Tuesday, January 28, 2025

Keep this Team in mind...

ಈಗಂತೂ ಕ್ರಿಕೆಟ್ ಮ್ಯಾಚ್‌ಗಳು, ಘಳಿಗೆಗೊಂದು ಘಂಟೆಗೊಂದು ಅನ್ನೋ ಹಾಗೆ ಲೈವ್ ಟಿವಿ ಮೇಲೆ ಬರ್ತಾನೇ ಇರುತ್ವೆ. T20 format ನಲ್ಲಿರೋ ಕ್ರಿಕೇಟ್ ಮ್ಯಾಚ್‌ಗಳಿಂದ ಹಿಡಿದು, international test matchಗಳ ವರೆಗೂ ಒಂದಲ್ಲ ಒಂದು ಸೀರೀಸ್ ಅಥವಾ ಲೀಗ್‌ ಯಾವಾಗ್ಲೂ ನಡೀತಾನೆ ಇರುತ್ತೆ. ಅದರಲ್ಲೂ ಅನೇಕ ಫ಼್ರ್ಯಾಂಚೈಸಿ ಕ್ರಿಕೆಟ್ ಕ್ಲಬ್‌ಗಳು ಬಂದ ಮೇಲಂತೂ ದಿನಾ ಸಾಯೋರಿಗೆ ಅಳೋರು ಯಾರು ಅನ್ನೋ ಮಟ್ಟವನ್ನೂ ಕ್ರಿಕೇಟ್ ಪ್ರೇಮಿಗಳೂ ತಲುಪಿರಬಹುದು.

ಆದ್ರೆ, ನಾನು ಈಗ ಹೇಳ್ತಾ ಇರೋ ಟೀಮು ಅಂತಿಂಥಾ ಟೀಮ್ ಅಲ್ಲ... ಅದು ನಮ್ಮ ಕರ್ನಾಟಕ ರಾಜ್ಯದ ಹೆಮ್ಮೆಯ ರಣಜೀ ಕ್ರಿಕೆಟ್ ತಂಡ!

ಅದರಲ್ಲೂ ಹತ್ತು ದಿನಗಳ ಹಿಂದೆ ವಿಜಯ್ ಹರಾರೆ ಟ್ರೋಫ಼ಿಯನ್ನು ಗೆದ್ದು ಹುಮ್ಮಸ್ಸಿನಿಂದ ಬೀಗ್ತಾ ಇರೋ ನಮ್ಮ ಮಯಂಕ್ ಅಗರ್‌ವಾಲ್ ನೇತೃತ್ವದ ಯುವ ತಂಡ!

ಕಳೆದ ಸಾರಿ ನಾವು ರಣಜಿ ಟ್ರೋಫ಼ಿಯನ್ನ ಗೆದ್ದಿದ್ದು 2014-15 ರಲ್ಲಿ, ಬರೋಬ್ಬರಿ ಹತ್ತು ವರ್ಷಗಳ ಹಿಂದೆ. ಅಂದು ತಮಿಳುನಾಡಿನ ತಂಡವನ್ನು ಇನ್ನಿಂಗ್ಸ್ ಮತ್ತು 217 ರನ್‌ಗಳಿಂದ ಸೋಲಿಸಿದ ಆ ರೋಚಕ ಪಂದ್ಯವನ್ನ ಮರೆಯೋದಾದ್ರೂ ಹೇಗೆ? ಆಗ, ವಿನಯ್ ಕುಮಾರ್ ಕ್ಯಾಪ್ಟನ್ ಆಗಿದ್ರು, ಕೆ.ಎಲ್. ರಾಹುಲ್ ಅದೇ ಪಂದ್ಯದಲ್ಲಿ 188 ರನ್ ಸೂರೆ ಹೊಡೆದಿದ್ರು. ಆಗ ಕರ್ನಾಟಕ ತಂಡಕ್ಕೆ ಆಡುತ್ತಿದ್ದ ಕರುಣ್ ನಾಯರ್ ಇನ್ನಿಂಗ್ಸ್ ಒಂದರಲ್ಲೇ 328 ರನ್ ದಾಖಲು ಮಾಡಿದ್ರು. ವಿನಯ್ ಕುಮಾರ್ ಶತಕವೂ ಸೇರಿದಂತೆ, 231 ಓವರುಗಳಲ್ಲಿ 762 ರನ್‌ಗಳನ್ನು ಒಟ್ಟುಗೂಡಿಸಿದ್ದನ್ನ ಹೇಗೆ ತಾನೆ ಮರೆಯೋಕೆ ಸಾಧ್ಯ?

ಈ ನಮ್ಮ ತಂಡಕ್ಕೆ ಹತ್ತು ವರ್ಷಗಳಿಂದ ಮತ್ತೆ ಆ ಟ್ರೋಫ಼ಿಯನ್ನ ಗೆಲ್ಲೋದಕ್ಕೆ ಸಾಧ್ಯವಾಗಿಲ್ಲ. ಈ ಸರ್ತಿ ಕ್ವಾರ್ಟರ್ ಫ಼ೈನಲ್‌ಗೂ ಹೋಗ್ತೀವೋ ಇಲ್ವೋ ಅನ್ನೋ ಸಂಕಷ್ಟದಲ್ಲಿರೋ ತಂಡಕ್ಕೆ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ನಾವು ಸಪೋರ್ಟ್ ಮಾಡ್ಲೇ ಬೇಕಲ್ವಾ?

ಈ ಸಾರಿ ಇಲೈಟ್ ಗ್ರೂಪ್ C ಯಲ್ಲಿ 19 ಪಾಯಿಂಟ್‌ಗಳಿಂದ  ನಮ್ಮ ಕರ್ನಾಟಕ ತಂಡ ಮೂರನೇ ಸ್ಥಾನದಲ್ಲಿದೆ. ಮೊದಲನೇ ಮತ್ತು ಎರಡನೇ ಸ್ಥಾನದಲ್ಲಿ ಕ್ರಮವಾಗಿ ಹರ್ಯಾಣ ಮತ್ತು ಕೇರಳ ತಂಡಗಳಿವೆ. 

ಇನ್ನು ಈ ಲೀಗ್‌ನಲ್ಲಿ ಕರ್ನಾಟಕ ತಂಡದ ಕೊನೆಯ ಮ್ಯಾಚ್ ಹರ್ಯಾಣದ ಮೇಲೆ ಇದೆ. ಜನವರಿ 30 ರಿಂದ ಪೆಬ್ರುವರಿ 02ರ ವರೆಗೆ ಬೆಂಗಳೂರಿನಲ್ಲಿ ನಡೆಯೋ ಈ ಮ್ಯಾಚ್‌ಗೆ ನಾವೆಲ್ಲ ಎಷ್ಟು ಬೆಂಬಲ ಕೊಡ್ತೀವೋ ಅಷ್ಟು ಒಳ್ಳೇದು.

ನಮ್ಮ ಕರ್ನಾಟಕ ತಂಡ, ಈ ಲೀಗ್‌ನಲ್ಲಿ ಕ್ವಾರ್ಟರ್ ಫ಼ೈನಲ್‌ಗೆ ಹೋಗೋದಕ್ಕೆ ಇರೋದು ಎರಡೇ ದಾರಿಗಳು: ಒಂದು, 26 ಪಾಯಿಂಟ್ಸ್ ನಲ್ಲಿರೋ ಹರ್ಯಾಣವನ್ನು ಇನ್ನಿಂಗ್ಸ್ ಪ್ಲಸ್ ರನ್‌ಗಳಿಂದ ಗೆಲ್ಲಬೇಕು, ಆಗ 7 ಪಾಯಿಂಟ್ಸ್ ಸಿಗತ್ತೆ, ಅದರಿಂದ ನಾವೂ 26 ಪಾಯಿಂಟ್ ಗಳಿಸಿ ನೆಟ್ ರನ್ ರೇಟ್ ನಲ್ಲಿ ಕ್ವಾಲಿಫ಼ೈ ಆಗಬಹುದು. ಬಲಿಷ್ಟವಾದ ಹರ್ಯಾಣವನ್ನು ಮಣಿಸೋದು ಅಷ್ಟು ಸುಲಭವಾದ ವಿಚಾರ ಏನೂ ಅಲ್ಲ. ಇನ್ನು ಎರಡನೇ ದಾರಿ ಅಂದ್ರೆ, ಈಗಾಗ್ಲೇ 21 ಪಾಯಿಂಟ್ ಗಳಿಸಿ ಎರಡನೇ ಸ್ಥಾನದಲ್ಲಿರೋ ಕೇರಳವನ್ನು ಕೊನೇ ಸ್ಥಾನದಲ್ಲಿರೋ ಬಿಹಾರದವರು ಸೋಲಿಸಬೇಕು. ಒಂದು ವೇಳೆ ಕೇರಳ ಸೋತ್ರೂ, ಕರ್ನಾಟಕ-ಹರ್ಯಾಣ ಪಂದ್ಯ ಡ್ರಾ ಆಗಿ, ಕರ್ನಾಟಕಕ್ಕೆ 3 ಪಾಯಿಂಟ್ಸ್ ಸಿಕ್ರೆ, ನಾವು ಒಟ್ಟು 22 ಪಾಯಿಂಟ್ಸ್ ತೊಗೊಂಡು ಕ್ವಾಲಿಫ಼ೈ ಆಗಬಹುದು.

***

ನಾನು ಯಾವಾಗ್ಲೂ ರಣಜಿ ಪಂದ್ಯಗಳನ್ನು ಫ಼ಾಲ್ಲೋ ಮಾಡ್ತೀನಿ. ಮೊನ್ನೆ ನಮ್ಮ ಹುಡುಗ್ರು ಪಂಜಾಬ್ ತಂಡವನ್ನ ಹೀನಾಯವಾಗಿ ಸೋಲಿಸಿದ್ರೆ ಅದು ಸುದ್ದಿ ಆಗೋದಿಲ್ಲ.  ಮೊದಲನೇ ಇನ್ನಿಂಗ್ಸ್ ನಲ್ಲಿ ತಿಣುಕಾಡಿ ನಾಲ್ಕು ರನ್ ಹೊಡೆದಿದ್ದ ಶುಭ್‌ಮನ್ ಗಿಲ್, ಎರಡನೇ ಇನ್ನಿಂಗ್ಸ್‌ನಲ್ಲಿ 171 ಬಾಲ್‌ಗಳಿಂದ 102 ರನ್ ಹೊಡೆದಿದ್ದು, ಎಲ್ಲ ಕಡೆ ದೊಡ್ಡ ಸುದ್ದಿ ಆಯ್ತು. ಅದೇ ಪಂದ್ಯದಲ್ಲಿ 277 ಬಾಲ್‌ಗಳಿಂದ 203 ರನ್ ಹೊಡೆದು, ಮನಮೋಹಕ ಇನ್ನಿಂಗ್ಸ್ ಜಯವನ್ನು ತಂದುಕೊಟ್ಟ ರವಿಚಂದ್ರನ್ ಸ್ಮರಣ್ ದ್ವಿಶತಕದ ಬಗ್ಗೆ ಯಾರೂ ಮಾತಾಡ್ಲೇ ಇಲ್ಲ! ಸ್ಮರಣ್ ಆಟದ ವೈಖರಿ ಎಷ್ಟು ಸೊಗಸಾಗಿದೆ ಅಂತ ಹೈ ಲೈಟ್ಸ್ ನೋಡಿ, ನಿಮಗೇ ಗೊತ್ತಾಗುತ್ತೆ, ಅವರ ಕಾನ್ಫ಼ಿಡೆನ್ಸ್ ಏನು, ಅವರ ಪ್ರಿಪರೇಷನ್ ಎನೂ ಅಂತ. 

ನಮ್ಮ ಬಿಸಿಸಿಐ ಸೈಟಿನಲ್ಲೂ ಕೂಡ ವಿಡಿಯೋ ಹೈಲೈಟ್ಸ್ ನೋಡೋಕೆ ಹೋದ್ರೆ, ಅಲ್ಲೂ ಕರ್ನಾಟಕದ ಒಂದೇ ಒಂದು ವಿಡಿಯೋಗಳೂ ಸಿಗಲಿಲ್ಲ - ಬರೀ ಮುಂಬೈ ತಂಡದವರ ಕೈಚಳಕವನ್ನೇ ತೋರಿಸೋದು ಅವರು.

ಬೌಲಿಂಗ್‌ನಲ್ಲಿ, ವಾಸುಕಿ ಕೌಶಿಕ್ ಮತ್ತು ಅಭಿಲಾಶ್ ಶೆಟ್ಟಿ ಅವರ ವೈಖರಿ ನೋಡೋದೇ ಒಂದು ಚೆಂದ. ಮಿಡ್ಲ್ ಆರ್ಡರ್‌ನಲ್ಲಿ  ಬ್ಯಾಟ್ ಮಾಡೋ ಅಭಿನವ್ ಮನೋಹರ್ ಮತ್ತು ಕೃಷ್ಣನ್ ಶ್ರೀಜಿತ್ ಅವರ ಬ್ಯಾಟಿಂಗ್ ಲಯ ತುಂಬಾ ಚೆನ್ನಾಗಿದೆ.

ಇಂಥ ಪಂದ್ಯಗಳಲ್ಲಿ ಆಡಿಯೇ ನಮ್ಮ ರಾಹುಲ್ ಡ್ರಾವಿಡ್ ಅಂತೋರು, ಮುಂದೆ ಬೆಳೆದು ಭಾರತದ ಗೋಡೆ ಮತ್ತು ಆಧಾರ ಸ್ಥಂಭ ಆಗಿದ್ದು. ಕರ್ನಾಟಕದಂತೆ ಪ್ರತೀ ರಾಜ್ಯಕ್ಕೂ ಅವರವರದ್ದೇ ಆದ ಹೆಮ್ಮೆಯ ಆಟಗಾರರು ಇದ್ದೇ ಇರ್ತಾರೆ. ಇಂಥ ಅಪ್ರತಿಮ ಪ್ರತಿಭೆಗಳು ಹುಟ್ಟುವ ಸ್ಥಳದಲ್ಲಿ ಅವರು ತಮಗೆ ಸಿಕ್ಕ ಅವಕಾಶಗಳನ್ನು ಹೇಗೆ ಬಳಸಿಕೊಂಡು ಮುಂದೆ ಬರ್ತಾರೆ ಅಂತ ನೋಡೋ ರೋಚಕತೆಯ ಸ್ವಾರಸ್ಯವೇ ಬೇರೆ. ಏನಂತೀರಿ?

ನಾವು ನಮ್ಮ ಕರ್ನಾಟಕದ ಕ್ರಿಕೆಟರುಗಳನ್ನು ಸಪೋರ್ಟು ಮಾಡದೇ ಇರೋದು, ಸಾಧ್ಯಾನೇ ಇಲ್ಲ! ಜೈ ಕರ್ನಾಟಕ!!



Wednesday, January 01, 2025

ನಮ್ಮ ಪ್ರಶ್ನೆಗಳೇ ನಮ್ಮ ಉತ್ತರಗಳು...

ನಮ್ಮ ಪ್ರಶ್ನೆಗಳೇ ನಮ್ಮ ಉತ್ತರಗಳು - ಹೀಗೆನಿಸಿದ್ದು ಇತ್ತೀಚೆಗೆ ನಮ್ಮ ಆಫ಼ೀಸಿನಲ್ಲಿ ನಡೆದ ಒಂದು ಘಟನೆ, ಮತ್ತು ಅವುಗಳಿಗೆ ಯಾರು ಯಾರು ಹೇಗೆ ಪ್ರತಿಕ್ರಿಯಿಸಿದರು ಎಂಬುದನ್ನು ಕೂಲಂಕುಷವಾಗಿ ಗಮನಿಸಿದಾಗ.

ಈ ಲೇಖನದ ಸಾರಾಂಶವನ್ನು ಒಂದೇ ವಾಕ್ಯದಲ್ಲಿ ಹೇಳಬಹುದಾದರೆ, ಪ್ರಶ್ನೆಗಳು ನಮ್ಮ ಅಸ್ತಿತ್ವಕ್ಕೆ ಅತೀ ಅವಶ್ಯಕ ಹಾಗೂ ನಾವು ಹಾಕಿಕೊಳ್ಳುವ ಪ್ರಶ್ನೆಗಳು (ಅಂತರಂಗಿಕವಾಗಿ, ಬಹಿರಂಗಿಕವಾಗಿ), ನಮ್ಮ ನೆಲೆಯನ್ನು ನಿರ್ಧರಿಸಬಲ್ಲವು!

***

ದೊಡ್ಡ ಮಲ್ಟಿ ನ್ಯಾಷನಲ್ ಕಂಪನಿಗಳಲ್ಲಿ ಅನೇಕ ಕಂಪ್ಯೂಟರ್ ಸಿಸ್ಟಮ್‌ಗಳಿರುತ್ತವೆ. ಅವುಗಳನ್ನು ಅಪ್ಲಿಕೇಶನ್‌ಗಳಾಗಿ ವಿಂಗಡಿಸಿಕೊಂಡಿರುತ್ತಾರೆ. ಈ ಕಂಪ್ಯೂಟರ್ ಅಪ್ಲಿಕೇಶನ್‌ಗಳು, ಕೆಲವು ಹೊರ ಗ್ರಾಹಕರಿಗೆ ಸಂಬಂಧಿಸಿದವು, ಇನ್ನು ಕೆಲವು ಕಂಪನಿಯ ಕೆಲಸಗಾರರು ಮಾತ್ರ ಬಳಸುವಂತಹವು. ಇಂತಹ ಯಾವುದೇ ಅಪ್ಲಿಕೇಶನ್‌ಗಳಲ್ಲಿ ಏನಾದರೂ ತೊಂದರೆ  ಆದರೆ, ಆಗ ಗ್ರಾಹಕರು ಅದನ್ನು ಬಳಸಲು ಸಾಧ್ಯವಿರದ ಸ್ಥಿತಿ  ನಿರ್ಮಾಣವಾಗುತ್ತದೆ. ಇದನ್ನು "ಔಟೇಜ್" ಎಂದು ಕರೆಯುತ್ತಾರೆ.

ಉದಾಹರಣೆಗೆ, ನಾವೆಲ್ಲ ಇ-ಮೇಲ್ ಉಪಯೋಗಿಸುತ್ತೇವೆ. ಹೆಚ್ಚು ಜನರು ಬಳಸುವ ಜೀ-ಮೇಲ್ (Gmail) ಅನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ಆಗಾಗ್ಗೆ ಅದರ ಸರ್ವೀಸಿನಲ್ಲಿಯೂ ವ್ಯತ್ಯಯ (outage) ಉಂಟಾಗುತ್ತದೆ. ಹಾಗಾದಾಗ, ಜನರಿಗೆ ಇ-ಮೇಲ್ ಬಳಸಲಾಗದೆ ತೊಂದರೆಯಾಗುತ್ತದೆ. ಅವರ ಬಳಕೆಗೆ ತಕ್ಕಂತೆ ಈ ವ್ಯತ್ಯಯದಿಂದ ಅಪಾಯ ಉಂಟಾಗುತ್ತದೆ.

ಈ ರೀತಿ ವ್ಯತ್ಯಯ ಅಥವಾ ಔಟೇಜ್ ಆದಾಗ, ಕಂಪನಿಯ, ಆಯಾ ಪ್ರಾಡಕ್ಟಿನ, ಆಯಾ ಅಪ್ಲಿಕೇಶನ್‌ಗೆ ಸಂಬಂಧಿಸಿದ ಅತಿರಥ-ಮಹಾರಥರೆಲ್ಲ ಒಂದು ಕಾನ್‌ಫ಼ರೆನ್ಸ್‌ಕಾಲ್ ಅಥವಾ ವಾರ್‌ರೂಮಿನಲ್ಲಿ ಸೇರಿಕೊಂಡು ಅದರ ಬಗ್ಗೆ ಸುಧೀರ್ಘವಾದ ಚರ್ಚೆ ನಡೆಸುತ್ತಾರೆ. ಇಂತಹ ಔಟೇಜ್ ಆದಾಗ, ಮೊದಲ ಆದ್ಯತೆಯನ್ನು, ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ, ವ್ಯತ್ಯಯಗೊಂಡ ಸರ್ವೀಸ್‌ ಅನ್ನು ಪುನಃ ಸ್ಥಾಪನೆ (restore) ಅಥವಾ ಪೂರ್ವ ಸ್ಥಿತಿಗೆ ಹಿಂತಿರುಗಿಸುವ ಪ್ರಯತ್ನಕ್ಕೆ ಕೊಡಲಾಗುತ್ತದೆ. ನಂತರ ಉಳಿದೆಲ್ಲ ವಿಚಾರಗಳು.

ಒಮ್ಮೆ ವ್ಯತ್ಯಯಗೊಂಡ ಸರ್ವೀಸುಗಳು ಪುನಃ ಸ್ಥಾಪನೆಯಾದ ನಂತರ ತೊಂದರೆಗಳು ಮುಗಿದವು ಎಂದರ್ಥವಲ್ಲ.  ಆ ಔಟೇಜ್ ಸಂಬಂಧಿ ಮೀಟಿಂಗ್ ಮತ್ತೊಂದು ರೂಪಾಂತರವನ್ನು ಪಡೆದುಕೊಳ್ಳುತ್ತದೆ ಅಷ್ಟೇ!

ಈ ಸಂದರ್ಭದಲ್ಲಿ ಬರುವ ಪ್ರಶ್ನೆಗಳು:

- ಏನಾಯ್ತು?

- ಯಾರಿಂದ?

- ಏಕೆ?

- ಏನು ಮಾಡಿದರೆ ಇದು ಸರಿ ಹೋಗುತ್ತದೆ?

- ಯಾರು ಸರ್ವೀಸುಗಳನ್ನು ರಿಸ್ಟೋರ್ ಮಾಡುತ್ತಾರೆ?

- ಇದೆಲ್ಲದರ ಮೂಲಕಾರಣ (rootcause) ಏನು?

- ಈ ರೀತಿ ಇನ್ನೊಮ್ಮೆ ಆಗದಿರಲು ಏನು ಮಾಡಬೇಕು? ಅದಕ್ಕೆಷ್ಟು ದುಡ್ಡು ಖರ್ಚಾಗುತ್ತದೆ, ಯಾವಾಗ ಸರಿಪಡಿಸಬಹುದು?

- ಈ ವ್ಯತ್ಯಯದಿಂದ ಎಷ್ಟು ಜನರಿಗೆ ತೊಂದರೆಯಾಯಿತು? ಇದರಿಂದ ಕಂಪನಿಗೆ ನಷ್ಟವಾಗಿದ್ದರೆ, ಎಷ್ಟು ನಷ್ಟವಾಯಿತು?

- ಈ ವ್ಯತ್ಯಯದ ಹಿಂದೆ ಯಾರ ಕೈವಾಡ, ಕೈಚಳಕ ಇದೆ?

- ಹಿಂದಿನ ದಿನದ ನಮ್ಮ ಎಲ್ಲ ಚೇಂಜ್ ಕಂಟ್ರೋಲುಗಳು ಸರಿಯಾಗಿಯೇ ಮುಗಿದವು ತಾನೆ?

- ಈ ಸಮಸ್ಯೆಯ ಮೂಲಕಾರಣ ನಮ್ಮ ಕೈಯಲ್ಲಿತ್ತೋ? ಅಥವಾ ನಮ್ಮ ಹತೋಟಿಯ ಹೊರಗೋ?

ಹೀಗೆ ಅನೇಕ ಪ್ರಶ್ನೆಗಳು ಪುಂಖಾನುಪುಂಖವಾಗಿ ಹೊರಬರುತ್ತಲೇ ಇರುತ್ತವೆ. ಈ ಪ್ರಶ್ನೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ಉತ್ತರಗಳು, ಒಂದೊಂದು ತಲೆಯಿಂದ ಮತ್ತೊಂದು ತಲೆಗೆ, ಒಂದು ಹಂತದಿಂದ ಮತ್ತೊಂದು ನೆಲೆಗೆ ಬದಲಾವಣೆ ಹೊಂದುತ್ತಲೇ ಇರುತ್ತವೆ.

ಆಳವಿದ್ದಷ್ಟು ಅಬ್ಬರ ಕಡಿಮೆ ಎನ್ನುವ ಹಾಗೆ ದೊಡ್ಡ ಎಕ್ಸಿಕ್ಯೂಟಿವ್‌ಗಳು ಸ್ಥಿತಪ್ರಜ್ಞರಂತೆ ಗಂಭೀರವದನರಾಗಿ, ಆಳವಾದ ಪ್ರಶ್ನೆಗಳನ್ನು ಕೇಳಿದರೆ, ಸಾಮಾನ್ಯ ಕೆಲಸಗಾರರ ಮಟ್ಟದಲ್ಲಿ, ಅವರ ತುಮುಲಗಳೇ ಬೇರೆ! ಕೆಲಸಗಾರರು, ನಿಮ್ಮ ಪ್ರಶ್ನೆಗಳು ಆಮೇಲಿರಲಿ ನಮಗೆ ಸದ್ಯದ ವಾತಾವರಣದಲ್ಲಿ ಸರ್ವೀಸುಗಳನ್ನು ಪುನಃಸ್ಥಾಪಿಸಲು ಅವಕಾಶ ಕೊಡಿ ಎಂದು ಆರ್ತರಾಗಿ ಕೇಳಿಕೊಂಡರೆ, ಎಕ್ಸಿಕ್ಯೂಟಿವ್‌ಗಳು ತಮ್ಮ ಮೇಲ್ವರ್ಗದವರಿಗೆ ರಿಯಲ್ ಟೈಮ್‌ನಲ್ಲಿ ಅಪ್‌ಡೇಟ್ ಕೊಡುವ ಧಾಟಿಯಲ್ಲಿ, ಪ್ರಶ್ನೆಗಳನ್ನು ಹಾಕುತ್ತಲೇ ಇರುತ್ತಾರೆ - ಅವರವರ ಭಾವ, ಭಕ್ತಿ ಮತ್ತು ನೆಲೆಗೆ ತಕ್ಕಂತೆ!

***

ವಿಶ್ವದ ಯಾವುದೇ ಜ್ಞಾನದ ಆರಂಭವೂ ಪ್ರಶ್ನೆಗಳಿಂದಲೇ ಆಗಿರಬೇಕು! ಪ್ರಶ್ನೆಗಳನ್ನು- ಜಿಜ್ಞಾಸೆ, ಅನುಮಾನ, ಸಂದೇಹ, ಆಕ್ಷೇಪಣೆ, ತೊಡಕು, ಶೋಧನೆ, ಅವಲೋಕನ, ಅರಸು (ಹುಡುಕು), ಕೇಳು, ಪರೀಕ್ಷಿಸು, ತಾಳೆ ಮಾಡಿ ನೋಡು - ಇತ್ಯಾದಿ ಸಮಾನಾರ್ಥಕ ಪದಗಳಲ್ಲಿ ಕೇಳಿಕೊಳ್ಳಬಹುದಾದರೆ, ಇವೆಲ್ಲಕ್ಕೂ ಸಂಕೀರ್ಣವಾಗಿ ಹುಟ್ಟುವ ಉತ್ತರಗಳಿಗೆ ಅಷ್ಟೊಂದು ಸಮಾನಾರ್ಥಕ ಪದಗಳಿಲ್ಲದಿರುವುದು ವಿಶೇಷ.

ನಾವು ನಮ್ಮನ್ನು ಕೇಳಿಕೊಂಡು (ಅಂತರಂಗಿಕವಾಗಿ, ಆಂತರ್ಯದಲ್ಲಿ) ಬೆಳೆಯುವ ಪ್ರಶ್ನೆಗಳು ನಮ್ಮನ್ನು ತಿಳುವಳಿಕೆಯುಳ್ಳವರನ್ನಾಗಿಯೂ ಮಾಡಬಹುದು. ಅದೇ ಒಂದು ಹಂತದಲ್ಲಿ ಹೆಚ್ಚಾದರೆ, ನಾವು ಹುಚ್ಚರಾಗಲೂ ಬಹುದು. ಆದರೆ, ಕುತೂಹಲ ತೀರಲೇ ಬೇಕು ಎನ್ನುವ ದಾಹಕ್ಕೆ ಪ್ರಶ್ನೆಗಳೇ ಮುಖ್ಯ. ನಾವು ಮಕ್ಕಳಿದ್ದಾಗ ಕೇಳಿದಷ್ಟು ಪ್ರಶ್ನೆಗಳನ್ನು ದೊಡ್ಡವರಾದ ಮೇಲೆ ಕೇಳುವುದು ಕಡಿಮೆಯಾಗುತ್ತದೆ ಎನ್ನಬಹುದು. ಜೊತೆಗೆ, ಹೆಚ್ಚಿನ (ಗುಣಮಟ್ಟದ) ಪ್ರಶ್ನೆಗಳನ್ನು ಕೇಳುವವರು - ನಮ್ಮ ಸಮಾಜದಲ್ಲಿ, ನಮ್ಮ ಆಫ಼ೀಸುಗಳಲ್ಲಿ ಮೇಲೆ ಮೇಲೆ ಮುಂಬಡ್ತಿಯನ್ನು ಪಡೆಯುವುದನ್ನೂ ನಾವು ಗಮನಿಸಬಹುದು.

ಒಟ್ಟಿನಲ್ಲಿ, ನಾವು ಕೇಳುವ, ಕೇಳಿಕೊಳ್ಳುವ, ಕೇಳಬಹುದಾದ ಪ್ರಶ್ನೆಗಳು, ನಮಗೆ ತಕ್ಕ ಇತಿ-ಮಿತಿ, ನೆಲೆ, ಸ್ಥಾನವನ್ನು ಕೊಡಿಸಬಲ್ಲವು, ಹಾಗೂ ನಮ್ಮನ್ನು ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಕೊಂಡೊಯ್ಯಬಲ್ಲವು.

ಹಾಗಂತ, ದಿನಬೆಳಗಾದರೆ, ಟಿವಿ ರಿಪೋರ್ಟರುಗಳು, ಟಿವಿಯಲ್ಲಿ ಕಂಡು ಬರುವ ಮಹಾನುಭಾವರೆಲ್ಲ ಯಾವಾಗಲೂ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಇವರುಗಳು, ಪ್ರಶ್ನೆ ಕೇಳುವ ಕಾಯಕದವರೇ ವಿನಾ ಅದರಿಂದ ಮಹಲನ್ನು ಕಟ್ಟುವವರಂತೂ ಅಲ್ಲ! ಆಸ್ಪತ್ರೆಯಲ್ಲಿ ಕೆಲಸ ಮಾಡುವ ಎಲ್ಲರೂ ಖಾಯಿಲೆಯಿಂದ ವಿಮುಕ್ತಿ ಪಡೆಯುತ್ತಾರೆಯೇ? ಹಾಗೇ ನ್ಯಾಯಾಲಯಗಳಲ್ಲಿ ಕೆಲಸ ಮಾಡುವ ಎಲ್ಲರಿಗೂ ನ್ಯಾಯ ಸಿಗುತ್ತದೆಯೇ?

***

ನಾವು ಏಕೆ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು? ಕೇಳಬೇಕು? ಯಾವ ಸಮಯದಲ್ಲಿ ಯಾರಿಗೆ ಎಂತಹ ಪ್ರಶ್ನೆಗಳನ್ನು ಕೇಳಬೇಕು? ನಮ್ಮ ಪ್ರಶ್ನೆಗಳು, ಅಂದರೆ, ನಾವು ಕೇಳುವ ಪ್ರಶ್ನೆಗಳಿಂದ ನಮ್ಮ ಉದ್ದಾರವೋ? ಅಥವಾ ನಮಗೆ ಕೇಳಿದ ಪ್ರಶ್ನೆಗಳಿಗೆ, ನಾವು ನೀಡಿದ ಉತ್ತರಗಳ ಆಧಾರದ ಮೇಲೆ ನಮ್ಮ ಪ್ರಗತಿಯೋ? ನಾವು ಜೀವನದುದ್ದಕ್ಕೂ ಪ್ರಶ್ನೆಗಳನ್ನು ಹೆಚ್ಚು ಕೇಳುತ್ತೇವೆಯೋ ಅಥವಾ ಉತ್ತರಗಳನ್ನು ಕಂಡುಕೊಳ್ಳುತ್ತೇವೆಯೋ? ನಮ್ಮ ಪ್ರತಿಯೊಂದು ಆಯ್ಕೆಗಳು, ನಮ್ಮನ್ನು ಕಾಡುವ ಪ್ರಶ್ನೆಗಳಿಂದಲೋ, ಅಥವಾ ಅವುಗಳನ್ನು ಹೊಂದಿಕೊಂಡು ಬರುವ ಉತ್ತರಗಳಿಂದಲೋ? ಈ ಪ್ರಪಂಚದಲ್ಲಿ ಪ್ರಶ್ನೆಗಳೇ ಇರದಿದ್ದರೆ, ಹೇಗಿರುತ್ತಿತ್ತು? ಪ್ರಾಣಿ-ಪಕ್ಷಿಗಳ ಮನದಲ್ಲಿ ಏನೇನು ಪ್ರಶ್ನೆಗಳಿರಬಹುದು?

Source: Copilot generated image

ಅಬ್ಬಬ್ಬಾ! ಹೀಗೆ ಪ್ರಶ್ನೆಗಳು ಅಂದುಕೊಂಡಾಕ್ಷಣ ಮತ್ತಿನ್ನಷ್ಟು ಪ್ರಶ್ನೆಗಳು ಒಂದರ ಹಿಂದೆ ಒಂದು ಬರತೊಡಗುತ್ತವೆ. ಆದರೆ, ಪ್ರಶ್ನೆಗಳು ಬಂದಷ್ಟು ಸಹಜವಾಗಿ, ತೀವ್ರವಾಗಿ, ಹಾಗೂ ತ್ವರಿತಗತಿಯಿಂದ ಉತ್ತರಗಳು ಬಾರವು. ಒಂದೇ ಪ್ರಶ್ನೆಗೆ, ಕಾಲ-ದೇಶಕ್ಕೆ ಅನುಗುಣವಾಗಿ, ಅನೇಕ ಸರಿಯುತ್ತರಗಳು ಇರಬಹುದು. ಕ್ಷಿಪ್ರವಾದ ಪ್ರಶ್ನೆಗಳಿಗೆ ಶೀಘ್ರವಾದ ಉತ್ತರಗಳೇ ಇರಬೇಕು ಎಂದೇನಿಲ್ಲವಲ್ಲ! ಒಂದೇ ಪ್ರಶ್ನೆಗೆ ಮಕ್ಕಳಿಂದ ಮುದುಕರವರೆಗೆ ಅನೇಕ ಅನೇಕ ಉತ್ತರಗಳು!

ಉದಾಹರಣೆಗೆ, "ನಾನು ಯಾರು? ಅಥವಾ ನೀನು ಯಾರು?" ಎಂಬ ಸುಲಭವಾದ ಪ್ರಶ್ನೆಗೆ ಉತ್ತರಿಸಿಕೊಂಡು ಬನ್ನಿ. ನಿಮ್ಮ ತಲೆ, ಬೇತಾಳನು ಕೊಟ್ಟ ಎಚ್ಚರಿಕೆಯ ಮಾತಿನಂತೆ, ನೂರು ಹೋಳಾಗದಿದ್ದರೆ ಸಾಕು!

***

ನನ್ನ ಪ್ರಕಾರ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯಲ್ಲಿ ಪ್ರಶ್ನೆಗಳನ್ನು ಕೇಳುವವರು ಹೆಚ್ಚು. ನಾವು ಎಷ್ಟೋ ಬಾರಿ ಯಾರೋ ಪ್ರಶ್ನೆಗಳನ್ನು ಕೇಳುತ್ತಿದ್ದರೆ, ನಮ್ಮ ಅನುಭವಕ್ಕೆ ತಕ್ಕಂತೆ ಅದನ್ನು ಒಂದು ಪರಿಧಿಯಲ್ಲಿ ಇಟ್ಟು, ಅದಕ್ಕೆ ತಕ್ಕನಾದ ಉತ್ತರವನ್ನು ಕೊಡುತ್ತೇವೆ.

Can you tell me about yourself? ಎನ್ನುವ ಪ್ರಶ್ನೆಯನ್ನು ಒಂದು ಕೆಲಸದ ಸಂದರ್ಶನದಲ್ಲಿ ಕೇಳಿದರೆ, ನಿಮಗೆ ಯಾವ ಉತ್ತರ ಸಿಗಬಹುದೋ, ಅದೇ ಪ್ರಶ್ನೆಗೆ ಮತ್ತೊಂದು ನೆಲೆಯಲ್ಲಿ ಇನ್ನೊಂದು ಉತ್ತರ ಸಿಗಬಹುದು. ನಾವು   ನಮಗೆ ಸಿಗಬಹುದಾದ ಮಾಹಿತಿಯ ಮೇಲೆ ನಮ್ಮ ಉತ್ತರಗಳನ್ನು ಕಂಡುಕೊಳ್ಳುವುದು ಇನ್ನೊಂದು ಅಲಿಖಿತ ನಿಯಮ. ಉದಾಹರಣೆಗೆ, ಈ ಭೂಮಿ ಚಪ್ಪಟೆಯಾಗಿದೆಯೋ? ಗುಂಡಾಗಿದೆಯೋ? ಎನ್ನುವ ಪ್ರಶ್ನೆಗೆ ಉತ್ತರವನ್ನು, ನಾವು ಒಂದು ಗುಹೆಯ ಮಾನವರಾಗಿ ಚಿತ್ರಿಸಿಕೊಳ್ಳುವುದಕ್ಕೂ, ಒಬ್ಬ ಬಾಹ್ಯಾಕಾಶ ಸಂಶೋಧಕನಾಗಿ ನೋಡುವುದಕ್ಕೂ ವ್ಯತ್ಯಾಸವಿದೆ. ಹಾಗಂತ, ಯಾರು ಸರಿ ಯಾರು ತಪ್ಪು ಎನ್ನಲು ಸಾಧ್ಯವೇ?  ನಮ್ಮ ಮನೆ ಅಂಗಳದಿಂದ ಚಂದ್ರನ ದರ್ಶನವಾಗುತ್ತದೆ, ಆದರೆ, ನಾನು ನ್ಯೂ ಯಾರ್ಕ್‌ನಲ್ಲಿದ್ದುಕೊಂಡು ಲಾಸ್ ಎಂಜಲೀಸ್ ನೋಡಲು ಸಾಧ್ಯವಾಗದ್ದರಿಂದ, ನಮ್ಮ ಮನೆಗೆ ಚಂದ್ರ ಅತಿ ಸಮೀಪದಲ್ಲಿದ್ದಾನೆ ಎಂದುಕೊಳ್ಳುವುದರಲ್ಲಿ (ಆಯಾ ಸಂದರ್ಭಕ್ಕೆ ತಕ್ಕಂತೆ) ತಪ್ಪೇನೂ ಇಲ್ಲವಲ್ಲ?

ನಾವು ಹಾಕಿಕೊಳ್ಳುವ ಪ್ರಶ್ನೆಗಳೇ ನಮ್ಮನ್ನು ಉಳಿಸುವವು, ಬೆಳೆಸುವವು - ಎನ್ನುವುದು ಈ ಹೊತ್ತಿನ ತತ್ವ! ಅವರವರ ಶಕ್ತ್ಯಾನುಸಾರ ಎಲ್ಲರೂ ಪ್ರಶ್ನೆಗಳನ್ನು ಕೇಳುವಲ್ಲಿ ಶಕ್ಯರೇ! ಹಾಗಂತ, ಯಾರೂ ಇಲ್ಲಿ ಪ್ರಶ್ನಾತೀತರಲ್ಲ ಮತ್ತು ಪ್ರತಿಯೊಂದು ಪ್ರಶ್ನೆಗೆ ಉತ್ತರವಿರಬೇಕು ಎಂದೇನೂ ಇಲ್ಲ. ಈ ಪ್ರಶ್ನೆ-ಉತ್ತರಗಳ ಕಣ್ಣು-ಮುಚ್ಚಾಲೆಯ ಆಟದಲ್ಲಿ ಹೀಗೆ ಬಂದು ಹಾಗೆ ಹೋಗುವುದೇ ಜೀವನ. ಸಮರಸವೇ ಜೀವನವೆನ್ನುವುದಕ್ಕಿಂತ, ಪ್ರಶ್ನೆಗಳೇ ಜೀವನದ ಜೀವಾಳ ಎನ್ನೋಣವೇ?!