ಯೋಗ-ಮೆಡಿಟೇಷನ್ನುಗಳು ನಮಗಲ್ಲ ಸಾರ್
ನೀವು ಭಾರತದಲ್ಲೇ ಇರಲಿ ಅಥವಾ ವಿದೇಶದಲ್ಲೇ ಇರಲಿ, ಯೋಗ-ಮೆಡಿಟೇಶನ್ನುಗಳ ಬಗ್ಗೆ ಬೇಕಾದಷ್ಟು ಕೇಳಿ-ನೋಡಿಯೂ ಆಯಾ ವಿಧಿ ವಿಧಾನಗಳನ್ನು ಇವತ್ತಲ್ಲ ನಾಳೆ ನೋಡಿಕೊಂಡರೆ ಆಯಿತು, ಸಮಯ ಸಿಕ್ಕಾಗ ಕಲಿತುಕೊಂಡರೆ ಆಯಿತು ಎಂದು ನಿಮ್ಮಷ್ಟಕ್ಕೆ ನೀವೇ ಶಪಥ ಮಾಡಿಕೊಂಡಿದ್ದರೆ ನೀವು ನಮ್ಮ ಗುಂಪಿಗೆ ಸೇರಿಕೊಳ್ಳುತ್ತೀರಿ. ಶಾಲಾ ಕಾಲೇಜಿಗೆ ಹೋಗೋವಾಗ ಯಾರಿಗಿದೆ ಟೈಮು? ಮುಂದೆ ಮದುವೆ-ಮುಂಜಿ ಆದ ಮೇಲೆ ನೋಡೋಣ ಎಂದು ಮುಂದು ದೂಡಿದಿರೋ ನಮ್ಮವರ ಸರ್ಕಲ್ಲಿಗೆ ಇನ್ನೂ ಹತ್ತಿರವಾಗುತ್ತೀರಿ. ಕೈ ತುಂಬಾ ಸಂಬಳ ಬರುವ ಕೆಲಸ, ಮನೆಗೆ ಬಂದ ಕೂಡಲೆ ನೆಮ್ಮದಿಯ ಜೊತೆಗೆ ಅದು-ಇದು ಮಾಡುವ ಹೋಮ್ ವರ್ಕು ಇವೆಲ್ಲವೂ ಸೇರಿ ಮುಂದೆ ರಿಟೈರ್ ಆದ ಮೇಲೆ ನೋಡೋಣವೆಂದು ಮುಂದೆ ದೂಡುತ್ತಲೇ ಬಂದಿದ್ದೀರೋ ನೀವು ನಮ್ಮವರೆ ಆಗಿಬಿಟ್ಟಿರಿ!
ನಮ್ಮ ಆಫೀಸಿನಲ್ಲಿ ಕೆಲವು ’ಯೋಗಾಭ್ಯಾಸ ಮಾಡುವುದು’ ಎನ್ನುವುದನ್ನು ತಮ್ಮ ಹವ್ಯಾಸಗಳಲ್ಲಿ ಸೇರಿಸಿಕೊಂಡಿದ್ದಾರೆ ಹಾಗೂ ದಶಕಗಳ ಯೋಗಾಭ್ಯಾಸದ ಫಲವನ್ನು ಮೈಗೂಡಿಸಿಕೊಂಡು ಎಲ್ಲರ ಎದುರು ಖುಷಿಯಾಗಿ ಹಂಚಿಕೊಳ್ಳುತ್ತಾರೆ. ಇಂಗ್ಲೀಷ್ ಲೇಖಕರ ಪುಸ್ತಕಗಲ್ಲಿ ’ಓಂ’ ಸೇರಿಕೊಂಡಿದ್ದು ಕಾಣುತ್ತೆ, Hannah Montanna ಸ್ಕ್ರಿಪ್ಟ್‌ನಲ್ಲೂ ಕೂಡ ’ಓಂ’ ಬಳಕೆ ಕಂಡು ಬರುತ್ತೆ ಆದರೆ ನಾನು ಮಾತ್ರ ಇವುಗಳೆಲ್ಲದರಿಂದ ದೂರವೇ ಇದ್ದ ಹಾಗೆ ಕಂಡುಬರುತ್ತೇನೆ. ಮೆಡಿಟೇಷನ್ನೂ ಮತ್ತೊಂದೂ ಎನ್ನುವ ಅಭ್ಯಾಸ ಅಥವಾ ಆಚರಣೆ ವ್ಯಸ್ತ ಜೀವನದ ಭಾಗವಾಗಿ ಹೋಗುವುದಾದರೂ ಹೇಗೆ? ದಿನದುದ್ದಕ್ಕೂ ಬಿಡುವಿಲ್ಲದಿರುವ ಮಿಲ್ಲಿನಲ್ಲಿ ತಿರುಗುವ ಚಕ್ರಗಳ ಹಾಗಿನ ಜೀವನ ಶೈಲಿಯಲ್ಲಿ ’ಒಮ್ಮೆ ನಿಂತು ನೋಡಿ’ ಎಂದು ಹೇಳುವುದಾರೂ ಹೇಗೆ?
ಸಮುದ್ರ-ಸಾಗರದ ತಳವನ್ನು ಶೋಧಿಸುವವರು ನಭದಲ್ಲಿ ಆಕಾಶ ನೌಕೆಗಳನ್ನು ಉಪಗ್ರಹಗಳನ್ನು ಬಳಸುತ್ತಾರಂತೆ, ನಮ್ಮದರ ಬುಡನೋಡಿಕೊಳ್ಳಲು ರ್ಯಾಡಿಕಲ್ಲಾಗಿ ಅದರ ವಿರುದ್ಧ ತುದಿಯನ್ನು ಮುಟ್ಟಿಯಾದರೂ ಕಂಡುಕೊಳ್ಳಬೇಕು ಎಂದುಕೊಂಡರೆ ಆ ತುದಿಯೂ ಇಲ್ಲ ಈ ತುದಿಯೂ ಇಲ್ಲ ಎನ್ನುವ ತ್ರಿಶಂಕುವಿನ ಸ್ಥಿತಿ-ಗತಿಯಲ್ಲಿ ಯಾವುದನ್ನು ಯಾವ ದಿಕ್ಕಿನಲ್ಲಿ ಎಲ್ಲಿ ಹುಡುಕಿಕೊಳ್ಳೋದು ನೀವೇ ಹೇಳಿ.
ಪ್ರತಿಯೊ೦ದಕ್ಕೂ ಒಂದು ಮೊದಲಿದೆ, ಆ ಮೊದಲನ್ನು ಹುಡುಕಬೇಕು. ಪ್ರತಿಯೊಂದಕ್ಕೂ ಒಂದು ಗತಿಯಿದೆ ಅದನ್ನು ಅನುಸರಿಸಬೇಕು. ಹಾಗೇ ಪ್ರತಿಯೊಂದರ ಆಳ-ವಿಸ್ತಾರವನ್ನೂ ಕಂಡುಕೊಳ್ಳಬೇಕು ಎನ್ನುವುದು ಈ ಹೊತ್ತಿನ ತತ್ವ. ಯೋಗ-ಧ್ಯಾನ ಮೊದಲಾದವೂ ನಮಗೆ ಪರಂಪರಾನುಗತ, ಅದನ್ನು ಹಿಂದೆ ಕಲಿಯುತ್ತಿರುವಾಗಲೀ ಮತ್ತು ಮರೆತು ಹೋಗುತ್ತಿರುವಾಗಲೀ ಎಲ್ಲೂ ಅದರ ಮೂಲವನ್ನು ಶೋಧಿಸಿದ್ದಂತೂ ಇಲ್ಲ. ಈಗ ಎಲ್ಲ ಆಗಿ ಮಿಂಚಿ ಹೋದ ಮೇಲೆ, Lotus = ಪದ್ಮ, Position = ಆಸನ, ಎಂದು ’ಪದ್ಮಾಸನ’ವನ್ನು ಕಲಿಯೋದೆ? ಇಲ್ಲಿಯವರು ಕೆರೆಯನ್ನಾಗಲೀ, ಕೆರೆಯಲ್ಲಿನ ಕಮಲವನ್ನಾಗಲೀ, ನೀರಿನಡಿಯಲ್ಲಿ ಒಂದಕ್ಕೊಂದು ಹೆಣಿಕೆ ಹಾಕಿಕೊಂಡ ಬೇರು-ಕಾಂಡಗಳನ್ನಾಗಲೀ ನೋಡದೇ ಹೋದರೂ ಪದ್ಮಾಸನವನ್ನೂ ಕಲಿತರು, ಅದನ್ನು ರೂಢಿಸಿ-ಸಾಧಿಸಿಕೊಂಡು ಎಲ್ಲರಿಗೂ ಸಾರುವಂತಾದರು. ಕೆರೆಯ ನೀರಿನಲ್ಲಿನ ಕಮಲದ ಹಾಗೆ ನೀರಿನಲ್ಲಿದ್ದೂ ನೀರನ್ನು ರೆಸಿಸ್ಟ್ ಮಾಡುವ ದೃಷ್ಟಿಕೋನದ ಸ್ಥಿತಪ್ರಜ್ಞತೆಯನ್ನು ಮನಗಂಡರು. ನಾವು ಶತಮಾನಗಳಿಂದ ’ಕೆರೆಯ ನೀರನು ಕೆರೆಗೆ ಚೆಲ್ಲುತ್ತ’ ಬಂದರೂ ಬಹಳಷ್ಟು ಜನ ’ಏಕೆ ಹಾಗೆ?’ ಎಂದು ಪ್ರಶ್ನಿಸಿಕೊಂಡು ಉದ್ಧಾರವಾದದ್ದು ಕಡಿಮೆ ಎನ್ನುವುದು ನನ್ನ ಅಂಬೋಣ.
ನಮ್ಮ ಸಂಸ್ಕೃತಿ ದೊಡ್ಡದು, ನಮ್ಮ ಭಾಷೆ ದೊಡ್ಡದು ಎನ್ನುವವರಿಗೆ ಅದನ್ನು ಉಳಿಸಲಿಕ್ಕೆ ಏಕೆ ಹೆಣಗುತ್ತಿದ್ದೀರಿ? ಎಂದು ಪ್ರಶ್ನೆ ಹಾಕಿ ಉತ್ತರವನ್ನು ಕಾಯ್ದು ನೋಡಿ. ಭಾಷೆ, ಸಂಸ್ಕೃತಿ, ಧರ್ಮವನ್ನು ಪೋಷಿಸಬೇಕೆ ಅಥವಾ ಅದು ಗಟ್ಟಿಯಿದ್ದರೆ ತನ್ನಷ್ಟಕ್ಕೆ ತಾನೇ ನಿಲ್ಲುತ್ತದೆ, ಉಳಿಯುತ್ತದೆ ಎನ್ನುವುದು ಈ ಹೊತ್ತಿನ ಜಿಜ್ಞಾಸೆ. ತಮ್ಮ ಧರ್ಮ ದೊಡ್ಡದು ಎಂದು ಕೋಟ್ಯಾಂತರ ರೂಪಾಯಿಗಳ ವ್ಯವಹಾರವನ್ನು ನಡೆಸುವ ಲೋಕಿಗರು ತಮ್ಮ ಧರ್ಮವನ್ನು ನಿಜವಾಗಿಯೂ ಹರಡುತ್ತಿದ್ದಾರೆಯೇ? ಅದಕ್ಕೆ ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ತಮ್ಮ ಧರ್ಮ ವಿಸ್ತಾರವಾದುದು ಎಂದು ಅದನ್ನು ಪರಿಗಣಿಸುವ ಹೊತ್ತಿಗೇ ಅದನ್ನು ಕಡೆಗಣಿಸುವ ವಿಚಾರವಂತರು ತಮ್ಮತನವನ್ನು ಉಳಿಸಿಕೊಳ್ಳುತ್ತಿದ್ದಾರೆಯೇ? ಈ ಉಳಿಸಿಕೊಳ್ಳುವ, ಬಳಸಿಕೊಳ್ಳುವ, ಹರಡುವ, ಹಾರಿಸಿಕೊಂಡು ಹೋಗುವ ಪರಿಪಾಟಿಕೆ ಇವತ್ತು ನಿನ್ನೆಯದಲ್ಲ ಆದರೆ ಕೆಲವು ಬೆಳೆದಂತೆ ಕಾಣಿಸುತ್ತದೆ, ಇನ್ನು ಕೆಲವು ವಿನಾಶದ ಹಾದಿ ಹಿಡಿದಂತೆ ತೋರುತ್ತದೆ. ನೂರು-ಸಾವಿರ-ಹತ್ತು ಸಾವಿರ ವರ್ಷಗಳಲ್ಲಿ ಹುಟ್ಟಿ-ಬೆಳೆದು-ಬಂದು ಹೋಗುವ ಈ ಪರಿಕಲ್ಪನೆ, ವ್ಯತಿರಿಕ್ತತೆಗಳನ್ನು ನಾವು ಹುಲುಮಾನವರು ಗಮನಿಸಬೇಕೋ, ನಮ್ಮದು-ನಮ್ಮತನವನ್ನು ತೋರಬೇಕೋ ಅಥವಾ ನಿರ್ವಿಣ್ಣರಾಗಿ ಸುಮ್ಮನಿರಬೇಕೋ?
Procrastination, ಸದಾ ಮುಂದೂಡಿಕೊಂಡು ಇವತ್ತಲ್ಲ ನಾಳೆ ಎನ್ನುವ ಧೋರಣೆಯನ್ನು ಯೋಗ-ಧ್ಯಾನಗಳಿಗೂ ಅನ್ವಯಿಸಿಕೊಂಡು ಬಂದಿರುವ ನಮ್ಮ ಗುಂಪಿಗೆ ಇತ್ತೀಚೆಗಷ್ಟೇ ಸೇರಿದ ನಮ್ಮಂಥ ಎಷ್ಟೋ ಜನರ ಕಿವಿ ಮಾತು - ಇವತ್ತು ಇಲ್ಲಿ ಆಗದಿದ್ದುದು ಮುಂದೆ ಆದೀತು ಎನ್ನುವ ಸತ್ಯವಂತೂ ಅಲ್ಲ. ಕೈ ಕಾಲು ಗಟ್ಟಿ ಇರುವ ಈ ಸಮಯದಲ್ಲಿ ಅನುಸರಿಸಿ, ಅಭ್ಯಾಸ ಮಾಡಿಕೊಳ್ಳದ ಕ್ರಿಯೆ ಅಥವಾ ಕರ್ಮ ಮುಂದೆ ಇಳಿ ವಯಸ್ಸಿನಲ್ಲಿ ಸಾಧಿಸಿಕೊಳ್ಳಲು ಸಾಧ್ಯ ಎನ್ನುವುದಕ್ಕೆ ಏನು ಆಧಾರ? ಈಗ ಮಾಡಿ ಮುಂದೆ ಅದರ ಫಲವ ನೋಡಿ! ಮುಂದಿನ ಜನ್ಮದ ಬಂಧನದಲ್ಲಿರಲಿ ಇಲ್ಲದಿರಲಿ ಈಗ (Now) ಎನ್ನುವುದು ನಿಮಗೆ ಸೇರಿದ್ದು, ಮುಂದೆ (Later) ಎನ್ನುವುದು ನಿಮ್ಮ ಹತೋಟಿಯಲ್ಲಿರುವುದೋ ಇಲ್ಲವೋ ಯಾರು ತಾನೆ ಬಲ್ಲರು?
No comments:
Post a Comment