Sunday, August 20, 2006

ಮಾತು-ಮೌನ

ಇವತ್ತು ಬಿಜೆ'ಸ್ ನಲ್ಲಿ ಸಾಮಾನ್ಯವಾಗಿ ವಾರದ ಶಾಪ್ಪಿಂಗ್ ಮಾಡ್ತಾ ಇದ್ದವನಿಗೆ ನನ್ನ ಹಿಂದೆ ಯಾರೋ ಮಾತನಾಡಿಸಿದಂತಾಯಿತು, ತಿರುಗಿ ನೋಡಿದೆ ಒಬ್ಬ ಸ್ಥಳೀಯ ಅಮೇರಿಕನ್ ಹುಡುಗಿ ತನ್ನ ಶಾಪ್ಪಿಂಗ್ ಕಾರ್ಟನ್ನು ತಳ್ಳಿಕೊಂಡು ಮಾತನಾಡಿಕೊಂಡು ಬರುತ್ತಿದ್ದಳು, ಬಹಳ ಸಭ್ಯಸ್ಥಳಾಗಿದ್ದಂತೆ ಕಂಡು ಬರುತ್ತಿದ್ದ ಹುಡುಗಿ ಸುಮ್ಮನೇ ತನ್ನಷ್ಟಕ್ಕೆ ತಾನೇ ಏನೋ ಹೇಳಿಕೊಂಡಿರಬೇಕೆಂದು ನನ್ನಷ್ಟಕ್ಕೆ ನಾನು ಸುಮ್ಮನಿದ್ದೆ. ಮತ್ತೆ ಪುನಃ ಒಂದು ಐದು ಕ್ಷಣದ ನಂತರ ಆಕೆಯದೇ ಮಾತುಕೇಳಿತು, ಈ ಬಾರಿ ಸ್ಪಷ್ಟವಾಗಿ When do I expect to see you? ಎಂದು ಕೇಳಿಸಿತು, ನಾನು ಮತ್ತೆ ಹಿಂತಿರುಗಿ ನೋಡಿದೆ, ಕೈಯಲ್ಲಿ ಸೆಲ್‌ಫೋನ್ ಸಹ ಇಲ್ಲವಾದ್ದರಿಂದ ಯಾರನ್ನು ಕುರಿತು ಈ ಮಾತುಗಳನ್ನು ಹೇಳುತ್ತಿರಬಹುದು ಎಂದು ಕುತೂಹಲ ಮೂಡಿದ್ದರಿಂದ ನಾನು ಅಲ್ಲಿಯೇ ನಿಂತೆ, ಆಕೆ ಹಾಗೇ ಮಾತನಾಡುತ್ತಲೇ ಮುಂದೆ ಹೊರಟುಹೋದಳು. ಆಗ ನನ್ನ ಪಕ್ಕನೆ ಹೊಳೆಯಿತು, ಆಕೆಯ ಸೆಲ್ ಫೋನ್ ಬ್ಯಾಗ್‌ನಲ್ಲಿದೆ, ಆಕೆ ಬ್ಲೂ ಟೂಥ್ ಸಹಾಯದಿಂದ ವೈರ್‌ಲೆಸ್‌ನಲ್ಲಿ ಕೇಬಲ್‌ಲೆಸ್ ಆಗಿ ಮಾತನಾಡುತ್ತಿದಾಳೆ ಎಂದು. ಆಕೆ ನನ್ನ ಹಾಗೆ ಇನ್ನೆಷ್ಟೋ ಜನಕ್ಕೆ ಗೊಂದಲವನ್ನು ಹುಟ್ಟಿಸಿರಲಿಕ್ಕೆ ಸಾಕು, ಅಥವಾ ಇಂತದ್ದನ್ನೆಲ್ಲ ಅರ್ಥ ಮಾಡಿಕೊಳ್ಳುವಲ್ಲಿ ನಾನೇ ನಿಧಾನವಾಗಿ ಹೋಗಿದ್ದೇನೆಯೋ ಎಂದು ಒಮ್ಮೆ ಸಂಶಯವೂ ಹುಟ್ಟಿತು.

ಅಂದಹಾಗೆ ನೀವೆಲ್ಲ ಒಬ್ಬೊಬ್ಬರೇ ಇದ್ದಾಗ ಮಾತನಾಡಿಕೊಳ್ಳುತ್ತೀರೋ ಇಲ್ಲವೋ ಗೊತ್ತಿಲ್ಲ, ನಾನಂತೂ ನನ್ನಷ್ಟಕ್ಕೆ ಏನಾದರೊಂದನ್ನು ಆಗಾಗ್ಗೆ ಗೊಣಗಿಕೊಳ್ಳುತ್ತಿರುತ್ತೇನೆ. ವಿಶೇಷತಃ ನಾನೊಬ್ಬನೇ ಡ್ರೈವ್ ಮಾಡಿಕೊಂಡು ಎಲ್ಲಿಗಾದರೂ ದೂರ ಹೋಗುತ್ತಿರುವಾಗ ನನ್ನ ಮತ್ತು ಎದುರಿನ ವಿಂಡ್‌ಶೀಲ್ಡ್ ನಡುವಿನ ಅವಕಾಶದಲ್ಲಿ ಹುಟ್ಟುವ ಬೇಕಾದಷ್ಟು ಸನ್ನಿವೇಶಗಳಿಗೆ ನಾನು ಧ್ವನಿಯಾಗಿದ್ದೇನೆ, ಅದರ ಜೊತೆಯಲ್ಲಿ ಹಿಮ್ಮೇಳದಂತೆ ಆಗಾಗ್ಗೆ ಹಿಂತಿರುಗಿ ನೋಡುವ ಪುಟ್ಟ ಕನ್ನಡಿಯ ತಾಳವೂ ಸೇರಿಕೊಳ್ಳುತ್ತದೆ. ಹೆಚ್ಚಿನ ಮಾತುಗಳು ರಚನಾತ್ಮಕ ಪ್ರಕ್ರಿಯೆಯ ಒಂದು ಹಂತವಾಗಿ ಧ್ವನಿಯನ್ನು ಪಡೆದರೆ, ಇನ್ನು ಕೆಲವು ಮಾಡಿದ ಏನೋ ತಪ್ಪಿಗೆ, ಅಥವಾ ಹೀಗೆ ಮಾಡಬಾರದಾಗಿತ್ತೇ ಎಂದು ಸ್ಟಿಯರಿಂಗ್ ವ್ಹೀಲ್ ಕುಟ್ಟುವ ಶಬ್ದಕ್ಕೆ ತಕ್ಕನಾಗಿ 'ಶಿಟ್ಟ್...' ಆಗಿ ಪರಿವರ್ತನೆ ಹೊಂದುತ್ತವೆ. ಆದರೆ ಒಬ್ಬೊಬ್ಬರೇ ಮಾತನಾಡಬಾರದು ಎಂದೇನೂ ಕಾನೂನಿಲ್ಲವಲ್ಲ, ಅಲ್ಲದೇ ನಾವು ಮಾತನಾಡುವುದು ಯಾವಾಗಲೂ ಇನ್ನೊಬ್ಬರ ಜೊತೆಯೇ ಏಕಾಗಬೇಕು? ಎಷ್ಟೋ ಸಾಕುಪ್ರಾಣಿಗಳು, ನಿರ್ಜೀವ ವಸ್ತುಗಳು ನಮ್ಮ ಮಾತಿಗೆ ಪ್ರತ್ಯುತ್ತರ ಕೊಡಲಾರವು ಎಂದು ಗೊತ್ತಿದ್ದರು ನಾವು ಅವುಗಳ ಜೊತೆಯಲ್ಲೆಲ್ಲ ಸಂವಾದಕ್ಕೆ ಇಳಿಯುವುದಿಲ್ಲವೇ (ದೇವರ ವಿಗ್ರಹವೂ ಸೇರಿ)? ಹಾಗೇ, ನನ್ನ ಮಾತುಗಳಿಗೆ ಕಾರಿನೊಳಗಿನ ಆಯಾಮದಲ್ಲಿ - ಕುಡಿದ ಕಾಫಿ ಅಥವಾ ಚಹಾದ ಪರಿಣಾಮಕ್ಕೆ ತಕ್ಕಂತೆ - ಒಂದಿಷ್ಟು ಮಾತುಗಳು ಹೊರಬಂದೇ ಬರುತ್ತವೆ. ಎಷ್ಟೋ ಸಾರಿ ಅಪ್ಯಾಯಮಾನವಾಗಿ, ಹೃದಯಕ್ಕೆ ಹತ್ತಿರವಾಗಿ ಹುಟ್ಟಿಬರುವ ಈ ಮಾತುಗಳು ನನಗೇ ಪ್ರಿಯ, ಅಲ್ಲದೇ ಬೇರೆ ಯಾರೊಡನೆಯಾದರೂ ಈ ರೀತಿ ಮಾತನಾಡಬೇಕು ಎಂದುಕೊಂಡರೆ ಒಂದೇ ಭಾಷೆಯೋ ಭಾಂಧವ್ಯದ ಕೊರತೆಯೋ, ಇನ್ಯಾವುದೋ ಒಂದು ಅಡ್ಡಿ ಬಂದೇ ಬರುತ್ತದೆ.

ಹೀಗೆ ಒಬ್ಬೊಬ್ಬರೇ ಮಾತನಾಡಿಕೊಳ್ಳುವ ಪರಿಪಾಟ ಇಂದು ನಿನ್ನೆಯದಲ್ಲ, ಅಲ್ಲದೇ ನನಗೊಬ್ಬನಿಗೆ ಅಂಟಿದ ರೋಗರುಜಿನಾದಿವ್ಯಸನವೂ ಅಲ್ಲ - ಹಿಂದಿಯ ಮೈಥಿಲಿಶರಣ ಗುಪ್ತರು ತಮ್ಮ 'ಪಂಚವಟಿ' ಮಹಾಕಾವ್ಯದಲ್ಲಿ ಲಕ್ಷ್ಮಣ ಸೀತೆಯನ್ನು ಹಗಲು-ರಾತ್ರಿ ಕಾಯುತ್ತಿರುವಾಗ ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುತ್ತಿದ್ದ ಎಂದು ವರ್ಣಿಸಿದ್ದಾರೆ. ಅಂದರೆ ನನ್ನಂತಹವರ ಈ ಗುಂಪಿನಲ್ಲಿ ರಾಮಾಯಣದ ಲಕ್ಷ್ಮಣನಿದ್ದಾನೋ ಇಲ್ಲವೋ ಗೊತ್ತಿಲ್ಲ, ಆದರೆ ಅವನನ್ನು ಚಿತ್ರಿಸಿದ ಕವಿಗಳಿದ್ದಾರೆ ಹಾಗೇ ಮನದೊಳಗಿನ ಪ್ರಪಂಚದ ವ್ಯಾಪಾರದಲ್ಲಿ ತಮ್ಮ ಮನಸ್ಸನ್ನು ಒಂದು ಕ್ಷಣವಾದರೂ ಹುದುಗಿಸಿಕೊಂಡು ತಮ್ಮನ್ನು ಮರೆಯುವ ಎಲ್ಲರೂ ಸೇರಿಕೊಳ್ಳುತ್ತಾರೆ. ಅಪರೂಪಕ್ಕೊಮ್ಮೆ ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುವುದನ್ನು 'ಹುಚ್ಚು' ಎಂದು ವರ್ಗೀಕರಣ ಮಾಡಲು ಮಾತ್ರ ಹೋಗಬೇಡಿ - ಏಕೆಂದರೆ ನನ್ನ ಪ್ರಕಾರ 'ಹುಚ್ಚು' ಹಿಡಿದವರಿಗೆ ತಮಗೆ ಹುಚ್ಚು ಹಿಡಿದಿದೆ ಎಂದು ಗೊತ್ತಿರೋದಿಲ್ಲ, ಅಕಸ್ಮಾತ್ ಅಂತವರಿಗೆ ಹುಚ್ಚು ಹಿಡಿದಿದೆ ಎಂದು ಗೊತ್ತಾದ ತಕ್ಷಣ ಹಿಡಿದ ಹುಚ್ಚು ಬಿಟ್ಟು ಹೋಗುತ್ತದೆ. ಆದ್ದರಿಂದಲೇ ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುವವರು ಹುಚ್ಚರಾಗಬೇಕೆಂದೇನೂ ಇಲ್ಲ, ಆದರೆ ಅಂತಹವರ ಜೊತೆಯಲ್ಲಿ ವ್ಯವಹರಿಸುವಾಗ ಅವರವರ ರಕ್ಷಣೆ ಅವರವರದು - ಎಷ್ಟು ಹೊತ್ತಿನಲ್ಲಿ ಎಲ್ಲಿಂದ ಏನೇನು ಬರುತ್ತದೆ ಎಂದು ಯಾರಿಗೆ ಗೊತ್ತು!

ಮಾತು ಮೌನವನ್ನು ಸೀಳಿಬರುತ್ತದೆ ಎಂದು ಬೇಕಾದಷ್ಟು ಕಡೆ ಓದಿದ್ದೇನೆ, ಆದರೆ ಮೌನ ಮಾತನ್ನು ಕಟ್ಟಿ ಹಾಕುತ್ತದೆ ಎನ್ನುವುದು ನನ್ನ ಅಭಿಮತ. ಮಾತು ಬಂಗಾರ, ಮೌನ ಬೆಳ್ಳಿ, ಅಲ್ಲದೇ talk more - work less ಎನ್ನುವುದು ನನ್ನ ಹೊಸ ಜಾಣ್ಣುಡಿ. ಏಕೆಂದರೆ ನಿಮಗೆ ಯಾವುದಾದರೊಂದು ಕೆಲಸವನ್ನು ಅಸೈನ್ ಮಾಡಿದ್ದರೆ ಅದರ ಬಗ್ಗೆ ಸಾಧ್ಯವಾದಷ್ಟು ಎಲ್ಲ ಪ್ರಶ್ನೆಗಳನ್ನು ಕೇಳಿ ವಿಷಯವನ್ನು ಸಂಪೂರ್ಣವಾಗಿ ಮನನಮಾಡಿಕೊಂಡು ಅನಂತರ ಕೆಲಸವನ್ನು ಶುರು ಮಾಡಿದರೆ ಮುಂದೆ ಪದೇ-ಪದೇ ಬಂದೂ-ಹೋಗಿ, ಪ್ರಶ್ನೆಗಳನ್ನು ಕೇಳಿ ಮಾಡಿದ ಕೆಲಸಕ್ಕೆ ತೇಪೆ ಹಚ್ಚುವುದು ತಪ್ಪೀತು. ಅಥವಾ ಒಂದು ವೇಳೆ ನನಗೆ ಯಾವುದಾದರೂ ಕೆಲಸದಲ್ಲಿ ಅಷ್ಟೊಂದು ಸರಿಯಾದ ಮಾಹಿತಿ ಇಲ್ಲದಿದ್ದಾಗ ಪ್ರಶ್ನೆಗಳನ್ನು ಕೇಳುವುದರ ಮೂಲಕ - ಅಲ್ಲಲ್ಲಿ ಚರ್ಚಿಸುವುದರ ಮೂಲಕ - ಅಂದರೆ ಮಾತನ್ನು ಹೆಚ್ಚು ಆಡುವುದರ ಮೂಲಕ ಎಷ್ಟೋ ವಿಷಯಗಳನ್ನು ಬಗೆ ಹರಿಸಿಕೊಂಡಿದ್ದೇನೆ. ತಪ್ಪೋ-ಸರಿಯೋ ಮಾತನಾಡುವವರು ಜಾಣರು, ಗುಮ್ಮನಕುಸಕರ ಹಾಗೆ ಮನಸ್ಸಿನಲ್ಲೇ ಮಂಡಿಗೆ ತಿನ್ನುವವರು ಮತ್ತೇನೋ ಒಂದು ತರಹ.

ಮಾತನಾಡಬೇಕು, ಆಡಿದಂತೆ ನಡೆಯಬೇಕು ಅದಪ್ಪಾ ಬದುಕು, ಮಾತನಾಡದೇ ಬರೀ ಸೋಗನ್ನು ಹಾಕಿಕೊಂಡು ಬದುಕಿದರೆ ಅದರಲ್ಲಿ ಯಾವ ಸ್ವಾರಸ್ಯ ಯಾರಿಗೆ ಕಂಡಿದೆಯೋ ಯಾರು ಬಲ್ಲರು? ಮಾತನ್ನು ಕೊಡಬಹುದು, ಹಂಚಬಹುದು - ಮೌನವನ್ನಲ್ಲ - ಮಾತಿನಲ್ಲಿ ಸಂಭ್ರಮದಿಂದ ಶೋಕದವರೆಗೆ ಏನೇನೆಲ್ಲ ಭಾವನೆಯನ್ನು ಬಯಲುಮಾಡಬಹುದು, ಆದರೆ ಮೌನದ್ದು ಯಾವಾಗಲೂ ಒಂದೇ ಸೋಗು, ಅದೇ ರಾಗ. ಮಾತು ಅನ್ನೋದು ಅರುಳು ಹುರಿದಂತಾಗಬಹುದು, ಮೌನ ಎನ್ನೋದು ಆಶಾಡದ ಕಪ್ಪು ಛಾಯೆ. ಮಾತಿನಿಂದ ಕೋಟೆಗಳು ಬಿದ್ದಿವೆ, ಊರುಗಳು ಗೆದ್ದಿವೆ, ಮೌನದಿಂದ ಇನ್ನೊಬ್ಬರ ಮನದಲ್ಲಿ ಮಹಲುಗಳು ನಿಂತಿವೆಯೇ ಹೊರತು ಏನನ್ನೂ ಭೌತಿಕವಾಗಿ ಕಟ್ಟಿದಂತಿಲ್ಲ. ಮಾತಿನ ಮಲ್ಲರು ಕೆಲವರು, ಮುಂದುವರಿದ ದೇಶಗಳು ಏನನ್ನು ಮಾಡುತ್ತವೆಯೋ ಬಿಡುತ್ತವೆಯೋ ಇಂತಹ ಮಲ್ಲರನ್ನು ಬಹಳಷ್ಟು ಹುಟ್ಟುಹಾಕಿವೆ - ಇವರು ತಮ್ಮ ಮೋಡಿಯಿಂದ ಎಂತಹವರನ್ನೂ ಕಟ್ಟಿಹಾಕಬಲ್ಲರು.

ನೋಡಿದ್ರಾ, ತನ್ನ ಸುಂದರ ಕೇಶರಾಶಿಯ ನಡುವೆ ನೀಲಿಹಲ್ಲಿನ (ಬ್ಲೂ ಟೂಥ್) ತಂತ್ರಜ್ಜಾನದಿಂದ ಮಾತನಾಡಿದ್ದಕ್ಕೆ ನಾನು ನನ್ನ ಮೌನವನ್ನು ಸೀಳಿ ಇಷ್ಟೊಂದನ್ನು ಬರೆಯುವ ನಡುವೆ ಎಷ್ಟೊಂದನ್ನು ಆಡಿಕೊಳ್ಳುವಂತಾಯಿತು. ಅಕಸ್ಮಾತ್ ಈ ಲೋಕದಲ್ಲಿ ಎಲ್ಲರ ನಾಲಿಗೆಯೂ ಬಿದ್ದೇನಾದರೂ ಹೋದರೆ ಆ ಕರಾಳ ದಿನ ಹೇಗಿರಬಹುದು, ಆ ಮೌನ ಅದೆಷ್ಟು ಭಯಂಕರವಾಗಿರಬಹುದು ಎಂಬುದನ್ನು ಊಹಿಸಿಕೊಳ್ಳುವುದೂ ಕಷ್ಟ!

Thursday, August 17, 2006

'ವಿಕ್ರಾಂತ ಕರ್ನಾಟಕ'ಕ್ಕೆ ಸ್ವಾಗತ ಹಾಗು ಅಭಿನಂದನೆಗಳು

ನಿಮ್ಮಲ್ಲಿ ಸಾಕಷ್ಟು ಜನರು ಈಗಾಗಲೇ ನೋಡಿರೋ ಹಾಗೆ ರವಿ ಕೃಷ್ಣಾ ರೆಡ್ಡಿಯವರ ಮನದ ಇಂಗಿತ ಮೇ ೨೧ ರಂದು ಬಂದಿತ್ತು, ಇ-ಮೇಲ್‌ನಲ್ಲಿ ವಿಕ್ರಾಂತ ಕರ್ನಾಟಕದ ಮುಖಪುಟದ ವಿನ್ಯಾಸ ಹಾಗೂ ಪತ್ರಿಕೆ-ಪ್ರಕಾಶನವನ್ನು ಆರಂಭಿಸುವುದರ ಬಗ್ಗೆ ದೀರ್ಘವಾಗಿ ತಮ್ಮ ಅನಿಸಿಕೆಗಳನ್ನು ಅಂದು ಹಂಚಿಕೊಂಡಿದ್ದರು. ಅದಾಗಿ ಕೇವಲ ಮೂರು ತಿಂಗಳ ಒಳಗೆ ಒಂದು ಪತ್ರಿಕೆ-ಪ್ರಕಾಶನವನ್ನು ಸ್ಥಾಪಿಸಿ ಲಕ್ಷಾಂತರ ಕನ್ನಡಿಗರನ್ನು ವಿಶ್ವದಾದ್ಯಂತ ತಲುಪುತ್ತಿರುವುದು ಬಹಳ ಹೆಮ್ಮೆಯ ವಿಷಯ.

ಇಂದು, ಆಗಷ್ಟ್ ೧೭ರಂದು ಅವರ ಪತ್ರಿಕೆಯ ಬಿಡುಗಡೆ ಹಾಗೂ ವೆಬ್‌ಸೈಟಿನ ಅಫಿಷಿಯಲ್ ಉದ್ಭಾಟನಾ ಸಮಾರಂಭ ಕೂಡಾ. ಈ ಸಂದರ್ಭದಲ್ಲಿ ವಿಕ್ರಾಂತ ಕರ್ನಾಟಕವನ್ನು ಆದಷ್ಟು ಬೇಗನೆ ಕನ್ನಡಿಗರ ಮನ-ಮನೆಗಳನ್ನು ತಲುಪುವಂತೆ ಮಾಡಿದ್ದಕ್ಕೆ ಅದಕ್ಕಾಗಿ ಶ್ರಮಿಸಿರುವ ಎಲ್ಲರಿಗೂ ಅಭಿನಂದನೆಗಳು.

***
ರವಿ ಅವರ ಇ-ಮೇಲಿನಲ್ಲಿ ಬೇಕಾದಷ್ಟು ಕಳಕಳಿ ಇತ್ತು, ಎಂತೆಂಥ ಅತಿರಥ-ಮಹಾರಥರೇ ಕೈ ಸುಟ್ಟುಕೊಂಡಿರುವಾಗ ನಮ್ಮಂತಹವರ ಕಥೆ ಏನು ಎನ್ನುವ ಕಾಳಜಿ ಇತ್ತು, ಪತ್ರಿಕೋದ್ಯಮದಲ್ಲಿ ಕಾಲಿಟ್ಟು ಸೋತ ಹಲವಾರು ಉದಾಹರಣೆಗಳು ಹಸಿಹಸಿಯಾಗಿ ಅವರ ಕಣ್ಣ ಮುಂದಿದ್ದವು, ಜೊತೆಗೆ ಅವರ ಸ್ನೇಹಿತರೂ ಸಹ ಮೊದಮೊದಲು 'ಅನುಭವವಿಲ್ಲದ ಈ ಕಷ್ಟದ ಕೆಲಸಕ್ಕೇಕೆ ಕೈ ಹಾಕುತ್ತೀಯೇ?' ಎಂದು ಕೇಳಿರಲಿಕ್ಕೂ ಸಾಕು. ಅವುಗಳೆಲ್ಲದರ ನಡುವೆ ಆಡಿದಂತೆ ನಡೆದು, ಮಾಡಿ ತೋರಿಸಿದ ಕೀರ್ತಿ ರವಿಯವರದು. ಎಂಟು ಸಾವಿರ ಮೈಲು ದೂರದಲ್ಲಿ ಕುಳಿತು, ಅಣ್ಣನ ಸಹಾಯದಿಂದ, ಸ್ನೇಹಿತರ ಸಹಾಯದಿಂದ ಏನೇನೆಲ್ಲವನ್ನು ಮಾಡಬಹುದು ಎಂದು ರವಿಯವರನ್ನು ನೋಡಿ ಕಲಿಯಬೇಕು. ನಾನು ಇಲ್ಲಿ ಕುಳಿತು ಒಂದು ಪುಸ್ತಕವನ್ನು ಮುದ್ರಿಸುವುದಕ್ಕೆ ಉಸಿರು ಬಿಡುತ್ತಿರುವಾಗ ಅವರು ಒಂದು ಪತ್ರಿಕೆಯನ್ನೇ ಹೊರತರುತ್ತಾರೆಂದರೆ ಅದು ಸಾಹಸವೇ ಸರಿ.

ಕನ್ನಡದಲ್ಲಿ ಬೇಕಾದಷ್ಟು ಪತ್ರಿಕೆಗಳು ಬಂದಿವೆ, ಅವುಗಳೆಲ್ಲವನ್ನೂ ಮೀರಿ ನಿಲ್ಲುವ ಗುಣಮಟ್ಟ ಎಲ್ಲ ರೀತಿಯಿಂದಲೂ ಇರಬೇಕು ಎನ್ನುವುದು ರವಿ ಹಾಗೂ ಅವರ ಅಣ್ಣ ಸುರೇಶ್ ಅವರ ಆಶಯ. ಉತ್ತಮ ಬರಹ, ಮುದ್ರಣ ಹಾಗೂ ಒಳ್ಳೆಯ ಕಾಗದದ ಬಳಕೆಯಲ್ಲೂ ಮೊದಲಿನವರಾಗಬೇಕು, ಕನ್ನಡಿಗರಿಗೆ ಉತ್ಕೃಷ್ಟತೆಯನ್ನು ಹಂಚಬೇಕು ಎನ್ನುವುದು ಅವರ ಕನಸು. 'ಪತ್ರಿಕೆಯೆಂದರೆ ಹೀಗಿರಬೇಕು' ಎಂದು ಭಾರತದ ಪತ್ರಿಕೆಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲಬೇಕು ಎನ್ನುವುದು ಅವರ ಗುರಿ.

ಈ ಪೋಷ್ಟನ್ನು ಬರೆಯುತ್ತಾ ಹಳೆಯ ಇ-ಮೇಲ್‌ಗಳಲ್ಲಿ ಏನನ್ನೋ ಹುಡುಕುತ್ತಾ ಹೋದ ನನ್ನ ಅದೃಷ್ಟಕ್ಕೆ ಇಂದು ಬಿಡುಗಡೆಯಾದ ವಾರಪತ್ರಿಕೆಯ pdf ಆವೃತ್ತಿ ಸಿಕ್ಕಿತು, ಇರುವ ಒಟ್ಟು 64 ಪುಟಗಳಲ್ಲಿ ಬೇಕಾದಷ್ಟು ಫೋಟೋಗಳೂ, ಆಕರ್ಷಕ ಶೀರ್ಷಿಕೆಗಳೂ, ಅಚ್ಚುಕಟ್ಟಾಗಿ ಅಲ್ಲಲ್ಲಿ ಜೋಡಿಸಿದ ಶುಭಾಶಯಗಳು ಕಂಡು ಬಂದವು. ಸಂಪಾದಕೀಯದ ಪಕ್ಕದಲ್ಲಿ ಸಂಪಾದಕರ ತಂಡದವರ ಹೆಸರನ್ನು ಓದುತ್ತಾ ಹೋದಂತೆ ನನಗಾಶ್ಚರ್ಯವಾಗುವಂತೆ ರವಿ ಅವರ ಹೆಸರೇ ಇಲ್ಲ! ಕೊನೆಗೆ ಹುಡುಕುತ್ತಾ ಹೋದಂತೆ 62 ನೇ ಪುಟದಲ್ಲಿ 'ಯಾತ್ರೆಯ ಆರಂಭಕ್ಕೆ ಸಹಕರಿಸಿದ ಎಲ್ಲರನ್ನೂ ಸ್ಮರಿಸುತ್ತಾ...' ಕಂಡುಬಂತು, ಒಂದೇ ಒಂದು ಪುಟದಲ್ಲಿ ತಮ್ಮ ಅನುಭವಗಳನ್ನು ದಾಖಲಿಸುತ್ತಾ, ಅಣ್ಣ ಸುರೇಶ್ ಒಳಗೊಂಡು ಪತ್ರಿಕೆಯ ಸಿಬ್ಬಂದಿಯವರನ್ನು ಪರಿಚಯಿಸಿದ್ದು ಬಹಳ ಇಷ್ಟವಾಯಿತು. ಪರಿವಿಡಿಯನ್ನು ನೋಡುತ್ತಿದ್ದಂತೆ ಇಡೀ ಪತ್ರಿಕೆಯನ್ನೇ ಓದೋಣವೆಂದುಕೊಂಡರೆ ಸಮಯಾಭಾವದಿಂದ ಎಲ್ಲವನ್ನೂ ಓದಲಾಗಲಿಲ್ಲ. ಆದರೆ 'ವಿಕ್ರಾಂತ ಪ್ರಕಾಶನ'ವನ್ನು ನಾವೂ ಇಲ್ಲಿಂದಲೇ ತರಿಸಿಕೊಳ್ಳಬಹುದು, ಕೇವಲ ಹತ್ತು ಡಾಲರ್‌ಗೆ ವರ್ಷಕ್ಕೆ 52 ಸಂಚಿಕೆಗಳು pdf ಆವೃತ್ತಿಯಲ್ಲಿ ದೊರೆಯುವುದನ್ನು ನಂಬಲಿಕ್ಕೇ ಸಾಧ್ಯವಿಲ್ಲ! ಅದರ ಜೊತೆಯಲ್ಲಿ ಹಣವನ್ನು PayPal ಅಕೌಂಟಿನ ಮೂಲಕವೂ ಕೊಡಬಹುದಾದ್ದರಿಂದ ಎಲ್ಲವೂ ಬಹಳ ಸುಲಭವಾಗಿದೆ. ಇಂತಹ ಬೆಳವಣಿಗೆ ನಿಜಕ್ಕೂ ಶ್ಲಾಘನೀಯ. ಹಿಂದೆ ಕನ್ನಡ ಪತ್ರಿಕೆಯ ಒಂದಿಬ್ಬರು ಸಂಪಾದಕರಿಗೆ ಬರೆದಿದ್ದೆ, ಅನಿವಾಸಿಗಳು ನಿಮ್ಮಿಂದ ಪತ್ರಿಕೆ/ಪುಸ್ತಕವನ್ನು ಕೊಂಡುಕೊಳ್ಳಬೇಕು ಎಂಬುದು ನಿಮ್ಮ ಇಂಗಿತವಾದರೆ ಆನ್‌ಲೈನ್ ಪೇಮೆಂಟ್ ಮಾಡುವ ಹಾಗಿರಲಿ, ಇಲ್ಲವಾದರೆ ವಾರಕ್ಕೊಮ್ಮೆ ಪತ್ರಗಳನ್ನು ಓದುವ ನನ್ನಂತಹವರು ಇಲ್ಲಿಂದ ಚೆಕ್ಕೋ, ಡಿಡಿಯನ್ನು ಕಳಿಸಿ ಪತ್ರಿಕೆ ಕೊಳ್ಳುವುದಾಗಲೀ, ನವೀಕರಣ ಮಾಡುವುದಾಗಲಿ ಅಷ್ಟರಲ್ಲೇ ಇದೆ ಎಂಬುದಾಗಿ. ಈ ಹೊಸ ಮಾಧ್ಯಮವನ್ನು ಅನುಸರಿಸದ ಪತ್ರಿಕೆಗಳಲ್ಲಿ ಕೆಲವು ನಿಂತು ಹೋದವು, ಇನ್ನು ಕೆಲವು ಸೊರಗಿವೆ ಎಂದು ಹೇಳಬಲ್ಲೆ. ಆದರೆ ವಿಕ್ರಾಂತ ಕರ್ನಾಟಕ ಮೊದಲಿನ ದಿನದಿಂದಲೇ ಈ ಹೊಸ ಮಾಧ್ಯಮ (ಪೇ ಪಾಲ್) ಅನ್ನು ಅಳವಂಡಿಸಿಕೊಂಡಿರುವುದು ನನ್ನಂತಹವರಿಗೆ ಬಹಳ ಅನುಕೂಲಮಾಡಿಕೊಟ್ಟಿತು.

ಹಾಗೇ ಲಗುಬಗೆಯಿಂದ ಪತ್ರಿಕೆಯನ್ನು ತಿರುಗಿಸಿದಾಗ ಪ್ರತಿಯೊಂದು ಪುಟವೂ ವರ್ಣರಂಜಿತ, ಎಲ್ಲಾ ಹಾಳೆಗಳೂ ಗ್ಲೇಜ್ಡ್ ಅಥವಾ ಶ್ರೇಷ್ಠ ಗುಣಮಟ್ಟದಿಂದ ಕೂಡಿದ್ದು ಎನ್ನುವುದನ್ನು ಅನೇಕರು ಗಮನಿಸಿ ಹೊಗಳಿರುವುದನ್ನು ಗುರುತಿಸಿದೆ. ರಾಜಕೀಯ, ರಂಜನೆ, ಪದ್ಯ-ಗದ್ಯಗಳನ್ನೆಲ್ಲವನ್ನು ಒಡಗೂಡಿದ ಸಮಗ್ರ ವಾರ ಪತ್ರಿಕೆಯಾಗಿ ಅಲ್ಲದೇ ಇತ್ತೀಚಿನ ಘಟನೆಗಳಿಂದ ಹಿಡಿದು ಅನೇಕ ಸುದ್ದಿ-ಸ್ವಾರಸ್ಯಗಳನ್ನು ಒಳಗೊಂಡಿರುವುದು ಕಂಡು ಬಂತು. 'ಕನ್ನಡತನದ ಹೊಸ ಪ್ರತಿಷ್ಠೆ' ಎನ್ನುವ ವಿಶೇಷಣ ಅಕ್ಷರಷಃ ನಿಜವಾಗಲಿ, ವರ್ಣರಂಜಿತ ಪುಟಗಳು ಹೀಗೇ ಮುಂದುವರೆಯಲಿ, ರವಿ-ಸುರೇಶ್ ಅವರ ಕನಸಿನಂತೆ ಸಕಲ ಕನ್ನಡಿಗರಿಗೂ ಹೀಗೊಂದು ಪತ್ರಿಕೆ ತಲುಪಲಿ.

***

'ವಿಕ್ರಾಂತ' ಎಂದರೆ stepped beyond ಅನ್ನೊ ಅರ್ಥದಲ್ಲಿ, ಈ ಪತ್ರಿಕೆ ಮುಂದೆ ಕನ್ನಡದ ಪತ್ರಿಕೋದ್ಯಮದಲ್ಲಿ ಮಹತ್ತರ ಮೈಲಿಗಲ್ಲೊಂದನ್ನು ಸ್ಥಾಪಿಸುವಂತಾಗಲಿ ಎಂಬುದು ನನ್ನ ಹಾರೈಕೆ.

'ಅಂತರಂಗ'ದ ಹೃತ್ಪೂರ್ವಕ ಶುಭಾಶಯಗಳು!

Wednesday, August 16, 2006

ಹಳ್ಳಿಯಾದರೇನಂತೆ?

ಇತ್ತೀಚೆಗೆ ನಾನು ಗಮನಿಸುತ್ತಿದ್ದಂತೆ ಎರಡು ಮಹತ್ವದ ಬೆಳವಣಿಗೆಗಳು ನಡೆದವು: ಒಂದು, ನಾನು ನೋಡುವ ಮೊದಲೇ ಯಾರೋ ವಿಕಿಮ್ಯಾಪಿಯಾದಲ್ಲಿ ನಮ್ಮ ಊರನ್ನು ಹುಡುಕಿ ಅಲ್ಲಿಯ ರಸ್ತೆ, ಸೇತುವೆ, ಶಾಲೆ, ಕಾಲೇಜು ಮುಂತಾದ ಲ್ಯಾಂಡ್‌ಮಾರ್ಕ್‌ಗಳನ್ನು ಇಲ್ಲಿಂದ ಸೆಟಲೈಟ್ ಚಿತ್ರದಲ್ಲಿ ಗುರುತಿಸಿ ಇಟ್ಟಿದ್ದು, ಮತ್ತೊಂದು ಲೆಬನಾನ್‌ನಲ್ಲಿ, ಅದರಲ್ಲೂ ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ವಾಯುಪಡೆಗಳು ಹಳ್ಳಿ-ಪಟ್ಟಣವೆನ್ನದೆ ಪ್ರತಿಯೊಂದರ ಮೇಲೂ ಬಾಂಬುಗಳನ್ನು ಬಿಸಾಕಿ ನೆಲಸಮ ಮಾಡಿದ್ದು. ಟಿವಿಯಲ್ಲಿ ತೋರಿಸೋ ಚಿತ್ರಗಳ ಮುಖಾಂತರ ಇಸ್ರೇಲ್‌ನವರೂ ದಕ್ಷಿಣ ಲೆಬನಾನ್ ಅನ್ನು ಚೆನ್ನಾಗಿ ಅಧ್ಯಯನ ಮಾಡಿ ವೈರಿಪಡೆ ಅಡಗಿಕೊಂಡಿರಬಹುದಾದ ಅಡಗುತಾಣಗಳ ಮೇಲೆ ನಿರಂತರ ಧಾಳಿ ನಡೆಸಿದ ಸುದ್ದಿಯನ್ನು ಮನವರಿಕೆ ಮಾಡಿಕೊಳ್ಳುತ್ತಿದ್ದಂತೆ ಸುಮ್ಮನೇ ಈ ಯೋಚನೆ ನನ್ನ ತಲೆಯಲ್ಲಿ ಹುದುಗಿತು - ಒಂದುವೇಳೆ ಭಾರತವನ್ನು ಈ ರೀತಿ ಯಾರಾದರೂ ಧಾಳಿ ಮಾಡಿದರೆ, ನಮ್ಮಲ್ಲಿನ ಪ್ರತಿಯೊಂದು ಸೇತುವೆ, ಕಟ್ಟಡಗಳ ಮೇಲೂ ಬಾಂಬುಗಳನ್ನು ಬಿಸಾಡಲು ತೊಡಗಿದರೆ ಏನಾದೀತು ಎಂದು ಯೋಚಿಸುತ್ತಿದ್ದಂತೆ ಊಹೆಯ ಪರಿಸ್ಥಿತಿ ಕೂಡಾ ಗಂಭಿರವಾಗತೊಡಗಿತು. ಇದ್ದಕ್ಕಿದ್ದ ಹಾಗೆ ನಮ್ಮ ಊರಿನ ಮೇಲೆ ಮೋಹ ಹುಟ್ಟಿದ್ದೂ ಅಲ್ಲದೇ ಹಾಗೆ ಯಾರೂ ಧಾಳಿ ಮಾಡಲಾರರು ಎಂದು ಗೊತ್ತಿದ್ದೂ ಹಾಗೆ ಮಾಡಿದವರನ್ನು ಸುಮ್ಮನೇ ಬಿಟ್ಟುಬಿಡಬಾರದು ಎನ್ನುವ ಕೆಚ್ಚೂ ಹುಟ್ಟಿತು. ಕೇವಲ ಐದೇ ಐದು ನಿಮಿಷ ಕಂಪ್ಯೂಟರ್ ಪರದೆಯ ಮೇಲೆ ಉಪಗ್ರಹ ಆಧಾರಿತ ಚಿತ್ರಗಳನ್ನು ಗುರುತಿಸಿ, ಇದು ನಮ್ಮ ಮನೆ, ಇದು ನಾನು ಓದಿದ ಶಾಲೆ, ಇದು ನಾನು ಆಟವಾಡಿದ ಬಯಲು ಎಂದು ಮುಂತಾದ ಹಲವಾರು ಗುರುತುಗಳನ್ನು ಹುಡುಕಿ ಊರಿನ ನೆನಪು ಮನದಲ್ಲಿ ಹುಟ್ಟುತ್ತಿದ್ದಂತೆ ಜೊತೆಯಲ್ಲಿ ಅಷ್ಟೇ ಜೋರಾಗಿ ಬಂದ ರೋಷವದು - ಒಂದು ರೀತಿ ಆಡುವ ಮಗುವಿನ ಕೈಯಿಂದ ಚೆಂಡನ್ನು ಕಸಿದುಕೊಂಡಾಗ ಅದಕ್ಕೆ ಆ ಕ್ಷಣದ ಮಟ್ಟಿಗೆ ಕೋಪ ಬರುವ ಹಾಗೆ. ಅಕಸ್ಮಾತ್ ನಮ್ಮ ಹಿರಿಯರು ಬದುಕಿಬಾಳಿದ ಮನೆ, ನಮ್ಮ ಊರಿನ ಕಟ್ಟಡ-ಸೇತುವೆಗಳ ನೆಲಸಮ ನನ್ನ ಕಣ್ಣಮುಂದೆಯೇ ಆಗಿಯೇ ಬಿಟ್ಟಿತೆಂದರೆ ಅದರ ಜೊತೆಯಲ್ಲೇ ಹುಟ್ಟಿದ ಕೆಚ್ಚಿನ ದೆಸೆಯಿಂದ ನನಗೆ 'ಭಯೋತ್ಪಾದಕ'ನೆಂಬ ಹಣೆಪಟ್ಟಿ ಬಂದುಬಿಡುತ್ತೇನೋ ಎಂದು ಭಯವೂ ಆಯಿತು!

ನನ್ನನ್ನು ಪಕ್ಕಾ ಹಳ್ಳಿಯ ಹಿನ್ನೆಲೆಯವನು ಎಂದು ಊಹಿಸಿಕೊಳ್ಳಲು ಯಾರಿಗೂ ಹೆಚ್ಚು ಹೊತ್ತು ಬೇಕಾಗುವುದಿಲ್ಲ, ಹೋದಲ್ಲಿ ಬಂದಲ್ಲಿ ನೆರೆಹೊರೆಯ ಮೇಲೆ ಕುತೂಹಲ, ಪ್ರೀತಿ ಹುಟ್ಟುವುದೂ ಅಲ್ಲದೇ, ನನ್ನ ನಡವಳಿಕೆಗಳಲ್ಲೂ "ಹಳ್ಳಿತನ" ತೋರಿಬರುತ್ತದೆ. ಒಮ್ಮೆ ಹೀಗೇ ಶೆನಂಡೋವಾ ವ್ಯಾಲಿಯಲ್ಲಿ ಪಿಕ್‌ನಿಕ್‌ಗೆ ಹೋಗಿದ್ದೆವು, ಆಗ ಊಟಕ್ಕೆ ಕುಳಿತಾಗ ನನ್ನ ಮೊದಲು ತುತ್ತನ್ನು ನನಗರಿವಿಗೆ ಬಂದೋ ಬಾರದೆಯೇ ನೆಲಕ್ಕೆ ಹಾಕಿ ಊಟ ಮಾಡಲು ಶುರುಮಾಡಿದೆ, ಅದನ್ನು ನೋಡಿದ ನನ್ನ ಸ್ನೇಹಿತ ಅದರ ಬಗ್ಗೆ ಕೇಳಿದ್ದಕ್ಕೆ ನಾನು ಗದ್ದೆ-ತೋಟದಲ್ಲಿ ಊಟ ಮಾಡೋ ಯಾರಾದರೂ ಮಾಡೋ ಕೆಲಸವದು, ಸಂಪ್ರದಾಯವೇನಲ್ಲ, ಒಂದು ಬಗೆಯ ರೂಢಿ ಎಂದು ಉತ್ತರ ಹೇಳಿದ್ದಕ್ಕೆ ಅವನೂ ಹಾಗೇ ಮಾಡಿದ. ನಮ್ಮದು ರೈತಾಪಿ ಕುಟುಂಬವೇನಲ್ಲ, ಆದರೂ ಅನೇಕ ರೈತ ಕುಟುಂಬಗಳ ನಡುವೆ ಬೆಳೆದ ಬಂದ ನನಗೆ ಅದು ಸಹಜವಾಗಿತ್ತು, ಅದೇ ನನ್ನ ಪಟ್ಟಣದ ಸ್ನೇಹಿತನಿಗೆ ವಿಚಿತ್ರವಾಗಿ ಕಂಡಿರಲಿಕ್ಕೂ ಸಾಕು.

ಇವತ್ತಿಗೂ ಸಹ ಭಾರತವನ್ನು ಪೂರ್ಣವಾಗಿ ಚಿತ್ರಿಸಬೇಕು ಎನ್ನೋದಾದರೆ ಅಲ್ಲಿಯ ಹಳ್ಳಿಯ ಲವಲವಿಕೆಯನ್ನೂ ತೋರಿಸಬೇಕು, ಹಳ್ಳಿಗಳೇ ಭಾರತದ ಜೀವಾಳ, ಇವತ್ತಿಗೂ ಸಹ ರಸ್ತೆ, ವಿದ್ಯುತ್, ಶಾಲೆ, ಮುಂತಾದ ಮೂಲಭೂತ ವ್ಯವಸ್ಥೆಯೂ ಇಲ್ಲದ ಎಷ್ಟೋ ಹಳ್ಳಿಗಳ ಚಿತ್ರಣವನ್ನು ನಾವು ಅಲ್ಲಲ್ಲಿ ಓದುತ್ತಲೇ ಇರುತ್ತೇವೆ. ನಿಜವಾದ ಭಾರತದ ಅಭಿವೃದ್ಧಿ ಎನ್ನೋದೇನಾದರೂ ಇದ್ದರೆ ಅದು ಈ ಹಳ್ಳಿಗಳ ಸಾಮೂಹಿಕ ಬೆಳವಣಿಗೆಯಲ್ಲಿದೆ. ಸ್ವಾತಂತ್ರ್ಯಾ ನಂತರದ ದಿನಗಳಿಂದಲೂ ಪಂಚವಾರ್ಷಿಕ ಯೋಜನೆ ಮತ್ತಿತರ ಹಲವಾರು ಪ್ರಧಾನಮಂತ್ರಿಗಳು ಕನಸು ಕಟ್ಟಿದ ಹಾಗೇ ಬೇಕಾದಷ್ಟು ಮಹಾಯೋಜನೆಗಳು ಬಂದರೂ, ಆರು ದಶಕಗಳ ಕಾಲ ಸರಿದರೂ ಹಳ್ಳಿಗಳು ಇನ್ನೂ ಹಳ್ಳಿಗಳಾಗೇ ಇವೆ. ಜಗತ್ತಿನ ಕಣ್ಣಿಗೆ ಕಾಣುವ ಮಾಹಿತಿ ಅಥವಾ ಜೀವ ತಂತ್ರಜ್ಞಾನವಾಗಲೀ, ಅಲ್ಲಲ್ಲಿ ಹಾರಿಬಿಡುವ ಉಪಗ್ರಹ ಯೋಜನೆಗಳಾಗಲೀ ಇವ್ಯಾವೂ ಹಳ್ಳಿಗಳಿಗೆ ಸಂಬಂಧಿಸಿಲ್ಲವೇನೋ ಎನ್ನುವಂತೆ ಮೇಲ್ಮಟ್ಟಕ್ಕೆ ತೋರಿದರೂ, ಬಸವನ ಹುಳುವಿನ ಗತಿಯಲ್ಲಿ ಬಲುನಿಧಾನವಾಗಿ ಹಳ್ಳಿಗಳೆಡೆಗೂ ಅಭಿವೃದ್ಧಿ ಸುಳಿಯುತ್ತಿದೆ.

ಹಳ್ಳಿಗಳೆಂದರೆ ಎಲ್ಲ ಕಡೆಯೂ ಕಡಿಮೆ ಖರ್ಚು - ಹಾಗೇ ನಮ್ಮೂರಿನಲ್ಲೂ ಇವತ್ತಿಗೂ ಎರಡು ಮಕ್ಕಳ ಒಂದು ಕುಟುಂಬ ಮನಸ್ಸು ಮಾಡಿದರೆ ತಿಂಗಳಿಗೆ ಒಂದು ಸಾವಿರ ರೂಪಾಯಿಯಲ್ಲಿ ಬದುಕಬಹುದು ಎಂಬುದು ನನ್ನ ಅಭಿಪ್ರಾಯ, ಮನೆಯ ಬಾಡಿಗೆಯನ್ನು ಹೊರತುಪಡಿಸಿ. ನಾವೇ ಹಿತ್ತಲಿನಲ್ಲಿ ಬೆಳೆಸಿದ ತರಕಾರಿಗಳಿಂದ ಹಿಡಿದು, ಗಂಗೆ-ಗೌರಿ ಕೊಡುವ ಹಾಲಿನಲ್ಲೂ, ಹೆಚ್ಚೂ ಕಡಿಮೆ ವಿದ್ಯುತ್ ಅನ್ನು ದೀಪ ಉರಿಸಲು ಮಾತ್ರವೇ ಉಪಯೋಗಿಸಿ - ಅದರಲ್ಲೂ ಆಗಾಗ್ಗೆ ರಾತ್ರಿವೇಳೆ ಕರೆಂಟು ಹೋಗೋದರಿಂದ ವಿದ್ಯುತ್ ಬಿಲ್ಲೂ ಕಡಿಮೆ ಬಂದು, ನಲ್ಲಿ ನೀರಿಗೆ ಕಡಿಮೆ ಬೆಲೆಕೊಟ್ಟು ಅಥವಾ ಮನೆಯ ಹಿಂದಿನ ಬಾವೀ ನೀರನ್ನೇ ಎಲ್ಲದ್ದಕ್ಕೂ ಬಳಸಿ, ಮಕ್ಕಳನ್ನು ಯಾವಾಗಲೂ ಅತಿಕಡಿಮೆ ಶುಲ್ಕವಿರುವ ಸರ್ಕಾರಿ ಶಾಲೆಗಳಿಗೆ ಸೇರಿಸಿಬಿಟ್ಟರೆ ಆಗಿ ಹೋಯಿತಲ್ಲ. ಏನಾದರೂ ಓದಬೇಕೆಂದ್ರೆ ಯಾವ್ದಾದ್ರೂ ನ್ಯೂಸ್ ಪೆಪರ್ ತರಿಸಿದ್ರಾಯ್ತು, ಕಂಪ್ಯೂಟರ್ರೂ ಬೇಡ ಮತ್ತೊಂದೂ ಬೇಡ ಹಲವಾರು ಚಾನೆಲ್ಲುಗಳು ಬರೋ ಟಿವಿ ಇರೋವಾಗ!

ನಾನು ಬೆಳೆದು ಹದಿನೈದು ವರ್ಷ ಕಳೆದುಬಂದ ಊರು ನನ್ನ ಹಿಂದಿದೆ, ಆಗ ಹಳ್ಳಿಯಾಗಿದ್ದರೂ ಇಂದು ಸಣ್ಣ ಪಟ್ಟಣವಾಗಿ ಅದಕ್ಕೆ ಭಡ್ತಿ ತೊರೆತಿದ್ದರೂ ಅದು ನನ್ನ ಕಣ್ಣಿಗೆ ಕಾಣುವಂತೆ, ನನ್ನ ಮನಸ್ಸಿನಲ್ಲಿ ಉಳಿಯುವಂತೆ ಹಳ್ಳಿಯಾಗಿಯೇ ಇದೆ. ನಾಗಾಲೋಟದಲ್ಲಿ ಬರುತ್ತಿರುವ ಬೆಳವಣಿಗೆಗಳು ಒಂದುಕಡೆ, ಮಧುರವಾದ ಹಳೆಯ ನೆನಪುಗಳು ಇನ್ನೊಂದುಕಡೆ, ಹಳೆಯದನ್ನ ನೆನಪಿಸಿ ಊರನ್ನು ಚಿಕ್ಕದಾಗಿ ಮಾಡುವ ಆಲೋಚನೆ ಒಂದುಕಡೆ, ವೇಗವಾಗಿ ಬರೋ ಬೆಳವಣಿಗೆಗಳು ಜಗತ್ತನ್ನೇ ಹಳ್ಳಿಯನ್ನಾಗಿ ಮಾಡೋದು ಮತ್ತೊಂದುಕಡೆ - ಹೀಗೆ ಕಾಲ ಬೆಳೆದುಬಂದರೂ ಬೆಳವಣಿಗೆಯ ಜೊತೆಯಲ್ಲಿ ನಮ್ಮನ್ನೆಲ್ಲರನ್ನು ಒಂದಲ್ಲ ಒಂದು ರೀತಿಯಲ್ಲಿ ಹಳ್ಳಿಯವರನ್ನಾಗಿ ಮಾಡುವ ಕುಹಕ ಯಾರದೋ ಪೂರ್ವ ನಿರ್ಧಾರಿತ ಯೋಜನೆಯಂತೆ ಕಂಡುಬರುತ್ತದೆ. ಕಂಪ್ಯೂಟರ್ ಪರದೆಯ ಮೇಲೆ ಅಕ್ಷಾಂಶ-ರೇಖಾಂಶಗಳನ್ನು ಹಿಗ್ಗಿಸಿ ನೋಡಿದಂತೆಲ್ಲ ನಮ್ಮ ಮಹಾ ನಗರವೂ ಒಂದು ಹಳ್ಳಿಯಂತೆಯೇ ಕಂಡುಬರುತ್ತದೆ. ವ್ಯವಸ್ಥಿತವಾದ ಬಡಾವಣೆಗಳು, ಚೌಕಚೌಕದ ಆಕಾರದಲ್ಲಿ ಸೈಟುಗಳನ್ನು ಕತ್ತರಿಸಿಕೊಂಡು ಸಮೂಹವನ್ನು ನಿರ್ಮಿಸಿಕೊಂಡಿದ್ದೇವೆ ಎನ್ನೋ ಭ್ರಮೆಯಲ್ಲಿರುವ ಅದೆಷ್ಟೋ ಚಿತ್ರಗಳೂ ಎತ್ತರದಿಂದ ನೋಡಿದಾಗ ವಕ್ರವಕ್ರವಾಗಿಯೇ ಕಂಡುಬರುತ್ತಿವೆ. ಬರಿಯ ಬೆಂಗಳೂರು, ಬಾಂಬೆಯೇಕೆ ಇಲ್ಲಿಯ ಹಲವಾರು ನೆರೆಹೊರೆಗಳೂ, ರಸ್ತೆಗಳೂ ಬಳುಕಿವೆ, ಒಂದು ರೀತಿ ಹಳ್ಳಿಯಲ್ಲಿ ಕಂಡು ಬರುವ ಅನ್ಯೋನ್ಯತೆಯ ಧ್ಯೋತಕವಾಗಿ ಎಲ್ಲೆಲ್ಲೂ ವಕ್ರಗೆರೆಗಳೇ ಕಾಣುತ್ತಿವೆ!

ಹಳ್ಳಿ ಹಲವಾರು ಅನುಭವಗಳನ್ನು ಕಲಿಸುತ್ತದೆ - ಇದು ಇಂತಹ ಪ್ರಾಣಿ ಎನ್ನೋ ನಿಜ ಜೀವನದ ಅನುಭವದ ಮುಂದೆ ಪೇಟೆಯ ಮಕ್ಕಳು ಮೃಗಾಲಯದಲ್ಲಿ ನೋಡೋ ಸೊರಗಿದ ಪ್ರಾಣಿಗಳ ಚಿತ್ರಣ ಸಪ್ಪೆಯಾಗಿ ಕಂಡುಬರುವಂತೆ ಹಳ್ಳಿಯ ಮಟ್ಟದಲ್ಲಿ ಸಿಗಬಹುದಾದ ಎಲ್ಲ ನೈಸರ್ಗಿಕ ಸಂಪನ್ಮೂಲವೂ ಒಂದಲ್ಲ ಒಂದು ರೀತಿಯಿಂದ ನೆರೆಹೊರೆಯ ಮೇಲಿನ ಪ್ರೀತಿಯನ್ನು ಹೆಚ್ಚಿಸಿವೆ. ಪೊದೆಗಳ ಸಂದಿನಲ್ಲಿ ಗೂಡುಕಟ್ಟಿ ಬದುಕುವ ಸಣ್ಣ ಪಕ್ಷಿಗಳಿಂದ ಹಿಡಿದು ಊರ ಹೊರಗಿನ ಬಯಲಿನಲ್ಲಿ ಸತ್ತ ಜಾನುವಾರುಗಳ ಹಸಿಮಾಂಸವನ್ನು ಕಿತ್ತು ತಿನ್ನುವ ರಣಹದ್ದುಗಳ ದರ್ಶನವೂ ಒಂದೇ ಊರಿನಲ್ಲಿ ಆಗುತ್ತದೆ. ದಿನಬೆಳಗಾದರೆ ಯಾರದ್ದೋ ಮನೆಯ ಕೋಳಿ ಕೂಗುವ ಸದ್ದಿನಿಂದ ಹಿಡಿದು, ರಾತ್ರಿ ಅದೆಷ್ಟೋ ಹೊತ್ತಿನಲ್ಲಿ ಊಳಿಡುವ ನಾಯಿಯೂ ಬದುಕಿನ ಭಾಗವಾಗಿ ಹೋಗುತ್ತದೆ. ಮಳೆ-ಬೆಳೆಯ ಜೊತೆಗೆ ನೇರ ಸಂಪರ್ಕವಿದ್ದು, ಅದನ್ನು ಆಧರಿಸಿದವರ ಗೋಳು ನಮ್ಮ ಗೋಳಾಗುತ್ತದೆ. ಹೀಗೆ ಹಲವಾರು ಪ್ರಿಮಿಟಿವ್ ಅನುಭವಗಳ ನಡುವೆ ನಿಧಾನವಾಗಿ ಬದಲಾಗುವ ಋತುಮಾನಗಳನ್ನೂ ಮನದೊಳಗೇ ಲೆಕ್ಕ ಹಾಕಿಕೊಳ್ಳುವ ಜಾಣತನವನ್ನು ಕಲಿಸುತ್ತದೆ. ದಿನಬೆಳಗಾದರೆ ನೋಡೋದೇ ಇಂತಿಷ್ಟು ಜನಗಳ ಮುಖ ಅಂತಾಗಿ ಬೇಕೋ ಬೇಡವೋ ಹಂಚಿಕೊಂಡು ಬಾಳುವ ವ್ಯವಸ್ಥೆ ತಾನೇ ತಾನಾಗಿ ಪ್ರಭಲವಾಗುತ್ತದೆ.

ಇವತ್ತಿಗೂ ನನ್ನಲ್ಲೇನೂ ಅಂತಹ ಬದಲಾವಣೆಗಳೇನಿಲ್ಲ - 'ಅವನು ಒಳ್ಳೇ ಮನುಷ್ಯ' ಎಂದು ಎಷ್ಟೋ ಸಾರಿ ನಾನು ಕೊಡುವ ವ್ಯಾಖ್ಯೆಗಳಿಗೆ ನನ್ನ ಹುಟ್ಟಿ ಬೆಳೆದ ಪರಿಸರವೇ ಹಿನ್ನೆಲೆಯಾಗಿ ನಿಂತಿದೆ, ನಮ್ಮಲ್ಲಿ ಒಮ್ಮೆ 'ಒಳ್ಳೆಯ'ದಾದರೆ ಆ ವ್ಯಾಖ್ಯೆ ಪದೇ-ಪದೇ ಬದಲಾಗುವಂತದ್ದೇನಲ್ಲ, ಈ ನಂಬಿಕೆ ಬಹಳಷ್ಟು ಸಾರಿ ನನಗೆ ಕಷ್ಟವನ್ನು ತಂದುಕೊಟ್ಟರೂ, ಮಾತಿನಲ್ಲಿ ಹೇಳಲು ಬಾರದ ಕಾರಣಗಳಿಂದಾಗಿ ನಾನು ಜನರನ್ನು ನಂಬುವುದೇ ಹೆಚ್ಚು ಎಂದರೆ ತಪ್ಪೇನೂ ಇಲ್ಲ!

Monday, August 14, 2006

ಪವರ್ (ಆಫ್) ವಿಮೆನ್

ಬರೋ ಅಕ್ಟೋಬರ್‌ನಲ್ಲಿ ಭಾರತೀಯ ಸಂಜಾತೆ ಇಂದ್ರಾ ನೂಯಿ ಪೆಪ್ಸಿಕೋ ಕಂಪನಿ ಸಿಇಓ ಆಗ್ತಾರೆ ಎಂದು ಕೇಳಿದೆ, ರೆಡಿಯೋ, ಟಿವಿ ಎಲ್ಲಾ ಕಡೆ ಆಕೆಯದೇ ಸುದ್ದಿ, ಸಾಪ್ಟ್ ಡ್ರಿಂಕ್ಸ್ ಮಾರುಕಟ್ಟೆಯಲ್ಲಿ ನಂಬರ್ ಒನ್ ಆಗಿರೋ ಪೆಪ್ಸಿ ಕಂಪನಿಯ ಸಿಇಓ ಆಗೋದು ಅಂದ್ರೆ ಸಾಮಾನ್ಯವಾದ ಕೆಲಸವೇನಲ್ಲ. ಇಂದ್ರಾ ಅವರು ಈ ಹುದ್ದೆಗೆ ರಾತ್ರೋ ರಾತ್ರಿ ಪದವಿಗೇನು ಏರಿದವರಲ್ಲ, ಪೆಪ್ಸಿಕೋ ದಲ್ಲಿ ಹಲವಾರು ಸೀನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳನ್ನಲಂಕರಿಸಿ ಕಳೆದ ಐದು ವರ್ಷಗಳಲ್ಲಿ ಕಂಪನಿಯ ಸಿಎಫ್‌ಓ ಆಗಿಯೂ ಕೂಡಾ ಅವರಿಗೆ ಅನುಭವವಿದೆ. ಕಲ್ಪನಾ ಚಾವ್ಲಾ ನಂತರ ಅಮೇರಿಕನ್ ಮಾಧ್ಯಮಗಳಲ್ಲಿ ಭಾರತೀಯ ಮಹಿಳೆಯಾಗಿ ಹೆಸರು ಮಾಡಿದ ಇಂದ್ರಾ ಅವರಿಗೆ ಎಲ್ಲರೂ ಅಭಿನಂದಿಸಬೇಕು ಹಾಗೂ ಅವರನ್ನು ಒಬ್ಬ ಮಾದರಿಯನ್ನಾಗಿ ಅನುಸರಿಸಬೇಕು.

ಅದೂ ನಮ್ಮ ಸ್ವಾತಂತ್ರ್ಯ ದಿನಾಚರಣೆ ಹೊತ್ತಿಗೆ ಇದು ಒಂದು ಒಳ್ಳೇ ಸಂಭ್ರಮದ ಸುದ್ದಿ!

ಈ ದೇಶಕ್ಕೆ ಬಂದ ಹೊಸತರಲ್ಲಿ ಇನ್ನೂರು ವರ್ಷಕ್ಕಿಂತ ಹೆಚ್ಚು ಪ್ರಜಾಪ್ರಭುತ್ವದ ಇತಿಹಾಸವಿರೋ ಈ ದೇಶದಲ್ಲಿ ಒಬ್ಬಳೇ ಒಬ್ಬಳು ಹೆಣ್ಣುಮಗಳು ಪ್ರೆಸಿಡೆಂಟ್ ಸ್ಥಾನವನ್ನು ಅಲಂಕರಿಸಿಲ್ಲ ಎಂದು ಕೇಳಿ ಆಶ್ಚರ್ಯವಾಗುತ್ತಿತ್ತು. ನಿಧಾನವಾಗಿ ಇಲ್ಲೂ ಪುರುಷ ಪ್ರಧಾನ ಸಮಾಜವಿದೆ, ಜೊತೆಯಲ್ಲಿ ಮಹಿಳೆಯರನ್ನು ಮೈನಾರಿಟಿಯಾಗಿ ಕನ್ಸಿಡರ್ ಮಾಡುತ್ತಾರೆ ಎಂದು ಗೊತ್ತಾದ ನಂತರ, ಲಿಂಗಬೇಧದ ವಿಚಾರವಾಗಿ ಅಮೇರಿಕ ಬೇರೆ ಯಾವ ದೇಶಕ್ಕೂ ಹೊರತಾಗಿ ಕಂಡುಬರಲಿಲ್ಲ. ಆದರೆ ತೃತೀಯ ಜಗತ್ತಿನಲ್ಲಾಗಲೇ ದೇಶವನ್ನಾಳುವುದು (ಭಾರತ, ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕಾ ಇತ್ಯಾದಿ ದೇಶಗಳಲ್ಲಿ) ಹಾಗೂ ಮುಂದುವರಿದ ಹಲವು ರಾಷ್ಟ್ರಗಳಲ್ಲೂ (ಉದಾಹರಣೆಗೆ ಗ್ರೇಟ್ ಬ್ರಿಟನ್) ಹೆಂಗಸರು ಆಳ್ವಿಕೆ ನಡೆಸಿದ ಇತಿಹಾಸವಿದ್ದರೂ ಅಮೇರಿಕದ ರಾಜಸತ್ತೆಯಲ್ಲಿ ಹೆಣ್ಣುಮಕ್ಕಳು ಬೇರೇನೆಲ್ಲ ಸ್ಥಾನಮಾನಗಳನ್ನು ಅಲಂಕರಿಸಿದ್ದರೂ ಅಧ್ಯಕ್ಷ/ಉಪಾಧ್ಯಕ್ಷರಾಗಿಲ್ಲವೆನ್ನುವುದು ಇಂದಿಗೂ ನಿಜ. ಆಗ ನ್ಯೂ ಜೆರ್ಸಿ ಗವರ್ನರ್ ಆಗಿ, ಮುಂದೆ ಇ.ಪಿ.ಎ. ಸೆಕ್ರೆಟರಿ ಆಗಿ ಹೆಸರು ಮಾಡಿದ ಕ್ರಿಷ್ಟಿ ಟಾಡ್ ವಿಟ್‌ಮನ್ ಆಗಲಿ, ಇಂದು ನ್ಯೂ ಯಾರ್ಕ್ ಸೆನೆಟರ್ ಆಗಿದ್ದುಕೊಂಡು, ಮುಂದೆ ೨೦೦೮ ರಲ್ಲಿ ಪ್ರೆಸಿಡೆಂಟಿಯಲ್ ಕ್ಯಾಂಡಿಡೇಟ್ ಆಗಿರೋ ಹಿಲರಿ ಕ್ಲಿಂಟನ್, ಮುಂತಾದವರು ಅಲ್ಲಲ್ಲಿ ಮಿಂಚಿದರೂ ಈ ದೇಶ ಆಳ್ವಿಕೆಯನ್ನು, ಮುಂದಾಳುತನವನ್ನು ಹೆಂಗಸರಿಗೆ ಬಿಟ್ಟುಕೊಡುವುದು ಅಷ್ಟರಲ್ಲೇ ಇದೆ, ಒಂದುವೇಳೇ ಹಾಗೇನಾದರೂ ಆದರೆ ಅದೊಂದು ವಿಶೇಷ ಬೆಳವಣಿಗೆ - ಜರ್ಮನಿಯಲ್ಲಿ ಆಗಿದೆ, ಇಲ್ಲಿ ಆಗಬಾರದೆಂದೇನಿಲ್ಲ!

ಇದು ಒಂದು ತೆರೆದ/ಮುಕ್ತ ದೇಶ, ಇಲ್ಲಿ ಪ್ರತಿಭೆ ಇದ್ದವರು ಮುಂದೆ ಹೋಗಬಹುದು, ಲಿಂಗಭೇದವಿಲ್ಲದೆ ಪ್ರತಿಯೊಬ್ಬರೂ ತಮ್ಮತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಬಹುದು ಎಂದುಕೊಂಡಾಗೆಲ್ಲ ಇಷ್ಟು ಜನ ಪ್ರೆಸಿಡೆಂಟುಗಳಲ್ಲಿ ಒಬ್ಬರೇ ಒಬ್ಬರು ಸ್ತ್ರೀ ಏಕಿಲ್ಲ ಎನ್ನೋ ಪ್ರಶ್ನೆಯನ್ನು ಬಿಡಿಸಿ ನೋಡುತ್ತಾ ಹೋದಾಗ 'ಮುಕ್ತ' ದೇಶ ನಿಜವಾಗಿಯೂ ಮುಕ್ತವಲ್ಲ, ಇಲ್ಲೂ ಸಹ ಭಾಷೆಗೆ ನಿಲುಕದ ಹಲವಾರು ಬಂಧನಗಳು, ಅಡೆತಡೆಗಳಿವೆ, ಬರೀ ಚರ್ಮದ ಬಣ್ಣವಷ್ಟೇ ಅಲ್ಲ, ಲಿಂಗಭೇದವೂ ಅಲ್ಲಲ್ಲಿ ಎದ್ದು ತೋರುತ್ತದೆ. ಈ ಹಿನ್ನೆಲೆಯಲ್ಲಿ ಒಬ್ಬ ಪ್ರತಿಭಾವಂತೆಗೆ ರಾಜಕೀಯದಲ್ಲಿ ಮುಂದೆ ಹೋಗಲು ಭಾರತದಲ್ಲೇ ಹೆಚ್ಚಿನ ಅವಕಾಶಗಳಿವೆ, ಮನಸ್ಸು ಮಾಡಿದರೆ ಪ್ರಧಾನ ಮಂತ್ರಿ ಆಗಬಹುದು ಎಂದು ವಾದ ಮಾಡಬಹುದು, ಆದರೆ ಅದೇ ವ್ಯಕ್ತಿ ಇಲ್ಲಿ ಏನಾಗುತ್ತಾಳೆ ಎಂದು ಹೇಳೋದು ಕಷ್ಟ. ನಾನು ಹಿಲರಿ ಕ್ಲಿಂಟನ್ ಫ್ಯಾನ್ ಅಲ್ಲ, ನಾನು ಇಲ್ಲಿ ಓಟು ಮಾಡುವುದೂ ಇಲ್ಲ, ಆದರೆ ಬದಲಾವಣೆಗೋಸ್ಕರವಾದರೂ ಹಿಲರಿಯಂತಹವರು ರಾಷ್ಟ್ರಾಧ್ಯಕ್ಷರಾಗಲಿ ಅನ್ನೋರಲ್ಲಿ ನಾನೂ ಒಬ್ಬ. ಹಿಲರಿಯ ಹಲವಾರು ಪಾಲಿಸಿಗಳನ್ನು, ಆಶೋತ್ತರಗಳನ್ನು, ಪ್ರಣಾಲಿಕೆಗಳನ್ನು ನಿಜವಾದ ಮೌಲ್ಯಮಾಪನ ಮಾಡಿ ಮತದಾರರು ಆಯ್ಕೆ ಮಾಡುವಂತಿದ್ದರೆ ಎಷ್ಟೋ ಚೆನ್ನಾಗಿತ್ತು, ಆದರೆ ನಿಜಜೀವನದಲ್ಲಿ ಆಗೋದೇ ಬೇರೆ.

ಅದ್ಯಾವುದೋ ಕಾಲದಲ್ಲಿ ಅದೇನೋ ಆಗಿತ್ತೆಂದು ಇವತ್ತಿಗೂ ಸಹ ಹೆಣ್ಣುಮಕ್ಕಳಿಗೆ ಮಿತಿಯನ್ನೇಕೆ ಪರೋಕ್ಷವಾಗಿ ಹೇರಬೇಕು? ಆಧುನಿಕ ಸಾಮಾಜಿಕ ನೆಲೆಗಟ್ಟಿನಲ್ಲಿ ಹೆಣ್ಣಿಗೆ ಸರಿಸಮಾನ ಸ್ಥಾನವೇಕಿಲ್ಲ? ಇಂದ್ರಾ ತರಹದವರು ಒಬ್ಬ ಮುಂದಾಳುವಾಗಿರುವುದನ್ನು ಉಳಿದವರೇಕೆ ಮಾದರಿಯನ್ನಾಗಿ ಮಾಡಿಕೊಳ್ಳುವುದಿಲ್ಲ?... ಇತ್ಯಾದಿಗಳು ಸುಲಭವಾಗಿ ಕೇಳಬಹುದಾದ ಪ್ರಶ್ನೆಗಳು. ಆದರೆ, ಗಂಡು-ಹೆಣ್ಣು ಎನ್ನುವ ಲಿಂಗಬೇಧವನ್ನೇ ಅಫಿಷಿಯಲ್ಲಾಗಿ ಬಳಸಿಕೊಂಡು 'ಹೆಂಗಸರು ಮೈನಾರಿಟಿ' ಎಂದು ಘೋಷಿಸಿಕೊಳ್ಳುವ ಸಮಾಜದಲ್ಲಿ, ಗಂಡು-ಹೆಣ್ಣಿನ ಬೇಧವೆ ದೊಡ್ಡ ಕಂದಕವಾಗಿರುವಾಗ ಇನ್ನುಳಿದ ವರ್ಣಬೇಧ, ಜಾತಿಬೇಧ ಮುಂತಾದವುಗಳ ಕಥೆ ಏನು ಎನ್ನುವುದು ಯೋಚಿಸಿದಷ್ಟೂ ಗೋಜಲಾಗುವ ಸಂಗತಿ.

***

Happy 'independence' day to you ALL!

Saturday, August 12, 2006

ಕನ್ನಡದಲ್ಲಿ ಹಾಸ್ಯ ಬರಹ/ಕಥೆ

ಕನ್ನಡದಲ್ಲಿ ಹಾಸ್ಯ ಬರಹಗಳ ಬಗ್ಗೆ ಬರೀ ಬೇಕು ಅಂತ ಬಹಳ ದಿನಗಳಿಂದ ಅಂದ್‌ಕೊಳ್ತಾನೇ ಇದ್ದೆ, ಆದ್ರೆ ಇಲ್ಲೀವರೆಗೂ ಅದು ಸರಿ ಅಂತ ಅನ್ಸಿರಲಿಲ್ಲ, ಆದ್ರೂ ಈ ಸಮಯದಲ್ಲಿ ನನ್ನ ಮನಸ್ಸಿಗೆ ಬಂದದ್ದನ್ನ ಬರೆದೆ ಅಂತ ಅಂದ್ರೆ ಒಂದ್ ಕಲ್ ಚಪ್ಪಡಿ ಭಾರ ಕಳೀತು ಅಂದುಕೋತೀನಿ. ಆದ್ರೆ, ನೀವು ಇದನ್ನ ಓದಿ ಕಲ್ ತಗೊಂಡ್ ನನ್ ಕಡೆ ಬಿಸಾಕೋಕ್ ಮೊದಲು ನನ್ನ ಇತಿ-ಮಿತಿ ಹೇಳ್ಕೊಂಬಿಡ್ತೀನಿ, ಅದರ ಮೇಲೆ ನೀವ್ ಏನ್ ಮಾಡ್ತೀರಿ ಅನ್ನೋದು ನಿಮಗೆ ಬಿಟ್ಟದ್ದು!

ನಾನು ಒಂಥರಾ - ಯಾಕೆ ಒಂಥರಾ ಅಂದ್ರೆ, ಈ ಬದುಕು ಅನ್ನೋ ನಾಟಕದಲ್ಲಿ ಅನಿವಾಸಿ ಪಾರ್ಟ್ ಸಿಕ್ಕು ಅದನ್ನ ಇವತ್ತಿಗೋ ಆಡ್ತಾ ಇರೋ ಹೊತ್ತಿಗೆ ನಮ್ ಕನ್ನಡ ನಾಡಲ್ಲಿ ಏನೇನೋ ಡೆವಲಪ್‌ಮೆಂಟ್ ಎಲ್ಲಾ ಆಗಿ ಹೋಗ್ತಾ ಇದ್ದಾವೆ, ಅದನ್ನ ಒಂದು ದಶಕದ ಮಟ್ಟಿಗೆ ಮಿಸ್ ಮಾಡ್‌ಕೊಂಡಿದ್ದೀನಿ. ನಮ್ ಸಮಾಜವಾಹಿನಿಗಳಾದ ರೆಡಿಯೋ, ಟಿವಿ ಹಾಗೂ ಹಲವಾರು ಪತ್ರಿಕೆಗಳನ್ನ ನಾನು ಇಷ್ಟೊಂದು ವರ್ಷ ಮಿಸ್ ಮಾಡ್‌ಕೊಂಡಿರೋದ್ರಿಂದ ನನ್ನ ಬೆಳವಣಿಗೆಯಲ್ಲಿ ಕನ್ನಡ ನಾಡಿನ ವಿಷಯಗಳು ಬಂದ್ರೆ - ಅಂದ್ರೆ, ಸಾಹಿತ್ಯ, ಸಂಗೀತ, ರಾಜಕೀಯ, ದೈನಂದಿನ ಆಗುಹೋಗುಗಳು, ರೇಡಿಯೋ/ಟಿವಿ ಕಾರ್ಯಕ್ರಮಗಳು ಇವನ್ನೆಲ್ಲ ಕೇಳಿಲ್ಲ/ನೋಡಿಲ್ಲ - ನನ್ ಹಣೇಬರಹಕ್ಕೆ, ಅದು ಹೆಂಗಾದ್ರೂ ಇರಲಿ, ಇವತ್ತಿಗೂ ಕಾಸರವಳ್ಳಿ ದ್ವೀಪ, ಹಸೀನಾ ಸಿನಿಮಾ ನೋಡಿಲ್ಲ, ಟಿಎನ್‌ ಸೀತಾರಾಮ್‌ದೂ ಒಂದೂ ಸಿರಿಯಲ್ ನೋಡಿಲ್ಲ, ಅದರ ಜೊತೇನಲ್ಲಿ ಸಂಕ್ರಾಂತಿಯಾಗಲಿ, ಪಾಪ-ಪಾಂಡುವಾಗಲಿ, ಕುಬೇರಪ್ಪ ಅಂಡ್ ಸನ್ಸ್ ಆಗಲಿ ನೋಡಿಲ್ಲ. ವಿಷ್ಯಾ ಹೀಗಿದ್ದು, ನಾನ್ಯಾವ ಅಥಾರಿಟಿಯಿಂದ ಕನ್ನಡ ಸಾಹಿತ್ಯ/ಸಿನಿಮಾ/ಕಿರುತೆರೆಯಲ್ಲಿ ಬರೋ ಸಾಹಿತ್ಯದ ಮೇಲೆ, ಹಾಸ್ಯದ ಮೇಲೆ ಮಾತಾಡ್ಲಿ? ಅದಕ್ಕೋಸ್ಕರನೇ ಈ ಬರಹ ಬರೆಯೋಕ್ ಆಗ್ದೇ ಇಷ್ಟು ದಿನಾ ಸುಮ್ನೇ ಇದ್ದದ್ದು. ಆದ್ರೆ, ಆವಾಗವಾಗ ನನ್ನ ಸುಬ್ಬನ ಕಥೆಗಳನ್ನು ನೆನಪಿಸಿಕೊಂಡು ಎಷ್ಟೋ ಜನ ಕೇಳ್ತಿರ್ತಾರೆ, ಒಂದು ರೀತಿ ಒರಿಜಿನಲ್ ಹಾಸ್ಯ ಬರಹ ಬರೆಯೋದು ದೊಡ್ಡ ಚಾಲೆಂಜೇ ಸರಿ, ಅದು ನನ್ ಕೈಯಲ್ಲಿ ಆಗೋಲ್ಲ ಅಂತಾನೇ ಸುಮ್ನೇ ಇದ್ದದ್ದು ಅಂದ್ರೂ ಸಹ, ಒಂದು ಮನಸು ಯಾಕೆ ಪುನಃ ಬರೆಯೋಕ್ ಪ್ರಯತ್ನಾ ಮಾಡ್‌ಬಾರ್ದು ಅಂತ ಕೇಳಿಕೊಳ್ತಾನೇ ಇದೆ!

ಕನ್ನಡ ಹಾಸ್ಯವನ್ನು ನೋಡ್ಲಿಲ್ಲ ಅಂದ ಮಾತ್ರಕ್ಕೆ ಉಳಿದದ್ದೆನ್ನೆಲ್ಲ ಸುಮ್ನೆ ಬಿಟ್ಟೆ ಅಂತ ಅರ್ಥ ಅಲ್ಲ, ಇಲ್ಲಿಗೆ ಬಂದ ಮೇಲೆ ಹಲವಾರು ಚಾನೆಲ್ಲುಗಳಲ್ಲಿ ಬೇಕಾದಷ್ಟು ವರ್ಷ ಸೈನ್‌ಫೆಲ್ಡ್, ಫ್ರೆಂಡ್ಸ್, ಹನಿಮೂನರ್ಸ್, ಚೀಯರ್ಸ್, ಥ್ರೀಸ್ ಕಂಪನಿ, ಟೈಟಸ್, ಅಕ್ಕಾರ್ಡಿಂಗ್ ಟು ಜಿಮ್, ಜಾರ್ಜ್ ಲೋಪೆಝ್, ಕಿಂಗ್ ಆಫ್ ಕ್ವೀನ್ಸ್, ಎವರಿಬಡಿ ಲವ್ಸ್ ರೇಮಂಡ್, ಫ್ರೇಜರ್, ಮುಂತಾದ ಸಿಟ್‌ಕಾಮ್‌ (situation comedy) ಗಳನ್ನು ಮನತಣಿಯೆ ನೋಡಿ ಆನಂದಿಸಿದ್ದೇನೆ. ಇವುಗಳಲ್ಲಿ ಚೀಯರ್ಸ್, ಥ್ರೀಸ್ ಕಂಪನಿ ಹಾಗೂ ಸೈನ್‌ಫೆಲ್ಡ್‌ಗಳ ಹೆಚ್ಚೂ ಕಡಿಮೆ ಎಲ್ಲ ಎಪಿಸೋಡ್‌ಗಳನ್ನೂ ನೋಡಿ ಅದರ ಸ್ಕ್ರಿಪ್ಟನ್ನೂ ಸಹ ಓದಿದ್ದೇನೆ. ತುಂಬಾ ಎತ್ತರದಿಂದ ಇವುಗಳ ಕ್ವಾಲಿಟಿಯನ್ನೆಲ್ಲ ಒಂದೇ ಸಾಲಿನಲ್ಲಿ ಅಳೆದು ಬರೀ ಬೇಕು ಅಂದುಕೊಂಡ್ರೆ - ಇವುಗಳ ಕಲಾವಿದರಲ್ಲಿ ಹೆಚ್ಚಿನವರು ಬ್ರಾಡ್‌ವೇ ಮಟ್ಟದವರು, ಹಾಗೂ ಈ ಸ್ಕ್ರಿಪ್ಟ್‌ಗಳನ್ನು ಬರೆದವರು ತಕ್ಕಮಟ್ಟಿಗೆ ಅವರವರ ಒರಿಜಿನಾಲಿಟಿಯಲ್ಲಿ ಬರೆದರೂ ಅವರ ಗಾಢ ಪ್ರತಿಭೆ, ವಿಷಯ ಹಾಗೂ ಸಾಮಾನ್ಯ ಜ್ಞಾನದ ಹರಿವು ಬೇಕಾದಷ್ಟು ಎದ್ದೆದ್ದು ಕಂಡುಬರುತ್ತೆ.

ಏನಪ್ಪಾ, ಇವ್ನು ಇಂಗ್ಲೀಷ್ ಹಾಸ್ಯ ಧಾರಾವಾಹಿಗಳನ್ನ ಕನ್ನಡಕ್ಕೆ ಹೋಲ್ಕೆ ಮಾಡಿ ಬಯ್ಯೋಕ್ ಶುರುಮಾಡ್ತಾನೆ ಅಂತ ಕೂತಲ್ಲೇ ಹಾರ್‌ಬೇಡಿ - ಇಲ್ಲೀವರೆಗೂ ನನಗನ್ನಿಸಿದ ಹಾಗೆ ಚೆನ್ನಾಗಿರೋದನ್ನ ಹಾಗಿದೆ ಅಂತ ಹೇಳಿದ್ದೀನಿ ಅಷ್ಟೇ!

ನಾನು ಇನ್ನೂ ಉದಯ ಟಿವಿ ಹಾಕ್ಸಿಲ್ಲ, ಆದ್ರೆ ನನ್ ಸ್ನೇಹಿತರೊಬ್ಬರಿಗೆ ಒಂದು ವಾರದ ಧಾರಾವಾಹಿಗಳೆಲ್ಲವನ್ನೂ ಟೇಪ್‌ನಲ್ಲಿ ರೆಕಾರ್ಡ್ ಮಾಡಿಕೊಡಿ ಅಂತ ಕೇಳಿಕೊಂಡು ಅವರ ಸಹಾಯದಿಂದ ಯಾವ್ಯಾವ್ದೋ ಸಿರಿಯಲ್‌ಗಳನ್ನೆಲ್ಲ ನೋಡಿದ್ದಕ್ಕೆ ನನ್ನ ಉಸಿರು ನಿಂತ್ ಹೋಗೋದೊಂದ್ ಬಾಕಿ ಇತ್ತು - ಒಂದೇ ಸಾಲಿನಲ್ಲಿ ಹೇಳೋದಾದ್ರೆ ಹೆಚ್ಚಿನವುಗಳಲ್ಲಿ ಯಾವುದೇ ತೂಕ, ಕ್ವಾಲಿಟಿ - ನಟನೆ ಹಾಗೂ ಬರಹದ ದೃಷ್ಟಿಯಿಂದ - ಕಂಡುಬರಲಿಲ್ಲ, ಎಲ್ರೂ ಒಂಥರ ನಾವೀಸ್ ಆಗಿ ಕಂಡ್ ಬಂದ್ರು, ಕ್ಯಾಮೆರಾ ಚಾಲನೆಯಿಂದ ಹಿಡಿದು, ಹಿನ್ನೆಲೆ ಸಂಗೀತದಿಂದ ಹಿಡಿದು, ಸಂಭಾಷಣೆಗಳವರೆಗೆ ಬಹಳ ಸಪ್ಪೆಯಾಗಿತ್ತು - ಹಂಗಂತ ಎಕ್ಸೆಪ್ಷನ್ ಇಲ್ಲ ಅಂತೇನೂ ಇರ್ಲಿಲ್ಲ - ಕ್ವಾಲಿಟಿ ಅನ್ನೋದು ಎಕ್ಸ್‌ಪ್ಷನ್ ಆಗಿತ್ತೇ ವಿನಾ ನಾರ್ಮ್ ಆಗಿರಲಿಲ್ಲ. ಒಂದು ಕಡೆ ತುಂಬಾ ದುಃಖಾ ಆಯ್ತು - ಕೈಲಾಸಂ, ಬೀಚಿ, ಗೊರೂರ್ ಮುಂತಾದೋರ್ ಹಾಸ್ಯ ಓದ್ ಬೆಳದೋನ್ ನಾನು, ಆ ಮಟ್ಟಿನ ಒರಿಜಿನಾಲಿಟಿ ಇಲ್ವೇ ಇಲ್ಲ ಅನ್ನಿಸ್ತು. ಅಲ್ಲಿಂದ ಇಲ್ಲಿಂದ ಫಾರಿನ್ ಸಂಸ್ಕೃತಿ ಅಂದ್ರೆ ಬರೀ ಕೋಕ್ ಕುಡಿಯೋದನ್ನ ಮಾತ್ರ ಅಳವಡಿಸಿಕೊಳ್ಳೋ ಮಂದಿಗೆ ಪ್ರಪಂಚದಾದ್ಯಂತ ಉಳಿದವರು ಹೆಂಗಿದ್ದಾರೆ ಎಂದು ನೋಡೋ ವ್ಯವಧಾನಾನೂ ಇಲ್ವೇ ಎಂದು ಖೇದವಾಯ್ತು. ನನ್ ಹತ್ರ ಒರಿಜಿನಾಲಿಟಿ ಇಲ್ಲದಿದ್ರೇನಂತೆ ಕೊನೇಪಕ್ಷ 'ಹಿಂಗೂ ಮಾಡ್‌ಬಹುದು' ಅನ್ನೋ ಐಡಿಯಾಕ್ಕೊಸ್ಕಾರಾನಾದ್ರೂ ನಾನು ಅದೂ-ಇದೂ ಓದ್ತೀನಿ, ಏನೇನೆಲ್ಲಾ ನೋಡ್ತೀನಿ. ಸ್ಪೂರ್ತಿ ಪಡೆಯೋದರಲ್ಲಿ ಏನೂ ತಪ್ಪಿಲ್ಲ, ಅಲ್ಲಿಂದ ಇದ್ದ ಹಾಗೇ ಇದ್ದುದನ್ನು ಕದ್ದು ತರೋದೂ ಅಲ್ದೇ ಅದನ್ನು ತನ್ನದು ಎನ್ನೋದರಲ್ಲಿ ತಪ್ಪಿದೆ.

ನಾನ್ ಬರೆದ್ರೆ ನನಗೇ ಹೆದರಿಕೆ ಆಗುತ್ತೆ, ಪ್ರತಿಸಾರಿ ಬರೆದು ಮುಗಿಸಿ 'ಪಬ್ಲಿಷ್' ಮಾಡಿದಾಗ್ಲೂ this is another piece of junk ಅನ್ಸುತ್ತೆ, ಆದ್ರೆ ನಾನು ಬರೆಯೋದರ ಉದ್ದೇಶ ನನಗೊಂದು ಶಿಸ್ತು ಬರಲಿ, ನೂರು ಬರೆದ್ರೆ ಎರಡಾದ್ರೂ ಒಳ್ಳೇದಿರಲಿ ಅನ್ನೋದು. ನನಗೂ ನನ್ನದೇ ಆದ ಸೃಜನಶೀಲತೆ ಅನ್ನೋದಿದೆ, ಅದನ್ನ ಪ್ರತಿಭೆಯ ಮಟ್ಟದಲ್ಲಿ ನಾನು ಬೆಳೆಸೋಕಾಗುತ್ತೋ ಇಲ್ವೋ, ಅದಕ್ಕೆ ತಕ್ಕ ಪರಿಶ್ರಮ ಪಟ್ರೆ ಒಂದು ಸುಮಾರಾದ ಲೇಖನವನ್ನಾದರೂ ಬರೀತೀನಿ ಅನ್ನೋದು ನನ್ನ ವಿಶ್ವಾಸ. ಅಷ್ಟೂ ಮಾಡಿ ನಾನು ಇದನ್ನ ಪುಲ್‌ಟೈಮ್ ಏನ್ ಮಾಡ್ತಾ ಇಲ್ವಲ್ಲ - ದಿನದ ನಲವತ್ತೆಂಟು ಅರ್ಧ ಘಂಟೆಗಳಲ್ಲಿ ನಾನು ಕೇವಲ ಒಂದು ಅರ್ಧ ಘಂಟೆ ಮಾತ್ರ ಇದಕ್ಕೆ ವ್ಯಯಿಸ್ತೀನಿ. ಆದ್ರೆ, ಅದೇ ಇದನ್ನೇ ನಾನು ಫುಲ್‌ಟೈಮ್ ಮಾಡಿ ಇದರಿಂದಲೇ ನಮ್ಮನೆ ಒಲೆ ಉರಿಯೋದು ಅಂತಾದ್ರೆ ನಾನು ಎಷ್ಟೋ ದಿನ ನಿದ್ದೇನೆ ಮಾಡ್ದೇ ಗೇಯೋಕ್ ಸಿದ್ಧಾ ಇದ್ದೀನಿ/ಇರ್ತೀನಿ. ಯಾಕ್ ಈ ಮಾತು ಹೇಳ್ದೆ ಅಂದ್ರೆ ನಮ್ಮವರೆಲ್ಲ ಎಲ್ಲಿ ಆತುರಕ್ಕೆ ಸಿಕ್ಕು ಈ ರೀತಿ ಅರೆಬೆಂದ ಕೆಲ್ಸಾ ಮಾಡ್ತಾರೋ ಅನ್ನಿಸಿದ್ದರಿಂದ. ನಮ್ಮಲ್ಲಿನ ಪ್ರತಿಭೆಗಳೆಲ್ಲ ಎಲ್ಲಿ ಹೋದ್ವು ಹಾಗಾದ್ರೆ? ಅನ್ನೋದಕ್ಕೆ ನನ್ನಲ್ಲ್ ಉತ್ರ ಇಲ್ಲ - 'ಹೆಚ್ಚಿನವು ಪರದೇಶಕ್ಕೆ ಹೋಗವೆ' ಎಂದು ಕಿಸಕ್ಕನೆ ನಕ್ಕು ಹಲ್ ಕಿರಿಯೋರ್ ಮುಂದೆ ನನ್ನ ಸಲಾಮ್ ಅಷ್ಟೇ, ಯಾಕಂದ್ರೆ ಪರದೇಶಕ್ಕೆ ಬಂದ ಮೇಲೇನೇ ನನಗೆ ಬದುಕನ್ನೋದ್ ಏನು ಅಂತ ಸ್ವಲ್ಪ ಮಟ್ಟಿಗಾದ್ರೂ ಅರ್ಥ ಆಗಿದ್ದು, ಸಮಾಜದಲ್ಲಿ ನೆಟ್ಟಗೆ ನಿಲ್ಲೋಕ್ ಶಕ್ತಿ ಬಂದಿದ್ದು.

ಕಣ್ಣೀರಿನ ಕೋಡಿ ಹುಟ್ಟು ಹಾಕೋ ಧಾರಾವಾಹಿಗಳ ಜೊತೆಗೆ ನಮ್ಮ್ ಜನಕ್ಕೆ ನಿಜವಾದ ಒರಿಜಿನಲ್ ಮನರಂಜನೆ ಕೊಡಬೇಕು ಅನ್ನೋದು ನನ್ನ ಬಹಳ ಉದ್ದವಾದ ಕನಸುಗಳಲ್ಲಿ ಒಂದು. ಹೊರದೇಶಗಳ ಸಿಟ್‌ಕಾಮ್ ಗಳಿಂದ ಪ್ರಭಾವಿತನಾಗಿ ನಮ್ಮದೇ ಒಂದು ಒರಿಜಿನಲ್ ಸಿಟ್‌ಕಾಮ್ ಕೊಡಬೇಕು, ಅದರ ಥರಾವರಿ ಸ್ಕ್ರಿಪ್ಟ್‌ಗಳನ್ನ ಬರೀಬೇಕು, ಅಲ್ಲಿ-ಇಲ್ಲಿ ಈಗಾಗ್ಲೇ ಬರೆದದ್ದನ್ನ ಓದಬೇಕು - ಸಿನಿಮಾ ತಂತ್ರಜ್ಞರ ಜೊತೆ ಚರ್ಚಿಸಬೇಕು, ಇತ್ಯಾದಿ ಇತ್ಯಾದಿ - ಆಸೆಗಳಿಗೇನು ಒಂದ್ ಸಾವ್ರ. ಇವತ್ತಲ್ಲ ನಾಳೆ, ಈ ಜನ್ಮದಲ್ಲಿ ಅಲ್ದಿದ್ರೆ ಮುಂದಿನ ಜನ್ಮದಲ್ಲಾದ್ರೂ ಹಾಗ್ ಆಗ್ಲಿ/ಆಗುತ್ತೆ. ಆದ್ರೆ, ನಮ್ ಬರಹಗಾರ್ರು ತಮ್ಮ ಸ್ವಂತ ಪ್ರತಿಭೆಯನ್ನ ಬರಹದಲ್ಲಿಳಿಸಬೇಕು, ಎಲ್ಲಿಂದ ಬೇಕಾದ್ರೂ ಸ್ಪೂರ್ತಿ ಪಡೀಲಿ ಆದರೆ ವಸ್ತುಗಳನ್ನ ಹಾರಿಸಿ ತರಬಾರ್ದು - ಸ್ವಂತ ಕನ್ನಡದ ಹಿನ್ನೆಲೆನಲ್ಲಿ ಒಂದೆರೆಡು ಧಾರಾವಾಹಿಗಳು ಬಂದ್ರೆ (ನಾನ್ ಹೇಳ್ತಾ ಇರೋದು ಶುದ್ಧ ಹಾಸ್ಯವನ್ನು ಕೇಂದ್ರವಾಗಿಟ್ಟುಕೊಂಡು) ಮುಂದೆ ಅದೇ ಬೆಳೆದು ದೂಡ್ಡ ಹೆಮ್ಮರವಾಗುತ್ತೆ ಅನ್ನೋದು ನನ್ನ ಆಶಯ.

ಏನಂತೀರಿ?

'ದಾರಿ-ದೀಪ'ದಲ್ಲಿ ನಿಮ್ಮನ್ನೇಕೆ ಕೆಲಸಕ್ಕೆ ತಗೋಬೇಕು?

ನಿಮ್ಮನ್ನೇಕೆ ಕೆಲಸಕ್ಕೆ ತಗೋಬೇಕು?

http://daari-deepa.blogspot.com/2006/08/blog-post_115537875798966081.html#links

Thursday, August 10, 2006

ಜಲದಲ್ಲೂ ಬಾಂಬು!

ಓಹ್, ಮೊಟ್ಟ ಮೊದಲ ಬಾರಿಗೆ ಹಲವಾರು ವಾರಗಳ ನಂತರ ಮಿಡ್ಲ್ ಈಸ್ಟ್ ಸುದ್ದಿಗಳೇ ಕೇಳ್ಲಿಲ್ಲ - ಅಲ್ಲಿ ಅಷ್ಟು ಜನ ಸತ್ರು, ಇಲ್ಲಿ ಇಷ್ಟು ಜನ ಸತ್ರು ಅನ್ನೋ ಸುದ್ದಿ ಬಾಂಬುಗಳಿಲ್ಲ, ಇವೆತ್ತೆಲ್ಲ ಬರೀ ಅದೇನೋ ನೀರಿನಲ್ಲಿ ಬಂಗಾರವನ್ನು ಹುಡುಕೋರ್ ಹಾಗೆ ಜಲದಲ್ಲೂ ಅಡಗಿದ ಸ್ಪೋಟಕಗಳ ಪತ್ತೆಗೇ ಪ್ರಪಂಚವೆಲ್ಲ ಮೀಸಲಾದಂಗಿತ್ತು. ಒಂದು ಕಡೆ ಕೆಟ್ಟದ್ದನ್ನು ಮಾಡಬೇಕು ಅನ್ನೋರು ಮತ್ತೊಂದು ಕಡೆ ಇಂಥವರನ್ನು ಹಿಡಿದು ಮಟ್ಟ ಹಾಕಬೇಕು ಅನ್ನೋರು ಇವರಿಬ್ಬರ ಮಧ್ಯೆ ಸ್ಪರ್ಧೆ ಏರ್ಪಟ್ಟಹಾಗೆ ಕಾಣ್ಸುತ್ತೆ.

ಮೊದಲೆಲ್ಲ ಇಲ್ಲಿನ ಏರ್‌ಪೋರ್ಟ್‌ಗಳಲ್ಲಿ ಚಾಕು, ಚೂರಿ, ಬ್ಲೇಡು ಮೊದಲಾದ ಅಡ್ಡಕಸುಬಿಗಳ ಉಪಕರಣಗಳನ್ನ ಕಸಿದುಕೊಂಡು ಬುಟ್ಟಿಯಲ್ಲಿ ಹಾಕ್ಕೊತಿದ್ರು, ಈಗ ಅದನ್ನ ಪಾನೀಯಗಳ ಮಟ್ಟಿಗೆ ಏರಿಸಿಬಿಟ್ಟಿದ್ದಾರೆ, ಪಾನೀಯಗಳು ಅಂದ್ರೆ ಬರೀ ನೀರು, ಕೊಕ್ಕಾಕೋಲ ಅಷ್ಟೇ ಅಲ್ಲ, ಅದರ ಜೊತೆಯಲ್ಲಿ ಬಿಯರ್, ಬ್ರ್ಯಾಂಡಿ, ವೈನು ಮುಂತಾಗಿ ವೈನಾಗಿರೋದನ್ನೆಲ್ಲ ಕಸಗೋತಿದ್ದಾರಂತೆ! ಬಹುಷಃ ಒಬ್ಬೊಬ್ಬ ಏರ್‌ಪೋರ್ಟಿನ ಎಂಪ್ಲಾಯಿ ಎಷ್ಟು ಕಸಗೋತಾನೋ ಅದರಲ್ಲಿ ಹತ್ತು ಪರ್ಸೆಂಟ್ ಬಾಟ್ಲಿಗಳನ್ನು ಅವನು ಮನೆಗೆ ತೆಗೆದುಕೊಂಡು ಹೋಗೋ ಹಾಗೆ ಮಾಡ್ತಾರೇನೋ ಅನ್ನೋಷ್ಟು ಹುಮ್ಮಸ್ಸು ಕಾಣಿಸ್ತಾ ಇದೆ. ಅದ್ಸರಿ ಮುಂಚೆಲ್ಲ ಡ್ಯೂಟೀ ಫ್ರೀ ಅಂತ ಏರ್‌ಪೋರ್ಟಲ್ಲೇ ತುಂಬಿದ ಬಾಟಲಿಗಳನ್ನ ಮಾರ್ತಾ ಇದ್ರಲ್ಲ, ಈಗ ಅವ್ರೆಲ್ಲ ಏನ್ ಮಾಡ್‌ಬೇಕೋ ಹೊಟ್ಟೆಗೆ? ಅಥ್ವಾ ಅಲ್ಲಿ ಡ್ಯೂಟೀ ಫ್ರೀ ಅಂತ ತಗೊಂಡು ಅಲ್ಲೇ ಆ ಬಾಟಲಿಗಳ ಕಥೆ ಮುಗಿಸಬಾರದೂ ಅಂತ ಏನೂ ಕಾನೂನು ಇಲ್ಲವಲ್ಲಾ? ಅದಿಲ್ಲಾ ಅಂದ್ರೂ ಇವತ್ತಿಂದ ಏರ್‌ಪೋರ್ಟಲ್ಲಿ ಬೆಳೆಯೋ ಹನುಮಂತನ ಬಾಲದ ಸಾಲುಗಳನ್ನು ಮುಗಿಸೋ ಹೊತ್ತಿಗೆ ಬಾಟಲಿಗಳ ಕಥೆ ಇರಲಿ ಮತ್ತೊಂದು ಜನ್ಮಾನೇ ಎತ್ತಿ ಬರಬೇಕಾಗುತ್ತೆ.

ಇವತ್ತು ಪಾನೀಯಗಳಲ್ಲಿ ಬಾಂಬ್ ಇಡೋದನ್ನ, ಇಟ್ಟಿದ್ದನ್ನ ಹುಡುಕೋ ವಿಧಿ ಕಂಡು ಹಿಡಿದ್ರೋ ಇನ್ನು ನಾಳೆ ಪೌಡರ್ರು ಅಂತ ಒದ್ದಾಡ್ತಾರೇ ನೋಡ್ತಾ ಇರಿ! ಅವಾಗ ಮುಖಕ್ ಹಚ್ಚೋ ಪೌಡರ್ ಇರ್ಲಿ, ನಮ್ಮೂರ್ ಸವಕಾರ್ರುಗಳು ಮೂಗಿಗ್ ಏರ್ಸೋ ನಶ್ಯೆ ಪುಡೀನೂ ಬಿಡೋದಿಲ್ಲ, ಅದರ ಬದಲಿಗೆ 'ವಿಮಾದಲ್ಲೇ ನಶ್ಯೆ ಸರಬರಾಜು ಮಾಡಲಾಗುವುದು' ಅಂತ ಬೋರ್ಡ್ ಹಾಕೋ ಕಾಲ ದೂರ ಇಲ್ಲಾ ಅಂದೆ. ನೆಲದಿಂದ ಜಲ, ಜಲದಿಂದ ಪುಡಿಗೆ ಬೆಳೆದ ಬಾಂಬ್ ತಂತ್ರಜ್ಞಾನ ಒಮ್ಮೆಲೇ 'ಗಾಳಿಯಲ್ಲೇ ಬಾಂಬ್' ಅನ್ನೋ ಮಟ್ಟಕ್ಕೆ ಏರಿದ್ರೆ ಏನ್ ಗತಿ ಅಂತ ಯೋಚ್ನೆ ಮಾಡೋ ಹೊತ್ತಿಗೆ ತೂಕಡಿಕೆ ಬಂದೋಯ್ತು ನೋಡಿ, ಅದಿರ್ಲಿ ಈ ತಂತ್ರಜ್ಞಾನ ಯಾವತ್ತೋ ಬಂದ್ ಹೋಗಿದೆಯಲ್ವಾ ಅಂತ ತಲೆ ತುರಿಸಿಕೊಂಡಾಗ ನಮ್ ಆಫೀಸಿನ ಎಲಿವೇಟರ್‌ಗಳಿಗೂ-ಗಾಳಿಯಲ್ಲಿ ಹಾಕೋ ಬಾಂಬ್‌ಗಳಿಗೂ ಎಲ್ಲಿಂದಲೋ ಸಂಬಂಧ ಬೆಳೆದು ಮೂಗು ಮುಚ್ಚಿಕೊಳ್ಳೋ ಹಾಗಾಯ್ತು! ಅದನ್ನೇ ನಾನು ಪೊಲೈಟ್ ಆಗಿ ಯಾರೋ ೨೦೦೦ ಡಾಲರಿನ ಸೆಂಟಿನ ಬಾಟಲಿ ಮುಚ್ಚುಳ ತೆಗೆದಿದ್ದು ಅಂತ ಪ್ರಶ್ನೆ ಕೇಳೋ ಮೂಲಕ ಗಾಳಿಯಲ್ಲಿನ ಬಾಂಬಿಗೆ ಒಂದು ಸವಾಲೇ ಎಸೆದುಬಿಡ್ತೀನಿ.

ಇವತ್ತು ಲಂಡನ್ ಹೀತ್ರೋನಲ್ಲೆಲ್ಲ ಹೆದರ್‌ಕೊಂಡಿದ್ರಂತೆ, ಬುಷ್ಷೂ-ಬ್ಲೇರೂ ಬುಸುಗುಡ್ತಾ ಇದ್ರಂತೆ, ಬ್ರಿಟನ್ ಪೋಲೀಸ್ರೂ ಕಂಡ್‌ಕಂಡೋರ್ನೆಲ್ಲ ಒಳಗಡೆ ಸೇರಿಸ್ತಾ ಇದ್ರಂತೆ - ಸುಮಾರು ಎಂಟು ತಿಂಗಳಿಂದ ಏನೇನೋ ಕಿತಾಪತಿ ನಡೆಸವ್ರೇ - ಈ ಮಿಡ್ಲ್ ಈಸ್ಟ್ ಹೊಡೆದಾಟವನ್ನ, ಇರಾಕಿನಲ್ಲಿ ನಡೆಯೋ ದಿನಕದನವನ್ನ ಬದಿಗೆ ತಳ್ಳೋದಕ್ಕೆ ಇವರೆಲ್ಲ ಸೇರಿಕೊಂಡ್ ಮಾಡಿರೋ ಪಿತೂರಿ ಅಂತನೂ ಅಲ್ಲಿ-ಇಲ್ಲಿ ಕೇಳಿಬಂತು. ಕಂಡ್ ಕಂಡ್ ವಿಷ್ಯಾನೆಲ್ಲ ರಾಜಕೀಯ ಅನುಕೂಲಕ್ಕೋಸ್ಕರ ಬಳಸ್ಕೋತಾರೆ ಅಂತ ಆರೋಪ ಮಾಡೋರೂ ಸಹ ರಾಜಕಾರಣಿಗಳೇ, ಒಂಥರಾ ಕಳ್ರೇ ಕಳ್ಳರ ಮೇಲೆ ದೂರು ಹೇಳಿಕೊಂಡಂಗೆ! ಆ ವಾದ ಯಾವ್ ಕೋರ್ಟಲ್ಲಿ ಗೆಲ್ಲುತ್ತೋ ಆ ದೇವನೇ ಬಲ್ಲ. ಜಲದಲ್ಲಿ ಬಾಂಬಿನಿಂದ ಎಲ್ ನೋಡಿದ್ರೂ ಎಷ್ಟೊಂದ್ ಜನ ಸಾಯ್ತಿದ್ರು ಅಂತ ಅನುಕಂಪ ತೋರಿಸ್ತಾರೇ ವಿನಾ ದಿನಾ ಸಾಯೋರನ್ನ ಕೇಳೋರೇ ಇಲ್ಲವಲ್ಲ ಅಂತಾನೂ ಒಮ್ಮೊಮ್ಮೆ ಕೋಪಾ ಬರುತ್ತೆ ಇವರ್ನೆಲ್ಲಾ ನೋಡಿ, ಬರೀ ತಮ್‌ದೊಂದೇ ಜೀವಾ ಮಂದೀದೆಲ್ಲಾ ಒಣಗಿದ ಗರಟೇ ಚಿಪ್ಪೇ? ಈ ಪುಂಡ್‌ಪೋಕರಿಗಳನ್ನೆಲ್ಲ ಮಟ್ಟ ಹಾಕೋ ಹೊತ್ತಿಗೆ ಅಮಾಯಕರು ಬೆಲೆ ಕೊಡಬೇಕಾಗಿ ಬರೋದು ದಿನನಿತ್ಯದ ಕಥೆ ಆಗ್ಲಿಲ್ವೇ, ಬರೀ ವಿಮಾನ್‌ದಲ್ಲಿ ಓಡಾಡೋರ್ ಮಾತ್ರ ಮನಷ್ಯರಾ - ದಿನಾನೂ ನಮ್ ಕಣ್‌ಮುಂದೆ (ಅಂದ್ರೆ ಟಿವಿನಲ್ಲಿ ತೋರಿಸ್ದಂಗೆ) ಎಷ್ಟೋ ಜನ ಇವರುಗಳಾಡೋ ಆಟದಿಂದ ಸಾಯ್ತಾರಲ್ಲ ಅವರ ಬಾಯಿಗೆ ನೀರ್ ಬಿಡೋರ್ ಯಾರು? ಎಲ್ಲಾ ದೇಶ್‌ದೋರಿಗೂ ಅವರವರ ಜನಗಳ್ನ ರಕ್ಷಿಸೋದು ಮುಖ್ಯ ಕರ್ತ್ಯವ್ಯ ಅಂತ ಅಂದುಕೊಂಡು ಇಡೀ ಪ್ರಪಂಚಾನೇ ಹೊತ್ತಿ ಉರೀಲೀ ಅನ್ನೋದೇ ಇವರ ನೀತೀನಾ ಅಂತ ಎಷ್ಟೋ ಸರ್ತಿ ಪ್ರಶ್ನೆ ಹಾಕ್ಕೊಂಡ್ರೂ ಉತ್ರ ಸಿಕ್ಲಿಲ್ಲ. ನನ್ ಕೇಳಿದ್ರೆ, ಇವರುಗಳು ಶುರು ಮಾಡೋ ಯುದ್ಧ ಇವರುಗಳು ಅಂದ್‌ಕೊಂಡಂಗೆ ಇವರಿಗೇ ಕೊನೇ ಮಾಡೋದಕ್ಕೆ ಸಾಧ್ಯವಾಗ್ದೇ ಇರೋದ್ರಿಂದ್ಲೇ ಒಂಥರಾ ರಿಲೇ ಕೋಲಿನ ಹಾಗೆ ಇವರು ಕೊಟ್ಟ ಕೋಲು ಮತ್ತ್ಯಾರ ಕೈಗೆ ಸಿಕ್ಕಿ ಇವರ್ನೇ ಹೊಡ್ಯೋಕ್ ಬರೋದು.

ಆ ಆಫ್ರಿಕಾ ಖಂಡ ಕಗ್ಗತ್ತಲೆಯಿಂದ ಇನ್ನೂ ಕರಿದಾಗಿ ಹೋಗಿದೆ, ಮಧ್ಯ ಏಷ್ಯಾ/ಯೂರೋಪು ಹೊತ್ತಿಕೊಂಡು ಉರಿಯೋ ಬೆಂಕಿಯಿಂದ ನಾವೆಲ್ಲಾ ಬೆಂದಿದ್ದೂ ಆಯ್ತು, ಏಷ್ಯಾದಲ್ಲೂ ಆ ಮಿಂಜರು ಕಣ್ಣಿನೋರಿಗೆ ತಮ್ಮದೇ ಗತ್ತು, ಹೆಂಗ್ ಬೇಕಾದಂಗೆ ಮಿಸ್ಸೈಲ್‌ಗಳನ್ನ ಹಾರಿಸ್ಕೋತಾರೆ, ಒಬ್ಬರನ್ನೊಬ್ಬರು ನೋಡಿ ಮತ್ತೊಬ್ರು ಹೆದರ್ಕೋತಾರೆ, ರಷ್ಯಾದೋರಂತೂ ತಿನ್ನೋದಕ್ಕೆ ಬ್ರೆಡ್ ಇಲ್ಲದಿದ್ರೂ ವೆನ್ಯೂಜೆಲಾದಂತೋರ್ ಹತ್ರಾ ಬಿಲಿಯನ್ ಗಟ್ಟಲೆ ಹಣ ತಗೊಂಡ್ ಆಯುಧಗಳನ್ನೆಲ್ಲಾ ಮಾರ್ತಾರೆ, ಎಲ್ಲಾ ಕಡೆ ಮೂಲಭೂತವಾದಿಗಳು ಧರ್ಮಾ-ದೇವ್ರನ್ನ ಕೊಂಡ್‌ಕೊಂಡೋರಂಗೆ ಆಡೋಕ್ ಶುರು ಮಾಡ್‌ಕಂಡಿದಾರೆ. ಈ ಅಮೇರಿಕದೋರಂತೂ ತಮ್ಮ ಮಡ್ಲಲ್ಲೇ ನಲವತ್ತಾರ್ ವರ್ಷದಿಂದ ಕ್ಯೂಬಾದ ನಿರಕುಂಶ ಪ್ರಭುತ್ವವನ್ನು ಕಟ್ಟಿಕೊಂಡು, ಹತ್ತು ಜನ ಪ್ರಸಿಡೆಂಟ್‌ಗಳು ಬಂದ್ರೂ ಅದಕ್ಕೇನೂ ಮಾಡೋಕಾಗ್ದೇ ಇದ್ರೂನೂ, ಎಣ್ಣೇ ಇರೋ ಇನ್ಯಾವ್ದೋ ದೇಶಕ್ಕೆ ಪ್ರಜಾಪ್ರಭುತ್ವಾನಾ ಹಂಚೋಕ್ ಹೋಗ್ತಾರೆ. ಬುಷ್ಷೂ, ಬ್ಲೇರೂ ಮತ್ತೆ ಆ ಕಾಂಗರೂ ನಾಡಿನ ಒಂದಿಷ್ಟ್ ಜನ ಸೇರ್‌ಕೊಂಡು ಒಂದ್ ಪಡೆ ಅಂತ ಕಟ್ತಾರೆ - ಇಷ್ಟೆಲ್ಲಾ ಆಗಿ ಎರಡು ಸಾವಿರದ ಆರು ಬಂದು ಅರ್ಧ ವರ್ಷಾ ಆದ್ರೂ ಜಗತ್ತಿನಲ್ಲಿ ಶಾಂತಿ ನೆಲೆಸೋ ಮಾತೇ ಇಲ್ಲ ಅನ್ನಂಗಾಗಿದೆ. ಎಷ್ಟೋ ಜನಕ್ಕೆ ಇವತ್ತಿಗೂ ಅನ್ನಿಲ್ಲ, ನೀರಿಲ್ಲ - ಕೊನೇ ಪಕ್ಷ ಇಲ್ಲಿ ಏರ್‌ಪೋರ್ಟಲ್ಲಿ ಕಸಿದುಕೊಂಡು ಬುಟ್ಟಿ ತುಂಬಿಸಿಕೊಂಡ ಪಾನೀಯಗಳನ್ನೆಲ್ಲ ಅದೇ ಪ್ಲೇನಲ್ಲೇ ದಾಟಿಸಿ ಆಫ್ರಿಕಕ್ಕೆ ಕಳಿಸಿದ್ರೆ ಅಲ್ಲಾದ್ರೂ ಒಂದಿಷ್ಟ್ ಜನ ನೆಮ್ಮದಿಯಿಂದ ಉಸಿರು ಬಿಡ್ತಿದ್ರೋ ಏನೋ - ಒಂದ್ ಥರಾ ಪುಡ್ ಡ್ರೈವ್ ಇದ್ದಹಾಗೆ 'ಪಾನೀಯ ಕಸಿದುಕೊಳ್ಳುವಿಕೆ' ಮುಂದ್‌ವರೀಲೀ ಅಂದ್‌ಕೊಂಡ್ರೆ ಜನ ಬೇಗನೇ ಬುದ್ಧಿವಂತರಾಗಿ ಬಿಡ್ತಾರಲ್ಲ ಅಂತ ಭಯವೂ ಆಗುತ್ತೆ. ಕೊನೇ ಪಕ್ಷ ಏನಿಲ್ಲ ಅಂದ್ರೂ ಒಂದ್ ಸ್ವಲ್ಪ ಹೊತ್ತು ಕುಡಿಯೋಕ್ ಏನೂ ಸಿಗ್ದೇ ಈ ಅಮೇರಿಕದೋರಿಗೂ ಬಾಯಾರ್ಕೆ ಅಂದ್ರೆ ಏನು ಅಂತಾನಾದ್ರೂ ಗೊತ್ತಾಗುತ್ತಲ್ಲ!

ಏರ್‌ಪೋರ್ಟಲ್ಲಿ ಬೂಟು-ಬಟ್ಟೆ ಬಿಚ್ಚಿಸಿ ತೋರಿಸೋ ಪ್ರಸಂಗ ಬಂತು, ಪಾನೀಯಗಳನ್ನ ಅಲ್ಲೇ ಎಸೆದು ಸೆಕ್ಯೂರಿಟಿ ಗಾರ್ಡ್‌ಗಳಿಗೆ ಕುಡುಸೋ ಪ್ರಸಾಂಗಾನೂ ಬಂತು, ಇನ್ ಮುಂದೆ ಲಗ್ಗೇಜೇ ತಗೊಂಡ್ ಬರಬೇಡಿ ಅಂತಾರೇ ನೋಡ್ತಾ ಇರಿ! (ತಮ್ ತಮ್ಮ್) ಲಗ್ಗೇಜ್ (ತಾವೇ) ತಗೊಂಡ್ ಹೋಗ್ದೇ ಇದ್ದ ಮೇಲೆ ಹೋಗೋದಾದ್ರೂ ಎಲ್ಲಿಗೇ, ಯಾಕೆ!?

Tuesday, August 08, 2006

ಹೀಗೊಂದು ಸಂಜೆ

ಇವತ್ತು ಆಫೀಸಿನಿಂದ ಬರೋದು ತಡವಾಗಿ ಹೋಯ್ತು ಅಂತ ಲಗುಬಗೆಯಿಂದ ಬರೋವಾಗ ದಾರಿ ಸವೀಲಿ ಅಂತ ರೇಡಿಯೋ ಹಚ್ಚಿದರೆ ಕನೆಕ್ಟಿಕಟ್ ಪ್ರೈಮರಿ ಎಲೆಕ್ಷನ್‌ನಲ್ಲಿ ಹಿಂಗಾಯ್ತು ಹಂಗಾಯ್ತು, ಲೀಬರ್‌ಮನ್ ಬರ್ತಾನೆ, ಇಲ್ಲ ಲೆಮಾಂಟ್ ಬರ್ತಾನೆ ಅಂತ ಕಥೆ ಹಚ್ಚಿದ್ರು. ಥೂ ಇವರಾ ಅಂತ ರೆಡಿಯೋ ತಲೆ ಮೇಲೆ ಹೊಡೆದಿದ್ದಕ್ಕೆ ಒಂದೇ ಉಸಿರಿಗೆ ಹೆದರಿಕೊಂಡ್ ಮಗೂ ಥರಾ ಗಪ್ ಚುಪ್ ಆಯ್ತು. ಸರಿ ಹೊರಗಡೆ ಏನಿಲ್ಲದಿದ್ದರೂ ಖಾಲಿ ರಸ್ತೇನಾದ್ರೂ ಇದ್ದಿತಾದ್ರಿಂದ ಅಕ್ಕಪಕ್ಕದ ಡ್ರೈವರುಗಳ ಜೊತೆ ಚವಕಾಸೀ ಮಾಡೋ ಯಾವ ಅವಕಾಶವೂ ಇದ್ದಂಗ್ ಕಾಣ್ಲಿಲ್ಲ. ಇತ್ಲಾಗ್ ರೇಡೀಯೋನೂ ಬೇಡಾ, ಅತ್ಲಾಗ್ ಹೊಟ್ಟೆ ಒಳಗಿನ ಯೋಚ್ನೆಗಳಿಗೂ ಉಪಚಾರ ಮಾಡೋದು ಬೇಡ ಎಂದು ಮನಸ್ಸನ್ನು ಗಟ್ಟಿ ಮಾಡಿಕೊಂಡು ಸ್ವಲ್ಪ ದಿನವೆಲ್ಲ ಪರದೇ ನೋಡೋ ಕಣ್ಣಿಗಾದ್ರೂ ವಿರಾಮ ಸಿಗಲಿ ಅಂತ ದೂರದವರೆಗೆ ಕಣ್ಣು ಹಾಯಿಸಿದ್ದಕ್ಕೆ ದೊಡ್ಡೋರ್ ಮನೆ ಲೈಟನ್ನು ಅಪಾರದರ್ಶಕ ಬಲ್ಬ್‌ನಲ್ಲಿ ಅಡಗಿಸಿದಾಗ ಕಾಣೋ ಪ್ರಕಾಶದುಂಡೆಯಂತೆ ದಿಗಂತದಲ್ಲಿ ದೊಡ್ಡ ಚಂದ್ರಮ ಅದಾಗಲೇ ತಲೆ ಎತ್ತುತ್ತಿದ್ದ. ಇನ್ನೇನು ಹುಣ್ಣಿಮೆ ಹತ್ರ ಬಂತು ಅನ್ನೋ ಸಡಗರದಿಂದ ಬೀಗ್ತಾ ಇರೋ ಅವನನ್ನ ಅವನ ಮುಂದೆ ಚದುರಿದ ಮೋಡಗಳು ಸ್ವಲ್ಪ ಕಾಲ ಮುತ್ತಿದವಂತೆ ಕಂಡು ಬಂದರೂ ಚಂದ್ರನ ದೊಡ್ಡ ಮುಖ ಒಂದಲ್ಲ ಒಂದು ಕೋನದಿಂದ ಕಾಣ್ತಾನೇ ಇತ್ತು.

ದಾರಿ ಉದ್ದುಕೂ ಒಂಥರಾ ಚತುರ್ದಶಿ ಕಳೆದು ಹುಣ್ಣಿಮೆ ಬರೋ ಕಳೆ ಇತ್ತು, ಇನ್ನೂ ಚುಮುಚುಮು ಬೆಳಕನ್ನು ತಾನು ಹೋದ ದಾರಿಯಲ್ಲಿ ಬಿಟ್ಟು ಸ್ವಲ್ಪ ಬೇಗನೇ ಆಫೀಸು ಬಿಟ್ಟು ಹೋದವನಂತೆ ಸೂರ್ಯ ಕಾಣೆಯಾಗಿದ್ದ. ದಾರಿ ಹೊರಳಿದಂತೆ, ದಿಕ್ಕು ಬದಲಾದಂತೆ ಎಲ್ಲಿಂದ ನೋಡಿದರೂ ಚಂದ್ರನ ಒಂದೇ ಮುಖ ಯಾವಾಗಲೂ ಸಿಎನ್‌ಎನ್‌ನಲ್ಲಿ ತೋರಿಸೋ ಪ್ರೆಸಿಡೆಂಟ್ ಬುಷ್ ಮುಖದ ಹಾಗೆ ಯಾವ ಸ್ವಾರಸ್ಯವೂ ಇಲ್ಲದೇ ಒಂದೇ ರೀತಿ ಕಾಣುತ್ತಿತ್ತು. ಇನ್ನೇನು ಆಗಷ್ಟ್ ಕಳೆದು ಸೆಪ್ಟೆಂಬರ್ ಒಂದು ಬರಲಿ ಬೀಸೋಕೆ ಶುರು ಮಾಡ್ತೀನಿ ಅಂತ ಟ್ರಯಲ್ ನೋಡೋರ್ ಥರಾ ಗಾಳಿ ಅಲ್ಲಲ್ಲಿ ಬೀಸಿ ಗಿಡಮರಗಳನ್ನ ತೂಗಾಡಿಸುತ್ತಿತ್ತು.

ಈ ಚಂದ್ರನ ಮುಖ ನೋಡಿದ್ ಕೂಡ್ಲೇ ನಾನು ನಮ್ಮ ಹೈ ಸ್ಕೂಲಲ್ಲಿ ಜ್ಯೋತಿಲಿಂಗಪ್ಪ ಮೇಷ್ಟ್ರಿಗೆ ಕೇಳಿದ ಒಂದು ಪ್ರಶ್ನೆ ನೆನಪಿಗೆ ಬಂತು - ಸೂರ್ಯ ಅಥವಾ ಚಂದ್ರ ಮುಳುಗುವಾಗ ಹಾಗೂ ಹುಟ್ಟುವಾಗ ನಮಗೆ ದೊಡ್ಡದಾಗಿ ಕಾಣೋದ್ಯಾಕೆ? ಅದೇ ನೆತ್ತಿಮೇಲೆ ಬಂದಾಗ ಚಿಕ್ಕವಾಗಿ ಕಾಣ್ತಾವಲ್ಲ! ನನಗೆ ನಾನು ಹೀಗೆ ಕೇಳಿದ್ದೆ ಅನ್ನೋ ಪ್ರಶ್ನೆ ಮಾತ್ರ ನೆನಪಿದೆಯೇ ವಿನಾ ಅವರು ಏನು ಉತ್ರ ಕೊಟ್ರು ಅನ್ನೋದ್ ನೆನಪಲ್ಲಿಲ್ಲ! ಆದ್ರೂ ಯಾಕಿದ್ದಿರಬಹುದು, ಅದರ ಉತ್ರ ನನಗ್ಗೊತ್ತಿದೆಯೋ ಇಲ್ಲವೋ ಅದನ್ನ ಸಾಮಾನ್ಯರಿಗೂ ತಿಳಿಸಿ ಹೇಳೋಕೆ ಸಾಧ್ಯವೇ? ಸಾಪೇಕ್ಷ ಸಿದ್ಧಾಂತ (relativity), ಆಕಾಶಕಾಯಗಳು ಸುತ್ತುವ ಪಥ (oribit), ಹಾಗೂ ನಾವು ನೋಡುವ ಮಾಧ್ಯಮ (medium) ಇವುಗಳ ಸಹಾಯದಿಂದ ವಿವರಿಸಲೇ, ಅಥವಾ ದೊಡ್ಡದಾಗಿ ಕಂಡಾಗೆಲ್ಲ ಹತ್ತಿರವಿರ್ತಾವೆ, ಇಲ್ಲವಾದರೆ ದೂರ ಎಂದಷ್ಟೇ ಹೇಳಿ ಜಾರಿಕೊಳ್ಳಲೇ? ಹೀಗೆ ಯೋಚಿಸುತ್ತಾ ಮನಸ್ಸು ಒಳಗೆ ಸರಿದಂತೆಲ್ಲಾ ಹೊಟ್ಟೆ ಒಳಗಿನ ಯೋಚನೆಗಳು ಹೊಟ್ಟೆಯಲ್ಲೇ ಇರಲಿ ಎಂದು ಎಚ್ಚರಿಸಿಕೊಂಡು ಮತ್ತೇನಾದರೂ ಅಲ್ಲಲ್ಲಿ ಕಂಡೀತೇ ಎಂದು ಅತ್ತಿತ್ತ ನೋಡತೊಡಗಿದೆ.

ಈಗಾಗ್ಲೇ ನಾನು ಸುಮಾರು ದೂರ ಬಂದಿದ್ರಿಂದ ಟ್ರಾಫಿಕ್ಕು ನಿಧಾನವಾಗಿ ಹೆಚ್ಚಾಗ ತೊಡಗಿತ್ತು, ಆದರೆ ಮೊಟ್ಟಮೊದಲನೇ ಸಾರಿ ಹೀಗೆ ಬಿಲ್ಡ್ ಅಪ್ ಆಗುವ ಟ್ರಾಫಿಕ್ ಮೇಲೆ ಪ್ರೀತಿಯೂ ಹುಟ್ಟಿತು! ನಮ್ ನ್ಯೂ ಜೆರ್ಸಿ ಬದುಕೇ ಚೆಂದ - ಯಾವಾಗ್ ನೋಡಿದ್ರೂ, ಎಷ್ಟ್ ಹೊತ್‌ನಲ್ಲಾದ್ರೂ ಇಲ್ಲಿ ರಸ್ತೆಗಳು ಖಾಲಿ ಇರೋದೇ ಇಲ್ಲ. ನಾನೇ ಭಯಂಕರ ವ್ಯಸ್ತ, ವಿಪರೀತ ಕೆಲಸಾ ಮಾಡೋನೂ ಅಂತೆಲ್ಲ ಅಂದುಕೊಂಡು ರಸ್ತೆಗಿಳಿದ್ರೆ ನನಗಿಂತಲೂ ಹೆಚ್ಚಿನ ತರಾತುರಿಯಲ್ಲಿ ಇರೋ ಜನರೇ ಹೆಚ್ಚು. ಇಲ್ಲಿನ ಜನಸಾಂದ್ರತೆ ಒಂದು ರೀತಿ ನಮ್ಮೂರುಗಳನ್ನು ನೆನಪಿಸುತ್ತೆ, ಆದ್ದರಿಂದಲೇ ನಾನು ಕಂಡ ಅಮೇರಿಕ ನನಗೆ ನ್ಯೂ ಜೆರ್ಸಿ ಮಯವಾಗಿ ಕಾಣೋದು. ಯಾವಾಗ್ ನೋಡಿದ್ರೂ ಜನ ಇರೋ ರಸ್ತೆ, ವ್ಯಾಪಾರ ವಹಿವಾಟುಗಳು ಅಲ್ಲಲ್ಲಿ ವಿಪರೀತ ಹೊತ್ತು ತೆಗೆದುಕೊಂಡು ಬೇಜಾರು ಮಾಡುವುದೇ ಹೆಚ್ಚಾದರೂ ಕೆಲವೊಮ್ಮೆ ಇಂದಿನ ಹಾಗೆ ಅಕ್ಕಪಕ್ಕದಲ್ಲಿ ಜನರನ್ನು ನೋಡಿ ಖುಷಿಯೂ ಆಗುತ್ತೆ. ಹಿಂದೆ ದೃಷ್ಟಿಯಂತೆ ಸೃಷ್ಟಿಯೆಂದು (ಹೊರಗಿನ ಸೃಷ್ಟಿ ನೋಡುವವರ ದೃಷ್ಟಿಯಲ್ಲಿದೆ ಎಂಬರ್ಥದಲ್ಲಿ) ಯಾರೋ ಸುಳ್ಳು ಹೇಳಿದ್ದರೆಂದು ಮುಂಜಾವಿನ ಬಗ್ಗೆ ಬರೆಯೋವಾಗ ಹೇಳಿದ್ದೆ, ಮುಂಜಾನೆ ಮತ್ತು ಸಂಜೆಗಳ ಬಗ್ಗೆ ಬರೆದ ಮಾತ್ರಕ್ಕೆ ಆ ನಿಲುವಿನಲ್ಲಿ ಬದಲಾವಣೆ ಆಗಿದೆ ಎಂದು ಇಲ್ಲಿ ಹೇಳೋದಿಲ್ಲ, ಬದಲಿಗೆ ನಮ್ಮ ಅನುಕೂಲಕ್ಕೆ ತಕ್ಕಂತೆ ನಮ್ಮ ನೆರೆಹೊರೆ ಎಂದು ಸೂಚ್ಯವಾಗಿ ಹೇಳಿಬಿಡುತ್ತೇನೆ, ಅಷ್ಟೇ.

ಸದ್ಯ, ಕಳೆದ ವಾರದ ಬಿಸಿವಾತಾವರಣವಿಲ್ಲ, ಕಿಟಕಿಗಳನ್ನು ಇಳಿಸಿದರೆ ಆರ್ದ್ರ ಹವೆ ಅಂಟೋದಿಲ್ಲ - ಗಾಳಿ ಒಂದು ರೀತಿ ತೆಳುವಾಗಿ ಬೀಸಿ ಮುಖದ ಮೇಲೆ ತೀಡಿ ಮುಗುಳ್ನಗು ಎಂದು ಒತ್ತಾಯಮಾಡುವಂತೆ ಸುಳಿದುಹೋಯಿತು. ಒಂದ್ ಕಡೆ ಮನಸ್ಸು ನಾಳೆ ಏನೇನ್ ಮಾಡ್‌ಬೇಕು ಅಂತ ಲೆಕ್ಕ ಹಾಕ್ತಾ ಬಿದ್‌ಕೊಂಡಿತ್ತು, ಮತ್ತೊಂದು ಕಡೆ ಸದ್ಯ ಮನೇಗ್ ಹೋಗಿ ಬಿದ್ರೆ ಸಾಕು ಅನ್ನಿಸಿದ್ದೇ ತಡ ಇಡೀ ಲೋಕವನ್ನೇ ನುಂಗೋ ಹಾಗೆ ಬಾಯಿ ಮತ್ತು ಶಬ್ದ ಮಾಡುವಂತ ದೊಡ್ಡ ಆಕಳಿಕೆ ಬಂದಿದ್ದೇ ತಡ - ಪಕ್ಕದಲ್ಲಿ ಯಾರೋ ಕುಳಿತಿದ್ದಾರೇನೋ ಅನ್ನೋ ಹಾಗೆ 'ಎಕ್ಸ್‌‍ಕ್ಯೂಸ್ ಮೀ' ಎಂದು ಅಂದಿಂದಕ್ಕೆ ನನಗೇ ನಗುಬಂತು!

Sunday, August 06, 2006

ಗುಮ್ಮನಗುಸುಗ

ನಮ್ಮೂರುಗಳಲ್ಲಿ 'ಗುಮ್ಮನಗುಸುಗ' ಎನ್ನುವ ಪದವನ್ನು ಬೈಯುವುದಕ್ಕೆ ಬಳಸುತ್ತಾರೆ - ಗುಮನ್‌ಗುಸ್ಗ ಅನ್ನೋದು ಅದರ ಆಡು ಪದವಷ್ಟೇ. ಗುಮ್ಮನಗಸುಗ ಎಂದರೆ ಮನಸ್ಸಿನಲ್ಲೇ ಮಂಡಿಗೆ ತಿನ್ನುವವನು ಎಂದರ್ಥ ಅಂದರೆ ಯಾವಾಗಲೂ ಸ್ವಯಂ ಕೇಂದ್ರೀಕೃತ ವ್ಯಕ್ತಿ ಅಥವಾ ಗ್ರಾಂಥಿಕ ಭಾಷೆಯಲ್ಲಿ ಹೇಳೋದಾದರೆ ಅಂತರ್ಮುಖಿ. ಆಶ್ಚರ್ಯವೆಂದರೆ 'ಅಂತರ್ಮುಖಿ' ಪದದ ಬಳಕೆಯನ್ನು ಹೊಗಳಿಕೆಗೂ, 'ಗುಮ್ಮನಗುಸುಗ' ವನ್ನು ಬೈಯೋದಕ್ಕೂ ಬಳಸೋದು, ನನ್ನ ಪ್ರಕಾರ ಎರಡೂ ಒಂದೇ!

ಹಲವಾರು ವರ್ಷಗಳ ಹಿಂದೆ ಸ್ಟ್ಯಾಟೆನ್ ಐಲ್ಯಾಂಡಿನಲ್ಲಿ ಧ್ಯಾನವನ್ನು ಕಲಿಯೋದಕ್ಕೆ ಹೋದಾಗ ನಮ್ಮೊಳಗೆ ಹೊರಗಿನ ವಿಶ್ವಕ್ಕಿಂತ ದೊಡ್ಡದಾದ ವಿಶ್ವವೊಂದಿದೆ, ಅದರ ಮೇಲೇ ಮನಸ್ಸನ್ನು ಕೇಂದ್ರೀಕರಿಸಿ ಶುದ್ಧ ಧ್ಯಾನದ ಮೂಲಕ ನಮಗಂಟಿದ ಸಂಸ್ಕಾರಗಳನ್ನು ವಿಶ್ಲೇಶಿಸಿಕೊಳ್ಳಬಹುದು ಎಂದು ಪ್ರವಚನಗಳನ್ನು ಕೇಳಿದ್ದೆ. ಅದೇ ರೀತಿ ಬೇಕಾದಷ್ಟು ಕಡೆಯಲ್ಲಿ ಮನಶಾಸ್ತ್ರಕ್ಕೆ ಸಂಬಂಧಿಸಿದ ನಡವಳಿಕೆಗಳನ್ನು ಆವಲೋಕಿಸುವಾಗ introvert ಹಾಗೂ extravert ಎನ್ನುವ ವ್ಯಾಖ್ಯೆಗಳು ನಮ್ಮ ನಡವಳಿಕೆ ಹಾಗೂ ನಡತೆಗಳನ್ನು ಹೇಗೆ ರೂಪಿಸಬಲ್ಲದು, ನಾವು ಹೇಗೆ ಆಲೋಚಿಸುತ್ತೇವೆ ಎಂದೆಲ್ಲಾ ತಕ್ಕಮಟ್ಟಿಗೆ ಓದಿ ಕುತೂಹಲಿತನಾಗಿದ್ದೇನೆ.

ನನ್ನ ಮನಸ್ಸಿನಲ್ಲಿರುವುದನ್ನು ಸ್ಪುಟವಾಗಿ ಹೇಳಲು ಸಾಧ್ಯವಾಗದಿರುವಾಗ ಎಷ್ಟೋ ಸಲ ಹಾಗೆ ಮಾಡದೇ ಇರುವಲ್ಲಿನ ತೊಡಕೇನು ಎಂದು ಪ್ರಶ್ನಿಸಿಕೊಂಡಾಗೆಲ್ಲ ಭಾಷೆಯಂತೂ ಖಂಡಿತವಾಗಿ ಅಡ್ಡ ಬಂದಿದ್ದಿಲ್ಲ, ಅದರ ಬದಲಿಗೆ ವಿಚಾರಗಳನ್ನು ವ್ಯವಸ್ಥಿತವಾಗಿ ಜೋಡಿಸಿ ಅದನ್ನು ಅಗತ್ಯಕ್ಕೆ ತಕ್ಕಂತೆ, ಕೇಳುವವರಿಗೆ ತಕ್ಕಂತೆ ಹಾಗೂ ಆ ಸಮಯದ ಮಿತಿಯಲ್ಲಿ ಸ್ಪುಟವಾಗಿ ಹೇಳುವುದು ಎಲ್ಲರಿಗೂ ಸಾಧ್ಯವಾಗದ ಮಾತು. ಎಷ್ಟೋ ಜನ ಸಭಾಕಂಪನವನ್ನು ಗೆಲ್ಲೋದಕ್ಕೆ ಬಹಳಷ್ಟು ಪ್ರಯತ್ನವನ್ನು ಮಾಡುತ್ತಾರೆ, ಈ ನಿಟ್ಟಿನಲ್ಲಿ ಅಂತರ್ಮುಖಿ ಬಹಿರ್ಮುಖಿ ಆಗುವುದೂ ಬಹಳ ಮುಖ್ಯವಾಗುತ್ತದೆ. ದಿಢೀರನೆ ಒಂದೇ ದಿನದಲ್ಲಿ ಸ್ವಭಾವದ ಬದಲಾವಣೆ ಆಗೋದು ಕಷ್ಟ, ಅದರ ಬದಲಿಗೆ ಹಂತಹಂತವಾಗಿ ಮುಂದುವರಿದರೆ ಎಂತಹವರೂ ತಕ್ಕಮಟ್ಟಿಗೆ ತಮ್ಮ ವಿಚಾರಗಳನ್ನು ನಿರ್ಭಯವಾಗಿ ಹೊರಹಾಕಬಲ್ಲರು.

ನಾನು ಶಾಲಾ ದಿನಗಳಿಗೇನಾದರೂ ಹಿಂತಿರುಗಿ ಹೋಗುವಂತಿದ್ದರೆ ನನ್ನ ವಿಧೇಯತೆಯ ಸೋಗನ್ನು ಕಿತ್ತು ಹಾಕಿ ಸ್ವಲ್ಪ ಕುತೂಹಲ ಮನಸ್ಸಿಗೆ ಒತ್ತು ನೀಡಿ, ನನಗೆ ಪಾಠ ಮಾಡುತ್ತಿದ್ದ ಮೇಷ್ಟ್ರುಗಳಿಗೆಲ್ಲಾ ಮನಸಾ ಇಚ್ಚಾ ಪ್ರಶ್ನೆಗಳನ್ನು ಕೇಳಿಬಿಡುತ್ತೇನೆ ಎನಿಸುತ್ತದೆ. 'ವಿದ್ಯೆಗೆ ವಿನಯವೇ ಭೂಷಣ' ಎಂಬ ದೊಡ್ಡ ಮಾತುಗಳನ್ನು ಆಡಿಯೇ ನಾವು ಕಲಿಯಬೇಕಾದ ಸಮಯದಲ್ಲಿ 'ದೊಡ್ಡವರಿಗೆ' ಎದುರು ಮಾತನಾಡಬೇಡ ಎಂಬರ್ಥದಲ್ಲಿ ನಮ್ಮ ಕೈ ಬಾಯಿಗಳನ್ನು ಕಟ್ಟಿಹಾಕಿಬಿಟ್ಟರೇನೋ ಅನ್ನಿಸಿಬಿಡುತ್ತದೆ, ಎಷ್ಟೋ ದಿನ ನನ್ನ ಪ್ರಶ್ನೆಗಳಿಗೆ ಉತ್ತರ ಸಿಗದೇ ಶಾಲೆಯಿಂದ ಅಂದು ಮನೆಗೆ ಹೋಗಿದ್ದರಿಂದ ನನ್ನ ಸ್ವಭಾವದಲ್ಲಿ ಬೇಕಾದಷ್ಟು ಮಾರ್ಪಾಟುಗಳಾಗಿವೆ - it can wait - we will get to the bottom of it later - ಎನ್ನೋದು ನಿತ್ಯಮಂತ್ರವಾಗಿ ಹೋಗಿದೆ.

ನನ್ನ ಪ್ರಕಾರ ಕ್ರಮಬದ್ಧವಾಗಿ, ಒಂದು ರೀತಿಯ ಧ್ಯಾನದ ಮಟ್ಟದಲ್ಲಿ ಒಳಗಿನ ಅವಲೋಕನ ನಡೆಯದೇ ಹೋದರೆ ಅದು ಹೆಚ್ಚು 'ಚಿಂತೆ'ಯನ್ನು ಮೂಡಿಸುವುದೇ ವಿನಾ 'ಚಿಂತನೆ'ಯನ್ನಲ್ಲ. ಹೊರಗಿನ ಪ್ರಪಂಚವನ್ನು ನೋಡಲ್ಲಿಕ್ಕೆ ಖರ್ಚಾಗುವ ಶಕ್ತಿಗಿಂತಲೂ ಒಳಗಿನದನ್ನು ಅರಿತುಕೊಳ್ಳುವ ಪ್ರಕ್ರಿಯೆಯಲ್ಲಿ ಬಹಳಷ್ಟು ನಷ್ಟವಾಗುವ ಸಂಭವವೇ ಹೆಚ್ಚು. ಚದುರಂಗದಾಟದಲ್ಲಿ ಹಿಂದೆ-ಮುಂದೆ ಆಗುವ, ಆಗಿ-ಹೋಗಬಹುದಾದ ನಡೆಗಳನ್ನೆಲ್ಲ ಯೋಚಿಸಿದಷ್ಟೂ ಅದಕ್ಕೆ ಅಂತ್ಯವೆಂಬುದಿಲ್ಲ, ಆದರೆ ಏನೆಲ್ಲ ಸಾಧ್ಯತೆ-ಬಾಧ್ಯತೆಗಳನ್ನೆಲ್ಲ ಲೆಕ್ಕ ಹಾಕಿದರೂ ಕೊನೆಯಲ್ಲಿ ನಡೆಯುವುದೂ ನಡೆದೇ ತೀರುವುದರಿಂದ ಒಳಗಿನ ತಲ್ಲಣಗಳನ್ನು ಅರಸಿ ಹೊರಡುವ ಮುನ್ನ ಅದೊಂದು ತೆರೆದ ಪಯಣವೆಂಬುದನ್ನು ಮಾತ್ರ ಖಂಡಿತವಾಗಿ ನೆನಪಿನಲ್ಲಿಟ್ಟಿರುತ್ತೇನೆ. ಹಾಗೆಂದು ದಿಢೀರನೆ ಗುಮ್ಮನಗುಸುಗನ ತನದಿಂದ outgoing personality ಆಗುವುದೂ ಸಾಧ್ಯವಿಲ್ಲ. ನನಗೆ ಅಂತರ್ಮುಖತೆಯಿಂದ ಯಾವ ಬೇಸರವೂ ಇಲ್ಲ, ಅದರ ಬದಲಿಗೆ ಅಂತರ್ಮುಖತೆಯಿಂದ ಹೊರಬರಬಹುದಾದ side products ಗಳಾದ ನಾಚಿಕೆ, ಭಿಡೆ, ಅಂಜಿಕೆಗಳು ಹಾಗೂ ಇವುಗಳು ಹುಟ್ಟಿಸುವ ಅವಾಂತರಗಳಿಗೆ ಕೊನೆಯಿಲ್ಲ ಮೊದಲಿಲ್ಲವಾದ್ದರಿಂದ ಅಂತಹವುಗಳನ್ನು ಸಾರಾಸಗಟು ದ್ವೇಷಿಸತೊಡಗುತ್ತೇನೆ. ಅಂತರ್ಮುಖಿಗಳು ಅಂದುಕೊಂಡಂತೆ ಎಷ್ಟೋ ಜನರು ಅವರ ಬಗ್ಗೆ ಯೋಚಿಸುತ್ತಾರೆ, ಅವರ ಬಗ್ಗೆ 'ಏನನ್ನೋ' ತಿಳಿದುಕೊಳ್ಳುತ್ತಾರೆ ಎಂಬುದಾಗಿ, ಆದರೆ ನಿಜ ಸಂಗತಿಯೆಂದರೆ ನಾವು ಒಡನಾಡುವ ವ್ಯಕ್ತಿಗಳಿಗೆ ಅದಕ್ಕೆಲ್ಲಾ ಸಮಯವೇ ಇರೋದಿಲ್ಲ, ಅವರೂ ಉಳಿದವರ ಹಾಗೆ ಒಂದಲ್ಲ ಒಂದು trench ನಲ್ಲಿ ಬಿದ್ದವರೇ. ಒಂದು ವೇಳೆ ಹಾಗೆ ತಿಳಿದುಕೊಂಡರೂ ಅದರಿಂದ ಅಂತಹದ್ದೇನೂ 'ಮಹಾನ್' ಘಟಿಸೋದಿಲ್ಲವಲ್ಲ!

ಪ್ರತಿಯೊಬ್ಬರಿಗೂ ಅವರವರ ಬಗ್ಗೆ ತಿಳಿದುಕೊಳ್ಳಲು, ಅಲ್ಲಲ್ಲಿ ಅವಲೋಕನ ಮಾಡಿಕೊಳ್ಳಲು introspection ಹಂತಗಳಿರಬೇಕೇ ವಿನಾ ಹಳೆಯದನ್ನೇ ಹಚ್ಚಿ ಕೊರಗುವುದೇ ಬದುಕಾಗಬಾರದು. ಈ introspection ಹಂತ ಎಷ್ಟು ಸರಳವಾಗಿರಬೇಕೆಂದರೆ ಒಂದು ರೀತಿ ಕಾರಿನಲ್ಲಿ rearview mirror ಇದ್ದ ಹಾಗೆ, ಅಲ್ಲದೇ ಮುಂದಿನ ಬದುಕಿನಲ್ಲಿ ಆಗಬೇಕಾದ್ದನ್ನು ಎದುರಿಸೋದು ಬೇಕಾದಷ್ಟಿರುವಾಗ ಈ ಹಿಂತಿರುಗಿ ನೋಡಬಹುದಾದ ಕನ್ನಡಿ ಎಷ್ಟು ಸಾಧ್ಯವೋ ಅಷ್ಟು ಚಿಕ್ಕದಿರಬೇಕು ಅಲ್ಲದೇ ಆದಷ್ಟು ಬೇಗ ಅಲ್ಲಿ ಇಣುಕಿ ಅದರಿಂದ ಹೊರಬರಬೇಕು. ಮುಂಬರುವ ಮಾರ್ಗವನ್ನೇ ಮೈಯೆಲ್ಲ ಕಣ್ಣಾಗಿ ಸವೆಸುವ ಅಗತ್ಯವಿರುವಾಗ ಇನ್ನು ಹಿಂದಿನದ್ದನ್ನ ಅವಲೋಕಿಸುತ್ತಾ ಕುಳಿತುಕೊಳ್ಳುವುದಕ್ಕೆ ಸಮಯವಾದರೂ ಎಲ್ಲಿದೆ, ಅಲ್ಲದೇ ಹಿಂದಿನ ದಾರಿಯಲ್ಲಿ ಹಾದು ಹೋದ ಮರ-ಗಿಡ-ಕಂಟಿಗಳನ್ನೆಲ್ಲ ಎಷ್ಟೂ ಅಂತ ನೆನಪಿನಲ್ಲಿಡೋಕಾದರೂ ಸಾಧ್ಯ?

ಮನಸ್ಸಿನಲ್ಲಿದ್ದದ್ದನ್ನು ನಿರರ್ಗಳವಾಗಿ ಹೇಳಬೇಕು, ಸ್ಪುಟವಾಗಿ ಮಾತನಾಡಬೇಕು, ಇನ್ನೊಬ್ಬರು ಮಾತನಾಡುವಾಗ ಅವರ ಮಾತಿನ ಮೇಲೆ ನಿಗಾ ಇಡಬೇಕೇ ವಿನಾ ಅವರು ಹಿಂದೆ ಏನು ಮಾಡಿದ್ದರೆಂದಾಗಲೀ, ಅವರ ಮಾತಿಗೆ ನಾನೇನು ಪ್ರತಿಯಾಗಿ ಮಾತನಾಡಬೇಕು ಎಂದು ಯೋಚಿಸಿಕೊಳ್ಳೋದು ಒಳ್ಳೆಯ ಅಭ್ಯಾಸವಲ್ಲ - ಇನ್ನೂ ಮುಂತಾಗಿ ಹಲವಾರು ಅಣಿಮುತ್ತುಗಳನ್ನು ಅಲ್ಲಲ್ಲಿ ಓದುತ್ತೇನೆ, ಆದರೆ ನಾನು ಹೀಗೇಕೆ ಕಾರ್ಯತತ್ಪರನಾಗುವುದಿಲ್ಲ ಎನ್ನುವುದಕ್ಕೆ ಉತ್ತರವನ್ನರಸಿ ಮತ್ತೆ ಒಳಗೆ ಹಿಣುಕಿ ನೋಡುತ್ತೇನೆ. ಆದರೆ ಒಮ್ಮೆ ಒಳಗೆ ಹೋದವನು ಒಂದು ರೀತಿ ಗೂಗಲ್‍ನಲ್ಲಿ ಮಾಹಿತಿಗೆ ತಿಣುಕಾಡುವವರಂತೆ ಹೋದ ದಾರಿಯಲ್ಲಿ ಹಿಂತಿರುಗಿ ಬಾರದೇ ಮತ್ತಿನ್ನೆಲ್ಲೋ ಹೋಗುವ ಸಾಧ್ಯತೆಯೇ ಹೆಚ್ಚಾಗಿ ತೋರತೊಡಗುತ್ತದೆ.

Saturday, August 05, 2006

Friday, August 04, 2006

ಜಾಗತೀಕರಣ ಅಂದ್ರೆ ಸಾಕು, ಎಲ್ಲವೂ ನಿಧಾನವಾಗಿ ಹೋಗುತ್ತಲ್ಲಾ!

ಕಳೆದೆರಡು ದಿನಗಳಿಂದ ಜಾಗತೀಕರಣದ ಬಗ್ಗೆ ನನ್ನ ನಿಲುವು, ಇತ್ತೀಚಿನ ಮಾಹಿತಿಗಳನ್ನೆಲ್ಲ ಕಕ್ಕಿಕೊಳ್ಳೋಣ ಎಂದು ಆಲೋಚಿಸಿದಂತೆಲ್ಲಾ ಬರವಣಿಗೆ ನಿಧಾನವಾಗಿ ಹೋಗಿ, ನಾನೂ ಒಂಥರಾ ನಮ್ಮೂರಿನ ಬುದ್ಧಿಜೀವಿಗಳ ಹಾಗೆ ಆಗಿ ಹೋಗಿದ್ದೇನೆ - ಯಾವುದೇ ಪ್ರಶ್ನೆ ಕೇಳಿದ್ರೂ ಯೋಚ್ನೇ ಮಾಡೋರ್ ಮುಖಾ ಹಾಕ್ಕೋತಾರೇ ವಿನಾ ಅಪ್ಪಂತಾ ಉತ್ರ ಮಾತ್ರ ಹೊರಗ್ ಬರೋದಿಲ್ಲ! ಒಂಥರಾ ಈ ನಿಧಾನ ಅನ್ನೋದು ಒಳ್ಳೇದೇ ಆಯ್ತು, ನಿಲುವುಗಳನ್ನು ಯಾಕಾದ್ರೂ ಹೇಳ್‌ಕೋ ಬೇಕು, ಸುಮ್ನೇ ಅಡ್ಡಕತ್ರಿಯಲ್ಲಿ ಯಾಕಾದ್ರೂ ಸಿಕ್ಕಿ ಹಾಕ್ಕೋಬೇಕು ಎನ್ನೋ ಯೋಚ್ನೇ ಬಂದಿದ್ದೇ ತಡ ಈ ಪೋಸ್ಟನ್ನು ಬರೆಯತೊಡಗಿದೆ. ಮತ್ತೆ ಹೀಗೆ ಬರೆಯೋಕೆ ಶುರುಮಾಡಿದ್ದು ಯಾಕೆ ಅಂತ ಕೇಳ್ಕೊಂಡ್ರೆ 'ಸಾಧಿಸಿಕೊಳ್ಳುವುದು' ಎನ್ನೋ ಉತ್ರಾ ಬಂತು, 'ಏನನ್ನು?' ಅನ್ನೋ ಮರು ಪ್ರಶ್ನೆಗೆ ಮುಖ ಮತ್ತೆ ಬುದ್ಧಿಜೀವಿಗಳ ಹಾಗೆ ಆಗಿ ಹೋಯ್ತು, ಉತ್ತರಕ್ಕಾಗಿ ಕಾಯೋಣ, ಯಾವಾಗ್ ಬರುತ್ತೋ ನೋಡೋಣ!

'ಗ್ಲೋಬಲ್ ವಿಲ್ಲೇಜ್' ಅಂಥಾರಲ್ಲ ಹಾಗೆ - ಒಂದು ಕಡೆ ಮಾಹಿತಿ ಸುಪರ್ ಹೈವೇ, ಅದು ಕನೆಕ್ಟ್ ಮಾಡೋದು 'ವಿಲ್ಲೇಜ್' ಗಳನ್ನ - ಒಂಥರಾ ನ್ಯಾಷನಲ್ ಹೈವೇ ಸಾಧ್ಯವಾದಷ್ಟು ಶಹರಗಳನ್ನ ಅವಾಯ್ಡ್ ಮಾಡ್‌ಕೊಂಡು ಹೋಗುತ್ತಲ್ಲ ಹಾಗೆ, ಅಲ್ಲ, ಈ ಹೈವೇ ಇರೋದ್ರಿಂದ್ಲೇ ದಿನಕಳೆದಂತೆ ಶಹರಗಳು ಹುಟ್ಟುತ್ತಲ್ಲ ಹಾಗೆ!

'ನಾನು ಸೆಲ್‌ಫೋನ್ ಮಾತ್ರ ಉಪಯೋಗಿಸ್ತೀನಿ, ಬಟ್ ಜಾಗತೀಕರಣ ಅಂದ್ರೇ ಮಾತ್ರ ಮೈಯಲ್ಲ ಉರಿಯುತ್ತೆ', ಅಥವಾ 'ಕುಡಿಯೋಕ್ ಕೋಕ್ ಇರಲಿ, ಜಾಗತೀಕರಣ ದೂರ ಇರಲಿ', ಅಥವಾ 'ನಮ್ ಮಾವನ್ನ್ ಮಗ ಬಿಪಿಓ ಸಂಬಂಧೀ ಕೆಲಸದಲ್ಲಿ ಮಹಾ ದುಡ್ ಮಾಡ್ತಾನ್ರೀ, ಅದೇನೋ ಕೆಟ್ಟ್ ಜಾಗತೀಕರಣದ ಪ್ರಭಾವವಂತೆ!' ಅನ್ನೋ ಹೇಳಿಕೆಗಳಲ್ಲೇ ನಮ್ಮೂರಿನ ಜಾಣರ ಜಾಣತನವೆಲ್ಲ ಕರಗಿಹೋಗಿ ಬಿಡ್ತು. 'ಅಹಿಂಸೆಯನ್ನು ಕೈ ಹಿಡಿ, ಬೀದಿ ನಾಯಿಗೆ ಕಲ್ ಹೊಡಿ' ಅನ್ನೋ ರೀತಿ ವ್ಯತಿರಿಕ್ತವಾದ ಮನಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳೋದೇ ಕಷ್ಟ. ಹಗಲೆಲ್ಲ ಅಲ್ಲಲ್ಲಿ ಏನೇನೋ ಓದಿಕೊಂಡು, ರಾತ್ರಿ ಬಂದಾಗ ಕಂಠಪೂರ್ತಿ ಕುಡಿದು, ಕುಡಿದದ್ದನ್ನ ಅರಗಿಸಿಕೊಳ್ಳಲಾರದೇ ಕುಳಿತಲ್ಲೇ ಕಕ್ಕಿಕೊಳ್ಳೋರ ಥರಾ ಆಗಿ ಹೋಗಿ ಬಿಟ್ನೇ ಎಂದು ಯೋಚಿಸಿಕೊಂಡು ಭಯಪಟ್ಟಿದ್ದಿದೆ.

ಪಿರಂಗಿಯೋರ ಆಡಳಿತವನ್ನು ಸಕತ್ತಾಗಿ ದ್ವೇಷಿಸಿದ್ದ ಫಲವೇ ನಾವೆಲ್ಲ ಅವರ ತೆಕ್ಕೆಗೆ ಬಹಳಷ್ಟು ಗಟ್ಟಿಯಾಗಿ ಒತ್ತಿಕೊಳ್ಳೋ ಹಾಗಾಗಿದ್ದು, ಹಾಗೆ ಇವತ್ತು ಸಹ ಅಫಘಾನಿಸ್ತಾನದಲ್ಲಿ ಕೋಕ್ ಮಾರಾಟಕ್ಕೆ ಬರುತ್ತೆ ಅಂದ್ರೆ ಸ್ಥಳೀಯರ ಕೈಯಲ್ಲಿ ಉಳಿದಿರೋ ತಂತ್ರಗಳು ಕಡಿಮೆ ಅಂತಲೇ ಅರ್ಥ - ಶಿಲಾ ಯುಗದಲ್ಲಿ ಇರೋದಕ್ಕೆ ಯಾರ ಮನಸೂ ಒಪ್ಪೋದಿಲ್ಲ, ಆಧುನಿಕತೆ ಸೊಂಪು ಎಲ್ಲರಿಗೂ ಬೇಕು, ಆದರೆ ಅದು ಜೊತೆಯಲ್ಲಿ ತರೋ ಹಲವಾರು ಬಳುವಳಿಗಳು ಬೇಡ ಅಂದ್ರೆ ಹೇಗೆ? ಸಮಯದ ಪರಂಪರೆಯಲ್ಲಿ ದೇಶ, ನೀತಿ ಎಲ್ಲವೂ ಬದಲಾಗುವ ಹೊತ್ತಿನಲ್ಲಿ ಬದಲಾವಣೆಗೆ ನಾವೂ ತಕ್ಕಂತೆ ಸ್ಪಂದಿಸದೇ ಹೋದರೆ ಯಾರಿಗೆ ನಷ್ಟ, ಜೊತೆಯಲ್ಲಿ ಕೇವಲ ಕೆಲವೊಂದಕ್ಕೆ ಮಾತ್ರ ಅಂಟಿಕೊಂಡು ಎಲ್ಲವೂ ಬೇಕು ಅನ್ನುವ ನಾಟಕವಾದರೂ ಎಷ್ಟು ದಿನ ನಡೆಯಬಲ್ಲದು? ಸರಿ, ನಮ್ಮೂರಿನ ಬುದ್ಧಿವಂತರು ಜಾಗತೀಕರಣವನ್ನು ವಿರೋಧಿಸಿದರೂ ಅಂತಲೇ ತಿಳ್‌ಕೊಳ್ಳೋಣ, ಅಂದ್ರೆ ಅವರು ಅಮೇರಿಕವನ್ನು ದ್ವೇಷಿಸ್ತಾರೆ ಅಂತಲೇ? ಹಾಗಾದ್ರೇ ಅಮೇರಿಕದಿಂದ ಅಪರೂಪಕ್ಕೆ ಭೇಟಿಕೊಡೋ ನನ್ನನ್ನೂ ದ್ವೇಷ್ಟಿಸ್ತಾರೆ ಅಂತಲೇ?

ಜಾಗತೀಕರಣ ಅಂದ್ರೆ ಅಲ್ಲಿ ಫೋಕಸ್ಸಿಗೆ ಬರೋದು ಅಮೇರಿಕವೋ, ತೃತೀಯ ಜಗತ್ತೋ? ಅಪರೂಪಕ್ಕೆ ವಿದೇಶೀ ಬಣ್ಣ ಹೋತ್‌ಗಂಡ್ ಬರೋ ನಾನೋ ಅಥವಾ ಇದ್ದ ಊರಲ್ಲೇ ಘಂಟೆಗೊಂದು ಬಣ್ಣ ಬದಲಾಯಿಸೋ ಇವರೋ?

Wednesday, August 02, 2006

ಶಕ್ತಿಯ ಸದುಪಯೋಗ ಹಾಗೂ ಬಳಕೆ

ಅಮೇರಿಕದ ಶಕ್ತಿ ಬಗ್ಗೆ ಹೇಳ್ತಾ ಹೋದ್ರೆ ಅದಕ್ಕೆ ಬಹಳ ಸಮಯ ಬೇಕು, ಆದ್ದರಿಂದ ಸದ್ಯಕ್ಕೆ ವಿದ್ಯುತ್ ಶಕ್ತಿ ಬಗ್ಗೆ ಹೇಳೋಣಾ ಅಂದುಕೊಂಡೆ. ನಿನ್ನೆ ಹಾಗೂ ಇವತ್ತು ನ್ಯೂ ಯಾರ್ಕ್ ಸುತ್ತ ಮುತ್ತ ನೂರು ಡಿಗ್ರಿ ಫ್ಯಾರೆನ್‌ಹೈಟ್‌ಗೂ ಹೆಚ್ಚು ವಾತಾವರಣದಲ್ಲಿ ಬಿಸಿಯಾಗಿದ್ದರಿಂದ ಎಲ್ಲ ಮಾದ್ಯಮಗಳಲ್ಲಿ ಜನರಿಗೆ ಹೀಟ್‌ವೇವ್ ಬಗ್ಗೆ, ಶಕ್ತಿಯ ಸದ್ಬಳಕೆಯ ಬಗ್ಗೆ ಹಾಗೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದರ ಬಗ್ಗೆ ಆಗಾಗ್ಗೆ ಹೇಳುತ್ತಲೇ ಇರುತ್ತಾರೆ. ಒಂದು ಕಡೆ ಇಂಧನ ಹಾಗೂ ಶಕ್ತಿ ದಾಖಲೆ ಮೀರಿ ಬಳಕೆಯಾಗುತ್ತಿದ್ದರೆ, ಮತ್ತೊಂದು ಕಡೆ ಇಂತಹ ಮುಂದುವರಿದ ದೇಶದಲ್ಲೂ ಜನ ಛಳಿಗಾಲದಲ್ಲಿ ಸಾಯೋದಕ್ಕಿಂತ ಹೆಚ್ಚು ಬಿಸಿಲಿನಲ್ಲಿ ಸಾಯುತ್ತಾರಲ್ಲಾ ಎಂದು ಅನ್ನಿಸಿ ಬೇಸರವಾಯಿತು.

ಶ್ರೀಮಂತ ದೇಶಗಳ ದೊಡ್ಡ ಕೊರತೆ ಎಂದರೆ ಅವರಿಗೆ ಯಾವಾಗಲೂ ಸಂಪನ್ಮೂಲಗಳ ಕೊರತೆ ಅನುಭವಕ್ಕೆ ಬರದಿರುವುದು. ಸರಿಯಾದ ಆರ್ಥಿಕ ಸ್ಥಿತಿಗತಿಯಲ್ಲಿ ಹಣದುಬ್ಬರವನ್ನೂ ಹತೋಟಿಯಲ್ಲಿಡೋದರಿಂದ ಮೇಲೇರಿದ ಬೆಲೆಗಳು ಸದಾ ಅಲ್ಲೇ ನಿಲ್ಲದೆ ತಮ್ಮ ಮೊದಲಿನ ಸ್ಥಾನಕ್ಕೆ ಬರೋದನ್ನ ನಾನು ನೋಡಿದ್ದೇನೆ. ಆದರೂ ಕಳೆದ ಐದಾರು ವರ್ಷಗಳಲ್ಲಿ ಅಗತ್ಯ ವಸ್ತುಗಳ ಉದಾಹರಣೆಯಲ್ಲಿ ಹಾಲು ಮತ್ತು ಪೆಟ್ರೋಲಿನ ಬೆಲೆ ಏರುತ್ತಲೇ ಇದೆ, ಐತಿಹಾಸಿಕವಾಗಿ ನೋಡಿದಾಗ ಹೀಗೆ ಮೇಲೇರಿದ ಬೆಲೆಗಳು ಮತ್ತೆ ಕಡಿಮೆಯಾಗೋದು ನನಗೆ ಇಲ್ಲಿನ ಅನುಭವ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ತಮ್ಮ ಪದಾರ್ಥಗಳ ಬೆಲೆಯನ್ನು ನಿಯಂತ್ರಿಸಿಕೊಳ್ಳಬೇಕಾದರೆ ಸಾಕಾಗಿ ಹೋಗುತ್ತದೆ, ಆದರೆ ಹಣವುಳ್ಳ ದೇಶಗಳಿಗೆ ಅವರದೇ ಆದ ಮೌಲ್ಯ ಮಾಪನಗಳಿವೆ, ಆಮದು-ರಫ್ತುಗಳ ಹೊಂದಾಣಿಕೆಯಲ್ಲಿ ಹೆಚ್ಚಿನ ಅಸಮತೋಲನವನ್ನು ಸರಿಪಡಿಸಲಾಗುತ್ತೆ. ಆದರೆ ಜನರ ಮನಸ್ಸಿನಲ್ಲಿ ಯಾವಾಗಲೂ ಲಭ್ಯವಿರುವ ಸಂಪನ್ಮೂಲಗಳ ಬಳಕೆಗೆ ಮನಸ್ಸು ಹೊಂದಾಣಿಕೆ ಮೂಡಿರೋದರಿಂದ ಅಕಸ್ಮಾತ್ ಏನಾದರೊಂದು ಕಡಿಮೆ ಆದರೆ ಬದುಕು ದುಸ್ಸಾಧ್ಯವೆನಿಸಿ ಬಿಡುತ್ತದೆ. ಕಳೆದ ವಾರ ಕ್ವೀನ್ಸ್‌ನಲ್ಲಿ ಕೆಲವು ಮನೆಗಳಲ್ಲಿ ಒಂದು ವಾರದ ಮೇಲ್ಪಟ್ಟು ಕಳೆದರೂ ಎಲೆಕ್ಟ್ರಿಕ್ ಕರೆಂಟ್ ಬರಲೇ ಇಲ್ಲ, ಅಂತಹ ಸಂದರ್ಭದಲ್ಲಿ ಮಕ್ಕಳು-ಮರಿ ಇರೋ ಮನೆಗಳಲ್ಲಿ ಬದುಕನ್ನು ಸವೆಸೋದು ಬಹಳ ಕಷ್ಟಕರವಾಗುತ್ತದೆ, ಇಲ್ಲಿನ ಹೆಚ್ಚಿನವರಿಗೆ ಅದನ್ನು ಊಹಿಸಿಕೊಳ್ಳುವುದೂ ಅಸಾಧ್ಯ.

ಇಲ್ಲಿನ ಕಡಿಮೆ ಜನರು ಜಗತ್ತಿನ ಅತಿ ಹೆಚ್ಚು ಸಂಪನ್ಮೂಲಗಳನ್ನು ಬಳಸುವುದರ ಬಗ್ಗೆ ಈ ಹಿಂದೆ ಬರೆದಿದ್ದೆ. ಅದರಲ್ಲೂ ಇತ್ತೀಚಿನ ಆಧುನಿಕ ಬದುಕಿನ ಅಂಗಗಳಾದ ಸೆಲ್‍ಫೋನ್, ಮತ್ತಿತರ ಸಾಮಗ್ರಿಗಳು ಬಂದಮೇಲೆ, ಆಕ್ಟೀವ್ ಹಾಗೂ ಪ್ಯಾಸ್ಸೀವ್ ಪರಿಕರಗಳ ಸಂಖ್ಯೆ ಬೆಳೆಯುತ್ತಿದ್ದಂತೆ ಶಕ್ತಿಯ ಬೇಡಿಕೆಯೂ ಕೂಡಾ ಅಷ್ಟೇ ಹೆಚ್ಚಾಗಿ ಬೆಳೆಯುತ್ತಿದೆ. ಒಂದು ಕಡೆ ಪ್ರಗತಿಯ ಸಂಕೇತವಾಗಿ ಪ್ರತಿ ತಲೆಗೆ ಲೆಕ್ಕ ಹಾಕಿದಾಗ ಬೆಳೆಯೋ ಲಿವಿಂಗ್ ಸ್ಪೇಸ್, ಮತ್ತೊಂದು ಕಡೆ ಜನ ಸಂಖ್ಯೆ, ಬಳಕೆದಾರರ ಸಂಖ್ಯೆ ಬೆಳೆದಂತೆಲ್ಲ ಬೇಕಾಗುವ ಉಪಕರಣ/ಅಗತ್ಯಗಳ ಹೆಚ್ಚಳ ಇವೆಲ್ಲವೂ ಸೇರಿ ಹಳೆಯ ವ್ಯವಸ್ಥೆಯ ಮೇಲೆ ಪದೇ-ಪದೇ ಒತ್ತಡವನ್ನು ಹಾಕುತ್ತಲೇ ಇರುತ್ತವೆ. ಜನರ ಬಳಕೆಗೆ ಸ್ಪಂದಿಸಲಿಕ್ಕೆ ಇಲ್ಲಿನ ವ್ಯವಸ್ಥೆಗಳು ತಿಣುಕುತ್ತವೆ, ಇದರಿಂದ ಈ ರೀತಿ ಬಿಸಿಲಿರುವ ಪ್ರತಿದಿನವೂ ಹೊಸದೊಂದು ದಾಖಲೆಯನ್ನು ಸೃಷ್ಟಿಸುತ್ತಾ ಹೋಗುತ್ತದೆ.

ನನಗೆ ಇಷ್ಟವಾದ ಇತ್ತೀಚಿನ ಬೆಳವಣಿಗೆಗಳಲ್ಲಿ ಇಲ್ಲಿನ ನಗರವಾಸಿಗಳಿಗೆ, ಇಲ್ಲಿರುವ ಬಿಸಿನೆಸ್ಸುಗಳಿಗೆ ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಶಕ್ತಿಯನ್ನು ಬಳಸುವಂತೆ ಕೋರಿಕೊಳ್ಳಲಾಗುತ್ತಿದೆ. ಇದು ತುಂಬಾ ಸ್ವಾಗತಾರ್ಹ ಬೆಳವಣಿಗೆ, ಹೀಗೆ ಪ್ರತಿಯೊಬ್ಬರೂ ಒಬ್ಬ ವ್ಯಕ್ತಿ ಹಾಗೂ ಸಂಸ್ಥೆಯ ಮಟ್ಟದಲ್ಲಿ ಚುರುಕಾಗಿ ಯೋಚಿಸಿದ್ದೇ ಆದಲ್ಲಿ ಬಹಳಷ್ಟು ವ್ಯತ್ಯಾಸವಾಗುತ್ತದೆ. ಹೀಗೆ ಪ್ರತಿಯೊಬ್ಬರಲ್ಲೂ, ಬರೀ ಬೇಸಿಗೆ ಕಾಲಕ್ಕೆ ಮಾತ್ರ ಸೀಮಿತವಾಗದೇ, ವರ್ಷದ ಎಲ್ಲಾ ಸಮಯದಲ್ಲೂ ಅಗತ್ಯಕ್ಕೆ ತಕ್ಕಷ್ಟೇ ಇಂಧನ, ಶಕ್ತಿಯನ್ನು ಬಳಸುವಂತೆ ತಿಳಿಸಿ ಹೇಳಬೇಕು, ಅದನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಅದರ ಪರಿಣಾಮ ಮೊದಮೊದಲು ಚಿಕ್ಕದಾಗಿ ಕಂಡರೂ ಅದರ ವಿಸ್ತಾರ ಬಹಳ ದೂರದವರೆಗೆ ಹೋಗುತ್ತದೆ. ಆದರೆ ನನಗನ್ನಿಸಿದಂತೆ ಒಮ್ಮೆ ಇಲ್ಲಿನ ಬಿಸಿ ಇಳಿಯಿತೆಂದರೆ ಜನರು ಕಡಿಮೆ ಶಕ್ತಿಯನ್ನು ಬಳಸುವ ಬಗ್ಗೆ ಮರೆತೇ ಬಿಡುತ್ತಾರೇನೋ ಎನ್ನಿಸುತ್ತದೆ.

ಸಂಪನ್ಮೂಲಗಳು ಇಲ್ಲದೇ ಇದ್ದರೆ ಅದರಿಂದ ಕಲಿಯೋ ಪಾಠ ಸ್ವಾಭಾವಿಕವಾದದ್ದು, ಹಾಗು ಹೆಚ್ಚು ದಿನ ಇರುವಂತದ್ದು, ಅವರಿವರು ಹೇಳಿ ಬಂದ ಅರಿವು ಕೇವಲ ಕೆಲವೇ ದಿನ ಇರುವಂತದ್ದು. ಎನರ್ಜಿ ಕನ್ಸರ್‌ವೇಷನ್ ಬಗ್ಗೆ ಇಲ್ಲಿ ಶಾಲೆಗಳಲ್ಲಿ ಕಲಿಸುತ್ತಾರೋ ಬಿಡುತ್ತಾರೋ ಗೊತ್ತಿಲ್ಲ, ಅತಿಯಾದ ದುರ್ಬಳಕೆಯಿಂದಾಗಿ ಗ್ಲೋಬಲ್ ವಾರ್ಮಿಂಗ್, ಇಂಧನಗಳು ಬರಿದಾಗುವಿಕೆ, ಮತ್ತಿತರ ಸುದ್ದಿಗಳು ಆಗಾಗ್ಗೆ ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಇಲ್ಲಿನ ವ್ಯಸ್ತ ಬದುಕಿನ ಸಡಗರಗಳಲ್ಲಿ ಎಲ್ಲವೂ ಇದೆ ಎನ್ನುವ ಹೆಮ್ಮೆಯ ಹಿಂದೆ ಎಲ್ಲವನ್ನೂ ಉಳಿಸಿಕೊಳ್ಳುತ್ತೇವೆ ಎನ್ನುವ ಮಾತು ಗೌಣವಾಗುತ್ತದೆ. ಸರ್ಕಾರದ ಯಾವ ಯೋಜನೆಗಳಾಗಲೀ, ಆಗಾಗ್ಗೆ ನಿಸರ್ಗ ಕಲಿಸುವ ಪಾಠಗಳಾಗಲೀ ಎಲ್ಲವೂ ಸಾರ್ವಜನಿಕ ನೆನಪಿನಶಕ್ತಿಯ ಥರ ಕುಂಠಿತಗೊಳ್ಳುತ್ತಲೇ ಸಾಗಿದೆ.

ಒಮ್ಮೆ ಉಷ್ಣತೆ ನೂರು ಡಿಗ್ರಿಗಳಿಗಿಂತ ಕೆಳಗೆ ಇಳಿಯಿತೆಂದರೆ ಇಲ್ಲಿನ ಜನಗಳ ತಲೆ ಇನ್ನೇನೋ ವಿಷಯಗಳಿಂದ ಬಿಸಿಯಾಗತೊಡಗುತ್ತದೆ, ಶಕ್ತಿಯ ಸದ್ಬಳಕೆಯ ಪಾಠ ಮತ್ತೊಂದು ಬೇಸಿಗೆಯವರೆಗೆ ಕಾಯತೊಡಗುತ್ತದೆ.

Monday, July 31, 2006

'ಮಠ'ದ ಹಿನ್ನೆಲೆಯಲ್ಲಿ ಅನಿವಾಸಿ ಭಾಷೆ

ನಿನ್ನೆ ಜಗ್ಗೇಶ್ ನಟಿಸಿರೋ 'ಮಠ' ಸಿನಿಮಾ ನೋಡಿದ್ ಮೇಲೆ ನಾನು ಕರ್ನಾಟಕ ಬಿಟ್ಟು ಎಷ್ಟೋ ದಶಕಗಳು ಕಳೆದಂತೆನ್ನಿಸಿತು, ಮೊಟ್ಟ ಮೊದಲ್ನೇ ಬಾರಿ ಸಿನಿಮಾದಲ್ಲಿ ಆಡು ಭಾಷೆಯಲ್ಲಿರೋ ನಮ್ಮ್ ಕನ್ನಡ ಅರ್ಥವಾಗದಂತಾ ಪರಿಸ್ಥಿತಿ, ನಾನು ನಿಧಾನವಾಗಿ ಹೋಗಿದ್ದೇನೋ ಅಥವಾ ನನ್ನ ಆಡುಭಾಷೆ ನನ್ನಿಂದ ಆವಿಯಾಗಿ ಹೋಗಿದೆಯೋ ಯಾರಿಗೆ ಗೊತ್ತು?

ಪ್ರತಿಯೊಂದು ಆಡುಭಾಷೆಗೂ ಅದರದ್ದೇ ಆದ ಒಂದು ವೈಶಿಷ್ಟ್ಯ ಇರುತ್ತೆ, ಕೇವಲ ಬೇರೆ-ಬೇರೆ ಭಾಷೆಗಳ ಪದಗಳನ್ನ ಬಳಸಿ ಮಾತನಾಡ್ತಾರೆ ಅಂತಲ್ಲ, ಈ ಆಡುನುಡಿಯನ್ನ ಅದರ ನೇಟಿವ್ ಪರಿಸರದಲ್ಲಿ ಗಮನಿಸಿದಾಗ ಮೂಲಭೂತವಾಗಿ ಅದರಲ್ಲಿ ಒಂದು ಸ್ವಂತಿಕೆ ಇರುತ್ತೆ, ಅದೇ ಅದರ ವಿಶೇಷ. ಈ ಸ್ವಂತಿಕೆಯನ್ನ ಶಾಲೆಯಲ್ಲಿ ಕಲಿತು ನುಡಿಯಲ್ಲಿ ಪ್ರತಿಬಿಂಬಿಸೋದಕ್ಕಾಗಲ್ಲ, ಅದನ್ನ ಆಡಿಯೇ ಅನುಭವಿಸಬೇಕು. ಎಷ್ಟೋ ಜಾತಿ-ಮತ-ಪರಂಪರೆಗಳ ವೈವಿಧ್ಯಮಯ ವಾತಾವರಣದಲ್ಲಿ ನಮ್ಮ ನುಡಿಯ ವೇರಿಯೇಷನ್ನೂ ಸಹ ಅಷ್ಟೇ ಅಲ್ಲಿನ ಮಣ್ಣಿನ-ನೀರಿನ ಗುಣಕ್ಕೆ ಕಟ್ಟುಬಿದ್ದಿರುತ್ತದೆ. ನಾವು ಇಂಗ್ಲೀಷನ್ನ ಎಷ್ಟೇ ಚೆನ್ನಾಗಿ ಮಾತನಾಡಬಲ್ಲವರಾದ್ರೂ ಒಂಥರಾ ರೇಡಿಯೋದಲ್ಲಿ ಸುದ್ದಿ ಓದೋರ್ ಥರಾ ಕಂಡ್ ಬರ್ತೀವೇ ವಿನಾ ಆ ಭಾಷೆಯ ಜೊತೆಯಲ್ಲಿ ಬೆಳೆದು ಬಂದವರ ಹಾಗಾಗೋದಿಲ್ಲ - ಇವತ್ತಿಗೂ ಸಹ ನಮ್ಮ ಭಾರತೀಯ ಅಥವಾ ಇಂಗ್ಲೀಷ್ ಮೂಲಭಾಷೆಯಲ್ಲದ ಬೇರೆಯವರು ಯಾರೇ ಬರೆದ ಸಂದೇಶದಲ್ಲೂ ಸಹ ಆ ಸ್ವಂತಿಕೆ ಇರೋದಿಲ್ಲ, ಪದಗಳ ಬಳಕೆ ನಿರಾಳವಾಗಿರೋದಿಲ್ಲ, ಯಾವುದರ ಕುತ್ತಿಗೆ ಹಿಚುಕಿದ ಅನುಭವವೂ ಆಗೋದಿಲ್ಲ. ಅದೇ ನಾನೇ ಬರೆದ ಪ್ರತಿಯೊಂದು ಸಾಲನ್ನೂ ಗಮನಿಸುತ್ತಾ ಹೋದರೆ ಆ ಸ್ವಂತಿಕೆ ವಿಷಯಗಳ ಗಹನತೆಯಲ್ಲಿ ಮಾಯವಾಗುತ್ತದೆಯೇನೋ ಅನ್ನೋ ಹೆದರಿಕೆ ಹುಟ್ಟುತ್ತದೆ. ಈ ನೇಟಿವ್ ಭಾಷೆಯ ಪರಿಸರದಲ್ಲಿ ಹುಟ್ಟಿ ಬೆಳೆದೋರೆಲ್ಲ ದೊಡ್ಡ ಬರಹಗಾರರಾಗೋದಿಲ್ಲ, ಆದರೆ ಅವರವರು ಮಾತನಾಡಿದಾಗ ಅದರ ಸ್ವಂತಿಕೆ ಅದರಲ್ಲಿ ಇದ್ದೇ ಇರುತ್ತೆ.

'ಮಠ' ಸಿನಿಮಾದಲ್ಲಿ ಮುಖ್ಯವಾಗಿ ಏಳು ಪಾತ್ರಗಳು ಬರುತ್ತವೆ, ಸಿನಿಮಾದ ವಿಮರ್ಶೆ ಅದೂ-ಇದೂ ಅಂತ ಕಾಂಪ್ಲಿಕೇಷನ್ ಮಾಡೋ ಬದಲಿಗೆ, ಈ ಏಳೂ ಪಾತ್ರಗಳು ಬಳಸೋ ಭಾಷೆ ನನಗೆ ಬಹಳವಾಗಿ ಇಷ್ಟವಾಯಿತು, ಅದರಲ್ಲಿ ಆ ವೇರಿಯೇಷನ್ ಇದೆ, ಮೂಲವನ್ನು ಬಿಂಬಿಸೋ ತತ್ವವಿದೆ, ಬುದ್ಧಿವಂತರ ಸೋಗಿನಲ್ಲಿ ಸ್ವಂತಿಕೆಯನ್ನು ಕಳೆದುಕೊಳ್ಳದ ಸಹಜತೆ ಇದೆ. ಚಿತ್ರಕಥೆ ಬರೆಯೋರಿಗೆ ಆ ಪಾತ್ರ ಹೇಳಿದ್ದರಲ್ಲಿ ಏನೂ ಅರ್ಥವಿಲ್ಲ ಎಂದೆನಿಸಿದರೂ ಅಂತಹ ಚಿಕ್ಕ ಡೀಟೈಲನ್ನು ಹಿಡಿದು ಓದುಗರಿಗೆ/ಕೇಳುಗರಿಗೆ ಒಪ್ಪಿಸಿದಾಗಲೇ ಆ ಬರಹಗಾರನಿಗೆ ಜಯ ದೊರಕೋದು. 'ಮಠ'ದ ಪಾತ್ರಗಳು ತಮಗೆ ಒಪ್ಪಿಸಿದ ಪಾತ್ರಗಳ ಚೌಕಟ್ಟಿನಲ್ಲಿ ಅಚ್ಚುಕಟ್ಟಾಗೇ ನಿರ್ವಹಿಸಿದ್ದರೂ ಬಹಳ ದಿನಗಳ ನಂತರ ಕೇಳಿದ ಭಾಷೆಯಾದ್ದರಿಂದಲೋ, ಈ ರೀತಿ ಅನುಭವಗಳು ನಮಗಿಲ್ಲಿ ಪದೇ-ಪದೇ ಆಗದಿದ್ದುದರಿಂದಲೋ ಚಿತ್ರದುದ್ದಕ್ಕೂ ಬೇಕಾದಷ್ಟು ಸಂಭಾಷಣೆಗಳು ನನ್ನ ತಲೆಯ ಮೇಲೆ ಹಾದು ಹೋದವು - ಈ ಬಾರಿ ಮಧ್ಯದಲ್ಲಿ ತೊಂದರೆ ಮಾಡುವ ಯಾವ ಮಕ್ಕಳೂ ಇರಲಿಲ್ಲ, ಚಿತ್ರದಲ್ಲಿ ಎಲ್ಲವೂ ಸರಿಯಾಗಿಯೇ ಕೆಲಸ ಮಾಡುತ್ತಿತ್ತು - ಬಂದ ತೊಂದರೆಯೇನೆಂದರೆ ನಾನು ಚಿತ್ರದ ಸಂಭಾಷಣೆಯ ವೇಗಕ್ಕೆ ಹೊಂದಿಕೊಳ್ಳಲು ತೆಗೆದುಕೊಂಡ ಸಮಯ. ಹೀಗೆ ಬಂದ ಒಂದು ಸಂಭಾಷಣೆಯ ತುಣುಕನ್ನು ಹಿಡಿದು ಅದನ್ನು ಆಸ್ವಾದಿಸುವುದರಲ್ಲಿ ಮತ್ತೊಂದು ಬರುತ್ತಿತ್ತು, ಒಂದು ರೀತಿ ಮಾತಿನ ಮೇಲೆ ಮಾತು ಬಂದು ನನಗೆ ಆ ವೇಗಕ್ಕೆ ಹೊಂದಿಕೊಳ್ಳಲು ಹಲವಾರು ಕಡೆ ಕಷ್ಟವಾಯಿತು.

ನಾನು ದಿನವೂ ಕನ್ನಡವನ್ನು ಓದುತ್ತೀನಿ ಹಾಗೂ ಬರೀತೀನಿ (ಅಲ್ಲ, ಕುಟ್ಟುತ್ತೀನಿ) ನನ್ನಂಥವನಿಗೇ ಹೀಗೇ? ಕರ್ನಾಟಕದ ಉದ್ದಗಲಕ್ಕೆ ಎಷ್ಟೂ ಸಾದ್ಯವೋ ಅಷ್ಟು ಓಡಾಡಿದ್ದೇನೆ, ತುಸು ಕಷ್ಟಪಟ್ಟರೆ ಒಂದೈದು ಡಯಲೆಕ್ಟ್‌ಗಳನ್ನು ಮಾತನಾಡುತ್ತೇನೆ, ನನ್ನಂಥವನಿಗೇ ಹೀಗೇ? ಎಂದು ಕೇಳಿಕೊಂಡಾಗಲೆಲ್ಲ ಆ ಪ್ರಶ್ನೆಗಳಿಗೆ ಉತ್ತರವಾಗಿ ಕನ್ನಡವನ್ನು ಮಾತುಗಳನ್ನಾಗಿ ಕೇಳೋದಿಲ್ಲವಲ್ಲ, ಆ ಕೊರತೆಯನ್ನು ತುಂಬೋದು ಹೇಗೆ? ಎನ್ನುವ ಪ್ರಶ್ನೆಯೇ ಉತ್ತರವಾಗಿ ಬಂತು. ನಮಗಿಲ್ಲಿ ಬರೋದೇ ವರ್ಷಕ್ಕೆ ನಾಲ್ಕೈದು ಸಿನಿಮಾಗಳು, ಅದನ್ನು ಬಿಟ್ಟರೆ ಮನಪೂರ್ತಿಯಾಗಿ ಮಾತನಾಡುವ ಬೆರಳೆಣಿಕೆಯ ಸ್ನೇಹಿತರಿದ್ದರೂ ಅವರದ್ದೆಲ್ಲ ನನ್ನ ಪರಂಪರೆಯೇ - ಮಾತುಗಳು ಗ್ರಂಥಮಯ, ಮಧ್ಯೆ-ಮಧ್ಯೆ ಹಾಳಾದ ಇಂಗ್ಲೀಷು ಬೇರೆ. ಈ ತರಹದ ಭಾಷೆಯ ಹಿನ್ನೆಲೆಯಲ್ಲಿ ಅದ್ಯಾವುದೋ ಚಿತ್ರದಲ್ಲಿ ಒಬ್ಬ ಹೂ ಮಾರುವ ಹೆಂಗಸು ಮಾತನಾಡುವ ಕನ್ನಡ, ಒಬ್ಬ ಕುಡುಕನ ಬಾಯಿಯಿಂದ ಉದುರುವ ಕನ್ನಡ, ಇಮಾಮ್ ಸಾಬಿ ಅವನ ಮಕ್ಕಳಿಗೆ ಬಳಸೋ ಹರಕು ಮುರುಕು ಉರ್ದು ಮಿಶ್ರ್ರಿತ ಬೈಗಳು ತುಂಬಿದ ಕನ್ನಡ, ಅರ್ಚಕರ ಕನ್ನಡ, ಅಡ್ಡಕಸಬಿಗಳ ಕನ್ನಡ, ಇತ್ಯಾದಿಗಳ ದರ್ಶನವಾದರೆ ಅದು ಧಿಡೀರನೆ ಅರ್ಥವಾಗೋದಾದರೂ ಹೇಗೆ?

ಬೇಕಾಗಿಲ್ಲ ಬಿಡಿ, ಇಲ್ಲಿ ಹೇಗೂ ದಿನ ನಿತ್ಯದ ಬದುಕು ಅನ್ನೋ ಬಂಡಿ ನಡೆದೇ ನಡೆಯುತ್ತಲ್ಲ! ಆದರೆ ಸಂವೇದನೆಗಳ ವಿಷಯಕ್ಕೆ ಬಂದಾಗ ಈ ನೆನಪಿನಿಂದ ಹಾರಿ ಹೋಗಿರೋ ಅಗಾಧವಾದ ಶಬ್ದ ಭಂಡಾರವಿರದೇ ಹೋದಲ್ಲಿ ಆ ಸಂವೇದನೆಗಳು ಪೂರ್ತಿಯಾಗೋದಾದರೂ ಹೇಗೆ? ಇದಕ್ಕಾಗಿಯೇ ಇರಬೇಕು ಒಂದು ರೀತಿ ಅನಿವಾಸಿ ಸಾಹಿತ್ಯ ಬಹಳ ಡ್ರೈ ಅನ್ನಿಸೋದು - ಈ ಶುಷ್ಕ ಸಾಹಿತ್ಯ ಅನ್ನೋದು ನನ್ನ ಬರಹಗಳಲ್ಲಿ, ಸಂವಾದಗಳಲ್ಲಿ ಇರುವ ವಿಷಯ ನನ್ನ ಅಂತಃಪ್ರಜ್ಞೆಯ ಯಾವುದೇ ಮೂಲೆಯೊಂದಕ್ಕೆ ಗೋಚರಿಸಿದರೂ, ಆ ಸಾಹಿತ್ಯದ ಮೇಲೆ, ಹಿಂದೆ-ಮುಂದೆ ದೊರೆಯುವ ಉಪಚಾರಗಳು ಶುಷ್ಕ ಪರಿಸರವನ್ನು ಮುಚ್ಚಿ ಮರೆಮಾಡುತ್ತವೆ. ಹೀಗೆ ನನಗಾದಂತೆಯೇ ಇತರರಿಗೂ ಆಗಿ ನಮ್ಮ ಅನಿವಾಸಿ ಸಂವೇದನೆಗಳು ಯಾರಿಗೂ ದಕ್ಕದೇ ಹೋಗೋ ಸಂಭವನೀಯತೆಯೇ ಹೆಚ್ಚು ಎಂದು ಬಿಡಲೇ ಅಥವಾ ಹೀಗೆ ದೊಡ್ಡದಾಗಿ ಬರೆದರೆ ಅದನ್ನು ಕ್ವಾಲಿಫೈ ಮಾಡೋದು ಹೇಗೆ ಎಂದು 'ಮೆಚ್ಚಿಸುವ' ಆಟ ಆಡಲೇ?

'ಮಠ' ಚಿತ್ರದ ಏಳೂ ಭಾಷೆಗಳು ನಿರಂತರವಾಗಿ ನನ್ನ ಕಿವಿಯ ಮೇಲೆ ಆಗಾಗ್ಗೆ ಬೀಳುತ್ತಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು: ಗಾರೆ ಕಟ್ಟುವವರಿಂದ ಹಿಡಿದು ಬಂಡಿ ಓಡಿಸುವವರ ತನಕ ನನ್ನ ಭಾಷೆಯ ಹರಿವು ಸುತ್ತಿಕೊಳ್ಳುತ್ತಿತ್ತು. ಅದನ್ನು ಬಿಟ್ಟು ಅಪರೂಪಕ್ಕೊಮ್ಮೆ ಆಡುವ ಇಂಗ್ಲೀಷು ಬೆರೆತ ಗ್ರಾಂಥಿಕ ಭಾಷೆಯ ಸೋಗು ನನಗ್ಯಾವ ಅನುಭವವನ್ನೂ ಮಾಡದು, ಬದಲಿಗೆ ಅದು ಒಂದು ರೀತಿ ಮೊನಟನಸ್ ಬಟ್ಟೆಯಿಂದ ಮೈ-ಮನಗಳನ್ನು ಮುಚ್ಚಿ ಇನ್ನೇನೂ ರುಚಿಸದಂತೆ ಮಾಡುವ ಸಾಧ್ಯತೆಯೇ ಹೆಚ್ಚು. ಈ ರೀತಿಯ ಭಾಷೆಯ ಅನುಭವ ಒಂದೆರಡು ಘಂಟೆಗಳ ಮಟ್ಟಿಗೆ ಆಗುವುದೆಂದಾದರೆ ಖಂಡಿತವಾಗಿ ನಾನು ಕನ್ನಡ ಸಿನಿಮಾಗಳನ್ನು ಅದೆಷ್ಟು ಕಷ್ಟವಿದ್ದರೂ ನೋಡಿಯೇ ತೀರುತ್ತೇನೆ - ಸಿನಿಮಾ ಕಥೆ, ಅದನ್ನು ತೆಗೆದ ರೀತಿ ಇವೆಲ್ಲವೂ ಸೆಕೆಂಡರಿ, ಅದು ಆ ಮಟ್ಟಿಗೆ ತರುವ ಭಾಷೆಗಳ ದಿಬ್ಬಣ ಪ್ರೈಮರಿ.

ಈವರೆಗೆ ಜಾಲದಲ್ಲಿ ಕನ್ನಡವನ್ನು ನೋಡುವುದಕ್ಕೆ ಖುಷಿ ಪಟ್ಟುಕೊಳ್ಳುತ್ತಿದ್ದೆ, ಇನ್ನು ಅಲ್ಲಲ್ಲಿ ಬಗೆ-ಬಗೆಯ ಕನ್ನಡವನ್ನು ಕೇಳುವ ಸುಖ ಹುಡುಕಿಕೊಂಡು ಹೋಗಬೇಕಾಗಿದೆ!

Sunday, July 30, 2006

ಶ್ರಾವಣ ತರೋ ಸಂಭ್ರಮ

ಇಂದು ನಾಗರ ಪಂಚಮಿ, ಹೆಚ್ಚೂ ಕಡಿಮೆ ಇಂದಿನಿಂದಲೇ ನಮ್ಮೂರಲ್ಲೆಲ್ಲ ಶ್ರಾವಣ ಶುರುವಾಗೋದು, ಹೌದು ಶ್ರಾವಣ ತರೋ ಸಂಭ್ರಮಕ್ಕೆ ತಯಾರಾಗೋದಕ್ಕೆ ಕೊನೇಪಕ್ಷ ಮೊದಲ ನಾಲ್ಕು ದಿನಗಳಾದರೂ ಬೇಡವೇ?

ಎಂಥವರಿಗೂ ನಮ್ಮೂರಲ್ಲೆಲ್ಲ ಶ್ರಾವಣದ ಅನುಭವ ಬಂದೇ ಬರುತ್ತದೆ, ಯಾವಾಗ ಬೇಕಂದರೆ ಆಗ ಸುರಿಯೋ ಜಿಟಿಪಿಟಿ ಮಳೆ, ಅಲ್ಲಲ್ಲಿ ರಾಚೋ ಕಿಚಿಪಿಚಿ ಕೆಸರು, ಕೈಗಳಲ್ಲೆಲ್ಲ ಒಂದೊಂದು ಕೊಡೆ, ಕಾಲಿಗೆ ಅಡರಿಕೊಳ್ಳೋ ಪ್ಲಾಸ್ಟಿಕ್ ಬೂಟು-ಚಪ್ಪಲಿಗಳು, ಹಿರಿಯರು ಕಟ್ಟಿದ ಹಳೆಯ ಮಾಡಿಗೆ ತೂಗಿಬಿದ್ದು ಕಿರ್-ಗುರ್ ಎಂದು ಸದ್ದು ಮಾಡುವ ಮಾಡಿನ ಮರದ ಹಿನ್ನೆಲೆಯ ಸಂಗೀತದಲ್ಲಿ ಕಿರಿಯರು ಜೀಕಿದಂತೆಲ್ಲ ಪೆಂಡುಲಮ್ ನೆನಪಿಸುವ ಜೋಕಾಲಿಗಳು, ಥರಾವರಿ ತಿನಿಸುಗಳು, ಉಂಡೆಗಳು, ತಳಿರು ತೋರಣಗಳು, ಇವುಗಳ ಜೊತೆಯಲ್ಲಿ ಹೊಸದಾಗಿ ಮದುವೆಯಾದ ಜೋಡಿಗಳು, ಶ್ರಾವಣಕ್ಕೆ ಕಡ್ಡಾಯವಾಗಿ ರಜೆ ತೆಗೆದುಕೊಳ್ಳೋ ಮೀನು ಮಾರುವ ಇಮಾಮ್ ಸಾಬಿ ಮತ್ತು ಅವನ ಮಕ್ಕಳು ಎಲ್ಲರೂ ಒಂದಲ್ಲ ಒಂದು ರೀತಿಯಿಂದ ಸಂಭ್ರಮವನ್ನು ಸೃಷ್ಟಿಸುತ್ತಲೇ ಇರುತ್ತಾರೆ.

ತವರು ಮನೆಯಿಂದ ಹೊರಟ ಹೆಣ್ಣು ಮಕ್ಕಳಿಗೆ ತವರನ್ನು ಬಿಟ್ಟ ನೋವು ಅವರು ತೊಟ್ಟ ಬಣ್ಣಬಣ್ಣದ ಸೀರೆ-ಕುಪ್ಪುಸಗಳ ರಂಗಿನಲ್ಲಿ ಮಾಸಿ ಹೋಗುತ್ತದೆ, ಹೊಸ ಮನೆಯಲ್ಲಿ ಹಾಗಿರಬೇಕು, ಹೀಗೆ ಮಾಡಬೇಕು ಎನ್ನುವ ಆಲೋಚನೆ ತುಂಬಿಕೊಂಡಿರುತ್ತದೆ. ಆಟವಾಡುವ ಮಕ್ಕಳೇನೋ ಜೋಕಾಲಿ ಜೀಕಿಕೊಂಡು ಹಾಯಾಗಿ ಇದ್ದರೆ ಬರೋ ಪುಷ್ಯಾ, ಆಶ್ಲೇಷ ಮಳೆಗಳೋ ಹೇಗೋ, ಈ ವರ್ಷಾನಾದ್ರೂ ಕೆರೆ ತುಂಬಿ ಕೋಡಿಬಿದ್ದಿದ್ದ್ರೆ ಎನ್ನುವ ಆಲೋಚನೆಯ ಗೆರೆ ಹಿರಿಯರ ಮುಖದಲ್ಲಿ ಕಂಡು ಬರುತ್ತದೆ. ಇವರ ನಲಿವಿನ ಹಿಂದುಗಡೆ ಮೊನ್ನೆ ಮೊನ್ನೆ ಬಂದು ಹೋದ ಅಮಾವಾಸ್ಯೆಯ ನೆರಳು ಸ್ವಲ್ಪವಾದರೂ ಇದೆ, ಇನ್ನೇನು ಹತ್ತೇ ದಿನಗಳಲ್ಲಿ ನೂಲು ಹುಣ್ಣಿಮೆ ಬರಬಹುದಾದರೂ ಐದು ದಿನಗಳ ಹಿಂದಿನ ಕತ್ತಲೆ ಹತ್ತು ದಿನಗಳ ನಂತರ ಬರುವ ಬೆಳಕಿನ ಮುಂದೆ ಮೆರೆದಂತೆ ಅನ್ನಿಸುತ್ತದೆ.

ನಿಮ್ಮನೆಗಳೆಲ್ಲೆಲ್ಲ ಹೇಗೋ ಏನೋ, ನಮ್ಮನೆಗಳಲ್ಲಿ ನಾವು ಬಲವಂತವಾಗಿ ಜೋಕಾಲಿ ಕಟ್ಟಿಸಿಕೊಳ್ಳುತ್ತಿದ್ದೆವು, ಅತ್ತೋ-ಕರೆದೋ ಇನ್ನೊಂದೋ ಮಾಡಿ. ಏನಿಲ್ಲವೆಂದರೂ ಕೊನೇಪಕ್ಷ ಎರಡು ರೀತಿಯ ಉಂಡೆಗಳನ್ನಾದರೂ ಮನೆಯಲ್ಲಿ ಮಾಡಿದ್ದರೆ, ಮೆಷ್ಟ್ರು ಮಕ್ಕಳಾದ್ದರಿಂದ ನಮ್ಮ ಅಪ್ಪ-ಅಮ್ಮ ಶಾಲೆ ಬಿಟ್ಟು ಬರೋವಾಗ ಏನಿಲ್ಲವೆಂದರೂ ಹತ್ತಿಪ್ಪತ್ತು ತರದ ಉಂಡೆಗಳನ್ನಾದರೂ ತರುತ್ತಿದ್ದರು, ಅಂಟುಂಡೆ, ಸುಕ್ಕಿನುಂಡೆ, ಶೇಂಗಾಉಂಡೆ, ರವೆಉಂಡೆ, ಮಂಡಕ್ಕಿ ಉಂಡೆ, ಎಳ್ಳುಂಡೆ, ಕೊಬ್ಬರಿ ಉಂಡೆ...ಹೀಗೆ ಹಲವಾರು ಬಗೆಯ ಉಂಡೆಗಳು - ತಿನ್ನುವ ಪದಾರ್ಥಗಳನ್ನೆಲ್ಲ ಬೆಲ್ಲದ ಪಾಕದಲ್ಲಿ ಹಾಕಿ ಅಂಟದಂತೆ ಹದಕ್ಕೆ ಬಂದಮೇಲೆ ಉಂಡೆ ಕಟ್ಟುವ ಪೈಪೋಟಿಗೆ ಉತ್ತರದಂತೆ. ಆದರೆ ಪಂಚಮಿ ಹಬ್ಬವೆಂದರೆ ಅದರಲ್ಲಿ ತಲೆಮಾರಿನಿಂದ ತಲೆಮಾರಿಗೆ ಬೆಳೆದುಬಂದ ಒಂದು ಸಂದೇಶವೂ ಇತ್ತು, ಅದೇ ನಾಗನಿಗೆ ಹಾಲೆರೆಯುವುದು.

ನಮ್ಮೂರ ಪೋಲೀಸ್ ಸ್ಟೇಷನ್ ಆವರಣದಲ್ಲಿ ಇರೋ ಹಾಗೆ ಒಂದು ದೊಡ್ಡ ಹುತ್ತವಿತ್ತು, ಅಲ್ಲಿಗೆ ಊರಿನವರು ಹೆಚ್ಚಿನ ಪ್ರಮಾಣದಲ್ಲಿ ಹೋಗಿ ಹಾಲನ್ನೆರೆದರೆ ನಾವು ನಮ್ಮ ಮನೆಯಲ್ಲಿಯೇ ಒಂದು ಬೆಳ್ಳಿಯ ನಾಗನಿಗೆ ಹಾಲನ್ನೆರೆಯುತ್ತಿದ್ದೆವು. ನಾನು ಪೋಲೀಸ್ ಸ್ಟೇಷನ್ ಆವರಣದಲ್ಲಿರೋ ಹುತ್ತದಲ್ಲಿ ನಾಗನ್ನೆಂದೂ ನೋಡಿದ್ದಿಲ್ಲ, ಆದರೂ ಅಲ್ಲಿ ಹಾವಿನ 'ನಡೆ' ಇದೆ ಎಂದು ಬಲ್ಲವರು ಹೇಳಿದ್ದನ್ನು ಕೇಳಿದ್ದೇನೆ. ಕನ್ನಡದ ಕವಿ ಹೇಳೋ ಹಾಗೆ 'ಉಳ್ಳೆಯದು ಉಳ್ಳೆಯೇ ಕಾಳಿಯ ನಾಗ ನಾಗಲಾರದು...' ಎಂಬಂತೆ ನಮ್ಮ ಮನೆಯ ಐದು ಇಂಚು ಎತ್ತರದ ಬೆಳ್ಳಿಯ ನಾಗ ನಿಜವಾದ ನಾಗ ನೆಂದೂ ಆಗಿದ್ದಿಲ್ಲ, ಗಣಪತಿಯಂತೆ ಹಾಲನ್ನೆಂದೂ ಹೀರಿದ್ದಿಲ್ಲ, ಆದರೂ ನಾವು ಪ್ರತೀ ವರ್ಷ, ಇದ್ದವರು, ಇಲ್ಲದವರು ಎಲ್ಲರ ಹೆಸರಿನಲ್ಲಿ - 'ಅಮ್ಮನ ಪಾಲು, ಅಪ್ಪನ ಪಾಲು, ಅಣ್ಣನ ಪಾಲು...' ಎಲ್ಲವನ್ನೂ ನಾಗನ ತಲೆಗೆ ಅರ್ಪಿಸುತ್ತಿದ್ದೆವು. ಅಪರೂಪಕ್ಕೆ ಒಮ್ಮೆ ಅವರಿವರ ಮನೆಯಲ್ಲಿ ನಿಜವಾದ ನಾಗ ಬಂದು ಹಾಲನ್ನು ಹೀರಿದ ಕಥೆಯೂ ಕೇಳಿ ಬರುತ್ತಿತ್ತು. ಇದು ಬಹಳ ಭಕ್ತಿ ಹಾಗೂ ಸಂಭ್ರಮದ ವಿಷಯ ನಮಗೆಲ್ಲರಿಗೂ. ನಮ್ಮ ಮನೆಯ ಹಿತ್ತಿಲಿನಲ್ಲಿ ಇದ್ದ ಬಾವಿಯ ಕಟ್ಟೆಯ ಹತ್ತಿರ ಒಂದು ನಾಗನ ಮೂರ್ತಿ ಇದೆ, ನಮ್ಮ ಮನೆಯವರ ಪ್ರಕಾರ ಅಲ್ಲೂ ನಾಗನ ನೆಡೆಯಿದೆ, ನಾಗನನ್ನು ನಾವು ಯಾವಾಗಲೂ ಪೂಜಿಸಬೇಕು, ಗೌರವಿಸಬೇಕು ಇತ್ಯಾದಿ, ಇತ್ಯಾದಿಗಳು ಪದೇಪದೇ ಕೇಳಿ ಬಂದು ನಮ್ಮ ಮನದಲ್ಲಿ ಭಕ್ತಿ, ಗೌರವ ಹಾಗೂ ಹೆದರಿಕೆಗಳನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗಿತ್ತು.

ಅಲ್ಲಲ್ಲಿ ಒಂದಿಷ್ಟು ಓದಿ ತಿಳಿದುಕೊಂಡ ಮೇಲೆ, ಇಲ್ಲಿಗೆ ಬಂದ ನಂತರ ಡಿಸ್ಕವರಿ ಚಾನೆಲ್‌ನಲ್ಲಿ ಸ್ಟೀವ್ ಇರ್ವಿನ್‌ನ ಹಾವನ್ನಾಧರಿಸಿದ ಕಾರ್ಯಕ್ರಮಗಳನ್ನು ನೋಡಿದ ಮೇಲೆ, ನಾಗನ ಇತಿ-ಮಿತಿಗಳು ಅರಿವಿಗೆ ಬಂದರೂ, ರಾಮಾಚಾರಿ ಹಾಡಿದ 'ಹಾವಿನ ದ್ವೇಷ ಹನ್ನೆರಡು ವರುಷ...' ಹಾಡು ಮನದಲ್ಲಿ ಘರ್ಷಣೆಯನ್ನು ಸೃಷ್ಟಿಸಿದರೂ ನನಗೆ ನಾಗನ ಮೇಲೆ ಗೌರವ ಕಿಂಚಿತ್ತೂ ಕಡಿಮೆಯಾಗುವುದಿಲ್ಲ. ಕೊನೇಪಕ್ಷ ಏನಿಲ್ಲವೆಂದರೂ ನಮ್ಮೂರಿನ ರೈತರಿಗೆ ರಾತ್ರಿ ಹೊತ್ತು ಜಮೀನಲ್ಲಿ ಉಪದ್ರವ ಕೊಡುವ ಇಲಿಗಳ ಕಾಟವನ್ನು ಹತೋಟಿಯಲ್ಲಿಡಲು ಸಹಾಯವಾಗುವ, ಆಹಾರ ಸರಪಳಿಯಲ್ಲಿ ಮುಖ್ಯ ಸ್ಥಾನದಲ್ಲಿರುವ ಈ ಸರೀಸೃಪಗಳ ಮೇಲೆ ನನಗೆ ಯಾವಾಗಲೂ ಗೌರವವಿದ್ದೇ ಇರುತ್ತೆ.

ಇಲ್ಲಿನ ಪಾರ್ಕಿನಲ್ಲಿ, ಅಥವಾ ಉಳ್ಳವರ ಮನೆಗಳ ಹಿತ್ತಲಿನಲ್ಲಿ ಸದಾ ತೂಗುಬಿದ್ದಿರೋ ಕಬ್ಬಿಣದ ಸರಪಳಿಯ ಜೋಕಾಲಿಗಳಲ್ಲಿ ನಮ್ಮೂರಿನ ನಾರು ಹಗ್ಗದ ಗರಿಗರಿತನವಿಲ್ಲ, ತೆಂಗಿನ ನಾರಿನ ಹಗ್ಗದಿಂದ ಮಾಡಿ, ಮಾಡಿನ ಮರಕ್ಕೆ ತೂಗುಬಿದ್ದ ಕುಣಿಕೆಗಳಲ್ಲಿ, ಗೋಣಿಚೀಲದ ಆಸನದಲ್ಲಿ ಜೀಕೋ ಮಕ್ಕಳಲ್ಲಿ ಕಾಣೋ ಸ್ವಾಭಾವಿಕ ಸಂಭ್ರಮ ಇಲ್ಲಿನ ಮಕ್ಕಳಲ್ಲಿ ನಾನು ನೋಡಿಲ್ಲ, ಅಲ್ಲಿನ ವರ್ಷಕ್ಕೊಮ್ಮೆ ಬರುವ ಜೋಕಾಲಿ ಹಬ್ಬದ ಸಂಭ್ರಮದ ಮುಂದೆ ಇಲ್ಲಿನ ವರ್ಷದ ಬಿಸಿಲಿನ ದಿನಗಳಲ್ಲೆಲ್ಲ ಸಿಗುವ ಜೋಕಾಲಿ ಜೋರು ಏನೇನೂ ಇಲ್ಲ.

ಇಲ್ಲಿನ ಕಬ್ಬಿಣದ ಸರಪಳಿಗಳು ಸವೆಯುತ್ತವೆಯೋ ಬಿಡುತ್ತವೆಯೋ ಅಲ್ಲಿ ನಾವು ಬೆಳೆದಂತೆ ಮಾಡಿನಿಂದ ತೂಗುಬಿಡುವ ಎಳೆಗಳು ಸವೆದು ಕೃಶವಾಗುತ್ತಿದ್ದವು, ನಾವು ನಮ್ಮ ಕಿರಿಯರಿಗೆ ಜೋಕಾಲಿ ಕಟ್ಟಿಕೊಡುವ ಪರಂಪರೆ ಎಂದಿಗೂ ಮುಂದುವರೆಯುತ್ತಿತ್ತು.