Thursday, December 31, 2009

ಯಾರೂ ಇದರ ಬಗ್ಗೆ ಏಕೆ ಮಾತನಾಡಲ್ಲ?

ಸದ್ಯ, ಈ ದಿನ ಪ್ರಜಾವಾಣಿ ಮುಖಪುಟ ತೆರೆದು ನೋಡ್ತಾಗ ಮೃತ್ಯುದೇವತೆ ಕನ್ನಡದ ಅಭಿಮಾನಿಗಳ ಮೇಲೆ ಹ್ಯಾಟ್ರಿಕ್ ಹೊಡೆತವನ್ನೇನೂ ಕೊಟ್ಟಿರಲಿಲ್ಲ ಎಂದು ಸಮಾಧಾನ ಮೂಡಿತು.  ಕೊನೆಗೆ ಆದ ಘಟನೆಗಳ ಸಿಂಹಾವಲೋಕನ ಮಾಡಲಾಗಿ ಅಭಿಮಾನಿಗಳು ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡುತ್ತಿದ್ದುದನ್ನು ನೋಡಿ ಅವರ ತರ್ಕವೇನು ಎಂದು ಯೋಚಿಸಿ ಮನ ಹೆಣಗಿತು, ಇವೆಲ್ಲದರ ನಡುವೆ ವಿಷ್ಣುವರ್ಧನ್ ಕೇವಲ ೫೯ ವರ್ಷಕ್ಕೆ ಸಾಯಲು ಕಾರಣವೇನಿರಬಹುದು ಎಂದು ಆಶ್ಚರ್ಯವೂ ಆಯಿತು.

 

ನಮ್ಮ ನಂಬಿಕೆಯ ಪ್ರಕಾರ ಆಯಸ್ಸು ತೀರಿದವರು ಎಲ್ಲಿದ್ದರೂ ಮೃತ್ಯುದೇವತೆಯನ್ನು ವಂಚಿಸಲಾಗದು ಎನ್ನುವುದನ್ನು ತಲೆಯ ಒಂದು ಬದಿಯಲ್ಲಿಟ್ಟುಕೊಂಡೇ ಮತ್ತೊಂದು ಕಡೆ ವೈದ್ಯಕೀಯ ವಿಜ್ಞಾನ ಇಷ್ಟೊಂದು ಬೆಳೆದಿರುವಾಗ ವಿಕ್ರಂ ಆಸ್ತ್ಪತ್ರೆಯ ವೈದ್ಯರು ರಾತ್ರಿ ಕಾಡಿದ ಎದೆನೋವಿನ ಮೂಲಕಾರಣವನ್ನು ಪತ್ತೆಹಚ್ಚುವಲ್ಲಿ ವಿಫಲರಾದರೇನೋ ಎಂದು ಬಲವಾದ ಸಂಶಯ ಕೂಡ ಬಂತು.  ಒಬ್ಬ ೫೯ ವರ್ಷದ ಮನುಷ್ಯ, ಯಾರೇ ಇರಲಿ, ಎದೆ ನೋವು ಎಂದು ರಾತ್ರಿ ಹತ್ತು ಘಂಟೆಗೆ ಆಸ್ಪತ್ರೆಗೆ ಬಂದರೆ ಅಂಥವರನ್ನು ಅಡ್ಮಿಟ್ ಮಾಡಿಕೊಳ್ಳದೇ ಹೇಗೆ ಮನೆಗೆ ಕಳುಹಿಸುತ್ತೀರಿ?  ಮಾಡಬೇಕಾದ ಸ್ಕ್ಯಾನಿಂಗ್ ಎಲ್ಲವನ್ನೂ ಮಾಡಿದ್ದೀರೋ? ಅಥವಾ ಪೇಷೆಂಟ್ ತಮ್ಮ ಸ್ವ-ಇಚ್ಚೆಯಿಂದ ಸೈನ್-ಔಟ್ ಮಾಡಿ ಮನೆಗೆ ಹೋದರೋ?

 

ಅಮೇರಿಕದಲ್ಲಿ ಕುಳಿತ ನಮಗೆ ಈ ರೀತಿಯ ಒಣತರ್ಕ ಮಾಡಲು ಸುಲಭ, ಇಲ್ಲಿನ ಲಿಟಿಗೇಶನ್ ವ್ಯವಸ್ಥೆ ಏನೇನೋ ಅನಾನುಕೂಲಗಳನ್ನು ಕಲ್ಪಿಸಿದ್ದರೂ ಈ ರೀತಿ ಯೋಚಿಸುವ ಮನಸ್ಥಿತಿಯನ್ನಾದರೂ ಹುಟ್ಟಿಸಿದೆ ಎನ್ನುವುದು ದೊಡ್ಡ ವಿಷಯ.  ಯಾರಾದರೂ ವಿಕ್ರಂ ಆಸ್ಪತ್ರೆಯ ಚಾರ್ಟ್ ತೆಗೆದು ನೋಡಿದ್ದಾರಾ? ಅಂದು ರಾತ್ರಿ ಕಾಲ್‌ನಲ್ಲಿ ಇದ್ದ ಆಸ್ಪತ್ರೆ ಸಿಬ್ಬಂದಿ ಯಾರು? ಅವರು ಏನೇನು ಪರೀಕ್ಷೆಗಳನ್ನು ಮಾಡಿದ್ದಾರೆ, ರೋಗಿಯನ್ನು ಹೊರಹೋಗಲು ಬಿಡುವ ಮುನ್ನ ಯಾವ ಯಾವ ಎಚ್ಚರಿಕೆಗಳನ್ನು ಕೊಟ್ಟಿದ್ದಾರೆ?  ಏನಾದರೂ ಔಷಧಿ-ಮದ್ದನ್ನು ಕೊಟ್ಟಿದ್ದಾರೋ ಅಥವಾ ಮರುದಿನ ಮತ್ತೆ ಬರಲು ತಿಳಿಸಿದ್ದಾರೋ? ವಿಕ್ರಂ ಆಸ್ಪತ್ರೆ ಚಿಕ್ಕದ್ದಿದ್ದು ಅಲ್ಲಿ ರೋಗಿಯನ್ನು ಇಟ್ಟುಕೊಳ್ಳಲಾಗದಿದ್ದರೆ ಹತ್ತಿರದ ದೊಡ್ಡ ಆಸ್ಪತ್ರೆಗೇನಾದರೂ ವಿಷಯ ತಿಳಿಸಿದ್ದರೋ? ಇತ್ಯಾದಿ ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿಯುತ್ತವೆ, ಯಾರೂ ಇದರ ಬಗ್ಗೆ ಮಾತನಾಡಿದ್ದನ್ನು ನಾನು ಕೇಳಲಿಲ್ಲ/ಕಾಣಲಿಲ್ಲ.

 

ಆದದ್ದು ಆಯ್ತು, ಎಂದು ಸುಮ್ಮನೆ ಬಿಟ್ಟು ಬಿಡಬಹುದಾದ ವಿಷಯ ಇದಲ್ಲ.  ರೋಗಿ/ವ್ಯಕ್ತಿ ಯಾರೇ ಆಗಿದ್ದರೂ ಆಸ್ಪತ್ರೆ/ವೈದ್ಯರು ತಮ್ಮ-ತಮ್ಮ ಕರ್ತವ್ಯವನ್ನು ಪಾಲಿಸಲೇಬೇಕು, ಕೊನೇಪಕ್ಷ ಈ ಘಟನಾವಳಿಗಳಲ್ಲಿ ತಪ್ಪೇನಾದರೂ ನಡೆದಿದ್ದು ಸಾಬೀತಾದರೆ ಇನ್ನು ಮುಂದೆ ಹೀಗಾಗದಂತೆ ನೋಡಬೇಕು.

 

ಅದೇ ರೀತಿ ಅಶ್ವಥ್ ಸಾವೂ ಕೂಡಾ ಅನಿರೀಕ್ಷಿತ ಎಂದೇ ಹೇಳಬೇಕು.  ವೈದ್ಯರು ಇನ್ನೇನು ಗುಣಮುಖರಾಗುತ್ತಾರೆ ಎಂದು ಹೇಳಿದ್ದರಂತೆ, ಏನು ತೊಂದರೆ ಆಯಿತೋ? ಕಿಡ್ನಿ-ಲಿವರ್ ತಮ್ಮ ಸಾಮರ್ಥ್ಯಗಳಲ್ಲಿ ಕ್ಷೀಣಿಸುತ್ತಾ ಬಂದಂತೆ ಅದನ್ನು ಮೊದಲೇ ಪತ್ತೆ ಹಚ್ಚಿ ಯಾವುದಾದರೂ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದ್ದರೋ ಇಲ್ಲವೋ.  ಕ್ಷಮಿಸಿ, ನಾನು ವೈದ್ಯನೇನಲ್ಲ, ಈ ರೀತಿ ಪ್ರಶ್ನೆಗಳನ್ನು ಹಾಕುತ್ತಿರುವುದು ಉದ್ಧಟತನದಿಂದಲ್ಲ, ಕೇವಲ ಕುತೂಹಲದಿಂದ ಮಾತ್ರ.  ಎಲ್ಲೋ ಕುಳಿತು ಇನ್ನೆಲ್ಲಿಯೋ ಸರ್ಜರಿ ಮಾಡುವು ಇಂದಿನ ವೈದ್ಯಕೀಯ ವ್ಯವಸ್ಥೆಯಲ್ಲಿ ಇಬ್ಬರು ಮಹಾಚೇತನಗಳನ್ನು ಎರಡು ದಿನಗಳಲ್ಲಿ ಕಳೆದುಕೊಂಡು ರೋಧಿಸುವ ಅಭಿಮಾನಿ ಈ ರೀತಿಯ ಪ್ರಶ್ನೆಗಳನ್ನು ಕೇಳುವುದು ಸಹಜವೆಂದುಕೊಂಡಿದ್ದೇನೆ.

 

ನಿಮಗೇನಾದರೂ ಹೆಚ್ಚು ತಿಳಿದಿದ್ದರೆ ನಮಗೂ ಸ್ಪಲ್ಪ ತಿಳಿಸಿ.

 

image

(ಕೃಪೆ: ಪ್ರಜಾವಾಣಿ)

Wednesday, December 30, 2009

ಶ್ರದ್ದಾಂಜಲಿ...ವಿಷ್ಣು, ಅಶ್ವಥ್ ಇನ್ನಿಲ್ಲ

೨೦೦೯ ಸುಮ್ನೇ ಹೋಗಲಿಲ್ಲ...ತನ್ನ ಕೊನೆಯ ದಿನಗಳಲ್ಲಿ ಎರಡು ಮಹಾನ್ ಚೇತನಗಳನ್ನ ತನ್ನ ಜೊತೆ ತೆಗೆದುಕೊಂಡು ಹೋಯ್ತು...ಇನ್ನೂ ಒಂದು ದಿನ ಬಾಕಿ ಇದೆ ವರ್ಷದ ಬಾಬ್ತು ಮುಗಿಯೋದಕ್ಕೆ ಅನ್ನೋದು ಹೆದರಿಕೆಯ ವಿಷಯವೇ, ಏನೇನು ಆಗಲಿಕ್ಕೆ ಇದೆಯೋ!

 

ಕೆಲವು ತಿಂಗಳುಗಳ ಹಿಂದೆ ಅಶ್ವಥ್ ಅಮೇರಿಕಕ್ಕೆ ತಮ್ಮ ತಂಡದವರೊಂದಿಗೆ ಬಂದು ನಮಗೆಲ್ಲ ಸುಗಮ ಸಂಗೀತದ ರಸದೌತಣವನ್ನು ನೀಡಿದ್ದರು, ಅವರು ಇನ್ನಿಲ್ಲ...ತಾನು ಹುಟ್ಟಿದ ದಿನವೇ ಸಾಯುವ ಕಾಕತಾಳೀಯವನ್ನು ಬಹಳ ಜನ ಕಾಣಲಾರರು, ಅಂಥವರಲ್ಲಿ ಅಶ್ವಥ್ ಅವರು ಒಬ್ಬರು, ಇಂದಿಗೆ ಅವರಿಗೆ ಬರೋಬ್ಬರಿ ಎಪ್ಪತ್ತು ವರ್ಷ.

 

ashwath241209_1

***

 

ವಿಷ್ಣುವರ್ಧನ್, ಕೇವಲ ೫೯ ವರ್ಷಕ್ಕೆ ಹೃದಯಾಘಾತಕ್ಕೆ ಈಡಾಗುತ್ತಾರೆ ಎಂದು ಯಾರೂ ಎಣಿಸಿರಲಿಕ್ಕಿಲ್ಲ.  ಇತ್ತೀಚೆಗಷ್ಟೇ ಯಾವುದೋ ಉದಯ ಟಿವಿ ಕಾರ್ಯಕ್ರಮವನ್ನು ತೋರಿಸಿ ’ಪರವಾಗಿಲ್ಲ, ವಿಷ್ಣು ತನ್ನ ಫಾರ್ಮ್ ಚೆನ್ನಾಗಿ ಕಾಪಾಡಿಕೊಂಡಿದ್ದಾರೆ!’ ಎಂದು ಹೇಳಿದ್ದು ನನಗೆ ಚೆನ್ನಾಗಿ ನನಪಿದೆ.

 

vishnuvardhan-6677

***

ಈ ಇಬ್ಬರು ಕನ್ನಡದ ಚೇತನಗಳಿಗೆ "ಅಂತರಂಗ"ದ ನಮನ, ಅವರ ಆತ್ಮಗಳು ಶಾಂತಿಯಿಂದಿರಲಿ, ಹಾಗೂ ಮತ್ತೊಮ್ಮೆ ಕನ್ನಡ ನಾಡಲ್ಲೇ ಹುಟ್ಟಿ ಬರಲಿ.

 

picture source:

http://www.indiaglitz.com/channels/kannada/article/52939.html

http://entertainment.oneindia.in/tag/vishnuvardhan

Monday, December 28, 2009

’ಅಂತರಂಗ’ದಲ್ಲೇನು ನಡೀತಾ ಇದೆ?

’ಅಂತರಂಗ’ದಲ್ಲೇನು ನಡೀತಾ ಇದೆ? ಯಾಕೆ ಇದೀಗ ತಿಂಗಳ ಮೇಲೆ ಬರೆದೇ ಇಲ್ಲವಲ್ಲ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಬರ್ತಾ ಇರೋದರಿಂದ ನನ್ನ ಮಾಮಾಲಿ ಸಸ್ಪೆಕ್ಟ್ ’ಸೋಮಾರಿತನ’ವನ್ನು ನೆಪಮಾಡಿಕೊಂಡು ಉತ್ತರವನ್ನೇನೋ ಕೊಡ್ತಾ ಇದ್ದೀನಿ, ಆದ್ರೆ ಇತ್ತೀಚಿನ ಭಾರತದ ಪ್ರಯಾಣ ಹಾಗೂ ವರ್ಷಾವಧಿ ಕೆಲಸಗಳ ಭರಾಟೆಯಿಂದಾಗಿ ಹೆಚ್ಚು ಬರೆಯೋದಕ್ಕಾಗಲಿಲ್ಲ, ಕ್ಷಮಿಸಿ.

ಮುಂದೆ ಪುರುಸೊತ್ತು ಮಾಡಿಕೊಂಡು, ಹಿಂದಿನ ’ಗೆಲುವಾಗೆಲೆ’ ಲೇಖನಕ್ಕೆ ’ಲಘುವಾಗೆಲೆ ಅನಿವಾಸಿ ಮನ...’ವೆಂದು ಮತ್ತೊಂದು ಆರ್ಟಿಕಲ್ ಬರ್ತಾ ಇದೆ...ಇನ್ನೇನು ’ಹೋಗಿ ಹರಿಯ’ನ್ನು ಮುಟ್ಟೋದೊಂದು ಬಾಕಿ ಅಷ್ಟೇ :-)

ಇದಲ್ಲದೇ ’ಅಂತರಂಗ’ದಲ್ಲಿ ಎಂದಿನ ತಳಮಳಗಳು ಇದ್ದೇ ಇವೆ, ನಿಮಗೆ ಗೊತ್ತಿದೆಯಲ್ಲಾ. ಎಂಥ ಮಾರ್ಕೆಟ್ಟಿನಲ್ಲೂ, ಎಂಥ ಸಂದರ್ಭದಲ್ಲೂ ನಮ್ಮ ನಮ್ಮೊಳಗೊಂದು ಕೊರಗುವ ಅಳುಮುಂಜಿ ಇದ್ದೇ ಇರುವಂತೆ.

ಇತ್ತೀಚೆಗೆ ’ಲೈವ್ ರೈಟರ್’ ಡೌನ್‌ಲೋಡ್ ಮಾಡಿಕೊಂಡಾಗಿನಿಂದಂತೂ ಬರೆಯೋದು ಮತ್ತಷ್ಟು ಸುಲಭವಾಗಿದೆ, ಬರೆಯೋದಕ್ಕೆ ಬೇಕಾದಷ್ಟು ವಿಚಾರಗಳಿವೆ, ಅಂದರೆ between the keyboard and the chair ಫ್ಯಾಕ್ಟರ್ ಅನ್ನು ಸರಿಪಡಿಸಿಕೊಳ್ಳೋದು ಮಾತ್ರ ಬಾಕಿ!