Showing posts with label ಬದುಕು. Show all posts
Showing posts with label ಬದುಕು. Show all posts

Tuesday, October 02, 2007

ಪಟ್ ಪಟ್ಟೀ ಕಥೆ

ಪ್ರತೀ ಸಲ ರಸ್ತೇ ಮೇಲೆ ಮೋಟಾರ್ ಸೈಕಲ್ ಸವಾರರನ್ನು ನೋಡಿದಾಗಲೆಲ್ಲ, ’ಛೇ, ನನ್ನ ಬಳಿಯೂ ಒಂದು ಮೋಟಾರ್ ಸೈಕಲ್ ಇರಬೇಕಿತ್ತು!’ ಎಂದು ಅನ್ನಿಸೋದು ಇವತ್ತಿಗೂ ನಿಜ. ಅದರಲ್ಲೂ ಎರಡು ಚಕ್ರದ ಬೈಸಿಕಲ್‌ನಿಂದ ನಾಲ್ಕು ಚಕ್ರದ ಕಾರಿಗೆ ನೇರವಾಗಿ ಬಡ್ತಿ ಪಡೆದ ನನ್ನಂತಹವರಿಗಂತೂ ಇವತ್ತಿಗೂ ಮೋಟಾರ್ ಸೈಕಲ್ ಇನ್ನೂ ನಿಗೂಢವಾಗಿಯೇ ಉಳಿದಿದೆ ಎಂದರೆ ತಪ್ಪಾಗಲಾರದು. ನಾವು ಸಣ್ಣವರಿದ್ದಾಗ ’ಪಟ್‌ಪಟ್ಟಿ’ ಎಂದು ಕರೆಯುತ್ತಿದ್ದ ಕುತೂಹಲ ತರಿಸುತ್ತಿದ್ದ ವಾಹನ ಇವತ್ತಿಗೂ ನನ್ನ ಮಟ್ಟಿಗೆ ಅದೇ ಕುತೂಹಲವನ್ನು ಉಳಿಸಿಕೊಂಡಿದೆ.

ಮೋಟಾರ್ ಸೈಕಲ್ ಹೊಡೆಯೋದನ್ನು ಯಾರು ಎಷ್ಟೇ ಡೇಂಜರ್ ಎಂದು ಹೇಳಿದರೂ ಅದರಲ್ಲಿರೋ ಸ್ವಾರಸ್ಯವೇ ಬೇರೆ. Robert M. Pirsig ನ ’Zen and the Art of Motorcycle Maintenance’ ಪುಸ್ತಕದ ಮೊದಲಿನಲ್ಲಿ ಹೇಳಿರೋ ಹಾಗೆ (ನೆನಪು) ಮೋಟಾರ್ ಸೈಕಲ್ ಸವಾರರ ಹಾಗೂ ರಸ್ತೆಯ ನಡುವಿನ ಅನ್ಯೋನ್ಯತೆ ಹಾಗೂ ಆ ಸಂಬಂಧಗಳು ಅತಿ ಮಧುರವಾದದ್ದು. ಕಾರಿನಲ್ಲಿ ಕುಳಿತು ಹೋಗುವವರಿಗೆ ಆ ರೀತಿಯ ಸಂಬಂಧದ ಅರಿವು ಸಾಧ್ಯವೇ ಇಲ್ಲ. ನಮ್ಮಲ್ಲಿ ಹಿಂದೆ ದೊರೆಯುತ್ತಿದ್ದ ಸುವೇಗ, ಲೂನಾ ಮೊಪೆಡ್ಡುಗಳು ಇಂದಿನ ಹೀರೋ ಪುಕ್ಕ್ ಗಳ ರೂಪದಲ್ಲಿ ಅದೇನೇನೇ ವಿನ್ಯಾಸಗೊಂಡಿದ್ದರೂ, ೩೫ ಸಿಸಿ ಇಂಜಿನ್ ಇಂದ ಹಿಡಿದು ೮೦೦ ಸಿಸಿ ಇಂಜಿನ್‌ವರೆಗೆ ಬೆಳೆದಿದ್ದರೂ ಮೋಟಾರ್ ಸೈಕಲ್ ಅಥವಾ ಮೊಪೆಡ್ಡುಗಳು ಬಹಳ ವಿಶೇಷವಾದವುಗಳೇ.

ನಾಲ್ಕೈದು ವರ್ಷಗಳ ಹಿಂದೆ ನನ್ನ ಅಣ್ಣನ ಯಮಾಹ ಬೈಕ್ (೧೦೦ ಸಿಸಿ) ತೆಗೆದುಕೊಂಡು ನಮ್ಮೂರಿನ ಬಯಲಿನಲ್ಲಿ ಒಂದು ಘಂಟೆ ಪ್ರಾಕ್ಟೀಸ್ ಮಾಡಿದ್ದನ್ನು ಬಿಟ್ಟರೆ ನಾನಿದುವರೆಗೂ ಯಾವುದೇ ಮೋಟಾರ್ ಬೈಕ್ ಅನ್ನು ಇಂಡಿಪೆಂಡೆಂಟ್ ಆಗಿ ಸವಾರಿ ಮಾಡಿದ್ದುದೇ ಇಲ್ಲ. ಭಾರತದಲ್ಲಿ ಬೈಕ್ ಇಲ್ಲದಿದ್ದರೆ ಅದು ಒಂದು ರೀತಿ ಹ್ಯಾಂಡಿಕ್ಯಾಪ್ ಪರಿಸ್ಥಿತಿ ತಂದುಬಿಡುತ್ತೇನೋ ಅನ್ನೋ ಹೆದರಿಕೆ ಹುಟ್ಟುತ್ತಿದ್ದ ಹಾಗೇ ದೇಶ ಬಿಟ್ಟು ಬಂದು ಏಕ್ ದಂ ಕಾರಿಗೆ ಬಡ್ತಿ ಪಡೆಯುವಂತಾದ್ದರಿಂದ ಇವತ್ತಿಗೂ ಮೋಟಾರ್ ಸೈಕಲ್ ಅನ್ನು ನಾನು ಮಿಸ್ ಮಾಡಿಕೊಳ್ಳುತ್ತಿರುವುದು. ನಾನು ಎಷ್ಟೇ ಬೆಳೆದರೂ ಒಂದು ೩೫೦ ಸಿಸಿ ಎನ್‌ಫೀಲ್ಡ್ ಬೈಕ್ ಅನ್ನು ಸ್ಟ್ಯಾಂಡ್ ತೆಗೆದು ಮತ್ತೆ ನಿಲ್ಲಿಸುವ ಶಕ್ತಿಯನ್ನಾಗಲೀ, ಯುಕ್ತಿಯನ್ನಾಗಲೀ ಪಡೆದುಕೊಳ್ಳಲೇ ಇಲ್ಲ. ಅದಕ್ಕೋಸ್ಕರವೇ ಇವತ್ತಿಗೂ ನಮ್ಮೂರಿನ ಗ್ಯಾರೇಜಿನಲ್ಲಿ ಕೆಲಸ ಮಾಡುವ ಇನ್ನೂ ಮೀಸೆ ಚಿಗುರದ ಹುಡುಗರು "ಬುಲೆಟ್" ಬೈಕ್ ಅನ್ನು ಲೀಲಾಜಾಲವಾಗಿ ಓಡಿಸಿ, ನಿಲ್ಲಿಸುವಾಗ ನಾನು ಹೊಟ್ಟೇ ಉರಿಸಿಕೊಳ್ಳುವುದು. ಅಲ್ಲಿನ ಜನ ನಿಭಿಡ ಗಲ್ಲಿಗಳಲ್ಲಿ ಮೋಟಾರ್ ಬೈಕ್ ಮುಂದೆ ಮತ್ತೊಂದು ವಾಹನವೇ ಇಲ್ಲ ಎನ್ನುವುದನ್ನಾಗಲೀ, ಬುಲೆಟ್ ಬೈಕ್ ಮುಂದೆ ಮಾರುತಿ ಕಾರು ಕೂಡಾ ಸಪ್ಪೆಯೇ ಎಂದು ಹೇಳುವುದನ್ನಾಗಲೀ ನೀವೂ ಕೇಳಿರಬಹುದು.

ಮೋಟಾರ್ ಬೈಕ್ ಅವಿಷ್ಕಾರ ಮಾನವನ ಮಹಾಸಾಧನೆಗಳಲ್ಲೊಂದು. ನಮ್ಮೂರಿನಲ್ಲಿ ಹಿಂದೆ ಮಾಮೂಲಿ ಸೈಕಲ್ (ಬೈಸಿಕಲ್)ಗಳಿಗೂ ಒಂದು ಯಂತ್ರವನ್ನು ಜೋಡಿಸಿ ಅದರ ಮೂಲಕ ಪೆಡಲ್ ಮಾಡುವುದನ್ನು ತಪ್ಪಿಸಿದ್ದನ್ನು ನಾನು ನೋಡಿದ್ದೇನೆ. ಮುಂದೆ ಅವೇ ಲೂನಾ, ಸುವೇಗ ಮೊಪೆಡ್ಡುಗಳಾಗಿ ಜೀವ ತಳೆದಿದ್ದು. ಅಂತಹ ಮೊಪೆಡ್ಡುಗಳಿಗೆ ಗಿಯರ್ ಅಳವಡಿಸಿ ಅವುಗಳನ್ನು ಸ್ಕೂಟರ್, ಮೋಟಾರ್‍ ಬೈಕ್ ಮಾಡಿದ್ದಿರಬಹುದು. ಇವುಗಳಲ್ಲಿ ದೇಸೀ ತಂತ್ರಜ್ಞಾನವೆಷ್ಟಿದೆಯೋ ಇಲ್ಲವೋ ಗೊತ್ತಿಲ್ಲ, ಆದರೂ ಆಗಿನ್ನೂ ಹೊಂಡಾ, ಯಮಾಹ, ಕವಾಸಾಕಿ ಅಂತಹ ಹೆಸರುಗಳೇನಿದ್ದರೂ ಪತ್ರಿಕೆಗಳಲ್ಲಿ ಓದಲಿಕ್ಕೆ ಸಿಗುತ್ತಿದ್ದವೇ ವಿನಾ ನಿಜ ಜೀವನದಲ್ಲಿ ನೋಡಲು ಸಿಗುತ್ತಿರಲಿಲ್ಲ. ಎಂಭತ್ತರ ದಶಕದ ಮೊದಲಲ್ಲಿ ಇರಬೇಕು (ಸರಿಯಾಗಿ ಗೊತ್ತಿಲ್ಲ), ಒಂದೊಂದು ಎಕರೆ ಅಡಿಕೆ ತೋಟವಿದ್ದವರೂ ಒಳ್ಳೇ ಸೀಜನ್ ನಲ್ಲಿ ಮನೇ ಮುಂದೆ ಒಂದು ಬೈಕ್ ನಿಲ್ಲಿಸುವಂತಾದದ್ದು. ಅವುಗಳ ಜೊತೆ ಎಂಟು ಒಂಭತ್ತು ರೂಪಾಯ್ ಗೆ ಒಂದು ಲೀಟರ್ ಪೆಟ್ರೋಲ್ ಹಾಕಿಸಿ ನಲವತ್ತು ಐವತ್ತು ಕಿಲೋ ಮೀಟರ್ ಓಡಿಸುತ್ತಿದ್ದ ಜನರು ಪ್ರಪಂಚ ಬದಲಾಗುತ್ತಿದ್ದ ಹಾಗೆ ಇವತ್ತು ಐವತ್ತು ಅರವತ್ತು ರೂಪಾಯ್ ಗೆ ಒಂದು ಲೀಟರ್ ಪೆಟ್ರೋಲ್ ಆದರೂ ಇನ್ನೂ ತಮ್ಮ ಹಳೆಯ ಬೈಕ್‌ಗಳನ್ನು ಕೈ ಬಿಡದಿದ್ದುದು. ಯಜ್ಡಿ, ಜಾವಾ, ಎನ್‌ಫೀಲ್ಡ್ ಇವುಗಳು ನಾನು ನೋಡಿ ಬೆಳೆದ ಬೈಕುಗಳು, ಅವುಗಳ ಸವಾರರು ಯಾವಾಗಲೂ ಆ ಬೈಕುಗಳಷ್ಟೇ ನಿಗೂಢರಾದರೂ ಅವರು ಮನೆಗೆ ಬಂದು ಹೊರ ಹೋಗುವಾಗೆಲ್ಲಾ ’ಪಟ್ ಪಟ್’ ಸದ್ದು ಮಾಡುವುದನ್ನು ಕಂಡು ನಾವು ’ಪಟ್ಟ್ ಪಟ್ಟಿ’ಯನ್ನು ತೆರೆದ ಕಣ್ಣುಗಳಿಂದ ನೋಡಿದ್ದೂ ಅಲ್ಲದೇ ಅವುಗಳ ಸದ್ದಿಗೆ ಬೆಚ್ಚಿ ಬಿದ್ದದ್ದೂ ಇದೆ. ಯಜ್ಡಿ, ಜಾವಾಗಳು ಅವುಗಳದ್ದೇ ಆದ ಒಂದು ಕರ್ಕಷ ಶಬ್ದವನ್ನೇ ತಮ್ಮ ಗುಣವನ್ನಾಗಿ ಮಾಡಿಕೊಂಡಿದ್ದರೆ, ಎನ್‌ಫೀಲ್ಡ್‌ಗೆ ಒಂದು ರಾಜ ಗಾಂಭೀರ್ಯ ಇದೆ - ನಮ್ಮೂರಿನ ಪಡ್ಡೇ ಹುಡುಗರು ನಮ್ಮಣ್ಣನ ಬೈಕ್ ಸದ್ದನ್ನು ದೂರದಿಂದಲೇ ಕೇಳಿ ಯಾರೋ ಇನ್‌ಸ್ಪೆಕ್ಟರ್ ಬಂದರೆಂದು ಜೂಜಾಡುವುದನ್ನು ಬಿಟ್ಟು ಓಡಿ ಹೋಗುವಷ್ಟರ ಮಟ್ಟಿಗೆ!

’ನಿನಗ್ಯಾಕೋ ಬೈಕ್ ಸವಾಸ, ಕಾಲು ಮುರುಕಂತಿ ನೋಡು!’ ಎಂದು ಹೆದರಿಸುತ್ತಿದ್ದ ಹೇಳಿಕೆಗಳು ಅಂದಿನಿಂದ ಇಂದಿನವರೆಗೆ ನನ್ನ ಮತ್ತು ಮೋಟಾರ್ ಬೈಕ್‌ಗಳ ಬಾಂಧವ್ಯದ ನಡುವೆ ಎಂದಿಗೂ ಮುರಿಯಲಾರದಂತ ಅಡ್ಡ ಗೋಡೆಯನ್ನು ಕಟ್ಟುವಲ್ಲಿ ಸಫಲವಾಗಿವೆ. ಇಲ್ಲಿನ ವರ್ಷದ ಆರು ತಿಂಗಳ ಛಳಿಯಾಗಲೀ, ಮತ್ತೊಂದಾಗಲೀ ಬರೀ ನೆಪವನ್ನು ಕೊಡಬಲ್ಲವೇ ವಿನಾ ನಾನೆಂದೂ ಸ್ವಂತ ಬೈಕ್ ಒಂದನ್ನು ಇಟ್ಟುಕೊಂಡು ಲೀಲಾಜಾಲವಾಗಿ ರಸ್ತೆಗಳಲ್ಲಿ ಓಡಿಸಿ ರಸ್ತೆಗೂ ನನಗೂ ಮತ್ತೊಂದಿಷ್ಟು ಆತ್ಮೀಯತೆಯನ್ನು ಬೆಳಸಿಕೊಳ್ಳುವ ಸಮಯ ಬರುತ್ತೋ ಇಲ್ಲವೋ ಯಾರಿಗೆ ಗೊತ್ತು?

Sunday, September 23, 2007

ಭಾನುವಾರದ ಒಣಮನಸ್ಸು

ಇವತ್ತು ಬೆಳಗ್ಗಿನಿಂದಲೂ ಒಂಥರಾ ಯಾರ ಮೇಲಾದ್ರೂ ಕಿರುಚಾಡಬೇಕು ಅನ್ನೋ ಅಸ್ತವ್ಯಸ್ತ ಮನಸು, ಯಾಕ್ ಹೀಗೆ ಅಂತ ನೋಡ್ತಾ ಹೋದ್ರೆ ಸಾವಿರದ ಒಂದು ಕಾರಣಗಳು...ನಾನೂ moody ಆಗಿ ಬಿಟ್ಟೆನೇ ಎಂದು ಚಿವುಟಿ ನೋಡಿಕೊಳ್ಳುವಷ್ಟರ ಮಟ್ಟಿಗೆ... ಸ್ವಲ್ಪ ಕೆದಕಿ ನೋಡಿದಾಗ ಒಂದು ಮಹಾ ಕಾರಣ ಗಂಟು ಬಿದ್ದಿತು. ಎರಡು ವಾರದ ಹಿಂದೆ ನನ್ನ ಪರ್ಸನಲ್ ಲ್ಯಾಪ್‌ಟಾಪಿನ ಹಾರ್ಡ್ ಡ್ರೈವ್ ಮಠ ಹತ್ತಿ ಹೋಗಿದ್ದು, ಇವತ್ತು ಅದನ್ನು ರಿಪೇರಿ ಮಾಡಿ ಡೇಟಾ ರಿಕವರಿ ಮಾಡುವ ಪುಣ್ಯಾತ್ಮ ಕೊಟ್ಟ ಎಸ್ಟಿಮೇಟನ್ನ್ ನೋಡಿದ ಮೇಲೆ ಡೇಟಾ ಮುಖ್ಯವೋ ಹಣ ಮುಖ್ಯವೋ ಎಂದು ಒಂದನೇ ಕ್ಲಾಸಿನ ಹುಡುಗನ ಹಾಗೆ ಮನಸಿನಲ್ಲೇ ಕೂಡಿಸಿ ಭಾಗಿಸಿ ಗುಣಿಸಿ ಕಳೆದರೂ ಉತ್ತರ ದೊರೆಯವಲ್ಲದು.

ಸುಮಾರು ಒಂದು ತಿಂಗಳ ಹಿಂದೆ ನನಗೇ ನಾನು ರಿಮೈಂಡರ್ ಬರೆದುಕೊಂಡು ಒಂದು ದಿನ ಪರ್ಸನಲ್ ಲ್ಯಾಪ್‌ಟಾಪಿನ ಡೇಟಾ ಬ್ಯಾಕ್‌ಅಪ್ ಮಾಡಿಡಬೇಕು ಎಂದುಕೊಂಡಿದ್ದೆ. ಅದಾದ ಒಂದು ವಾರದ ನಂತರ ಇದ್ದಕ್ಕಿದ್ದ ಹಾಗೆ ಒಂದು ಬ್ಲೂ ಸ್ಕ್ರೀನ್ ಎರರ್ ಮೆಸೇಜ್ ಬಂತು, ಎರರ್ ಅನ್ನು ಓದಿ ಬರೆದುಕೊಳ್ಳಲೂ ಆಸ್ಪದ ಕೊಡದ ಹಾಗೆ ಸಿಸ್ಟಂ ನಿಂತು ಹೋಯಿತು. ಮತ್ತೆ ಪುನಃ ಚಾಲೂ ಮಾಡಿ ನೋಡಿದರೆ ಕೆಲಸ ಮಾಡುತ್ತಿಲ್ಲ, ಬದಲಿಗೆ ’ಕ್ಲಿಕ್ ಕ್ಲಿಕ್’ ಶಬ್ದ ಬೇರೆ. ಅಷ್ಟು ಹೊತ್ತಿಗೆಲ್ಲಾ ನನಗೆ ಆಗಿದ್ದೇನು ಎಂದು ಗೊತ್ತಾಗಿ ಹೋಗಿತ್ತು, ಇನ್ನು ಹಾರ್ಡ್ ಡ್ರೈವ್ ತೆರೆದೇ ಅದರಲ್ಲಿರೋ ಡೇಟಾ ರಿಕವರಿ ಮಾಡಬೇಕು, ಹೆಚ್ಚೆಂದರೆ ಒಂದು ಐನೂರು ಡಾಲರ್ ಖರ್ಚಾಗುತ್ತೇನೋ ಎಂದುಕೊಂಡಿದ್ದವನಿಗೆ ಇವತ್ತಿನ ಎಸ್ಟಿಮೇಟ್ ಪ್ರಕಾರ ಸಾವಿರದ ಏಳುನೂರು ಡಾಲರುಗಳಂತೆ! ಬೇರೆಡೆ ಕೇಳಿ ನೋಡಬೇಕು, ಆದರೂ ಐನೂರು ಡಾಲರುಗಳಿಗೆ ಅದನ್ನು ಬಿಚ್ಚಿ ಸರಿ ಮಾಡುವ ಭೂಪ ಸಿಗುವವರೆಗೆ ಇನ್ನು ಅದೆಷ್ಟು ವರ್ಷಗಳು ನನಗೆ ಬೇಕೋ!

ಆ ಹಾರ್ಡ್‌ಡ್ರೈವ್‌ನಲ್ಲಿ ಅಸಂಖ್ಯ ಫೈಲುಗಳು ನನಗೆ ಬೇಕಾದವುಗಳು ಇದ್ದವು - ಫೋಟೋಗಳು, ಹಾಡುಗಳು, ಸ್ಪ್ರೆಡ್‌ಶೀಟುಗಳು, ಡಾಕ್ಯುಮೆಂಟುಗಳು, ನಾನು ಈ ಕಂಪನಿ ಸೇರಿದಂದಿನ ಮೊದಲ ದಿನದಿಂದ ಪೇರಿಸಿಟ್ಟ ಇ-ಮೇಲುಗಳು, ’ಅಂತರಂಗ’ದ ಒರಿಜಿನಲ್ ಫೈಲುಗಳು, ನಾನಾ ರೀತಿಯ ಸಾಫ್ಟ್‌ವೇರುಗಳು, ಇತ್ಯಾದಿ. ಈಗ ಅವುಗಳಿಗೆಲ್ಲ ಒಂದೊಂದು ಬೆಲೆ ಕಟ್ಟಿ ಅವುಗಳ ಮೊತ್ತವನ್ನು ತುಲನೆ ಮಾಡಿ ನೋಡಬೇಕಾದ ಸಂದರ್ಭ ಬಂದಿದೆ. ಅವುಗಳೆಲ್ಲ ಬೇಕೋ, ಬೇಡವೋ...ಬೇಕಿದ್ದರೆ ಎಷ್ಟು ಹಣವನ್ನು ಖರ್ಚು ಮಾಡಬಲ್ಲೆ, ಇಡೀ ಕಂಪ್ಯೂಟರ್‌ಗೇ ಸಾವಿರದ ಇನ್ನೂರನ್ನು ಕೊಟ್ಟು ಮೂರು ವರ್ಷ ಉಪಯೋಗಿಸಿರುವ ನಾನು ಇನ್ನು ಕೇವಲ್ ಹಾರ್ಡ್‌ಡ್ರೈವ್ ಸರಿ ಮಾಡಿಸಲು ಹತ್ತಿರ ಹತ್ತಿರ ಅದರ ಎರಡು ಪಟ್ಟು ಹಣವನ್ನು ಖರ್ಚು ಮಾಡುವುದು ತರವೇ ಅಥವಾ ನಮ್ಮ ಮಾಹಿತಿ, ಡೇಟಾ ಮುಖ್ಯ ಅವುಗಳಿಗೆ ಯಾವ ಬೆಲೆಯನ್ನು ಕಟ್ಟಲಾಗದು ಎನ್ನುವುದು ಸರಿಯೇ?

ಈ if ಮತ್ತು when ಗಳ ವ್ಯತ್ಯಾಸದಲ್ಲಿ ನಾನಂತೂ ನಲುಗಿ ಹೋಗಿದ್ದೇನೆ. If the hard drive crashes...ಎನ್ನುವುದಕ್ಕಿಂತ When the hard drive crashes ಎನ್ನುವುದು ಸರಿಯಾದದ್ದು. ಇವತ್ತಲ್ಲ ನಾಳೆ ಹಾಳಾಗುತ್ತದೆ ಎಂದು ಗೊತ್ತಿದ್ದ ನನಗೆ ಬೇಕಾದ್ದನ್ನು ಸಂರಕ್ಷಿಸಿಡ ತಪ್ಪಿಗೆ ಇಂದು ತೆರಬೇಕಾದ ಬೆಲೆ ಬಹಳ. ತಂತ್ರಜ್ಞಾನ ಯಾವುದೇ ರೀತಿಯಲ್ಲಿ ಮುಂದುವರೆಯಲಿ ಬಿಡಲಿ, ನಾವು ಅವಿಷ್ಕರಿಸುವ ಹೊಸ ಮಾರ್ಗಗಳು ಅಷ್ಟೇ ವಲ್ನರೆಬಲ್ ಅನ್ನಿಸೋಕೆ ಶುರುವಾಗಿದ್ದೇ ಇವತ್ತಿನ ಒಣಮನಸ್ಸಿನ ಹಿಂದಿನ ಮೂಲ ಕಾರಣ. ನನ್ನ ವಸ್ತುಗಳಿಗೆ, ಮಾಹಿತಿಗೆ, ಅವುಗಳ ಹಿಂದಿನ ಫೈಲುಗಳಿಗೆ ಬೆಲೆ ಕಟ್ಟಲಾಗದು ಸರಿ, ಆದರೆ ಇವತ್ತಲ್ಲ ನಾಳೆ ಎಂದು ಮುಂದೂಡುತ್ತಲೇ ಬಂದ ಬ್ಯಾಕ್‌ಅಪ್ ಕಾಯಕಕ್ಕೆ ಇಷ್ಟೊಂದು ದೊಡ್ಡ ಹೊಡೆತ ಬೀಳಬಾರದಿತ್ತು. ಹೀಗೇ ಒಂದು ದಿನ ಗೂಗಲ್ ವೇರ್‌ಹೌಸ್‌ಗಳಿಗೆ ಬೆಂಕಿ ಬಿದ್ದು ’ಅಂತರಂಗ’ದಂತಹ ಎಲ್ಲ ಬ್ಲಾಗ್‌ಗಳೂ ತಮ್ಮ ತಮ್ಮ ಹಿಂದಿನ ಫೈಲುಗಳನ್ನು ಕಳೆದುಕೊಂಡವೆನ್ನೋಣ, ಅಂದರೆ ನಮ್ಮ ಇತಿಹಾಸ, ನಾವು ನಡೆದು ಬಂದ ಹಾದಿಗೆ ಅಷ್ಟೇ ಬೆಲೆಯೇ? ಅಥವಾ ನಮ್ಮ ಇತಿಹಾಸ ಎನ್ನುವುದು ಕೆಲವು ಕಂಪ್ಯೂಟರ್ ಸರ್ವರ್ ಅಥವಾ ಹಾರ್ಡ್‌ಡ್ರೈವ್‌ಗಳ ಮೇಲೆ ಅವಲಂಭಿತವಾಗಬೇಕೆ? ಗೂಗಲ್ ಅಥವಾ ಯಾಹೂ ಅಂತಹ ಕಂಪನಿಗಳು ತಮ್ಮ ತಮ್ಮ ಡಿಸಾಸ್ಟರ್ ರಿಕವರಿ ಪ್ರೊಸೀಜರ್ ಪ್ರಕಾರ ಅವರ ಸರ್ವರ್ ಹಾಗೂ ಮಾಹಿತಿಯನ್ನು ಬ್ಯಾಕ್‌ಅಪ್ ಮಾಡಿ ಇನ್ನೆಲ್ಲೋ ಫಿಸಿಕಲ್ ಲೊಕೇಷನ್ನಲ್ಲಿ ಇಟ್ಟಿರಬಹುದು, ಇಡದೆಯೂ ಇರಬಹುದು - ಒಂದು ಇ-ಮೇಲ್ ಅಕೌಂಟ್ ತೆರೆದರೆ ಅದರಲ್ಲಿನ ಟರ್ಮ್ಸ್ ಮತ್ತು ಕಂಡೀಷನ್ಸ್ ಅನ್ನು ಪೂರ್ಣವಾಗಿ ಓದಿದ್ದವರಿಗೆ ಗೊತ್ತಿರುತ್ತದೆ, ಈ ಫ್ರೀ ಆಗಿ ಸಿಗಬಹುದಾದ ಅಮೂಲ್ಯ ಸಾಧನಗಳು ಅಷ್ಟೇ ವಲ್ನರಬಲ್ ಎಂಬುದಾಗಿ.

ಕೆಟ್ಟ ಮೇಲೆ ಬುದ್ಧಿ ಬಂತು - ಎಂದ ಹಾಗೆ ನಾನು ನನ್ನೆಲ್ಲ ಮಾಹಿತಿ/ಡೇಟಾವನ್ನು ಬ್ಯಾಕ್‌‍ಅಪ್ ಮಾಡಿಟ್ಟು ಬಿಟ್ಟಿದ್ದೇನೆ ಎಂದುಕೊಂಡರೆ ಅದು ತಪ್ಪು. ಈಗ ಟೈಪ್ ಮಾಡುತ್ತಿರುವ ಆಫೀಸ್ ಲ್ಯಾಪ್‌ಟಾಪ್, ಮತ್ತೆ ಮನೆಯಲ್ಲಿರುವ ಡೆಸ್ಕ್‌ಟಾಪ್ ಇವೆಲ್ಲವನ್ನೂ ಹಾಗೇ ಬಿಟ್ಟಿದ್ದೇನೆ, ಕೆಟ್ಟು ಹೋದರೆ ಹೋಗಲಿ ಎಂದು. ಅಷ್ಟೊಂದು ಫೈಲುಗಳನ್ನು ಕಳೆದುಕೊಂಡವನಿಗೆ ಇನ್ನೊಂದಿಷ್ಟು ಹೋದರೆ ಏನೂ ಅನಿಸದಿರಬಹುದು ಎಂಬ ಹುಂಬ ನೆಪದ ಹಿನ್ನೆಲೆಯಲ್ಲಿ. ಆದರೆ ಇವತ್ತಲ್ಲ ನಾಳೆ ನನಗೆ ಬೇಕಾದ ಎಲ್ಲ ಫೈಲುಗಳನ್ನು ಡಿವಿಡಿ ಬರ್ನ್ ಮಾಡುವುದರ ಮೂಲಕ ಉಳಿಸಿಕೊಳ್ಳಬೇಕು, ಜೊತೆಗೆ ಯಾವುದಾದರು ಆನ್‌ಲೈನ್ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿ ಕೈ ತೊಳೆದುಕೊಳ್ಳಬೇಕು. ದುಡ್ಡುಕೊಟ್ಟಾದರೂ ಡೇಟಾವನ್ನು ಉಳಿಸಿಕೊಳ್ಳುವುದು ಜಾಣತನ, ಇಲ್ಲವೆಂದಾದರೆ ನನ್ನ ಹಾಗೆ ಒಣ ಭಾನುವಾರವನ್ನಷ್ಟೇ ಅಲ್ಲ, ಇಡೀ ವಾರವನ್ನು ಕಳೆದರೂ ಕಳೆದು ಹೋದುದು ಮತ್ತೆ ಬರಬೇಕಾದರೆ ಬಹಳ ಕಷ್ಟವಿದೆ.

ಇವತ್ತಲ್ಲ ನಾಳೆ - ಹಾಳಾಗಿರುವ ಹಾರ್ಡ್‌ಡ್ರೈವ್ ಅನ್ನು ಭಾರತಕ್ಕೋ, ಸಿಂಗಪುರಕ್ಕೋ, ಮಲೇಶಿಯಾಕ್ಕೋ ಕಳಿಸಿ, ಅಷ್ಟೊಂದು ದುಬಾರಿ ಬೆಲೆಯನ್ನು ತೆರದೆ ಡೇಟಾ ರಿಕವರ್ ಮಾಡಿಸಬಹುದು ಎನ್ನುವುದು ಎಲ್ಲೋ ಅಂತರಾಳದಲ್ಲಿ ಹುಟ್ಟಿ ಬೆಳೆಯುವ ಅಲೆ, ಅಥವಾ ನಂಬಿಕೆ ಅಥವಾ ಹುಂಬತನದ ಪರಮಾವಧಿ. ಏಕೆಂದರೆ ಒಂದು ಪತ್ರವನ್ನು ಮೇಲ್ ಮಾಡೋದಕ್ಕೆ ಎರಡು ವಾರ ತೆಗೆದುಕೊಳ್ಳೋ ನಾನು ಇನ್ನು ಹಾರ್ಡ್‌ಡ್ರೈವ್ ಅನ್ನು ಮತ್ಯಾವುದೋ ದೇಶಕ್ಕೆ ಕಳಿಸಿ ಅದನ್ನು ಫಾಲ್ಲೋ ಅಪ್ ಮಾಡಿ ಯಶಸ್ವಿಯಾಗಿ ಹಿಂತಿರುಗಿಸಿಕೊಳ್ಳುವುದೆಂದರೆ ನನ್ನ ಮಟ್ಟಿಗೆ ಗೌರಿಶಂಕರವನ್ನು ಹತ್ತಿದಂತೆಯೇ ಸರಿ.

ಈಗಿರುವ ಆಪ್ಷನ್ನುಗಳು ಇಷ್ಟೇ - ಒಂದೇ ಒಂದಕ್ಕೆರಡು ಅಥವಾ ಮೂರು ಪಟ್ಟು ಹಣ ತೆತ್ತು ಡೇಟಾ ರಿಕವರಿ ಮಾಡಿಸುವುದು, ಇಲ್ಲಾ ಹೋದರೆ ಹೋಗಲಿ ಎಂದು ಅದನ್ನು ಬದಿಗೆಸೆದು ಮತ್ತೊಂದನ್ನು ತಂದು ಕೂರಿಸುವುದು. ಎಲ್ಲಕ್ಕಿಂತ ಮುಖ್ಯವಾಗಿ ತಪ್ಪಿನಿಂದ ಪಾಠ ಕಲಿಯುವುದು, ಅಲ್ಲಲ್ಲ ಕಲಿತ ಪಾಠವನ್ನು ಆಚರಣೆಗೆ ತರುವುದು!

Friday, September 21, 2007

ಸುಳಿವು ಕೊಡುವ ಸಂಗೀತ

ಜೇಮ್ಸ್ ಬಾಂಡ್ ಚಿತ್ರದಲ್ಲಿ ಅದರ ಥೀಮ್ ಮ್ಯೂಸಿಕ್ ಆಗಾಗ್ಗೆ ಕೇಳ್ಸುತ್ತೆ, ಬಾಂಡ್ ದುಷ್ಟರ ಕೂಟವನ್ನು ಹೊಕ್ಕಾಗ, ದುಷ್ಟರನ್ನು ಸೆದೆಬಡಿಯುತ್ತಿರುವಾಗ, ಅಪಾಯದ ಸುಳಿಯಲ್ಲಿ ಸಿಲುಕುವಾಗ, ಸುಳಿಯಿಂದ ಹೊರಬರುತ್ತಿರುವಾಗ...ಹೀಗೆ ಅನೇಕ ಸನ್ನಿವೇಶಗಳಲ್ಲಿ ಅದು ಪ್ರೇಕ್ಷಕರನ್ನು ತಕ್ಕ ಮಟ್ಟಿಗೆ ಪ್ರೇರೇಪಿಸಿ ಮುಂಬರುವ ಅಪಾಯದ ಸುಳಿವನ್ನು ಹೀರೋಗಿಂತ ಮೊದಲೇ ಪ್ರೇಕ್ಷಕರಿಗೆ ನೀಡುವ ತಂತ್ರವದು. ನಿಜ ಜೀವನದಲ್ಲೂ ಹೀಗೇ ಇದ್ದಿದ್ರೆ ಎಷ್ಟೋ ಚೆನ್ನಾಗಿತ್ತು ಅಂತ ಅನ್ಸಲ್ವಾ? ನಮಗೆ ಬರೋ ತೊಂದರೆ ತಾಪತ್ರಯಗಳು, ನಾಳೆಯ ಕೆಲಸದ ಬಗ್ಗೆ ಇಂದೇ ಕೇಳುವ ಬಾಸಿನ ಬಗ್ಗೆ, ದೂರದಲ್ಲೆಲ್ಲೋ ಹೊಂಚು ಹಾಕಿ ಕುಳಿತು ಟ್ರಾಫಿಕ್ ವಯಲೇಷನ್‌ಗೆ ಟಿಕೇಟ್ ಕೊಡುವ ಮಾಮಾನ ಬಗ್ಗೆ, ನಮ್ಮ ಪಕ್ಕದಲ್ಲೇ ಇದ್ದು ನಮ್ಮ ವಿರುದ್ಧ ಸಂಚು ಮಸೆಯುವವರನ್ನು ಕುರಿತು...ಇತ್ಯಾದಿಯಾಗಿ ಸುಳಿವು ಸಿಕ್ಕಿದ್ದರೆ ಎಷ್ಟೊಂದು ಚೆನ್ನಿತ್ತು!

ಅಥವಾ ನಮ್ಮ ಸುತ್ತ ಮುತ್ತಲು ಬೇಕಾದಷ್ಟು ಆ ರೀತಿಯ ಸುಳಿವುಗಳು ಇರುತ್ತವೆಯೋ ಏನೋ, ಅದನ್ನು ನೋಡುವ ಕೇಳಿಸಿಕೊಳ್ಳುವ ಮನಸ್ಥಿತಿ ಇರಬೇಕಷ್ಟೇ. ಯಾವುದೋ ಒಂದು ಅವಘಡದಿಂದ ಪಾರಾಗಿ ಹೊರಬಂದ ಮೇಲೆ ಅಥವಾ ನೋವು ಅನುಭವಿಸಿ ಅದರಿಂದ ಸುಧಾರಿಸಿಕೊಂಡ ಮೇಲೆ ಅಯ್ಯೋ ಆ ಸುಳಿವು ಸಿಕ್ಕಿತ್ತು, ಅದನ್ನು ನಾನು ಗಮನಿಸಲೇ ಇಲ್ಲ ಎಂದು ಕೈ ಕೈ ಹಿಸುಕಿಕೊಂಡಿರುವ ಪ್ರಸಂಗಗಳೂ ಇಲ್ಲದೇನಿಲ್ಲ. ಇಂಗ್ಲೀಷ್‌ನಲ್ಲಿ hind site is 20/20 ಅಂತಾರಲ್ಲ ಹಾಗೆ. ಆದರೆ ಅತಿಯಾಗಿ ಇಂತಹ ಆಘಾತಕಾರಿ ಸಂಗೀತದ ಸುಳಿಯನ್ನು ಹುಡುಕಿಕೊಂಡೋ ಅಥವಾ ಪ್ರಾಬ್ಲೆಮ್ಮುಗಳನ್ನು ಆಲೋಚಿಸಿಕೊಂಡು ಅದಕ್ಕೆಲ್ಲಾ ಉತ್ತರವನ್ನೋ ಅಥವಾ ಕಾಂಟಿಜೆನ್ಸಿಯನ್ನೋ ಪ್ಲಾನು ಮಾಡಿಕೊಂಡು ಹೋಗುವುದೂ ಅಷ್ಟೇ ಅಪಾಯಕಾರಿಯಾದ ಸಮಸ್ಯೆಯಾಗಬಹುದು. ನೋಡದೇ ಬರುವ ಆಘಾತ, ಗೊತ್ತಿರುವ ಸಮಸ್ಯೆಗಳ ನಡುವೆ ಎಲ್ಲೋ ಒಂದು ಎಡೆ ಮಾಡಿಕೊಂಡು ಉಪಾಯವಾಗಿ ಕೆಲಸ ಸಾಗಿಸುವುದು ದೈನಂದಿನ ಸವಾಲು ಅಷ್ಟೇ, ಇವರೆಡರ ನಡುವೆ ಇರುವ ವ್ಯತ್ಯಾಸ ಚಿಂತೆ ಹಾಗೂ ಚಿಂತನೆಗಳಿರುವಷ್ಟೇ ಸೂಕ್ಷ್ಮವಾದದ್ದು.

ಆದರೆ, ಸಮಸ್ಯೆಗಳಿರದ ಕೆಲಸವಾಗಲೀ ಬದುಕಾಗಲೀ ಯಾವುದಿದ್ದೀತು? ಸಮಸ್ಯೆಗಳು ಬರುವುದೇ ನಮ್ಮನ್ನು ಸುಧಾರಿಸುವುದಕ್ಕೆ ಮುಂಬರುವ ಇನ್ನೊಂದ್ಯಾವುದೋ ಸನ್ನಿವೇಶಗಳಿಗೆ ನಮ್ಮನ್ನು ಅನುವು ಮಾಡುವುದಕ್ಕೆ. ನಮಗೆ ಎಂಟನೆ ತರಗತಿಯ ಕನ್ನಡ ನಾನ್ ಡೀಟೈಲ್‌ನ ’ಶಿಖರಗಾಮಿಗಳು’ ಪಾಠದಲ್ಲಿ ತೇನಸಿಂಗ್‌ ಬಗ್ಗೆ ಹೇಳುವಾಗ ಒಂದು ಮಾತು ಬರುತ್ತಿತ್ತು - ದೈಹಿಕ ಪರಿಶ್ರಮದಿಂದ ದೇಹ ಗಟ್ಟಿಯಾಗುವ ಹಾಗೆ ಮಾನಸಿಕ ಸಂಕಷ್ಟಗಳು ಮನಸ್ಸನ್ನೂ ಅಷ್ಟೇ ಗಟ್ಟಿಗೊಳಿಸುತ್ತವೆ - ಎಂಬುದಾಗಿ. ನಮ್ಮ ಭಾರತದ ಆಫೀಸುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೇಗೋ ಗೊತ್ತಿಲ್ಲ, ಇಲ್ಲಿನ ಹೆಚ್ಚೂ ಕಡಿಮೆ ಎಲ್ಲ ಕೆಲಸಗಳಲ್ಲಿ, ನನ್ನ ಸ್ನೇಹಿತನೊಬ್ಬ ಹೋಗುವ ಮರೀನ್‌ಕಾರ್ಪ್ ಮಿಲಿಟರಿ ಅಸೈನ್‌ಮೆಂಟ್‌ನಿಂದ ಹಿಡಿದು, ಕಾರ್ಪೋರೇಟ್ ಪ್ರಾಜೆಕ್ಟುಗಳವರೆಗೆ ಎಲ್ಲಿ ಹೋದರೂ lessons learned ಎಂದು ಒಂದು ವರದಿ ತಯಾರಿಸಬೇಕಾಗಿ ಬರುತ್ತದೆ. ಕೆಲವೊಮ್ಮೆ ಈ ರೀತಿ ಕಲಿತ ಪಾಠಗಳು ಹೆಚ್ಚಿದ್ದರೂ ಕಷ್ಟ, ಕಡಿಮೆಯಾದರೂ ಕಷ್ಟ ಎನ್ನಿಸಿದ್ದಿದೆ. ಇತ್ತೀಚೆಗೆ ಪ್ರಾಜೆಕ್ಟ್ ‍ ಮಾಡಿ ಮುಗಿಸಿದ ಮೇಲೆ (ತಪ್ಪಿನಿಂದ) ಕಲಿತ ಪಾಠಗಳನ್ನು ಒಪ್ಪಿಸಬೇಕಾಗಿ ಬಂದಿದ್ದು ಇನ್ನೂ ಸಂಕಷ್ಟದ ಪರಿಸ್ಥಿತಿಯೊಂದನ್ನು ಹುಟ್ಟು ಹಾಕಿತ್ತು. ಯಾರ ಮೇಲೂ (ನೇರವಾಗಿ) ಬೆರಳು ಮಾಡಿ ತೋರುವಂತಿಲ್ಲ, ಆದರೆ ವ್ಯವಸ್ಥಿತವಾದ ವರದಿಯೊಂದನ್ನು ತಯಾರಿಸಬೇಕು, ಇದೆಂಥ ಕಷ್ಟದ ಕೆಲಸ ಎಂದು ಒಮ್ಮೆ ಅನ್ನಿಸಿದ್ದೂ ಹೌದು.

ಸಮಸ್ಯೆಗಳ ಬಗ್ಗೆ ಯೋಚಿಸಿ ಒಂದು ಹೆಜ್ಜೆ ಮುಂದೆ ಹೋದರೆ ಸಮಸ್ಯೆಗಳು ಒಂದು ಮಾನಸಿಕ ನೆಲೆಗಟ್ಟೋ ಅಥವಾ ಭೌತಿಕ ಸ್ಥಿತಿಯೋ, ನಾವೇ ಹುಟ್ಟಿಸಿಕೊಂಡವುಗಳನ್ನು ಸಮಸ್ಯೆಗಳು ಎಂದು ಕರೆಯಬೇಕೋ ಅಥವಾ ನಮ್ಮಿಂದ ನಿವಾರಣೆಯಾಗಬಲ್ಲದು ಸಮಸ್ಯೆಯಾಗೇ ಹೇಗೆ ಉಳಿಯುತ್ತದೆ ಎಂದು ಹಲವಾರು ಪ್ರಶ್ನೆಗಳು ಎದುರಾದವು. ಜೊತೆಗೆ ಪ್ರತಿಯೊಂದು ಸಮಸ್ಯೆಗೂ ಉತ್ತರವೆನ್ನುವುದು ಇದೆಯೇ? ಅಥವಾ ಉತ್ತರವಿಲ್ಲದ್ದನ್ನೂ ಉತ್ತರವಿರುವಂತಹದ್ದನ್ನೂ ಸಮಸ್ಯೆ ಎಂದು ಒಂದೇ ಹೆಸರಿನಿಂದ ಹೇಗೆ ಕರೆಯಲು ಸಾಧ್ಯ? ಹೀಗೆ ಸಮಸ್ಯೆಯನ್ನು ಕುರಿತು ಯೋಚಿಸಿದಷ್ಟೂ ಸಮಸ್ಯೆ-ಉಪಸಮಸ್ಯೆಗಳು ಸೃಷ್ಟಿಯಾದವೇ ವಿನಾ ಉತ್ತರಗಳೇನೂ ದೊರಕಲಿಲ್ಲ.

’ಯೋಚಿಸಿ ಮುಂದೆ ನಡೆ...’, ’ಆಲೋಚಿಸಿ ಕೆಲಸ ಮಾಡು, ಮಾತನಾಡು...’ ಎಂದು ಹೇಳುವುದೇನೋ ಸುಲಭ, ಆದರೆ ನಿಜವಾಗಿಯೂ ಅದು ಸಾಧ್ಯವೇ? ಕೆಲವೊಮ್ಮೆ ಹಿಂದಿನ ಅನುಭವಗಳಿಂದ ಕಲಿತ ಪಾಠಗಳು ಸಮಸ್ಯೆಗಳಿಗೆ ತಂತಾನೆ ಉತ್ತರವನ್ನು ಕಂಡುಕೊಳ್ಳಬಲ್ಲವಾದರೂ ಅನುಭವದ ಒಂದೇ ಒಂದು ಸಮಸ್ಯೆ ಎಂದರೆ ಎಂದು ಪೂರ್ವಭಾವಿಯಾಗಿ ಬರದೇ ಕೆಲಸವೆಲ್ಲ ಆದ ಬಳಿಕ ಬರುವಂಥದ್ದು. ಮತ್ತೆ ಅದೇ ರೀತಿಯ ಕೆಲಸ ಮಾಡುವಲ್ಲಿಯವರೆಗೆ ಆ ಅನುಭವ ಕಲಿಸಿದ ಪಾಠದ ಅಗತ್ಯವೇನೂ ಇರಲಾರದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜೀವನವೆನ್ನುವುದು ಬರೀ ನಮ್ಮ ತಪ್ಪಿನಿಂದ ಕಲಿಯುವ ಪಾಠಗಳ ಸಂಗ್ರಹ ಎಂದು ಯಾರಾದರೂ ದೊಡ್ಡ ಮನುಷ್ಯರು ಹೇಳಿದ್ದಾರು, ಹಾಗೆ ಹೇಳಿರುವ ಅವರ ಅನುಭವವನ್ನು ನಾವು ನಮ್ಮ ಅನುಭವದ ಮಸೂರದಲ್ಲಿ ನೋಡುವುದಾದರೂ ಹೇಗೆ?

ಏನೇ ಆದ್ರೂ ಜೇಮ್ಸ್ ಬಾಂಡ್‌ಗೆ ಇರೋ ಹಾಗೆ ನಮಗೂ ಒಂದು ಪರ್ಸನಲ್ ಮ್ಯೂಸಿಕ್ ರಿಮೈಂಡರ್ ಇದ್ದಿದ್ರೆ ಎಷ್ಟೋ ಚೆನ್ನಾಗಿರ್ತಿತ್ತು ಅಂತ ಬೇಕಾದಷ್ಟು ಸಾರಿ ಅನ್ನಿಸಿದೆ. ನಿಮಗೇನಾದ್ರೂ ಆ ರೀತಿಯ ಸಂಗೀತವನ್ನು ಸಿದ್ಧಿಸಿಕೊಳ್ಳುವ ಸಾಧನವೇನಾದ್ರೂ ತಿಳಿದಿದ್ರೆ ನಮಗೂ ಒಂದಿಷ್ಟು ತಿಳಿಸ್ತೀರಾ ತಾನೇ?

***

MP3 ಆಡಿಯೋ ಲಿಂಕ್‌ಗೆ ಇಲ್ಲಿ ಕ್ಲಿಕ್ ಮಾಡಿ

Sunday, September 09, 2007

...ಮುಂದೆ ಬರುವ ಕಷ್ಟಗಳನ್ನು ಸಹಿಸಲು ಶಕ್ತಿಯನ್ನು ಕೊಡಲಿ

ಇಪ್ಪತ್ತು ತಿಂಗಳ ಅವಧಿಯಲ್ಲಿ ಎಲ್ಲಾ ಸೇರಿ ಒಟ್ಟಿ ಮಾಡಿ ಬರೆದಿದ್ದನ್ನು ಹಿಂತಿರುಗಿ ನೋಡ್ಕೊಂಡ್ ಬರ್ತಾ ಇದ್ದೆ, ನಾನು ಬರೆದಿದ್ದನ್ನು ನನಗೆ ಓದೋ ವ್ಯವಧಾನ ಇಲ್ಲದಂತೆ ಆದ್ರೂ ಸ್ವಲ್ಪ ಕಷ್ಟಾ ಪಟ್ಟು ಓದ್ತಾ ಓದ್ತಾ ಹೋದೆ. ನಾನೇ ಬರೆದ ಕೆಲವೊಂದು ಲೇಖನಗಳು ಕೆಲವು ಉದಯಾ ಟಿವಿ ಸೀರಿಯಲ್ಲಿಗಿಂತಲೂ ಕಡೆಯಾಗಿ ಕಂಡವು, ಇನ್ನು ಕೆಲವು ಲೇಖನಗಳಲ್ಲಿ ಜೀವಂತಿಗೆ ಅನ್ನೋದು ಸ್ವಲ್ಪಮಟ್ಟಿಗಾದ್ರೂ ಉಳಿದಿತ್ತು. ಅವೆಲ್ಲವುಗಳಲ್ಲಿ ಹೆಚ್ಚಿನವುಗಳನ್ನು ನೋಡಿಕೊಂಡು ಬಂದ ನಂತರ ಅನ್ನಿಸಿದ್ದೇನಂದರೆ ನಾನು ಈ ಲೇಖನಗಳಿಗೆ ಪೂರಕವಾಗಿ ಯಾವುದೇ ಕೆಲಸವನ್ನೂ ಮಾಡುತ್ತಿಲ್ಲ - ಸರಿಯಾಗಿ ಓದುತ್ತಿಲ್ಲ, ಹಾಗೂ ತಕ್ಕಮಟ್ಟಿಗೆ ಬರೆಯುತ್ತಿಲ್ಲ ಎಂಬುದಾಗಿ.

ಕೆಲವೊಂದು ಲೇಖನಗಳಲ್ಲಿ ಅನವಶ್ಯಕವಾಗಿ ಉದ್ದುದ್ದ ಸಾಲುಗಳಿದ್ದರೆ, ಇನ್ನು ಕೆಲವುಗಳಲ್ಲಿ ಪ್ರಶ್ನೆಗಳೇ ಪ್ಯಾರಾಗ್ರಾಫ್ ಉದ್ದಕ್ಕೂ ಇರುವಂತೆ ಬರೆಯುವ ಅಗತ್ಯವೇನಿತ್ತು ಎಂದು ಬಲವಾಗಿ ಅನ್ನಿಸತೊಡಗಿತ್ತು. ಓದುಗರಿಗೆ ಬೇಕಾದದ್ದನ್ನು ಕೊಡಬೇಕಾಗಿರುವ ಮಾಧ್ಯಮಗಳು ಅಂತರ್ಮುಖಿಗಳಾಗಿ ತಮ್ಮನ್ನು ತಾವು ಯಾವಾಗಲೂ ಮುಚ್ಚಿಕೊಂಡಿರುವುದು ಸಾಧ್ಯವೇ? ಓದಿನಿಂದ ಮನೋರಂಜನೆ ಸಿಗುವುದರ ಜೊತೆಗೆ ಇತರರಿಗೆ ಸಹಾಯವಾಗುವಂತಿರಬೇಕು ಮುಂತಾಗಿ ಇನ್ನೂ ಏನೇನೋ ಆಲೋಚನೆಗಳು ಮುತ್ತಿಕೊಳ್ಳತೊಡಗಿದವು. ಇಷ್ಟೊಂದು ದಿನ ಬೇಕು-ಬೇಡಗಳ ನೀರನ್ನು ಕುಡಿದಿದ್ದೇವೆ ಎನ್ನುವುದಕ್ಕೆ ತಕ್ಕಂತೆ ಪ್ರತಿಯೊಂದು ಹಂತದಲ್ಲೂ ’ಇದರಿಂದೇನಾಯ್ತು, ಅದರಿಂದೇನಾಯ್ತು’ ಎನ್ನುವ ಪ್ರಶ್ನೆಗಳು ಹುಟ್ಟಿ ಅಂತಹ ಪ್ರಶ್ನೆಗಳಿಗೆಲ್ಲ ದೊರೆಯುವ ಉತ್ತರವೇ ದೊಡ್ಡದೆನಿಸತೊಡಗಿತ್ತು.

ಹೌದು, ನಾವು ಮಾಡುವ ಪ್ರತಿಯೊಂದು ಕೆಲಸದ ಗುಣಮಾನಕ್ಕೂ ನಮದೇ ಆದ ಒಂದು ತೃಪ್ತಿ ಇರಬೇಕು. ತೆರೆದ ಪ್ರಶ್ನೆಗಳಿಗೆ ತಕ್ಕ ಉತ್ತರ ಸಿಗಬೇಕು. ಕೊನೆಯ ಪಕ್ಷ ಅಲ್ಪಾವಧಿಯಲ್ಲಿ ಏನೂ ಪ್ರಯೋಜನವಿರದಂತೆ ಕಂಡರೂ ಧೀರ್ಘಾವಧಿಯಲ್ಲಿ ಏನಾದರೊಂದು ಉದ್ದೇಶವಿರಲೇಬೇಕು. ಒಬ್ಬ ಕಾದಂಬರಿಕಾರನಾಗಲೀ, ಅಥವಾ ಬ್ಲಾಗ್ ಬರಹಗಾರನಲ್ಲಾಗಲೀ ಅಂತಹ ವ್ಯತ್ಯಾಸವೇನೂ ಇರೋದಿಲ್ಲ. ಕಾದಂಬರಿಕಾರ ತನ್ನ ಪಾತ್ರಗಳನ್ನು ಹುಟ್ಟಿಸಿ, ಬೆಳೆಸಿ ಅದರ ಮೂಲಕ ನಿಗದಿತವಾದ ಒಂದು ಚಿತ್ರಣವನ್ನು ಕೊಟ್ಟರೆ ಒಬ್ಬ ಬ್ಲಾಗ್ ಕರ್ತೃಗೆ ಸಹ ತನ್ನದೇ ಆದ ಜವಾಬ್ದಾರಿಗಳಿರುತ್ತವೆ. ಆಯಾ ಬರಹಗಳು ಪ್ರಪಂಚದ ಹಸಿವನ್ನು ಹೋಗಲಾಡಿಸದಿದ್ದರೂ ಆ ಬರಹ ಸೃಷ್ಟಿಸಬಹುದಾದ ಒಂದು ನೆಲೆಗಟ್ಟಿಗೆ, ಅದರಲ್ಲೇಳುವ ಪ್ರಶ್ನೆಗಳಿಗೆ ಪೂರಕವಾಗಿರಬೇಕಾದದ್ದು ಬಹು ಮುಖ್ಯ. ನನಗೆ ಬೇಕಾದ ರೀತಿಯಲ್ಲಿ ನಾನು ವಸ್ತು-ವಿಷಯಗಳನ್ನು ನೋಡಿ ಬರೆಯುವುದು ಹೌದಾದರೂ ಓದುಗನ ದೃಷ್ಟಿಯಲ್ಲಿ ಕಾಳಜಿಯನ್ನು ಒಳಗೊಳ್ಳದೇ ಇದ್ದರೆ ಬರಹಗಳು ಅಪೂರ್ಣಗೊಂಡಾವು.

ಹೆಚ್ಚಿನ ಗುಣಮಟ್ಟದ ಬರಹಗಳನ್ನು ಬರೆಯಲು ಹೆಚ್ಚಿನದನ್ನು ಓದಬೇಕು, ಅದಕ್ಕೆ ತಕ್ಕ ಪರಿಶ್ರಮದಿಂದ ಹೊರಗುಳಿಯಲು ಸಾಧ್ಯವೇ ಇರದ ಪರಿಸ್ಥಿತಿ. ಈ ನಿಜವನ್ನು ಅರಿಯದೇ ಬ್ಲಾಗಿಸಲು ಹೊರಟ ಬರಹಗಾರರ ಕಿಚ್ಚು ಹೆಚ್ಚು ದಿನ ಉರಿಯದೇ ಉಳಿಯೋದು ಆಶ್ಚರ್ಯವೇನೂ ತರಿಸೋದಿಲ್ಲ. ಹೆಚ್ಚು ಜನ ವೇಗವನ್ನು ಬಯಸಿ ಕೀರ್ತಿಯ ಬೆನ್ನು ಹತ್ತುತ್ತಿರುವುದಾಗಿ ಕಂಡು ಬಂದರೆ, ಇನ್ನು ಕೆಲವು ಬರಹಗಳಲ್ಲಿ ಅಂಕಿ-ಅಂಶಗಳಿಗೆ ಹೆಚ್ಚು ಪ್ರಾಧಾನ್ಯತೆ ಕೊಟ್ಟಂತೆ ಕಾಣಿಸಿತು. ಇನ್ನು ಉಳಿದ ಭಾರತೀಯ ಭಾಷೆಗಳಲ್ಲಿ ಪರಿಸ್ಥಿತಿ ಹೇಗಿದೆಯೋ ಗೊತ್ತಿಲ್ಲ, ಆದರೆ ಕನ್ನಡದಲ್ಲಿ ಕೆಲವು ಬ್ಲಾಗ್‌ಗಳು ಒಮ್ಮೆ ಓದಿದರೆ ಮತ್ತೊಮ್ಮೆ ಬಂದು ಇಣುಕಿ ನೋಡಬೇಕು ಎನ್ನುವ ಆಸೆಯನ್ನು ಹುಟ್ಟಿಸುವಲ್ಲಿ ಸಫಲವಾದವುಗಳು. ಬ್ಲಾಗ್ ಎನ್ನುವ ಪದವನ್ನು ಅನಿವಾಸಿ ಹರಟೆಕಟ್ಟೆ ಎಂದು ಬದಲಾಯಿಸೋದಕ್ಕೆ ಬರೋದಿಲ್ಲ, ಏಕೆಂದರೆ ಕೆಲವು ಉತ್ತಮ ಬ್ಲಾಗಿಗರು ಕರ್ನಾಟಕದಲ್ಲಿಯೇ ಇರುವವರು.

ವೇಗದ ಜೀವನವನ್ನು ಅರಸಿಕೊಂಡು ಬಂದವರಿಗೆ ಅಲ್ಲಲ್ಲಿ ಅಪರೂಪಕ್ಕೆ ಸಿಗುವ ಉತ್ತಮ ಲೇಖನಗಳು ಮರುಭೂಮಿಯಲ್ಲಿನ ಓಯಸಿಸ್ಸ್ ಹಾಗೆ. ದಾಹ ತಣಿಸಿ ಒಂದಿಷ್ಟು ತಂಪನ್ನು ನೀಡಿಯೇ ನೀಡುತ್ತವೆ. ಆದರೆ ಮುಖ್ಯ ಪ್ರಯಾಣಕ್ಕೆ ಪೂರಕವಾಗಿ ಇನ್ನೂ ಸಾಕಷ್ಟು ದೂರ ಹೋಗುವುದಕ್ಕಿದೆ ಎನ್ನುವ ಸತ್ಯ ಅನೇಕರಿಗೆ ಓಯಸಿಸ್ಸೇ ಗುರಿಯನ್ನಾಗಿ ಮಾಡದಿರಲಿ, ಜೊತೆಯಲ್ಲಿ ಮರಳುಗಾಡಿನ ಪ್ರಯಾಣವನ್ನು ಸುಖಮಯವಾಗಿಸಲಿ, ಏನಿಲ್ಲವೆಂದರೆ ಈವರೆಗೂ ಗೊತ್ತಿರದ ಹಾಗೂ ಮುಂದೆ ಬರುವ ಕಷ್ಟಗಳನ್ನು ಸಹಿಸಲು ಶಕ್ತಿಯನ್ನು ಕೊಡಲಿ.

Wednesday, September 05, 2007

ವಿಶ್ವ ಸೋಮಾರಿಗಳ ಸಂಘಕ್ಕೇ ಜೈ!

ಹೀಗೇ ಒಂದ್ ಕ್ಷಣ ಸೋಮಾರಿತನದ ಪರಮಾವಧಿಯಲ್ಲಿ ಗದ್ದಕ್ಕೆ ಕೈ ಕೊಟ್ಟು ಕುಳಿತು ಯೋಚಿಸುತ್ತಿರುವಾಗ ಈ ಸೋಮಾರಿತನವೆನ್ನುವುದು ಏಕೆ ಅಷ್ಟೊಂದು ಸಹಜವಾಗಿ ಎಲ್ಲರಿಗೂ ಅನ್ವಯವಾಗೋದು ಒಂದು ಸಣ್ಣ ಚಿಂತೆ ಶುರುವಾಯಿತು. ಮೊದಲಿಗೆ ಮಾಮೂಲಿನ ಪ್ರತಿಕ್ರಿಯೆಯಂತೆ ಯಾರಪ್ಪಾ ಅದನ್ನು ಕುರಿತು ಯೋಚನೆ ಮಾಡೋದು ಎಂದು ಒಮ್ಮೆ ಉದಾಸೀನತೆ ಪುಟಿದೆದ್ದು ನಿಂತರೆ, ಮತ್ತೊಂದು ಕಡೆ ಅದೇನ್ ಆಗೇ ಬಿಡುತ್ತೋ ನೋಡಿಯೇ ಬಿಡೋಣ ಎನ್ನುವ ಛಲ ಅದಕ್ಕೆ ವಿರುದ್ಧ ಧ್ವನಿ ಎತ್ತಿತ್ತು. ಈ ಹೊತ್ತಿನ ತತ್ವದ ಮಟ್ಟಿಗೆ ಕಂಡುಬಂದ ಸತ್ಯಗಳು ಇವು, ಉದಾಸೀನತೆ ಹಾಗೂ ಛಲದ ವಿರುದ್ಧ ನಡೆಯುವ ಮುಖಾಮುಕಿಯಲ್ಲಿ ಯಾರು ಗೆಲ್ಲುತ್ತಾರೋ ಬಿಡುತ್ತಾರೋ ಎನ್ನುವುದರ ಮೇಲೆ ಬೇಕಾದಷ್ಟು ನಿರ್ಧರಿತವಾಗಬೇಕಿದೆ.

ಅದೂ ನಿಜಾ ಅನ್ನಿ, ಜೀವನದಲ್ಲಿ ಪ್ರತಿಯೊಂದನ್ನೂ ಮ್ಯಾನೆಜ್ ಮಾಡಬೇಕಾಗುತ್ತೆ, ಪ್ರತಿಯೊಂದನ್ನೂ ಮೈಂಟೇನ್ ಮಾಡಬೇಕಾಗುತ್ತೆ. ಚಕ್ರದ ಹಾಗೆ ಸುತ್ತಿ ಸುತ್ತಿ ಬರೋ ಪ್ರತಿಯೊಂದು ಬದಲಾವಣೆಗಳು ಮೇಲ್ನೋಟಕ್ಕೆ ಮಾಡಿದ್ದೇ ಮಾಡು ಎಂದು ಅಣಗಿಸುವಂತೆ ತೋರಿದರೂ ಮಾಡದೇ ಇದ್ದರೇ ವಿಧಿಯಿಲ್ಲ ಎಂದು ಕಿಚಾಯಿಸುವ ಪ್ರಸಂಗಗಳೇ ಹೆಚ್ಚು. ಸವಲತ್ತುಗಳನ್ನು ಮ್ಯಾನೇಜ್ ಮಾಡಬೇಕು, ಸಂಬಂಧಗಳನ್ನು ಮ್ಯಾನೇಜ್ ಮಾಡಬೇಕು, ಇನ್ನು ಕೆಲವನ್ನು ನಿಗದಿತ ಸಮಯದಲ್ಲಿ ಮೇಂಟೈನ್ ಮಾಡಬೇಕು ಇಲ್ಲವೆಂದರೆ ಬೇಕು ಎಂದಾಗಲೇ ಕೈಕೊಡುತ್ತವೆ. ಗಾಳಿ ಇದ್ದಲ್ಲೆಲ್ಲ ಧೂಳು ಇರೋದು ಸಹಜ ಎನ್ನುವುದು ’ಅಂತರಂಗ’ ಕಂಡುಕೊಂಡ ಸರಳ ಸತ್ಯಗಳಲ್ಲೊಂದು. ಅದರ ಅರ್ಥವೇನಪ್ಪಾ ಅಂದ್ರೆ ನಾವು ಉಪಯೋಗಿಸದೇ ಬಿಟ್ಟಿರೋ ಜಾಗ ಅಥವಾ ಕೋಣೆಯನ್ನು ಗುಡಿಸಿ ಶುಭ್ರವಾಗಿಟ್ಟುಕೊಳ್ಳಲೇ ಬೇಕಾಗುತ್ತೆ. ಕಿಟಕಿ-ಬಾಗಿಲು ಎಲ್ಲವನ್ನು ಭದ್ರಪಡಿಸಿ ಯಾರೂ ಉಪಯೋಗಿಸದ ಕೋಣೆಯನ್ನು ಒಂದು ವಾರ ಬಿಟ್ಟು ತೆರೆದು ನೋಡಿ, ಅದ್ಯಾವುದೋ ಅಗೋಚರ ಶಕ್ತಿ ನಿಮಗೆ ವಿರುದ್ಧವಾಗಿ ತಿರುಗಿ ಬಿದ್ದಂತೆ ಎಲ್ಲದರ ಮೇಲೂ ತೆಳುವಾದ ಧೂಳಿನ ಒಂದು ಲೇಪನ ಮಾಡಿರುತ್ತೆ. ಹೀಗೆ ತೆಳುವಾದ ಧೂಳನ್ನು ಒಂದು ಕಡೆ ಒರೆಸಿದರಷ್ಟೇ ಸಾಲದು, ಅಲ್ಲಿ-ಇಲ್ಲಿ, ಅತ್ತ-ಇತ್ತ ಒರೆಸುತ್ತಾ ಹಿಂದೆ ಮುಂದೆ ನೋಡುವಷ್ಟರಲ್ಲಿ ಇಡೀ ಕೊಠಡಿಯೇ ಸ್ವಚ್ಛತೆಯನ್ನು ಬೇಡಲು ತೊಡಗುತ್ತದೆ. ಇದು ಎಂದೂ ಉಪಯೋಗಿಸದೇ ಇರುವ ಕೋಣೆಯ ಕಥೆಯಾದರೆ ಇನ್ನು ಪ್ರತಿದಿನವೂ ಉಪಯೋಗಿಸುವ ಕೊಠಡಿ, ಪರಿಕರಗಳ ಕಥೆ ಇನ್ನೊಂದು ರೀತಿ. ನೀವು ಆಯಾ ವಸ್ತುಗಳನ್ನು ಉಪಯೋಗಿಸಿದಂತೆಲ್ಲಾ ಅಲ್ಲೆಲ್ಲಾ ನಿಮ್ಮ ಸಿಗ್ನೇಚರ್ ಬೀಳಲುತೊಡಗುತ್ತದೆ. ಸೂಕ್ಷ್ಮವಾದವರಿಗೆ ಬೆರಳಿನ ಗುರುತು ಕಾಣತೊಡಗಿದರೆ, ಕೊಂಕಣೀ ಎಮ್ಮೆಗೆ ಕೊಡತಿ ಪೆಟ್ಟು ಅನ್ನೋ ಹಾಗೆ ಅವರವರ ಚರ್ಮದ ಥಿಕ್‌ನೆಸ್‌ಗೆ ಅನುಸಾರವಾಗಿ ಆಯಾ ವಸ್ತುವಿನ ಫಲಾನುಭವ ಕಣ್ಣಿಗೆ ರಾಚುತ್ತದೆ.

ಈ ದಿನ ನಿತ್ಯ ಉಪಯೋಗಿಸುವ ವಸ್ತುಗಳ ರಂಪಾಟವೇ ಸೋಮಾರಿತನಕ್ಕೆ ಮೂಲಭೂತ ಕಾರಣ. ಹೊಸ ಬಟ್ಟೆಗಳನ್ನು ಧರಿಸಿ ಶೋಕಿ ಮಾಡುವುದರ ಸುಖ ಕೊಳೆಯಾದ ಅದನ್ನು ಒಗೆದು, ಒಣಗಿಸಿ, ಇಸ್ತ್ರಿ ತಾಗಿಸಿ ಜೋಪಾನವಾಗಿ ಹ್ಯಾಂಗರ್‌ಗೆ ಹಾಕುವವರೆಗೂ ಇರೋದಿಲ್ಲ. ಜನರು ವಾರಕ್ಕೆ ಐದು ದಿನಗಳಿಗಾಗೋಷ್ಟು ಬಟ್ಟೆಯ ನಾಲ್ಕು ಪಟ್ಟು ಬಟ್ಟೆಯನ್ನು ಇಟ್ಟುಕೊಳ್ಳುವುದೇಕೆ ಎಂದುಕೊಂಡಿರಿ? ಉಪಯೋಗಿಸಿ ಉಪಯೋಗಿಸಿ ಕೊಳೆ ಬಟ್ಟೆಗಳು ರಾಶಿ ಬಿದ್ದ ನಂತರ ಒಂದು ದಿನ ಅವುಗಳಿಗೆಲ್ಲ ಗ್ರಹಚಾರ ಬದಲಾವಣೆಯಾದ ಪ್ರಯುಕ್ತ ನೀರಿನ ಮುಖ ಕಾಣಿಸುತ್ತದೆ. ನಂತರ ಒಗೆದು, ಒಣಗಿಸಿದಂತೆ ಮಾಡಿದ ಮೇಲೆ ಕೆಟ್ಟ ಮುಖವನ್ನು ಮಾಡಿಕೊಂಡು (ಅದೂ ಎಷ್ಟೋ ದಿನಗಳ ನಂತರ) ಬಟ್ಟೆಗಳನ್ನು ಮಡಚಿಡಲಾಗುತ್ತದೆ. ಇನ್ನು ಇಸ್ತ್ರಿ ತಾಗಿಸುವ ಅಗತ್ಯವಿದ್ದರೆ, ಅದು ಆಯಾ ದಿನದ ಮುಂಜಾನೆಯ ಕರ್ತವ್ಯಗಳಲ್ಲೊಂದು. ಈ ಕೊಳೆಯಾಗಿ ಮತ್ತೆ ಸುಸ್ಥಿತಿಯನ್ನು ಕಾಣುವ ಬಟ್ಟೆಗಳ ಗೋಳು ಬೇಡವೆಂದೇ ನ್ಯೂಡಿಷ್ಟ್ ಬೀಚುಗಳು ಇತ್ತೀಚೆಗೆ ಹೆಚ್ಚುತ್ತಿರೋದು ಎಂದು ಕಾಣಿಸುತ್ತೆ! ಮಕ್ಕಳಿದ್ದವರು ಕೊರಗುವುದನ್ನು ನೋಡಿ ನಮಗೆ ಮಕ್ಕಳೇ ಬೇಡ ಎಂದು ನಿರ್ಧರಿಸಿಬಿಡುವ ದಂಪತಿಗಳ ಹಾಗೆ ನ್ಯೂಡಿಷ್ಟ್ ಜನರು ಬಟ್ಟೆಯನ್ನೇ ಹಾಕೋದಿಲ್ಲವಂತೆ, ಬಟ್ಟೆ ಹಾಕಿದರೆ ತಾನೇ ಅದರ ಕಷ್ಟಾ-ನಷ್ಟಾ ಎಲ್ಲಾ?

ಈ ಬಟ್ಟೆಗಳ ಸವಾಸ ಬೇಕು ಆದರೆ ಕಸ ಹೊಡೆಯುವುದಾಗಲೀ ಪಾತ್ರೆ ತಿಕ್ಕುವುದರ ಸಹವಾಸ ಬೇಡವೇ ಬೇಡ. ಅದೂ ದಿನಕ್ಕೆ ಮೂರು ಹೊತ್ತು ಮುಕ್ಕಿ ಮಿಕ್ಕಿದ್ದೆಲ್ಲವನ್ನೂ ಮುಗಿಸುವ ಜಾಯಮಾನವಿರುವವರೆಗೆ ಬದುಕು ಬಹಳ ಕಷ್ಟಾ. ಎಷ್ಟೇ ನೀಟಾಗಿ ಸಿಂಕು ತೊಳೆದಿಟ್ಟರೂ ಒಂದಲ್ಲಾ ಒಂದು ಪಾತ್ರೆಗಳು ಬಂದು ಬೀಳುತ್ತಲೇ ಇರೋದನ್ನ ನೋಡಿದ್ರೆ ಯಾರೋ ನಮಗೆ ಆಗದವರು ಮಾಟಾ-ಮಂತ್ರ ಮಾಡಿಸಿಟ್ಟಿದ್ದಾರೇನೋ ಅನ್ನಿಸುತ್ತೆ. ಅದೂ ಈ ದೇಶದಲ್ಲಂತೂ ಎಲ್ಲವನ್ನೂ ನಾವೇ ಮಾಡಿಕೂಳ್ಳಬೇಕಪ್ಪ. ವಾರವಿಡೀ ದುಡಿದು ತರೋದು ಅಲ್ಲಿಂದಲ್ಲಿಗೆ ಆಗುತ್ತೆ. ವಾರಾಂತ್ಯದಲ್ಲಿ ಇರೋ ಬರೋದನ್ನೆಲ್ಲ ಮ್ಯಾನೇಜೂ ಮೇಂಟೇನೂ ಮಾಡಿಕೊಂಡೇ ಇರಬೇಕಾಗುತ್ತೆ.

ಹೀಗೆ ಸೃಷ್ಟಿಯಲ್ಲಿ ನಮ್ಮ ವಿರುದ್ಧ ನಿಲ್ಲಬಲ್ಲ ಸಂಕೋಲೆಗಳನ್ನು ಜಯಿಸಲು ವಿಕಾಸವಾದದ ಬುನಾದಿಯ ಅಡಿಯಲ್ಲಿ ನಾವು ಪಡೆದುಕೊಂಡ ಶಕ್ತಿಯ ಸ್ವರೂಪವೇ ಸೋಮಾರಿತನ. ಅದನ್ನ ನಾವೆಲ್ಲರೂ ಪೂಜಿಸೋಣ, ಆರಾಧಿಸೋಣ. ಪ್ರಾಣಿಗಳು ನಗೋದಿಲ್ಲ, ಮನುಷ್ಯರು ನಗ್ತಾರೆ ಎನ್ನುವವರಿಗೆ ನಿಜ ಸ್ಥಿತಿಯ ಪೂರ್ತಿ ಅರಿವಂತೂ ಇಲ್ಲ. ಪ್ರಾಣಿಗಳು ಸೋಮಾರಿಗಳಾಗೋದಕ್ಕೆ ಸಾಧ್ಯವೇ ಇಲ್ಲ.

***

ವಿಶ್ವ ಸೋಮಾರಿಗಳ ಸಂಘಕ್ಕೇ ಜೈ!

Monday, September 03, 2007

ಏನು ಸುಖವಮ್ಮಾ, ಯಾವುದು ಸುಖವಮ್ಮಾ

ನಮ್ಮಮ್ಮ ತೂಕದ ಮಾತನ್ನಾಡೋದೇ ಹೆಚ್ಚು, ಯಾವಾಗ್ ನೋಡುದ್ರೂ ಈ ಥರದ ಒಂದ್ ಮಾತನ್ನ ಎಸೀತಾನೇ ಇರ್ತಾಳೆ...’ಎಲ್ಲಾ ಸುಖವಾಗಿದೀರಾ ತಾನೇ?’, ಅನ್ನೋ ಪ್ರಶ್ನೆ ಕೆಲವೊಮ್ಮೆ ’ಎಲ್ಲಾ ಅರಾಮಾ...’ ಅನ್ನೋದರ ಮುಂದಿನ ವಾಕ್ಯವಾಗಬಹುದು ಅಥವಾ ಎಷ್ಟೋ ವಾಕ್ಯಗಳನ್ನು ಅಂತ್ಯಗೊಳಿಸುವ ಒಂದು ಲಯವಾಗಿರಬಹುದು. ಒಂದೊಂದ್ ಸಾರಿ ಸಾರ್‌ಕ್ಯಾಸಮ್ ನಲ್ಲಿ ಹೇಳ್ತಾ ಇರೋ ಹಾಗೆ ಅನ್ನಿಸಿದರೆ, ಇನ್ನೊಂದಿಷ್ಟು ಸಾರಿ ನಿಜವಾದ ಕಳಕಳಿ ಅಭಿವ್ಯಕ್ತಗೊಳ್ಳುತ್ತೆ. ಅದು ಸರಿ, ’ಅರಾಮಾ?’ ಅನ್ನೋ ಪ್ರಶ್ನೆಗೆ ’ಹೂಞ್!’ ಎಂದು ಉತ್ತರ ಕೊಟ್ರೆ, ’ಸುಖವಾಗಿದ್ದೀರಾ?’ ಅನ್ನೋ ಪ್ರಶ್ನೆಗೆ ಏನಂತ ಉತ್ತರ ಕೊಡೋಣ, ಅದೂ ಹೋಗೀ ಹೋಗಿ ಅಡಿಗರ ’ಇರುವುದೆಲ್ಲವ ಬಿಟ್ಟು...’ ಬಂದ ಮನಸ್ಸಿನವರಾದ ಮೇಲೆ. ಎಷ್ಟೋ ಸಾರಿ ಅನ್ನಿಸಿದೆ, ಹೆಚ್ಚಿನ ಪಕ್ಷ ಒಂದ್ ಕೆಟ್ಟ ಸಿಟ್ಟಿನಲ್ಲೇ, ’ಯಾವುದು ಸುಖವಮ್ಮಾ?’ ಎಂದು ಕೇಳೋಣವೆನ್ನಿಸಿದೆ, ಆಕೆಯ ವೃದ್ದಾಪ್ಯದಲ್ಲಾದರೂ ಸುಖದ ಬಗ್ಗೆ ಆಕೆಗೆ ತಿಳಿದಿದೆಯೋ ಏನೋ ಎನ್ನುವ ಸ್ವಾರ್ಥ ನನ್ನದು, ಏಕೆಂದರೆ ಕೊನೆಗೆ ಸುಖಾ ಎನ್ನುವುದು ವೃದ್ದಾಪ್ಯದಲ್ಲಾದರೂ ಸಿಗುವ ನಿಧಿಯಾಗಬಹುದೇನೋ ಎನ್ನುವ ಕಾತರತೆಯಿಂದಲಾದರೂ ಕಾಲ ಕಳೆಯಬಹುದಲ್ಲಾ.

ಈ ತಳಮಳದ ಹಿಂದೆ ಅನೇಕ ಸಂವೇದನೆಗಳಿವೆ, ಭಾವನೆಗಳಿವೆ, ಅನುಭವಗಳಿವೆ. ಮನಸ್ಸು ಮತ್ತು ತಲೆಯನ್ನು ಖರ್ಚು ಮಾಡಿಕೊಂಡು ಜೀವನ ಸಾಗಿಸುವವರ ಪ್ರತಿಯೊಂದು ಸೂಕ್ಷ್ಮತೆಯೂ ಅಡಕವಾಗಿದೆ. ಅದಕ್ಕೆಂದೇ ಅನ್ನಿಸೋದು ನಾನು ದೈಹಿಕ ಶಕ್ತಿಯನ್ನು ನಂಬಿಕೊಂಡು ಪ್ರಿಮಿಟಿವ್ ಕೆಲಸವನ್ನು ಮಾಡಿಕೊಂಡಿದ್ದರೆ ಹೇಗಿತ್ತು ಎಂದು. ಒಬ್ಬ ಕಾರ್ಪೆಂಟರ್ ಆಗಿ, ದಿನಗೂಲಿ ಮಾಡುವವನಾಗಿ, ಕನ್‌ಸ್ಟ್ರಕ್ಷನ್ ಕೆಲಸಗಾರನಾಗಿ, ರಸ್ತೆ ರಿಪೇರಿ ಮಾಡುವವನಾಗಿ, ಎಲೆಕ್ಟ್ರಿಷಿಯನ್ ಆಗಿ, ಇತ್ಯಾದಿ. ಉತ್ತಮ ಆದಾಯವೇನೂ ಇರುತ್ತಿರಲಿಲ್ಲವೇನೋ, ಆದರೆ ದಿನದ ದೈಹಿಕ ಚಿಂತೆ ಅಗತ್ಯಗಳ ಮುಂದೆ ಮನಸ್ಸಿಗೆ ದೊಡ್ಡ ಕಡಿವಾಣ ಬೀಳುತ್ತಿತ್ತು. ಆ ಮಟ್ಟಿಗೆ ಗಳಿಸಿ, ಅದೇ ಮಟ್ಟದಲ್ಲಿ ಖರ್ಚು ಮಾಡಿ ಅವತ್ತಿಂದವತ್ತಿಗೆ ಬದುಕಿದರೂ ಅಲ್ಲಿ ಇನ್ಯಾವ ರೀತಿಯ ಕೊರಗುಗಳಿರುತ್ತಿದ್ದವೋ ಆದರೆ ತಲೆಯಲ್ಲಿ ಶಾಶ್ವತವಾದ ಮರಕುಟಿಗನ ಹಾಗೆ ಕುಟುಕುತ್ತಲೇ ಇರುತ್ತಿರುವ ಒಂದು ಧ್ವನಿ ಇರುತ್ತಿರಲಿಲ್ಲ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನೋ ಹಾಗೆ ಬೇರೆ ವೃತ್ತಿ, ಪ್ರವೃತ್ತಿಗಳಲ್ಲಿರುವ ಕಷ್ಟ ಸುಖವನ್ನು ನಾನೇನು ಬಲ್ಲೆ, ಅಲ್ಲಿನ ಪೀಕಲಾಟಗಳನ್ನು ದಿನವೂ ಏಗುತ್ತಿರುವವರಿಗೆ ನಮ್ಮ ಬದುಕು ಸುಂದರವಾಗಿ ಕಾಣುವುದೇ ಒಂದು ದೊಡ್ಡ ರಹಸ್ಯವಲ್ಲದೇ ಇನ್ನೇನು?

ಸುಖವೆನ್ನುವುದು ಏನು ಹಾಗಾದರೆ? ಅದು ಮಾನಸಿಕ ನೆಲೆಗಟ್ಟೇ, ಭೌತಿಕ ಸ್ಥಿತಿಯೇ, ಸಾಮಾಜಿಕ ಸಂಕಲ್ಪವೇ, ಬೇಕು ಎನ್ನುವವುಗಳಿಗೆಲ್ಲ ಸಿಕ್ಕ ಉತ್ತರವೇ, ಇಲ್ಲವೆನ್ನುವವುಗಳ ಬೆಂಬಿಡದ ಪ್ರಶ್ನೆಗಳೇ? ಸುಖವೆನ್ನುವುದು ಆಂತರಿಕವಾದದ್ದೇ, ಅಥವಾ ಪ್ರತಿಯೊಬ್ಬರೂ ಕಂಡು, ಅನುಭವಿಸಿ, ಗುರುತುಹಿಡಿಯಬಲ್ಲ ಬಹಿರಂಗದ ರೂಪವೇ? ಈ ಪ್ರಪಂಚದ ಮನುಷ್ಯ ಕುಲದಲ್ಲಿ ಯಾರಾದರೂ ಸುಖವಾಗಿದ್ದಾರೆಯೇ? ಅಥವಾ ಯಾರೂ ಸುಖವಾಗಿರದೇ ಸುಖವೆನ್ನುವ ಮರೀಚಿಕೆಯನ್ನು ಅರಸುವುದೇ ಬದುಕೇ? ಸುಖವೆನ್ನುವುದು ವಿಧಿ ಲಿಖಿತ ಸಂಕೋಲೆಯೇ, ಅಥವಾ ಮಾನವ ನಿರ್ಮಿತ ಬಂಧನವೇ?

ಸುಖವೆನ್ನುವುದಕ್ಕೆ ಉತ್ತರ ಕಂಡುಕೊಳ್ಳುತ್ತಾ ಹೋದಂತೆ ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಹಾಗೂ ಇನ್ನೂ ಹಲವು ಸ್ಥರಗಳಲ್ಲಿ ಯೋಚಿಸಿಕೊಳ್ಳುವಂತಾಯಿತು. ಒಮ್ಮೆ ಇರುವ ಸದರಿ ಸ್ಥಿತಿಯಿಂದ ಮುಕ್ತವಾಗಿ ಒಡನೆಯೇ ಮತ್ತೊಂದು ಸ್ಥಿತಿಯನ್ನು ತಲುಪುವುದು ಸುಖವೆಂದು ಕಂಡುಬಂದರೆ, ಮತ್ತೊಮ್ಮೆ ಇನ್ನು ಎಷ್ಟೋ ವರ್ಷಗಳ ನಂತರ ಬರಬಹುದಾದ ಸಾಮಾಜಿಕ ಸಾಧ್ಯತೆಯೂ ಸುಖವಾಗಿ ಕಂಡುಬಂದಿತು. ಹಲ್ಲು ನೋವಿರುವವನಿಗೆ ತಾತ್ಕಾಲಿಕ ಉಪಶಮನಕ್ಕೆಂದು ಕೊಟ್ಟ ನೋವಿನ ಮಾತ್ರೆ ಒಡನೆಯೇ ಸುಖವನ್ನು ತಂದುಕೊಟ್ಟರೆ, ಲಾಟೀನ್ ದೀಪದ ಬೆಳಕಿನಲ್ಲಿ ಕುಕ್ಕರುಗಾಲಿನಲ್ಲಿ ಕುಳಿತು ಹತ್ತನೇ ತರಗತಿಯ ಪರೀಕ್ಷೆಗೆ ತಯಾರಾಗುತ್ತಿರುವ ಬಡಹುಡುಗನ ಒಂದು ದಿನ ನಾನೂ ಇಂಜಿನಿಯರ್ ಆಗುತ್ತೇನೆ ಎನ್ನುವ ದೀಪದ ಬೆಳಕಿಗೆ ತೊನಲಾಡುತ್ತಿರುವ ನೆರಳಿನಂತಿರುವ ಕನಸು ಎಷ್ಟೋ ವರ್ಷಗಳ ನಂತರ ಸುಖಕ್ಕೆ ಸಂಬಂಧಿಸಿದಂತೆ ತೋರಿತು. ’ಸುಖವಾಗಿದ್ದೀಯಾ?’ ಎನ್ನುವ ಪ್ರಶ್ನೆಯನ್ನು ಪ್ರತಿದಿನವೂ ಕೇಳಿ (Rhetorical) ಅದರಿಂದ ಯಾವ ಉತ್ತರವನ್ನು ನಿರೀಕ್ಷಿಸದೆಯೂ ಇರಬಹುದು, ಅದೇ ಪ್ರಶ್ನೆಯನ್ನು ವಾರಕ್ಕೊಮ್ಮೆ, ತಿಂಗಳಿಗೊಮ್ಮೆ, ವರ್ಷಕ್ಕೊಮ್ಮೆ, ಜನ್ಮಕ್ಕೊಮ್ಮೆ ಕೇಳಿಯೂ ವಿವರವನ್ನು ಹುಡುಕಬಹುದು. ಅದೇ ಪ್ರಶ್ನೆಯನ್ನು ಯಾರು, ಎಷ್ಟು ದೂರದಲ್ಲಿರುವವರು, ಎಲ್ಲಿರುವವರು ಕೇಳಿದರು ಎನ್ನುವುದರ ಮೇಲೆ ಉತ್ತರ ಬದಲಾಗಬಹುದು.

ನನ್ನಗ್ಗೊತ್ತು - ನಾಳೆ ಬೆಳಿಗ್ಗೆ ಮಾರ್ಗದ ಮಧ್ಯೆ ರಸ್ತೆ ರಿಪೇರಿ ಮಾಡುವ ಕೆಲಸಗಾರರಿಗೆ ಈ ಬಗೆಯ ಚಿಂತೆ ಇರುವುದಿಲ್ಲವೆಂದು. ಅಂತಹವರನ್ನು ’ಸುಖವಾಗಿದ್ದೀಯಾ?’ ಎಂದು ಯಾರೂ ಕೇಳೋದೇ ಇಲ್ಲವೇನೋ, ಅಥವಾ ಕೇಳುತ್ತಾರೋ ಇಲ್ಲವೋ ಯಾರಿಗೆ ಗೊತ್ತು? ಆದರೆ ಕೆಲಸದ ಮಧ್ಯೆ ತೊಡಗಿದ ಅವರ ಮನಸ್ಸು ಒಂದಲ್ಲ ಒಂದು ಹೊಯ್ದಾಟಕ್ಕೆ ತೂಗುತ್ತಿರಬೇಕಲ್ಲ - ಅವರುಗಳಂತೂ ಖಂಡಿತ ಸಂತರಲ್ಲವೇ ಅಲ್ಲ - ಅವರ ನೆಲ ನೋಡುತ್ತಿರುವ ಕಣ್ಣುಗಳ ಹಿಂದಿನ ಮನಸ್ಸಿನಲ್ಲೇನಿದೆ? ಜ್ಯಾಕ್ ಹ್ಯಾಮರ್ ಸೃಷ್ಟಿಸುತ್ತಿರುವ ಕರ್ಕಷ ಸದ್ದಿಗೂ ಹೊಂದಿಕೊಂಡ ಒರಟುತನದ ಸುಖವೆನ್ನುವುದು ಎಲ್ಲಿ ಹುದುಗಿದೆ? ಅವರ ಮಕ್ಕಳು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಹೊಸ ರಂಗನ್ನು ಕಣ್ಣುಗಳಲ್ಲಿ ಹುಟ್ಟಿಸಿಕೊಳ್ಳುವುದು ಅವರಿಗೆ ಸುಖವಾಗಿ ಕಂಡೀತೇ? ಇವತ್ತಲ್ಲ ನಾಳೆ ನಮ್ಮ ಮಕ್ಕಳು ಸುಖವಾಗಿರಲಿ, ಬಿಳಿ ಕಾಲರ್ ಕೆಲಸಗಾರರಾಗಲಿ ಎನ್ನುವ ಕನಸು ಅವರ ಸುಖವನ್ನು ನಿರ್ಧರಿಸೀತೇ? ರಸ್ತೆಗೆ ಟಾರು ಬಳಿಯುವ ಅವರ ಋಣಾನುಬಂಧ ಹೇಗಿದ್ದಿರಬಹುದು - ಅಕ್ಕ, ತಮ್ಮ, ತಂಗಿ, ಅಣ್ಣ ಇವರುಗಳ ಒಡನಾಟ ಅವರಿಗೆ ಏನನ್ನಿಸಬಹುದು? ಒಂದು ಕ್ಷಣ ಅವರ ಮನಸ್ಸಿನಾಳಕ್ಕಿಳಿದು ಅದರ ವ್ಯಾಖ್ಯೆಯನ್ನು ಅರಿಯಬಯಸುವ ನನ್ನ ಪ್ರಯತ್ನ ರಸ್ತೆಯ ಮೇಲೆ ಸಿಗುವ ಕೆಲವೇ ಕೆಲವು ಕ್ಷಣಗಳಿಗೆ ಮಾತ್ರ ಸೀಮಿತವಾಗುತ್ತದೆ. ಕಣ್ಣ ಮುಂದಿನ ರಸ್ತೆ ಬದಲಾದ ಹಾಗೆ ಅದರ ವ್ಯಾಖ್ಯಾನ, ಅಂತಹ ವ್ಯಾಖ್ಯಾನದ ಹಿಂದಿನ ಅವತರಣಿಕೆ ಎಲ್ಲವೂ ಬದಲಾಗುತ್ತಲೇ ಇರುತ್ತದೆ.

ಹಾಗಾದರೆ, ’...ಸುಖವಾಗಿದೀಯಾ ತಾನೇ?’ ಎನ್ನುವ ಪ್ರಶ್ನೆಗೆ ನಿಖರವಾದ ಉತ್ತರವಿದೆಯೋ ಅಥವಾ ದಿನೇದಿನೇ ಅದೂ ಬದಲಾಗುತ್ತದೆಯೋ? ಸದಾ ಬದಲಾಗುವುದನ್ನು ಏಕೆ ಒಂದೇ ಪದದಿಂದೇಕೆ ಅಳೆಯಬೇಕು? ಸುಖವೆನ್ನುವುದು ಎಲ್ಲರಿಗೂ ಸಮನಾದುದು ಎಂದಾದಲ್ಲಿ ಅವರವರಿಗೆ ತಕ್ಕ (ಮಟ್ಟಿನ) ಸುಖವನ್ನು ಬಿಂಬಿಸುವ ಪದಗಳೇಕೆ ಸೃಷ್ಟಿಯಾಗಲಿಲ್ಲ?

***

ನೀವು ಸುಖವಾಗಿದ್ದೀರಾ? ಯಾಕಿಲ್ಲ?

Sunday, August 26, 2007

ಅಲೆಗಳು ಮತ್ತು ಹಾಸಿಗೆಗಿಂತ ಹೊರಗೆ ಚಾಚುವ ಕಾಲು

ಮಹಾಸಾಗರವನ್ನ ಅಷ್ಟೊಂದು ಹತ್ತಿರದಿಂದ ನೋಡದೇ ಅಥವಾ ಅನುಭವಿಸದೇ ವರ್ಷದ ಮೇಲೆ ಆಗಿ ಹೋಗಿತ್ತು. ನಿನ್ನೆ ಅಟ್ಲಾಂಟಿಕ್ ಮಹಾಸಾಗರದ ಹತ್ತಿರ ಹೋದಂತೆಲ್ಲ ಸೃಷ್ಟಿಯ ಅದಮ್ಯ ಶಕ್ತಿಯೆಲ್ಲಾ ಮಹಾಸಮುದ್ರದ ರೂಪದಲ್ಲಿ ನೆಲೆ ನಿಂತಿರುವಂತನ್ನಿಸಿತು. ಬೆಲ್‌ಮಾರ್ ತೀರಕ್ಕೆ ಇನ್ನೆಂದೂ ಹೋಗೋದಿಲ್ಲ ಎಂದು ಮನಸ್ಸಿನಲ್ಲಿ ಅಂದುಕೊಂಡಂದಾಗಿನಿಂದ ನಾವು ಹೋಗೋದು ಸ್ಯಾಂಡಿ ಹುಕ್ ಇಲ್ಲಾ ಅಟ್ಲಾಂಟಿಕ್ ಸಿಟಿ ತೀರಗಳಿಗೆ ಮಾತ್ರ. ಹಾಗೇ ನಿನ್ನೆ ಮಹಾಸಾಗರದ ಸಹವಾಸವೂ ಆಯ್ತು, ಜೊತೆಯಲ್ಲಿ ಕೈಲಿದ್ದ ದುಡ್ಡೂ (ಗ್ಯಾಂಬಲಿಂಗ್‌ನಲ್ಲಿ) ಎನ್ನುವ ಅನುಭವಕ್ಕೆ ಮತ್ತೆ ಇಂಬುಕೊಟ್ಟಿದ್ದು ಬಹಳ ತಿಂಗಳುಗಳ ನಂತರ ನಮಗೆ ನಾವೇ ಕಂಡುಕೊಂಡ ಒಂದು ವೆಕೇಷನ್ ಕ್ಷಣವಷ್ಟೇ.

ಅದ್ಯಾವುದೋ ಪುಸ್ತಕಗಳನ್ನು ಓದಿ ಬಡವ-ಬಲ್ಲಿದ, ಎಕಾನಮಿ ಮುಂತಾದವುಗಳನ್ನು ತಲೆಯಲ್ಲಿಟ್ಟು ಬೇಯಿಸುತ್ತಿದ್ದ ನನಗೆ ಮಹಾಸಾಗರದ ಸ್ವರೂಪವೂ ಭಿನ್ನವಾಗೇನೂ ಕಾಣಿಸಲಿಲ್ಲ. ದಡದಿಂದ ನೀರ ಕಡೆಗೆ ನಡೆದು ಮೊಟ್ಟ ಮೊದಲು ನೀರು ಕಾಲಿಗೆ ಸೋಕಿದಾಗ ಎಂಥಾ ಬಿಸಿಲಿನಲ್ಲೂ ಮೊದಲು ಛಳಿಯ ಅನುಭವವಾಗಿ ಕೆಲವೇ ಕ್ಷಣಗಳಲ್ಲಿ ನಾವು ಅದಕ್ಕೆ ಹೊಂದಿಕೊಂಡು ಬಿಟ್ಟೆವು. ಇನ್ನೊಂದು ಹತ್ತು ಹೆಜ್ಜೆ ಮುಂದಕ್ಕೆ ನಡೆದು ಮೊಣಕಾಲು ಮುಳುಗುವಲ್ಲಿಯವರೆಗೆ ಹೋಗಿ ನಿಂತರೆ ಅಲ್ಲಿ ಅಲೆಗಳ ರಭಸಕ್ಕೆ ಕಾಲುಗಳು ನಿಂತಲ್ಲೇ ಮರಳಿನಲ್ಲಿ ಕುಸಿದ ಅನುಭವ, ಅಥವಾ ಸುತ್ತಲಿನ ತೆರೆಗಳ ಹೊಡೆತಕ್ಕೆ ಕಾಲಿನಡಿಯ ನೆಲವೂ ಜಾರುತ್ತಿರುವ ಹಾಗೆ. ಆದರೆ ಸಮುದ್ರದ ಪ್ರತಿಯೊಂದು ಅಲೆಯೂ ಭಿನ್ನವಂತೆ, ಒಂದರ ಹಿಂದೆ ಮತ್ತೊಂದರಂತೆ ಯಾವುದೋ ವ್ರತಧರ್ಮಕ್ಕೆ ಕಟ್ಟುಬಿದ್ದವರ ಹಾಗೆ ಅಲೆಗಳು ಬರುತ್ತಲೇ ಇದ್ದವು. ತಮ್ಮ ಶಕ್ತ್ಯಾನುಸಾರ ಸುತ್ತಲಿನ ಜನರು ಹತ್ತು, ಇಪ್ಪತ್ತು, ಐವತ್ತು ಅಡಿಗಳವರೆಗೂ ನೀರಿನಲ್ಲಿ ಮುಂದಕ್ಕೆ ಹೋಗಿದ್ದರು. ದಡದಿಂದ ಹತ್ತಡಿ ನೀರಿನಲ್ಲಿ ಮೊಳಕಾಲು ಉದ್ದ ಮುಳುಗಿ ನಿಂತವರಿಗೆ ಅವರದ್ದೇ ಆದ ಸವಾಲುಗಳು, ಹಾಗೇ ಐವತ್ತು ಅಡಿ ದೂರದಲ್ಲಿ ಎದೆ ಮಟ್ಟಕ್ಕೆ ನಿಂತಿರುವವರಿಗೆ ಇನ್ಯಾವುದೋ ಸವಾಲು. ಒಟ್ಟಿನಲ್ಲಿ ನೀರನ್ನು ಅನುಭವಿಸುವವರಿಗೆ ಅವರ ಇಚ್ಛೆ ಹಾಗೂ ಶಕ್ತಿಯನ್ನು ಪ್ರತಿಬಿಂಬಿಸಬಲ್ಲ ಸ್ವರೂಪ.

ಒಮ್ಮೆ ಅನಿಸಿತು - ಮೊಳಕಾಲು ಉದ್ದದ ನೀರಿನಲ್ಲಿ ನಿಂತವರದ್ದೇನು, ಅಂತಹ ಕಷ್ಟವೇನಿದು ಎಂದು. ಆದರೆ ನಾನೇ ಹೋಗಿ ಅಲ್ಲಿ ನಿಂತ ಮೇಲೆ ಅಲ್ಲಿನ ಸವಾಲುಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಕಷ್ಟವಾಗಲಿಲ್ಲ. ಅಭಿಮುಖವಾಗಿ ಬರುವ ಅಲೆ ದಡವನ್ನು ಮುಟ್ಟುತ್ತಿರುವ ಹಾಗೆ ತನ್ನ ಉಬ್ಬು-ತಗ್ಗುಗಳನ್ನು ಕಳೆದುಕೊಂಡು, ಚಪ್ಪಟೆಯಾಗುವುದರ ಜೊತೆಗೆ ಸಾಕಷ್ಟು ನೊರೆಯನ್ನು, ಅದರ ಜೊತೆಯಲ್ಲಿ ಮರಳಿನ ಕಣಗಳನ್ನೂ ಎತ್ತಿಕೊಂಡು ಬರುತ್ತಿತ್ತು. ಹಾಗೆ ಬಂದ ಒಂದೊಂದು ಅಲೆಯೂ ಅದ್ಯಾವುದೋ ಸಂಕಲ್ಪ ತೊಟ್ಟವರಂತೆ ನಿಂತ ನಮ್ಮನ್ನು ದಡದ ಕಡೆಗೆ ತಳ್ಳುವುದೇ ಕಾಯಕವೆಂದುಕೊಂಡಂತಿತ್ತು. ಅಭಿಮುಖವಾಗಿ ಬಂದ ಅಲೆ ದಡದ ಕಡೆಗೆ ಎಷ್ಟು ಜೋರಾಗಿ ನೂಕುತ್ತಿತ್ತೋ ಅಷ್ಟೇ ಜೋರಾಗಿ ದಡಕ್ಕೆ ಬಡಿದು ಮತ್ತೆ ಹಿಂದೆ ಹೋಗುವಾಗಲೂ ಅದೇ ರೀತಿಯ ಒತ್ತಡವನ್ನು ಕಾಲಿನ ಮೇಲೆ ಹೇರುತ್ತಿತ್ತು. ಪಾದಗಳ ಕೆಳಗಿನ ಮರಳು ಕುಸಿಯೋದರ ಜೊತೆಗೆ ದೇಹದ ಸಮತೋಲನವೂ ತಪ್ಪಿ ಎಂಥವರೂ ಬೀಳುತ್ತಿದ್ದುದರಲ್ಲಿ ಅಚ್ಚರಿಯೇನೂ ಇರಲಿಲ್ಲ.

ದಡದಿಂದ ಮೂವತ್ತು ನಲವತ್ತು ಅಡಿ ದೂರದಲ್ಲಿರುವವರನ್ನು ನೋಡಿ ನಾನೂ ಅಲ್ಲಿಗೇಕೆ ಹೋಗಬಾರದೇಕೆನ್ನಿಸಿತಾದ್ದರಿಂದ ನಿಧಾನವಾಗಿ ಮುಂದೆ ಹೆಜ್ಜೆ ಇರಿಸತೊಡಗಿದೆ. ನೊರೆ ತುಂಬಿದ ಅಲೆಗಳನ್ನು ತಪ್ಪಿಸಿಕೊಳ್ಳುವುದು ದೊಡ್ಡ ಕಷ್ಟದ ಕೆಲಸವಾಗಿತ್ತು. ಒಮ್ಮೆ ನೊರೆಯ ವಲಯದಿಂದ ಮುಂದೆ ಹೋಗಿ ಬರೀ ನೀರಿನ ಅಲೆಗಳನ್ನು ಅನುಭವಿಸತೊಡಗಿದೆ. ಇವು ಭಾರೀ ಅಲೆಗಳು, ಅಲೆಗಳು ಸುರುಳಿಯಾಕಾರದಲ್ಲಿ ಬಂದು ಮುರಿಯುತ್ತಿದ್ದ (curl, break) ಸನ್ನಿವೇಶ ಮೋಹಕವಾಗಿತ್ತು. ಎದೆ ಮಟ್ಟದ ನೀರಿನಲ್ಲಿ ದೇಹ ಹಗುರವಾದಂತೆನಿಸಿ, ಬಂದ ಪ್ರತಿಯೊಂದು ಅಲೆಯೂ ಅದರ ಚಲನೆಗನುಗುಣವಾಗಿ ಸಾಕಷ್ಟು ಮೇಲಕ್ಕೊಯ್ದು ಕೆಳಕೆ ತರುತ್ತಿತ್ತು. ಅಲೆಯ ಮುರಿತಕ್ಕೆ ಸಿಕ್ಕು ಅದರ ಜೊತೆಯಲ್ಲಿಯೇ ದಡದ ಕಡೆಗೆ ಹೋಗುವುದು ಒಂದು ರೀತಿ, ಅಲೆಯ ಒಳಗೆ ತಲೆಯನ್ನು ತೂರಿ ಈಜಿ ಮುಂದೆ ಹೋಗುವುದು ಮತ್ತೊಂದು ರೀತಿ, ಅಲೆಯು ಮುಂದೆ ಹೋದ ಹಾಗೆಲ್ಲ ಅದರ ಎತ್ತರಕ್ಕೆ ಎತ್ತಿ ಇಳಿದು ಅಲ್ಲೇ ಇರುವುದು ಮತ್ತೊಂದು ರೀತಿ. ಮಹಾಸಾಗರದ ಆಳಕ್ಕೆ ತಕ್ಕಂತೆ ಹಾಗೂ ಪ್ರತಿಯೊಂದು ಅಲೆಯ ಏರಿಳಿತಕ್ಕೆ ಸಿಕ್ಕಂತೆ ಹಲವು ಅನುಭವಗಳನ್ನು ಎಂತಹವರೂ ಬೇಕಾದರೂ ಪಡೆದುಕೊಳ್ಳಬಹುದಾದದ್ದು ಸಹಜ ಹಾಗೂ ಮುಕ್ತವಾದದ್ದು. ಈ ಅನುಭವಗಳು ಇನ್ನೂ ನಿಸರ್ಗದತ್ತ ಕೊಡುಗೆಗಳಾಗಿ ಎಂದಿಗೂ ಹಾಗೇ ಇರಲಿ.

ದಡದಲ್ಲೋ ಸಾಕಷ್ಟು ಜನ - ಬೇಕಾದಷ್ಟು ಭಾವ ಭಂಗಿಯಲ್ಲಿ ತಮ್ಮ ತಮ್ಮ ಕೆಲಸವನ್ನು ನೋಡಿಕೊಂಡಿದ್ದಾರೆ. ಎಲ್ಲರೂ ಸಮುದ್ರರಾಜನ ಕಡೆಗೆ ಮುಖಮಾಡಿಕೊಂಡು ಯಾವುದೋ ತಪಸ್ಸಿಗೆ ಕುಳಿತ ಹಾಗೆ. ಪ್ರತಿಯೊಬ್ಬರೂ ತಮ್ಮ ಶಕ್ತಿ, ಇಚ್ಛೆ, ಅಲೋಚನೆಗಳಿಗನುಸಾರವಾಗಿ ಮರಳಿನ ಮೇಲೆ ಹಾಸಲು ಟವೆಲ್ಲಿನಿಂದ ಹಿಡಿದು, ಪ್ಲಾಸ್ಟಿಕ್ ಶೀಟ್, ಕುಳಿತು ಕೊಳ್ಳಲು ಖುರ್ಚಿ, ತಿಂದು ಕುಡಿಯಲು ಬೇಕಾದವುಗಳು, ಮುಖ ಮೈ ಕೈಗೆ ಮೆತ್ತಿಕೊಳ್ಳುವ ಸನ್‌ಸ್ಕ್ರೀನ್ ಕ್ರೀಮ್ ಮುಂತಾದವುಗಳನ್ನು ತಂದಿದ್ದನ್ನು ಸಾಮಾನ್ಯವಾಗಿ ನೋಡಬಹುದಿತ್ತು. ಅಲ್ಲಲ್ಲಿ ಟವೆಲ್ಲನ್ನು ಹಾಸಿಕೊಂಡು ಮಲಗಿರುವವರ ಕಾಲುಗಳು ಟವೆಲ್ಲಿಂದ ಬೇಕಾದಷ್ಟು ಹೊರಗೆ ಚಾಚಿಕೊಂಡಿದ್ದವು. ಹಾಸಿಗೆಯಿದ್ದಷ್ಟೇ ಕಾಲು ಚಾಚು - ಎನ್ನುವುದು ನಮ್ಮೂರಿನ ನುಡಿಕಟ್ಟಾದ್ದರಿಂದ ಅದು ಇಲ್ಲಿ ಅನ್ವಯಿಸುವುದಿಲ್ಲವೋ ಏನೋ? ಎಲ್ಲ ದೇಶಗಳ ಹಾಗೆ ಅಮೇರಿಕವೂ ಸಾಲದ ಮೇಲೇ ಇದೆ, ಇಲ್ಲಿನ ಕಾರ್ಪೋರೇಷನ್ನುಗಳೂ, ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯೆಲ್ಲವೂ ಸಾಲದ ಮೇಲೇ ನಿಂತಿದೆ, ಇಂತಲ್ಲಿ ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂದರೆ ಹಾಸ್ಯಾಸ್ಪದವೆನಿಸುವುದಿಲ್ಲವೇ?

’ನಾವು ಯಾವತ್ತೂ ಸಾಲವನ್ನು ಮಾಡಬಾರದು...’ ಎಂದು ದುಡಿಮೆಯ ದುಡ್ಡನ್ನೇ ನಂಬಿಕೊಂಡ ಗವರ್ನಮೆಂಟ್ ನೌಕರ ನನ್ನ ಅಜ್ಜ, ಕೊನೆಯವರೆಗೂ ಸಂಸಾರವನ್ನು ನಡೆಸುವುದಕ್ಕೆ ಬಹಳಷ್ಟು ಶ್ರಮಿಸಿದ್ದರು, ಕಷ್ಟದ ಸಮಯದಲ್ಲಿ ಮನೆಯಲ್ಲಿದ್ದ ಸಾಮಾನುಗಳನ್ನು, ಆಭರಣಗಳನ್ನು ಮಾರಿಕೊಂಡು ಬದುಕಿದ್ದರೇ ವಿನಾ ಒಂದು ದಮಡಿಯನ್ನೂ ಸಾಲವನ್ನಾಗಿ ತಂದವರಲ್ಲ. ಆದರೆ ಆ ಪರಂಪರೆ ಅವರಷ್ಟರಮಟ್ಟಿಗೆ ಮಾತ್ರ ನಿಂತು ಹೋಯಿತು, ನಾನಾಗಲಿ, ನನ್ನ ಅಪ್ಪನಾಗಲೀ, ಸಹೋದರರಾಗಲೀ ಅಜ್ಜನ ಮನಸ್ಥಿತಿಗೆ ತದ್ವಿರುದ್ದವಾಗಿ ಸಾಲದಲ್ಲೇ ಬೆಳೆದು ಬಂದವರು. ಇವರೆಲ್ಲರ ಯಾದಿಯಲ್ಲಿ ಹೆಚ್ಚಿನ ಸಾಲದ ಬಾಬ್ತು ನನ್ನ ತಲೆಯ ಮೇಲೇ ಇರೋದು ಮತ್ತೊಂದು ವೈಶಿಷ್ಟ್ಯ. ಅರ್ಥಶಾಸ್ತ್ರದ ಬಗ್ಗೆ, ಪ್ರಪಂಚದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಂಡಷ್ಟೂ, ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯಲ್ಲಿ ಹಂತಹಂತವಾಗಿ ಮೇಲೇರಿದಂತೆಲ್ಲ ನನ್ನ ತಲೆಯ ಮೇಲಿನ ಸಾಲದ ಮೊತ್ತ ಮೇಲೇರುತ್ತಿದೆಯೇ ವಿನಾ ಕಡಿಮೆಯಾದದ್ದೇ ಇಲ್ಲ. ಹಾಸಿಗೆ ಇದ್ದಷ್ಟೇ ಕಾಲು ಚಾಚುವುದಾದರೂ ಹೇಗೆ? ಅಕಸ್ಮಾತ್ ಕಾಲನ್ನು ಹಾಸಿಗೆಗಿಂತ ಮುಂದೆ ಚಾಚಿದರೆ ಏನಾದೀತು? ನಮ್ಮ ಕಾಲುಗಳು, ಅವುಗಳ ಉದ್ದ, ಚಾಚಿಕೊಳ್ಳಬೇಕೆನ್ನುವ ನಿಲುವು ನಮ್ಮ ಸ್ವಂತಿಕೆ ಹಾಗೂ ಸ್ವಾತಂತ್ರ್ಯವನ್ನು ಪ್ರತಿಬಿಂಬಿಸುವುದಾದರೆ ’ಇಷ್ಟಕ್ಕೇ ಇರಲಿ!’ ಎಂದು ಕಾನೂನನ್ನು ಮಾಡಿದವರಾರು? ಹಾಸಿಗೆ ಇದ್ದಷ್ಟು ಕಾಲು ಚಾಚುವ ಮನಸ್ಥಿತಿಯಿಂದ ಕಾಲು ಇದ್ದಷ್ಟು ಮನಸ್ಸು ಬಯಸಿದಷ್ಟು ಹಾಸಿಗೆಯನ್ನು ಚಾಚುವ ಸಮಯಬರೋದು ಯಾವಾಗ? ಅಂತಹ ಸಮಯ ಬಂದರೂ ಆ ರೀತಿ ಕಳೆಯಬಹುದಾದ ಒಂದೆರಡು ಕ್ಷಣಗಳಿಗೋಸ್ಕರ ಜೀವಮಾನವನ್ನೇಕೆ ಮುಡುಪಾಗಿಡಬೇಕು?

ಈ ಪ್ರಶ್ನೆಗಳ ಯಾದಿಯೇ ಇಷ್ಟು - ಅಲೆಗಳ ಥರ, ಒಂದಾದ ಮೇಲೊಂದು ಬಂದು ಅಪ್ಪಳಿಸುತ್ತಲೇ ಇರುತ್ತವೆ, ನೀವು ಯಾವ ನೀರಿನಲ್ಲಿ ಎಷ್ಟೇ ಆಳದಲ್ಲಿ ನಿಂತಿದ್ದರೂ ಈ ಅಲೆಗಳನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಸ್ಥಿತಿಗತಿಯಲ್ಲಿಯೂ ಸಾಲದ ಹೊರೆ, ಬರುವ ಸಂಬಳಕ್ಕಾಗಿ ಬಕಪಕ್ಷಿಯಂತೆ ಕಾದುಕೊಂಡಿರುವುದು ಒಂದು ಮಾನಸಿಕ ನೆಲೆಗಟ್ಟು ಅಷ್ಟೇ, ಅದನ್ನು ಮೀರಿ ಮುಂದೆ ಹೋಗುವುದಿದೆಯಲ್ಲಾ ಅದು ಸ್ವಾತ್ಯಂತ್ರ್ಯಕ್ಕಿಂತಲೂ ಹೆಚ್ಚಿನದು. ಸಾಲದ ಜೊತೆಗೆ ಬರುವ ಸ್ವಾತಂತ್ರ್ಯ ಒಂದು ರೀತಿ ಪ್ರಿವಿಲೇಜಿನ ಹಾಗೆ, ಅದು ನಿಜವಾದ ಮುಕ್ತಿಯಲ್ಲ, ಅದೇ ಯಾವುದೇ ಹೊರೆಯಿಲ್ಲದ ಬದುಕು, ಸಾಲವಿಲ್ಲದೇ ಇನ್ನೊಬ್ಬರಿಗೆ ಕೊಡಬೇಕು ಎನ್ನುವ ಕಾಟವಿಲ್ಲದೇ ಇರುವ ಬದುಕು ನಿಜವಾಗಿಯೂ ಸ್ವತಂತ್ರವಾದದ್ದು. ಈ ನಿಜ, ನನ್ನ ಅಜ್ಜ, ಮುತ್ತಜ್ಜರಿಗೆ ಅದ್ಯಾವಾಗಲೋ ಹೊಳೆದು ಹೋಗಿದ್ದರೆ, ನಂತರದ ಸಂತತಿಯ ಪ್ರತೀಕವಾಗಿರುವ ನಾವುಗಳು ಇನ್ನೂ ಸಾಲದ ಕೂಪದಲ್ಲೇ ಬಿದ್ದು ತೊಳಲಾಡುತ್ತಿರುವುದೇಕೋ?

Tuesday, August 21, 2007

ಇವತ್ತಲ್ಲ ನಾಳೆ ಅದೇನೋ ಬಂದು ಬೀಳುತ್ತೇ ಅನ್ನೋ ಹಾಗೆ

'ಅರೆ! ಏನಪ್ಪಾ ಇದು ಇಷ್ಟು ಬೇಗ ಬಂದೀದೀಯಾ?' ಅನ್ನೋ ಪ್ರಶ್ನೆ ಬೇರೆ ಯಾರನ್ನೂ ಕುರಿತು ಬಂದದ್ದಲ್ಲ, ಈ ಅವಧಿಗೆ ಮುಂಚೆ ಬರಬೇಕಾದ ಛಳಿಗಾಲವನ್ನು ಕುರಿತು. ಇನ್ನೂ ಸೆಪ್ಟೆಂಬರ್ ಬಂದಿಲ್ಲಾ ಆಗ್ಲೇ ಹತ್ತ್‌ಹತ್ರ ಐವತ್ತು ಡಿಗ್ರಿ (ಫ್ಯಾರನ್‌ಹೈಟ್) ವರೆಗೆ ಪಾದರಸ ಇಳಿದು ಹೋಗಿದೆಯೆಲ್ಲಾ ಏನನ್ನೋಣ? ಅದೂ ಮೊನ್ನೆ ದಿನಾ ರಾತ್ರಿ ನಲವತ್ತೊಂದರ ಹತ್ರ ಹೋಗಿ ಬಿಟ್ಟಿತ್ತು. ಬೇಸಿಗೆ ನಂಬಿ ಬದುಕೋನ್ ನಾನು, ಛಳಿಗಾಲ ಬಂತೂ ಅಂತಂದ್ರೆ ಅದೆಷ್ಟು ಜನರಿಗೆ ಕತ್ತಲು, ಕೊರೆಯೋ ಛಳಿ, ಕಿತ್ತು ತಿನ್ನೋ ಬೇಸರ ಹೆದರಿಸೋದೂ ಅಲ್ದೇ ಡಿಪ್ರೆಷ್ಷನ್ ತರುತ್ತೋ ಯಾರಿಗ್ ಗೊತ್ತು?

ಈ ಕಂಟ್ರಿ ಲಿವಿಂಗ್ ಅಂದ್ರೆ ಸುಮ್ನೇ ಬರಲ್ಲ. ನ್ಯೂ ಯಾರ್ಕ್ ಸಿಟಿಗೂ ನಮ್ಮನೇಗೂ ಕೊನೇ ಪಕ್ಷಾ ಆರೇಳ್ ಡಿಗ್ರಿನಾದ್ರೂ ವ್ಯತ್ಯಾಸಾ ಇರುತ್ತೆ, ಬೇಸಿಗೆಯಲ್ಲಿ ಎಷ್ಟು ತಣ್ಣಗಿರುತ್ತೋ ಛಳಿಯಲ್ಲೂ ಅದಕ್ಕಿಂತ ಹೆಚ್ಚು ತಣ್ಣಗಿನ ಅನುಭವವಾಗುತ್ತೆ. ಒಂಥರಾ ಈ ಅಮೇರಿಕದ ಬೇಸಿಗೆ ಅನ್ನೋದು ಕೆಟ್ಟ ಕಾನ್ಸೆಪ್ಟಪಾ, ಯಾಕೆ ಅಂದ್ರೆ ಜೂನ್ ಇಪ್ಪತ್ತೊಂದಕ್ಕೆ ಆರಂಭವಾಗೋ ಬೇಸಿಗೆ ಅದೇ ದಿನವೇ ಹೆಚ್ಚು ದೊಡ್ಡ ದಿನವಾಗಿ (ಡೇ ಲೈಟ್ ಘಂಟೆಗಳಲ್ಲಿ) ಬೇಸಿಗೆ ಆರಂಭವಾದ ದಿನದಿಂದ್ಲೇ ದಿನಗಳು ಸಂಕುಚಿತಗೊಳ್ತಾ ಹೋಗೋದು. ಒಂಥರಾ ಬಿರು ಬೇಸಿಗೆಯಲ್ಲಿ ಐಸ್ ಕ್ಯಾಂಡಿಯನ್ನು ಡಬ್ಬದಿಂದ ಹೊರಗೆ ತೆಗೆದ ಹಾಗೆ, ತೆಗೆದ ಘಳಿಗೆಯಿಂದ್ಲೂ ಅದು ಕರಗ್ತಾನೇ ಹೋಗುತ್ತೆ - ಅನುಭವಿಸಿ ಅಥವಾ ಬಿಡಿ. ಇತ್ತೀಚೆಗೆಲ್ಲಾ ಎಷ್ಟೊಂದ್ ಕತ್ಲು ಅಂತಂದ್ರೆ ಬೆಳಿಗ್ಗೆ ಏಳ್ ಘಂಟೆ ಆದ್ರೂ ಲೈಟ್ ಹಾಕ್ಕೋಂಡೇ ಇರಬೇಕು, ಸಂಜೇನೂ ಅಷ್ಟೇ ಬೇಗ ಕತ್ಲಾಗುತ್ತೆ.

ಓಹ್, ಅಮೇರಿಕದ ಬೇಸ್ಗೇನಾ? ಇಲ್ಲ್ಯಾವನೂ ಶೇಕ್ಸ್‌ಪಿಯರ್ ಇಲ್ಲಾ - Shall I Compare Thee To A Summer's Day? ಅಂತ ಬರೆಯೋಕೆ. ಅದೂ ಅಲ್ದೇ ಈ ದೊಡ್ಡ ದೇಶದಲ್ಲಿ ಕೆಲವರು ಯಾವಾಗ್ಲೂ ಬೇಸಿಗೆಯಲ್ಲೇ ನಲುಗ್ತಾ ಇದ್ರೆ, ಇನ್ನ್ ಕೆಲವರು ಛಳಿಯಲ್ಲೇ ಮುಲುಗ್ತಾ ಇರ್ತಾರೆ - ಅದೇನ್ ದೇಶಾನೋ ಕಾಣೆ. ನಮ್ ದೇಶ್ದಲ್ಲೂ ಹಿಮಾಲಯದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಥರ್ಮಾಮೀಟರ್‌ನಲ್ಲಿ ಅಗಾಧವಾದ ವೇರಿಯೇಷನ್ನೇನೋ ಇತ್ತು, ಆದ್ರೆ ಆ ಹಿಮಾಲಯಾನಾ ಯಾವ್ ಯಾವ್ದೋ ದೇಶ್ದೋರು ಹತ್ತಿ ಇಳಿಯೋಕ್ ಪ್ರಾಕ್ಟೀಸ್ ಮಾಡೋ ಜಾಗ ಮಾಡ್ಕಂಡ್ರೇ ವಿನಾ ನಾವ್ ನೋಡ್ಲೇ ಇಲ್ಲಾ ಒಂದಿನಾನು. ಅಲ್ಲಿ ಕಾಣದ ಮಂಜು, ಹಿಮವನ್ನ ಇಲ್ಲಿ ಕಾಣು ಎಂದು ಯಾರೋ ಬರೆದಿಟ್ಟ ಹಾಗೆ (ಹಣೇ ಮೇಲೆ), ಅಲ್ಲಿ ಕುಡಿಯದ ನೀರನ್ನ ಇಲ್ಲಿ ಬೇರೆ ಬೇರೆ ಫಾರ್ಮಿನಲ್ಲಿ ಕುಡಿದು ಅನುಭವಿಸು ಎಂದು ಯಾವುದೋ ಕಾನೂನಿಗೆ ಒಳಪಟ್ಟವರ ಹಾಗೆ ನಮ್ಮ ಬದುಕು...ಬ್ಯಾಡಾ ಅನ್ನೋದು ಆಪ್‌ಷನ್ನಿನ್ನಲ್ಲೇ ಇಲ್ಲಾ ಅಂತ ಪರೀಕ್ಷೆಗೆ ತಯಾರಾಗ್ತಾ ಇರೋ ಹುಡುಗನ್ನ ಹೆದರಿಸೋ ವರಸೇ ಬೇರೆ ಕೇಡಿಗೆ!

'ಏನ್ ಸಾರ್ ನೀವು? ಇಷ್ಟ್ ವರ್ಷಾ ಆಯ್ತು ಇಲ್ಲಿಗ್ ಬಂದು, ಇನ್ನೂ ಸುತ್ಲನ್ನ್ ನೋಡ್ಕಂಡ್ ಕೊರಗ್ತಾನೇ ಇರ್ತೀರಲ್ಲಾ... (ನಿಮ್ ಬಂಡ್ ಬಾಳ್ವೇಗ್ ಇಷ್ಟ್ ಬೆಂಕೀ ಹಾಕಾ). ಪುಲ್ ಪ್ಯಾಕೇಜ್ ಡೀಲ್ ಅಂತ ಪಡಕಂಡ್ ಬಂದ್ ಮೇಲೆ ಅನುಭವಿಸ್ ಬೇಕಪ್ಪಾ, ಅದನ್ನ್ ಬಿಟ್ಟು ಕೊರಗಿದ್ರೆ?' ಎಂದು ಯಾವ್ದೋ ಧ್ವನಿಯೊಂದು ಕೇಳಿಸಿದಂತಾಗಿ ಸುತ್ಲೂ ನೋಡ್ದೆ ಯಾರೂ ಕಾಣ್ಲಿಲ್ಲ. 'ಹಂಗಲ್ಲ್ ರೀ...' ಎಂದು ಸಮಾಧಾನ ಹೊರಡ್ತು, ಆದ್ರೆ ಅದು ಯಾರನ್ನ್ ಉದ್ದೇಶಿಸಿ ಎನ್ನೋ ಪ್ರಶ್ನೇ ಬಂದಿದ್ದೇ ತಡಾ ಒಂಥರಾ ಹೋಟ್ಲು ಮಾಣಿ ತಪ್ಪಾಗಿ ತಂದು ದೋಸೆಯನ್ನ ನಮ್ಮ ಮುಂದೆ ಇಟ್ಟು ಹಿಂದೆ ತೆಗೆದುಕೊಂಡು ಹೋದ ಹಾಗೆ, ಆ ಸಮಜಾಯಿಷಿ ಅಲ್ಲೇ ಅಡಗಿಕೊಂಡಿತು. ಅದ್ಯಾವ್ದೋ ಗೀತೇನಲ್ಲಿ ಬರೆದವ್ರೆ ಅನ್ನೋ ಥರ ನಮ್ಮ್ ಭಾರತೀಯರ ಮನೆಗಳಲ್ಲಿ (ಎಲ್ಲೆಲ್ಲಿ ಅವರವರೇ ಗ್ಯಾಸೂ-ಕರೆಂಟ್ ಬಿಲ್ಲ್ ಕೊಡಬೇಕೋ ಅಲ್ಲಿ) ಯಾವತ್ತಿದ್ರೂ ಒಂದ್ ಡಿಗ್ರಿ ಕಮ್ಮೀನೇ ಇರುತ್ತೇ ಥರ್ಮೋಸ್ಟ್ಯಾಟು, ಸೋ ನಡುಗೋದು ನಮ್ಮ್ ಹಣೇಬರ, ಇನ್ನು ಆರು ತಿಂಗ್ಳು.

ನಮ್ಮ್ ತಲೇಲ್ ಬರೆದಿದ್ದು ಇಷ್ಟೂ ಅಂತ ಬೇಸರಾ ಮಾಡ್ಕೊಂಡು ಕಿಟಕಿಯಿಂದ ದೂರ ನೋಡಿದ್ರೆ, ನಿಧಾನವಾಗಿ ಪಕ್ಕದ ಮರಗಳಿಂದ ಎಲೆಗಳೆಲ್ಲಾ ಒಂದೊಂದೇ ನೆಲದ ಹಾದಿ ಹಿಡಿಯುತ್ತಿದ್ದವು. ಈ ತಣ್ಣಗೆ ಕೊರೆಯೋ ಗಾಳಿ ಒಂದೇ ಒಂದು ದಿನದಲ್ಲೇ ಅದೆಷ್ಟು ಎಲೆಗಳ ಬದುಕನ್ನು ಬದಲಾಯಿಸಿಬಿಡ್ತಲ್ಲಾ ಅಂತ ಅನ್ನಿಸ್ತು. ಪಾಪ, ಈ ಛಳಿಯಲ್ಲಿ ಎಲೆ ಕಳೆದುಕೊಳ್ಳೋ ಮರಗಳೂ, ಪ್ರವಾಹದಲ್ಲಿ ಕೊಚ್ಚೆ ತುಂಬಿ ಹರಿಯೋ ನದಿಗಳಿಗೂ ಅದ್ಯಾವತ್ತ್ ಮುಕ್ತಿ ಸಿಗುತ್ತೋ, ಅದ್ಯಾವ್ ಋಷಿ ಶಾಪ ಕೊಟ್ಟಿದ್ನಪಾ? ಹೂಞ್, ಇಲ್ಲಾ, ಇಲ್ಲಾ...ಈ ಮುಂದೆ ಬೀಳೋ ಛಳಿಗೆ, ಅದ್ರಲ್ಲೂ ರಾಶಿ ರಾಶಿ ಬೀಳೋ ಹಿಮಕ್ಕೆ, ಅದರ ಭಾರಕ್ಕೆ ಮರದ ಟೊಂಗೆಗಳು ಮುರಿದು ಬೀಳದಿರಲಿ ಎಂದು ನೇಚರ್ ಕಂಡುಕೊಂಡ ಪರಿಹಾರವಿದ್ದಿರಬಹುದು...ಹಗುರವಾದವನು ಎಂತಹ ಭಾರವನ್ನೂ ಸಹಿಸಬಲ್ಲ ಎನ್ನೋ ಅದರದ್ದೇ ಆದ ತತ್ವ ಅಂತ ಏನಾದ್ರೂ ಇದ್ದಿರಬಹುದಾ ಅನ್ನೋ ಶಂಕೆ ಬಂತು. ಈ ನಿತ್ಯಹರಿದ್ವರ್ಣ (ಎವರ್‌ಗ್ರೀನ್) ಗಳದ್ದು ಇನ್ನೊಂದ್ ಪರಿ - ತಾವ್ ಎವರ್‌ಗ್ರೀನ್ ಏನೋ ಆದ್ವು, ಆದ್ರೆ ಅವು ಚಿಗುರಿ ಬೆಳೆಯೋ ಬೆಳವಣಿಗೆ ಇದೇ ನೋಡಿ ಬಾಳಾ ಸ್ಲೋ ಒಂಥರಾ ಥರ್ಡ್‍ವರ್ಲ್ಡ್ ದೇಶಗಳು ಮುಂದೆ ಬರೋ ಹಾಗೆ. ನಾವು ಏನೇ ಆದ್ರೂ ಹಸಿರಾಗೇ ಇರ್ತೀವಿ ಅಂತ ಹಠವನ್ನೇನೋ ತೊಟ್ವು, ಆದ್ರೆ ಮಂಜಿನ ಭಾರಕ್ಕೆಲ್ಲಾ ಕುಬ್ಜರಾಗಿ ಹೋದ್ವು. ಆದ್ರೂ ಅವುಗಳದ್ದೂ ಒಂದು ಧೈರ್ಯಾ ಸ್ವಾಮೀ, ಎಂಥಾ ಛಳೀನಲ್ಲೂ ಬದುಕಿ ಉಳೀತಾವೆ. ಹೊರಗಡೇ ಮೈನಸ್ ಇಪ್ಪತ್ತ್ ಡಿಗ್ರಿ ಇರೋ ಛಳೀನಲ್ಲಿ ಅದೆಂಗ್ ಬದುಕ್ತಾವೋ ಯಾರಿಗ್ಗ್ ಗೊತ್ತು?

ನಿಮ್ಮೂರಲ್ಲಿ ಹೆಂಗಿದೆ ಈಗ? ಮಳೇಬೆಳೇ ಬಗ್ಗೆ ತಲೆಕೆಡಿಸಿಕೊಳ್ತೀರೋ ಇಲ್ವೋ? ಮಳೇಬೆಳೆ ಬಗ್ಗೆ ತಲೆಕೆಡಿಸಿಕೊಂಡ್ ಯಾರಿಗ್ ಏನಾಗಿದೇ ಅಂತೀರಾ, ಅದೂ ಸರೀನೇ...ನಮ್ಮೂರ್‌ನಲ್ಲ್ ನೋಡಿ, ಯಾವತ್ತಿದ್ರೂ ಜನ ಮುಗಿಲ್ ನೋಡ್ತಾನೇ ಇರ್ತಾರೆ ಇವತ್ತಲ್ಲ ನಾಳೆ ಅದೇನೋ ಬಂದು ಬೀಳುತ್ತೇ ಅನ್ನೋ ಹಾಗೆ.

Friday, August 10, 2007

ಹೇ ವರ್ಚುವಲ್ ಪ್ರಪಂಚವೇ, ಏನು ನಿನ್ನ ಲೀಲೆ?

’ಎಲ್ಲಾ ವರ್ಚುವಲ್ ಬದುಕು - ಛೇ!’ ಎಂದು ನನಗೇ ಕೇಳುವ ಹಾಗೆ ನಾನೇ ಹೇಳಿಕೊಂಡೆ...ನಾವು ಮಾತನಾಡೋದು ಯಾವಾಗಲೂ ಇನ್ನೊಬ್ಬರ ಜೊತೆಗೇ ಎಂದು ಏನಾದರೂ ಕಾನೂನು ಇದೆಯೇ, ಮೈಥಿಲಿ ಶರಣ್ ಗುಪ್ತರ ಪಂಚವಟಿಯ ಲಕ್ಷಣ ತನ್ನಷ್ಟಕ್ಕೇ ತಾನು ಮಾತನಾಡಿಕೊಳ್ಳುತ್ತಿದ್ದನಂತೆ - ಹಾಗೂ ಈ ಜಗತ್ತಿನ ಹುಚ್ಚರೂ ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುತ್ತಾರೆ ಎನ್ನೋದನ್ನ ನಿಮ್ಹಾನ್ಸ್‌ನ ಹುಚ್ಚರ ವಿಭಾಗದಲ್ಲಿ ಯಾವತ್ತೋ ನೋಡಿ ನಕ್ಕು ಸುಮ್ಮನಾಗಿದ್ದೇನೆ, ಅಲ್ಲಿ ನಾನೇಕೆ ಹೋಗಿದ್ದೆ ಅನ್ನೋದು ದೊಡ್ಡ ಕಥೆ, ಇನ್ನೊಂದು ದಿನಕ್ಕಿರಲಿ.

ಬ್ಯಾಂಕಿನವರು ಮನಸ್ಸಿಗೆ ಬಂದಂತೆ ಏನೇನೋ ಚಾರ್ಜ್ ಮಾಡಿಕೊಂಡು ನೂರಾ ಎಂಭತ್ತು ಡಾಲರ್ರುಗಳನ್ನು ನನ್ನ ಕ್ರೆಡಿಟ್ ಕಾರ್ಡಿನ ಅಕೌಂಟಿನಲ್ಲಿ ಉಜ್ಜಿಕೊಂಡಿದ್ದನ್ನು ನೋಡಿ ಮೈ ಉರಿದು ಹೋಯಿತು. ಕೂಡಲೇ ಕಷ್ಟಮರ್ ಸರ್ವೀಸ್ ವಿಭಾಗಕ್ಕೆ ಫೋನಾಯಿಸಿ ಕೇಳಿದರೆ ಆ ಕಡೆಯಿಂದ ಕೇಳಿಸಿದ ಸ್ವರದಲ್ಲಿ ಯಾವ ಕಳಕಳಿಯಾಗಲಿ, ಕಕ್ಕುಲತೆಯಾಗಲೀ ಇರಲಿಲ್ಲ - ಏಕಿರಬೇಕು? ಎಲ್ಲವೂ ಕಂಪ್ಯೂಟರ್ ನಡೆಸಿದಂತೆ ನಡೆಯುವ ಬಿಸಿನೆಸ್ ರೂಲ್ಸ್‌ಗಳು, ಅವರೋ ನಮ್ಮಂಥವರ ಸಿಟ್ಟಿಗೆ ಆಹಾರವಾಗಬೇಕಾಗಿ ಬಂದ ಬಲಿಪಶುಗಳು, ಅದೂ ಕೇವಲ ನಮ್ಮ ಮಾತಿಗೆ ಮಾತ್ರ ಸಿಕ್ಕುವ ಹಾಗೆ ಅದ್ಯಾವುದೋ ಪ್ರಪಂಚದ ಮೂಲೆಯಲ್ಲಿ ಅವಿತು ಕುಳಿತುಕೊಳ್ಳುತ್ತಾರೆ...ಇಂದಿನ ವರ್ಚುವಲ್ ಪ್ರಪಂಚದಲ್ಲಿ ನಾನು ಭಾರತದ ನಮ್ಮೂರಿನ ಪಕ್ಕದ ಊರಿನ ಹುಡುಗ/ಹುಡುಗಿಯೊಂದಿಗೆ ಮಾತನಾಡುತ್ತಿದ್ದರೂ ಅವರೂ ಬೇರೆ, ನಾವೂ ಬೇರೆ. ಸಿಟ್ಟಿನಲ್ಲಿ ಯಾರು ಏನು ಸಾಧಿಸಿದ್ದಾರೆ ಹೇಳಿ? ಎಲ್ಲವನ್ನೂ ನಯವಾಗಿ ವಿವರಿಸಿದೆ, ನೂರಾ ಎಂಭತ್ತು ಡಾಲರುಗಳನ್ನು ತಪ್ಪಾಗಿ ಚಾರ್ಜ್ ಮಾಡಿದ್ದೀರಿ, ಹಿಂತಿರುಗಿಸಿ ಎಂದು ಕೇಳಿಕೊಂಡೆ. ಹತ್ತು ನಿಮಿಷ ಕಥೆ ಕೇಳಿದ ಚೆಲುವೆ ಮರುಕಪಟ್ಟವಳಂತೆ ಕಂಡುಬಂದರೂ, ’ಕ್ಷಮಿಸಿ, ಚಾರ್ಜ್ ಅನ್ನು ಹಿಂತಿರುಗಿಸುವ ಅಧಿಕಾರ ನನಗಿಲ್ಲ, ಮತ್ತೊಬ್ಬರಿಗೆ ಟ್ರಾನ್ಸ್‌ಫರ್ ಮಾಡುತ್ತೇನೆ...’ ಎಂದು ಕರೆಯನ್ನು ಇನ್ನೊಬ್ಬರಿಗೆ ಟ್ರಾನ್ಸ್‌ಫರ್ ಮಾಡಿದಳು. ಆಗ ಹೊಳೆಯಿತು, ನನ್ನ ತಾಳ್ಮೆ ಅಮೇರಿಕಕ್ಕೆ ಬಂದ ಮೇಲೆ ಏಕೆ ಹೆಚ್ಚಾಗಿದೆ ಎಂಬುದಾಗಿ! ಇಷ್ಟು ಹೊತ್ತು ಎಲ್ಲವನ್ನು ಹತ್ತು ನಿಮಿಷಗಳ ಕಾಲ ವಿಷದ ಪಡಿಸಿದ ಮೇಲೆ ಮತ್ತೆ ಅದೇ ರಾಗವನ್ನು ಇನ್ನೊಬ್ಬರ ಮುಂದೆ ಹಾಡಬೇಕಾಗಿ ಬಂದುದು. ಮತ್ತೆ ಆಲಾಪನೆಯೊಂದಿಗೆ ಶುರುಮಾಡಿದೆ, ಈ ಚೆಲುವೆ, ನಡುನಡುವೆ ’ಹ್ಞೂ...’ ಎನ್ನುತ್ತಿದ್ದಳಾದರೂ ಆಕೆ ನನ್ನ ಕಥೆಯನ್ನು ಕೇಳುತ್ತಿದ್ದ ಬಗ್ಗೆ, ನನ್ನ ವಿಚಾರದಲ್ಲಿ ಕಳಕಳಿಯ ವಿಶ್ವಾಸ ತೋರುತ್ತಿರುವುದರ ಬಗ್ಗೆ ಯಾವುದೇ ನಂಬಿಕೆಯೂ ನನಗಿರಲಿಲ್ಲವಾದ್ದರಿಂದ ನನ್ನ ಧ್ವನಿಯಲ್ಲಿ ಯಾವುದೇ ಭಾವೋದ್ವೇಗವೂ ಕಾಣಿಸಿಕೊಳ್ಳಲಿಲ್ಲ. ಅದರ ಬದಲಿಗೆ ಇದೇ ರೀತಿ ಹತ್ತು ಹದಿನೈದು ಜನರ ಮುಂದೆ ನನ್ನ ಕಥೆಯನ್ನು ತೋಡಿಕೊಂಡು, ಹತ್ತು ಇ-ಮೇಲ್‌ಗಳನ್ನು ಬರೆದು ನನ್ನ ತತ್ವವನ್ನು ಸಾಧಿಸಿಕೊಳ್ಳುವುದರ ಬಗ್ಗೆ ಮನಸ್ಸು ಆಲೋಚಿಸಿಕೊಂಡು ಮುಂದೆ ಬರಬಹುದಾದ ಕಷ್ಟಗಳನ್ನು ನೆನೆದು ಸಂಯಮದಿಂದಿತ್ತು. ತತ್ವದ ವಿಚಾರಕ್ಕೆ ಬಂತೆಂದರೆ, ಅದೂ ನನ್ನಂಥ ಮೂರ್ಖರ ವಿಚಾರದಲ್ಲಿ ಹಣದ ಸಂಖ್ಯೆಗೆ ಯಾವುದೇ ಮಹತ್ವವಿರದು, ಏನಾದರೂ ಮಾಡಿ ನನ್ನದನ್ನು ಸಾಧಿಸಿಕೊಂಡು ಅವರು ನನ್ನ ಹಣವನ್ನು, ಅದೂ ತಪ್ಪಾಗಿ ಚಾರ್ಜ್ ಮಾಡಿದ ಹಣವನ್ನು ಹಿಂತಿರುಗಿಸಬೇಕು. ಅಷ್ಟೇ! (ಈ ತತ್ವದ ಕುದುರೆ ಸವಾರಿ, ನನ್ನ ಬಲವಾದ ಅಂಶವೆನ್ನುವುದಕ್ಕಿಂತಲೂ, ನನ್ನ ವೀಕ್‌ನೆಸ್ ಎಂದರೇ ಸರಿ.)

ಸದ್ಯ, ಎರಡನೇ ಬಾರಿ ಕಥೆಯನ್ನು ಹೇಳುವಲ್ಲಿನ ಆರ್ತನಾದಕ್ಕೇ ಈ ಚೆಲುವೆ ಕರಗಿದಳು ಎಂದು ಕಾಣುತ್ತೆ...ನನ್ನ ಹಣವನ್ನು ಹಿಂತಿರುಗಿಸುತ್ತೇನೆ, ಎಂದು ಭರವಸೆಯನ್ನು ನೀಡಿಯೇ ಬಿಟ್ಟಳು...ಅಬ್ಬಾ, ದೊಡ್ಡದೊಂದು ಮೋಡ ಕರಗಿ ಮಳೆ ಸುರಿದು ಮತ್ತೆ ಬೆಳಗು ಬಂದಂತಾಯಿತು.

ಆದರೆ, ಈ ವರ್ಚುವಲ್ ಪ್ರಪಂಚದ ಯಾರಿಗೂ ಕಾಣದೇ ನಡೆದ, ನಡೆಯುವ ಟ್ರಾನ್ಸಾಕ್ಷನ್ನುಗಳಿಗಾಗಲೀ, ಸಂಭಾಷಣೆಗಳಿಗಾಗಲಿ ಅವುಗಳ ಪರಿಣಾಮವೇನೂ ತಟ್ಟದು. ಬರೀ ಸೋಮವಾರದಿಂದ-ಶುಕ್ರವಾರದವರೆಗೆ ಮುಂಜಾನೆ ಒಂಭತ್ತರಿಂದ ಸಂಜೆ ಐದರವರೆಗೆ ಗ್ರಾಹಕರ ಕಷ್ಟಗಳನ್ನು ಅರಿಯುವಂತೆ ನಟಿಸುವ ಲಲನಾಮಣಿಗಳನ್ನು ನಾನು ನನ್ನ ಆಫೀಸಿನ ಸಮಯದಲ್ಲೇ ಮಾತನಾಡಿಸಬೇಕು. ಅದರಿಂದ ಅವರ ಕೆಲಸ ನಡೆಯಿತು, ನನ್ನ ವೈಯುಕ್ತಿಕ ಕೆಲಸ ಪೂರೈಸಿತು. ಆದರೆ ಹನ್ನೆರೆಡು ಘಂಟೆಗೆ ತಯಾರಾಗಬೇಕಾಗಿದ್ದ ವರದಿ ’ತಯಾರಾಯ್ತಾ?’ ಎಂದು ಒಂದು ಘಂಟೆ ಮೊದಲೇ ಕೇಳುವ ಬಾಸಿಗೆ ಏನು ಹೇಳಲಿ? ಯಾರೋ ನೆಟ್ಟು ಬೆಳೆಸಿದ ಬಿಸಿನೆಸ್ ರೂಲ್ಸ್‌ಗಳಿಗೆ ಆಹಾರವಾಗಬೇಕಾಗಿ ಬಂದ ಕ್ಯಾಪಿಟಲ್ ಪ್ರಪಂಚದ ಸರಕುಗಳಿಗೆ ನೊಂದ ನನ್ನ ಅರ್ಧ ಘಂಟೆ ಸಮಯವನ್ನು ಹಿಂತಿರುಗಿಸುವವರಾರು? ಕ್ಯಾಪಿಟಲ್ ಪ್ರಪಂಚದ ಆರೋಪಗಳಿಗೆ ನೀವು ತಕ್ಕನಾಗಿ ಅಥವಾ ಪ್ರತಿಯಾಗಿ ಧ್ವನಿಯನ್ನು ಹೊರಡಿಸದೇ ಹೋದಲ್ಲಿ ನಿಮ್ಮ ತಪ್ಪನ್ನು ಒಪ್ಪಿಕೊಂಡಂತಾಗುತ್ತದೆ ಎಂಬ ಯೂನಿವರ್ಸಲ್ ಒಪ್ಪಂದವನ್ನು ಜಗತ್ತಿಗೆ ಹೇಳಿಕೊಟ್ಟವರು ಯಾರು? ನನ್ನ ಅರ್ಧ ಘಂಟೆ ಹಾಳಾಗಿ ಹೋಯಿತು, ಮನಸ್ಸು ನೊಂದಿತು, ಯಾರಿಗೂ ಬೇಡದ, ಕಂಪನಿಗಳಿಗೆ ಬೇಕಾದ ನೂರಾ ಎಂಭತ್ತು ಡಾಲರ್ ಅನ್ನು ’ಉಳಿಸಿದೆ’ ಎಂದು ಹೇಳುವಂತೆಯೂ ಇಲ್ಲದಂತಾಗಿ ಹೋಯಿತು...ಹೇ ವರ್ಚುವಲ್ ಪ್ರಪಂಚವೇ, ಏನು ನಿನ್ನ ಲೀಲೆ?

***

ಕ್ಯಾಪಿಟಲ್ ಪ್ರಪಂಚದ ದೊಡ್ಡ ಕಂಪನಿಯ ಏಣಿಯ ಕಣ್ಣುಗಳಲ್ಲಿ ಗೋಡೆಗೆ ಬಲವಾಗಿ ಒರಗಿಕೊಂಡಿರುವ ನನ್ನಂತಹವರ ಸಹೋದ್ಯೋಗಿಗಳನ್ನು ಬಿಟ್ಟು ಬೇರೆ ಬದುಕೇನಿದೆ? ಎಂದು ಬಲವಾದ ಯೋಚನೆ ಬಿಸಿಲು ಮಳೆಯಲ್ಲಿ ಹುಟ್ಟುವ ಕಾಮನಬಿಲ್ಲಿನಂತೆ ಅದ್ಯಾವುದೋ ಮನದ ಮೂಲೆಯಲ್ಲಿ ಎದ್ದು ನಿಂತಿತು. ಆಫೀಸಿನ ಬದುಕಿನ ಹೊರತಾಗಿ ನನ್ನ ಕೈಬೆರಳುಗಳಲ್ಲಿ ಎಣಿಸಬಹುದಾದಷ್ಟೇ ಸಂಬಂಧಗಳು, ಕೆಲವು ಇನ್ನೂ ಪೂರ್ಣ ಹೆಸರು ಗೊತ್ತಿರದವು, ಇನ್ನು ಕೆಲವು ಹೆಸರು ಗೊತ್ತಿದ್ದರೂ ಮುಖ ಪರಿಚಯವಿಲ್ಲದವು. ಆಗಾಗ್ಗೆ ವರ್ಚುವಲ್ ಪ್ರಪಂಚದ ಹರಿಕಾರರಂತೆ ಸಂದೇಶಗಳ ರೂಪದಲ್ಲಿ ಇನ್ಸ್ಟಂಟ್ ಮೆಸ್ಸೇಜುಗಳಾಗಿ ಬಂದು ಕಾಡುವವು. ನನ್ನ ಸ್ಪಂದನ, ಸಹಪಯಣವೇನಿದ್ದರೂ ಇಂಥವುಗಳ ಕೋರಿಕೆಗಳನ್ನು ಪೂರೈಸುವಲ್ಲಿ ಮಾತ್ರ ಸೀಮಿತವಾಗಿ ಹೋಗಿರುವುದೇ ಹೆಚ್ಚು. ನಿಮಗೆಲ್ಲರಿಗೂ ಆಗುವಂತೆ ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳ ಮದುವೆಯಾಗಲೀ, ಆತ್ಮೀಯ ಸ್ನೇಹಿತನ ಕಷ್ಟನಷ್ಟಗಳಿಗೆ ಸ್ಪಂದಿಸುವ ಧಾರ್ಮಿಕತೆಯಾಗಲೀ ಅದರಲ್ಲಿ ಇಲ್ಲ. ಇವತ್ತಿದ್ದವರು ನಾಳೆ ಇಲ್ಲವೆಂದರೂ ಏನೂ ಬದಲಾವಣೆಯಾದ ಹಾಗೆ ಕಾಣೋದಿಲ್ಲ.

ಯಾರನ್ನು ಸ್ನೇಹಿತರೆಂದು ಕರೆಯೋದು, ಸ್ನೇಹಿತರಿಗೆ ಇರಬೇಕಾದ ಕ್ವಾಲಿಫಿಕೇಷನ್ ಏನು? ಎಲ್ಲರೂ ಒಂದೇ ನೆಲೆಗಟ್ಟು, ಮನಸ್ಥಿತಿಯವರಾದರೆ ಅಲ್ಲಿ ಭಿನ್ನತೆ ಹೇಗೆ ಹುಟ್ಟಿ ಬೆಳೆಯುತ್ತದೆ? ಭಿನ್ನತೆ ಹುಟ್ಟಿ ಬೆಳೆಯದಿದ್ದಲ್ಲಿ, ವ್ಯತಿರಿಕ್ತ ಮನಸ್ಥಿತಿ ನಿರ್ಮಾಣವಾಗದಿದ್ದಲ್ಲಿ ಭಾಂದವ್ಯ ಬಂಜರುಭೂಮಿಯಾಗದಂತಿರುವುದಕ್ಕೆ ಏನು ಮಾಡುವುದು?

ಮಾಹಿತಿ ಜಾಲ, ಇಂಟರ್‌ನೆಟ್ ಸೂಪರ್‌ಹೈವೇ, ಮುಂತಾದ ಅಲ್ಟ್ರಾ ಮಾಡರ್ನ್ ಟೆಕ್ನಾಲಜೀ ಏನೇ ಬಂದರೂ ನಮ್ಮ ಅಸ್ಮಿತೆ (ಐಡೆಂಟಿಟಿ) ಎನ್ನುವುದು ಸಣ್ಣ ಗೂಡಿನ ಚಿಕ್ಕ ಪಕ್ಷಿಯ ಧ್ವನಿಯಾಗಿ ಹೋಗಿರುವುದೇ ಹೆಚ್ಚು. ಈ ಹಕ್ಕಿಯ ರೆಕ್ಕೆಗಳು ಚಿಕ್ಕವು ಬಾನು ಮಿಗಿಲಾಗಿದ್ದರೇನಂತೆ ಹಾರಲು ಶಕ್ತಿ ಇಲ್ಲವಲ್ಲಾ...ಶಕ್ತಿ ಇದ್ದರೇನಂತೆ ಹಾರಲು ದಿಕ್ಕುಗಳು ಬೇಕಲ್ಲಾ. ಈ ಹಕ್ಕಿಯ ಕಿರಿದಾದ ಧ್ವನಿಯಲ್ಲಿನ ಸಂದೇಶಗಳೂ ಹೆಚ್ಚುಹೆಚ್ಚು ದೂರದವರೆಗೆ ಪಸರಿಸಲಾರದು. ಸಾವಿರದ ಒಂಭೈನೂರರ ಮೊದಲಲ್ಲಿ ಯಾವ ತಂತ್ರಜ್ಞಾನವಿಲ್ಲದಿದ್ದರೂ ಭಾರತದ ಉದ್ದಗಲಕ್ಕೆ ಸ್ವಾತಂತ್ರದ ಫೂರಕ ಸಂದೇಶಗಳು ಅದು ಹೇಗೆ ಹಬ್ಬುತ್ತಿದ್ದವು? ಇಂದಿನ ಮಾಹಿತಿ ಜಾಲದಲ್ಲಿ ನಮ್ಮ ಸಂದೇಶಗಳೇಕೆ ನರಸತ್ತವುಗಳಾಗಿ ಹೋಗುತ್ತವೆ? ಎನ್ನುವ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಹಿಡಿಯಲು ಯಾವುದಾದರೂ ಋಷಿಗಳಿಗೆ ಮಾತ್ರ ಸಾಧ್ಯ. ಒಪ್ಪಿಕೊಳ್ಳೋಣ, ನಾವು ಬದಲಾಗಿದ್ದೇವೆ ಎನ್ನುವ ಸತ್ಯವನ್ನ. ನಮಗೆ ಅಂದು ಮುಖ್ಯವಾದದ್ದು ಇಂದು ನಿಷ್ಪ್ರಯೋಜಕ ಎಂಬ ಬೆಳವಣಿಗೆಯಾಗಿರುವುದನ್ನು ಸಹಜ ಎಂದು ಹೇಳಿ ಸುಮ್ಮನಾಗುವುದೇ ಒಳ್ಳೆಯದು.