Sunday, December 03, 2006

ನೆಗಡೀ ಅಂತಾ ರೋಗಾ ಇಲ್ಲಾ...

ಏನೇ ಹೇಳಿ ಈ ಟೆಕ್ನಾಲಜಿ ಅನ್ನೋದು ಏನೇನ್ ಬಂದ್ರೂ ನೆಗಡಿ ಆದೋರ್ಗೇನೂ ಸಹಾಯ ಮಾಡೋ ಹಾಗ್ ಕಾಣ್ಸೋದಿಲ್ಲ. ಯಾಕೆ ಈ ಮಾತ್ ಹೇಳ್ತಾ ಇದ್ದೀನಿ ಅಂದ್ರೆ ನೀವೆಲ್ಲ ಈ ಮಾತನ್ನ ಕೇಳೇ ಇರ್ತೀರಿ - ನೆಗಡಿಗೆ ಔಷಧಿ ತೆಗೊಂಡ್ರೆ ಗುಣಾ ಆಗೋಕೆ ಒಂದ್ ವಾರ ಬೇಕು, ಇಲ್ಲಾ ಅಂತಂದ್ರೆ ಅದೇ ತನ್ನಷ್ಟಕ್ಕೆ ತಾನೆ ಏಳ್ ದಿನಗಳಲ್ಲಿ ಹೊರಟುಹೋಗುತ್ತೇ ಅಂತಾ. ನಮ್ ಕಡೇ ಒಂದ್ ಗಾದೇನೂ ಸೇರ್ಸಿ ಬಿಟ್ಟಿದ್ದಾರೆ - ನೆಗಡೀ ಅಂತಾ ರೋಗಾ ಇಲ್ಲಾ ಬುಗುಡೀ ಅಂತಾ ಒಡವೇ ಇಲ್ಲಾ! ಈಗಿನ್ ಕಾಲದಲ್ಲಿ ಸೊಂಟಕ್ಕೆ ಬುಗಡಿ-ಪಗಡೀ ಹಾಕ್ಕೋತಾರೋ ಬಿಡ್ತಾರೋ, ಯಾವ್ ಕಾಲ ಬಂದ್ರೂ ನೆಗಡೀ ಆಗೋದೇನೂ ನಿಂತ್ ಹಾಗ್ ಕಾಣ್ಸೋಲ್ಲ.

ಈ ಜಪಾನೂ ಜರ್ಮನೀಯವರು ಏನೇನೋ ಕಂಡ್ ಹಿಡೀತಾರೆ, ಈ ಟಾಯ್ಲೆಟ್ ಪೇಪರ್ ರೋಲಿನ ಹಾಗೇ ಟಿಶ್ಯೂ ಪೇಪರ್ರನ್ನು ಒಂದಿಷ್ಟು ತಲೇ ಮೇಲೇ ಸುತ್ತಿಕೊಳ್ಳೋ ಹಾಗೆ ಒಂದ್ ರೋಲನ್ನ ಯಾಕೆ ಯಾರೂ ಸೃಷ್ಟೀಸೋದಿಲ್ವೋ? ಹಾಗೇನಾದ್ರೂ ಮಾಡಿದ್ರೂ ಅಂದ್ರೆ ಅಂಥೋರಿಗೆ ಪೇಟೆಂಟ್ ಮಾಡಿಸ್‌ಕೊಳ್ಳಿಕ್ಕೆ ನಾನ್ ಸಹಾಯ ಮಾಡ್ತೀನಿ. ಇಲ್ಲಂತೂ ನಮ್ಮೂರುಗಳಲ್ಲಿ ಜೇಬಿನಲ್ಲಿ ಕರ್ಚೀಪು ತುರುಕಿಕೊಂಡ ಹಾಗೇ ಯಾರೂ ಕರ್ಚೀಪು ತುಂಬಿಕೊಳ್ಳೋದಿಲ್ಲ, ಬರೀ ಟಿಶ್ಯೂ ಪೇಪರುಗಳನ್ನ ಮಡಿಕೆ ಮಾಡಿ ಇಟ್ಟುಕೊಂಡು ಎಲ್ಲಿ ನೋಡಿದ್ರೆ ಅಲ್ಲಿ ಸೂ...ಸೂ... ಅಂತಾ ಮೂಗಿನ ಒರೆಸಿಕೊಳ್ತಾನೇ ಇರ್ತಾರೆ. ಆದ್ರೆ ಒಂದ್ ಮೂಗ್ನಲ್ಲಿ ಗಂಗಾ, ಮತ್ತೊಂದ್ ಮೂಗ್ನಲ್ಲಿ ಯಮುನಾ ಹರಿಯೋ ನನ್ನಂಥೋರಿಗೆ ಈ ಸಣ್ಣ ಸಣ್ಣ ಪೇಪರ್ ತುಂಡುಗಳು ಯಾವ್ ಲೆಕ್ಕಾ - ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಇದ್ದಹಾಗೆ - ಸೋತ್ ಹೋಗ್ ಬಿಡ್ತಾವೆ.

ಯಾರ್ ಹತ್ರಾನೂ ಹೇಳೋಕ್ ಹೋಗ್ಬೇಡಿ, ಸುಮ್ನೇ ಹೀಗೊಂದು ಐಡಿಯಾ ಬಂತು - ಆಕಾಶ್‌‍ದಲ್ಲಿ ಬೆಳ್ಳಿ ಮೋಡಗಳು ತೇಲಿಕೊಂಡು ಹೋಗ್ತಾ ಇರ್ತಾವಲ್ಲ, ಅವುಗಳನ್ನು ಈ ನೆಗಡೀ ಪರಮಾತ್ಮನ ಸೇವೆಗೆ ಯಾಕ್ ಬಳಸ್‌ಬಾರ್ದು? 'ಬೆಳ್ಳಿ ಮೋಡವೇ, ಎಲ್ಲಿ ಓಡುವೆ ನನ್ನ ಬಳಿಗೆ ನಲಿದು ಬಾ...' ಎಂದು ಪ್ರೀತಿಯಿಂದ ಕರೆದು, ಹತ್ತಿ ಉಂಡೆಗಳಂತಿರೋ ಅವುಗಳನ್ನ ಸ್ವಲ್ಪ ಹಿಂಜಿ ಮೂಗನ್ನ ಒರೆಸಿ ಕಸದ ಡಬ್ಬಿಗೆ ಬಿಸಾಡೋ ಹಾಗಿದ್ರೆ ಹೇಗಿರ್ತಿತ್ತು? ಒಂಥರಾ ಗಗನಸಖಿಯರು ಕೊಡೋ ವೆಟ್ ಟವೆಲ್ಲುಗಳ ಹಾಗೆ... ನಮ್ ಕೈಯಲ್ಲೆಲ್ಲ ಮೋಡಗಳನ್ನ ಆಟ್ರ್ಯಾಕ್ಟ್ ಮಾಡೋ ಹಾಗೆ ಒಂದ್ ಅಯಸ್ಕಾಂತ ಇರಬೇಕಿತ್ತು, ಆಗ ಎಂಥಾ ನೆಗಡಿಗೂ ಔಷಧಿ ಅನ್ನೋದೇ ಬೇಡವಾಗ್ತಿತ್ತು, ಕಹಿ ಕಷಾಯ ಕುಡಿಯೋದಿರ್ಲಿ, ಪೇಪರ್ರನ್ನ ಉಪಯೋಗಿಸಿ ಮೂಗ್ ಒರೆಸೋದಿರಲಿ, ಶೇಕಡಾ ನೂರಕ್ಕೆ ನೂರು ನ್ಯಾಚುರ್ರಲ್ಲಾಗಿರೋ ಮೋಡಗಳಿಂದ ಮೂಗನ್ನ ಒರೆಸೋ ತಂತ್ರಜ್ಞಾನ ಯಾವತ್ತು ಬರುತ್ತೋ ಯಾರಿಗೆ ಗೊತ್ತು! ಆಗ 'ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ...' ಅನ್ನೋ ಹಾಡಿಗೆ ಬಹಳ ದೊಡ್ಡ ಅರ್ಥ ಬರ್ತಿತ್ತು.

'ರಾವಣನಿಗೆ ಎಷ್ಟು ತಲೆ ಅಂದ್ರೆ, ಶುಂಬಳಕ್ಕೂ ಕಫಕ್ಕೂ ಎನ್ ವ್ಯತ್ಯಾಸ' ಕೇಳಿದನಂತೆ... ಅನ್ನೋದು ನಾನು ಕಟ್ಟಿರೋ ಜಾಣ್ಣುಡಿ. ರಾವಣಗೆ ನೆಗಡಿ ಅನ್ನೋದೇನಾದ್ರೂ ಆದ್ರೆ ಹೆಂಗಿರತ್ತೆ ಅಂತ can you imagine? ಯಾವ ಮೂಗಲ್ಲಿ ಶುಂಬಳ ಬರುತ್ತೆ, ಯಾವ ಗಂಟಲಲ್ಲಿ ಕಫ ಇರುತ್ತೆ? ಅವನ ಕೈಗಳು ಒಳ್ಳೇ ಯಂತ್ರಗಳ ಹಾಗೆ ಒಂದೊಂದೇ ಮೂಗನ್ನ ಒರೆಸೀ ಒರೆಸೀ ಹಾಕ್ತಾ ಇರಬೇಕಾದ್ರೆ ಅದನ್ನ ನೋಡೋಕೇ ಎರಡು ಕಣ್ಣುಗಳು ಸಾಲವು. ಎಲ್ಲಿ ನೋಡಿದ್ರೂ ದಶಕಂಠ ಲಂಕೇಶ ಅನ್ನೋ ವಿವರಣೆ ಬರುತ್ತೇ ವಿನಾ ಇಪ್ಪತ್ತು ಕೈಗಳ್ಳುವನು ಅನ್ನೋ ಅರ್ಥ ಬರೋ ವಾಕ್ಯಗಳನ್ನಾಗಲಿ ಚಿತ್ರವನ್ನಾಗಲೀ ನೋಡ್ಲೇ ಇಲ್ಲಾ ನಾನು. ಅದೇ ನೋಡಿ, ದೇವತೆಗಳಿಗೆ ಒಂದು ತಲೆ ಅಥವಾ ಮಲ್ಟಿಪಲ್ ತಲೆ ಇದ್ದಲ್ಲೆಲ್ಲ ಮಲ್ಟಿಪಲ್ ಕೈಗಳನ್ನೂ ನಾನು ನೋಡಿದ್ದೀನಿ. ಅಂದ್ರೆ ಈ ದೇವಾನುದೇವತೆಗಳನ್ನು ಚಿತ್ರ ಬರೆದು ನಮ್ಮ ಮನಸ್ಸು ತುಂಬೋ ಈ ಕಲಾವಿದರು ಎಷ್ಟು ಪಾರ್ಷಿಯಾಲಿಟಿ ಮಾಡ್ತಾರೆ ಅನ್ಸಲ್ಲ್ವಾ? ಪಾಪ, ರಾವಣನಿಗೊಂದು ಥರಾ, ಬ್ರಹ್ಮನಿಗೊಂದು ಥರಾ. ಬ್ರಹ್ಮನಿಗಾದ್ರೆ ನಾಲ್ಕು ದಿಕ್ಕಿಗೆ ನಾಲ್ಕು ತಲೆಗಳು, ಅದೇ ರಾವಣನಿಗೆ ಎಲ್ಲಾ ತಲೆಗಳೂ ಒಂದೇ ದಿಕ್ಕಿಗೆ ಮುಖ ಮಾಡಿರೋವು, ಅಂದ್ರೆ ಒಂದು ಮುಸುಡಿಗೆ ನೆಗಡಿ ಆಯ್ತು ಅಂದ್ರೆ, ಇನ್ನೊಂದಕ್ಕೆ ತಗಲೋದು ಬಹಳ ಸುಲಭ ಅನ್ನೋ ಅರ್ಥದಲ್ಲಿ...ಪಾಪ ಅನ್ಸುತ್ತೆ ನೆಗಡಿ ಬಂದ ರಾವಣನನ್ನ ನೆನಸಿಕೊಂಡು.

ನಿಮಗೆಲ್ಲಾ ಹೀಗೆ ಆಗುತ್ತೋ ಬಿಡುತ್ತೋ ಗೊತ್ತಿಲ್ಲ, ನನಗೆ ಅಪರೂಪಕ್ಕೊಮ್ಮೆ ಎರಡು ಮೂಗಿನ ಹೊಳ್ಳೆಗಳಲ್ಲಿ, ಒಂದೇ ಹೊಳ್ಳೆಗೆ ನೆಗಡಿ ಆಗಿ ಅದು ಕಟ್ಟಿಕೊಂಡು ಕೇವಲ ಒಂದೇ ಕಡೆಯಿಂದ ಉಸಿರಾಡೋ ಹಾಗಾಗುತ್ತೆ, ಒಂದು ರೀತಿ ಕಟ್ಟು ಬಿದ್ದು ಪ್ರಾಣಾಯಾಮಾ ಮಾಡೋರ್ ಥರಾ. ಹಾಗಿದ್ದಾಗ ನಾನು ನೆಗಡಿಗೆ ಔಷಧಿ ಏನಾದ್ರೂ ತೆಗೊಂಡ್ರೆ ಏನ್ ಆಗುತ್ತೋ ಅಂತ ಬಹಳ ಕುತೂಹಲ ಬೇರೆ. ಈ ಅಲೋಪಥಿಕ್ ಔಷಧದ ಅಣುಅಣುವಿಗೆ ಇಂಥಾ ಮೂಗಿನ ಹೊಳ್ಳೆಗೇ ನೆಗಡಿ ಆಗಿದೆ ಅನ್ನೋದ್ ಹೇಗೆ ತಿಳಿಯತ್ತೋ? ಎಲ್ಲಾ ವಿಚಿತ್ರಾನೇ - ಕಾಲಿಗೆ ನೋವಾದ್ರೂ ಔಷಧ ತಗೋಳೋದು ಮಾತ್ರ ಬಾಯಿನೇ.

ನಿಮಗೆ ನೆಗಡಿ ಆಗುತ್ತೋ ಬಿಡುತ್ತೋ, ನನಗೂ ಆಗುತ್ತೆ, once a year... ಆವಾಗ ನನ್ ಪಜೀತಿ ಬಿಡಿ, ಪ್ರತೀ ಸಾರಿ ನಾನು ಸೀನಿದಾಗೆಲ್ಲ ನನ್ ಪಕ್ಕದ ಕ್ಯೂಬಿನಲ್ಲಿ ಕೂತಿರೋ ಅಮೇರಿಕನ್ ಚೆಲುವೆ bless you! ಅನ್ನೋ ಕಷ್ಟಾ ಕೇಳಿ ನನಗೆ ಕೆಲವೊಮ್ಮೆ ಬೇಸರ, ಕೆಲವೊಮ್ಮೆ ಖುಷಿಯಾಗುತ್ತೆ...ಆದ್ರೆ ನಾನು ದಿನಕ್ಕೊಂದೇ ಸರ್ತಿ thank you! ಅನ್ನೋದು, ಅವಳು ಬ್ಲೆಸ್ ಯೂ ಅಂದಾಗೆಲ್ಲಾ ನಾನ್ ಥ್ಯಾಂಕ್ಯೂ ಅಂದ್ರೆ ಅವುಗಳ ಲೆಕ್ಕ ಇಟ್ಟ್ಕೊಳ್ಳೋದ್ ಯಾರು? ನನ್ನ ಸೀನಿನ ಧ್ವನಿಗೂ ಬಹಳ ವೇರಿಯೇಷನ್ನುಗಳಿವೆ, ನಾನು ಮನೆಯಲ್ಲಿ ಸೀನಿದ್ರೆ, ಕೆದಲಾಯ್ ಮೇಷ್ಟ್ರು ಥರಾ ಕೊನೇ ಪಕ್ಷ ಅಕ್ಕಪಕ್ಕದ ಎರಡು ಬೀದಿಗಳಿಗಾದ್ರೂ ಕೇಳುತ್ತೆ, ಆಫೀಸಿನಲ್ಲಿ ಅದರದ್ದೇ ಆದ ಒಂದು ಸ್ಮಾಲ್ ವರ್ಷನ್ ಇದೆ...ಏನೇ ಹೇಳಿ ಮನಸ್ಸು ಬಿಚ್ಚಿ ಗಟ್ಟಿಯಾಗಿ ಸೀನಿದ ತೃಪ್ತಿ ಬರೋದಿಲ್ಲ, ಅದಕ್ಕೇ ನಾನು ಹಾಡೊಂದನ್ನು ಕಟ್ಟಿದ್ದೀನಿ...'ಸೀನೋದರಲ್ಲೂ ಸುಖಾ ಇದೆ ಅಂತ ಗೊತ್ತೇ ಇರಲಿಲ್ಲಾ...'.

ನೆಗಡಿ ಬಂತು...ನೆಗಡಿ ಹೋಯ್ತು ಎನ್ನುವಾಗ ಒಂದು ವಾರವಾಯ್ತು... ಎಂಥಾ ರಾಜರುಗಳಿಂದ ಹಿಡಿದು ನನ್ನಂತ ಸಾಧಾರಣ ಜನರನ್ನೂ ಬಿಡದೇ ಒಂದೇ ಸಮನೆ ತಗಲಿಕೊಳ್ಳೋ ಈ ನೆಗಡಿಯ ವೈರಾಣುಗಳ ಸಮಾಜವಾದವನ್ನು ಕಂಡು ಅವುಗಳ ಮೇಲೆ ಬಹಳ ಅಭಿಮಾನ ಮೂಡಿ, ನಾನಂತೂ equality ಯನ್ನು ಪ್ರೂವ್ ಮಾಡೋ ಅವುಗಳ ಅಭಿಮಾನಿಯಾಗಿ ಹೋಗಿದ್ದೀನಿ, ನೀವು?

Thursday, November 30, 2006

ಕೇಕ್‌ನ ಎರಡೂ ತುದಿಯೂ ಇರಲೀ ಅಂದ್ರೆ ಹೇಗೆ?

ಮಾರ್ಚ್ ೮, ೨೦೦೫ ರ ಮಂಗಳವಾರದಂದು ಯಾವುದೋ ಕೆಲಸದ ನಿಮಿತ್ತ ನ್ಯೂ ಯಾರ್ಕ್‌ನಿಂದ ಆರ್ಲಿಂಗ್ಟನ್‌ಗೆ ನಮ್ಮ ಕಂಪನಿಯ ಕೆಲಸದ ಸಲುವಾಗಿ ನಾವೊಂದು ತಂಡ ಹೋಗಿದ್ದೆವು. ದುರಾದೃಷ್ಟವಷಾತ್ ಆ ದಿನ ಹೆಚ್ಚು ಹಿಮ ಬಿದ್ದ ಕಾರಣ ಎಲ್ಲ ವಿಮಾನಗಳನ್ನೂ ರದ್ದು ಪಡಿಸಿದ್ದರಿಂದ ಅನಿವಾರ್ಯವಾಗಿ ನಾವು ಅಲ್ಲಿಯೇ ಹೊಟೇಲುಗಳನ್ನು ಹುಡುಕಿಕೊಂಡು ಹೋಗಬೇಕಾಗಿ ಬಂದಿತ್ತು. ಇನ್ನೇನು ಈಗಲೋ ಆಗಲೋ ವಿಮಾನಗಳನ್ನು ಹೊರಡಿಸುತ್ತಾರೆ ಎಂದು ರೇಗನ್ ವಿಮಾನ ನಿಲ್ದಾಣದಲ್ಲಿ ಕಾದೂ-ಕಾದೂ ರಾತ್ರಿ ಒಂಭತ್ತು ಘಂಟೆಯ ಯಾವ ಸ್ನೇಹಿತರನ್ನು ಕರೆಯೋದು ಎಂದು ವಿಧಿ ಇಲ್ಲದೇ ಇದ್ದ ಬಟ್ಟೆಯಲ್ಲಿಯೇ ಹೊಟೇಲಿನಲ್ಲಿ ತಂಗಬೇಕಾದ ಪರಿಸ್ಥಿತಿಯನ್ನು ಹಳಿದುಕೊಂಡು ಇದ್ದೆವು. ಹಾಗೆ ನಮ್ಮ ಜೊತೆ ಬಂದವರಲ್ಲಿ ಮಾರ್ಕ್ ಕೂಡಾ ಒಬ್ಬ, ಆತ ಆಫ್ರಿಕನ್ ಅಮೇರಿಕನ್.

ಮರುದಿನ ಲಗುಬಗೆಯಿಂದ ಎಷ್ಟು ಬೇಗ ಆಯಿತೋ ಅಷ್ಟು ಬೇಗ ವಿಮಾನ ನಿಲ್ದಾಣವನ್ನು ತಲುಪಿದೆವು, ಹವಾಮಾನ ಮುನ್ಸೂಚನೆಯ ಪ್ರಕಾರ ಆ ದಿನ ಯಾವುದೇ ಸಮಸ್ಯೆಗಳಿರಲಿಲ್ಲ, ಆದರೆ ವಿಮಾನ ನಿಲ್ದಾಣದಲ್ಲಿ ಎರಡು ದಿನಗಳ ಪ್ರಯಾಣಿಕರು ತುಂಬಿಕೊಂಡು ಪ್ರತಿಯೊಂದು ವಿಮಾನವೂ ತಡವಾಗಿ ಹೊರಡುವುದೂ ಅಲ್ಲದೇ ಅಂತಹ ವಿಮಾನಗಳನ್ನೇರಲು ಜನರು ಕಾದು ನಿಂತಿದ್ದ ಸಾಲು ಹನುಮಂತನ ಬಾಲದ ಹಾಗೆ ಉದ್ದವಾಗಿ ಬೆಳೆದುಕೊಂಡಿತ್ತು. ನಮ್ಮ ಕಂಪನಿಯವರು ಮುಖ್ಯವಾಗಿ ಬಳಸುವ ಯು.ಎಸ್. ಏರ್‌ವೇಸ್ ವಿಮಾನಗಳಲ್ಲಿ ನಮಗೆ ಕಾರ್ಪೋರೇಟ್ ರೇಟ್ ಸಿಗುವುದೂ ಅಲ್ಲದೇ ನಮ್ಮ ಕಂಪನಿಯವರಿಗೆಂದೇ ಪ್ರತ್ಯೇಕ ಕ್ಯೂ ಕೂಡಾ ಇರುತ್ತದೆ. ಪ್ರತಿದಿನ ಸಾವಿರಾರು ಜನ ನಮ್ಮ ಕಂಪನಿಯವರೇ ಇಂತಹ ವಿಮಾನಗಳನ್ನು ಬಳಸುತ್ತಾರಾದ್ದರಿಂದ ಈ ವ್ಯವಸ್ಥೆ. ಹಾಗಾಗಿ ನಾವು ಕಂಪನಿಯ ವತಿಯಿಂದ ಪ್ರಯಾಣಮಾಡಿದಲ್ಲೆಲ್ಲ ನಮಗೆ ಕಾರ್ಪೋರೇಟ್ ಲೈನ್ ನಲ್ಲಿ ನಿಂತೇ ಅಭ್ಯಾಸ. ಬೇರೆ ಯಾವ ಲೈನುಗಳಲ್ಲಿ ಎಷ್ಟೇ ಜನರಿದ್ದರೂ, ಈ ವಿಐಪಿ ಲೈನುಗಳಲ್ಲಿ ಜನರಿರುವುದೇ ಅಪರೂಪ.

ನಾನು ಹಾಗು ಮಾರ್ಕ್ ಲಗುಬಗೆಯಿಂದ ಯಾವ ವಿಮಾನ ಸಿಕ್ಕುವುದೋ ಅದರಲ್ಲೇ ಹೊರಟುಬಿಡೋಣವೆಂದುಕೊಂಡು ಅವನು ಮೊದಲು, ಅವನ ಹಿಂದೆ ನಾನು ಇಬ್ಬರೂ ಬಂದು ಕಾರ್ಪೋರೇಟ್ ಲೈನ್ ನಲ್ಲಿ ನಿಂತುಕೊಂಡೆವು. ನಾನು ಮೊದಲೇ ಹೇಳಿದಂತೆ ಪಕ್ಕದ ಸಾಮಾನ್ಯ ಸಾಲಿನಲ್ಲಿ ಬಹಳಷ್ಟು ಜನರು ಕಾಯ್ದುಕೊಂಡಿದ್ದರು. ನಾನು ಹಾಗೆ ಬಂದು ನಿಂತಿದ್ದೇ ತಡ ಪಕ್ಕದ ಲೈನಿನಲ್ಲಿ ನಿಂತಿದ್ದ ಸುಮಾರು ಜನರು ನನ್ನನ್ನು ಸಿಟ್ಟಿನಿಂದ ದುರುಗುಟ್ಟಿಕೊಂಡು ನೋಡಿದ್ದೂ ಅಲ್ಲದೇ, '...lines starts here!' ಎಂದು ಅವರ ಸಾಲು ಶುರುವಾಗುವ ಸ್ಥಳವನ್ನು ನನಗೆ ತೋರಿಸಲು ಶುರುಮಾಡಿದರು. ನಾನು ತಪ್ಪೇನಾದರೂ ಮಾಡಿದೆನೇನೋ ಎಂದುಕೊಂಡು ಕಾರ್ಪೋರೇಟ್ ಲೈನ್ ಇರುವ ಸೈನ್ ಇರುವುದನ್ನು ಬಗ್ಗಿ ನೋಡಿ ಖಾತ್ರಿ ಮಾಡಿಕೊಂಡು ಅವರು ಹೇಳಿ ಕೂಗಾಡಿಕೊಂಡಿದ್ದನ್ನೆಲ್ಲ ಕೇಳಿಯೂ ಕೇಳಿಸಿಕೊಳ್ಳದವನಾದೆ. ಇಷ್ಟಾಗುವಾಗ ನನ್ನ ಪಕ್ಕದಲ್ಲಿ ನಿಂತಿದ್ದ ಮಾರ್ಕ್‌ನನ್ನು ಕೌಂಟರಿನ ಹಿಂದಿದ್ದ ಚೆಲುವೆ ಕರೆದಳು. ಆತ ಹೋಗಿ ತನ್ನ ಟಿಕೇಟನ್ನು ತೆಗೆದುಕೊಂಡು ಬಂದ, ನಂತರ ಒಂದೆರಡು ನಿಮಿಷಗಳು ಕಳೆದ ಮೇಲೆ ನನ್ನ ಸರದಿ ಬಂತು.

ನಾವು ಸೆಕ್ಯೂರಿಟಿಯ ಗೇಟ್ ಕಡೆಗೆ ನಡೆಯುತ್ತಿದ್ದಂತೆ ಮಾರ್ಕ್ ನಗಲು ಶುರುಮಾಡಿದ. 'All those people in the line...they never said a word to me!' ಎಂದ. ನಾನು ಹೌದಲ್ಲ ಎಂಬಂತೆ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಿರುವಾಗ ಅವನೇ ಮುಂದುವರೆಸಿ, 'Do you know why?...they don't know what comes out of my mouth or pockets and when...' ಎಂದವನೇ ಮತ್ತೆ ನಗಲು ಶುರುಮಾಡಿದ. ಮಾರ್ಕ್ ಮಾಮೂಲಿ ಬಿಸಿನೆಸ್ ಕ್ಯಾಷುವಲ್ ಡ್ರೆಸ್ಸಿನಲ್ಲಿದ್ದವನು, ಆದರೆ ನಾನು ಸೂಟ್ ಧರಿಸಿದ್ದೆ. ಆದರೆ ಅಲ್ಲಿದ್ದ ಜನ ನನ್ನನ್ನು ಮಾತ್ರ ಅವರ ಸಿಟ್ಟನ್ನು ತೀರಿಸಲು ಬಳಸಿಕೊಂಡರೇ ವಿನಾ ಮಾರ್ಕ್‌ಗೆ ಒಂದು ಶಬ್ಧವನ್ನು ಹೇಳಲಿಲ್ಲವಲ್ಲಾ ಎಂದು ಒಂದು ಕ್ವಿಂಟಾಲ್ ಅಕ್ಕಿ ಚೀಲವನ್ನು ಹೊತ್ತವರ ಹಾಗೆ ಮುಖ ಮಾಡಿಕೊಂಡು ನಡೆಯತೊಡಗಿದೆ.

***

ಕಳೆದ ಶನಿವಾರ ನ್ಯೂ ಯಾರ್ಕ್ ನಲ್ಲಿ ಐದು ಪೋಲೀಸ್ ಆಫೀಸರುಗಳು ಒಬ್ಬ ಯಾವುದೇ ಆಯುಧಗಳನ್ನು ಹೊಂದಿರದ ಆಫ್ರಿಕನ್ ಅಮೇರಿಕನ್ ಹುಡುಗನನ್ನು ಗುಂಡಿಟ್ಟಿ ಸಾಯಿಸಿದರು. ನಾಳೆ ಮದುವೆ ಆಗ ಬೇಕಾದ ಹುಡುಗನನ್ನು ಅಗತ್ಯಕ್ಕಿಂತಲೂ ಹೆಚ್ಚು ಫೋರ್ಸ್ ಉಪಯೋಗಿಸಿ, ಸುಮಾರು ಐವತ್ತಿಕ್ಕಿಂತಲೂ ಹೆಚ್ಚು ಬುಲೆಟ್‌ಗಳನ್ನು ಹೊಡೆದು ಕೊಂದು ಹಾಕಿದರೆಂದು ಬಹಳಷ್ಟು ಕಡೆ ಸುದ್ದಿ ಬಿತ್ತರವಾಯಿತು. ಇಲ್ಲಿನ ವೃತ್ತಪತ್ರಿಕೆಗಳಲ್ಲಿ ಕಪ್ಪು ಜನರನ್ನು ಡಿಸ್ಕ್ರಿಮಿನೇಟ್ ಮಾಡಿ ನೋಡುತ್ತಾರೆ, ರೇಷಿಯಲ್ ಮಾನದಂಡಗಳಿಂದ ಜನರನ್ನು ಕೆಟ್ಟದಾಗಿ ನೋಡುತ್ತಾರೆ ಎಂದು ಆಗಾಗ್ಗೆ ವಿಷಯಗಳು ಹೊರಬರುತ್ತಲೇ ಇರುತ್ತವೆ. ಇಲ್ಲಿನ ಜನರಲ್ಲಿ ಎಲ್ಲ ಬಣ್ಣದ ಚರ್ಮದವರೂ ಇದ್ದರೂ ಕಾಮನ್ ಅಭಿಪ್ರಾಯದ ಪ್ರಕಾರ ಆಫ್ರಿಕನ್ ಅಮೇರಿಕನ್ ಜನರೆಂದರೆ 'ಸ್ವಲ್ಪ ದೂರವಿರುವುದು ಒಳ್ಳೆಯದು...' ಎನ್ನುವ ಇಂಗಿತವನ್ನು ಅನಫಿಷಿಯಲ್ಲಾಗಿ ಆಗಾಗ್ಗೆ ಕಂಡು/ಕೇಳಿಸಿಕೊಳ್ಳುತ್ತಿರುತ್ತೇವೆ. ಒಂದು ಕಡೆ ನಮ್ಮವರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ದೂರು ನೀಡುವುದರಿಂದ ಹಿಡಿದು, ಮತ್ತೊಂದು ಕಡೆ ಕಪ್ಪು ಜನರ 'ಮಾಚೋ ಮ್ಯಾನ್' ಇಮೇಜ್‌ನಿಂದ ಎಷ್ಟೋ ಜನ ತಮ್ಮ ಕೆಲಸವನ್ನು ಸಾಧಿಸಿಕೊಳ್ಳುವುದನ್ನೂ ನೋಡಿದ್ದೇನೆ. ಸೌಮ್ಯ ಸ್ವಭಾವದ ಆಫ್ರಿಕನ್ ಅಮೇರಿಕನ್ ಸ್ನೇಹಿತ ಗಾರ್‌ಫೀಲ್ಡ್ ತಾನು ತನ್ನ ಕಾರನ್ನು ಎಲ್ಲಿ ಬೇಕೆಂದರಲ್ಲಿ ತಿರುಗಿಸಬಲ್ಲ, ಅವನು ತನ್ನ ಡ್ರೈವರ್ ಕಡೆಯ ಕಿಟಕಿಯ ಗಾಜನ್ನು ಇಳಿಸಿ ಕೈಯನ್ನು ಹೊರಗೆ ಹಾಕಿದನೆಂದರೆ ಅವನ ಹಿಂದಿದ್ದವರು ಯಾರೂ ಹಾರ್ನ್ ಹಾಕುವುದಿಲ್ಲ. ಅದೇ ಅವನ ಜಾಗದಲ್ಲಿ ನಾನೇನಾದರೂ ಹಾಗೆ ಮಾಡಿದರೆ ಅಕ್ಕಪಕ್ಕದ ಡ್ರೈವರುಗಳು ನನ್ನನ್ನು ಸೀಳಿ ಬಿಡುವಂತೆ ನೋಡುವುದೂ ಅಲ್ಲದೇ, ಅವರಿಂದ ಸಹಸ್ರನಾಮಾರ್ಚನೆಯನ್ನೂ ಮಾಡಿಸಿಕೊಳ್ಳಬೇಕು.

ತಾನು ಟಫ್ ಮನುಷ್ಯನ ಹಾಗೆ ಮುಖವಾಡ ಹಾಕಿಕೊಳ್ಳುವ ಗಾರ್‌ಫೀಲ್ಡ್ ಸಿಕ್ಕಿದಾಗ ಕೇಳಬೇಕು ಎಂದುಕೊಂಡಿದ್ದೇನೆ - he can not have both sides of the cake...ನ್ಯೂ ಯಾರ್ಕ್ ನಗರದಲ್ಲಿ ಈವರೆಗೆ ಎಷ್ಟೋ ಸಮೀಕ್ಷೆಗಳು ಕ್ಯಾಬ್ ಡ್ರೈವರುಗಳ ಬಿಹೇವಿಯರ್ ಅನ್ನು ಅಭ್ಯಾಸ ಮಾಡಿವೆ - ಕ್ಯಾಬ್ ಡ್ರೈವರುಗಳು ಕಪ್ಪು ಜನರನ್ನು ಕಂಡರೆ ನಿಲ್ಲಿಸುವುದು ಕಡಿಮೆ, ಅದೇ ಬಿಳಿ ಜನರನ್ನು ಕಂಡರೆ ನಿಲ್ಲಿಸುವುದು ಹೆಚ್ಚು. ದಿನೇ ದಿನೇ ಒಂದಲ್ಲ ಒಂದು ಕ್ರೈಮ್ ನಲ್ಲಿ ಹೆಸರು ರಾರಾಜಿಸುವ ಆಫ್ರಿಕನ್ ಅಮೇರಿಕನ್ ಮೂಲದ ಜನರು ಒಳಗೆ ಹೇಗಿದ್ದರೂ ಹೊರಗಿನವರಿಗೆ ಒಂದೇ ರೀತಿ ಕಾಣುವಂತೆ ಇಮೇಜ್ ಬೆಳೆದು ಬಂದಿದೆ, ಅದು ನನ್ನೊಬ್ಬನ ತಪ್ಪಲ್ಲ ಎಲ್ಲರೂ ಒಟ್ಟಿಗೆ ಸೃಷ್ಟಿಸಿಕೊಂಡ ಅಥವಾ ಹಾಗೆ ನಮ್ಮಲ್ಲರಿಗೂ ಕಂಡುಬಂದ ನಡತೆಯ ಒಟ್ಟು ಮೊತ್ತ. ಹೀಗಿರುವಾಗ ಒಳ್ಳೆಯ ನಡತೆ ಎಕ್ಸೆಪ್ಷನ್ ಆಗುತ್ತದೆಯೇ ವಿನಾ ರೂಲ್ ಆಗುವುದಿಲ್ಲ.

ಜನಗಳ ನಡತೆಯನ್ನು ಅನುಮೋದಿಸುವಂತೆ ಇಲ್ಲಿಯ ಮಾಧ್ಯಮಗಳೋ ಅಥವಾ ಇಲ್ಲಿಯ ಮಾಧ್ಯಮಗಳನ್ನು ಅನುಮೋದಿಸುವಂತಿರುವ ಜನಗಳ ನಡತೆಯೋ, ಒಟ್ಟಿನಲ್ಲಿ ಕಪ್ಪು ಜನರ ಇಮೇಜ್ ಎಲ್ಲರ ಮನದಲ್ಲಿ ಬದಲಾಗಬೇಕಾದರೆ ಅದೊಂದು ಐತಿಹಾಸಿಕ ವಿಷಯವೇ ಆಗಿಹೋಗುತ್ತದೆ.

Monday, November 27, 2006

ಒಂದು ತಪ್ಪಿನ ಹಿಂದೆ ಮತ್ತೊಂದಾಗದಿರಲಿ...

ಅಮೇರಿಕನ್ ಮಾಧ್ಯಮಗಳು ಒಂದೊಂದಾಗಿ ನಿಧಾನವಾಗಿ ಎಚ್ಚೆತ್ತುಕೊಳ್ಳುತ್ತಿವೆಯೇನೋ ಎನ್ನುವ ರೀತಿಯಲ್ಲಿ ಪ್ರಸ್ತುತ ಇರಾಕ್ ಪರಿಸ್ಥಿತಿಯನ್ನು 'ಸಿವಿಲ್ ವಾರ್' ಎಂದು ಕರೆಯಲು ಆರಂಭಿಸಿದ್ದು ಬಹಳ ಒಳ್ಳೆಯ ಸೂಚನೆ. ರಿಪಬ್ಲಿಕನ್ ಪಕ್ಷ ಹಾಗೂ ಬುಷ್ ಆಡಳಿತ ಇರಾಕ್ ಸ್ಥಿತಿಯನ್ನು ಸಿವಿಲ್ ವಾರ್ ಎಂದು ಕರೆಯಲು ಯಾವತ್ತೂ ಒಪ್ಪೋದಿಲ್ಲ ಹಾಗೇನಾದರೂ ಮಾಡಿದರೆ ಅದು ಅವರ ಪಾಲಿಸಿಗಳು ಸೋತದ್ದಕ್ಕೆ ನಿದರ್ಶನವಾಗಿ ಎಲ್ಲಿ ಜನಮತವನ್ನು ಕಳೆದುಕೊಳ್ಳಬಹುದೋ ಎಂಬ ಹೆದರಿಕೆ ಇದ್ದಿರಬಹುದು. ಈಗ ಮಧ್ಯಂತರ ಚುನಾವಣೆಗಳು ನಡೆದು ಆಡಳಿತದಲ್ಲಿ ಪಕ್ಷಗಳು ಸ್ಥಾನಪಲ್ಲಟ ಮಾಡಿದನಂತರ ನಿಧಾನವಾಗಿ ಕಣ್ಣುಬಿಟ್ಟು ನೋಡುತ್ತಿರುವ ಅಮೇರಿಕನ್ ಮಾಧ್ಯಮಗಳ ಸ್ಥಿತಿಗತಿ ಕೊನೆಗೂ ಅವರು ಇದ್ದದ್ದನ್ನು ಇದ್ದಹಾಗೆ ಹೇಳುವ ಧೈರ್ಯ ತೋರಿದರಲ್ಲ ಎಂದು ನಿರಾಳವಾಯಿತು. ಆದರೆ ಇಂದಿಗೂ ಇಲ್ಲಿನ ಮಾಧ್ಯಮಗಳಲ್ಲಿ ಒಂದು ಅಂದಾಜಿನ ಪ್ರಕಾರ ದಿನಕ್ಕೆ ಮೂರು ಜನ ಸಾಯುವ ಅಮೇರಿಕನ್ ಸೈನಿಕರ ಸಂಖ್ಯೆಗಳಿಗೇ ಹೆಚ್ಚು ಮಹತ್ವ ಸಿಗುತ್ತದೆಯೇ ಹೊರತು, ಪ್ರತಿದಿನ ಸಾಯುವ ನೂರಾರು ಇರಾಕೀ ನಾಗರಿಕರ ಜೀವಗಳಿಗೆ ಅಷ್ಟೊಂದು ಮಹತ್ವ ಸಿಗುತ್ತಿಲ್ಲ.

ನನ್ನ ಮೂಗಿನ ನೇರದಲ್ಲಿ ಈ ಇರಾಕ್ ಹತ್ಯಾಕಾಂಡಕ್ಕೆ ಕೊನೆ ಇಲ್ಲವೇ ಎಂದು ಯೋಚಿಸಿದಾಗ ಹಲವಾರು ಉತ್ತರಗಳು ಕಣ್ಣಮುಂದೆ ಬಂದು ಹೋಗುತ್ತವೆ, ಒಂದಿಷ್ಟು ಉತ್ತರಗಳು ಹುಟ್ಟುಹುಟ್ಟುತ್ತಲೇ ಸಾಯುತ್ತವೆ, ಮತ್ತೊಂದಿಷ್ಟು ಬಹಳ ಸುಲಭ ಉತ್ತರಗಳಾಗಿ ಕಂಡುಬಂದು ದೇಶವನ್ನು ಆಳುವ ಅತಿರಥ-ಮಹಾರಥರಿಗೆ ಗೊತ್ತಿಲ್ಲವೇನು ಎಂದು ಅನುಮಾನ ಹುಟ್ಟುತ್ತದೆ. ಜೊತೆಯಲ್ಲಿ ಇಲ್ಲಿನ ಯಾವುದೇ ಪಕ್ಷ ಅಥವಾ ವ್ಯಕ್ತಿಗಳನ್ನು ಅನುಮೋದಿಸದ ನಾನು ಕೊಡುವ ಉತ್ತರ ಬಹಳಷ್ಟು ಜನರಿಗೆ ಪ್ರಿಯವಾಗಲಾರದು.

ಅಮೇರಿಕದವರು ಇರಾಕ್ ದೇಶವನ್ನು ಆಕ್ರಮಣ ಮಾಡಿದ್ದು ಯಾವುದೇ ಕಾರಣಕ್ಕಾಗಿಯಾದರೂ ಇರಲಿ ಅದನ್ನು ಕೆದಕಿ ನೋಡುವುದನ್ನು ಇತಿಹಾಸಕಾರರಿಗೆ ಬಿಟ್ಟರೆ, ನಾನು ಮುಂದೆ ಆಗಿ ಹೋಗಬಹುದಾದ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಈ ಕೆಳಗಿನ ಸಮೀಕರಣವನ್ನು ಪ್ರಸ್ತುತಪಡಿಸಿದರೆ ಹೇಗೆ ಎಂದುಕೊಳ್ಳುತ್ತೇನೆ:
- ಅಮೇರಿಕನ್ ಹಾಗೂ ಅಂತಾರಾಷ್ಟ್ರೀಯ ಪಡೆಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚು ಮಾಡುವುದು. ಈಗ ಸುಮಾರು ೧೨೦,೦೦೦ ರಷ್ಟು ಇರುವ ಅಮೇರಿಕನ್ ಸೈನಿಕರನ್ನು ಕೊನೇ ಪಕ್ಷ ಏನಿಲ್ಲವೆಂದರೂ ೨೦೦,೦೦೦ ರಷ್ಟು ಏರಿಸುವುದು ಜೊತೆಯಲ್ಲಿ ಶಾಂತಿ ಸಾರುವ ಪ್ರಪಂಚದ ಎಲ್ಲ ದೇಶಗಳಿಂದಲೂ ಸೈನಿಕರ ತುಕಡಿಯನ್ನು ಕಳಿಸುವಂತೆ ಮನವಿ ಮಾಡಿಕೊಳ್ಳುವುದು.
- ಇರಾಕ್‌ನಲ್ಲಿ ಈಗಾಗಲೇ ಅಧಿಕಾರಕ್ಕಿರುವ ಸರ್ಕಾರವನ್ನು ಗೌರವಿಸಿ, ಸ್ಥಳೀಯ ಪೋಲೀಸ್ ಹಾಗೂ ಸೈನಿಕ ಪಡೆಗಳನ್ನು ಕೇವಲ್ ಆಂತರಿಕ ಭದ್ರತೆಗಳನ್ನು ನೋಡಿಕೊಳ್ಳುವಂತೆ ಅನುಕೂಲಮಾಡಿಕೊಡುವುದು. ಇರಾಕೀ ಪೋಲೀಸ್ ಹಾಗೂ ಸೈನಿಕರಲ್ಲಿ ನಡೆಯುವ ಭ್ರಷ್ಟಾಚಾರ ಅಲ್ಲಿಯ ಭಯೋತ್ಪಾದಕರನ್ನು ಪೋಷಿಸುತ್ತಿರುವುದು ನಿಜ, ಆದ್ದರಿಂದ ಮುಖ್ಯವಾದ ಎಲ್ಲ ರಕ್ಷಣಾ ವ್ಯವಸ್ಥೆಗಳನ್ನು ಅಂತಾರಾಷ್ಟ್ರೀಯ ಮಿಲಿಟರಿ ವ್ಯವಸ್ಥೆಗೆ ಹಸ್ತಾಂತರ ಮಾಡುವುದು.
- ಹಾಡುಹಗಲೇ, ಊರು ಅಥವಾ ರಸ್ತೆಗಳ ಮಧ್ಯ ಸುಳ್ಳು ಚೆಕ್‌ಪಾಯಿಂಟುಗಳನ್ನು ಸೃಷ್ಟಿಸಿ ಜನರನ್ನು ಹೀನಾಯಮಾನವಾಗಿ ಹಿಂಸಿಸಿ ಕೊಲೆಗಯ್ಯುತ್ತಿರುವ ಕಟುಕರನ್ನು ಅವರಷ್ಟೇ ನಿರ್ದಾಕ್ಷಿಣ್ಯವಾಗಿ ಹೊಸಕಿಹಾಕುವುದು. ಎಕ್ಸಿಕ್ಯೂಷನ್ ಶೈಲಿಯಲ್ಲಿ ಅಮಾಯಕರನ್ನು ಕೇವಲ ಶಿಯಾ-ಸುನ್ನಿ ಎಂಬ ಬೇಧಭಾವದಿಂದ ಕೊಲೆಗಯ್ಯುತ್ತಿರುವವರನ್ನು ಹೊಸಕಿ ಹಾಕುವುದಲಾದರೂ ಮುಂದೆ ಜನರು ಹಣಕ್ಕೋಸ್ಕರ ಅಥವಾ ಮತ್ಯಾವುದೇ ಕಾರಣಗಳಿಗೋಸ್ಕರ ಈ ಕೆಟ್ಟ ಹಾದಿಯನ್ನು ಹತ್ತುವುದು ಕಡಿಮೆಯಾಗಬಹುದು.
- ಹೆಚ್ಚಿದ ಅಂತಾರಾಷ್ಟ್ರೀಯ ಪಡೆಗಳು ಕೇವಲ ನಾಡನ್ನು ಕಾಯ್ದುಕೊಂಡರೆ ಸಮಸ್ಯೆ ಬಗೆ ಹರಿಯೋದಿಲ್ಲ, ಇರಾಕ್ ದೇಶದ ಗಡಿಯನ್ನು ಕೂಡ ಅಷ್ಟೇ ಜಾಗರೂಕರಾಗಿ ಕಾಯ್ದುಕೊಳ್ಳಬೇಕು. ಇರಾಕಿನವರಿಗೆ ಎಲ್ಲಿಂದ ಆಯುಧಗಳ ಸಪ್ಲೈ ಬರುತ್ತದೆಯೋ ಅಂತಹ ಮೂಲಗಳನ್ನು ಹುಡುಕಿ ಹೊಸಕಿ ಹಾಕಬೇಕು. ಹೆಚ್ಚಿನ ಮೂಲಗಳು ಇರಾನ್ ಅಥವಾ ಜೋರ್ಡಾನ್ ದೇಶಗಳನ್ನು ಸೂಚಿಸಿದ್ದೇ ಆದಾಗ ಅಂತಾರಾಷ್ಟ್ರೀಯ ಒತ್ತಡವನ್ನು ಈ ದೇಶಗಳ ಮೇಲೆ ಹೇರಿದಾಗ ಸಮಸ್ಯೆ ಸ್ವಲ್ಪವಾದರೂ ಕಡಿಮೆಯಾದೀತು.
- ಈಗಾಗಲೇ ಅದೋಗತಿಯನ್ನು ತಲುಪಿದ ಇರಾಕ್ ದೇಶದ ನಗರ ಪಟ್ಟಣಗಳಲ್ಲಿ ನಿರಂತರವಾಗಿ ರಾತ್ರಿ ಹಾಗೂ ಹೆಚ್ಚಿನ ಭಾಗ ಹಗಲು ಕರ್ಪ್ಯೂವನ್ನು ಮುಂದುವರಿಸುವುದು. ಎಲ್ಲಿಯವರೆಗೆ ಜನರ ಸಾವುನೋವುಗಳು ಕಡಿಮೆಯಾಗೋದಿಲ್ಲವೋ ಅಲ್ಲಿಯವರೆಗೆ ದಿನದಲ್ಲಿ ಕೇವಲ ಕೆಲವೇ ಘಂಟೆಗಳ ಮಟ್ಟಿಗೆ ಜನರ ಓಡಾಟವನ್ನು ನಡೆಯಲು ಬಿಟ್ಟು ಉಳಿದೆಲ್ಲ ಸಮಯದಲ್ಲಿ ಅಂತಾರಾಷ್ಟ್ರೀಯ ಪಡೆಗಳು ನಗರ ಪಟ್ಟಣಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯ್ದುಕೊಳ್ಳುವಂತೆ ಮಾಡುವುದು. ಇದರಿಂದಾಗಿ ಅಳಿದುಳಿದ ಜನರಿಗೆ ಸಾಕಷ್ಟು ತೊಂದರೆಯಾಗೋದಂತೂ ನಿಜ, ಆದರೆ ಅವ್ಯಾಹತವಾಗಿ ಬೆಳೆಯುತ್ತಿರುವ ಹಿಂಸೆಯನ್ನು ತಡೆಯಲು ಬೇರೆ ಯಾವ ದಾರಿಯೇ ಇಲ್ಲ ಎನ್ನುವಂತಾಗಿದೆ.
- ಇರಾಕ್ ನಾಗರಿಕರಿಗೆ ಈಗಾಗಲೇ ಸಾಕಷ್ಟು ತೊಂದರೆಗಳು ಒಂದರ ಹಿಂದೆ ಒಂದಾಗಿ ಬಂದಿರೋದರ ಹಿನ್ನೆಲೆಯಲ್ಲಿ ಅವರು ಇಟ್ಟುಕೊಂಡಿರುವ ವಾಹನಗಳ ಉಪಯೋಗವನ್ನು ಮಿತಿಗೊಳಿಸಬೇಕಾಗಿ ಬರಬಹುದು. ಭಯೋತ್ಪಾದಕರನ್ನು ಹತ್ತಿಕ್ಕಲು ಅವರನ್ನು ನಿಯಂತ್ರಿಸಲು ನಗರ ಹಾಗೂ ಪಟ್ಟಣಗಳಲ್ಲಿ ಹಾದು ಹೋಗುವ ಪ್ರತಿಯೊಂದು ವಾಹನವನ್ನೂ ತಪಾಸಣೆಗೊಳಿಸುವುದು. ಈ ಹೆದರಿಕೆಯಿಂದಲಾದರೂ ಜನರು ಆಯುಧಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಿಸುವುದು ತಪ್ಪುತ್ತದೆ. ತಮ್ಮ ಆತ್ಮರಕ್ಷಣೆಗೆಂದು ಒಂದು ರಿವಾಲ್ವರ್ ಅನ್ನು ಇಟ್ಟುಕೊಳ್ಳುವುದು ಬೇರೆ, ನೂರಾರು ಅಮಾಯಕರನ್ನು ಒಂದೇ ನಿಮಿಷದಲ್ಲಿ ಸಾಯಿಸುವ ಎಕೆ ೪೬ ಅನ್ನು ಕಾರಿನಲ್ಲಿ ಇಟ್ಟುಕೊಳ್ಳುವುದು ಬೇರೆ.
- ಅಮೇರಿಕದವರು ತಮ್ಮ ಮಿತಿಯನ್ನು ಒಪ್ಪಿಕೊಂಡು ಹೆಚ್ಚಿದ ಅಂತಾರಾಷ್ಟ್ರೀಯ ಪಡೆಗಳೊಂದಿಗೆ ಸಹಕರಿಸುವುದು ಹಾಗೂ ಬಾಗ್ದಾದ್‌ನಲ್ಲಿ ಇರುವ ಗ್ರೀನ್ ಝೋನ್ ಅನ್ನು ನಿಧಾನವಾಗಿ ವಿಸ್ತರಿಸುವುದು.

ಈ ಮೇಲಿನ ಅಂಶಗಳಲ್ಲಿ ಕೆಲವು ಬಾಲಿಶವಾಗಿ ಕಂಡುಬರಬಹುದು ಅಥವಾ ಪ್ರಾಯೋಗಿಕವಲ್ಲದವುಗಳಾಗಿ ಗೋಚರಿಸಬಹುದು, ಆದರೆ ಇರಾಕ್ ದೇಶದಲ್ಲಿ ಈಗಾಗಲೇ ಸಾಕಷ್ಟು ಅಸಮಾಧಾನಗಳಿವೆ, ಅವುಗಳ ನಡುವೆ ದೇಶದ ಒಳಿತಿಗೋಸ್ಕರ, ಅಳಿದುಳಿದ ನಾಗರಿಕರ ರಕ್ಷಣೆಗೋಸ್ಕರ ಕೆಲವು ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ಕೈಗೊಳ್ಳುವುದು ಅನಿವಾರ್ಯ ಎನ್ನುವಂತಾಗಿರುವುದರಿಂದ ಹೀಗೆ ಬರೆಯಬೇಕಾಯಿತು. ಇರಾಕ್ ದೇಶ ಮೊದಲಿನ ಹಾಗಿಲ್ಲ, ಈಗಾಗಲೇ ಚೂರು-ಚೂರಾಗಿ ಹೋಗಿದೆ. ಜನರು ತಮ್ಮ ತಮ್ಮ ವ್ಯವಸ್ಥೆಯನ್ನು ತಾವೇ ನೋಡಿಕೊಂಡು ಲೋಕಲ್ ಮಿಲಿಷಿಯಾಗಳಿಗೆ ತಮ್ಮ ಬೆಂಬಲವನ್ನು ಸೂಚಿಸಿಕೊಂಡು ತಮ್ಮ ರಕ್ಷಣೆಯನ್ನು ಕಾಯ್ದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಉತ್ತರದಿಂದ ದಕ್ಷಿಣದವರೆಗೆ ಬೇಕಾದಷ್ಟು ರೀತಿಯಲ್ಲಿ ದೇಶ ಹಾಗೂ ಜನರು ಇಬ್ಬಾಗವಾಗಿ ಹೋಗಿದ್ದಾರೆ. ಇರಾಕೀ ಸರ್ಕಾರದ ಬಗ್ಗೆ, ಇಂತಹ ಸರ್ಕಾರ ತಮ್ಮನ್ನು ಕಾಯುವ ಬಗ್ಗೆ ಯಾರಿಗೂ ನಂಬಿಕೆ ಎನ್ನುವುದೇನೂ ಉಳಿದಿಲ್ಲ. ಹೀಗಿರುವಲ್ಲಿ ಅಮೇರಿಕದ ಪಡೆಗಳು ಹಿಂತಿರುಗೇನಾದರೂ ಹೋದರೆ ಇರಾಕ್‌ನಂತಹ ದೇಶ ನಾಗರಿಕತೆಯಲ್ಲಿ ಎಷ್ಟೋ ಶತಮಾನಗಳ ಕಾಲ ಹಿಂದುಳಿದು ಬಿಡುತ್ತದೆ, ನಾಗರಿಕತೆಯನ್ನು ನಾಶಮಾಡುವ ಎಲ್ಲ ಅಮಾನವೀಯ ಶಕ್ತಿಗಳು ತಾಂಡವವಾಡಲು ಆರಂಭಿಸುತ್ತವೆ. ಈ ಹಿನ್ನೆಲೆಯಲ್ಲೇ ಪ್ರಪಂಚದ ಎಲ್ಲ ದೇಶಗಳು ಇರಾಕ್ ಪರವಾಗಿ ನಿಂತು ದುಡಿಯುವ ಅಗತ್ಯವಿದೆ. ಅಕಸ್ಮಾತ್ ಹಾಗೇನಾದರೂ ಆಗದೇ ಹೋದಲ್ಲಿ ಇತಿಹಾಸ ಒಂದು ನಾಗರಿಕತೆಯನ್ನು ಸಂಪೂರ್ಣವಾಗಿ ನಾಶಮಾಡಿದ ಹೊಣೆ ನಮ್ಮೆಲ್ಲರ ಮೇಲೆ ನಿರ್ಧಾಕ್ಷಿಣ್ಯವಾಗಿ ಹೇರುವ ಕಾಲ ದೂರವೇನೂ ಇಲ್ಲ.

ತಪ್ಪುಗಳಾಗೋದು ಸಹಜ, ಅದನ್ನು ತಿದ್ದಿಕೊಂಡು ಮುಂದೆ ನಡೆಯೋದು ಮುಖ್ಯ. ಅಮೇರಿಕದವರು ತಾವು ಮಾಡಿದ ತಪ್ಪಿಗೆ ದಂಡ ತೆರುವುದು ಇದ್ದೇ ಇದೆ, ಇರಾಕ್ ಸಂಪೂರ್ಣ ನಿಯಂತ್ರಣಕ್ಕೆ ಬಂದ ಮೇಲೆ ವಿಶ್ವ ನ್ಯಾಯಾಂಗ ಈ ಕರ್ಮಕಾಂಡವನ್ನು ಸೃಷ್ಟಿಸಿದವರ ಹಿಂದೆ ಬೀಳಬೇಕು, ಅಂತಹವರನ್ನು ಕಟಕಟೆಗೆ ಹತ್ತಿಸಬೇಕು. ಆದರೆ ಈಗ ಮುಖ್ಯವಾಗಿ ಆಗಬೇಕಾಗಿರೋದು ಒಂದು ನಾಗರಿಕತೆಯನ್ನು ಉಳಿಸುವ ಬೆಳೆಸುವ ಪ್ರಾಮಾಣಿಕ ಪ್ರಯತ್ನ, ಅದಿಲ್ಲವೆಂದಾರೆ ಒಂದು ತಪ್ಪಿನ ಹಿಂದೆ ಮತ್ತೊಂದು ತಪ್ಪಾಗುವ ದಿನಗಳು ದೂರವೇನೂ ಇಲ್ಲ, ಹಾಗಾಗದಿರಲಿ.

Sunday, November 26, 2006

ಮೋಕ್ಷ ಸಿಗಲು ಮಿಲಿಯನ್ ವರ್ಷಗಳು ಬೇಕಂತೆ

ಇಬ್ಬರು ಋಷಿಗಳು ತಪ್ಪಸ್ಸು ಮಾಡ್ತಾ ಇದ್ದಿರಬೇಕಾದ್ರೆ ನಾರದ ಮಹರ್ಷಿಗಳು ಎದುರಾದರಂತೆ, ಈ ಇಬ್ಬರೂ ಋಷಿಗಳು ದೇವರ್ಷಿಗಳೇ ನಿಮ್ಮ ದಿವ್ಯಜ್ಞಾನದಿಂದ ನಮ್ಮಿಬ್ಬರಲ್ಲಿ ಯಾರಿಗೆ ಮೊದಲು ಮೋಕ್ಷ ಸಿಗುತ್ತದೆ, ಯಾವಾಗ ಸಿಗುತ್ತದೆ ತಿಳಿಸಬಲ್ಲಿರಾ ಎಂದು ಕೇಳಿದರಂತೆ, ಇವರ ಪ್ರಶ್ನೆಗೆ ಉತ್ತರಕೊಡುತ್ತಾ ನಾರದರು ನಿಮ್ಮಿಬ್ಬರಿಗೂ ಈ ಮರದಲ್ಲಿ ಎಷ್ಟು ಎಲೆಗಳು ಇವೆಯೋ ಅಷ್ಟು ಜನ್ಮಗಳು ಕಳೆದ ನಂತರ ಮೋಕ್ಷ ಸಿಗುತ್ತದೆ ಎನ್ನಲಾಗಿ ಒಬ್ಬ ಋಷಿ ನಾರದರ ಮಾತನ್ನು ಕೇಳಿ ಕುಣಿದು ಕುಪ್ಪಳಿಸಿದರೆ ಮತ್ತೊಬ್ಬ ಋಷಿ ಪೆಚ್ಚು ಮೋರೆ ಹಾಕಿಕೊಂಡು ನಿಂತಿದ್ದರಂತೆ. ಆ ಮರದಲ್ಲಿರುವ ಎಲೆಗಳು ಫೈನೈಟ್ ಆದದ್ದರಿಂದ ಒಬ್ಬ ಋಷಿಗೆ ಕೊನೆಗೆ ಅಷ್ಟು ಜನ್ಮಗಳು ಕಳೆದ ಮೇಲಾದರೂ ಮೋಕ್ಷ ಸಿಗುತ್ತದೆಯೆಲ್ಲಾ ಎನ್ನುವ ಹರ್ಷವಾದರೆ, ಅಯ್ಯೋ ಅಷ್ಟೊಂದು ಜನ್ಮಗಳನ್ನು ಕಾಯಬೇಕೇ ಎನ್ನುವ ಮತ್ತೊಬ್ಬ ಋಷಿಯ ಕೊರಗು ಎಂತಹವರಿಗೂ ಅರ್ಥವಾದೀತು ಅದೂ ಈ ವಿದ್ಯುನ್ಮಾನ ಯುಗದಲ್ಲಿ!

ಮೋಕ್ಷ ಅಂದ್ರೆ ಹುಡುಗಾಟಿಕೆಯೇ? ಮೋಕ್ಷ ಸಿಕ್ಕಮೇಲೆ ಜನನ-ಮರಣ ಚಕ್ರದಿಂದ ಒಂದು ರೀತಿ ಟ್ಯಾಂಜೆಂಟಿಯಲ್ ಆಗಿ ಬೇರ್ಪಟ್ಟು ಮುಂದೆ ಎಂದೂ ಹುಟ್ಟದ-ಸಾಯದ ಸ್ಥಿತಿಯಲ್ಲವೇ ಅದು? ಅಥವಾ ಮೋಕ್ಷ ಸಿಗುವ ಹೊತ್ತಿಗೆ ಪ್ರಪಂಚದ ಎಲ್ಲ ಜ್ಞಾನಗಳೂ ಕರತಲಾಮಲಕವಾಗಿರಬೇಕು, ಅಥವಾ ಅಷ್ಟೊಂದು ದೊಡ್ಡ ಜಿಜ್ಞಾಸೆ ಇರಬೇಕು ಅಥವಾ ಮೋಕ್ಷ ಸಿಗುವ ಹೊತ್ತಿಗೆ ದಿವ್ಯಜ್ಞಾನವಾಗಿರುತ್ತದೆ...ಎಂದು ಇನ್ನೇನೇನನ್ನೋ ಅಲ್ಲಲ್ಲಿ ಓದಿದ ಮೇಲೆ ಮೋಕ್ಷದ ಬಗ್ಗೆ ಬಹಳ ಕುತೂಹಲ ಹುಟ್ಟಿತು, ಅದೇ ಸಮಯಕ್ಕೆ ಎಲ್ಲವನ್ನೂ ತಿಳಿದುಕೊಳ್ಳುವುದು ಹೇಗೆ ಎಂಬ ವಾಸ್ತವವೂ ಅಂತರಿಕ್ಷದಲ್ಲಿ ಓಲಾಡುತ್ತಿದ್ದ ನನ್ನ ಹುಮ್ಮಸ್ಸನ್ನು ಭೂಮಿಗೆ ತಂದಿಳಿಸಿತು. ನಮ್ಮ ನಡುವಿನಲ್ಲಿ ಒಂದು ಸಣ್ಣ ವಿಷಯವನ್ನು ಕುರಿತು ಆಳವಾಗಿ ಅಧ್ಯಯನ ಮಾಡಿ ಪಿ.ಎಚ್‌ಡಿ. ಪದವಿ ಪಡೆದರೆ ಅಂಥವರನ್ನು 'he knows something about everything, everything about something!' ಉಡಾಫೆ ಮಾಡಿ ರೇಗಿಸುತ್ತಿದ್ದೆವು - ಅದರಲ್ಲಿ ಕೆಲವರು Jack of all, master of something, doctor of nothing ಎಂದೆನಿಸಿಕೊಳ್ಳುವವರ ವಿಶೇಷ ಗುಂಪನ್ನೂ ಕೂಡ ಗುರುತಿಸಿಕೊಂಡಿದ್ದೆವು. ಹೀಗೆ ಅಣುಅಣುವಿನಲ್ಲಿ ಪದವಿ ಪಡೆದು ಅವುಗಳನ್ನು ಹಿಗ್ಗಾಮುಗ್ಗಾ ಅಭ್ಯಾಸ ಮಾಡಿ ಮುಂದೆ ಬಂದವರನ್ನು ಮೋಕ್ಷ ಸಾಧಕರು ಎಂದು ಕರೆಯಬೇಕು ಎನ್ನುವುದು ನನ್ನ ಮನವಿ ಏಕೆಂದರೆ ಏನೇನೆಲ್ಲವನ್ನು ಕಲಿತು ಮುಂದುವರೆಯಬಹುದಾದ ಈ ಬ್ರಹ್ಮಾಂಡದಲ್ಲಿ ಇಂತಹದ್ದನ್ನೇ ಕಲಿಯಬೇಕು ಎಂದುಕೊಂಡು ಅದರಲ್ಲಿ ಏನನ್ನಾದರೂ ಮಾಡಿ ಸಾಧಿಸುವುದು ಅದೇನು ಕಡಿಮೆ ಕೆಲಸವೇ?

ಆದರೆ ಇಲ್ಲೊಂದು ವಿಶೇಷವಿದೆ - ಮೋಕ್ಷ ಸಿಗಲು ಮಿಲಿಯನ್ ಜನ್ಮ ಬೇಕಾದರೂ ಅಂತಹ ಪ್ರತಿಯೊಂದು ಜನ್ಮವನ್ನು ಮಾನವನಾಗೇ ಹುಟ್ಟಿ ಕಳೆಯಬೇಕೆಂದೇನೂ ಇಲ್ಲವಲ್ಲ. ಇವತ್ತಿಟ್ಟ ಸಗಣಿಯ ಪಿಂತೆಯನ್ನು ನಾಳೆ ಎತ್ತಿ ನೋಡಿದರೆ ಮಿಲಿಯನ್ ಗಟ್ಟಲೆ ಗೆದ್ದಲು ಹುಳುಗಳು ಅದರಲ್ಲಿ ಕಾಣ ಸಿಗೋದಿಲ್ಲವೇ, ಇಂದು ಬಿದ್ದ ಆಲಿಕಲ್ಲಿನ ಮಳೆಯ ಮರುದಿನ ಹಲವಾರು ನಾಯಿಕೊಡೆಗಳು ತಲೆ ಎತ್ತಿ ಮತ್ತೆ ಕಣ್ಮರೆ ಆಗುವುದಿಲ್ಲವೇ? ಎಷ್ಟೋ ಜೀವಜಂತುಗಳು ಈ ಬ್ರಹ್ಮಾಂಡದಲ್ಲಿ ಕೇವಲ ಕೆಲವು ಘಂಟೆ-ನಿಮಿಷಗಳಲ್ಲಿ ಹುಟ್ಟಿ ತಮ್ಮ ಆಯಸ್ಸನ್ನು ಕಳೆದು ಮತ್ತೊಂದು ಜನ್ಮವನ್ನು ಎತ್ತಿ ಅವತರಿಸುವುದಿಲ್ಲವೇ? ಕೇವಲ ನಿಮಿಷಗಳಲ್ಲಿ ಮುಗಿಯಬಹುದಾದ ಇಂತಹ ಅದೆಷ್ಟು ಜನ್ಮಗಳು ಒಂದು ರೀತಿ ಬೋನಸ್ ರೀತಿಯಲ್ಲಿ ಮೋಕ್ಷದ ಹಾದಿಯಲ್ಲಿ ನಮಗೆ ಸಿಗುತ್ತದೆಯೋ ಯಾರಿಗೆ ಗೊತ್ತು?

ನನ್ನ್ ಕೇಳಿದ್ರೆ ಈ ವಿಶ್ವದಲ್ಲಿ ಆತ್ಮಗಳು, ಜನ್ಮಗಳು ಇವೆಲ್ಲ ಫೈನೈಟ್ ಏಕೆಂದ್ರೆ ಪಿರಿಯಾಡಿಕ್ ಟೇಬಲ್ಲಿನಲ್ಲಿರೋ ಅಷ್ಟೇ ಮೂಲವಸ್ತುಗಳಿಂದ (elements) ಮಾಡಿದ ಈ ಶರೀರ ಹೇಗೆ ತಾನು ಒಂದು ರೂಪದಿಂದ ಮತ್ತೊಂದು ರೂಪವನ್ನು ಪಡೆಯುತ್ತದೆಯೋ - ವಯಸ್ಸಾಗಿ ಹುಟ್ಟುವ ನೆರೆಕೂದಲು, ಮುಖದ ಮೇಲೆ ಹುಟ್ಟುವ ನಿರಿಗೆಗಳ ಬಗ್ಗೆ ನಾನು ಹೇಳುತ್ತಿಲ್ಲ - ಹಾಗೇ ಎಲ್ಲೋ ಒಂದು ಆತ್ಮ ಹಾಗೂ ಜನ್ಮದ ಬ್ಯ್ಂಕ್ ಇದೆ, ಅದರ ಅಪಾರವಾದ ಖಜಾನೆಯಿಂದ ಆಗಾಗ್ಗೆ ಒಂದಲ್ಲ ಒಂದು ಹೊಸ ಪ್ರಾಡಕ್ಟ್ ಹುಟ್ಟಿ ಹೊರಬರುತ್ತಲೇ ಇರುತ್ತದೆ. ಈ ಪ್ರಾಡಕ್ಟ್‌ಗಳ ಚಲನವಲನವನ್ನು ಅದ್ಯಾವ ಪ್ರಾಜೆಕ್ಟ್ ಮ್ಯಾನೇಜರ್ ಟ್ರ್ಯಾಕ್ ಮಾಡುತ್ತಾನೋ ಬಿಡುತ್ತಾನೋ, ಅವನ ಬಳಿ ಎಂಥೆಂಥಾ ಡೇಟಾಬೇಸುಗಳಿವೆಯೋ, ಅವನ ಲೆಕ್ಕ ಯಾಅತ್ತೂ ತಪ್ಪಿದಂತಿಲ್ಲ.

ನಿಮಗೆ ಮೋಕ್ಷ ಸಿಗಬೇಕು ಎನ್ನೋದಾದರೆ ನೀವು ಹಿಡಿದ ಕೆಲಸವನ್ನು ಮಾಡಬೇಕು, ಹೀಗೆ ಹಿಡಿದ ಪ್ರತಿಯೊಂದು ಕೆಲಸವನ್ನು ಚಾಚೂತಪ್ಪದೆ ಮಾಡಿ ಮುಗಿಸಿದರೆಂದಾರೆ ನಿಮಗೆ ಮೋಕ್ಷ ಕಟ್ಟಿಟ್ಟ ಬುತ್ತಿ!

Wednesday, November 22, 2006

ಕಣ್ಣಿನ ಭಾಷೆಗೆ ಪದಗಳು ಏಕೆ/ಬೇಕೆ?

ಒರಟರಲ್ಲಿ ಒರಟ ಊರು ಎಂದರೆ ನಮ್ಮೂರು, ಏಕೆಂದರೆ ಅಲ್ಲಿ 'ಥ್ಯಾಂಕ್ಯೂ' ಎನ್ನೋ ಪದಬಳಸದೇ ದಿನವನ್ನೇಕೆ ವರ್ಷಗಳನ್ನೇ ಕಳೆಯಬಹುದು. ಆದರೂ ತಮ್ಮ ಊರು ದೇಶಗಳಲ್ಲೇ ಪರದೇಶಿಗಳಾದ ನನ್ನಂತಹವರು ಕಲಿತ ಯಾವುದೋ ಒಂದಿಷ್ಟು ಪದಗಳನ್ನು ಹೊತ್ತು ತಂದು ಸಾಕಿಕೊಂಡಿದ್ದಿದೆ, ಆದರೂ ನಾನು 'ಥ್ಯಾಂಕ್ಯೂ' ಎಂದಾಗಲೆಲ್ಲ ಹೆಚ್ಚು ಎಂದರೆ 'ನೋ ಮೆನ್ಷನ್' ಬರುತ್ತದೆಯೇ ಹೊರತು, 'ಯು ಆರ್ ವೆಲ್‌ಕಂ' ಅನ್ನೋದು ಉತ್ತರವಾಗೋದಕ್ಕೆ ಸಾಧ್ಯವೇ ಇಲ್ಲ! ನನ್ನ 'ಥ್ಯಾಂಕ್ಯೂ'ಗಳನ್ನು ತಮಗೆ ಗೊತ್ತಿರುವ ಯಾವುದೇ ಪರಿಭಾಷೆಯಲ್ಲಿ ಅಳತೆ ಮಾಡಲಾಗದಿರುವ ಸರಳ ಹಾಗೂ ಮುಗ್ಧರ ಮುಂದೆ ಬಾಯಿಬಿಟ್ಟು ಆಡುವ ಮಾತುಗಳಿಗಿಂತ ಕಣ್ಣಿನ ಭಾಷೆಗೇ ಹೆಚ್ಚು ಪ್ರಾಧಾನ್ಯತೆ, ಇವತ್ತಿಗೂ ಅದು ನಮಗೆ ಚೆನ್ನಾಗಿ ಗೊತ್ತು.

'ತಾಯೀ, ಮೇಷ್ಟ್ರು ಮಗಾ ಬಂದಾರೆ, ಒಂದಿಷ್ಟು ಹಣ್ಣ್ ಕೊಟ್ಟ್ ಕಳುಸು...' ಎನ್ನೋ ಮಾತಿನಲ್ಲಿ ಒಬ್ಬ ಬಡ ರೈತನ ಔದಾರ್ಯತೆ ತುಂಬಿ ತುಳುಕುತ್ತದೆ, ಅಂಥೋರ ಮುಂದೆ ನಾನು ಹೇಗಾದರೂ ಹಲ್ಲು ಗಿಂಜಿ ಥ್ಯಾಂಕ್ಯೂ ಎನ್ನಲಿ? ಹಾಗೇ ಬುಟ್ಟಿಯಲ್ಲಿ ತುಂಬಿಕೊಟ್ಟ ಹಣ್ಣುಗಳಾಗಲೀ, 'ನಿಮಗೆ ಎಷ್ಟು ಬೇಕೋ ಅಷ್ಟು ಅನಾನಸ್ ತಗೊಳ್ರೀ' ಎನ್ನೋ ದೊಡ್ಡತನದ ಮುಂದೆ ನನಗೆ ಗೊತ್ತಿರುವ ನಾಗರಿಕ ಪ್ರಪಂಚದ ಮಾತುಗಳೆಲ್ಲವೂ ಕಟ್ಟಿಹೋಗುತ್ತವೆ. ನಾನು ಇವತ್ತೂ ನಿನ್ನೆ ವರ್ಷಗಳಿಗೊಮ್ಮೆ ಮುಖ ತೋರಿಸುವ ಪರದೇಶಿಯಾದದ್ದಕ್ಕೆ ಸಿಕ್ಕ ಬಳುವಳಿಯ ಬಗ್ಗೆ ಹೇಳುತ್ತಿಲ್ಲ, ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ನನ್ನ ಹೈ ಸ್ಕೂಲಿನ ದಿನಗಳಲ್ಲಿಯೂ ಇವೇ ಮಾತುಗಳು ಸತ್ಯವಾಗಿದ್ದವು. ನಮ್ಮೂರಿನ ಓದುಬಾರದ ರೈತರು ತಾವು ಬೆಳೆದ ಬೆಳೆ, ತಮ್ಮಲ್ಲಿ ದೊರೆಯುವ ಹಣ್ಣು ಹಂಪಲುಗಳು, ತಿಂಡಿ ತಿನಿಸುಗಳ ಬಗ್ಗೆ ಎಂದಿಗೂ ಚೌಕಾಸಿ ಮಾಡಿದ್ದನ್ನು ನಾನು ಕಾಣೆ.

ಹಾಗೇ ಊರೂರು ತಿರುಗುತ್ತಾ, ಅಲ್ಲಿಲ್ಲಿ ಹೊರಗಿನ ಪರಿಸರವನ್ನು ನೋಡಿ ಕಲಿಯುತ್ತಾ ನಿಧಾನವಾಗಿ 'ಥ್ಯಾಂಕ್ಯೂ-ವೆಲ್‌ಕಮ್' ನನ್ನ ಮನೆಯ ಮಾತಾಗತೊಡಗಿದವು. ಕಲಿತದ್ದು ತುಸು ಹೆಚ್ಚೇ ಎನ್ನುವಂತೆ ನನಗೆ ಮನೆಯಲ್ಲಿ ಊಟಬಡಿಸಿದವರಿಗೂ ದೇವಸ್ಥಾನದಲ್ಲಿ ತೀರ್ಥ ಕೊಟ್ಟವರಿಗೂ ನಾನು 'ಥ್ಯಾಂಕ್ಯೂ' ಎಂದು ಬಹಿರಂಗವಾಗಿ ಹೇಳಿ ನಾಲಿಗೆಯ ತುದಿ ಸುಟ್ಟವರಂತೆ ಮುಖ ಮಾಡಿಕೊಂಡು ಮನದಲ್ಲೇ ಹಳಿದುಕೊಂಡ ದಿನಗಳು ಬಹಳ ಹಳೆಯವೇನಲ್ಲ. ಇವತ್ತಿಗೂ ಈ ಕಡೆ ಅಮೇರಿಕನ್ ಶೈಲಿಯಲ್ಲಿ 'ಥ್ಯಾಂಕ್ಯೂ'ವನ್ನು ಬಳಸಲು ಬರದೇ, ಅತ್ತ ನಮ್ಮದೇ ಶೈಲಿಯಲ್ಲಿ ವ್ಯಕ್ತಪಡಿಸುವುದನ್ನೂ ಸರಿಯಾಗಿ ಅಭಿವ್ಯಕ್ತಗೊಳಿಸದೇ ಎಷ್ಟೋ ಸಾರಿ ತೊಳಲಾಡಿದ್ದೇನೆ. ನನ್ನ ಇಂಗ್ಲೀಷ್ ಎಷ್ಟು ಬೇಕಾದರೂ ಸುಧಾರಿಸಲಿ, ಸುಧಾರಿಸುತ್ತಲೇ ಇರಲಿ, ನಾನು ಬಳಸುವ 'ಥ್ಯಾಂಕ್ಯೂ-ವೆಲ್‌ಕಮ್-ನೋ ಥ್ಯಾಂಕ್ಸ್' ಮುಂತಾದ ಪದಗಳಿಗೆ ಜೀವ ಮೂಡಿಸುವ ಕಲೆ ನನ್ನಲ್ಲಿನ್ನೂ ಮೈಗೂಡಿಲ್ಲವೆಂದೇ ಹೇಳಬೇಕು.

ಮಾನವ ಸಹಜವಾದ ಪ್ರಕ್ರಿಯೆಗಳಲ್ಲಿ ನಾವು ಕೃತಜ್ಞತೆಯನ್ನು ತೋರಿಸುವುದೂ ನಮ್ಮ ಸಂವಹನದ ಒಂದು ಮುಖ್ಯವಾದ ಅಂಗ. ಅದನ್ನು ಬೇರೆಬೇರೆ ಪರಿಸರ, ಹಿನ್ನೆಲೆ ಹಾಗೂ ಸಂಸ್ಕೃತಿಗಳಲ್ಲಿ ರೂಢಿಯಲ್ಲಿ ಬೆಳೆಸಿಕೊಳ್ಳುತ್ತೇವೆ. ಹಾಗಿದ್ದಾಗ ಉತ್ತರದ ಆಚಾರ-ವಿಚಾರಗಳು ದಕ್ಷಿಣದವರಿಗಿಂತಲೂ, ಪೂರ್ವದ ವೈವಿಧ್ಯತೆಗಳು ಪಶ್ಚಿಮದವರಿಗಿಂತಲೂ ವ್ಯತ್ಯಾಸವಾಗಿರುತ್ತವೆ ಎಂದರೆ ಅದೊಂದು ಸಹಜವಾದ ಅಂಶ. ಸರಿ, ನನಗೆ ಇಲ್ಲಿ ಒಪ್ಪಿಗೆಯಾಗುವ ನಡವಳಿಕೆಗಳನ್ನು ನಾನು ಮತ್ತೊಂದು ಪರಿಸರದಲ್ಲಿ ಬಲವಂತವಾಗೇಕೆ ಹೇರಬೇಕು ಹಾಗೂ ಅಲ್ಲಿನವರಿಂದ ಇಲ್ಲಿ ದೊರಕಬಹುದಾದ ಪ್ರತಿಕ್ರಿಯೆಯನ್ನೇಕೆ ನಿರೀಕ್ಷಿಸಬೇಕು? ನಾನು ಹೋದಲ್ಲಿ ಬಂದಲ್ಲಿ ನನ್ನ ದೇಶೀಯ (native) ಪರಿಸರವನ್ನು ತೆಗೆದುಕೊಂಡು ಹೋಗೋದೇನೋ ನಿಜ, ಆದರೆ ನನ್ನ ಪರಿಧಿಯಿಂದಾಚೆಗಿರುವ ದೊಡ್ಡದಾದ ಸಮೂಹ ಅಳವಡಿಸಿಕೊಂಡಿರುವ ನಡವಳಿಕೆಗಳಲ್ಲಿ ನನ್ನನ್ನು ನಾನು ಕಂಡುಕೊಳ್ಳಬೇಕೇ ವಿನಾ ನನ್ನ ಹಾಗೆ ಅವರಿರಲಿ ಎನ್ನಲಾದೀತೇ?

ಭಾರತದಲ್ಲಿ, ಇನ್ನೂ ಸರಿಯಾಗಿ ಹೇಳಬೇಕೆಂದರೆ ನಮ್ಮೂರುಗಳಲ್ಲಿ ನಾವು ಯಾರೂ ನಿಶ್ಚಿತವಾಗಿ (explicit) 'ಧನ್ಯವಾದ'ಗಳನ್ನು ಅರ್ಪಿಸೋದಿಲ್ಲ. 'ಬಹಳ ಧನ್ಯವಾದಗಳು...' ಎನ್ನೋ ಮಾತು ನನಗೆ ಸಹಜವೆನಿಸೋದಿಲ್ಲ, ಅದರ ಬದಲಿಗೆ ಒಂದು ತುಂಬಿದ ನೋಟ ಹಲವಾರು ಪದಗಳನ್ನು ಅವ್ಯಕ್ತವಾಗಿ (implicit) ಹೊರಹಾಕಬಲ್ಲವು - ಅದು ಒಬ್ಬ ಓದು ಬಾರದ ರೈತನ ನೋಟವಿರಬಹುದು, ಶಾಲಾ ಬಾಲಕನದ್ದಿರಬಹುದು, ಅಥವಾ ಸರ್ಕಾರಿ ಅಧಿಕಾರಿಯದ್ದಿರಬಹುದು. ಪದಗಳ ದಾಕ್ಷಿಣ್ಯದಲ್ಲಿ ಬಿದ್ದು ಒದ್ದಾಡುವ ಭಾಷೆಯಲ್ಲಿ ನಾವು ಅಂದುಕೊಂಡಿದ್ದನ್ನೆಲ್ಲಾ ವ್ಯಕ್ತಗೊಳಿಸಲು ಸಾಧ್ಯವಿಲ್ಲವೆನ್ನುವುದು ಈಗಾಗಲೇ ಎಲ್ಲರಿಗೂ ಗೊತ್ತಿದೆ ಎಂದುಕೊಂಡರೆ, ಪದಗಳನ್ನು (ಪದಾತೀತ) ಮೀರಿದ ಸಂವಹನದಲ್ಲಿ ನಮಗೇಕೆ ಅಷ್ಟೊಂದು ನಂಬಿಕೆ ಇಲ್ಲವೋ, ಅಥವಾ ಅಂತಹ ಸಂವಹನಗಳು ಬೆಳೆಯುವುದು, ಉಳಿಯುವುದು ನಮಗ್ಯಾರಿಗೂ ಬೇಕಾಗಿಲ್ಲವೋ, ಅಥವಾ ಮಾತಿನಲ್ಲಿ ಹೇಳಿದ್ದೇ ದೊಡ್ಡದು ಎನ್ನುವ ಹುಂಬ ನಂಬಿಕೆಯೋ, ಇನ್ನೇನು ಕಾರಣವೋ? ಸರಿ, ಒಬ್ಬರನ್ನೊಬ್ಬರು ನೋಡಿಯೇನೋ ಕಣ್ಣ ಭಾಷೆಯಲ್ಲಿ ಪ್ರತಿಕ್ರಿಯೆ ತೋರಿಸಿಕೊಳ್ಳಬಹುದು, ದೂರದೂರಿನಲ್ಲಿದ್ದವರಿಗೆ ನಾವು ಕೃತಜ್ಞತೆಗಳನ್ನು ಹೇಗೆ ಹೇಳಬಲ್ಲೆವು? ನಮ್ಮೂರಿನಲ್ಲಿನ್ನೂ ಜನಗಳು ಪತ್ರ ಬರೆಯುತ್ತಾರೆ, ಪತ್ರಗಳ ಜೊತೆಗೆ ಉಡುಗೊರೆಗಳ ವಿನಿಮಯ ನಡೆಯುತ್ತದೆ - ಹೀಗೆ ಕೊಟ್ಟುತೆಗೆದುಕೊಳ್ಳುವ ಪ್ರಕ್ರಿಯೆ 'ಧನ್ಯವಾದ'ದ ಕುರುಹಾಗಿ ಬೆಳೆಯುತ್ತದೆಯೇ ವಿನಾ 'ಥ್ಯಾಂಕ್ಯೂ' ಎನ್ನುವ ಪದದ ಬಳಕೆ ಎಲ್ಲೂ ಆಗೋದಿಲ್ಲ. ಹೆಚ್ಚು ಎಂದರೆ, ಉಪಕಾರ ಸ್ಮರಣೆಯ ಅಂಗವಾಗಿ ಎದುರುಗಿದ್ದವರ ಎರಡೂ ಕೈಗಳನ್ನು ಹಿಡಿದು 'ನಿಮ್ಮ ಉಪಕಾರವನ್ನು ಹೇಗೆ ತೀರಿಸಬೇಕೋ ಗೊತ್ತಿಲ್ಲ', ಅಥವಾ 'ನಿಮಗೆ ನಾವೆಂದೂ ಅಬಾರಿ' ಎಂದರೆ ಆಗಿಹೋಯಿತು. ಈ ಉಪಕಾರವನ್ನು ಋಣ ಎಂದುಕೊಂಡರಂತೂ ಮುಗಿದೇ ಹೋಯಿತು, ಅದು ಜನ್ಮಜನ್ಮಕ್ಕೂ ಅಂಟಿಕೊಂಡು ಬರುವಂತಾಗುತ್ತದೆ, ಇಂಥ ಸಂದರ್ಭಗಳಲ್ಲೇ 'ಯಾವ ಜನ್ಮದಲ್ಲಿ ನಮಗೆ ನೀವೇನು ಆಗಿದ್ದಿರೋ, ಇಂದು ದೇವರ ಹಾಗೆ ಬಂದು ಸಹಾಯ ಮಾಡಿದಿರಿ, ನಿಮ್ಮ ಋಣವನ್ನು ನಾವು ಹೇಗೆ ತೀರಿಸಬೇಕೋ?' ಎನ್ನುವ ಮಾತುಗಳು ಹೊರಬರಬಲ್ಲವು.

'ಥ್ಯಾಂಕ್ಸ್ ಮಚ್', 'ಥ್ಯಾಂಕ್ಯೂ ಸೋ ಮಚ್', 'ಥ್ಯಾಂಕ್ಯೂ ವೆರಿಮಚ್' ಎನ್ನುವಲ್ಲಿ ನನ್ನ ಮೆಟ್ರಿಕ್ ಮೂಲಮಾನಗಳು ಸೋತುಹೋಗುತ್ತವೆ, ಯಾವುದರ ತೂಕ ಎಷ್ಟೆಷ್ಟು ಎಂದು ಅಳೆಯುವುದರಲ್ಲಿ ಇಂದಿಗೂ ವಿಫಲನಾಗಿದ್ದೇನೆ - ಅದು ನಿಜ - ಏಕೆಂದರೆ ಉಪಕಾರವನ್ನು ಸ್ಮರಿಸಬೇಕೇ ವಿನಾ ಅದನ್ನು ಅಳತೆ ಮಾಡಲಾದೀತೇ? ಹೀಗೆ ಉದ್ದಗಲಗಳಿಗೆ ನಿಲುಕದ, ಸೀಮಾತೀತ ಭಾವನೆಗಳನ್ನು ಪದಗಳಿಲ್ಲದೇ ಕಣ್ಣಿನಿಂದಲೇ ಸೂಚಿಸುವ ನಮ್ಮೂರಿನವರು ತತ್‍ಕ್ಷಣ ಬಹಳ ದೊಡ್ಡವರಾಗಿ ಕಂಡುಬರುತ್ತಾರೆ. ಹೇಳಬೇಕಾದುದರಲ್ಲಿ ನನ್ನಷ್ಟು ನಯನಾಜೂಕುಗಳು ಅವರಲ್ಲಿಲ್ಲದಿದ್ದರೇನಂತೆ ಅವರು ಭಾವನೆಗಳನ್ನು ಹೊರಹಾಕುವಲ್ಲಿ ಯಾರಿಗಿಂತಲೂ ಹಿಂದಿಲ್ಲ - ವಿಶ್ವದ ಒಂದು ಅವಿಭಾಜ್ಯ ಅಂಗವಾಗಿ ನಮ್ಮೂರಿನ ಕಣ್ಣಿನ ಭಾಷೆ ಎಲ್ಲ ಕಡೆಯೂ ಚಾಲ್ತಿಗೆ ಬರುತ್ತದೆ, ಆದರೆ ತೆರೆದು ಹೇಳುವ ಭಾಷೆಗೆ ಆ ಸೌಲಭ್ಯವೆಂದೂ ಸಿಗದು.

'ಥ್ಯಾಂಕ್ಯೂ' ಹೇಳದವರು ಒರಟರೇ? ನನ್ನನ್ನೂ ಆ ಪಟ್ಟಿಯಲ್ಲಿ ಸೇರಿಸಿಬಿಡಿ - ಏಕೆಂದರೆ ನಾನು ಬರೀ 'ಧನ್ಯವಾದ'ಗಳನ್ನು ಹೇಳಿ/ತಿಳಿಸಿ ಕೈ ತೊಳೆದುಕೊಳ್ಳುವವನಲ್ಲ, ಎಷ್ಟೋ ವರ್ಷಗಳ ಹಿಂದೆ ಯಾರೋ ಮಾಡಿದ ಉಪಕಾರವನ್ನೂ ಇವತ್ತಿಗೂ ಅಷ್ಟೇ ಮುಗ್ಧತೆಯಿಂದ ಸ್ಮರಿಸುತ್ತೇನೆ. ಜೊತೆಗೆ ನನ್ನ ಜನ್ಮದಿಂದ ಜನ್ಮಕ್ಕೆ ವರ್ಗಾವಣೆ (transfer) ಆಗುವ ಮಾರ್ಪಾಟುಹೊಂದಬಹುದಾದವುಗಳಲ್ಲಿ (variable) ಉಪಕಾರ ಸ್ಮರಣೆ, ಋಣ ಮುಂತಾದವೂ ಸೇರಿಹೋಗುತ್ತವೆ.

ಸುಲಭವಾಗಿ ಸಂವಹನವಾಗುವ ಭಾಷೆಯ ಪರಿಧಿಯಲ್ಲಿ ಹುಟ್ಟುವ ಪದಲಾಲಿತ್ಯಗಳಿಗಿಂತಲೂ ಪದವೇ ಇಲ್ಲದ ಭಾಷೆಯಲ್ಲಿ ಹುಟ್ಟ ಬಹುದಾದ ಭಾವನೆಗಳ ಅಲೆಗಳು ಬಹಳ ದೂರ ಹೋಗಬಹುದಾದುದನ್ನು ಕಲ್ಪಿಸಿಕೊಳ್ಳುತ್ತಾ 'ಥ್ಯಾಂಕ್ಸ್‌ಗಿವಿಂಗ್' ರಜೆ ದಿನಗಳಲ್ಲಿ ಏನೇನು ಮಾಡಬಹುದು ಎಂದು ಯೋಚಿಸುತ್ತಾ ಕೂರುತ್ತೇನೆ!

Monday, November 20, 2006

ಹಸಿವು ಅನ್ನೋದು ಯಾರನ್ನು ಬಿಟ್ಟೀತು

ಬಹಳ ದಿನಗಳಿಂದ ರೆಡಿಯೋದಲ್ಲಿ Hunger in America ಅನ್ನೋ ಹೆಸರಿನಲ್ಲಿ ಒಂದಲ್ಲ ಒಂದು ವರದಿಯನ್ನು ಕೇಳುತ್ತಿದ್ದೆ, ಅಮೇರಿಕದಲ್ಲೂ ಹಸಿವು ಅನ್ನೋದು ಇಷ್ಟೊಂದು ದೊಡ್ಡದಾಗಿದೆ ಅನ್ನೋದು ಗೊತ್ತಾಗಿದ್ದು ಕೆಲವು ಲಿಂಕ್‌ಗಳನ್ನು ಹಿಡಿದು ಅವುಗಳ ವಿವರವನ್ನು ನೋಡಿದಾಗಲೇ. ಇಲ್ಲಿನ ದೊಡ್ಡ ನಗರಗಳಲ್ಲಿ ಹೋಮ್‌ಲೆಸ್ ಜನರು ಇರುತ್ತಾರೆ ಎನ್ನುವುದು ನನಗೆ ಗೊತ್ತಿದ್ದರೂ ಇಡೀ ದೇಶದ ತುಂಬೆಲ್ಲ ಹೀಗಿರಬಹುದು ಎನ್ನಿಸಿರಲಿಲ್ಲ. ನಮ್ಮ ನಡುವಿನ ನಿರಾಶ್ರಿತರನ್ನು ಪ್ರತಿಯೊಂದು ಸಮಾಜವೂ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಪೋಷಿಸುತ್ತದೆ, ಹಾಗೇ ಅಮೇರಿಕದಲ್ಲೂ ಹಸಿದವರನ್ನು, ನಿರಾಶ್ರಿತರನ್ನು ಪೋಷಿಸಲು ಹಲವಾರು ಸಂಘ ಸಂಸ್ಥೆಗಳು ಅವಿರತವಾಗಿ ದುಡಿಯುತ್ತಿದ್ದರೂ ಹಸಿವು ಹಾಗೂ ನಿರಾಶ್ರಿತರ ಮೂಲ ಕಾರಣವನ್ನು ಕಂಡುಹಿಡಿದು ಅದಕ್ಕೆ ತಕ್ಕ ಪರಿಹಾರವನ್ನು ದೊರಕಿಸಿಕೊಳ್ಳುವುದು ಇನ್ನೂ ಬಹಳ ದೂರದ ಮಾತು.

Farmers and Hunters Feeding Hungry ಎನ್ನುವ ಸೈಟ್‌ನಲ್ಲಿನ ಕೆಲವು ಅಂಕಿ ಅಂಶಗಳು ಬಹಳಷ್ಟು ಯೋಚಿಸುವಂತೆ ಮಾಡುತ್ತವೆ. ಈ ವೆಬ್‌ಸೈಟ್ ಅಫಿಷಿಯಲ್ಲೋ ಅನ್‌ಅಫಿಷಿಯಲ್ಲೋ ಎನ್ನುವುದನ್ನು ಹುಡುಕಿಕೊಂಡು ಹೋಗಿ ಈ ಅಂಕಿಅಂಶಗಳ ಜನ್ಮಜಾಲಾಡುವುದಕ್ಕಿಂತ ಶ್ರೀಮಂತ ದೇಶದಲ್ಲಿನ ಜನರ ಹಸಿವಿನ ಬಗ್ಗೆ ಬರೆದರೆ ಹೇಗೆ ಎನ್ನಿಸಿತು.

Hunger In America: Hard Facts

More than one-third (38%) of families leaving welfare reported that they ran out of food and did not have money for more. (Urban Institute - 2001)

Approximately 7 million different people receive assistance in any given week (America's Second Harvest - 2001)

96,000,000,000 pounds of food is thrown away each year by the Food Service Industry. (Source: FoodChain )

33.6 million people including almost 13 million children live in households that experience hunger or the risk of hunger. This represents approximately one in ten households in the United States (10.7 percent). (Bread for the World Institute - 2002)

ಹಸಿವು/ಹಸಿದವರು (hunger) ಅನ್ನೋ ಪದದ ಬದಲಿಗೆ food insecure ಅನ್ನೋ ಪದವನ್ನು ಬಳಸುವ ಬಗ್ಗೆಯೂ ಕೇಳಿದ್ದೇನೆ. ವರ್ಲ್ಡ್‌ವಾರ್‌ನಲ್ಲಿ ಘಾಯಗೊಂಡ ಸೈನಿಕರನ್ನು shell shocked ಎಂದು ಕರೆಯುತ್ತಿದ್ದರಂತೆ, ಅದೇ ಪದ ಬೆಳೆದೂ ಬೆಳೆದೂ Post Tramatic Stress Disorder ಅನ್ನೋ ಹಾಗೆ, ಹಳೆಯ ಖಾಯಿಲೆಯನ್ನು ಹೊಸ ಪದದಿಂದ ಕರೆದು ಅದನ್ನು ಜನರು ಬೇರೆ ರೀತಿಯಲ್ಲಿ ನೋಡುವಂತೆ, ಅದರ ಬಗ್ಗೆ ಬೇರೆ ರೀತಿಯಲ್ಲಿ ಆಲೋಚಿಸುವಂತೆ ಮಾಡುವ ಪರಿಪಾಟವನ್ನು ಕುರಿತು ಹಲವಾರು ವಿಷಯ ವಸ್ತುಗಳ ಉದಾಹರಣೆಯನ್ನು ನೀಡಬಹುದು. ಇದ್ದ ವಿಷಯವನ್ನು ಯಾವುದೇ ಹೆಸರಿನಿಂದ ಕರೆಯಲಿ, ಮೂಲ ಕಾರಣವನ್ನು ಹುಡುಕಿ ಅದಕ್ಕೆ ತಕ್ಕ ಬಂದೋಬಸ್ತು ಮಾಡುವ ಬದಲಿಗೆ ವಿಷಯಗಳನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದಕ್ಕಾಗಿಯೋ, ಪ್ರಚಾರಗಿಟ್ಟಿಸಲೋ ಅಥವಾ ಇನ್ಯಾವುದಕ್ಕೋ ಬಳಸಿಕೊಳ್ಳುವುದು ಕಂಡುಬರುತ್ತದೆ.

ಒಂದು ದೇಶ ಮುಂದುವರಿದದ್ದು ಎಂದರೆ, ಅದರ ಎಕಾನಮಿ ಮುಂದುವರೆದದ್ದು ಎಂದರೆ ಅದನ್ನು ಹಲವಾರು ರೀತಿಗಳಲ್ಲಿ ಅಳತೆ ಮಾಡಲಾಗುತ್ತದೆ, ಜಿಡಿಪಿ ಇರಬಹುದು, ಆಮದು-ರಫ್ತುವಿನ ಪ್ರಮಾಣ ಇದ್ದಿರಬಹುದು, ದೇಶದ ಉತ್ಪನ್ನಗಳ ಒಟ್ಟು ಮೊತ್ತವಿದ್ದಿರಬಹುದು ಅಥವಾ ಜನಸಾಮಾನ್ಯರ ಬದುಕಿನ ಒಂದು ಅಳತೆ ಇದ್ದಿರಬಹುದು. ಆದರೂ ಒಂದು ದೇಶದಲ್ಲಿ ಮೂರನೇ ಒಂದು ಭಾಗದಷ್ಟು ಜನ ಹಸಿವಿನಲ್ಲಿದ್ದೂ ಅದನ್ನು ಮುಂದುವರೆದ ದೇಶ ಎಂದುಕೊಂಡರೆ ಇನ್ನು ಅಭಿವೃದ್ಧಿ ಹೊಂದುತ್ತಿರುವ ಹಾಗೂ ಬಡ ರಾಷ್ಟ್ರಗಳ ಕಥೆ ಹೇಗಿರಬಹುದು? ವಿಶ್ವದ ಉಳಿದೆಲ್ಲ ದೇಶಗಳಿಗೆ ಸಹಾಯ ಮಾಡುವ ಅಮೇರಿಕದವರಿಗೆ ಸಹಾಯ ಮಾಡುವವರಾರು?

ಇಲ್ಲಿನ ನಿರಾಶ್ರಿತರಿಗೆ ಬೇಕಾದ ಮೆಡಿಕಲ್ ಸೌಲಭ್ಯಗಳು ಸಿಗದಿರುವವರೆಗೆ, ಅವರನ್ನು ಇನ್ನೂ ಕೆಳಗೆ ತಳ್ಳುವ ಹಾಗೆ ಅವರನ್ನು ಅಂಟಿಕೊಂಡ ಆಲ್ಕೋಹಾಲ್, ಡ್ರಗ್ಸ್ ಮುಂತಾದವುಗಳು ಅವರನ್ನು ಬಿಟ್ಟು ತೊಲಗದಿರುವವರೆಗೆ ಹಸಿವು ಜನರಲ್ಲಿ ಹಿಂಗೋದಕ್ಕೆ ಸಾಧ್ಯವೇ ಇಲ್ಲ ಎನ್ನಿಸುತ್ತದೆ. ನಿರಾಶ್ರಿತರ ಶೆಲ್ಟರ್‌ಗಳಲ್ಲಿ ಸಾವಿರಾರು ಜನ ಆಶ್ರಯ ಪಡೆದಿದ್ದರೂ ಅಲ್ಲಿಂದ ಬಿಟ್ಟು ಹೊರಟ ಕೆಲವೇ ಘಂಟೆಗಳಲ್ಲಿ ಅವರು ಮೊದಲಿನ ಹಾಗೇ ಆಗಿಹೋಗುತ್ತಾರೆ. ಅಂತಹವರನ್ನು ಕಡೇವರೆಗೆ ಸಲಹುವುದರಲ್ಲಿ ಎಂತಹ ವ್ಯವಸ್ಥೆಯೂ ಸೋತು ಹೋಗುತ್ತದೆ. ಹೀಗೆ ಒಳ್ಳೆಯದಾಗಬೇಕೆನ್ನುವ ವ್ಯವಸ್ಥೆ ಹಾಗೂ ತಾವೇನು ಕಳೆದುಕೊಂಡಿದ್ದೇವೆ ಮತ್ತು ಏಕೆ ಎಂದು ಅರಿವಿರದ ಜನಗಳ ಮಧ್ಯೆ ಹಸಿವು ಹೀಗೆ ಬಂದು ಹಾಗೆ ಹೋಗುತ್ತದೆ.

Sunday, November 19, 2006

ಕಾಯೋ ಕಷ್ಟಾ...ಯಾರಿಗ್ ಬೇಕು

ಕಾಯೋ ಕಷ್ಟಾ ಇದೇ ನೋಡಿ ಅದರಂಥಾ ಸ್ಲೋ ಪಾಯಿಜನ್ ಇನ್ನೊಂದಿಲ್ಲ! ಯಾಕೆ ಅಂತೀರೋ, ಇನ್ನೇನು ಮತ್ತೆ - ಪ್ಲಾನ್ ಮಾಡೀ ಮಾಡೀ ಇಂಥಾ ದಿನಾ ಬರುತ್ತೇ ಹೀಗ್ ಹೀಗೇ ಆಗುತ್ತೇ ಎಂದು ಮನಸ್ಸು ಏನೇನೋ ತಿಪ್ಪರ್‌ಲಾಗಾ ಹಾಕಿದ್ರೂ ಕೊನೇಗೆ ಆಗೋದೇ ಬೇರೆ, ಆದ್ದರಿಂದ ನಾನು ಇವತ್ತಿಂದ ಕಾಯೋದೋ ಬೇಡಾ ಪ್ಲ್ಯಾನ್ ಮಾಡೋದ್ ಬೇಡಾ ಅನ್ನೋ ಹೊಸಾ ನೀತಿಯೊಂದನ್ನ ಪ್ರಪಂಚಕ್ಕೆ ಸಾರೋ ಪಣಾ ತೊಟ್ಟಿದ್ದೇನೆ. ನನ್ ಪ್ರಕಾರ ಯಾರೂ ಕಾಯ್ಲೂ ಬಾರ್ದೂ ಪ್ಲಾನ್ ಮಾಡ್ಲೂ ಬಾರ್ದೂ, ಆವಾಗ್ಲೇ ಚೆಂದ, ಏನಂತೀರಿ?

ಮದ್ನ್ಯಾಹ್ನ ಆಫೀಸ್‌ನಲ್ಲಿ ಒಂದೊಂದ್ ದಿನಾ ಪಿಜ್ಜಾ ತಿನ್ನೋದೇ ಗತಿಯಾಗಿ ಹೋಗುತ್ತೆ, ಒಂದು ಸಮಯಕ್ಕೆ ಸರಿಯಾಗಿ ಕ್ಯಾಫೆಟೇರಿಯಾಕ್ಕೆ ಹೋಗೋದಕ್ಕೆ ಆಗದೇ ಇರೋದರ ಪರಿಣಾಮ, ಇನ್ನೊಂದು ಹೊಟ್ಟೆ ಪರಮಾತ್ಮನ ಆರ್ತ ಮೊರೆಗೆ ಓಗೊಟ್ಟು ಅರ್ಜೆ‌ನ್ಟಾಗಿ ಏನಾದ್ರೂ ಸಿಗುತ್ತೇನೋ ಅಂದ್ರೆ - ಅದೂ ವೆಜಿಟೇರಿಯನ್ನೇ ಆಗಬೇಕು ನೋಡಿ, ಈ ದೇಶದಲ್ಲಿ ವೆಜಿಟೇರಿಯನ್ ತಿನ್ನೋ ಈ ಹಣೇಬರಹಕ್ಕೆ ಒಂದಿಷ್ಟು ಬೆಂಕಿ ಹಾಕಾ - ನಮ್ಮಲ್ಲಿ ಸಿಗೋದೇ ವೆಜ್ಜಿ ಪಿಜ್ಜಾ - ಅದನ್ನ ತಗೊಂಡು ನಮ್ ಚೆಫ್ ಹೈ ಸ್ಪೀಡ್ ಅವನ್ ನಲ್ಲಿಟ್ಟು ಒಂದೆರಡು ನಿಮಿಷ ಕಾಯಿ ಅಂತಾನೆ, ಅವಾಗಿರೋ ತಹತಹ ಇದೇ ನೋಡಿ ಅದರಂಥ ಕೆಟ್ಟ ಸ್ಥಿತಿ ಇನ್ನೊಂದಿಲ್ಲ. ಹೊಟ್ಟೆ ಒಂದೆರಡು ಸರ್ತಿ ಮುರ್ದು ಕುರ್ರ್ ಅಂತ ಬೇರೆ ಬೇರೆ ಸೌಂಡ್ ಮಾಡಿ 'ನನಗೆ ಹಸಿವಾಗಿದೆ' ಅಂತ ಹೇಳಿ ಚುರುಗುಟ್ಟೋ ಹೊತ್ನಲ್ಲಿ ಎಂಥಾ ಆಧುನಿಕ ತಂತ್ರಜ್ಞಾನದ ಹೈ ಸ್ಪೀಡ್ ಅವನ್ನೂ ನಿಧಾನ ಅನ್ನಿಸಿಬಿಡುತ್ತೆ. ಎಷ್ಟೋ ಸಾರಿ ಹಾಗೆ ತಣ್ಣಗಿರೋದನ್ನೇ ಯಾಕೆ ತಿನ್ನಬಾರ್ದೂ ಅಂತ ಅನ್ನಿಸಿಯೂ ಬಿಟ್ಟಿದೆ.

ಅದಿರ್ಲಿ, ಊಟತಿಂಡಿ ವಿಚಾರ ಬಿಡಿ, ಇನ್ನ್ಯಾವುದರಲ್ಲಾದರೂ ನೀವು ಯಾವತ್ತಾದ್ರೂ ಆಲೋಚಿಸಿದ ಹಾಗೆ, ಪ್ಲಾನ್ ಮಾಡಿದ ಹಾಗೆ ಆಗಿದೆಯಾ? ಅಕಸ್ಮಾತ್ ಹಾಗೆ ಆಗಿದ್ರೂ ಎಲ್ಲೋ ಕಡಿಮೆ ಪ್ರಮಾಣದಲ್ಲಿ ಅನ್ನೋದನ್ನ ನೀವೂ ಒಪ್ಪೋದಿಲ್ವೇ? ನಾವು ಅಂದ್‌ಕೊಂಡ ಹಾಗೆ ಆಗೋದಿಲ್ಲ ಅನ್ನೋದಾದ್ರೆ ಪ್ಲ್ಯಾನ್ ಯಾಕ್ ಮಾಡಬೇಕು ಅನ್ನೋದು ಇವತ್ತಿನ ಹೊಸ ಜಿಜ್ಞಾಸೆ. ಅಲ್ದೇ ಪ್ರತಿಯೊಂದ್ ಪ್ಲ್ಯಾನ್‌ನಲ್ಲೂ ಒಂದಿಷ್ಟು ಕಾಯಲೇ ಬೇಕಾದ ಖಾಯಿಲೆಯನ್ನೂ ನಾವು ಏನು ಮಾಡಿದ್ರೂ ಅವಾಯ್ಡ್ ಮಾಡೋಕಾಗಲ್ಲ ಅಂದ್‌ಮೇಲೆ ಮೊದಲೇ ಪೂರ್ವಯೋಜಿತವಾದ 'ಕಾಯುವಿಕೆ'ಯನ್ನ ಕಾಯುವಿಕೆ ಅಂತ ಕರೆಯದೇ ಅದನ್ನ ಇನ್ನ್ಯಾವುದಾದ್ರೂ ಒಂದ್ ಹೆಸರಲ್ಲಿ ಕರೆದ್ರೆ ಹೆಂಗೆ?

ನೀವು 'ಕಾಯೋ ತಂದೆಯೇ, ದೇವಾ ಕರುಣಿಸು...' ಅನ್ನೋ ಹಾಡು ಕೇಳಿಲ್ವಾ? ಅದನ್ನ ಬರೆದ ಕವಿ, ದೇವರಿಗೇ 'ಸ್ವಲ್ಪ ತಡಿ - ಕರುಣಿಸುವ ಮುನ್ನ' ಅಂತ ಯಾಕೆ ಹೇಳಿದ ಅಂತಾ ನಾನು ಬಹಳ ಯೋಚ್ನೇ ಮಾಡಿದ್ದೇನೆ. ಇಲ್ಲವೆಂದ್ರೆ ದೇವರಿಗೆ 'ನಮ್ಮನ್ನು ಕಾಯೋ' ಅಂತ ಹೇಳೋದರಲ್ಲೇನಾದ್ರೂ ಅರ್ಥಾ ಇದೆಯಾ? ಅಥವಾ ದೇವರಿಗೆ ನಾವು 'ಕಾಯ್‌ಬೇಡಾ' ಅಂದ್ರೆ ಕಾಯೋದಿಲ್ಲಾ ಅಂತ ಅರ್ಥವೇ? ನನಗೆ ಬಹಳ ಇಷ್ಟವಾದ ಹಾಡುಗಳಲ್ಲಿ 'ಕೃಷ್ಣಾ ನೀ ಬೇಗನೆ ಬಾರೋ...' ಕೂಡಾ ಒಂದು. ಮತ್ತೆ, ಆತ ಕೃಷ್ಣಾ ಪರಮಾತ್ಮ ಆದರೇನು, ಯಾರ್ ಆದರೇನು 'ಬೇಗನೆ' ಬರಬೇಕಪ್ಪಾ! ಆವಾಗ್ಲೇ ಮಜಾ ಇರೋದು...ಅಕಸ್ಮಾತ್ ಒಂದ್ ಘಳಿಗೆ ಏನಾದ್ರೂ ಬರೋದು ಹೆಚ್ಚೂ ಕಡಿಮೆ ಆದ್ರೆ ದುರುಳ ದುಶ್ಯಾಸನನಂತಹವರು ಎಷ್ಟೋ ಜನ ದ್ರೌಪದಿಯಂತಹವರ ಸೀರೆ ಸೆರೆಯೋದಕ್ಕೆ ರೆಡಿ ಇರ್ತಾರೆ, ಆ ಸಮಯದಲ್ಲಿ ದುಶ್ಯಾಸನನಂತಹವರಿಗೆ ತಡೆಯೋಕ್ ಆಗೋದಿಲ್ಲ, ಇನ್ನು ದ್ರೌಪದಿಯಂತಹವರಿಗೆ ಹೇಗೆ ಆಗುತ್ತೆ? ಆದ್ರಿಂದ್ಲೇ ಕೃಷ್ಣ ಬೇಗನೆ ಬರಬೇಕು. ನಮ್ ಕವಿಗಳಿಗೆ ಇನ್ನು ಮುಂದೆ ಏನ್ ಬೇಕಾದ್ರೂ ಬರೀರಿ, ಎಲ್ಲಾ ಕಡೆ ಬರೋದು-ಹೋಗೋದು, ಆಗೋದು-ಬಿಡೋದು ಇವನ್ನೆಲ್ಲ ಆದಷ್ಟು ಬೇಗನೆ ಮಾಡಲು ಹುಮ್ಮಸ್ಸು ಕೊಡುವಂತೆ ನನ್ನ ಚಿಕ್ಕದೊಂದು ಮನವಿ ಸಲ್ಲಿಸಿಬಿಟ್ರೆ ಅಂತಾ ಎಷ್ಟೋ ಸರ್ತಿ ಯೋಚ್ನೇ ಮಾಡಿದ್ದೇನೆ.

ಬದುಕು ಅಂದ್ರೆ ಒಂದ್ ಸಿನಿಮಾ ಇದ್ದಂಗಿರಬೇಕಪ್ಪಾ, ಹುಟ್ಟಿದ ಮಕ್ಳು ಕಾಲೇಜ್ ಸೇರೋದಕ್ಕೆ ಕೇವಲ ಕೆಲವೇ ನಿಮಿಷಗಳು ಬೇಕಾಗೋ ಹಾಗೇ, ಯುವಕರಿಂದ ಮುದುಕರು ಆಗೋದಕ್ಕೆ ಒಂದೆರಡು ಘಂಟೆ ಮಾತ್ರ ಸಾಕಾಗೋ ಹಾಗೆ, ದಿನಗಳು ಉರುಳೋದಕ್ಕೆ ಬೆಂಗಳೂರು ಮುದ್ರಣಾಲಯದ ಕ್ಯಾಲೆಂಡರನ್ನು ಗಾಳಿಗೆ ಹಾರಿಸೋದನ್ನು ತೋರಿಸಿದ ಹಾಗೆ - ಎಲ್ಲವೂ ವೇಗಮಯ. ಇಲ್ಲಾ ಅಂದ್ರೆ 'ಬೀಸ್ ಸಾಲ್ ಬಾದ್' ಅನ್ನೋ ಸಿನಿಮಾನ ಮೊದಲ ಭಾಗ ಶುರೂ ಮಾಡಿ, ಮುಂದಿನ ಭಾಗವನ್ನ ಇಪ್ಪತ್ತು ವರ್ಷ ಬಿಟ್ಟು ಬಂದ್ ನೋಡಿ ಅನ್ನೋ ಹಾಗಿದ್ರೆ ಏನ್ ಮಜಾ ಇರ್ತಿತ್ತು ಅದರಲ್ಲಿ? ಬೀಸ್ ಸಾಲ್ ಪೆಹಲೆ ಆಗಿರೋ ಘಟನೆಗಳನ್ನೆಲ್ಲ ಚಿಕ್ ಚಿಕ್ ಹುಡುಗ್ರು ನೆನಪಿಟ್ಟುಕೊಂಡು ಪ್ರತಿಯೊಂದರ ಡೀಟೈಲನ್ನೂ ಹೇಳೀ ಹೇಳೀ ಖಳನಾಯಕನಿಗೆ ಒದೆಯೋದಿಲ್ವಾ? ಒಂದೆರಡು ಘಂಟೆ ಆದಮೇಲೆ ಬರೋ ಇಂಥಾ ಸನ್ನಿವೇಶಗಳು ನಮೆಗೆಲ್ಲಾ ಮಜಾ ಕೊಟ್ಟು ಇಂಥಾ ಚಿತ್ರಗಳು ನೂರು ಇನ್ನೂರು ದಿನಾ ಓಡೋದಿಲ್ವಾ? ಹಾಗಿರಬೇಕು ನೋಡಿ ಬದುಕು ಅಂದ್ರೆ - ಅದನ್ನ ಬಿಟ್ಟು ಪ್ರತಿಯೊಂದಕ್ಕೂ ಕಾಯಿ ಅಂತ ಯಾರೋ ಒಂದು ಗೆರೆ ಎಳೆದು ಹೋದ ಹಾಗಿದೆ ಅನ್ಸುತ್ತೇ ಎಷ್ಟೋ ಸರ್ತಿ. It is not fair, if I have to wait, I will lose weight ಅಂತಾ ಎಷ್ಟ್ ಕೂಗಿದ್ರೂ ಯಾರೂ ಕೇಳೋದಿಲ್ಲ - ಎಲ್ಲಾ ಬಿಡಿ ನಾವು ಮಾಡೋ ಚಾಟ್ ವಿಂಡೋಗಳಲ್ಲೂ brb ಅಂಥಾ ಹೋದೋರು ಎಷ್ಟೋ ಸರ್ತಿ ಹಿಂತಿರುಗಿ ಬರೋದೇ ಇಲ್ಲಾ. ಹೋಗ್ತೀವಿ ಅಂತ ಹೇಳಿ ಹೋದ್ರೆ ಅವರಪ್ಪನ್ ಮನೆ ಗಂಟೇನು ಖರ್ಚಾಗುತ್ತೇ? ಇನ್ನೇನು ಬಂದೆ ಅಂಥ ಹೇಳೀ ಒಂದ್ ರೀತಿ ಬ್ರಹ್ಮಶೌಚಕ್ಕೆ ಹೋದ ಹಾಗೆ ಹೋಗೋರನ್ನ ನಾನು ಕೂತು ಕಾಯೋದೇ ಬಂತು, ಅವರು ಬರೋ ಹೊತ್ತಿಗೆ ಒಂದೆರಡು ಕೇಜಿ ತೂಕ ಕಡಿಮೆ ಆಗೋದಿರಲಿ, ಒಂದೆರಡು ತಿಂಗಳ ವಯಸ್ಸೂ ಹೆಚ್ಚಾಗಿ ಹೋಗಿರುತ್ತೆ!

ನೀವೂ ಎಲ್ಲಾ ಕಡೆ ಕಾಯ್‌ತೀರಾ? ನಾನಂತೂ ಎಲ್ಲಾ ಕಡೆ ಕಾಯ್ತೀನಿ - ಸೋಮವಾರ ಬೆಳಿಗೆ ಆರಂಭವಾಗುವ ಟ್ರಾಫಿಕ್ ಲೈಟ್‌ಗಳಿಂದ ಹಿಡಿದು ಬದುಕು ಹೀಗಾಗುತ್ತೇ ಹಾಗಾಗುತ್ತೆ ಅಂತ ದೊಡ್ಡ ದೊಡ್ಡ ಯೋಚ್ನೆಗಳನ್ನೆಲ್ಲ ತಲೆ ತುಂಬ ಹೊತ್ತ್‌ಕೊಂಡು, ಕಣ್ಣಲ್ಲಿ ಬಣ್ಣವನ್ನು ತುಂಬಿಕೊಂಡು ಯಾವುಯಾವುದಕ್ಕೋ ಕಾಯ್ತೀನಿ. ಪ್ರತಿಯೊಂದು ಕಾಯುವಿಕೆಯೂ ಒಂದ್ ರೀತಿ ರೊಟ್ಟಿ ಹೆಂಚಿನ ಮೇಲೆ ಕಾದ ಅನುಭವಕ್ಕೆ ಸರಿಸಮವಾಗಿ (ಹೆಚ್ಚೂ ಕಡಿಮೆ) ಇದ್ರೂ, ಕಾಯೋದೇ ಕೈಲಾಸ ಅಂತ ಯಾವತ್ತೂ ಅನ್ಸಿದ್ದೇ ಇಲ್ಲ. ಕಾಯೋದು ಕೈಲಾಸ ಆದ್ರೆ, ಆ ದೇವ್ರಾಣೆ ನನಗೆ ಅದು ಬ್ಯಾಡಪ್ಪಾ, ಕೈಲಾಸವಾಸಿಗಳಾದ ಮೇಲೂ ಇನ್ನೂ ಕಾಯೋದೂ ಅಂದ್ರೆ ಯಾವುದಕ್ಕಾಗಿ, ಮುಂದಿನ ಜನ್ಮಾಕ್ಕಾಗಿಯೇ? ಅಥವಾ ಇಂಥಹ ಹಲವು ಮಿಲಿಯನ್ ಜನ್ಮಗಳ ನಂತರ ಬರೋ ಮೋಕ್ಷಕ್ಕಾಗಿಯೇ? ನೀವೇ ಹೇಳಿ ಇವತ್ತೂ ನಾಳೆ ಆಗದಿರೋ ಹೋಗದಿರೋದು ಮೋಕ್ಷ ಯಾವನಿಗ್ ಬೇಕಾಗಿದೆ? ಅಂಥ ಮೋಕ್ಷ ನಿಮಗೇ ಇರಲಿ, ಅಲ್ಲೀ ತನಕ 'ನಾರಾಯಣ ನಾರಾಯಣ' ಎಂದು ಜಪತಪ ಮಾಡ್‌ಕೊಂಡ್ ಕಾಯ್ತಾನೇ ಇರಿ, ನನಗಂತೂ ಬೇಕಾಗಿಲ್ಲಪ್ಪ!

***

ಕಾಯೋದು ನನ್ ಹಣೇಬರಹ, ಅದಕ್ಕೇನು ಮಾಡೋಕಾಗಲ್ಲ ಅಂತ ಈಗತಾನೇ ಯಾರೋ ಒಬ್ರು ಹೇಳಿದ್ರು. ಸರಿ, ನನ್ನ್ ಜೊತೆ ಲೋಕಾನೇ ಕಾಯೋ ಹಾಗಿದ್ರೆ ಎಷ್ಟೋ ಚೆನ್ನಾಗಿರ್ತಿತ್ತು, ಎಲ್ಲಾ ಕಡೇ ನಾನೊಬ್ಬನೇ ಕಾಯ್‌ಬೇಕಾ...ನನ್ ಹಾಗೆ ಈ ಕಾಯೋದು ಅನ್ನೋದು ಎಲ್ಲರಿಗೂ ಕಾಮನ್ ಆಗಿದ್ರೆ, ಅದನ್ನ ಯಾಕೆ ಬ್ರಾಕೆಟ್ ಇಂದ ಹೊರಗೆ ತೆಗೀಬಾರ್ದು? ಪ್ರತಿಯೊಬ್ಬರಿಗೂ ಅಪ್ಲೈ ಮಾಡೋ ಬದ್ಲು ಒಂದು ದೊಡ್ಡ ವೇರಿಯಬಲ್ ಅನ್ನು ಎಲ್ಲರಿಗೂ ಯಾಕೆ ಸೃಷ್ಟಿಸಬಾರ್ದು? ಇಷ್ಟು ಹೇಳಿ ಅಲ್ಲಲ್ಲ ಬರೆಯೋ ಹೊತ್ನಲ್ಲಿ 'ಕಾಯ್ದೇ ಕೆನೆ ಕಟ್ಟೋದಿಲ್ಲಾ...' ಅಂತ ಅಡುಗೆಮನೆಯಿಂದ ಸ್ವರ ಬರ್ತಾ ಇದೆ, ಸ್ವಲ್ಪ ನೋಡ್ತೀನಿ ನನಗೋಸ್ಕರ ಏನ್ ಕಾದಿದೆಯೋ ಎಂದು!

***

ಹೀಗೆ ಹೋಗಿ ಹಾಗೆ ಎಮ್. ಎಸ್. ಮಾಡಿ ಬಂದೆ, ಅಥವಾ ಎಚ್.ಒನ್. ವೀಸಾದಲ್ಲಿ ಸಿಕ್ಕಿರೋ ಕೆಲ್ಸಾ ಕೇವಲ ಆರೇ ವರ್ಷಾ ಅಂತ ಹೇಳಿ ಬಂದಿರೋ ನನ್ನಂತಹವರನ್ನ ಎಷ್ಟು ಜನ ಎಲ್ಲೆಲ್ಲಿ ಕಾಯ್ತಾ ಇದ್ದಾರೋ, ಅವರಿಗೆಲ್ಲ ನನ್ನಂಥವರು brb ಅಂತ ಹೇಳಿ ಎಷ್ಟು ವರ್ಷಗಳಾಯ್ತೋ ಅಂತ ಅನ್ನಿಸ್ತು ಈ ಲೇಖನ ಮುಗಿಸಿ ಪೋಸ್ಟ್ ಮಾಡೋದಕ್ಕೆ ಕಾಯೋದೊರಳಗೆ!

Thursday, November 16, 2006

ಅಂಗವಿಕಲರು

ನಿನ್ನೆ ಆಫೀಸಿನಿಂದ ಮನೆಗೆ ಹೊರಡೋಣ ಎಂದು ಎಲಿವೇಟರ್‍ಗೆ ಹೋಗುತ್ತಿರುವಾಗ ಎಲಿವೇಟರ್ ಬಾಗಿಲ ಬಳಿ ಅತಿ ಸಣ್ಣದಾಗಿ ಬ್ರೈಲ್ ಲಿಪಿಯಲ್ಲಿ ಫ್ಲೋರ್ ನಂಬರ್ ಅನ್ನು ಕೊರೆದಿದ್ದುದು ಕಂಡು ಬಂತು - ಅಂಗವಿಕಲರಿಗೆ ಈ ದೇಶದಲ್ಲಿ ಬಹಳಷ್ಟು ಸವಲತ್ತುಗಳೇನೋ ಇವೆ ನಿಜ, ಆದರೆ ಒಬ್ಬ ಕುರುಡನಾದವನಿಗೆ ಈ ಬಾಗಿಲಿನ ಹತ್ತಿರವೇ ಇಂಥಾ ಸ್ಥಳಕ್ಕೆ ಬರಬೇಕೆಂದು ಹೇಗೆ ಗೊತ್ತಾಗುತ್ತದೆ? ಕಣ್ಣಿದ್ದವರು ಈ ಬ್ರೈಲ್ ಲಿಪಿಯಲ್ಲಿ ಬರೆದ ಫ್ಲೋರ್ ನಂಬರನ್ನು ಹುಡುಕಲೇ ಕಷ್ಟವಾಗುತಿರುವಾಗ ಇನ್ನು ಕಣ್ಣಿಲ್ಲದವರ ಕಥೆ ಏನಾಗಬೇಕು ಎಂದು ನಗುಬಂತು. ಹಾಗೇ ಪ್ರತಿಯೊಂದು ಕ್ಯೂಬಿಕಲ್ ನಂಬರ್ ಅನ್ನೂ, ಆಫೀಸ್ ನಂಬರ್ ಅನ್ನೂ ಬ್ರೈಲ್ ಲಿಪಿಯಲ್ಲಿ ತಿಳಿಸಿರುವುದೂ ಕಂಡು ಬಂತು. ಇಲ್ಲಿ ನಾನು ನೋಡಿದ ಹಾಗೆ ವೀಲ್ ಚೇರ್ ಬಳಸುವವರ ಸಂಖ್ಯೆ ಹೆಚ್ಚಿದೆಯೇ ವಿನಾ ನಮ್ಮೂರುಗಳಲ್ಲಿ ಕಂಡುಬರುವಂತೆ ಮೂಗರು, ಕಿವುಡರು, ಕುರುಡರು ಹೆಚ್ಚು ಸಂಖ್ಯೆಯಲ್ಲೇನು ಕಂಡು ಬರೋದಿಲ್ಲ.

ನನ್ನ ವಾರಿಗೆಯ ಲಿಂಗರಾಜ, ಮೂಕ - ಬಾಯಿ ಬಾರದವನು. ಅವನ ಅಪ್ಪ-ಅಮ್ಮ ಮಾತ್ರ ಅವನ ಅಂಕಿತ ನಾಮ ಲಿಂಗರಾಜ ಎಂದು ಕರೆಯುವುದನ್ನು ನೋಡಿದ್ದೇನೆಯೇ ಹೊರತು, ಮಿಕ್ಕೆಲ್ಲರೂ ರೂಢನಾಮವನ್ನೇ ಅದರಿಸಿ ಅವನನ್ನು 'ಮೂಕ' ಎಂದು ಕರೆಯುವವರೇ. ಬಹಳಷ್ಟು ಜನರು ಮೂಕರಾಗುವುದು ಅವರವರ ಧ್ವನಿ ಪೆಟ್ಟಿಗೆಯಲ್ಲಿನ ನ್ಯೂನತೆಗಿಂತಲೂ ಅವರ ಕಿವಿ ಸರಿಯಾಗಿ ಕೇಳದಿರುವುದರಿಂದ ಎಂದು ತಿಳಿದುಕೊಳ್ಳಲು ನನಗೆ ಬಹಳೇ ವರ್ಷಗಳು ಬೇಕಾಗಿದ್ದವು. ಭಾರತದಲ್ಲಿ ಈಗೆಲ್ಲ ಹೇಗಿದೆಯೋ ಗೊತ್ತಿಲ್ಲ, ಅಮೇರಿಕದಲ್ಲಂತೂ ಹುಟ್ಟಿದ ಮಕ್ಕಳನ್ನು ಕೆಲವೇ ದಿನ/ಘಂಟೆಗಳೊಳಗೆ ಮಗುವಿನ ಶ್ರವಣ ಶಕ್ತಿಯನ್ನು ಪರೀಕ್ಷಿಸೋದರಿಂದ ಮುಂದೆ ಅವರು ಮೂಕರಾಗಬಹುದಾದ ಸಾಧ್ಯತೆಯನ್ನು ನಿವಾರಿಸಲಾಗುತ್ತದೆ.

ಅಂಗವಿಕಲರಿಗೂ ಸಮಾನ ಸವಲತ್ತುಗಳು ಸಿಗಲಿ ಎಂದು ಬೇಡಲು, ಆಗ್ರಹಿಸಲು ಇಲ್ಲಿ ಹಲವಾರು ಸಂಘ-ಸಂಸ್ಥೆಗಳಿವೆ. ಮುಂದುವರೆದ ಸಮಾಜದ ಇತಿಹಾಸದ ಲಾ ಸೂಟ್‌ಗಳು ಮತ್ತೆ ಇನ್ಯಾವ ವಿಕಲಾಂಗರನ್ನು ತಿರಸ್ಕರಿಸದಂತೆ ನೋಡಿಕೊಳ್ಳುತ್ತವೆ. ಶೌಚಾಲಯದಿಂದ ಹಿಡಿದು ಸಾರ್ವಜನಿಕ ಬಸ್ಸುಗಳವರೆಗೆ, ಆಫೀಸು ಕಟ್ಟಡಗಳಿಂದ ಹಿಡಿದು ಪುಟ್‌ಪಾತ್‌ನಲ್ಲಿ ರಸ್ತೆ ದಾಟುವಂತೆ ಸಹಾಯ ಮಾಡುವ ದೀಪ ಹಾಗೂ ಶಬ್ದ ಸೂಚಕಗಳವರೆಗೆ ಕಾಣುವ ಬೇಕಾದಷ್ಟು ಸವಲತ್ತುಗಳನ್ನು ನೋಡಿ ನಮ್ಮ ದೇಶದಲ್ಲಿ ಅಂಗವಿಕಲರನ್ನು ಸಮಾಜ ಎಷ್ಟೊಂದು ಹಿಂದೆ ತಳ್ಳಿದೆ ಹಾಗೂ ನಿರ್ಲಕ್ಷಿಸಿದೆ ಎಂದು ಬೇಸರವಾಗುತ್ತದೆ. 'ಕುಂಟನಿಗೆ ಎಂಟು ಬುದ್ಧಿ...' ಎಂತಲೋ 'ಕುಂಟಾ ಕುಂಟ ಕುರುವತ್ತಿ, ರಂಟೆ ಹೊಡೆಯೋ ಬಸವಣ್ಣ' ಎಂದು ನಾವು ಅಣಗಿಸಿ, ಆಡಿದ್ದು ನೆನಪಿಗೆ ಬರುತ್ತದೆಯೇ ವಿನಾ ಕೈ ಕಾಲಿಲ್ಲದವರಿಗೆ ಆಧರಿಸಿದ್ದು ಎಲ್ಲೂ ನೆನಪಿಗೆ ಬರುವುದಿಲ್ಲ...ಧೃತರಾಷ್ಟ್ರನಿಂದ ಹಿಡಿದು ಲಿಂಗರಾಜನವರೆಗೆ ಅವರಿಗೆ ಬೇಕಾಗಿರದ ಸಹಾನುಭೂತಿ ಮಾತ್ರ ಧಾರಾಳವಾಗಿ ಸಿಕ್ಕುತ್ತದೆ. ಕೈ ಇಲ್ಲದವನು ಚೊಂಚ, ಕಾಲಿಲ್ಲದವನು ಕುಂಟ, ಕಣ್ಣಿಲ್ಲದವ ಕುರುಡ, ಕಿವಿ ಕೇಳದವನು ಕೆಪ್ಪ, ಮಾತು ಬಾರದವನು ಮೂಗನಾಗೇ ಬದುಕನ್ನು ಸವೆಸುತ್ತಾನೆಯೇ ಹೊರತು ಅವರ ನಿಜನಾಮವನ್ನೂ ಸಹ ಯಾರೂ ಕರೆದು ಗೌರವಿಸದಿರುವ ಹಾಗಿದ್ದುದು ನನ್ನ ನೆನಪಿನಲ್ಲಿದೆ.

ಅತ್ತಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ, ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ...ಎನ್ನುವ ಬಸವಣ್ಣನವರ ವಚನದ ಸಾಲುಗಳನ್ನು ಆದರಿಸಿ 'ಅಂಗವಿಕಲನಾಗುವಂತಾದರೆ ಅಮೇರಿಕದಲ್ಲೆ ಹುಟ್ಟುವಂತೆ ಮಾಡಯ್ಯ ತಂದೆ...' ಎಂದು ಯಾರು ಬೇಕದರೂ ಮೊರೆ ಇಡಬಹುದು. ನಿಜವಾಗಿ ಅಂಗವಿಕಲರಾದವರಿಗೆ ಪಾರ್ಕಿಂಗ್ ಸ್ಥಳದಲ್ಲಿ ಸಿಗುವ ಪ್ರಾಶಸ್ತ್ಯವನ್ನು ನೋಡಿ ಕೆಲವೊಮ್ಮೆ ನನಗೆ ಸಿಟ್ಟು ಬಂದಿದ್ದಿದೆ, ಆದರೆ ಅಂಗವಿಕಲರ ಕಷ್ಟವನ್ನು ನೋಡಿದಾಗ ನಿಜವಾಗಿಯೂ ಅವರಿಗೆ ಎಲ್ಲಕಡೆ ಪ್ರಾಶಸ್ತ್ಯ ಸಿಕ್ಕಬೇಕು ಎನ್ನೋದು ನಿಜ. ಆದರೆ ನನಗೆ ಸಿಟ್ಟು ಬರೋ ಹಾಗೆ ಅಂಗವಿಕಲರ ಸ್ಥಾನದಲ್ಲಿ ಒಬೆಸಿಟಿ ಇದ್ದವರು ಕಾಣಿಸಿಕೊಳ್ಳುವ ಪರಿಸ್ಥಿತಿ ಹುಟ್ಟಿದೆ. ವೈಯುಕ್ತಿಕ ಕಾರಣಗಳಿಗೋ ಅಥವಾ ಜೀವನಶೈಲಿಯ ಫಲವಾಗಿಯೋ ಅತಿಬೊಜ್ಜು ಬೆಳೆಸಿ ನಡೆದಾಡುವುದಕ್ಕೆ ಬಹಳ ತ್ರಾಸು ಪಡುವ ಅತಿ ತೂಕದ ಜನರು ಮೋಟಾರ್ ವೆಹಿಕಲ್ ಡಿಪಾರ್ಟ್‌ಮೆಂಟಿನಿಂದ ಅಂಗವಿಕಲರ ಪರವಾನಿಗೆಯನ್ನು ಪಡೆದು ಕೈ ಕಾಲು ಇಲ್ಲದವರ ಎಲ್ಲ ಸವಲತ್ತುಗಳನ್ನು ಬಾಚಿಕೊಂಡಂತೆ ಒಮ್ಮೆ ಕಂಡು ಬರುತ್ತದೆ. ಕೈ ಕಾಲು ಇಲ್ಲದವರದ್ದು ಒಂದು ರೀತಿಯ ಕಷ್ಟವಾದರೆ ಇವರದ್ದು ಇನ್ನೊಂದು ಥರ ಎಂದು ಮರುಕ ಹುಟ್ಟುತ್ತದೆ.

***

ಹೊಟ್ಟೆ ತುಂಬಿದ ದೇಶಗಳಲ್ಲಿ ಉಪವಾಸ ಸತ್ಯಾಗ್ರಹ ಎಂದೂ ಜನಪ್ರಿಯವಾಗೋದಿಲ್ಲ ಎಂದು ಎಲ್ಲಿಯೋ ಓದಿದ್ದೆ - ಇತ್ತೀಚೆಗೆ ಒಬೆಸಿಟಿಯ ಬಗ್ಗೆ ಓದಿ/ಕೇಳಿದ ಮೇಲೆ ಅದು ನಿಜವಿದ್ದಿರಬಹುದು ಎನ್ನಿಸುತ್ತಿದೆ.

Wednesday, November 15, 2006

ಸಿಟ್ಟನೇಕೆ ಮಾಡುತಿ?

ದೂರ ಇರುವ ಗುರಿಯ ಮುಟ್ಟೆ
ಹೋಗಿ ಬರಲು ಹಲವು ಬಟ್ಟೆ
ಕಷ್ಟ ಸುಖವೋ ಇರಲಿ ನಮಗೆ
ಅವರವರಿಗೆ ಅವರ ಬಗೆ

ಹನಿಗಳಾಯ್ದು ಹಳ್ಳವಾಯ್ತು
ತನಿಗಳನ್ನು ಇಟ್ಟುಹೋಯ್ತು
ಬಿಳಿ ಮೋಡ ತರದ ಮಳೆಗೆ
ಚಿಂತೆಯೆಂಬುದಿಲ್ಲ ಇಳೆಗೆ

ದೂರ ದೂರವೇನು ಅಲ್ಲ
ನಡೆವ ನೆಲ ಒಂದೇ ಎಲ್ಲ
ಇರುವಾಗ ಸುತ್ತ ಮುಗಿಲು
ಬರೀ ನಮಗದೇಕೆ ದಿಗಿಲು

ಸಿಟ್ಟನೇಕೆ ಮಾಡುತಿ
ದುಡುಕಿ ಏಕೆ ನೋಡುತಿ

Tuesday, November 14, 2006

ಸಂಬಂಧಗಳು

ಇವತ್ತು ಆಫೀಸಿನಿಂದ ಮನೆಗೆ ಬರ್ತಾ ಯಾವುದೋ ರೆಡಿಯೋ ಕಾರ್ಯಕ್ರಮದಲ್ಲಿ ಸಂಬಂಧಗಳ ಬಗ್ಗೆ ಏನೋ ಮಾತುಕಥೆಗಳನ್ನು ಕೇಳಿಕೊಂಡು ಬರ್ತಾ ಇದ್ದೆ, ಆ ಕಾರ್ಯಕ್ರಮದಲ್ಲಿ ಮಾತನಾಡಿದೋರೆಲ್ಲ, ಅಕ್ಕ, ತಂಗಿ, ಅಣ್ಣ, ತಮ್ಮ, ಗರ್ಲ್ ಫ್ರೆಂಡ್, ಬಾಯ್ ಪ್ರೆಂಡ್, ಗಂಡ-ಹೆಂಡತಿ, ಮದುವೆ, ವಿಚ್ಛೇದನ ಎಂದು ಏನೇನೋ ಹೇಳಿಕೊಂಡು ಬರುತ್ತಿದ್ದರು, ಇವನ್ನೆಲ್ಲ ಕೇಳಿಕೊಂಡ ನನ್ನ ಮನಸ್ಸಿನಲ್ಲಿ ಹಲವಾರು ಆಲೋಚನೆಗಳು ಟಿಸಿಲೊಡೆಯತೊಡಗಿದವು - ಈ ಅಲೋಚನೆಗಳ ಕೊನೆಗೋ ಮೊದಲಿಗೋ what bothers me most ಅನ್ನೋ ಒಂದು ಪ್ರಶ್ನೆ ಮನದಲ್ಲಿ ಉದ್ಭವವಾಗಿದ್ದೇ ತಡ ಮನಸ್ಸು ಒಂದು ರೀತಿ ಜ್ವರ ಬಂದವರ ಥರ ಆಗಿಹೋಯಿತು.

ನಾವೆಲ್ಲರೂ ಅವಕಾಶಗಳನ್ನು ಹುಡುಕಿಕೊಂಡು ಬದುಕನ್ನು ನಡೆಸಿಕೊಂಡು ಒಂದಲ್ಲ ಒಂದು ಕಡೆಗೆ ಹೋಗೋದೇನೋ ನಿಜ, ಆದರೆ ನಮ್ಮನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದ ಕೆಲವು ಋಣಾನುಬಂಧಗಳನ್ನು ನಾವು ಎಲ್ಲಿ ಮರೆಯುತ್ತೇವೋ ಅನ್ನೋದು ನನ್ನ ದುಗುಡದ ಮೂಲವಾಗಿತ್ತು, ಈ ರೀತಿಯ ಮೊರೆಯನ್ನು ಬೇರೆ ಬರಹಗಳಲ್ಲೂ ಓದಿದ್ದೇನೆ. ನನ್ನ ಮಟ್ಟಿಗೆ ಹೇಳೋದಾದರೆ ನನ್ನ ಪುಲ್‌ಟೈಮ್ ವಿದ್ಯಾಭ್ಯಾಸಕ್ಕೆ ಸಹಾಯಮಾಡಿ ನನ್ನನ್ನು ಈ ಸ್ಥಿತಿಗೆ ತಂದವರನ್ನು ನಾನು ನೆನೆಸಿಕೊಂಡು ಅವರ ಜೊತೆ ಮಾತನಾಡೋದೇ ವಾರಕ್ಕೊಂದು ದಿನ, ಅದರಲ್ಲೂ ಕೆಲವು ದಿನಗಳು ಮಾತ್ರ ಎನ್ನುವುದನ್ನು ನನ್ನ ನೆಲೆಯನ್ನು ಬಿಟ್ಟು ಬೇರೆ ನೆಲೆಯಲ್ಲಿ ನಿಂತು ನೋಡಿದರೆ ದುಃಖ ಉಮ್ಮಳಿಸಿ ಬರುತ್ತದೆ. ನನ್ನಂತಹ ಅನಿವಾಸಿಗಳಿಗೆ ಈ ಒಂದು ಭೌತಿಕ ದೂರವೂ ತೊಡಕಾಗಿ ನಿಲ್ಲುತ್ತದೆಯೇ ಹೊರತು ಸಹಾಯಕ್ಕೇನೂ ಬರೋದಿಲ್ಲ. ನಾವೆಲ್ಲ ಸಿಂಗಲ್ ಆಗಿದ್ದಾಗ, ಕೆಲಸಕ್ಕೆಂದು ಬಂದ ಮೊದಲ ದಿನಗಳಲ್ಲಿ ಈ ದೇಶದಲ್ಲೇ ಕ್ರಮೇಣ ಉಳಿದುಕೊಂಡು ಬಿಡುತ್ತೇವೆ ಅನ್ನೋದನ್ನ ನಾನಂತೂ ಯೋಚಿಸಿರಲಿಲ್ಲವೆಂದು ಕಾಣುತ್ತದೆ. ನನ್ನ ವಾರಿಗೆಯವರು ಮಾಹಿತಿ ತಂತ್ರಜ್ಞಾನವನ್ನು ಬೆನ್ನು ಹತ್ತಿ ಗುಳೆ ಹೊರಟುಹೋಗುವವರ ತರಹ ಬಂದವರೇ ವಿನಾ ಖಾಯಂ ವಲಸೆಗಾರರಾಗೇನೂ ಅಲ್ಲ. ಆದರೆ ವಾಸ್ತವದಲ್ಲಿ ಹೇಗಾಗುತ್ತದೆಯೆಂದರೆ ತಿಂಗಳುಗಳು, ವರ್ಷಗಳು ಉರುಳಿ ಕೊನೆಗೆ ಇದೇ ನಮ್ಮ ನೆಲೆಯಾಗಿಬಿಡುತ್ತದೆ, ಆ ಕ್ಷಣದಲ್ಲಿ ನಾವು ಏಕ್‌ದಂ ಎಲ್ಲರಿಂದ ದೂರ ಬಂದು ಬಿಟ್ಟೆವೆ ಎಂದು ಹೆದರಿಕೆಯಾಗತೊಡಗುತ್ತದೆ.

ನಮ್ಮ ಸಂಬಂಧಗಳು ದಿನನಿತ್ಯ ಮಾಮೂಲಿ ಗಮನವನ್ನು ಬೇಡುವಂತಹವು, ಅದರ ದಾಹವನ್ನು ವರ್ಷಕ್ಕೊಮ್ಮೆ ಹೋಗಿ ಮುಖ ತೋರಿಸುವುದರಿಂದ ತಣಿಸಲಾಗದು. ಪ್ರತಿನಿತ್ಯ ವ್ಯಾಯಾಮ ಮಾಡಿ ಸ್ನಾಯುಗಳು ಬಲವಂತವಾಗುವಂತೆ, ದಿನೇ-ದಿನೇ ಮಾಡುವ ಧ್ಯಾನದಿಂದ ಮನಸ್ಸು ಪರಿಪಕ್ವವಾಗುವಂತೆ ಸಂಬಂಧಗಳ ನಿರ್ವಹಣೆಯೂ ಪ್ರತಿನಿತ್ಯದ ಕಾಯಕವಾಗಬೇಕಲ್ಲವೇ? 'ಎಷ್ಟೋ ವರ್ಷದ ಮೇಲೆ ಮುಖ ತೋರಿಸೋಕೆ ಬಂದೋನು, ಕೇವಲ ಕೆಲವೇ ಘಂಟೆಗಳ ಮಟ್ಟಿಗೆ ಇರ್ತಾನಂತೆ!' ಎಂದು ನನ್ನನ್ನು ನನ್ನ ಅಕ್ಕ-ತಂಗಿಯರು ಧಾರಾಳವಾಗಿ ನನ್ನ ಎದುರೇ ಬೈದುಕೊಳ್ಳುತ್ತಾರೆ - ಕ್ಷಮಿಸಿ, ಅವರಿಗೆ ನಾನು ಮಾಡುತ್ತಿರುವ ಕೆಲಸದ ಗೋಜು-ಗೊಂದಲಗಳೊಂದೂ ತಿಳಿಯದು, ಅವರಿಗೆ ನನ್ನಿಂದ ಬೇಕಾಗಿರುವುದು ಏನೂ ಇಲ್ಲ, ಹಾಗಿದ್ದರೂ ನಾನು ಅವರೊಂದಿಗಿರಲಿ ಎಂದು ಅವರು ಆಶಿಸುವುದರಲ್ಲಿ ಸಹಜವಾದ ಸಹೋದರ ಪ್ರೇಮವಿದೆಯೇ ವಿನಾ ಮತ್ತೇನೂ ನನ್ನ ಕಣ್ಣಿಗೆ ಕಾಣಿಸದು. ಹಾಗಂತ ನಾನು ಹೋದಲ್ಲಿ ಬಂದಲ್ಲಿ ಎಲ್ಲರ ಮನೆಯಲ್ಲೂ ಉಳಿದುಕೊಳ್ಳಲೂ ನನಗೆ ಸಾಧ್ಯವಿಲ್ಲದಾಗಿ ಹೋಗಿದೆ, ನಾನು ಒಂದು ರೀತಿ ಬಿಳಿ ಆನೆಯ ಥರ, ನನ್ನನ್ನು ಪೋಷಿಸುವವರು ಹಲವಾರು ಜನರಿಲ್ಲದಿದ್ದರೆ ನನ್ನ ಕೈಕಾಲುಗಳೇ ಅಲ್ಲಾಡವು - ನಮ್ಮಮ್ಮ ಹೇಳೋ ಹಾಗೆ 'ಸಗಣಿ ತಿನ್ನೋರಿಗೆ ಮೀಸೆ ತಿಕ್ಕೋರು ಹದಿನಾರು ಜನ' ಎಂಬಂತೆ. ನನ್ನ ಅಣ್ಣ-ಅಕ್ಕನ ಮಕ್ಕಳಿಗೆ ನಾನು ಎಷ್ಟೋ ವರ್ಷಕ್ಕೊಮ್ಮೆ ಹೋಗಿ ಹೇಗೆ ಓದುತ್ತಾ ಇದ್ದಿ, ಹೋಮ್‌ವರ್ಕ್ ಮಾಡ್ತಾ ಇದ್ದೀಯಾ ಎಂದು ಕೇಳಿದಾಕ್ಷಣ ನನ್ನ ಜವಾಬ್ದಾರಿ ಮುಗಿಯಿತು ಎಂದು ನಾನೇಕೆ ನಿರುಮ್ಮಳವಾಗುತ್ತೇನೋ? ನನ್ನ ಸೋದರತ್ತೆ, ಚಿಕ್ಕಪ್ಪಂದಿರು ಹಾಗೆಯೇ ಮಾಡಿದ್ದರೆ ನಾನು ಇಷ್ಟೊತ್ತಿಗೆ ಎಲ್ಲಿರುತ್ತಿದ್ದೆನೋ ಯಾರಿಗೆ ಗೂತ್ತು? ನಾನೇನೋ ದೊಡ್ಡ ಮನುಷ್ಯ ಎಂದು ಅವರೆಲ್ಲರೂ ನನ್ನೆಡೆಗೆ ನೋಡುವಾಗ ನಾನು ವರ್ಷಗಳಿಗೊಮ್ಮೆ ಅವತರಿಸಿ ಬಂದರೆ ಸಾಕೇ?

ದೂರ ಇರೋದರ ಪ್ರತೀಕ ಅಗಲಿಕೆ - ನಮಗೆ ಬೇಕಾದವರಿಂದ ಎನ್ನುವುದಕ್ಕಿಂತಲೂ ನಮ್ಮ ಅಗತ್ಯವಿರುವವರಿಂದ ಎಂದರೆ ಸರಿ - ಅದನ್ನು ಯಾರು ಸರಿಪಡಿಸದಿದ್ದರೂ ಕಾಲವೇ ಸರಿ ಪಡಿಸಿಕೊಳ್ಳುತ್ತದೆ. ಮನೆಯ ಒಬ್ಬ ವ್ಯಕ್ತಿ ಮುಂದುವರಿದು ಹೋಗುತ್ತಾನೆ ಎನ್ನುವುದು ದೊಡ್ಡದೊಂದು void ಅನ್ನು ಸೃಷ್ಟಿಸದಿರಲಿ ಎನ್ನುವುದು ನನ್ನ ಇಂಗಿತ, ಹೀಗೆ ಈಗಾಗಲೇ ಹುಟ್ಟಿದ ಕಂದಕಗಳನ್ನು ಏನಾದರೂ ಮಾಡಿ ಪ್ರಯತ್ನ ಪಟ್ಟು ಮುಚ್ಚುವುದನ್ನು ಬಿಟ್ಟರೆ ಬೇರೆ ವಿಧಿಯೇ ಇಲ್ಲ. ಮುಪ್ಪಿನಾವಸ್ಥೆಯಲ್ಲಿ ಮತ್ತೆ ನಮಗೆ ಆಸರೆ ಸಿಗಲಿ ಎನ್ನುವುದಕ್ಕಿಂತಲೂ ಈಗ ನಾವು ಗಟ್ಟಿಯಾಗಿರುವಾಗ ಏನೇನು ಮಾಡಬೇಕೋ ಅದನ್ನೆಲ್ಲ ಮಾಡಬೇಕು ಎನ್ನುವುದಕ್ಕೆ ಒತ್ತುಕೊಡುತ್ತಿದ್ದೇನೆ. ಸಂಬಂಧಗಳು ಬೇಡುವ ಗಮನವನ್ನು ದುಡ್ಡಿನಿಂದಲೋ ಮತ್ತೊಂದರಿಂದಲೋ ತುಂಬಿಕೊಡುತ್ತೇನೆ ಎನ್ನುವ ಹುಂಬತನದಿಂದ ದೂರವಿದ್ದರೆ ಆಯಿತು.

***

'ಅಂತರಂಗ'ದಲ್ಲಿ ಸಂಬಂಧಗಳ ಬಗ್ಗೆ ಬಹಳ ಬರೆದಿದ್ದೇನೆ ಎನ್ನಿಸಿ ಹುಡುಕಿ ನೋಡಿದಾಗ ಸುಮಾರು ೧೬೫ ರೆಫೆರೆನ್ಸ್‌ಗಳು ಸಿಕ್ಕವು, ನನ್ನನ್ನು ಕೇಳಿದರೆ ಕನ್ನಡ ಪದಕೋಶದಲ್ಲಿ ನನಗೆ ಅತ್ಯಂತ ಇಷ್ಟವಾಗುವ ಪದ ಎಂದರೆ 'ಬದುಕು', ಅದನ್ನು ಬಿಟ್ಟರೆ 'ಸಂಬಂಧ' - ಆದರೆ ನನಗೇ ಆಶ್ಚರ್ಯವಾಗುವ ಹಾಗೆ 'ಬದುಕು' ಎನ್ನುವುದಕ್ಕೂ ೧೬೫ ರೆಫೆರೆನ್ಸ್‌ಗಳು ಸಿಕ್ಕವು! ಅದು ಗೂಗಲ್ ಅನ್ನು ಉಪಯೋಗಿಸಿ ಹುಡುಕುವುದರ ಮಿತಿ ಇದ್ದಿರಬಹುದು ಅಥವಾ ಕಾಕತಾಳೀಯವಾಗಿರಬಹುದು. ಏನೇ ಆಗಲಿ, ನನ್ನ ಬರಹಗಳಲ್ಲಿ 'ಬದುಕು' ಹಾಗೂ 'ಸಂಬಂಧ'ಗಳು ಧಾರಾಳವಾಗಿ ತೆರೆದುಕೊಂಡಿದ್ದರೆ ಅಷ್ಟೇ ಸಾಕು.

ಸಂಬಂಧಗಳು ವಿಧಿಯ ಮಸಲತ್ತಿರಬಹುದು, ಪೂರ್ವನಿಯೋಜಿತವಾಗಿರಬಹುದು; ಹಾಗಿದ್ದರೆ ಅದನ್ನು ನಿಭಾಯಿಸಿಕೊಂಡು ಹೋಗುವುದೂ ಅಷ್ಟೇ ಸಹಜವೆಂದೆನಿಸೋದಿಲ್ಲವೇಕೆ?

Sunday, November 12, 2006

ಆಲಸ್ಯವೂ ಅಮೃತವೂ...

ನನ್ ಕೇಳಿದ್ರೆ ಈ ಆಲಸ್ಯಾನೇ ಇರಲೀ ಅಂತೀನಿ, ಅಮೃತ ಯಾರಿಗೆ ಬೇಕಾಗಿದೆ ಸ್ವಾಮೀ? ಅದನ್ನ ಕುಡಿದು ಅಜರಾಮರರಾಗಿ ಆಮೇಲೆ ಮಾಡೋದೇನಿದೆ? Good people go to heaven ಅನ್ನೋದು ನಿಮಗೆಲ್ಲಾ ಗೊತ್ತಿರೋದೇ, bad people go everywhere! ಅಂತ ಮೊನ್ನೆ ಯಾರೋ ಸೇರಿಸಿ ಹೇಳ್ತಾ ಇದ್ದದ್ದನ್ನ ನೋಡಿ, ನಾನು ಎಷ್ಟು ಸೋಂಬೇರಿ ಅಂದ್ರೆ ನನ್ನಂತಹವರೂ ಎಲ್ಲೂ ಹೋಗೋದಿಲ್ಲ ಎಂದು ಸ್ಟೇಟ್‌ಮೆಂಟ್ ಕೊಡೋ ಮಟ್ಟಿಗೆ ಬಂದುಬಿಟ್ಟಿದ್ದೇನೆ ನೋಡಿ - ಜೊತೆಯಲ್ಲಿ ಇದನ್ನ ಬರೀತಾ ಬರೀತಾನೇ ಒಂದಿಷ್ಟು ಆಕಳಿಕೆಗಳು ಬೇರೆ ಕೇಡಿಗೆ - ಸುತ್ತಲಿನಲ್ಲಿರೋ ಗಾಳಿಯನ್ನ ಮೂಗಿನಲ್ಲಿ ಉಸಿರಾಡಿ ಬಿಡೋದಕ್ಕೂ ಸೋಂಬೇರಿತನವಾದ್ದರಿಂದಲೇ ಆಗಾಗ್ಗೆ ಬಾಯಿತೆರೆದು ದೊಡ್ಡದಾಗಿ ಒಂದೇ ಏಟಿಗೆ ಎಲ್ಲಾ ಗಾಳಿಯನ್ನೂ ಕುಡಿದು ಬಿಡೋದು - ಮತ್ತೆ ಸಾಯೋತನಕ ಉಸಿರಾಡ್ತಾನೇ ಇರು ಎಂದ್ರೆ ಯಾರಿಗೆ ತಾನೇ ಬೇಸರವಾಗೋಲ್ಲ?

'ನಿಮ್ಮಲ್ಲಿ ಯಾರು ಯಾರು ಸೋಂಬೇರಿಗಳು?' ಅಂತ ಪ್ರಶ್ನೆ ಕೇಳಿದ್ರೆ ನನಗ್ಗೊತ್ತು ನೀವೆಲ್ಲಾ ಕೈ ಎತ್ತ್‌ತೀರಾ ಅಂತ, ನಾನು ಹಾಗೆ ಕೈ ಎತ್ತಿ ತೋರಿಸಿಕೊಳ್ಳಲೂ ಆಗದಿರುವ ಮೈಗಳ್ಳ, ನನ್ನಂತಹವನನ್ನು ನೀವೇ ಬಂದು ಪತ್ತೆ ಹಚ್ಚಿ ಬಿರುದು-ಬಾವುಲಿ ಕೊಟ್ರೇ ತಗೊಂಡ್ರೆ ತಗೊಂಡ್ರೆ, ಬಿಟ್ರೆ ಬಿಟ್ಟೆ. ಈ ಆಲಸ್ಯಕ್ಕೆ ಒಂದು ಅಧಿದೇವರನ್ನ ಕಂಡ್ ಹಿಡಿದ್ರೆ ಅಂತ ಎಷ್ಟೋ ಸಾರಿ ಯೋಚ್ಸಿ ಹಾಗೆ ಮಾಡೋರ್ ಯಾರು ಅಂತ ಅಲ್ಲಿಗೇ ನನ್ನ ಕೈ ಚೆಲ್ಲಿದ್ದೇನೆ. ಆದ್ರೆ ಈ ಪ್ರಪಂಚ ಬಾಳಾ ಕೆಟ್ಟದು ಆದ್ರಿಂದ ನಾವುಗಳು ಸೋಂಬೇರಿಗಳಾದ್ರೂ ಜಗತ್ತಿಗೆ ತೋರಿಸ್ಕೋಬಾರ್ದು ಸಾರ್, ಸದಾ ಏನಾದ್ರೂ ಮಾಡೋ ಕರ್ಮಠರಂತೆ ಕೊನೆಗೆ ಏನಿಲ್ಲವೆಂದರೂ ಮುಸುಡಿಯನ್ನೊಂದು ಮಾಡಿಕೊಂಡಿದ್ರೆ ನಿಮ್ಮ ಬೇಳೇಕಾಳು ಬೆಂದಂತೆಯೇ.

ದಿನಾ ಆಫೀಸ್‌ನಲ್ಲಿ ಅದು-ಇದೂ ಮಾಡು ಅಂತ ಅವರೂ-ಇವರೂ ಹೇಳ್ತಾನೇ ಇರ್ತಾರೆ, ನಾನೋ ಎಷ್ಟು ಕಡಿಮೆ ಕೆಲ್ಸಾ ಮಾಡಿದ್ರೆ ಅಷ್ಟು ಒಳ್ಳೇದು ಅಂತ ಲೆಕ್ಕಾ ಹಾಕ್ತೀನಿ, ಸುಮ್ಮನೇ ರಿಪೀಟೆಬಲ್ ಆಗಿ ಅದೇ-ಅದೇ ಕೆಲ್ಸಾ ಮಾಡಿಕೊಂಡು ಹೆಚ್ಚು ಸಮಯಾ ವ್ಯಯಿಸೋ ಬದ್ಲಿ ಒಂದು ಫಾರ್ಮುಲಾನೋ ಅಥವಾ ಮ್ಯಾಕ್ರೋನೋ ಬರೀತೀನಿ, ಅದರಿಂದ ಕೆಲ್ಸಾ ಜಲ್ದಿ ಆಗುತ್ತೆ, ಆದ್ರೆ ಮಿಕ್ಕುಳಿಯೋ ಟೈಮಲ್ಲಿ ಏನ್ ಮಾಡ್ತೀನಿ ಅಂದ್ರೆ ಬದುಕಿನ್ ಬಗ್ಗೆ ಯೋಚಿಸ್ತೀನಿ. ಸುಮ್ನೇ ಯೋಚಿಸ್ತಾ ಕೂರೋದನ್ನ ನಾನು ಕೆಲ್ಸಾ ಅಂತ ಯಾವತ್ತೂ ಕರದೇ ಇಲ್ಲ. ಎಲ್ರೂ ಏನಾದ್ರೂ ಮಾಡಿ ತೋರಿಸು ಅಂತಾರೇ ವಿನಾ ಯೋಚನೆ ಮಾಡಿ ತೋರಿಸು ಅಂತ ಯಾರೂ ಹೇಳಿದ್ದನ್ನ ನಾನ್ ಕೇಳಿಲ್ಲ...ಅದೂ ಅಲ್ದೇ ಯೋಚನೇ ಮಾಡಿ ತೋರಿಸೋದಾದ್ರೂ ಏನನ್ನ? ನನಗೆ ಒಂದೊಂದ್ ಸರ್ತಿ ಅನುಮಾನ ಬರುತ್ತೆ, ಕೆಲವರು 'ನಾನು ಬಹಳ ದೊಡ್ಡ ಸೋಮಾರಿ!' ಅಂತ ತಮ್ಮನ್ನು ತಾವೇ ಅಂದ್‌ಕೊಳ್ತಾರೆ, ಸೋಮಾರಿತನದಲ್ಲೂ ದೊಡ್ಡದು-ಸಣ್ಣದೂ ಅನ್ನೋದು ಇದೆಯೋ ಅನ್ನೋದು ಬೇರೆ ಪ್ರಶ್ನೆ - ಹೀಗೆ ಸೋಮಾರಿ ಅಂದ್ ಕೊಳ್ಳೋರೆಲ್ಲ ಹೆಚ್ಚು ಹೆಚ್ಚು ಕೆಲ್ಸಾ ಮಾಡ್ತಾನೇ ಇರೋದನ್ನ ನೋಡಿದ್ರೆ, ನನ್ನಂಥಾ ನಿಜವಾದ ಮೈಗಳ್ಳರಿಗೂ ಅವರಿಗೂ ಏನ್ ವ್ಯತ್ಯಾಸ ಅನ್ನೋದು ಅಷ್ಟು ಕೂಡ್ಲೇ ಹೊಳೆಯೋದಿಲ್ಲ. ಅವರವರ ಕೆಲ್ಸಾ ಅವರದ್ದು, ಅದರಲ್ಲಿ ಯಾರು ಯಾರು ಕಡಿಮೆ ಮಾಡ್ತಾರೋ ಅವರೆಲ್ಲ ಶುದ್ಧ ಸೋಂಬೇರಿಗಳು ಅನ್ನೋದನ್ನ ಹೊಸ ವ್ಯಾಖ್ಯಾನ ಅಂತ ಒಪ್ಪಿಕೊಳ್ಳೋದು ಬಿಡೋದು ಎಲ್ಲಾ ನಿಮಗೇ ಸೇರಿದ್ದು.

ಈ ಲೇಜಿನೆಸ್, ಸೋಮಾರಿತನ, ಸೋಂಬೇರಿತನ, ಮೈಗಳ್ಳತನ ಅನ್ನೋದರಲ್ಲೆಲ್ಲಾ ನನಗೆ 'ಮೈಗಳ್ಳತನ' ಅನ್ನೋದು ಬಹಳ ಹಿಡಿಸಿದ ಶಬ್ದ. ಮೈ ಕಳ್ಳತನ ಅನ್ನೋದನ್ನ ಮೈ ಬಗ್ಗಿಸಿ ದುಡಿಯದವರಿಗೆ ಹೇಳೋ ಮಾತು. ಕೆಲಸಕಳ್ಳತನ ಅನ್ನೋದರಲ್ಲಿ ಅಂತಹ ಮಜಾ ಏನೂ ಇಲ್ಲ, ಇಲ್ಲಿ ಮೈ ಕಡಿಮೆ ದುಡಿಯುವಂತೆ ಮಾಡುವುದು ಕೆಟ್ಟ ಮನಸ್ಸಾದರೂ, ಕ್ರಿಯೆಯನ್ನು ಆಧರಿಸಿ ಮೈಗೆ ಕೆಟ್ಟ ಹೆಸರು ಬಂದಿತೇ ವಿನಾ ಮನಸ್ಸಿಗಲ್ಲ ನೋಡಿ. ಅದಕ್ಕೇ ದೊಡ್ಡೋರು ಅನ್ನೋದು 'ಮನ್ನಸ್ಸನ್ನ ನಿಯಂತ್ರಣದಲ್ಲಿಟ್ಟುಕೋ' ಎಂದು, ಇಲ್ಲಾ ಅಂದ್ರೆ ಹೇಳೋದು ಮನಸ್ಸು, ಮಾಡೋದು ಮೈ ಆದ್ದರಿಂದ ಮಂಗ ಮೊಸರು ತಿಂದು ಮೇಕೆ ಮುಸುಡಿಗೆ ಒರಸಿದ ಕಥೆ ಆಗುತ್ತೇ ಅಷ್ಟೇ. ನನಗೂ ಇರೋ ಬಹಳವಾದ ಆಸೆಗಳಲ್ಲಿ ವಿಶ್ವ ಮೈಗಳ್ಳರ ಸಂಘವನ್ನು ಸ್ಥಾಪಿಸಿ ಅದರ ಪ್ರಥಮ ಅಧ್ಯಕ್ಷನಾಗಿ ಮೆರೀಬೇಕು (ಕೆಲ್ಸಾ ಮಾಡಬಾರದು), ಮೈಗಳ್ಳರಲ್ಲಿ ಒಗ್ಗಟ್ಟು ಮೂಡಿಸಿ ಹುರುಪು ತರಬೇಕು ಅನ್ನೋದೂ ಒಂದು. ಹೀಗೆ ಈ ಆಸೆ ಬರುತ್ತೆ ಹೋಗುತ್ತೆ, ಹಾಗೇ ಹಲವಾರು ಯೋಚನೆಗಳೂ ಸಹ. ಹೀಗೆ ಅವ್ಯಾಹತವಾಗಿ ಬರೋ ಯೋಚನೆಗಳನ್ನೆಲ್ಲ ನಿರ್ಲಕ್ಷಿಸಿ ಸುಮ್ಮನೇ ಕುಳಿತು ಅದನ್ನ ಹೇಗೆ ನಿರ್ಲಕ್ಷಿಸಿದೆ ಎಂದು ಯೋಚಿಸುತ್ತಾ ಕೂರುವುದಿದೆ ನೋಡಿ ಅದರಲ್ಲಿರೋ ಗಮ್ಮತ್ತೇ ಬೇರೆ.

ನನ್ ಹಾಗೆ ಬೇಕಾದಷ್ಟು ಜನ ಇದ್ದಾರೆ, ಅವರುಗಳಿಗೆಲ್ಲ ಯಾವ್ ಯಾವ ಪದ ಹೊಂದುತ್ತೋ ಯಾರಿಗ್ ಗೊತ್ತು? ನನಗೊತ್ತಿಲ್ಲದ್ದೇನಾದ್ರೂ ಇದ್ರೆ, ಅದನ್ನು ತಿಳಿಸಿದ್ರೆ, ಸೋಮಾರಿ ಸಂಘದ ಬುಲೆಟಿನ್ ಬೋರ್ಡ್‌ನಲ್ಲಿ ಸದಸ್ಯರಲ್ಲದವರು ಯಾರಾದ್ರೂ ಸಿಕ್ರೆ ಪಬ್ಲಿಷ್ ಮಾಡ್‌ಸ್ತೀವಿ. ಆಸಲ್ಯ ಅಂದ್ರೆ status quo, ಅಮೃತ ಅಂದ್ರೆ ಏನೋ ಒಂದಿಷ್ಟು ತಗೊಂಡು ಕುಡೀಬೇಕು - ಯಾರು ಕೊಡ್ತಾರೆ, ಎಷ್ಟು ಕೊಡ್ತಾರೆ, ಎಷ್ಟು ಕುಡಿದ್ರೆ ಒಳ್ಳೇದು...ಮುಂತಾದ ಪ್ರಶ್ನೆಗಳಿಗೆಲ್ಲ ಉತ್ರ ಕಂಡ್ ಹಿಡೀಬೇಕಾಗುತ್ತೆ, ಆದ್ದರಿಂದಲೇ ನಾನು ಹೇಳ್ತಾ ಇರೋದು - ಆಲಸ್ಯಂ ಸತ್ಯಂ, ಅಮೃತಂ ಮಿತ್ಯಂ!

Thursday, November 09, 2006

ಕೊನೆಗೂ ರಮ್ಸ್ ಹೋದ...

ಕಳೆದ ಒಂದ್ ವಾರ ಏನು ಬಂತು ತಿಂಗಳಿಂದ್ಲೂ ಎಲ್ಲಾ ಕಡೆ ಚುನಾವಣಾ ಪ್ರಚಾರ, ಪ್ರಣಾಳಿಕೆ ಬಗ್ಗೆ ಮಾತೇಮಾತು. ಅಮೇರಿಕದ ಮಧ್ಯಂತರ ಚುನಾವಣೆಗಳು ಒಂದ್ ರೀತಿ ಬೇಕಾದಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದ್ದವು. ೨೦೦೪ ರಲ್ಲೇನೋ ಜನರನ್ನ ಹೆದರಿಸಿ 'ನಿಮಗೆ ನಮ್ಮನ್ನ್ ಬಿಟ್ರೆ ಬೇರೇ ಗತೀನೇ ಇಲ್ಲ...' ಅನ್ನೋ ರೀತಿ ಎಲೆಕ್ಷನ್ ಗೆದ್ದು ಕಾಂಗ್ರೆಸ್ ಮತ್ತು ಸೆನೆಟ್ ಎರಡರಲ್ಲೂ ಮೆಜಾರಿಟಿಯನ್ನು ಪಡೆದು ಮೆರೆದ ರಿಪಬ್ಲಿಕನ್ ಪಕ್ಷದೋರಿಗೆ ಪಾಠ ಕಲಿಸಬೇಕು ಅಂತಾ ಡೆಮೋಕ್ರಾಟಿಕ್ ಪಕ್ಷದೋರು ಒದ್ದಾಡಿದ್ದೇ ಬಂತು ಕೊನೆಗೂ ಅವರಿಗೆ ಬೇಕಾದ ಫಲಿತಾಂಶ ಬಂದ ಹಾಗಿದೆ. ಆಶ್ಚರ್ಯ ಅಂದ್ರೆ ಜನರ ಮನಸ್ಸಿನಲ್ಲಿ ಇತ್ತೀಚೆಗೆ ನಡೆದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಘಟನೆಗಳು ಭಯೋತ್ಪಾದನೆಯಷ್ಟೇ ಮುಖ್ಯವಾಗಿ ಕಂಡುಬಂದಿದ್ದು, ಜೊತೆಯಲ್ಲಿ ರಿಪಬ್ಲಿಕನ್ ಮತದಾರರೂ ಕಣ್ಣು ತೆರೆದು ನೋಡಿದ್ದು.

ಎಲೆಕ್ಷನ್ ವಿವರಗಳು ಏನೇ ಇರಲಿ, ಅದರ ಬಗ್ಗೆ ನಾನೇನು ಹೆಚ್ಚು ಅಥವಾ ವಿಶೇಷವಾಗಿ ಹೇಳೋದೇನೂ ಇಲ್ಲ, ಆದರೆ ಫಲಿತಾಂಶ ಬಂದ ಮರುದಿನ ಡಿಫೆನ್ಸ್ ಸೆಕ್ರೆಟರಿ ಡೋನಾಲ್ಡ್ ರಮ್ಸ್‌ಫೆಲ್ಡ್ (ರಮ್ಸ್) ರಾಜೀನಾಮೆ ಕೊಟ್ಟಿದ್ದು ಬಹಳ ವಿಶೇಷವಾದದ್ದು, ಈ ಘಟನೆಯ ಸುತ್ತಮುತ್ತಲು ನನಗನ್ನಿಸಿದಂತೆ ಬಹಳಷ್ಟು ಇತಿಹಾಸವಿದೆ. ರಮ್ಸ್ ಬಾರೀ ಘಟಾನುಘಟಿ ಮನುಷ್ಯ, ಗರ್ವಿ, ಸಿಡುಕ ಅನ್ನೋದು ಎಲ್ಲರಿಗೂ ಗೊತ್ತು, ಆದರೆ ಆತ ಈ ಹಿಂದೆ ಹಲವಾರು ಬಾರಿ ರಾಜೀನಾಮೆಯನ್ನು ನೀಡಿದ್ದರೂ ಅದನ್ನು ಅಂಗೀಕರಿಸದ ಆಡಳಿತ ಹಾಗೂ ಪ್ರೆಸಿಡೆಂಟ್ ಕೊನೆಯ ದಿನಗಳವರೆಗೂ ರಮ್ಸ್ ಅನ್ನು ಹೊಗಳಿದ್ದೇ ಹೊಗಳಿದ್ದು. ಯೂರೋಪು, ಏಷ್ಯಾ, ಮೊದಲಾದ ಕಡೆ ಮಾಧ್ಯಮಗಳು, ರಾಜಕಾರಣಿಗಳು ಹಾಗೂ ಆಡಳಿತಗಳು ರಮ್ಸ್ ಅನ್ನು ಸ್ವಲ್ಪವೂ ಇಷ್ಟಪಡುತ್ತಿರಲಿಲ್ಲ ಎನ್ನುವುದಕ್ಕೆ ರಮ್ಸ್ ರಾಜೀನಾಮೆ ನೀಡಿದ ಮರುದಿನದ ಪತ್ರಿಕೆಗಳ ಹೆಡ್‌ಲೈನುಗಳೇ ಸಾಕ್ಷಿ. ಹೀಗಿದ್ದರೂ ಆತ ಅಧಿಕಾರದಲ್ಲಿದ್ದಾಗ ಅವನ ವಿರುದ್ಧ ಚಕಾರ ಎತ್ತಿದವರ ಧ್ವನಿ ಬಹಳ ಎತ್ತರಕ್ಕೆ ಏರಲೇ ಇಲ್ಲ. ಅಮೇರಿಕದ ಇತಿಹಾಸದಲ್ಲಿ ನೈತಿಕ ಹೊಣೆಹೊತ್ತು ರಾಜೀನಾಮೆ ಕೊಡುವುದು ಇದೆಯಾದರೂ ಅದು ರಮ್ಸ್ ಮಟ್ಟಿಗೆ ಕೊನೆಗೂ ನಿಜವಾಗಲಿಲ್ಲ.

ರಮ್ಸ್ ರಾಜೀನಾಮೆ ನಾಟಕದ ಅಂಕದಲ್ಲಿ ಹೇಳಿದ ಹಾಗೆ ಇರಾಕ್ ಯುದ್ಧ ಅನೋದು ಬಹಳ ಕಾಂಪ್ಲೆಕೇಟ್ ಆದದ್ದು, ತುಂಬಾ ಅನ್‌ಪ್ರಿಡಿಕ್ಟೆಬಲ್, ಕಷ್ಟಕರವಾದದ್ದನ್ನ ಜನರು ಇಂದಲ್ಲ ನಾಳೆ ಅರ್ಥ ಮಾಡಿಕೊಂಡು ಪ್ರೆಸಿಡೆಂಟ್ ಬುಷ್ ಮಾಡಿರೋ ಸಾಧನೆಗಳನ್ನು ಇತಿಹಾಸ ಕೊಂಡಾಡುತ್ತದೆ ಎನ್ನೋ ಹೇಳಿಕೆಗಳು ಜಟ್ಟಿ ಕೆಳಗೆ ಬಿದ್ರೂ ಮೀಸೆ ಮಣ್ಣಾಗಿಲ್ಲ ಅಂದ ಅನ್ನೋ ಹಾಗೆ ಕಾಣಿಸ್ತು. ಯಾವ ಯುದ್ಧ ತಾನೆ ಕಷ್ಟಕರವಾಗಿಲ್ಲ, ಕ್ಲಿಷ್ಟವಾಗಿ ಕಾಣೋಲ್ಲ? ತಾವು ಮಾಡಿದ್ದು ತಪ್ಪು ಅನ್ನೋದನ್ನ ಜನಗಳು ಯಾಕೆ ಒಪ್ಪಿಕೊಳ್ಳೋದಿಲ್ಲ. ಇವರು ತಪ್ಪು ಒಪ್ಪಿಕೊಂಡು ಯಾರಿಗೆ ಏನೂ ಆಗೋದಿಲ್ಲ, ಆಗೋದೆಲ್ಲ ಈಗಾಗಲೇ ಆಗಿಹೋಗಿದೆ. ರಮ್ಸ್ ಅಂತಹ ಜನರು ಆರಲ್ಲ ಅರವತ್ತು ವರ್ಷ ಅಧಿಕಾರದಲ್ಲಿದ್ರೂ ಯುದ್ಧವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳೋದರಲ್ಲಿ ಸೋತು ಹೋಗಿರೋದನ್ನ ಇತಿಹಾಸ ಗುರುತಿಸಿಕೊಂಡರೆ ಸಾಕು.

ಗೂಳಿ ಗುಂಡಿಗೆ ಬಿದ್ರೆ ಆಳಿಗೊಂದು ಕಲ್ಲು ಅನ್ನೋ ಹಾಗೆ ನಾನು ರಮ್ಸ್ ಮೇಲೆ ಅಟ್ಯಾಕ್ ಮಾಡೋ ಪ್ರಯತ್ನ ಮಾಡ್ತಾ ಇಲ್ಲ. ತಾವು ಮಾಡಿದ್ದನ್ನು ಸಾರ್ವಜನಿಕವಾಗಿ ವಿಶ್ಲೇಷಿಸಿಕೊಂಡು ತಪ್ಪನ್ನ ತಪ್ಪು ಅನ್ನೋದರ ಬದಲಿಗೆ ರಮ್ಸ್ ಬಹಳ ಒಳ್ಳೆಯ ಕೆಲಸಗಳನ್ನು ಮಾಡಿದ ಎಂದು ಪ್ರಶಂಸೆ ನೀಡಿಯೇ ಇಂತಹವರನ್ನು ಹೊರದಬ್ಬುವ ನಾಟಕದ ಅಂಕವನ್ನು ನೋಡಿ ಮುಜುಗರವಾಯಿತು. ಇದೇ ರೀತಿ ಮುಂದೆ ಬುಷ್ಷೂ ಅಧಿಕಾರ ತ್ಯಜಿಸಿ ಹೊರಡೋವಾಗ ಜನಗಳು ಆತನನ್ನು ಕೊಂಡಾಡದಿದ್ದರೆ ಸಾಕು. ನನಗೆ ಬುಷ್ ರಿಪಬ್ಲಿಕನ್ ಆಗಿ ಇಷ್ಟವಾಗದೇ ಇರೋದಕ್ಕಿಂತ ಒಬ್ಬ ನಾಯಕನಾಗಿ ಹಲವಾರು ವಿಷಯಗಳಲ್ಲಿ ಸೋತಿರೋದಕ್ಕೆ ವಿಷಾದವಾಗ್ತಾ ಇದೆ. ಈ ಆಧುನಿಕ ಜಗತ್ತಿನಲ್ಲಿ ಇಂತಹವರು ಮಾಡೋ ಅಥವಾ ಮಾಡದಿರುವ ಕೆಲಸಗಳು ಓಟು ಹಾಕಲಿ ಬಿಡಲಿ ಎಲ್ಲರನ್ನೂ ತಟ್ಟುತ್ತವೆ. ಡೆಮಾಕ್ರಟಿಕ್ ಪಕ್ಷ ಮೆಜಾರಿಟಿಗೆ ಬಂದ ತಕ್ಷಣ ಅದು ಲೋಕದ ಕಣ್ಣಿರನ್ನೇನೂ ಒರಿಸೋದಕ್ಕೆ ಹೋಗೋದಿಲ್ಲ, ಅದಕ್ಕಿಂತ ಮೊದಲು ಮಾಡಲಿಕ್ಕೆ ಹಲವಾರು ತುರ್ತು ಕೆಲಸಗಳು ಬಾಕಿ ಇವೆ.

ಅಬ್ಬಾ ಕೊನೆಗೂ ರಮ್ಸ್ ಹೋದ...ಎಂದು ಎಷ್ಟೋ ಜನ ನಿಟ್ಟುಸಿರು ಬಿಟ್ಟಿರಲಿಕ್ಕೂ ಸಾಕು. ಮುಂದೆ ಬಂದ ಗೇಟ್ಸ್‌ಗೆ ಚಾಲೆಂಜುಗಳು ಈಗಾಗಲೇ ಔತಣ ನೀಡತೊಡಗಿವೆ. ಎರಡನೇ ಅಂಕವನ್ನು ಕಾದು ನೋಡಬೇಕಷ್ಟೇ.

Monday, November 06, 2006

ಓಹ್ ಭಾರತದ ನೆನಪೇ...

ನಮ್ ಮನೇಲಿ ನನ್ನನ್ನಂತೂ ಬಹಳ ಹೆದರಿಸಿಬಿಟ್ಟಿದ್ದಾರೆ, ಭಾರತಕ್ಕೆ ಹೋಗೋಕೆ ಟಿಕೇಟ್ ಬ್ಲಾಕ್ ಮಾಡಿಟ್ರೂ, ಮನಸ್ಸಿನೊಳಗೆ ಒಂದ್ ರೀತಿ ಚಡಪಡಿಕೆಯಿಂದ್ಲೇ ತಯಾರಿ ಮಾಡಿಕೊಂಡ್ ಕೂತಿದ್ರೂ ದಿನೇದಿನೇ ಬದಲಾಗೋ ಪ್ರಾಜೆಕ್ಟ್ ಸ್ಕೋಪ್ ಮತ್ತು ಸ್ಕೆಡ್ಯೂಲ್ ಎರಡೂ ನನ್ನನ್ನು ವಾಸ್ತವದಿಂದ ದೂರಾನೇ ಇರೋ ಹಾಗೆ ಮಾಡಿಬಿಟ್ಟಿವೆ, ಎಷ್ಟೋತ್ತಿಗೆ ಬೇಕಾದ್ರೂ ನಮ್ ಕಂಪ್ನಿಯವರು ನಿನ್ನ ವೆಕೇಷನ್ನ್ ಅನ್ನು ಮುಂದಕ್ಕೆ ಹಾಕು ಅಂತ ಹೇಳಿ ನನ್ನ್ ಬೆಲೂನಿನೊಳಗಿರೋ ಗಾಳಿಯನ್ನು ಚುಚ್ಚದೇ ಹೊರತೆಗೆಯಬಲ್ಲರು, ಆದ್ದರಿಂದ್ಲೇ keep the fingers crossed ಅಂತಾರಲ್ಲ ಹಾಗೆ ಸುಮ್ಮನಿದ್ದೇನೆ - jinx, superstition, evil eye ಅಂತಾ ಏನೂ ಇಲ್ಲ, ಬರೀ ವಾಸ್ತವ ಅಷ್ಟೇ, ನನ್ನ ವೆಕೇಷನ್ನು ಯಾವತ್ತು ನಿಜ ಆಗುತ್ತೋ ಆಗ್ಲೇ ಅಗುತ್ತೆ ಅಂತ ಸುಮ್ಮನೇ ಇದ್ದೇನೆ.

ಸರಿ, ಮೂರು ನಾಲ್ಕು ವರ್ಷಗಳ ನಂತರ ಮೂರು ನಾಲ್ಕು ವಾರಕ್ಕೆ ಅಂತ ಹೋದ ಮೇಲೆ ಏನ್ ಏನ್ ಮಾಡೋದು, ಎಲ್ಲಿಲ್ಲಿಗ್ ಹೋಗೋದು, ಯಾರನ್ನ ನೋಡೋದು, ಯಾರನ್ನ ಬಿಡೋದು ಅನ್ನೋ ಆಲೋಚನೆಗಳು ಒಂದ್ ರೀತಿಯಲ್ಲಿ ಮುದ ಕೊಡೋ ಹಾಗೆ ಮತ್ತೊಂದು ರೀತಿಯಲ್ಲಿ ಆಲಸ್ಯವನ್ನೂ ಹುಟ್ಟಿಸುತ್ತವೆ. ಮೊದ್ಲೆಲ್ಲ ಪತ್ರಗಳು ಬಂದು ಸಂಬಂಧಗಳನ್ನ ಜೀವಂತ ಇಡೋವು, ನಂತರ ಅವುಗಳ ಸ್ಥಾನವನ್ನ ಫೋನ್ ಕರೆ ತುಂಬಿಕೊಡುತ್ತೇ ಅನ್ನೋದು ಒಂದು ಹುಸಿ ನಂಬಿಕೆಯೇ ವಿನಾ ನಾನು ಪತ್ರಗಳನ್ನು ಬರೆಯುತ್ತಿದ್ದ ಕಾಲದಲ್ಲಿ ನನ್ನ ಸ್ನೇಹಿತರನ್ನು ನೆನೆಸಿಕೊಂಡಷ್ಟು ಗಾಢವಾಗಿ ಫೋನ್ ಕರೆ ಮಾಡುವಾಗ ಎಲ್ಲೂ ಆ ಬಗ್ಗೆ ಅಷ್ಟೊಂದು ಯೋಚಿಸಲೇ ಇಲ್ಲ. ಫೋನ್ ಕರೆಗಳು ಕಡಿಮೆಯಾಗಿ ಕೊನೆಗೆ ಭಾರತದಲ್ಲಿ ಸ್ನೇಹಿತರು ಅನ್ನೋರು ಇಲ್ಲವೇ ಇಲ್ಲ ಅನ್ನೋ ಸ್ಥಿತಿ ಬಂದಿದೆ - ಸ್ನೇಹಿತರು ಅಂದ್ರೆ ನಿಮ್ಮ ಒಳಹೊರಗನ್ನು ಬಲ್ಲ, ನಿಮ್ಮ ಆಲೋಚನೆಗಳಿಗೆ ಇಂಬುಕೊಡಬಲ್ಲ, ನಿಮ್ಮನ್ನು ಎಂತಹ ಸ್ಥಿತಿ ಸಂದರ್ಭಗಳಲ್ಲೂ ಸಪೋರ್ಟ್ ಮಾಡಬಲ್ಲ ಹಾಗೂ ಹಲವಾರು ವರ್ಷಗಳಿಂದ ನಿಮ್ಮನ್ನು ಬೇರೆಬೇರೆ ಸ್ಥರಗಳಲ್ಲಿ ನೋಡಿದ ಮತ್ತು ನಿಮಗಿಂತ ಬೇರೆಯೇ ವೈಚಾರಿಕ ನೆಲೆಯಲ್ಲಿರುವ ಮಾನವ ಮೂರ್ತಿಗಳು! ಸದು, ವಾಸು, ರಾಘು, ಅಮಿತಾ, ಶ್ರೀಕಾಂತ, ಸುರೇಶ, ಶಂಕ್ರ, ಪ್ರೇಮಾ, ಉಮೇಶ, ಸುಂದರೇಶ, ಮೋಹನೇಶ, ಮುಂತಾದವರು ಈಗ ಎಲ್ಲೆಲ್ಲಿದ್ದಾರೋ ಅವರನ್ನೆಲ್ಲ ನೋಡಿ ಮಾತನಾಡಿಸುವಂತಿದ್ದರೆ...

If all goes well...ಸಾಕಷ್ಟು ತಿರುಗಾಡಬೇಕು, ಒಂದಿಷ್ಟು ಹೊಸ ಪುಸ್ತಕಗಳನ್ನ ಖರೀದಿ ಮಾಡಬೇಕು, ಥಿಯೇಟರುಗಳಲ್ಲಿ ನಾಟಕ ಸಿನಿಮಾಗಳನ್ನು ಯಥೇಚ್ಛವಾಗಿ ನೋಡಬೇಕು, ಇಷ್ಟು ದಿವಸ ಕಳೆದುಕೊಂಡಿರೋ ಭಾರತೀಯ ಟಿವಿ ಕಾರ್ಯಕ್ರಮಗಳನ್ನ ಹುಡುಕಿಕೊಳ್ಳಬೇಕು. ಅವರನ್ನ ಭೇಟಿ ಮಾಡಬೇಕು, ಇವರನ್ನ ನೋಡಬೇಕು ಅಂತಾ ಯೋಚನೆಗಳನ್ನ ಆರಂಭಿಸಿದೆನೋ ಅವುಗಳು ಒಂದೋ ಸಮನೆ ನಾಗಾಲೋಟದಲ್ಲಿ ಹುಚ್ಚೆದ್ದು ಓಡತೊಡಗುತ್ತಾ ಹೋದಂತೆ ಇವಲ್ಲವನ್ನೂ ಮಾಡೋಕೆ ಸಾಧ್ಯವಾ? ಎಂದು ಕೊನೆಯಲ್ಲಿ ಬಂದ ಪ್ರಶ್ನೆ ಎಂಬ ಬಂಡೆಕಲ್ಲಿಗೆ ಅಪ್ಪಳಿಸಿ ನಿಂತುಬಿಟ್ಟವು. ಈ ವೆಕೇಷನ್ನಿಗೆ ಯಾಕಾದರೂ ನಾನಾ ಅರ್ಥಗಳನ್ನು ನಿರೀಕ್ಷೆಗಳನ್ನು ಹುಟ್ಟಿಸಿಕೊಳ್ಳಬೇಕು? ಸುಮ್ಮನೇ ಹೋಗೋದು, ಪರಿಸ್ಥಿತಿಗೆ ನನ್ನನ್ನು ನಾನು ಒಪ್ಪಿಸಿಕೊಂಡು ಬಿಡೋದು, ಸಹಜವಾಗಿ ಹಾಗೂ ನಿರಾತಂಕವಾಗಿ ಏನೇನು ಸಾಧ್ಯವೋ ಅವುಗಳನ್ನು ಮಾಡೋದು ಇಲ್ಲವೆಂದರೆ ಇನ್ನೊಮ್ಮೆ ಪ್ರಯತ್ನಿಸಿದರಾಯಿತು ಎಂದು ಹಿಂತಿರುಗಿ ಬರೋದು - ಇಲ್ಲಿ ಪ್ರಾಜೆಕ್ಟ್‌ಗಳಿಗೆ ಸ್ಕೆಡ್ಯೂಲುಗಳನ್ನು ಕಿಸಿದು ದೊಡ್ಡದಾಗಿ ಮೆರೆದದ್ದು ಬಹಳಷ್ಟು ಆಗಿದೆ, ಸುಮ್ನೆ ಮುಚ್ಕೊಂಡು ನಿನ್ನಷ್ಟಕ್ಕೆ ನೀನಿರೋದನ್ನು ನೋಡು - ಎಂದು ನನ್ನ ಮತ್ತು ಕನ್ನಡಿಯ ಮಧ್ಯೆ ಬರುವ ಅವಕಾಶದಲ್ಲಿ ಇತ್ತೀಚೆಗಷ್ಟೇ ಧ್ವನಿಯೊಂದು ಕೇಳಿಬಂದಂತೆನಿಸಿದ್ದು ನನ್ನನ್ನು ಇನ್ನಷ್ಟು ಹೈರಾಣಾಗಿಸಿದೆ!

ದೊಡ್ಡ ಗಂಡಾಂತರವೆಂದರೆ ನಮ್ಮ ಊರಿಗೆ ನಾನು ಹೆದರಿಕೊಂಡು ಹೋಗಬೇಕಾಗಿ ಬಂದಿರೋದು...ಕೆಲವು ತಿಂಗಳ ಹಿಂದೆ ಇಡೀ ಆನವಟ್ಟಿಯಲ್ಲಿ ಚಿಕುನ್‌ಗುನ್ಯಾ ಖಾಯಿಲೆಯಿಂದ ಜನ ತತ್ತರಿಸಿಹೋಗಿದ್ದು ನಿಜ, ನಮ್ಮೂರಲ್ಲಿ ಎಲ್ಲ ಥರದ ಸೊಳ್ಳೆಗಳೂ ತಮ್ಮ ಅಸ್ತಿತ್ವವನ್ನು ಎಂದಿನಿಂದಲೂ ಇಟ್ಟುಕೊಂಡಿವೆಯಾದ್ದರಿಂದ ನಾನು ಹೋದಷ್ಟು ದಿನದ ಮಟ್ಟಿಗೆ ಅವುಗಳ ಜೊತೆಯಲ್ಲಿ ವಾಸಮಾಡಬೇಕಾಗಿ ಬರೋದು ಅನಿವಾರ್ಯ. ಮೈತುಂಬಾ ಗಂಧವನ್ನು ಅಥವಾ ರಿಪೆಲ್ಲಂಟ್ ಕ್ರೀಮನ್ನು ಲೇಪಿಸಿಕೊಂಡು ವಿದೇಶಿಯರ ಹಾಗೆ ನಾನು ಹುಟ್ಟಿಬೆಳದ ಊರಿನಲ್ಲಿ ಬದುಕೋದಕ್ಕೆ ನನಗೆ ಖಂಡಿತವಾಗಿ ಸಾಧ್ಯವಿಲ್ಲ, ಆದ್ದರಿಂದಲೇ ಹೆದರಿಕೆ ಹೆಚ್ಚಾಗಿದೆ! ನನ್ನ ಬಾಸು ಹೇಳಿದ 'ನೀನು ಸಂಪೂರ್ಣವಾಗಿ ರೆಸ್ಟ್ ತೆಗೆದುಕೊಂಡು ರಿಪ್ರೆಷ್ ಆಗಿ ಬಾ, ನಾನು ನೀನು ಬಂದ ನಂತರ ವೆಕೇಷನ್ ತೆಗೆದುಕೊಳ್ಳುತ್ತೇನೆ...' ಎನ್ನುವ ವಾಕ್ಯಗಳು ಇನ್ನಷ್ಟು ಹೆದರಿಸತೊಡಗುತ್ತವೆ. ಈ ಖಾಯಿಲೆಗಳೆಲ್ಲ ಆಫ್ರಿಕದ ಕಗ್ಗತ್ತಲಿನಲ್ಲೇ ಏಕೆ ಹುಟ್ಟುತ್ತವೆಯೋ, ದಿನೇದಿನೇ ಮ್ಯುಟೇಷನ್ನಿಗೊಳಗಾಗೋ ಈ ವೈರಾಣುಗಳು ಮಾನವ ಕುಲವನ್ನೇ ನಾಶಮಾಡುತ್ತೇವೆ ಎಂದು ಯಾರ ಮೇಲೆ ಪಣತೊಟ್ಟಿವೆಯೋ ಯಾರು ಬಲ್ಲರು? ಹುಟ್ಟೂರಿಗೂ ಹೆದರಿಕೊಂಡು ಹೋಗಬೇಕಾದ ಅನಿವಾರ್ಯತೆ ಬಹಳ ಸಂಕಷ್ಟಕ್ಕೀಡುಮಾಡುತ್ತದೆ ಅನ್ನೋದಂತೂ ನಿಜ -- ಖಾಯಿಲೆ ಬಂದರೆ ಬರಲಿ, ನೋಡಿಕೊಂಡರಾಯಿತು ಎನ್ನುವ ನಮ್ಮುರಿನ ನನ್ನ ಮೊಂಡ ಮನಸ್ಸಿಗೆ ನನ್ನ ಅಮೇರಿಕನ್ ಮನಸ್ಸು ತಿಳಿಸಿಹೇಳಹೋಗಿ ಸೋಲತೊಡಗುತ್ತದೆ. ಹೋದಲ್ಲಿ ಬಂದಲ್ಲಿ ಹಾಗಾದೀತು, ಹೀಗಾದೀತು ಎಂದು ಹೆದರಿಕೆಯಿಂದ ಹೋಗುವ ಬದಲು ಹೋಗದಿದ್ದರೇ ಲೇಸಲ್ಲವೇ? ಅಥವಾ ನನ್ನ ಪೂರ್ವಸಿದ್ಧತೆಗಳನ್ನು ನಾನು ಯಾವಾಗಲೂ ಮಾಡಿಕೊಂಡಿರುವುದೇ ಸರಿಯಾದ್ದೇ.

It is slowly hitting...ಏನು ಅಂದ್ರೆ ರಿಯಾಲಿಟಿ! ನನ್ನ ಭಾರತದ ಇಮೇಜ್ ಸುಮಾರು ಒಂದು ದಶಕಗಳಷ್ಟು ಹಳೆಯದು. ಒಂದು ಶ್ಯಾಂಪೂ ಬಾಟಲಿಗೆ ನಾನು ಇವತ್ತಿಗೂ ಹೆಚ್ಚೂ ಅಂದ್ರೆ ಇಪ್ಪತ್ತು ಇಪ್ಪತ್ತೈದು ರುಪಾಯಿಗಳನ್ನೇ ಕೊಡುವ ಹಾಗೆ ಯೋಚಿಸೋದು. Inflation adjusted ಅಥವಾ ಹಣದುಬ್ಬರಕ್ಕೆ ಹೊಂದಿಕೊಂಡಿರದ ಪರಿಸ್ಥಿತಿಯನ್ನಲ್ಲ ನಾನು ಹೇಳ್ತಾ ಇರೋದು - ಹಳೆಯ ಮನಸ್ಥಿತಿ ಬಗ್ಗೆ. ಎಲ್ಲಾದರೂ ಐವತ್ತು ರುಪಾಯಿಗೆ ಒಂದು ಕಾಫಿಕೊಡುತ್ತಾರೆ ಎಂದು ಓದಿದರೆ ಕುಡಿಯದೇ ಇದ್ದರೆ ಹೇಗೆ ಎಂದು ಯೋಚಿಸುವ ಸ್ವಭಾವದ ಬಗ್ಗೆ. ಇದಕ್ಕೆಲ್ಲ ಒಂದು ಉತ್ತರವಿದೆ, ನಾನು ಕೊಡೋದು-ಕೊಳ್ಳೋದು ಏನಿದ್ದರೂ ನನ್ನ ಅಣ್ಣನ ಮುಖಾಂತರವಾದ್ದರಿಂದ ಅವನಿಗೆ ಹಣಕಾಸಿನ ವಿಷಯಗಳ ಬಗ್ಗೆ ಯೋಚಿಸಲು ಬಿಟ್ಟುಬಿಡುತ್ತೇನೆ, ಅದರಿಂದ ಏನಿಲ್ಲವೆಂದರೂ ನನ್ನ ಮನದೊಳಗಿರುವ ಭಾರತದ ಇಮೇಜ್ ಹಾಗೆಯೇ ಉಳಿಯುತ್ತದೆ - ಏಕೆ, ಇಂತಹ ಇಮೇಜನ್ನು ಸಮಯದಿಂದ ಸಮಯಕ್ಕೆ ಅಪ್‌ಡೇಟ್ ಮಾಡಲು ಹೆದರಿಕೆಯೇ? ಅಥವಾ ಹಳೆಯ ಆಲೋಚನೆಗಳ ಮೇಲೆ ಮನಸ್ಸನ್ನು ನಿಲ್ಲಿಸಿ ಅದನ್ನೇ ಆಸ್ವಾದಿಸುವುದು ಸುಖವೇ? ಅಥವಾ who cares about money ಎನ್ನುವ ಹುಂಬತನವೇ? ಅಥವಾ ನಿಧಾನವಾಗಿ ಓಲ್ಡ್ ಸ್ಕೂಲ್ ಆಗುವ ಬಗೆಗಿರೋ ಸಮಾಧಾನವೇ? ಅಥವಾ ಚಿಂತಿಸಲು ಬೇಕಾದಷ್ಟಿವೆ ಎನ್ನುವ ಹುಂಬ ಧಾರಾಳತನವೇ? ಅಥವಾ ಬಲ್ಲವರು ಆ ಬಗ್ಗೆ ಚಿಂತಿಸಲಿ ಎಂದು ನಿರುಮ್ಮಳವಾಗಿರಬಹುದಾದ ಕನಸೇ?

ಅಬ್ಬಾ, ನಮ್ಮೂರಿನ ಆಲೋಚನೆಗಳು ನನ್ನನ್ನು ಎಂತಹ ನಿದ್ರೆಯಿಂದಲೂ ಏಳಿಸಿಬಿಡಬಲ್ಲವು, ಏಕೆಂದರೆ ಅಲ್ಲಿನ ಘಟನೆಗಳಿಗೆ ಸ್ಪಂದಿಸಬಯಸುವ ನಾನು ಇಲ್ಲಿ ಹಾಯಾಗಿ ನಿದ್ರೆ ಮಾಡುವುದಾದರೂ ಹೇಗೆ?

Sunday, November 05, 2006

ವೀಸಾ ವಿವಾಹ

ಕನ್ನಡ ಚಿತ್ರಗಳು ನಮ್ಮಲ್ಲಿ ಬರೋದೇ ವೀಕೆಂಡ್‌ನಲ್ಲಿ, 'ತುಳಸೀ ಕಾರ್ತೀಕದ ದಿನ ಸಿನಿಮಾ ನೋಡ್ತೀರೇನ್ರೋ?' ಅಂತ ಅಜ್ಜಿ ಎಲ್ಲಿ ಬೈತಾರೇನೋ ಅನ್ನೋ ಭಯವನ್ನು ಮನದಲ್ಲಿ ಮೂಡಿಸಿಕೊಂಡು ಸಿನಿಮಾದ ಹಾದಿ ಹಿಡಿದರೆ ನಮ್ಮೂರುಗಳಲ್ಲಿ ರಸ್ತೆಯ ಉದ್ದಗಲಕ್ಕೆ ತಮ್ಮನ್ನು ತಾವು ತೆರೆದುಕೊಂಡ ನಾನಾ ಮೋಟಾರುವಾಹನಗಳ ದೆಸೆಯಿಂದ ಇವತ್ತೂ ಲೇಟೇ, ಅದೂ ಒಂದಲ್ಲ ಎರಡಲ್ಲ ಮೂವತ್ತು ನಿಮಿಷ! ಎರಡೂ ಕಾಲು ಘಂಟೆ ಸಿನಿಮಾದಲ್ಲಿ ಮೂವತ್ತು ನಿಮಿಷ ತಡವಾಗಿ ಹೋದ್ರೆ ಅದರಲ್ಲೇನು ಉಳಿದಿರೋದು ಅನ್ನೋ ಮಾತೇ ಬರೋಲ್ಲ, ಯಾಕೆಂದ್ರೆ ಇಲ್ಲಿ ಕನಿಷ್ಠ ಪಕ್ಷ ಒಂದು ಹದಿನೈದು ನಿಮಿಷವಾದ್ರೂ ತಡವಾಗಿ ಸಿನಿಮಾ ಆರಂಭವಾಗಿ ಆಯೋಜಕರು ತಡವಾಗಿ ಬರುವವರ ಸಹಾಯಕ್ಕೆ ಬರುತ್ತಾರೆ.

ಮೂವೀಸಿಟಿಯಲ್ಲಿ ಮಧ್ಯೆ ತೂತುಬಿದ್ದ ಬೆಳ್ಳಿ ತೆರೆಗೆ ಒಂದುಕಡೆ ತೇಪೆ ಹಚ್ಚಿದ್ದು ಕಂಡಕೂಡಲೇ ಇದೇನಪ್ಪಾ ನಮ್ಮೂರಿನ ಟೆಂಟ್ ಸಿನಿಮಾಗಳ ಪರದೆಯೇ ಇದಕ್ಕಿಂತ ಚೆನ್ನಾಗಿತ್ತಲ್ಲಾ! ಅನ್ನಿಸಿದ್ದೇನೋ ನಿಜ, ಅದರಲ್ಲೂ ನಾಯಕ-ನಾಯಕಿ ಹಾಗೂ ಚಿತ್ರದಲ್ಲಿ ಹೆಚ್ಚಾಗಿ ಪಾತ್ರವಹಿಸಿದವರೆಲ್ಲರೂ ತೊದಲು ತೊದಲು ಕನ್ನಡವನ್ನು, ಅದರಲ್ಲೂ ಶುದ್ಧ ಕನ್ನಡವನ್ನು ಹಾಸ್ಯಾಸ್ಪದವಾಗುವಷ್ಟರ ಮಟ್ಟಿಗೆ, ಉಚ್ಛಾರಮಾಡಿದಾಗಲಂತೂ ತಮಿಳು ಸಿನಿಮಾಗಳಲ್ಲಿ ನಡುನಡುವೆ ಕನ್ನಡ ಸಂಭಾಷಣೆಗಳನ್ನು ತೋರಿಸಿದ್ದಕ್ಕಿಂತ ಕಟುವಾಗಿ ಕಂಡುಬಂತು. ಉಳಿದವರ ನಿರೀಕ್ಷೆಗಳು ಏನೇನಿದ್ದವೋ ನನಗಂತೂ ಒಂದೇ ಸಮನೆ ನಿರಾಶೆಯಾಗತೊಡಗಿತು. ಆದರೆ ಮಧ್ಯಂತರದ ನಂತರ ಚಿತ್ರದಲ್ಲಿ ಆಸಕ್ತಿ ಹಾಗೂ ಅಭಿಮಾನ ಮೂಡಿಬರುವಂತೆ ಮಾಡಿದವರು ಡಾ. ರಾಘವರೆಡ್ಡಿ.

***

ನಮ್ಮ "ಘಮಘಮ" ವಿಶ್ವೇಶ್ ಅವರದ್ದಾಗಲೀ, ರಾಘವರೆಡ್ಡಿ ಅವರದ್ದಾಗಲೀ ಇಬ್ಬರದೂ ಒಂದೇ ರೀತಿಯ ಹಂಬಲ, ತಮ್ಮ ಸುತ್ತಮುತ್ತಲಿನಲ್ಲಿ ಕನ್ನಡವನ್ನು ಇವರುಗಳು ಹೋಗಿ ಬಂದಲ್ಲೆಲ್ಲ ಸೃಷ್ಟಿಸಿಕೊಳ್ಳಬಲ್ಲರು. ವಿಶ್ವೇಶ್ ಸಂಗೀತವನ್ನು ಅಭ್ಯಾಸಮಾಡಿ ಆಲ್ಬಮ್‌ಗಳನ್ನು ಮಾಡಿಕೊಳ್ಳಲು ತಮ್ಮ ಮನೆಯಲ್ಲೇ ರೆಕಾರ್ಡಿಂಗ್ ಸ್ಟೂಡಿಯೋ ಸ್ಥಾಪಿಸಿಕೊಂಡಿದ್ದರೆ, ರಾಘವ ಅವರು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಮನೆಯಲ್ಲೇ ಒಂದು ಚಿಕ್ಕ ಮೂವಿ ಸ್ಟುಡಿಯೋವನ್ನು ಕಂಡುಕೊಂಡವರು. ಮಧ್ಯಂತರದಲ್ಲಿ ರಾಘವ ಅವರನ್ನು ಪರಿಚಯಿಸಿದ ಮೋಹನ್ - 'ಈಗ ಈ ಚಿತ್ರವನ್ನು ನಿರ್ಮಿಸಿದ ರಾಘವ ಅವರಿಂದ ಒಂದೆರೆಡು ಮಾತು...' ಎಂದು ಪೀಠಿಕೆ ಹಾಕಿಕೊಟ್ಟದ್ದೇ ತಡ ಬಹಳ ಉತ್ಸಾಹದಲ್ಲಿ ರಾಘವ ಅವರು ತಮ್ಮನ್ನು ತಾವು ಪರಿಚಯಿಸಿಕೊಂಡು ಎಲ್ಲರಿಗೂ ಅಪ್ತರಾಗಿ ಹೋದರು. ಅವರದೇ ಮಾತುಗಳಲ್ಲಿ ಈ ಚಿತ್ರವನ್ನು ಯಾವುದೇ ಫಿಲ್ಮ್ ರೋಲ್‌ಗಳಿಲ್ಲದೇ ಸಂಪೂರ್ಣವಾಗಿ ವಿದ್ಯುನ್ಮಾನವಾಗಿ ಮೂರು ವರ್ಷಗಳಲ್ಲಿ ತಯಾರಿಸಿದ್ದು, ಸುಮಾರು ೮೦ ಸಾವಿರ ಡಾಲರ್‌ಗಳನ್ನು ವ್ಯಯಿಸಿ ಕೇವಲ್ ವೀಕೆಂಡ್‌ನಲ್ಲಿ ಮಾತ್ರ ಈ ಚಿತ್ರವನ್ನು ನಿರ್ಮಿಸಲು ದುಡಿದದ್ದು, ಚಿತ್ರಕ್ಕೆ ಬೇಕಾದ ನಟ-ನಟಿಯರನ್ನು ಹೆಕ್ಕಿ ಅವರಿಗೆಲ್ಲ ಕನ್ನಡವನ್ನು ಕಲಿಸಿದ್ದು ಮುಂತಾದ ವಿಷಯಗಳನ್ನು ಭಾವುಕವಾಗಿ ಹಂಚಿಕೊಂಡರು. ಕ್ಯಾಲಿಫೋರ್ನಿಯಾದಲ್ಲಿ ಅದೆಷ್ಟೇ ಜನರು ಕನ್ನಡಿಗರಿದ್ದರೂ ಯಾರೂ ಸಹಾಯಕ್ಕೆ ಬರದಿರುವ ಸ್ಥಿತಿಯನ್ನು ಅವರು ವಿವರಿಸಿದಾಗ 'ಇಲ್ಲಿ ನ್ಯೂ ಜೆರ್ಸಿಯಲ್ಲಿ ಈ ಸಿನಿಮಾವನ್ನು ಮಾಡಿದ್ದರೆ ನಾವು ಸಹಾಯ ಮಾಡುತ್ತಿದ್ದೆವು...' ಎಂದು ಕೆಲವರು ಅಂದರೆ 'ಎಲ್ಲಾ ಕಡೆ ಅದೇ ಪರಿಸ್ಥಿತಿ, ಮೂರುವರ್ಷಗಳ ಈ ಪ್ರಾಜೆಕ್ಟಿನಲ್ಲಿ ಪ್ರತೀ ವೀಕೆಂಡ್‌ನಲ್ಲೂ ತಮ್ಮ ಸಮಯವನ್ನು ಮೀಸಲಾಗಿಡುವುದಕ್ಕೆ ಇಲ್ಲೂ ಹೆಚ್ಚು ಜನರಿಗೆ ಆಗೋದಿಲ್ಲ...' ಎಂದು ಕೆಲವರು ತಿದ್ದಿ ಹೇಳಿದರು.

ರಾಘವ ಅವರು ತಮ್ಮನ್ನು ಪರಿಚಯಿಸಿಕೊಂಡ ಹಾಗೆ ಅವರ ಕಾವ್ಯನಾಮ 'ಕನ್ನಡದಾಸ'. ಈ ಹೆಸರಿಗೆ ತಕ್ಕಂತೆ ನಿಜವಾಗಿಯೂ ಅವರು ಕನ್ನಡದಾಸರೇ. ಚಿತ್ರಮಂದಿರದಲ್ಲಿ ಪ್ರೇಕ್ಷರಿಗೆ 'ಈ ಚಿತ್ರದ ಮುಂದಿನ ಭಾಗ "ಅಮೇರಿಕಾ ಅನುಬಂಧ"ವಾಗಿ ಮುಂದುವರೆಸುತ್ತಿದ್ದೇನೆ...' ಎಂದು ಮಹಾಉತ್ಸಾಹದಲ್ಲಿ ತಮ್ಮನ್ನು ತಾವು ತೆರೆದುಕೊಂಡ ಅವರು 'ನಿಮ್ಮಲ್ಲಿ ಯಾರಾದರೂ ಸಹಾಯ ಮಾಡುವವರಿದ್ದರೆ ದಯವಿಟ್ಟು ಹಾಗೆ ಮಾಡಿ, ಡಬ್ಬಿಂಗ್ ಮಾಡುವಲ್ಲಿ, ಚಿತ್ರಕಥೆಯನ್ನು ಅಳವಡಿಸಿಕೊಳ್ಳುವಲ್ಲಿ ಯಾವುದೇ ರೀತಿಯ ಸಹಾಯಗಳಿಗೂ ನಾನು ಸಿದ್ಧ, ನಿಮಗೇ ಈ ಚಿತ್ರದ ಹಾರ್ಡ್‌ಡ್ರೈವ್ ಕಳಿಸುತ್ತೇನೆ ಬೇಕಾದರೆ' ಎಂದು ವಿನಯಪೂರ್ವಕವಾಗಿ ಮನವಿಮಾಡಿಕೊಂಡರು. ಚಿತ್ರವನ್ನು ತಯಾರಿಸುವಲ್ಲಿ ತಾವು ಅದರ ಉದ್ದಗಲಕ್ಕೂ ಅನುಭವಿಸಿದ ತೊಂದರೆಗಳನ್ನು ಹಂಚಿಕೊಂಡಿದ್ದನ್ನು ನೋಡಿ ನಮಗಂತೂ ಬಹಳ ಸಂತೋಷವಾಯಿತು. ಈ ರೀತಿಯೂ ಮಾಡುವವರಿದ್ದಾರೆ, ತಮ್ಮ ಅಭಿಮಾನವನ್ನು ತಮ್ಮ ಹವ್ಯಾಸವನ್ನು ಮಾತಿನಿಂದ ಕೃತಿಗೆ ತರುವವರಿದ್ದಾರೆ ಎನ್ನುವ ವಿಷಯವನ್ನು ಪ್ರೇಕ್ಷಕರು ಬಹಳ ಸಂತೋಷದಿಂದ ಸ್ವೀಕರಿಸಿ ರಾಘವ ಅವರಿಗೆ ಚಪ್ಪಾಳೆಗಳಿಂದ ಮೆಚ್ಚುಗೆ ಸೂಚಿಸಿದರು, ಈ ಹಿನ್ನೆಲೆ ಮೊದಲೇ ತಿಳಿದ್ದಿದ್ದರೆ ಎಂದುಕೊಂಡವರಲ್ಲಿ ನಾನೂ ಒಬ್ಬ - ಆಗಿನಿಂದಲೇ ಚಿತ್ರವನ್ನು ಮತ್ತೊಂದು ಕೋನದಲ್ಲಿ ನಾನು ನೋಡತೊಡಗಿದ್ದು. ಒಟ್ಟಿನಲ್ಲಿ ರಾಘವ ಅವರ ಸಾಧನೆ ಅಮೋಘವಾದದ್ದು, ಇಂತಹ ಸಾಧನೆಯನ್ನು ಪುಲ್‌ಟೈಮ್ ಜೀವಾಣುಶಾಸ್ತ್ರ ಸಂಶೋಧನೆ ಮಾಡಿಕೊಂಡು ಕೇವಲ ವೀಕೆಂಡ್‌ನಲ್ಲಿ ಮಾಡುವುದು ಸಾಮಾನ್ಯ ಕೆಲಸವೇನಲ್ಲ, ರಾಘವರಂತಹವರಿಗೆ ಶಹಬ್ಬಾಸ್ ಗಿರಿ ಕೊಡಲೇಬೇಕು.

***

ಕೋಲಾರದ ಚಿಂತಾಮಣಿಯ ಹುಡುಗ ಕೃಷ್ಣಾರೆಡ್ಡಿ ಅರಿಜೋನಾದ ಜೆ.ಎಫ್.ಕೆ ವಿಶ್ವವಿದ್ಯಾನಿಲಯಕ್ಕೆ ಪಿ.ಎಚ್‌ಡಿ. ಮಾಡಲೆಂದು ಬರುತ್ತಾನೆ, ಅವನ ಮೇಷ್ಟ್ರು ಡಾ.ಬ್ಲ್ಯಾಕ್ (ಕರಿಯಪ್ಪ) ಅವರ ಜೊತೆ ಬೋಧನೆಯಲ್ಲಿ ಸಹಾಯಕನಾಗಿ ಸೇರಿಕೊಂಡನಂತರ ಹಲವಾರು ಶಿಷ್ಯರಲ್ಲಿ ದಿವ್ಯಪ್ರಭಾ ಪಟೇಲ್ ಎಂಬ ಹುಡುಗಿಯ ಜೊತೆ ವಿಶೇಷವಾಗಿ ಸ್ನೇಹ ಬೆಳೆಯುತ್ತದೆ. ಪರೀಕ್ಷೆಯಲ್ಲಿ ಆಕೆಗೆ 'ಬಿ' ಗ್ರೇಡ್ ಗಳಿಸಿಕೊಡಲೆಂದು ರೆಡ್ಡಿ ಐದು ಕೃಪಾಂಕಗಳನ್ನು ನೀಡಿದ್ದು ಆತನ ಮೇಷ್ಟ್ರಿಗೆ ಸರಿಯೆಂದು ಕಂಡುಬರದೇ ತನ್ನ ಕೆಲಸವನ್ನು ಕಳೆದುಕೊಳ್ಳುವಂತಾಗುತ್ತದೆ, ತನ್ನ ವೀಸಾ ಸ್ಟೇಟಸ್ ಮೂರುತಿಂಗಳಿನಲ್ಲಿ ಮುಗಿದುಹೋಗುವುದರಿಂದ ಒಂದೇ ಭಾರತಕ್ಕೆ ಹೋಗಬೇಕು, ಅಥವಾ ಇಲ್ಲೇ ಯಾರನ್ನಾದರೂ ಅಮೇರಿಕನ್ ಪ್ರಜೆಯನ್ನು ವಿವಾಹವಾಗಬೇಕು ಎನ್ನುವ ಇಬ್ಬಂದಿಗೆ ನಾಯಕ ಬೀಳುತ್ತಾನೆ. ಒಬ್ಬಳು ಕಪ್ಪು ಹೆಂಗಸು, ಇನ್ನೊಬ್ಬಳು ಬಿಳಿಯ ಹುಡುಗಿ ಇವರೆನ್ನೆಲ್ಲ ಮದುವೆಯಾಗುವ ಪ್ರಸಂಗಗಳನ್ನು ಹುಟ್ಟುಹಾಕಿಕೊಂಡು ಅದರ ಹಿನ್ನೆಲೆಯಲ್ಲಿ ನಾಯಕ ದಿವ್ಯಾಳ ಸಲಹೆಯಂತೆ ಆಕೆಯನ್ನೇ ವಿವಾಹವಾಗುತ್ತಾನೆ. ವಿವಾಹವಾದರೂ ಆಕೆಯೊಡನೆ ದೈಹಿಕ ಸಂಬಂಧವನ್ನು ಮಾಡಬಾರದು, ಆಕೆಯನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು ಎನ್ನುವ ಅನೇಕ ಮಾನಸಿಕ ಬಂಧನಗಳಲ್ಲಿ ತೊಳಲಾಡುವುದೂ ಎನ್ನುವುದರಿಂದ ಹಿಡಿದು ಭಾರತದಲ್ಲಿ ಈಗಾಗಲೇ ತನ್ನ ಜೊತೆ ಮದುವೆ ನಿಶ್ಚಯವಾಗಿರುವ ಶೋಭಾಳನ್ನೂ ಕೈ ಬಿಡಬಾರದು ಎನ್ನುವ ನಿರ್ಧಾರಕ್ಕೆ ನಾಯಕಬರುತ್ತಾನೆ. ಒಂದು ಕಡೆ ತಾನು ಮದುವೆಯಾಗಬಾರದು ಎನ್ನುವ ಹಠದಲ್ಲಿರುವ ದಿವ್ಯಾ ಕೇವಲ ಉಪಕಾರ ಸ್ಮರಣೆಗೆ ರೆಡ್ಡಿಯನ್ನು ಮದುವೆಯಾದದ್ದೂ, ಮತ್ತೊಂದು ಕಡೆ ಶೋಭಾಳನ್ನು ಕೈಬಿಡಬಾರದು ಎನ್ನುವ ಗೊಂದಲವೂ, ಜೊತೆಯಲ್ಲಿ ಇಲ್ಲಿ ಡೆನ್ವರ್ ನಲ್ಲಿ ಕೆಲಸ ಮಾಡಿಕೊಂಡು ದೂರವಿರಬೇಕಾದ ಅನಿವಾರ್ಯತೆಯೂ ಇವುಗಳೆಲ್ಲ ಚಿತ್ರದಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸುತ್ತವೆ. ರೆಡ್ಡಿ ಕೊನೆಯಲ್ಲಿ ಯಾರನ್ನು ಮದುವೆಯಾಗಿ ಮುಂದುವರೆಯುತ್ತಾನೆ, ದಿವ್ಯಾಳ ಅಣ್ಣ, ಅಮ್ಮ ಅವರ ಮದುವೆಗೆ ಸಮ್ಮತಿಸುತ್ತಾರೆಯೇ, ರೆಡ್ಡಿ ಗ್ರೀನ್‌ಕಾರ್ಡು ಪಡೆಯುವುದಕ್ಕೆ ಏನೇನು ಮಾಡಬೇಕಾಗುತ್ತದೆ ಎನ್ನುವುದಕ್ಕೆ ಚಿತ್ರವನ್ನು ಖಂಡಿತವಾಗಿ ನೋಡಲೇಬೇಕು. ಅಮೆಚ್ಯೂರ್ ಆರ್ಟಿಸ್ಟ್‌ಗಳು ಮಾಡಿರುವ ಹೋಮ್‌ವಿಡಿಯೋ ಎಂದುಕೊಂಡು ಚಿತ್ರದಲ್ಲಿರುವ ನ್ಯೂನ್ಯತೆಗಳನ್ನೆಲ್ಲ ಬದಿಗೊತ್ತಿ ರಾಘವ ರೆಡ್ಡಿಯವರ ಸಾಧನೆಯನ್ನು ಕಣ್ಣಾರೆ ನೋಡಬೇಕು ಆಗಲೇ ನಿಮಗೆ ಒಂದು ಚಿತ್ರವನ್ನು ಮಾಡುವುದಕ್ಕೆ ಏನು ಪಾಡುಪಡಬೇಕಾಗುತ್ತದೆ ಎನ್ನುವುದು ಗೊತ್ತಾಗುತ್ತದೆ.

***

ರಾಘವ ಅವರ ಕನ್ನಡಾಭಿಮಾನ ಚಿತ್ರದುದ್ದಕ್ಕೂ ಧಾರಾಳವಾಗಿ ಹರಿದುಬಂದಿದೆ. ಚಿತ್ರದಲ್ಲಿ ಎಲ್ಲವೂ ಸಂಪೂರ್ಣವಾಗಿ ಕನ್ನಡಮಯ. ವಿಶ್ವವಿದ್ಯಾನಿಲಯದ ಪ್ರಾಂಗಣದಿಂದ ಹಿಡಿದು, ಮದುವೆ ಮಾಡಿಸುವ ಚರ್ಚಿನವರೆಗೆ, ದೊಡ್ಡ ಕೊಳ್ಳ (ಗ್ರ್ಯಾಂಡ್ ಕ್ಯಾನಿಯನ್)ದಿಂದ ಹಿಡಿದು, ಅರಿಜೋನಾದ ಫಾರ್ಮ್‌ಗಳವರೆಗೆ ಬರುವ ಪಾತ್ರಧಾರಿಗಳೆಲ್ಲ ಸಂಪೂರ್ಣ ಕನ್ನಡದಲ್ಲೇ ವ್ಯವಹರಿಸೋದು. ಚಿತ್ರದಲ್ಲಿ ಬರುವ ಅಮೇರಿಕದವರು, ರಷಿಯನ್ನರು, ಬ್ರೆಜಿಲಿಯನ್ನರು, ಈಜಿಪ್ಶ್ಯನ್ನರು, ಕರಿಯರು, ಬಿಳಿಯರು, ಭಾರತೀಯರು, ಎಲ್ಲರೂ ಶುದ್ಧಕನ್ನಡವನ್ನು ಮಾತನಾಡುವ ಪ್ರಯತ್ನ ಮಾಡಿಸಿರುವುದು ರಾಘವ ಅವರ ಹೆಗ್ಗಳಿಕೆ. ಆದಷ್ಟು ಪಾರಿಭಾಷಿಕ ಪದಗಳಿಗೆ ಕನ್ನಡದ ಪದವನ್ನು ಬಳಸಿರುವುದು ಒಮ್ಮೊಮ್ಮೆ ಹಾಸ್ಯಾಸ್ಪದವೆನಿಸಿದರೂ ರಾಘವ ಅವರ ನಿರೀಕ್ಷೆಯನ್ನು ಮನಸ್ಸಿನಲ್ಲಿಟ್ಟುಕೊಂಡು ನೋಡಿದರೆ ಎಲ್ಲೂ ಅತಿಶಯವೆನಿಸೋದಿಲ್ಲ. ಚಿತ್ರದುದ್ದಕ್ಕೂ ರಾಜ್‌ಕುಮಾರ್ ನಟಿಸಿರುವ ಬಂಗಾರದ ಮನುಷ್ಯ, ಕಸ್ತೂರಿನಿವಾಸ ಮುಂತಾದ ಹಾಡಿನ ಹಿನ್ನೆಲೆಗಳನ್ನು ಬಹಳವಾಗಿ ಬಳಸಿಕೊಂಡು ಪಾತ್ರಗಳೂ ಈ ಹಾಡುಗಳ ಕೆಲವು ಪಂಕ್ತಿಗಳನ್ನು ಅನುಮೋದಿಸುವಂತೆ ಮಾಡಿರುವುದು ಹೆಗ್ಗಳಿಕೆ. ಶಂಕರ್‌ನಾಗ್ ಅವರ 'ಇದುಸಾಧ್ಯ' ಎನ್ನುವ ಚಲನಚಿತ್ರ ಕೇವಲ ೨೪ ಘಂಟೆಗಳಲ್ಲಿ ತಯಾರುಮಾಡಿದ ಮೊದಲ ಭಾರತೀಯ ಚಲನಚಿತ್ರ ಎನ್ನುವಂತೆ, ರಾಘವ ಅವರು ಏಕವ್ಯಕ್ತಿ ಸಂಪಾದನೆಯಲ್ಲಿ ಸಂಪೂರ್ಣವಾಗಿ ವೀಕೆಂಡ್‌ನಲ್ಲಿ ತೆಗೆದಿರುವ ಮೂರುವರ್ಷಗಳ ಪ್ರಾಜೆಕ್ಟ್ 'ವೀಸಾವಿವಾಹ' ಎನ್ನಬಹುದು.

ಈ ಚಿತ್ರದಲ್ಲಿ ನನಗೆ ಎಲ್ಲಕ್ಕಿಂತ ಹೆಚ್ಚು ಮೆಚ್ಚಿಗೆಯಾದದ್ದು ಪಾತ್ರಗಳ ಅಮೇರಿಕನ್ ನಿಲುವು. ಚಿಕ್ಕ ಹಾಗೂ ಚೊಕ್ಕವಾಗಿ ತಾವು ಹೇಳಬೇಕಾದುದನ್ನು ಹೇಳಿ ತಮ್ಮನ್ನು ಕಟ್ಟಿಕೊಳ್ಳುವ ಪಾತ್ರಗಳ ಮನಸ್ಸಿನ್ನಲ್ಲಿ ಅಮೇರಿಕನ್ ಪ್ರಭಾವ ಧಾರಾಳವಾಗಿ ಹೊರಹೊಮ್ಮಿದೆ - 'ಅದು ನನಗೆ ಇಷ್ಟವಿಲ್ಲ' ಎನ್ನುವ ಒಂದೇ ವಾಕ್ಯ ನಾಯಕಿಯ ಪಾತ್ರದಲ್ಲಿ ಬಹಳಷ್ಟು ಗಂಭೀರವಾಗಿ ಹೊರಹೊಮ್ಮಿದೆ. ನಾನು ಮದುವೆಯಾಗೋದಿಲ್ಲ ಎನ್ನುವ ಮಗಳನ್ನು ಅಮ್ಮ, ಅತ್ತಿಗೆ, ಅಣ್ಣಂದಿರು ಅಮೇರಿಕನ್ ಸಂಪ್ರದಾಯದಲ್ಲಿ ಉಪಚರಿಸುವುದೂ, ನಾಯಕಿ ತನ್ನ ವ್ಯಕ್ತಿತ್ವವನ್ನು ಎಲ್ಲಿ ಹೋದರೂ ಕಾಪಾಡಿಕೊಳ್ಳುವುದೂ ರಾಘವ ಅವರು ಬಹಳ ಚೆನ್ನಾಗಿ ಮೂಡಿಸಿದ್ದಾರೆ. ಇಮಿಗ್ರೇಷನ್ ಅಧಿಕಾರಿ ಸಂದರ್ಶನದಲ್ಲಿ ಹದ್ದುಮೀರಿ ವರ್ತಿಸುವುದನ್ನು ನಾಯಕಿಯ ಪಾತ್ರ ಅಮೇರಿಕನ್ ಮಹಿಳೆಯಾಗಿ ಖಂಡಿಸುತ್ತದೆ. 'ನಿನಗೆ ಎಲ್ಲರೂ ಬುದ್ದೂ ಎಂದರೆ, ನಿನ್ನನ್ನು ಎಲ್ಲರೂ ಅವಮಾನಿತನನ್ನಾಗಿ ಮಾಡಿದರೆ ಅದನ್ನು ನೋಡಿ ನೀನೇಕೆ ಸಹಿಸಿಕೊಳ್ಳಬೇಕು?' ಎನ್ನುವ ಮಾತಿಗೆ ನಾಯಕ 'ನನಗೆ ನಾನೇ ಹಾಗಂದುಕೊಳ್ಳುತ್ತೇನಲ್ಲ!' ಎಂದು ಹಾಸ್ಯವಾಗಿ ತೇಲಿಸಿಬಿಡುತ್ತಾನೆ. ಭಾರತೀಯ ಹಿನ್ನೆಲೆಯಲ್ಲಿ ಯೋಚಿಸುವ ನಾಯಕ, ಅಮೇರಿಕನ್ ಹಿನ್ನೆಲೆಯಲ್ಲಿ ಯೋಚಿಸುವ ನಾಯಕಿ, ಹಾಗೂ ಹಲವಾರು ಪಾತ್ರಗಳು ಬಹಳ ಸರಳವಾಗಿ ಬಿಂಬಿತವಾಗಿವೆ, ಈ ಪಾತ್ರಗಳ ಮಾನಸಿಕ ವ್ಯಾಪಾರ ಎಲ್ಲಿಯೂ ಅತಿ ಎನ್ನಿಸುವುದಿಲ್ಲ. ಹೀಗೆ ರಾಘವ ಅವರು ಪ್ರತಿಯೊಂದು ಪಾತ್ರಗಳಿಗೂ ಒಂದು ಸೈದ್ಧಾಂತಿಕ ನೆಲೆಯನ್ನು ಒದಗಿಸುವುದರ ಜೊತೆಗೆ ಅವುಗಳನ್ನು ಇದ್ದಹಾಗೇ ತೋರಿಸುವುದಕ್ಕೆ ಮುತುವರ್ಜಿಯನ್ನೂ ವಹಿಸಿದ್ದಾರೆ.

***

ರಾಘವ ಅವರ ಸಾಧನೆ ನಿಜವಾಗಿಯೂ ಶ್ಲಾಘನೀಯವಾದುದು. ಅಲ್ಲಲ್ಲಿ ಬರುವ ಧ್ವನಿಮುದ್ರಣ ದೋಷಗಳನ್ನು ಅವರು ಮುಂಬರುವ ಚಿತ್ರಗಳಲ್ಲಿ ಖಂಡಿತವಾಗಿ ತಿದ್ದಿಕೊಳ್ಳಬಲ್ಲರು. ಛಾಯಾಗ್ರಾಹಕರಾಗಿ ವೃತ್ತಿಪರರ ಹತ್ತಿರಹತ್ತಿರ ಬಂದರೂ ಸಂಭಾಷಣೆಗಳನ್ನು ಬರೆದು ಒಪ್ಪಿಸುವಲ್ಲಿ ಅವರು ತಮ್ಮನ್ನು ತಾವು ಬಹಳಷ್ಟು ತೊಡಗಿಸಿಕೊಳ್ಳಬೇಕು. ಚಿತ್ರದಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಸಂಕಲನಕ್ಕೆ ಅವರು ಆಧ್ಯತೆಯನ್ನು ಕೊಡಬೇಕು, ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಶೂಟ್ ಮಾಡಿರುವ ಸಿನಿಮಾವಾದ್ದಾರಿಂದ ಅವರು ದೃಶ್ಯಗಳನ್ನು ಸಂಕಲಿಸಿ ಸಹಜವಾಗಿ ಕಥೆಯ ಓಟವನ್ನು ನಿರ್ಮಿಸುವಲ್ಲಿ ಶ್ರಮಿಸಬೇಕು. ಸಂಭಾಷಣೆ ಪೂರ್ಣ ಕನ್ನಡಮಯವಾಗಿರುವುದು ರಾಘವ ಅವರನ್ನ ಬಲ್ಲವರಿಗೆ ಅತಿ ಎನ್ನಿಸುವುದಿಲ್ಲ, ಅವರ ಫೋನ್ ನಂಬರ್ ಅನ್ನು ಕೇಳಿದರೆ ಅವರು ಸಂಖ್ಯೆಗಳನ್ನು ಕನ್ನಡದಲ್ಲಿಯೇ ಹೇಳೋದು! ಮುಕ್ತ ಹಾಗೂ ಸ್ನೇಹಮಯರಾಗಿರುವ ರಾಘವ ಅವರೊಂದಿಗೆ ಬಹಳಷ್ಟು ಜನ ಸಹೃದಯರು ಕೈಗೂಡಿಸಿದರೆ ಅವರ ಮುಂದಿನ ಚಿತ್ರಗಳು ಇನ್ನೂ ಹೆಚ್ಚಿನ ಯಶಸ್ಸನ್ನು ಪಡೆದೇ ಪಡೆಯುತ್ತವೆ ಎಂಬುವುದರಲ್ಲಿ ಯಾವ ಅನುಮಾನವೂ ಇಲ್ಲ. ಮುಂಬರುವ ದಿನಗಳಲ್ಲಿ 'ವೀಸಾವಿವಾಹ'ವನ್ನು ಕೆನಡಾ, ಸಿಂಗಪುರ, ಹಾಂಗ್‌ಕಾಂಗ್, ಭಾರತ ಮುಂತಾದ ದೇಶಗಳಲ್ಲಿ ಬಿಡುಗಡೆ ಮಾಡಲಿರುವ ರಾಘವ ಅವರಿಗೆ ಅಭಿನಂದನೆಗಳು ಹಾಗೂ ಅವರಿಗೆ ಯಶಸ್ಸು ಸಿಗಲಿ ಎನ್ನುವುದು ನನ್ನ ಹಾರೈಕೆ.

Friday, November 03, 2006

ಬಂದದ್ದೆಲ್ಲಾ ಬರಲಿ, ವೀಕೆಂಡ್‌ನಲ್ಲೇ ಬರಲಿ!

ಕೊನೇಪಕ್ಷ ನವೆಂಬರ್ ತಿಂಗಳು ಬಂತು ಈಗಾದರೂ ಪುರುಸೊತ್ತು ಮಾಡಿಕೊಂಡು ಕನ್ನಡವನ್ನು ಓದೋಣವೆಂದುಕೊಂಡರೆ ಟೈಮೇ ಸಿಗುತ್ತಿಲ್ಲ ಎನ್ನುವಂತಾಗಿದ್ದು ನನ್ನ ಪುಣ್ಯವೋ ಅಥವಾ ಕಾಕತಾಳೀಯವೋ ಯಾರಿಗೆ ಗೊತ್ತು ಅಂತ ಯೋಚಿಸ್ತಾ ಕೂತಿದ್ದೆ, ಸಡನ್ ಆಗಿ ನೆನಪಿಗೆ ಬಂತು, ನಮ್ಮ ರಾಜ್ಯದಲ್ಲಿ ಈ ತಿಂಗಳು ತುಂಬೆಲ್ಲಾ ಎಲ್ಲಾ ಕಡೆ ರಾಜ್ಯೋತ್ಸವ ಆಚರಿಸ್ತಾರೆ ಆದ್ದರಿಂದ ನನಗೂ ನಮ್ಮ ರಾಜ್ಯೋತ್ಸವ ಈ ವಾರಾಂತ್ಯದಲ್ಲೇ ಆಗಲೀ ಎಂದು ಕನ್ನಡ ರಾಜ್ಯೋತ್ಸವವನ್ನು ಅಮೇರಿಕನ್ ಮಯವಾಗಿ ಮಾಡಿಬಿಟ್ಟರೆ ಹೇಗೆ ಎಂದು ಯೋಚಿಸಿಕೊಂಡಾಗ ಒಮ್ಮೆ ನಗುಬಂತು. ಹೌದು ಮತ್ತೆ, ವಾರವಿಡೀ ತುಂಬಾ ವ್ಯಸ್ತರಾಗಿರೋ ನಮಗೆ ಆಗುಹೋಗೋ ಕೆಲಸಗಳೆಲ್ಲ ವೀಕೆಂಡ್‌ನಲ್ಲೇ ಬರಬೇಕಪ್ಪಾ, ವಾರದ ದಿನಗಳಲ್ಲಿ ಯಾವನಾದ್ರೂ ಮಹೂರ್ತ ನೋಡಿ ಮದುವೆ ಆಗ್ತಾನಾ ಈಗಿನ್ ಕಾಲದಲ್ಲಿ? ಹಾಗೇನಾದ್ರೂ ಆದ್ರೆ ಒಂದ್ ಲೆಕ್ಕಾ ಒಳ್ಳೇದೇ ಊಟಕ್ಕೆ ಜನ ಕಡಿಮೆ, ಖರ್ಚೂ ಕಡಿಮೆ. ಇದ್ದುದರಲ್ಲಿ ಯಾವುದು ಮಹಾಪಾಪ? ತಿಂಗಳು ತುಂಬೆಲ್ಲಾ ರಾಜ್ಯೋತ್ಸವ ಆಚರಿಸಿದೋ ಅಥವಾ ಮಾಡೋದೇನಿದ್ರೂ ವೀಕೆಂಡಿನಲ್ಲೇ ಇರಲಿ ಅನ್ನೋದೋ?

ಅದೂ ಸರಿ, ಈ ಐದು ದಿನಗಳ ಕೆಲಸ ನಡೆಯೋ ಒಂದು ವಾರಕ್ಕೆ ಎರಡು ದಿನಗಳ ಬ್ರೇಕ್ ಎಲ್ಲಿಯ ಸಮ? ಕೊನೇ ಪಕ್ಷ ಐದು ದಿನಕ್ಕೆ ಎನಿಲ್ಲಾ ಅಂದ್ರೂ ನಾಲ್ಕು ದಿನಾನಾದ್ರೂ ರಜೆ ಇರಬೇಕಪ್ಪಾ? ಹಂಗಾದ್ರೆ ಒಂದು ವಾರದಲ್ಲಿ ಒಂಭತ್ತು ದಿನಗಳು ಆದಹಾಗೆ ಆಗಲಿಲ್ವಾ? ಹೌದು ಮತ್ತೆ, ಒಂಭತ್ತು ದಿನಗಳು ಅಂದ್ರೆ ರವಿಯಿಂದ ಹಿಡಿದು ಶನಿಯವರೆಗೆ ಏಳು ಗ್ರಹಗಳಿಗೆ ಏಳುದಿನಗಳನ್ನು ಮೀಸಲಿಟ್ಟು ಒಂದು ವಾರ ಅಂತ ಕರೆದರೆ, ಇನ್ನುಳಿದ ಎರಡು ಗ್ರಹಗಳಿಗೇಕೆ ವಾರವಿಲ್ಲ? ಇದು ಅನ್ಯಾಯ, ಒಂಥರಾ ಡಿಸ್ಕ್ರಿಮಿನೇಷನ್ - ಸೈಜು ದೊಡ್ಡದಿದ್ದ ಗ್ರಹಗಳಿಗೆ ಒಂದು ರೀತಿ, ಸೂರ್ಯನಿಗೆ ಹತ್ತಿರವಿದ್ದ ಗ್ರಹಗಳಿಗೆ ಮತ್ತೊಂದು ರೀತಿ. ಇದು ಪಕ್ಕಾ ಅನ್ಯಾಯ, ಯಾವುದಾದ್ರೂ ಲಾಯರ್ ಕರೆದು ಸೂ ಮಾಡ್‌ಬೇಕು, ಕಂಪೆನ್ಸಟೋರಿ ಡ್ಯಾಮೇಜು, ಪ್ಯುನಿಟಿವ್ ಡ್ಯಾಮೇಜು ಎಲ್ಲಾ ಸೇರಿ ಸುಮಾರು ಒಂದು ನಾಲ್ಕು ನೂರು ಮಿಲಿಯನ್ ಡಾಲರ್‌ಗೆ ಸೂ ಮಾಡಿದ್ರೆ, ಅದರಲ್ಲಿ ಹತ್ತು ಪರ್ಸೆಂಟ್ ನಾನಿಟ್ಟುಕೊಂಡು ಇನ್ನು ಉಳಿದುದ್ದರಲ್ಲಿ ಅರ್ಧ ಬಾಚಿಕೊಂಡ ಲಾಯರ್‍ಗಳಿಗೆ ಗುಡ್‌ಬೈ ಹೇಳಿದ ಮೇಲೆ 'ಗ್ರಹಗಳ ಗ್ರಹಚಾರಕ್ಕೊಂದು ಫಂಡ್' ಎಂದು ಒಂದು ಚಾರಿಟೆಬಲ್ ಗ್ರೂಪ್ ಹುಟ್ಟಿಸಿದರೆ ಆಯಿತಪ್ಪಾ ಅದೇನು ಮಹಾ?

ಪಾಪ, ಆ ಪ್ಲುಟೋ ಗ್ರಹವನ್ನ ಗ್ರಹ ಅಂತಾನೇ ಕನ್ಸಿಡರ್ ಮಾಡಲ್ಲಾ ಅಂದರಂತೆ? ಛೇ, ಏನ್ ಟೈಮ್ ಬಂತಪ್ಪಾ, ನಮ್ ಕಾಲದಲ್ಲೇ ಎಷ್ಟೊಂದ್ ಚೆಂದಿತ್ತು, ನವಗ್ರಹಗಳು ಅಂತ ಪೂಜೆ ಮಾಡ್ತಿದ್ವಿ, ಪ್ಲುಟೋನೂ, ನೆಪ್ಚೂನೂ ಅಣ್ಣಾತಮ್ಮಾ ಇದ್ದಂಗೆ ಅಂತ ತಿಳಕೊಂಡು ನಮ್ ಪ್ರಪಂಚಕ್ಕೆ ನವಗ್ರಹ ಅಂತ ಹೇಳಿಕೊಂಡು ತಿರುಗುತಿದ್ವಿ, ಈಗ ನೋಡಿದ್ರೆ ನಮ್ ಪ್ರಪಂಚಕ್ಕೆ ಕೇವಲ ಎಂಟೇ ಎಂಟು ಗ್ರಹಗಳಂತೆ - ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ, ಗುರುಶುಕ್ರಶನಿಭ್ಯಶ್ಯ ರಾಹುವೇಕೇತುವೇ ನಮಃ - ಎಂದು ಹೇಳೋ ಮಂತ್ರದಲ್ಲಿ 'ರಾಹುವೇಕೇತುವೇ' ಅನ್ನೋದು ಪ್ಲುಟೋ ಜಾಗದಲ್ಲಿ ರಾಹು ಬಿಡ್ತೀರೋ ಕೇತು ಬಿಡ್ತೀರೋ ಅಂತ ಕೇಳಿದಂಗ್ ಆಗಲ್ವಾ? ನಾನು ಕೇಳಿದ ಮಟ್ಟಿಗೆ ಯಾವನಿಗಾದ್ರೂ ಗ್ರಹಗತಿಯಲ್ಲಿ ರಾಹು ಕೆಟ್ಟದಿದೆ ಅಂತ ಕೇಳಿದ್ದೀನಿಯೇ ವಿನಾ ಕೇತು ಕೆಟ್ಟದಿದೆ ಅಂತ ಎಲ್ಲೂ ಕೇಳಿಲ್ಲ, ಜೊತೆಗೆ ರಾಹುಕಾಲ ನಮಗ್ಯಾವತ್ತಿದ್ರೂ ಬೇಕು ಆದ್ರಿಂದ ಪ್ಲುಟೋಗೆ ಕೊಕ್ ಕೊಟ್ಟ್ ಹಾಗೆ ಕೇತುಗೆ ಕೊಟ್ರೆ ಹೆಂಗೆ ಅಂತ ಒಂದ್ಸರ್ತಿ ಯೋಚ್ನೆ ಬಂತು. ಆದ್ರೆ ಧರ್ಮರಾಯ ಅರ್ಜುನ, ಭೀಮರಂತ ಮಹಾ ಪರಾಕ್ರಮಿಗಳನ್ನೆಲ್ಲ ಬಿಟ್ಟು ನನಗೆ ಮಾದ್ರಿ ಮಗ ನಕುಲ ಬದುಕಿ ಬರಲಿ ಅಂತ ಆ ಮಾತನಾಡೋ ಸರೋವರದ ಹತ್ರ ಕೇಳಿರ್‌ಲಿಲ್ವೇ? ಹಂಗೆ ಕೇತುಗೆ ಏನೇನು ಲಾಬಿ ಇದೆಯೋ ಯಾರಿಗ್ ಗೊತ್ತು.

ನನ್ ಪ್ರಕಾರ ಎಂಟು ಗ್ರಹಗಳಿಗೆ ತಕ್ಕನಾಗಿ ಎಂಟು ವಾರದ ದಿನಗಳಿರಬೇಕು. ಅದ್ರಲ್ಲಿ ಐದು ದಿನ ಕೆಲ್ಸ ಇನ್ನು ಮೂರು ದಿನ ಖಾಲಿ ಇರಬೇಕು, ರಾವಣ ಅಷ್ಟ ದಿಕ್ಪಾಲಕರನ್ನೆಲ್ಲ ತನ್ನ ಕಾಲಡಿ ಕೂಡಿ ಹಾಕಿಟ್ಟುಕೊಂಡಿದ್ದ ಹಾಗೆ ನಾವೂ ಏನಾದರೊಂದು ಮಾಡಿ ನಮ್ ಹಬ್ಬ-ಹರಿದಿನ-ಆಚರಣೆಗಳೆಲ್ಲ ಈ ಮೂರುದಿನದ ವೀಕೆಂಡ್‌ನಲ್ಲೇ ಬರೋಹಾಗೆ ಮಾಡಬೇಕು. ಈ ಅಮೇರಿಕದೋರು ಆಕಾಶದಲ್ಲಿ ಸೂರ್ಯನಿಗೆ ಒಂದ್ ದೊಡ್ಡ ಕನ್ನಡಿ ಇಟ್ಟು ಯಾವತ್ ನೋಡಿದ್ರು ಇಲ್ಲಿ ೭೨ ಡಿಗ್ರೆ ಫ್ಯಾರನ್‌ಹೈಟ್ ಟೆಂಪರೇಚರ್ ಇರೋ ಹಾಗೆ ಮಾಡಬೇಕು ನೋಡಿ, ಅವಾಗಿರತ್ತೆ ಮಜಾ!