Saturday, February 10, 2024

3 ಪ್ರಶ್ನೆಗಳನ್ನುತ್ತರಿಸಿ, ನಿವೃತ್ತರಾಗಿ!

ಇದೇನಪ್ಪಾ, ಇತ್ತೀಚೆಗಷ್ಟೇ ಟೆಕ್ನಾಲಜಿ ಜ್ವರದಲ್ಲಿ ಬೆಂದು ಬಳಲಾಡುತ್ತಿರುವ ನಮ್ಮಂಥವರಿಗೆ ದಿಢೀರನೇ ನಿವೃತ್ತಿಯ ಬಗ್ಗೆ ಕಿವಿಮಾತೇ ಎಂದು ಹುಬ್ಬೇರಿಸಬೇಡಿ, ಮುಂದೆ ಓದಿ ನೋಡಿ. ಇತ್ತೀಚೆಗೆ ಒಂದಿಷ್ಟು ಕಮ್ಮ್ಯೂನಿಟಿ ಸೇವೆಯ ಹೆಸರಿನಲ್ಲಿ ನನಗೆ ಸೀನಿಯರ್ ಸಿಟಿಜನ್‌ಗಳ ಸೇವೆ ಮಾಡೋ ಭಾಗ್ಯ ಒದಗಿತ್ತು, ಈ ಸಂದರ್ಭದಲ್ಲಿ ಕಮ್ಯೂನಿಟಿ ಸೇವೆ ಮಾಡುತ್ತಲೇ ನಾನು ಮುಂದೆ ನಿವೃತ್ತನಾಗಿ ಇದೇ ಅವಸ್ಥೆಗೆ ಬಂದರೆ ಹೇಗಿರಬಹುದು ಎಂದು ಯೋಚಿಸಿ ಸ್ವಲ್ಪ ರಿಸರ್ಚ್ ಮಾಡಿ ನೋಡಲಾಗಿ ಹಲವಾರು ಅಂಶಗಳು ಹೊರಬಂದವು, ಅವುಗಳಲ್ಲಿ ಕೆಲವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ.

ಈ ಎಕಾನಮಿಯಲ್ಲಿ ನಿವೃತ್ತರಾಗೋ ಮಾತೇ ಬರೋದಿಲ್ಲ, ಆ ಮಾತು ಬಿಡಿ. ಮುಂದೆಯಾದರೂ ಸುಧಾರಿಸೀತು, ಇಲ್ಲವೆಂದಾದರೆ ನಮ್ಮಂಥವರ ಕಷ್ಟ ಯಾರಿಗೂ ಬೇಡ. ಎಷ್ಟೋ ಜನ ರಿಟೈರ್‌ಮೆಂಟ್ ಬದುಕಿಗೆ ಪ್ಲಾನ್ ಮಾಡೋದೇ ಇಲ್ಲ. ರಿಟೈರ್‌ಮೆಂಟ್ ಬದುಕಿನಲ್ಲಿ ಹಣ, ಹೊಣೆ ಎಷ್ಟು ಮುಖ್ಯವೋ ಅಷ್ಟೇ ಆರೋಗ್ಯವೂ ಮುಖ್ಯ. ಆರೋಗ್ಯದ ಜೊತೆಗೆ ಇಷ್ಟೆಲ್ಲ ದಿನಗಳಲ್ಲಿ ವ್ಯಸ್ತರಾಗಿ ಕೆಲಸ ಮಾಡಿ ಕರ್ಮಜೀವನವನ್ನು ತೇಯ್ದ ನಮಗೆ ಮುಂದೆ ಕಾಲ ಕಳೆಯೋದಕ್ಕೆ ಏನು ಬೇಕು ಏನು ಬೇಡ ಅನ್ನೋದರ ತೀರ್ಮಾನವೂ ಬಹಳ ಮುಖ್ಯ.  ಹಣವನ್ನಾದರೂ ಉಳಿಸಬಹುದು, ಗಳಿಸಬಹುದು, ಬೆಳೆಸಬಹುದು. ಆದರೆ, ಒಮ್ಮೆ ಹದಗೆಟ್ಟ ಆರೋಗ್ಯವನ್ನು ಹದ್ದುಬಸ್ತಿಗೆ ತರುವುದು ಭಗೀರಥ ಪ್ರಯತ್ನವೇ ಆಗಬಹುದು. ಎಲ್ಲಕ್ಕಿಂತ ಮುಖ್ಯ ಕೈಕಾಲು ಗಟ್ಟಿ ಇರಬೇಕು, ದೃಢವಾದ ಮನಸ್ಸಿಗೆ ಬೆಂಬಲ ನೀಡುವ ತಕ್ಕ ಮಟ್ಟಿನ ಶರೀರ ಬೇಕೇ ಬೇಕು. ಇದ್ದಕ್ಕಾಗಿ ಒಂದಿಷ್ಟು ಕಾಲ ವ್ಯಾಯಾಮ, ಯೋಗ, ಮೊದಲಾದ ದೈಹಿಕ ದಂಡನೆ ಜೊತೆ ಜೊತೆಗೆ ಮಾನಸಿಕ ಸ್ಥಿತಿಯ ಸ್ಥಿಮಿತಕ್ಕೆ ಧ್ಯಾನವೂ ಬೇಕಾಗುತ್ತದೆ.

***

ಸರಿ, ಈಗ ಮುತ್ತಿನಂತಹ ಮೂರು ಪ್ರಶ್ನೆಗಳಿಗೆ ಬರೋಣ:

೧. ಯಾವ ವಯಸ್ಸಿನಲ್ಲಿ ನಿವೃತ್ತರಾಗುತ್ತೀರಿ ಹಾಗೂ ನಿಮಗೆ ಬೇಕಾದ ಹಣದ ಮೊತ್ತವೆಷ್ಟು?

೨. ರಿಟೈರ್ ಆದ ನಂತರ ಹೇಗೆ ಸಮಯವನ್ನು ವ್ಯಯಿಸುತ್ತೀರಿ, ಯಾವ ಯಾವ ಹವ್ಯಾಸಗಳನ್ನು ಉಳಿಸಿಕೊಳ್ಳುತ್ತೀರಿ, ಬೆಳೆಸಿಕೊಳ್ಳುತ್ತೀರಿ?

೩. ನಿಮ್ಮ ಕಾಲಾನಂತರ ಯಾರು ಯಾರಿಗೆ ಏನನ್ನು ಬಿಟ್ಟು ಹೋಗುತ್ತೀರಿ?

ಈ ಮೂರು ಪ್ರಶ್ನೆಗಳನ್ನು ವಿಸ್ತರಿಸುವುದಕ್ಕೆ ಮೊದಲು "ILI ಪಾಷಾಣ"ಗಳ ವಿಷಯಕ್ಕೆ ಬರೋಣ. ಏನು, ಇಲಿ ಪಾಷಾಣ ಇದು?! ಎಂದು ಬೆರಗಾದಿರೋ, ಸುಲಭವಾಗಿ ನೆನಪಿಗೆ ಬರುವಂತೆ ಸುಮ್ಮನೆ ಒಂದು ಉಪಮೆಯ ಸೃಷ್ಟಿ ಅಷ್ಟೇ:

I: Investment risk

L: Longevity risk

I: Inflation risk

ಈ ಮೇಲೆ ಹೇಳಿದ ಮೂರು ರಿಸ್ಕ್‌ಗಳೇ ಪಾಷಾಣವಿದ್ದ ಹಾಗೆ. ಪ್ರತಿಯೊಬ್ಬರೂ ತಾವು ನಿವೃತ್ತರಾಗಲು ತಯಾರಾಗುತ್ತ ಇದ್ದ ಹಾಗೆ, ಇಪ್ಪತ್ತರ ಹರೆಯದಿಂದ ಎಪ್ಪತ್ತರವರೆಗೆ ಈ ಮೂರು ರಿಸ್ಕ್‌ಗಳ ಬಗ್ಗೆ ನಿರಂತರವಾಗಿ ಯೋಚಿಸುತ್ತಲೇ ಇರಬೇಕಾಗುತ್ತದೆ. Investment risk ನಲ್ಲಿ ನೀವು ಹೂಡಿದ ಹಣ ನೀವು ರಿಟೈರ್ ಆಗುವ ಹೊತ್ತಿಗೆ ಯಾವುದೋ ಒಂದು ರಿಸೆಷ್ಷನ್ನೋ ಇಲ್ಲಾ ಡಿಪ್ರೆಷ್ಷನ್ನ್ ಚಕ್ರದಲ್ಲಿ ಸಿಕ್ಕು ನರಳುತ್ತಿರಬಹುದು. Longevity risk ಅಂದರೆ ನೀವು ಎಂಭತ್ತು ವರ್ಷ ಬದುಕುತ್ತೀರಿ ಎಂದು ಅದಕ್ಕೆ ತಕ್ಕಂತೆ ಹಣ ಹೂಡಿ ಕೂಡಿ ಹಾಕಿ ಮುಂದೆ ಇಳಿ ವಯಸ್ಸಿನಲ್ಲಿ ನೀವು ತೊಂಭತ್ತು ಆದರೂ ಗೊಟಕ್ ಎನ್ನದೇ ಇರಬಹುದು. Inflation risk ನಲ್ಲಿ ಈಗ ಎರಡು ರುಪಾಯಿ ಅಥವಾ ಡಾಲರ್‌ಗೆ ಸಿಗಬಹುದಾದ ಪದಾರ್ಥ ಮುಂದೆ ಇಪ್ಪತ್ತು ರುಪಾಯಿ ಅಥವಾ ಇಪ್ಪತ್ತು ಡಾಲರ್  ಗಿಂತಲೂ ದುಬಾರಿಯಾಗಬಹುದು.

ಮೊದಲನೆಯ ಪ್ರಶ್ನೆ: ಹೂಡಿಕೆಯ ಹಣಕ್ಕೆ ಅಂಟಿಕೊಂಡ ತೊಂದರೆಗಳು ಯಾವು ಯಾವು? ಇಂಟರ್‌ನೆಟ್ ನಲ್ಲಿ ಹುಡುಕಿದರೆ ಬೇಕಾದಷ್ಟು ರಿಟೈರ್‌ಮೆಂಟ್ ಕ್ಯಾಲ್ಕುಲೇಟರುಗಳು ಸಿಗುತ್ತವೆ, ನಿಮ್ಮ ಈಗಿನ ಆದಾಯ ಹಾಗೂ ಖರ್ಚುಗಳನ್ನು ಗಮನದಲ್ಲಿಟ್ಟುಕೊಂಡು ನಿವೃತ್ತ ಜೀವನಕ್ಕೆ ಎಷ್ಟು ಬೇಕು ಎಂದು ಅಂದಾಜು ಹಾಕುವುದಕ್ಕೆ. ಅಲ್ಲದೇ, ನಿವೃತ್ತ ಜೀವನದ ಪ್ರತಿವರ್ಷದ ಖರ್ಚಿಗೆ ಎಷ್ಟು ಬೇಕಾಗುತ್ತದೆ ಎನ್ನುವುದರ ಜೊತೆಗೆ ಇಂತಿಷ್ಟು ಹಣದಲ್ಲಿ ಕೇವಲ 4 ಅಥವಾ 5% ಹಣವನ್ನು ಮಾತ್ರ ತೆಗೆಯುವಂತೆ ಬೇಕಾಗುವ ಇಡುಗಂಟನ್ನು ರೂಪಿಸುವ ತಯಾರಿ ಹಾಗು 5% ನ ಮಿತಿಯಲ್ಲಿರುವಂತೆ ಒಂದು ಮೂಲಮಂತ್ರವನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.

ಎರಡನೆಯ ಪ್ರಶ್ನೆ: ಸರಿ, ಕಷ್ಟದ ಜೀವನವನ್ನು ಸವೆಸಿ ನಿವೃತ್ತರೇನೋ ಆದಿರಿ, ಮುಂದೆ ಏನು? ದಿನಾ ಕೆಲಸ ಕೆಲಸ ಎಂದು ಗೋಗರೆದು ಹತ್ತಿರ ಬಂದ ಹವ್ಯಾಸಗಳು, ಅವಕಾಶಗಳು ಹಾಗೂ ಕನಸುಗಳನ್ನೆಲ್ಲ ದೂರ ತಳ್ಳಿಕೊಂಡು ಮೂರು ನಾಲ್ಕು ದಶಗಳನ್ನು ದೂರ ತಳ್ಳಿದ ನಂತರ ಒಂದು ದಿನ ದಿಢೀರ್ ಎಂದು ಹಳೆಯ ಹವ್ಯಾಸಗಳಿಗೆ ಅಂಟಿಕೊಳ್ಳುತ್ತೇನೆ ಎನ್ನುವುದು ಹುಡುಗಾಟಿಕೆಯೇ ಸರಿ. ಎಲ್ಲದಕ್ಕಿಂತ ಮುಖ್ಯ ಆರೋಗ್ಯ, ದೇಹಸ್ಥಿತಿ ನೆಟ್ಟಗಿರಬೇಕು. ಓದುವುದಕ್ಕೆ, ಬರೆಯುವುದಕ್ಕೆ, ತಿರುಗಾಡುವುದಕ್ಕೆ, ಆಡುವುದಕ್ಕೆ ಸಮಯ ಒಂದಿದ್ದರೆ ಸಾಲದು - ಹಣ ಬೇಕು ಹಾಗೂ ದೇಹದಲ್ಲಿ ಬಲಬೇಕು ಜೊತೆಗೆ ಎಲ್ಲವೂ ಸುಸ್ಥಿತಿಯಲ್ಲಿರಬೇಕು. ಸುಮ್ಮನೆ ಒಂದು ನಿಮಿಷ ಕಣ್ಣು ಮುಚ್ಚಿ ನೀವು ನಿವೃತ್ತರಾದ ಹಾಗೆ ಊಹಿಸಿಕೊಳ್ಳಿ: ಮನೆ ಇದೆ, ಸಾಲವೆಲ್ಲ ತೀರಿದೆ, ಮಕ್ಕಳು ಒಳ್ಳೆಯ ಸ್ಥಿತಿಯಲ್ಲಿದ್ದಾರೆ, ಸುಂದರವಾದ ಬೇಸಿಗೆಯ ದಿನ, ಊಟ ತಿಂಡಿ ಮನೆ ಕೆಲಸ ಎಲ್ಲವೂ ಆಗಿ ನಿಮ್ಮ ಬಳಿ ಐದರಿಂದ ಎಂಟು ಘಂಟೆ ಖಾಲಿ/ಫ್ರೀ ಇದೆ - ಏನು ಮಾಡುತ್ತೀರಿ? ನಿಮ್ಮ ಸ್ನೇಹಿತರು ಯಾರು, ನಿಮ್ಮ ಹವ್ಯಾಸಗಳೇನು, ನಿಮಗೇನು ಇಷ್ಟ, ನಿಮಗೇನು ಕಷ್ಟ, ನಿಮಗೇನು ಬೇಕು, ಎಲ್ಲಿ ಹೋಗುತ್ತೀರಿ, ಹೇಗೆ ಹೋಗುತ್ತೀರಿ, ಇತ್ಯಾದಿ. ಹೆದರಿಕೆಯಾಯಿತೇ? ಅಥವಾ ಸಂತೋಷವಾಯಿತೇ? ಈ ಒಂದು ನಿಮಿಷದ ನಿವೃತ್ತ ಬದುಕಿನ ಪಯಣದ ಬಗ್ಗೆ ಏನೆನ್ನೆಸಿತು?

ಮೂರನೆಯ ಪ್ರಶ್ನೆ: ಕೆರೆಯ ನೀರನು ಕೆರೆಗೆ ಚೆಲ್ಲಿ ಅಂದೋರು ಈ ಕಾಲದವರಂತೂ ಖಂಡಿತ ಅಲ್ಲ, ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ಎನ್ನೋದೂ ಪೂರ್ತಿ ನಿಜವಲ್ಲ - ಎಂದು ವಾದ ಮಾಡೋ ಸಮಯವಿದಲ್ಲ. ನೀವು ಇಷ್ಟು ವರ್ಷ ಇದ್ದು ಅದೇನೇನೋ ಮಾಡಿ ಹೋಗುವಾಗ ನಿಮ್ಮನ್ನು ಆಧರಿಸಿಕೊಂಡವರಿಗೆ ಸ್ವಲ್ಪವನ್ನೂ ಬಿಟ್ಟು ಹೋಗೋದಿಲ್ಲವೇನು? ಮುಂದೆ ನಿಮ್ಮ ರಿಟೈರ್ ಮೆಂಟ್ ಅಕೌಂಟಿನಲ್ಲಿ ಪ್ರತಿವರ್ಷ 4 ರಿಂದ 5 % ಹಣವನ್ನು ತೆಗೆದು ಜೀವನ ನಡೆಸುತ್ತೀರಲ್ಲ, ನಿಮ್ಮ ನಂತರ ಅದರ ಬಂಡವಾಳ ಅಥವಾ ಮೂಲಧನ ಯಾರಿಗೆ ಸಿಗಬೇಕು? ಅದರಲ್ಲಿ ಟ್ಯಾಕ್ಸ್‌ನ ಪಾಲು ಎಷ್ಟು? ಯಾವ ಯಾವ ಬೆನಿಫಿಷಿಯರಿಗೆ ಎಷ್ಟು ಹಣ/ವರಮಾನ/ಆಸ್ತಿ ಇತ್ಯಾದಿಗಳನ್ನು ಯಾವ ರೂಪದಲ್ಲಿ ಬಿಟ್ಟು ಹೋಗುತ್ತೀರಿ ಎನ್ನುವುದಕ್ಕೂ ಬಹಳ ಯೋಚಿಸಬೇಕಾಗುತ್ತದೆ. ಅದಕ್ಕೆ ತಕ್ಕ ಒಳ್ಳೆಯ ಪ್ಲಾನ್ ಅಥವಾ ಸಿದ್ಧತೆ ಬೇಕಾಗುತ್ತದೆ. ಇದರಿಂದ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ನೋಡಿದರೆ, ಅವರವರ ಉಯಿಲು (ಮರಣ ಶಾಸನ ಪತ್ರ, ಅಥವಾ will) ಇರಬೇಕಾದ ಅಗತ್ಯವಿದೆ.

***

ಈಗೆನ್ನನ್ನಿಸಿತು? ಮೊದಲು ಯಾವುದಾದರು ಒಂದು ಕಮ್ಯೂನಿಟಿ ಸೆಂಟರಿನಲ್ಲಿ ಸೀನಿಯರ್ ಸಿಟಿಜನ್ ಸೇವೆಗೆ ವಾಲೆಂಟಿಯರ್ ಆಗಿ. ನಿಮ್ಮ ನಿವೃತ್ತ ಜೀವನದ ಮುಂಬರುವ ದಿನಗಳನ್ನು ನೀವೇ ತ್ರೀ ಡೀ ಕಲರ್ ಚಿತ್ರಗಳಲ್ಲಿ ನೋಡಿ. ಅವರ ಸ್ಥಾನದಲ್ಲಿ ನಿಮ್ಮನ್ನು ಗುರುತಿಸಿಕೊಂಡು, ಈಗಿನ ಕಾದಾಟ/ಬಡಿದಾಟಗಳನ್ನು ಕಡಿಮೆ ಮಾಡಿ, ಮುಂದಿನ ಜೀವನದ ILI ಪಾಷಾಣದ ಬಗ್ಗೆ ಸ್ವಲ್ಪ ಚಿಂತಿಸಿ.

ನಾನು ಯಾವಾಗಲೂ ಬರೆಯೋ ಹಾಗೆ ಅಥವಾ ಹೇಳೋ ಹಾಗೆ ಬದುಕು ಬಹಳ ದೊಡ್ಡದು - ಮೈ ತುಂಬ ಸುಕ್ಕುಗಳನ್ನು ಕಟ್ಟಿಕೊಂಡು ಹುಟ್ಟಿ ಬಂದ ನಾವು ಸುಕ್ಕು ಸುಕ್ಕಾಗೇ ಸಾಯೋದು, ಪ್ರಾಣಿ ಸಂಕುಲದಲ್ಲಿ ಮಾನವರು ಈಗ ತಾನೆ ಹುಟ್ಟಿದ ಅಸಹಾಯಕ ಮಕ್ಕಳಿಂದ ಹಿಡಿದು ಅಸಹಾಯಕ ವೃದ್ದಾಪ್ಯದ ಅವಸ್ಥೆಯವರೆಗೆ ಅನುಭವಿಸೋದು ಬಹಳಷ್ಟಿದೆ. ಮಿದುಳು ಘಂಟೆಗೆ ನೂರು ಮೈಲಿ ವೇಗದಲ್ಲಿ ಓಡಿದರೂ ಮೈ ಬಗ್ಗೋದಿಲ್ಲ. ಮುವತ್ತರ ನಂತರ ಒಂದೊಂದೇ ಕೀಲುಗಳೂ ಕಿರುಗುಟ್ಟುವುದು ಸಾಮಾನ್ಯ. ಅಟೋಮೊಬೈಲನ್ನು ಆಗಾಗ್ಗೆ ಸರ್ವಿಸ್ ಮಾಡಿಸೋ ಹಾಗೆ ನಮ್ಮ ದೇಹಕ್ಕೂ ನಿರಂತರ ಸರ್ವಿಸ್/ಸೇವೆ ಅಗತ್ಯ. ಮಕ್ಕಳಿಂದ ಮುದುಕರ ಅನೇಕ ಅವಸ್ಥೆಯಲ್ಲಿ ಆಯಾ ಅಗತ್ಯಗಳು ಬೇರೆ ಬೇರೆ. ಧೀರ್ಘ ಆಯುಷ್ಯ ಅನ್ನೋದು ದೊಡ್ಡದು, ಆದರೆ ಅಲ್ಲಿಯವರೆಗೆ ಹೋಗಿ ಸಸ್ಟೈನ್ ಆಗಿ ನೆಮ್ಮದಿಯ ಜೀವನ ನಡೆಸುವುದು ಇನ್ನೂ ದೊಡ್ಡದು!

1 comment:

sunaath said...

ಈ ಮೂರು ಪ್ರಶ್ನೆಗಳಿಗೆ ಉತ್ತರ ಸಿಗುವ ಮೊದಲೇ ನಿವೃತ್ತನಾಗಿಬಿಟ್ಟೆ. ಈಗ?!