಮ್ ಕನ್ನಡಿಗರು, ಎಲ್ಲರನ್ನೂ "ಸರ್" ಅನ್ನೋದ್ಯಾಕೆ?

ಉತ್ತರ ಭಾರತದವರು ಮೋದಿಯವರನ್ನ, ಮೋದಿ ಜಿ ಅಂತ ಕರೀತಾರೆ... ನಾವು ಎಲ್ರನ್ನೂ "ಸರ್" ಅಂತೀವಿ.

ಪುನೀತ್ ರಾಜ್‌ಕುಮಾರ್ ಸರ್, ಶಂಕರ್‌ನಾಗ್ ಸರ್, ಅಂಬರೀಷ್ ಸರ್, ಇತ್ಯಾದಿ, ಇತ್ಯಾದಿ... ಜೀವನದ ಪಯಣವನ್ನ ಮುಗಿಸಿದೋರಿಗಷ್ಟೇ ಅಲ್ಲ, ಬದುಕಿರೋರನ್ನ ರೆಫ಼ೆರನ್ಸ್ ಮಾಡ್ದಾಗಲೂ "ಸರ್" ಅಂತಾನೇ ಅಂತಿರ್ತಾರೆ.

ಇವರಿಗೆಲ್ಲ, "ರಾಜ್‌ಕುಮಾರ್ ಅವರು", "ವಿಷ್ಣುವರ್ಧನ್ ಅವರು..." ಅಂದ್ರೆ ಮರ್ಯಾದೆ ಕಮ್ಮಿ ಅಂತ ಯಾರ್ ಅಂದೋರು?

ದಯವಿಟ್ಟು, ನಿಮ್ಮಲ್ಲಿ ಒಂದು ಔನ್ಸ್ ಆತ್ಮಾಭಿಮಾನ, ಸ್ವಾಭಿಮಾನ ಅಂತೇನಾದ್ರೂ ಇದ್ರೆ, ಎಲ್ರನ್ನೂ ಮರ್ಯಾದೆಯಿಂದ "...ಅವರು" ಅಂತ ಕರೀರಿ, ಅದರಿಂದ ನಿಮ್ಮ ಮರ್ಯಾದೆಗೇನೂ ಕುಂದ್ ಬರಲ್ಲ.

ಅದರ ಬದಲಿಗೆ ನೀವು, "ಸರ್" ಅಂತ ರಾಗ ಎಳೆದ್ರೆ, ಬಕೆಟ್ ಹಿಡದಂಗ್ ಆಗುತ್ತೆ.  ಇನ್ನಾದ್ರೂ ಬಕೇಟ್ ಹಿಡಿಯೋದು ಬಿಟ್ಟು, ಮರ್ಯಾದೆ (ಕೊಟ್ಟ್) ಮಾತಾಡಿ! ನಮ್ಮ ಟಿವಿ anchor ಗಳು ಶುರುಮಾಡಿದ ರೋಗವೇನೋ ಇದು ಅಂತ ಒಮ್ಮೊಮ್ಮೆ ಅನುಮಾನವೂ ಆಗುತ್ತೆ.

ನಾವು "ಸರ್" ಅಂತ ಕರೆಯೋದು - ಕೇವಲ ಎರಡು ರೀತಿ ಜನಗಳಿಗೆ ಮಾತ್ರ. ಒಂದು ಬ್ರಿಟೀಷ್ ಸರ್ಕಾರದಿಂದ ಪುರಸ್ಕರಿಸ್ಕೊಂಡು ಸರ್ ಪದವಿ ಪಡೆದವರಿಗೆ... ಉದಾಹರಣೆಗೆ ಸರ್ ಎಮ್. ವಿಶ್ವೇಶ್ವರಯ್ಯ... ಅಂತೀವಿ. ಮತ್ತೊಂದು,  ನಮ್ಮ ಶಾಲೆಯ ಮೇಷ್ಟ್ರುಗಳಿಗೆ, ನಿಜವಾಗಲೂ ಗೌರವದ ರೂಪದಲ್ಲಿ "ಸರ್ ಅಥಾವಾ ಸಾರ್" ಅಂತೀವಿ... ಅದಿಷ್ಟು ಬಿಟ್ರೆ, ಬೇರೆ ಕಡೆ ಬಳಸೋ ಸಾರ್ ಗೆ ಅರ್ಥ ಇರೋಲ್ಲ.

***

ಎರಡನೆಯದು: ಈ ಕನ್ನಡ ಸಿನಿಮಾಗಳ ವಿಚಾರಕ್ಕೆ ಬಂದಾಗ ಬೆಂಗಳೂರು ಗಾಂಧಿನಗರನ "ಸ್ಯಾಂಡಲ್ ವುಡ್" ಅಂತ ಕರೆಯೋದು.

ನಾನು ತಿಳಿದುಕೊಂಡ ಹಾಗೆ, ಇದು ಬಾಲಿವುಡ್, ಟ್ಯಾಲಿವುಡ್, ಕ್ಯಾಲಿವುಡ್ ಗಳ ರಾಗ ಮತ್ತು ರೋಗ... ಸುಮ್ನೆ ಅಂಧಾನುಕರಣೆ... ಅಮೇರಿಕದ ಹಾಲಿವುಡ್‌ನಲ್ಲಿ ಮೂವಿಗಳು ತಯಾರಾಗ್ತಾವೆ... ಹಾಗಾಗಿ ಎಲ್ಲೆಲ್ಲಿ ಮೂವಿಗಳು ತಯಾರಾಗ್ತಾವೋ ಅಲ್ಲಿನ ಪ್ರದೇಶದ ಹೆಸರುಗಳನ್ನೆಲ್ಲ "ವುಡ್" ಅನ್ನೋ ಪದದಿಂದ ಕೊನೆಗೊಳಿಸಿದರೆ ಹೇಗೆ ಅನ್ನೋ ಐಡಿಯಾ ಯಾವನೋ ಒಬ್ಬ ಹುಂಬನಿಗೆ ಬಂತು. ನಂತರ ಆ ರೋಗ ದೇಶವ್ಯಾಪಿ ಹರಡ್ತು.

ಬರೀ 2024 ಒಂದು ವರ್ಷದಲ್ಲೇ ಭಾರತದಲ್ಲಿ ತಯಾರಾದ ಚಿತ್ರಗಳ ಸಂಖ್ಯೆ ಸುಮಾರು 580 ಇವೆ. ಅದರಲ್ಲಿ ಹಿಂದಿ, ತೆಲುಗು ಚಿತ್ರಗಳದ್ದು ಸಿಂಹಪಾಲು. ನಮ್ಮ ಕನ್ನಡ ಭಾಷೆಯಲ್ಲೇ ಸುಮಾರು 50 ಸಿನಿಮಾಗಳು ಬಿಡುಗಡೆಯಾಗಿವೆ. ಅಂತದ್ದರಲ್ಲಿ, ಹಾಲಿವುಡ್ ಹೆಸರಿನ ಅನುಕರಣೆ ಮಾಡೋದಾದ್ರೂ ಏಕೆ?

ಈ ಕೆಟ್ಟ ರೋಗ ನಿಲ್ಲಬೇಕು... ನಮ್ಮತನ ಅಂತ ಸ್ವಲ್ಪಾನಾದ್ರೂ ಮರ್ಯಾದೆ ಇದ್ರೆ, ಇನ್ನಾದ್ರೂ ಈ "ವುಡ್"ಗಳ ಬಳಕೆ ಎಲ್ಲ ಕಡೆ ನಿಲ್ಲಿಸಬೇಕು, ಭಾರತದಾದ್ಯಂತ.

***

ಮೂರನೆಯದು: ಬ್ರದರ್ರು, ಸಿಸ್ಟರ್ರು...

ನಮ್ಮ ಅಚ್ಚ ಕನ್ನಡದಲ್ಲಿ, ಅಣ್ಣ, ತಮ್ಮ, ತಂಗಿ, ಅಕ್ಕ ಅಂತ ಪದಗಳಿರುವಾಗ... mother, father, brother, sister ಅಂತ ಯಾಕೆ ಪದ ಬಳಸ್ತಾರೋ, ಕನ್ನಡ ವಾಕ್ಯಗಳಲ್ಲಿ?

ಅತ್ತಿಗೆ, ನಾದಿನಿ, ಸೋದರ ಸೊಸೆ - ಇವರಿಗೆಲ್ಲ sister-in-law ಅನ್ನೋದು ಯಾವ ನ್ಯಾಯ ನೀವೇ ಹೇಳಿ.

ಅಣ್ಣನ ಮಗಳಿಗೂ, ತಂಗಿಯ ಮಗಳಿಗೂ ನಮ್ಮ ಸಂಬಂಧದಲ್ಲಿ ವ್ಯತ್ಯಾಸ ಇದೆ... ಅವರನ್ನ ನೀಸು, ಗೀಸು ಅಂತ ಹೇಳೋದು ಸರೀನಾ...

ಇಂಗ್ಲೀಷ್ ಮಾತೋಡೋರಿಗೆ ಸಂಬಂಧದ ಬೆಲೆ ಏನು ಗೊತ್ತು? ಹಂಗಿದ್ರೆ, ಎಲ್ರನ್ನೂ ಅಂಕಲ್ ಅಂತ ಕರೀತಿದ್ರು? ಎಲ್ಲ ಕಾನೂನು ಮಯವಾಗಿರುವ ಅವರ ಕಲ್ಚರ್‌ನಲ್ಲಿ "ಇನ್-ಲಾ" ಅಂತ ಯಾರನ್ನ ಬೇಕಾದ್ರೂ ಕರೀತಾರೆ... ಆದ್ರೆ, ಅಂತಃಕರಣ, ಕಕ್ಕುಲಿಕೆ, ಪ್ರೀತಿ, ವಿಶ್ವಾಸ, ಮಮತೆ, ಪ್ರೇಮ, ಸ್ನೇಹ, ವಾತ್ಸಲ್ಯಗಳನ್ನು ಆಧರಿಸಿ ನೆಲೆನಿಂತ ಸಂಬಂಧಗಳ ಮೇಲೆ ಅವುಗಳಿಗೆಲ್ಲ ಒಂದು appropriate ಪದವನ್ನಿಟ್ಟುಕೊಂಡಿದ್ದೀವಿ.

ಯಾರಿಗಾದ್ರೂ ಸಡನ್ ಆಗಿ ಒಂದು ಹೊಡ್ತಾ ಬಿದ್ರೆ, ಅವರೆಲ್ಲ, ಕನ್ನಡದಲ್ಲಿ ಅಮ್ಮ/ಅವ್ವ ಅಂತಾರೇ ಹೊರತು, ಮಮ್ಮಿ, ಮದರ್ರು ಅನ್ನಲ್ವಲ್ಲಾ?

ಈ ರೀತಿ, ಇಂಗ್ಲೀಷಿನಲ್ಲಿ ಸಂಬಂಧಗಳನ್ನು ಹೇಳೋ ರೋಗವನ್ನೂ ನಾವು ಗುಣಮಾಡಿಕೊಳ್ಳಲೇ ಬೇಕು? ನಮ್ಮ brother ಬಂದ್ರು ಅಂದ್ರೆ, ನಾನು ಅಣ್ಣ ಅಂದುಕೊಳ್ಳಲೋ, ತಮ್ಮ ಅಂದುಕೊಳ್ಳಲೋ?

ಇಲ್ಲಾಂದ್ರೆ ಪೂರ್ತೀ ಇಂಗ್ಲೀಷ್ನಲ್ಲೇ ಮಾತಾಡ್ರಪ, ಕನ್ನಡ ಯಾಕಾದ್ರೂ ಬೇಕೂ?

ಈ ದೊಡ್ಡ ರೋಗ ಮೊದಲು ನಿಲ್ಬೇಕು.  ಏನಂತೀರಿ?

***

I hate ಕನ್ನಡಿಗರು (with these 3 things)...


Sunday, February 09, 2025

OTP ಎನ್ನುವ ಸಿಂಹಸ್ವಪ್ನ, ಎಡಬಿಡದೆ ಕಾಡುವ ಭಯ...

ವಿಂದ್ಯ ಪರ್ವತದ ದಕ್ಷಿಣ ಭಾಗದಲ್ಲಿರುವ ದಕ್ಷಿಣ ಪ್ರಸ್ಥಭೂಮಿಯ ಒಡಲೊಳಗಿಂದ ಈ ಬ್ಯಾಂಕಿಂಗ್ ವ್ಯವಸ್ಥೆ ಹೊರಬಂತು - ನಮ್ಮ ಕರ್ನಾಟಕದ ಮಂಗಳೂರು ಕಡೆಯವರ ಕೊಡುಗೆ ಮತ್ತು ಸರ್. ಎಂ. (ಮೋಕ್ಷಗುಂಡಂ) ವಿಶ್ವೇಶ್ವರಯ್ಯನವರ ದೂರದರ್ಶಿತ್ವವನ್ನು ನಾವು ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಇಂದಿಗೂ ಕಾಣಬಹುದು.

ಆದರೆ, ಇಂದು ನಮ್ಮ ಹಣಕಾಸು ಮತ್ತು ಬ್ಯಾಂಕಿಂಗ್ ವ್ಯವಸ್ಥೆಯನ್ನು ಒಂದು OTP ಎನ್ನುವ ಪೆಡಂಭೂತ ನಿಧಾನವಾಗಿ ನುಂಗ್ತಾ ಇದೆ ಅಂದ್ರೆ ನಂಬ್ತೀರಾ?

ನನಗೆ ವೈಯಕ್ತಿಕವಾಗಿ ಒಂದು ಇವತ್ತಿಗೂ ಅರ್ಥವಾಗದಿರುವುದು ಏನು ಅಂದ್ರೆ, ಪ್ರಪಂಚದ ಉದ್ದಗಲಕ್ಕೂ Technology ಕ್ಷೇತ್ರದಲ್ಲಿ ಕೆಲಸ ಮಾಡೋ ನಮಗೆ, ನಮ್ಮ internal ಬ್ಯಾಂಕಿಂಗ್ ವ್ಯವಸ್ಥೆ ಏಕೆ ಇಷ್ಟು ಕೆಟ್ಟದಾಗಿದೆ ಅನ್ನೋದು.

ನೀವು ಯಾವತ್ತಾದ್ರೂ ನಮ್ಮ ರಾಷ್ಟ್ರೀಕೃತ ಬ್ಯಾಂಕುಗಳ sites ನೋಡಿದ್ರೆ, ಅವರ technology choice, user interface, navigation, user experience, error handling ಇವನ್ನೆಲ್ಲ ನೋಡಿದ್ರೆ, ಬ್ಯಾಂಕಿಂಗ್ ಕಸ್ಟಮರ್ ಅನುಕೂಲಗಳೆಲ್ಲವೂ, ಇಲ್ಲಿ ಮಟಾಸ್ ಅನ್ಸುತ್ತೆ. ಪ್ರತಿ ಮೂರು ತಿಂಗಳಿಗೆ expire ಆಗೋ ಲಾಗಿನ್ ಪಾಸ್ವರ್ಡುಗಳು, ಕಾಂಪ್ಲಿಕೇಟೆಡ್ ಪ್ರೊಫ಼ೈಲ್ ಪಾಸ್ವರ್ಡ್ಗಳು ಇವುಗಳನ್ನ maintain ಮಾಡೋದಕ್ಕೆ ಒಂದು ದೊಡ್ಡ ಡೇಟಾಬೇಸೇ (database) ಬೇಕು!

ಒಂದು ಕಾಲದಲ್ಲಿ ನಾವು SBM ಒಂದು ಶಾಖೆಗೆ ಹೋದ್ರೆ, ವೈಯಕ್ತಿಕವಾಗಿ ಅಲ್ಲಿನ ಸ್ಟಾಫ಼್ ಎಲ್ಲರೂ ಪರಿಚಯ ಇರೋರು. ಅದು ಮುಂದೆ ಬದಲಾಗ್ತಾ ಬದಲಾಗ್ತಾ ನಮ್ಮ ಕನ್ನಡದವರೇ ಆದ ಸ್ಟಾಫ಼್ ಪ್ರತೀ ಮೂರು ವರ್ಷಕ್ಕೊಮ್ಮೆ transfer ಆಗ್ತಾ ಹೋದ್ರು. ಈಗ SBM ಇದ್ದಿದ್ದು SBI ಆದ ಮೇಲೆ, ಮೊದಲೇ ಹದಗೆಟ್ಟ ವ್ಯವಸ್ಥೆಯಲ್ಲಿ ಉತ್ತರ ಭಾರತದ ಗುಪ್ತಾಗಳು, ಮಿಶ್ರಾಗಳು ಸೇರಿಕೊಂಡು ಈಗೇನಾದ್ರೂ ನೀವು SBI ಒಳಗೆ ಕಾಲಿಟ್ರೆ, ಅಲ್ಲಿನ ಒಂದು ವ್ಯವಸ್ಥೆ ನೋಡಿ ದಂಗಾಗಿ ಬಿಡ್ತೀರ.

ಹೌದು, ಈ ಆನ್‌ಲೈನ್‌ನ ಬ್ರಹ್ಮಾಂಡ ವ್ಯವಸ್ಥೆಯಲ್ಲಿ ನೀವಾದ್ರೂ ಬ್ಯಾಂಕ್ ಬ್ರಾಂಚುಗಳಿಗೆ ಏಕೆ ಹೋಗಬೇಕು ಅಂತ ನೀವು ಕೇಳಬಹುದು.

ನಿಮಗೆ ಬೆಂಗಳೂರಿನ ಒಂದು ಬ್ಯಾಂಕ್ ಉದಾಹರಣೆ ಕೊಡ್ತೀನಿ. ನಿಮ್ಮ ಅಕೌಂಟಿನಲ್ಲಿ ಏನೇ ಬದಲಾವಣೆ ಮಾಡ್ತೋದಿದ್ರೂ, ನೀವು ನಮ್ಮ ಖಾತೆಯನ್ನ ಎಲ್ಲಿ ಓಪನ್ ಮಾಡಿದ್ವೋ ಅಲ್ಲಿಗೆ ಬನ್ನಿ ಅಂತ ಕರೀತಾರೆ. ಸಣ್ಣ ಪುಟ್ಟ ಊರುಗಳಾದರೆ ಸುಲಭವಾಗಿ ಹೋಗಬಹುದು, ಆದ್ರೆ, ಈ ಬೆಂಗಳೂರಿನಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗೋದು ಅಂದ್ರೆ ಅದಕ್ಕೆ ಅರ್ಧ ದಿನ ಬೇಕಾಗುತ್ತೆ.

ಸರಿ, second Saturday ನೂ ಸೇರಿ, ಅವರ holiday ಗಳನ್ನೆಲ್ಲ ಮನಸ್ಸಲ್ಲಿ ಇಟ್ಟುಕೊಂಡು,  appointment ತೊಗೊಂಡು ಹೋದ್ರೂ ಕೂಡ ನಿಮಗೇನು ಒಳ್ಳೆಯ ಸರ್ವೀಸು ಸಿಗುತ್ತೆ ಅನ್ನೋ ಗ್ಯಾರಂಟೀ ಅಂತೂ ಇಟ್ಕೋಬೇಡಿ.

ನೀವು NRI ಗಳು ಅಂತ ಗೊತ್ತಾದ ತಕ್ಷಣ, ಅವರಿಗೆ ನಿಮ್ಮ ಮೇಲೆ ಅವರ ನಾನಾ ರೀತಿಯ ಹೊಸ ಪ್ರಾಡಕ್ಟುಗಳನ್ನ experiment ಮಾಡ್ಬೇಕು ಅನ್ಸುತ್ತೆ. ಹೊಸ ಇನ್ಸೂರೆನ್ಸ್ ಸ್ಕೀಮುಗಳಿರಬಹುದು, ವಿವಿಧವಾದ ಸೇವಿಂಗ್ಸ್ ಸರ್ಟಿಫ಼ಿಕೇಟುಗಳಿರಬಹುದು... ಇತ್ಯಾದಿ ಇತ್ಯಾದಿ... ಇವೆಲ್ಲದರ ನಡುವೆ ನೀವು ಹೋದ ಕೆಲ್ಸ ಆದ್ರೆ ಪುಣ್ಯ, ಇಲ್ಲಾಂದ್ರೆ ಇನ್ನೊಂದ್ ದಿನ ಬನ್ನಿ ಅಂತ ಹೇಳುದ್ರೂ ಹೇಳ್‌ಬಹುದು.  ನೀವು ಸಪ್ಪೆ ಮುಖ ಹಾಕ್ಕೊಂಡ್ ವಾಪಾಸ್ ಬರ್ತಾ ನಿಮಗೆ, ಅಲ್ಲಿನ ಬಾಗಿಲ ಹಿಂದೆ, "ಗ್ರಾಹಕರೇ ದೇವರು!" ಅನ್ನೋ ಜಾಣನುಡಿ ಕಂಡ್ರೂ ಕಾಣಬಹುದು.

ನಾವೆಲ್ಲ ನಮ್ ನಮ್ ಲಂಚ್ ಅನ್ನು ನಮ್ ನಮ್ ಡೆಸ್ಕ್‌ನಲ್ಲಿ ತಿಂತೀವಲ್ಲ, ಹಂಗೆಲ್ಲ ಏನೂ ಇಲ್ಲ... ಬೆಳಿಗ್ಗೆ ಹತ್ತು ಗಂಟೆಗೆ ಓಪನ್ ಆಗೋ ಬ್ಯಾಂಕ್‌ಗಳಿಗೆ ಮಧ್ಯಾಹ್ನ ಕರೆಕ್ಟ್ ಆಗಿ ಎರಡೂವರೆಗೆ ಲಂಚ್ ಬ್ರೇಕ್ ಬೀಳತ್ತೆ! ಅಷ್ಟರೊಳಗೆ ಜಾಣತನದಿಂದ ನಿಮ್ಮ ಕೆಲ್ಸ ಮಾಡಿಸ್‌ಕೋ ಬೇಕು!

ಅದೆಲ್ಲಾ ಇರ್ಲಿ ಬಿಡಿ, ಇವತ್ತಿನ ವಿಷ್ಯಕ್ಕೆ ಬರೋಣ.... OTP ಅನ್ನೋ ಪೆಡಂಭೂತ ಇಡೀ ಇಂಡಿಯಾನೇ ಅವರಿಸಿಕೊಂಡ್ ಬಿಟ್ಟಿದೆ... ಇಂಡಿಯಾದಲ್ಲಿರೋ ಕಂಪ್ಯೂಟರ್ ಸರ್ವರ್ ಗಳು ತಮ್ಮ 10% ಕ್ಯಾಪಸಿಟಿಯನ್ನ Random generation ಮಾಡೋಕೆ ಬಳಸ್ತಾವೇನೋ ಅನ್ಸುತ್ತೆ... ಕಾಫ಼ಿ ಆರ್ಡರ್ ಮಾಡೋಕು OTP, ಕಾಫ಼ಿ ಕುಡಿಯೋಕು OTP ಬೇಕೇ ಬೇಕು... ಕಂಡ್ ಕಂಡಲ್ಲೆಲ್ಲ OTP ಹಾವಳೀನೇ ಹಾವಳಿ!

ಈ OTP ಅಂದಾಕ್ಷಣ, ನಮ್ಮೂರಿನ ದೊಡ್ಡ ದೊಡ್ಡ ಸವಕಾರರ ನೆನಪು ಬಂತು! ಒಂದು ಕಾಲದಲ್ಲಿ ದುಡ್ಡ್ ಕೊಟ್ಟು ಕೆಲ್ಸಾ ಮಾಡಿಸ್ತಿದ್ದ ಪುಣ್ಯಾತ್ಮರಿಗೆ ಈ OTP ಒಂಥರ ಲೆವಲ್ಲರ ಥರ ಆಗಿ ಹೋಗಿದೆ! ನಿಮಗ್ಗೊತ್ತಾ? ನಮ್ಮ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನೂ, ಈ OTP ಬಿಟ್ಟಿಲ್ಲ ಅಂತ?

ಈ OTP ನನ್ನ ದೃಷ್ಟೀಲೀ ಒಂದು ಲೆವಲ್ಲರ್ ಇದ್ದ ಹಾಗೆ... ಒಂದು ಕಾಲದಲ್ಲಿ Taxes, and Death were levellers ಅಂತಿದ್ವಲ್ಲ ಹಂಗೆ! ನೀವು 2 ವಾರ ಇಂಡಿಯಾ ರಜಾ ಮುಗುಸ್ಗೊಂಡ್ ಬಂದ್ ಇಲ್ಲಿ ಹಾಯಾಗಿ ನಿದ್ರೆ ಮಾಡ್ತಿದ್ರೆ, ದಿಢೀರ್ ಅಂತ ಎಚ್ರ ಆಗುತ್ತೆ... ನಿಮ್ ಫ಼ೋನ್ ಟನ್ ಅಂತ ಸೌಂಡ್ ಮಾಡ್ದಾಗ ನಿಮಗೆ ಹೆದರಿಕೆ ಆಗುತ್ತೆ! ಹಾಗಿದೆ ಈ OTP ಝಲಕ್ ಒಂಥರ ಅದರ ಟ್ರೋಮಾದಿಂದ ಹೊರಗೆ ಬರೋಕೆ ಆಗಲ್ಲ ಅನ್ನೋ ಹಾಗೆ!!

SatisHFaction: ಕನ್ನಡ ಪಾಡ್‌ಕ್ಯಾಸ್ಟ್