Sunday, July 09, 2006

ಅನಿವಾಸಿ ಮನಸ್ಸು

ನಮ್ಮೂರಿನ ಬಸ್ಸುಗಳಲ್ಲಿ ಬೇಕಾದಷ್ಟು ಅಣಿಮುತ್ತುಗಳನ್ನು ಅಲ್ಲಲ್ಲಿ ಬರೆದಿರುವುದು ಕಾಣಸಿಗುತ್ತದೆ - ಸರ್ಕಾರಿ ಬಸ್ಸುಗಳಿಂದ ಹಿಡಿದು ಖಾಸಗಿ ಬಸ್ಸುಗಳಲ್ಲೆಲ್ಲ ಕೊಟೇಷನ್ನುಗಳು ಧಾರಾಳವಾಗಿ ಸಿಗುತ್ತವೆ. ಈ ಕೊಟೇಷನ್ನುಗಳ ವ್ಯಾಪ್ತಿ, ವಿಸ್ತಾರ ಕುಟುಂಬ ಯೋಜನೆಯಿಂದ ಹಿಡಿದು ಕುಟುಂಬ ಕಲಹದವರೆಗೆ ಒಂದಲ್ಲ ಒಂದು ರೀತಿಯಲ್ಲಿ ಓದಿಸಿಕೊಳ್ಳುತ್ತದೆ. ಅವುಗಳಲ್ಲಿ ನನ್ನನ್ನು ಸ್ವಲ್ಪ ಮಟ್ಟಿಗೆ ಯೋಚಿಸುವಂತೆ ಮಾಡಿದ್ದು - 'ಮಾತು ಬೆಳ್ಳಿ, ಮೌನ ಬಂಗಾರ'. ಯಾವ ಪುಣ್ಯಾತ್ಮ ಈ ಹೇಳಿಕೆಯನ್ನು ಕೊಟ್ಟನೋ, ಗಾದೆಯನ್ನಾಗಿ ಮಾಡಿದನೋ, ನನಗಂತೂ ಇದರ ಮೇಲೆ ಸ್ವಲ್ಪವೂ ನಂಬಿಕೆ ಇಲ್ಲ. ಎಷ್ಟೋ ಸಾರಿ 'ಮೌನ ಬಂಗಾರ'ದ ಕೆಳಗೆ 'ನಿಮ್ಮ ಬಂಗಾರವನ್ನು ನೀವೇ ಇಟ್ಟುಕೊಳ್ಳಿ' ಎಂದು ಸೇರಿಸಿಬಿಟ್ಟರೆ ಹೇಗೆ ಎನ್ನಿಸಿದೆ. ನನ್ನ ಪ್ರಕಾರ ಮನುಷ್ಯರ ನಡುವೆ ಮಾತುಕಥೆಗಳಾಗುತ್ತಿದ್ದರೇನೇ ಚೆನ್ನ, ಮನಬಿಚ್ಚಿ ಮಾತನಾಡುವ ಸಹೋದ್ಯೋಗಿ ಅಥವಾ ನೆರೆಹೊರೆಯವರು ಅಥವಾ ಯಾವಾಗಲೂ ಬಾಯಿಗೆ ಬೀಗ ಜಡಿದುಕೊಂಡಿರುವ ಪ್ರಾಕ್ಟಿಕಲ್ ಜನರು ಇವರ ನಡುವೆ ನನಗೆ ಮೊದಲನೆಯವರೇ ಇಷ್ಟ. ನನ್ನ ಸ್ನೇಹಿತರಲ್ಲಿ ಕೆಲವರಿಗೆ ಅಮೇರಿಕದ ನೀರು ಕುಡಿಯುತ್ತಿದ್ದ ಹಾಗೆ ಪ್ರಯೋಗಶೀಲತೆ ಒಕ್ಕರಿಸಿಕೊಂಡು ಬಿಟ್ಟಿದೆ. ಒಂದು ರೀತಿ ಎಸ್.ಎಮ್. ಕೃಷ್ಣರ ತರಹ ಮಿತಭಾಷಿಗಳಾಗಿ ಬಿಟ್ಟಿದ್ದಾರೆ - ಎಷ್ಟು ಬೇಕಷ್ಟೇ ಮಾತನಾಡುತ್ತಾರೆ, ಇಲ್ಲವಾದರೆ ಮೌನದ ಸೋಗನ್ನು ಧರಿಸಿಕೊಳ್ಳುತ್ತಾರೆ. ಬರೀ ಏನನ್ನೋ ಯೋಚಿಸುವವರ ಹಾಗೆ ಮುಖ ಮಾಡಿಕೊಂಡು ಮಾತನಾಡದೇ ಇದ್ದು ಬಿಟ್ಟರೆ ಎಲ್ಲದಕ್ಕೂ ಉತ್ತರ ಸಿಕ್ಕಂತಾಯಿತೇ? ಈ ಅಣಿಮುತ್ತುಗಳು, ಸುಭಾಷಿತಗಳು, ಸೂಕ್ತಿಗಳು, ಕೋಲ್ಮಿಂಚುಗಳು - ಸುಮ್ಮನೇ ಹೀಗೆ ಬಂದು ಹಾಗೆ ಹೋಗುತ್ತವೆಯೇ ವಿನಾ ಅವುಗಳಿಂದ ಯಾವ ರಾಜ್ಯ ಉರುಳೋದೂ ಇಲ್ಲ, ಯಾವ ರಾಜ್ಯ ಕಟ್ಟೋದೂ ಇಲ್ಲ. ಈ ಕೊಟೇಷನ್ನುಗಳು ಒಂದು ರೀತಿ ಮಿಂಚಿನ ಹಾಗೆ, ಆದರೆ ಮಿಂಚಿನ ಬೆಳಕಿನಲ್ಲಿ ಯಾವ ಸತ್ಯವೂ ಗೋಚರಿಸೋದಿಲ್ಲ, ಹಾಗೆ ಗೋಚರಿಸಿದರೂ ಅದರ ತೀವ್ರತೆ ಒಂದು ರೀತಿಯ ಅಂಧಕಾರವನ್ನು ತಂದುಬಿಡುತ್ತದೆ, ಅದಕ್ಕೋಸ್ಕರವೇ ಮಿಂಚಿನ ತೀವ್ರತೆಯಲ್ಲಿರುವ ಬೆಳಕನ್ನು ಹತ್ತಿರದಿಂದ ನೋಡಿದರೆ, ನೋಡಿದ ನಂತರ ಎಲ್ಲವೂ ಅಂಧಕಾರವೇ ಆಗಿ ಹೋಗೋದು.

ನಮ್ಮ ಅನಿವಾಸಿ ಮನಸ್ಸು ಒಂದು ರೀತಿ ಸಣ್ಣಕಥೆಗಳಲ್ಲಿ ಬರುವ ಪಾತ್ರಗಳ ಹಾಗೆ. ಕಾದಂಬರಿಯ ಪಾತ್ರಗಳಲ್ಲಿ ಅವುಗಳು ತಮ್ಮ ನಿಲುವು-ನಡತೆಗಳನ್ನು ಪ್ರಶ್ನಿಸಿಕೊಂಡು ಒಂದು ಮನಸ್ಥಿತಿಯ ಹಿಂದಿನ ಹುನ್ನಾರವನ್ನು ಹೊರತೆಗೆಯುವ ಸಾಹಸಕ್ಕೆ ಒಡಮಾಡಿಕೊಂಡರೆ, ಈ ಸಣ್ಣಕಥೆಗಳಲ್ಲಿನ ಪಾತ್ರಗಳು ಒಂದು ರೀತಿ ಶೀಘ್ರಸ್ಖಲನದ ಸುಖಕ್ಕೆ ಜೋತುಬಿದ್ದುಕೊಳ್ಳುತ್ತವೆ. 'ನಾನು ಈ ದಿನ ಉಪವಾಸವಿದ್ದೇನೆ' ಎಂದು ಒಂದು ಅರೆಬೆಂದ ಹೇಳಿಕೆಯನ್ನು ಮಾತ್ರ ಸೃಷ್ಟಿಸಿ ಹೋಮ್‌ವರ್ಕ್ ಮಾಡಿರದ ಹುಡುಗ ಮೇಷ್ಟ್ರನ್ನು ನೋಡಿ ಹಲ್ಲುಗಿಂಜುವಂತೆ ಒಂದು ರೀತಿ ತಮ್ಮ ಎಡಬಿಡಂಗಿತನವನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿ, ಮಿಂಚಿ ಮರೆಯಾಗುತ್ತವೆ - ಇಂಥವುಗಳಿಂದ ಪ್ರಯೋಜನ ಎಲ್ಲಿದೆ ಎಂದು ಯಾರಿಗೆ ಗೊತ್ತು?

ನಮ್ಮ ಅನಿವಾಸಿ ಸಮೂಹ ತಮ್ಮನ್ನು ತಾವು ಪೋಷಿಸಿಕೊಳ್ಳಲು ಮೊರೆ ಹೋಗುವ ಅಥವಾ ಹಗುರವಾಗಿ ಬಳಸುವ 'ಗ್ರೇಟ್', 'ಎಕ್ಸಲೆಂಟ್' ಎನ್ನುವ ಪದಗಳ ಬಳಕೆಯಲ್ಲಿ ನನಗೆ ಬಹಳಷ್ಟು ಅಸಮಧಾನವಿದೆ - ಉದಾಹರಣೆಗೆ ನನ್ನ ಬರಹಗಳಲ್ಲಿ ಕೆಟ್ಟದಾದ ಬರಹವೊಂದನ್ನು ಆಯ್ದು ನನ್ನ ಗುರುತು-ಪರಿಚಯವಿರುವವರಿಗೆ ಕಳಿಸಿದೆನೆನ್ನಿ - ಆ ಮುಖಗಳೆಲ್ಲ ಕೊಡುವ 'ಗ್ರೇಟ್ ಆರ್ಟಿಕಲ್', 'ಎಕ್ಸಲೆಂಟ್' ಅನ್ನೋದು ನನ್ನನ್ನು ಬಲವಾಗಿ ಕಾಡಿಸಿ ಇನ್ನೊಮ್ಮೆ ಬರೆಯದಿರುವ ಹಾಗೆ ಮಾಡಿಬಿಡುವ ಸಂಭವವೇ ಹೆಚ್ಚು. ಭಾರತದಲ್ಲಿ ನನ್ನ ಬರಹಗಳು ನೇರವಾಗಿ ಎಷ್ಟೋ ಸಲ ಸಂಪಾದಕರ ಕಸದ ಬುಟ್ಟಿಗೆ ಹೋಗಿವೆ, ಕೆಲವೊಮ್ಮೆ ವಿಶಾದ ಪತ್ರವೂ ಬಂದಿದೆ, ಆದರೆ ನನ್ನ ಅನಿವಾಸಿ ನೆಲೆಗಟ್ಟಿನಿಂದ ಬರೆದ ಬರಹಗಳೆಲ್ಲವೂ ಲಂಗುಲಗಾಮಿಲ್ಲದೇ ಅಚ್ಚಾಗುವುದನ್ನು ನೋಡಿ ನನಗೆ ಆಶ್ಚರ್ಯಕ್ಕಿಂತ ಹೆಚ್ಚಾಗಿ ಖೇದವಾಗಿದೆ. ಇಲ್ಲಿ ಎರಡು ವಿಚಾರಗಳಿವೆ - ಒಂದು ಬರೆಯುವ ಪ್ರತಿಭೆ ಇದೆ/ಇಲ್ಲ ಎನ್ನುವ ವಿಚಾರ, ಮತ್ತೊಂದು ತುಲನೆ. ಪ್ರತಿಭೆ ಇದ್ದವರು ಸಾಣೆಕಲ್ಲಿಗೆ ತಿಕ್ಕಿದ ಬಂಗಾರ ಮಿನುಗುವ ಹಾಗೆ ಒಳ್ಳೆಯ ಮಾರ್ಗದರ್ಶನದಲ್ಲಿ ಬೆಳೆಯಬಲ್ಲರು, ಅಲ್ಲದೇ ತುಲನೆ ಮಾಡಿ ಹೇಳಿದಾಗ ಒಂದು ಮೌಲ್ಯಮಾಪನದ ನೆಲೆಗಟ್ಟನ್ನೂ ಸೃಷ್ಟಿಸಿದಂತಾಗಿ ಬರೆಯುವವರಿಗೆ ಹಾಗೂ ಓದುವವರಿಗೂ ಇಬ್ಬರಿಗೂ ಅನುಕೂಲವಾಗುತ್ತದೆ. ಅದನ್ನು ಬಿಟ್ಟು ಬರೆದದ್ದೆಲ್ಲ 'ಗುಡ್ ಒನ್' ಆಗಿಬಿಟ್ಟರೆ ಬರೆದವರೂ ಬೆಳೆಯಲಾರರು, ಹಾಗೂ ಆ ರೀತಿಯ ಹೇಳಿಕೆ ಕೊಡುವವರ ತಿಳುವಳಿಕೆಯೂ ಸ್ಪಷ್ಟವಾಗಿ ಗೊತ್ತಾಗಿಹೋಗುತ್ತದೆ. ಅದರ ಬದಲಿಗೆ ಇಂತದ್ದು ಇಷ್ಟವಾಯಿತು, ಏಕೆ/ಹೇಗೆ, ಇದು ಇಷ್ಟವಾಗಲಿಲ್ಲ - ಏಕೆ/ಹೇಗೆ ಎಂದು ತಿಳಿಸಿಹೇಳಿದರೆ ಎಷ್ಟೋ ಅನುಕೂಲವಾಗುತ್ತದೆ. ನನ್ನ ಇನ್‌ಬಾಕ್ಸ್‌ನಲ್ಲಿ ಬಂದ ಕೆಲವು ಇ-ಮೇಲ್‌ಗಳಿಗೆ ನಾನು ನನ್ನ ಶಕ್ತ್ಯಾನುಸಾರ ಉತ್ತರಕೊಡುತ್ತೇನೆ, ಹೆಚ್ಚಿನ ಪಾಲು ನನ್ನ ಉತ್ತರ ಅದನ್ನು ನಿರೀಕ್ಷಿಸಿದವರಿಗೆ ನಿರಾಶೆಯನ್ನುಂಟು ಮಾಡುತ್ತದೆಯೆಂದೇ ಹೇಳಬೇಕು.

ಕಷ್ಟ ಅನ್ನೋದು ಅವರವರಿಗೆ ಇದ್ದೇ ಇರುತ್ತೆ, ಆದರೆ ಕಷ್ಟಗಳು ಅನಿವಾಸಿಗಳಿಗೇ ಇರೋದು ಅನ್ನೋ ಮಾತನ್ನು ನಾನು ಸುತಾರಾಂ ಒಪ್ಪೋದಿಲ್ಲ. ನಮ್ಮೂರುಗಳಲ್ಲಿ ದಿನವಿಡೀ ಕೆಲಸ ಮಾಡಿಯೂ ಅಲ್ಲಿಂದಲ್ಲಿಗೆ ಆಗಿ ಹೋಗುವಂಥವರನ್ನೂ, ತಮ್ಮ ಮಕ್ಕಳಿಗೆ ಯಾವುದೋ ಆಪರೇಷನ್ ಮಾಡಿಸಲು ಹಣವಿರದೇ ಆ ಮಕ್ಕಳನ್ನು ಅವರ ಕಣ್ಣೆದೆರೇ ಕಳೆದುಕೊಳ್ಳಬೇಕಾದ, ಇನ್ನಿತರ ಜೀವನ್ಮರಣದ ಅಸಹಾಯಕತೆಗಳ ಮುಂದೆ ಅನಿವಾಸಿಗಳ ಕಷ್ಟ ಏನೇನೂ ಅಲ್ಲ. ಬೇಕಾದಷ್ಟು ಅಸಹಾಯಕತೆಗಳನ್ನು ಅಲ್ಲಿ-ಇಲ್ಲಿ ನೋಡಿದ ಮೇಲೆ ಅವುಗಳನ್ನು ಕುರಿತು ಓದಿದ ಮೇಲೆ ಇಲ್ಲಿಯವರಿಗೆ ಕಷ್ಟವೆಂದರೇನು ಎಂದೇ ತಿಳಿಯದು ಎಂದು ಹೇಳಿದರೆ ತಪ್ಪೇನೂ ಆಗದು. ಉದಾಹರಣೆಗೆ ನ್ಯೂ ಆರ್ಲೀನ್ಸ್‌ಗೆ ನೀರು ನುಗ್ಗಿದಾಗ ಟಿವಿಯಲ್ಲಿ ತೋರಿಸಿದ ರೋಧನ ನಮ್ಮ ದೇಶದ ದಿನನಿತ್ಯ ಬದುಕಿನ ಒಂದು ಭಾಗದಂತೆ ಕಂಡುಬಂತು. ಬರಿ ಇದು ಶ್ರೀಮಂತ ದೇಶವೆಂದು ಈ ಮಾತನ್ನು ಹೇಳುತ್ತಿಲ್ಲ, ಇಲ್ಲಿಯವರ ಶ್ರೀಮಂತ ಮನಸ್ಥಿತಿಯನ್ನು ಅಲ್ಲಿಯ ಬಡವರ ಮನಸ್ಥಿತಿಗೆ ಹೋಲಿಸಿದರೆ ಇಲ್ಲಿನವರದ್ದು ಸಾವಿರ ಪಾಲು ಉತ್ತಮ ಎನ್ನಿಸಿದ್ದರಿಂದ ಹೀಗೆ ಹೇಳಬೇಕಾಯಿತು. ಆದರೆ ನಮ್ಮ ಸಂಸ್ಕೃತಿಯ ರಾಯಭಾರಿಗಳಾಗಿ ಪ್ರತಿಕ್ಷಣವೂ ಅಲ್ಲಿ-ಇಲ್ಲಿ ತುಲನೆಯ ಅಭಿಶಾಪಕ್ಕೆ ಸಿಕ್ಕಬೇಕಾದ ಪ್ರತಿಯೊಂದು ಅನಿವಾಸಿ ಮನಸ್ಥಿತಿಯನ್ನು ಕುರಿತು, ತಮ್ಮ ಮಕ್ಕಳು-ಮರಿಗಳು ತಮಗಿಂತ ಭಿನ್ನರಾಗಿ ಬೆಳೆಯುತ್ತಿದ್ದಾರಲ್ಲ ಎನ್ನುವ ಗೊಂದಲ, ಕುತೂಹಲಗಳನ್ನು ಕುರಿತು ಹೇಳಬೇಕಾದಲ್ಲಿ ಅನಿವಾಸಿ ಮನಸ್ಸು ವಿಶೇಷ ಸ್ಥಾನವನ್ನು ಪಡೆದು ಎಂಥವರಿಂದಲೂ ಸ್ವಲ್ಪ ಕರುಣೆಯನ್ನು ಬೇಡುತ್ತದೆ. ಈ 'ಅಯ್ಯೋ' ಮನೋಭಾವನೆಯೇ ನಮಗೆ ನಮ್ಮ ದೇಶದಲ್ಲಿ ವಿಶೇಷ ಸ್ಥಾನವನ್ನು ತಂದುಕೊಡೋದು, 'ಪಾಪ, ಎಷ್ಟೋ ದಿನದ ಮೇಲೆ ಬಂದಿದ್ದಾರೆ, ಅಲ್ಲಿ ಹೇಗೋ-ಏನೋ' ಎನ್ನುವ ಸವಲತ್ತು ಸ್ಥಳೀಯರಿಗೆ ಸಿಕ್ಕಿದ್ದನ್ನು ನಾನು ನೋಡಿಲ್ಲ.

ಅನಿವಾಸಿಗಳ ಮನಸ್ಸಿನಲ್ಲಿ ಕಳೆದುಕೊಂಡಿದ್ದರ ಪಟ್ಟಿ ಉದ್ದುದ್ದಕ್ಕೆ ಬೆಳೆದು ಎಲ್ಲೋ ಒಮ್ಮೆ ನಿಂತುಹೋಗುತ್ತದೆ - ಮುಂದೆ ಅದು ದಶಕಗಳ ಕೊಡುಗೆಯಾಗಿ ಕ್ರಮೇಣ ಸಹಜವಾಗುತ್ತದೆ. ಅಲ್ಲಿ-ಇಲ್ಲಿಯ ಮನಸ್ಥಿತಿಯಲ್ಲಿ ಸದಾ ತೊಳಲಾಡುವ ಭ್ರಮೆ ಇದ್ದೇ ಇರುತ್ತೆ, ಇಲ್ಲಿದ್ದಾಗ ಅಲ್ಲಿ, ಅಲ್ಲಿದ್ದಾಗ ಇಲ್ಲಿ ಎಲ್ಲವೂ ವಿಶೇಷವಾಗಿ ಕಾಣತೊಡಗುತ್ತೆ. ಈ ಕಳೆದುಕೊಂಡಿದ್ದರ ಪಟ್ಟಿ, ಗಳಿಸಿಕೊಂಡಿದ್ದರ ಪಟ್ಟಿಗಿಂತ ಮೊದಮೊದಲು ದೊಡ್ಡದಾಗಿ ಕಂಡುಬಂದರೂ ಕೊನೆಗೆ ಗಳಿಸಿಕೊಂಡಿದ್ದು ಹುಟ್ಟಿಸುವ ಬಲವಾದ ಆಕರ್ಷಣೆ ಕಳೆದುಕೊಂಡಿದ್ದನ್ನು ಲಘುವಾಗಿ ಪರಿಗಣಿಸುವಂತೆ ಮಾಡುವುದರ ಮೂಲಕ, ಸ್ವಲ್ಪ ಸಮಯದ ಸಹಾಯದಿಂದಲೂ, ಹೆಚ್ಚಿನವರಲ್ಲಿ ಇಲ್ಲೆ ವಾಸವಾಗುವ ಹವಣಿಕೆ ಹುಟ್ಟುತ್ತದೆ.

Saturday, July 08, 2006

ಕಿರುಗಥೆ: ತುಂಬದ-ತುಂಬಿದ ನಡುವಿನ ಆಯಾಮ

ಕಥೆ ಬರೀದೇ ತುಂಬಾ ದಿನ ಆಯ್ತು, ಒಂದು ಕಿರುಗಥೆ ಬರೀಬೇಕು ಅನ್ನಿಸ್ತಾ ಇದ್ದಿದ್ರಿಂದ ಅದೂ ಬ್ಲಾಗ್‌ನಲ್ಲಿ ನೇರವಾಗಿ ಬರಹ ಪ್ಯಾಡ್‌ನಲ್ಲಿ ಬರೆದ್ರೆ ಹೇಗಿರತ್ತೆ ಅಂತ ಬರೀತಾ ಹೋಗಿದ್ದಕ್ಕೆ ಹೀಗೆ ಬರೆಯೋ ಹಾಗಾಯ್ತು, ಇದನ್ನ ತಿದ್ದಿಲ್ಲ, ತೀಡಿಲ್ಲ, ಸುಮ್ನೇ ಹೊಳೆದ ಹಾಗೆ ಬರೆದುಕೊಂಡು ಹೋಗಿದ್ದೇನೆ - ಇಲ್ಲಿ ಪಾತ್ರಗಳೇನಾದ್ರೂ ಬಂದಿವೆ ಅಂತ ನಿಮಗನ್ನಿಸಿದ್ರೆ, ಅವೆಲ್ಲ ಸುಮ್ನೇ ಕಾಲ್ಪನಿಕ ಅಂದುಕೊಳ್ಳಿ!

***

'ಒಬ್ಬ ಕಲಾವಿದನಾಗೋದು ಅಂದ್ರೆ ಹುಡುಗಾಟಾನ?' ಎಂದು ಮೆಷ್ಟ್ರು ಹೇಳಿದ್ದ ಮಾತುಗಳು ತೆರೆಗಳು ಬಂದು ಅಪ್ಪಳಿಸೋ ಹಾಗೆ ಹೊಡೀತಲೇ ಇತ್ತು, ಇದು ಇನ್ನು ಕೊರೆಯೋ ಭೂತವಾಗಿ ಬೆಳೆಯೋದಕ್ಕಿಂತ ಮೊದಲು ಮನೆ ಬಿಟ್ಟು ಎಲ್ಲಾದರೂ ಹೋಗಬೇಕು, ಏನಾದರೂ ಸಾಧನೆ ಅನ್ನೋದನ್ನು ಮಾಡದೇ ಹೋದ್ರೆ ಬದುಕಿದ್ದಾದ್ರೂ ಏನ್ ಪ್ರಯೋಜನ ಎಂದು ಅನ್ನಿಸತೊಡಗಿದ ಕೂಡ್ಲೇ ಹಿಂದೂ-ಮುಂದೂ ನೋಡ್ದೇ ಮನೆ ಬಿಟ್ಟು ಬಂದೆ ಬಿಟ್ಟೆ -- ಆದ್ರೆ ಈ ಪ್ರಪಂಚ ಇಷ್ಟೊಂದ್ ಕೆಟ್ಟದು ಅಂಥ ಅನ್ನಿಸಿರಲಿಲ್ಲ.

ರಂಗಾಯಣದ ಕಟ್ಟೆ ಹತ್ತ ಬೇಕು, ಮುಸುಡಿಗೆ ಬಣ್ಣ ಬಳಕೊಂಡು ನನ್ನ ಪಾತ್ರಗಳ ಜೀವಾಳನ ನನ್ನ ಜೀವಾಳವನ್ನಾಗಿ ತೆಗೆದಿಡಬೇಕು ಎಂದು ಪೇಚಾಡಿಕೊಂಡಾಗೆಲ್ಲ, ಈ ಹಸಿವು ದುತ್ತನೆ ಕಾಡಲಿಕ್ಕೆ ಶುರುಮಾಡಿಕೊಂಡಿದೆ. ಮೇಷ್ಟ್ರು ಹೇಳಿದ್ರು 'ಹೊಟ್ಟೆ ತುಂಬಿದ್ ಮೇಲೆ ಕಲಾವಿದನಾಗೋದಕ್ಕೆ ಹೇಗೆ ಸಾಧ್ಯ?', ಹಂಗಾದ್ರೆ ಹಸಗೊಂಡ್ ಇರೋದೇ ಬದುಕೇ? ದುಡ್ಡು ಮುಖ್ಯ, ಅದಕ್ಕಿಂತಲೂ ಹೆಚ್ಚಿಗೆ ಬದುಕೋದ್ ಮುಖ್ಯ ಅದರ ನಂತರವೇ ಏನಿದ್ರೂ - ನಾಟಕ ಆಡೋದು, ಅನುಭವಿಸೋದು ಎಲ್ಲ ನನ್ನಂತೋರಿಗಲ್ಲ, ಒಂದು ಪಾತ್ರಾನ ಅನುಭವಿಸಿ ಆಡಬೇಕು, ನನ್ನೆಲ್ಲ ನೋವನ್ನೂ ಹತ್ತಿಕ್ಕಬೇಕು, ನೋಡುಗರಿಗೆ ಅದರಿಂದ ತುಂಬ ಖುಷಿ ಆಗಬೇಕು, ನಾನು ನಾಳೆ ದೊಡ್ಡ ಮನುಷ್ಯನಾಗಬೇಕು: ಈ ಹಗಲು ಕನ್ಸುಗಳೇ ಇಷ್ಟು ಒಂದು ರೀತಿಯಲ್ಲಿ ದಿನವಿಡೀ ಮನೆಯಲ್ಲಿ ಕಟ್ಟಿಹಾಕಿ ಸಂಜೆ ಹೊರಬಿಟ್ಟ ನಾಯಿಯ ಹಾಗೆ ಒಂದು ರೀತಿಯ ಸ್ವಾತಂತ್ರ್ಯವನ್ನು ಅನುಭವಿಸೋದು. ಮನುಷ್ಯನನ್ನು ಯಾವುದರಿಂದ ಅಳೀತಾರೆ ಈ ಜನ, ಅವರವರ ಹತ್ರ ಇರೋ ಪ್ರತಿಭೆ ಇಂದಾನೋ, ದುಡ್ಡಿಂದಾನೋ ಅಥವಾ ಇವೆರಡೂ ಇರೋದ್ರಿಂದ ಬರೋ ತಾಕತ್ತಿನ ಮೇಲೋ? ನಾನು ಕಲಾವಿದನಾಗಬೇಕು ಅಂತ ಹಣೇಲ್ ಬರೆದಿದ್ರೆ ಆಗೇ ಆಗುತ್ತೆ, ಅದನ್ನ ನಿಲ್ಸಕ್ಕಾಗುತ್ತಾ, ಆದ್ರೆ ನಾನು ಕಲಾವಿದ ಆಗೋ ಹೊತ್ತಿಗೆ ಊರಲ್ಲೆಲ್ಲ ಸಂಜೆ ದೀಪಗಳು ಅದಾಗ್ಲೇ ಹತ್ತಿಕೊಂಡ್ ಉರೀಯೋ ಹೊತ್ತಾಗಿರುತ್ತೆ, ಅದರಿಂದ ಏನ್ ಪ್ರಯೋಜನಾ? ಒಂದು ರೀತಿ ನಾಯೀ ಬಾಳ್ವೆನಪ್ಪಾ ಇದು.

ಕೆರೆನೀರಿಗೆ ಕಲ್ಲು ಹೊಡೆದ್ರೆ ಅಲೆಗಳು ಏಳುದೇನೋ ನಿಜ, ಆದ್ರೆ ಉಗುಳು ನುಂಗಿದ್ರೆ ಹೊಟ್ಟೆ ತುಂಬಲ್ಲಾ ಅನ್ನೋ ಹಾಗೆ ನಾನು ಈ ಕೆರೆಗೆ ಕಲ್ಲನ್ನು ಹಾಕ್ತಾ ಇರೋ ಕೆಲ್ಸದಿಂದ ಏನ್ ಪ್ರಯೋಜನ ಇದೆ, ಅದರಿಂದೇನಾದ್ರೂ ನೀರು ಕೋಡಿ ಬೀಳುತ್ತೇನು? ಹನಿಹನಿಗೂಡಿದ್ರೆ ಹಳ್ಳವೇನೋ ನಿಜ, ಆದ್ರೆ ಹನಿಗಳು ಒಂದುಗೂಡಿ ದೊಡ್ಡ ಹನಿ ಆಗಿ, ಆ ದೊಡ್ಡ ಹನಿ ಇನ್ನೂ ದೊಡ್ಡ ಹನಿ ಆಗಿ ಹರಿಯೋ ಹೊತ್ತಿಗೆ ಎಂಥೋರ ಸಹನೆಯ ಕಟ್ಟೇನೂ ಒಡೆದ್ ಹೋಗುತ್ತೆ.

ಒಬ್ಬೊಬ್ಬರ ಮನಸ್ಸಿನ ಚಿತ್ರ ಅವರವರ ಕಾಲಿನ ಹೆಜ್ಜೆ ಗುರುತು ಇದ್ದ ಹಾಗೆ ವಿಶೇಷ ಹಾಗೂ ಭಿನ್ನವಾಗಿರುತ್ತೆ, ನಾನು ನೋಡುನೋಡುತ್ತಿದ್ದಂತೇ ನನ್ನ ಕಣ್ಣ ಮುಂದೆ ಎಷ್ಟೋ ಜನ ಕಲಾವಿದರು ಹೀಗೆ ಬಂದರು ಹಾಗೆ ಹೋದರು. ಅವರನ್ನೆಲ್ಲ ನಿಮ್ಮ ಯಶಸ್ಸಿನ ರಹಸ್ಯ ಏನು ಅಂತ ಕೇಳಿದ್ರೆ 'ನಾವೂ ಬಹಳ ಕಷ್ಟ ಪಟ್ಟಿದ್ದೀವಿ' ಅಂತ ಸುಳ್ಳು ಹೇಳ್ತಿದ್ದಾರೇನೋ ಅನ್ನಿಸ್ತಿದೆ. ಯಾವ್ದೋ ಒಂದು ಗುರಿ ಹಿಡಿದು ಮುಂದೆ ನುಗ್ಗಬೇಕಾದ್ರೆ ಅದಕ್ಕೆ ಪಡಬೇಕಾದ ಪರಿಶ್ರಮವನ್ನು ಕಷ್ಟ ಅಂತ ಹೇಗೆ ಹೇಳೋಕ್ ಸಾಧ್ಯ? ಅದು ಕಷ್ಟ ಅಂತ ಗೊತ್ತಿರಲಿಲ್ಲವೋ ಅಥವಾ ಗೊತ್ತಿದ್ದೂ ಗೊತ್ತಿದ್ದೂ ಈ ಕೆಲ್ಸಕ್ಕೆ ಬಂದರೋ, ಹಾಗೆ ಬಂದವರು ತಮ್ಮ ಉನ್ನತಿಗೆ ಇಂಥೋರ ಸಹಾಯ ಇದೆ ಅಂತ ನೇರವಾಗಿ ಏಕೆ ಹೇಳೋದಿಲ್ಲ - ನಾನು ನೋಡಿದ ಹಾಗೆ ಎಲ್ಲಾ ದೊಡ್ಡ ಮನುಷ್ಯರ ಹಿಂದೇನೋ ಒಬ್ಬೊಬ್ಬ ಗಾಡ್‌ಫಾದರ್ ಇರ್ತಾರಪ್ಪ, ಯಾವಂದೋ ಮರ್ಜಿಯಲ್ಲಿ ಮಾಡಿದ್ದನ್ನೇ ಆಟ ಅಂತ ಮಾಡಿಕೊಂಡು ಮುಂದೆ ಬರೋ ಜನ ಈ ಗಾಡ್‌ಫಾದರ್‌ಗಳಿಗೆ ಸರಿಯಾದ ಕ್ರೆಡಿಟ್ಟೂ ಕೊಡೋದಿಲ್ವಲ್ಲ. ಹಾಗಂತ ಪ್ರತಿಭಾವಂತರೇ ಇಲ್ಲಾ ಅಂತ ನನ್ನ ಯೋಚ್ನೇ ಅಲ್ಲ, ಪ್ರತಿಭೆಗೂ ಮುಂದ್ ಬರೋದಕ್ಕೂ ಒಂದಕ್ಕೊಂದ್ ಸಂಬಂಧ ಅಷ್ಟೇನೋ ಗಾಢವಾಗಿರೋದಿಲ್ಲ, ಯಾವನಿಗೆ ಎಷ್ಟೋ ಪ್ರತಿಭೆ ಇದ್ರೂ ಇನ್ನೊಬ್ರ ಬೂಟ್ ನೆಕ್ಕೋದಕ್ಕೇನೂ ಕಡಿಮೆ ಇರೋದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ದುಡ್ಡೇ ತಾನೇ ಬರೋದು, ಹಾಗಿದ್ದ ಮೇಲೆ ನನ್ನನ್ನ ನಂಬಿಕೊಂಡು ಲಕ್ಷಾಂತರ ರೂಪಾಯಿಯನ್ನ್ ಯಾವನ್ ಸುರೀತಾನೆ? ಯಾಕ್ ಸುರೀಬೇಕು?

ಇಲ್ಲಪ್ಪಾ ನನ್ ಕೈಯಲ್ಲಿ ಆಗಲ್ಲ, ಇವತ್ತಲ್ಲ ನಾಳೆ ನಾನು ಇದನ್ನೆಲ್ಲ ಬಿಟ್ಟು ಹೋಗೇ ತೀರ್ತೀನಿ, ಮುಸುಡಿಗೆ ಬಣ್ಣ ಹಚ್ಚಿಕೊಳ್ಳೋದ್ ಯಾರು, ಇವರೆಲ್ಲರ ಕೈಯಲ್ಲಿ ಬೈಸಿಕೊಳ್ಳೋನ್ ಯಾರು? ನಾನು ಈ ನನ್ ಮಕ್ಳ ಕೈಯಲ್ಲಿ ಪಳಗಿ ಮುಂದೆ ಬಂದು ದೊಡ್ಡ ಹೀರೋ ಅಗೋದು ಆಷ್ಟರಲ್ಲೆ ಇದೆ, ನನ್ನ ಕನಸುಗಳಿಗೆ ನನ್ನ ಮೇಲೆ ನಂಬಿಕೆ ಇಲ್ಲ, ಇನ್ನು ಯಾರಾದರೂ ನನ್ನನ್ನ ಏಕೆ ನಂಬಿಯಾರು? ಅದೂ ಅಲ್ದೇ ಈ ರಂಗಭೂಮಿಯಲ್ಲಿ ನನ್ನದಾದ್ರೂ ಎಷ್ಟು ದೊಡ್ಡ ಪ್ರಪಂಚವಿದೆ, ನಾನು ಯಾವ ಶಿಫಾರಸ್ಸಿನ ಕುಳವಂತೂ ಅಲ್ಲ, ಮೇಲಾಗಿ ಹೇಳಿಕೊಳ್ಳೋ ಪ್ರತಿಭೇನೂ ಇಲ್ಲ, ಹಂಗಿದ್ದ ಮೇಲೆ ನಾನು ಊರು ಬಿಡೋ ಮೊದಲು ಇವನ್ನೆಲ್ಲ ಯಾಕೆ ಯೋಚಿಸ್‌ಲಿಲ್ವೋ. ಈಗ ಊರಿಗೆ ಹೋಗ್ಲೋ, ಎಲ್ಲಿಗೆ ಹೋಗ್ಲಿ? ನಾಳೆಯಿಂದ ಊಟಕ್ಕೇನು ಮಾಡೋದು, ಯಾವ ಹೋಟ್ಲಿನಲ್ಲಿ ಹೋಗಿ ಯಾವ ಮುಖ ಇಟ್‌ಕೊಂಡು ಏನಂತ ಕೆಲ್ಸ ಕೇಳ್ಲಿ. ಇದನ್ನೆಲ್ಲ ಬಿಟ್ಟು ಹೋಗೋಕೇ ಆಗೋದಿಲ್ವೇನೋ ಅನ್ನೋ ಸ್ಥಿತಿಗೆ ಬಂದ್ ಬಿಟ್ನೇ? ನನ್ನನ್ನ ನಾನೇ ಆಳಿಕೊಳ್ಳಲಾಗದ ಸ್ಥಿತಿಯನ್ನೂ ತಲುಪಿಬಿಟ್ನೇ - ಅಯ್ಯೋ, ಏಕ್ ಹೀಗಾಯ್ತು, ಎಂತಾ ಕಷ್ಟಾ ತಂದ್ ಬಿಟ್ಟೆಯಪ್ಪಾ ದೇವ್ರೇ... ಅದಿರ್ಲಿ ನಾನು ಊರ್ ಬಿಡೋ ಮೊದ್ಲು ಎಷ್ಟೋ ಜನ ನನ್ನನ್ನ ಅಲ್ಲಿಗ್ ಹೋಗು, ಇಲ್ಲಿಗ್ ಹೋಗು ಅಂದಿದ್ರಲ್ಲ, ಅವರೆಲ್ಲಾ ಈಗ ಎನಂತಾರೆ? ದಿನಾ ಹೋದಂಗೆ ಎಲುಬಿನ ಗೂಡಾಗೋ ಅವ್ವನಿಗೆ ನನ್ನ ಮುಖ ಹೆಂಗ್ ತೋರುಸ್ಲಿ? ನಾನೇನಾದ್ರೂ ಜೀವ ಕಳಕಂಡ್ರು ಅದಕ್ಕೊಂದು ಅರ್ಥ ಅನ್ನೋದೂ ಇಲ್ಲಾ ಅನ್ನೋ ಸ್ಥಿತಿಗೆ ಬಂದೆನಲ್ಲ, ಈ ಸಾವು-ಬದುಕಿನ ಸ್ಥಿತಿ ಅಂದ್ರೆ ಹೀಗೆ ಇರಬೇಕು, ಥೂ ಯಾವನಿಗ್ ಬೇಕಪ್ಪಾ ಈ ಸ್ಥಿತಿ?

ಇರ್ಲಿ, ನಾನು ಎಲ್ಲಿಗೂ ಹೋಗೋದಿಲ್ಲ, ನಾಳೆ ಮತ್ತೆ ಆ ಸತ್ತವರ ನೆರಳನ್ನ ಆಡೋದಕ್ಕೆ ನಾನು ಇರದೇ ಹೋದ್ರೆ ಆ ಬಡಪಾಯಿ ಮೇಷ್ಟ್ರು ಗತಿ ಏನು, ಒಳ್ಳೇ ಕೊನೇ ಕಾಲಕ್ಕೆ ಕೈ ಕೊಟ್ಟ ಅನ್ನೋ ಕೆಟ್ಟ ಮಾತು ನನಗೆ ತಗುಲಿಕೊಳ್ಳೋದ್ ಬೇಡ...ಸೀದಾ ವಾಪಾಸ್ ಹೋಗ್ತೀನಿ, ಏನೋ ಬೇಯಿಸಿಕೊಂಡು ತಿಂದ ಹಾಗೆ ಇದ್ರೆ ಸಾಕು, ಇನ್ನೇನಂತೆ...ಎಲ್ಲಾ ಸರಿ, ಈ ನಾಟಕಗಳನ್ನೆಲ್ಲ ಏತಕ್ ಆಡಬೇಕು? ಬದುಕಲ್ಲಿ ಬರೋ ನಾಟಕಗಳು ಸಾಲ್ದು ಆಂತ್ಲೇ? ಅಥವಾ ನಮಗೆ ಅಲ್ಲಲ್ಲಿ ಸಿಗೋ ನೀತಿಪಾಠಗಳು ಕಡಿಮೆ ಆದ್ವು ಅಂತ್ಲೇ? ಈ ನಾಟಕದಿಂದ ಯಾವನ್ಯಾವನು ಏನೇನ್ ಕಲಿತೋರೇ, ಈ ನಾಟಕದಿಂದ ಯಾವ ಕಷ್ಟ ಮರೆಯಾಗಿ ಹೋಗಿದೆ, ಹೊಟ್ಟೆ ತುಂಬದ ಒಂದಿಷ್ಟು ಜನ ಆಡೋ ದೊಂಬರಾಟವನ್ನು ಹೊಟ್ಟೆ ತುಂಬಿದ ಒಂದಿಷ್ಟು ಜನ ನೋಡಿ ಬಾಯಿ ಚಪ್ಪರಿಸಿದರೆ ತುಂಬದ ಹಾಗೂ ತುಂಬದ ಜನರ ನಡುವಿನ ಅಂತರವನ್ನು ತುಂಬುವವರು ಯಾರು? ನಮ್ಮ ಹೊಟ್ಟೆ ಬೆನ್ನಿಗೆ ಹತ್ತಿದ್ದರೆ ಅದನ್ನು ಬೇರ್ಪಡಿಸೋರು ಯಾರು? ಹೊಟ್ಟೆ ತುಂಬಿದ್ ಜನ ನಾಟಕ ಏಕ್ ಆಡೋದಿಲ್ಲ? ಅದನ್ನೆಲ್ಲ ನಾವು ನೋಡಿ ನಗುವಂತಿದ್ರೆ - ಹೊಟ್ಟೆ ತುಂಬಿದವರು ಬರೀ ನಗೋ ನಾಟಕಾನೇ ಆಡ್ತಾರೇ ಅನ್ನೋ ಗ್ಯಾರಂಟೀನಾದ್ರೂ ಏನು?

ನೋಡೇ ಬಿಡ್ತೀನಿ, ಈ ಸಾರಿ ನನ್ನ ಪಾತ್ರಾನಾ ಜೀವಂತವಾಗಿ ತರ್ತೀನಿ, ಸತ್ತೋರ್ ನೆರಳನ್ನ ನೋಡಿ ಜನ ಒಂದಿಷ್ಟು ನೆಮ್ಮದಿಯಿಂದ್ಲಾದ್ರೂ ಇರಲಿ - ನಮ್ ನಮ್ ಕೆಲ್ಸ ನಾವ್ ಮಾಡೋದೇ ಚೆಂದ - ಉಳಿದ ದೊಡ್ಡ ವಿಷ್ಯಾನೆಲ್ಲ ಚಿಂತಿಸಿ ಏನ್ ಫಲ, ಅದೂ ನನ್ನೋಂಥೋರಿಂದ ಯಾವ ಚಿಂತನೆ ಹುಟ್ಟಬಲ್ಲದು, ಅದೂ ಹೊಟ್ಟೆ ತುಂಬದವನ ಅರಣ್ಯರೋಧನದಿಂದ ಹುಟ್ಟೋದಲ್ವೇ ಅಲ್ಲ. ಈ ಚಿಂತೆ-ಚಿಂತನೆ ಎರಡೂ ಕೆರದ ಗಾಯದ ಹಾಗೆ ಮಾಸೋದಿಲ್ಲ, ಇನ್ನೂ ಬಲೀತಾ ಹೋಗುತ್ತೆ, ಬಲಿತ ಗಾಯ ಅಗಲವಾಗುತ್ತೆ, ಒಂದು ರೀತಿ ಕೆರೆಯಲ್ಲಿ ಏಳೋ ಅಲೆಗಳ ಥರಾ...ಏಳಲಿ, ಇನ್ನೂ ಅಲೆಗಳು ಏಳಲಿ, ಅದರಿಂದ ಇನ್ನೇನು ಆಗದೇ ಹೋದ್ರೂ ಒಂದಿಷ್ಟು ಕಂಪನಗಳಾದ್ರೂ ಹುಟ್ಟತ್ತಲ್ಲಾ ಅಷ್ಟೇ ಸಾಕು!

Friday, July 07, 2006

ನಮ್ಮ ದೇವರು

ನಮ್ಮಲ್ಲಿ ಎಷ್ಟೊಂದು ವೈವಿಧ್ಯತೆ ಇದೆ ಎಂದರೆ ದೇವರು-ದಿಂಡರಿನ ವಿಚಾರದಲ್ಲೂ ಸುಲಭವಾಗಿ ಹೀಗೇ ಎಂದು ಹೇಳದಿರುವಷ್ಟರ ಮಟ್ಟಿಗೆ ನನಗೆ ಹಲವಾರು ಬಾರಿ ಕಸಿವಿಸಿಯಾಗಿದೆ. ನಮ್ಮ ದೇವಾನುದೇವತೆಗಳನ್ನು, ನಮ್ಮ ಧರ್ಮ-ಜಾತಿ ವ್ಯವಸ್ಥೆಯನ್ನು (ಗೊತ್ತಿರದ) ಯಾರಿಗಾದರೂ ಒಂದೈದು ನಿಮಿಷದಲ್ಲಿ ವಿವರಿಸುತ್ತೇನೆಂದುಕೊಂಡರೆ ಎಲ್ಲಿಂದ ಆರಂಭಿಸಬೇಕು, ಎಲ್ಲಿ ನಿಲ್ಲಿಸಬೇಕು ಎಂದು ಗೊಂದಲವಾಗಿದೆ.

ನಾನು ಕಂಡುಕೊಂಡ ಹಾಗೆ ನಮ್ಮ ದೇವರುಗಳ ಪ್ರತೀಕ ಒಂದು ರೀತಿಯಲ್ಲಿ ಸೂಪರ್ ಹ್ಯೂಮನ್ ಎಂದೇ ಹೇಳಬೇಕು, ಚಿತ್ರಗಳಲ್ಲಿ ಅಭಿವ್ಯಕ್ತವಾದ ಹಾಗೆ ಕೆಲವೊಂದಕ್ಕೆ ಹಲವಾರು ಕೈಗಳು, ತಲೆಗಳು, ರೂಪಗಳು. ಕೆಲವೊಮ್ಮೆ ನಿಸರ್ಗವನ್ನು ಆಧರಿಸಿ ಬೆಂಕಿ, ನೀರು, ಗಾಳಿ, ಭೂಮಿ, ಇತ್ಯಾದಿಯಾಗಿ ವರ್ಣಿಸಬಹುದು, ಇನ್ನು ಕೆಲವೊಮ್ಮೆ ಪೌರಾಣಿಕ, ಐತಿಹಾಸಿಕವಾಗಿಯೂ ವಿವರಿಸಬಹುದು. ಪುರಾಣಗಳನ್ನು ಚೆನ್ನಾಗಿ ತಿಳಿದುಕೊಂಡವರಿಗೆ ಹೆಚ್ಚಿನವು 'ಕಥೆ'ಗಳಾಗಿ ಕಂಡುಬಂದರೆ ಇನ್ನು ಕೆಲವು ತಮ್ಮ ತಮ್ಮಲ್ಲೇ ಎಂತೆಂಥ ತಿರುವುಗಳನ್ನು ಮೂಡಿಸುತ್ತವೆಯೆಂದರೆ ಅದನ್ನು ಬೇರೆ ಧರ್ಮ ಅಥವಾ ಮನೋಭಾವನೆಯವರಿಗೆ ವಿವರಿಸುವಾಗ ನಮಗೆ ಗೊಂದಲವಾಗುವುದಂತೂ ನಿಜ - ಉದಾಹರಣೆಗೆ ಮೊನ್ನೆ-ಮೊನ್ನೆ ಅಯ್ಯಪ್ಪಸ್ವಾಮಿ ಹೆಸರಿನಲ್ಲಿ ಅವರಿವರು ದೇವಸ್ಥಾನಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ನಮ್ಮ ಧರ್ಮೀಯರಲ್ಲದವರಿಗೆ ಅಯ್ಯಪ್ಪಸ್ವಾಮಿ ಅಥವಾ ಹರಿಹರ ಪುತ್ರನ ಹುಟ್ಟಿನ ಬಗ್ಗೆ ವಿವರಿಸಲು ಪ್ರಯತ್ನಿಸಿ ನೋಡಿ ಅದರ ಕಷ್ಟದ ಅರಿವಾಗುತ್ತದೆ. ನಮ್ಮ ನಂಬಿಕೆಗಳನ್ನು ನಾವು ಬೇರೊಂದು ನೆಲೆಗಟ್ಟಿನಲ್ಲಿ ನಿಂತು ನೋಡಿದಾಗ ಕೆಲವೊಮ್ಮೆ ಸಾವಿರಾರು ವರ್ಷಗಳಿಂದ ಕೋಟ್ಯಾಂತರ ಜನ ನಂಬಿಕೊಂಡು ಬಂದ ಆಚರಣೆ/ವ್ಯವಸ್ಥೆ ಕೇವಲ 'ಟ್ರೈಬಲ್' ಅನ್ನಿಸಿಬಿಡುತ್ತದೆ. ಅಯ್ಯಪ್ಪಸ್ವಾಮಿಯ ಕಥೆ ಕೇವಲ ದಕ್ಷಿಣಭಾರತದಲ್ಲಿ ಮಾತ್ರ ಪ್ರಚಲಿತವೇಕಿದೆ ಎಂದು ನನಗೆ ಅನುಮಾನ ಬಂದಿದ್ದು ಕೇವಲ ಇತ್ತೀಚೆಗಷ್ಟೇ, ಆದರೆ ನಾನು ಅದೆಷ್ಟೋ ಸಾರಿ ಮೋಹಿನಿ ಭಸ್ಮಾಸುರ ಆಟ (ಯಕ್ಷಗಾನ)ವನ್ನು ನೋಡಿದ್ದರೂ ಅದು ಮನೋರಂಜನೆಯಾಗಿ ಕಂಡಿದೆಯೇ ವಿನಾ ಅದರ ಮೂಲವನ್ನು ಹುಡುಕಿಕೊಂಡು ಹೋಗುವ ವ್ಯವಧಾನ ಒಮ್ಮೆಯೂ ಬಂದಿದ್ದಿಲ್ಲ.

ಇಲ್ಲಿಯ ಮೂಲ ನಿವಾಸಿಗಳ ಹಾಗೆ ನಾವೂ ಸಹ ನಿಸರ್ಗವನ್ನು ಬಹುವಾಗಿ ಪೂಜಿಸುವವರು ಎಂದುಕೊಂಡಾಗಲೆಲ್ಲ ನನ್ನ 'ದೇವರ' ವ್ಯಾಖ್ಯೆಗಳಿಗೆ ಒಂದು ಅರ್ಥ ಬಂದಿದೆ. ನಾವು ನೀರನ್ನು ಪೂಜಿಸುತ್ತೇವೆ, ಭೂಮಿಯನ್ನು ಪೂಜಿಸುತ್ತೇವೆ, ಆಹಾರ ಸರಪಳಿಯಲ್ಲಿ ಬರುವ ಹಲವಾರು ಪ್ರಾಣಿ ಪಕ್ಷಿಗಳನ್ನು ನಾವು ದೇವರ 'ವಾಹನ'ವಾಗಿ ಪೂಜಿಸುವುದನ್ನು ಸಾಧಿಸಿಕೊಳ್ಳಬಲ್ಲೆ. ಸೂರ್ಯನನ್ನು ನಕ್ಷತ್ರವೆಂದು ಅದೆಷ್ಟೋ ವರ್ಷಗಳಿಂದ ವಿಜ್ಞಾನ ಹೇಳಿಕೊಂಡು ಬಂದಿದ್ದರೂ ನಾವು ಅವನನ್ನು ಒಂದು 'ಗ್ರಹ'ವನ್ನಾಗಿ ಪೂಜಿಸಿಕೊಂಡು ಬಂದಿದ್ದನ್ನು ನೋಡಿ-ನೋಡಿಯೂ ಸುಮ್ಮನಿರಬಲ್ಲೆ. ಇನ್ನು ರಾಹು-ಕೇತುಗಳ ವಿಷಯಕ್ಕೆ ಬಂದಾಗ ಅವುಗಳನ್ನು ಅಸೆಂಡಿಂಗ್ ನೋಡ್, ಡಿಸೆಂಡಿಂಗ್ ನೋಡ್ ಎಂದೋ ಇಲ್ಲಾ ನೆಪ್ಚೂನ್, ಪ್ಲೂಟೋಗಳೆಂದೂ ಅಲ್ಲಲ್ಲಿ ವಿವರಣೆಯನ್ನು ಓದಿಕೊಂಡಿದ್ದೇನೆ.

ನನ್ನಲ್ಲಡಗಿದ ಗೊಂದಲಗಳಿಗೆ ಮುಖ್ಯವಾದ ಕಾರಣವೆಂದರೆ ನನ್ನ ತಿಳುವಳಿಕೆಯ ಮಿತಿ - ನಾವು ತಳಿರು ತೋರಣಗಳನ್ನು ಕಟ್ಟುವುದರಿಂದ ಹಿಡಿದು ಹಬ್ಬ-ಹರಿದಿನಗಳಿಗೆ ಸಂಬಂಧಿಸಿದ ಅದೆಷ್ಟೋ ಆಚರಣೆಗಳಿಗೆ ನನಗೆ ವೈಜ್ಞಾನಿಕವಾಗಿ ವಿವರಣೆ ಅಲ್ಲಲ್ಲಿ ಓದಿ ಗೊತ್ತಿದ್ದರೂ ನನ್ನ ನೆನಪಿನಲ್ಲಿ ಇನ್ನೊಬ್ಬರಿಗೆ ವಿವರಿಸುವಷ್ಟರ ಮಟ್ಟಿಗೆ ಏನೋ ಉಳಿಯೋದಿಲ್ಲ, ಹೀಗೆ ಕೇಳಿದರೆ ಹಾಗೇ ಹೋಗಿಬಿಟ್ಟಿದೆ. ಆದರೆ ನಾವು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದಾಗ ಒಬ್ಬರಲ್ಲ ಒಬ್ಬರು ನಮ್ಮ ಆಚರಣೆಗಳನ್ನಾಗಲಿ, ಹಬ್ಬಗಳನ್ನಾಗಲೀ ಪ್ರಶ್ನಿಸದೇ ಇರೋದಿಲ್ಲ, ಆ ಸಂದರ್ಭಗಳಲ್ಲಿ ನಮ್ಮ ಧರ್ಮ, ರೀತಿ-ನೀತಿಗಳಿಗೆ ನಾವೇ ರಾಯಭಾರಿಗಳಾಗಿ ಬಿಡುತ್ತೇವಾದ್ದರಿಂದ ಕೆಲವೊಂದನ್ನು ಇಲ್ಲಿ ಬಂದ ಮೇಲೆ ಇಲ್ಲಿನವರ ದೃಷ್ಟಿಯಲ್ಲಿ ಪ್ರಶ್ನಿಸಿಕೊಂಡು ಅದಕ್ಕೆ ಉತ್ತರವನ್ನು ಹುಡುಕಿಕೊಂಡಿದ್ದಾಗಿದೆ. ನನ್ನ ಸಹೋದ್ಯೋಗಿಗಳಿಗೂ ಸಹ ನನಗಿರುವ ಹಾಗೆಯೇ ಅವರವರ ಆಚರಣೆಗಳಲ್ಲಿ ಮಿತವಾದ ತಿಳುವಳಿಕೆಯೂ ಇರುವುದನ್ನು ನೋಡಿದ್ದೇನೆ, ಆದರೂ ಸಹ ಕೆಲವೊಮ್ಮೆ ನಮ್ಮ ರೀತಿ-ನೀತಿಗಳ ಬಗ್ಗೆ ನಾನು ತಿಳಿದುಕೊಂಡಿದ್ದು ಕಡಿಮೆ ಎನ್ನಿಸಿಬಿಡುತ್ತದೆ.

ನಾವು ಆಚರಿಸಿಕೊಂಡು ಹೋಗುವ ಎಷ್ಟೋ ದಿನನಿತ್ಯದ ಕ್ರಮಗಳ ಮೂಲ ಸಿದ್ಧಾಂತ ನಮಗೆ ತಿಳಿದಿಲ್ಲವೆಂದಾದರೆ, ಅದರ ಐತಿಹ್ಯವನ್ನು ಇನ್ನೊಬ್ಬರಿಗೆ ತಿಳಿಸಿ ಹೇಳಲಾರದವರಾದರೆ ಆ ನಂಬಿಕೆಗಳು ಎಲ್ಲಿ 'ಮೂಢ'ನಂಬಿಕೆಗಳಾಗಿ ಬಿಡುತ್ತವೋ ಎಂದು ಹೆದರಿಕೆಯಾಗುತ್ತದೆ. ನಮ್ಮ ಪರಂಪರೆ ಬರಿ ಚರ್ಮದ ಮೇಲಿನ ತಿಳುವಳಿಕೆಯಾಗದೇ ಇನ್ನೂ ಸ್ವಲ್ಪ ಆಳವಾಗಿದ್ದರೆ ಎನ್ನುವ ಆಶಯ ನನ್ನದು.

Wednesday, July 05, 2006

ಉತ್ತರ ಕೊರಿಯಾದ ಕಥೆಯೇ ಬೇರೆ...

ಅಂತಾರಾಷ್ಟ್ರೀಯ ಸಮೂಹ ಎಷ್ಟು ಬೇಡವೆಂದರೂ ಉತ್ತರ ಕೊರಿಯಾದವರು ಕ್ಷಿಪಣಿಗಳನ್ನು ಹಾರಿಸಿ ತಮ್ಮ ನಿಲುವನ್ನು ಸಾಧಿಸಿಕೊಂಡು ಬಿಟ್ಟರು, ಜಪಾನ್, ಚೀನ, ದಕ್ಷಿಣ ಕೊರಿಯಾ, ರಷ್ಯಾ ಹಾಗೂ ಅಮೇರಿಕ ದೇಶಗಳು ಏನು ಮಾಡಬಹುದು ಎಂದು ಒಬ್ಬರನ್ನೊಬ್ಬರು ಪ್ರಶ್ನೆ ಕೇಳಿಕೊಂಡರೆ ಮುಂದೆ ಇನ್ನೂ ಹಲವಾರು ಕ್ಷಿಪಣಿಗಳನ್ನು ಹಾರಿಸುವ ಪ್ರಯತ್ನದಲ್ಲಿ ಉತ್ತರ ಕೊರಿಯಾದವರು ಕಂಡು ಬರುತ್ತಾರೆಯೇ ವಿನಾ ಯಾವುದಕ್ಕೂ ಬಗ್ಗುವಂತೇನೂ ಕಾಣುತ್ತಿಲ್ಲ.

ಹಲವಾರು ವರ್ಷಗಳ ಹಿಂದೆ ಯಾವುದೋ ಅನ್ಯಭಾಷಾ ಸಿನಿಮಾವೊಂದರಲ್ಲಿ ಒಂದು ದೊಡ್ಡ ಕುಟುಂಬದ ಚಿತ್ರಣವನ್ನು ತೋರಿಸುವಾಗ ಬಂದ ಒಂದು ರೂಪಕ - ಆ ಕುಟುಂಬದಲ್ಲಿ ಇರುವ ಹತ್ತು-ಹನ್ನೆರಡು ಮಕ್ಕಳಿಗೆಲ್ಲ ಅಗಾಧವಾದ ಹಸಿವಿರುತ್ತದೆ, ಕೊನೆಗೊಂದು ದಿನ ತಿನ್ನಲಿಕ್ಕೆ ಏನೋ ಸಿಕ್ಕಾಗ ಮಕ್ಕಳೆಲ್ಲರೂ ತಮ್ಮ-ತಮ್ಮ ಶಕ್ಯಾನುಸಾರ ಆಹಾರವನ್ನು ಕೊಡುತ್ತಿರುವವರ ಸುತ್ತಲೂ ಮುತ್ತಿಗೆ ಹಾಕಿದಾಗ ಎಲ್ಲರಿಗಿಂತಲೂ ಚಿಕ್ಕದಾದ ಹುಡುಗನೊಬ್ಬ ಒಂಟಿಯಾಗಿ ಅಳತೊಡಗುತ್ತಾನೆ, ಅವನು ಎಷ್ಟು ಕೂಗಾಡಿ, ಚೀರಾಡಿದರೂ ಯಾರೂ ಅವನ ಗೋಜಿಗೆ ಹೋಗುವುದಿಲ್ಲ, ಕೊನೆಗೆ ಹಸಿವನ್ನು ತಾಳಲಾರದೇ ಹಾಗೂ ತನಗೆ ಸಿಗಬೇಕಾದ ಅಟೆನ್ಷನ್ ದೊರೆಯದೇ ಆ ಹುಡುಗ ಸಮೀಪವಿರುವ ನೀರಿನ ಹೂಜಿಯೊಂದನ್ನು ಕೆಳಕ್ಕೆ ಬೀಳಿಸುವುದರ ಮೂಲಕ ದೊಡ್ಡ ಸದ್ದು ಮಾಡುತ್ತಾನೆ, ಆ ಸದ್ದಿಗೆ ಎಲ್ಲರೂ ಒಂದು ಕ್ಷಣ ಸ್ತಬ್ಧರಾಗಿ ತಿರುಗಿ ನೋಡಿದಾಗ ಈ ಹುಡುಗ ಆ ಗುಂಪಿನೊಳಗೆ ತೂರಿಕೊಂಡು ಎಲ್ಲರಿಗಿಂತ ಮೊದಲಿನವನಾಗುತ್ತಾನೆ. ಹೂಜಿಯು ಒಡೆದ ಸದ್ದಿಗೆ ಒಂದು ಕ್ಷಣ ಸ್ಥಗಿತಗೊಂಡ ಕೋಲಾಹಲ ಮತ್ತೆ ಹಾಗೇ ಮುಂದುವರೆಯುತ್ತದೆ, ಆದರೆ ಈ ಬಾರಿ ಆ ಚಿಕ್ಕ ಹುಡುಗನಿಗೆ ಎಲ್ಲರಿಗಿಂತ ಮೊದಲು ಸ್ಥಾನ ಸಿಕ್ಕಿರುತ್ತದೆ.

ಈ ನಿದರ್ಶನಕ್ಕೆ ಉತ್ತರ ಕೊರಿಯಾದ ಚಿತ್ರಣ ಹೊಂದದಿರಬಹುದು, ಆದರೆ ವಿಶ್ವ ಸಮೂಹದಲ್ಲಿ ಬೇಕಾದ ಅಟೆನ್ಷನ್ ಅಂತೂ ಅದಕ್ಕೆ ಈ ಬೆಳವಣಿಗೆಯಿಂದ ಸಿಕ್ಕಿ ಹೋಗಿದೆ. ಸ್ವಲ್ಪ ದಿನಗಳ ಹಿಂದೆ ವಿಶ್ವದ ಹಿರಿಯಣ್ಣರ ನಿದ್ದೆ ಕೆಡಿಸಿದ್ದ ಇರಾನ್ ಸ್ವಲ್ಪ ತಣ್ಣಗಾಗುತ್ತಿರುವಂತೆಯೇ ಈಗ ತನ್ನ ರೆಕ್ಕೆ ಬಿಚ್ಚಿಕೊಂಡ ಉತ್ತರ ಕೊರಿಯಾದ ಕೋಲಾಹಲ ಹೀಗೇ ಮುಂದುವರೆದರೆ ಏಷ್ಯಾ ಮಾರುಕಟ್ಟೆಗಳು ತಕ್ಕ ಶಾಸ್ತಿಯನ್ನು ಅನುಭವಿಸಿ ಎಲ್ಲರೂ ಕಷ್ಟಕ್ಕೆ ಸಿಲುಕಬೇಕಾಗಿ ಬಂದೀತು.

ಆದರೆ ಒಂದಂತೂ ನಿಜ, ಉತ್ತರ ಕೊರಿಯಾ ಇರಾಕ್ ಅಂತೂ ಅಲ್ಲ, ಅಮೇರಿಕದವರಾಗಲೀ ಮತ್ಯಾರಾದರಾಗಲಿ ಮಾಡಬಹುದಾದ ಆಕ್ರಮಣದ ಮಾತು ಸಾಧ್ಯವೇ ಇಲ್ಲ ಎನ್ನಬಹುದು. ಮೊದಲನೆಯದಾಗಿ, ಉತ್ತರ ಕೊರಿಯಾ ಈಗಾಗಲೇ ನ್ಯೂಕ್ಲಿಯರ್ ತಂತ್ರಜ್ಞಾನವನ್ನು (ತಾನೇ ಹೇಳಿಕೊಂಡಂತೆ) ಹೊಂದಿದ್ದು, ನ್ಯೂಕ್ಲಿಯರ್ ಆಯುಧಗಳೂ ಆದರ ಬತ್ತಳಿಕೆಯಲ್ಲಿವೆ. ಅಲ್ಲದೇ ತನ್ನ ಯಶಸ್ವಿ ಉಡಾವಣೆಗಳಾದ ಚಿಕ್ಕ ಹಾಗೂ ಮಧ್ಯಮ ದೂರದ ಕ್ಷಿಪಣಿಗಳಿಂದ ಅದೂ ಬೇಕಾದಷ್ಟು ರಾಷ್ಟ್ರಗಳನ್ನು ತಲುಪಬಲ್ಲದು. ಇನ್ನೇನಾದರೂ ಅದರ ಹೆಚ್ಚಿನ ದೂರದ (ಲಾಂಗ್ ರೇಂಜ್) ಕ್ಷಿಪಣಿಗಳು ಯಶಸ್ವಿಯಾದವೆಂದಾದರೆ ಅಮೇರಿಕದ ಪಶ್ಚಿಮ ತೀರಕ್ಕೂ ಬಂದು ಅಪ್ಪಳಿಸಬಹುದು. ಎರಡನೆಯದಾಗಿ, ಉತ್ತರ ಕೊರಿಯಾದ ಸೈನಿಕರೂ ಇರಾಕ್ ನವರಿಗಿಂತ ಬಲಶಾಲಿಗಳು, ಹಿಂದಿನ ಬೇಕಾದಷ್ಟು ಯುದ್ಧಗಳಲ್ಲಿ ತರಬೇತಿ ಪಡೆದ ಇವರನ್ನು ಎದುರು ಹಾಕಿಕೊಳ್ಳುವುದು ಇರಾಕ್ ಸೈನಿಕರನ್ನು ಎದುರು ಹಾಕಿಕೊಂಡಷ್ಟು ಸುಲಭದ ಮಾತಲ್ಲ. ಮೂರನೆಯದಾಗಿ, ಇರಾಕ್ ಯುದ್ಧದ ನಂತರ ಹಣಕಾಸಿನ ಬವಣೆಯಲ್ಲಿ ಸಿಕ್ಕಿರುವ ದೇಶಗಳೆಲ್ಲವೂ ಮತ್ತೊಂದು ಅನಾಹುತಕ್ಕೆ ಎಡೆ ಮಾಡಿಕೊಡುವ ಮುನ್ನ ಮತ್ತೊಮ್ಮೆ ಯೋಚಿಸುವ ಪರಿಸ್ಥಿತಿ ಬಂದಿದೆ. ವಿಶ್ವದವರೆಲ್ಲರೂ ಬೇಡ-ಬೇಡವೆಂದರೂ ಇರಾಕ್ ಆಕ್ರಮಣಕ್ಕೆ ಇಳಿದ ಅಮೇರಿಕ-ಯುಕೆ ದೇಶದವರಿಗೆ ಈಗ ವಿಶ್ವದವರೆಲ್ಲರ ಬಲ, ಬೆಂಬಲವಿದ್ದರೂ ಉತ್ತರ ಕೊರಿಯಾದವರನ್ನು ಎದುರು ಹಾಕಿಕೊಳ್ಳುವುದು ಬಹಳ ಕಷ್ಟ ಸಾಧ್ಯ. ಇವು, ಇನ್ನೂ ಹಲವಾರು ಕಾರಣಗಳಿಂದಾಗಿಯೇ ಎಲ್ಲರೂ ಡಿಪ್ಲೋಮ್ಯಾಟಿಕ್ ಮಾತುಕಥೆಗಳಿಂದ ಸಾಧ್ಯವಾದಷ್ಟು ವಿವಾದವನ್ನು ಪರಿಹರಿಸಿಕೊಳ್ಳಲು ಯತ್ನಿಸುತ್ತಿರುವುದು. ಈಗ ಉತ್ತರ ಕೊರಿಯಾವನ್ನು ಮಾತುಕಥೆಗೆ ಒತ್ತಾಯಿಸುವ ಎಷ್ಟೋ ದೇಶಗಳು ಆಗ ನ್ಯೂಕ್ಲಿಯರ್ ಟೆಕ್ನಾಲಜಿಯನ್ನು ತನ್ನದಾಗಿಸಿಕೊಳ್ಳುತ್ತಿದೆ ಎಂಬ ಅಪವಾದಕ್ಕೊಳಗಾದ ಇರಾಕ್‌ಗೂ ಒಂದು ಮಾತುಕಥೆಯ ಅವಕಾಶವನ್ನು ನೀಡಿದ್ದರೆ ಎನ್ನಿಸುವುದರಿಂದ ಎಷ್ಟೋ ಜನರ ಕಣ್ಣಿಗೆ ಈ ದೇಶಗಳ ನೀತಿ ಡಬಲ್ ಸ್ಟ್ಯಾಂಡರ್ಡ್ ಆಗಿ ಕಂಡರೂ ತಪ್ಪೇನಿಲ್ಲ.

ಉತ್ತರ ಕೊರಿಯಾದವರ ದೃಷ್ಟಿಯಲ್ಲಿ ತಮ್ಮನ್ನು ತಾವು ಸಂರಕ್ಷಿಸಿಕೊಳ್ಳುತ್ತಿರುವ ಮಾತಿನಲ್ಲಿ ಹುರುಳೆಷ್ಟಿದೆಯೋ ಅಷ್ಟೇ ಗಾಜಿನ ಮನೆಯಲ್ಲಿ ಇರುವ ಕೆಲವರು ತಮ್ಮ ಮೇಲೆ ಕಲ್ಲು ತೂರದಿರಲಿ ಎಂಬ ದೂರದೃಷ್ಟಿಯಿಂದ ಮಾಡುತ್ತಿರುವ ನಾಟಕದಲ್ಲೂ ಸತ್ಯವಿದೆ. ಹಿಂದೆ ಭಾರತ ನ್ಯೂಕ್ಲಿಯರ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದಾಗ ವಿಶ್ವದೆಲ್ಲ ದೇಶಗಳು ಪಾಕಿಸ್ತಾನಕ್ಕೆ ನ್ಯೂಕ್ಲಿಯರ್ ಪರೀಕ್ಷೆಯನ್ನು ಮಾಡದಂತೆ ಬಲವಾದ ಒತ್ತಡವನ್ನು ಹೇರಿದಾಗ್ಯೂ ಮುಷಾರಫ್ ಆಡಳಿತ ಆಂತರಿಕ ಒತ್ತಡಗಳ ನಡುವೆ ಯಶಸ್ವಿಯಾಗಿ ನ್ಯೂಕ್ಲಿಯರ್ ಪರೀಕ್ಷೆಗಳನ್ನು ಮಾಡಿಯೇ ತೀರಿತ್ತು. ಸರ್ವಾಧಿಕಾರಿಗಳಿಗೆ ಹೇಳುವವರು ಕೇಳುವವರು ಯಾರೂ ಇರೋದಿಲ್ಲ ಎಂಬ ಮಾತು ಅಷ್ಟೇನೂ ಸತ್ಯವಲ್ಲ. ಹಾಗೆಯೇ ಈ ದಿನ ಆಂತರಿಕವಾಗಿ ಉತ್ತರ ಕೊರಿಯಾಕ್ಕೆ ಯಾವ ಒತ್ತಡಗಳಿವೆಯೋ ಗೊತ್ತಿಲ್ಲ. ಆರ್ಥಿಕವಾಗಿ ಹಿಂದುಳಿದಿರೋ ದೇಶಗಳು ತಮ್ಮ-ತಮ್ಮ ಅಸ್ಥಿತ್ವದ ಉಳಿವಿಗೆ ಹೀಗೆ ಒಂದಲ್ಲ ಒಂದು ನಾಟಕವನ್ನು ಆಡಬೇಕಾದ ಅನಿವಾರ್ಯತೆ ಬಂದಿದೆ, ಇಲ್ಲವೆಂದಾದರೆ ಸದ್ದು ಮಾಡದವರನ್ನು ಕೇಳುವವರು ಯಾರು?

ತಮ್ಮ-ತಮ್ಮ ಆಂತರಿಕ ಭದ್ರತೆಗಳ ದೃಷ್ಟಿಯಿಂದ ಜಪಾನ್, ಚೀನಾ, ದಕ್ಷಿಣ ಕೊರಿಯಾ ಹಾಗೂ ಅಮೇರಿಕ ದೇಶಗಳಿಗೆ ಉತ್ತರ ಕೊರಿಯಾದವರು ಬಹಳಷ್ಟು ನಡುಕವನ್ನು ಹುಟ್ಟಿಸಿದ್ದಾರೆ, ಈ ನಡುಕವೇ ಮುಂದೆ ಉತ್ತರ ಕೊರಿಯಾದವರ ಮೇಲೆ ಯುದ್ಧವನ್ನು ಸಾರುವ ಸಂಭವನೀಯತೆಯನ್ನು ಕಡಿಮೆ ಮಾಡುತ್ತದೆ. ಈಗ ಉತ್ತರ ಕೊರಿಯಾದವರ ಜೊತೆ ಮಾತುಕಥೆಯಲ್ಲಿ ತೊಡಗದೇ ಮತ್ತೇನು ದಾರಿ ನನಗಂತೂ ಕಾಣದು. ಈ ಎಲ್ಲ ನಾಟಕದಲ್ಲಿ ಎಷ್ಟೋ ದೇಶಗಳಿಗೆ ತಮ್ಮ-ತಮ್ಮ ಆಂತರಿಕ ಸುರಕ್ಷೆ ಮುಖ್ಯ ಹಾಗೂ ಎಷ್ಟೋ ದೇಶಗಳು ತಮ್ಮ ವಿದೇಶಾಂಗ ನೀತಿಯನ್ನೂ ಮತ್ತೊಮ್ಮೆ ಪರಿಶೀಲನೆ ಮಾಡಿಕೊಳ್ಳುವ ಅಗತ್ಯ ಎಂದಿಗಿಂತಲೂ ಹೆಚ್ಚಾಗಿದೆ. ಉತ್ತರ ಕೊರಿಯಾವೇನು ಇರಾನ್ ದೇಶದವರು ನಾಳೆ ನ್ಯೂಕ್ಲಿಯರ್ ಅಸ್ತ್ರಗಳನ್ನು ಹುಟ್ಟಿಸುತ್ತೇವೆಂದು ಹೊರಟರೂ ಅವರ ಜೊತೆ ಮಾತಕಥೆಗೆ ತೊಡಗದೇ ಬೇರೆ ದಾರಿಯೇ ಇಲ್ಲ. ಹೇರಬಹುದಾದ ಸ್ಯಾಂಕ್ಷನ್‌ಗಳಿಂದ ಆಗಬಹುದಾದ ನಷ್ಟವನ್ನು ಪಾಕಿಸ್ತಾನದಂತಹವರು, ಇರಾನ್ ನಂತಹವರು, ಉತ್ತರ ಕೊರಿಯಾದಂತಹವರು ತಮ್ಮೆಲ್ಲ ಕೊರೆತಗಳ ನಡುವೆಯೂ ಸುಲಭವಾಗಿ ಕೊಡವಿಕೊಳ್ಳಬಲ್ಲರು, ಈ ದೇಶಗಳನ್ನಾಳುವವರಿಗೆ ಮುಖ್ಯವಾಗಿ ದೂರದರ್ಶಿತ್ವ ಹಾಗೂ ತಮ್ಮ ಜನಹಿತವಿದ್ದರೆ ಹೀಗೇಕಾದರೂ ಆಗುತ್ತಿತ್ತು?

ಏನೇ ಇರಲಿ, ಇರಾಕ್ ಯುದ್ಧ ಅಮೇರಿಕದವರಿಗೆ ಮರೆಯಲಾಗದ ಪಾಠವನ್ನು ಈಗಾಗಲೇ ಕಲಿಸಿಬಿಟ್ಟಿದೆ. ವಿಶ್ವಸಂಸ್ಥೆಯನ್ನು ಅಂದು ಧಿಕ್ಕರಿಸಿ ನಡೆದಿದ್ದ ದೇಶಗಳು ಇಂದು ಮತ್ತೆ ಅದರ ಬುಡಕ್ಕೇ ಬಂದು ಬೀಳುವಂತಾಗಿದೆ. ನನ್ನ ಪ್ರಕಾರ ಅದು ಬಹಳ ಮಹತ್ವದ ಬೆಳವಣಿಗೆ - ಈ ಬೆಳವಣಿಗೆ ಒಂದು ಆಶಾವಾದವನ್ನ ಹುಟ್ಟಿಸುತ್ತದೆ, ನಾಳೆ ಉತ್ತರ ಕೊರಿಯಾದವರೂ ಶಾಂತಿದೂತರಾಗುವುದಕ್ಕೆ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯೇ ದಾರಿ.

Tuesday, July 04, 2006

ಸಿದ್‌ರಾಮೀನ ಇಡ್ಲಿ ದೇಶಕ್ಕ್ ಕಳಿಸಿದ್ರೆ ಹೆಂಗೆ?

ಇವರಿದ್ದ ಕಡೆ ಚಿಕನ್ ಗುನ್ಯಾ ತಗುಲಿಕೊಂಡಂದಿನಿಂದ ಕುಂಟೋದನ್ನ ನಿಲ್ಲಿಸದೇ ಅದೇ ಅವನ ನಿಜವಾದ ನಡೆಯೋ ಭಂಗಿ ಅನ್ನೋ ಹಂಗೆ ಮೈಲಾರಿ ಕಾಲೆಳೆದುಕೊಂಡು ಬರೋದನ್ನ ನೋಡಿ ಧರಮ್ಯಾ, ಹೇಮ್ಲ್ಯಾ ಇಬ್ರೂ ತಮ್ ತಮ್ಮಲ್ಲೇ ಪಿಸ್ ಪಿಸನೆ ಮಾತಾಡೋಕೆ ಶುರು ಹಚ್ಚಿಕೊಂಡ್ರು. ಮೈಲಾರಿ ಬಂದೋನೆ, 'ಏನ್ರೋ, ಏನೋ ಕುಸುಕುಸು ಹಚ್ಚಿಕೊಂಡ್ ಕುತಗಂಡಂಗ್ ಕಾಣ್ತೀರಲ್ಲ, ನಾನೇನೂ ನೋಡ್‌ಬಾರ್ದು ನೋಡಿಕ್ಯಂಡ್ ಬರ್ಲಿಲ್ಲ ಬಿಡು!' ಎಂದು ಒದರಿದವನೆ ಇವರ ಜೊತೆ ಅವನ ಕರೆದರೂ ಬಂದವನ ಹಾಗೆ ಬಂದು ಸೇರಿಕೊಂಡು ಗುಂಪಿನಳೊಗೊಂದಾಗಿ ಬಿಟ್ಟ.

ಧರಮ್ಯಾ ಇದ್ದೋನ್, ಸುಮ್ಕಿರಲಾರ್ದೆ 'ಅದೇ ಆ ನಿಂಗಣ್ಣನ ಮಗಳು ಆ ವಾಲ್ಗದೋರ್ ಹುಡುಗುನ್ ಕಟ್ಕೊಂಡ್ ಹೋದ್ಲಂತೆ ವಿಷ್ಯಾ ತಿಳೀತಿಲ್ಲೋ' ಎಂದು ಮೈಲಾರಿಯನ್ನು ಕೆಣಕಿದ.

ಮೈಲಾರಿ 'ಅದಾ, ಅದು ಆಗ್ಲೆ ಹಳೆ ಹಳಸಿದ್ ವಿಷ್ಯಾಗಿ ಹೋತು,ಆ ನಿಂಗಣ್ಣನ ಮಗಳು ಬಾಣಂತನ ಅಂತ ಊರಿಗ್ ಬಂದ್ರೆ ನೋಡು, ಅದು ಬೇಕಾದ್ರೆ ಹೊಸಾ ವಿಷ್ಯಾನಪ್ಪ' ಎಂದು ಜೋರಾಗಿ ನಗಾಡಿದ್ದನ್ನು ನೋಡಿ ಹೇಮ್ಯ್ಲಾನೂ ಅವನ ಜೊತೆ ಸೇರಿಕೊಂಡು ನಗುತ್ತಲೇ ಪ್ರಶ್ನೆ ಹಾಕಿದ...

'ಅಲ್ಲಾ ಕಾಕ, ನೀನು ಬಿಡು, ಎಲ್ಲಾರಿಗಿಂತ್ಲೂ ಪ್ರಚಂಡ್ನೇ, ಅದಿರ್ಲಿ, ನಿನಗೆ ಚಿಕನ್ ಗುನ್ಯಾ ಬಂದು ಅದ್ಯಾವ್ ಕಾಲಾ ಆತು, ಇನ್ನೂವೆ ಅದ್ಯಾಕ್ ಕಾಲೆಳೀತಿ ಮತ್ತ?'

ಇನ್ನೂ ಮೈಲಾರಿ ಉಸುರೂ ತೆಗೆದಿರ್ಲಿಲ್ಲ, ಅಷ್ಟರೊಳಗೆ ಆಗ್ಲೇ ಧರಮ್ಯಾ ಇದ್ದೋನು 'ಅದೇನ್ ಬಿಡು, ಅವನ ಹೂಟಿ ನಂಗೊತ್ತಿಲ್ಲೇನು? ಕುಮಾರ ಸ್ವಾಮಿ ಸರಕಾರ್‌ದೋರು ಇವತ್ತು ಅದೇನೋ ದೊಡ್ಡ ಸಭೆ ಕರದಾರಂತೆ, ಹಿಂಗೇ ಒಂದಿನ ರೋಗ ಬಂದೋರಿಗೆಲ್ಲ ಒಂದ್ ಒಂದ್ ಸಾವ್ರ ರೊಕ್ಕ ಕೊಟ್ರೂ ಅಂದ್ರೆ ತಾನೂ ಅದರಾಗ್ ಇರ್ಲಿ ಅಂತ, ಮೈಲಾರಿ ಅದರ ನೆನಪಾರ ಇರಲಿ ಅಂತ ಕಾಲೆಳಿಯೋದು' ಎಂದು ಕಿಚಾಯಿಸಿದ.

ಮೈಲಾರಿ ಸ್ವಲ್ಪ ಜೋರಾಗಿ ಉಸುರು ತೆಗೆದು 'ಅದೇನ್ ಖಾಯ್ಲೇನೋ, ಏನೋ, ಎಲ್ಲರಿಗೂ ಬಂದು ಬಡಕಂತು, ಒಂದಿಷ್ಟು ಮಂದೀನಾದ್ರೂ ತಂಗೊಂಡ್ ಹೋಗಿದ್ರೆ ಎಷ್ಟೋ ಚೆನ್ನಾಗಿತ್ತು, ಸ್ವಲ್ಪ ಭೂತಾಯಿ ಭಾರಾನಾದ್ರೂ ಕಮ್ಮಿ ಮಾಡಕ್ಯಂತಿದ್ಲು ಅಂತೀನಿ' ಎಂದೊಡನೆ ಇವನಿಗೇನಾತು ಧಾಡಿ ಎನ್ನುವಂತೆ ಧರಮ್ಯಾ, ಹೇಮ್ಲ್ಯಾ ಇಬ್ಬರೂ ಮೈಲಾರಿ ಮುಖ ನೋಡುತ್ತಾರೆ. ಧರಮ್ಯಾ 'ಅಲ್ಲಾ, ಏನಾಗಿತ್ತು ಆ ತಾಯಿಗೆ, ಹೋಗಿ ಹೋಗಿ ಆ ವಾಲ್ಗದೋನ್ ಮಗನ ಮಗನ ಕಟಗಂಡ್ ಓಡಾದಾ, ಈ ಹೆಣ್ ಮಕ್ಳಿಗ್ ಸ್ಕೂಲೂ ಮತ್ತೊಂದು ಕಳ್ಸಿದ್ದ್ದೇ ತಪ್ಪಾತ್ ನೋಡು, ಅಲ್ಲೀ-ಇಲ್ಲೀ ಸಿನಿಮಾ ನೋಡಿಕ್ಯಂಡ್ ಬರ್ತಾವೆ, ಇಲ್ಲಿ ಬಂದು ಹಂಗೇ ಮಾಡಬೇಕು ಅಂತಾವೆ'.

ಮೈಲಾರಿ ಸ್ವಲ್ಪ ಸಿಟ್ಟು ನಟಿಸಿ 'ಸುಮಿರ್ ಲಾ, ಆ ವಾಲ್ಗದೋರ್ ಹುಡ್ಗಾ ಅಂದ್ರೆ ಸನಾದಿ ಅಪ್ಪಣ್ಣ ಅಂತ ತಿಳಕಂಡೀಯೇನು? ಸಿನಿಮಾದಾಗ್ ಏನಾರ ತೋರಿಸ್ಲಿ, ಅಲ್ಲೀಗೂ-ಇಲ್ಲೀಗೂ ಬಾಳ ಫರಕ್ ಐತಿ. ಅಲ್ಲಿ ಮೆಟ್‌ತಗಂಡ್ ಹೊಡಿಯದ್ ತೋರಿಸಂಗಿಲ್ಲಾ ಅಂತ ಇಲ್ಲಿ ಬಿಡತಾರೇನೂ?' ಎಂದೊಡನೆ ಹೇಮ್ಲ್ಯಾ 'ಬಾಳ್ ಚೋಲೋ ಅಂದಿ ನೋಡು ಕಾಕಾ ನೀನು, ನಿನ್ ತಲಿ ಅಂದ್ರ ತಲೀನಪಾ, ಅವನೌನ, ಈ ಉಪಗ್ರಾ ಎಲ್ಲಾ ಹಾರುಸ್ತಾರ್ ನೋಡು ಅದಕ್ಕಾರೂ ಕಟ್ಟಿ ಕಳಿಸಿದ್ರೆ ನಿನ್ನನ್ನ, ಇಷ್ಟೊತ್ತಿಗೆ ಟಿವಿನಾಗೆ ಬರತಿದ್ದಿ ನೋಡು!' ತನ್ನ ವಾಚಿನ ಕಡೆ ನೋಡಿ 'ಇನ್ನೇನು ಐದೂವರೆ ಲಕ್ಷ್ಮೀ ಬಸ್ಸು ಬರೋ ಹೊತ್ತಾತು, ನಮ್ ಹುಡುಗ ಬರ್ತಾನಪ್ಪೋ ಇವತ್ತು, ಬಾಳ್ ದಿನಾ ಆತು ಹೆಂಗಿದಾನೋ ಏನೋ ಯಾವನಿಗ್ ಗೊತ್ತು?' ಬಸ್ಸು ಬರುವ ದಿಕ್ಕಿನ ಕಡೆ ನೋಡೋಕ್ ಶುರು ಮಾಡಿಕೊಳ್ಳುವನು.

ಮೈಲಾರಿ 'ಉಪಗ್ರಾ ಪಪಗ್ರಾ ಎಲ್ಲಾ ಬಿಟ್ ನೆಟ್ಟಗೆ ಮನ್ಯಾಗಿನ ಕೆಲ್ಸಾ ನೋಡಿಕ್ಯಂಡ್ ಇದ್ರು ಸಾಕಾಗೇತ್ ಹೋಗ್!' ಎನ್ನೋಷ್ಟರಲ್ಲಿ ಲಕ್ಷ್ಮೀ ಬಸ್ಸು ಬರುತ್ತೆ, ಅದರಿಂದ ಹೇಮ್ಲ್ಯಾನ ಮಗ ಮಾರನೂ ತನ್ನ ಒಂದು ಬಗಲಿನ ಚೀಲದೊಂದಿಗೆ ಇಳಿಯುತ್ತಾನೆ.

ಬಸ್ಸು ಇಳಿದವನೇ ಅಲ್ಲಿ ಸೇರಿರೋ ಇವರನ್ನೆಲ್ಲ ನೋಡಿ ಹಲ್ಲು ಕಿರಿಯೋ ಹೊತ್ತಿಗೆ ಮೈಲಾರಿ ಮಾರನ ಮೈ ತಡವಲು ಶುರು ಮಾಡಿರುತ್ತಾನೆ, 'ಏನೋ ಒಳ್ಳೇ ಪಟ್ಣದ್ ನೀರ್ ಸರಿಯಾಗೇ ಸೇರದಂಗಿದೆ?..., ಎಷ್ಟನೇ ಕ್ಲಾಸು ಇವಾಗಾ' ಎಂದು ಹುಬ್ಬೇರಿಸುತ್ತಾನೆ. ಮಾರ ತನ್ನ ಬೆರಳುಗಳನ್ನು ಜೋಡಿಸಿ, ಬಗಲಿನ ಚೀಲಕ್ಕೆ ಆತುಕೊಂಡೇ ಕೈಯಲ್ಲಿ ಎಂಟನ್ನು ತೋರಿಸುತ್ತಾನೆ. ಮೈಲಾರಿ ಮತ್ತೆ ಮುಂದುವರೆಸಿ, 'ಓಹೋಹೊ, ಅದೇನು ಇಲ್ಲೆಲ್ಲೂ ಹೈ ಸ್ಕೂಲು ಇಲ್ಲಾ ಅಂತ ಸಾಗರಕ್ಕೆ ಸೇರಿಸವ್ನೋ ನಿಮ್ಮಪ್ಪಾ, ಸರಿಹೋಯ್ತು, ಮೊದಲೆಲ್ಲ ಯಾವಾಗ್ಲೂ ಮೈ ಮೇಲೆ ಏರಿಸಿಕೊಂಡು ನಡೀತಿದ್ದ ಈಗ ದೊಡ್ಡ ಪೇಟೆ ಸೇರ್ಸಿ ಕಲೆಕ್ಟ್ರು ಮಾಡಕ್ ಹೊಂಟವ್ನೋ'... ದೊಡ್ಡದಾಗಿ ಉಸಿರು ಬಿಟ್ಟು, 'ಏನೋ, ನಿಮ್ಮಪ್ಪನ್ನ ನಡುರಾತ್ರೀನಾಗ್ ಏಳಿಸಿ, ನಿನ್ ಮಗ ಸಾಗರ್‌ದಾಗ್ ಏನ್ ಮಾಡ್ತಾನಲೇ ಅಂದ್ರೆ, ಓದ್ತಾನ ಅಂತಾನ, ನೀನೇನ್ ಓದ್‌ತೀಯೋ ಬಿಡ್ತೀಯೋ!'

ಹೇಮ್ಲ್ಯಾ ಮಗನನ್ನು ಕುರಿತು 'ಕೈ ಕಾಲ್ ಮುಕ ತೊಳ್‌ದು ಪಡಸಾಲೀನಾಗ ಓದಾಕ್ ಕುಂದುರು, ಇದೇ ಬಂದೆ' ಎಂದು ಆಜ್ಞೆ ಮಾಡಿದ್ದೇ ತಡ ಮಾರ ಕೋಲ್ ಬಸವನ ಥರಾ ಗೋಣಾಡಿಸಿ ಮನೆಕಡೆ ಹೊರಡುತ್ತಾನೆ.

ಇಷ್ಟೊದ್ದು ಸುಮ್ನಿದ್ದ ಧರಮ್ಯಾ 'ಅಲ್ಲಾ, ಸುದ್ದೀ ತಿಳೀತಾ, ಆ ಸಿದ್ದರಾಮೀದೂ ಬಾಳಾ ಒದ್ದಾಟನಪ್ಪಾ, ಇತ್ಲಾಗ್ ಜನ್ತಾ ದಳ್ ದಾಗ್ ಮುಖ್ಯಮಂತ್ರಿ ಆಗಲಿಲ್ಲ, ಅತ್ಲಾಗ್ ಗೌಡ್ರ ಮನ್ಯಾಗ ಒಳಗ್ ಸೇರಸ್‌ಲಿಲ್ಲ, ಹೋಗೀ-ಹೋಗಿ ಕಾಂಗ್ರೇಸ್ ಸೇರ್‌ಕ್ಯಾತನಂತ...'
ಹೇಮ್ಲ್ಯಾ ಮೀಸೆ ಮೇಲೆ ಕೈ ಆಡಿಸಿಕೊಂಡು 'ಆ ಇಡ್ಲಿ ದೇವತೆ ಬುದ್ಧಿನಾಗ್ಲೀ, ಈ ಜಯಲಲಿತಾ ಜಾಡನ್ನಾಗಲೀ ಯಾರ್ ಕಂಡೋರೋ? ಸಿದ್ಧರಾಮಣ್ಣ ಪ್ರದೇಶ್ ಕಾಂಗ್ರೇಸ್ ಅಧ್ಯಕ್ಷ ಆಗ್ಲೀ ಅಂತ ಹವಣಿಕಿ ನಡದತಿ ಆಷ್ಟೆ'

ಮೈಲಾರಿ 'ಓಹೋಹೋ, ಅದೇ ನಮ್ಮ ಸಿದ್ದರಾಮಿ, ನಿಮಗೆಲ್ಲ ವಿಷ್ಯ ಗೊತ್ತಿಲ್ಲ, ಸಿದ್ದರಾಮಿ ಇಡ್ಲಿ ದೇಶಕ್ಕೋಗಿ, ಅದೇನೋ ವಿದ್ಯೆ ಕಲ್‌ತಗ ಬಂದು ದೇವೇಗೌಡ್ರೂ ಮುಖಕ್ಕೆ ಮಸೀ ಬಳಸ್ ಬಕು ಅಂತ ಪ್ಲಾನಂತೆ, ನಿಮಗ್ಗೊತ್ತಿಲ್ಲಾ ಮತ್ತ!' ಎಂದು ಜೋರಾಗಿ ನಗತೊಡಗುತ್ತಾನೆ.

ಹೇಮ್ಲ್ಯಾ 'ಸುಮ್ಕಿರು ಕಾಕಾ, ಆ ಮನ್ಷಾ ಇವತ್ತಲ್ಲ ನಾಳಿ ಅದೆಂಗರ ಮಾಡಿ ಮುಖ್ಯಮಂತ್ರಿ ಆಗದಿದ್ರೆ ಕೇಳು'
ಧರಮ್ಯಾ 'ಯಾವನ್ಲಾ ಇವ, ಸುಮ್ ಸುಮ್ಕೆ ಮಾತಾಡ್‌ಬಾರ್ದು, ಮಲ್ಲಿಕಾರ್ಜುನ್ ಖರ್ಗೆ, ಸಿಂಧ್ಯ ಇವರೆಲ್ಲ ಏನ್ ಬಾಯಾಗ್ ಕಡಬ್ ತುಂಬಿಕ್ಯಂಡ್ ಕುತಗಂತಾರಾ ಮತ್ತ? ಕೆಲಸಿಲ್ಲ, ಬಗಸಿಲ್ಲ, ನಡಿ-ನಡಿ.'

ಮೈಲಾರಿ 'ಸಿದ್ದರಾಮಿ ಎತ್ಲಾಗರ ಹೋಗ್ಲಿ, ಇತ್ಲಾಗ್ ಬಿದ್ದರಾಮಿ ಆಗಿ ಮತ್ತ ಜೋಲ್ ಮೋರಿ ತೋರಿಸ್‍ದಿದ್ರೆ ಸಾಕ್ ನೋಡು' ಎಂದು ಹೇಳುವಷ್ಟರಲ್ಲಿ ಬಸ್ ಸ್ಟಾಂಡಿನಿಂದ ಲಕ್ಷ್ಮಿ ಬಸ್ಸು ಜನರನ್ನು ತುಂಬಿಸಿಕೊಂಡು ಮತ್ತೆ ವಾಪಾಸ್ ಹೊರಡುತ್ತದೆ. ಹೇಮ್ಲ್ಯಾ 'ಕಡೆಸಾಲಿಗೆ ಮನಿ ಕಡಿ ಬಂದ್ ಹೋಗ್ ಕಾಕಾ' ಎಂದು ಮೈಲಾರಿಗೆ ಹೇಳುತ್ತಲೇ ಎಲ್ಲರೂ ಒಂದೊಂದು ದಿಕ್ಕಿಗೆ ಚದುರತೊಡಗುತ್ತಾರೆ.

Monday, July 03, 2006

ಒಂದು ಸುಂದರ ಮುಂಜಾವು

ರಜಾದಿನದ ಮುನ್ನಾದಿನವಾದ್ದರಿಂದ ರಸ್ತೆಯ ಮೇಲೆ ಕಾಣಿಸಿದವರೆಲ್ಲರಲ್ಲಿ ಯಾವ ಗಡಿಬಿಡಿಯೂ ಕಾಣದೇ ಸೋಜಿಗವಾಯಿತು, ಎಲ್ಲಾದರೂ ನಮ್ಮ ಸಮಯದ ವ್ಯವಸ್ಥೆಯನ್ನು ಇಪ್ಪತ್ತೈದು ವರ್ಷಗಳೇನಾದರೂ ಹಿಂದಕ್ಕೆ ತಳ್ಳಿಬಿಟ್ಟರೆ ಎಂದು ನನ್ನನ್ನು ನಾನೇ ಚಿವುಟಿಕೊಂಡೆ ಎಲ್ಲವೂ ಮಾಮೂಲಿನ ದಿನದಂತೆ ಕಂಡುಬಂದರೂ ನನ್ನ ಸೋಜಿಗಕ್ಕೂ ಮೀರಿ ನಿಂತ ಮೌನ ಅಥವ ನಿಶ್ಶಬ್ದ ಎಲ್ಲ ಕಡೆ ತಾಂಡವವಾಡುತ್ತಿತ್ತು, ಆ ಮೌನವನ್ನು ಸೀಳಿಕೊಂಡು ಎನ್ನುವಂತೆ ಎದುರಿನಲ್ಲಿ ಬರುವ ವಾಹನದ ಚಕ್ರಗಳು ರಸ್ತೆಯನ್ನು ತಿಕ್ಕಿ ಮುಂದೆ ಹೋಗುವ ರಭಸ ಕಿವಿಗೆ ಅಲ್ಲಲ್ಲಿ ರಾಚುತ್ತಿತ್ತು. ಅಪರೂಪಕ್ಕೆ ಬಡಿಸಿದ ಮೌನ ರುಚಿಸಲಾರದವನಂತೆ ಮುಖಮಾಡಿಕೊಂಡು ಕಿಟಕಿಯ ಗಾಜನ್ನು ಇಳಿಸಿದರೆ ತೇವವಾದ ಹವೆ ದಿನಕ್ಕಿಂತಲೂ ತಂಪಾಗಿ ಕಂಡು ಬಂತು, ಹಿಂದಿನ ಕೆಲವು ದಿನಗಳ ಮಳೆಯಲ್ಲಿ ನೆಂದ ಮಣ್ಣಿನಿಂದ ಇನ್ನೂ ಹಗುರವಾಗಿ ಇನ್ನೂ ವಾಸನೆಯ ಗಮಲು ಹೊಮ್ಮಿ ತೀಡುವ ಗಾಳಿಯ ಮಡಿಲಿನಲ್ಲಿ ಆಸರೆ ಪಡೆದಿತ್ತು. ದಿನದ ಕಾಯಕವನ್ನು ನೆನಪಿಸುವ ಸೂರ್ಯ ಆದ್ಯಾವಾಗಲೋ ತನ್ನ ಅಂಗಡಿಯನ್ನು ತೆರೆದು ಹಾದು ಹೋಗುವ ಮೋಡಗಳಿಗೆ ಸಾಮಾನುಗಳನ್ನು ವಿತರಿಸುವುದರ ಜೊತೆಗೆ ಬೆಳ್ಳಿ ಕಿರಣಗಳ ಮೆರುಗನ್ನು ಬಳಿದು ಅವುಗಳ ಓರೆಕೋರೆ ಮುಖವನ್ನೂ ತಿದ್ದಿ ತೀಡುವ ನಾಟಕದಲ್ಲಿ ಬಣ್ಣ ಹಚ್ಚುವವನಂತೆ ಕಂಡುಬಂದ. ರಸ್ತೆ ಬದಿಯಲ್ಲಿ ನೀರು ಈ ಕಡೆ ಆವಿಯಾಗದೇ ಆ ಕಡೆ ಬತ್ತಿ ಹೋಗದೇ ಯಾರಿಗೂ ಬೇಡವಾಗಿ ಕುಳಿತಿದ್ದೇನಲ್ಲ ಎಂದು ಯೋಚಿಸುವವನಂತೆ ಕಂಡು ಬಂತು. ಖಾಲಿ ರಸ್ತೆಗಳನ್ನು ಬಲ್ಲವನಂತೆ ಕಾರು ಎಂದಿಗಿಂತಲೂ ಹೆಚ್ಚಿನ ಮೊನಚಿನಲ್ಲಿ ರಸ್ತೆಯ ಸೆರಗನ್ನು ತೀಡಿಕೊಂಡು ಅಗಲವಾದ ಟಾನ್ ಶೀಟ್‌ನಲ್ಲಿ ಬಟ್ಟೆ ಕತ್ತರಿಸುವವನ ಹಾಗೆ ಲೀಲಾಜಾಲವಾಗಿ ತನ್ನ ದಾರಿಯನ್ನು ಹುಡುಕಿಕೊಂಡು ಹೋಗುವ ಕತ್ತರಿಯಂತೆ ಆಫೀಸಿಗೆ ತಲುಪಲು ಹವಣಿಸುತ್ತಿತ್ತು.

ಯಾರ ಬಳಿ ಇದೆ ಈ ಆತ್ಮವಿಶ್ವಾಸ? ಏಕೆ? ಹೇಗೆ? ಎನ್ನುವ ಪ್ರಶ್ನೆಗಳು ಉತ್ತರಗಳಿಗೆ ರೂಪವಾಗಿ ಬರುವ ಬದಲು ಪ್ರಶ್ನೆಗಳಾಗೇ ಬಂದು ಇನ್ನೂ ಗೊಂದಲವಾಯಿತು. ಈ ರೇಡಿಯೋ ಕಾರ್ಯಕ್ರಮಗಳು ಅಂದ್ರೆ ಇಷ್ಟೇ, ಬರೀ ಕೇಳೋರ ಮೂಗಿಗೆ ತುಪ್ಪ ಸವರೋ ಜಾತಿ ಇವರೆದ್ದೆಲ್ಲ, ಸುಮ್ನೇ ಪ್ರಶ್ನೆಗಳನ್ನ ಕೇಳ್ತಾರೇ ವಿನಾ ಉತ್ತರ ಸಿಗೋದಿಲ್ಲ! ಉತ್ತರ ಇದ್ದಿದ್ರೆ ಬೆಳಬೆಳಗ್ಗೆ ಎದ್ದು ಅವರೆಲ್ಲ ಈ ಸ್ಟುಡಿಯೋದಲ್ಲ್ಯಾಕ್ಕೆ ಕುಳಿತುಕೊಳ್ಳುತ್ತಿದ್ದರು. ಯಾವುದೋ ಒಬ್ಬ ಸೈನಿಕನನ್ನು ಯುದ್ಧಭೂಮಿ ಹೇಗಿರುತ್ತೆ ಎಂದು ತಣ್ಣಗಿನ ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತು ವಿವರಣೆ ಕೇಳುವ ಇವರೆನ್ನೆಲ್ಲ ಒಂದು ಗೋಣೀಚೀಲದಲ್ಲಿ ಕಟ್ಟಿ ಯಾವುದಾದರೊಂದು ಯುದ್ಧಭೂಮಿಯಲ್ಲಿ ಬಿಟ್ಟು ಬಂದರೆ ಗೊತ್ತಾದೀತು, ಅದು ಹೇಗಿರುತ್ತೇ ಅಂತ. ತಿಳಿದವರು ದೇಶ ನೋಡು, ಇಲ್ಲಾ ಕೋಶಾ ಓದು ಹೇಳಿದ್ದಾರೆಯೇ ವಿನಾ, ರೇಡಿಯೋ ಕೇಳು ಎಂದು ನಾನು ಯಾರೂ ಹೇಳಿದ್ದನ್ನು ಕೇಳಿದ್ದಿಲ್ಲ. ಇವರನ್ನು ಕೇಳಿ ಕೊಳೆಯ ಬೇಕಾದ ನನ್ನ ಹಣೆಬರಹವನ್ನು ಕಂಡು ಒಳಗೊಳಗೇ ಮರುಗುತ್ತಾ ಇವತ್ತೊಂದಿನ ರೇಡಿಯೋ ಕೇಳದಿದ್ರೆ ಏನಂತೆ ಎಂದು ಅಂಗೈಯ ಕೆಳಗಿನ ಭಾಗದಿಂದ ತುಸು ಗಟ್ಟಿಯಾಗೇ ಎನ್ನುವಂತೆ ಗುಂಡಿಯನ್ನು ಅದುಮಿದೆ, ಯಾರಿಂದಲೋ ಗಂಟಲು ಹಿಚುಕಿಸಿಕೊಂಡವರಂತೆ ಅದರಿಂದ ಹೊರಡುವ ಧ್ವನಿ ನಿಂತು ಹೋಯಿತು. ಯುದ್ಧ ಭೂಮಿಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ಮಾಡುವವನಿಗೆ ಇರೋದೇನಿದ್ದರೆ ಕೆಚ್ಚೆದೆ, ಅಂತಹ ಹೆಚ್ಚುಗಾರಿಕೆ ಇರುವಲ್ಲಿ ಆತ್ಮವಿಶ್ವಾಸ ಇದ್ದರೆಷ್ಟು ಬಿಟ್ಟರೆಷ್ಟು? ಯಾವುದೋ ಊಹಾ ರೇಖೆ ಎನ್ನುವಂತೆ ಭೂಪಟಗಳಲ್ಲಿ ಬರೆದಿಟ್ಟ ಗಡಿರೇಖೆಯ ಅತ್ತಿತ್ತ ಇದ್ದವರಲ್ಲಿ ಅದೆಂತಹ ಕಾದಾಟವಿದ್ದಿರಬಹುದು, ದಶಕ-ಶತಮಾನಗಳ ಕಾಲ ನಡೆಯುವಷ್ಟು. ಎಲ್ಲೋ ಯಾರನ್ನೋ ಹಿಡಿದುಕೊಂಡು ಹೋದರಂತೆ, ಅದರ ಪರಿಣಾಮವಾಗಿ ಹಿಡಿದುಕೊಂಡು ಹೋದವರನ್ನು ಬಿಡುವವರೆಗೂ ಅಮಾಯಕರ ಮೇಲೆ ವಿಮಾನ ಧಾಳಿ ನಡೆಯುತ್ತದೆಯಂತೆ, ಸಾವು-ನೋವು ಏನಿದ್ದರೂ ಸಾಮಾನ್ಯ ಜನರೇ ಹೆಚ್ಚಾಗಿ ಅನುಭವಿಸುತ್ತಾರಂತೆ. ಈ ಮನುಷ್ಯರ, ಅಲ್ಲ ಗಡಿಯಿಂದಾಚೀಚೆಗೆ ಇರುವ ಮೃಗಗಳ ಈ ವರ್ತನೆಗೆ ಉಳಿದವರೇಕೆ ಬೆಲೆ ತೆರಬೇಕು, ಉಳಿದವರೆಂದರೆ ಬರೀ ನರಸಂತಾನವಷ್ಟೇ ಅಲ್ಲ, ಅಲ್ಲಿನ ಜಾನುವಾರುಗಳೇನಾಗಬೇಕು, ಗಿಡ-ಮರ, ಜಲಚರಗಳ ಕಥೆಯೇನು? ಹಕ್ಕಿ-ಪಕ್ಷಿಗಳನ್ನು ಕೇಳುವವರ್ಯಾರು? ಯಾವುದೋ ಅಂಬ್ಯುಲೆನ್ಸ್ ಮಾಡಿದ ಸದ್ದಿನಿಂದ ಒಮ್ಮೆ ರಾತ್ರಿ ಎಚ್ಚರವಾದರೆ ನಿದ್ದೆ ಬರುವ ಮೊದಲು ಶಾಪ ಹಾಕುವ ನಾವು ರಾತ್ರಿ-ಹಗಲೂ ಯುದ್ಧ ವಿಮಾನಗಳನ್ನು ಜನರ ತಲೆಯ ಮೇಲೆ ಹಾರಿಸಿ ಹಲವಾರು ತರದ ಮಾಲಿನ್ಯವನ್ನು ಸೃಷ್ಟಿಸುತ್ತೇವಲ್ಲ, ಅದಕ್ಕೆಲ್ಲ ಪರವಾನಗಿ ಯಾರು ಕೊಟ್ಟರು? ರೇಡಿಯೋ ಮುಚ್ಚಿ ಕುಳಿತರೂ ಅದರ ತರಂಗಾಂತರಗಳು ಹುಟ್ಟಿಸಿದ ಅಲೆಗಳು ಇನ್ನೂ ಹುಟ್ಟುತ್ತಲೇ ಹೋದವು, ಈ ಸುಂದರ ಮುಂಜಾವನ್ನು ಒಂದು ಸುಂದರ ಮುಂಜಾವನ್ನೇ ಆಗಿ ಇಡಬಾರದೇಕೆ ಎಂದು ಮತ್ತೆ ರೇಡಿಯೋವನ್ನು ಹಚ್ಚಿದೆ, ಆದರೆ ಈ ಬಾರಿ ಪಕ್ಕಾ ಶಾಸ್ತ್ರೀಯ ಸಂಗೀತಕ್ಕೆ ಮೊರೆ ಹೋದೆ.

ಓಹ್, ಅದ್ಭುತವಾದ ಪಿಟೀಲಿನ ಧ್ವನಿ ಸುತ್ತಲಿನ ತಲ್ಲೀನತೆಯನ್ನು ಕೊರೆದುಕೊಂಡು ಜಲಪಾತದಂತೆ ಭೋರ್ಗರೆಯುವುದರ ಮೂಲಕ ನನ್ನ ಮನದ ಅಧೀರತೆಯನ್ನು ಹೋಗಲಾಡಿಸುವ ಯಾವುದೋ ಒಂದು ಅವ್ಯಕ್ತ ಶಪಥವನ್ನು ತೊಟ್ಟು ಪುಂಖಾನುಪುಂಖವಾಗಿ ಹೊರಹೊಮ್ಮತೊಡಗಿತು. ಕಾರಿನಲ್ಲಿ ನನ್ನ ಸುತ್ತಲಿದ್ದ ಸ್ಪೀಕರುಗಳು ನನ್ನ ತಲೆಯ ಮೇಲಿನಿಂದ ಶಬ್ದ ಬಂದಂತೆ ಹುಟ್ಟಿಸುವ ಒಂದು ಅಗೋಚರ ರಂಗದಲ್ಲಿ ಅದೆಷ್ಟೋ ಜನರು ತಾಳಮೇಳಗಳ ಶುದ್ಧತೆಯ ಉಚ್ಛ್ರಾಯದಲ್ಲಿ ಹೊರ ಹೊಮ್ಮುವ ನಾದ ಎಂಥವರ ಮನೋ ವೈಕಲ್ಯಗಳನ್ನು ತಕ್ಕ ಮಟ್ಟಿಗೆ ನಿವಾರಿಸುವುದೂ ಅಲ್ಲದೆ ಕಣ್ಣು ಬಿಟ್ಟುಕೊಂಡು ಮಾಡುವ ಅರೆ ಮನಸ್ಸಿನ ಧ್ಯಾನದ ತಳಪಾಯವನ್ನೂ ಹಾಕಬಲ್ಲದು. ನಾನು ಎಲ್ಲಿಯೂ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತಿಲ್ಲ, ಇಲ್ಲಿನವರ ಬಿ. ಮೈನರ್, ಮೇಜರ್ ಸ್ವರಗಳ ಕಲ್ಪನೆ ನನಗಿಲ್ಲ, ನನ್ನಂತಹವರಿಗೇ ಈ ಸಂಗೀತ ಇಷ್ಟೊಂದು ಹಿಡಿಸಬಲ್ಲುದಾದರೆ, ನನ್ನಲ್ಲಿಯೇ ಹಲವಾರು ಅರ್ಥವನ್ನು ಹುಟ್ಟಿಸಬಲ್ಲುದಾದರೆ ಇನ್ನು ಶಾಸ್ತ್ರೀಯವಾಗಿ ಸಂಗೀತ ಕಲಿತು ಅದನ್ನು ತಮ್ಮ ಬದುಕಿನ ಒಂದು ಅಂಗವಾಗಿ ಮಾಡಿಕೊಂಡವರಿಗೆ ಒಂದು ರೀತಿಯ ರಸದೌತಣವೆಂದೇ ಹೇಳಬೇಕು. ನನ್ನ ಪ್ರಕಾರ ಈ ಶಾಸ್ತ್ರೀಯ ಸಂಗೀತ ಕಲಿತು ಅದನ್ನು ತಮ್ಮ ಬದುಕಿನ ಅಂಗವನ್ನಾಗಿ ಒಂದಲ್ಲ ಒಂದು ರೀತಿಯಲ್ಲಿ ಮಾಡಿಕೊಂಡವರೆಲ್ಲ ದೇವರುಗಳು, ಏಕೆಂದರೆ ಸಾಹಿತ್ಯ ಸೇವೆಯಲ್ಲಿ ಅದೇನೇನೋ ಮಾಡಬಹುದು ಆದರೂ ಈ ಸಂಗೀತ ಸೇವೆ ದೊಡ್ಡದು, ನಮ್ಮ ಗುರುಗಳು ಹೇಳಿದ ಹಾಗೆ ಎಷ್ಟು ಮೊಗೆದರೂ ಅದು ಬತ್ತದ ಸಾಗರ, ಅಂತೆಯೇ ಅದರಲ್ಲಿರುವ ಅತಿಲವಣ ನೀರನ್ನು ಕುಡಿದು ಜೀರ್ಣಿಸಿಕೊಂಡು, ಧ್ಯಾನಿಸಿ, ಅದರ ಸಿಂಚನವನ್ನು ಪುನರುಜ್ಜೀವನಗೊಳಿಸುವ ಕ್ರಿಯೆಯೇನು ಕಡಿಮೆಯೇ? ಆದ್ದರಿಂದಲೇ ಈ ಸಂಗೀತಗಾರರನ್ನೆಲ್ಲ ನಾನು ದೇವರಿಗೆ ಹೋಲಿಸೋದು. ನೀವು ಯಾವ ಗುಡಿಗೆ ಹೋಗದಿದ್ದರೇನಂತೆ ಒಂದು ಸಿಂಫನಿಗೋ ಅಥವಾ ಒಂದು ಸಂಗೀತ ಕಛೇರಿಗೋ ಹೋಗಿ ಅದರಲ್ಲಿ ತಲ್ಲೀನರಾಗಿ ಬಂದು ನೋಡಿ, ನೀವು ಹೊಸಬರಾಗಿರುತ್ತೀರಿ.

ಸುಂದರ ಮುಂಜಾವು, ಅಥವಾ ಹಾಗೆ ಶುರುವಾದ ದಿನ ಅರ್ಧ ದಿನದ ಸಫಲತೆಯನ್ನು ತಂದುಕೊಡಬಲ್ಲದು, ಅದು ಮೂಡಿಸುವ ಚೇತನ, ನವಿರಾಗಿ ತೀಡೋ ಗಾಳಿ, ಹಿತವಾದ ಸೂರ್ಯನ ಕಿರಣಗಳು, ಈಗಲೋ ಇನ್ನೊಂದು ಘಳಿಗೆಗೋ ಕಳಚಿಕೊಳ್ಳುತ್ತೇವೆಂದು ಹಠತೊಟ್ಟ ಎಲೆ ಮೇಲಿನ ಹನಿಗಳು, ರಸ್ತೆಗಳನ್ನು ಯಥಾಶಕ್ತಿ ತೀಡುವ ವಾಹನದ ಚಕ್ರಗಳು ಇವುಗಳೆಲ್ಲವೂ ಒಂದು ಧನಾತ್ಮಕ ಪ್ರಕ್ರಿಯೆಗೆ ಚಾಲನೆಯನ್ನು ಕೊಡುತ್ತವೆ. ಹೊರಗಿನ ಸೃಷ್ಟಿ ನೋಡುವವರ ದೃಷ್ಟಿಯಲ್ಲಿದೆ ಎಂದು ಯಾರೋ ಸುಳ್ಳು ಹೇಳಿದ್ದಾರೆ - ಅವರಿಗೇನು ಗೊತ್ತು ಎರಡು ದಿನಗಳಲ್ಲಿ ಅಂದೆಂತೆಂತಹ ಬದಲಾವಣೆಗಳಾಗಬಲ್ಲದು ಎಂದು? ಇವತ್ತಿನಂತಹ ಮುಂಜಾವಿಗೆ ಎಂತಹ ತಲೆನೋವನ್ನು ಶಮನಗೊಳಿಸುವ ಲಾಲಿತ್ಯವಿದೆ, ಸದಾ ಬಾಯಿಗೆ ಬೀಗ ಹಾಕಿಕೊಳ್ಳದಿರುವ ಬಾಯಿಬಡುಕ ರೇಡಿಯೋವನ್ನೂ ಮುಚ್ಚಿಸುವ ತಾಕತ್ತಿದೆ, ನನ್ನಂತಹವರೆಲ್ಲರಲ್ಲಿ ಲವಲವಿಕೆಯನ್ನು ತುಂಬಿ ಈ ದಿನ ಕಾಫಿ ಕುಡಿಯುವುದಕ್ಕೂ ರಜಾ ಹಾಕಿಸುವ ಒಳ್ಳೆ ಬುದ್ಧಿಯನ್ನು ಮೂಡಿಸುವ ಹುನ್ನಾರವಿದೆ, ಎಲ್ಲಕ್ಕಿಂತಲೂ ಮುಖ್ಯವಾಗಿ ನಿಮ್ಮ ನಗೆಯ ಅಂಟಿನಿಂದ ಹುಟ್ಟಬಹುದಾದ ಹಲವಾರು ಮಂದಹಾಸಗಳನ್ನು ಆಳುವ ತಾಕತ್ತಿದೆ.

ಯುದ್ಧ ಭೂಮಿಯಲ್ಲಿ ಕಾದುವವನಿಗೆ ಬೇಕಾಗೋದು ಆತ್ಮವಿಶ್ವಾಸವೋ, ಕೆಟ್ಟ ಧೈರ್ಯವೋ, ಅಥವಾ ಯಾವತ್ತೋ ಸಹಿ ಹಾಕಿಕೊಟ್ಟ ಒಂದಿಷ್ಟು ಪೇಪರುಗುಚ್ಚದ ಒತ್ತಡವೋ, ಅಥವಾ ಮನೆಯಲ್ಲಿ ಹಿಂದೆ ಬರಬಹುದು ಎಂದು ಕಾಯುವ ಕಣ್ಣುಗಳೋ? ಹಾಗೆಯೇ ಇವತ್ತಿನ ಸುಂದರ ಮುಂಜಾವಿನ ಇರವನ್ನು ನಿಜಮಾಡಿ ಅದನ್ನು ಅನುಭವಿಸಲು ಇರಬೇಕಾದುದು ಮನಸ್ಥಿತಿಯೋ, ನೋಡುವವರ ಕಣ್ಣುಗಳೋ ಅಥವಾ ನೋಡಲಿ-ಬಿಡಲಿ ದೈವ ತಂದು ಬಿಸಾಕುವ ಬಡಪಾಯಿಗಳ ಮಿಲಿಯನ್ ಡಾಲರ್ ಉಡುಗೊರೆಯೋ ಯಾರು ಬಲ್ಲವರು? ಪ್ರಶ್ನೆಗಳಿಂದ ಹುಟ್ಟಿದ ಪ್ರಶ್ನೆಗಳಿಗೆ ಉತ್ತರ ಕೊಡಬೇಕೆಂಬುದು ಯಾವ ನ್ಯಾಯ!

Saturday, July 01, 2006

ನನ್ನ ಫೇವರೈಟ್ ಟೀಮ್ ಎರಡೂ ಸೋತ್ ಬಿಟ್ವು!

ಇಂಗ್ಲೆಂಡ್ ಅವರು ಪೆನಾಲ್ಟಿ ಶೂಟ್‌ನಲ್ಲಿ ಹೊರಗಡೆ ಹೋಗಿದ್ ಕೇಳ್‌ಕೊಂಡು ಬ್ರೆಜಿಲ್ ಅವರಾದ್ರೂ ಫ್ರಾನ್ಸ್‌ನ್ನ ಸೋಲುಸ್ತಾರೆ ಅಂತ ನೋಡುದ್ರೆ, ಬಹಳ ಆಶ್ಚರ್ಯ ಆಗೋಯ್ತು, ಬ್ರೆಜಿಲ್ ಅವರು ಸೋತಿದ್ದು ಇವತ್ತು ತಮ್ಮ ಕೆಟ್ಟ ಆಟದಿಂದ ಅಷ್ಟೇ ಅಲ್ಲ, ಫ್ರಾನ್ಸ್‌ನೋರು ತುಂಬಾ ಚೆನ್ನಾಗಿ ಆಡಿದ್ರು, ಮೊದಲಿಂದ್ಲೂ ಬ್ರೆಜಿಲ್ ಮೇಲೆ ಒತ್ತಡ ಹಾಕ್ತಾ ಬಂದಿದ್ದನ್ನ ನೋಡಿದ್ರೆ ಇದು ಹೀಗೇ ಕೊನೆ ಆಗುತ್ತೆ ಅಂತ ನನಗೆ ಆಗ್ಲೇ ಗೊತ್ತಾಗಿ ಹೋಗಿತ್ತು.

ನಾನು ಎಲ್ಲೋ ಹೋದವನು ಎರಡೂವರೆ ಸಮಯಕ್ಕೆ ಸರಿಯಾಗಿ ಬರೋಣ ಅಂತಂದುಕೊಂಡ್ರೆ ಆಗ್ಲೇ ಮೂರು ಘಂಟೆ ಆಗಿಹೋಗಿತ್ತು, ನಮ್ಮ ಮನೆ ಹತ್ರ ಬರ್ತಾ ಬರ್ತಾನೆ ರಸ್ತೆ ಮೇಲೆ ಎಷ್ಟೋ ಜನ ಹಳದಿ ಟಿ ಶರ್ಟು ಹಾಕ್ಕೊಂಡ್ ಬ್ರೆಜಿಲ್ ಟೀಮಿನ ಸಪೋರ್ಟಿಗೆ ಸಿದ್ಧರಾದವರಂತೆ ಗುಂಪು ಕಟ್ಟಿಕೊಂಡು ಮಾತಾಡ್ತಾ ಇದ್ರು. ಇವರೆಲ್ಲ ಇನ್ನೂ ಆಟ ಯಾಕೆ ನೋಡ್ತಾ ಇಲ್ಲಾ, ತಡವೇನಾದ್ರೂ ಆಯ್ತಾ ಎಂದು ಟಿವಿ ಹಾಕ್ತೋದಿನಿಗೆ ಬಹಳ ಆಶ್ಚರ್ಯ ಕಾದಿತ್ತು, ಆಗಲೇ ಆಟ ಶುರುವಾಗಿದ್ದು ಅಲ್ದೇ ಬಿಳಿ ಅಂಗಿ ಗುಂಪು ಹಳದಿ ಅಂಗಿಯೋರನ್ನ ಸೆದೆಬಡೀತಾ ಇತ್ತು. ರೋನಾಲ್ಡೋ, ಆಡ್ರಿಯಾನೋ ಇರೋ ಬ್ರೆಜಿಲ್ ತಂಡವಾ ಇದು ಅನ್ನೋ ಹಾಗಿತ್ತು. ಅವರ ಡಿಫೆನ್ಸ್ ಸ್ವಲ್ಪ ಹೇಳಿಕೊಳ್ಳೋ ಹಾಗಿದ್ದುದರಿಂದ್ಲೇ ಒಂದರವತ್ತು ನಿಮಿಷದವರೆಗಾದ್ರು ಫ್ರಾನ್ಸ್‌ನವರು ಒಂದೂ ಗೋಲೂ ಹೊಡೀಲಿಲ್ಲ. ಆದ್ರೆ, ಫ್ರಾನ್ಸ್‌ನವರು ಬಹಳ ಚೆನ್ನಾಗಿ ಆಡಿದ್ರು, ಎಷ್ಟೊಂದು ಲೆಕ್ಕ ಹಾಕಿ ಆಡಿದ್ರೂ ಅಂದ್ರೆ ಬ್ರೆಜಿಲ್‍ನೋರಿಗೆ ದೊಡ್ಡ ಆಶ್ಚರ್ಯವಾಗೋ ಹಾಗೆ.

ಇಂಗ್ಲೆಂಡ್‌ನೋರು ಪಾಪ, ಕೊನೆಗೂ ಹೊರಗಡೆ ಹೋದ್ರೂ, ಏನ್ ಮಾಡೋಕಾಗುತ್ತೆ, ಬೆಕ್ಕಮ್ ಮೋಡಿ ಇಲ್ಲಿ ನಡೀಲಿಲ್ಲ. ಆದ್ರೂ ಇದ್ದ ಎಲ್ಲಾ ಟೀಮುಗಳಲ್ಲೂ ಒಂಥರಾ ಸಭ್ಯಸ್ಥ ಜನ ಇವರು. ಚೆನ್ನಾಗಿ ಆಟ ಆಡಿ ಈ ವರ್ಷಾನಾದ್ರೂ ಫೈನಲ್‌ಗೆ ಬರ್ತಾರೇನೋ ಅಂತ ಅಂದುಕೊಂಡಿದ್ದೆ. ಅವರ ಆಟ ನಾನು ನೋಡ್ಲಿಲ್ಲ, ಯಾರೋ ಹೀಗಾಯ್ತು ಅಂತ ರಿಸಲ್ಟ್ ಹೇಳಿದ್ರು, ಇವತ್ತು ರಾತ್ರಿ ಇಎಸ್‌ಪಿಎನ್ ನಲ್ಲಿ ಹೈ ಲೈಟ್ ತೋರ್ಸೋವಾಗ ನೋಡ್‌ಬೇಕು ನಿಜವಾಗಿ ಏನಾಯ್ತು ಅಂತ. ಬೆಕ್ಕಮ್ ಎಷ್ಟು ದೊಡ್ಡ ಮನುಷ್ಯ ಅಂತ ತಿಳ್‌ಕೊಳ್ಳೋಕೆ ಮೊನ್ನೆ ಆತ ಯೂಕಡೋರ್ ವಿರುದ್ಧ ಹೊಡೆದ ಒಂದೇ ಒಂದು ಗೋಲ್ ಸಾಕು, ಫ್ರೀ ಕಿಕ್‍ನಲ್ಲಿ ನಿಖರವಾಗಿ ಗೋಲ್‌ಪೋಸ್ಟ್‌ನ ಯಾವುದೋ ಒಂದು ಪಾಯಿಂಟ್‌ಗೆ ಅಷ್ಟು ಒತ್ತಡ-ಜನರ ಮಧ್ಯೆ ತಳ್ಳೋದು ಅಂದ್ರೆ ಸುಮ್ಮನೇನೆ?

ಇವತ್ತು ಫ್ರಾನ್ಸ್‌ನೋರು ಆಡಿದ್ದು ನೋಡಿದ್ರೆ ಉಳಿದೆಲ್ಲಾ ಟೀಮ್‌ಗಳಿಗೂ ಕಸಿವಿಸಿ ಆಗಿರ್ಲೇ ಬೇಕು, ಮುಖ್ಯವಾಗಿ ಜರ್ಮನಿಯೋರಿಗಂತೂ ಎಷ್ಟು ಲೆಕ್ಕ ಹಾಕಿದ್ರೂ ಕಡಿಮೇನೆ. ಫ್ರಾನ್ಸ್‌ನೋರು ಇವತ್ತು ಆಡಿದ ಹಾಗೇ ಆಡಿದ್ರೆ ಕಪ್ ಗೆಲ್ಲೋ ಥರಾ ಕಾಣ್ಸುತ್ತೆ, ನೋಡೋಣ ಏನಾಗುತ್ತೋ!

Friday, June 30, 2006

ಸ್ಯಾಮ್ ಹಾಲ್‌ಗೆ ವಿದಾಯ

ದಿನ ಮುಂಜಾನೆ ೯೬.೩ WQXR ಸ್ಟೇಷನ್‌ನ ಅಲಾರಾಂಗೆ ಕಿವಿಕೊಟ್ಟು ಏಳುತ್ತಿದ್ದಾಗ ಅನೌನ್ಸರ್ ಜೆಫ್ ಸ್ಪುರ್ಜೆನ್ ೨೦೦೬ ರ ಅರ್ಧ ವರ್ಷ ಕಳೆದು ಹೋಗಿದ್ದನ್ನು ಹೇಳುವುದರ ಜೊತೆಗೆ ದಶಕಗಳಿಂದ ರೇಡಿಯೋದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಕೆಲಸ ಮಾಡಿ ಕಳೆದ ಹದಿಮೂರು ವರ್ಷಗಳಿಂದ ನ್ಯೂ ಯಾರ್ಕ್ ಟೈಮ್ಸ್ ಸುದ್ದಿಗಳನ್ನು ಅವರದೇ ಆದ ರೇಡಿಯೋದಲ್ಲಿ ಪ್ರತಿದಿನವು ಓದುತ್ತಿದ್ದ ಸ್ಯಾಮ್ ಹಾಲ್ ಸಹ ಇವತ್ತು ನಿವೃತ್ತನಾಗುತ್ತಾನೆ ಎಂದು ಹೇಳಿದ್ದನ್ನು ಕೇಳಿದ ಮೇಲೆ ಇನ್ನು ಮುಂದೆ ಸ್ಯಾಮ್ ಅನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಬಲವಾಗಿ ಅನ್ನಿಸತೊಡಗಿತು. ಅಲ್ಲದೆ ನಮ್ಮ ಆಫೀಸ್‌ನಲ್ಲೂ ಇದೇ ದಿನ ಬೇಕಾದಷ್ಟು ಜನರು ನನಗೆ ಗೊತ್ತಿರೋ ಹಾಗೆ ನಿವೃತ್ತಿಯನ್ನು ಪಡೆಯುತ್ತಿರುವುದೂ ನೆನಪಿಗೆ ಬಂತು. ಈ ದಿನ ಏನಾದರಾಗಲಿ ಎಷ್ಟು ಸಾಧ್ಯವೋ ಅಷ್ಟು ಜನರಿಗೆ ಫೋನ್ ಮಾಡಿ ವಿದಾಯವನ್ನು ಹೇಳಬೇಕು ಎಂದುಕೊಳ್ಳುತ್ತಲೇ ನಿವೃತ್ತರಾಗುತ್ತಿರುವವರ ಹೆಸರುಗಳನ್ನು ನೆನಪಿಗೆ ತಂದುಕೊಳ್ಳುತ್ತಾ ಹೋದೆ.


ಸ್ಯಾಮ್ ಹಾಲ್, ಆರು ಅಡಿ ಐದು ಅಂಗುಲದ ಎತ್ತರದ ನಿಲುವಿನ ಮನುಷ್ಯ, ಕಳೆದ ಐದು ದಶಕಳಿಂದ ಒಂದಲ್ಲ ಒಂದು ರೇಡಿಯೋ ಸ್ಟೇಷನ್‌ನಲ್ಲಿ ಕೆಲಸ ಮಾಡಿ, ಕಳೆದ ಹದಿಮೂರು ವರ್ಷಗಳಿಂದ ಸಾವಿರಾರು ಜನರಿಗೆ ಸುದ್ದಿ, ಹವಾಮಾನ ಮುಂತಾದ ವರದಿಗಳನ್ನು ಪ್ರತಿದಿನವೂ ನೀಡುತ್ತಾ ನ್ಯೂ ಯಾರ್ಕ್ ಸುತ್ತಮುತ್ತಲಿನಲ್ಲಿ ಒಬ್ಬ ದೊಡ್ಡ ರೇಡಿಯೋ ಸೆಲೆಬ್ರಿಟಿ. ಸ್ಯಾಮ್ ತನ್ನ ನಿಧಾನವಾದ ಧ್ವನಿಯಲ್ಲಿ ಒಂದೊಂದೇ ಸುದ್ದಿಯ ತುಣುಕುಗಳನ್ನು ಹೆಕ್ಕಿ ತನ್ನದೇ ಆದ ಗಾಂಭೀರ್ಯತೆಯಲ್ಲಿ ಅದನ್ನು ಓದುವುದು ನನಗಂತೂ ಇಷ್ಟವಾಗುತ್ತಿತ್ತು. ಕೆಲವು ವರ್ಷಗಳಿಂದ ನಾನು ಪ್ರತಿದಿನವೂ ಸ್ಯಾಮ್ ಧ್ವನಿಯನ್ನು ಕೇಳಿಯೇ ಏಳೋದು. ಅದೇ ದಿನದ ನ್ಯೂ ಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾದ ಸುದ್ದಿಗಳನ್ನು ಎಷ್ಟು ಸಾಧ್ಯವೋ ಅಷ್ಟು ಸಂಕ್ಷಿಪ್ತವಾಗಿ ಹಾಗು ಸೂಕ್ಷ್ಮವಾಗಿ ಶೋತೃಗಳಿಗೆ ಹಂಚುವ ಸಾಮರ್ಥ್ಯ ಒಂದು ಅಸಾಧಾರಣ ಪ್ರತಿಭೆ - ನಾನೂ ಸುದ್ದಿಗಳನ್ನು ಓದಬಲ್ಲೆ, ಅದರಲ್ಲೇನಿದೆ ಮಹಾ ಎಂದುಕೊಂಡರೆ ಅದರಲ್ಲಿ ಆಶ್ಚರ್ಯ ಕಾದಿರುತ್ತದೆ. ಮೊದಲೆಲ್ಲ ಆದರೆ ಧಾರವಾಡ ಆಕಾಶವಾಣಿಯ ತರಂಗಾಂತರಗಳ ಸ್ಪೂರ್ತಿಗೆ ಹಾಸಿಗೆ ಬಿಡುತ್ತಿದ್ದವನಿಗೆ ಇಲ್ಲಿ ಬಂದ ಮೇಲೆ ಸ್ಯಾಮ್ ಹಾಲ್ ಅಂಥವರು ನನ್ನ ರೇಡಿಯೋ ಸಮಯವನ್ನು ತುಂಬಿಕೊಳ್ಳಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಅಲ್ಲಾದರೆ ಪ್ರತಿದಿನವೂ ಮುಂಜಾನೆ ಐದೂ ಐವತ್ತೈದಕ್ಕೆ ಮೋಹನ ರಾಗದಲ್ಲಿ ಆರಂಭವಾಗುವ ಕೊಳಲಿನ ಧ್ವನಿ, ಆರು ಘಂಟೆಗೆಲ್ಲ ಇಂಗ್ಲೀಷ್ ಸುದ್ದಿ, ಮುಂದೆ ಸಂಸ್ಕೃತ ವಾರ್ತೆ, ಭಕ್ತಿಗೀತೆ, ಸುಗಮ ಸಂಗೀತ, ಚಿಂತನ, ಇತ್ಯಾದಿಗಳ ನಂತರ ಏಳೂ ಹದಿನೈದಕ್ಕೆ ಪ್ರದೇಶ ಸಮಾಚಾರ, ಏಳೂ ಮೂವತ್ತೈದಕ್ಕೆ ಕನ್ನಡವಾರ್ತೆಗಳು ಇತ್ಯಾದಿಯಾಗಿ ಹೇಗಾದರೂ ಎಂಟು ಘಂಟೆ ಹೊಡೆದು ಹೋಗುತ್ತಿತ್ತು. ಇಲ್ಲಿ ಅದರ ಬದಲಿಗೆ ಸ್ಯಾಮ್ ಹಾಲ್ ಸುದ್ದಿ ಸಿಗುತ್ತಿತ್ತು, ಜೆಫ್ ಸ್ಪುರ್ಜೆನ್ ಅಥವಾ ಆನ್ನಿ ಬರ್ಗನ್ ಇವರಲ್ಲೊಬ್ಬರ ಮಧುರವಾಣಿಯಲ್ಲಿ ವಿವರಗಳ ಜೊತೆ ಬಿತ್ತರವಾಗುವ ಶಾಸ್ತ್ರೀಯ ಸಂಗೀತ ಜೊತೆಯಾಗಿದೆ.

ಇಂದಿನ ಜೂನ್ ಮೂವತ್ತು ಹಲವರು ನಿವೃತ್ತರಾಗುವ ವರ್ಷವಾಗಿದೆ. ಈ ವರ್ಷವೂ ಸೇರಿ ಮುಂದೆ ಬರುವ ವರ್ಷಗಳು ಒಂದು (ಬೇಬಿ ಬೂಮರ್) ಸಂತತಿಯನ್ನು ನಿವೃತ್ತರನ್ನಾಗಿ ಮಾಡಲಿವೆ. ನಮ್ಮ ಆಫೀಸ್‌ನಲ್ಲಿ ಕಡಿಮೆ ಎಂದರೆ ಇಪ್ಪತ್ತೈದು ವರ್ಷಗಳಿಂದ ಹಿಡಿದು ಮೂವತ್ತೈದು ವರ್ಷಗಳವರೆಗೂ ಕಂಪನಿಯಲ್ಲಿ ಕೆಲಸ ಮಾಡಿ ತಮ್ಮ ಅಗಾಧವಾದ ಅನುಭವಗಳನ್ನು ತಮ್ಮ ಜೊತೆಯಲ್ಲಿ ಕೊಂಡೊಯ್ಯುತ್ತಿರುವ ಕೆಲವರನ್ನು ನೋಡಿದರೆ ಇವರು ಇನ್ನಷ್ಟು ವರ್ಷ ಇಲ್ಲಿಯೇ ದುಡಿಯಬಾರದಿತ್ತೇ ಎನ್ನಿಸಿತು. ನಾವು ಇತ್ತೀಚೆಗೆ ಸೇರಿಕೊಂಡವರಿಗಂತೂ ನನ್ನ ಆಪ್ತವಲಯದಲ್ಲಿ ಎಷ್ಟೋ ಜನ ದಾರಿದೀಪಗಳಾಗಿದ್ದರು, ನನಗೆ ಏನೇನೋ ವಿಷಯಗಳನ್ನು ತಿಳಿಸಿ ಹೇಳಿದ್ದರು, ಇನ್ನು ಇವರೆಲ್ಲರೂ ಇರದೆ ಎದುರಿಗಿರುವ ದಾರಿಯಲ್ಲಿ ಸ್ವಲ್ಪ ಕತ್ತಲು ಹೆಚ್ಚೇ ಎಂದೆನಿಸಿತು.

ಇಲ್ಲಿ ನಿವೃತ್ತರಾಗುವವರ ಪಟ್ಟಿಯನ್ನು ನೆನೆದುಕೊಂಡು ಅಲ್ಲಿಲ್ಲಿ ಹುಡುಕುತ್ತಿರುವಾಗ ನ್ಯಾಯಮೂರ್ತಿ ವೆಂಕಟಾಚಲ ಅವರೂ ಕೂಡ ನಿವೃತ್ತರಾದರು ಎಂದು ಓದಿದೆ. ಲೋಕಾಯುಕ್ತರಾಗಿ ಬಹಳಷ್ಟು ಹುಳುಕನ್ನು ಹೊರಗಡೆ ತೋರಿಸಿಕೊಟ್ಟ ಇವರು ಕೊನೆಯಲ್ಲಿ ಹೇಳಿದ ಮಾತುಗಳಲ್ಲಿ ಒಂದು ಅಂಶ ಬಹಳ ಮಾರ್ಮಿಕವಾಗಿತ್ತು, "ನನ್ನ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳನ್ನು (ಎಸ್. ಎಂ. ಕೃಷ್ಣ, ಧರಂ ಸಿಂಗ್ ಮತ್ತು ಕುಮಾರ ಸ್ವಾಮಿ) ನೋಡಿದ್ದೇನೆ. ಆದರೆ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕೆಂಬ ಆಸಕ್ತಿ ಯಾರಲ್ಲೂ ಕಾಣಿಸಿಲ್ಲ." ಎಂಬುದರಲ್ಲೇ ಅವರ ಅನುಭವದ ಸಾರವಿದೆ. ಯಾರೇ ಮುಖ್ಯಮಂತ್ರಿಗಳಾಗಲಿ, ಮೇಲಿನವರಿಗೆ ಬೇಕಾದ ಧೈರ್ಯ, ದಿಟ್ಟತನವಿದ್ದರೆ ಎಂತಹ ಭ್ರಷ್ಟಾಚಾರಕ್ಕಾದರೂ ಕಡಿವಾಣ ಹಾಕಬಹುದು, ಆದರೆ ಅದು ಮೇಲಿನವರಿಗೇ ನಗಣ್ಯವಾದಾಗ ಕೆಳಗಿನವರಿಗೆ ಏನೇ ಮಾಡಿದರೂ ಅವರಿಗೆ ತಪ್ಪಿಸಿಕೊಳ್ಳುವ ಉಪಾಯಗಳು ಹಲವಾರು ಇರೋದರಿಂದ ಲೋಕಾಯುಕ್ತರ ಕೈಯಲ್ಲಿ ಹೆಚ್ಚೇನನ್ನು ಸಾಧಿಸಲು ಸಾಧ್ಯವಾಗದೇ ಹೋಗಬಹುದು. ವೆಂಕಟಾಚಲ ಅವರ ಅವಧಿಯನ್ನು ವಿಸ್ತರಿಸಲು ಅಥವಾ ಅವರಿಗೆ ಹೆಚ್ಚಿನ ಅಧಿಕಾರವನ್ನು ಕೊಡುವುದರ ಬಗ್ಗೆ ಚರ್ಚೆ ನಡೆದಿದ್ದರೂ ಇನ್ನೂ ಯಾವುದೂ ತೀರ್ಮಾನಗೊಂಡಿಲ್ಲವಾದ್ದರಿಂದ ವೆಂಕಟಾಚಲ ಅವರಿಗೆ ಕನ್ನಡಿಗರು ವಿದಾಯ ಹೇಳಲೇಬೇಕಾಗಿ ಬಂದಿದೆ. ಸುದ್ದಿಗಳಲ್ಲಿ ಇವರನ್ನೂ ನಾನು ಬಹುವಾಗಿ ಮಿಸ್ ಮಾಡಿಕೊಳ್ಳುತ್ತೇನೆ.

ನಮ್ಮ ತಲೆಮಾರುಗಳಲ್ಲಿ ಆರೇಳು ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಕೆಲಸ ಮಾಡಿದರೆ ಅದು ದೊಡ್ಡ ವಿಷಯವಾಗುತ್ತದೆ. ಅದೇ ನಮ್ಮ ಹಿಂದಿನ ತಲೆಮಾರುಗಳಲ್ಲಿ ಒಂದು ಬಗೆಯ ಲಾಯಲ್ಟಿ ಇತ್ತು, ನಾನು ಕಂಡ ಹಾಗೆ ಹೆಚ್ಚಿನವರು ನಿವೃತ್ತರಾದವರು ಒಂದೇ ಕಡೆ/ಕಂಪನಿಯಲ್ಲಿ ಕೆಲಸ ಮಾಡಿದವರು. ನಾನು ಮೊದಮೊದಲು ಎರಡು ವರ್ಷಕ್ಕೊಮ್ಮೆ ಕೆಲಸ ಬದಲಾಯಿಸುವುದನ್ನು ಇಂಥವರಿಗೆ ವಿವರಿಸುವಾಗ ಅವರ ಮುಖದಲ್ಲಿ ಆಶ್ಚರ್ಯ ಹಾಗೂ ದುಃಖವನ್ನು ಗುರುತಿಸುತ್ತಿದ್ದೆ. ಆದರೆ ಐದಾರು ವರ್ಷ ಕೆಲಸ ಮಾಡಿದ ನನ್ನಂತಹವರೇ ಈ ಕಂಪನಿಯಲ್ಲಿ ಬಹಳಷ್ಟು ಸೀನಿಯರ್ ಆಗಿ ಕಂಡಿದ್ದೂ ಇದೆ. ನನ್ನ ಪ್ರಕಾರ ಒಂದು ಕಂಪನಿಯಲ್ಲಿ ಐದು ವರ್ಷಗಳಿಗಿಂತ ಹೆಚ್ಚಿದ್ದರೆ ನಿಧಾನವಾಗಿ ಕಂಪನಿಯ ಸಂಸ್ಕೃತಿಯೇ ನಮ್ಮ ಸಂಸ್ಕೃತಿಯ ಒಂದು ಅಂಗವಾಗಿ ಹೋಗುತ್ತದೆ. ಕೊನೆಯಲ್ಲಿ ಹತ್ತು-ಇಪ್ಪತ್ತು-ಮುವತ್ತು ವರ್ಷಗಳನ್ನು ಕಳೆದ ಮೇಲೆ ಹೆಚ್ಚೂ ಕಡಿಮೆ ಒಂದಲ್ಲ ಒಂದು ಅನುಭವದಲ್ಲಿ ನಮ್ಮೆಲ್ಲ ತಿಳುವಳಿಕೆಯನ್ನೂ ಕಂಪನಿಯ ವ್ಯವಹಾರ ತುಂಬಿಕೊಂಡುಬಿಡುತ್ತದೆ. ಆದ್ದರಿಂದಲೇ ನಮ್ಮ ತಲೆಮಾರಿನಲ್ಲಿ ಯಾರಿಗಾದರೂ ತಾವು ಮಾಡುತ್ತಿದ್ದ ಕೆಲಸ ಇಷ್ಟವಿಲ್ಲವೆಂದಾದರೆ ತಕ್ಷಣ ಅದನ್ನು ಬದಲಾಯಿಸಿಕೊಳ್ಳುವಂತೆ ಹೇಳುತ್ತೇನೆ, ಅದನ್ನು ಬಿಟ್ಟು, ಒಂದೈದು ವರ್ಷಗಳಾದ ಮೇಲೆ ನೋಡೋಣ ಎಂದರೆ, ಅಲ್ಲಿಗೆ ಕಥೆ ಮುಗಿದಂತೆಯೇ.

ಸೋಮವಾರದಿಂದ ಮುಂಜಾನೆ ಸ್ಯಾಮ್ ಹಾಲ್ ಧ್ವನಿ ಕೇಳೋದಿಲ್ಲ, ಅವನ ಬದಲಿಗೆ ಮತ್ಯಾರೋ ಬರುತ್ತಾರೆ, ನಿಧಾನವಾಗಿ ಅವರ ಧ್ವನಿಗೆ ಹೊಂದಿಕೊಳ್ಳುತ್ತೇನೆ. ಆದರೂ, ೨೦೦೪ರಲ್ಲಿ ಹತ್ತುವರ್ಷಗಳ ನಂತರ ಮಾರ್ಕೆಟ್ ಪ್ಲೇಸ್‌ ಆವೃತ್ತಿಯಿಂದ ನಿವೃತ್ತನಾದ ಡೇವಿಡ್ ಬ್ರಾಂಕಾಚಿಯೋ ಧ್ವನಿ, ಸ್ಪುಟತೆ, ಕಾರ್ಯಕ್ರಮ ವೈವಿಧ್ಯತೆ, ಪ್ರಶ್ನೆಗಳನ್ನು ಕೇಳುವ-ಉತ್ತರಿಸುವ ಹುರುಪು ಇವುಗಳನ್ನೆಲ್ಲ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎನ್ನಿಸುತ್ತಿರುವುದರಿಂದ, ಸ್ಯಾಮ್ ಹಾಲ್ ಬಿಟ್ಟು ಹೋದ ಜಾಗೆಯನ್ನು ನನ್ನ ಮನಸ್ಸಿನಲ್ಲಿ ಯಾರೂ ತುಂಬಲಾರರು ಎಂದೇ ಹೇಳಬೇಕು. ಜೂನ್ ಇಪ್ಪತ್ತೊಂದರಂದು ಹೆಚ್ಚು ಹೊತ್ತು ಹಗಲಿರುವ ದಿನವೆಂದು ನೆನಪಿಗೆ ತಂದುಕೊಟ್ಟ ಕೆಲವೇ ದಿನಗಳಲ್ಲಿ ಹೆಚ್ಚು ಜನರು ನಿವೃತ್ತರಾಗುವುದೇಕೆ ಎನ್ನುವುದು ಇನ್ನೂ ನಿಗೂಢವಾಗುತ್ತಾ ಹೋಗುತ್ತದೆ.

Thursday, June 29, 2006

ಮುಳ್ಳನ್ನು ಮುಳ್ಳಿಂದಲೇ ತೆಗೆಯುವ ದ್ವಂದ್ವ

ಇರಾಕ್, ಅಫಘಾನಿಸ್ತಾನ ಯುದ್ಧದ ಹಿನ್ನೆಲೆಯಲ್ಲಿ ಬುಷ್ ಅಡ್ಮಿನಿಷ್ಟ್ರೇಷನ್ ಹಿಂಸೆಯ ಬಳಕೆ ಮಾಡಿದ್ದನ್ನು ಹಲವಾರು ಮಾಧ್ಯಮಗಳಲ್ಲಿ ಚರ್ಚಿಸಲಾಗುತ್ತಿದೆ. ಹಿಂಸೆಯನ್ನು ಚೆನ್ನಾಗಿ ಬಲ್ಲವರ ಪ್ರಕಾರ ಹೀಗೆ ಹಿಡಿದ ಯುದ್ಧ ಖೈದಿಗಳನ್ನೋ, ಭಯೋತ್ಪಾದಕರನ್ನೋ ಅತಿಯಾಗಿ ಹಿಂಸಿಸಿ ಪಡೆದ ಮಾಹಿತಿಗಳು ನಿಖರವಾಗೇನೂ ಇರೋದಿಲ್ಲ, ಅತಿಯಾದ ಹಿಂಸೆಯನ್ನು ತಪ್ಪಿಸಿಕೊಳ್ಳಲು ಕೆಲವೊಮ್ಮೆ ಶಿಕ್ಷೆ ಅನುಭವಿಸುತ್ತಿರುವವರು ಸುಳ್ಳು ಮಾಹಿತಿಗಳನ್ನು ಒದಗಿಸಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವುದನ್ನೂ ಹಲವಾರು ಉದಾಹರಣೆಗಳ ಮೂಲಕ ತೋರಿಸಿದ್ದನ್ನು ಅಲ್ಲಲ್ಲಿ ಇತ್ತೀಚೆಗೆ ಓದಿದೆ, ರೇಡಿಯೋದಲ್ಲಿ ಕೇಳಿದೆ. 'ಶತ್ರು' ನಾಶಕ್ಕೆ ತಮ್ಮ ಜೀವದ ಹಂಗನ್ನು ತೊರೆದು ಸೆಣೆಸುವ ಭಯೋತ್ಪಾದಕರನ್ನು ಜೀವಂತ ಹಿಡಿದರೂ ಅವರಿಂದ ನಿಖರವಾದ ಮಾಹಿತಿಯನ್ನು ಹೊರಪಡಿಸುವುದಾದರೂ ಹೇಗೆ? ಹಿಂಸೆಯನ್ನು ನೀಡದೇ ಹೋದರೆ ಇನ್ನು ಯಾವ ಪೆಟ್ಟಿಗೆ ಬಗ್ಗುತ್ತಾರೆ ಎಂದೆಲ್ಲಾ ಯೋಚಿಸುತ್ತಾ ಹೋದಾಗ ಅವರ ಮನ ಒಲಿಸದೇ, ಅವರ ಜೊತೆಯಲ್ಲಿ ಹೊಂದಿಕೊಳ್ಳದೇ ಹೋದರೆ ಯಾವ ಪ್ರಯೋಜನವೂ ಇಲ್ಲ ಎಂಬ ಮಾತುಗಳು ಗಟ್ಟಿಯಾಗಿ ಕೇಳಿಬಂದವು.

ಕೆಲವರಿಗೆ ಸಾವು ಪವಿತ್ರವಾದದ್ದು, ಅತಿ ಹೆಚ್ಚಿನದು, ಅದು ಅವರ ಮೋಕ್ಷ ಸಾಧನೆಯೂ ಹೌದು, ಅವರಿಗೆ ಬೇಕಾಗಿಯೋ ಬೇಡವಾಗಿಯೋ ಭಯೋತ್ಪಾದಕರಾಗಲೀ ಅಥವಾ ಒಂದು ದೇಶದ ಸೈನಿಕರಾಗಲಿ ಯುದ್ಧದಲ್ಲಿ ತೊಡಗಿದಾಗ ತಮ್ಮ ನಿತ್ಯ ಜೀವನದಲ್ಲಿ ಒಂದಲ್ಲ ಒಂದು ರೀತಿಯಿಂದ ಸಾವನ್ನು ಎದುರಿಸಿಯೇ ಇರುತ್ತಾರೆ. ಒಬ್ಬ ಸೈನಿಕನಿಗೆ ಸಿಗಬಹುದಾದ ಗೌರವ ಅದೇ ಗಡಿಯೊಳಗೆ ನುಸುಳಿ ಬರುವ ಭಯೋತ್ಪಾದಕನಿಗೆ ದೊರೆಯುವುದಿಲ್ಲ. ಯಾರೋ ತಲೆಸವರಿದ ಕಾರಣಕ್ಕೆ ಒಬ್ಬ ಭಯೋತ್ಪಾದಕ ಹುಟ್ಟಿಕೊಂಡಿದ್ದರೆ, ಒಬ್ಬ ಸೈನಿಕನಾಗಿ ಸೇರಿದವನಿಗೆ ಹೆಚ್ಚಿನ ಧೇಯೋದ್ಯೇಶಗಳಿರಬಹುದು. ಈ ರೀತಿಯ ಚೌಕಟ್ಟಿನಲ್ಲಿ ಒಂದು ವ್ಯವಸ್ಥಿತ ನಿಲುವಿನ ಸೈನಿಕರಿಗೂ, ಬೇಕಾಬಿಟ್ಟಿಯಾಗಿರೋ ಭಯೋತ್ಪಾದಕರಿಗೂ ಚಕಮುಖಿ ನಡೆದಾಗ ಅಲ್ಲಿ ಆಗಬಹುದಾದ ಸಾವುನೋವಿನ ಪರಿಣಾಮ ಊಹಿಸಿಕೊಳ್ಳಲೂ ಭಯಾನಕವಾಗಿರುತ್ತದೆ. ಒಬ್ಬ ಸೈನಿಕನ ನಿಲುವಿನಲ್ಲಿ ಯೋಚಿಸಿದಾಗ ತನ್ನ ಕಡೆಯವರಲ್ಲಿ, ಅಥವಾ ತನ್ನ ಗುಂಪಿನವರಲ್ಲಿ ಯಾರಾದಾರೂ ತೀರಿಕೊಂಡರೆ ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಒಬ್ಬ ಸೈನಿಕ ತನ್ನ ಮಾಮಾಲೀ ಕಕ್ಷೆಗಿಂತ ಹೊರಗೆ ನಿಂತು ವೈರಿಗಳ ಮೇಲೆ ಆಕ್ರಮಣ ಮಾಡಿದ್ದು ಬಹಿರಂಗವಾಗಿದೆ. ಅದೇ ರೀತಿ ಭಯೋತ್ಪಾದಕರಿಗೂ ಚಕಮುಖಿಯಲ್ಲಿ ತಮ್ಮವರನ್ನು ಕಳೆದುಕೊಂಡು ಅದಕ್ಕೆ ತಕ್ಕನಾದ ಶಾಸ್ತಿ ಮಾಡೇ ಮಾಡುತ್ತೇವೆಂದು ಪಣತೊಟ್ಟ ಪ್ರಕರಣಗಳೂ, ಅವುಗಳಿಂದಾದ ಪರಿಣಾಮಗಳನ್ನೂ ಬೇಕಾದಷ್ಟು ಕಡೆ ತೋರಿಸಲಾಗಿದೆ. ಇದನ್ನು ಬರೆಯುತ್ತಿರುವ ಉದ್ದೇಶ ಇಷ್ಟೇ - ಒಂದು ಕ್ಲಾಸ್ ರೂಮ್ ಸನ್ನಿವೇಶದಲ್ಲಿ ಬಿಡಿಸಿ ಹೇಳಬಹುದಾದ ಹಿಂಸೆಯ ವ್ಯಾಪ್ತಿ ಸೆರೆಸಿಕ್ಕ ಗಾಯಾಳುಗಳನ್ನು ನೋಡಿಕೊಳ್ಳುವುದಕ್ಕೆ ಸೀಮಿತವೆಂದೆನಿಸಿದರೆ ನಿಜವಾದ ಯುದ್ಧ ಭೂಮಿಯಲ್ಲಿ ನಡೆಯುವ ಆಚರಣೆಗಳೇ ಬೇರೆ, ಅಲ್ಲಿ ಎಲ್ಲವನ್ನೂ ಸಮಯವೇ ನಿರ್ಧರಿಸಬಲ್ಲದು.

'ಕೊಂಕಣಿ ಎಮ್ಮೆಗೆ ಕೊಡತಿ ಪೆಟ್ಟು' ಎಂದು ದಪ್ಪ ಚರ್ಮದವರಿಗೆ ಅವರ ಮಟ್ಟದ ಟ್ರೀಟ್‌ಮೆಂಟ್ ಕೊಡಬೇಕೆನ್ನುವುದು ಹಲವರ ಅಭಿಮತ, ಆದರೆ ಅದಕ್ಕೆ ವ್ಯತಿರಿಕ್ತವಾಗಿ 'ಹಿಂಸೆಯಿಂದ ಏನನ್ನೂ ಗೆಲ್ಲೋದಕ್ಕೆ ಸಾಧ್ಯವಿಲ್ಲ' ಎನ್ನುವ ಅನುಭವಿಗಳ ಮಾತೂ ಕೇಳಿಬರುತ್ತದೆ. ಅಮೇರಿಕದ ಸೈನಿಕರಿಗೆ ಒಂದಲ್ಲ ಒಂದು ರೀತಿಯಲ್ಲಿ ಸೆರೆಸಿಕ್ಕ ಭಯೋತ್ಪಾದಕರಲ್ಲಿ ಕೆಲವರಂತೂ ನಿಜವಾದ ಹಾರ್ಡ್‌ಕೋರ್ ಉಗ್ರಗಾಮಿಗಳು, ಅಂತಹವರೊಡನೆ ಒಪ್ಪಂದ ಮಾಡಿಕೊಳ್ಳಲಾಗುವುದೇ? ಒಂದು ವೇಳೆ ಒಪ್ಪಂದ ಮಾಡಿಕೊಂಡರೂ ಅವರನ್ನು ನಂಬುವುದಾದರೂ ಹೇಗೆ? ಸೆರೆಸಿಕ್ಕ ಉಗ್ರಗಾಮಿಗಳಿಂದ ಆದಷ್ಟು ಬೇಗ 'ಒಳ್ಳೆಯ' ಮಾಹಿತಿಯನ್ನು ಪಡೆದುಕೊಂಡು ಮುಂದಾಗುವ ಅನಾಹುತಗಳನ್ನು ತಪ್ಪಿಸುವುದು, ಕೆಟ್ಟ ಭೀಜದ ಮೂಲವನ್ನು ಕಂಡುಹಿಡಿದು ಹೊಸಕಿ ಹಾಕುವುದು ಮುಂತಾದ ಮಹಾನ್ ಯೋಚನೆಗಳಿರುತ್ತವೆ, ಇವುಗಳಿಗೆಲ್ಲ 'ಹಿಂಸೆ'ಯಿಂದ ಪಡೆಯಬಹುದಾದ ಉತ್ತರಗಳಲ್ಲದಿದ್ದರೆ ಇನ್ನೇನು ತಾನೇ ಉತ್ತರವಾಗಬಲ್ಲದು?

ನಾನು ಹಿಂಸೆಯನ್ನು ಖಂಡಿತವಾಗಿ ಒಪ್ಪುವವನಲ್ಲವಾದರೂ 'ಮುಳ್ಳನ್ನು ಮುಳ್ಳಿಂದಲೇ ತೆಗೆಯಬೇಕು' ಎನ್ನುವ ಮಾತಿನಲ್ಲಿ ನಂಬಿಕೆ ಇಟ್ಟವನು. ಒಂದು ಯುದ್ಧದ ಸನ್ನಿವೇಶದಲ್ಲಿ ಎಲ್ಲವೂ ಸರಿಸಮವಾಗುವಂತೆ ಕೆಲವೂಮೆ ಅತಿ ಅನ್ನಿಸುವಷ್ಟು, ಹಲವಾರು ಬಾರಿ ಹೇಸಿಗೆಯಾಗುವಷ್ಟು ಹಿಂಸೆ ನೀಡಿ - ಅಭುಗ್ರೈಬ್ ಜೈಲು, ಮತ್ತಿತರ ಹಿಂಸೆಗೆ ಸಂಬಂಧಿಸಿದ ಕಥೆಗಳಲ್ಲಿ ಮುಖ್ಯ ಪಾತ್ರವನ್ನು ವಹಿಸಿದ ಬುಷ್ ಅಡ್ಮಿನಿಷ್ಟ್ರೇಷನ್‌ನವರು ಇನ್ನೇನು ತಾನೆ ಮಾಡಲಾಗುತ್ತಿತ್ತು? ಈ ಹಿಂಸೆಯ ತಳ ಹುಡುಕುತ್ತಾ ಹೋದಂತೆಲ್ಲಾ ಬುಡವಿರದ ಬಾವಿಯಾಗೋದಂತೂ ನಿಜ.

Tuesday, June 27, 2006

ಸ್ವಲ್ಪ ತಡವಾಗಿಯಾದರೂ ಬಂದ ಬುದ್ಧಿ

ನನಗೆ ಮೊದಲೆಲ್ಲ ಮಕ್ಕಳು ಅಂದ್ರೆ ಅಷ್ಟಕಷ್ಟೇ - ಒಂಥರಾ ಸೆಮಿ-ಅವಿಭಕ್ತ ಕುಟುಂಬವಾದ ನಮ್ಮನೆಯಲ್ಲಿ ಮಕ್ಕಳಿಗೇನೂ ಕಡಿಮೆ ಇರಲಿಲ್ಲ, ಯಾವಾಗ ನೋಡಿದ್ರೂ ತೊಟ್ಟಿಲಲ್ಲಿ ಒಬ್ಬರಲ್ಲ ಒಬ್ರು ಮಲಗೋ ಪರಿಸ್ಥಿತಿ ಇತ್ತು, ಆದರೆ ಈ ಮಕ್ಕಳು ಮಾಡೋ ಗದ್ದಲವನ್ನು ಕಂಡರೆ ನನಗೆ ಸುತಾರಾಂ ಆಗುತ್ತಿರಲಿಲ್ಲ. ಎಷ್ಟೋ ಸಾರಿ ಅವರನ್ನು ದುರುಗುಟ್ಟಿ ನೋಡಿ ಹೆದರಿಸಿದ್ದಿದೆ, 'ಥೂ, ಯಾವಾಗ್ ನೋಡಿದ್ರೂ ಅಳ್ತಾನೆ ಇರುತ್ತೆ' ಎಂದು ಬೈದಿದ್ದಿದೆ, ಕೆಲವೊಮ್ಮೆ ಕೈ ಮಾಡಿದ್ದೂ ಇದೆ. ನನ್ನ ಅಣ್ಣನ ಮಗ ನನ್ನ ಪ್ಯಾಂಟಿನ ಮೇಲೆ ಅಚಾನಕ್ಕಾಗಿ ಒಂದೂ-ಎರಡೂ ಮಾಡಿದನೆಂದು ನನ್ನ ಸಹನೆಯ ಪೆಟ್ಟಿಗೆಯ ಮುಚ್ಚುಳ ಹಾರಿ ಹೋಗಿ ಎಲ್ಲರ ಎದುರಿಗೇ ಅವನ ಬೆನ್ನಿಗೆ ರಪ್ಪನೆ ಬಾರಿಸುವಷ್ಟು ಸಿಟ್ಟು ಬಂದಿದ್ದು ಇವತ್ತಿಗೂ ನನ್ನ ಕಣ್ಣ ಮುಂದಿದೆ - ನಾನು ಕೈ ಮುಂದು ಮಾಡೋ ಪ್ರವೃತ್ತಿಯವನು ಅಲ್ಲದಿದ್ದರೂ ಅದೇನೋ ಕೆಲವೊಂದು ಸಾರಿ ಕೈ-ಕಾಲುಗಳು ಬಹಳ ಚುರುಕಾಗಿಬಿಡುತ್ತವೆ, ಒಂಥರಾ ತೋಟಕ್ಕೆ ಹೊಕ್ಕವರು ಪಟಪಟನೆ ಬಾರಿಸಿ ಸೊಳ್ಳೆಗಳನ್ನು ಹೊಡೆಯೋ ಹಾಗೆ ಆ ಸಮಯದಲ್ಲಿ ಬೇರೆ ಯಾವುದೇ ಪ್ರಪಂಚ ಜ್ಞಾನವೂ ಕೆಲಸ ಮಾಡುವುದಿಲ್ಲ ಎಂದರೇನೆ ಸರಿ.

ನನ್ನ ಅಕ್ಕ-ತಂಗಿಯರು 'ಈ ಥರಾ ಎಲ್ಲ ಮಕ್ಳಿಗೂ ಬಯ್ಯೋನು, ಮುಂದೆ ನಿನ್ ಮಕ್ಳನ್ನು ಹೇಗೆ ನೋಡಿಕೋತೀಯೋ, ನಾವೂ ನೋಡ್ತೀವಿ!' ಎಂದು ಯಾವತ್ತೂ ತೆರೆದೇ ಇರೋ ಈ ಒಂದು ಸಾಲನ್ನು ಅವಾಗಾವಾಗ ಹೇಳ್ತಾನೇ ಇರೋರು. ನಾನು ಮಕ್ಕಳ ಮೇಲೆ ಯಾವತ್ತಾದರೂ ಕೈ ಮಾಡಿದ್ದಿದ್ರೆ ಅದನ್ನು ದೊಡ್ಡ ಅಂಧಕಾರ ಅಂತಲೇ ಒಪ್ಪಿಕೊಂಡು ಬಿಡ್ತೀನಿ, ಮೊನ್ನೆ ರೇಡಿಯೋದಲ್ಲಿ ಯಾವುದೋ ಒಂದು ಸಂದರ್ಶನದ ತುಣುಕನ್ನು ನಾನು ಕೇಳುತ್ತಿದ್ದಾಗ ತನ್ನ ೧೮ ತಿಂಗಳ ವಯಸ್ಸಿನ ಅಕ್ಕನ ಮಗನ ಮೇಲೆ ಆ ಹುಡುಗನ ಅಪ್ಪ ಕೈ ಮಾಡುತ್ತಾನೆ ಅನ್ನೋದನ್ನು ಒಬ್ಬ ಮನೋವೈದ್ಯರು ಚರ್ಚಿಸಿ ಪ್ರಶ್ನೆ ಕೇಳಿದಾಕೆಗೆ ಸಮಾಧಾನ ಹೇಳುತ್ತಿದ್ದರು. ಮಕ್ಕಳು, ಅವರು ಯಾವ ವಯಸ್ಸಿನವರಾದರೂ ಇರಲಿ, ಅವರು ಆ ವಯಸ್ಸಿಗೆ ತಕ್ಕಂತೆ ವರ್ತಿಸಬೇಕೇ ವಿನಾ ದೊಡ್ಡವರ ನಿರೀಕ್ಷೆಗೆ ತಕ್ಕಂತೆ ಇದ್ದರೆ ಅವರಲ್ಲಿ ಏನೋ ತಪ್ಪಿದೆಯೆಂತಲೇ ಅರ್ಥವಂತೆ. ಮಕ್ಕಳಿಗೆ ಹೊಡೆಯೋದರಿಂದಾಗಲಿ, ಗದರಿಸೋದರಿಂದಾಗಲೀ ಯಾವುದೇ ಪ್ರಯೋಜನವಿಲ್ಲ, ಅವರಿಗೆ ತಿಳಿಸಬೇಕಾದ ರೀತಿಯಲ್ಲಿ ತಿಳಿಸಿದರೆ ಮಾತ್ರ ಅದು ಪರಿಣಾಮಕಾರಿಯಾಗಿರುತ್ತದೆ, ಮಿಕ್ಕೆಲ್ಲ ರೀತಿಯೂ ಒಂದು ಥರದ ಹೆದರಿಕೆಯ ಪರಿಭಾಷೆಯನ್ನು ಹುಟ್ಟಿಸಿ ಮಕ್ಕಳು 'ವಿಕಾರ'ರಾಗುತ್ತಾರೆ ಅನ್ನೋದು ಅದರ ಸಾರವಾಗಿತ್ತು. ಅಲ್ಲದೇ ಈ ಹಿಂದೆಯೇ ಎಲ್ಲೋ ಒಂದು ಕಡೆ ನಮ್ಮ ಕಡೆ 'ಗುಮ್ಮನ ಹೆದರಿಕೆ'ಯನ್ನೊಡ್ಡಿ ಮಕ್ಕಳನ್ನು ಅವರಿಗಿಷ್ಟವಿರದ ಕೆಲಸದಲ್ಲಿ ತೊಡಗಿಸೋದು ತಪ್ಪು ಎಂಬುದಾಗಿ ಕೇಳಿದ್ದೆ. ನಾನು ಇವತ್ತಿಗೂ ನೋಡೋ ಹಾಗೆ ನಮ್ಮೂರುಗಳಲ್ಲಿ 'ಗುಮ್ಮ ಬರ್ತಾನೆ' , ಅಥವಾ 'ಪೋಲೀಸ್ ಬಂದು ಹಿಡಕೊಂಡ್ ಹೋಗ್ತಾನೆ' ಎಂದು ತಾಯಂದಿರು ಗದರಿಸಿದ ಕೂಡಲೇ ಮಕ್ಕಳು ಸೆರಗಿನಲ್ಲಿ ಮುಖ ಮುಚ್ಚಿಕೊಳ್ಳುವುದನ್ನು ಕಾಣಬಹುದು.

ಅಮೇರಿಕನ್ ಮಕ್ಕಳಿಗೆ 'ಹಾಯ್' ಎಂದರೆ ಅವು ಅದಕ್ಕೆ ಅಷ್ಟೇ ಸಹಜವಾಗಿ 'ಹಾಯ್' ಎನ್ನುವುದನ್ನೂ, ಅಮೇರಿಕನ್ ಇಂಡಿಯನ್ ಮಕ್ಕಳಿಗೆ 'ಹಾಯ್' ಎಂದರೆ ತಮ್ಮ ತಂದೆ-ತಾಯಿಯರನ್ನು ಹುಡುಕಿಕೊಂಡು ಗಾಭರಿ ಪ್ರಕಟಿಸುವುದನ್ನು ನಾನು ಬೇಕಾದಷ್ಟು ಸಾರಿ ನೋಡಿದ್ದೇನೆ. ಮಕ್ಕಳೇಕೆ, ದೊಡ್ಡವರಿಗೂ ಸಹ ಬೇರೆಯವರೊಡನೆ ಮನಬಿಚ್ಚಿ ನಿರರ್ಗಳವಾಗಿ ಮಾತನಾಡುವುದು (ಕೊನೇಪಕ್ಷ) ನನ್ನ ತಲೆಮಾರಿನವರಿಗೆ ಬರಲೇ ಇಲ್ಲ ಎಂದು ಹೇಳಬಹುದೇನೋ? ನಾನು ಭಾಗವಹಿಸುವ ಕಾನ್‌ಫರೆನ್ಸ್ ಕಾಲ್‌ಗಳಲ್ಲಿ ಇವತ್ತೂ-ನಿನ್ನೆ ಕಂಪನಿ ಅಥವಾ ಪ್ರಾಜೆಕ್ಟ್ ಸೇರಿದ ಅಮೇರಿಕನ್ನರು ಲಂಗೂ-ಲಗಾಮಿಲ್ಲದೆ ಜೋರಾಗಿ ಮಾತನಾಡಿ ಭಾಗವಹಿಸುವುದು ಕಂಡುಬಂದರೆ, ನಮ್ಮ ಆತ್ಮವಿಶ್ವಾಸಕ್ಕೆ ಅದ್ಯಾವುದೋ ಅವ್ಯಕ್ತ ಕಡಿವಾಣ ಬಿದ್ದುಬಿಟ್ಟು, 'ಐ ಥಿಂಕ್' ಎಂದು ಆರಂಭವಾಗುವ ಹಲವಾರು ವಾಕ್ಯಗಳು ಎಷ್ಟೋ ಬಾರಿ ಕೊನೆಯಾಗದೇ 'ಮಂಬಲ್' ಆಗಿಬಿಡುವುದನ್ನು ನಾನು ಅಲ್ಲಲ್ಲಿ ನೋಡಿದ್ದೇನೆ. ನಮ್ಮ ಇಂಗ್ಲೀಷ್ ಚೆನ್ನಾಗಿಲ್ಲ, ನಮಗೆ ಇಂಗ್ಲೀಷ್ ಬರೋದಿಲ್ಲ ಅನ್ನೋದು ಕಾರಣವಲ್ಲ - ನಮ್ಮ ಎದುರಿನವರು ಅದೇ ವಿಷಯದ ಮೇಲೆ ಅಥಾರಿಟಿಯಿಂದ ಮಾತನಾಡಿದಾಗ ನಮಗೆ ಒಳಗೊಳಗೇ 'ಹೌದೌದು' ಎನ್ನಿಸತ್ತೆದೆಯೇ ವಿನಾ ನಾವೂ ಹಾಗೆ ಮಾತನಾಡಬಹುದಿತ್ತಲ್ಲ, ಏಕೆ ಮಾತನಾಡಲಿಲ್ಲ - ಎನ್ನುವ ಪ್ರಶ್ನೆಗಳಿಗೆ ಉತ್ತರಗಳು ಅಷ್ಟು ಸುಲಭವಾಗಿ ಕಂಡುಬರುವುದಿಲ್ಲ. ನಾನು ಅತಿಯಾಗಿ ಜೆನರಲೈಜೇಷನ್ ಮಾಡಿ ಹೇಳುತ್ತಿರಬಹುದು ಅಥವಾ ಇದು ನನ್ನ ಅನುಭವ ಅಥವಾ ಮಿತಿಯಾಗಿರಬಹುದು - ಆದರೂ ಸ್ವಲ್ಪವಾದರೂ ಈ ಮೇಲಿನ ಅಬ್ಸರ್‌ವೇಷನ್‌ನಲ್ಲಿ ಸತ್ಯವಿಲ್ಲದಿದ್ದರೆ please keep me honest.

ಅಲ್ಲಿ ದೊಡ್ಡ ಕುಟುಂಬವೊಂದರಲ್ಲಿ ಸಕ್ರಿಯ ಸದಸ್ಯನಾದವನು ಇಲ್ಲಿ ಒಬ್ಬಂಟಿ ಕುಟುಂಬವಾಗಿ ಎಷ್ಟೋ ಸಾರಿ ಕೊಳೆದಿದ್ದಿದೆ, ಹತ್ತಿರವಿರುವ ಕನ್ನಡ ಕೂಟಗಳ ಕಾರ್ಯಕ್ರಮಗಳಲ್ಲಿ ಇನ್ನಾದರೂ ನನ್ನನ್ನು ಚೆನ್ನಾಗಿ ತೊಡಗಿಸಿಕೊಳ್ಳಬೇಕು, ಅದು ಮಾಡಬೇಕು, ಇದು ಮಾಡಬೇಕು ಎಂದು ಹೇಳಿಕೊಂಡು ಹಾರಾಡಿದ್ದೇನೆಯೇ ವಿನಾ ಒಂದೂ ಕಾರ್ಯರೂಪಕ್ಕೆ ಬಂದಿಲ್ಲ. ಇಲ್ಲಿ ಬಂದು ನನಗೂ ಒಂದು ಮಗು ಎಂದು ಆದಾಗ ಭಾರತದಿಂದ ಯಾರಾದರೂ ಸಹಾಯಕ್ಕೆ ಬರದೇ ಹೋದರೆ ವಿಷಯವನ್ನು ನಾವೇ ಕೈಗೆತ್ತಿಕೊಳ್ಳುವುದಾಗಿ ನಿಶ್ಚಯಿಸಿ ಅಥವಾ ಅನಿವಾರ್ಯತೆಯಿಂದ ಒಂದಿಷ್ಟು ಮಕ್ಕಳ ಬಗ್ಗೆ, ಪೋಷಣೆ ಬಗ್ಗೆ ಇಲ್ಲಿಯವರ ಹಾಗೆ ಒಂದಿಷ್ಟು ಪುಸ್ತಕಗಳನ್ನು ಮುತುವರ್ಜಿಯಿಂದ ಓದಿದ್ದಕ್ಕೆ ಬೇಕಾದಷ್ಟು ವಿಷಯಗಳು ಗೊತ್ತಾದವು. ಈ ರೇಡಿಯೋ ಹಾಗೂ ಟಿವಿಯಲ್ಲಿ ಬರುವ ಹಲವಾರು ಕಾರ್ಯಕ್ರಮಗಳ ದೆಸೆಯಿಂದ, ಪೋಷಕರು, ಮಕ್ಕಳ ಮನೋವೈದ್ಯರು ಬರೆದ ಪುಸ್ತಕಗಳ ವಿಸ್ತರಿಸಿದ ಬೆಳಕಿನಿಂದ ನನ್ನ ಸಹನೆಯ ಕಟ್ಟೆಯಂತೂ ವಿಸ್ತಾರಗೊಂಡಿದೆ, ನನಗೆ ಯಾವ ಹೊತ್ತಿನಲ್ಲಿ ಬೇಕಾದರೂ ಈಗ ಮಕ್ಕಳು ಅತ್ತರೆ ಮೊದಲಿನಷ್ಟು ಬೇಸರವೆನ್ನಿಸುವುದಿಲ್ಲ, ಸಿಟ್ಟಂತೂ ಬರುವುದಿಲ್ಲ.

ಆದರೆ, ನನ್ನ ಈ ಹೊಸ ಮುಖ ಮೊದಲಿದ್ದ ವಿಶ್ವಾಮಿತ್ರ ಗೋತ್ರದವನ ಮುಖಕ್ಕಿಂತ ಬಹಳಷ್ಟು ಭಿನ್ನವಾಗಿರುವುದೂ, 'ನಮ್ಮ ಮಕ್ಕಳನ್ನು ಕಂಡರೆ ಹಾರಾಡುತ್ತಿದ್ದವನು, ಈಗ ತನ್ನ ಮಕ್ಕಳನ್ನು ಚಕಾರವೆತ್ತದವನು' ಎಂದು ಆಡಿಕೊಳ್ಳಬಹುದಾದ ನನ್ನ ಬಂಧು ಬಳಗದವರಿಗೆ ಹೇಗೆ ಕಂಡೀತು ಎಂದು ಸೋಜಿಗವಾಗುತ್ತದೆ. ನನ್ನ ವಿಸ್ತರಿಸಿದ ಅನುಭವ ಅಥವಾ ತಿಳುವಳಿಕೆ ಅವರಿಗೆ 'ತನಗೊಂದು, ಪರರಿಗೊಂದು' ಮುಖವಾಗಿ ಕಂಡರೆ ತಪ್ಪೇನೂ ಇಲ್ಲ ಅಲ್ಲವೇ? 'ಹೆತ್ತವರಿಗೆ ಹೆಗ್ಗಣವೂ ಮುದ್ದು' ಎಂದು ಆಲೋಚಿಸಿಕೊಂಡರೆ ಈ ಪರರಿಗೊಂದು ನೀತಿಯನ್ನು ಹಿಪೋಕ್ರಸಿ ಎಂದು ಒಪ್ಪಿಕೊಳ್ಳಲಾದೀತೇ? ಅಥವಾ 'ಮಕ್ಕಳಿಗೆ ಗದರಿಸಬೇಡವೋ' ಎಂದು ನನ್ನ ಅಣ್ಣಂದಿರಿಗೆ ತಿಳಿಸಿ ಹೇಳಿದರೆ 'ನೋಡಪ್ಪಾ, ಇವತ್ತು ಮಕ್ಕಳನ್ನು ಕಂಡೊರ ಹಾಗೆ ನಮಗೇ ಬುದ್ಧಿ ಹೇಳೋದಕ್ಕೆ ಬಂದಿದಾನೆ!' ಎಂದು ಅಪಹಾಸ್ಯಕ್ಕೆ ಗುರಿಯಾಗುತ್ತೇನೆಯೇ? ಇತ್ಯಾದಿ ಪ್ರಶ್ನೆಗಳು ಮನದಲ್ಲಿ ಮಂಡಿಗೆ ತಿನ್ನುವ ಈ ಅರಿಷ್ಟ ಅಭಿಶಾಪಕ್ಕೆ ಇನ್ನೂ ಒತ್ತುಕೊಡತೊಡಗುತ್ತದೆ.

ಇವತ್ತಿಗೂ ಪರಿಚಯವಿರದವರ ಜೊತೆಯಲ್ಲಿ ಮಾತನಾಡುವಾಗ ಪದಗಳು ಅಷ್ಟು ಸುಲಭವಾಗಿ ಹೊರ ಬರೋದಿಲ್ಲ, ಇನ್ನು ಯಾರೋ ಗೊತ್ತಿರದ ಹೆಣ್ಣು ಮಕ್ಕಳಿಗೆ ಒಂದೇ ಯತ್ನದಲ್ಲಿ ವಾಯ್ಸು ಮೆಸ್ಸೇಜನ್ನು ಬಿಡುವಾಗ ವಿಷಯಗಳು ಕಲಸುಮೇಲೋಗರವಾಗೇ ಆಗುತ್ತವೆ. ಪೋಲೀಸ್ ಮಾಮಾನ ಕಂಡರೆ ಅವ್ಯಕ್ತ ಹೆದರಿಕೆ ಇದ್ದೇ ಇದೆ, ಯಾವತ್ತೋ ಸಿಗಬಹುದಾದ ಇನ್ನೂರು-ಮುನ್ನೂರು ಡಾಲರಿನ ದಂಡಕ್ಕೆ ನಾನೇಕೆ ಅಷ್ಟಾಗಿ ಹೆದರುತ್ತೇನೆಯೋ ಯಾರಿಗೆ ಗೊತ್ತು. ಪರಸ್ಥಳದಲ್ಲಿ, ಅಥವಾ ಯಾವತ್ತಾದರೂ ಲೇಟ್ ನೈಟ್‌ನಲ್ಲಿ ತುಂಬಾ ಭಯ ಹುಟ್ಟಿಸುವ ಸಿನಿಮಾವನ್ನೇನಾದರೂ ಒಬ್ಬನೇ ನೋಡುತ್ತಿದ್ದರೆ ಗುಮ್ಮನ ವಿಚಾರಗಳು ಸುತ್ತಿಕೊಳ್ಳತೊಡಗುತ್ತವೆ. 'ಗುಮ್ಮನ ಕರೆಯದಿರೇ, ಅಮ್ಮಾ ನೀನು' ಎಂದು ಯಾರೋ ಎಷ್ಟೋ ವರ್ಷಗಳ ಹಿಂದೆಯೇ ಹಾಡಿದ್ದರೂ ನಮ್ಮ ತಾಯಂದಿರು ಊಟ ಮಾಡದ ಮಕ್ಕಳನ್ನು ಹಿಡಿದುಕೊಂಡು ಹೋಗಲು ಇನ್ನೂ ಗುಮ್ಮನ ಮೊರೆ ಹೋಗುತ್ತಲೇ ಇದ್ದಾರೆ, ಗುಮ್ಮ ಬರುತ್ತದೆಯೋ ಇಲ್ಲವೋ ನಾವು ಎಷ್ಟೆ ಬೆಳೆದರೂ ತಾಯಿಯ ಸೀರೆ ನೆರಿಗೆಗಳನ್ನು ಹುಡುಕಿಕೊಂಡು ಹೋಗುವ ಪರಿಪಾಟ ಒಂದಲ್ಲ ಒಂದು ರೀತಿಯಿಂದ ಹೊರಕ್ಕೆ ಬಂದೇ ಬರುತ್ತದೆ.

Sunday, June 25, 2006

ಚಾಮುಂಡೇಶ್ವರಿನೇ ಇರ್ಲಿ ಅನ್ನೋನು ನಾನು

ದಸರಾ ಮೆರವಣಿಗೆಯನ್ನು ಎಲ್ಲಾ ಧರ್ಮದವರೂ ವೀಕ್ಷಿಸೋದರಿಂದ ಚಾಮುಂಡೇಶ್ವರಿಯ ವಿಗ್ರಹವನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಬಾರದು, ದಸರಾ ಮೆರವಣಿಗೆಯ ಪರಂಪರೆಯಲ್ಲಿಲ್ಲದ ಈ ವಿಧಿ ಪರಂಪರೆ ಹಾಗೂ ಸಂವಿಧಾನಕ್ಕೆರಡೂ ವಿರುದ್ಧವಾಗಿದೆ ಎಂದು ಅಲ್ಲಲ್ಲಿ ವರದಿಯಾಗಿರೋದನ್ನ ಓದಿದ ಮೇಲೆ ನನಗನ್ನಿಸಿದ್ದು ಇಷ್ಟು - ಎಲ್ಲರೂ ಅವರವರ ಅಭಿಪ್ರಾಯಕ್ಕೆ ಬಾಧ್ಯರು ಹಾಗೇ ನನ್ನದೂ ಒಂದು.

ನಮ್ಮೂರಲ್ಲಿ ಇವತ್ತಿಗೂ ಬನ್ನಿ ಮರದಲ್ಲಿ ಆಯುಧಗಳ ಬದಲಿಗೆ ತೆಂಗಿನ ಕಾಯಿಗಳನ್ನು ಕಟ್ಟಿ ಅದನ್ನು ಬಂದೂಕಿನಿಂದ ಹೊಡೆದುರುಳಿಸೋದೂ, ನಂತರ ಬನ್ನಿಯನ್ನು ಬಂಗಾರದಂತೆ ಹಂಚಿಕೊಳ್ಳೋದೂ ಇದೆ. ಇದು ಬರೀ ಪರಂಪರೆಯ ವಿಷಯ ಮಾತ್ರವೇ ಅಥವಾ ಇದಕ್ಕೆ ಇನ್ನೇನಾದರೂ ಅರ್ಥವಿದೆಯೇ ಎಂದು ಯೋಚಿಸಿದಾಗ ಗ್ರಾಮದ ಮಟ್ಟದಲ್ಲಿ ಇಡೀ ಗ್ರಾಮವನ್ನು ಒಂದಾಗಿ ಮಾಡುವಂತ ಶಕ್ತಿ ಇಂತಹ ಆಚರಣೆಗೆ ಇದೆ. ಅಲ್ಲದೇ ನಮ್ಮೂರಲ್ಲಿ ಯಾರಿಗೆ ಬನ್ನಿ ಕೊಟ್ರೂ ಅವರು ತಮ್ಮ ಶಕ್ತ್ಯಾನುಸಾರ ಒಂದಿಷ್ಟು ಚಿಲ್ಲರೆಯನ್ನು ಮಕ್ಕಳಿಗೆ ಕೊಡ್ತಾರೆ, ಇಲ್ಲಾ ಅಂದ್ರೆ ಒಂದೆರಡು ಒಳ್ಳೇ ಮಾತನ್ನಾದ್ರೂ ಆಡ್ತಾರೆ. ವಿಜಯದಶಮಿ ಆದ ಇಪ್ಪತ್ತು ದಿನಕ್ಕೆ ಬೂರೇ ಹಬ್ಬದ ಆಚರಣೆಯೊಂದಿಗೆ ಶುರುವಾಗಿ ದೀಪಾವಳಿ ಅಮಾವಾಸ್ಯೆಯ ದಿನ ಮುಗಿಯೋದು ದಸರಾ ಹಬ್ಬ ಮತ್ತು ದಸರಾ ರಜೆ. ಆಗೆಲ್ಲ ಇಂತಹವುಗಳನ್ನು ಆಚರಿಸೋದರಲ್ಲಿ ಬಹಳಷ್ಟು ಉತ್ಸಾಹವಿತ್ತು, ನನ್ನ ಪ್ರಕಾರ ನಮ್ಮ ಊರುಗಳಲ್ಲಿ ಇವತ್ತಿಗೂ ಹಾಗೇ ಇದೆ.

ನಮ್ಮ ನಾಡಿನ ವಿಮರ್ಶಕರಿಗೂ, ದೊಡ್ಡ-ದೊಡ್ಡ ಮೇಷ್ಟ್ರುಗಳಿಗೂ ಏನಾಗಿದೆಯೋ ಯಾರಿಗೆ ಗೊತ್ತು? ದಸರಾ ಉತ್ಸವವನ್ನು 'ಸಾಮ್ರಾಜ್ಯಶಾಹಿ ಆಚರಣೆಯ ಪಳಿಯುಳಿಕೆ' ಎಂದು ಕರೀತಾರಲ್ಲ ಅಂತ ಖೇದವಾಗ್ತಿದೆ. ನಾನು ಉದ್ದೇಶಪೂರ್ವಕವಾಗೇ ಇಲ್ಲಿ ಯಾರ ಹೆಸರುಗಳನ್ನೂ ಬರೀತಿಲ್ಲ - ಏಕೆಂದ್ರೆ, ಮೊದಲನೇದಾಗಿ ಅವರ ಹೆಸರುಗಳನ್ನು ಇಲ್ಲಿ ಬರೆಯೋದರಿಂದ ನನಗಂತೂ ಯಾವ ಪ್ರಯೋಜನವೂ ಇಲ್ಲ (ಅವರ ಶಿಷ್ಯರುಗಳು ನನ್ನ ಬೆನ್ನ ಹಿಂದೆ ಬೀಳದಿದ್ರೆ ಸಾಕು ಅನ್ನೋ ಅರ್ಥದಲ್ಲಿ), ಅಲ್ಲದೇ ಈ ದೊಡ್ಡ ಮನುಷ್ಯರು ಅವರ ಹೇಳಿಕೆಗಳನ್ನೆಲ್ಲ ಈಗಾಗ್ಲೇ ಸಾರ್ವಜನಿಕವಾಗಿ ಹೇಳಿದೋರಿಂದ ಆಗೋದು ಆಗಿ ಹೋಗಿದೆ.

ನಮ್ಮ ಯಾವ ಹಬ್ಬಗಳು ಪುರಾಣವನ್ನು ಆಧರಿಸೋದಿಲ್ಲ? ಹಾಗಂತ ಎಲ್ಲ ಹಬ್ಬ-ಹರಿದಿನಗಳನ್ನೂ ಕ್ಯಾಲೆಂಡರಿನಿಂದ ಎತ್ತಿ ಹಾಕಲಾಗುವುದೇ? ನಮ್ಮ ವೈವಿಧ್ಯಮಯ ದೇಶದಲ್ಲಿ ಮೈನಾರಿಟಿಗಳಿಗೂ ಒಂದು ಧ್ವನಿ ಅಂತ ಇದೆ, ಅವರನ್ನು ರೆಪ್ರೆಸೆಂಟ್ ಮಾಡೋದಕ್ಕೆ ಕಾನೂನು ಪ್ರಕಾರ ಒಂದಾದ್ರೂ ಅವರ ಹಬ್ಬವನ್ನ ಸೇರಿಸಲಾಗಿದೆ. ನಮ್ಮೂರಲ್ಲಿ ನಡೆಯೋ ಉರುಸ್ ಕಾರ್ಯಕ್ರಮವಾಗ್ಲೀ, ದಸರಾ-ಬನ್ನಿ ಮೆರವಣಿಗೆನಾಗ್ಲೀ ಬರೀ ಯಾವ್ದೋ ಒಂದು ಧರ್ಮದವರ ಕಾರ್ಯಕ್ರಮ ಅಂತ ಅನ್ನಿಸೋದೇ ಇಲ್ಲ. ಎಷ್ಟೋ ವರ್ಷಗಳಿಂದ ಹೀಗೇನೇ ನಡೀತಾ ಇದೆ. ಅದೂ ಯಾಕೆ, ನಮ್ಮಲ್ಲಿ ಮಳೆ ಸರಿಯಾಗೇನಾದ್ರೂ ಬರದೇ ಹೋದ್ರೆ ಮಾಮೂಲಿ ಸಂತೆ ನಡೆಯೋ ಸ್ಥಳದಿಂದ ಸ್ಥಳಾಂತರ ಮಾಡಿ ದುರ್ಗಮ್ಮನ ಗುಡಿ ಹತ್ರ ಸಂತೆ ನಡೆಸೋದಿಲ್ವೇ - ಎಲ್ಲರಿಗೂ ಒಳಿತಾಗ್ಲೀ ಅನ್ನೋ ಹಿಂದಿಂದ್ಲೂ ಬಂದ ಆಚರಣೆಯೇ ವಿನಾ ದುರ್ಗಮ್ಮನ ಕೇರಿ ಹತ್ರ ಸಂತೆ ನಡೆದ್ರೆ ಬರೀ ಹಿಂದೂಗಳು ಮಾತ್ರ ಹೋಗ್ಬೇಕು ಅಂತೇನೂ ಇಲ್ಲ. ಈ ಆಚರಣೆಗಳಲ್ಲಿ ವಿಧಿಗಳಲ್ಲಿ ತಪ್ಪಿದೆಯೋ ಇಲ್ವೋ ಯಾರಿಗ್ ಗೊತ್ತು? ಕೆಲವೊಂದು ನನ್ನ ತರ್ಕಕ್ಕೂ ಮೀರಿ ಹೋಗತ್ತೆ, ಇವತ್ತಿಗೂ ಸಹ ನಾನು ಬನ್ನಿಯನ್ನು ವಿನಿಮಯ ಮಾಡಿಕೊಂಡ್ರೆ, ಬೇವು-ಬೆಲ್ಲ ತಿಂದ್ರೆ, ನರಕಚತುರ್ದಶಿ ದಿನ ಬೆಳಗ್ಗೆ ಬೇಗ ಎದ್ದು ಅಭ್ಯಂಜನ ಮಾಡಿಕೊಂಡ್ರೆ ಅದನ್ನೆಲ್ಲ ಪ್ರಶ್ನಿಸಿಕೊಳ್ತಾ ಕೂರೋದಿಲ್ಲ - ಹಾಗೆ ನಾನು ಮಾಡೋದನ್ನೆಲ್ಲ ಪ್ರಶ್ನಿಸಿಕೊಳ್ತಾ ಕೂತ್ರೆ ಆ ಪಟ್ಟಿ ಬಹಳ ದೊಡ್ದಾಗುತ್ತೆ, ಅದರಲ್ಲಿ ಬನ್ನಿ ಹಬ್ಬ ಕೊನೆಯಲ್ಲಿ ಬರುತ್ತೆ.

ನನ್ನನ್ನ ಕೇಳಿದ್ರೆ - ಮೊದಲಿದ್ದ ಹಾಗೆ ಚಾಮುಂಡೇಶ್ವರಿಯ ಪ್ರತಿಮೆಯನ್ನು ಈಗ ಇದ್ದ ಹಾಗೆ ಮೆರವಣಿಗೆಯಲ್ಲಿ ತಗೊಂಡ್ ಹೋಗೋದೇ ಒಳ್ಳೇದು. ಎಲ್ಲ ಧರ್ಮದವರೂ ವೀಕ್ಷಿಸುತ್ತಾರೆ ಅನ್ನೋ ಸರ್ವ ಧರ್ಮ ಹಿತವನ್ನು ದಸರೆಯಲ್ಲಿ ಕಾಪಾಡಿಕೊಂಡು ಬರಬೇಕು ಅಂದ್ರೆ, ಮೊದಲು ಚಾಮುಂಡೇಶ್ವರಿ ಪ್ರತಿಮೆ/ಫೋಟೋ ಮರೆಯಾಗಿ ಹೋಗುತ್ತೆ, ಆಮೇಲೆ ಆನೆಗಳು ಹೋಗುತ್ವೆ, ಆಮೇಲೆ ಮೆರವಣಿಗೆಯ ಸಡಗರ ಹೋಗುತ್ತೆ, ಹೀಗೇ ಮರೆಯಾಗಿ ಹೋಗೋದರೆಲ್ಲ ಪಟ್ಟಿ ದೊಡ್ಡದಾಗಿ ಬೆಳೆದೂ ಬೆಳೆದೂ ಕೊನೆಗೆ ಮಹಿಷಾಸುರನ ಹೆಸರಿನ ಮೇಲೆ ಹುಟ್ಟಿರೋ ಮೈಸೂರಿನ ಹೆಸರನ್ನೂ ಬದಲಾಯಿಸಬೇಕಾಗುತ್ತೆ, ನಮ್ಮ ಎಲ್ಲ ಆಚರಣೆಗಳನ್ನು ಪ್ರಶ್ನೆ ಮಾಡಿಕೊಳ್ಳಬೇಕಾಗುತ್ತೆ.

ನಮ್ಮಲ್ಲಿ ಕುಡಿಯೋ ನೀರು, ಅಕ್ಷರಾಭ್ಯಾಸ ಮುಂತಾದ ಸಮಸ್ಯೆಗಳು ಇನ್ನೂ ಸಮಸ್ಯೆಗಳಾಗೇ ಇರೋದ್ರಿಂದ ದೊಡ್ಡ ಮನುಷ್ಯರು ದಯವಿಟ್ಟು ತಮ್ಮ ದೊಡ್ಡ ಮನಸ್ಸನ್ನು ನಿಜವಾದ ರಾಷ್ಟ್ರದ ಏಳೆಗೆಗೆ ಬಳಸ್ಲಿ, ಈ ಸಮಸ್ಯೆಗಳೆಲ್ಲ ನಿವಾರಣೆ ಆದ ಮೇಲೆ ಪುರುಸೊತ್ತು ಇದ್ರೆ ಆಮೇಲೆ ದಸರಾ ವಿಷ್ಯ ಮಾತಾಡೋಣ.

Saturday, June 24, 2006

ನಮ್ಮೋರೂ ಫುಟ್‌ಬಾಲ್ ಆಡಿದ್ದಿದ್ರೆ...

ನಮ್ಮೋರೂ ಫುಟ್‌ಬಾಲ್ ಆಡಿದ್ದಿದ್ದ್ರೆ ಎಷ್ಟೋ ಚೆನ್ನಾಗಿತ್ತು ಅಂತ ಇವತ್ತು ಅರ್ಜೆಂಟೀನಾ-ಮೆಕ್ಸಿಕೋ, ಜರ್ಮನಿ-ಸ್ವೀಡನ್ ಮ್ಯಾಚ್ ನೋಡಿದ್ ಮೇಲೆ ಬಲವಾಗಿ ಅನ್ಸೋಕೆ ಶುರುವಾಯ್ತು. ಕೆಲವು ತಿಂಗ್ಳ ಹಿಂದೆ ನನ್ನ ಸಹೋದ್ಯೋಗಿ ಒಬ್ರಿಗೆ ನಾವ್ ವಿಂಟರ್ ಓಲಂಪಿಕ್ಸ್‌ನಲ್ಲಿ ಏಕೆ ಭಾಗವಹಿಸೋದಿಲ್ಲ ಅಂತ ಹತ್ತಾರು ಕಾರಣಗಳನ್ನು ನೀಡಿದ್ದೆ, ಆದ್ರೆ ಇವತ್ತು ನಮ್ಮೋರು ಈ ವಿಶ್ವಕಪ್ ಫುಟ್‌ಬಾಲ್ ಲೀಗ್‌ನಲ್ಲಿ ಏಕೆ ಆಡ್ತಾ ಇಲ್ಲಾ ಅಂತ ಎಷ್ಟೊತ್ತು ಯೋಚ್ನೆ ಮಾಡಿದ್ರೂ ಅಪ್ಪಂತ ಕಾರ್ಣಾ ಏನೂ ಸಿಗ್ಲಿಲ್ಲ. ನಮ್ಮೋರಿಗೆಲ್ಲ ಕ್ರಿಕೇಟ್ ಅನ್ನೋದು ಒಂಥರಾ ಮಲೇರಿಯಾದ್ ಜ್ವರದ್ ಹಾಗೆ ಆಗಾಗ್ಗೆ ಬಿಟ್ಟ್ ಬರುತ್ತೆ, ಹೋಗುತ್ತೆ, ಎಂಥಾ ಬಿಸಿಲಲ್ಲೂ ಬೆನ್ ಹುರಿಯಲ್ಲಿ ಛಳಿ ಹುಟ್ಸುತ್ತೆ, ಆದ್ರೆ ವಿಶ್ವದ ತುಂಬೆಲ್ಲಾ ಬೇಕಾದಷ್ಟು ಜನ ಆಡಿ ಮಜಾ ಮಾಡೋ ಫುಟ್‌ಬಾಲ್ ಮಾತ್ರ ಆಡಲ್ಲ, ಆಡಿದ್ರೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಯಾಕ್ ಬರಲ್ವೋ ಯಾರಿಗ್ ಗೊತ್ತು?

ಕಲ್ಕತ್ತಾದ ಮೋಹನ್ ಬಗಾನ್, ರೇಲ್ವೇ ಟೀಮು, ಇನ್ನೊಂದಿಷ್ಟು ಟೀಮ್‌ಗಳು ಫುಟ್‌ಬಾಲ್ ಹೆಸರ್ನಲ್ಲಿ ಆಗಾಗ್ಗೆ ಸುದ್ದಿ ಮಾಡ್ತಾನೇ ಇರ್ತಾವೆ, ನಮ್ಮ ಮೇಜರ್ ಲೀಗ್ ಫುಟ್‌ಬಾಲ್ ಅಂದ್ರೆ ಇವೇ ಒಂದಿಷ್ಟು ತಂಡಗಳು ಆಡೋ ಆಟ, ಅದು ಬಿಟ್ರೆ ನನ್ನ್ ನೆನಪಿಗಂತೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಫುಟ್‌ಬಾಲ್ ಆಡಿದ್ದಂತೂ ಬರಲ್ಲ. ಹಾಕಿ ತಗೊಂಡ್ರೆ ಅದು ನಮ್ಮ ರಾಷ್ಟ್ರೀಯ ಆಟ, ಕೊನೇಪಕ್ಷಾ ಆ ಧ್ಯಾನ್‌ಚಂದ್ ಕಾಲ್ದಲ್ಲಾದ್ರೂ ನಾವು ಚೆನ್ನಾಗಿ ಆಡ್ತಿದ್ವಿ, ಧ್ಯಾನ್‌ಚಂದ್ ನಂತಾ ಮಾಂತ್ರಿಕರನ್ನು ವಿಶ್ವವೇ ಬೆರಗಾಗಿ ನೋಡ್ತಿತ್ತು, ನನಗೆ ನೆನಪಿರೋ ಹಾಗೆ ನಮ್ಮೋರು ಅಮೇರಿಕದ ಟೀಮನ್ನೂ ಯಾವ್ದೋ ಓಲಂಪಿಕ್ಸ್‌ನಲ್ಲಿ ಸೋಲ್ಸಿದ್ರು. ಹಂಗ್ ನೋಡಿದ್ರೆ, ರೀತಿ-ರಿವಾಜು, ವಿಧಿ-ವಿಧಾನಗಳಲ್ಲಿ ಹಾಕಿಗೆ ಹತ್ತಿರವಾಗಿ ಫುಟ್‌ಬಾಲ್ ಬರುತ್ತ್ಯೇ ವಿನಾ ಕ್ರಿಕೇಟ್ ಅಲ್ಲ, ಆದ್ರೂ ನಮ್ಮ್ ಹುಡುಗ್ರಿಗೆಲ್ಲ ಕ್ರಿಕೇಟ್ಟೇ ದೊಡ್ದು. ಇನ್ ಮುಂದಾದ್ರೂ ಫುಟ್‌ಬಾಲ್ ಮೇಲೆ ಗಮನ ಹರಿಸಿದ್ರೆ ಅಷ್ಟೇ ಸಾಕು. ಟ್ರಿನಿಡಾಡ್ ಟೊಬೇಗೋ ಅಂತ ಸಣ್ಣ ರಾಷ್ಟ್ರಗಳ ಪ್ರತಿನಿಧಿತ್ವ ಇದೆ, ಅಂತಾದ್ದರಲ್ಲಿ ಭಾರತದೋರೇ ಇಲ್ಲಾ ಅಂದ್ರೆ ಹೇಗೆ?

ನನ್ನ ಮೆಚ್ಚಿನ ಟೀಮಂತೂ ಬ್ರೆಜಿಲ್‌ನೋರಪ್ಪಾ, ಈ ದೇಶ ಆರ್ಥಿಕ ದೃಷ್ಟಿಯಿಂದ ಹೆಂಗಾದ್ರೂ ಇರ್ಲಿ, ಅವರಾಡೋ ವಾಲಿಬಾಲ್, ಫುಟ್‌ಬಾಲ್ ಆಟಾನ ನೋಡೋಕೆ ಎರಡು ಕಣ್ಣೂ ಸಾಲ್ದೂ. ದಕ್ಷಿಣ ಅಮೇರಿಕದಲ್ಲಿರೋ ಬೇಜಾನ್ ದೇಶಗಳು ಯಾವತ್ತಿಂದ್ಲೂ ಫುಟ್‌ಬಾಲ್ ಆಡ್ತಾವೆ, 'ಕೋಪ ಅಮೇರೀಕಾ' ಅಂತ್ಲೋ, ಇನ್ನ್ಯಾವ್ದೋ ಸ್ಪರ್ಧೇನಲ್ಲೋ ಆಗಾಗ್ಗೆ ಟಿವಿನಲ್ಲಿ ಬಿತ್ತರವಾಗೋ ಪಂದ್ಯಗಳ್ನ ನಾನೂ ನೋಡ್ತೀನಿ. ಒಂದ್ ರೀತೀಲಿ ನಾನು ಈ ಬ್ರೆಜಿಲ್‌ನೋರ್ನ ಎಷ್ಟು ಹಚ್ಚಿಕೊಂಡಿದೀನಿ ಅಂದ್ರೆ ನಾಳೆ ಯಾವತ್ತಾದ್ರು ನಮ್ಮೋರು ಆಡಿದ್ರೂ ನನಗೆ ಈ ಬ್ರೆಜಿಲ್ ಮೇಲೆ ವಿಶ್ವಾಸವೆಂದೂ ಕಡಿಮೆ ಆಗೋದಿಲ್ಲ - ಒಂಥರಾ ಫ್ಯಾನ್ ಫಾರ್ ಲೈಫ್ ಅನ್ನೋ ಹಾಗೆ. ನನಗೆ ಬೇರೆ ದೇಶದ್ ಆಟಗಾರ್ರ ಬಗ್ಗೆ ಪ್ರೀತಿ ಹುಟ್ಟೋದು ಇವತ್ತು ನಿನ್ನೇ ಮಾತಲ್ಲ - ಕ್ರಿಕೇಟ್‌ನಲ್ಲಿ ಇವತ್ತಿಗೂ ಬ್ರಯಾನ್ ಲಾರಾ ಆಟ ಅಂದ್ರೆ ನನಗೆ ಪಂಚಪ್ರಾಣ, ನನ್ನ ಮನಸ್‌ನಲ್ಲಿ ಗವಾಸ್ಕರ್, ತೆಂಡೂಲ್ಕರ್, ಡ್ರಾವಿಡ್ ಮೇಲೆ ಇರೋ ಪ್ರೀತಿ (ಅಥವಾ ಭಕ್ತಿ)ಗಿಂತ ಲಾರಾ ಅಂದ್ರೇನೇ ನನಗೆ ಹೆಚ್ಚು ಇಷ್ಟ, ಹಂಗಂತ ನಮ್ಮೋರು ಅಂದ್ರೆ ಕಡಿಮೆ ಅಂತಲ್ಲ, ಆದ್ರೂ ಈ ಲಾರಾನ ಮೇಲೆ ನನಗ್ಯಾಕೋ ಮೊದ್ಲಿಂದ್ಲೂ ಬಹಳ ವಿಶ್ವಾಸ, ಅವನ ಆಟ ನೋಡೋಕೇ ನನ್ನಲ್ಲಿ ಯಾವತ್ತಿದ್ರೂ ಟೈಮಿರುತ್ತೆ.

ಏನೋಪ್ಪ, ನಮ್ ದೇಶ್‌ದಲ್ಲಿ ದಿನವಿಡೀ ಕ್ರಿಕೇಟ್ ನೋಡೋದನ್ನ ಸ್ವಲ್ಪ ಕಡಿಮೆ ಮಾಡಿ ಈ ತೊಂಭತ್ತು ನಿಮಿಷದಲ್ಲಿ ಮುಗಿಯೋ ಆಟಾನ ಸ್ವಲ್ಪ ಅಸ್ಥೆಯಿಂದ ಕಲ್ತಿದ್ರೆ ಎಷ್ಟೋ ಚೆನ್ನಾಗಿತ್ತು. ನಮ್ಮಲ್ಲಿ ಎಷ್ಟೋ ಜನ ಪ್ರತಿಭಾನ್ವಿತರಿದ್ದಾರೆ, ಅವರಿಗೆಲ್ಲ ಒಂದು ಸರಿಯಾದ ಕೋಚ್ ಸಿಕ್ಕು ಅವರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ್ರೆ ಎಷ್ಟೋ ಚೆನ್ನಾಗಿತ್ತು. ಈಗ್ಲೂ ಏನ್ ತಡಾ ಆಗಿಲ್ಲ, ಇದು ಹೋದ್ರೆ ಹೋಗ್ಲಿ ಮುಂದಿನ ವಿಶ್ವಕಪ್ ಹೊತ್ತಿಗಾದ್ರೂ ನಮ್ಮವ್ರು ಅರ್ಹತೆ ಮಟ್ಟಕ್ಕಾದ್ರೂ ಬಂದ್ರೂ ಪರವಾಗಿಲ್ಲ, ಲೀಗಿನ ಎಲ್ಲಾ ಮ್ಯಾಚ್‌ಗಳನ್ನು ಸೋತ್ರೂ ಅಡ್ಡಿ ಇಲ್ಲ, ಇವತ್ತಲ್ಲ ನಾಳೆ ಈ ವಿಶ್ವಕಪ್ಪನ್ನ ಗೆದ್ದೇ ಗೆಲ್ತಾರೆ ಅನ್ನೋ ಆಶಾಭಾವನೆಯಿಂದಾದ್ರೂ ಆಟ ನೋಡ್ತೀನಿ.

ಅಬ್ಬಾ, ಇವತ್ತು ಆಟಾ ನೋಡ್ತಾ-ನೋಡ್ತಾ ಅದೇನ್ ಚೆನ್ನಾಗ್ ಆಡ್ತಾರಪ್ಪಾ ಅನ್ನಿಸ್ತು. ಕೊನೇ ಕ್ಷಣದಲ್ಲಿ ಮಾಡೋ ನಿರ್ಧಾರದ ಮೇಲೆ ಒಬ್ಬರಿಂದ ಇನ್ನೊಬ್ರಿಗೆ ಪಾಸ್ ಕೊಟ್ಟು, ಚೆಂಡನ್ನ ಒಳ್ಳೇ ಮಂತ್ರಿಸಿಟ್ಟ ಹಾಗೆ ಗೋಲಿನ ಕಟಕಟೆ ಒಳಗೆ ತಳ್ಳೋದು ಅಂದ್ರೇನು ಹುಡುಗಾಟಾನಾ? ಈ ಆಟಗಾರ್ರು ಓಡಿದ್ ದೂರಾನೆಲ್ಲ ಆಳತೆ ಮಾಡಿ ಉದ್ದುಕೆ ಸೇರ್ಸಿದ್ದ್ರೆ ಒಂದ್ ಸಲ ಭೂಮಿ ಸುತ್ತಿ ಬರಬಹುದೇನೋ ಅನ್ಸುತ್ತೆ - ಆ ಪಾಟಿ ಓಡಾಟ. ಅಲ್ದೇ ಅದೇನು ಜನಗಳು, ಕೆಲವಂದ್ ಸರ್ತಿ ಸ್ಟೇಡಿಯಮ್ ಭರ್ತಿ - ಈಗಿನ್ನು ತಂಡಗಳು ಕ್ವಾರ್ಟಲ್ ಫೈನಲ್ ಹಂತಕ್ಕೆ ಬರ್ತಾ ಇವೆ, ಇನ್ನು ಮುಂದೆ ಬಹಳ ಮಜಾ ಇರುತ್ತೆ. ಕೊನೆಗೆ ಕಪ್ಪನ್ನ ಯಾರಾದ್ರೂ ಗೆಲ್‌ಲಿ, ಸಡನ್ ಡೆತ್‌ನಲ್ಲಿ ಗೆಲ್ದೇ ಇದ್ರೆ ಸಾಕು, ಹಿಂದೆ ಒಂದ್ಸಲ ಹೀಗೇ ಆಗೀ ಯಾರೋ ಗೆದ್ದಾಗ ಒಂಥರಾ ಉಪ್ಪಿರದ ಸಾರಿನಲ್ಲಿ ಊಟ ಮಾಡಿದ ಹಾಗಿತ್ತು.

ನಮ್ಮೋರೇನಾದ್ರೂ ಈ ಆಟಾನ ಆಡ್ತಾರೆ ಅಂದ್ರೆ ನನ್ನ್ ಹೃದಯದಲ್ಲಿ ಅರ್ಧದಷ್ಟು ಜಾಗ ಬಿಟ್‌ಕೊಡ್ತೀನಿ, ಕ್ರಿಕೇಟ್‌ನಲ್ಲಿರೋ ಹಾಗೆ ಪೇಪರ್ ಹುಲಿಗಳಾಗ್ದೇ ಒಂದಿಷ್ಟು ನಿಜವಾದ ಆಟಾನಾ ಆಡ್ಲಿ ಅಂತ ಯಾವತ್ತೂ ಕಾಯ್ತೀನಿ!

Friday, June 23, 2006

ಸೈಕಲ್ ರಿಕ್ಷಾದ ಜೊತೆಯಲ್ಲಿ ಬರುವ ಬಳುವಳಿ

ಉತ್ತರ ಭಾರತವನ್ನು ಸುತ್ತಿಬಂದವರಿಗೆ ಚೆನ್ನಾಗಿ ಗೊತ್ತಿರೋ ಹಾಗೆ ಸೈಕಲ್ ರಿಕ್ಷಾಗಳು ಬೇಕಾದಷ್ಟು ಶಹರಗಳ ಜೀವನಾಡಿ. ಕೆಲವೊಂದು ಶಹರಗಳ ಮುಂದುವರೆದ ಪ್ರಾಂತ್ಯಗಳಲ್ಲಿ ಇವುಗಳಿಗೆ ನಿಷೇಧವಿದ್ದರೂ ಉಳಿದೆಡೆಗಳಲ್ಲಿ ಬಡವರ ಇಂಧನ ರಹಿತ, ಪರಿಸರ ಪ್ರೇಮಿ ವಾಹನವೆಂದರೆ ಇದೇ ಇರಬೇಕು. ನನಗಾದಂತೆ ಎಷ್ಟೋ ಜನರಿಗೆ ಆಶ್ಚರ್ಯವಾಗುವುದಾದರೆ ನಮ್ಮ ಕರ್ನಾಟಕದಲ್ಲೂ ಸೈಕಲ್‌ರಿಕ್ಷಾಗಳಿವೆ, ಆದರೆ ಉತ್ತರಭಾರತದವುಗಳಿಗಿಂತ ನಮ್ಮಲ್ಲಿರುವ ಇವುಗಳ ಪರಂಪರೆ ಬೇರೆ.

ಬನಾರಸ್‌ನಲ್ಲಿ ಆಗಾಗ್ಗೆ ಸೈಕಲ್ ರಿಕ್ಷಾ ಏರುತ್ತಿದ್ದೆನಾದರೂ ಅವುಗಳ ಪರಿಸರ ಪ್ರೇಮಿ ನಿಲುವುಗಳಿಗಿಂತಲೂ ಅವುಗಳನ್ನು ತಮ್ಮ ಜೀವವನ್ನೇ ಭಾರಹಾಕಿ ಜೀಕಿ-ಜೀಕಿ ಕಷ್ಟಪಟ್ಟು ತುಳಿಯುವವರ ಕಷ್ಟವನ್ನು ನೋಡಲಾಗದೇ ಎಷ್ಟೋ ಸಾರಿ ನಡೆದೋ ಅಥವಾ ಮತ್ಯಾವುದೋ ರೀತಿಯಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆ ತೆರಳಿದ್ದಿದೆ. ಬನಾರಸ್‌ನಲ್ಲಿ ಸೈಕಲ್‌ರಿಕ್ಷಾದವರದ್ದು ಒಂದು ರೀತಿಯ ಜೀತವೆಂದೇ ಹೇಳಬೇಕು - ದಿನವೊಂದಕ್ಕೆ ಆಗ ಹದಿನಾರು-ಇಪ್ಪತ್ತು ರೂಪಾಯಿ ಕೊಟ್ಟು ಬಾಡಿಗೆಗೆ ರಿಕ್ಷಾ ಪಡೆದು ಅದರಲ್ಲಿ ಸುಮಾರು ನಲವತ್ತು ಐವತ್ತು ರೂಪಾಯಿಗಳನ್ನು ದುಡಿದು ಅಸಲು ಕಳೆದು, ಅದು ತಂದ ಮೈ ನೋವನ್ನು ಪರಿಹರಿಸಿಕೊಳ್ಳಲು ಮದ್ಯದ ಶರಣಾಗಿ ಹೋಗಿ ಉಳಿಯುವುದು ಬಹಳ ಕಡಿಮೆ, ಅಂತದ್ದರಲ್ಲಿ ಅವರನ್ನು ನಂಬಿಕೊಂಡು ಬದುಕುವುದಿರಲಿ ಅವರು ಬದುಕುವುದೇ ಹೆಚ್ಚು - ಆದ್ದರಿಂದಲೇ ತಲತಲಾಂತರದಿಂದ ರಿಕ್ಷಾ ತುಳಿಯುವವರ ಸ್ಥಿತಿ-ಗತಿಯಲ್ಲಿ ಅಂತಾದ್ದೇನೂ ಬದಲಾವಣೆಗಳಾಗಿದ್ದನ್ನು ನಾನು ನೋಡಿಲ್ಲ. ಉತ್ತರದ ಕೆಟ್ಟ ಛಳಿ ಅಥವಾ ಘೋರ ಬಿಸಿಲಿನಲ್ಲೂ ಮೈಮೇಲೆ ಕಡಿಮೆ ಬಟ್ಟೆಯಿಂದ ಉಸಿರುಬಿಡುತ್ತಾ ಜೀಕಿ-ಜೀಕಿ ಸೈಕಲ್ ತುಳಿಯುವುದು ಸುಲಭದ ಮಾತೇನೂ ಅಲ್ಲ. ಆದರೆ ಆ ರಿಕ್ಷಾದಲ್ಲೂ ಗುಂಪಾಗಿ ಕುಳಿತುಕೊಂಡವರ ದೇಹ ಪ್ರಕೃತಿಗೂ, ಜೀವ ಸೆಲೆಗೂ ಅದನ್ನು ಬಿಸಿಲು-ಛಳಿಯಲ್ಲಿ ನೂಕುವ ರಿಕ್ಷಾವಾಲಾಗಳ ಬದುಕಿಗೂ ಬಹಳಷ್ಟು ವ್ಯತ್ಯಾಸ ಕಾಣಿಸುತ್ತದೆ.

ನಾನು ಒಮ್ಮೆ ಬನಾರಸ್‌ನಿಂದ ಕರ್ನಾಟಕಕ್ಕೆ ಬರುವಾಗ ರೈಲನ್ನು ಗುಲ್ಬರ್ಗದ ವಾಡಿಯಲ್ಲೇ ಇಳಿದು, ಅಲ್ಲಿಂದ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳ ಮೂಲಕ ರಾಯಚೂರಿಗೆ ಬಂದು ಅಲ್ಲಿಂದ ಶಿವಮೊಗ್ಗಕ್ಕೆ ಬಂದಿದ್ದೆ. ಕರ್ನಾಟಕವೆಂದರೆ ಬರೀ ಬೆಂಗಳೂರು-ಶಿವಮೊಗ್ಗವೆಂದು ಆಗ ನಂಬಿಕೊಂಡಿದ್ದ ನನಗೆ ಆಶ್ಚರ್ಯ ಕಾದಿತ್ತು. ನಾನು ರಾಯಚೂರಿನಲ್ಲೂ ಈ ಸೈಕಲ್‌ರಿಕ್ಷಾಗಳನ್ನು ನೋಡಿ ಒಮ್ಮೆ ತತ್ತರಿಸಿದ್ದೆ - ಅಂದರೆ ನಾನು ಕಂಡ ಬನಾರಸ್‌ನ ಬಡತನ, ಹಿಂದುಳಿದ ಪರಂಪರೆಯನ್ನು ನೋಡಲು ಶಿವಮೊಗ್ಗದಿಂದ ಬಹಳಷ್ಟು ದೂರವೇನೂ ಹೋಗಬೇಕಾಗಿರಲಿಲ್ಲ. ಇವತ್ತಿಗೂ ಸಹ ನಮ್ಮ ಉತ್ತರ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ - ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಉತ್ತರ ಭಾರತದ ಹಲವಾರು ಜಿಲ್ಲೆಗಳು ಪ್ರಗತಿಯಿಂದ ಇನ್ನೂ ಬಹಳಷ್ಟು ದೂರದಲ್ಲಿರೋದು ಸತ್ಯ. ನನ್ನ ಸ್ನೇಹಿತರೊಬ್ಬರು ವಿವರಿಸಿದ ಹಾಗೆ ಅಲ್ಲಲ್ಲಿ ಆಗಾಗ ಏಳೋ 'ಕರ್ನಾಟಕ ವಿಭಜನೆ'ಯ ಕೂಗಿನ ಹಿಂದೆ ಉತ್ತರ ಕರ್ನಾಟಕದ ಈ ಸಾಮಾಜಿಕ ಹಿನ್ನೆಡೆಯೂ ಸಹ ಒಂದು. ಈ ಹಿಂದುಳಿದ ಜಿಲ್ಲೆಗಳ ಪ್ರಜಾನಾಯಕರ ಧ್ವನಿ ಇಂದಿಗು ವಿಧಾನ ಸಭೆ-ಪರಿಷತ್ತುಗಳಲ್ಲಿ ಕ್ಷೀಣವೆಂದೇ ಹೇಳಬೇಕು, ಸಂಖ್ಯೆಯ ಬಲದಿಂದ ಸಮಾನ ರೆಪ್ರೆಸೆಂಟೇಷನ್ ಸಿಕ್ಕಿದರೂ ಉತ್ತರದ ನಾಯಕರು ತಮ್ಮ ಧ್ವನಿಯನ್ನು ದಾಖಲಿಸಲು ಅದೇಕೆ ಹಿಂದು-ಮುಂದು ನೋಡುತ್ತಾರೋ ಯಾರು ಬಲ್ಲರು?

ನನಗೆ ಆಶ್ಚರ್ಯವಾಗುವಂತೆ ನ್ಯೂ ಯಾರ್ಕ್ ನಗರದಲ್ಲೂ ಸೈಕಲ್ ರಿಕ್ಷಾಗಳಿವೆ - ಆದರೆ ಇಲ್ಲಿನ ರಿಕ್ಷಾವಾಲಾಗಳು ನಮ್ಮವರ ಹಾಗೆ ತಮ್ಮ ಮೇಲೆ ನಡೆದ ದಬ್ಬಾಳಿಕೆ, ದೌರ್ಜನ್ಯಗಳ ಪ್ರತೀಕಾರವಾಗಿ ತಮ್ಮನ್ನು ಪ್ರತಿನಿಧಿಸಿಕೊಳ್ಳದೇ ಬದಲಿಗೆ 'ಎಂತಹ ಟ್ರಾಫಿಕ್ ಕಂಜೆಷನ್‌ನಲ್ಲೂ ಮುಂದೆ ಹೋಗುತ್ತೇವೆ', ಅಥವಾ 'ಪರಿಸರ ಪ್ರೇಮಿ ನಡೆ' ಎಂದು ತಮ್ಮನ್ನು ತೋರಿಸಿಕೊಳ್ಳುವುದನ್ನು ನೋಡಿದ್ದೇನೆ. ನಮ್ಮಲ್ಲಿ ಜೀವನ ಪರ್ಯಂತ (ಅಥವಾ ಸಾಯುವವರೆಗೆ) ಕೆಲವರು ರಿಕ್ಷಾವನ್ನು ಓಡಿಸಿದರೆ ಇಲ್ಲಿನವರಲ್ಲಿ ಕೆಲವು ಕಾಲ ಮಾತ್ರ ಓಡಿಸುವ ಹೆಚ್ಚಿನವರು ಯುವಕರೆಂದೇ ಹೇಳಬೇಕು. ಹೀಗೆ ರಾಜ್ಯ, ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿನ ಸೈಕಲ್‌ರಿಕ್ಷಾವಾಲಾಗಳು ವಿಧವಿಧವಾದ ಪ್ರತೀಕವನ್ನು ಹೊತ್ತವರಂತೆ ಕಂಡುಬರುತ್ತಾರೆ, ಆದರೆ ಅವರ ಮುಖದಲ್ಲಿ ತೋರೋ ಬಳಲಿಕೆ, ಆಯಾಸಗಳಲ್ಲಿ ಯಾವ ವ್ಯತ್ಯಾಸವೂ ಕಾಣಿಸೋದಿಲ್ಲ.


ಉಳಿದ ವಾಹನಗಳ ಹಾಗೆ ಸೈಕಲ್‌ರಿಕ್ಷಾಗಳು ಸರ್ವಾಂತರ್ಯಾಮಿಳಲ್ಲ, ಆದರೆ ಅವುಗಳು ಇದ್ದಲ್ಲಿ ಒಂದು ಪರಂಪರೆಯನ್ನು ಜೀವಂತವಾಗಿಡುತ್ತವೆ, ಸೈಕಲ್‌ರಿಕ್ಷಾಗಳ ಜೊತೆಯಲ್ಲಿ ಒಂದು ಭಾಗ್ಯಹೀನ ಬದುಕೂ ಸಹ ಜೊತೆಯಲ್ಲೇ ಬಳುವಳಿಯಾಗಿ ಬರುತ್ತದೆ - ಅವುಗಳು ಉಳಿಸುವ ಇಂಧನದ ಮಾತು ಹಾಗಿರಲಿ, ಹೊಟ್ಟೆ ಬೆನ್ನಿಗಂಟಿದ ಗೂರಲು ವ್ಯಕ್ತಿಯೊಬ್ಬ ತನ್ನ ಕಸುವು ಮೀರಿ ತುಳಿಯುವ ಕ್ರಿಯೆ ಎಂಥವರ ಹೊಟ್ಟೆ ಚಳಕ್ ಎನ್ನಿಸುವುದಕ್ಕೂ ಸಾಕು. ಈ ಸಂಕಷ್ಟದಿಂದ ಹೊರಗಿರುವುದಕ್ಕೋಸ್ಕರವೇ ನನ್ನ ಹಾಗೆ ಎಷ್ಟೋ ಜನ ಅವುಗಳನ್ನು ಸವಾರಿ ಮಾಡುವುದಿಲ್ಲ, ಒಂದುವೇಳೆ ಹಾಗೇನಾದರೂ ಮಾಡಿದರೂ ಆ ಪ್ರಯಾಣ ಹೆಚ್ಚು ಕಾಲ ನೆನಪಿನಲ್ಲುಳಿಯುವುದಂತೂ ನಿಜ.

Thursday, June 22, 2006

ದೇವೇಗೌಡರು ಪ್ರಸನ್ನರಾಗಿದ್ದಾರೆ!

ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿಯ ಆಯ್ಕೆಯ ನಂತರ ಎಷ್ಟೇ ಗೋಪ್ಯವಾಗಿಟ್ಟರೂ ಸಂಪುಟ ವಿಸ್ತರಣೆಯೆಂಬ ತಡವಾಗಿ ಅನುಸರಿಸುವ ಮತ್ತೊಂದು ಪ್ರಕ್ರಿಯೆ ನಡೆಯುತ್ತದೆ. ಮುಖ್ಯಮಂತ್ರಿಗಳು ಆಯ್ಕೆಯಾದ ಮೇಲೆ ಕೆಲವು ತಿಂಗಳುಗಳವರೆಗೆ ಮಂತ್ರಿಗಿರಿ 'ನನಗೆ ಬೇಕು, ನನಗೆ ಬೇಕು' ಎಂಬ ಹಾಹಾಕಾರ ಹುಟ್ಟಿ ಅದಕ್ಕೆ ಬೇಕಾದ ಎಲ್ಲ ರೀತಿಯ ಲಾಬಿಗಳು ನಡೆಯುತ್ತವೆ. ಆದ್ದರಿಂದಲೇ ನಮ್ಮ ಎಷ್ಟೋ ಸರಕಾರಗಳಲ್ಲಿ ಸಂಪುಟ ರಚನೆ, ಅಥವಾ ಪುನರ್ರಚನೆ ಆಗುತ್ತಲೇ ಇದ್ದು ಅದೆಂದೂ ಮುಕ್ತಾಯವನ್ನು ತಲುಪೋದೇ ಇಲ್ಲ. ಇನ್ನೂ ಪೂರ್ತಿಯಾಗಿ ಸಂಪುಟವನ್ನು ರಚಿಸಿಲ್ಲ ಅನ್ನೋದು ನಮಗೂ ಒಂದು ಅವಕಾಶ ಸಿಗಬಹುದು ಎಂದು ಕೆಲವರನ್ನು ತುದಿಗಾಲಿನಲ್ಲಿರುವಂತೆ ಮಾಡಿದರೆ ಇನ್ನು ಕೆಲವರನ್ನು ಅಸಮಧಾನ ಹತ್ತಿಕ್ಕಿಕೊಳ್ಳುವಂತೆ ಪ್ರಚೋದಿಸುತ್ತದೆ. ಹೀಗೆ ಆಗಾಗ್ಗೆ ಅವರಿವರ ಕಣ್ಣೊರೆಸುವ ತಂತ್ರವೆಂಬಂತೆ ನಡೆಯುವ ಸಂಪುಟ ವಿಸ್ತರಣೆಗಳು ಅದೆಂದೂ ಪೂರ್ಣವಾಗೋದೂ ಇಲ್ಲ, ಆದರೂ ಎಲ್ಲರ ಅಸಮಧಾನವನ್ನು ತೀರಿಸುವುದಂತೂ ಇನ್ನೂ ಹೆಚ್ಚಿನ ಮಾತು. ಯಾರಿಗೆ ಇಷ್ಟವಿರಲಿ, ಬಿಡಲಿ ನಮ್ಮ ಸಂಪುಟ ವಿಸ್ತರಣೆಗಳು ಇಂದಿಗೂ ನಡೆಯೋದು ಮುಖ್ಯವಾಗಿ ಜಾತಿ ಆಧಾರಿತ ವ್ಯವಸ್ಥೆಯಲ್ಲೇ - ಗೌಡರಿಗೆ, ಲಿಂಗಾಯತರಿಗೆ, ಪರಿಶಿಷ್ಟರಿಗೆ, ಬ್ರಾಹ್ಮಣರಿಗೆ ಮುಂತಾದವರಿಗೆಲ್ಲ ಇಂತಿಷ್ಟು ಎಂದು ಸೀಟುಗಳನ್ನು ಹಂಚಿಕೊಡುವುದು ಸುಲಭದ ಕೆಲಸವೇನಲ್ಲ, ಹೇಗೇ ಮಾಡಿದರೂ ಕೊನೆಗೆ ಪ್ರತಿ ಜಿಲ್ಲೆಗೊಂದು ಮಂತ್ರಿ ಸಿಗದ ಪರಿಸ್ಥಿತಿಯೂ ಹುಟ್ಟಿ ಜನರ ಅಸಮಧಾನವನ್ನು ತಮ್ಮ ಸದುಪಯೋಗಕ್ಕೆ ಬಳಸಿಕೊಳ್ಳುವವರಿಗೆ ಬೇಕಾದಷ್ಟು ಅವಕಾಶಗಳು ದೊರೆಯುತ್ತವೆ.

ನಾನು ದೇವೇಗೌಡರ ಬಗ್ಗೆ ಯೋಚಿಸಿದಷ್ಟೂ ಅವರು ಇನ್ನೂ ಸಂಕೀರ್ಣ ಮನಸ್ಥಿತಿಯವರಾಗಿ ಕಂಡು ಬರುತ್ತಾರೆ - ಹಲವು ನಾಟಕಗಳ ಸೂತ್ರಧಾರರಾಗಿ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ 'ಯಶಸ್ವಿ' ರಾಜಕಾರಣಿಯೆಂಬ ಪಟ್ಟಕ್ಕೂ ಪಾತ್ರರಾಗುತ್ತಾರೆ. ಪ್ರಸಕ್ತ ಸನ್ನಿವೇಶದಲ್ಲಿ ಅವರ ರಾಜಕೀಯ ನಿಲುವುಗಳು, ಆಶೋತ್ತರಗಳು ಏನೇ ಇರಲಿ ತಮ್ಮ ಇಬ್ಬರು ಮಕ್ಕಳನ್ನು ವಿಧಾನ ಸೌಧದಲ್ಲಿ ಕೂರಿಸಿ ಮಂತ್ರಿಗಳನ್ನಾಗಿ ಮಾಡಿದ ಹೆಮ್ಮೆ ಅವರದು. ಒಬ್ಬ ಮಗ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡು ರಾಜ್ಯವನ್ನು ತುಂಬಿಕೊಂಡಿದ್ದರೆ, ಇನ್ನೊಬ್ಬ ಮಗ ಇಂಧನ ಹಾಗೋ ಲೋಕೋಪಯೋಗಿ ಮಂತ್ರಿಯಾಗಿ ರಾಜ್ಯವನ್ನು ಪೂರ್ತಿಯಾಗಿ ಆವರಿಸಿಕೊಂಡಿದ್ದಾರೆ. ದೇವೇಗೌಡರನ್ನು ಹತ್ತಿರದಿಂದ ಬಲ್ಲವರು ನಂಬಿಕೊಂಡಂತೆ ಹಾಗೂ ಹಲವು ಲೋಕೋಪಯೋಗಿ ಇಲಾಖೆಯ ಮಂತ್ರಿಗಳನ್ನು ನಾನು ಬಲ್ಲವನಾಗಿ ಒಂದು ಮಾತನ್ನು ಖಂಡಿತವಾಗಿ ಹೇಳಬಹುದು - ಯಾರಿಗೆ ಲೋಕೋಪಯೋಗಿ ಖಾತೆ ಸಿಗುತ್ತದೆಯೋ ಅವರಿಗೆ ಇನ್ನು ನೂರು ತಲೆಮಾರುಗಳ ಕಾಲ ಕುಳಿತು ತಿನ್ನುವಷ್ಟು ಆಸ್ತಿಯನ್ನು ಮಾಡುವ ಅವಕಾಶ ಸಿಗುತ್ತದೆ, ದೇವೇಗೌಡರೂ ಹಿಂದೆ ತಾವು ಲೋಕೋಪಯೋಗಿ ಮಂತ್ರಿಗಳಾಗಿದ್ದಾಗ ಬೇಕಾದಷ್ಟು 'ಉರಿ'ದವರೇ - ಹೀಗೆ ರೇವಣ್ಣನವರಿಗೆ ಲೋಕೋಪಯೋಗಿ ಮಂತ್ರಿಯಾಗುವ ಅವಕಾಶ ಸಿಕ್ಕಿದ್ದು, ಅದರ ಜೊತೆಯಲ್ಲಿ 'ಇಂಧನ'ವನ್ನೂ ಸೇರಿಸಿದ್ದೂ ಎಲ್ಲವೂ ಒಂದು ಅಚ್ಚುಕಟ್ಟಾದ ಪೂರ್ವಯೋಜಿತ ಸೂತ್ರದಂತೆ ಕಂಡುಬರುತ್ತದೆ, ಆ ಸೂತ್ರದ ಕೇಂದ್ರದಲ್ಲಿ ದೇವೇಗೌಡರು ತಮ್ಮ ಎಂದಿನ ಭಾರವಾದ ಮುಖದಲ್ಲಿ ನಿಶ್ಚಿಂತರಾಗಿ ಉಸಿರುಬಿಡುತ್ತಿರುವುದೂ ಕಂಡು ಬಂದಂತಾಗುತ್ತದೆ - ಇನ್ನೇನು ಬೇಕು ದೇವೇಗೌಡರಿಗೆ ಪ್ರಸನ್ನರಾಗಲು? ತಮ್ಮ ದೂರದೃಷ್ಟಿಯಿಂದ ಜಾತಿ ವ್ಯವಸ್ಥೆಯನ್ನಂತೂ ನಿರ್ಮೂಲನ ಮಾಡಲಾಗಲಿಲ್ಲ, ಕೊನೆಗೆ ತಮ್ಮ ಮಕ್ಕಳಾದರೂ ಒಳ್ಳೊಳ್ಳೆಯ ಸ್ಥಾನದಲ್ಲಿದ್ದಾರಲ್ಲ, ಅಷ್ಟೇ ಸಾಕು!

ಬಿಜೆಪಿಯ ಹಸಿವು ಇನ್ನೂ ಹಿಂಗಿಲ್ಲ, ಈಗಷ್ಟೇ ಅವರಿಗೆಲ್ಲ ಊಟದ ಸಮಯವಾಗಿದೆ. ಕುಮಾರಸ್ವಾಮಿಯ ಸರ್ಕಾರದಲ್ಲಿ ತನ್ನ ಅಣ್ಣನಷ್ಟೇ ಅಲ್ಲ, ತಮ್ಮ ಖಾಸಾಸ್ನೇಹಿತರೂ ಇದ್ದಾರೆ - ಸಾರ್ವಜನಿಕವಾಗಿ ಕಾಲುಮುಟ್ಟಿ ನಮಸ್ಕರಿಸುವ 'ವಿನಯವಂತ'ರೂ ಇದ್ದಾರೆ. ಪರವಾಗಿಲ್ಲ, ಕುಮಾರಸ್ವಾಮಿ ಬೇರೇನನ್ನು ಮಾಡದಿದ್ದರೂ ತಮ್ಮ ಇಷ್ಟು ಚಿಕ್ಕವಯಸ್ಸಿನ್ನಲ್ಲಿ ಜೊತೆಯವರು ಪೂಜಿಸುವಷ್ಟು ಗೌರವವನ್ನು ಸಂಪಾದಿಸಿಕೊಂಡಿದ್ದಾರೆ. ಆದರೆ, ಸಂಪುಟ ವಿಸ್ತರಣೇ ಇನ್ನೂ 'ಪೂರ್ಣ'ವಾಗದಿದ್ದುದು ಕೆಲವರ ಮನಸ್ಸಿನಲ್ಲಿ ಮೂಗಿನ ತುದಿಗೆ ತುಪ್ಪ ಸವರಿದಂತಾಗಿಯೇ ಇನ್ನೂ ಇದೆ, ಮತ್ತೆ ಕೆಲವು ತಿಂಗಳುಗಳಲ್ಲಿ ವಿಸ್ತರಣೆಯ ಇನ್ನೊಂದ ಅಂಕದ ತೆರೆಬೀಳುತ್ತದೆ, ಹೀಗೆ ಹಲವು ಹಂತಗಳ ವಿಸ್ತರಣೆ ಮುಗಿದು ಏನೇ ಆದರೂ ತಮಗೆ ಖುರ್ಚಿ ಸಿಗುವುದಿಲ್ಲ ಎಂದು ಗೊತ್ತಾದ ಕೆಲವರು 'ರೋಸಿ'ಹೋಗುತ್ತಾರೆ, ಹೀಗೆ ರೆಬೆಲ್ ಆದವರು ಏನನ್ನಾದರೂ ಮಾಡಿ ಸರ್ಕಾರವನ್ನು ಉರುಳಿಸಿ - ಚುನಾವಣೆ ನಡೆಸಿ ಜನತೆಯ ಮುಂದೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ಅಂತಹವರನ್ನೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಸಮಾಧಾನ ಪಡಿಸುವ ಯತ್ನ ನಡೆದರೂ ರೆಬೆಲ್‌ಗಳು ಏನಾದರೊಂದು ಒಳಸಂಚನ್ನು ರೂಪಿಸಿಯೇ ತೀರುತ್ತಾರೆ.

ಆದರೆ ಬೇರೆಲ್ಲ ಸಮಯದಲ್ಲಿ ಹೀಗೆ ತಿರುಗಿಬಿದ್ದವರು ಬರೀ ಮುಖ್ಯಮಂತ್ರಿಗಳನ್ನು ಮಾತ್ರ ಎದುರಿಸಬೇಕಿತ್ತು, ಇವತ್ತಿನ ಪರಿಸ್ಥಿತಿಯಲ್ಲಿ ಅವರು ದೇವೇಗೌಡರನ್ನು ಮೊದಲು ಎದುರಿಸಬೇಕು, ಅದರಲ್ಲೂ 'ಪ್ರಸನ್ನ'ರಾದ ದೇವೇಗೌಡರು 'ಚಿಂತಿತ' ಮನಸ್ಸಿನ ದೇವೇಗೌಡರಿಗಿಂತ ಬಹಳ ಡೇಂಜರ್ ಮನುಷ್ಯ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ - ತನ್ನ ಮರಿಗಳನ್ನು ಕಾಯುವ ಸಿಂಹಿಣಿಯ ಛಲವಿದೆ ಅವರಲ್ಲಿ, ಹುಷಾರ್!

Wednesday, June 21, 2006

ವ್ಯಕ್ತಿ ಹಾಗೂ ವ್ಯವಸ್ಥೆ

ಒಬ್ಬ ವ್ಯಕ್ತಿ ಒಂದು ಸಂಸ್ಥೆಯ ರೀತಿ ಕೆಲಸ ಮಾಡೋದು, ಒಬ್ಬ ವ್ಯಕ್ತಿ ತನ್ನ ವೈಯುಕ್ತಿಕ ಧೋರಣೆಗಳನ್ನು ಬದಿಗಿಟ್ಟು ಉನ್ನತವಾದ ಗುರಿಯನ್ನಿಟ್ಟು ಶ್ರಮಿಸೋದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ, ಉದಾಹರಣೆಗೆ ಒಂದು ದೇಶದ ಪ್ರಧಾನ ಮಂತ್ರಿ ಅಥವಾ ಅಧ್ಯಕ್ಷ ಸ್ಥಾನದಲ್ಲಿರೋ ಯಾರಿಗೇ ಆದರೂ ಅವರನ್ನು ಪೋಷಿಸೋ ಒಂದು ಸಮೂಹ ಇರುತ್ತೆ, ಅವರಿಗೆ ಹೀಗಲ್ಲ ಹಾಗೆ ಅನ್ನೋ ಒಂದು ವ್ಯವಸ್ಥೆ ಇರುತ್ತೆ - ಯಾವಾಗ ಈ ವ್ಯವಸ್ಥೆ ಅಚ್ಚುಕಟ್ಟಾಗಿ ಕೆಲಸ ಮಾಡುತ್ತೋ ಆಗ ಆ ವ್ಯಕ್ತಿ ವೈಯುಕ್ತಿಕವಾಗಿ ಅದಕ್ಕಿಂತ ಹೆಚ್ಚಿನ ರೀತಿಯಲ್ಲಿ ದೇಶ ಅಥವಾ ಸಂಸ್ಥೆಯ ಮಟ್ಟದಲ್ಲಿ ಯಶಸ್ಸನ್ನುಗಳಿಸಲು ಸಾಧ್ಯವಾಗುತ್ತೆ. ದೊಡ್ಡ ಕಂಪನಿಗಳ ಅಧಿಕಾರಿಗಳು, ಎಲ್ಲಾ ದೇಶದ ಹಿರಿಯ ನಾಯಕರುಗಳು ಮುಂತಾದವರಿಗೆ ಅನ್ವಯಿಸೋ ಈ ಸಾಂಸ್ಥಿಕ ವ್ಯವಸ್ಥೆಯ ಬಗ್ಗೆ ಯೋಚಿಸಿದಾಗ, ಅದೇ ಸಮಯಕ್ಕೆ ಕರ್ನಾಟಕದ ಲೋಕಾಯುಕ್ತರ ಬಗ್ಗೆ ಓದಿದ್ದರಿಂದಲೋ ಏನೋ, ಲಂಚದ ಹಗರಣದಲ್ಲಿ ಲೋಕಾಯುಕ್ತರ ಬಲೆಗೆ ಬಿದ್ದವರಿಗೂ ಒಂದು ಸುವ್ಯವಸ್ಥಿತ ಜಾಲವಿರುತ್ತೆ ಅನ್ನೋದು ಗಮನಕ್ಕೆ ಬಂತು.

ಲೋಕಾಯುಕ್ತರು ಅದೆಷ್ಟೋ ಜನರನ್ನು ಹಿಡಿದು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡರು ಎಂದು ಆಗಾಗ್ಗೆ ಓದುತ್ತಲೇ ಇರುತ್ತೇನೆ. ಹೀಗೆ ದುತ್ತನೆ 'ಪೋಲೀಸ್ ಕಾನ್‌ಸ್ಟೇಬಲ್ ಒಬ್ಬನ ಬಳಿ ಕೋಟ್ಯಾಂತರ ರೂಪಾಯಿ ಇದ್ದ' ಸುದ್ದಿಗಳು ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾಗಿ ಎಲ್ಲರ ಗಮನ ಸೆಳೆಯುತ್ತದೆ. ಹಲವಾರು ವರ್ಷಗಳಿಂದ ಲಂಚದ ಪ್ರಕ್ರಿಯೆಯಲ್ಲಿ ಕೊಬ್ಬಿರೋ ಲೋಕಾಯುಕ್ತರ ಬಲಿಗಳು 'ಅಬ್ಬಾ, ಇಷ್ಟೊಂದು ಆಸ್ತಿ ಮಾಡಿದ್ದಾರೆಯೇ!' ಎಂದು ಒಮ್ಮೆ ಆಶ್ಚರ್ಯ ಮೂಡಿಸಿ ಜನರ ಮನಸ್ಸಿನಿಂದ ನಿರ್ಗಮಿಸಿಬಿಡುತ್ತವೆ. ಹೀಗೆ ಲೋಕಾಯುಕ್ತರ ಬಲೆಗೆ ಬಿದ್ದವರಿಗೆ ಮುಂದೇನು ಆಯಿತು, ಎಷ್ಟು ಜನರಿಗೆ ಯಾವ ರೀತಿ ಶಿಕ್ಷೆ ಸಿಕ್ಕಿತು ಎನ್ನುವುದನ್ನು ನಾನು ಫಾಲೋ ಮಾಡುವುದಿಲ್ಲವೋ ಅಥವಾ ಅದರ ಬಗ್ಗೆ ಯಾರೂ ಬರೆಯುವುದಿಲ್ಲವೋ ಅಥವಾ ಅವರಿಗೆ ಏನೂ ಆಗುವುದಿಲ್ಲವೋ ನನಗೆ ಗೊತ್ತಿಲ್ಲ. 'ಲೋಕಾಯುಕ್ತರು ಹೀಗೆ ಹಿಡಿಯೋದರಿಂದ ಏನಾಯ್ತು?' ಎನ್ನುವ ಪ್ರಶ್ನೆಯನ್ನು ಕೇಳುವುದು ನನ್ನ ಇಂಗಿತವಲ್ಲ, ಅದರ ಬದಲಿಗೆ ಲಂಚದ ಬಲೆಯಲ್ಲಿ ಸಿಕ್ಕಿ ಬಿದ್ದ ಪ್ರತಿಯೊಬ್ಬ ಅಧಿಕಾರಿಗೂ ಒಂದು ಜಾಲ (ನೆಟ್‌ವರ್ಕ್) ಇದ್ದಿರುತ್ತಲ್ಲ, ಅದರ ಮೂಲವನ್ನು ಯಾರೂ ಏಕೆ ಶೋಧಿಸೋದಿಲ್ಲ? ಬೆಂಗಳೂರಿನಲ್ಲಾಗಲೀ ಮತ್ತೆಲ್ಲಾದರೂ ಆಗಲಿ ಲಂಚದ ಬಲೆಯಲ್ಲಿ ಸಿಕ್ಕಿಹಾಕಿಕೊಂಡ ಪ್ರತಿಯೊಬ್ಬರೂ ಒಪ್ಪಿಕೊಳ್ಳೋದು ಎರಡು ವಿಷಯಗಳನ್ನು ೧) ಅವರು ಪಡೆದ ಲಂಚ 'ಉಳಿದ ಕಡೆ' ವಿಲೇವಾರಿಯಾಗುತ್ತಿದ್ದು ಅವರು ತಮ್ಮ ಪಾಲಿನ ಹಣವನ್ನು ಮಾತ್ರ ತಾವಿಟ್ಟುಕೊಳ್ಳುತ್ತಿದ್ದರು, ೨) ಬೆಂಗಳೂರಿನಲ್ಲಿ ಒಬ್ಬ ಸಬ್-ರಿಜಿಸ್ಟ್ರ್‍ಆರ್‍ ಆಗಲೋ ಅಥವಾ ಆರ್‍‌ಟಿಓ ಆಗಲೋ ಅದಕ್ಕೆ 'ಬೇಕಾದ' ಹಣವನ್ನು ಯಾರಿಗೋ ಕೊಟ್ಟಿದ್ದರಿಂದಲೇ ಆ ಕೆಲಸ ಅವರಿಗೆ ಸಿಕ್ಕೋದು - ಹೀಗೆ ಇಂತಹ ಕೆಲಸ ಸಿಗಬೇಕಾದರೆ ಕೊಟ್ಟ ಲಂಚ ಅವರ ಉದ್ದಿಮೆಯ ಬಂಡವಾಳವಾಗುತ್ತದೆ, ಹೀಗೆ ತೊಡಗಿಸಿದ ಬಂಡವಾಳಕ್ಕೆ ಪ್ರತಿಯಾಗಿ ಬಂದ ಲಂಚವನ್ನು 'ಮಾಮೂಲಿ'ಯಾಗಿ ಸ್ವೀಕರಿಸುತ್ತಿದ್ದರು.

ಕೆಲವು ವರ್ಷಗಳ ಹಿಂದೆ ಡಾ.ಸುದರ್ಶನ್ (ಲೋಕಾಯುಕ್ತರ ಜೊತೆಯಲ್ಲಿ ಕೆಲಸ ಮಾಡುವವರು) ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯದಲ್ಲಿ ಮಾತನಾಡುತ್ತಿದ್ದಾಗ ಒಬ್ಬ ಎಮ್‌ಎಲ್‌ಎ ಉದಾಹರಣೆಯನ್ನು ಕೊಟ್ಟಿದ್ದರು - ಆತ ಸಾರ್ವಜನಿಕವಾಗಿಯೇ ಲೋಕಾಯುಕ್ತರನ್ನು ಪ್ರಶ್ನಿಸಿದ್ದರಂತೆ - ಒಂದು ಪ್ರದೇಶದಿಂದ ಜನರ ಪ್ರತಿನಿಧಿಯಾಗಿ ಆಯ್ಕೆಯಾಗಿ ಬರಲು ಚುನಾವಣೆ ಮತ್ತಿತರ ಖರ್ಚುಗಳಾಗಿ ಹದಿನೈದು ಲಕ್ಷದವರೆಗೆ ಹಣವನ್ನು ಖರ್ಚುಮಾಡುತ್ತೇವೆ, ಹೀಗೆ ಆಯ್ಕೆಯಾಗಿ ಬಂದನಂತರ ಸರ್ಕಾರ ಕೊಡೋ ಜುಜುಬಿ ಹಣದಲ್ಲಿ ಬದುಕಲು ಅಸಾಧ್ಯ, ಅಲ್ಲದೇ ನಾವು ತೊಡಗಿಸಿದ ಬಂಡವಾಳಕ್ಕೆ ಪ್ರತಿಯಾಗಿ ಲಂಚವನ್ನು ಪಡೆದರೆ ತಪ್ಪೇನು? ಎಂಬುದಾಗಿ. ನನ್ನ ಸ್ನೇಹಿತ ರಾಧಾಕೃಷ್ಣ ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗಿನ ಕಾಲದಲ್ಲಿ ಪೋಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಯ ಸಂದರ್ಶನಕ್ಕೆ ಹೋದಾಗ ಅಲ್ಲಿನ ಅಧಿಕಾರಿಗಳು ಎಲ್ಲರ ಎದುರೇ ಲಕ್ಷಗಟ್ಟಲೇ ಹಣವನ್ನು ಲಂಚದ ರೂಪದಲ್ಲಿ ಕೇಳುತ್ತಿದ್ದರಂತೆ - ಸಾಗರದಲ್ಲಿ ರೈತಕುಟುಂಬದಲ್ಲಿ ಬಂದ ರಾಧಾಕೃಷ್ಣ ಹತ್ತು ಲಕ್ಷವನ್ನು ಹೊಂದಿಸಿಕೊಡಬೇಕೆಂದರೆ ಸಾಕಷ್ಟು ಕಷ್ಟವಿದೆ, ಒಂದು ವೇಳೆ ಹಾಗೆ ಹೊಂದಿಸಿಕೊಟ್ಟರೂ ಮುಂದೆ ಲಂಚವನ್ನು ಪಡೆಯದೇ ಬರುವ ಸಂಬಳದಲ್ಲಿ ಅವನ 'ಬಂಡವಾಳ' ಗೀಟುವುದಾದರೂ ಹೇಗೆ ಎನ್ನಿಸಿತ್ತು. ರಾಧಾಕೃಷ್ಣನಿಗೆ ಆ ಲಂಚವನ್ನು ಕೊಡಲಾಗದಿದ್ದುದರಿಂದ ಕೆಲಸವೇ ಸಿಗಲಿಲ್ಲ, ಆದರೆ ಆತನೇ ಹೇಳಿದ ಹಾಗೆ ಶಾಸಕರು, ಮಂತ್ರಿಗಳು ಎಲ್ಲರೂ ಈ ಹಣದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಶಾಮೀಲಾದವರೇ. ಹೀಗೆ ಒಂದು ಲಂಚದ ಪ್ರಕರಣದ ಹಿಂದೆ ಒಂದು ದೊಡ್ಡ ವ್ಯವಸ್ಥೆಯೇ ಇದೆ, ಒಬ್ಬ ವ್ಯಕ್ತಿ ಪಡೆದ ಲಂಚ ಮೇಲಿನವರಲ್ಲಿ ಅವರವರ 'ಯೋಗ್ಯತೆ'ಗನುಸಾರವಾಗಿ ಸಮನಾಗಿ ಹಂಚಿಕೊಳ್ಳುವ ವ್ಯವಸ್ಥೆ ಇದೆ - ಹೀಗೇ ಇರಬೇಕೆಂದು ಎಲ್ಲಿಯೂ ಬರೆದಿಡದಿದ್ದರೂ ದಶಕಗಳಿಂದ ಹಣ ಹಂಚಿಹೋಗುವ ಪ್ರಕ್ರಿಯೆಗಳನ್ನೊಳಗೊಂಡ ಸಾಂಸ್ಥಿಕ ನೆಲೆಗಟ್ಟನ್ನು ಅಲುಗಾಡಿಸಿದಾಗಲೇ ಲಂಚದ ಪ್ರಕರಣಗಳಿಗೆ ಒಂದು ರೂಪಬರಬಹುದೇನೋ, ಅದು ಬಿಟ್ಟರೆ ಒಬ್ಬೊಬ್ಬನನ್ನು ಹಿಡಿದು ದಂಡಿಸಿದರೆ ಕೋಟ್ಯಾಂತರ ಜನರ ಮಧ್ಯೆ ಅದರ ಪರಿಣಾಮ ಎಷ್ಟು ಎನ್ನುವುದರ ಬಗ್ಗೆ ಯೋಚಿಸಬೇಕಾಗುತ್ತದೆ.

ಆದರೆ... ಲಂಚದ ಹಗರಣಗಳ ಹಿಂದೆ ಕೂಲಂಕಷವಾಗಿ ಶೋಧನೆಮಾಡಿದಾಗ ಸರ್ಕಾರಗಳು ಉರುಳಬಹುದು, ಆಳುವ ಪಕ್ಷದವರನ್ನು ವಿರೋಧಪಕ್ಷದವರು ಆಡಿಸಬಹುದು, ಆದರೆ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಶಾಮೀಲಾಗಿರೋದರಿಂದ ಎರಡು ಪ್ರಶ್ನೆಗಳೇಳುತ್ತವೆ: ೧) ಹೀಗೆ ಸಂಸ್ಥೆಯಾಗಿ ಕೆಲಸ ಮಾಡುತ್ತಿರುವವರನ್ನು ಹಿಡಿದು ದಂಡಿಸಿಲು ನಮ್ಮಲ್ಲಿ ಸರಿಯಾದ ವ್ಯವಸ್ಥೆ ಇದೆಯೇ? ೨) ಹೀಗೆ ಪ್ರತಿ ಲಂಚದ ಬುಡಕ್ಕೆ ಕೈ ಹಾಕಿ ನೋಡಿದರೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ (ಹೆಚ್ಚೂ-ಕಡಿಮೆ) ಎಲ್ಲರೂ ಇದ್ದಂತಹ ಸಾರ್ವತ್ರಿಕ ರೋಗಕ್ಕೆ ರೋಗಿಗಳಿಗೆ ಕಟಕಟೆ ಹತ್ತಿಸುವವರು ಯಾರು?

***

ಹಿಂದೊಮ್ಮೆ ಪ್ರೀತಿಶ್ ನಂದಿ ತಮ್ಮ ಅಂಕಣದಲ್ಲಿ ಬರೆದಿದ್ದರು - ಈ ಲಂಚದ ಪ್ರಕ್ರಿಯೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಭಾಗಿಗಳೇ, ನಿಮ್ಮ ಬಚ್ಚಲು ಮನೆಯಲ್ಲಿ ನೀವು ಒಂದು ಸಣ್ಣ ಬಕೇಟ್‌ನಲ್ಲಿ ಸೊಳ್ಳೆಗಳನ್ನು ಬೆಳೆಸುತ್ತಿರಬಹುದು ಅಥವಾ ನಿಮ್ಮ ಮನೆಯ ಹತ್ತಿರವಿರುವ ಕೆರೆಯಲ್ಲಿ ಸೊಳ್ಳೆಗಳ ಕೃಷಿ ಮಾಡುತ್ತಿರಬಹುದು, ಇವೆಲ್ಲದರ ಪರಿಣಾಮ ಒಂದೇ.

ನನ್ನ ಪ್ರಕಾರ ಎಲ್ಲಿಯವರೆಗೆ ಲೋಕಾಯುಕ್ತರು ತಮ್ಮ ಬಲೆಗೆ ಬಿದ್ದ ಪ್ರತಿಯೊಂದು ವ್ಯಕ್ತಿಯ ಹಿಂದಿರುವ ಸಾಂಸ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವುದಿಲ್ಲವೋ, ಪ್ರತಿಯೊಂದು ಕೇಸಿನ ರೂಟ್‌ಕಾಸನ್ನು ಕಂಡುಹಿಡಿಯುವುದಿಲ್ಲವೋ ಅಲ್ಲಿಯವರೆಗೆ ಕೋಟ್ಯಾಂತರ ಜನರು ಕೋಟ್ಯಾಂತರ ರೂಪಾಯಿಯನ್ನು ತಿಂದು ತೇಗುತ್ತಿರುವಾಗ ಲೋಕಾಯುಕ್ತರು ಒಬ್ಬೊಬ್ಬರನ್ನು ಜೈಲಿಗೆ ಕಳಿಸುವ ಪ್ರಕ್ರಿಯೆ ಕೆರೆಯ ನೀರಿನ ಒಂದು ಹನಿಯಾಗುತ್ತದೆ. ಇಲ್ಲಿ ಹನಿಹನಿಗೂಡಿ ಹಳ್ಳವಾಗುವುದು ಯಾರೊಬ್ಬರ ಜೀವಿತಾವಧಿಯಲ್ಲೂ ಸಾಧ್ಯವಾಗದು.