ಇಂದಿನದು ಇಂದಿರಲಿ
ಎಲ್ಲರೂ ಇಲ್ಲಿ ಬೇಸಿಗೆ ಯಾವಾಗ ಬರುತ್ತೋ ಎಂದು ಕುತೂಹಲಿತರಾಗಿ ಕಾದುಕೊಂಡು ಕುಳಿತಿರುವುದರ ಬಗ್ಗೆ ಯೋಚಿಸುತ್ತಿರುವಾಗ ನನಗನ್ನಿಸಿದ್ದು ಹೀಗೆ: ಡಿಸೆಂಬರ್ ನಿಂದ ಜೂನ್ ವರೆಗೆ ನಿಧಾನವಾಗಿ ದಿನದಲ್ಲಿ ಬೆಳಕು ಹೆಚ್ಚಾಗುತ್ತಾ ಹೋಗಿ, ಜೂನ್‌ನಿಂದ ಮತ್ತೆ ಕತ್ತಲಿನ ಆರ್ಭಟ ಹೆಚ್ಚಾಗುವುದು ಇಲ್ಲಿನ ಋತುಮಾನ. ಮಾರ್ಚ್ ಹಾಗೂ ಸೆಪ್ಟೆಂಬರ್ ನಡುವೆ ಇರುವ ಎಲ್ಲ ದಿನಗಳನ್ನು ಬೇಸಿಗೆಯೆಂದೇ ಏಕೆ ಸ್ವೀಕರಿಸಬಾರದು? ಬೇಸಿಗೆ ಬೆಳಕು ಜೂನ್ ವರೆಗೆ ಹೆಚ್ಚಾಗಿ ಮುಂದೆ ಸೆಪ್ಟೆಂಬರ್ ನಲ್ಲಿ ಎಲೆಗಳು ಉದುರಿ ನಿಧಾನವಾಗಿ ಛಳಿ ಹಿಡಿದುಕೊಳ್ಳುವಲ್ಲಿಯವರೆಗೆ ಎಲ್ಲಿಯವರೆಗೆ ಹೊರಗಿನ ಉಷ್ಣತೆ ಸಹಿಸಿಕೊಳ್ಳಬಹುದೋ ಅಲ್ಲಿಯವರೆಗೆ ಬೇಸಿಗೆಯನ್ನು ಅನುಭವಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು.
ಇಲ್ಲಿನ ಕಾರ್ಟೂನ್ ಶೋಗಳಿಂದ ಹಿಡಿದು ನಾನು ನೋಡಿದ ಬೇಕಾದಷ್ಟು ಜನರವರೆಗೆ ಎಲ್ಲರೂ ಕಾಲಕ್ಕೆ ತಕ್ಕಂತೆ ಸಂದರ್ಭಕ್ಕೆ ತಕ್ಕಂತೆ ಉಡುಪುಗಳನ್ನು ಬದಲಾಯಿಸುವವರೆ. ನಮ್ಮ ದಕ್ಷಿಣ ಭಾರತದಲ್ಲಿ ವರ್ಷದುದ್ದಕ್ಕೂ ಒಂದೇ ವೇಷ-ಭೂಷಣ ನಡೆದೀತು ಎನ್ನುವಂತಲ್ಲ. ಅಲ್ಲದೇ, ಗೋಲ್ಫ್ ಆಡುವುದಕ್ಕೆ ಹೋಗುವುದರಿಂದ ಹಿಡಿದು ಫಿಶಿಂಗ್ ಹೋಗುವಲ್ಲಿಯವರೆಗೆ, ಆಫೀಸಿಗೆ ಹೋಗುವುದರಿಂದ ಹಿಡಿದು, ಟೆನ್ನಿಸ್ ಆಡುವಲ್ಲಿಯವರೆಗೆ, ಛಳಿಗೆ-ಬಿಸಿಲಿಗೆ ಥರಾವರಿ ವೇಶಗಳು ಅವುಗಳದ್ದೇ ಆದ ಬಣ್ಣ-ವಿನ್ಯಾಸಗಳಲ್ಲಿ. ನಮ್ಮ ಉತ್ತರ ಭಾರತದ ಜನರಲ್ಲಿ ಸ್ವಲ್ಪ ಈ ರೀತಿಯ ಆದ್ಯತೆ ಇರಬಹುದು, ಛಳಿ ಇರಲಿ ಇಲ್ಲದಿರಲಿ ಆ ಒಂದು ಸೀಜನ್ ಬಂದಿತೆಂದರೆ ಕೊನೇ ಪಕ್ಷ ಒಂದು ಸ್ವೆಟರ್ ಇಲ್ಲದೆ ಜನರು ಹೊರಗೆ ಕಾಲಿಡೋದೇ ಇಲ್ಲವೇನೋ.
***
’ರಿಟೈರ್ಡ್ ಆದ ಮೇಲೆ ಬದುಕೇನಿದೆ, ಈಗ ಇದ್ದು ಬದುಕೋದೇ ಸೊಗಸು. ಮುಂದೇನಾಗುತ್ತೋ ಎಂದು ಯಾರಿಗೆ ಗೊತ್ತು?’ ಎಂದು ನನಗರಿವಿಲ್ಲದಂತೆ ನನ್ನ ಬಾಯಿಯಿಂದ ಈ ಅಣಿಮುತ್ತುಗಳು ಉದುರಿದವು. ನನ್ನ ಜೊತೆಯಲ್ಲಿ ಕಾಫಿ ಕುಡಿಯೋದಕ್ಕೆ ಬಂದ ಮತ್ತಿಬ್ಬರು ತಮ್ಮ ವೃದ್ಧ ತಂದೆ-ತಾಯಿಗಳ ಬಗ್ಗೆ ಮಾತನಾಡಿಕೊಳ್ಳುತ್ತಿದ್ದುದು ಒಂದು ರೀತಿಯಲ್ಲಿ ಕಾರಣ ಎಂದು ಹೇಳಿದರೂ ಮಧ್ಯಾಹ್ನ ನಾಲ್ಕು ಘಂಟೆಯ ಮೇಲೆ ಹೊಟ್ಟೆಯೊಳಗೆ ಇಳಿಯುತ್ತಿದ್ದ ಗರಮ್ ಕಾಫಿಗೆ ನಾನು ಕೃತಜ್ಞತೆಯನ್ನು ಹೇಳಲೇಬೇಕು. ಪ್ರತೀ ಸಾರಿ ಮಧ್ಯಾಹ್ನದ ಕಾಫಿಯ ನಂತರ ಮನಸ್ಸು ಅದರದ್ದೇ ಒಂದು ತತ್ವವನ್ನು ಹೊಕ್ಕಿಕೊಂಡು ಅದರ ನೆಲೆಯಲ್ಲಿ ಹೊರಗಿನದನ್ನು ನೋಡೋದು ಸಹಜವೇ ನನಗೆ.
ನನ್ನ ಮಾತುಗಳು ಜೊತೆಗಿದ್ದವರಿಗೆ ಸ್ವಲ್ಪ ಆಶ್ಚರ್ಯವನ್ನು ಮೂಡಿಸಿದರೂ ಅವರು ನನ್ನ ತರ್ಕವನ್ನು ಒಪ್ಪಿಕೊಂಡ ಹಾಗಿತ್ತು, ಅದರ ವಿರುದ್ಧವಾಗಿ ಏನನ್ನೂ ಹೇಳದಿದ್ದುದನ್ನು ನೋಡಿ ನಾನು ಹಾಗಂದುಕೊಳ್ಳಬೇಕಾಯ್ತು. ಏನಿರಬಹುದು, ಈ ನಿವೃತ್ತ ಜೀವನದ ಮರ್ಮ? ಎಂದು ಮನಸ್ಸು ತನ್ನದೇ ಯಾವುದೋ ಒಂದು ಸಬ್ ರುಟೀನ್‌ನಲ್ಲಿ ಕಳೆದುಕೊಳ್ಳತೊಡಗಿತು.
ಭಾರತದಲ್ಲಿದ್ದೋರು ತಮ್ಮ ಮಕ್ಕಳ ಮದುವೆ ಯೋಗಕ್ಷೇಮಕ್ಕೆ ಒಂದಿಷ್ಟು ದುಡ್ಡು-ಕಾಸು ಉಳಿಸಿಕೊಂಡಿರುತ್ತಾರೆ. ಸರಿಯಾದ ಆಹಾರ, ದಿನಚರಿ ಇಲ್ಲದ ಶರೀರಗಳು ಕುಬ್ಜವಾಗುವುದರ ಜೊತೆಗೆ ಅಲ್ಲಲ್ಲಿ ಸಾಕಷ್ಟು ಬೊಜ್ಜು ಕಟ್ಟಿಕೊಳ್ಳತೊಡಗುತ್ತವೆ. ತಲೆಯ ಕೂದಲು ನೆರೆತೋ ಅಥವಾ ಉದುರಿಹೋಗಿ, ಹಲ್ಲುಗಳು ಸಂದುಗಳಲ್ಲಿ ಜಾಗ ಕಾಣಿಸಿಕೊಂಡು, ಮುಖದ ಮೇಲೆ ನೆರಿಗೆಗಳು ಹುಟ್ಟಿ, ಮೂಗಿನ ಮೇಲೆ ಕನ್ನಡಕ ಕುಳಿತು, ಆಗಾಗ್ಗೆ ’ಒಂದು ಕಾಲದಲ್ಲಿ ಹಾಗಿತ್ತು...’ ಎನ್ನುವ ವಾಕ್ಯಗಳು ಸಹಜವಾಗಿ ಹೋಗುವುದು ನಿವೃತ್ತ ಬದುಕಿನ ಲಕ್ಷಣವಾಗಿದ್ದಿರಬಹುದು. ಅದೇ ಭಾರತೀಯರು ವಿದೇಶಗಳಲ್ಲಿದ್ದರೂ ಈ ವಿವರಣೆಯನ್ನು ಬಿಟ್ಟು ಹೆಚ್ಚು ಬದಲಾದಂತೆ ಕಾಣಿಸಿಕೊಂಡಿಲ್ಲದಿರುವುದು ನನ್ನ ಕಲ್ಪನೆ ಅಲ್ಲವಷ್ಟೇ.
ನನಗೆ ಇಲ್ಲಿನ ಸಾಲ ಕೂಪದಲ್ಲಿ ಸೇರಿಕೊಳ್ಳುವುದು ಅಷ್ಟೊಂದು ಇಷ್ಟವಿಲ್ಲದಿದ್ದರೂ ಇಲ್ಲಿನ ಜನರ ಪ್ರಾಯೋಗಿಕತೆಗೆ ತಲೆಬಾಗಲೇ ಬೇಕಾಗುತ್ತದೆ. ನೀವು ಜೀವನ ಪರ್ಯಂತ ಕಷ್ಟಪಟ್ಟು ದುಡಿದು ಬಾಡಿಗೆ ಮನೆಯಲ್ಲಿದ್ದು ಎಲ್ಲ ಸಂಕಷ್ಟಗಳ ನಡುವೆ ಹಣವನ್ನು ಕೂಡಿಟ್ಟು, ಬೆಳೆಸಿ ಮುಂದೆ ನಿವೃತ್ತರಾಗುವ ಹೊತ್ತಿಗೆ ಮನೆ ಕಟ್ಟಿಸಿಕೊಂಡು ಹಾಯಾಗಿ ಇರುವ ಕನಸು ಅಥವಾ ಆಲೋಚನೆ ಹೇಗಿದೆ? ಅದರ ಜೊತೆಗೆ ಮೊದಲಿನಿಂದಲೇ ನೀವು ನಿಮಗೆ ಬೇಕಾದ ಮನೆಯನ್ನು ಸಾಲದ ಮುಖೇನ ತೆಗೆದುಕೊಂಡು ಅದನ್ನು ಕಂತುಗಳಲ್ಲಿ ಬಡ್ಡಿ-ಅಸಲನ್ನಾಗಿ ಹಲವಾರು ವರ್ಷಗಳು ತೀರಿಸುತ್ತಾ ಹೋಗುವುದು ಹೇಗೆ? ಸಾಲ ಎಲ್ಲರಿಗೂ ಇದೆ, ತಿರುಪತಿ ತಿಮ್ಮಪ್ಪನಿಂದ ಹಿಡಿದು ನಮ್ಮಂಥ ಹುಲುಮಾನವರವರೆಗೆ, ದೊಡ್ಡ ದೊಡ್ಡ ಕಂಪನಿಗಳಿಂದ ಹಿಡಿದು ಮುಂದುವರೆದೆ ದೇಶಗಳವರೆಗೆ. ನಮ್ಮ ಅಗತ್ಯಗಳಿಗೋಸ್ಕರ ಮುಂದಾಲೋಚನೆಯಿಂದ ಸಾಲ ಮಾಡುವುದು ತಪ್ಪಾದರೂ ಹೇಗೆ ಎಂದು ಪ್ರಶ್ನಿಸಿಕೊಳ್ಳುವಷ್ಟರ ಮಟ್ಟಿಗೆ ಈಗಾಗಲೇ ಆಲೋಚನೆಗಳು ಬೆಳೆದುಕೊಂಡಿವೆ, ಊಹೂ ಪ್ರಯೋಜನವಿಲ್ಲ - ನಿಮಗೆ ಬೇಕೋ ಬೇಡವೋ ಸಾಲದೊಳಗೆ ನೀವಿದ್ದೀರಿ, ನಿಮ್ಮೊಳಗೆ ಸಾಲವಿದೆ.
***
ನಾಳಿನದರಲ್ಲಿ ಏನಿದೆ ಏನಿಲ್ಲವೋ ಯಾರೂ ಗ್ಯಾರಂಟಿ ಕೊಡೋದಿಲ್ಲ. ಅದಕ್ಕೇ ನಮ್ಮ ಹಿರಿಯರು "ನಿನ್ನೆ ನಿನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ" ಎಂದಿದ್ದು. ಇಂದಿನದು ಎಂದರೆ ವರ್ತಮಾನ, ನಾಳಿನ ಮೂರಕ್ಷರದ ಭವಿಷ್ಯವಾಗಲೀ, ನಿನ್ನೆಯ ಎರಡಕ್ಷರದ ಭೂತವಾಗಲೀ ನಾಲ್ಕಕ್ಷರದ ವರ್ತಮಾನವನ್ನು ಕ್ಷುಲ್ಲಕವಾಗೇಕೆ ಮಾಡಬೇಕು? ನಿನ್ನೆ ನಿನ್ನೆಯೇ ಆಗಿಕೊಂಡಿದ್ದರೂ ಇಂದು ನಾಳೆಯ ಸೇರುವುದರೊಳಗೆ ಆ ಇಂದನ್ನು ಇಂದೇ ಅನುಭವಿಸುವ ಮನಸ್ಥಿತಿ ನಮಗೇಕಿಲ್ಲ? ಅಷ್ಟೂ ಮಾಡಿ ನಾಳೆಯ ನಾಳೆಗಳು ಹೀಗೇ ಇರುತ್ತವೆ ಎಂದು ಯಾರೂ ಬರೆದಂತೂ ಕೊಟ್ಟಿಲ್ಲ, ಎಂತಹ ಅತಿರಥ ಮಹಾರಥರಿಗೂ ನಾಳೆಯ ಪಾಡು ಸಂಪೂರ್ಣವಾಗಿ ತಿಳಿದಿಲ್ಲ ಹಾಗಿರುವಾಗ ಎಲ್ಲವೂ ಭವಿಷ್ಯಮಯವಾಗೇ ಏಕಿರಬೇಕು? ಇಂದಿನ ದಿನವನ್ನು ’ಏನೋ ಒಂದು ಮಾಡಿ ತಿಂದರಾಯಿತು...’ ಎನ್ನುವ ಅಸಡ್ಡೆಯ ಮನೋಭಾವನೆಯಿಂದೇಕೆ ನೋಡಬೇಕು ನಾಳೆ ಮುಚ್ಚಿದ ಕಣ್ಣುಗಳು ತೆರೆದುಕೊಳ್ಳೂತ್ತವೆ ಎನ್ನುವ ಗ್ಯಾರಂಟಿ ಎನೂ ಇಲ್ಲದಿರುವಾಗ?
5 comments:
ಸತೀಶರೆ,
ನೀವು ನಿಮ್ಮ ಬ್ಲಾಗಿನಲ್ಲಿ ಗೂಗಲ್ ಜಾಹಿರಾತು ಹಾಕ್ತಿದ್ದೀರಿ-ಹೇಗೆ ಅಂತ ಗೊತ್ತಾಗ್ಲಿಲ್ಲ. ನಾನು adsenseನಲ್ಲಿ ರಿಜಿಸ್ಟರ್ ಮಾಡಿಕೊಂದ ಮೇಲೆ ಅವರಿಂದ ಬಂದ ಮೈಲ್‌ನಲ್ಲಿ "ನಿಮ್ಮ ಬ್ಲಾಗಿನ ಭಾಷೆಗೆ ಸದ್ಯಕ್ಕೆ ನಮ್ಮ adsense support ಇಲ್ಲ ಅಂತ ಹೇಳಿದ್ದಾರೆ. ಆದ್ರೆ ನೀವು ಹೇಗೆ...
ರವೀ...
ಒಂದು ಹೊಸ ಲೇಖನ::ಹಣವೂ, ಹಸಿದ ಹೊಟ್ಟೆಗಳೂ, ಹಿಟ್ಲರನೂ ನೆನಪಾದಾಗ...
Hello,
eee post poora yenu artha aagade iro font nalli ide, idannu hege ododu ?
Kannada vybhava
’ಇಂದಿನದು ಎಂದರೆ ವರ್ತಮಾನ, ನಾಳಿನ ಮೂರಕ್ಷರದ ಭವಿಷ್ಯವಾಗಲೀ, ನಿನ್ನೆಯ ಎರಡಕ್ಷರದ ಭೂತವಾಗಲೀ ನಾಲ್ಕಕ್ಷರದ ವರ್ತಮಾನವನ್ನು ಕ್ಷುಲ್ಲಕವಾಗೇಕೆ ಮಾಡಬೇಕು?’ - ಹೌದಲ್ಲ. ಒಳ್ಳೆಯ ಬರಹ. ಮನಸ್ಸಿನಲ್ಲಿ ಏನೋ ಗೊಂದಲ ಇತ್ತು. ಈ ಬರಹ ಓದಿದ್ಮೇಲೆ ಸ್ವಲ್ಪ ಮಟ್ಟಿಗಾದ್ರೂ ಸಮಾಧಾನ ಆಗಿದೆ. ಥ್ಯಾಂಕ್ಸ್.
ರವಿ,
ನೀವು adsenseನಲ್ಲಿ ರಿಜಿಸ್ಟರ್ ಮಾಡಿಕೊಂಡ ಮೇಲೆ ಅವರು ಕೊಡೋ ಸ್ಕ್ರಿಪ್ಟ್ ಅನ್ನು ನಿಮ್ಮ ಬ್ಲಾಗ್ ಪುಟದಲ್ಲಿ ಹಾಕಿದರೆ ಆಯಿತು, ಅದಕ್ಕೆ ಭಾಷೆಯ ಮಿತಿ ಇಲ್ಲ. ನಿಮ್ಮ ಬ್ಲಾಗ್ ಯಾವ ಭಾಷೆಯಲ್ಲಿ ಇದ್ದರೂ ಅವರು ಇಂಗ್ಲೀಷ್ ನಲ್ಲಿ ಕೋಡ್ ಕೊಡುವುದರಿಂದ ಸಮಸ್ಯೆ ಇಲ್ಲ. ಪ್ರಯತ್ನಿಸಿ ನೋಡಿ, ಗೊತ್ತಾಗದಿದ್ದರೆ ಕೇಳಿ.
ಎಲ್ವಿಸ್,
Please visit www.sampada.net and click on font help, go through the instructions so that you can read kannada on the net.
ಮನಸ್ವಿನಿ,
ಯಾಕ್ರೀ ಏನೋ ಗೊಂದಲ, ಹೊಸ ವರ್ಷ, ಚೈತ್ರಮಾಸ, ವಸಂತ ಇವೆಲ್ಲ ಎಲ್ಲ ಕಡೆಗೆ ಸಂಭ್ರಮವನ್ನು ಹಂಚುತ್ತಿರುವಾಗ? ನಿಮ್ಮ ಜಾಗದಲ್ಲಿ ನಾನಿದ್ದಿದ್ರೆ ಹೊಸದಾಗಿ ಬಂದ ಮಾವಿನ ಮಿಡಿಗಳನ್ನು ಕೊಂಡು ಒಂದಿಷ್ಟು ಉಪ್ಪಿನಕಾಯಿಯನ್ನಾದರೂ ಹಾಕುತ್ತಿದ್ದೆ!
ಉಪ್ಪಿನಕಾಯಿ ಹಾಕಿ ಆಯ್ತು ಸರ್ :)
ಮಾವಿನ ಹಣ್ಣಿನ ಕಾಲ ಈಗ . ಗೊಂದಲ ಮಂಗಮಾಯ :)
Post a Comment