ನಾವು ಮತ್ತು ನಮ್ಮ ಕೆಲಸ (ಅದರ ಮೇಲಿನ ಪ್ರೀತಿ)
ಎಲ್ರೂ ಮಾಡೋದ್ ಹಾಗೇ, ಯಾವ್ದೋ ಒಂದ್ ಕಂಪ್ನಿಗೋ, ಗವರ್ನಮೆಂಟ್ ಕೆಲ್ಸಕ್ಕೋ ಜೀವಾ ತೇದೋದು ನಾಳೆ ಬದುಕಬೇಕಲ್ಲ ಅನ್ನೋ ಒಂದೇ ನೆವಕ್ಕೆ... ಅಂತ ಅನ್ಸಿದ್ದು ಈ ವಾರದ ಕೊನೇಲಿ ನಿವೃತ್ತನಾಗ್ತಿರೋ ನನ್ನ ಸಹೋದ್ಯೋಗಿಯೊಡನೆ ಅಪ್ತವಾದ ವಿಷಯಗಳ ಬಗ್ಗೆ ಮಾತನಾಡುತ್ತಾ ಇದ್ದಾಗ.
ಅವ್ನಿಗೆ ನಾನು ವಿಷ್ ಮಾಡ್ದೆ, ನನಗುತ್ತರವಾಗಿ ಅವನು ’Have fun at work!' ಎಂದು ನಕ್ಕ.
ನಾನು ತಕ್ಷಣ TOFLE ಪ್ರಶ್ನೆಗಳ ಮಾದರಿಯಲ್ಲಿ What do/did you mean? ಎಂದು ಕೇಳೋಣವೆನ್ನಿಸಿದರೂ ಕೇಳದೇ ಸುಮ್ಮನಾದೆ.
ಕೆಲ್ಸ ಹಾಗೂ ಸಹೋದ್ಯೋಗಿಗಳನ್ನು ಬಿಟ್ಟು ಹೋಗ್ತಿದೀನಿ ಅನ್ನೋ ದುಗುಡವಾಗ್ಲೀ ದುಮ್ಮಾನವಾಗ್ಲೀ ನನಗೇನೂ ಅವನ ಮುಖದ ಮೇಲೆ ಕಾಣ್ಲಿಲ್ಲ, ಜೊತೆಗೆ ಮುಂದೆ ಅದೆಲ್ಲೆಲ್ಲೋ ಗಾಲ್ಫ್ ಆಡೋದಕ್ಕೆ ಹೋಗ್ತೀನಿ, ಹಾಗ್ ಮಾಡ್ತೀನಿ, ಹೀಗ್ ಮಾಡ್ತೀನಿ ಅನ್ನೋ ಹುರುಪು ಎದ್ದು ಕಾಣ್ತಿತ್ತು.
***
ಹೆಚ್ಚು ಜನ ಬೆಳಗ್ಗೆ ಎದ್ದ ಕೂಡ್ಲೆ ’ಓಹ್, ಇವತ್ತು ಕೆಲ್ಸಕ್ಕೆ ಹೋಗ್ಬೇಕಲ್ಲ!’ ಎಂದು ಉಲ್ಲಸಿತರಾಗೇನೂ ಇರೋದಿಲ್ಲ (ನನ್ನ ಅನಿಸಿಕೆ). ಈ ಹಾಳಾದ್ ಕೆಲ್ಸಕ್ಕೆ ಹೋಗ್ಬೇಕಲ್ಲ ಅನ್ನೋರೂ ಇದಾರೆ ಅಂತನೂ ಗೊತ್ತು. ಹಾಗಾದ್ರೆ ಜನಗಳು ತಮ್ಮ ಬದುಕನ್ನು ರೂಢಿಸೋ ಕೆಲಸವನ್ನ, ತಮಗೆ ಅನ್ನ ನೀಡೋ ಅನ್ನದಾತರನ್ನ ಅಷ್ಟೊಂದಾಗಿ ದ್ವೇಷಿಸದೆ ಇದ್ರೂ ಮನಸ್ಸಿಟ್ಟು ಪ್ರೀತಿಸೋದಂತೂ ನನಗೆ ಮನವರಿಕೆ ಆಗ್ಲಿಲ್ಲ. ನಾವೆಲ್ಲ ಶಾಲೆ-ಕಾಲೇಜುಗಳಲ್ಲಿರುವಾಗ ’ಹಾಗ್ ಆಗ್ತೀನಿ, ಹೀಗ್ ಆಗ್ತೀನಿ’ ಅನ್ನೋ ಕನಸುಗಳು ಎಲ್ರಿಗೂ ಇರುತ್ತೆ. ನಮ್ಮ ಆಫೀಸಿನಲ್ಲಿ ತೆರೆದ ಕಣ್ಣಿನ ಈಗಷ್ಟೇ ಕಾಲೇಜು ಮುಗಿಸಿ ಬಂದ ಇಂಟರ್ನುಗಳ ಸ್ಪಿರಿಟ್ಟು ಈಗಾಗಲೇ ನೆಲೆ ಊರಿದ ನಮ್ಮಂತಹವರ ಕೆಲಸದ ವಿವರಗಳನ್ನು ಅರಿಯುತ್ತಿದ್ದಂತೆ ಅವರ ದವಡೆ ಕೆಳಗೆ ಬೀಳೋದನ್ನು ನಾನೇ ನೋಡಿದ್ದೇನೆ, ಮೊದಮೊದಲು ಏನೂ ಗೊತ್ತಿರದೇ ಇದ್ರೂ, ಮಾಡೋಕ್ ಏನೂ ಹೆಚ್ಚ್ ಕೆಲ್ಸ ಇರ್ದಿದ್ರು ಎಂಟು ಘಂಟೆ ಕಾಲ ಖುರ್ಚಿಗೆ ತಮ್ಮನ್ನು ತಾವು ಗಂಟು ಹಾಕಿಕೊಳ್ಳೋ ಹೋರಾಟವನ್ನು ನೋಡಿ ಬೇಸ್ತು ಬಿದ್ದಿದ್ದೇನೆ. ಹೊಸದಾಗಿ ಸೇರಿಕೊಂಡವರಿಗೆ ನನ್ನಂತಹವರು ದಿನಕ್ಕೆ ನಾಲ್ಕೈದು ಘಂಟೆಗಳ ಕಾಲ ಫೋನ್ ಹೆಡ್‌ಸೆಟ್ ಅನ್ನು ತಲೆಗೆ ಸಿಕ್ಕಿಸಿಕೊಂಡಿರುವುದನ್ನು ನೋಡೇ ಸುಸ್ತಾಗಿ ಹೋಗುವುದನ್ನು ಮನವರಿಕೆ ಮಾಡಿಕೊಂಡಿದ್ದೇನೆ.
ಅಲ್ಲಿಂದ ಆರಂಭವಾದ ವೃತ್ತಿ ಜೀವನ ಎನ್ನುವ ಬದುಕು ರಿಟೈರ್‌ಮೆಂಟ್ ಹಂತ ತಲುಪುವವರೆಗೆ ಕೆಲವರಿಗೆ ಹಲವು ಕಂಪನಿಗಳ ಫ್ಲೇವರ್‌ಗಳನ್ನು ನೀಡಿದರೆ ಇನ್ನು ಕೆಲವರಿಗೆ ಒಂದೇ ಕಂಪನಿಯ ಔತಣವಾಗುತ್ತದೆ. ಅಲ್ಲಿ ಪ್ರೊಮೋಷನ್ನು-ಡಿಮೋಷನ್ನು ಮೊದಲಾದ ಬ್ಲಡ್ ಪ್ರಷರ್ ಏರಿಸಿ-ಇಳಿಸುವ ಹಂತ/ಮಟ್ಟ ಬಂದು ಹೋದರೂ ಇರುವಲ್ಲಿಂದ ತಲೆ ಎತ್ತಿ ನೋಡುವುದು ಎಲ್ಲಿ ಹೋದರೂ ತಪ್ಪೋದಿಲ್ಲ. ಒಂದಲ್ಲ ಒಂದು ಚಾಲೆಂಜುಗಳನ್ನು ಹಿಡಿದು ಸಂಬಾಳಿಸೋದೇ ವೃತ್ತಿಯಾಗುತ್ತದೆ. ಇಂಜಿನಿಯರುಗಳಿಗೆ ಡಾಕ್ಟರು, ಡಾಕ್ಟರುಗಳಿಗೆ ಮತ್ತಿನ್ಯಾರೋ ಕೆಲಸ ಇಷ್ಟವಾಗುವಂತೆ ಮೇಲ್ನೋಟಕ್ಕೆ ಕಾಣುತ್ತದೆ, ಹೆಚ್ಚಿನವರು ’I love my job' ಅಥವಾ ’I love what I do for a living' ಎಂದು ಮನ ಬಿಚ್ಚಿ ಹೇಳಿದ್ದನ್ನು ನಾನು ಕೇಳಿಲ್ಲ.
***
Why do we have to work? ಅನ್ನೋ ಪ್ರಶ್ನೆ ಈ ಬ್ಲಾಗಿನ ಬರಹಕ್ಕಿಂತ ದೊಡ್ಡದು. ಆದರೆ ನಮ್ಮ ನಮ್ಮ ಕೆಲಸಗಳನ್ನೇಕೆ ನಾವು ಪ್ರೀತಿಯಿಂದ ನೋಡೋದಿಲ್ಲ ಅನ್ನೋದು ಈ ಹೊತ್ತಿನ ಪ್ರಶ್ನೆ. ನಾವೆಲ್ಲ ಒಂದಲ್ಲ ಒಂದು ಕೆಲಸವನ್ನು ಮಾಡೇ ಮಾಡುತ್ತೇವೆ - ಆದರೆ ಆ ಕೆಲಸಕ್ಕೆ ಪೂರಕವಾಗುವಂತಹ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಿದ್ದೇವೆಯೇ? ಎಲ್ಲೋ ಕಲಿತು ಬಂದ ವಿದ್ಯೆ, ಸ್ಕಿಲ್ಸ್‌ಗಳಿಂದ ಈಗಿರುವ ಕೆಲಸವನ್ನು ಗಳಿಸಿಕೊಂಡಿದ್ದಾಯಿತು, ಇನ್ನು ಇಲ್ಲಿಂದ ಮುಂದೆ ಹೋಗಲು ಅಥವಾ ಬೇರೆ ಕಡೆಗೆ ಹಾರಿಹೋಗಲು ಇನ್ಯಾವುದನ್ನಾದರೂ ಪ್ರಯೋಗಿಸಿದ್ದೇವೆಯೇ? ಪ್ರಯತ್ನಿಸಿದ್ದೇವೆಯೇ? ಸರಿ, ಒಂದು ಮುವತ್ತು ವರ್ಷಗಳ ನಂತರ ಕೆಲಸ ಮಾಡಿ ಮುಂದೆ ನಿವೃತ್ತರಾದ ಮೇಲೆ ಏನು ಮಾಡೋದು? ಅಷ್ಟೊಂದು ವರ್ಷಗಳು ಕೆಲಸ ಮಾಡುವುದೇ ಖಾಯಂ ಆದಾಗ ನಾವು ಮಾಡುವ ಹುದ್ದೆಯನ್ನೇಕೆ ಪ್ರೀತಿಸೋದಿಲ್ಲ ಅಥವಾ ನಾವು ಪ್ರೀತಿಸುವ ಹುದ್ದೆಯನ್ನೇಕೆ ಮಾಡುವುದಿಲ್ಲ? ಅಥವಾ ಕೆಲಸ ಹಾಗೂ ಕೆಲಸದ ಮೇಲಿನ ಪ್ರೇಮ ಇವರೆಡೂ ಒಂದಕ್ಕೊಂದು ಎಣ್ಣೆ-ನೀರಿನ ಸಂಬಂಧವನ್ನು ಪಡೆದುಕೊಂಡುಬಿಟ್ಟಿವೆಯೇ?
ಸೋಮವಾರ ಶುರು ಮಾಡೋ ಕೆಲಸದಂದು ಮುಂಬರುವ ಶುಕ್ರವಾರದ ನಿರೀಕ್ಷೆ ಇದ್ದು ’ಈ ಕೆಲಸವನ್ನು ಯಾರು ಮಾಡುತ್ತಾರಪ್ಪಾ’ ಎನ್ನೋ ನಿಟ್ಟುಸಿರು ಆಗಾಗ್ಗೆ ಬರುತ್ತಿದ್ದರೆ ಆ ಕೆಲಸದಲ್ಲಾಗಲೀ ಕಂಪನಿಯಲ್ಲಾಗಲೀ ಕೊರತೆ ಇರದೆ ಕೆಲಸಗಾರನ ಮನದಲ್ಲೇನಿದೆ ಎಂದು ಆಲೋಚಿಸಿಕೊಳ್ಳಬೇಕಾಗುತ್ತದೆ. ನಾನಂತೂ ನನ್ನ ಕೆಲಸವನ್ನು ಅನ್ನದಾತನೆಂಬಂತೆ ಗೌರವಿಸುತ್ತೇನೆ, ಇದೇ ಪ್ರಪಂಚದ ಮಹಾ ಕೆಲಸಗಳಲ್ಲೊಂದಲ್ಲದಿದ್ದರೂ ಸದ್ಯಕ್ಕೆ ನನಗೆ ಅನ್ನ-ನೀರು ಕೊಡುತ್ತದೆಯೆಲ್ಲ ಎನ್ನುವ ರೀತಿಯಿಂದಲಾದರೂ ನನಗೆ ಅದರ ಮೇಲೆ ಮೋಹವಿದೆ ಪ್ರೀತಿಯಿದೆ. ಒಮ್ಮೊಮ್ಮೆ ’ಇದು ಯಾವನಿಗೆ ಬೇಕು, ಈ ಹಾಳು ಕೆಲಸವನ್ನು ಮಾಡೋದೇ ನನ್ನ ಬದುಕೇ...’ ಎಂದು ಅನ್ನಿಸಿದ್ದರೂ ಈ ಕೆಲಸವನ್ನು ಹುಡುಕಿಕೊಂಡು ಬಂದಿದ್ದು ನಾನೇ ಹೊರತು ಆ ಕೆಲಸ ನನ್ನನ್ನಲ್ಲ ಎನ್ನುವ ಸಾಮಾನ್ಯ ತಿಳುವಳಿಕೆ ನನ್ನನ್ನು ಸುಮ್ಮನಿರಿಸಿದೆ. ಒಟ್ಟಿನಲ್ಲಿ ಪ್ರತಿಯೊಬ್ಬರಿಗೂ ಮಾಡಲೊಂದು ಕೆಲಸ ಬೇಕು, ಆದರೆ ಅವರವರು ನಿವೃತ್ತರಾಗುವುದಕ್ಕೆ ಮೊದಲು (ಸಾಧ್ಯವಾದರೆ) ಅವರ ಇಷ್ಟ ಪಡುವ ಕೆಲಸವನ್ನು ಸ್ವಲ್ಪ ದಿನ/ತಿಂಗಳುಗಳಾದರೂ ಮಾಡುವಂತಿದ್ದರೆ ಎಷ್ಟೋ ಚೆನ್ನಾಗಿರುತ್ತೆ, ಅಲ್ವೇ?