ಸರಿಯಾದ "ನಾಯಕರ" ಕೊರತೆ ಎಂದೇನೋ ನನ್ನ ಅನುಭವವನ್ನು ಹಂಚಿಕೊಂಡಿದ್ದಾಯಿತು, ಆದರೆ ಬೆಂಗಳೂರಿನಲ್ಲಿ ನಮ್ಮ ಕಾರು ಟ್ರಾಫಿಕ್ ಲೈಟ್‌ಗಳಲ್ಲಿ ನಿಂತಲ್ಲೆಲ್ಲ ಮುಂದಾಳುಗಳ ಕೊರತೆ ಇದೆ ಎಂದು ಅನ್ನಿಸಲೇ ಇಲ್ಲ! ಒಬ್ಬರಿಗಿಂತ ಮತ್ತೊಬ್ಬರು ಎಲ್ಲರಿಗಿಂತ ಮುಂದೆ ಬಂದು ಯಾವುದೋ ಕಾಲದಲ್ಲಿ ಹಳದಿ ಬಣ್ಣದಲ್ಲಿದ್ದು ಇಂದು ಮಾಸಿದ ಬಿಳಿ ಬಣ್ಣದ ಪಟ್ಟೆಯ ಆಜುಬಾಜಿನಲ್ಲಿ ನಿಂತು ಮುಂದೆ ಕಡಿಮೆಯಾಗುತ್ತಿರುವ ಡಿಜಿಟಲ್ ಸಂಖ್ಯೆಗಳನ್ನ ಮನದಲ್ಲೇ ಎಣಿಸುತ್ತಾ ಇನ್ನೆನು ಹತ್ತು, ಒಂಭತ್ತು, ಎಂಟು...ಬರುತ್ತಿದ್ದಂತೆಯೇ ತಮ್ಮ ತಮ್ಮ ವಾಹನಗಳನ್ನ ಆರಂಭಿಸಿ, ಗೇರ್ ಬದಲಾಯಿಸಿ, ಚೂರು-ಚೂರೇ ತಮ್ಮ ವಾಹನವನ್ನು ಮುಂದೆ ಓಡಿಸಿ, ಇನ್ನೇನು ಐದು, ನಾಲ್ಕು, ಮೂರು ಬರುತ್ತಿದ್ದಂತೆಯೇ ಕಣ್ಣಿನಿಂದ ದೂರ ಹೋಗುವ ಬೇಕಾದಷ್ಟು ಮುಂದಾಳುಗಳಿಗೇನೂ ಕಡಿಮೆಯಿರಲಿಲ್ಲ.
ನಮ್ಮ ಡ್ರೈವರ್ ಅನ್ನು ಕೇಳಿದೆ 'ಇವರೆಲ್ಲ ಇಷ್ಟೊಂದು ಆತುರವಾಗಿ ಎಲ್ಲಿಗ್ ಹೋಗ್ತಾರೆ?', ಅವನ ಉತ್ತರ, 'ಅದೇನ್ ಮಾಡ್ತಾರೋ ಗೊತ್ತಿಲ್ಲ, ಯಾವಾಗ್ ನೋಡಿದ್ರೂ ಹೀಗೇನೇ, ಇನ್ನು ರಾತ್ರಿ ಆಗ್‌ತಿದ್ದ ಹಾಗೆ ಇವರ ಆಟ ಇನ್ನೂ ಜೋರು' ಎಂದು ಸುಮ್ಮನಾದ.
ಏರ್‌ಪೋರ್ಟ್‌ನಿಂದ ಮನೆಗೆ ಮೊಟ್ಟ ಮೊದಲನೇ ಬಾರಿಗೆ ಹೋಗುತ್ತಿದ್ದಾಗಲಂತೂ ಒಂದೆರಡು ಬಾರಿ ಹೃದಯವೇ ಬಾಯಿಗೆ ಬರೋ ಘಟನೆಗಳು ನಡೆದು ಹೋದವು, ತಮ್ಮ-ತಮ್ಮ ಎದುರಿನ ಟ್ರಾಫಿಕ್ ಲೈಟ್ ಕೆಂಪಿದ್ದರೂ ಅವುಗಳನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲರೂ ಮುನ್ನುಗ್ಗುವವರೇ, ಇನ್ನೇನು ಸ್ವಲ್ಪದರಲ್ಲೇ ಆಗುವ ಅಪಘಾತಗಳನ್ನು ತಪ್ಪಿಸಿಕೊಂಡಿದ್ದಾಯಿತು ಎಂದು ನಮ್ಮ ಡ್ರೈವರ್ ಶಾಪ ಹಾಕುತ್ತಿದ್ದಂತೆ, ಕೆಂಪು ದೀಪವಿರುವಾಗ ಹೋದರೆ ಪಕ್ಕದಿಂದ ವೇಗವಾಗಿ ಬರುವ ಗಾಡಿಗಳಿಗೆ ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಿಕೊಳ್ಳಬೇಕು, ಹಾಗೆ ಮಾಡದೇ ಹೋದರೆ ಹಿಂದುಗಡೆಯಿಂದ ಬಂದು ಗುದ್ದುವವರೋ ಅಥವಾ ಹಾರ್ನ್ ಹಾಕುವವರಿಂದಲೋ ತಪ್ಪಿಸಿಕೊಳ್ಳಬೇಕು ಎಂದು ಕಸಿವಿಸಿಗೊಂಡಿದ್ದವನನ್ನು 'ಇನ್ನು ಒಂದು ವಾರ ಇಲ್ಲೇ ಇದ್ದು ಬೆಂಗಳೂರಿನಲ್ಲಿ ಡ್ರೈವ್ ಮಾಡೋದನ್ನ ಕಲಿತುಕೋ' ಎಂದುದ್ದಕ್ಕೆ 'ನಮ್ಮೂರಿನಲ್ಲಿ ರಸ್ತೆಗಳು ಹೇಗಿದ್ದರೂ ಅದೇ ನಮಗೆ ಸ್ವರ್ಗ' ಎನ್ನುವುದೇ?
ಕಾರಿನ ಕಿಟಕಿ ತೆರೆದಿದ್ದರಿಂದ ಹೊರಗಿನಿಂದ 'ನಮ್ಮ ದೇಶದಲ್ಲಿ ಬೇಕಾದಷ್ಟು ನಾಯಕರಿದ್ದಾರ್ರೀ, ಆದರೆ ಅವರೆಲ್ಲ ಒಂದೇ ಸಾಲಿನಲ್ಲಿ ನಡೀತಾರೆಯೇ ವಿನಾ ಒಬ್ಬೊರನೊಬ್ಬರು ಜಪ್ಪಯ್ಯಾ ಅಂದ್ರೂ ಫಾಲೋ ಮಾಡೋದಿಲ್ಲ...' ಎಂದು ಹೊರಗಿನಿಂದ ಧ್ವನಿಯೊಂದು ಒಳಗೆ ಬಂತು, 'ಅದೇಕೆ ಹಾಗೆ?' ಎಂದು ನನ್ನ ಮನದಲ್ಲೇ ಪ್ರಶ್ನೆ ಹಾಕಿಕೊಂಡಿದ್ದನ್ನು ಅರ್ಥ ಮಾಡಿಕೊಂಡೋರ ಹಾಗೆ ಅದರ ಹಿಂದೆ ಉತ್ತರವೊಂದನ್ನು ಎಸೆಯೋದೇ! 'ಯಾರೂ ಯಾರನ್ನೂ ಫಾಲೋ ಮಾಡಬಾರದು ಅನ್ನೋ ಆಜ್ಞೆ ಏನೂ ಆಗಿಲ್ಲ, ಆದರೆ ಅಂಥ ಮುಂದಾಳುಗಳ ಕೊರತೇ ಇರೋದ್ರಿಂದ ಒಬ್ಬೊರಿಗೊಬ್ಬರು ಅಡ್ಜಷ್ಟ್ ಮಾಡಿಕೊಂಡು ಎಲ್ರೂ ಒಂದೇ ನೇರದಲ್ಲಿ ನಡೀತಾರೆ ಸಾರ್' ಎಂದು ಹೇಳಿದ ಧ್ವನಿ ಅದೃಶ್ಯವಾಯಿತು...ಯಾರದು, ಯಾರದು ಎಂದು ಎಷ್ಟೇ ಬಗ್ಗಿ ನೋಡಿದರೂ ಕಪ್ಪು ಮುಚ್ಚಿದ ಕಿಟಕಿ ಗಾಜುಗಳು ತಮ್ಮಿಂದ ಹೊರಗೆ ನೋಡಬಿಡಲಿಲ್ಲ, ಈ ಕಪ್ಪು ಮುಚ್ಚಿದ ಕಿಟಕಿಗಳು ಒಂದು ರೀತಿ ಕಾರಿಗೆ ಬುರುಕಾ ತೊಡಿಸಿ ಹೊರಗಿನಿಂದ ಒಳಗೆ ಹಾಗೂ ಒಳಗಿನಿಂದ ಹೊರಬರುವ ಹೋಗುವ ಅಲೋಚನೆಗಳಿಗೂ ಕಡಿವಾಣ ಹಾಕಿದ್ದಂತೆ ತೋರಿತು.
'ಏನ್ ಸಾರ್ ಅಮೇರಿಕದ ಬಗ್ಗೆ ಯೋಚಿಸ್ತಾ ಇದ್ದೀರಾ' ಎಂದು ನಮ್ಮ ಡ್ರೈವರ್ ಕೇಳಿದ್ದಕ್ಕೆ, 'ಇಲ್ಲಾ ಮಾರಾಯಾ, ಅಮೇರಿಕದ ಬಗ್ಗೆ ಯೋಚಿಸೋದಕ್ಕೆ ನನ್ನ ಬಳಿ ಸದ್ಯಕ್ಕೆ ಏನೂ ಇಲ್ಲ' ಎಂದಿದ್ದನ್ನು ಅವನು ಜೀರ್ಣಿಸಿಕೊಳ್ಳಲು ಸ್ವಲ್ಪ ಹೊತ್ತು ಬೇಕಾಯಿತು.
ನಾನು ಹಳೆಯ ಪ್ರಶ್ನೆಯ ಜಾಡೊಂದನ್ನು ಹಿಡಿದು ನಮ್ಮ ಡ್ರೈವರ್ ತಲೆ ತಿನ್ನ ತೊಡಗಿದೆ, 'ಹೌದು, ಇಷ್ಟೊಂದು ಅರ್ಜೆಂಟಾಗಿ ಹೋಗ್ತಾ ಇದ್ದಾರಲ್ಲ, ಅದೂ ಎಲ್ಲ ರೂಲ್ಸು ರೆಗ್ಯುಲೇಷನ್ನುಗಳನ್ನೂ ಗಾಳಿಗೆ ತೂರಿ, ಅವರೆಲ್ಲ ಎಲ್ಲಿಗೆ ಹೋಗ್ತಾರೆ, ಏನೇನ್ ಮಾಡ್ತಾರೆ?', ಕಾರಿನ ಒಳಗಾಗಲಿ ಹೊರಗಾಗಲೀ ಈ ಬಾರಿ ಯಾವುದೇ ಧ್ವನಿ ಬಾರದಿದ್ದುದರಿಂದ ನಾನೇ ಮುಂದುವರೆಸಿದೆ, 'ಇವರೆಲ್ಲ ಟೈಮನ್ನ ಉಳಿಸೋರೋ, ಬೆಳೆಸೋರೋ?' ಈ ಮಾತನ್ನ ಕೇಳಿ ನಮ್ಮ ಡ್ರೈವರ್ರಿಗೆ ಸ್ವಲ್ಪ ಸಿಟ್ಟು ಬಂದಿತೆಂದು ಕಾಣುತ್ತದೆ, ಟೈಮು ಉಳಿಸೋದಲ್ಲ, ಬೆಳೆಸೋದೂ ಅಲ್ಲ, ಅವರ ಕೈಯಲ್ಲಿ ಇರೋ ವಾಹನವನ್ನು ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಓಡಿಸೋದು, ವೇಗದಲ್ಲಿದೆ ಮಜಾ, ದಿನಾ ನಿಧಾನವಾಗಿ ಹೋಗಿ ಬಂದ್ರೆ ಅದರಲ್ಲೇನಿದೆ ಗಮ್ಮತ್ತು?'
ಪ್ರಶ್ನೆಗೆ ಮತ್ತೊಂದು ಪ್ರಶ್ನೆ ಉತ್ತರವಾಗಿ ಬಂದಿದ್ದು ಅಷ್ಟೊಂದು ಸಮಂಜಸವೆಂದು ಅನಿಸದಿದ್ದರೂ 'ನಾಯಕರೇನೋ ಮುಂದೆ ವೇಗವಾಗಿ ಹೋಗ್ತಾರೆ, ಅವರ ಹಿಂಬಾಲಕರಿಗೂ ಅದೇ ವೇಗ ಇರಬೇಕಲ್ಲ? ನಾಯಕರೇನೋ ಹೋಗಿ ಮರೆಯಾಗಿಬಿಟ್ಟರೆ ಹಿಂಬಾಲಿಸುವವರಿಗೆ ಅವರ ಜಾಡು ಸುಳಿಯೋದೆಂತು!'
'ಅವರು ಎಷ್ಟೇ ವೇಗವಾಗಿ ಹೋದ್ರೂ ಎಲ್ಲಿಗೂ ಹೋಗೋದಿಲ್ಲ, ನಾವು ಮುಂದಿನ ಟ್ರಾಫಿಕ್ ಲೈಟ್ ಹತ್ರ ಹೋದ್ರೆ ಅಲ್ಲೇ ಎಣಿಸ್ಕೊಂಡು ಬಿದ್ದಿರ್ತಾರೆ ನೋಡಿ ಬೇಕಾದ್ರೆ' ಎಂದು ಓಪನ್ ಆಹ್ವಾನ ಕೊಟ್ಟ...ಅಷ್ಟರಲ್ಲಿ ಹೊರಗಿನಿಂದ ಇನ್ನೊಮ್ಮೆ ಅದೇ ಧ್ವನಿ ಮತ್ತೆ ಬಂತು '...ನಾನು ಆಗ್ಲೇ ಹೇಳ್ಲಿಲ್ವಾ, ನಮ್ಮ ನಾಯಕರೆಲ್ಲ ಒಂದೇ ಸಾಲಿನಲ್ಲಿ ನಡೆಯೋರು, ಗುಂಡಿಗೆ ಬಿದ್ರೂನೂ ಒಂದೇ ಸರ್ತಿ ಬಿದ್ದು ಹೋಗ್ತಾರೆ, ವೇಗಾ-ಗೀಗ ಏನೂ ಇಲ್ಲ, ಎಲ್ಲಾ ಆಮೇ ವೇಗವೆ!'
'ಎಲಾ ಇವನ, ನಮ್ ದೇಶ್ದಲ್ಲೂ ಸರಳ ರೇಖೆಯಲ್ಲಿ ಸಾಗೋ ನಾಯಕರಿದ್ದಾರೆಯೇ? ವೇಗದ ಕಥೆ ಹಾಗಿರಲಿ, ನಾಯಕರಿದ್ದಾರಲ್ಲ ಅಷ್ಟೇ ಸಾಕು...' ಎನ್ನುಕೊಳ್ಳುತ್ತಿರುವಾಗ...
'ಯಾವ ನಾಯಕರು?...ನಿಮಗಿನ್ನೂ ನಿದ್ದೇ ಸರಿಯಾಗಿ ಆದ ಹಾಗಿಲ್ಲ, ಸುಮ್ನೇ ಬಡಬಡಿಸ್ತಾ ಇದ್ದೀರಾ' ಎಂದೆನ್ನಬೇಕೆ ನಮ್ಮ ಡ್ರೈವರ್, ನಾನು 'ಸರಿ, ಮುಂದೆ ನಡಿ' ಎನ್ನುವಲ್ಲಿಯವರೆಗೆ ಹಸಿರು ಸಿಗ್ನಲ್ಲಿನಲ್ಲಿಯೂ ಗಾಡಿಯನ್ನು ನಿಲ್ಲಿಸಿ ಬಿಟ್ಟಿದ್ದ, ಸದ್ಯ ಹಿಂದಿನಿಂದ ಬಂದು ಯಾರೂ ಗುದ್ದಲಿಲ್ಲ ಅಷ್ಟೇ!