Sunday, January 14, 2024

ಸ್ವಾತಿ ಮುತ್ತಿನ ಮಳೆ ಹನಿಯೇ

ನಿನ್ನೆ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರ ನೋಡೋ ಅವಕಾಶ ಸಿಕ್ಕಿತು. ನಿಧಾನವಾಗಿ ಓಡುವ ಸಿನಿಮಾ, ಕೊನೆಯಲ್ಲಿ ದುರಂತದಲ್ಲಿ ಕೊನೆಗೊಳ್ಳುವ ಎಲ್ಲ ಮುನ್ನೆಚ್ಚರಿಕೆಗಳು ಸಿಕ್ಕಿದ್ದರೂ, ರಾಜ್ ಬಿ. ಶೆಟ್ಟಿಯಲ್ಲಿ ಒಬ್ಬ ಸಿನಿಮಾ ಕಥಾವಸ್ತುವನ್ನು ಸೂಕ್ಷ್ಮವಾಗಿ ಹೆಣೆಯುವ ಕಸಬುಗಾರಿಕೆಯ ಬರಹಗಾರನನ್ನು ಗುರುತಿಸುವ ನಾನು, ಒಂದು ಸುಂದರವಾದ ಕಥಾ ಹಂದರವನ್ನು ನಿರೀಕ್ಷೆಯಲ್ಲಿಟ್ಟುಕೊಂಡಿದ್ದೆ. ಆ ನಿರೀಕ್ಷೆ ಹುಸಿಯಾಗದಂತೆ ಆದದ್ದು ಈ ಸಿನಿಮಾದ ಹೆಚ್ಚುಗಾರಿಕೆ ಮತ್ತು ಅದರ ಗೆಲುವು ಕೂಡ.

ಕೋಟ್ಯಾಂತರ ರೂಪಾಯಿಗಳನ್ನು ಸುರಿದು ಒಂದು ಭವ್ಯವಾದ ಕಥನವನ್ನು ಹೆಣೆದು ಮೇಲೆದ್ದು ಬಂದು ಗೆದ್ದ ಚಿತ್ರಗಳು ಎಷ್ಟೋ, ಸೋತವುಗಳು ಕೂಡ ಅಷ್ಟೇ. ಈ ಎಲ್ಲ ವ್ಯಾವಹಾರಿಕ ಚಿತ್ರ ಪ್ರಪಂಚದಲ್ಲಿ ಅದೊಂದು ದುಡಿಮೆಯ ಮೂಲವಾಗಿ ಗೆದ್ದಾಗ ನಿರ್ಮಾತೃಗಳನ್ನು ಎತ್ತಿಕೊಂಡಾಡುವಷ್ಟೇ ಸಹಜವಾಗಿ, ಬಿದ್ದಾಗ ಹಣ ಹಾಕಿದವರು ಎಲ್ಲವನ್ನು ಕಳೆದುಕೊಳ್ಳುವುದು ಮಾಮೂಲು. ಆದರೆ, ಈ ಸಣ್ಣ ಬಜೆಟ್ಟಿನ ಚಿತ್ರಗಳಲ್ಲಿ ಹಾಗಲ್ಲ. ಇಲ್ಲಿ ಸೋಲು-ಗೆಲುವು, ಹಣ ಮಾಡಬೇಕು ಎನ್ನುವುದಕ್ಕಿಂತ ಮುಖ್ಯವಾಗಿ ನಿರ್ಮಾತೃಗಳಿಗೆ, ತಮ್ಮ ಮನದಾಳದಲ್ಲಿ ಸೂಕ್ಷ್ಮವಾಗಿ ಹುಟ್ಟಿ, ಕತೆಯಾಗಿ ಬೆಳೆದ ಕತೆಗಳ ಮುಖೇನ, ಒಂದು ಸಂದೇಶವನ್ನು ಸಾರುವುದು ಅವುಗಳ ಧ್ಯೇಯವಾಗಿರುತ್ತದೆ. ಈ ನಿಟ್ಟಿನಲ್ಲಿ ಯೋಚಿಸಿದಾಗ, ಈ ಚಿತ್ರ, ರಾಜ್ ಶೆಟ್ಟಿ ಅವರ ಮನದ ಮೂಸೆಯಲ್ಲಿ ಕುದಿದ ಬಂಗಾರದಿಂದ ಮಾಡಿದ ಒಂದು ಸುಂದರವಾದ ಆಭರಣದಂತೆ ಕಂಡು ಬರುತ್ತದೆ.

ಈ ಚಿತ್ರದಲ್ಲಿ ಎಲ್ಲವೂ ನಿಧಾನವೇ. ಕಥಾನಾಯಕಿ ಪ್ರೇರಣ, ಅವಳ ನಡೆ-ನುಡಿ, ಆಡಿದರೆ ದುಡ್ಡು ಖರ್ಚಾಗುವುದೇನೋ ಎನ್ನುವಷ್ಟು ಕಡಿಮೆ ಮಾತುಗಳು. ಹಿನ್ನೆಲೆಯಲ್ಲಿ ಒಂದೇ ಒಂದು ಗುಂಗಿನ ಸಂಗೀತ, ಇವೆಲ್ಲವೂ ನಿಮ್ಮ ತಾಳ್ಮೆಯನ್ನು ಪರೀಕ್ಷಿಸಬಲ್ಲದು. ನಮ್ಮ ವೃತ್ತಿ ಜೀವನದ ಏಳು-ಬೀಳುಗಳು ನಮ್ಮನ್ನು ಪ್ರಬುದ್ಧತೆಯ ವಿಭಿನ್ನ ನೆಲೆಗೆ ಕೊಂಡೊಯ್ಯುವ ಹಲವು ಅಂಶಗಳನ್ನು ಅಭಿವ್ಯಕ್ತಪಡಿಸುವಲ್ಲಿ, ನಾಯಕಿಯದ್ದು ಸಹಜವಾದ ಅಭಿನಯ. ತಮ್ಮ ಇಂಟ್ರೋಶಾಟ್ ಒಂದರಲ್ಲಿಯೇ, ’ಬುಲೆಟ್‌ನಲ್ಲಿ ಬಂದ ಪೇಶೆಂಟ್’ ಆಗಿ ರಾಜ್ ಅವರು ಚಿತ್ರದೊಳಗೆ ತಾವೇ ಒಂದಾಗಿ ಹೋಗಿದ್ದಾರೆ ಎನ್ನುವಷ್ಟು ತನ್ಮಯತೆಯನ್ನು ಪ್ರದರ್ಶಿಸಿದ್ದಾರೆ.

ಒಂದು ಮೊಟ್ಟೆಯ ಕಥೆಯಲ್ಲಿ ನೀವು ರಾಜ್ ಅವರನ್ನು ನೋಡಿದ್ದರೆ, ಇಲ್ಲಿ ಮತ್ತೆ ಆ ವ್ಯಕ್ತಿತ್ವವನ್ನು ಸಮತೋಲಿಸಿಕೊಳ್ಳಬಹುದು. ಚಿತ್ರದಲ್ಲಿ ನಾಯಕನ ಹೆಸರೇ, ಅನಿಕೇತ್, ಮನೆ ಇಲ್ಲದವ... ಅದೂ ಕೂಡ ಈ ಸಂದರ್ಭಕ್ಕೆ ಆತನಿಟ್ಟುಕೊಂಡ ಹೆಸರು ಎಂದು ಗೊತ್ತಾಗುತ್ತದೆ.

ಚಿತ್ರದುದ್ದಕ್ಕೂ ಅನೇಕ ರೂಪಕಗಳಿವೆ, ವಿಡಂಬನೆಗಳಿವೆ. ಅವುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಅಷ್ಟೇ. ಕಸದಂತೆ ದಿನವಿಡೀ ಹೂವು ಉದುರಿಸುವ ನಂದಿಬಟ್ಟಲು ಗಿಡ, ಅದರೆ ಬಗ್ಗೆ ನಿಮ್ಮಇರುವ ನಿಮ್ಮ ಮನದೊಳಗಿನ ಪ್ರತಿಮೆಯನ್ನು ಈ ಸಿನಿಮಾ ಬದಲಾಯಿಸಬಲ್ಲದು. ಹಾಗೆಯೇ, ಹಾಲು ಹಾಕದ ಚಹಾ, ಬೀದಿ ನಾಯಿ ಹೇಗೆ ಸಾಯುತ್ತದೆ ಎನ್ನುವುದು, ಒಂದು ಕೊಳ/ಕೆರೆ ದಿನದ ವಿವಿಧ ಸಮಯದಲ್ಲಿ ಹೇಗಿರುತ್ತದೆ ಎನ್ನುವುದರ ಮೂಲಕ ನಿಮ್ಮ ಚಿಂತನಶೀಲತೆಗೆ ಇಲ್ಲಿ ಹಲವಾರು ವಸ್ತುಗಳು ಸಿಗುವುದಂತೂ ನಿಜ. ಎಲ್ಲದಕ್ಕಿಂತ ಮುಖ್ಯವಾಗಿ, ನಮ್ಮ ಬದುಕಿನ ಆಯಾ ಸಂದರ್ಭಕ್ಕೆ ಇರುವ ಕಷ್ಟದ ಸನ್ನಿವೇಶಗಳನ್ನ ವಾಷಿಂಗ್‌ಮೇಷೀನ್‌ನಲ್ಲಿ ಕೊಳೆ ಬಟ್ಟೆಗಳು ತಿರುವುದರ ಮೂಲಕವೂ ಒಂದು ಸಂದೇಶವನ್ನು ಹೇಗೆ ಹೇಳಬಹುದು ಎನ್ನುವುದು ಸಿನಿಮಾವನ್ನು ಹೇಗೆ ಮಾಡಬಹುದು ಎಂದು ಹಲವು ವಿದ್ಯಾರ್ಥಿಗಳಿಗೆ ಒಂದು ಡಾಕ್ಯುಮೆಂಟ್ ಕೂಡ ಆಗಬಲ್ಲದು.

ಸಿನಿಮಾದಲ್ಲಿ ಅಲ್ಲಲ್ಲಿ ಹೆಣ್ಣೆದ ಸಣ್ಣಪುಟ್ಟ ತಿರುವುಗಳು ಊಟಿಯ ಹೊರಾಂಗಣ ಚಿತ್ರೀಕರಣದಷ್ಟೇ ಸಹಜವಾಗಿ ನಿಮ್ಮನ್ನು ಕಾಡುತ್ತವೆ. ಸಿನಿಮಾದ ಎಲ್ಲ ಪಾತ್ರಗಳೂ ನಿಮ್ಮನ್ನು ಚಿಂತನೆಯ ಒರೆಗೆ ಹಚ್ಚುತ್ತವೆ ಎಂದರೆ ತಪ್ಪಾಗಲಾರದು. ಈ ಚಿತ್ರದಲ್ಲಿ ಪಾತ್ರಗಳನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆಯೆಂದರೆ, "ಅವನೇ ಶ್ರೀಮನ್ ನಾರಾಯಣ" ಚಿತ್ರದಲ್ಲಿ ಅಭೀರರ ದೊರೆಯಾಗಿ ಕಠೋರ ಪಾತ್ರದಲ್ಲಿ ಹೆಸರುವಾಸಿಯಾಗಿದ್ದ ಬಾಲಾಜಿ ಮನೋಹರ್, ಈ ಚಿತ್ರದಲ್ಲಿ ಒಂದು ಹಾಸ್‌ಪಿಸ್ ಸೆಂಟರಿನ ಮುಖ್ಯ ಡಾಕ್ಟರ್‌ ಆಗಿ, ಪೇಷಂಟ್‌ಗಳಿಗೆ ಮಾದಕ ದ್ರವ್ಯಗಳ ದಾಸರಾಗುವಂತೆ ಮಾಡದಿರುವುದು ಸರಿ ಎಂಬ ನಿಲುವಿನಿಂದ ತಮ್ಮ ಬಿಗಿ ನಟನೆಯಿಂದ ಅವರಲ್ಲಿನ ಕಲಾವಿದನಿಗೆ ನ್ಯಾಯ ಒದಗಿಸಿದ್ದಾರೆ.

***

ಇತ್ತೀಚಿನ ನೂರು-ಸಾವಿರ ಕೋಟಿ ವ್ಯವಹಾರದ ಉದ್ಯಮದ ಬೆಂಬಲದಲ್ಲಿ ಹುಟ್ಟಿ ಮೂಡಿಬರುವ ಚಿತ್ರಗಳು ತಾಂತ್ರಿಕತೆ, ಸೆಟ್ ಮತ್ತು ವಿಜೃಂಬಣೆಯಲ್ಲಿ ಎಲ್ಲರ ಗಮನ ಸೆಳೆಯಬಲ್ಲವು. ಉದಾಹರಣೆಗೆ, ಕೆಜಿಎಫ಼್ ಚಿತ್ರದಲ್ಲಿ ಉಪಯೋಗಿಸುವ ಸುತ್ತಿಗೆ, ಚೈನು, ಧೂಳು ಮತ್ತಿತರ ವಸ್ತುಗಳು ಒಂದು ವ್ಯವಸ್ಥಿತವಾದ ಕ್ಯಾಮೆರಾ ಕಣ್ಣಿನಲ್ಲಿ ಅದ್ಭುತವಾಗಿ ಹೊರಹೊಮ್ಮ ಬಲ್ಲವು. ಆದರೆ, ಈ ಗ್ರ್ಯಾಂಡ್ ಕಥಾನಾಯಕರಂತೆ ಅದ್ಯಾವ ಅಗಮ್ಯವಾದ ಶಕ್ತಿಯನ್ನೂ ಹೊಂದಿರದ ಒಬ್ಬ ಸಾಮಾನ್ಯ ಮನುಷ್ಯನ ಚಿತ್ರದಲ್ಲಿ ತನ್ಮಯತೆಯನ್ನು ಕಾಣುವ ನಿರೂಪಣೆಯನ್ನು ಮಾಡಿ ನೂರು ನಿಮಿಷಗಳ ಕಮರ್ಶಿಯಲ್ ಸಿನಿಮಾದಲ್ಲೂ ಕಲಾತ್ಮಕತೆಯನ್ನು ಕಾಣುವುದು ಬಹಳ ಕಷ್ಟ.

ನೀವು ತರಾಸು ಅವರ ಕಾದಂಬರಿ ಆಧಾರಿತ "ಬೆಂಕಿಯಬಲೆ" ಸಿನಿಮಾವನ್ನು ನೋಡಿದ್ದರೆ, ಅಲ್ಲಿ ಅನಂತ್‌ನಾಗ್, ಲಕ್ಷ್ಮಿ, ಅಶ್ವಥ್, ತೂಗುದೀಪ ಶ್ರೀನಿವಾಸ್ ಅವರ ಪಾತ್ರಗಳ ಸಂವೇದನಾಶೀಲತೆಯನ್ನು ಅರ್ಥಮಾಡಿಕೊಂಡಿದ್ದರೆ, ರಾಜ್ ಬಿ. ಶೆಟ್ಟಿಯ ಈ ಸಿನಿಮಾ ನಿಮಗೆ ಇಷ್ಟವಾಗುತ್ತದೆ.

ಇದು ನನ್ನ ಅನಿಸಿಕೆ. ಹೆಚ್ಚಿನ ವಿವರಗಳಿಗೆ ಪ್ರಜಾವಾಣಿಯಲ್ಲಿ ಪ್ರಕಟವಾದ ಈ ವಿಮರ್ಶೆಯನ್ನು ನೋಡಿ.

1 comment:

sunaath said...

ಸಿನಿಮಾ ಹೇಗಿರಬೇಕು ಎನ್ನುವುದರ ವಿಮರ್ಶೆ ಕೂಡ ಇಲ್ಲಿ ಬಂದಿದೆ. ಅಭಿನಂದನೆಗಳು.