Tuesday, February 17, 2009

ನಾನು ಮತ್ತು ನನ್ನ ದೇವರುಗಳು - ಭಾಗ ೧

ಶಾಲಾ ಕಾಲೇಜು ದಿನಗಳಲ್ಲಿ ದೇವರನ್ನು ಕುರಿತು ಅದೆಷ್ಟೋ ವಾದ-ವಿವಾದಗಳನ್ನು ನಡೆಸಿಕೊಂಡು ಬಂದು, ’ದೇವಸ್ಥಾನಕ್ಕೆ ಏಕೆ ಹೋಗಬೇಕು?’, ’ದೇವರೆಲ್ಲಿದ್ದಾನೆ?’ ಎನ್ನುವ ಅರ್ಥ ಕೊಡುವ ಇನ್ನೂ ಹಲವಾರು ಪ್ರಶ್ನೆಗಳಿಗೆ ನಮ್ಮದೇ ಆದ ಉತ್ತರಗಳನ್ನು ಕಂಡುಕೊಂಡು ನಾವು ಸಮಾಧಾನ ಪಟ್ಟಿದ್ದಿದೆ. ಕೊನೆಗೆ ದೇವರ ಪೂಜೆಯನ್ನು ಮಾಡದೇ, ಹಬ್ಬ-ಹರಿದಿನಗಳಿಗೆ ಮನೆಯಲ್ಲಿ ಅಬ್ಸೆಂಟ್ ಆಗುತ್ತಾ ಬಂದು ಒಂದು ರೀತಿಯ ರೆಬೆಲ್ ಜೀವನವನ್ನು ಸಾಗಿಸಿದ ನನ್ನಂತಹವರು ಈಗ ಮೇಲೇರಿದ ಏಣಿ ಗೋಡೆಗೆ ಹೆಚ್ಚು ಒರಗುವಂತಾಗುವ ಹಾಗೆ ದಿನವೂ ದೇವರ ನಾಮ ಸ್ಮರಣೆಯಿಲ್ಲದೇ ದಿನವನ್ನು ಆರಂಭಿಸೋದು ಕಡಿಮೆ. ದೇವರು ಎನ್ನುವ ಕಾನ್ಸೆಪ್ಟಿಗೂ ಮೂರ್ತಿ ಪೂಜೆ (ವಿಗ್ರಹಾರಾಧನೆ) ಗೂ ಬೇಕಾದಷ್ಟು ವ್ಯತ್ಯಾಸಗಳಿವೆ. ದೇವರು ಎನ್ನುವ ಪ್ರತಿಮೆ ಒಬ್ಬ ವ್ಯಕ್ತಿ (ಪರಿವಾರ) ಕ್ಕೆ ಸೀಮಿತಗೊಳ್ಳಬಹುದು, ಅಥವಾ ಅದು ನಿಸರ್ಗದ ಮತ್ತೊಂದು ವಸ್ತು/ಜೀವಿಗೆ ನಾವು ನಮ್ಮ ಮನದಲ್ಲಿ ಕೊಡಬಹುದಾದ ಉನ್ನತ ಪರಿಭಾಷೆ ಇರಬಹುದು. ದೇವರು ಎನ್ನುವುದು ಇಂದಿಗೆ ಪ್ರಸ್ತುತವಾದ ಅಂಶವಿರಬಹುದು ಅಥವಾ ಸಾವಿರಾರು ವರ್ಷಗಳ ಹಿಂದಿನ ಯಾವುದೋ ಒಂದು ಉಲ್ಲೇಖಕ್ಕೆ ಸಂಬಂಧಪಟ್ಟಿರಬಹುದು. ಹೀಗೆ ದೇವರು ಎನ್ನುವ ಎಂದೂ ಮುಗಿಯದ ವಿಚಾರಗಳ ಖಜಾನೆಯನ್ನು ಶೋಧಿಸಿದಂತೆಲ್ಲ ಅವರವರ ಪರಿಮಿತಿಗೆ ಹಾಗೂ ಅನುಕೂಲಕ್ಕೆ ತಕ್ಕಂತೆ ಒಂದಲ್ಲ ಒಂದು ರೂಪ/ಆಕೃತಿ ಅದರಿಂದ ಹೊರ ಹೊಮ್ಮುತ್ತಲೇ ಇರುತ್ತೆ ಎನ್ನುವುದು ನನ್ನ ಅಂಬೋಣ.

ಉದಾಹರಣೆಗೆ, ನಮ್ಮ ಇಂದಿನ ಅನಿವಾಸಿ ಬದುಕಿನ ಒಂದು ದಿನವನ್ನು ಅವಲೋಕಿಸಿಕೊಳ್ಳೋಣ: ಇಲ್ಲಿ ನಾವು ಬೇಡವೆಂದರೂ ಘಂಟೆಗಳ ನಿನಾದ ನಮ್ಮ ಕಿವಿಗೆ ಬೀಳುವ ಗಲ್ಲಿಗಳ ದೇವಸ್ಥಾನಗಳ ಗೊಂದಲವಿಲ್ಲ. ’ಲಾ ಇಲಾಹ ಇಲ್ಲಲ್ಲ...’ ಎನ್ನುವ ಮುಂಜಾನೆ ಐದೂವರೆಗೆ ಮಸೀದಿಯಿಂದ ಕೂಗುವ ಮುಲ್ಲಾನ ಸ್ವರವಿಲ್ಲ. ಮೊದಲು ವೇಣುವಾದನದಲ್ಲಿ (ಮೋಹನರಾಗ) ಆರಂಭಗೊಂಡು ಶಹನಾಯಿವಾದನದ ಮೂಲಕ ನಮ್ಮನ್ನು ಎದ್ದೇಳಿಸುವ ಬಾನುಲಿಗಳಿಲ್ಲ (ರೆಡಿಯೋ ಸ್ಟೇಷನ್‌). ಅಪರಿಮಿತವಾಗಿ ನಮ್ಮ ಇಂದ್ರಿಯಗಳಿಗೆ ದೊರೆಯುವ ಒಂದಲ್ಲ ಒಂದು ರೀತಿಯ ದೇವರ ಉಲ್ಲೇಖಗಳಿಲ್ಲ. ಹೀಗೆಲ್ಲ ಇದ್ದಾಗ್ಯೂ ನಾನು ಕಂಡ ಅನೇಕಾನೇಕ ಅನಿವಾಸಿಗಳ ಮನೆಗಳ ಮೂಲೆಗಳಲ್ಲಿ ಕಾರಿನ ಮೂಲೆಗಳಲ್ಲಿ ದೇವರಿಗೆ ಸ್ಥಾನವಿದೆ, ಜೊತೆಗೆ ಅವರವರ ಅನುಕೂಲಕ್ಕೆ ತಕ್ಕಂತೆ ದಿನಕ್ಕೊಮ್ಮೆ, ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಈ ದೇವರುಗಳ ದರ್ಶನ ಮಾಡುವ ರೂಢಿಯಿದೆ. ಭಾರತದಲ್ಲಿ ಎಲ್ಲವೂ ಇದ್ದು ಅಲ್ಲಿ ನಮಗಿಲ್ಲದ ದೇವರುಗಳ ಜೊತೆ/ಸಾಂಗತ್ಯಕ್ಕೆ ಇಲ್ಲಿ ಹೆಚ್ಚಿನ ಅಗತ್ಯ ಕಂಡುಬರುತ್ತೆ.

ಜನವರಿ-ಫೆಬ್ರುವರಿ ದಿನಗಳಲ್ಲಿ ನಾನು ಆಫೀಸಿಗೆ ಹೋಗೋ ಹೊತ್ತಿಗೆಲ್ಲಾ ಸೂರ್ಯೋದಯದ ಸಮಯ. ದಿನಕ್ಕೊಂದು ಬಗೆಬಗೆಯ ಚಿತ್ತಾರವನ್ನು ಆಕಾಶದಲ್ಲಿ ಸೃಷ್ಟಿಸಿರೋ ಆ ಮೋಡಿಗೆ ಮಾರುಹೋಗದೇ ಇರಲು ಯಾರಿಗಾದರೂ ಹೇಗೆ ಸಾಧ್ಯ? ಅದೇ ಸಮಯಕ್ಕೆ ನಾನು ’ಓ ದಿನಕರ ಶುಭಕರ ಧರೆಗೆ ಬಾ ಎಂದು ಹಾಡುತ್ತೇನೆ’, ಅಥವಾ ’ಓ ಮಿತ್ರಾಯ ನಮಃ’ ಎನ್ನುತ್ತೇನೆ, ಅಥವಾ ತೈತ್ರೇಯ ಉಪನಿಷತ್ತೋ ಅಥವಾ ಮತ್ತಿನ್ನೆಲ್ಲೋ ಉಲ್ಲೇಖಗೊಂಡ ’ನಿನ್ನ ಹೊನ್ನ ಕಿರಣಗಳಿಂದ ನಮ್ಮನ್ನು ಪಾವನಗೊಳಿಸು’ ಎಂದು ಬೇಡಿಕೊಳ್ಳುತ್ತೇನೆ. ನಾನು ಹೀಗೆ ಮಾಡದಿದ್ದರೂ (ಅಥವಾ ಸೂರ್ಯನನ್ನು ನೋಡದೇ ಇದ್ದರೂ) ಸೂರ್ಯನ ದಿನಚರಿಯಲ್ಲಿ ಏನೂ ಬದಲಾಗೋದಿಲ್ಲ. ಹಾಗೆಂದಾಕ್ಷಣ ಎರಡು ಪ್ರಶ್ನೆಗಳು ಮನಸ್ಸಿನಲ್ಲಿ ಹುಟ್ಟುತ್ತವೆ: ೧) ನಿಯಮಿತವಾಗಿ ನಡೆಯುವ ಪ್ರಕೃತಿಯ ಕ್ರಿಯೆಗೆ ನಾನು ಪ್ರತಿಕ್ರಿಯಿಸಿದರೆಷ್ಟು ಬಿಟ್ಟರೆಷ್ಟು? ೨) ಈ ಪ್ರಕೃತಿಯ ಬದಲಾವಣೆಯ ಉಲ್ಲೇಖಕ್ಕೂ ದೇವರಿಗೂ ಏನು ಸಂಬಂಧ?

ಬಹಳ ಸುಲಭವಾಗಿ ದೇವರನ್ನು ಹೀಗೆ ಪರಿಕಲ್ಪಿಸಿಕೊಳ್ಳಬಹುದು: ನಮ್ಮ ಪ್ರಕೃತಿಯೇ ದೇವರು. ಅದರಲ್ಲಿ ಸೂರ್ಯ-ಚಂದ್ರರಿದ್ದಾರೆ, ನದಿ-ಸಾಗರಗಳಿವೆ, ಹಾವು-ಮುಂಗುಸಿ-ಹಂದಿ-ಕಪ್ಪೆ ಇತ್ಯಾದಿಗಳಿದ್ದಾವೆ, ಪಕ್ಷಿಗಳಿವೆ, ಎಲ್ಲವೂ ಇವೆ. ಎಲ್ಲಕ್ಕಿಂತ ಮುಖ್ಯವಾಗಿ ಆಹಾರ ಸರಪಳಿ ಇದೆ. ಯಾವ ವಿಜ್ಞಾನಿಯೂ ಬರೆದಿಡದ ತತ್ವದ ಪ್ರಕಾರ ನಡೆಯುವ ಅದೆಷ್ಟೋ ಅನನ್ಯವಾದ ಚಕ್ರಗಳಿವೆ, ಕೋಟ್ಯಾನುಕೋಟಿ ಜೀವರಾಶಿ ಇದೆ, ಇನ್ನೂ ಏನೇನೋ ಇದೆ. ನನಗೆ ಮುಂಜಾನೆ ಸೂರ್ಯ ದೇವರಾಗಿ ಕಂಡು ಬಂದರೆ ಒಬ್ಬ ರೈತನಿಗೆ ಅವನ ಬೆಳೆಯನ್ನು ಕಾಡುವ ಇಲಿಗಳಿಂದ ರಕ್ಷಣೆಕೊಡುವ ಹಾವು ದೇವರಾಗಿ ಕಂಡುಬರಬಹುದು, ಇನ್ನೊಬ್ಬರಿಗೆ ಅನ್ನವನ್ನು ಕೊಡುವ ಭೂತಾಯಿ ದೇವರಾಗಬಹುದು. ನೀರೆ ಒಂದು ದೊಡ್ಡ ಸಿದ್ಧಾಂತವಾಗಬಹುದು. ಗಾಳಿ, ಮಳೆ, ಬೆಂಕಿ ಮಣ್ಣು, ಮತ್ತೊಂದು ಎಲ್ಲವೂ ಅವರವರ ದೇವರಾಗಬಹುದು. ಈ ಸೃಷ್ಟಿಯ ಅಗಾಧತೆ ಹಾಗೂ ಅದರಲ್ಲಿನ ಶಕ್ತಿ ಎಲ್ಲಗಿಂತ ಮಿಗಿಲಾಗಿರಬಹುದು - ಸಣ್ಣದಾಗಿ ದೇವರ ಮುಂದೆ ಉರಿಯುವ ನಂದಾದೀಪದ ಬೆಂಕಿಗೂ ಇತ್ತೀಚೆಗಷ್ಟೇ ಆಷ್ಟ್ರೇಲಿಯದಲ್ಲಿ ಸಾವಿರಾರು ಮೈಲನ್ನು ಕಬಳಿಸಿದ ಕಾಡ್ಗಿಚ್ಚಿಗೂ ನಂಟಿದೆ. ಈ ಭೂಮಿಯನ್ನು ಸುಮಾರು ಎಂಭತ್ತು ಭಾಗ ಆವರಿಸಿಕೊಂಡ ನೀರಿನ ಅವತಾರಗಳಿಗೆ ಅಪರಿಮಿತ ಶಕ್ತಿ ಇದೆ.

ಈ ಮೇಲೆ ಉಲ್ಲೇಖಿಸಿದ ದೇವರಿನ ಪರಿಕಲ್ಪನೆಗೆ ಜಾತಿಗಳಿಲ್ಲ, ಪ್ರವಾದಿಗಳಿಲ್ಲ, ಮತಗಳಿಲ್ಲ ಹಾಗೇ ಇವು ಎಲ್ಲವೂ ಎಲ್ಲ ಕಡೆಯೂ ಇವೆ. ಅದೇ ಸರ್ವಾಂತರ್ಯಾಮಿ. ಅದೇ ಸರ್ವಶಕ್ತ. ಅದೇ ಭಗವಂತ.

***
’ಓ ಶ್ರೀ ಗಣೇಶಾಯ ನಮಃ’ ಎಂದು ನಮ್ಮ ಮಕ್ಕಳಿಗೆ ಹೇಳಿಕೊಡುತ್ತೇವೆ. ಅಪರೂಪಕ್ಕೊಮ್ಮೆ ದೇವಸ್ಥಾನದಲ್ಲಿ ಕಾಲು ನೋಯಿಸಿಕೊಂಡು ವಿಷ್ಣು ಸಹಸ್ರನಾಮ ಓದಿ ಬರುತ್ತೇವೆ. ಧರ್ಮಸ್ಥಳದಲ್ಲಿ ಕೊಟ್ಟ ಶಿವಸಹಸ್ರ ನಾಮಾರ್ಚನೆಯ ಪುಸ್ತಕದಲ್ಲಿ ಕೊನೆಯ ಪಕ್ಷ ಒಂದು ನೂರು ನಾಮವನ್ನಾದರೂ ಬಾಯಿ ಪಾಠ ಮಾಡಿಕೊಂಡಿದ್ದೇವೆ. ಹಬ್ಬ-ಹರಿದಿನಗಳಿಗೆ ನಮ್ಮದೇ ಒಂದು ವರ್ಶನ್ನನ್ನು ಅನ್ನು ಸೃಷ್ಟಿಸಿಕೊಂಡಿದ್ದೇವೆ. ದಿನವನ್ನು ಆರಂಭಿಸುವ ಮೊದಲು ದೇವರ ಮುಂದೆ ದೀಪ ಹಚ್ಚುತ್ತೇವೆ, ಅಪರೂಪಕ್ಕೊಮ್ಮೆ ಸ್ಮೋಕ್ ಡಿಟೆಕ್ಟರುಗಳಿಗೆ ಹೆದರಿಕೊಂಡೇ ಊದುಬತ್ತಿಯನ್ನು ಉರಿಸುತ್ತೇವೆ. ಹಬ್ಬ ಹರಿದಿನಗಳೇನಾರೂ ವಾರಾಂತ್ಯಕ್ಕೆ ಒದಗಿ ಬಂದರೆ ದೇವಸ್ಥಾನಗಳ ಕಡೆಗೆ ಮುಖ ತಿರುಗಿಸುತ್ತೇವೆ.

ಈ ದೇವಸ್ಥಾನ ಎನ್ನುವುದು ನಮ್ಮ ಸಮುದಾಯ. ಭಾರತದಲ್ಲಿ ವಿಷ್ಣು ದೇವರ ಮುಂದೆ ಹಾಗೂ ಆಜೂ-ಬಾಜಿನಲ್ಲಿ ಹೆಚ್ಚು ದೇವರುಗಳನ್ನು ನಾವು ಸೃಷ್ಟಿಸಿಕೊಳ್ಳೋದಿಲ್ಲ, ಆದರೆ ನಮ್ಮ ಅನಿವಾಸಿ ಬದುಕಿನಲ್ಲಿ ನಾವು ಎಡೆತಾಕುವ ದೇವಸ್ಥಾನಗಳ ಹೆಸರುಗಳು ಏನೇ ಇದ್ದರೂ ಅದರಲ್ಲಿ ಎಲ್ಲವೂ ಇವೆ. ಗಣೇಶ (ಅದರಲ್ಲೂ ಹಲವಾರು ವಿಧ, ಭಂಗಿ, ಗಾತ್ರ - ಒಂದೇ ದೇವಸ್ಥಾನದ ಹಲವು ಕಡೆ), ಶಿವ, ಅಂಬಿಕೆ, ಸತ್ಯನಾರಾಯಣ ಸ್ವಾಮಿ (ಪರಿವಾರ), ರಾಮ (ಪರಿವಾರ), ಭೂಮಿ, ದುರ್ಗೆ, ಲಕ್ಷ್ಮಿ, ಸರಸ್ವತಿ, ಪಾರ್ವತಿ (ಪರಿವಾರ), ಶ್ರೀಕೃಷ್ಣ (ಪರಿವಾರ), ಆಂಜನೇಯ, ನವಗ್ರಹಗಳು, ಇತ್ಯಾದಿ - ಜೊತೆಗೆ ಮುಖ್ಯ ದೇವತೆ (ದೇವಸ್ಥಾನದ ಹೆಸರಿಗೆ ತಕ್ಕಂತೆ). ದೊಡ್ಡ ಬಾಲಾಜಿಯು ವಿಗ್ರಹದ ಕೆಳಗೆ ಸಣ್ಣದೊಂದಿದೆ, ಅದಕ್ಕೂ ಚಿಕ್ಕದಾಗಿ ಮತ್ತೊಂದು ಗಣೇಶ ಮೂರ್ತಿ ಇದೆ. ಪ್ರದಕ್ಷಿಣೆ ಹಾಕುವಾಗ ಅಲ್ಲಲ್ಲಿ ಬೇಕಾದಷ್ಟು ಸಣ್ಣ-ಪುಟ್ಟ ಗಣೇಶ-ಶಿವರು ಕಂಡುಬರುತ್ತಾರೆ.

ಒಂದು ಲೆಕ್ಕದಲ್ಲಿ ಹೇಳೋದಾದರೆ ಈ ಅನಿವಾಸಿಗಳು ಸೃಷ್ಟಿಸಿಕೊಂಡ ದೇವಸ್ಥಾನಗಳು ದೇವಸ್ಥಾನಗಳೇ ಅಲ್ಲ ಎನ್ನಬಹುದು. ಇಲ್ಲಿನ ಮಳೆ-ಛಳಿ-ವ್ಯವಸ್ಥೆಗೆ ತಕ್ಕಂತೆ ಬನಿಯನ್-ಕಾಲುಚೀಲ ಧರಿಸಿ ಪೂಜೆ ನಡೆಸಿಕೊಡುವ ಅರ್ಚಕರಿದ್ದಾರೆ. ಆ ಮೂಲ ವಿನೀತ ಭಾವನೆಯಿಂದ ದೇವರಿಗೆ ನಮ್ಮ ಪ್ರಾರ್ಥನೆಯನ್ನು ಅರ್ಪಿಸಿಕೊಳ್ಳುವ (ನಮ್ಮಲ್ಲಿ) ಮನೋಭಾವನೆಯಲ್ಲಿ ಬಹಳಷ್ಟು ಬದಲಾವಣೆ ಇದೆ/ಆಗಿದೆ. ಬೇಸಿಗೆ ಸಮಯದಲ್ಲಿ ಹೊರಗಡೆ ಜೀನ್ಸ್ ಚೆಡ್ಡಿ(ಬರ್ಮುಡಾ) ವನ್ನು ಧರಿಸಿಕೊಂಡು ಓಡಾಡುವ ನಮಗೆ ದೇವಸ್ಥಾನಗಳಲ್ಲಿ ’ಶಿಸ್ತಾಗಿ ಬನ್ನಿ’ ಎನ್ನುವ ವಿನಂತಿ/ಆದೇಶವಿದೆ. ಶೂಗಳನ್ನು ಯಾವಾಗಲೂ ರ್ಯಾಕ್‌ನಲ್ಲೇ ಇಡಿ ಎಂದು ಅದ್ಯಾವುದೇ ಭಾಷೆಯಲ್ಲಿ ಅದೆಷ್ಟೇ ಬೋರ್ಡುಗಳನ್ನು ಬರೆಸಿಹಾಕಿದ್ದರೂ ಅದನ್ನೆಲ್ಲ ಧಿಕ್ಕರಿಸಿ ಬಾಗಿಲ ಬಳಿಯೇ ಚಪ್ಪಲಿ/ಶೂ ರಾಶಿ ಪೇರಿಸುವ ’ಅದು ನಮಗಲ್ಲ’ ಎಂದು ಕೊಡಗಿಕೊಳ್ಳುವ ಮನೋಭಾವನೆ ಇದೆ (ಇದೇ ಒಂದು ಅಂಶ ಸಾಕು ನಾವು, ಭಾರತೀಯರು ರೂಲ್ಸ್, ರೆಗ್ಯುಲೇಶನ್ನ್ ಹಾಗೂ ಕಾನೂನನ್ನು ಹೇಗೆ ಪರಿಪಾಲಿಸುತ್ತೇವೆ ಎಂದು ಸಾಧಿಸಲು).

ಹೀಗೆ ನಮ್ಮ ಮನೆ, ಮನ, ಕಾರುಗಳಲ್ಲಿರುವುದು ದೇವರೋ ಅಥವಾ ಈ ದೇವಸ್ಥಾನವೆಂದು ಹೆಸರಿಟ್ಟುಕೊಂಡ ಸಮುದಾಯಗಳಲ್ಲಿರುವುದು ದೇವರೋ ಅಥವಾ ನಮ್ಮ ಊರು/ಪರಂಪರೆಯಲ್ಲಿರುವುದು ದೇವರೋ ಎನ್ನುವ ಪ್ರಶ್ನೆ ಬಹುಷಃ ಎಲ್ಲರಿಗೂ ಬಂದಿರಬಹುದು. ಇಷ್ಟೆಲ್ಲಾ ದೇವರಿನ ಪರಿಕಲ್ಪನೆ ಸಾಲದು ಎಂದು ನಮ್ಮ ನಮ್ಮ ಕಲ್ಪನೆಯ ಮಠಗಳನ್ನು ಹುಟ್ಟು ಹಾಕಿಕೊಂಡಿದ್ದೇವೆ. ಸಂಕಟಕ್ಕೆ ತಿರುಪತಿಯ ವೆಂಕಟರಮಣನಿದ್ದಾನೆ, ಧರ್ಮಸ್ಥಳದ ಮಂಜುನಾಥ ಸ್ವಾಮಿಯಿದೆ (ಒಂದು ಆಬ್ಜೆಕ್ಟ್ ಪರಿಕಲ್ಪನೆ ಗಮನಿಸಿ), ಮಂತ್ರಾಲಯವಿದೆ, ಹೊರನಾಡಿದೆ, ಶೃಂಗೇರಿಯಿದೆ. ನಮ್ಮ ಊರಿನ ಕೈಟಭೇಶ್ವರನಿದ್ದಾನೆ, ಸರ್ಕಲ್ಲಿನ ಚೌಡಮ್ಮಳಿದ್ದಾಳೆ, ತೊಗರ್ಸಿಯ ಮಲ್ಲಿಕಾರ್ಜುನ ಸ್ವಾಮಿ ಇದ್ದಾನೆ, ಸುಬ್ರಹ್ಮಣ್ಯ ಸ್ವಾಮಿಯ ಸಾನಿಧ್ಯವಿದೆ. ನಮ್ಮ ಹಿಂದೂ ಪರಿಕಲ್ಪನೆಯೇ ಎಷ್ಟು ವಿಸ್ತಾರವಾದುದೆಂದು ನಾನು ಸೋಜಿಗಗೊಂಡಿದ್ದೇನೆ - ಅವರವರ ಅನುಕೂಲಕ್ಕೆ ತಕ್ಕಂತೆ ಯಾರು/ಏನನ್ನು ಬೇಕಾದರೂ ಮೆಚ್ಚಿ/ಹಚ್ಚಿಕೊಳ್ಳುವ ಸ್ವಾತಂತ್ರ್ಯವಿದೆ.


***

ಸೃಷ್ಟಿ, ಪ್ರಕೃತಿ ಹಾಗೂ ಮೂರ್ತಿ ಪೂಜೆಯ ಆಧಾರದಲ್ಲಿ ಈ ಎಲ್ಲ ಉಲ್ಲೇಖಗಳನ್ನು ಮಂಡಿಸಿದಂತೆ ಒಂದು ಅಂಶ ಪ್ರಸ್ತುತವಾಗುತ್ತದೆ - ಅದೇ ನಮ್ಮ ಸಮುದಾಯ. ಭಾರತದಲ್ಲಿ ನಾವು ಬೆಳೆದುಬಂದಂತೆ ಒಂದು (ಮೆಜಾರಿಟಿ) ವ್ಯವಸ್ಥೆಯ ಅಂಗವಾಗಿದ್ದೆವು, ಆ ವ್ಯವಸ್ಥೆ ಇಲ್ಲಿ ಇರದಿದ್ದ ಮಾತ್ರಕ್ಕೆ ಅದನ್ನು ನಾವು-ನಾವೇ ಹುಟ್ಟುಹಾಕಿಕೊಂಡಿರೋದು (ಪ್ರಯತ್ನ). ಸಂಘಜೀವ ಪ್ರತಿಯೊಬ್ಬರಿಗೂ ಬೇಕಾದ ಹಾಗೇ ಒಂದಲ್ಲ ಒಂದು ಗೋಡೆಗೆ ನಾವು ಒರಗಿಕೊಳ್ಳಲೇ ಬೇಕಾಗುತ್ತದೆ. ನಮ್ಮ ಮನ-ಕಾರು-ಮನೆಗಳಲ್ಲಿನ ದೇವರುಗಳನ್ನು ಒಂದು ಸ್ವಲ್ಪ ದಿನಗಳ ಮಟ್ಟಿಗೆ ತೆಗೆದುಹಾಕಿ ನೋಡಿದಾಗ (ಸಾಧ್ಯವಿದ್ದರೆ) ಅಲ್ಲಿ ಒಂದು ನಿರ್ವಾತ (ವ್ಯಾಕ್ಯೂಮ್) ಹುಟ್ಟತ್ತದೆ, ಈ ನಿರ್ವಾತದ ವಿಶೇಷವೆಂದರೆ ಅದನ್ನು ಮತ್ತೊಂದರಿಂದ ತುಂಬಲೇ ಬೇಕಾಗುತ್ತದೆ. ಒಂದು ರೀತಿಯ ಪೆಂಡುಲಮ್ ಗುಂಡು ಇದ್ದ ಹಾಗೆ, ನೀವು ಒಂದು ಎಕ್ಸ್‌ಟ್ರೀಮ್‌ಗೆ ತೆಗೆದುಕೊಂಡು ಹೋದಂತೆಲ್ಲ ಅದು ಅಷ್ಟೇ ವಿರುದ್ಧ ದಿಕ್ಕಿಗೆ ಚಲಿಸುವ ಸಹಜತೆ ಇರುವ ಹಾಗೆ.

ಪ್ರತಿಯೊಬ್ಬರಿಗೂ ಅವರವರ ಬೇಡಿಕೆಗಳಿವೆ ಹಾಗೂ ಅಗತ್ಯಗಳಿವೆ, ಅದಕ್ಕೆ ತಕ್ಕಂತೆ ಅವರವರ ಮನಸ್ಸಿನಲ್ಲಿ ಎಲ್ಲೋ ಮೂಲೆಯಲ್ಲಿ ದೇವರ ಪರಿಕಲ್ಪನೆ ಇದೆ. ದೇವರು ಇಲ್ಲ ಎನ್ನುವ ವಾದವೂ, ದೇವರ ಮೇಲಿನ ಸೇಡೂ, ವಿರೋಧಾಲೋಚನೆಗಳು ಎಲ್ಲವೂ ಆ ದೇವರ ಕೃಪೆಯೇ ಎಂದುಕೊಂಡರೆ ಎಲ್ಲವೂ ದೇವರ ಮಯ. ದೇವರು ಎನ್ನುವ ಭಾವನೆ ಅಥವಾ ಆ ಭಾವನೆ ಇಲ್ಲದಿರುವ ಭಾವನೆಯೇ ದಿವ್ಯವಾದುದು, ಅಷ್ಟೇ!

Monday, February 16, 2009

ಈಗಿನ ಹುಡ್ರು ಕಥೆ

ಪಾಪ, ಈಗಿನ ಹುಡ್ರು ತಮ್ ತಮ್ ಒಳಗೆ ಹಿಂಗೂ ಮಾತಾಡ್‌ಕೊಂತರೆ ನೋಡಿ, ಕರ್ರಗಿದ್ದೋರನ್ನ ಕರಿಯಾ ಅನ್ನೋದರಲ್ಲಿ ಅಫೆನ್ಸ್ ಏನಿದೆ? ದಿನಕ್ಕೆ ಐವತ್ತು ಸೆಂಟ್ಸ್ ಕೊಟ್ಟು ವಾರಕ್ಕೊಂದು ಸರ್ತಿ ಉದಯಾ ಟಿವಿ ನೋಡೋ ಭಾಗ್ಯದ ದೆಸೆಯಿಂದ ಈ ಹಾಡು ಕಿವಿಗೆ ಬಿದ್ದು ಹೀಗೆ ಬರೀಬೇಕಾಯ್ತು ನೋಡಿ.

ಕರಿಯಾ ಐ ಲವ್ ಯೂ
ಕರುನಾಡ ಮೇಲ್ ಆಣೆ
ಬೆಳ್ಳಿ ಐ ಲವ್ ಯೂ
ಬಿಳಿ ಮೋಡದಾ ಮೇಲ್ ಆಣೆ

ಭಾಳಾ ಹಿಂದಕೆ ಏನಿಲ್ಲ ಪ್ರೇಮಿಗಳೆಲ್ಲ ಇನ್ನೂ ಏನೇನನ್ನೋ ಇಟ್ಟು ಆಣೆ ಮಾಡಿಕೊಂತಿದ್ರು ಇಂದಿನ್ ಕಾಲ್ದಲ್ಲಿ ಅವೆಲ್ಲಾ ಶಾನೆ ಬದ್ಲಾಗಿರಂಗಿದೆ ಬಿಡಿ, ಏನ್ ಮಾಡಣ. ಇವತ್ತಿನ್ ಹುಡ್ರೆಲ್ಲಾ ಟೈಪ್‌ರೈಟರ್ ಕುಟ್ಟಿ ನೋಡಿಲ್ಲ, ರೆಕಾರ್ಡ್ ಪ್ಲೇಯುರ್ ತಟ್ಟೇನೆಲ್ಲ ಕಂಡೇ ಇಲ್ಲ. ನಮ್ ಕಾಲ್ದ ರೆಕಾರ್ಡ್ ತಟ್ಟೆಗಳ ಮೇಲ್ ಧೂಳೂ ಪಾಳೂ ಕುಂತಿದ್ದೇ ಆದ್ರೆ ಬರೀ ಹೇಳಿದ್ದೇ ಹೇಳ್ತಿತ್ತು, ಅದೇ ಈಗಿನ ಕಾಲ್ದ ತಟ್ಟೆಗಳೋ ಕೆಲ್ಸಾ ಮಾಡೋದೇ ನಿಲ್ಲಿಸ್ತವೆ. ಹೇಳಿದ್ದೇ ಹೇಳೋದ್ ಬೆಷ್ಟೋ ಅಥ್ವಾ ಕೆಲ್ಸಾ ನಿಲ್ಸೋದ್ ಬೆಷ್ಟೋ ನಿಮ್ ನಿಮ್ಗೇ ಬಿಟ್ಟಿದ್ದು. ಕೆಲವಂದ್ ಸರ್ತಿ ಹೇಳಿದ್ದೇ ಹೇಳೋ ಕಿಸ್‌ಬಾಯ್ ದಾಸ್ರೇ ಸರಿ, ಸುಮ್ಕಿರ್ ಮಂಗ್ಯಾನ್ ಮಕ್ಳೀಗ್ ಹೋಲ್ಸಿ ನೋಡಿದ್ರೆ ಅನ್ಸಲ್ಲಾ?

ನಿನಗೊಂದು ಪ್ರೇಮದ ಪತ್ರಾ
ಬರೆಯೋದು ನನಗಾಸೆ
ನಾನೆ ಇರುವೇ ಹತ್ರ
ಬಿಡು ಆಸೆ ಓ ಕೂಸೇ


ಆಯ್ತಲ್ಲಾ ಕಥೇ, ಪ್ರೇಮದ ಪತ್ರಾ ಇರ್ಲಿ, ಪತ್ರದ ಗೋಜಿಗೇ ಹೋಗಂಗಿಲ್ಲ ಈಗಿನ ಹುಡ್ರೂ ಅಂತೀನಿ. ಎಲ್ಲೋ ಇ-ಮೇಲೂ ಪಾಮೇಲೂ ಅಂತ ಕುಟ್ಟಿಗಂಡು ಬದುಕ್ಯಂಡಿದ್ದ್ ಬಡ್ಡಿ ಹೈಕ್ಳು ಈಗೀಗ ಎಸ್‌ಎಮ್ಮೆಸ್ ದಾರಿ ಹಿಡಕಂಡು ಒಂಥರಾ ಕಾಡುಕುದ್ರೆ ದಾರಿ ಹಿಡಿದವೆ ಇವರ ಕಮ್ಮ್ಯೂನಿಕೇಷನ್ನು. ಜೊತೆಗೆ ಸೆಂಟ್ರಲೈಜ್ಡ್ ಪೋಸ್ಟ್ ಆಫೀಸ್ ಕಥೆ ಏನ್ ಹೇಳಾಣ, ಅವರ ಪತ್ರಗಳ ಎಣಿಕೆ ಕಡಿಮೆ ಆದಂತೆ ಅವರ ಕಮ್ಮೀ ಆದ ಆದಾಯ ನೋಡಿ ಇಂದಿನ ಪೋಸ್ಟ್ ಮಾಸ್ಟರ್ ಜನರಲ್ಲುಗಳಿಗೆ ರಾತ್ರಿ ನಿದ್ದೇನೇ ಬರಂಗಿಲ್ಲಂತೆ ನಿಜವೇ? ಇವತ್ತಿನ ಮೊಬೈಲ್ ಫೋನ್ ಜಮಾನಾದಾಗೆ ಜನಗಳು ಲೆಟ್ರು ಬರೆಯೋದಿರ್ಲಿ ಮಾತೇ ಆಡೇ ಬರೀ ಫಿಂಗರ್ರುಗಳ ಮಸಲ್ಲುಗಳನ್ನು ಬೆಳೆಸ್ತಾ ಇದಾರಂತೆ ಹಿಂಗೇ ನಡೆದ್ರೆ ಇನ್ನು ಮುಂದಿನ ಪೀಳಿಗೆಗಳಿಗೆ ಒಂದೊಂದು ಬೆರಳು ಹೆಚ್ಚು ಹುಟ್ಟುತ್ತೋ ಏನೋ - ವಿಕಾಸವಾದದ ದೊರೆಗಳ್ನೇ ಕೇಳ್ಬೇಕು. ಬ್ಲ್ಯಾಕ್‌ಬೆರಿ ಅಂತಂದು ಜೀವನದುದ್ದಕ್ಕೂ ಯಾವ್ದೇ ಬೆರ್ರಿನ್ನೂ ಚೆರ್ರಿನ್ನೂ ನೋಡ್ದೇ ಇರೋರಿಗೆ ಕಮ್ಮ್ಯೂನಿಕೇಷನ್ನ್ ಫಿವರ್ರ್ ಹುಟ್ಟಿಸಿರೋರನ್ನ ಜೈಲಿಗೆ ಹಾಕ್ಬೇಕು, ಮತ್ತೇನು. ಇಷ್ಟೆಲ್ಲಾ ಮಾಧ್ಯಮಾ, ಕಮ್ಮ್ಯೂನಿಕೇಷನ್ನೂ ಅಂತಾ ಇದ್ರೂ ಜನಗಳ ನಡ್ವೆ ಸಂಬಂಧಗಳ ಅಪಸ್ವರ ಹೆಚ್ತಾನೇ ಇರೋದು ಇನ್ಯಾವ ವಾದದ ಮಾತೂ ಅಂತೀನಿ.

ಇವತ್ತಿನ ಕಾಯಂಗಿಲ್ಲ, ಕೆನೆ ಕಟ್ಟಂಗಿಲ್ಲ. ನೋಡಿಕ್ಯಂತಿರಿ ಇವತ್ತಲ್ಲ ನಾಳೆ ಒಂದು ನಿಮಿಷದೊಳಗೆ ಹಾಲು ಕೆನೆಕಟ್ಟೋ ಯಂತ್ರ ಕಂಡ್ ಹಿಡಿತಾರೋ ಇಲ್ಲಾ ಅಂತ. ಮೊಸರಿಗೆ ಇಡೋವಾಗ ಹಾಲನ್ನು ಬಿಸಿ ಮಾಡಿ ಆಮೇಲೆ ತಣ್ಣಗೆ ಮಾಡಿ ಅದರ ಮೇಲೆ ಹೆಪ್ಪು ಯಾಕ್ ಹಾಕಬೇಕು, ಯಾರ್ ಮಾಡಿದ್ರಪ್ಪಾ ಆ ನೀತೀನ.

Monday, February 09, 2009

ಅವರವರ ಹಾಡು ಅವರದು...

ಕೆಳಗಿನ ಮೂರು ವಾರದಿಂದ ಭರ್ಜರಿ ಕೆಲಸ. ಜನವರಿ ಬಂತೋ ಬಂತು ಬಹಳಷ್ಟು ಬದಲಾವಣೆಗಳನ್ನ ತಂದಿತು, ಅದರಲ್ಲಿ ನನ್ನ ಬದಲಾದ ಬಾಸು ಅದರ ಜೊತೆಗೆ ಬಂದ ಪ್ರಾಜೆಕ್ಟು ಇವೆಲ್ಲ ಉಳಿದವನ್ನೆಲ್ಲ ನಗಣ್ಯ ಮಾಡಿವೆ ಎಂದರೆ ತಪ್ಪೇ ಇಲ್ಲ. ಸಿನಿಮಾದಲ್ಲಿ ಆಗೋ ಹಾಗೆ ನಮ್ಮ ಆಫೀಸಿನಲ್ಲಿ ಕಳೆದ ಐದು ವಾರಗಳಲ್ಲಿ ಅದೆಷ್ಟೋ ಬದಲಾವಣೆಗಳು ನಡೆದು ಹೋದವು, ಇದ್ದುದರಲ್ಲಿ ಸ್ಟೇಬಲ್ಲ್ ಆಗಿರೋ ವಿಡಿಯೋ ಡಿವಿಜನ್ನಲ್ಲಿ ಹೀಗಾದರೆ ಇನ್ನುಳಿದ ಕಡೆ ಹೇಗೆ ಎಂದು ಯಾರೂ ಊಹಿಸಿಕೊಳ್ಳಬಹುದು, ಅದೂ ಇನ್ನುಳಿದ ಕಂಪನಿಗಳಲ್ಲಿ ಅದರಲ್ಲೂ ಫೈನಾನ್ಸಿಯಲ್ ಇಂಡಸ್ಟ್ರಿಯಲ್ಲಂತೂ ಭರ್ಜರಿ ಕಷ್ಟವಂತೆ.

ನನ್ನ ಇನ್ ಬಾಕ್ಸುಗಳಲ್ಲಿ ಈಗಾಗಲೇ ಕೆಲಸ ಕಳೆದುಕೊಂಡ ಹಲವರ ರೆಸ್ಯುಮೆ ಬಂದು ಹೋಗಿವೆ. ಅವರಿಗೆ ಇಂತಲ್ಲಿ ಕೆಲಸ ಹುಡುಕಿ ಎನ್ನುವುದಾಗಲೀ ಅಥವಾ ಹೀಗೆ ಮಾಡಿ ಎಂದು ಹೇಳುವುದಾಗಲೀ ಈಗ ಮೊದಲಿನಷ್ಟು ಸುಲಭವಂತೂ ಅಲ್ಲ. ಜನವರಿ ಒಂದರಲ್ಲೇ ಅಮೇರಿಕದಲ್ಲಿ ಸುಮಾರು 600 ಸಾವಿರ ಜನ (ನಾನ್ ಫಾರ್ಮ್) ಪೇರೋಲ್ ನಿಂದ ಹೊರಗೆ ಬಂದರಂತೆ, ಇನ್ನು ಇದೇ ಗತಿ ಇನ್ನೊಂದೆರಡು ತಿಂಗಳು ಅಥವಾ ವರ್ಸ್ಟ್ ಎಂದರೆ ಇನ್ನೊಂದರೆ ಕ್ವಾರ್ಟರು ಮುಂದುವರೆದದ್ದೇ ಆದರೆ ಒಬ್ಬೊರನೊಬ್ಬರು ಕಿತ್ತು ತಿನ್ನೋ ಪರಿಸ್ಥಿತಿ ಬರೋದಂತೂ ನಿಜ. ಯಾವಾಗಲೂ ಸೊನ್ನೆಯಿಂದ ಕೆಳಗೆ ಕೊರೆಯುತ್ತಿರುವ ಛಳಿ ಇರುವ ನಮ್ಮೂರಿನಲ್ಲಿ ನಿನ್ನೆ ಮರ್ಕ್ಯುರಿ ಅರವತ್ತು ಡಿಗ್ರಿ (ಫ್ಯಾರನ್‌ಹೈಟ್) ದಾಟಿ ಮುಂದು ಹೋಯಿತೆಂದುಕೊಂಡು ನಾನು ಜನರೆಲ್ಲ ಶಾಪ್ಪಿಂಗ್ ಮಾಲ್‌ಗಳಲ್ಲಿ ತುಂಬಿರುತ್ತಾರೆ ಎಂದುಕೊಂಡದ್ದು ತಪ್ಪಾಗಿ ಹೋಯಿತು. ವಾಲ್‌ಮಾರ್ಟ್ ಮುಂದಿನ ಪಾರ್ಕಿಂಗ್ ಲಾಟ್‌ಗಳೂ ಖಾಲಿ ಇದ್ದುದು ಇಂತಹ ದಿನಗಳಲ್ಲಿ ದೊಡ್ಡ ಆಶ್ಚರ್ಯವೇ ಸರಿ. ಇವೆಲ್ಲ ಅತಿಕಷ್ಟದ ಫೈನಾನ್ಸಿಯಲ್ ಸಮಯ, ಇಂತಹ ಸಮಯದಲ್ಲಿ ನಾವೆಲ್ಲ ಸರ್ವೈವಲ್ ಮೋಡ್‌ಗೆ ಹೋಗಿಬಿಟ್ಟಿರೋದು ಸಹಜವೇ.

ಈ ಕಷ್ಟದ ಆರ್ಥಿಕ ದಿನಗಳಲ್ಲಿ ಒಬ್ಬರಿಗೊಬ್ಬರಿಗೆ ಫ್ಯಾಮಿಲಿ ಸಪೋರ್ಟ್ ಖಂಡಿತ ಬೇಕೇ ಬೇಕಾಗುತ್ತದೆ. ಬೇಕಾದಷ್ಟು ಇದ್ದು, ತಿಂದು-ತೇಗಿ, ದುಂದು ವೆಚ್ಚ ಮಾಡುವ ದಿನಗಳಿಗಿಂತ ಕಠಿಣ ಆರ್ಥಿಕ ಪರಿಸ್ಥಿತಿ ಇರುವ ದಿನಗಳಲ್ಲೇ ಫ್ಯಾಮಿಲಿಗಳು ಒಬ್ಬರಿಗೊಬ್ಬರು ಕಷ್ಟಕ್ಕಾಗುವುದು ಎನ್ನುವುದು ನನ್ನ ಥಿಯರಿ. ಈ ದಿನಗಳಲ್ಲಿ ಎಷ್ಟೇ ಕಷ್ಟ ಬಂದರೂ ನಾವು ಒಬ್ಬೊರಿಗೊಬ್ಬರು ಆಗಿಯೇ ತೀರುತ್ತೇವೆ ಎನ್ನೋದು ಒಂದು ಕುಟುಂಬದ ಮೂಲ ಮಂತ್ರವಾಗಿ, ಜನರೆಲ್ಲ ದಿನ-ವಾರ-ತಿಂಗಳುಗಳನ್ನು ನಿಧಾನವಾಗಿ ತಳ್ಳುತ್ತಲಿರುವಾಗ ಜಗಳ-ವೈಮನಸ್ಯ-ವಿಚ್ಛೇದನಗಳಿಗೆ ಸಮಯವೂ ಇಲ್ಲ, ವ್ಯವಧಾನವೂ ಇಲ್ಲ ಎಂತಲೇ ಹೇಳಬೇಕಾಗುತ್ತದೆ. ಜೊತೆಗೆ ಪ್ರತಿಯೊಂದನ್ನು ಒಟ್ಟಿಗಿಡುವುದಕ್ಕೆ ಎಷ್ಟು ದುಡ್ಡು ತೆರಬೇಕಾಗುತ್ತದೆಯೋ ಅದನ್ನೆಲ್ಲ ವಿಭಜಿಸೋದಕ್ಕೂ ಹೆಚ್ಚೂಕಡಿಮೆ ಅಷ್ಟೇ ಖರ್ಚಾಗುತ್ತದೆ ಎಂದರೂ ತಪ್ಪಲ್ಲ.

ನಮ್ಮ ಇನ್‌ವೆಷ್ಟ್‌ಮೆಂಟ್ ಪೋರ್ಟ್‌ಫೋಲಿಯೋ ಆಗಲೀ, ನಮ್ಮ ಉಳಿತಾಯವನ್ನಾಗಲೀ ನೋಡಿದರೆ ಕಣ್ಣಲ್ಲಿ ನೀರೇ ಬರುತ್ತೆ. ಕಳೆದ ವರ್ಷ ಪ್ರತಿಶತ ನಲವತ್ತರಷ್ಟು ಮೌಲ್ಯದಲ್ಲಿ ಕುಸಿದಿದ್ದ ನಂಬರುಗಳಿಗೆ ಈ ವರ್ಷದ ಜನವರಿಯಲ್ಲಿ ಮತ್ತೂ ಹತ್ತು ಪರ್ಸೆಂಟ್ ಕಡಿತ. ಇವೆಲ್ಲ ಇಳಿಮುಖದಿಂದಾಗಿ ನನ್ನಂತಹವರಿಗೆ ಸುಮಾರು ಆರೇಳು ವರ್ಷಗಳಲ್ಲಿ ದುಡಿದು-ಕೂಡಿಹಾಕಿದ್ದು ಏನೇನೂ ಇಲ್ಲ ಎನ್ನುವಂಥ ಪೆಚ್ಚು ಅನುಭವ. ಹ್ಞೂ, ಇವತ್ತಲ್ಲ ನಾಳೆ ಮುಂದೆ ಬಂದೇ ಬರುತ್ತೆ ಆದರೆ ನಮ್ಮ ನಂಬರುಗಳೆಲ್ಲ ಈಗ ಏಳು ವರ್ಷದ ಕೆಳಗೆ ಹೋಗಿವೆ, ಇದು ಇನ್ನು ಮೇಲೆ ಬರಲು ಮೂರು ವರ್ಷಗಳಾದರೂ ಬೇಕು, ಅಲ್ಲಿಗೆ ಈ ಹತ್ತು ವರ್ಷಗಳಲ್ಲಿ ನಾವು ಕಡಿದ್ದು ಹಾಕಿದ್ದು ಶೂನ್ಯ, ಅಷ್ಟೇ. ಈ ನಂಬರುಗಳಿಗೆಲ್ಲ ನನ್ನ ಧಿಕ್ಕಾರವಿರಲಿ, ಅದರ ಬದಲಿಗೆ ಚಿರಾಸ್ತಿ (immovable assett), ಅನ್ನೋದನ್ನೇನಾದರೂ ಗಳಿಸಿದ್ದರೆ ಅದು ಇಷ್ಟರ ಮಟ್ಟಿಗೆ ಕುಸಿಯುತ್ತಿರಲಿಲ್ಲ. ಉದಾಹರಣೆಗೆ ಹತ್ತು ವರ್ಷದ ಹಿಂದೆ ಒಂದೈದು ಎಕರೆ ತೋಟ ಮಾಡಬಹುದಾದ ಭೂಮಿಯನ್ನು ಖರೀದಿಸಿ ಅದರಲ್ಲಿ ಥರಥರನ ವಾಣಿಜ್ಯ ಬೆಳೆಯನ್ನು ಆರಂಭಿಸಿದ್ದರೆ ಇವತ್ತಿಗೆ ಒಂದು ಗಂಜಿ ಕಾಸಿನ ಆದಾಯವಾದರೂ ಬರುತ್ತಿತ್ತು.

ನಾವು ಮೊದಲೆಲ್ಲ - ’ಅಮೇರಿಕಕ್ಕೆ ಏಕೆ ಬಂದಿರಿ?’ ಎನ್ನುವ ಪ್ರಶ್ನೆಯನ್ನು ಕಠಿಣವಾದ ಪ್ರಶ್ನೆ ಎಂದುಕೊಳ್ಳುತ್ತಿದ್ದೆವು, ಈಗ ’ಭಾರತಕ್ಕೆ ಏಕೆ ಹಿಂತಿರುಗಿ ಹೋಗಬೇಕು?’ ಎನ್ನುವುದು ಅದಕ್ಕಿಂತ ಕಠಿಣ ಪ್ರಶ್ನೆಯಾಗಿ ತೋರುತ್ತಿದೆ. ಮೊದಲೆಲ್ಲ ಹಿಂತಿರುಗಿ ಹೋಗೋದಾದರೂ ಒಂದು ಆಫ್ಷನ್ನ್ ಆಗಿತ್ತೋ ಏನೋ, ಈಗಂತೂ - ಥ್ಯಾಂಕ್ಸ್ ಟು ಹತ್ತು ವರ್ಷದ ಹಿಂದಿನ ನಂಬರ್ಸ್ - ನಾವು ಹಿಂತಿರುಗಿ ಹೋಗೋದು ಸಾಧ್ಯವೇ? ಎಲ್ಲಿಗೆ, ಹೇಗೆ, ಯಾವ ಕೆಲಸಕ್ಕೆ, ಯಾವ ಊರಿಗೆ, ಎಂದು - ಮೊದಲಾದ ಪ್ರಶ್ನೆಗಳಿಗೆ ಯಾವ ಉತ್ತರವಂತೂ ತೋರೋದಿಲ್ಲ. ಅಮೇರಿಕದ ವ್ಯವಸ್ಥೆಯನ್ನು ಆಧರಿಸಿ ಉಳಿದ ವ್ಯವಸ್ಥೆಗಳು, ಉಳಿದವನ್ನು ಆಧರಿಸಿ ಆಮೇರಿಕದ್ದು ಎನ್ನುವಲ್ಲಿ ಇಲ್ಲಿನ ಕಷ್ಟ ಎಲ್ಲಾ ಕಡೆಗಿದೆ - ಬೆಂಗಳೂರಿನಿಂದ ಹಿಡಿದು ಬೀಜಿಂಗ್‌ನವರೆಗೆ ಎಲ್ಲರಿಗೂ ಬಿಸಿ ಈಗಾಗಲೇ ತಟ್ಟಿದೆ. ಕೆಲಸ ಕಳೆದುಕೊಳ್ಳುವವರ ಲೆಕ್ಕ ಮುಗಿಲು ಮುಟ್ಟಿದೆ ಹಾಗೇ ಕಂಪನಿಗಳೂ ಸಹ ಸರ್ವೈವಲ್ಲ್ ಮೋಡಿಗೆ ಹೋಗಿ ಬಿಟ್ಟಿವೆ, ಅನಗತ್ಯ ಖರ್ಚು ವೆರ್ಚಗಳು ಈಗಾಗಲೇ ನಿಂತು ಹೋಗಿವೆ. ನಮ್ಮ ಕಂಪನಿಯಲ್ಲಿ ಮೊದಲೆಲ್ಲ ಟೀಮ್ ಲಂಚ್ ಅನ್ನೋದನ್ನು ನನ್ನಂಥವರು ಎಷ್ಟು ಸಾರಿ ಬೇಕಾದರೂ ಸುಲಭವಾಗಿ ಹೊಂದಿಸಿಕೊಳ್ಳಬಹುದಾಗಿತ್ತು, ಈಗ ಅವೆಲ್ಲಕ್ಕೂ ಎಕ್ಸಿಕ್ಯೂಟಿವ್ ಪರ್ಮಿಷನ್ನ್ ಬೇಕಾಗಿದೆ. ನಮ್ಮ ಆಫೀಸಿನ ಉಳಿದೆಲ್ಲ ಡಾಕ್ಯುಮೆಂಟುಗಳಿಗೆ ಹೋಲಿಸಿದಾಗ spreadsheet rules! ಇಲ್ಲಿರುವ ನಂಬರುಗಳೇ ಪ್ರತಿಯೊಂದನ್ನು ನಿರ್ಧರಿಸೋದು, ಇಲ್ಲಿರುವ ನಂಬರುಗಳಿಗಿಂತ ಹೊರತಾಗಿ ಇನ್ನೇನೂ ಇಲ್ಲ.

1930 ರ ದಶಕದ ಡಿಪ್ರೆಷ್ಷನ್ನಿಗೂ ಇಂದಿಗೂ ಬಹಳಷ್ಟು ವ್ಯತ್ಯಾಸವಿದೆ. ಚೀನಾ ದೇಶದಲ್ಲಿ ಎಷ್ಟೋ ಜನ ತಮ್ಮ ಮನೆ-ಜಮೀನುಗಳನ್ನು ಮಾರಿ ಸ್ಟಾಕ್ ಮಾರ್ಕೆಟ್ಟಿನಲ್ಲಿ ಹೆಚ್ಚಿನ ಉತ್ಪನ್ನಕ್ಕೆಂದು ಹಣ ತೊಡಗಿಸಿದ್ದರಂತೆ, ಅವರದ್ದೆಲ್ಲ ಪರಿಸ್ಥಿತಿ ಈಗ ಹೇಗಿದ್ದಿರಬಹುದು? ಇಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನ ಮಾರ್ಕೆಟ್ಟಿನಲ್ಲಿ ತಮ್ಮ ಹಣವನ್ನು ತೊಡಗಿಸಿ ಶಾರ್ಟ್ ಮತ್ತು ಲಾಂಗ್ ಟರ್ಮ್ ಇನ್ವೆಸ್ಟ್‌ಮೆಂಟಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಭಾಗಿಗಳಾಗಿದ್ದಾಗ, ಈಗಿನ ರಿಸೆಷನ್ನುಗಳು ಹೆಚ್ಚು ಜನರನ್ನು ತೊಂದರೆಗೀಡು ಮಾಡುತ್ತವೆ ಎನ್ನುವುದು ನನ್ನ ಲೆಕ್ಕ. ಸರ್ಕಾರಿ ಹಾಗೂ ಖಾಸಗಿ ನೌಕರರ ಸಂಖ್ಯೆಯಲ್ಲೂ ಬಹಳಷ್ಟು ವ್ಯತ್ಯಾಸವಾಗಿದೆ. ಮೊದಲೆಲ್ಲ ಸರ್ಕಾರದ ಕೆಲಸವೇ ಉನ್ನತ ಕೆಲಸ ಎನ್ನುವ ದಕ್ಷಿಣ ಭಾರತದಲ್ಲಿ ಇಂದು ಬೇಕಾದಷ್ಟು ಖಾಸಗಿ ಕೆಲಸಗಳು ಹುಟ್ಟಿಕೊಂಡಿವೆ (ಎಂಭತ್ತು, ತೊಂಭತ್ತರ ದಶಕದಲ್ಲಿ ಬದಲಾದ ಅಂಕಿಅಂಶಗಳ ಸಹಾಯದಿಂದ). ಬೆಂಗಳೂರು, ಮೈಸೂರು ಎನ್ನುವ ನಮ್ಮ ನೆರೆ ಊರುಗಳಲ್ಲಿ ಮಾರ್ಟ್‌ಗೇಜ್‌ನಲ್ಲಿ ಮನೆ ತೆಗೆದುಕೊಂಡವರ ಸಂಖ್ಯೆ ಹೆಚ್ಚಿದೆ. ನಾವು ಸಾಲವಿಲ್ಲದ ಕುಟುಂಬ ಎನ್ನುವಲ್ಲಿ, ಸಾಲದ ಮೇಲೇ ನಾವು ನಿಂತಿರೋದು ಎನ್ನುವ ಪ್ರಸಂಗ ಬಂದಿದೆ. ಹಾಗಿರುವಲ್ಲಿಯೇ ನಮ್ಮ-ನಿಮ್ಮ ಡಿಪೆಂಡೆನ್ಸಿ ಗ್ಲೋಬಲ್ ಮಾರ್ಕೆಟ್ ಮೇಲೆ ಹೆಚ್ಚಿರೋದು. ಹಳ್ಳಿಯ/ಪಟ್ಟಣದ ವರ್ಷದ ಕಂದಾಯವನ್ನು ಕಟ್ಟಿಕೊಂಡು ಪೆನ್ಷನ್ ಹಣದಲ್ಲಿ ಜೀವನ ಸಾಗಿಸುತ್ತಿರುವ ಪೋಷಕರಿಗೂ ತಾವು ಕೆಲಸ ಮಾಡುತ್ತಿರುವ ಕಾರ್ಪೋರೇಷನ್ನುಗಳ ಹಾಗೇ ಎಲ್ಲವೂ ಸಾಲದ ಮೇಲೆ ನಿಂತು ತಿಂಗಳು-ತಿಂಗಳಿಗೆ ಕಂತು ಕಟ್ಟುವ ಮುಂದಿನ ಜನರೇಷನ್ನಿಗೂ ಬಹಳಷ್ಟು ವ್ಯತ್ಯಾಸವಿದೆ. ಜೊತೆಗೆ ಒಂದಿಷ್ಟು ಜನರ ಜೀವನ ಶೈಲಿ ದಿಢೀರ್ ಬದಲಾಗಿ ಹೋಗಿದ್ದೂ ಇದಕ್ಕೆಲ್ಲ ಪುಷ್ಟಿ ತಂದಿದೆ, ಅಲ್ಲಲ್ಲಿ ನಾಯಿಕೊಡೆಗಳ ಹಾಗೆ ಹುಟ್ಟಿದ ಕಂಪನಿಗಳಲ್ಲಿ ಕೆಲಸ ಮಾಡುತ್ತ ನಮ್ಮೂರಿನ ಹುಡುಗ-ಹುಡುಗಿಯರು ವರ್ಷಕ್ಕೆ ಲಕ್ಷಾಂತರ ಎಣಿಸೋದಕ್ಕೆ ಶುರು ಮಾಡಿದ ಮೇಲೆ ಆರ್ಥಿಕ ಅವಲಂಭನೆಗೆ ಹೊಸದೊಂದು ಅರ್ಥ ಹುಟ್ಟಿದೆ.

ಕಾದುಕೊಂಡು ಕುಳಿತಿರೋದನ್ನು ಬಿಟ್ಟು ಇನ್ನೇನನ್ನು ಮಾಡಲು ಸಾಧ್ಯ ಎಂದು ಯೋಚಿಸಿದರೆ ಹೆಚ್ಚು ಆಪ್ಷನ್ನುಗಳೇನು ತೋಚುತ್ತಿಲ್ಲ. ಡ್ರಾಸ್ಟಿಕ್ ಬದಲಾವಣೆಗಳನ್ನು ಮಾಡುವ ಮೊದಲು ಬೇಕಾದಷ್ಟು ಆಲೋಚಿಸಿದರೂ ಯಾವ ದಾರಿಯನ್ನು ಆಯ್ದುಕೊಂಡರೂ ಹೊಡೆತ ಬೀಳುವುದಂತೂ ಗ್ಯಾರಂಟಿ ಆಗಿದೆ. ನೀರಿನಲ್ಲಿ ಮುಳುಗಿದೋರಿಗೆ ಛಳಿಯೇನು ಮಳೆಯೇನು ಅಂತಾರಲ್ಲ ಹಾಗೆ ಸುಮ್ಮನಿರಬೇಕು, ಅಷ್ಟೇ.

***

An executive in my company..."I don't mind the change (move), thank god I have a job, it is good to be busy!'