Tuesday, April 25, 2006

ಸುಗಮ ಸಂಗೀತ ಸುಲಭ ಸಾಧನೆಯೇ?

ಜೂನ್ ೧೨, ೨೦೦೫ರ ಪ್ರಜಾವಾಣಿಯಲ್ಲಿ 'ನವ್ಯ ಸಾಹಿತ್ಯದ ಅಬ್ಬರದ ಸಂದರ್ಭದಲ್ಲಿ ನವೋದಯ ಸಾಹಿತ್ಯಕ್ಕೆ ಸುಗಮ ಸಂಗೀತ ಸ್ಥಾನ ಕಲ್ಪಿಸಿತು' ಎಂದು ಹಿರಿಯ ಕವಿ ಶಿವರುದ್ರಪ್ಪನವರು ಹೇಳಿದರೆಂದು ವರದಿಯಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿ ಜೂನ್ ೧೭ನೇ ತಾರೀಖು ವಾಚಕರವಾಣಿಯಲ್ಲಿ ಡಿ.ಎ.ಶಂಕರ್ ಅವರು ನೊಂದು ಬರೆದಿದ್ದರು - 'ಸಾಹಿತ್ಯದಿಂದ ಸುಗಮಸಂಗೀತವೇ ಹೊರತು, ಸುಗಮ ಸಂಗೀತದಿಂದ ಸಾಹಿತ್ಯವಲ್ಲ. ಸುಗಮ ಸಂಗೀತವೆನ್ನುವುದು ಕಷ್ಟ ಪಟ್ಟು ಸಾಧನೆ ಮಾಡದವರು ಆಯ್ದುಕೊಳ್ಳುವ ಮಾರ್ಗ' ಎಂಬುದಾಗಿ (ಕಾರಣಾಂತರಗಳಿಂದ ಪ್ರಜಾವಾಣಿಯಲ್ಲಿ ಈ ಹಳೆಯ ಕೊಂಡಿ ಕಳಚಿಕೊಂಡಿದೆಯಾದ್ದರಿಂದ ನಿಮ್ಮ ಪರಾಮರ್ಶೆಗೆ ಪೂರ್ಣ ವಿಷಯವನ್ನು ಕೊಡಲಾಗಲಿಲ್ಲ). ಮುಂದೆ ಜೂನ್ ೨೦ರ ವಾಚಕರವಾಣಿಯಲ್ಲಿ ಶಿವರುದ್ರಪ್ಪನವರು ನಾನು ಆ ರೀತಿ ಹೇಳಿಲ್ಲ ಎಂದು ವಿವರಣೆ ನೀಡಿದರು. ಹೇಳಿದ್ದಾರೆ-ಹೇಳಿಲ್ಲ ಎನ್ನುವ ವ್ಯತಿರಿಕ್ತ ಮಾತುಗಳು ಅಚ್ಚಾಯಿತೇ ವಿನಾ ಪತ್ರಿಕೆಯವರು ಯಾವುದಕ್ಕೂ ಸ್ಪಷ್ಟೀಕರಣ ನೀಡದಿದ್ದುದನ್ನು ನೋಡಿ ಇತ್ತೀಚೆಗೆ ನನ್ನ ಸ್ನೇಹಿತರೊಬ್ಬರಿಗೆ ಕನ್ನಡ ಪತ್ರಿಕೆಯ ಸಂಪಾದಕರೊಬ್ಬರು ಹೇಳಿದ 'ಕನ್ನಡ ಓದುಗರು ಅಷ್ಟೊಂದ್ mature ಇಲ್ಲಾ ರೀ' ಅನ್ನೋ ಮಾತು ನಿಜವಿರಬಹುದೇನೋ ಎಂದು ಒಮ್ಮೆ ದಿಗಿಲಾಯಿತು.

ಶಂಕರ್ ಅವರ ವಾಚಕರವಾಣಿಯ ಬರಹ ನನ್ನನ್ನು ಹಲವು ಯೋಚನೆಗಳಿಗೆ ಒಡ್ಡಿತ್ತು:

೧) ಪಕ್ಕಾ ಶಾಸ್ತ್ರೀಯ ಸಂಗೀತಕ್ಕೆ ಮಾರು ಹೋದವರಿಗೆ ಸುಗಮ ಸಂಗೀತ ರುಚಿಸಿರಲಾರದು, ಅಲ್ಲದೇ ಶಾಸ್ತ್ರೀಯ ಸಂಗೀತಕ್ಕೆ ಕಠಿಣ ಅಭ್ಯಾಸ ಮುಖ್ಯವೂ ಹೌದು, ಮೂಲವೂ ಹೌದು. ಆದರೆ ಸುಗಮ ಸಂಗೀತವನ್ನು ಹಾಡುವವರು ಹಾಗೂ (ಸುಗಮ ಸಂಗೀತಕ್ಕಾಗಿಯೆಂದೇ) ಅಂತಹ ಹಾಡುಗಳನ್ನು ಬರೆಯುವವರು 'ಮೈಗಳ್ಳರು' ಅಥವಾ 'ಕಠಿಣ ಪರಿಶ್ರಮ ಮಾಡದವರು' ಎಂದು ಯೋಚಿಸುವಂತೆ ಈ ಹಿಂದೆ ಹಲವಾರು ಸಾರಿ ನನಗೆ ಅನ್ನಿಸಿದೆ. ನಿಮಗೆ ಗೊತ್ತಿರಬೇಕು, ಲಂಕೇಶ್ ಕೆಲವರನ್ನು 'ಕ್ಯಾಸೆಟ್ ಕವಿಗಳು' ಎಂದು ಲೇವಡಿ ಮಾಡಿರೋ ವಿಚಾರ.

೨) ಕನ್ನಡದ ಕವನಗಳನ್ನು ಯಾವುದೋ ಒಂದು ರಾಗಕ್ಕೆ ಅಳವಡಿಸಿ ಅದರ ಮಹತ್ವವನ್ನೇ ಹಾಳು ಮಾಡುವ ವಿಚಾರ - ಉದಾಹರಣೆಗೆ ಬೇಂದ್ರೆಯವರ 'ಕುರುಡು ಕಾಂಚಾಣ'ವನ್ನು ಕೇಳಿದಾಗ ಯಾಕಾದಾರೂ ಕಷ್ಟ ಪಟ್ಟು ಹಾಡಿ ಕ್ಯಾಸೆಟ್ಟಿನಲ್ಲಿ ತುರುಕುತ್ತಾರೋ ಎಂದೆನಿಸಿದೆ, ಅದರ ಭಾಷೆ, ಅರ್ಥ, ಮಹತ್ವ ಎಲ್ಲವೂ ಯಾವುದೋ 'ಎದ್ದೋಡಿ' ರಾಗದಲ್ಲಿ ಲಯವಿಲ್ಲದೆ ಮೂಡಿ ಬರುವಾಗ ನನಗರಿವಿಲ್ಲದೇ ಫಾಸ್ಟ್ ಫಾರ್‌ವರ್ಡ್ ಗುಂಡಿ ಒತ್ತಬೇಕಾಗುತ್ತದೆ, ಇದೇ ಸಾಲಿಗೆ ಬರೋ ಮತ್ತೊಂದು ಉದಾಹರಣೆಯೆಂದರೆ 'ನಾಕು ತಂತಿ', ನಾನು ಹೇಳಿದೆನೆಂದು 'ನಾಕು ತಂತಿ'ಯನ್ನು ಒಮ್ಮೆ ಓದಿ ನೋಡಿ ಹಾಗೂ ಕೇಳಿ ನೋಡಿ ನಿಮಗೇ ಗೊತ್ತಾಗುತ್ತದೆ.

೩) ಹಾಡಿನ ರೂಪದಲ್ಲಿದ್ದಾಗ ಜನ ಸಾಮಾನ್ಯರನ್ನು ಸುಲಭವಾಗಿ ತಲುಪುತ್ತದೆ ಹಾಗೂ ಹೆಚ್ಚು ದಿನ ನೆನಪಿನಲ್ಲುಳಿಯುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ ಆಧುನಿಕ ಕನ್ನಡ ಕಾವ್ಯ, ಕವನ ಈ ಹಾಡಿನ, ಪ್ರಾಸದ ರೂಪದಿಂದ ಬಹಳಷ್ಟು ಮೇಲೆ ಬಂದಿದೆ. ನಾನು ಇತ್ತೀಚೆಗೆ ಓದಿದ ಅದೆಷ್ಟೋ ಕವಿತೆಗಳು ತಮ್ಮಲ್ಲಿ ಯಾವುದೆ ಪ್ರಾಸವಿಲ್ಲದೇ ಚೆನ್ನಾಗೇ ಓದಿಸಿಕೊಂಡು ಹೋಗುತ್ತವೆ, ಹಾಗೂ ಅವುಗಳಲ್ಲಿ ಬದುಕಿನ ಬೇಕಾದಷ್ಟು ಮುಖಗಳ ಪರಿಚಯವಾಗುತ್ತದೆ.

***

ನಾನೂ ಸುಗಮ ಸಂಗೀತವನ್ನು ಆಲಿಸುತ್ತೇನೆ, ಕೆಲವನ್ನು ಇಷ್ಟ ಪಟ್ಟಿದ್ದೇನೆ, ಹೆಚ್ಚಿನವುಗಳನ್ನು ಮತ್ತೆ ಕೇಳಲು ಹೋಗಿಲ್ಲ. ನನ್ನ ಪ್ರಶ್ನೆ ಇಷ್ಟೇ: ಸುಗಮ ಸಂಗೀತದ ಹಾದಿ ಹಿಡಿಯುವುದು ಸುಲಭ ಮಾರ್ಗವೇ, ಸುಗಮ ಸಂಗೀತಕ್ಕೆ ಅಳವಡಿಸಲು ಕವಿತೆಗಳನ್ನು ತಿರುಚುವುದು ಸರಿಯೇ? ಸುಗಮ ಸಂಗೀತದಲ್ಲಿ ಯಾವುದಕ್ಕೆ ಪ್ರಾಧಾನ್ಯತೆ ಹೆಚ್ಚು - ರಾಗಕ್ಕೋ, ಭಾವಕ್ಕೋ ಅಥವಾ ಅಕ್ಷರಗಳಿಗೋ?

***

ಇಲ್ಲಿಗೆ ಬಂದ ಮೇಲೆ ಕೆಲವು ಹೆವಿಮೆಟಲ್ ಬ್ಯಾಂಡ್‌ಗಳಿಂದ ಹಿಡಿದು, ಪಾಪ್ ಸಂಗೀತದ ಕೆಲವರನ್ನು ಹಾಗೂ ಕಂಟ್ರೀ ಮ್ಯೂಸಿಕ್‌ನಲ್ಲಿ ಇನ್ನು ಕೆಲವರನ್ನು ಕೇಳಲು ಶುರು ಮಾಡಿದೆ. ನನ್ನ ಅದೃಷ್ಟಕ್ಕೆ ಎಂಬಂತೆ ಸುಮಾರು ಆರು ತಿಂಗಳುಗಳ ಕಾಲ ಪ್ರತೀ ವಾರಾಂತ್ಯದಲ್ಲಿ ಸುಮಾರು ೫೦೦ ಮೈಲಿಗಳ ಡ್ರೈವ್ ಮಾಡುವುದು ಅನಿವಾರ್ಯವಾಗಿತ್ತು. ಆ ಸಮಯದಲ್ಲೇ ನಾನು ಇಲ್ಲಿನ ಬಹಳಷ್ಟು ಸಂಗೀತವನ್ನು ಕೇಳಿದ್ದು - ದಾರಿಯಲ್ಲಿ ಸಿಗುವ ಥರಾವರಿ ಎ.ಎಮ್., ಎಫ಼್.ಎಮ್. ಸ್ಟೇಷನ್‌ಗಳನ್ನು ಹಾಕಿಕೊಂಡು ಅಂತೂ ಇಂತೂ ಆರು ತಿಂಗಳು ಮುಗಿಯುವುದರೊಳಗೆ ಹಲವಾರು ಹಾಡುಗಳು ನನ್ನ ನಾಲಿಗೆಯ ಮೇಲೆ ನಲಿದಾಡತೊಡಗಿತು. ಇಲ್ಲಿನ ಬ್ಯಾಂಡ್‌ಗಳು ಇಂಗ್ಲೀಷ್‌ನಲ್ಲಿ ಹಾಡಿದ ಹಾಡುಗಳನ್ನು ನಾನು ನನ್ನ ಸ್ವರದಲ್ಲಿ ಹೇಳಿದರೆ ಅದು 'ಕನ್ನಡದ' ಉಚ್ಚಾರಣೆಯಲ್ಲಿ ಹಾಡಿದ ಹಾಡಿನಂತೆ ನನಗೇ ಕೇಳಿಸಿ ಮತ್ತೆ ಯಾರಾದರೂ ಕೇಳಿಯಾರೆಂಬ ಸಂಕೋಚಕ್ಕೆ ಒಳಒಳಗೇ ಹೇಳಿಕೊಳ್ಳುವಂತಾಯಿತು! ಈ ಪರಿಯಾಗಿ ಹಾಡುಗಳನ್ನು ಕೇಳಿದ್ದರಿಂದ ಒಂದಂತೂ ಅನುಕೂಲವಾಯಿತು - ಮೊದಮೊದಲು ರ್‍ಯಾಪ್‌ನ ಒಂದು ಪದವು ಅರ್ಥವಾಗದಿದ್ದುದು, ಕೊನೆಕೊನೆಗೆ ಸುಮಾರಾಗಿ ಅರ್ಥವಾಗತೊಡಗಿತು!

ಒಂದು ದಿನ ಆಫೀಸ್‌ನಲ್ಲಿ ಇದ್ದಾಗಲೇ Spice Girls ಹಾಡಿರೋ Wannabe ಹಾಡುಗಳನ್ನ ಓದುತ್ತಾ ಇದ್ದೆ. ನನ್ನ ಕೆನೆಡಿಯನ್ ಸಹೋದ್ಯೋಗಿ ಹತ್ತಿರ ಬಂದು ನೋಡಿ 'ಏನು ಮಾಡ್ತಾ ಇದ್ದೀಯಾ?' ಎಂದ, ನಾನು Spice Girls lyrics ಓದ್ತಾ ಇದ್ದೇನೆ ಎಂದೆ, ಅದಕ್ಕವನು ತಲೆಗೆ ತಿವಿದು 'ಅಯ್ಯೋ ಅದನ್ನೆಲ್ಲ ಯಾರು ಓದ್ತಾರೆ, ಸಂಜೆ ಮನೇಗೆ ಹೋದ್ ಮೇಲೆ ಕೈಯಲ್ಲಿ ಒಂದು ಬಿಯರ್ ಹಿಡಿದುಕೊಂಡು ಈ ಹಾಡುಗಳನ್ನು ಕೇಳಿದ್ರೆ ಏನಾದ್ರೂ ಸುಖ ಸಿಗಬಹುದು ನೋಡು!' ಎಂದು ನಕ್ಕ.

ಇನ್ನೂ ಇಲ್ಲಿನ ಹಾಡುಗಳನ್ನು ಓದುವ ಪರಿಪಾಠವನ್ನು ನಾನು ಬಿಟ್ಟಿಲ್ಲ - ಹಾಗೆ ಮಾಡದಿದ್ದರೆ ನನಗೆ ಪೂರ್ತಿ ಹಾಡಿನ ಅರ್ಥವಾಗುವುದಿಲ್ಲ, ಹಾಗೂ ಈ ಹಾಡುಗಳಲ್ಲಿನ ಭಾಷೆಯ ಬಳಕೆಗೂ, ಅದನ್ನು ಹಾಡುವ ರೀತಿಗೂ ಬಹಳಷ್ಟು ವ್ಯತ್ಯಾಸಗಳಿರೋದರಿಂದ ಹಾಡುಗಳನ್ನು ಕೇಳುವಾಗ ರಾಗಕ್ಕೋ, ರಿದಂ‌ಗೋ ಗಮನಕೊಟ್ಟರೆ, ಹಾಡುಗಳನ್ನು ಓದುವಾಗ ಅದರ ಉಳಿದ ಅರ್ಥ, ಹಿನ್ನೆಲೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದಂತಾಗುತ್ತದೆ.

***
ಒಟ್ಟಿನಲ್ಲಿ ಎಲ್ಲಾದರೂ ಕೀರ್ತಿ ಒಬ್ಬ ಕಲಾವಿದನನ್ನು ಹುಡುಕಿಕೊಂಡು ಬರಬೇಕು ಎಂದರೆ ಅದರ ಹಿಂದೆ ಅವಿರತ ಪರಿಶ್ರಮವಂತೂ ಖಂಡಿತವಾಗಿರುತ್ತದೆ. ಪ್ರತಿಭೆ ಇದ್ದರೂ, ಇಲ್ಲದಿದ್ದರೂ ಯಶಸ್ಸಿನ ಉತ್ತುಂಗದಲ್ಲಿ ನಿಲ್ಲಬೇಕೆಂದರೆ ಅದು ಸುಲಭ ಸಾಧ್ಯವೇನಲ್ಲ. ಸುಗಮ ಸಂಗೀತವೋ, ಶಾಸ್ತ್ರೀಯ ಸಂಗೀತವೋ - ಎಲ್ಲೂ 'ಕಠಿಣ ಪರಿಶ್ರಮ'ವಿಲ್ಲದೇ ಅದು ಹೇಗಾದರೂ ಜನರು ಮುಂದೆ ಬರುತ್ತಾರ್‍ಓ? ಈ ನಿಟ್ಟಿನಲ್ಲಿ ಶಂಕರ್ ಅಂತವರೊಬ್ಬರಾದರೂ ಉರಿದುಕೊಂಡು ಬರೆದರಲ್ಲಾ ಎಂದು ಸಂತೋಷವಾಯಿತು, ಕನ್ನಡದ ಓದುಗರು ಪ್ರಬುದ್ಧರಲ್ಲ ಎಂದು ಹಗುರವಾಗಿ ಮಾತನಾಡಿದ ಆ ಸಂಪಾದಕರ ಹೇಳಿಕೆ ಸುಳ್ಳಾಗಲಿ.

No comments: