Wednesday, May 30, 2007

ಹೊರ(ಗಿನವನ)ನೋಟ

ಅಮೇರಿಕದ ಮಾದ್ಯಮಗಳಲ್ಲಿ ಹೊರ ದೇಶಗಳಲ್ಲಿನ ಜನರ ವಾರ್ಷಿಕ ಆದಾಯ ಇಷ್ಟಿದೆ ಎಂದು ಡಾಲರುಗಳಲ್ಲಿ ಹೇಳುವುದು ಸಾಮಾನ್ಯ. ಉದಾಹರಣೆಗೆ ಒಬ್ಬ ಸಾಮಾನ್ಯ ಭಾರತೀಯನೊಬ್ಬ ದಿನಕ್ಕೆ ನಲವತ್ತರಿಂದ ಐವತ್ತು ರೂಪಾಯಿಗಳನ್ನು ದುಡಿದರೆ ಆತನ ಆ ದಿನದ ಆದಾಯ ಒಂದು ಡಾಲರ್‌ಗೆ ಸಮ, ವರ್ಷಕ್ಕೆ ಅದು ಸುಮಾರು ಮುನ್ನೂರೈವತ್ತು ಡಾಲರ್ ಆಗಬಲ್ಲದು. ಇದೇ ರೀತಿ ಹೊರ ದೇಶಗಳಲ್ಲಿಯೂ ಸಹ ಇಲ್ಲಿನ ಬೆಲೆ, ಯೂನಿಟ್‌ಗಳು ಅಲ್ಲಿ ಮಹಾನ್ ಆಗಿ ಕಾಣಬಹುದು. ಉದಾಹರಣೆಗೆ ಪ್ರಿನ್ಸೆಸ್ ಡೈಯಾನ ಕಾರ್ ಆಕ್ಸಿಡೆಂಟ್‌ಗೆ ಸಿಕ್ಕು ಕ್ರಿಟಿಕಲ್ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿಕೊಂಡಿದ್ದಾಗ, ಆಕೆಯಿದ್ದ ಕಾರು ಘಂಟೆಗೆ ನೂರಾಹದಿನೈದು ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿತ್ತು ಎಂದು ವರದಿಯಾದಾಗ ಭಾರತದಂತಹ ದೇಶದಲ್ಲಿ ಅದು ಮಹಾನ್ ವೇಗವಾಗಿ ಕಾಣಿಸಿದರೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅದು ಸಹಜವಾದ ಸ್ಫೀಡ್‌ ಲಿಮಿಟ್ ಆಗಿರಬಹುದು. ಸಾಮಾನ್ಯವಾಗಿ ವಿದೇಶಗಳ ವರದಿಗಳನ್ನು ಓದಿ/ಕೇಳಿದಾಗ ಈ ರೀತಿಯ ತಿಳುವಳಿಕೆ ಇಲ್ಲದಿದ್ದರೆ ನಮಗೆ ದೊರಕಬಹುದಾದ ವಿಷಯ ವಸ್ತುಗಳನ್ನು ನಾವು ಹೇಗೆ ಬಳಸುತ್ತೇವೆ ಎನ್ನುವಲ್ಲಿ ಬಹಳಷ್ಟು ವ್ಯತ್ಯಾಸಗಳಾಗುತ್ತವೆ.

ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಬಲು ಕಷ್ಟ - ಇಲ್ಲಿ ದೊರೆಯಬಹುದಾದ ಒಂದು ಲೀಟರ್ ಪೆಟ್ರೋಲ್ ಬೆಲೆ, ಒಂದು ಲೀಟರ್ ಬಾಟಲ್ ನೀರಿಗಿಂತಲೂ ಕಡಿಮೆ ಇರಬಹುದು. ಆದರೆ ಕೆಲವು ವಸ್ತುಗಳು ಉಳಿದ ದೇಶಗಳಿಗಿಂತ ಹೆಚ್ಚು ತುಟ್ಟಿಯಿರಬಹುದು. ಉದಾಹರಣೆಗೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಪ್ರಾಸೆಸ್ಸುಗಳು (ಮ್ಯಾನುಫ್ಯಾಕ್ಚರಿಂಗ್, ಮಾರ್ಕೆಟಿಂಗ್, ಲೀಗಲ್, ಡಿಸ್ಟ್ರಿಬ್ಯೂಷನ್, ಇತ್ಯಾದಿ) ಜ್ವರ, ಕೆಮ್ಮು ಮುಂತಾದ ಸಾಧಾರಣ ಅನಾರೋಗ್ಯಗಳಿಗೆ ಉಪಯೋಗಿಸಲ್ಪಡುವ ಮದ್ದು ಬಹಳ ದುಬಾರಿ ಎನಿಸಬಹುದು. ಭಾರತದಲ್ಲಿ ಬಹಳಷ್ಟು ಜನರು ಬಳಸಬಹುದಾದ ಸಂತಾನ ನಿರೋಧಕ ಮಾತ್ರೆಗಳು ರೂಪಾಯಿಗೆ ಒಂದು ಪ್ಯಾಕೆಟ್ ಸಿಗಬಹುದು, ಆದರೆ ಅಮೇರಿಕದಂತಹ ದೇಶಗಳಲ್ಲಿ ಇಪ್ಪತ್ತು ಮಾತ್ರೆಗಳಿಗೆ ಹದಿನೈದು ಡಾಲರ್‌ಗಳಾಗಬಹುದು. ಇಂತಹ ಮಾತ್ರೆಗಳನ್ನು ತಯಾರಿಸಿ, ಹಂಚುವ ಪ್ರಕ್ರಿಯೆಗಲ್ಲಿ ಸರ್ಕಾರದ ಕೈವಾಡ ಇದೆಯೇ ಇಲ್ಲವೇ ಎನ್ನುವುದೂ ಬೆಲೆಗಳಲ್ಲಿ ವ್ಯತ್ಯಾಸವನ್ನುಂಟುಮಾಡಬಲ್ಲದು.

ನಿನ್ನೆ ಎರಡೂವರೆ ಎಮ್‌ಎಲ್ ಬಾಟಲಿ ಐ ಡ್ರಾಪ್ಸ್‌ಗೆ ಇನ್ಷೂರೆನ್ಸ್ ಇದ್ದೂ ನಲವತ್ತೆರಡು ಡಾಲರ್ ಕೊಡಬೇಕಾಗಿ ಬಂದಾಗಲೇ ನಾನು ಬೆಲೆಗಳ ಬಗ್ಗೆ ಯೋಚನೆ ಮಾಡತೊಡಗಿದ್ದು! ಇನ್ಷೂರೆನ್ಸ್ ಇಲ್ಲದವರು ಒಂದೊಂದ್ ಮಿಲಿಲೀಟರ್‌ಗೆ ಇಪ್ಪತ್ತೈದು ಡಾಲರ್ ಕೊಡಬೇಕಾಗಿ ಬರಬಹುದಾದ ಒಂದು (after all) ಸೀಸನಲ್ ಅಲರ್ಜಿ ಡ್ರಾಪ್ಸ್‌ಗೆ ಅಷ್ಟೊಂದು ಹಣವೇ? ಈ ವ್ಯವಸ್ಥೆಯಲ್ಲಿ ಏನೋ ಕೊರತೆ ಇದೆ, ಅಥವಾ ನನಗೆ ಗೊತ್ತಿರದ ಯಾವುದೋ ಸೂತ್ರವನ್ನಾಧರಿಸಿ ಅತಿಯಾಗಿ ಬೆಳೆದುಹೋಗಿದೆ. ನನ್ನ ಅಕ್ಕಪಕ್ಕದವರಲ್ಲಿ ವಿಚಾರಿಸಲಾಗಿ 'ಇಷ್ಟೊಂದು ದುಬಾರಿಯೇ!' ಎಂದು ಅವರು ಮೂಗಿನ ಮೇಲೆ ಬೆರಳೇರಿಸದಿರುವುದನ್ನು ನೋಡಿ ಇನ್ನೂ ಆಶ್ಚರ್ಯವಾಗತೊಡಗಿತು.

ಒಂದೇ ಒಂದು ಡಾಲರ್, ಅದರ ಬೆಲೆ, ಮೌಲ್ಯ ಅದರ ಹಿಂದಿನ ಮೆಹನತ್ತು - ಪ್ರತಿಯೊಬ್ಬರಿಗೂ ಭಿನ್ನವಾಗಿರುತ್ತದೆ. ಅಮೇರಿಕದಲ್ಲಿ ಘಂಟೆಗೆ ಕೇವಲ ಎರಡು ಡಾಲರ್ ದುಡಿಯುವವರಿಂದ ಹಿಡಿದು ಸಾವಿರಾರು ಡಾಲರುಗಳನ್ನು ಕಮಾಯಿಸುವವರಿದ್ದಾರೆ, ಅವರೆಲ್ಲರಿಗೂ ಅವವರವರದ್ದೇ ಆದ ಫಿಲಾಸಫಿ ಇರುತ್ತದೆ, ಆಯ-ವ್ಯಯಗಳಿರುತ್ತವೆ. ಇಂಥವರನ್ನೆಲ್ಲ ಕಟ್ಟಿ ಹಾಕಲು ಹಗ್ಗದ ಹಾಗೆ ಒಂದೇ ಪ್ರಾಸೆಸ್ಸು ಇರಲು ಸಾಧ್ಯವಿಲ್ಲ, ಬೇರೆ ಬೇರೆ ರೀತಿನೀತಿಗಳು ಇದ್ದೇ ಇರುತ್ತವೆ ಎನ್ನುವುದು ಬಹಳ ದೊಡ್ಡ ಮಾತು. ನಾವೇನಾದರೂ ಆರ್ಥಿಕ ಸರಪಳಿಯ ಕೆಳಗಡೆ ಇದ್ದುದೇ ಹೌದಾದರೆ ಸಮಾಜಶಾಸ್ತ್ರದ ಬುನಾದಿಯಾದ 'ಎಲ್ಲರೂ ಒಂದೇ' ಎನ್ನುವ ತತ್ವ ಬಹಳಷ್ಟು ಕಡೆ ಹೊಂದದು ಎನ್ನುವಷ್ಟರ ಮಟ್ಟಿಗೆ ಕೆಟ್ಟದಾಗಿ ಗೋಚರಿಸತೊಡಗುತ್ತದೆ. ಅದೇ ಆರ್ಥಿಕವಾಗಿ ಅನುಕೂಲವಾಗಿದ್ದವರಿಗೆ ಅವೇ ತತ್ವಗಳು ಮತ್ತಿನ್ನೊಂದು ಕೋನದಲ್ಲಿ ಕಾಣತೊಡಗುತ್ತವೆ. ಒಂದು ಅಗತ್ಯವಸ್ತುವಿನ ಬೆಲೆ - ಅದು ಹಾಲಾಗಿದ್ದರಬಹುದು, ನೀರಾಗಿದ್ದರಬಹುದು, ಅಥವಾ ಪೆಟ್ರೋಲ್ ಆಗಿರಬಹುದು - ಸಮಾಜದ ವಿವಿಧಸ್ತರಗಳಲ್ಲಿ ಬಳಸುವಾಗ ಅದರಲ್ಯಾವ ಬದಲಾವಣೆಯೂ ಕಾಣದು - ಹಾಗಿದ್ದಾಗ ಘಂಟೆಗೆ ಎರಡು ಡಾಲರ್ ದುಡಿಯುವರಿಗೆ ಅನ್ಯಾಯವಾದಂತಾಗುವುದಿಲ್ಲವೇ? ಸಾಮಾನ್ಯ ಸಂಪನ್ಮೂಲಗಳನ್ನು ಆಧರಿಸುವುದಕ್ಕೇ ದಿನನಿತ್ಯದ ದುಡಿಮೆ ಸಾಕಾಗುವ ಸ್ಥಿತಿಯಲ್ಲಿ ದಿನತಳ್ಳುವುದೇ ಬದುಕಾಗಿ ಹೋಗುತ್ತದೆ.

ಅಗತ್ಯವಸ್ತು - ಎನ್ನುವುದು ಇಲ್ಲಿ ಮುಖ್ಯವಾದ ಪದ; ಅದಕ್ಕೆ ಡಾಲರ್/ರೂಪಾಯಿಯ ಇತಿ-ಮಿತಿ ಇರೋದಿಲ್ಲ...ಅದು ಬೇಕು, ಅಷ್ಟೇ. ಅರ್ಥಶಾಸ್ತ್ರದ ತತ್ವಗಳೆಲ್ಲ ಇಂತಹ ಅಗತ್ಯವಸ್ತುಗಳಿಗೇನೆ ಹೆಚ್ಚು ಅನ್ವಯಿಸೋದು. ಪೆಟ್ರೋಲ್ ಬೆಲೆ ಹೆಚ್ಚು ಮಾಡಿ ನೋಡಿ, ಉಳಿದೆಲ್ಲವುಗಳ ಬೆಲೆ ಅದರ ಹಿಂಬಾಲಕರಾಗುತ್ತವೆ. ಐಶಾರಾಮಿ ವಿಷಯ-ವಸ್ತುಗಳು ಸಾಮಾನ್ಯರಿಂದ ದೂರವೇ ಉಳಿದುಬಿಡುತ್ತವೆ. ಕೊನೇಪಕ್ಷ ಅಗತ್ಯವಸ್ತುಗಳು, ಔಷಧ/ಮಾತ್ರೆ ಮುಂತಾದ ವಿಷಯಗಳಿಗೆ ಬಂದಾಗ ಎಷ್ಟೋ ಜನ ಹಣವಿಲ್ಲದವರು, ಇನ್ಷೂರೆನ್ಸ್ ಇರದವರು ಬಹಳಷ್ಟು ಬವಣೆಯನ್ನು ಅನುಭವಿಸುವುದನ್ನು ನೋಡಿದ್ದೇನೆ. ಕ್ಯಾಪಿಟಲಿಷ್ಟಿಕ್ ಪ್ರಪಂಚದಲ್ಲಿ ಆ ಬವಣೆಗಳು ಅರಣ್ಯರೋಧನವಾಗುತ್ತವೆಯೇ ಹೊರತು ಶ್ರೀಮಂತ ರಾಜಕಾರಣಿಗಳು ಮಾಡುವ ಪಾಲಿಸಿಗಳಾಗಲಿ, ಉಳ್ಳವರ ಪ್ರಪಂಚದಲ್ಲಿ ಅಂತಹವುಗಳಿಗೆ ಯಾವ ಸ್ಥಾನವಿರುವುದಿಲ್ಲ. ಕೈಲಾಗದವರನ್ನು ಸಲಹುವ ವಿಷಯಕ್ಕೆ ಬಂದಾಗ ಶ್ರೀಮಂತ ದೇಶಗಳಿಗಿಂತ ಬಡದೇಶಗಳಲ್ಲೇ ಹೆಚ್ಚು-ಹೆಚ್ಚು ಒಲವಿರುವುದು ಒಂದು ಸ್ವಾರಸ್ಯಕರವಾದ ವಿಷಯವಷ್ಟೇ.

ಒಂದು ವ್ಯವಸ್ಥೆಯನ್ನು ಸಂಪೂರ್ಣವಾಗಿ ಅರಿತುಕೊಳ್ಳದೇ ಅದರ ಮೇಲೆ ಕಾಮೆಂಟ್ ಮಾಡುವುದು ದೂರ ದೇಶದವರ ಗಳಿಕೆಗಳನ್ನು ಅಮೇರಿಕದ ಕರೆನ್ಸಿಯಲ್ಲಿ ಅಳೆದಷ್ಟೇ ಅಭಾಸಗೊಳ್ಳಬಹುದಾದ ಅನುಭವವಾಗಬಹುದು. ಯಾವ ವ್ಯವಸ್ಥೆಯನ್ನೇ ತೆಗೆದುಕೊಂಡರೂ ಇದ್ದವರ-ಇಲ್ಲದವರ ನಡುವಿನ ಕಂದರ ದಿನಕಳೆದಂತೆ ಹೆಚ್ಚುತ್ತಿರುವುದು ಮತ್ತೊಂದು ದಿನದ ಮಾತು!

Wednesday, May 23, 2007

ವಿವಾಹದ ಒಳನೋಟ

ಕಳೆದ ವರ್ಷದ ಕೊನೆಯಲ್ಲಿ ತನ್ನ ಬಾಯ್‌ಫ್ರೆಂಡ್ ಪ್ರೊಪೋಸ್ ಮಾಡಿ ಎಂಗೇಜ್ ಆದಂದಿನಿಂದ ಬರುವ ಆಗಷ್ಟ್‌ನಲ್ಲಿ ಮದುವೆಯಾಗಲಿರುವ ನನ್ನ ಸಹೋದ್ಯೋಗಿ ಕ್ಯಾರೋಲೈನ್ (Caroline) ಇವತ್ತಿನವರೆಗೂ ವಿಶೇಷವಾಗಿ ತನ್ನ ವಿವಾಹ ಸಂಬಂಧಿ ಪ್ಲಾನ್‌ಗಳನ್ನು ಮಾಡುತ್ತಲೇ ಬಂದಿದ್ದಾಳೆ, ಆಕೆಯ ದಿನೇ-ದಿನೇ ಬೆಳೆದು ದಪ್ಪವಾಗುತ್ತಿರುವ ಮದುವೆಯ ಬೈಂಡರ್‌ನಲ್ಲಿ ಪ್ರತಿಯೊಂದು ಡೀಟೈಲ್‌ಗಳನ್ನು ಒಳಗೊಂಡಿರುವುದೂ ಅಲ್ಲದೆ ಮದುವೆಗೆ ಸಂಬಂಧಿಸಿದ ಎಲ್ಲ ಕೆಲಸಗಾರರು, ಎಲ್ಲ ವಿವರಗಳು, ಸ್ಥಳ, ಸಮಯ, ಮದುವೆಯಲ್ಲಿ ಭಾಗವಹಿಸಬೇಕಾದ ಫೋಟೋಗ್ರಾಫರುಗಳು ಮುಂತಾದ ಸಾವಿರಾರು ವಿವರಗಳನ್ನು ಯಾವ ತೊಂದರೆಯಿಲ್ಲದೇ ಕಂಡುಹಿಡಿಯಬಹುದು ಹಾಗೂ ಗುರುತಿಸಬಹುದು. ತನ್ನ ವಿವಾಹಕ್ಕೆ ಸಂಬಂಧಿಸಿದಂತೆ ಆಕೆ ತೋರುವ ಮುತುವರ್ಜಿಯನ್ನು ನೋಡಿ ಎಷ್ಟೋ ಜನ ಬೆರಗಾಗುವುದನ್ನು ನಾನು ನೋಡಿದ್ದೇನೆ.

ಕೆಲವು ದಿನಗಳ ಹಿಂದೆ ಶ್ರೀನಿ ತನ್ನ ರೂಮ್‌ಮೇಟ್ ಮೂಲತಃ ಒರಿಸ್ಸಾದವನಾದ ಬ್ರಜ್‌ನನ್ನು ಕರೆದುಕೊಂಡು ನಮ್ಮ ಮನೆಗೆ ಬಂದಿದ್ದ - ಮಾತಿನ ಮಧ್ಯೆ ಸಹಜವಾಗಿ 'ಈ ವರ್ಷದ ಕೊನೆಯಲ್ಲಿ ಬ್ರಜ್ ಭಾರತಕ್ಕೆ ಹೋಗುತ್ತಿದ್ದಾನೆ, ಅಲ್ಲಿ ಅವನ ಪೋಷಕರು ಒಂದು ಹುಡುಗಿಯನ್ನು ಹುಡುಕಿಟ್ಟಿರುತ್ತಾರೆ, ಎರಡು ವಾರದ ರಜೆಯಲ್ಲಿ ಅವನ ಮದುವೆಯಾಗಿ ಹೋಗುತ್ತದೆ...' ಎಂದು ಒಂದೇ ಉಸಿರಿನಲ್ಲಿ ಬ್ರಜ್‌ನ ಭಾರತದ ವೆಕೇಷನ್, ಎಂಗೇಜ್‌ಮೆಂಟ್, ಮದುವೆ, ಮುಂತಾದ ವಿವರಗಳನ್ನು ಕೇವಲ ಇಪ್ಪತ್ತೇ ನಿಮಿಷಗಳಲ್ಲಿ ಮುಗಿದೇ ಹೋಗುವ ಅಮೇರಿಕನ್ ಸಿಟ್‌ಕಾಮ್ ಹಾಗೆ ಹೇಳಿ ಮುಗಿಸಿಬಿಟ್ಟ. ಅದೇ ಕ್ಯಾರೋಲೈನ್ ತನ್ನ ಮದುವೆಯ ಬಗ್ಗೆ ಹೇಳ ತೊಡಗಿದರೆ ಹಳೆಯ ರಾಜ್‌ಕಪೂರ್ ಸಿನಿಮಾಗಳ ಹಾಗೆ ಮೂರು ಘಂಟೆಗಳಾದರೂ ಮುಗಿಯೋದಿಲ್ಲ!

ಯಾವ ಪದ್ಧತಿ, ವಿವರ, ಪರಿಸರ ಹೆಚ್ಚು-ಕಡಿಮೆ, ತಪ್ಪು-ಸರಿ ಮುಂತಾದ ಜಡ್ಜ್‌ಮೆಂಟುಗಳನ್ನು ನಾನು ಕೆದಕಲು ಹೋಗೋದಿಲ್ಲ. ಎರಡು ಮನಸ್ಥಿತಿ ಅಥವಾ ಸಂಸ್ಕೃತಿಗಳ ಸೂಕ್ಷ್ಮ ಅವಲೋಕನವನ್ನು ಮಾಡುವುದು ನನ್ನ ಉದ್ದೇಶ. ಅಮೇರಿಕನ್ನರು ವರ್ಷಗಟ್ಟಲೇ ಪ್ಲಾನ್ ಮಾಡಿ ಆಗುವ ಮದುವೆಗಳು ಅಷ್ಟೇ ಬೇಗನೇ ಕಾಲನ ಪರೀಕ್ಷೆಯಲ್ಲಿ ಉದುರಿಹೋಗುತ್ತವೆ, ಅದೇ ಭಾರತೀಯ ಮದುವೆಗಳು ಎಂದಿಗೂ ಗಟ್ಟಿಯಾಗೇ ಉಳಿಯುತ್ತವೆ ಎನ್ನುವವರಿಗೆ, you're right! ಎನ್ನುತ್ತೇನೆ.

ಬ್ರಜ್ ನಮ್ಮಲ್ಲಿ ಹಲವರನ್ನು ಪ್ರತಿನಿಧಿಸುವ ಕೇವಲ ಉದಾಹರಣೆಯಷ್ಟೇ, ನಾವು ಎಷ್ಟೋ ಜನ ಈ ನಿಟ್ಟಿನಲ್ಲಿ ಹಾದು ಬಂದಿದ್ದೇವೆ: ಜಾತಿ-ಜಾತಕಗಳು, ಪೋಷಕರ ಅಹವಾಲುಗಳು, ಆಸ್ತಿ-ಅಂತಸ್ತು-ಹಣ ಇವುಗಳು ನಮ್ಮ ನಡುವಿನ ಸಂಬಂಧಗಳನ್ನು ಪೋಣಿಸುವ ದಾರಗಳಾಗಿವೆ, ಕೆಲವು ವಾರ-ತಿಂಗಳುಗಳಲ್ಲಿ ಹುಡುಗ-ಹುಡುಗಿಯರನ್ನು ನೋಡಿ ಕೇವಲ ಹತ್ತು ನಿಮಿಷ ಮಾತನಾಡಿ ಆದ ಮದುವೆಗಳಿವೆ, ಮದುವೆಯನ್ನುವುದು ಈ ಹಿಂದೆಯೇ ಆದ ಒಂದು ಒಡಂಬಡಿಕೆ ಎನ್ನುವ ತತ್ವವಿದೆ, ಎಲ್ಲಕ್ಕಿಂತಲೂ ಹೆಚ್ಚಾಗಿ ನಮ್ಮ ಸುತ್ತಲಿನ ಸಮಾಜಕ್ಕೆ ನಾವು ಒಂದು ರೀತಿಯಲ್ಲಿ ಹೆದರಿಕೊಳ್ಳುವುದಿದೆ - 'ಅವರೇನ್ ಅಂದ್‌ಕೊಳ್ಳೋದಿಲ್ಲ...', 'ನಮ್ಮ ಮನೆತನದ ಪ್ರಶ್ನೆ...', 'ನಮ್ಮ ಜಾತಿ ಗೌರವದ ವಿಚಾರ...' ಮುಂತಾದ ಮಾತುಗಳು ಶತಶತಶತಮಾನಗಳಿಂದ ಕೇಳಿಬರುತ್ತಲೇ ಇವೆ.

ಕ್ಯಾರೋಲೈನ್ ಬೆಳೆದು ಬಂದ ಪರಿಸರ ಬಹಳಷ್ಟು ಭಿನ್ನ - ವರ್ಷಗಳ ಬಾಯ್‌ಫ್ರೆಂಡ್-ಗರ್ಲ್‌ಫ್ರೆಂಡ್ ಎನ್ನುವ ಸಂಬಂಧ, ನಿಶ್ಚಿತಾರ್ತದ ಮೊದಲೇ ಒಂದೇ ಮನೆಯಲ್ಲಿ ವಾಸ ಮಾಡುವ ಮೂಲಕ ಹರಳುಗಟ್ಟತೊಡಗುತ್ತದೆ. ಕೆಲವು ತಿಂಗಳು-ವರ್ಷಗಳ ನಂತರ ಆಗುವ ಫಾರ್ಮಲ್ ಎಂಗೇಜ್‌ಮೆಂಟ್ ಎನ್ನುವುದು ಮುಂಬರುವ ಮದುವೆಯನ್ನು ಸೂಚಿಸುತ್ತದೆ. ಎಲ್ಲಿ-ಹೇಗೆ ಎನ್ನುವ ವಿವರಗಳನ್ನೊಳಗೊಂಡ ಪ್ಲಾನ್ ಸಿದ್ಧಗೊಂಡು ಮದುವೆ ನಡೆದು ಹೋಗುತ್ತದೆ. ಮತ್ತೊಂದು ವಿಶೇಷವಾದ ಅಂಶವೆಂದರೆ ನಿಸರ್ಗ ಸಹಜವಾದ 'ಮಕ್ಕಳಾಗುವುದಕ್ಕೆ ಮದುವೆಯಾಗಬೇಕಾಗೇನೂ ಇಲ್ಲ' ಎನ್ನುವ ಅಂಶವೂ ಅಲ್ಲಲ್ಲಿ ಕಂಡುಬರುತ್ತದೆ. ಜಾತಿಯ ಬದಲು ಧರ್ಮ, ಜಾತಕಗಳ ಬದಲು ಚರ್ಮದ ಬಣ್ಣ ಅಥವಾ ಭಾಷೆ ಮುಖ್ಯವಾಗುವುದು ಸಾಮಾನ್ಯ. ಎಲ್ಲಕ್ಕಿಂತಲೂ ಮುಖ್ಯವಾಗಿ ಎರಡು ಜೀವಗಳ ಅಥವಾ ವ್ಯಕ್ತಿಗಳ ನಡುವಿನ ಕಾಮನಾಲಿಟಿಗೆ ಹೆಚ್ಚು ಪ್ರಾಶಸ್ತ್ಯ.

***

ಇನ್ನು ಕೆಲವೇ ತಿಂಗಳುಗಳಲ್ಲಿ ಕ್ಯಾರೋಲೈನ್ ಮದುವೆಯಾಗುವುದರ ಮೂಲಕ ಒಂದು ಸೋಶಿಯಲ್ ಇನ್‌ಸ್ಟಿಟ್ಯೂಟ್ ಆದ ಗಂಡ-ಹೆಂಡತಿ ಸಂಬಂಧಕ್ಕೆ ಬಡ್ತಿ ಪಡೆಯುತ್ತಾಳೆ, ಆಕೆಯ ಲಾಸ್ಟ್ ನೇಮ್ ಬದಲಾಗುತ್ತದೆ ಎನ್ನುವುದನ್ನು ಬಿಟ್ಟರೆ ಮೇಲ್ಮಟ್ಟಕ್ಕೆ ಹೆಚ್ಚು ವ್ಯತ್ಯಾಸವೇನೂ ಕಂಡುಬರೋದಿಲ್ಲ. ಬ್ರಜ್ ಮದುವೆಯಾದರೂ ಅರ್ಜೆಂಟಿಗೆ ವೀಸಾ ಸಿಗದ ಕಾರಣಕ್ಕೆ ಆತ ತನ್ನ ಹೆಂಡತಿಯನ್ನು ಅಮೇರಿಕಕ್ಕೆ ಕರೆದುಕೊಂಡು ಬರದಿರುವ ಸಾಧ್ಯತೆ ಹೆಚ್ಚು, ಡಿಸೆಂಬರ್‌ನಲ್ಲಿ ಮದುವೆಯಾಗುವ ಬ್ರಜ್‌ಗೆ ತನ್ನ ವೆಕೇಷನ್ ದಿನಗಳು ಆರಂಭವಾಗಿ ಅವು ಮುಗಿಯಲು ಇನ್ನು ೨೦ ದಿನಗಳು ಇರುವಲ್ಲಿವರೆಗೂ ತಾನು ಮದುವೆಯಾಗುವ ಹುಡುಗಿ ಯಾರು ಎಂದು ಇನ್ನೂ ಗೊತ್ತೇ ಇರುವುದಿಲ್ಲ. ಬದುಕಿನಲ್ಲಿ ಬಹು ಮುಖ್ಯವಾದ ಮದುವೆಯೆನ್ನುವ ಹಂತಕ್ಕೆ ವೀಸಾದ ಆಧಾರದ ಮೇಲೆ ದುಡಿಯುವ ಬ್ರಜ್‌ಗೆ ಕೇವಲ ಮೂರು ವಾರಗಳ ರಜೆಯಷ್ಟೇ ಸಾಕು, ಅಥವಾ ಅಷ್ಟೇ ದೊರೆಯುವವು. ಇಲ್ಲಿ ನನ್ನ ಸಹೋದ್ಯೋಗಿ ಕ್ಯಾರೋಲೈನ್ ತನ್ನ ಮದುವೆಗೆ ಸುಮಾರು ಹನ್ನೊಂದು ತಿಂಗಳ ಪ್ಲಾನ್ ರಚಿಸುತ್ತಲೇ ಬಂದಿದ್ದಾಳೆ, ಪ್ರತಿದಿನವೂ ಆಫೀಸಿನಿಂದ ಒಂದಲ್ಲ ಒಂದು ಕಾಲ್‌ಗಳನ್ನು ಮಾಡುತ್ತಲೇ ಇದ್ದಾಳೆ - ಪ್ಲೋರಲ್ ಅರೇಂಜ್‌ಮೆಂಟಿನಿಂದ ಹಿಡಿದು ಮದುವೆಗೆ ಬಳಸುವ ಸಂಗೀತದ ಬಗ್ಗೆ ಬೇಡವೆಂದರೂ ನಮ್ಮ ಕಿವಿಯ ಮೇಲೆ ಬೀಳುವ ಆಕೆಯ ಫೋನ್ ಸಂಭಾಷಣೆ, ಆಕೆಯ attention to detail ಅನ್ನು ನೋಡಿ wow! ಎನ್ನುವಂತೆ ಮಾಡುತ್ತದೆ. ಬ್ರಜ್ ಇಲ್ಲಿನ ಆಫೀಸಿನ ಸಮಯದಲ್ಲಿ ತನ್ನ ವಿವಾಹದ ವಿಷಯವಿರಲಿ ತನ್ನ ಪೋಷಕರ ಜೊತೆ ಮಾತನಾಡಿದ್ದನ್ನೂ ನಾನು ಕೇಳಿಲ್ಲ, ಆತ ತನ್ನ ಏನೇ ಮಾತುಕತೆಗಳಿದ್ದರೂ ಅವುಗಳನ್ನು ವಾರಾಂತ್ಯದ ಕಾಲಿಂಗ್‌ಕಾರ್ಡ್ ನಿಮಿಷಗಳಲ್ಲಿ ವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಲೇ ಇದ್ದಾನೆ.

ಬ್ರಜ್ ಮದುವೆಯ ವಿವರಣೆ ಒಂದು ಸಾಲು ಅಥವಾ ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿಬಿಡಬಹುದಾದ ಚುಟುಕವಾಗುತ್ತದೆ, ಕ್ಯಾರೋಲೈನ್ ಮದುವೆಯ ವಿವರ ಹೇಳಿದಷ್ಟೂ ಇನ್ನೂ ಮುಂದುವರೆಯುತ್ತಲೇ ಇರುತ್ತದೆ!

Saturday, May 19, 2007

ಜರ್ಸೀ ಸಿಟಿಗೆ ವಿದಾಯ!

ಹತ್ತಿರ ಹತ್ತಿರ ಕಾಲು ಮಿಲಿಯನ್ ಜನಸಂಖ್ಯೆ ಇದ್ದುಕೊಂಡು ಹೆಜ್ಜೆ ಹೆಜ್ಜೆಗೆ ದೇಸೀ ಬದುಕನ್ನು ನೆನಪಿಗೆ ತಂದುಕೊಡುವ, ಬಿಳಿಯರು ಮೈನಾರಿಟಿ ಆಗಿರುವ ಹಾಗೂ ನ್ಯೂ ಯಾರ್ಕ್ ನಗರದಿಂದ ಕೇವಲ ಮೂರ್ನಾಲ್ಕು ಮೈಲು ದೂರವಿದ್ದುಕೊಂಡು ಹಡ್ಸನ್ ನದಿಯ ಪಶ್ಚಿಮ ದಂಡೆಯ ಬದಿಯಲ್ಲಿ ಯಾವಾಗಲೂ ಎಚ್ಚೆತ್ತುಕೊಂಡೇ ಇರುವ ಜೂಲು ನಾಯಿಯಂತೆ ಬಿದ್ದುಕೊಂಡಿರುವ ಜರ್ಸೀ ಸಿಟಿ ಎಂಬ ಪ್ರಪಂಚದೊಳಗಿನ ಪ್ರಪಂಚಕ್ಕೆ ನಾಲ್ಕು ವರ್ಷಗಳ ಹಿಂದೆ ಮೂವ್ ಆಗುವಾಗ ಈ ನಗರದಲ್ಲಿ ಬದುಕನ್ನು ಹೇಗೆ ತಳ್ಳುವುದು ಎಂದು ಹಲವಾರು ರೀತಿಯ ಯೋಚನೆಗಳು ಬಂದಿದ್ದು ಸಹಜ. ಇಂತಹ ಊರನ್ನು ಕಳೆದ ವಾರ ಬೀಳ್ಕೊಡುವಾಗ ಕಣ್ಣಾಲಿಗಳು ತುಂಬಿ ಬರದಿದ್ದರೂ ಇಲ್ಲಿ ಕಳೆದ ದಿನಗಳನ್ನು ಮುಂಬರುವ ವರ್ಷಗಳಲ್ಲಿ ಬಹಳಷ್ಟು ನೆನೆಸಿಕೊಳ್ಳುವುದಂತೂ ನಿಜ.

ಅಮೇರಿಕದಲ್ಲಿ ಎಲ್ಲರೂ ಒಂದಲ್ಲ ಒಂದು ಪ್ರದೇಶದಿಂದ ಮೂವ್ ಆಗುವುದು ಸಾಮಾನ್ಯವೆಂಬಂತೆ ಹಲವಾರು ಕಾರಣಗಳಿಂದಾಗಿ ನಾವೂ ಜರ್ಸೀ ಸಿಟಿಯನ್ನು ಬಿಟ್ಟು ನ್ಯೂ ಯಾರ್ಕ್ ನಗರದಿಂದ ಸುಮಾರು ಐವತ್ತು ಮೈಲು ಪಶ್ಚಿಮಕ್ಕಿರುವ ಪ್ಲಾಂಡರ್ಸ್ (Flanders) ಎನ್ನುವ ಪಟ್ಟಣಕ್ಕೆ ಬಂದು ಠಿಕಾಣಿ ಹೂಡಿದ್ದಾಯಿತು. ಕಳೆದ ಎರಡು ಮೂರು ತಿಂಗಳಿನಲ್ಲಿ ಹೊಸ ಮನೆಯನ್ನು ಹುಡುಕುವುದು ಅಲ್ಲಿಂದಿಲ್ಲಿಗೆ ಅಲೆಯುವುದು ಇವೆಲ್ಲ ನಡೆದೇ ಇತ್ತು, ಹೊಸ ಮನೆಯನ್ನು ಬಂದು ಸೇರಿದ ಮಟ್ಟಿಗೆ ಇಲ್ಲಿನ ತಲೆನೋವುಗಳು ವಾಸಿಯಾಗುವಂತಹವುಗಳಲ್ಲಿ, ಬದಲಿಗೆ ಇನ್ನೂ ಉಲ್ಬಣಗೊಂಡು ಮತ್ತಷ್ಟು ಚಿಂತೆ ಹುಟ್ಟಿಸುವ ಸನ್ನಿವೇಶಗಳೇ ಹೆಚ್ಚು. ಹೀಗೆಲ್ಲ ಒಂದಲ್ಲ ಒಂದು ಬದಲಾವಣೆಗಳ ನಡುವೆಯೂ ಆಫೀಸಿನ ಕೆಲಸಗಳನ್ನು ಯಾವ ತೊಂದರೆಗಳೂ ಇಲ್ಲದಂತೆ ನಿರ್ವಹಿಸಿಕೊಂಡು ಹೋಗುವುದು ಒಂದು ದೊಡ್ಡ ಸವಾಲೇ ಸರಿ.

ಆದರೂ ನಾನು ಜರ್ಸೀ ಸಿಟಿಯಲ್ಲಿ ಕಲಿತದ್ದು ಬಹಳಷ್ಟಿದೆ: ಮೊದಲೆಲ್ಲಾ ದಿನವೂ ಟ್ರೈನ್ ಹತ್ತಿ ನ್ಯೂ ಯಾರ್ಕ್ ನಗರಕ್ಕೆ ಕೆಲಸಕ್ಕೆ ಹೋಗುತ್ತಿರುವಾಗ ಅಷ್ಟಿಷ್ಟು ಓದಿದ್ದನ್ನು ನೆನೆಸಿಕೊಂಡರೆ, ಅಲ್ಲಿನ ಕಾಸ್ಮೋಪಾಲಿಟನ್ ಬದುಕಿನಲ್ಲಿ ಎಲ್ಲರೊಡನೆ ಹೊಂದಿಕೊಂಡಿದ್ದನ್ನು ಗುರುತಿಸಿದರೆ, ಎಂತಹ ನುರಿತ ಪಾರ್ಕಿಂಗ್ ತಜ್ಞನನ್ನೂ ಬೆರಗುಗೊಳಿಸುವ ಕಾರ್ ಪಾರ್ಕಿಂಗ್ ಸವಾಲುಗಳನ್ನು ಸ್ವೀಕರಿಸಿ ಜಯಿಸಿದ್ದನ್ನು ಆಲೋಚಿಸಿಕೊಂಡರೆ - ಜರ್ಸೀ ಸಿಟಿ ನಾನು ಕಳೆದುಕೊಂಡ ಬೆಂಗಳೂರು ನಗರದ ವಾತಾವರಣಕ್ಕಿಂತ ಭಿನ್ನವೇನಾಗಿರಲಿಲ್ಲ. ಪ್ರತೀ ಸಾರಿ ಮಳೆ ಬಿದ್ದಾಗಲೂ ಸಮುದ್ರ ಮಟ್ಟದ ಜರ್ಸೀ ಸಿಟಿ ತನ್ನ ಸುತ್ತ ಕೊಡಪಾನದ ನೀರನ್ನು ಸುರಿದುಕೊಂಡು ರಚ್ಚೆ ಹಿಡಿದು ಅಳುವ ಮಗುವನ್ನು ನೆನಪಿಸಿಬಿಡುತ್ತದೆ, ಎಲ್ಲಿ ನೋಡಿದರಲ್ಲಿ ನೀರು ನೀರೇ ತುಂಬಿಕೊಂಡು ಪಕ್ಕದ ನೆವಾರ್ಕ್ ಬೇ ಅಥವಾ ಇನ್ನೂ ಹತ್ತಿರದ ಅಟ್ಲಾಂಟಿಕ್ ಮಹಾಸಾಗರಕ್ಕೆ ತಾನೇನು ದೂರವಿಲ್ಲ ಎಂದು ಪದೇಪದೇ ಅಲ್ಲಿನ ನಿವಾಸಿಗಳನ್ನು ತಿವಿಯುತ್ತಲೇ ಇರುತ್ತದೆ.

ಯಾವುದೇ ನಗರವೊಂದು ಕೆಟ್ಟ ಅನುಭವವನ್ನು ತನ್ನ ಮಡಿಲಿನಲ್ಲಿ ಹುದುಗಿಸಿಕೊಂಡಿರಲು ಅಲ್ಲಿನ ನಿವಾಸಿಗಳಿಗಿಂತ ಆ ನಗರಕ್ಕೆ ಪ್ರತಿದಿನದ ಮಟ್ಟಿಗೆ ಭೇಟಿ ಕೊಡುವ ಹಾಗೂ ಹಾದು ಹೋಗುವ ಜನರೂ ಹೆಚ್ಚಿನ ಮಟ್ಟಿನ ಕಾರಣವೆನ್ನುವುದು ನನ್ನ ಅನಿಸಿಕೆ. ಜರ್ಸೀ ಸಿಟಿಗೆ ಜನರನ್ನು ಎಲ್ಲೆಲ್ಲಿಂದಲೋ ಪ್ರವಾಸಿಗರಾಗಿ ಬರುವಂತೆ ಮಾಡುವ ಆಕರ್ಷಣೆಗಳಲ್ಲಿ ಕೆಲವೇ ಮೈಲುಗಳ ದೂರದಲ್ಲಿರುವ ಲಿಬರ್ಟಿ ದೇವಿಯ ಪ್ರತಿಮೆ (Statue of Liberty), ಹಿಂದೆ ವಲಸಿಗರು ಹಾದು ಹೋಗುತ್ತಿದ್ದ ಎಲ್ಲಿಸ್ ಐಲ್ಯಾಂಡ್ (Ellis Island), ಹಾಗೂ ಮಕ್ಕಳಿಗೆ ಆಕರ್ಷಣೆಯನ್ನು ತೋರಿಸುವ ಲಿಬರ್ಟಿ ಸೈನ್ಸ್ ಸೆಂಟರ್ (Liberty Science Center) ಮುಖ್ಯವಾದವುಗಳು. ಜರ್ಸೀ ಸಿಟಿಯ ಪಕ್ಕದಲ್ಲಿರುವ ಜರ್ಸೀ ರಾಜ್ಯದಲ್ಲೇ ದೊಡ್ಡ ನಗರವಾದ ನೆವಾರ್ಕ್ (Newark) ಹಾಗೂ ಅದರ ಲಿಬರ್ಟಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ - ಪ್ರತೀ ಎರಡು-ಮೂರು ನಿಮಿಷಗಳಿಗೊಮ್ಮೆ ಬಂದು ಹೋಗುವ ವಿಮಾನಗಳಿಗೇನು ಕಡಿಮೆಯಿಲ್ಲ. ಜರ್ಸೀ ಸಿಟಿಯ ಮತ್ತೊಂದು ಮುಖವಾಗಿ ನ್ಯೂ ಯಾರ್ಕ್ ನಗರಕ್ಕೆ ಸಂಪರ್ಕವನ್ನೊದಗಿಸುವ ಹಾಲಂಡ್ ಟನಲ್ (Holland Tunnel) - ಹೊರಗಿನಿಂದ ಬಂದವರೆಲ್ಲ ನ್ಯೂ ಯಾರ್ಕ್ ನಗರಕ್ಕೆ ಹೋಗಲು ಬಳಸುವ ಮುಖ್ಯ ಮಹಾದ್ವಾರ - ಆದರೆ ಜರ್ಸೀ ಸಿಟಿಯಲ್ಲಿ ಇದ್ದು ಜೀವನ ನಡೆಸುವವರಿಗೆ ಯಾವತ್ತೂ ಟ್ರಾಫಿಕ್ ಜಾಮ್‌ನ ಕಿರುಕುಳ ಇದ್ದೇ ಇದೆ ಎನ್ನುವುದು ಜೀವನದ ಅವಿಭಾಜ್ಯ ಅಂಗವಷ್ಟೇ.

ಜರ್ಸೀ ಸಿಟಿಯನ್ನು ಬಳಸುವ, ಅದರ ಮುಖಾಂತರ ಹಾದು ಹೋಗುವ ರಸ್ತೆಗಳಿಗೆನೂ ಕಡಿಮೆಯಿಲ್ಲ - ನನ್ನ ಫೇವರೈಟ್ ರೂಟ್ 1 & 9, ಟರ್ನ್ ಪೈಕ್, ರೂಟ್ 280, ರೂಟ್ 7, ಕೆನಡಿ ಬುಲವರ್ಡ್, ಮುಂತಾದವುಗಳು ಟ್ರಾಫಿಕ್ ಅನ್ನು ಹತೋಟಿಯಲ್ಲಿಡಲು ತಮ್ಮ ಪ್ರಯತ್ನವನ್ನು ಮಾಡುತ್ತಲೇ ಇವೆ. ಹ್ಯಾಕೆನ್‌ಸ್ಯಾಕ್ ನದಿಯ ಮೇಲೆ ನಿರ್ಮಿತವಾಗಿರೋ ಪುಲಾಸ್ಕಿ ಹೈವೇಯ ಸೊಬಗು ನೋಡಲು ಬಲು ಚೆನ್ನ - ಸುಮಾರು ನಾಲ್ಕು ಮೈಲು ಉದ್ದಕ್ಕಿರುವ ಸೇತುವೆಗೆ ಒಂದು ಪೈಸೆಯ ಟೋಲ್ ಅನ್ನೋ ಕೋಡೋದು ಬೇಡ - ಉಚಿತ ರಸ್ತೆಯೆಂದರೆ ನಂಬಲಿಕ್ಕೆ ಸಾಧ್ಯವೇ ಇಲ್ಲ!

ಎಲ್ಲಕ್ಕಿಂತ ಮುಖ್ಯವಾಗಿ ನಾನು ಜರ್ಸೀ ಸಿಟಿಯಲ್ಲಿಲ್ಲದ್ದರಿಂದ ಕಳೆದುಕೊಳ್ಳುತ್ತಿರುವುದೆಂದರೆ ಪ್ರತಿ ದಿನದ ಸೂರ್ಯಾಸ್ತ - ನಮ್ಮ ಮನೆಯಿಂದ ನಡೆದುಕೊಂಡು ಹತ್ತಿರದ ನೆವಾರ್ಕ್ ಬೇ ದಂಡೆಯಲ್ಲಿ ನಿಂತುಕೊಂಡರೆ ದಿನಕ್ಕೊಂದು ಚಿತ್ರ ಬರೆದುಕೊಡು ರಮಣೀಯವಾಗಿ ಕಾಣುತ್ತಿದ್ದ ಸೂರ್ಯಾಸ್ತವನ್ನು ನಾನು ಯಾವತ್ತಿಗೂ ಮಿಸ್ ಮಾಡಿಕೊಳ್ಳುತ್ತೇನೆ - ನಾನು ಅಲ್ಲಿ ನೋಡಿದಷ್ಟು ಸೂರ್ಯಾಸ್ತವನ್ನು ಮತ್ತಿನ್ನೆಲ್ಲೂ ನೋಡೇ ಇಲ್ಲ ಎಂದರೂ ಸರಿ. ಮೂಲತಃ ಪೂರ್ವದವನು ಪಶ್ಚಿಮಕ್ಕೆ ತೆರಳಿ ಅಲ್ಲಿನ ಪೂರ್ವ ತೀರದಲ್ಲಿ ವಾಸ ಮಾಡಿಕೊಂಡಿದ್ದುಕೊಂಡು ಅಲ್ಲಿನ ಪಶ್ಚಿಮದಲ್ಲಿ ಮುಳುಗುತ್ತಿದ್ದ ಸೂರ್ಯನನ್ನು ನೋಡುವ ಭಾಗ್ಯವನ್ನು ತಾನು ಇದ್ದಲ್ಲಿಂದ ಇನ್ನಷ್ಟು ಪಶ್ಚಿಮಕ್ಕೆ ತೆರಳಿ ಕಳೆದುಕೊಳ್ಳಬೇಕಾದದ್ದು ವಿಪರ್ಯಾಸವಲ್ಲದೇ ಮತ್ತಿನ್ನೇನು?!

ಜಂಗಮಕ್ಕಳಿವಿಲ್ಲವೆನ್ನುವಂತೆ ಮೂವ್ ಮಾಡುತ್ತಿರುವುದೇ ಇಲ್ಲಿನ ಬದುಕು, ಒಂದಲ್ಲ ಒಂದು ದಿನ ಇಲ್ಲಿಂದ ಇನ್ನೆಲ್ಲಿಗೋ ತೆರಳಿ ಮತ್ತೆ ಅಲ್ಲಿಂದ ಮತ್ತಿನ್ನೆಲ್ಲಿಗೋ ಹೋಗುವುದು ಇದ್ದೇ ಇದೆ. ಈಗ ಪ್ಲಾಂಡರ್ಸ್‌ನಲ್ಲಿ ನೀರು ಕುಡಿಯುವ ಋಣವಿದೆ, ಅದನ್ನು ಪ್ರತಿ ಹನಿ ಮುಗಿಯುವ ವರೆಗೆ ಚುಕ್ತಾ ಮಾಡಿ ಮತ್ತಿನ್ನೆಲ್ಲಿಗೆ ತೆರಳುವುದೋ ನೋಡೋಣ.

ನನ್ನ ಅಮೇರಿಕನ್ ಬದುಕಿನಲ್ಲಿ ನಾಲ್ಕು ವರ್ಷಗಳನ್ನು ನಿರಾಂತಕವಾಗಿ ಕಳೆಯುವಂತೆ ಮಾಡಿದ ಜರ್ಸೀ ಸಿಟಿಗೆ ನಮನ ಹಾಗೂ ಹೃತ್ಪೂರ್ವಕ ವಿದಾಯ!

Monday, May 14, 2007

ಗಾಳಿಪಟ

ಒಂದು ಕಡೆ ನಮ್ಮ ಬೇರುಗಳಿಗೆ ಗಟ್ಟಿಯಾಗಿ ಹಿಡಿದುಕೊಂಡು ಉಳಿಯುವ ನಿಲುವೂ, ಮತ್ತೊಂದು ಕಡೆ ಸ್ವಚ್ಛಂದವಾಗಿ ವಿಶಾಲ ನಭದಲ್ಲಿ ಹಾರಾಡ ಬಯಸುವ ಮುಕ್ತ ಮನಸ್ಸೂ ಇವುಗಳನ್ನೆಲ್ಲ ಅವಲೋಕಿಸಿಕೊಂಡಾಗ ನನ್ನ ಕಲ್ಪನೆಗೆ ಹತ್ತಿರವಾಗಿ ಬಂದ ವಸ್ತುವೆಂದರೆ ಗಾಳಿಪಟವೊಂದೇ.

***

ಕಳೆದ ವಾರಾಂತ್ಯದಲ್ಲಿ ಹಳೆಯ ಪುಸ್ತಕಗಳನ್ನೆಲ್ಲ ಎಸೆಯುವುದಕ್ಕೊಂದು ಅವಕಾಶ ಸಿಕ್ಕಿತ್ತು. ಈ ಪುಸ್ತಕಗಳು ನಾನು ಹಿಂದೆ ಮಾಡುತ್ತಿದ್ದ ಕೆಲಸಕ್ಕೆ ಸಂಬಂಧಪಟ್ಟ ಟೆಕ್ನಿಕಲ್ ಪುಸ್ತಕಗಳು. ಇವುಗಳಲ್ಲಿ ಹೆಚ್ಚಿನವುಗಳನ್ನು ನಾನು ಭಾರತದಿಂದ ಮೊಟ್ಟ ಮೊದಲಬಾರಿಗೆ ಬರುವಾಗ ತಂದು ನಂತರ ಕಳೆದ ದಶಕದಲ್ಲಿ ನಾನು ಹೋದಲ್ಲೆಲ್ಲಾ ತೆಗೆದುಕೊಂಡು ಹೋಗಿ ಜತನದಿಂದ ಕಾಪಾಡಿಕೊಂಡವುಗಳು. ಕಳೆದೊಂದು ವರ್ಷದಿಂದ ನನ್ನ ಕಾರ್ಯಕ್ಷೇತ್ರ ಟೆಕ್ನಿಕಲ್ ಹಂತದಿಂದ ಬಿಸಿನೆಸ್ ಮ್ಯಾನೇಜ್‌ಮೆಂಟಿನ ಕಡೆಗೆ ಹೋದಂದಿನಿಂದ ಈ ಪುಸ್ತಕಗಳನ್ನು ಮುಟ್ಟಿ ನೋಡುವ ಅವಕಾಶವೂ ಸಹ ಬಂದಿದ್ದಿಲ್ಲ. ಭಾರತದಲ್ಲಿ ಆಗಿದ್ದರೆ ಅವುಗಳನ್ನು ಯಾವುದಾದರೂ ಹಳೆಯ ಟ್ರಂಕೋ, ಪುಸ್ತಕದ ರ್ಯಾಕ್‌ಗೋ ಸೇರಿಸಿ ಧೂಳು ತಿನ್ನಿಸುತ್ತಿದ್ದೆನೇನೋ ಆದರೆ ಇಲ್ಲಿ ಪುಸ್ತಕಗಳು ಕೇವಲ ವಸ್ತುಗಳಾಗಿ ತೋರುವ ಮನಸ್ಥಿತಿ ಅದ್ಯಾವಾಗಲೋ ನನ್ನಲ್ಲಿ ನಿರ್ಮಿತವಾದ್ದರಿಂದ ಒಂದು ಕಾಲದಲ್ಲಿ ಅನ್ನಕ್ಕೆ ದಾರಿಯಾದ ಪುಸ್ತಕಗಳು ಇಂದು ಸರಳ ವಸ್ತುಗಳಾಗಿ ತಿಪ್ಪೆ ಸೇರಬೇಕಾಗಿ ಬಂದುದು ಪುಸ್ತಕಗಳ ಬದಲಾದ ಸ್ಕೋಪ್‌ಗಿಂತಲೂ ನನ್ನ ಮನಸ್ಸಿಗೆ ಹಿಡಿದ ಕನ್ನಡಿಯಾಗಿತ್ತು.

ಇಲ್ಲ, ನಾನು ಬೇರೆಯ ಮನಸ್ಥಿತಿ ಉಳ್ಳವನು ಎಂದು ಸಾಧಿಸಿಕೊಳ್ಳಲು ಈ ಉದಾಹರಣೆಯನ್ನು ಕೊಡಬೇಕಾಗಿ ಬಂತು - ಇದೇ ಹತ್ತು ವರ್ಷದ ಹಿಂದೆ ರಾಮ ಮೂರ್ತಿ, ರವಿ ಹಾಗೂ ನಾನು ಒಂದು ಅಪಾರ್ಟ್‌ಮೆಂಟಿನಲ್ಲಿ ಎತ್ತರದಲ್ಲಿದ್ದ ಏನೋ ಒಂದನ್ನು ತೆಗೆಯಲು ಪ್ರಯತ್ನಿಸುತ್ತಿದ್ದಾಗ ಆಗ ನಮ್ಮ ಜೊತೆ ಇನ್ನೂ ಯಾವುದೇ ಖುರ್ಚಿ, ಮೇಜು ಇಲ್ಲದ ದಿನಗಳಲ್ಲಿ ದಪ್ಪನಾಗಿರುವ ಟೆಲಿಫೋನ್ ಎಲ್ಲೋ ಪೇಜ್ ಪುಸ್ತಕಗಳನ್ನು ಒಂದರ ಮೇಲೊಂದಾಗಿಟ್ಟುಕೊಂಡು ಅದರ ಮೇಲೆ ನಿಂತು ಎತ್ತರವನ್ನು ಮುಟ್ಟುವ ದಿನಗಳಲ್ಲಿ ರಾಮ ಮೂರ್ತಿ ಹಾಗೂ ರವಿ ಪುಸ್ತಕಗಳ ಮೇಲೆ ನಿಲ್ಲಲು ಸಾರಾಸಗಟಾಗಿ ನಿರಾಕರಿಸಿದರೆ ನಾನು ಅವುಗಳ ಮೇಲೆ ನಿಂತು ಎತ್ತರವನ್ನು ಮುಟ್ಟುವ ಮನಸ್ಥಿತಿಯನ್ನು ಆಗಲೇ ಉಳ್ಳವನಾಗಿದ್ದೆ.

ಇಲ್ಲ, ಅದೇ ಇಪ್ಪತ್ತು ವರ್ಷಗಳ ಹಿಂದೆ ನನ್ನ ಕಾಲು ಯಾರಿಗಾದರೂ ತಾಗಿದರೆ, ನಾನು ಯಾವುದೇ ಪುಸ್ತಕ-ಪೇಪರ್‌ಗಳನ್ನು ಗೊತ್ತಿಲ್ಲದೇ ತುಳಿದರೆ - ನಮ್ ಕಡೆಯಲ್ಲಿ ಹೇಳೋ ಹಾಗೆ "ಷಣ್ ಮಾಡು"ವ (ಕೈ ಬೆರಳುಗಳನ್ನು ಕಣ್ಣಿಗಳಿಗೆ ಒತ್ತಿಕೊಂಡು ನಮಸ್ಕರಿಸುವ ಅಥವಾ ಕ್ಷಮೆ ಕೇಳುವ ಕ್ರಮ?) ಕ್ರಿಯೆಗೆ ಒಗ್ಗಿಕೊಂಡು ಹೋಗಿದ್ದೆನಲ್ಲ! ಪುಸ್ತಕ-ಪೇಪರ್ ಇವುಗಳು ಸರಸ್ವತಿಯ ಸಮಾನ, ಇವುಗಳನ್ನು ಯಾವತ್ತಿದ್ದರೂ ಗೌರವಿಸಬೇಕು ಎಂಬುದು ಅಂದು ರಕ್ತವಾಹಿನಿಯಲ್ಲಿದ್ದಿತಲ್ಲಾ.

ಹಾಗಾದರೆ ಪುಸ್ತಕಗಳನ್ನು ಕೇವಲ ಜಡವಸ್ತುಗಳನ್ನಾಗಿ ನೋಡುವ, ಅವುಗಳನ್ನು ಉಪಯೋಗಿಸಿ ತಿಪ್ಪೆಗೆ ಎಸೆಯುವ ಇಂದಿನ ನನ್ನ ಕ್ರಮ ಮನಸ್ಥಿತಿಯೇ, ಬದಲಾವಣೆಯೇ, ಆಧುನಿಕತೆಯೇ ಅಥವಾ ಹೊಳೆಯ ದಾಟಿದ ಮೇಲೆ ಅಂಬಿಗನ ಮರೆಯುವ ಮರೆವೇ? ಅಥವಾ ಹಳೆಯದಕ್ಕೆ ಅಂಟಿಕೊಂಡ ಯಾವುದೋ ಶಕ್ತಿಯ ಮತ್ತೊಂದು ಮುಖವೇ? ಹಾಗಾದರೆ ಇದೇ ತತ್ವ ಸಾಗರ-ಮೈಸೂರು-ಬನಾರಸ್ಸುಗಳಿಂದ ತಂದು ಆನವಟ್ಟಿಯಲ್ಲಿ ಮನೆಯ ತುಂಬಾ ತುಂಬಿಟ್ಟ ಅಸಂಖ್ಯ ಪುಸ್ತಕಗಳಿಗೇಕೆ ಅನ್ವಯವಾಗೋದಿಲ್ಲ? ಯಾವತ್ತಾದರೂ ಆನವಟ್ಟಿಗೆ ಹೋದಾಗ ಆತ್ಮೀಯವಾಗಿ ಅವುಗಳನ್ನು ಮೈದಡವಿ ಹಳೆಯ ನೆನಪುಗಳ ಸುರುಳಿಯೊಳಗೆ ಹೊಕ್ಕಿದ್ದಿದೆಯೇ ಹೊರತೂ ಎಂದೂ ಉಪಯೋಗಕ್ಕೆ ಬಾರದ, ಈಗಾಗಲೇ ಗೆದ್ದಲಿಗೆ ಆಹಾರವಾಗುತ್ತಿರುವ, ಧೂಳು ತಿನ್ನುತ್ತಿರುವ ಅವುಗಳನ್ನೆಲ್ಲ ಎಸೆದು ಮನೆಯನ್ನು ಶುಭ್ರವಾಗೇಕಿಡುವುದಿಲ್ಲ? ಅಲ್ಲಿಯ ಮನೆಗೊಂದು ನೀತಿ, ಇಲ್ಲಿಯ ಮನೆಗೊಂದು ನೀತಿಯೇ? ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಬೇಕಾದರೆ ಘಂಟೆಗಟ್ಟಲೆ ಮಾತನಾಡುವ, ಪುಕ್ಕಟೆ ಉಪದೇಶಕೊಡುವ ನನಗೆ ಅಮೇರಿಕದ ಮನೆಗೊಂದು ನೀತಿ, ಆನವಟ್ಟಿಯ ಮನೆಗೊಂದು ನೀತಿಯೇಕೆ?

***

ಪುಸ್ತಕಗಳು, ನಮ್ಮನ್ನು ಎತ್ತಿಕಟ್ಟುವ ಒತ್ತಿ ವ್ಯಾಖ್ಯಾನಿಸುವ ವಸ್ತುಗಳು, ನಮ್ಮನ್ನು ಪೂರೈಸುವ ಸರಕುಗಳು, ಅಥವಾ ನಮ್ಮ ಒಡನಾಡಿಗಳು - ಇವುಗಳಲ್ಲೆಲ್ಲವನ್ನು ಕೇವಲ ವಸ್ತುಗಳಾಗಿ, ಸಂಗಾತಿಗಳಾಗಿ (companion), ಸಹಪ್ರಯಾಣಿಕರಾಗಿ ನೋಡುವುದು ಒಂದು ನಿಲುವು. ಅದರ ಬದಲಿಗೆ ಇಂದಿದ್ದವು ಇಂದಿಗೆ ಮುಂಬರುವ ನಾಳೆಗಳು ಭಿನ್ನ ಅಥವಾ ಮಟೀರಿಯಲಿಸ್ಟಿಕ್ ಆದ ಪ್ರಪಂಚದಲ್ಲಿ ಮಟೀರಿಯಲಿಸ್ಟಿಕ್ ನಿಲುವುಗಳನ್ನು ಹೊತ್ತು ಸಾಗುವುದು ಮತ್ತೊಂದು ನಿಲುವು.

Monday, May 07, 2007

ಮುಂದಾಳತ್ವ

ಸುಮ್ನೇ ಹೀಗೇ ಡ್ರೈವ್ ಮಾಡ್ತಾ ಇರೋವಾಗ ಲೀಡರ್‌ಶಿಪ್ ಬಗ್ಗೆ ಯೋಚ್ನೆ ಮಾಡ್ತಾ ಇದ್ದಾಗ ಅನ್ನಿಸಿದ್ದರ ಜೊತೆಗೆ ಸ್ಥಳೀಯ ಕೆಲಸಗಾರನ ಕಾಮೆಂಟನ್ನು ಇಲ್ಲಿ ಸೇರಿಸಿ ಅವುಗಳ ಮೇಲೆ ಇನ್ನಷ್ಟು ಬೆಳಕನ್ನು ಚೆಲ್ಲಿದರೆ ಹೇಗೆ ಎನ್ನಿಸಿತು.

* ದಾರಿಯಲ್ಲಿ ಹೋಗೋ ಹಲವಾರು ವಾಹನಗಳು ತಮ್ಮ ಮುಂದಿನ ಹಾದಿಯನ್ನು ಬೆಳಗಿಕೊಂಡು, ಇಕ್ಕೆಲಗಳಿಗೆ ಅಲ್ಪಸ್ವಲ್ಪ ಬೆಳಕನ್ನು ಪಸರಿಸಿಕೊಂಡು ಮುಂದೆ ಹೋಗುತ್ತವೆ, ಪ್ರತಿಯೊಂದು ವಾಹನದ ಬೆಳಕು ತಮ್ಮ ಮೇಲೆ ಬಿದ್ದರೂ ಆ ಸಮಯಕ್ಕಷ್ಟೆ ಬೆಳಕಿನಲ್ಲಿ ಗೋಚರಿಸುವ ಪರಿಸರ ಮತ್ತೆ ಕತ್ತಲೆಯ ಮೊರೆಯನ್ನು ಹೋಗುವುದು ಸಹಜ. ಸುತ್ತಲನ್ನು ಬೆಳಗುವುದಕ್ಕೆ ಸೂರ್ಯನಂತೆ ಪ್ರಜ್ವಲಿಸಬೇಕಾದೀತು, ಇಲ್ಲವೆಂದರೆ ಕತ್ತಲೆಂಬುದು ಎಷ್ಟೋ ಜೀವಜಂತುಗಳಿಗೆ ಡಿಫಾಲ್ಟ್ ಆದ ಸ್ಟೇಟಸ್ಸು.

* You have to show the leadership of going through the thick and thin!

***

ಲೀಡರ್‌ಶಿಪ್ ಅಥವಾ ಮುಂದಾಳತ್ವ, ಮುಂದಾಳುತನ, ನಾಯಕತ್ವವನ್ನು ನಾನು ಅಮೇರಿಕನ್ ಕಾನ್‌ಟೆಕ್ಸ್ಟ್‌ನಲ್ಲಿ ಮುಂದಾಳತ್ವವನ್ನು ತೋರುವುದು (demonstration) ಅಥವಾ ರುಜುವಾತು ಮಾಡುವುದು, ಅಥವಾ ಪ್ರಸ್ತುತಪಡಿಸುವುದು ಎಂದೇ ಅರ್ಥಮಾಡಿಕೊಳ್ಳೋದು. ಇದರ ಹಿನ್ನೆಲೆ ಮ್ಯಾನೇಜ್‌ಮೆಂಟಿನ ಹೆಸರಿನಲ್ಲಿ ಈ ವರೆಗೆ ತೆಗೆದುಕೊಂಡ ತರಬೇತಿ ಕಾರಣವಿದ್ದಿರಬಹುದು ಅಥವಾ ದಿನನಿತ್ಯದ ಆಫೀಸ್ ಬದುಕಿನಲ್ಲಿ ಕಂಡುಕೊಳ್ಳುವ ಮುಂದಾಳುಗಳ ಗುಣವಿಶೇಷವಿರಬಹುದು.

ಬದುಕಿನಲ್ಲಿ (ವೈಯುಕ್ತಿಕ ಅಥವಾ ವೃತ್ತಿಪರ) ಬರೋ ಸಂಕಷ್ಟಗಳಿಗೆ ನಮ್ಮನ್ನು ನಾವು ಹೇಗೆ ಎಡಮಾಡಿಕೊಳ್ಳುತ್ತೇವೆ, ಅವುಗಳನ್ನು ಹೇಗೆ ಎದುರಿಸುತ್ತೇವೆ, ಜಯಿಸುತ್ತೇವೆ ಹಾಗೂ ಅವುಗಳಿಂದ ಏನೇನನ್ನು ಕಲಿತು ನಮ್ಮನ್ನು ನಾವು ಸುಧಾರಿಸಿಕೊಳ್ಳುತ್ತೇವೆ ಎನ್ನುವುದು ಮುಂದಾಳತ್ವದ ಒಂದು ಮುಖವಾದರೆ, ಅದರ ಮತ್ತೊಂದು ಮುಖ ಸುತ್ತಲಿನ ಜೊತೆಗೆ (ಇದ್ದಿರುವ ವ್ಯತ್ಯಾಸಗಳ ನಡುವೆಯೂ) ಹೇಗೆ ಸಂಬಂಧಗಳನ್ನು ಕಲ್ಪಿಸಿಕೊಳ್ಳಬಹುದು, ತೊಡಗಿಕೊಂಡ ಕೆಲಸದಲ್ಲಿ ಎಷ್ಟರ ಮಟ್ಟಿಗೆ ಪರಿಣಿತಿಯನ್ನು ಪಡೆದು ಬರುವ ಅಡೆತಡೆಗಳನ್ನು ಎದುರಿಸುವಲ್ಲಿ ತನ್ನನ್ನು ತಾನು ಹೇಗೆ ನಿಲ್ಲಿಸಿಕೊಳ್ಳಬಹುದು ಎನ್ನುವುದು ಮತ್ತೊಂದು ಮುಖವಾಗಿರಬಹುದು. ಈ ಎರಡು ಮುಖಗಳನ್ನು ಇಲ್ಲಿ ಪ್ರಸ್ತುತ ಪಡಿಸಿದೆನೆಂದ ಮಾತ್ರಕ್ಕೆ ಮುಂದಾಳುತನಕ್ಕೆ ನಾಣ್ಯದ ಹಾಗೆ ಕೇವಲ ಎರಡೇ ಮುಖಗಳಿವೆಯೆಂದೇನಲ್ಲ, ಅದರ ಆಯಾಮ ಇವೆರಡನ್ನು ಮೀರಿ ಗುರಿ ಮುಟ್ಟುವ ಕಡೆಗೆ ಬೇಕಾದಷ್ಟು ರೀತಿಯಲ್ಲಿ ಕಂಡುಬರಬಹುದು.

ಆದರೆ...ಒಮ್ಮೆ ತೋರಿದ ಮುಂದಾಳತ್ವ/ಲೀಡರ್‌ಶಿಪ್ ದಾರಿಯಲ್ಲಿ ಬಂದು ಹೋಗೋ ವಾಹನದ ಹೆಡ್‌ಲೈಟಿನ ಬೆಳಕಿನ ಹಾಗೇ ಎಂದು ಬಹಳಷ್ಟು ಸಾರಿ ಅನ್ನಿಸಿದ್ದು ಹೌದು - you are as good as yesterday and tomorrow offers a whole new set of challenges - ಅನ್ನೋದು ದೊಡ್ಡ ಮಾತೇನೂ ಅಲ್ಲ. ಪ್ರತಿಯೊಂದು ಕೆಲಸ, ಕಾರ್ಯ, ಅವಕಾಶಗಳಲ್ಲೂ ವ್ಯಕ್ತಿಯೊಬ್ಬನ ಮುಂದಾಳತ್ವವನ್ನು ಅಳೆಯಲಾಗುತ್ತದೆ. ಅಂದರೆ ಒಬ್ಬ ವ್ಯಕ್ತಿಯ ಮುಂದಾಳತ್ವ ಎನ್ನೋದು ಆ ವ್ಯಕ್ತಿ ತಾನೆದುರಿಸುವ ಪ್ರತಿಯೊಂದು ಸವಾಲುಗಳನ್ನು ಹೇಗೆ ಎದುರಿಸಿ ಅದರಿಂದ ಬರುವ ಪ್ರತಿಫಲವನ್ನು ಅವಲಂಭಿಸೋದಾದರೆ - ಮುಂದಾಳತ್ವ ಎನ್ನುವುದು ಇಂತಹ ಪ್ರತಿಫಲಗಳ ಒಟ್ಟು ಮೊತ್ತವೆನ್ನೋಣವೇ?

***

ಲೀಡರ್‌ಶಿಪ್ ಅನ್ನೋದು ಗಂಭೀರವಾದ ವಿಷಯವೋ ಅಥವಾ ಅದನ್ನು ಹಗುರವಾಗಿ ಪರಿಗಣಿಸಿ ಬದುಕಿನ ಒಂದು ಭಾಗವಾಗಿ ತೆಗೆದುಕೊಳ್ಳುವುದೋ ಎಂಬ ನಿರ್ಧಾರವನ್ನು ನಿಮಗೇ ಬಿಟ್ಟುಬಿಡುತ್ತೇನೆ.

Friday, May 04, 2007

ಪ್ರೀತಿ-ಪ್ರೇಮ

'ಇಂಥಾ ಅಗಾಧವಾದ ಸಬ್ಜೆಕ್ಟನ್ನ ಒಂದು ಜುಜುಬಿ ಬ್ಲಾಗ್ ಪೋಸ್ಟ್ ನಲ್ಲಿ ಹಿಡಿದು ಹಾಕಲಿಕ್ಕೆ ನೋಡ್ತಿದ್ದೀಯೇನಯ್ಯಾ ಅದೂ ಇಂಥಾ ಪ್ರಿಸ್ಟೀನ್ ಘಳಿಗೆಯಲ್ಲಿ?' ಎಂದು ಯಾರೋ ಅವಾಜ್ ಹಾಕಿದ ಹಾಗಾಯಿತು ಎಂದು ನನ್ನ ಭುಜಗಳ ಎರಡೂ ಬದಿಗೆ ನೋಡಿದ್ರೆ ಯಾರೂ ಕಾಣಿಸ್ಲಿಲ್ಲ, ಧ್ವನಿಗಳನ್ನು ಕೇಳೋದು ಕಿವಿಗಳಾದರೆ ಕಣ್ಣು ತಾನೇ ಏನು ಮಾಡೀತು ಎಂದು ಸುಮ್ಮನಾದೆ.

Why am I writing (about it) now? who in the world knows?

ಮನಃಪಟಲವೆಂಬೋ ರಜತ ಪರದೆಯ ಮೇಲೆ ಜುರ್ರನೆ ಜಾರುವ ಸನ್ನಿವೇಶಗಳು ನನ್ನನ್ನು ಬಹಳ ಹಿಂದೆ ಕರೆದುಕೊಂಡು ಹೋಗತೊಡಗಿದವು, ಹಿಪ್ನಟೈಸ್ ಮಾಡುವವನ ಧ್ವನಿಯಲ್ಲಿನ ಹಿಡಿತದಂತೆ ನನ್ನನ್ನು ಅದ್ಯಾವುದೋ ಹಳೆಯ ನೆನಪುಗಳು ಕಟ್ಟಿಹಾಕಿಕೊಂಡಿದ್ದವು - ಸುಮ್ಮನೇ ಅವುಗಳ ಬೆನ್ನು ಹತ್ತಿ ಹೋದೆ - ಟಿಕೇಟ್ ಏನೂ ತೆಗೆದುಕೊಳ್ಳಬೇಕಾಗಿಲ್ಲವಲ್ಲ ಎಲ್ಲಿಗೆ ಹೋಗಬೇಕೆಂದ್ರೂ!

ಹೈ ಸ್ಕೂಲಿನ ದಿನಗಳಲ್ಲಿ ಮೇಷ್ಟ್ರುಗಳು, ಮನೆಯವರಿಗೆ ಹೆದರಿ ತಮ್ಮೆಲ್ಲ ಭಾವನೆಗಳನ್ನು ಬಚ್ಚಿಟ್ಟುಕೊಳ್ಳುವ ಹುಡುಗ-ಹುಡುಗಿಯರಿಗೆ ಕಾಲೇಜು ಅತ್ಯಂತ ಸೊಗಸಾದ ತಾಣವಾಗಿ ಕಾಣಲು ಬೇಕಾದಷ್ಟು ಕಾರಣಗಳಿವೆ, ಅವುಗಳಲ್ಲಿ 'ನಾನು ಕಾಲೇಜಿಗೆ ಹೋಗುತ್ತಿದ್ದೇನೆ' ಎನ್ನುವ ಭಾವನೆ/ಆಲೋಚನೆ ಒಂದು ರೀತಿಯ ಸ್ವಾತಂತ್ರ್ಯವನ್ನು ತಂದುಕೊಡೋದು ಅಲ್ಲದೇ ಮುಖದ ಮೇಲೆ ಮೀಸೆ ಚಿಗುರೋ ಎಷ್ಟೋ ಹುಡುಗರಿಗೆ ಅನೇಕ ಲವಲವಿಕೆಗಳನ್ನೂ ನವಿರಾದ ಆಸೆಗಳನ್ನೂ ಸೃಷ್ಟಿಸುತ್ತದೆ.

ಆಗಿನ ದಿನಗಳಲ್ಲಿನ ಚರ್ಚಾಸ್ಪರ್ಧೆಗಳಲ್ಲಿ 'ಭಾರತಕ್ಕೆ ಅಧ್ಯಕ್ಷೀಯ ಮಾದರಿಯ ಪ್ರಜಾಪ್ರಭುತ್ವ ಒಳ್ಳೆಯದು' ಎನ್ನುವ ವಿಷಯವನ್ನು ಕುರಿತು ವಿದ್ಯಾರ್ಥಿಗಳಲ್ಲಿ ಚರ್ಚೆಯನ್ನು ಹುಟ್ಟುಹಾಕಿಸುವ ಬದಲು 'ಒಬ್ಬರನ್ನೊಬ್ಬರು ಪ್ರೇಮಿಸುವವರಲ್ಲಿ ಓಪನ್ ಕಮ್ಮ್ಯೂನಿಕೇಷನ್ ಇರುವುದು ಒಳ್ಳೆಯದು' ಎಂದು ವಿಷಯಗಳನ್ನು ಏಕೆ ಸೃಷ್ಟಿಸೋದಿಲ್ಲ ಅನ್ನೋ ಪ್ರಶ್ನೆ ಬಂದು ನನ್ನ ಮುಖದಲ್ಲಿ ಒಂದು ಸಣ್ಣ ನಗೆಯನ್ನು ಹುಟ್ಟಿಹಾಕಿ ಹಾಗೇ ಮರೆಯಾಯಿತು.

ನಮ್ಮೂರಿನ ಹುಡುಗರ ಪ್ರೇಮ ಸಂದೇಶಗಳು ಕಿಕ್ಕಿರಿದ ಬಸ್ಸಿನಲ್ಲಿ ಹಿಂದಿನಿಂದ ಬಂದ ಕಂಡಕ್ಟರಿನ ಕೀರಲಾದ 'ಇಲ್ಲ್ಯಾರ್ರೀ ಟಿಕೇಟು...' ಎಂದು ಬಸ್ಸಿನ ಹಿಂದುಗಡೆಯಿಂದ ಜನರ ತಲೆಗಳ ನಡುವೆ ಬಂದ ಪ್ರಶ್ನೆಯ ಧ್ವನಿಯಂತೆ ಬರುವಾಗಲೇ ಸಾಕಷ್ಟು ತಿಕ್ಕಾಟ ಮಾಡಿಕೊಂಡು ಟಾರ್ಗೆಟೆಡ್ ಆಡಿಯನ್ಸ್ ತಲುಪೋ ಹೊತ್ತಿಗೆ ಅನೇಕ ಇನ್‌ಫ್ಲುಯೆನ್ಸ್‌ಗಳಿಗೊಳಗಾರಿತ್ತದೆ. ನಮ್ಮೂರಿನ ಸಂವಹನ ಮಾಧ್ಯಮಗಳು ಕಿಕ್ಕಿರಿದು ತುಂಬಿ ತುಳುಕಾಡುತ್ತಿರುವಾಗ ಅಲ್ಲಲ್ಲಿ ಹೊಸ-ಹೊಸ ಅವಿಷ್ಕಾರಗಳು ಕಂಡುಬಂದರೂ ಅವೆಲ್ಲವೂ ಬಹಳ ಸೀಮಿತವಾಗಿ ಹೋಗಿ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗತೊಡಗುತ್ತದೆ.

ಹುಟ್ಟಿದಾರಭ್ಯ ಏನನ್ನೂ ಎಲ್ಲವನ್ನೂ ಬಾಯಿಬಿಟ್ಟು ಹೇಳಿ ಅಭ್ಯಾಸವಿದ್ದರೆ ತಾನೇ? ಕೃತಜ್ಞತೆ, ಧನ್ಯವಾದ, ಅಭಿನಂದನೆಗಳನ್ನು ವಿಶೇಷವಾಗಿ ಅಭಿವ್ಯಕ್ತಗೊಳಿಸಿ ಗೊತ್ತಿದ್ದರೆ ತಾನೇ?

ನನ್ನ ಸ್ನೇಹಿತ ಸದು, ಶೈಲಜಾ ಅನ್ನೋ ಹುಡುಗಿಯನ್ನ ಬಹಳ-ಬಹಳ-ಬಹಳ ಪ್ರೀತಿಸುತ್ತಿದ್ದ ಸಂದರ್ಭ - ಅದೂ ಇನ್ನೂ ಸೆಕೆಂಡ್ ಪಿಯುಸಿ ಹಂತದಲ್ಲಿರುವಾಗ - 'ಹೋಗಿ ನೇರವಾಗಿ ಹೇಳೋ...' ಅನ್ನೋ ನನ್ನ ಮಾತುಗಳು ಅವನಲ್ಲಿ ಯಾವ ಪರಿಣಾಮವನ್ನೂ ಬೀರ್ತಿರಲಿಲ್ಲ...ಬರೀ ಮನಸ್ಸಿನಲ್ಲಿ ಮಂಡಿಗೆ ತಿನ್ನೋನು, ನನ್ನಂತಹ ಕೆಲವರಿಗೆ ಮಾತ್ರ ಅವನ ಆಲೋಚನೆಗಳನ್ನ ಹಂಚಿಕೊಳ್ಳೋನು. ಓದೋದು-ಗೀದೋದು ಎಲ್ಲಾ ಸೆಕೆಂಡರಿಯಾಗಿ ಹೋಗಿತ್ತು ಆಗ. ಬೆಳಿಗ್ಗೆಯಿಂದ ಸಂಜೇವರೆಗೆ ಒಂದೇ ರಾಗ - ಅವಳು ನಾಳೆ ಎಲ್ಲಿರ್ತಾಳೆ? ಹೇಗಿರ್ತಾಳೆ? ಅವಳಿಗೆ ಹೆಂಗೆ ಹೇಳೋದು, ಹಿಂಗೆ ಹೇಳೋದು... ಇತ್ಯಾದಿ. ನಮಗೆಲ್ಲಾ ಚಿಟ್ಟ್ ಹಿಡಿದು ಹೋಗಿತ್ತಪ್ಪಾ ಅವನ ಪ್ರೇಮಾವೇಶವನ್ನು ನೋಡಿ. ಸದು ಹೋಗಿ ಶೈಲಜಾನನ್ನು ಮಾತನಾಡಿಸೋ ನನ್ನ ಪ್ರಯತ್ನಗಳು ಯಾವತ್ತು ಸಫಲವಾಗಲೇ ಇಲ್ಲ - ಅವನ ಅಗಾಧವಾದ ಪ್ರೀತಿ ಹಲವು ಕವನಗಳಾಗಿ, ಕಥೆಗಳಾಗಿ ಹುಟ್ಟಿ ಹೊರಬಂದವೇ ಹೊರತು ಅದರಿಂದ ಮತ್ತಿನ್ನೇನೂ ಆಗಲಿಲ್ಲ. ಇವತ್ತಿನ ನಿಲುವಿನಲ್ಲಿ ಸದುವಿನ ಭಾವನೆಗಳು ಅಂದಿನ ದಿನಗಳಿಗೆ ಮಾತ್ರ ಅದೆಷ್ಟು ಗಟ್ಟಿಯಾಗಿದ್ದವು ಅನ್ನಿಸಿದರೂ ಅವುಗಳು ಅಷ್ಟೇ ಬಾಲಿಶವಾದವು ಎಂದು ಜೊತೆಗೆ ಅನ್ನಿಸಿದ್ದು ಹೌದು.

ನನ್ನನ್ನ ಕೇಳಿದ್ರೆ - ಈ ಅವೇ ಲವ್ ಸ್ಟೋರಿಯನ್ನು ಚೂರುಪಾರು ಬದಲಾಯಿಸಿ ಹಲಸಿನ ಮರದ ಬದಲು ಅಕೇಷಿಯಾ ಮರಗಳನ್ನು ಸುತ್ತುವ ಪ್ರೇಮಕಥೆಗಳು ಹಾಗೂ ಅವುಗಳನ್ನು ಆಧಾರಿಸಿ ತಯಾರಿಸುವ ಚಿತ್ರಗಳನ್ನು ಸಾರಾಸಗಟಾಗಿ ಬ್ಯಾನ್ ಮಾಡಿ ಬಿಡಬೇಕು. ಒಂದು ವರ್ಷಕ್ಕೆ ಹತ್‌ಹತ್ರ ಸಾವಿರ ಸಿನಿಮಾಗಳನ್ನು ಹುಟ್ಟು ಹಾಕೋ ನಮ್ಮ ಪರಂಪರೆಯ ಮೊತ್ತ ಕೇವಲ ಇನ್‌ಎಫಿಷಿಯಂಟ್ ಆಗಿ ಕಮ್ಮ್ಯೂನಿಕೇಟ್ ಮಾಡುವ ಮರ ಸುತ್ತಿ, ಹಾಡಿ, ಹರಟಿ, ಅತ್ತು, ನಗುವ ಪ್ರೇಮಿಗಳ ಕಥೆಗಳಷ್ಟೇ ಆಗಿಬಿಡಬಾರದು ನೋಡಿ, ಅದಕ್ಕೆ. ಪ್ರೇಮಿಗಳಿಂದ ಪ್ರೇಮಕಥೆಗಳೋ, ಕಥೆಗಳಿಂದ ಪ್ರೇಮಿಗಳೋ ಅನ್ನೋದಕ್ಕಿಂತಲೂ ಕಥೆಗಳಿಂದಲೇ ಇನ್ನಷ್ಟು ಕಥೆಗಳು ಎಂದ್ರೇನೆ ಸೊಗಸು, ಯಾಕಂದ್ರೆ ಒರಿಜಿನಾಲಿಟಿ, ಸೃಜನಶೀಲತೆ ಅನ್ನೋದು ಕೆಲವರಿಗೆ ಮಾತ್ರ, ಇನ್ನೊಬ್ಬರ ಸ್ಪೂರ್ತಿಯನ್ನಾಧರಿಸಿ ಹುಟ್ಟು ಹಲವಾರು ಸ್ಯೂಡೋ ಸ್ಫೂರ್ತಿಗಳಿಗೆ ಮಾತ್ರ ಯಾವುದೇ ಮಿತಿ ಅನ್ನೋದೇನೂ ಇಲ್ಲ.

'ಥೂ ನಿನ್ನ, ಯಾವನಯ್ಯಾ ನೀನು, ನಮ್ಮೂರಿನ ಹುಡುಗ/ಹುಡುಗಿಯರಿಗೆ ಕನಸು ಕಾಣೋ ಹಕ್ಕೂ ಇಲ್ಲಾ ಅಂತ ಹೇಳ್ತಾ ಇದ್ದೀಯಲ್ಲ, ಕನಸ್ಸು ಕಾಣೋದಕ್ಕೂ ದುಡ್ಡ್ ಕೊಡಬೇಕಾ?' ಎಂದು ಇನ್ನೆಲ್ಲಿಂದಲೋ ಮತ್ತೊಂದು ಧ್ವನಿ ಕೇಳಿ ಬಂತು. ಕನಸುಗಳನ್ನ 'ಕಾಣಲಿ' ಯಾರು ಬೇಡಾ ಅಂದೋರು - ಮನಸ್ಸಿನಲ್ಲಿರೋದನ್ನ ನೆಟ್ಟಗೆ ಹೇಳಿಕೊಳ್ಳಿ, ಹಂಚಿಕೊಳ್ಳಿ ಅಂತಾ ತಾನೇ ನಾನ್ ಹೇಳ್ತಾ ಇರೋದು ಎಂದು ಯಾರನ್ನೋ ಸಮಾಧಾನ ಮಾಡಲು ನೋಡಿದೆ, ಆ ಧ್ವನಿ ನನ್ನೊಳಗೇ ಹೇಗೆ ಬಂತೋ ಹಾಗೇ ಕರಗಿ ಹೋಯ್ತು.

ಈ ಹುಡುಗ/ಹುಡುಗಿಯರದ್ದೂ ಒಂದ್ ರೀತಿ ಸರೀನೇ...ಓದೋದಕ್ಕೆ ಬೇಕಾದಷ್ಟು ಇರುತ್ತೆ, ಕಿತ್ತು ತಿನ್ನೋ ಕಾಂಪಿಟೇಷನ್ನು ಎಲ್ಲಿ ಹೋದ್ರೂ, ಅದರ ಮೇಲೆ ಆಸ್ತಿ, ಅಂತಸ್ತು, ಜಾತಿ, ಭಾಷೆ ಅಂತ ನೂರಾರು ಸಂಕೋಲೆಗಳು, ಅವುಗಳನ್ನೆಲ್ಲ ಜಯಿಸಿ, ಮೀರಿಸಿ ಹೋಗೋದಕ್ಕೆ ಆ ಎಳೆ ಮನಸ್ಸುಗಳಲ್ಲಿ ಚೈತನ್ಯವಾದ್ರೂ ಎಲ್ಲಿರುತ್ತೆ? ಈ ವಯಸ್ಸಿಗೆ ಸಹಜವಾದ ಭಾವನೆಗಳು ಬರೋವಾಗ ಈ ಸಂಕೋಲೆಗಳನ್ನು ಕೇಳಿ ಬರೋದಿಲ್ಲವಲ್ಲ? ಹೀಗೆ ಬಂದವುಗಳು ಕಾಲನ ಪರೀಕ್ಷೆಯಲ್ಲಿ ಗಟ್ಟಿಯಾದವುಗಳು ಉಳಿದುಕೊಂಡು ಜೊಳ್ಳಾದವು ತೇಲಾಡಿಕೊಂಡು ಹೋಗುದು ಸಹಜವೇ ಅಲ್ವೇ?

***

ನನಗೆ ಇವತ್ತಿಗೂ ಅನ್ಸುತ್ತೆ - ಸದು ಶೈಲಜಾ ಹತ್ರ ನೇರವಾಗಿ ಮಾತನಾಡಿ ಬಿಡಬೇಕಿತ್ತು, ತನ್ನೆಲ್ಲವನ್ನೂ ಮನಸ್ಸಿನಲ್ಲೇ ಇಟ್‌ಕೊಂಡು ಕೊರಗಬಾರ್ದಿತ್ತು, ಅವನ ಪ್ರೇಮ ಅಲ್ಲಿಗೇ ನಿಲ್ಲಬಾರ್ದಿತ್ತು ಅಂತ.

Tuesday, May 01, 2007

ಅವರ್‌ಗ್ಲಾಸ್ ಮತ್ತು ಇತರ ಪಾರ್ಶಿಯಲ್ ಅನಾಲಜಿಗಳು!

ನ್ಯೂ ಯಾರ್ಕ್ ನಗರಕ್ಕೆ ಕೂಗಳತೆಯಲ್ಲಿರೋ ಜರ್ಸೀ ಸಿಟಿಗೆ ಭಾರತದಿಂದ ಬರೋ ಹೊಸ ಐಟಿ ಕೆಲಸಗಾರರ ಸಂಖ್ಯೆ ಬಹಳ ಹೆಚ್ಚು, ಇಂಡಿಯಾ ಮಾರ್ಕೆಟ್‌ಗೆ ಹೋದಾಗ ಅಥವಾ ಟ್ರೈನ್ ಸ್ಟೇಷನ್ನುಗಳಲ್ಲಿ, ಅಥವಾ ದಾರಿಯಲ್ಲಿ ಬಸ್ಸಿಗೆ ಕಾಯುತ್ತಿರುವವರಾಗಿಯೋ ಹೀಗೆ ಹಲವಾರು ಅವತಾರಗಳಲ್ಲಿ ಕಾಣಸಿಗುವ ಯುವಕ/ಯುವತಿಯರನ್ನು ನೀವು ಬೇಡಾ ಅಂದ್ರೂ ಗಮನಿಸಲೇ ಬೇಕಾಗುತ್ತೆ. ನಮ್ಮ ಮನೆ ಹತ್ತಿರವಿರುವ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್ ಒಂದಕ್ಕೆ ಬೆಂಗಳೂರಿನಿಂದ ನಮಗೆ ಪರಿಚಯವಿರುವ ಕನ್ನಡಿಗರೊಬ್ಬರು ಬಂದಿದ್ದಾರೆ, ಅವರ ಜೊತೆಯಲ್ಲಿ ಇನ್ನು ಮೂರು ಜನ ಸೇರಿಕೊಂಡು (ಒಬ್ಬರು ಒರಿಸ್ಸಾದವರು, ಇನ್ನಿಬ್ಬರು ತಮಿಳ್ನಾಡಿನವರು) ಒಂದು ಅಪಾರ್ಟ್‌ಮೆಂಟಿನಲ್ಲಿ ರೂಮ್ ಮೇಟ್‍ಗಳಾಗಿಕೊಂಡು ದಿನೇ-ದಿನೇ ಅಮೇರಿಕನ್ ಬದುಕಿಗೆ ಹೊಂದಿಕೊಂಡು ಬದುಕು ನಡೆಸುತ್ತಿದ್ದಾರೆ. ಇವರ ಸ್ಥಿತಿಗತಿಯಲ್ಲೇನೂ ವಿಶೇಷವಿಲ್ಲ, ಹೆಚ್ಚೂಕಡಿಮೆ ಎಲ್ಲರೂ ಹೀಗೇ ಇಲ್ಲಿ ಬದುಕನ್ನು ಆರಂಭಿಸೋದು, ನಾನೂ ಒಂದು ಕಾಲದಲ್ಲಿ ಹೀಗೇ ಇದ್ದೆ!

'ನಾನು ಇಲ್ಲಿಗೆ ಬಂದಾಗ ಹೇಗಿದ್ದೆ?' ಎನ್ನುವ ಪ್ರಶ್ನೆಗೆ ಹಳೆಯ ನೆನಪುಗಳನ್ನು ಹುಡುಕಿಕೊಂಡು ಹೋಗಿ ಉತ್ತರವನ್ನು ಕಂಡುಕೊಳ್ಳಬಹುದಾದರೂ ಈ ಹೊಸಬರ ಒಡನಾಟದಲ್ಲಿ ಅವರ ನಡೆನುಡಿ-ಆಚಾರವಿಚಾರಗಳನ್ನು ಕೂಲಕಂಷವಾಗಿ ನೋಡೋದರ ಮೂಲಕ ನನ್ನನ್ನು ನಾನು ಹುಡುಕಿಕೊಳ್ಳಲು ಪ್ರಯತ್ನಪಟ್ಟಿದ್ದೇನೆ, ಅದರ ಪರಿಣಾಮವಾಗಿಯೇ ಇಲ್ಲಿನ ಕೆಲವು ಪಾರ್ಶಿಯಲ್ ಅನಾಲಜಿಗಳು!

ಅವರ್‌ಗ್ಲಾಸ್ ಅಥವಾ ಸ್ಯಾಂಡ್‌ಕ್ಲಾಕ್ - ತನ್ನಲ್ಲಿದ್ದ ಮರಳನ್ನು ಗುರುತ್ವಾಕರ್ಷಣೆ ಬಲಕ್ಕೆ ಒಪ್ಪಿಸಿ ಸುರಿಸಿಕೊಂಡು ಕಾಲವನ್ನು ತನ್ನೊಳಗೆ ಕಟ್ಟಿಕೊಂಡಂತೆ ಮುಖ ಮಾಡಿಕೊಳ್ಳುವ ಹಳೆಕಾಲದ ಗಡಿಯಾರ; ಗುರುತ್ವಾಕರ್ಷಣಾ ಬಲ 9.8 meters per seconds square ಎಂದು ಭಾರತದಲ್ಲಿ ಸಾವಿರ ಸಾರಿ ಓದಿದ್ದರೂ ಇಲ್ಲಿಗೆ ಬಂದು ಕೆಲವೇ ದಿನಗಳಲ್ಲಿ feet per seconds square (ಅದೂ 32.17) ಎಂದು ಬದಲಾಗುವ ವಿಸ್ಮಯ. ಸೋರುತ್ತಿರುವ ಮರಳ ಕಣಗಳು ಅಲ್ಲೂ ಇಲ್ಲ, ಇಲ್ಲೂ ಇಲ್ಲ - ಯಾವುದೇ ತೂಕವಿಲ್ಲದಿದ್ದರೂ ಮೀಟರುಗಳ ಲೆಕ್ಕಕ್ಕೆ ಸಿಗದೇ ಇಲ್ಲಿನ ಅಡಿ-ಮೈಲುಗಳಲ್ಲಿ ಕರಗಿ ಹೋಗುವ ಸಂಭ್ರಮ! ಕೆಲವರ ಅಮೇರಿಕದ ಜೀವಮಾನವನ್ನು ಒಂದೇ ಅವರ್‌ಗ್ಲಾಸ್ ಪ್ರತಿಬಿಂಭಿಸಿದರೆ ಇನ್ನು ಕೆಲವರಿಗೆ ಅದು ಆಗಾಗ್ಗೆ ಖಾಲಿ ಆಗಿ, ಉಲ್ಟಾ ಹೊಡೆದು ಮತ್ತೆ ಅದೇ ಮರಳನ್ನು ಸುರಿಸಿಕೊಳ್ಳುವ ಚಕ್ರದಲ್ಲಿ ಸಿಕ್ಕಿ ಹೋಗುತ್ತದೆ!

ಕಾಂಪೋನೆಂಟ್ vs. ಕಂಪೋನೆಂಟ್ - ಇಷ್ಟು ವರ್ಷ ಕಲಿತು ಬಳಸಿದ ಭಾಷೆ, ಪದಗಳು, ಅವುಗಳ ಬಳಕೆ ಹಾಗೂ ಉಚ್ಛಾರಗಳು ಬದಲಾಗುವ ರೀತಿ ಇನ್ನೊಂದು ರೀತಿಯ ವಿಸ್ಮಯವನ್ನು ತನ್ನೊಳಗೆ ಕಲ್ಪಿಸಿಕೊಳ್ಳುತ್ತದೆ. ನಮ್ಮ ಎನ್ವಿರಾನ್‌ಮೆಂಟುಗಳು ಎನ್ವೈರ್ನ್‌ಮೆಂಟಾಗಿ, ಸ್ಟೇಟಸ್ಸ್ ಇದ್ದದ್ದು ಸ್ಟ್ಯಾಟಸ್ ಆಗಿ, ಡೆವೆಲಪರ್ ಇದ್ದೋನು ಡಿವ್ವೆಲಪರ್ ಆಗಿ, ನಮ್ಮನ್ನು ನೆಲದ ಮೇಲೆ ಎತ್ತಿ ನಿಲ್ಲಿಸಿ ನಡೆಸುವ ಕಾಂಪೋನೆಂಟುಗಳು ಕಂಪೋನೆಂಟುಗಳಾಗಿ ಬದಲಾಗುವ ಪದೇಪದೇ ಕಂಡುಬರುವ ಲೌಕಿಕ ಆಶ್ಚರ್ಯಗಳಲ್ಲೊಂದು!

ಉಷ್ಣತೆ - ಹವಾಮಾನ ಅಂದ್ರೆ ನಮ್ಮಲ್ಲಿ ಗಮನಿಸೋ ಉಷ್ಣತೆ ಇಲ್ಲಿ ಬಂದ ಮೇಲೆ ಶೀತ ಹವೆಯನ್ನು ಹೆಚ್ಚು ಗಮನಿಸೋ ಹಾಗೆ ಮಾಡೋದು ಮತ್ತೊಂದು ಅಶ್ಚರ್ಯಗಳಲ್ಲೊಂದು. All of a sudden, ಒಂದರಿಂದ ನೂರರವರೆಗಿನ ಫ್ಯಾರೆನ್‌ಹೈಟ್ ಸ್ಕೇಲ್ ಅಪ್ಯಾಯಮಾನವಾಗುತ್ತದೆ - thanks to the inbuilt calculator - ಫಸ್ಟ್ ಪಿಯುಸಿಯಲ್ಲಿ ಒದ್ದಾಡಿ ನೆನಪಿನಲ್ಲಿಟ್ಟುಕೊಂಡಿದ್ದ C = (F - 32) * (5/9) ಅನ್ನೋ ಸೂತ್ರ ಅಮೇರಿಕನ್‌ಮಯವಾಗಿ C = (F - 32)/2 ಆಗಿ ಕನ್ವರ್ಟ್ ಆಗೋದಷ್ಟೇ ಅಲ್ಲ, ನಿದ್ದೆಯಿಂದ ಎದ್ದೇಳಿಸಿ ಕೇಳಿದರೂ ಯಾವುದೇ ಟೆಂಪರೇಚರ್ ಅನ್ನು ಸೆಲ್ಸಿಯಸ್ ಇಂದ ಫ್ಯಾರನ್‌ಹೈಟ್‌ಗೆ ವೈಸಾ ವರ್ಸಾ ಕನ್ವರ್ಟ್ ಮಾಡುವ ಕಲೆ ಅಂಗೈನ ನೆಲ್ಲೀಕಾಯಿ ಆಗಿ ಹೋಗುತ್ತದೆ!

ಉದ್ದ ಕೂದಲ ಸೂತ್ರ - ಹೆಣ್ಣು ಮಕ್ಕಳಿಗೆ ಅನ್ವಯವಾಗದ ವಿಚಾರವಿದು - may be further down the road, but not right away - ಇಲ್ಲಿಗೆ ಬಂದ ಯುವಕರ ತಲೆ ಮೇಲೆ ಹುಲ್ಲುಕುತ್ರೆಯ ಹಾಗೆ ಬೆಳೆದ ಕೂದಲನ್ನು ನೋಡಿ ಅವರು ಅಮೇರಿಕದಲ್ಲಿ ಎಷ್ಟು ವರ್ಷದಿಂದ್ದಿರಬಹುದು ಎಂದು ಹೇಳಬಹುದಾದ ಒಂದು ಕಲೆ! ಬಂದ ಹೊಸದರಲ್ಲಿ ಸಂಬಳದ ಹೆಚ್ಚು ಭಾಗ ಅಪಾರ್ಟ್‌ಮೆಂಟ್ ರೆಂಟು, ಫೋನ್ ಕಾರ್ಡು ಅಥವಾ ಕಾರಿಗೆ ವ್ಯಯವಾಗುತ್ತಿರುವ ಕಾಲದಲ್ಲಿ, ನಮ್ಮ ತಲೆಯಲ್ಲಿ ಮೂರು ವಾರ, ನಾಲ್ಕು ವಾರಗಳಿಗೊಮ್ಮೆ ಬೆಳೆದುನಿಲ್ಲುವ ಕೂದಲನ್ನು ಕತ್ತರಿಸಿಕೊಳ್ಳಲು 12 ರಿಂದ 15 ಡಾಲರ್ರು ಪ್ಲಸ್ ಹದಿನೈದು ಪರ್ಸೆಂಟ್ ಟಿಪ್ಸು ಇದೆಲ್ಲ ಕೊಡೋದು ಯಾರು ಹಾಗೂ ಯಾಕೆ? ಎನ್ನುವ ಪ್ರಶ್ನೆ ಬೃಹದಾಕಾರವಾಗಿ ಬೆಳೆದು ನಿಲ್ಲೋದು (thanks to the compost inside the head, the hair grows in any and every season - that too so much so for me/us!) ವರ್ಷಕ್ಕೆ ಹನ್ನೆರಡು ಸಾರಿ ಕಟ್ಟಿಂಗ್ ಮಾಡಿಸೋ ಬದಲಿಗೆ ಹನ್ನೊಂದ್ ಸಾರಿ ಮಾಡ್ಸಿದರೆ ಹತ್‌ಹತ್ರ ಇಪ್ಪತ್ತು ಡಾಲರ್ ಉಳಿಯೋಲ್ವೆ - ಇನ್ನು ಟಿಪ್ಸ್ ಕೊಡೋರ್ ಯಾರು? (ಲೋಕಲ್ ರೆಡಿಯೋ ಸ್ಟೇಷನ್ನುಗಳು ಭಾರತೀಯರು worst ಟಿಪ್ಸ್ ಕೊಡುತ್ತಾರೆ ಎಂದು ಈಗಾಗಲೇ ಸಾಧಿಸಿ ಜಗಜ್ಜಾಹೀರು ಮಾಡಿರೋವಾಗ).

ಮೂಗಿನಲ್ಲಿ ಬೆರಳಾಡಿಸಿಕೊಂಡು ಅನುಭವಿಸುವ ಸುಖ - ಹಲವಾರು ನ್ಯಾಷನಾಲಿಟಿಯ ಹಿನ್ನೆಲೆಯ ಜನರನ್ನು ಗಮನಿಸಿ ನಾನು ತೀರ್ಮಾನಿಸಿಕೊಂಡ ಅನಾಲಜಿ ಇದು - ನನ್ನಂತಹ ಭಾರತೀಯರು ತಮ್ಮ ಮೂಗನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಂಡಿರುತ್ತಾರೆ! ಎಲ್ಲಿ ಬೇಕಂದರಲ್ಲಿ nose pick ಮಾಡಿದ್ದೇನೆ, ಮಾಡುತ್ತಿದ್ದೇನೆ, ಮಾಡುತ್ತಲೇ ಇರುತ್ತೇನೆ (present continuous tense ಅನ್ನೋದು ಇರೋದಕ್ಕೂ ಒಂದ್ ಬೆಲೆ ಕೊಡೋದ್ ಬೇಡ್ವೇ?) ಇಷ್ಟಿಷ್ಟು ದಪ್ಪವಾಗಿರೋ ಭಾರತೀಯರ ಮೂಗುಗಳಿಗೆ ಐತಿಹಾಸಿಕವಾಗಿ ಇನ್ನೇನ್ ಕಾರಣವಿದ್ದಿರಬಹುದು? ಹೆಚ್ಚು ಬಳಸಿದ ಸ್ನಾಯುಗಳು ಬಲವಾಗಿ ಬೆಳೆಯುತ್ತವೆ ಅಂತ ಜೀವಶಾಸ್ತ್ರದಲ್ಲಿ ಓದಿದ್ದು ನೆನಪಿಗೆ ಬರೋದಿಲ್ಲಾ?

ಬೆಳ್ಳಗಿರೋದೆಲ್ಲ ಮಲ್ಲಿಗೆ ಎನ್ನುವ ಭ್ರಮೆ - 'ಈ ಕರಿಯರನ್ನು ಕಂಡ್ರೆ ಆಗೋದಿಲ್ಲಪ್ಪಾ ನನಗೆ' ಅನ್ನೋದು ಓಪನ್ಲಿ ಹೇಳಿ ಕೈ ಕೊಡಗಿಕೊಳ್ಳುವ ಒಂದು ಸಾಧಾರಣ ಸಾಲು - ಅಮೇರಿಕನ್ನರು ಅಂದ್ರೆ ಬಿಳಿಯರು ಮಾತ್ರ ಅನ್ನೋ ಭ್ರಮೆ - no one says European Americans, it is usually substituted by White! ಅನ್ನೋದು ಸುಬ್ಬನ ಉವಾಚ -("ನಿನ್ನನ್ನ ಏಷಿಯನ್ ಅಮೇರಿಕನ್ ಅಂತಲೂ, ಡಾಮಿನಿಕ್‌ನ್ನ ಆಫ್ರಿಕನ್ ಅಮೇರಿಕನ್ ಅಂತಲೂ ಕರೆಯೋರು, ಈ ಯೂರೋಪಿಂದ ಬಂದ ಜನಗಳ್ನ, ಅದರಲ್ಲೂ ಬಿಳಿಯರನ್ನ ಯುರೋಪಿಯನ್ ಅಮೇರಿಕನ್ ಅಂಥಾ ಯಾಕೆ ಕರೆಯಲ್ಲಾ, ಬರೀ ವೈಟ್ಸ್ ಅಂಥ ಯಾಕ್ ಅಂತಾರೆ!") - ಸುಪ್ರಿಮಸಿ, ಸುಪಿರಿಯಾರಿಟಿ ಅನ್ನೋದು ನಮ್ಮ ಮನಸ್ನಲ್ಲಿದೆಯೋ ಅಥ್ವಾ ಎಲ್ಲಿದೆಯೋ ಯಾರಿಗೆ ಗೊತ್ತು?

***

ನೀವು ಹೇಗಿದ್ದಿರಿ ಇಲ್ಲಿಗೆ ಬಂದಾಗ ಎಂದು ಕಂಡು ಹಿಡಿಯುವುದು ಬಹಳ ಸುಲಭ - ಹೊಸದಾಗಿ ಅಮೇರಿಕಕ್ಕೆ ಬಂದವರೊಡನೆ ಒಡನಾಡಿ ನೋಡಿ, ಅವರೇ ಹಿಡಿಯುತ್ತಾರೆ ನಿಮ್ಮ ಹಳೆಯ ಮನಸ್ಸಿಗೆ ಕನ್ನಡಿ!