Sunday, December 05, 2021

ಸಾಕು ಬೇಕುಗಳ ಮರ್ಮ

ಪ್ರಪಂಚದಲ್ಲಿ ನೂರಕ್ಕೆ ಒಂಬತ್ತು ಜನ ದಿನದ ಊಟದ ಬಗ್ಗೆ ಚಿಂತೆ ಮಾಡ್ತಾರಂತೆ.  ನೂರರಲ್ಲಿ 12 ಜನಕ್ಕೆ ಅಕ್ಷರ ಬರೋದಿಲ್ಲವಂತೆ.  ಎಲ್ಲಕ್ಕಿಂತ ಮುಖ್ಯವಾಗಿ ನೂರರಲ್ಲಿ 11 ಜನ ಬಡತನದಲ್ಲಿ ಬದುಕುತ್ತಾರಂತೆ.  ಅಮೇರಿಕ ಅಭಿವೃದ್ಧಿ ಹೊಂದಿದ ದೇಶವಾದರೂ, ಇಲ್ಲಿನ ಕಾಲು ಭಾಗದಷ್ಟು ಜನರಿಗೆ ನಿವೃತ್ತಿಯಾದ ಮೇಲೆ ಬದುಕಲು ಯಾವುದೇ ಉಳಿತಾಯವೂ ಇಲ್ಲವಂತೆ.  ಈ ಅಂಕಿ ಅಂಶಗಳನ್ನೆಲ್ಲ ಸುಮ್ಮನೆ ನೀವು ಅಂತರ್ಜಾಲದಲ್ಲಿ ಹುಡುಕಿದರೆ ಅನೇಕ ಸಮೀಕ್ಷೆ ಮತ್ತು ಅಧ್ಯಯನಗಳ ಮೂಲಕ ದೊರೆಯುತ್ತವೆ.

ನಾವು ಹಣಕಾಸಿನ ವಿಚಾರದಲ್ಲಿ ನಮ್ಮ ನಿಲುವನ್ನು ಕಂಡುಕೊಳ್ಳುವಷ್ಟರಲ್ಲಿ ನಮ್ಮ ಜೀವನದ ಅರ್ಧ ಆಯಸ್ಸಿನ ಸಮೀಪ ಬಂದಿರುತ್ತೇವೆ.   ಅರ್ಧ ಜೀವನದ ತರುವಾಯ ಅನೀರೀಕ್ಷಿತವಾಗಿ ಹಲವಾರು ತೊಂದರೆಗಳು ಬಂದು, ಅವರವರ ಆರ್ಥಿಕ ಸ್ಥಿತಿಯಲ್ಲಿ ಏರುಪೇರಾಗಬಹುದಾದರೂ ಹೆಚ್ಚಿನವರು ತಮ್ಮ ನಿವೃತ್ತಿಯ ಬದುಕಿನ ಸಾಧ್ಯತೆ-ಬಾಧ್ಯತೆಗಳ ಬಗ್ಗೆ ಯೋಚಿಸಿಯೇ ಇರುತ್ತಾರೆ.  ಇಂತಹ ಸಮಯದಲ್ಲಿಯೇ ನಮ್ಮ ರಿಸ್ಕ್ ಮ್ಯಾನೇಜ್‌ಮೆಂಟ್ ಪ್ರಕ್ರಿಯೆ ಜಾಗರೂಕವಾಗಿರುವುದು.  ನಿಮ್ಮ ಬಳಿ ಇರುವ ಹಣವನ್ನು ಕೇವಲ ಐದೇ ವರ್ಷದಲ್ಲಿ ದ್ವಿಗುಣ ಮಾಡಿಕೊಡುತ್ತೇವೆ ಎನ್ನುವ ಹೂಡಿಕೆಗಳಲ್ಲಿ ತೊಡಗಿಸಲು ಇದು ಸೂಕ್ತ ಸಮಯವಾಗಿರುವುದಿಲ್ಲ.

ಹಾಗೇ, ಒಂದು ಕುಟುಂಬದ ಜೀವನ "ಸೆಟಲ್" ಆಗುವ ಕಡೆಗೆ ಹೋಗುವುದೂ ಇದೇ ಸಮಯದಲ್ಲಿಯೇ.  ಒಬ್ಬರ ವಯೋಮಾನದ ನಲವತ್ತರಿಂದ ಐವತ್ತರ ಹರೆಯದಲ್ಲಿ ಹೆಚ್ಚು ಖರ್ಚುಗಳು ಸಂಭವಿಸುತ್ತವೆ ಎಂದುಕೊಂಡರೆ, ಐವತ್ತರಿಂದ ಅರವತ್ತರ ದಶಕದಲ್ಲಿ ಖರ್ಚುಗಳು ಕಡಿಮೆ ಎಂದುಕೊಳ್ಳಬೇಕಾಗುತ್ತದೆ. ಒಮ್ಮೆ ಅರವತ್ತು ಮುಂದೆ ಎಪ್ಪತ್ತು ಕಳೆದ ನಂತರ ಖರ್ಚುಗಳು ಇನ್ನೂ ಕಡಿಮೆ ಆಗಿ, ಮುಂದೆ ಅಗತ್ಯಕ್ಕಿಂತ ಹೆಚ್ಚು ಹಣ ಬಿದ್ದು ಕೊಳೆಯತೊಡಗುತ್ತದೆ.

ಇಂತಹ ಸಮಯದಲ್ಲಿಯೇ, ಮುಂದುವರೆದ ದೇಶಗಳಲ್ಲಿ Philanthropy, Giving, Charity, Social Responsibility, Humanitarianism... ಮೊದಲಾದ ಪದಗಳ ಬಳಕೆ ಹೆಚ್ಚು ಅನ್ವಯವಾಗೋದು.  ಇಪ್ಪತ್ತರ ಹರೆಯದಲ್ಲಿರುವ ದಂಪತಿಗಳು ಚಾರಿಟಿಯ ವಿಚಾರದಲ್ಲಿ ಸ್ಪಂದಿಸಬಾರಂದೇನೂ ಇಲ್ಲ, ಆದರೆ, ಅವರು ಚಾರಿಟಿಗೆ ಸಂಬಂಧಿಸಿದ್ದನ್ನು ಹೇಗೆ ಸ್ವೀಕರಿಸುತ್ತಾರೋ, ಅದೇ ಎಪ್ಪತ್ತರ ಹರೆಯದಲ್ಲಿರುವ ದಂಪತಿಗಳು ಈ ಪದವನ್ನು ಸ್ವೀಕರಿಸುವ ವಿಚಾರದಲ್ಲಿ ಸಾಕಷ್ಟು ವ್ಯತ್ಯಾಸವಿರುತ್ತದೆ.

***

ಮಾನವ ಮಾನವನಿಗೆ ಸಹಾಯ ಮಾಡಲು ಸಾಧ್ಯವಿದೇಯೇ? ಮಾಡಬೇಕೋ ಬೇಡವೋ, ಎಷ್ಟು ಮಾಡಿದರೆ ಒಳ್ಳೆಯದು ಅಥವಾ ಇಲ್ಲ? ಯಾರು ಯಾರಿಗಾದರೂ ಏಕೆ ಸಹಾಯ ಮಾಡಬೇಕು? ದೇವರು ಸೃಷ್ಟಿಸಿದ ಈ ಸೃಷ್ಟಿಯನ್ನು ದೇವರೇ ನಿಯಂತ್ರಿಸಿಕೊಳ್ಳುತ್ತಾನಾದ್ದರಿಂದ ಅದರಲ್ಲಿ ಹುಲುಮಾನವರದ್ದೇನು ಪಾತ್ರ?  ಅಥವಾ ಖಾಯಿಲೆಗೆ ಔಷಧಿಯನ್ನು ಕಂಡು ಹಿಡಿಯುವ ವಿಜ್ಞಾನಿಯ ಕೆಲಸದ ಹಾಗೇಯೇ ಒಬ್ಬ ಔದ್ಯಮಿ ತನ್ನ ಸಂಪನ್ಮೂಲಗಳ ಸಹಾಯದಿಂದ ಸಮಾಜದ ಏಳಿಗೆಗೆ ಶ್ರಮಿಸುವುದು ನ್ಯಾಯವಲ್ಲವೇ?  ಕಣ್ಣಿಗೆ ಕಾಣದ ವೈರಾಣುಗಳ ವಿರುದ್ಧ ಇಡೀ ಪ್ರಪಂಚವೇ ಹೋರಾಡುತ್ತಿಲ್ಲವೇ ಹಾಗೇಯೇ ಮುಂದೆ ಎಂದಾದರೂ ದುಷ್ಟ ಜಂತುಗಳೋ, ಅನ್ಯ ಗ್ರಹದ ಜೀವಿಗಳೋ ಬಂದು ಆಕ್ರಮಣ ಮಾಡಿದರೆಂದರೆ ಇಡೀ ಮನುಕುಲವೇ ಒಂದಾಗಿ ನಿಂತು ಹೋರಾಡುವುದಿಲ್ಲವೇ?

ತಮ್ಮ ತಮ್ಮ ಕರ್ತ್ಯವ್ಯವನ್ನು ಎಲ್ಲರೂ ನಿಭಾಯಿಸಿಕೊಂಡು ಹೋಗುವುದು ನ್ಯಾಯ.  ಅಂತಹ ಒಂದು ಕರ್ತ್ಯವ್ಯದ ತುಣುಕಾಗಿ ನಮ್ಮ ನಮ್ಮ ಸಾಮಾಜಿಕ ಜವಾಬ್ದಾರಿಯೂ ಇದೆ.  ನಮ್ಮೆಲ್ಲರಲ್ಲಿ ಸಾಮಾನ್ಯ ಜನರೇ ಹೆಚ್ಚು, ಅಪರೂಪಕ್ಕೊಮ್ಮೆ ವಿಶೇಷವಾಗಿರುವ ಜನರನ್ನು ಭೇಟಿಯಾಗುತ್ತೇವೆಯೇ ವಿನಾ, ನಾವೆಲ್ಲರೂ ಜನ ಸಾಮಾನ್ಯರು.  ಆದರೆ, ನಮ್ಮಂತಹ ಸಾಮಾನ್ಯರಲ್ಲಿ ಒಂದು ಶಕ್ತಿ ಇದೆ, ಅದು ನಮ್ಮ ಸಂಖ್ಯೆ.  ಜನಸಾಮಾನ್ಯರೆಲ್ಲ ಒಂದು ದೊಡ್ಡ ಸಂಘಟನೆಯ ಅಡಿಯಲ್ಲಿ ಒಂದಾದಾಗ ಒಂದು ಮಹಾ ಕ್ರಾಂತಿಯಾಗುತ್ತದೆ, ಒಂದು ಸಂಗ್ರಾಮ ನಡೆಯುತ್ತದೆ, ಒಂದು ವ್ಯವಸ್ಥೆಯ ಪರವಾಗಿಯೋ ವಿರುದ್ಧವಾಗಿಯೋ ಒಂದು ಮಹಾ ಆಂದೋಲನವೇ ಹುಟ್ಟುತ್ತದೆ. ಮುಂದಾಳುತನದ ವಿಚಾರದಲ್ಲಿ ಅನೇಕ ನಾಯಕರನ್ನು ನಾವು ಹೆಸರಿಸಬಹುದಾದರೂ, ವಿಶ್ವದ ಎಲ್ಲ ಚಳವಳಿಯ ಶಕ್ತಿಯಾಗಿ ಜನಸಾಮಾನ್ಯರೇ ಇರುವುದು.  ಈ ಜನಸಾಮಾನ್ಯರನ್ನು ಯಾವುದೋ ಒಂದು ಕಾರಣಕ್ಕೆ ಬಂಧಿಸಿ ಅವರನ್ನು ಒಪ್ಪಿಸಿ ಹೋರಾಡುವಂತೆ ಮಾಡುವುದು ಇದೆಯಲ್ಲ, ಅದು ಸಾಮಾನ್ಯರಿಗೆ ಆಗುವ ಕೆಲಸವಲ್ಲ. ಆದರೆ, ಪ್ರತಿಯೊಬ್ಬ ಸಾಮಾನ್ಯನೂ ಕಡಿಮೆ ಎಂದರೆ ಒಂದಲ್ಲ ಒಂದರ ಪರ ಅಥವಾ ವಿರುದ್ಧ ಸಂಘಟಿತಗೊಳ್ಳುವ ಅವಕಾಶ ಇದೆ.  ಯಾವುದಕ್ಕೂ ಸ್ಪಂದಿಸದೇ ಬದುಕುವುದೆಂದರೆ, ಅಂತಹ ಬದುಕಿಗೆ ಒಂದು ಅರ್ಥವಾದರೂ ಹೇಗೆ ಬಂದೀತು!

ಇತ್ತೀಚೆಗೆ, ಒಂದೂವರೆ ಬಿಲಿಯನ್ ಅಷ್ಟು ಸಂಪತ್ತು (ನೆಟ್‌ವರ್ತ್) ಇರುವ ಶ್ರೀಮಂತ ಕುಟುಂಬವೊಂದು ಸುಮಾರು ಐವತ್ತು ಮಿಲಿಯನ್ ಅನ್ನು ಕ್ಯಾನ್ಸರ್‌ಗೆ ಸಂಬಂಧಿಸಿದ ಒಳ್ಳೆಯ ಬೆಳವಣಿಗೆಯೊಂದಕ್ಕೆ ದಾನ ಮಾಡಿದ ನಿದರ್ಶನವೊಂದು ಸಿಕ್ಕಿತು.  ಒಂದಿಷ್ಟು ಸೊನ್ನೆಗಳನ್ನು ಕಡಿಮೆ ಮಾಡಿ ನೋಡಿದರೆ, ಒಂದು ಮಿಲಿಯನ್ ಸಂಪತ್ತು ಇರುವ ಎಷ್ಟು ಜನರು ಸುಮಾರು 33 ಸಾವಿರ ಡಾಲರುಗಳನ್ನು ಒಂದು ಒಳ್ಳೆಯ ಉದ್ದೇಶಕ್ಕೆ ದಾನ ಮಾಡಬಲ್ಲರು? ಇಂಗ್ಲೀಷಿನಲ್ಲಿ ಟೈದ್ (Tithe) ಎನ್ನುವ ಒಂದು ಪರಂಪರೆ ಕಂಡುಬರುತ್ತದೆ.  ಇದು ಮುಖ್ಯವಾಗಿ ಕ್ರಿಶ್ಚಿಯನ್ ಸಮೂಹದಲ್ಲಿ, ಆಯಾ ಕುಟುಂಬಗಳು ತಮ್ಮ ಆದಾಯದ ಮೊದಲ ಹತ್ತನೇ ಒಂದು ಭಾಗದಷ್ಟನ್ನು ಸಂಬಂಧಿಸಿದ ಚರ್ಚುಗಳಿಗೆ ದಾನವಾಗಿ ಕೊಡುವುದು ಎಂದರ್ಥ ಮಾಡಿಕೊಳ್ಳಬಹುದು.  ಆದರೆ, ನಮ್ಮ ಭಾರತೀಯ ಮೂಲದಲ್ಲಿ ಈ ರೀತಿಯ ಆಚರಣೆ ಕಡಿಮೆ.  ಫ಼ಿಲಾಂತ್ರೊಪಿ, ಚಾರಿಟಿ ಮೊದಲಾದ ಪದಗಳು ನಮಗೆ ಹೊಸದಾಗಿ ಕೇಳಿಬರಬಹುದು.  ಆದರೆ, ನಮ್ಮಲ್ಲೂ ಸಹ ಈ ರೀತಿಯ ದೇಣಿಗೆಗಳು, ಕೊಡುಗೆಗಳು ಇದ್ದವು.  ಅನೇಕ ದತ್ತಿ ಛತ್ರಗಳು ನಡೆಯುತ್ತಿದ್ದವು.  ರಾಜಾಶ್ರಯದಲ್ಲಿ ಅನೇಕ ಉಸ್ತುವಾರಿ ಯೋಜನೆಗಳು ನಡೆಯುತ್ತಿದ್ದವು, ಅನ್ನದಾಸೋಹಗಳು ಇದ್ದವು.  ಎಷ್ಟೋ ಹಳ್ಳಿ-ಪಟ್ಟಣಗಳನ್ನು ದತ್ತು ತೆಗೆದುಕೊಂಡು ಅವುಗಳನ್ನು ನೋಡಿಕೊಳ್ಳಲಾಗುತ್ತಿತ್ತು.  ಆದರೆ, ನಮ್ಮಲ್ಲಿ ನಮ್ಮ ಆದಾಯದ ಮೊದಲ ಹತ್ತನೇ ಒಂದು ಭಾಗವನ್ನು ನಾವೆಲ್ಲರೂ ಎಂದೂ ಯಾರಿಗೂ ಕೊಟ್ಟಿಲ್ಲ.  ಹೀಗೆ ಕೊಟ್ಟ ಹಣ ಹೇಗೆ ಬಳಕೆಗೆ ಬರುತ್ತದೆ, ಅದರಿಂದ ಏನೇನಾಗಬಹುದು, ಇಲ್ಲ ಎನ್ನುವುದನ್ನು ಇಲ್ಲಿ ಚರ್ಚಿಸುವುದಕ್ಕಿಂತ - ಹೀಗೂ ಕೊಡಬಹುದು ಎನ್ನುವ ಪ್ರಕ್ರಿಯೆಯ ಬಗ್ಗೆ ಯೋಚಿಸೋಣ. ಒಳ್ಳೆಯದೋ, ಕೆಟ್ಟದ್ದೋ - ಕೈ ಬಿಚ್ಚಿ ಕೊಟ್ಟರೆ ತಾನೇ ಅದರಿಂದ ಏನೋ ಒಂದು ಆಗುವುದು?  ಒಳ್ಳೆಯದು ಅಥವಾ ಒಳ್ಳೆಯದಲ್ಲದ್ದು ಎನ್ನುವುದನ್ನು ನೀವು ನಾಣ್ಯದ ಯಾವ ಮುಖವನ್ನು ನೋಡಿ ಮಾತನಾಡುತ್ತಿದ್ದೀರಿ ಎನ್ನುವುದರ ಮೇಲೆ ತಾನೇ ನಿರ್ಣಯವಾಗೋದು?

***

ಬಹದ್ದೂರ್ ಗಂಡು ಚಿತ್ರದಲ್ಲಿ ಚಿ. ಉದಯಶಂಕರ್ ಅವರು ಬರೆದು, ಎಂ. ರಂಗಾರಾವ್ ಸಂಗೀತ ನೀಡಿದ ಜನಪ್ರಿಯ ಹಾಡಿನೊಂದರ ಸಾಲುಗಳು ನೆನಪಾಗುತ್ತವೆ:

ಕೋಟೆ ಕಟ್ಟಿ ಮೆರೆದೋರೆಲ್ಲ ಏನಾದರು?

ಮೀಸೆ ತಿರುವಿ ಕುಣಿದೋರೆಲ್ಲ ಮಣ್ಣಾದರು!

ಈ ಸಾಲುಗಳ ಮರ್ಮವನ್ನು ಎರಡು ಕಾರಣಕ್ಕಾಗಿ ಯೋಚಿಸಿಕೊಳ್ಳಬೇಕು.  ಮೊದಲನೆಯದಾಗಿ, ಯಾರು ಎಷ್ಟೇ ಆಸ್ತಿ-ಪಾಸ್ತಿ ಮಾಡಿ ಕೂಡಿಟ್ಟರೂ ಎಲ್ಲರೂ ಒಂದು ದಿನ ಅದನ್ನು ಬಿಟ್ಟು ಹೋಗಲೇ ಬೇಕು.  ಯಾರ ಚಟ್ಟದ ಹಿಂದೆಯೂ ಒಂದು ಸರಕಿನ ಲಾರಿಯನ್ನು ಏನೂ ಅವರು ತೆಗೆದುಕೊಂಡು ಹೋಗೋದಿಲ್ಲವಲ್ಲ!  ಎರಡನೆಯದಾಗಿ, ಈಗಾಗಲೇ ಕೋಟ್ಯಾಂಟರ ರೂಪಾಯಿಗಳ ಆಸ್ತಿಯನ್ನು ಮಾಡಿಟ್ಟು, ತಮ್ಮ ಜೀವನದ ಅರ್ಧ ಆಯಸ್ಸಿಗಿಂತಲೂ ಹೆಚ್ಚನ್ನು ಕಳೆದು, ಇನ್ನೇನು ನಿವೃತ್ತಿಯ ಹೊಸ್ತಿಲಿನಲ್ಲಿ ನಿಂತು ನೋಡುತ್ತಿರುವ ಎಲ್ಲ ಮಹಾನುಭಾವರೂ ತಮ್ಮ ಆಸ್ತಿಯ ಹತ್ತನೇ ಒಂದು ಭಾಗವನ್ನು ತಮ್ಮ ತಮ್ಮ ಹೆಸರಿನ ಫ಼ೌಂಡೇಶನ್‌ನ ಹೆಸರಿನಲ್ಲಿ ಸಮಾಜದ ಏಳಿಗೆಗೆ ಏಕೆ ಬಳಸಬಾರದು?

ಕೊನೇ ಪಕ್ಷ, ವಿಶ್ವದ ಎಲ್ಲ ಮಿಲಿಯನ್-ಬಿಲಿಯನ್ನೈರುಗಳು ತಮ್ಮ ಸಂಪತ್ತಿನ ಸಾವಿರದ ಒಂದು ಭಾಗವನ್ನು ತಮ್ಮ ತಮ್ಮ ನೆರೆಹೊರೆಯನ್ನು ಚೊಕ್ಕಗೊಳಿಸುವುದಕ್ಕೆ, ಅಭಿವೃದ್ಧಿಗೊಳಿಸುವುದಕ್ಕೆ, ಆರೋಗ್ಯಪೂರ್ಣವಾಗಿಸುವುದಕ್ಕೆ ಬಳಸಿಕೊಂಡಿದ್ದೇ ಆದರೆ, ನಮ್ಮ ಸಮಾಜಕ್ಕೆ ಅಂಟಿದ ಕಷ್ಟಗಳು ಅರ್ಧಕರ್ಧ ಕಡಿಮೆಯಾದಾವು.  ಅದು ಯಾವುದೂ ಬೇಡ, ಪ್ರಪಂಚದ ಒಂಬತ್ತು ಪರ್ಸೆಂಟು ಜನ ದಿನ ರಾತ್ರಿ ಊಟವಿಲ್ಲದೇ ಮಲಗುವುದಾದರೂ ತಪ್ಪೀತು. ಸಾಕು ಮತ್ತು ಬೇಕು ಎನ್ನುವ ಈ ಎರಡು ಪದಗಳ ಮರ್ಮವನ್ನು ಬಲ್ಲವರಿಗೆ, ಕೈ ಮುಂದು ಮಾಡಿ ಕೊಡಲು ಕಷ್ಟವಾಗೋದಿಲ್ಲ.  ನಾವೆಲ್ಲರೂ ನಮ್ಮ ಆದಾಯ ಮತ್ತು ಸಂಪತ್ತಿನ ಹತ್ತು ಪರ್ಸೆಂಟು ಕೊಡೋದು ಬೇಡ, ವರ್ಷಕ್ಕೆ ಒಂದು ಪರ್ಸೆಂಟ್ ಅನ್ನು ಯಾವುದಾದರೊಂದು ಅಭ್ಯುದಯಕ್ಕೆ ಬಳಸಿದರೆ, ಅದೆಷ್ಟೋ ಅನುಕೂಲಗಳಾಗುತ್ತವೆ ಎನ್ನುವುದೇ ಈ ಹೊತ್ತಿನ ತತ್ವ.

No comments: