Showing posts with label ಅಲ್ಲಿ-ಇಲ್ಲಿ. Show all posts
Showing posts with label ಅಲ್ಲಿ-ಇಲ್ಲಿ. Show all posts

Monday, September 28, 2009

ಕಾಫಿ ಫಿಲ್ಟರ್, ಕಿವಿಗೆ ಹಾಕುವ ಹತ್ತಿ ಹಾಗೂ ಅನಿವಾಸಿತನ

ಭಾರತದಿಂದ ಬಂದ ಹೊಸತರಲ್ಲಿ ಅಮೇರಿಕದಲ್ಲಿ ದೊರೆಯುವ ಕಾಫಿ (ಲೋಟಾಗಳ) ಸೈಜು, ಅದನ್ನು ಬಳಸುವ ಬಳಕೆದಾರರೆಲ್ಲ ನನ್ನಲ್ಲಿ ಬಹಳ ಕಳವಳವನ್ನೂ ದಿಗ್ಬ್ರಾಂತಿಯುನ್ನು ಮೂಡಿಸುತ್ತಿದ್ದರು ಎನ್ನುವುದು ನನ್ನ ಅನುಭವ ಅಥವಾ ಅನಿಸಿಕೆ. ಇಲ್ಲಿ ಎಲ್ಲವೂ ಲಾರ್ಜ್ ಸೈಜು - ಕಾಫಿ, ಸೋಡಾ, ತಿನ್ನುವ ಸ್ಯಾಂಡ್‌ವಿಚ್, ಆಹಾರ ಪದಾರ್ಥ, ಆಚಾರ-ವಿಚಾರ ಎಲ್ಲವೂ. ನಮ್ಮ ಭಾರತೀಯ ಪದ್ದತಿಯ ಪ್ರಕಾರ ನಾನು ಬೆಳಗ್ಗೆ ಒಂದು ಲೋಟಾ ಮತ್ತು ಸಂಜೆ ಒಂದು ಲೋಟಾ ಕಾಫಿ ಅಥವಾ ಚಹಾಕ್ಕೆ ಹೊಂದಿಕೊಂಡವನು. ಇಲ್ಲಿ ಬಂದ ಹೊಸತರಲ್ಲಿ ಈ ಲಾರ್ಜ್ ಸೈಜುಗಳು ಖಂಡಿತ ನನ್ನಂತಹವರಿಗಲ್ಲ ಅಲ್ಲದೇ ಎಂದೂ ನನಗೆ ಇಷ್ಟು ದೊಡ್ಡ ಸರ್ವಿಂಗ್ ಸೈಜಿನ ಅಗತ್ಯವಿಲ್ಲ ಎಂಬುದು ಅಂದಿನ ನಿಲುವಾಗಿತ್ತು.

ಭಾರತದಲ್ಲಿ ನಾವು ಫಿಲ್ಟರ್ ಕಾಫಿ ಕುಡಿಯುತ್ತಿದ್ದೆವು, ಆದರೆ ಅಲ್ಲೆಲ್ಲೂ ಹತ್ತು-ಹನ್ನೆರಡು ಕಪ್ ಕಾಫಿ ಹಿಡಿಯುವಷ್ಟು ದೊಡ್ಡ ಪ್ರಮಾಣದ ಫಿಲ್ಟರ್ ನಾನು ನೋಡಿರಲಿಲ್ಲ. ಇಲ್ಲಿಗೆ ಬಂದ ಹೊಸತರಲ್ಲಿ ಒಮ್ಮೆ ನಾವು ಒಂದಿಷ್ಟು ಜನ ಬ್ಯಾಚುಲರ್ಸ್ ಸೇರಿಕೊಂಡು ಕಾಫಿ ಫಿಲ್ಟರ್ ಹೆಸರಿನಲ್ಲಿ ಒಂದಿಷ್ಟು ಕಾಫಿ ಫಿಲ್ಟರುಗಳನ್ನು ತಂದು, ಈ ಪೇಪರಿನ ಕೊಟ್ಟೆಯನ್ನು ಹೇಗೆ ಉಪಯೋಗಿಸಬೇಕು ಎಂಬುದು ತಿಳಿಯದೇ ಅದನ್ನು ಹಾಗೇ ಎಸೆದ ಹಾಗೆ ನೆನಪು.

ಅದಾದ ನಂತರದ ಕೆಲವು ವರ್ಷಗಳಲ್ಲಿ ಇಲ್ಲಿನ ಕಾಫಿ ಕುಡಿಯುವುದಕ್ಕೆ ಒಗ್ಗಿ ಹೋದ ನಾನು ಲಾರ್ಜ್ ಕಾಫಿಗಳನ್ನು ಗಣನೀಯ ಪ್ರಮಾಣದಲ್ಲಿ ಸೇವಿಸ ತೊಡಗಿದ ಮೇಲೆ ಮಿಸ್ಟರ್ ಕಾಫಿಯ ಬಳಕೆಗೆ ಹೊಂದಿಕೊಂಡಿದ್ದು. ಹಾಗೇ ದಿನದ ಆರಂಭದಲ್ಲಿ ನಮ್ಮೂರಿನ ನಾಲ್ಕು ಲೋಟಾಗಳು ಹಿಡಿಯುವಷ್ಟು ಕಾಫಿಯನ್ನು ಅರ್ಧ ಘಂಟೆಯ ಒಳಗೆ ಒಂದು ಕೈಯಿಂದ ಕಾರನ್ನು ಡ್ರೈವ್ ಮಾಡುತ್ತಲೇ ಮತ್ತೊಂದು ಕೈಯಿಂದ ಸೇವಿಸುವುದನ್ನು ಕರತಾಮಲಕ ಮಾಡಿಕೊಂಡಿದ್ದು. ಇಲ್ಲಿ ನಮ್ಮ ಮನೆಯಲ್ಲಿ ಇಂತಹ ದಿನನಿತ್ಯ ಉಪಯೋಗಿ ವಸ್ತುವಾಗಿ ಕಾಫಿಯ ಬಳಕೆಯಾದ ಮೇಲೆ ಅದರ ಸಂಗಾತಿ ಪೇಪರ್ ಫಿಲ್ಟರ್ರೂ ಇಲ್ಲವೆಂದರೆ ಹೇಗೆ? ಜೊತೆಗೆ ಒಂದೋ ಎರಡೋ ಕಾಫಿ ವೆರೈಟಿಗೆ ಹೊಂದಿಕೊಂಡ ದೇಹಕ್ಕೆ (ಹಾಗೂ ಮನಸ್ಸಿಗೆ) ಇಲ್ಲಿನ ಹತ್ತು ಹಲವಾರು ಪ್ಲೇವರುಗಳೂ ಅವುಗಳ ಜೊತೆಗೆ ಕಾಫಿ ಬೀಜದ ರೋಸ್ಟ್ (ಲೈಟ್, ಮೀಡಿಯಂ, ಡಾರ್ಕ್) ಸೇರಿಕೊಂಡು ಆಹ್ಲಾದಕರ ಕಾಫಿಯ ಅನುಭವಕ್ಕೆ ಇನ್ನೊಂದಿಷ್ಟು ರುಚಿಗಳನ್ನು ಸೇರಿಸಿಕೊಂಡಿದ್ದು.

ಇಲ್ಲಿ ನಾವು ಹೋಲ್ ಸೇಲ್ ಮಳಿಗೆಗಳಲ್ಲಿ ದಿನಸಿ ಸಾಮಾನುಗಳನ್ನು ಕೊಳ್ಳುವಲ್ಲಿ ಕೇವಲ ಎರಡೂವರೆ ಡಾಲರ್‌ಗೆ ಆರು ನೂರು (೬೦೦) ಫಿಲ್ಟರುಗಳನ್ನು ತಂದು ಬಳಸುವುದು ರೂಢಿ. ಆದರೆ ಒಮ್ಮೆ ಖರೀದಿಸಿದ ಈ ಫಿಲ್ಟರ್ ಖಾಲಿ ಆಗುವಾಗ ದಿನಕ್ಕೊಂದರಂತೆ ಬಳಸಿದರೂ ಮನಯಲ್ಲಿ ಕಾಫಿ ಕುದಿಸದ ವರ್ಷದ ಇತರ ದಿನಗಳನ್ನು ಲೆಕ್ಕ ಹಾಕಿದರೆ ಕೊನೇ ಪಕ್ಷ ಆರು ನೂರು ಫಿಲ್ಟರ್ ಪೇಪರುಗಳು ಎರಡು ವರ್ಷದ ಮಟ್ಟಿಗಾದರೂ ಬಂದಾವು. ಆದರೆ ನಾನು ಕಾಫಿ ಹೀರುವ ಪ್ರಮಾಣ ಗಣನೀಯವಾಗಿ ಹೆಚ್ಚಿದ್ದು ಇತ್ತೀಚೆಗೆ ಮಾತ್ರ ಹಾಗಾಗಿ ಐದು ವರ್ಷಗಳ ಹಿಂದೆ ತಂದ ಫಿಲ್ಟರ್ ಪೇಪರುಗಳು ಖಾಲಿಯಾಗಿ ಹೀಗೆ ಈ ಘಳಿಗೆಯಲ್ಲಿ ಅವುಗಳ ಬಗ್ಗೆ ಬರೆಯುವಂತಾಯಿತು.

ಕಾಫಿ ಫಿಲ್ಟರುಗಳಿಗೆ ಅನ್ವಯವಾಗುವ ಇತಿಹಾಸ ಹಾಗೂ ವಾಸ್ತವದ ಅನುಭವಗಳು ಕಿವಿಗೆ ಹಾಕುವ ಹತ್ತಿಯ ಕಡ್ಡಿಗೂ ಅನ್ವಯಿಸುತ್ತವೆ ಎಂದೇ ಹೇಳಬೇಕು. ಐದು ಡಾಲರುಗಳಿಗೆ ಸಾವಿರದ ಇನ್ನೂರು (೧೨೦೦) ಹತ್ತಿ ಕಡ್ಡಿಯನ್ನು ತಂದು ಅದೆಷ್ಟೋ ವರ್ಷಗಳ ಹಿಂದೆ ಮನೆಯಲ್ಲಿಟ್ಟು ಈಗ ಖಾಲಿ ಆಗಿ ಹೋಗಿದೆ. ಮತ್ತೆ ಫಿಲ್ಟರುಗಳ ಹಾಗೆ ಒಂದು ದೊಡ್ಡ ಪ್ರಮಾಣದ ಖರೀದಿಯನ್ನು ಸಣ್ಣ ಬೆಲೆಗೆ ಮಾಡಬೇಕಾಗಿ ಬಂದಿದೆ, ಅವಿನ್ನು ಖಾಲಿಯಾಗುವುದು ಇನ್ನೆಷ್ಟು ವರ್ಷಗಳ ನಂತರವೋ. ನಾವೇನು ಭಾರತದಲ್ಲಿ ಪ್ರತಿನಿತ್ಯ ಸ್ನಾನ ಮಾಡಿದ ನಂತರ ಕಿವಿಯೊಳಗೆ ಹತ್ತಿಯನ್ನು ತೂರಿಸಿ ಕ್ಲೀನ್ ಮಾಡಿಕೊಳ್ಳುತ್ತಿರಲಿಲ್ಲ, ಹಾಗೇ ಇಲ್ಲೂ ಕೂಡ. ಕಿವಿಗೆ ಹಾಕುವ ಹತ್ತಿ ಕಡ್ಡಿಯ ಉಪಯೋಗ ಅಪರೂಪಕ್ಕೊಮ್ಮೆ, ಅದೂ ಕೆಲವೊಮ್ಮೆ ಸೈನ್‌ಫೆಲ್ಡ್‌ನ ಕ್ರೇಮರ್ ಕಿವಿಯೊಳಗೆ ನೀರು ತುಂಬಿಸಿಕೊಂಡು ಕುಣಿದಾಡುವ ಪ್ರಸಂಗ ಬಂದ ಹಾಗೆ ನಮಗೂ ಈ ಹತ್ತಿ ಕಡ್ಡಿಯ ಬಳಕೆಗೂ ನಂಟು.

ಈ ಅನಿವಾಸಿತನಕ್ಕೂ ಈ ಕಾಫಿ ಫಿಲ್ಟರ್-ಹತ್ತಿ ಕಡ್ಡಿಯ ಅವಿನಾಭಾವ ಸಂಬಂಧದ ಬಗ್ಗೆ ಬರೆಯೋದಕ್ಕೂ ಒಂದು ಕಾರಣವಿದೆ. ಸಂಪನ್ಮೂಲಗಳು ಕಡಿಮೆ ಇದ್ದು ಅವು ಹೆಚ್ಚು-ಹೆಚ್ಚು ಮಟ್ಟದಲ್ಲಿ ಸಿಗದ ಅಥವಾ ಅಭಾವದ ಪರಿಸ್ಥಿತಿ ಒಂದು ಕಡೆ, ಆದರೆ ಇಲ್ಲಿ ಹಣವೊಂದಿದ್ದರೆ ಸಾಕು ಬೇಕಾದಷ್ಟು ಸಿಗುವುದು ಮತ್ತೊಂದು ಕಡೆ. ಚಿಕ್ಕ ಸೈಜಿನ ಕಾಫಿ ಲೋಟಾಗಳಿಂದ ಹಿಡಿದು ಕಿವಿಗೆ ಹಾಕುವ ಹತ್ತಿಯ ಬಳಕೆಯ ಪ್ರಮಾಣ ಕಡಿಮೆಯಿತ್ತು, ಆದರೆ ಇಲ್ಲಿ ಎಲ್ಲವೂ ಲಾರ್ಜ್ ಸೈಜು. ಒಂದೋ ಎರಡೋ ಎಕರೆ ಗದ್ದೆ-ಭೂಮಿ ಪ್ರಮಾಣ ನನ್ನಂಥವರ ಮಧ್ಯಮ ವರ್ಗದವರಿಗೆ ದೊಡ್ಡವಾಗಿದ್ದವು, ಆದರೆ ಇಲ್ಲಿ ನನ್ನ ಸಹೋದ್ಯೋಗಿಗಳಲ್ಲಿ ಕೆಲವರು ಎರಡು-ಮೂರು ಸಾವಿರ ಎಕರೆಗಳ ಒಡೆಯರು. ನನ್ನ ಪಕ್ಕದಲ್ಲಿ ಕುಳಿತುಕೊಳ್ಳುವ ನನ್ನ ಸಹೋದ್ಯೋಗಿ ಇತ್ತೀಚೆಗೆ ಇಪ್ಪತ್ತು ಎಕರೆಗಳನ್ನು ತನ್ನ ಸ್ವಂತ ಊರಿನಲ್ಲಿ ಖರೀದಿಸಿದ್ದು ದೊಡ್ಡ ಸುದ್ದಿಯಲ್ಲ. ನಮ್ಮ ಕಾರುಗಳ ಇಂಜಿನ್ ದೊಡ್ಡವು. ನಿನ್ನೆ ಗಾರ್‌ಫೀಲ್ಡ್ ಪರಿಚಿಯಿಸಿದ ಸಾಧಾರಣ ಗಾತ್ರದ ಅವನ ಮೋಟಾರ್‍ ಸೈಕಲ್ ಇಂಜಿನ್ ೧೫೦೦ ಸಿ.ಸಿ. (1500 cc), ಭಾರತದಲ್ಲಿ ಎಷ್ಟೋ ಕಾರುಗಳ ಇಂಜಿನ್ ಇದಕ್ಕಿಂತ ಚಿಕ್ಕವು. ದೊಡ್ಡ ರಸ್ತೆಗಳು. ದೊಡ್ಡ ದೇಶ - ಎಲ್ಲವೂ ದೊಡ್ಡದೇ.

ಆದರೆ ಈ ಮಹಾನ್ ಗಾತ್ರ ಹಾಗೂ ಮಹಾನ್ ಸಂಸ್ಕೃತಿಗೆ ನಮ್ಮ ಚಿಕ್ಕ ಅಥವಾ ಮೀಡಿಯಮ್ ಸೈಜಿನ ಮನಸ್ಸುಗಳಾಗಲೀ, ಆಚಾರ-ವಿಚಾರಗಳಾಗಲಿ ದಿಢೀರನೆ ಹೇಗೆ ಹೊಂದಿಕೊಂಡಾವು. ಇವತ್ತೋ ನಿನ್ನೆಯೋ ಭಾರತದಿಂದ ಬಂದವರಿಗೆ ಒಂದು ಲಾರ್ಜ್ ಸ್ಟಾರ್‌ಬಕ್ಸ್ ಕಾಫಿ ಕೊಟ್ಟು ನೋಡಿ, ಅದನ್ನು ಅವರು ಪೂರ್ತಿ ಮುಗಿಸುತ್ತಾರೆಯೇ ಎಂದು. ಈ ಚಿಕ್ಕ-ದೊಡ್ಡ ವಿಚಾರಗಳು ಮೊದಲಿನಿಂದ ಕೊನೆಯವರೆಗೆ ನಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತಲೇ ಇರುತ್ತವೆ ಎನ್ನೋದು ಈ ಹೊತ್ತಿನ ನನ್ನ ತತ್ವ.

ಇಂದು ಖರೀದಿಸಿ ಆದಷ್ಟು ಬೇಗನೇ ಬಳಸಿ ಮತ್ತೆ ಹೊಸತನ್ನು ಖರೀದಿಸುವುದು ಒಂದು ವಿಧ, ನಮ್ಮಲ್ಲಿ ಉಗ್ರಾಣಗಳಿವೆ ಎಂದು ಬೇಕಾದ್ದನ್ನೆಲ್ಲ ಹೋಲ್‌ಸೇಲ್ ದರದಲ್ಲಿ ಕೊಂಡು ಹಲವು ವರ್ಷಗಳ ವರೆಗೆ ಅನುಭವಿಸುವುದು ಮತ್ತೊಂದು ವಿಧ. ಪ್ರೆಸೆಂಟ್ ವ್ಯಾಲ್ಯೂ ಫ್ಯೂಚರ್ ವ್ಯಾಲ್ಯೂನಿಂದಾನಾದರೂ ಲೆಕ್ಕ ಹಾಕಿ, ಬೇಕಾಗಿದ್ದು ಸಾಕಾದಷ್ಟು ಇರಲಿ ಎಂದಾದರೂ ಸಮಜಾಯಿಸಿ ಕೊಟ್ಟುಕೊಳ್ಳಿ.

ಅವೇ ಲಾರ್ಜ್ ಕಾಫಿಗಳನ್ನು ಬಿಕರಿ ಮಾಡುವ ಪೇಪರ್ ಫಿಲ್ಟರುಗಳು, ಸಾವಿರಗಟ್ಟಲೆ ಸಿಗುವ ಕಿವಿಗೆ ಹಾಕುವ ಹತ್ತಿ ಕಡ್ಡಿಗಳು ಅಗಾಧ ಪ್ರಮಾಣದಲ್ಲಿ ಸಿಗುವ ಇವುಗಳನ್ನು ನಿಯಂತ್ರಣಕ್ಕೆ ತಂದುಕೊಂಡು ದಿನ-ವಾರ-ವರ್ಷಗಳನ್ನು ದೂಡುವ ಅನಿವಾಸಿ ಬದುಕು. ಇವುಗಳ ಮುಂದೆ ಹರಿದು ಹೋಗುವವರೆಗೆ ಉಪಯೋಗಕ್ಕೆ ಬರುವ ನಮ್ಮ ಅಲ್ಯುಮಿನಮ್ ಅಥವಾ ಪ್ಲಾಸ್ಟಿಕ್ ಜಾಲರಿ ಇರುವ ಫಿಲ್ಟರುಗಳು ಹಳೆಯವಾಗುತ್ತವೆ, ಅಮೇರಿಕದ ಮಿಸ್ಟರ್ ಕಾಫಿ ಇಳಿಸಲು ಭಾರತದ ಫಿಲ್ಟರ್ ಕೆಲಸ ಮಾಡದಾಗುತ್ತದೆ. ಇಲ್ಲಿನ ಹೆಚ್ಚು ಧೂಳಿಲ್ಲದ ಏರ್ ಕಂಡೀಷನ್ನ್ ವಾತಾವರಣದಲ್ಲಿ ಬೆಳೆಯುತ್ತಿದ್ದರೂ ಕಿವಿಯಲ್ಲಿ ಸೇರಿದ ಕೊಳೆ ತೆಗೆಯಲು ಸಾವಿರ ಸಂಖ್ಯೆಯಲ್ಲಿ ಸಿಗುವ ಕಡ್ಡಿ ಸರದಾರರು ನೆರವಿಗೆ ಬರುತ್ತಾರೆ, ಹಿಂದೆ ಹಗಲೂ-ರಾತ್ರಿ ಧೂಳಿನಲ್ಲೇ ಜೀವನ ಸಾಗಿಸಿ ಬಂದು ಯಾವತ್ತೋ ಕಿವಿಯ ಕೊಳೆಯನ್ನು ತೆಗೆದಿದ್ದು ಗೌಣವಾಗುತ್ತದೆ.

Sunday, August 30, 2009

ನಾವೂ ನಮ್ಮ ವೆಕೇಷನ್ನೂ...

ನಮ್ಮ ಆಫೀಸಿನಲ್ಲಿ ಸಮ್ಮರ್ ಬಂತೆಂದರೆ ವೆಕೇಷನ್ನುಗಳ ಅಧಿಕೃತ ಆರಂಭವೆಂದೇ ಅರ್ಥ. ಮಾರ್ಚ್‌ಗೆ ಆರಂಭವಾಗುವ ಸ್ಪ್ರಿಂಗ್ ತನ್ನ ಆಗಮನದ ಜೊತೆಗೆ ಒಂದಿಷ್ಟು ಚಿಗುರುಗಳಲ್ಲಿ ಹುರುಪನ್ನು ಮೂಡಿಸುತ್ತದೆಯೇ ವಿನಾ ವಾತಾವರಣದ ಉಷ್ಣತೆ ಎಪ್ಪತ್ತು ಡಿಗ್ರಿ (ಫ್ಯಾರನ್‌ಹೈಟ್) ಮೇಲೆ ಏರಿ ಸುಯ್ ಎಂದು ತೀಡುವ ಮೃದುವಾದ ಗಾಳಿಯಿಂದ ರೋಮಾಂಚನವಾಗುವುದರಿಂದ ಹಿಡಿದು ಸಾಕಪ್ಪಾ ಸಾಕು ಈ ಬಿಸಿಲು ಎನ್ನುವಷ್ಟರಲ್ಲಿ ಸಮ್ಮರ್ ಹೋಗೇ ಬಿಟ್ಟಿರುತ್ತದೆ. ಜೂನ್‌ನಿಂದ ಸೆಪ್ಟೆಂಬರ್ ವರೆಗೆ ಶಾಲೆಗಳಿಗೆ ರಜೆ, ಪೋಷಕರು ತಮ್ಮ ಮಕ್ಕಳನ್ನು ವರ್ಷಾವಧಿ ವೆಕೇಷನ್ನುಗಳಿಗೆ ಕೊಂಡೊಯ್ಯುವುದು ಕುಟುಂಬ ರೂಢಿ.

ನಾನು ನ್ಯೂ ಜೆರ್ಸಿಯಲ್ಲಿ ನೋಡಿರೋ ಹಾಗೆ ಅನಫಿಷಿಯಲ್ ಸಮ್ಮರ್ ಎಂದರೆ ಮೇ ತಿಂಗಳ ಕೊನೆಯಲ್ಲಿ ಬರುವ ಮೆಮೋರಿಯಲ್ ಡೇ ವೀಕ್ ಎಂಡ್ ನಿಂದ ಆರಂಭವಾಗಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಬರುವ ಲೇಬರ್ ಡೇ ವರೆಗೆ. ಜೂನ್-ಜುಲೈ-ಆಗಷ್ಟ್ ಇವೇ ಮೂರು ತಿಂಗಳು, ಅದೇನು ಕಡಿದು ಹಾಕುತ್ತೀರೋ ಬಿಡುತ್ತೀರೋ, ಇವೇ ವರ್ಷದ ಉಳಿದ ಒಂಭತ್ತು ತಿಂಗಳನ್ನು ಸಹಿಸಿಕೊಳ್ಳುವಂತೆ, ಪ್ರತಿ ಸಮ್ಮರ್‌ನಲ್ಲಿ ಹೊಸದೇನನ್ನೋ ಸೃಷ್ಟಿಸುವಂತೆ ನಮ್ಮನ್ನೆಲ್ಲ ಕಟ್ಟಿ ಹಾಕಿರೋದು.

ಸಾಗರದ ಎಲ್.ಬಿ. ಕಾಲೇಜಿನಲ್ಲಿ ಓದಿಕೊಂಡಿರುವಾಗ ಇದ್ದಿಲು ಒಲೆಗೆ ಬೆಂಕಿ ತಗಲಿಸಿ ಹೊಟ್ಟೆ ತುಂಬಿಕೊಂಡ ಕರ್ಮ ಇನ್ನೂ ಮುಗಿದಿಲ್ಲವೇನೋ ಅನ್ನೋ ಹಾಗೆ ನಮ್ಮನೆ ಡೆಕ್ ನಲ್ಲಿ ಇರುವ ಕಲ್ಲಿದ್ದಲು ಗ್ರಿಲ್‌ ಏಪ್ರಿಲ್ ಅಂಚಿನಲ್ಲಿ ಬೇಸ್‌ಮೆಂಟ್ ನಿಂದ ಡೆಕ್‌ ಮೇಲೆ ಬಂದು ಇದ್ದಿಲಿಗೂ ನನಗೂ ಇರುವ ಋಣವನ್ನು ನೆನಪಿಸಿಕೊಡುತ್ತದೆ. ’ವೆಜಿಟೇರಿಯುನ್ನ್ ಜನ ನೀವೇನು ಗ್ರಿಲ್ ಮಾಡ್ತೀರಿ?’ ಎನ್ನೋರು ವಿಸ್ಮಿತರಾಗುವ ಹಾಗೆ ನನ್ನ ವೆಜಿಟೇರಿಯನ್ನ್ ಗ್ರಿಲ್ಲಿಂಗ್ ಪುರಾಣವನ್ನೆಲ್ಲ ಹೊರಗೆ ತೆಗೆದಿಡುತ್ತೇನೆ. ಈ ಕಲ್ಲಿದ್ದಲು ಶಾಖ ಎಷ್ಟು ಜೋರು ಅಂದ್ರೆ ಸರಿಯಾಗಿ ಮ್ಯಾನೇಜ್ ಮಾಡಿದ್ರೆ ಒಂದು ದಿನದ ಊಟ-ವ್ಯವಸ್ಥೆಯನ್ನು ಈ ಗ್ರಿಲ್ ಒಲೆಯಲ್ಲೇ ಮಾಡಿಬಿಡಬಹುದು. ಅಮೇರಿಕನ್ ಊಟದ ಪದ್ಧತಿಯ ಹಾಗೆ ನಾವು ಒಂದಿಷ್ಟು ವೆಜಿಟೇರಿಯನ್ ಪ್ಯಾಟ್ಟಿಗಳು, ಉಪ್ಪು-ಹುಳಿ-ಖಾರ ಸವರಿದ ಗೊಂಜೋಳ, ಸ್ಕಿವರ್‌ಗೆ ಪೋಣಿಸಿದ ಥರಥರ ತರಕಾರಿಗಳು, ಚಿಪ್ಸ್ ಮುಳುಗಿಸಿ ತಿನ್ನಲಿಕ್ಕೆ ಮಾವಿನ ಹಣ್ಣಿನ ಚಟ್ನಿ (ಸಾಲ್ಸಾ), ಸವತೆಕಾಯಿ ತುಂಡುಗಳು, ಮಾವಿನ ಹಣ್ಣು, ಮನೆಯಲ್ಲೇ ಮಾಡಿದ ಲಿಂಬೆ ಪಾನಕ (ಲೆಮನೇಡ್), ಹಲವು ಥರದ ಬ್ರೆಡ್ಡು, ಕೆಚಪ್, ಸುಟ್ಟ ಈರುಳ್ಳಿ, ರೆಡ್ ವೈನ್ ಮೊದಲಾದವುಗಳನ್ನು ನಮ್ಮ ಬ್ಯಾಕ್ ಯಾರ್ಡ್‌ನಲ್ಲಿ ಹರಡಿಕೊಂಡು ವರ್ಷದ ಒಂದಿಷ್ಟು ದಿನಗಳು ಮನೆಯಲ್ಲೇ "ಪಿಕ್‌ನಿಕ್" ಮಾಡೋದು ರೂಢಿ. ಇವುಗಳ ಜೊತೆಗೆ ಮೆಣಸಿನ ಕಾಯಿ ಬೋಂಡಾ, ಆಲೂಗಡ್ಡೆ ಬಜ್ಜಿ ಹಾಗೂ ಪನ್ಕೋಡಾ ಸೇರಿಕೊಂಡು ನಮ್ಮ ಸಮ್ಮರ್ ಪಾರ್ಟಿಗಳನ್ನು ಯಶಸ್ವಿಯಾಗಿ ಮಾಡಿಬಿಡುತ್ತವೆ. ಸ್ವಿಚ್ ಒತ್ತಿ ಗ್ಯಾಸ್ ಗ್ರಿಲ್ ಮೇಲೆ ಒಂದೇ ಕ್ಷಣದಲ್ಲಿ ಬರ್ಗರ್‌ಗಳನ್ನು ಮಾಡುವುದಕ್ಕಿಂತ ಕಲ್ಲಿದ್ದಲ ಗ್ರಿಲ್ ಹೊತ್ತಿಸಿ ಅದಕ್ಕೆ ಗಾಳಿ ಬೀಸಿ ನಿಧಾನವಾಗಿ ಹೊತ್ತಿ ಉರಿಯುವ ಬೆಂಕಿಯಲ್ಲಿ ದಿನದ ಒಂದೆರಡು ಘಂಟೆ ಹೊರಗಿರುವುದು ಸುಖ ತರುತ್ತದೆ. ನಮ್ಮ ಅತಿಥಿಗಳ ಜೊತೆಗೆ ಹೆಚ್ಚು ಸಮಯವನ್ನು ಕಳೆಯುವ ಅವಕಾಶ ಹುಟ್ಟುತ್ತದೆ.

ಆದರೆ ಇವು ಯಾವುದೂ ನಮ್ಮ ವೇಕೇಷನ್ನ್ ಅಲ್ಲವೇ ಅಲ್ಲ. ಬಾರ್ ಬೇ ಕ್ಯೂ ಏನಿದ್ದರೂ ವಾರಾಂತ್ಯದಲ್ಲಿ ನಾವು ಮನೆಯಿಂದ ಹೊರಗಿರುವ ಪ್ರಯತ್ನವಷ್ಟೇ. ಇನ್ನು ಎಲ್ಲರಂತೆ ಪಡೆದುಕೊಳ್ಳುವ ನಮ್ಮ ವೆಕೇಶನ್ನ್ ದಿನಗಳು ಎಲ್ಲಿಗೆ ಹೋಗುತ್ತವೆ, ಹೋಗಿಬಿಟ್ಟವು. ವರ್ಷಕ್ಕೆ ಒಂದೋ ಎರಡೋ ಬಾರಿ ಸಮುದ್ರ ಇನ್ನೂ ಇದೆಯೋ ಇಲ್ಲವೋ ಎಂದು ನೋಡಿಕೊಂಡು ಬರುವ ಹಾಗೆ ಬೀಚ್‌ಗೆ ಹೋಗುವುದು ವೇಕೇಷನ್ನ್ ಅಲ್ಲ. ಮುಂದಿನ ವರ್ಷ ನೋಡೋಣ ಎನ್ನುತ್ತಲೇ ಮುಂದೆ ತಳ್ಳುತ್ತ ಬಂದ ಡಿಸ್ನಿ ವರ್ಲ್ಡ್ ಮತ್ತು ಇತರ ಸ್ಥಳೀಯ ಆಕರ್ಷಣೆಗಳು ಇನ್ನೂ ಪುಸ್ತಕದ ಗಂಟಾಗೇ ಉಳಿದಿವೆ. ನಮ್ಮ ಮನೆಯಿಂದ ಕೇವಲ ಐವತ್ತೇ ಮೈಲು ದೂರದ ನ್ಯೂ ಯಾರ್ಕ್ ನಗರವನ್ನು ನೋಡೋದು ಯಾವಾಗಲೋ ಒಂದು ಬಾರಿ, ’ಯಾರು ಹೋಗುತ್ತಾರೆ ಅಲ್ಲಿಗೆ, ಹಳ್ಳ-ಕೊಳ್ಳವನ್ನು ದಾಟಿ’ ಎನ್ನುವ ಉದಾಸೀನ ಗೆದ್ದು ಬಿಡುತ್ತದೆ. ಅಮೇರಿಕದ ನಮ್ಮ ಬದುಕಿನಲ್ಲಿ ಆಫೀಸಿನ ಕೆಲಸ, ಕಾರ್ಯ ಹಾಗೂ ಅದರ ಸಂಬಂಧಿ ಯೋಚನೆಗಳನ್ನು ತೆಗೆದು ಹಾಕಿ ಬಿಟ್ಟರೆ ನಮ್ಮದು ಎಂದು ಉಳಿಯುವ ಭಾಗ ಬಹಳ ಕಡಿಮೆಯೇ ಎನ್ನಿಸಿ ಒಮ್ಮೆ ಭಯವಾಗುತ್ತದೆ.

ಹಿಂದೆ ಮದ್ರಾಸಿನಲ್ಲಿ ಕೆಲಸ ಮಾಡುವಾಗ ವಾರಕ್ಕೆರಡು ಮತ್ತು ತಿಂಗಳಿಗೆರಡು ಸಿಗುವ ರಜೆಗಳನ್ನು ಒಟ್ಟು ಪೋಣಿಸಿಕೊಂಡು ವಾರಗಟ್ಟಲೆ ಕರ್ನಾಟಕದಲ್ಲಿ ತಿರುಗಾಡಿದರೂ ಇನ್ನೂ ಮುಗಿಯದ ಕೆಲಸಗಳು ಹವ್ಯಾಸಗಳು ಅದೆಷ್ಟೋ ಇದ್ದವು. ಇನ್ನೂ ತಂತ್ರಜ್ಞಾನ ಇಷ್ಟು ಮುಂದುವರಿಯದೆ ನಮ್ಮ ನಮ್ಮ ನಡುವೆ ಅಗಾಧ ದೂರಗಳಿದ್ದರೂ ಭೇಟಿಯಾಗಿ, ಮಾತನಾಡಿ, ಮುಟ್ಟಿ, ಹರಟಿ, ಹಾಡಿ, ಜಗಳವಾಡಿ ಮತ್ತೆ ಒಂದು ಗೂಡಿ, ಕುಣಿದು ಕುಪ್ಪಳಿಸುವ ಅನೇಕ ಚಟುವಟಿಕೆಗಳ ತುಡಿತವಿತ್ತು. ಬೇಕಾದಷ್ಟು ನೆಪಗಳಿದ್ದವು, ನೆನಪುಗಳಿದ್ದವು. ಸಾಕಷ್ಟು ಸಂಖ್ಯೆಯ ಗುರುತು-ಪರಿಚಯದವರಿದ್ದರು, ಸಂಬಂಧಿಗಳಿದ್ದರು. ತಿರುಗಲು ದೇವಸ್ಥಾನಗಳಿದ್ದವು, ಮರುಗುವ ಮನಸ್ಸಿತ್ತು. ಎಷ್ಟಿದ್ದರೂ ಸಾಲದು ಇನ್ನೂ ಬೇಕು ಎನ್ನುವ ತುಡಿತವಿತ್ತು. ಸಾಹಿತ್ಯವಿತ್ತು, ಸಂಗೀತವಿತ್ತು, ಸಿನಿಮಾಗಳಿದ್ದವು, ಪುಸ್ತಕಗಳಿದ್ದವು, ನಿಯತಕಾಲಿಕಗಳಿದ್ದವು. ಒಂದೂರಿನಿಂದ ಮತ್ತೊಂದು ಊರಿಗೆ ಹೋಗುವ ಮಾರ್ಗದಲ್ಲಿ ಓದಿ ಮುಗಿಸಿದ ಅದೆಷ್ಟೋ ಲಂಕೇಶ್, ಸುಧಾ, ತರಂಗ, ಮಯೂರ, ಉತ್ಥಾನ, ಮಲ್ಲಿಗೆ, ಪ್ರಜಾಮತದ ವಾಹಿನಿಗಳಿದ್ದವು. ಊರಿಗೊಂದಿರುವ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಬೇಂದ್ರೆ, ಭೈರಪ್ಪ, ತರಾಸು, ಕಾರಂತ, ಮಾಸ್ತಿ, ಕುವೆಂಪು ಮೊದಲಾದ ಸ್ನೇಹಿತರ ಅನುಭವಗಳು ಅನಂತವಾಗಿ ಹಾಗೂ ಪುಕ್ಕಟೆಯಾಗಿ ಸಿಗುತ್ತಿದ್ದವು. ಇಂತಹ ಅಪರಿಮಿತ ಅನುಭವಗಳನ್ನು ಪಠಿಸಿ-ಪ್ರವಚಿಸಿದ ಘಟಾನುಗಟಿಗಳ ಸಾರ ಸುಲಭವಾಗಿ ಸಿಗುತ್ತಿತ್ತು. ಹಲವಾರು ತತ್ವಗಳು ಸಿಗುತ್ತಿದ್ದವು - ಒಂದು ರೀತಿ ಬಯಲಿನಲ್ಲಿ ಮೇಯುವ ದನಕ್ಕೆ ಸಿಗುವ ಅವಕಾಶದ ಹಾಗೆ, ಅಂತಹ ಅಗಾಧವಾದ ಅನೇಕಾನೇಕ ಬಯಲುಗಳು ಮೇಯಲಿದ್ದವು.

ಇವೆಲ್ಲದರ ಬಗ್ಗೆ ಈಗ ಬರೀತಾ ಹೋದರೆ ಅದು ಸವಿ ನೆನಪಾಗುತ್ತದೆ, ಅದರ ಮರುಘಳಿಗೆ ಅದು ನಾಸ್ಟಾಲ್ಜಿಯಾವಾಗಿ ಕಾಣುತ್ತದೆ. ಆದರೆ ಈವರೆಗೆ ಒಂದು ವಿಷಯವಂತೂ ಸತ್ಯ - ನಾವು, ನಮ್ಮ ವೇಕೇಷನ್ನುಗಳು, ನಮ್ಮ ದುಡಿಮೆ-ಇಡುಗಂಟು ಇವೆಲ್ಲದರ ಸಾಕ್ಷಾತ್ಕಾರ ಈ ಮೇಲಿನ ನಾಸ್ಟಾಲ್ಜಿಯಾದೊಂದಿಗೆ ಮಾತ್ರವೇ. ಅದನ್ನು ಹೊರತು ಪಡಿಸಿ, ಅಮೇರಿಕದಲ್ಲಿ ನಮ್ಮ ವೇಕೇಷನ್ನುಗಳಿಗೆ ಪೂರ್ಣ ಅರ್ಥ ಬಂದಿದ್ದಿಲ್ಲ, ನಮ್ಮ ಅರ್ಥ ಪರಿಸ್ಥಿತಿ ಪರಿಪೂರ್ಣವಾದದ್ದಿಲ್ಲ. ನಿಜವಾಗಿಯೂ ನಮ್ಮತನವನ್ನು ಕಲಕಿ ನೋಡುವ ವೆಕೇಷನ್ನುಗಳು ಕೆಲವು ಪುಣ್ಯಾತ್ಮರಿಗೆ ವರ್ಷಕ್ಕೊಮ್ಮೆ ಬರುತ್ತವೆ, ಇನ್ನು ಕೆಲವು ನಮ್ಮಂಥವರಿಗೆ ಮೂರು-ನಾಲ್ಕು ವರ್ಷಕ್ಕೊಮ್ಮೆ ಕೂಡಿ ಬರುತ್ತದೆ. ಬರೀ ವಿದೇಶ ಪ್ರಯಾಣದ ಯೋಗವೊಂದಿದ್ದರೆ ಸಾಲದು, ಮತ್ತೆ ಮರಳಿ ಸ್ವದೇಶವನ್ನು ಆಗಾಗ್ಗೆ ನೋಡುವ ಯೋಗವೂ ಇರಬೇಕು ಎನ್ನುವ ಆಲೋಚನೆ ಬಂದಿದ್ದು ಇತ್ತೀಚೆಗೆ ಮಾತ್ರ.

ಹಿಂದೆ ಎರಡು ಭುಜಗಳಿದ್ದ ಮನಕ್ಕೆ ಇಂದು ಎಂಟು ರೆಕ್ಕೆಗಳಿವೆ, ಎಲ್ಲಿಗಾದರೂ ಹೋಗಬೇಕು ಬರಬೇಕು ಎಂದರೆ ಅದರ ಮುಂದಿನ ತಯಾರಿ ಮತ್ತು ಅದರ ನಂತರದ ಚಿಂತೆಗಳು ಅನಿವಾರ್ಯವಾಗುತ್ತವೆ. ಹಣ ಹೆದರಿಕೆ ಎರಡೂ ಒಂದೇ ನಾಣ್ಯದ ಮುಖಗಳ ಹಾಗೆ ಒಂದನ್ನೊಂದು ಅನುಸರಿಸಿಕೊಂಡು ಬಂದಿವೆ - ಹಿಂದೆ ಹೆಗ್ಗೋಡಿನಿಂದ ಸಾಗರಕ್ಕೆ ನಿನಾಸಂ ನಾಟಕ ಮುಗಿಸಿ ನಡೆದುಕೊಂಡು ಬಂದಾಗ ಕತ್ತಲಿನ ದಾರಿಯಲ್ಲಿ ಹಾವಿದ್ದರೆ ಎನ್ನುವ ಹೆದರಿಕೆ ಇರಲಿಲ್ಲ, ಇಂದು ಕಾರಿನಲ್ಲಿ ಬೆಚ್ಚಗೆ ಕುಳಿತು ರಾತ್ರಿ ಡ್ರೈವ್ ಮಾಡುತ್ತಿದ್ದರೆ ರಸ್ತೆಯ ನಡುವೆ ಜಿಂಕೆಗಳು ಬಂದರೆ ಎಂದು ಕಂಪನ ಶುರುವಾಗುತ್ತದೆ.

ವರ್ಷವಿಡೀ ದುಡಿದು ಇರುವ ಮೂರು ನಾಲ್ಕು ವಾರಗಳನ್ನು ಒಟ್ಟುಗೂಡಿಸಿ ಕೆಲವು ವರ್ಷಗಳಿಗೊಮ್ಮೆ ಮಾಡುವ ಸ್ವದೇಶ ಪ್ರಯಾಣ ತರುವ ಸುಖಕ್ಕಿಂತ ಹೆಚ್ಚು ಕೆಲಸವಾಗುತ್ತದೆ, ವೆಕೇಷನ್ನಿನ್ನಲ್ಲಿ ಎಲ್ಲರೂ ಎಣಿಸಿ ಖರ್ಚು ಮಾಡುವುದಕ್ಕಿಂತ ಹೆಚ್ಚೇ ಕಾಸು ಕಳಚಿ ಹೋಗುತ್ತದೆ. ನಮ್ಮನ್ನು ಭೇಟಿಯಾಗುವವರ ಅನೇಕಾನೇಕ ಮುಖಗಳು ಅವುಗಳ ಹಿಂದಿನ ಕಥನವನ್ನು ಮನಸ್ಸಿನಲ್ಲಿ ತೆರೆದುಕೊಳ್ಳುತ್ತವೆ. ನಮ್ಮ ನೆನಪಿನಲ್ಲಿರುವ ಹಾಗಿನ ಎಷ್ಟೋ ವ್ಯಕ್ತಿಗಳು ಇನ್ನೂ ಹರೆಯದವರಾಗಿರದೆ ಮುದುಕುರಾಗಿರುವುದನ್ನು ಅಪ್‌ಡೇಟ್ ಮಾಡಿಕೊಳ್ಳಲು ವಿದುಳು ಹೆಣಗುತ್ತದೆ. ಇತ್ತೀಚೆಗೆ ಕೇಳಿರದ ಅನೇಕ ಪದ-ವಾಕ್ಯಗಳ ಬಳಕೆ ಬೆಚ್ಚಿ ಬೀಳಿಸುತ್ತದೆ. ಅಲ್ಲಲ್ಲಿ ಕೇಳಿಬರುವ ಸಿನಿಮಾ ಹಾಡುಗಳು ಹೊಸದಾಗೇ ಉಳಿಯುತ್ತವೆ. ಹುಟ್ಟಿದ ಹೊಸಬರು, ಸತ್ತ ಹಳೆಯವರನ್ನು ಕುಟುಂಬಗಳ ಹಿನ್ನೆಲೆಯಲ್ಲಿ ತಾಳೆ ಹಾಕಿಕೊಳ್ಳುವುದು ಮುಗಿಯದ ಲೆಕ್ಕವಾಗುತ್ತದೆ.

’ನಾಲ್ಕು ವಾರ ವೆಕೆಷೆನ್ನಾ...’ ಎಂದು ಕೇಳಿ ಬರುವ ಉದ್ಗಾರಗಳಿಗೆ ಉತ್ತರವಾಗಿ ’ನಮ್ಮ ವೆಕೇಷನ್ನುಗಳ ಹಣೆಬರಹ ಇವರಿಗೇನು ಗೊತ್ತು!’ ಎನ್ನುವ ಹೇಳಿಕೆ ಮನದಲ್ಲೇ ಉಳಿದುಬಿಡುತದೆ. ವೆಕೇಷನ್ನಿಗೆ ಹೋಗುವುದಕ್ಕಿಂತ ಮೊದಲು ಹಾಗೂ ವೆಕೇಷನ್ನಿಂದ ಬಂದ ನಂತರ ಕೆಲಸಗಳು ಮಾತ್ರ ಅತಿಯಾಗಿ ಹೋಗುತ್ತವೆ. ಪ್ರತಿವರ್ಷ ಹೀಗೆ ಹೋಗಬೇಕು ಎನ್ನುವ ಆಸೆ, ಆಸೆಯಾಗಿಯೇ ಉಳಿದು ಕಣ್ಣು ಮುಚ್ಚಿ ತೆರೆಯುವುದರೊಳಗೆ ಮೂರು-ನಾಲ್ಕು ವರ್ಷಗಳಿಗೊಮ್ಮೆಯಾಗಿ ಬಿಡುತ್ತದೆ.

Sunday, August 16, 2009

ಕೇವಲ 62 ವರ್ಷದ ಸ್ವಾತ್ಯಂತ್ರ್ಯ

ನಿನ್ನೆ ಸ್ವಾತಂತ್ರ್ಯೋತ್ಸವಗಳನ್ನು ಟಿವಿಯಲ್ಲಿ ನೋಡ್ತಾ ಇದ್ದಾಗ, ವರದಿಗಳನ್ನು ಓದ್ತಾ ಇದ್ದಾಗ ನಮ್ಮದು ಕೇವಲ 62 ವರ್ಷದ ಸ್ವಾತ್ಯಂತ್ರ್ಯ ಅಷ್ಟೇ ಅಂತ ಅನ್ಸಿದ್ದು ವಿಶೇಷ. ಈ ಹಿಂದೆ ನನಗೆ ನೆನಪಿರೋ ಹಾಗೆ ನಮ್ಮ ಹೈ ಸ್ಕೂಲು ದಿನಗಳಿಂದ ಹಿಡಿದು ನಲವತ್ತು, ಐವತ್ತು, ಅರವತ್ತು ವರ್ಷಗಳ ಆಚರಣೆಗಳನ್ನು ಮಾಡಿ-ನೋಡಿದ್ದರೂ ಈಗ ಅನ್ನಿಸ್ತಿರೋ ಹಾಗೆ ನಮ್ಮ ದೇಶ ಬ್ರಿಟೀಷರಿಂದ ಸ್ವಾತ್ರಂತ್ರ್ಯ ಪಡೆದದ್ದು ರಿಲೇಟಿ‌ವ್ ಆಗಿ ಇತ್ತೀಚೆಗೆ ಅನ್ನೋ ಭಾವನೆ ಬಲವಾಗ್ತಿದೆ.

ಈ ಆರು ದಶಕಗಳ ಸ್ವಾತಂತ್ರ್ಯದಲ್ಲಿ ನನಗೆ ಗೊತ್ತಿರೋ ಹಾಗೆ ಎರಡು-ಮೂರು ದಶಕಗಳನ್ನು ಚೆನ್ನಾಗಿ ಗಮನಿಸಿದರೆ, ಅದರಲ್ಲೂ ನಮ್ಮ ವಯಸ್ಸಿನವರಿಗೆ ಅನ್ವಯವಾಗುವ ಎಂಭತ್ತು ಹಾಗೂ ತೊಂಭತ್ತರ ದಶಕಗಳಲ್ಲಿ ಭಾರತ ಬಹಳಷ್ಟು ಬೆಳೆದಿದೆ. ತದನಂತರ ಎರಡು ಸಾವಿರದ ದಶಕದಲ್ಲಂತೂ ಎಲ್ಲಾ ಬೆಳವಣಿಗೆಗಳು ಮುಗಿಲು ಮುಟ್ಟಿದವು ಎಂದೇ ಹೇಳಬೇಕು. ನಾವು ಪಾಕಿಸ್ತಾನದವರ ಹಾಗೆ ಸ್ವಾತಂತ್ರ್ಯ ಸಿಕ್ಕ ಮೊದಲನೇ ದಿನದಿಂದ ವಿದೇಶಿಯರಿಗೆ ನಮ್ಮ ಮಾರ್ಕೆಟ್ಟುಗಳನ್ನು ತೆರೆದುಕೊಳ್ಳಲಿಲ್ಲ, ಎಂಭತ್ತು ಹಾಗು ತೊಂಭತ್ತರ ದಶಕದ ಅಂತ್ಯದವರೆಗೂ ಎಲ್ಲವೂ ಸರ್ಕಾರೀ ಸ್ವಾಧೀನದಲ್ಲೇ ಇತ್ತು. ಇಂದಿಗೂ ಸಹ ಬೇಕಾದಷ್ಟು ರಂಗಗಳಲ್ಲಿ ಸರ್ಕಾರಿ ಹಿಡಿತವಿದೆ. ನಮ್ಮ ದೇಶಕ್ಕೆ ವಿದೇಶಿ ಸರಕುಗಳು ನಿಧಾನವಾಗಿ ಬಂದವು. ರಕ್ಷಣಾ ತಂತ್ರಜ್ಞಾನವೇನೋ ಮೊದಲೇ ತೆರೆದುಕೊಂಡಿತು, ಆದರೆ ಮಿಕ್ಕವು ತಡವಾಗಿದ್ದಂತೂ ನಿಜ.

ಈ ಜಾಗತೀಕರಣ ಅನ್ನೋ ನಾಣ್ಯಕ್ಕೆ ಎರಡು ಮುಖಗಳಿದ್ದರೆ, ಅದರಲ್ಲಿ ಮೊದಲನೆಯದು ಒಂದು ದೇಶದ ಒಳಗಿನಿಂದ ಹೊರಹೋಗುವುದನ್ನು ಪ್ರತಿಬಿಂಬಿಸಿದರೆ ಮತ್ತೊಂದು ಹೊರದೇಶಗಳಿಂದ ಒಳಬರುವುದನ್ನು ಪ್ರತಿನಿಧಿಸುತ್ತದೆ. ಈ ಒಳ-ಹೊರ ಹೋಗುವುದನ್ನು ಯಾವುದೇ ವಿಚಾರಕ್ಕೂ ಅಳವಡಿಸಬಹುದು - ಆಮದು/ರಫ್ತು, ಸಂಸ್ಕೃತಿ, ಭಾಷೆ, ತಂತ್ರಜ್ಞಾನ, ವಿನ್ಯಾಸ, ವಿದ್ಯೆ, ಆಚಾರ-ವಿಚಾರ, ಇತ್ಯಾದಿ. ಸರಿ, ನಮಗೇನೋ ಇಂಗ್ಲೀಷರಿಂದ ಸ್ವಾತ್ರಂತ್ರ್ಯ ಸಿಕ್ಕಿತು, ಆದರೆ ಇವತ್ತಿನವರೆಗೂ ಉಳಿದ ದೇಶಗಳಲ್ಲಿ ಇಂಗ್ಲೀಷರ ಸಂತಂತಿ ಅಳಿದುಳಿದ ಹಾಗೆ ಭಾರತದಲ್ಲಿ ಏಕೆ ಮುಂದುವರೆಯಲಿಲ್ಲ ಎನ್ನುವ ಪ್ರಶ್ನೆ ಬರುತ್ತದೆ. ಯಾವಾಗಲೂ ಛಳಿಯೆಂದು ಒದ್ದಾಡುವ ಯುರೋಪಿಯನ್ನರಿಗೆ ಭಾರತದಂತಹ ದೇಶದಲ್ಲಿ ಬೇಕಾದಷ್ಟು ಹವಾಮಾನದ ವೇರಿಯೇಷನ್ನುಗಳಿರುವಂಥ ಪ್ರದೇಶಗಳಿರುವಾಗ ನಮ್ಮಲ್ಲಿ ಎರಡನೇ ಮೂರನೇ ಜನರೇಷನ್ನ್ ಭಾರತೇತರ ಮೂಲದ ಜನರು ಏಕೆ ನೆಲಸದಿದ್ದಿರಬಹುದು? ಅದೇ ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದ ಉಳಿದ ದೇಶಗಳಲ್ಲಿ ಹೆಚ್ಚು ಹೆಚ್ಚು ಯುರೋಪ್ ಪ್ರಭಾವವನ್ನು ಇವತ್ತಿನವರೆಗೂ ನಾವು ಕಾಣಬಹುದು. ಏಕೆ ಹೀಗೆ?

ಭಾರತದ ನೆಲವನ್ನು ಶತಮಾನಗಳ ಕಾಲ ಆಳಿದ ಯುರೋಪಿಯನ್ನರ ಪ್ರಭಾವ ನಮ್ಮಲ್ಲಿ ಇವತ್ತಿಗೂ ಬಹಳ ದೊಡ್ಡದು. ಒಳ್ಳೆಯದು ಕೆಟ್ಟದ್ದು ಎಂದು ಆಲೋಚಿಸುವುದನ್ನು ಆಬ್ಜೆಕ್ಟಿವ್ ಆಗಿ ಮಾಡಬೇಕಾಗುತ್ತದೆ. ನಮ್ಮಲ್ಲಿ ಹರಿದು ಹಂಚಿ ಹೋಗಿದ್ದ ಪ್ರಾಂತ್ಯಗಳನ್ನು, ಸ್ಥಳೀಯ ರಾಜ ಪರಂಪರೆಗಳನ್ನು ಒಡೆದು-ಒಂದುಗೂಡಿಸಿ ಆಳಿ ಒಂದು ಭಾರತ ದೇಶವಾಯಿತು. ಜೊತೆಗೆ ರೇಲ್ ರೋಡ್, ಅಂಚೆ ವ್ಯವಸ್ಥೆ, ಆಂಗ್ಲ ವಿದ್ಯಾಭ್ಯಾಸ, ವಸ್ತ್ರ ವಿನ್ಯಾಸಗಳು, ಕೇಶ ಶೈಲಿ, ಮತ ಪಂಗಡಗಳು, ಆಹಾರ-ವಿಚಾರಗಳು, ಪಾನೀಯಗಳು, ಹೂವುಗಳು, ತರಕಾರಿಗಳು, ವಿಷಯ-ವಸ್ತುವನ್ನೊಂದನ್ನು ಬೇರೆ-ಬೇರೆ ರೀತಿಯಲ್ಲಿ ನೋಡುವ ದೃಷ್ಟಿಕೋನ... ಹೀಗೆ ಪಟ್ಟಿ ಮುಂದುವರೆಯುತ್ತದೆ. ಇವೆಲ್ಲ ನಮ್ಮನ್ನು ಆಳಿದವರು ನಮಗೆ ನೀಡಿದ ಬಳುವಳಿ. ಇಂತಹ ಬಳುವಳಿಗಳು ಸ್ವಾತಂತ್ರ್ಯೋತ್ತರ ಸಮಾಜದಲ್ಲಿ ತಲೆಮಾರುಗಳು ಮುಂದುವರೆದ ಹಾಗೆ ಅವುಗಳು ಒಂದೊಂದೇ ವಿಶೇಷ ರೂಪಗಳನ್ನು ಪಡೆದುಕೊಳ್ಳತೊಡಗಿದವು. ಯಾವುದು ಸಾವಿರಾರು ವರ್ಷಗಳ ನಮ್ಮ ಇತಿಹಾಸದಲ್ಲಿ ಒಂದು ಭಾಷೆಯಾಗಿ ಯಾವುದು ಉತ್ತರ-ದಕ್ಷಿಣ-ಪೂರ್ವ-ಪಶ್ಚಿಮಗಳಲ್ಲಿ ನಮ್ಮನ್ನು ಒಂದುಗೂಡಿಸಿರಲಿಲ್ಲವೋ ಆ ಕೆಲಸವನ್ನು ಇಂಗ್ಲೀಷ್ ಮಾಡಿತು. ತಲೆ ತಲೆಮಾರುಗಳ ತರುವಾಯ ಯಾವ ವ್ಯವಹಾರ-ವಾಣಿಜ್ಯ ನಮ್ಮಲ್ಲಿ ಉಳಿದು-ಬೆಳೆದುಕೊಂಡು ಬಂದಿತ್ತೋ ಅದರ ಸ್ಥಳದಲ್ಲಿ ಇಂಗ್ಲೀಷ್ ಮೂಲದ ಬಿಸಿನೆಸ್ಸ್ ಪ್ರಾಸೆಸ್ಸುಗಳು ಬಂದವು. ಈ ಜಗತ್ತಿನಲ್ಲಿ ಯಾರು-ಏನು-ಎಲ್ಲೆಲ್ಲಿ-ಹೇಗೆ ಎನ್ನುವ ನಿರ್ಧಾರಗಳು ನಿಲುವುಗಳು ಬದಲುಗೊಂಡವು. ಜಗತ್ತು ಚಿಕ್ಕದಾಯಿತು, ಮನುಷ್ಯ ಪರಂಪರೆಗಳು ಮೊದಲಿಗಿಂತ ಹತ್ತಿರ ಬಂದವು.

ನಮ್ಮ ಸಾವಿರಾರು ವರ್ಷಗಳ ಪರಂಪರೆಯ ಮುಂದೆ ಈ ಸ್ವಾತಂತ್ರ್ಯೋತ್ತರ ಆರು ದಶಕಗಳು ಸಂಖ್ಯೆಯಲ್ಲಿ ಬಹಳ ದೊಡ್ಡವೇನು ಅಲ್ಲ, ಆದರೆ ಈ ಆರು ದಶಕಗಳಲ್ಲಿ ಆದ ದೇಶದ ಬೆಳವಣಿಗೆ ಹಾಗೂ ಪ್ರಗತಿ ಗಣನೀಯ. ನಮಗೆ ನಮ್ಮ ಮೂಲಭೂತ ಸಮಸ್ಯೆಗಳು ಎಂದಿಗೂ ಇರುವಂಥವೇ ಎನ್ನಿಸುವಂತಾಗಿದೆ, ನಮ್ಮ ದೇಶದಲ್ಲಿ ನೂರಕ್ಕೆ ಐವತ್ತು ಮಂದಿಗೆ ತಮ್ಮ ಹೆಸರನ್ನು ಬರೆಯಲು ಬಾರದು ಎನ್ನುವುದರಲ್ಲಿ ಬದಲಾವಣೆಯನ್ನು ಕಾಣಲು ಇನ್ನೂ ಬಹಳ ವರ್ಷಗಳೇ ಬೇಕಾಗುತ್ತವೆ, ನಮ್ಮವರಿಗೆಲ್ಲ ಸ್ವಚ್ಛ ಕುಡಿಯುವ ನೀರಿನ ಅಗತ್ಯ ಯಾವತ್ತಿನಿಂದ ಇದ್ದರೂ ಅದನ್ನು ಪೂರೈಸುವುದು ಇನ್ನೂ ಪ್ರಯತ್ನವಾಗಿಯೇ ಉಳಿಯುತ್ತದೆ, ಕೋಟ್ಯಾಂತರ ಜನರು ಕೆಲಸ ಮಾಡಬಲ್ಲವರಾದರೂ, ಕೆಲಸವಿಲ್ಲದವರಾಗುತ್ತಾರೆ. ಜನರಿಂದ ಜನರಿಗಾಗಿ ಬೇಕಾಗುವ ಕೆಲಸ ಹುಟ್ಟಿ ಇಂಡಸ್ಟ್ರಿಗಳು ಬೆಳೆಯದೇ ಹೋಗಿ, ಅಗತ್ಯದ ಕೆಲಸ ಕಾರ್ಯಗಳಲ್ಲಿ ಚಿಕ್ಕ ಮಕ್ಕಳ ಬಳಕೆಯಾಗುತ್ತದೆ. ವೃತ್ತಿ ಶಿಕ್ಷಣ ಸಂಬಂಧಿ ನಿಲುವು ಹೆಚ್ಚಾಗದೇ ಒಂದು ವಿದ್ಯೆ, ಬಿಸಿನೆಸ್ಸನ್ನು ತಮ್ಮದೆನ್ನಿಸಿಕೊಳ್ಳದೇ ಎಲ್ಲರಿಗೂ ಎಲ್ಲವೂ ಗೊತ್ತು ಆದರೆ ಯಾರೂ ಪರಿಣಿತರಿಲ್ಲವೆನ್ನುವಂತಾಗುತ್ತದೆ.

ನನ್ನಂಥವರಿಗೆ ಆರು ದಶಕಗಳ ಸ್ವಾತಂತ್ರ್ಯದ ಸವಿಯುಂಡ ಒಂದು ದೇಶದ ಹಿನ್ನೆಲೆಯಿದೆ, ಜೊತೆಗೆ ೨೩ ದಶಕಗಳ ಸ್ವಾತಂತ್ರ್ಯವನ್ನು ಅನುಭವಿಸುತ್ತಿರುವ ಮತ್ತೊಂದು ದೇಶದ ಸದರಿ ಆಗು-ಹೋಗುಗಳ ಅರಿವಿದೆ. ತಂತ್ರಜ್ಞಾನ-ಸಂವಹನ ರಂಗದಲ್ಲಿ ಇತ್ತೀಚೆಗೆ ಕ್ರಾಂತಿಯಾದದ್ದನ್ನು ನಾವು ಕಣ್ಣಾರೆ ಕಂಡು ಅನುಭವಿಸಿದ್ದೇವೆ. ಇನ್ನೂ ಎರಡು ದಶಕಗಳ ಬಳಕೆಯಲ್ಲಿ ಬೆಳೆಯುತ್ತಿರುವ ಸಾಮಾನ್ಯ ಜನರ ಅಂತರ್ಜಾಲದ ಸೂಪರ್ ಹೈವೇ ಹಾಗೂ ನೂರಾರು ವರ್ಷಗಳ ಹಿಂದೆ ಯಾರೋ ತೆರೆದಿಟ್ಟ ದಾರಿಗಳಿರುವಾಗ ಮುಂದೆ ಇವೆಲ್ಲ ಮುಂದೆ ಹೇಗೆ ಎನ್ನುವ ಕುತೂಹಲ ಎಂದಿಗಿಂತಲೂ ಇನ್ನೂ ಬಲವಾಗಬಹುದು.

ನಮ್ಮಲ್ಲಿ ಸಮಸ್ಯೆಗಳು ಹೆಚ್ಚು ಎಂದು ಕೈ ಚೆಲ್ಲಿ ಕೂರುವುದರಲ್ಲಿ ಅರ್ಥವಿಲ್ಲ. ನಮ್ಮಲ್ಲಿನ ಹೆಚ್ಚು ಜನಸಂಖ್ಯೆಯೇ ಎಲ್ಲದಕ್ಕೂ ಕಾರಣ ಎಂದು ದೂರಿ ಫಲವಿಲ್ಲ. ಇವೆಲ್ಲ ನಮ್ಮತನದಲ್ಲಿ ಅವಿಭಾಜ್ಯವಾಗಿ ಸೇರಿಹೋಗಿವೆ. ನಮ್ಮ ದೇಶವನ್ನು ಅಮೇರಿಕದಷ್ಟು ಉದ್ದ-ಅಗಲವಾಗಿ ಹಿಗ್ಗಿಸಲಾಗದು. ನಮ್ಮಲ್ಲಿ ಅಮೇರಿಕದ ಸವಲತ್ತು-ಸಂಪನ್ಮೂಲಗಳನ್ನು ಒಂದೇ ದಿನದಲ್ಲಿ ಸೃಷ್ಟಿಸಲಾಗದು. ನಮ್ಮ ಮೂಲಭೂತ ಸಮಸ್ಯೆಗಳನ್ನು ಒಂದೇ ಕ್ಷಣದಲ್ಲಿ ನಿರ್ಮೂಲನ ಮಾಡಲಾಗದು. ಇವುಗಳಿಗೆಲ್ಲ ಉತ್ತರ ಬಹಳ ದೂರದ ಪ್ರಯಾಣ ಹಾಗೂ ಅಂತಹ ಅಪರಿಮಿತ ಪ್ರಯಾಣದಲ್ಲಿ ದೊರಕುವ ಯಶಸ್ಸಿನ ಮೈಲುಗಳು ಈ ಸಮಸ್ಯೆಗಳಿಗೆ ಉತ್ತರಗಳು. ಇನ್ನೂ ನೂರು-ಇನ್ನೂರು ವರ್ಷಗಳಲ್ಲಾದರೂ ನಾವು ಪ್ರಭಲರಾಗುತ್ತೇವೆ. ನಮ್ಮ ಸಂಖ್ಯೆ ನಮ್ಮ ಶಕ್ತಿಯಾಗುತ್ತದೆ. ನಾವು ಎಲ್ಲರಿಗಿಂತ ಮುಂದಿರುತ್ತೇವೆ.

ಇವು ಬರೀ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಮಾಡೋ ವಿಷ್ ಆಗಲೀ ವಿಷ್‌ಫುಲ್ ಆಲೋಚನೆಗಳಾಗಲೀ ಆಗದೇ ಆದಷ್ಟು ಬೇಗ ನಿಜವಾಗುವುದನ್ನು ನಮ್ಮ ತಲೆಮಾರು ನೋಡಿದ್ದರೆ ಎಷ್ಟೊಂದು ಚೆನ್ನಿತ್ತು ಅನ್ನಿಸೋದಿಲ್ಲವೇ?

Saturday, July 04, 2009

ಯೋಗ-ಮೆಡಿಟೇಷನ್ನುಗಳು ನಮಗಲ್ಲ ಸಾರ್

ನೀವು ಭಾರತದಲ್ಲೇ ಇರಲಿ ಅಥವಾ ವಿದೇಶದಲ್ಲೇ ಇರಲಿ, ಯೋಗ-ಮೆಡಿಟೇಶನ್ನುಗಳ ಬಗ್ಗೆ ಬೇಕಾದಷ್ಟು ಕೇಳಿ-ನೋಡಿಯೂ ಆಯಾ ವಿಧಿ ವಿಧಾನಗಳನ್ನು ಇವತ್ತಲ್ಲ ನಾಳೆ ನೋಡಿಕೊಂಡರೆ ಆಯಿತು, ಸಮಯ ಸಿಕ್ಕಾಗ ಕಲಿತುಕೊಂಡರೆ ಆಯಿತು ಎಂದು ನಿಮ್ಮಷ್ಟಕ್ಕೆ ನೀವೇ ಶಪಥ ಮಾಡಿಕೊಂಡಿದ್ದರೆ ನೀವು ನಮ್ಮ ಗುಂಪಿಗೆ ಸೇರಿಕೊಳ್ಳುತ್ತೀರಿ. ಶಾಲಾ ಕಾಲೇಜಿಗೆ ಹೋಗೋವಾಗ ಯಾರಿಗಿದೆ ಟೈಮು? ಮುಂದೆ ಮದುವೆ-ಮುಂಜಿ ಆದ ಮೇಲೆ ನೋಡೋಣ ಎಂದು ಮುಂದು ದೂಡಿದಿರೋ ನಮ್ಮವರ ಸರ್ಕಲ್ಲಿಗೆ ಇನ್ನೂ ಹತ್ತಿರವಾಗುತ್ತೀರಿ. ಕೈ ತುಂಬಾ ಸಂಬಳ ಬರುವ ಕೆಲಸ, ಮನೆಗೆ ಬಂದ ಕೂಡಲೆ ನೆಮ್ಮದಿಯ ಜೊತೆಗೆ ಅದು-ಇದು ಮಾಡುವ ಹೋಮ್ ವರ್ಕು ಇವೆಲ್ಲವೂ ಸೇರಿ ಮುಂದೆ ರಿಟೈರ್ ಆದ ಮೇಲೆ ನೋಡೋಣವೆಂದು ಮುಂದೆ ದೂಡುತ್ತಲೇ ಬಂದಿದ್ದೀರೋ ನೀವು ನಮ್ಮವರೆ ಆಗಿಬಿಟ್ಟಿರಿ!

ನಮ್ಮ ಆಫೀಸಿನಲ್ಲಿ ಕೆಲವು ’ಯೋಗಾಭ್ಯಾಸ ಮಾಡುವುದು’ ಎನ್ನುವುದನ್ನು ತಮ್ಮ ಹವ್ಯಾಸಗಳಲ್ಲಿ ಸೇರಿಸಿಕೊಂಡಿದ್ದಾರೆ ಹಾಗೂ ದಶಕಗಳ ಯೋಗಾಭ್ಯಾಸದ ಫಲವನ್ನು ಮೈಗೂಡಿಸಿಕೊಂಡು ಎಲ್ಲರ ಎದುರು ಖುಷಿಯಾಗಿ ಹಂಚಿಕೊಳ್ಳುತ್ತಾರೆ. ಇಂಗ್ಲೀಷ್ ಲೇಖಕರ ಪುಸ್ತಕಗಲ್ಲಿ ’ಓಂ’ ಸೇರಿಕೊಂಡಿದ್ದು ಕಾಣುತ್ತೆ, Hannah Montanna ಸ್ಕ್ರಿಪ್ಟ್‌ನಲ್ಲೂ ಕೂಡ ’ಓಂ’ ಬಳಕೆ ಕಂಡು ಬರುತ್ತೆ ಆದರೆ ನಾನು ಮಾತ್ರ ಇವುಗಳೆಲ್ಲದರಿಂದ ದೂರವೇ ಇದ್ದ ಹಾಗೆ ಕಂಡುಬರುತ್ತೇನೆ. ಮೆಡಿಟೇಷನ್ನೂ ಮತ್ತೊಂದೂ ಎನ್ನುವ ಅಭ್ಯಾಸ ಅಥವಾ ಆಚರಣೆ ವ್ಯಸ್ತ ಜೀವನದ ಭಾಗವಾಗಿ ಹೋಗುವುದಾದರೂ ಹೇಗೆ? ದಿನದುದ್ದಕ್ಕೂ ಬಿಡುವಿಲ್ಲದಿರುವ ಮಿಲ್ಲಿನಲ್ಲಿ ತಿರುಗುವ ಚಕ್ರಗಳ ಹಾಗಿನ ಜೀವನ ಶೈಲಿಯಲ್ಲಿ ’ಒಮ್ಮೆ ನಿಂತು ನೋಡಿ’ ಎಂದು ಹೇಳುವುದಾರೂ ಹೇಗೆ?

ಸಮುದ್ರ-ಸಾಗರದ ತಳವನ್ನು ಶೋಧಿಸುವವರು ನಭದಲ್ಲಿ ಆಕಾಶ ನೌಕೆಗಳನ್ನು ಉಪಗ್ರಹಗಳನ್ನು ಬಳಸುತ್ತಾರಂತೆ, ನಮ್ಮದರ ಬುಡನೋಡಿಕೊಳ್ಳಲು ರ್ಯಾಡಿಕಲ್ಲಾಗಿ ಅದರ ವಿರುದ್ಧ ತುದಿಯನ್ನು ಮುಟ್ಟಿಯಾದರೂ ಕಂಡುಕೊಳ್ಳಬೇಕು ಎಂದುಕೊಂಡರೆ ಆ ತುದಿಯೂ ಇಲ್ಲ ಈ ತುದಿಯೂ ಇಲ್ಲ ಎನ್ನುವ ತ್ರಿಶಂಕುವಿನ ಸ್ಥಿತಿ-ಗತಿಯಲ್ಲಿ ಯಾವುದನ್ನು ಯಾವ ದಿಕ್ಕಿನಲ್ಲಿ ಎಲ್ಲಿ ಹುಡುಕಿಕೊಳ್ಳೋದು ನೀವೇ ಹೇಳಿ.

ಪ್ರತಿಯೊ೦ದಕ್ಕೂ ಒಂದು ಮೊದಲಿದೆ, ಆ ಮೊದಲನ್ನು ಹುಡುಕಬೇಕು. ಪ್ರತಿಯೊಂದಕ್ಕೂ ಒಂದು ಗತಿಯಿದೆ ಅದನ್ನು ಅನುಸರಿಸಬೇಕು. ಹಾಗೇ ಪ್ರತಿಯೊಂದರ ಆಳ-ವಿಸ್ತಾರವನ್ನೂ ಕಂಡುಕೊಳ್ಳಬೇಕು ಎನ್ನುವುದು ಈ ಹೊತ್ತಿನ ತತ್ವ. ಯೋಗ-ಧ್ಯಾನ ಮೊದಲಾದವೂ ನಮಗೆ ಪರಂಪರಾನುಗತ, ಅದನ್ನು ಹಿಂದೆ ಕಲಿಯುತ್ತಿರುವಾಗಲೀ ಮತ್ತು ಮರೆತು ಹೋಗುತ್ತಿರುವಾಗಲೀ ಎಲ್ಲೂ ಅದರ ಮೂಲವನ್ನು ಶೋಧಿಸಿದ್ದಂತೂ ಇಲ್ಲ. ಈಗ ಎಲ್ಲ ಆಗಿ ಮಿಂಚಿ ಹೋದ ಮೇಲೆ, Lotus = ಪದ್ಮ, Position = ಆಸನ, ಎಂದು ’ಪದ್ಮಾಸನ’ವನ್ನು ಕಲಿಯೋದೆ? ಇಲ್ಲಿಯವರು ಕೆರೆಯನ್ನಾಗಲೀ, ಕೆರೆಯಲ್ಲಿನ ಕಮಲವನ್ನಾಗಲೀ, ನೀರಿನಡಿಯಲ್ಲಿ ಒಂದಕ್ಕೊಂದು ಹೆಣಿಕೆ ಹಾಕಿಕೊಂಡ ಬೇರು-ಕಾಂಡಗಳನ್ನಾಗಲೀ ನೋಡದೇ ಹೋದರೂ ಪದ್ಮಾಸನವನ್ನೂ ಕಲಿತರು, ಅದನ್ನು ರೂಢಿಸಿ-ಸಾಧಿಸಿಕೊಂಡು ಎಲ್ಲರಿಗೂ ಸಾರುವಂತಾದರು. ಕೆರೆಯ ನೀರಿನಲ್ಲಿನ ಕಮಲದ ಹಾಗೆ ನೀರಿನಲ್ಲಿದ್ದೂ ನೀರನ್ನು ರೆಸಿಸ್ಟ್ ಮಾಡುವ ದೃಷ್ಟಿಕೋನದ ಸ್ಥಿತಪ್ರಜ್ಞತೆಯನ್ನು ಮನಗಂಡರು. ನಾವು ಶತಮಾನಗಳಿಂದ ’ಕೆರೆಯ ನೀರನು ಕೆರೆಗೆ ಚೆಲ್ಲುತ್ತ’ ಬಂದರೂ ಬಹಳಷ್ಟು ಜನ ’ಏಕೆ ಹಾಗೆ?’ ಎಂದು ಪ್ರಶ್ನಿಸಿಕೊಂಡು ಉದ್ಧಾರವಾದದ್ದು ಕಡಿಮೆ ಎನ್ನುವುದು ನನ್ನ ಅಂಬೋಣ.

ನಮ್ಮ ಸಂಸ್ಕೃತಿ ದೊಡ್ಡದು, ನಮ್ಮ ಭಾಷೆ ದೊಡ್ಡದು ಎನ್ನುವವರಿಗೆ ಅದನ್ನು ಉಳಿಸಲಿಕ್ಕೆ ಏಕೆ ಹೆಣಗುತ್ತಿದ್ದೀರಿ? ಎಂದು ಪ್ರಶ್ನೆ ಹಾಕಿ ಉತ್ತರವನ್ನು ಕಾಯ್ದು ನೋಡಿ. ಭಾಷೆ, ಸಂಸ್ಕೃತಿ, ಧರ್ಮವನ್ನು ಪೋಷಿಸಬೇಕೆ ಅಥವಾ ಅದು ಗಟ್ಟಿಯಿದ್ದರೆ ತನ್ನಷ್ಟಕ್ಕೆ ತಾನೇ ನಿಲ್ಲುತ್ತದೆ, ಉಳಿಯುತ್ತದೆ ಎನ್ನುವುದು ಈ ಹೊತ್ತಿನ ಜಿಜ್ಞಾಸೆ. ತಮ್ಮ ಧರ್ಮ ದೊಡ್ಡದು ಎಂದು ಕೋಟ್ಯಾಂತರ ರೂಪಾಯಿಗಳ ವ್ಯವಹಾರವನ್ನು ನಡೆಸುವ ಲೋಕಿಗರು ತಮ್ಮ ಧರ್ಮವನ್ನು ನಿಜವಾಗಿಯೂ ಹರಡುತ್ತಿದ್ದಾರೆಯೇ? ಅದಕ್ಕೆ ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ತಮ್ಮ ಧರ್ಮ ವಿಸ್ತಾರವಾದುದು ಎಂದು ಅದನ್ನು ಪರಿಗಣಿಸುವ ಹೊತ್ತಿಗೇ ಅದನ್ನು ಕಡೆಗಣಿಸುವ ವಿಚಾರವಂತರು ತಮ್ಮತನವನ್ನು ಉಳಿಸಿಕೊಳ್ಳುತ್ತಿದ್ದಾರೆಯೇ? ಈ ಉಳಿಸಿಕೊಳ್ಳುವ, ಬಳಸಿಕೊಳ್ಳುವ, ಹರಡುವ, ಹಾರಿಸಿಕೊಂಡು ಹೋಗುವ ಪರಿಪಾಟಿಕೆ ಇವತ್ತು ನಿನ್ನೆಯದಲ್ಲ ಆದರೆ ಕೆಲವು ಬೆಳೆದಂತೆ ಕಾಣಿಸುತ್ತದೆ, ಇನ್ನು ಕೆಲವು ವಿನಾಶದ ಹಾದಿ ಹಿಡಿದಂತೆ ತೋರುತ್ತದೆ. ನೂರು-ಸಾವಿರ-ಹತ್ತು ಸಾವಿರ ವರ್ಷಗಳಲ್ಲಿ ಹುಟ್ಟಿ-ಬೆಳೆದು-ಬಂದು ಹೋಗುವ ಈ ಪರಿಕಲ್ಪನೆ, ವ್ಯತಿರಿಕ್ತತೆಗಳನ್ನು ನಾವು ಹುಲುಮಾನವರು ಗಮನಿಸಬೇಕೋ, ನಮ್ಮದು-ನಮ್ಮತನವನ್ನು ತೋರಬೇಕೋ ಅಥವಾ ನಿರ್ವಿಣ್ಣರಾಗಿ ಸುಮ್ಮನಿರಬೇಕೋ?

Procrastination, ಸದಾ ಮುಂದೂಡಿಕೊಂಡು ಇವತ್ತಲ್ಲ ನಾಳೆ ಎನ್ನುವ ಧೋರಣೆಯನ್ನು ಯೋಗ-ಧ್ಯಾನಗಳಿಗೂ ಅನ್ವಯಿಸಿಕೊಂಡು ಬಂದಿರುವ ನಮ್ಮ ಗುಂಪಿಗೆ ಇತ್ತೀಚೆಗಷ್ಟೇ ಸೇರಿದ ನಮ್ಮಂಥ ಎಷ್ಟೋ ಜನರ ಕಿವಿ ಮಾತು - ಇವತ್ತು ಇಲ್ಲಿ ಆಗದಿದ್ದುದು ಮುಂದೆ ಆದೀತು ಎನ್ನುವ ಸತ್ಯವಂತೂ ಅಲ್ಲ. ಕೈ ಕಾಲು ಗಟ್ಟಿ ಇರುವ ಈ ಸಮಯದಲ್ಲಿ ಅನುಸರಿಸಿ, ಅಭ್ಯಾಸ ಮಾಡಿಕೊಳ್ಳದ ಕ್ರಿಯೆ ಅಥವಾ ಕರ್ಮ ಮುಂದೆ ಇಳಿ ವಯಸ್ಸಿನಲ್ಲಿ ಸಾಧಿಸಿಕೊಳ್ಳಲು ಸಾಧ್ಯ ಎನ್ನುವುದಕ್ಕೆ ಏನು ಆಧಾರ? ಈಗ ಮಾಡಿ ಮುಂದೆ ಅದರ ಫಲವ ನೋಡಿ! ಮುಂದಿನ ಜನ್ಮದ ಬಂಧನದಲ್ಲಿರಲಿ ಇಲ್ಲದಿರಲಿ ಈಗ (Now) ಎನ್ನುವುದು ನಿಮಗೆ ಸೇರಿದ್ದು, ಮುಂದೆ (Later) ಎನ್ನುವುದು ನಿಮ್ಮ ಹತೋಟಿಯಲ್ಲಿರುವುದೋ ಇಲ್ಲವೋ ಯಾರು ತಾನೆ ಬಲ್ಲರು?

Friday, March 20, 2009

ನಮ್ಮೂರ ರಸ್ತೆ ಹಾಗೂ ಜನರ ಮನಸ್ಥಿತಿ

"Roads are horrible in India...don't know why people don't realize that and do something about it..." ಎನ್ನೋ ಕಾಮೆಂಟ್ ಅನ್ನು ಪಾಶ್ಚಿಮಾತ್ಯ ದೇಶದ ಪ್ರವಾಸಿಗರು ಹೇಳೋದನ್ನ ಕೇಳಿದ್ದೇನೆ. ನಮ್ಮ ಭಾರತದ ರಸ್ತೆಗಳೇ ಹಾಗೆ...which ever the road you take it is always a treacherous journey! ಶ್ರೀಮಂತ ದೇಶದ ಜನರಿಗೆ ತೃತೀಯ ಜಗತ್ತಿನ ಅರಿವಾಗುವುದು ಕಷ್ಟ ಸಾಧ್ಯವೂ ಹೌದು. ಅಲ್ಲಿ ಸಾಮಾನ್ಯವಾಗಿ ಕಂಡು ಬರುವ ಲಂಚ, ವಂಚನೆ, ಭ್ರಷ್ಟಾಚಾರ, ಹಿಂಸೆ, ಅನಕ್ಷರತೆ ಮೊದಲಾದವುಗಳನ್ನು ಬೇಕಾದಷ್ಟು ರೀತಿಯಲ್ಲಿ ಪ್ರಶ್ನಿಸಿಕೊಳ್ಳಬಹುದು.

ಒಂದು ದೇಶದ ಉನ್ನತಿ ಆ ದೇಶದಲ್ಲಿ ದೊರೆಯುವ ಸಂಪನ್ಮೂಲ ಹಾಗೂ ಆ ದೇಶದ ಜನರ ಅರಿವಿನ ಮೇಲೆ ಅವಲಂಭಿತವಾಗಿರುತ್ತದೆ. ಹೀಗೆ ಮಾಡಬಹುದು ಅನ್ನೋ ತಂತ್ರಜ್ಞಾನಕ್ಕೂ ಸಹ ಸರಿಯಾದ ಸಲಕರಣೆ ಪರಿಕರಗಳು ಇದ್ದರೆ ಮಾತ್ರ ಆ ತಂತ್ರಜ್ಞಾನವನ್ನು ಉಪಯೋಗಿಸಲು ಸಾಧ್ಯವಾಗುತ್ತದೆ. ಜೊತೆಗೆ ಒಂದು ದೇಶದ ಹವಾಮಾನ ಕೂಡ ಅಲ್ಲಿನ ರಸ್ತೆಗಳ ವಿನ್ಯಾಸ, ಅಗಲ ಹಾಗೂ ಕ್ವಾಲಿಟಿಗಳನ್ನು ನಿರ್ಧರಿಸಬಲ್ಲದು ಎನ್ನುವ ವಿಷಯ ಇತ್ತೀಚೆಗಷ್ಟೇ ಮನಸಿಗೆ ಬಂದಿದ್ದು. ಭೂ ವಿಸ್ತಾರದಲ್ಲಿ ಹೆಚ್ಚಾಗಿಯೂ ಜನ ಸಂಖ್ಯೆಯಲ್ಲಿ ಕಡಿಮೆಯೂ ಇರುವ ದೇಶಗಳ ಸವಾಲಿಗೂ ಅಧಿಕ ಜನಸಂಖ್ಯೆಯ ಸಣ್ಣ ದೇಶಗಳ ಸವಾಲಿಗೂ ಬಹಳ ವ್ಯತ್ಯಾಸವಿದೆ.

ಇಲ್ಲಿ ನಾವಿರುವ ರಾಜ್ಯವನ್ನೇ ತೆಗೆದುಕೊಳ್ಳೋಣ, ನ್ಯೂ ಜೆರ್ಸಿ ಹೆಚ್ಚು ಜನ ಸಾಂದ್ರತೆ ಹೊಂದಿರುವ ರಾಜ್ಯಗಳಲ್ಲಿ ಒಂದು. ಛಳಿಗಾಲದಲ್ಲಿ ಒಮ್ಮೊಮ್ಮೆ ಒಂದು ಅಡಿಗಿಂತಲೂ ಹೆಚ್ಚು ಸ್ನೋ ಬೀಳುವುದೂ, ವರ್ಷದಲ್ಲಿ ಕೊನೇ ಪಕ್ಷ ನಾಲ್ಕು ತಿಂಗಳಾದರೂ ಭಯಂಕರ ಛಳಿಯ ವಾತಾವರಣ ಇರೋದು ನಿಜ. ಸ್ನೋ ಬಿದ್ದಾಗ ಅಥವಾ ಛಳಿಯಲ್ಲಿ ಹೆಪ್ಪುಗಟ್ಟಿದ ಹಿಮವನ್ನು ರಸ್ತೆಯ ಬದಿಗೊತ್ತಿ ವಾಹನಾಳಿಗೆ ದಾರಿ ಮಾಡಿಕೊಡಲು ರಾಜ್ಯ/ಪಟ್ಟಣಗಳ ಬೊಕ್ಕಸದಿಂದ ವರ್ಷಕ್ಕಿಷ್ಟು ಎಂದು ಹಣ ತೆಗೆದಿಡಲಾಗುತ್ತದೆ. ದೊಡ್ಡ ಹೈವೆಗಳಲ್ಲಿ ರಸ್ತೆಯ ಪಕ್ಕಕ್ಕೆ ಒಂದು ಲೇನ್ ಅಗಲಕ್ಕಿಂತಲೂ ಹೆಚ್ಚು ಅಗಲವಾದ ಶೋಲ್ಡರುಗಳಿರುತ್ತವೆ. ಇನ್ನು ಅಷ್ಟು ಅಗಲವಲ್ಲದ ಶೋಲ್ಡರ್ ಇರುವ ಎರಡು ಲೇನ್ ರಸ್ತೆಗಳು ವಿಂಟರ್‌ನಲ್ಲಿ ಒಂದು ಲೇನ್ ರಸ್ತೆಗಳಾಗಿಯೂ ಉಪಯೋಗಿಸಲ್ಪಡುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಜನರ ಹಾಗೂ ಅವರ ಅಟೋಮೊಬೈಲುಗಳ ಸಂಬಂಧ ಅಧಿಕ. ಇಲ್ಲಿ ತಲಾ ಒಂದೊಂದು ಕಾರು ಎನ್ನುವುದು ನಿತ್ಯೋಪಯೋಗಿ ವಸ್ತುವೇ ಹೊರತು ಲಕ್ಷುರಿಯಂತೂ ಅಲ್ಲ. ಪ್ರತಿಯೊಬ್ಬರೂ ಸಣ್ಣ ಪುಟ್ಟ ದೂರಗಳಿಂದ ಹಿಡಿದು ನೂರಾರು ಮೈಲುಗಳ ಪ್ರಯಾಣಕ್ಕೂ ತಮ್ಮ ಕಾರುಗಳನ್ನೇ ನಂಬಿರುವ ಪರಿಸ್ಥಿತಿ. ಹೀಗಿರುವಾಗ ಕೆಟ್ಟ ರಸ್ತೆಗಳು ಹೇಗೆ ತಾನೇ ಹುಟ್ಟ ಬಲ್ಲವು. ಒಂದು ವೇಳೆ ಒಳ್ಳೆಯ ರಸ್ತೆ ಕೆಟ್ಟ ರಸ್ತೆಯಾಗಿ ಪರಿವರ್ತನೆಗೊಂಡರೂ (ಹೊಂಡ, ಗುಂಡಿ, ಬಿರುಕು, ಗಲೀಜು ಮುಂತಾದವುಗಳಿಂದ) ಇಲ್ಲಿನ ಜನರು ಸ್ಥಳೀಯ ಆಡಳಿತವನ್ನು ಕೇಳುವ ವ್ಯವಸ್ಥೆ ಇದೆ, ಅದಕ್ಕಿಂತ ಮೊದಲು ಹಾಗಿರುವ ರಸ್ತೆಗಳನ್ನು ತುರಂತ ರಿಪೇರಿ ಮಾಡುವ ವ್ಯವಸ್ಥೆ ಇದೆ, ಅಲ್ಲದೆ ಪ್ರತಿಯೊಂದು ರಸ್ತೆಯನ್ನು ಮೇಂಟೈನ್ ಮಾಡುವ ಪದ್ಧತಿ ಅಥವಾ ವ್ಯವಸ್ಥೆ ಇದೆ. ಇವೆಲ್ಲವೂ ಒಂದಕ್ಕೊಂದು ಪೂರಕವಾಗಿ ತಮ್ಮ ನೆರೆಹೊರೆಯನ್ನು ಸ್ವಚ್ಛ ಹಾಗೂ ವ್ಯವಸ್ಥಿತವಾಗಿ ಇಡುವಲ್ಲಿ ಶ್ರಮಿಸುತ್ತವೆ.

ಭಾರತದಲ್ಲಿ ಹೈವೇಗಳಿಂದ ಹಿಡಿದು ಸ್ಥಳೀಯ ರಸ್ತೆಗಳಲ್ಲಿ ಲೇನ್‌ಗಳು ಹೊಸತು. ರಸ್ತೆಯ ಮೇಲೆ ಬಿಳಿಯ ಪಟ್ಟೆಗಳನ್ನು ಉದ್ದಾನುದ್ದ ಎಳೆದು ಅವನ್ನು ಮೇಂಟೇನ್ ಮಾಡುವುದಕ್ಕೆ ತೊಡಗಿಸಬೇಕಾದ ಹಣ, ಹಾಗೆ ಮಾಡುವುದರ ಹಿಂದಿನ ಟೆಕ್ನಾಲಜಿ, ಜನರ ತಿಳುವಳಿಕೆ ಮೊದಲಾದವುಗಳು ಇನ್ನೂ ಹೊಸತು. ಎಲ್ಲದಕ್ಕಿಂತ ಮುಖ್ಯವಾಗಿ ಜನರಿಗೆ ಅರಿವು ಅಥವಾ ತಿಳುವಳಿಕೆ ಇಲ್ಲದಿರುವುದು ಗೊತ್ತಾಗುತ್ತದೆ. ನಾನು ನೋಡಿದ ಕನ್ನಡ ಸಿನಿಮಾಗಳಲ್ಲಿ ತೋರಿಸುವ ಈ ರಸ್ತೆಗಳಲ್ಲಿ ಜನರು ಕಾರು/ಜೀಪು ಓಡಿಸಿಕೊಂಡು ಹೋಗುವುದನ್ನು ನೋಡಿದರೆ ಅಲ್ಲಿ ಯಾರೂ ತೆಪ್ಪಗೆ ತಮ್ಮ ಲೇನ್ ನಲ್ಲಿ ಹೋಗೋದಿಲ್ಲ. ಜನನಿಬಿಡ ರಸ್ತೆಗಳಿಂದ ಹಿಡಿದು ಖಾಲೀ ರಸ್ತೆಗಳವರೆಗೆ ಎರೆಡೆರೆಡು ಲೇನ್‌ಗಳ ನಡುವೆ ಕಾರು ಓಡಿಸಿಕೊಂಡು ಹೋಗುವುದು ಒಂದು ರೀತಿಯ ಶೋಕಿ ಅಥವಾ ಅಜ್ಞಾನ. ಜೊತೆಗೆ ಪಾರ್ಕಿಂಗ್ ಮಾಡುವಲ್ಲಿಯೂ ಸಹ ಎರೆಡೆರಡು ಕಾರು ಪಾರ್ಕ್ ಮಾಡಬಹುದಾದ ಸ್ಥಳಗಳಲ್ಲಿ ಒಂದು ಕಾರನ್ನು ಮನಸ್ಸಿಗೆ ಬಂದ ಹಾಗೆ ನಿಲ್ಲಿಸಿ ಹೋಗುವುದಾಗಲೀ, ಟ್ರಾಫಿಕ್ ನಿಯಮ ಹಾಗೂ ಉಲ್ಲಂಘಿಸುವುದನ್ನೆಲ್ಲ ಆದರ್ಶವಾಗಿ ತೋರಿಸುವ ವ್ಯವಸ್ಥೆ ಇದೆ. ತಪ್ಪು ಮಾಡೋದು ಸಹಜ ಎಂದು ಒಪ್ಪೋ ಮನಸ್ಸಿಗೆ ಅದಕ್ಕೆ ತಕ್ಕ ಶಿಕ್ಷೆಯೂ ಸಹಜ ಎಂದು ಏಕೆ ಹೊಳೆಯೋದಿಲ್ಲ ಎನ್ನುವ ಪ್ರಶ್ನೆ ಹುಟ್ಟುತ್ತದೆ. ವಿದ್ಯಾಭ್ಯಾಸ ಹಾಗೂ ಅರಿವು ಹೆಚ್ಚಿದಂತೆ ಜನರ ನಡವಳಿಕೆಗಳಲ್ಲಿ ಬದಲಾಗುತ್ತದೆ ಎನ್ನುವುದನ್ನು ಮತ್ತೆ ಮತ್ತೆ ಪ್ರಶ್ನಿಸಿಕೊಳ್ಳುವ ಹಾಗಾಗುತ್ತದೆ.

ಸಂಪನ್ಮೂಲಗಳು ಇರಲಿ ಇಲ್ಲದಿರಲಿ, ಇದ್ದುದ್ದನ್ನು ಚೆನ್ನಾಗಿ ನೋಡಿಕೊಂಡು ಹೋಗುವ ಮನಸ್ಥಿತಿ ಮುಖ್ಯ. ಬಡದೇಶಗಳಲ್ಲಿ ಹಾಗೂ ಮುಂದುವರೆಯುತ್ತಿರುವ ದೇಶಗಳಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಿ ಅದನ್ನು ಉಳಿಸಿಕೊಂಡು ಹೋಗಲು ಕಷ್ಟವಾಗಬಹುದು, ಆದರೆ ಎಲ್ಲಿಯವರೆಗೂ ಜನರು ಹಾಗೂ ಜನರ ಅರಿವು ಬೆಳೆಯುವುದಿಲ್ಲವೋ ಅಲ್ಲಿಯವರೆಗೆ ಕೇವಲ ಸಂಪನ್ಮೂಲಗಳೊಂದೇ ಏನೂ ಮಾಡಲಾರವು. ಸಾವಿರಾರು ವರ್ಷಗಳಲ್ಲಿ ಬದಲಾಗದ ಜನರ ಅರಿವು ಇನ್ನು ನೂರಿನ್ನೂರು ವರ್ಷಗಳಲ್ಲಿ ಬದಲಾದೀತು ಎನ್ನುವುದಕ್ಕೇನು ಆಧಾರ ಅಥವಾ ಗ್ಯಾರಂಟಿ?

Saturday, January 24, 2009

ಆಹಾ, ಜನವರಿ!

ಓಹ್, ಈ ಜನವರಿಯಲ್ಲಿ ಅದೇನೇನೆಲ್ಲಾ ಆಗ್ತಾ ಇದೆ! ಓಬಾಮಾ ಪಬಾಮಾ ಪ್ರೆಸಿಡೆಂಟ್ ಆಗಿರೋ ಬಗ್ಗೆ ಬೇರೆ ಎಲ್ರೂ ಬರೀತಾ ಇರೋವಾಗ ನಾನೂ ಅದನ್ನೇ ಬರೆದ್ರೆ ಏನ್ ಪ್ರಯೋಜನ? ಈ ಜನವರಿಯ ಇಪ್ಪತ್ತನಾಲ್ಕು ದಿನಗಳಲ್ಲಿ ಆಗ್ಲೇ ಹನ್ನೊಂದು ಹನ್ನೆರಡು ಪರ್ಸೆಂಟ್ ಡೌನ್ ಆಗಿರೋ ನನ್ನ ಪೋರ್ಟ್‌ಫೋಲಿಯೋ ಬಗ್ಗೆ ಚಿಂತಿಸ್ಲೋ ಅಥವಾ ಇತ್ತೀಚೆಗೆ ನನ್ನ ಜೊತೆಯಾದ ಹೊಸ ಬಾಸ್ ಹಾಗೂ ಹೊಸ ಕೆಲಸಗಳ ಬಗ್ಗೆ ಕೊರೆದರೆ ಹೇಗೆ?

ಈ ಇಂಗ್ಲೀಷ್ ಕ್ಯಾಲೆಂಡರಿನ ಜನವರಿ ಅದೆಷ್ಟು ಹೊಸದನ್ನು ತಂದಿದೆ ಈ ವರ್ಷ - ಅಮೇರಿಕದ ಹೊಸ ಪ್ರೆಸಿಡೆಂಟ್ ಓಬಾಮ ಸಿಂಹಾಸನವನ್ನೇರಿದ್ದು, ಆ ಸಮಾರಂಭದಲ್ಲಿ ಸುಮಾರು ಇಪ್ಪತ್ತು ಲಕ್ಷ ಜನ ಸೇರಿದ್ರಂತಲ್ಲಪ್ಪ! ಅಬ್ಬಾ, ಅದೆಂತಾ ಪವರ್ ಇದ್ದಿರಬಹುದು?

’ಲೋ, ಸುಮ್ನಿರಯ್ಯಾ. ನಮ್ಮ್ ದೇವೇಗೌಡ್ರು ಮುಖ್ಯಮಂತ್ರಿ ಆದ ದಿನ ಇದಕ್ಕಿಂತ ಹೆಚ್ಚು ಜನಗಳನ್ನ ಸೇರಿಸಿರ್‌ಲಿಲ್ವಾ? ದಾವಣಗೆರೇಲಿ ಬಂಗಾರಪ್ಪ ಒಂದೇ ಸಮಾವೇಶಕ್ಕೆ ಹತ್ತು ಲಕ್ಷ ಜನ ಸೇರ್ಸಿದ್ ಮುಂದೆ ಅಮೇರಿಕದ ಮಿಲಿಯನ್ನು ಯಾವ ಲೆಕ್ಕ?’ ಎಂದು ಎಲ್ಲಿಂದಲೋ ಯಾವ್ದೋ ಧ್ವನಿ ಕೇಳಿದ ಹಾಗಾಯ್ತು, ಒಡನೇ ಸುಬ್ಬನ ಕಾಲ್ ಸ್ಪೀಕರ್ ಫೋನಿನಲ್ಲಿ ಬಂದ ಅನುಭವ, ಆದ್ರೆ ಇವೆಲ್ಲ ನನ್ನ ಭ್ರಮೆ ಅಂದ್‌ಕೊಂಡು ಮುಂದೆ ಯೋಚಿಸ್ತಾ ಹೋದೆ. ಆ ಪಾಟಿ ಜನ ವೋಟ್ ಹಾಕಿದ್ರಂತಲ್ಲ ಈ ಸರ್ತಿ, ಪಾಪ ಕರಿಯ ಮೇಲ್ ಬಂದವನೇ, ಮೊದಲ್ನೇ ಸರ್ತಿ ದಾಖಲೆ ನಿರ್ಮಿಸ್ಲಿ ಅಂತ ಇದ್ದಿರಬಹುದೋ ಏನೋ.

’ಯಾರ್ ಪ್ರೆಸಿಡೆಂಟ್ ಆದ್ರೆ ನಮಗೇನ್ ಸ್ವಾಮೀ? ದುಡಿಯೋ ಹೆಸರಿಗೆ ಬಂದ ಬಡ್ಡೀ ಹೈಕ್ಳು ನಾವು, ಅದೇ ನಮ್ ಕಾಯ್ಕ ನೋಡಿ!’ ಅಂತ ಮತ್ತೊಂದು ಧ್ವನಿ ಕೇಳಿಸ್ತು, ಈ ಸರ್ತಿ ನಿಜವಾಗ್ಲೂ ಯಾರೋ ನನ್ನ ತಲೆ ಒಳಗೆ ಸೇರಿಕೊಂಡು ನುಡಿದ ಅನುಭವ.

ಜನಗಳು ಅಂದ್ಕೊಂಡವರೆ, ಪ್ರೆಸಿಡೆಂಟ್ ಬದಲಾದ ಕೂಡ್ಲೆ ಎಲ್ಲವೂ ದಿಢೀರನೆ ಬದಲಾಗುತ್ತೆ ಅಂತ. ಡಿಸೆಂಬರ್ ಮುವತ್ತೊಂದರಿಂದ ಜನವರಿ ಒಂದರೊಳಗೆ ಏನೂ ಬದಲಾಗೋದಿಲ್ಲ, ಕ್ಯಾಲೆಂಡರ್ ಒಂದನ್ನು ಬಿಟ್ಟು. (ಅದೇ ಚೈತ್ರ ಮಾಸ ಶುರುವಾಗಲಿ ನೋಡಿ ಬೇಕಾದಷ್ಟು ಬದಲಾವಣೆಗಳು ನಿಮಗೆ ಅರಿವಿಗೆ ಬಂದೋ ಬರದೆಯೋ ನಡೆದೇ ಇರತ್ತೆ.)

ಸಾವಿರಾರು ಜನಗಳು ಕೆಲ್ಸ ಕಳೆದುಕೊಂಡ್ರು. ಭಾರತದಲ್ಲಿ ನಂಬರ್ ಮೂರನೇ ಕಂಪನಿಯ ಗುರುವಾಗಿದ್ದವರು ಶಾಪವಾದವರು. ಒಂದು ಕಾಲದಲ್ಲಿ ಯಶಸ್ಸಿನ ಉತ್ತುಂಗವನ್ನು ಮೆರೆದವರು ಇಂದು ಇತಿಹಾಸವಾಗಿ ಹೋದರು. ಎಂಟು ವರ್ಷ ಆಳ್ವಿಕೆ ಮಾಡಿ ಹೊರಗೆ ಹೋದ ಬುಷ್ ಸರ್ಕಾರದ ಲೆಕ್ಕಾಚಾರವನ್ನು ಯಾರೂ ಯಾಕೆ ಮಾಡುತ್ತಿಲ್ಲ? ಅಂದು ಹಾಗೆ ಮಾಡುತ್ತೇವೆ ಹೀಗೆ ಮಾಡುತ್ತೇವೆ ಎಂದು ಕೊಚ್ಚಿಕೊಂಡದ್ದರ ಲೆಕ್ಕವನ್ನು ಯಾರೂ ಯಾಕೆ ಕೇಳುತ್ತಿಲ್ಲ?

ಇನ್ನೇನು ಜನವರಿ ಮುಗಿಯುತ್ತಾ ಬಂದರೂ ಆರ್ಥಿಕ ಸ್ಥಿತಿಗತಿಯಲ್ಲಿ ವ್ಯತ್ಯಾಸವೇನೂ ಆಗಿಲ್ಲ. ಈಗ ಬಂದು ಹಾಗೆ ಹೋಗೋ ೨೦೦೯ ಇಸ್ವಿ ೨೦೦೮ ಕ್ಕಿಂತ ಕೆಟ್ಟದಾಗಿರುತ್ತೆ ನೋಡ್ತಾ ಇರಿ, ಅಂತ ಎಷ್ಟೋ ಜನ ಈಗಾಗ್ಲೇ ಹೆದರ್ಸಿರೋದ್ರಿಂದ್ಲೇ ಬಹಳಷ್ಟು ಜನ ಕನ್ಸರ್‌ವೇಟೀವ್ ಆಗಿ ಆಲೋಚಿಸ್ತಾ ಇರೋದು. ನೋಡೋಣ ಇನ್ನೇನು ಕಾದಿದೆ ಈ ವರ್ಷ ಅಂತ.

Sunday, October 05, 2008

ಜಾಗೃತಿ ಆರ್ಯಾವತಿ ಹಾಗೂ ನಮ್ಮತನ

’ಏಕೆ ನಿನ್ನ ಹೆಸರನ್ನು J J ಅಂತ ಬದಲಾಯಿಸಿಕೊಂಡಿದ್ದೀಯಾ?’ ಎಂದು ಇಂದು ವಾಲ್‌ಮಾರ್ಟಿನಲ್ಲಿ ಕೆಲಸ ಮಾಡುತ್ತಿದ್ದ ಹೆಂಗಸೊಬ್ಬಳನ್ನು ಕೇಳಿದೆ. ಭಾರತೀಯ ಮೂಲದ ಆಕೆ ಅಪರೂಪಕ್ಕೊಮ್ಮೆ ನಾನು ಶಾಪ್ಪಿಂಗ್ ಹೋದಾಗಲೆಲ್ಲ ಸಿಕ್ಕು ಮುಖ ಪರಿಚಯವಿದ್ದಂತೆ ’ನಾವು ಭಾರತೀಯರು’ ಎನ್ನುವ ಸಂಬಂಧವೂ ನಮಗೆ ಹೇಳದ ಹಾಗೆ ಬೆಳೆದು ಬಂದಿದೆ. ಆಕೆಯ ನೇಮ್ ಟ್ಯಾಗ್‌ನಲ್ಲಿದ್ದದ್ದು ’ಜಾಗೃತಿ’ ಎಂಬುದಾಗಿ, ಇಂದು ಅದರ ಮೇಲೆ ಮತ್ತೊಂದು ಹೊಸ ಹೆಸರಿನ ಟ್ಯಾಗ್ ಮುದ್ರಿಸಿಕೊಂಡು ಜೆಜೆ ಎಂದು ಓಡಾಡಿಕೊಂಡಿದ್ದಾಳೆ.

’ಏನಾಯ್ತು?’ ಎಂದರೆ ಆಕೆ ’ಅವರಿಗೆಲ್ಲ ನನ್ನ ಹೆಸರನ್ನು ಉಚ್ಛರಿಸುವುದಕ್ಕೆ ಕಷ್ಟವಾಗುತ್ತಿತ್ತು, ಅದಕ್ಕೇ ಈ ಹೆಸರು ಕೊಟ್ಟಿದ್ದಾರೆ...’
ನಾನು ಆಕೆಯ ಮಾತನ್ನು ಮಧ್ಯದಲ್ಲಿ ತುಂಡು ಮಾಡಿ ಕೇಳಿದೆ, ’ಜಾಗೃತಿ ಅನ್ನೋ ಪದ ಕಷ್ಟವೇ? ನೀನು ಹಾಗೆ ಆಗೋದಿಲ್ಲ ಎನ್ನಬೇಕಿತ್ತು...’ ಎನ್ನುವಾಗ, ಆಕೆ ಚಿಕ್ಕ ಮುಖ ಮಾಡಿಕೊಂಡು ಹೇಳಿದಳು, ’ಪುಸ್ತಕದಲ್ಲೆಲ್ಲಾ ಜಾಗೃತಿ ಅಂತಲೇ ಇದೆ, ಆದರೆ ಕರೆಯುವುದಕ್ಕೆ ಈ ಹೆಸರನ್ನು ಕೊಟ್ಟರು ನಾನೇನು ಹೇಳಲಿಲ್ಲ’.

ನಮ್ಮ ಒಂದು ನಿಮಿಷದ ಭೇಟಿಯಲ್ಲಿ ನಾನೇನೂ ಹೆಚ್ಚು ಮಾತು ಬೆಳೆಸಲಿಲ್ಲ, ಬದಲಿಗೆ ’ಮತ್ತೆ ಹೇಳಿ ನೋಡಿ, ಜಾಗೃತಿ ಅನ್ನೋ ಹೆಸರು ನಿಜವಾಗಿಯೂ ಚೆನ್ನಾಗಿದೆ, ಜೊತೆಗೆ ಅಮೇರಿಕನ್ನರಿಗೆ ಹೇಳುವುದಕ್ಕೆ ಅಷ್ಟೊಂದು ಕಷ್ಟವಾದುದೇನೂ ಅಲ್ಲ’ ಎಂದು ಹೇಳಿ ನನ್ನ ದಾರಿ ಹಿಡಿದೆ.

ನನ್ನ ಈ ಹೆಸರಿನ ಉಚ್ಛಾರಕ್ಕೆ ಪುಷ್ಟಿಕೊಡುವ ಹಾಗೆ ಆಗಷ್ಟೇ ಲೈಬ್ರರಿಯಲ್ಲಿ ಬಾರೋ ಮಾಡಿದ ಸಿಎನ್‌ಎನ್ ನ ಆಂಡರ್‌ಸನ್ ಕೂಪರ್ (Anderson Cooper) ನ ಟಿಪ್ಪಣಿಗಳ ಆಡಿಯೋ ಸಿಡಿ ಕಾರಿನಲ್ಲಿ ನಡೆಯುತ್ತಿತ್ತು, ಅದರಲ್ಲಿ ಆತ ಶ್ರೀಲಂಕಾದಲ್ಲಿ ಸುನಾಮಿಯ ಅನುಭವಗಳನ್ನು ದಾಖಲು ಮಾಡಿದ ಬಗ್ಗೆ ಓದುತ್ತಾ ಹೋಗುತ್ತಿದ್ದಾಗ ಅಲ್ಲಿ ಸುನಾಮಿಯ ತರುವಾಯ ಆಕ್ಸಿಡೆಂಟ್‌ಗೆ ಒಳಗಾದ ರೈಲಿನ ಅವಶೇಷವೊಂದನ್ನು ವಿವರಿಸುತ್ತಾ ಆರ್ಯವಾಟಿಯ ಕಣ್ಣೆದುರೇ ಆಕೆಯ ಮಗ ಹಾಗೂ ಅಮ್ಮ ಕಾಣೆಯಾದುದರ ಬಗ್ಗೆ ವಿವರಿಸುವ ಒಂದು ಪ್ಯಾರಾಗ್ರಾಫ್ ಬಂತು. ಆರ್ಯ...ವಾಟಿ...ಯ ಬಗ್ಗೆ ಮತ್ತಷ್ಟು ಚಿಂತಿಸಲಾಗಿ ಅದು ಆರ್ಯಾವತಿ ಇದ್ದಿರಬಹುದೇನೋ ಅನ್ನೋ ಕಲ್ಪನೆ ಮೂಡಿಬಂತು. Mom Yes, Son No...ಎಂದು ಹೇಳುತ್ತಾ ಇಬ್ಬರನ್ನೂ ಕಳೆದುಕೊಂಡು ಒಬ್ಬರ ಕಳೇಬರವನ್ನಷ್ಟೇ ಕಳೆದುಕೊಂಡ ದುಃಖದಲ್ಲಿದ್ದ ಆರ್ಯಾವತಿಯ ಪ್ರೈಯಾರಿಟಿಗಳು ಖಂಡಿತವಾಗಿಯೂ ಬೇರೆಯೇ ಇದ್ದಿರುತ್ತವೆ. ಆಂಡರ್‍ಸನ್ ಕೂಪರ್ ಎನ್ನುವ ರಿಪೋರ್ಟರ್ ತನ್ನ ಹೆಸರನ್ನು ಒಂದು ದಿನ ಹೀಗೆ ಬಳಸಿಕೊಳ್ಳುತ್ತಾನೆ ಎನ್ನುವ ಕಲ್ಪನೆಯೂ ಆಕೆಗೆ ಇರಲಿಕ್ಕಿಲ್ಲ.

***

ನಮಗೆ ನಮ್ಮತನ ನಮ್ಮದರಲ್ಲಿ ಏನೋ ಕೊರತೆ ಇದೆ. ಆ ಕೊರತೆ ನಮಗೆ ಕೀಳು ಮನೋಭಾವನೆಯನ್ನು ತಂದುಕೊಟ್ಟಿದೆ. ಜಾಗೃತಿಯ ಹೆಸರನ್ನು ಇದ್ದ ಹಾಗೆ ಹೇಳುವಷ್ಟು ನಾಲಿಗೆ ತಿರುಗಿಸುವುದಕ್ಕೆ ಆಕೆಯ ವಾಲ್‌ಮಾರ್ಟ್ ಸಹೋದ್ಯೋಗಿಗಳು ಕಷ್ಟಪಡಬೇಕಾಗಿಲ್ಲ, ಆಕೆಯೇ ಬದಲಾಗಿದ್ದಾಳೆ. ವಿಶ್ವದ ದೊಡ್ಡ ಕಾರ್ಪೋರೇಟ್ ವ್ಯವಸ್ಥೆಯ ಮುಂದೆ ಘಂಟೆಗೆ ಇಂತಿಷ್ಟು ಎಂದು ಕೆಲಸ ಮಾಡುವ ಆಕ್ರಂದನವೆಲ್ಲಿ ನಡೆದೀತು? ಇದರಲ್ಲಿ ಘಂಟೆಗೆ ಇಂತಿಷ್ಟು ಕೆಲಸ ಮಾಡುವ ಮಿತಿಯಾಗಲೀ ನಮ್ಮ ಪದವಿ ಹುದ್ದೆಗಳ್ಯಾವುವೂ ಲೆಕ್ಕಕ್ಕೆ ಬಾರದವು. ನಾನು ’ಹೊಸನಗರ’ ಎಂದು ಅಮೇರಿಕನ್ನರಿಗೆ ಹೇಳುವಲ್ಲಿ ನನ್ನ ಉಚ್ಛಾರಣೆಯಲ್ಲಿ ಏನನ್ನಾದರೂ ಬದಲಾಯಿಸಿಕೊಳ್ಳುತ್ತೇನೆಯೇ? ಏಕೆ?

ನಿನ್ನೆ ನಮ್ಮ ಮನೆಯಿಂದ ಅರವತ್ತು ಮೈಲು ದೂರದಲ್ಲಿರೋ ನ್ಯೂ ಯಾರ್ಕ್ ನಗರದ ಎಂಪೈರ್ ಸ್ಟೇಟ್ ಬಿಲ್ಡಿಂಗ್ ಅನ್ನು ನೋಡಿಕೊಂಡು ಬರಲು ನಮ್ಮ ಮನೆಯವರೊಂದಿಗೆ ಹೋಗಿದ್ದೆ. ಅಲ್ಲಿ ಹೆಚ್ಚು ಜನ ಬರೋ ಪ್ರವಾಸಿಗರಿಗೆ ಆಡಿಯೋ ಉಪಕರಣವನ್ನು ಕೊಡುತ್ತಿದ್ದವ ನೀವು ಯಾವ ದೇಶದವರು ಎಂದು ಔಪಚಾರಿಕವಾಗೇ ಮಾತನಾಡುತ್ತಾ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳುತ್ತಿದ್ದ. ಇದೇ ಕಟ್ಟದ ಪಕ್ಕದಲ್ಲೇ ದಿನವೂ ನಡೆದುಕೊಂಡು ಹೋಗಿ ಸುಮಾರು ನಾಲ್ಕು ವರ್ಷ ಕೆಲಸ ಮಾಡಿದ್ದೇನೆ ಎನ್ನುವ ಕನ್ಸೆಷನ್ನ್ ಕೂಡಾ ಇಲ್ಲದೇ ’ನೀವು ಭಾರತೀಯರು!’ ಎಂದು ಅವನೇ ಎಲ್ಲರಿಗೂ ಕೇಳುವಂತೆ ಗಟ್ಟಿಯಾಗಿ ಹೇಳಿದ. ಅವನ ಕಣ್ಣೆದುರಿನಲ್ಲಿ ನಾನು ಭಾರತೀಯನೇ, ಇಂದಿಗೂ ಎಂದಿಗೂ. ನಾನು ಕುಡಿದ ಅದೆಷ್ಟೋ ಸ್ಟಾರ್‌ಬಕ್ಸ್ ಕಾಫಿಯ ಗತ್ತು, ನಾನು ಓದಿದ ಅದೆಷ್ಟೋ ವಾಲ್ ಸ್ಟ್ರೀಟ್ ಜರ್ನಲ್ಲ್‌ನ ಕಿಮ್ಮತ್ತು, ನಾನು ಟ್ರೇನಿನಲ್ಲಿ ಮುಖದ ಮೇಲೆ ಆಗಾಗ್ಗೆ ಸೃಷ್ಟಿಸಿಕೊಂಡ ಹುಸಿಗಾಂಭೀರ್ಯದ ಚಹರೆ ಹಾಗೂ ಅದರ ಹಿಂದಿನ ಮೆದು ಧ್ವನಿ, ಇಲ್ಲಿ ಎಲ್ಲರಂತೆ ನಾನೂ ಟ್ಯಾಕ್ಸ್ ಕೊಟ್ಟು ಅನುಭವಿಸುವ ಹಸಿರು ಕಾರ್ಡಿನ ವೈಭವದ ದ್ವಂದ್ವ ಇವೆಲ್ಲವನ್ನೂ ಎಂಭತ್ತನೇ ಮಹಡಿಯಿಂದ ಎತ್ತಿ ಹಲವಾರು ಆಶಾವಾದಗಳೆನ್ನುವ ತರಗೆಲೆಗಳನ್ನು ಅದೆಲ್ಲಿಂದಲೋ ಸುತ್ತಿ ಸುಳಿದು ತರುತ್ತಿದ್ದ ಗಾಳಿಗೆ ಎಸೆದ ಹಾಗಾಯಿತು.

’ಹೌದು, ನಾನು ಭಾರತೀಯನೇ!’ ಅಷ್ಟೇ ಗಟ್ಟಿಯಾಗಿ ಹೇಳಿದೆ. ’ಬೇಕಾಗಿಲ್ಲ ನಿಮ್ಮ ಪರಂಪರೆಯನ್ನು ಸಾರಿ ಹೇಳುವ ಕಿವಿ ಮಾತು (ಆಡಿಯೋ ಯಂತ್ರ), ಅದರ ಬಗ್ಗೆಯೂ ಸಾಕಷ್ಟು ಬಲ್ಲೆ’ ಎಂದು ಹೇಳಿದವನೇ ಬಿರುಬಿರನೆ ನಡೆದು ಮುಂದೆ ಹೋದೆ. ಭೂಮಿಗೂ ಆಕಾಶಕ್ಕೂ ನಡುವೆ ಸಂಪರ್ಕ ಏರ್ಪಡಿಸುವಂತೆ ಬೆಳೆಸಿದ ಕಟ್ಟಡವನ್ನು ಅದೆಲ್ಲೆಲ್ಲಿಂದಲೋ ಬಂದು ಹತ್ತೊಂಭತ್ತು ಡಾಲರ್ರನ್ನು ಕೊಟ್ಟು ನೋಡುವ ಜನರಿಗೆ ಮೂರು ಡಾಲರಿಗೊಂದರಂತೆ ಆಡಿಯೋ ಉಪಕರಣವನ್ನು ಬಾಡಿಗೆಗೆ ಕೊಡುವ ಮೂರು ಕಾಸಿನವನ ಬಳಿ ನನ್ನದೇನು ಅಹವಾಲು? ನೀನು ಕರಿ ಕಪ್ಪಗಿನವನು, ಮೊದಲು ನಿನ್ನ ಮೂಲ ಹಾಗೂ ಮರ್ಮವನ್ನು ಕೆದಕಿಕೊಂಡು ನೋಡು ಎಂದು ನಮ್ಮೂರಿನಲ್ಲಾಗಿದ್ದರೇ ಗಟ್ಟಿಯಾಗಿ ಹೇಳಿಯೇ ಬಿಡುತ್ತಿದ್ದೆ.

ಎಂಭತ್ತಾರನೇ ಮಹಡಿಯ ಹೊರಗೆ ಮೌನವಿದೆ! ಬೆಳೆದು ಆಕಾಶವನ್ನು ಉಳಿದವರೆಲ್ಲರಿಗಿಂತ ಹೆಚ್ಚು ಮುಟ್ಟಿದ ಗಾಂಭೀರ್ಯತೆ ಇದೆ. ದಿನಕ್ಕೊಂದಿಷ್ಟು ಬೆರಗು ಕಣ್ಣಿನವರನ್ನು ಸಮಾಧಾನಗೊಳಿಸಿದ ಸಾಂತ್ವನ ಮನಸ್ಥಿತಿ ಇದೆ. ಅದೇ ಮುಗಿಲು ಅಲ್ಲಿ ಭಾರತೀಯರು-ಅಮೇರಿಕನ್ನರು ಎಂಬ ಬೇಧ-ಭಾವವಿಲ್ಲ. ಆದರೆ ನೆಲಕ್ಕಿದೆ, ನೆಲದ ಮೇಲೆ ನಿಂತ ನಮಗಿದೆ ನಮ್ಮ ಜೊತೆಗಿನ ಕಟ್ಟಡಕ್ಕೂ ಇದೆ. ಮೇಲೆ ಹಾರಬೇಕೆನ್ನುವ ಕನಸುಗಳಿಗೆ ಯಾವ ಬಂಧನವಿಲ್ಲ, ಅಡ್ಡಿ ಆತಂಕಗಳಿಲ್ಲ; ಕೆಳಗೆ ಬದುಕಬೇಕೆನ್ನುವ ಬದುಕಿಗೆ ಹಲವಾರು ಬಂಧನಗಳಿವೆ, ಹೀಗಿರಬೇಕು ಎನ್ನುವವರಿದ್ದಾರೆ. ಹೀಗಿರುವ ನೆಲ ಮುಗಿಲುಗಳಲ್ಲಿ ನಾನು ಯಾವತ್ತಿದ್ದರೂ ಭಿನ್ನನೇ, ಎಲ್ಲಿದ್ದರೂ ನನ್ನ ಸ್ವಂತಿಕೆ ಎನ್ನುವುದು ಇದ್ದೇ ಇದೆ. ಅದಕ್ಕೇನಾದರೂ ಯಾರಾದರೂ ಅಡ್ಡಿ ಬಂದಾರೆಂದರೆ ಅಲ್ಲಿಂದ ಕಂಬಿ ಕೀಳುವಂತೆ ಪ್ರಚೋದಿಸುವುದು ನನ್ನತನವೇ. ಎಲ್ಲ ಕಡೆಯೂ ಇದ್ದು, ಎಲ್ಲೂ ಇರದಿರುವುದೇ ನಮ್ಮತನ.

Sunday, September 28, 2008

ನಾವು ಮಹಾ ಬುದ್ಧಿವಂತರು ಸಾರ್!

ಸೆಪ್ಟೆಂಬರ್ ಗಾಳಿ ತೇವ ಹಾಗೂ ತಂಪನ್ನು ಅದೆಲ್ಲಿಂದಲೋ ಹೊತ್ತು ತರುತ್ತಿದ್ದಂತೆ ಹೆಚ್ಚು ವಿಡಂಬನೆಗಳನ್ನು ’ಅಂತರಂಗ’ದಲ್ಲಿ ತುಂಬುವಂತೆ ಮಾಡುತ್ತಿದೆ. ಈ ವಿಡಂಬನೆಗಳ ವ್ಯಾಪ್ತಿ (ಕೊರಗು) ನಿಮಗೆ ಗೊತ್ತೇ ಇದೆ, ಈವರೆಗೆ ಬರೆದವುಗಳ ಬೆನ್ನಲ್ಲಿ ಇನ್ನೂ ಒಂದು.

***

ನಾವು ಕನ್ನಡಿಗರು ತುಂಬಾ ಬುದ್ಧಿವಂತರು ಅಂತ ಅನ್ಸಿದ್ದು ಇತ್ತೀಚೆಗಷ್ಟೇ ನೋಡಿ. ನಮ್ ಆಫೀಸಿನಲ್ಲಿ ನನ್ನ ಸಹೋದ್ಯೋಗಿ ಒಬ್ರು ತಮ್ಮ ಮಗಳ ಮಗು, ಅಂದ್ರೆ ಮೊಮ್ಮಗ ಜನಿಸಿದ ಸಂದರ್ಭದಲ್ಲಿ ’ನಾನೂ ಗ್ರ್ಯಾಂಡ್‌ಮದರ್ ಆಗಿಬಿಟ್ಟೆ!’ ಎಂದು ಸಂಭ್ರಮಿಸುತ್ತಿದ್ದರು. ನಾನೂ ಅವರ ಖುಷಿಯಲ್ಲಿ ಪಾಲ್ಗೊಳ್ಳುತ್ತಾ ಅವರು ಯಾವ ವಯಸ್ಸಿಗೆ ’ಅಜ್ಜಿ’ಯಾದರು ಎಂದು ವಿಚಾರಿಸಿದಾಗ ಅವರಿಗೆ ಕೇವಲ ಐವತ್ತೇ ವರ್ಷ ಎಂದು ತಿಳಿದು ಒಮ್ಮೆ ಶಾಕ್ ಆದಂತಾಯಿತು, ಮತ್ತೆ ಕೇಳಿ ತಿಳಿದಾಗ ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ಮಕ್ಕಳಾಗಿದ್ದವೆಂದು ಒಪ್ಪಿಕೊಂಡರು.

ನಿಮ್ ಕಡೆಯೆಲ್ಲ ಹೇಗೋ ಗೊತ್ತಿಲ್ಲ ನಮ್ ಕಡೆ ’ನಾನು ಅಜ್ಜ/ಅಜ್ಜಿ ಯಾದೆ’ ಎಂದು ಸಲೀಸಾಗಿ ಒಪ್ಪಿಕೊಳ್ಳೋದಿಲ್ಲ ಜನ. ಎಷ್ಟೋ ಅಜ್ಜಿಯಂದಿರು ತಮ್ಮ ಮೊಮ್ಮಕ್ಕಳಿಂದ ’ದೊಡ್ಡಮ್ಮ’ ’ಅಮ್ಮಮ್ಮ’ ಎಂದು ಕರೆಸಿಕೊಳ್ಳೋದು ಪ್ರತೀತಿ.

’ಅಲ್ರೀ, ಬುದ್ಧಿವಂತ ಕನ್ನಡಿಗರಿಗೂ ನಿಮ್ಮ ಆಫೀಸ್ನಲ್ಲಿ ಯಾರೋ (ಚಿಕ್ಕ ವಯಸ್ಸಿನಲ್ಲಿ) ಅಜ್ಜಿಯಾಗಿರೋದಕ್ಕೂ ಏನ್ರೀ ಸಂಬಂಧ?’ ಅಂತ ನೀವ್ ಕೇಳ್ತೀರಿ ಅಂತ ನನಗೂ ಗೊತ್ತು. ಸ್ವಲ್ಪ ತಡೀರಿ.

ಎರಡು ವಾರದ ಹಿಂದೆ ಕನ್ನಡ ಸಂಘದ ಸಮಾರಂಭವೊಂದರಲ್ಲಿ ಯಾರೋ ಪರಿಚಯಸ್ಥರು, ’ಏನ್ಸಾರ್, ನಮ್ಮ್ ಕನ್ನಡಿಗರ ಜಾಯಮಾನ - ಮದುವೆಯಾಗಿ ಮಕ್ಕಳು ಆಗೋ ಹೊತ್ತಿಗೆಲ್ಲಾ ಸುಮಾರು ಜನಕ್ಕೆ ನಲವತ್ತು ತುಂಬಿರುತ್ತೆ ನೋಡಿ!’ ಎಂದು ನಾವೆಲ್ಲ ಮನೆ-ಮಠ-ಮಕ್ಕಳು ಎಂದು ಮಾತನಾಡುತ್ತಿದ್ದಾಗ ಹೇಳಿಕೊಂಡರು. ಅದು ನಿಜವಾದ ಅಬ್ಸರ್‌ವೇಷನ್ ಅನ್ನಿಸುವಲ್ಲಿ ನನ್ನ ಹಿಂದಿನ ಸಹೋದ್ಯೋಗಿ ಹೇಳಿದ ಮಾತುಗಳು ನೆನಪಿಗೆ ಬಂದವು. ಅವನು ಆಂಧ್ರಪ್ರದೇಶದವನಾದರೂ ದಾವಣಗೆರೆಯಲ್ಲಿ ಓದಿದವನು, ಅವರ ಮೇಷ್ಟ್ರು ಒಬ್ಬರಿಗೆ ನಲವತ್ತರ ಸಮೀಪ ಮದುವೆಯಾದದ್ದನ್ನು ನೋಡಿ ಅವರೆಲ್ಲ ತಮಾಷೆ ಮಾಡಿಕೊಳ್ಳುತ್ತಿದ್ದರಂತೆ - ಅವನ ’ಯಾಕೆ, ಕನ್ನಡ ಜನ ತಡವಾಗಿ ಮದುವೆಯಾಗೋದು?’ ಅನ್ನೋ ಪ್ರಶ್ನೆಗೆ ಏನು ಉತ್ತರ ಕೊಟ್ಟಿದ್ದೆ ಅಂತ್ಲೇ ನನಗೆ ಇಂದು ನೆನಪಿಲ್ಲ! ನನಗಿನ್ನೂ ಮದುವೆಯಾಗೇ ಇರದಿದ್ದ ಹೊತ್ತಿಗೆ ಅವನಿಗೆ ನಾಲ್ಕಾರು ವರ್ಷದ ಎರಡು ಮಕ್ಕಳಿದ್ದುದೂ ನಿಜ.

ಈಗ ನಿಮಗೇ ಅನ್ಸಲ್ವೇ? ಮುವತ್ತರ ಹೊತ್ತಿಗೆ ಮದುವೆಯಾಗಿ ನಂತರ ಮಕ್ಕಳಾದ ಮೇಲೆ ಐವತ್ತು ವರ್ಷಕ್ಕೆಲ್ಲ ನಾವು ಅಜ್ಜ/ಅಜ್ಜಿಯರಾಗೋದು ಕಷ್ಟಸಾಧ್ಯವಲ್ಲವೇ? ಆದ್ದರಿಂದಲೇ ಹೇಳಿದ್ದು ಕನ್ನಡಿಗರು ಬುದ್ಧಿವಂತರೆಂದು.

***

ಕನ್ನಡಿಗರು ಮಹಾ ಬುದ್ಧಿವಂತರು ಅನ್ನೋದಕ್ಕೆ ಹೀಗೇ ಹುಡುಕ್ತಾ ಹೋದ್ರೆ ಬೇಕಾದಷ್ಟು ಸಮಜಾಯಿಷಿ ಸಿಗುತ್ತೆ:
- ಈ ಮನುಕುಲದಲ್ಲಿ ಇದ್ದ ಇರದಿದ್ದ ಜಾತಿಯ ವ್ಯಾಪ್ತಿಗೆ ಕನ್ನಡಿಗರ ಕಾಂಟ್ರಿಬ್ಯೂಷನ್ನೇ ಹೆಚ್ಚು ಅಂತ ನನ್ನ ಅಭಿಪ್ರಾಯ. ಗೌಡ್ರು, ಲಿಂಗಾಯ್ತ್ರು, ಕುರುಬ್ರು... ಮುಂತಾದ ಅನೇಕ ಅನೇಕ ಜಾತಿಗಳು ನಮ್ಮಲ್ಲೇ ಇದಾವೇ ಅಂತ ನನ್ನ ನಂಬಿಕೆ. ಅವೆಲ್ಲಿಂದ ಬಂದ್ವೋ ಹೇಗೋ ಅಂತ ಗೊತ್ತಿಲ್ದೇ ಹೋದ್ರೂ ನಮ್ಮಲ್ಲಿ ಉತ್ತರ ಭಾರತದ ಹಾಗೆ ಸರ್‌ನೇಮ್ ಬಳಸ್ದೇ ಹೋದ್ರೂ ನಮ್ ಜನಗಳಿಗೆ ಯಾರು ಯಾರು ಯಾವ ಜಾತಿ ಅಂತ ಅದೆಷ್ಟು ಬೇಗ ಗೊತ್ತಾಗುತ್ತೇ ಅಂದ್ರೆ? ನೀವು ಯಾವ್ದೇ ಆರ್ಟಿಕಲ್ಲ್ ಬರೀರಿ, ಬುಕ್ ಬರೀರಿ, ಕಾಮೆಂಟ್ ಹೇಳಿ, ನಿಮ್ ಅಭಿಪ್ರಾಯ ತಿಳಿಸಿ ಇವೆಲ್ಲವನ್ನೂ ಜಾತಿಯ ಮಸೂರದಲ್ಲಿ ನೋಡೋ ವ್ಯವಸ್ಥೆ ಇದೇ ಅಂತ ನಿಮಗ್ಗೊತ್ತಾ? ಹೀಗೆ ಇದ್ದ ಮನುಕುಲದ ಜಾತಿ-ಮತಗಳಿಗೆ ಮತ್ತಿನ್ನಷ್ಟು ಕಾಂಟ್ರಿಬ್ಯೂಷನ್ನ್ ಮಾಡಿಕೊಂಡು ಎರಡು ಸಾವಿರದ ಎಂಟು ಬಂದ್ರೂ ಇನ್ನೂ ಚಿಟುಕೆ ಹೊಡೆಯುವುದರಲ್ಲಿ ಚಮ್ಮಾರ-ಕಂಬಾರ-ಕುಂಬಾರ ರನ್ನು ಗುರುತಿಸುವ ಚಾಕಚಕ್ಯತೆ ಇರೋ ನಾವು ಮಹಾ ಬುದ್ಧಿವಂತರಲ್ವೇನು?

- ನಮಗೆ ನಮ್ದೇ ಊಟ-ತಿಂಡಿ ಅಂತ ಬೇರೆ ಇರುತ್ತೇನ್ರಿ? ಬಿಸಿ ಬೇಳೆ ಬಾತ್ ಅಂತೀವಿ, ಅದಕ್ಕೊಂದಿಷ್ಟು ಮರಾಠಿ ಟಚ್ ಕೊಡ್ತೀವಿ. ಚಪಾತಿ ಅಂತ ಮಾಡ್ತೀವಿ, ಇತ್ಲಾಗ್ ನಾರ್ತೂ ಅಲ್ಲ ಸೌತೂ ಅಲ್ಲ ಅನ್ನಂಗಿರುತ್ತೆ. ಪುಳಿಯೊಗರೆ ಅಂತ ಹಳೆಗನ್ನಡಕ್ಕೆ ಜೋತು ಬೀಳ್ತೀವೋ ಅಂತ ಕೊಂಚ ತಮಿಳನ್ನೂ ಸೇರುಸ್ತೀವೋ? ಕನ್ನಡಿಗರ ಸಮಾರಂಭ ಅಂತ ಯಾರೋ ಬೇಡೇಕರ್ ಉಪ್ಪಿನಕಾಯಿ ಇಟ್ಟಿದ್ರಂತೆ ಹಾಗಾಯ್ತು! ಹೋಳಿಗೆ-ಒಬ್ಬಟ್ಟು ಅವು ಪಕ್ಕಾ ನಮ್ದೇ. ಹೀಗೆ ನಮ್ ಕರ್ನಾಟಕ ಅನ್ನೋದು ಒಂದು ಪ್ರತ್ಯೇಕ ದೇಶವಾಗಿ ಬೆಳೆಯೋಷ್ಟು ದೊಡ್ಡದಲ್ಲದಿದ್ರೂ ಎಲ್ಲೋ ಒಂದು ಮೂಲೆನಲ್ಲಿ ಚೂರೂಪಾರೂ ಉಳಿಸ್ಕೊಂಡ್ ಬಂದಿದೆ. ಅದಕ್ಕೆ ತಕ್ಕಂತೆ ಇಲ್ಲಿನ ಸೌತ್ ಇಂಡಿಯನ್ ಕೆಫೆಗಳಲ್ಲಿ ಕೆಲಸ ಮಾಡೋ ಹಿಸ್ಪ್ಯಾನಿಕ್ ಅಥವಾ ಆಫ್ರಿಕನ್ ಅಮೇರಿಕನ್ ಕುಕ್‌ಗಳೂ ಬೆಳೆದು ಬಂದಿದಾರೆ ಬಿಡಿ. ಯಾವ ಸೌತ್ ಇಂಡಿಯನ್-ನಾರ್ತ್ ಇಂಡಿಯನ್ ಪ್ರೋಗ್ರಾಮಿಗೂ ಅವ್ರೇ ಕೆಲವೊಮ್ಮೆ ಅಡುಗೆ ಮಾಡೋದು. ಅಂತಾ ಇಂಟರ್‌ನ್ಯಾಷನಲ್ ಅಡುಗೆ ವಿಷಯಕ್ಕೆ ಸೌತೂ-ನಾರ್ತೂ ಅಂತ ಲಿಮಿಟ್ ಹಾಕಕ್ಕ್ ಆಗುತ್ಯೇ, ಛೇ! ಹೀಗೆ ದೇಶದಿಂದ ದೇಶಕ್ಕೆ ಬಂದ ಕ್ಯುಲಿನರಿ ಪರ್‌ಫೆಕ್ಷನ್ನ್ ಅನ್ನೋ ಸಂಭ್ರಮಕ್ಕೆ ಇಲ್ಲಿನ ಪಟೇಲ್ ಬ್ರದರ್ಸ್ ತರಕಾರಿ ಹಾಗೂ ಸಾಮಗ್ರಿಗಳನ್ನ ಬೆರೆಸಿ ಇಲ್ಲಿಯ ’ಉಡುಪಿ ಬ್ರಾಹ್ಮಣರ ಫಲಹಾರ ಮಂದಿರ’ಗಳಲ್ಲಿ ಅದೆಲ್ಲಿಂದ್ಲೋ ಬರೋ (ಒಂಥರಾ ಸ್ಮೆಲ್ಲಿರೋ) ಗ್ಯಾಸ್ ಒಲೆಯ ಮೇಲೆ ಬೇಯಿಸಿ ಅಲ್ಯುಮಿನಮ್ ಕಂಟೇನರುಗಳಲ್ಲಿ ಮುಚ್ಚಿ ಇನ್ನೂ ಬಿಸಿಬಿಸಿಯಾಗಿಯೇ ಇರೋದನ್ನ ತಂದು ಬಡಿಸಿದ್ದನ್ನ ಬಾಯಿ ಬಡಬಡಿಸದೇ ಹಪಾಹಪಿಗಳಾಗಿ ತಿಂದ್ರೆ ಅನ್ನಕ್ಕೇ ಅವಮಾನ ಅಲ್ವೇನು? ಅದ್ಕೇ ನಾವು ಊಟ-ತಿಂಡಿ ವಿಷಯದಲ್ಲಿ ಅಷ್ಟು ಶಿಸ್ತು ಹಾಗೂ ಕಟ್ಟು ನಿಟ್ಟು.

ವಾರಾಂತ್ಯದ ದಿನಗಳಲ್ಲಿ ಅದೇ ಮುರುಕುಲು ಬ್ರೆಡ್ಡಿನ ಚೂರುಗಳನ್ನು ತಳದಲ್ಲಿ ಯಾವಾಗ್ಲೂ ಸುಡ್ತಾ ಇರೋ ಬ್ರೆಡ್ಡು ಟೋಸ್ಟರಿಗೆ ಇನ್ನೊಂದು ಸ್ಲೈಸು ಬ್ರೆಡ್ಡ್ ಹಾಕಿಕೊಂಡು ಗರಮ್ ಮಾಡಿಕೊಂಡು ಅದಕ್ಕೆ ಮ್ಯಾಗೀ ಹಾಟ್ ಅಂಡ್ ಸ್ವೀಟ್ ಚಿಲ್ಲೀ ಸಾಸ್ (what's the difference!) ಹಾಕಿಕೊಂಡು ಮುಕ್ಕೋ ನಮಗೆ ಯಾರೋ ಒಂದಿಷ್ಟು ಉಸುಳಿ, ಉಪ್ಪಿಟ್ಟು, ಕೇಸರಿ ಬಾತ್, ಅವಲಕ್ಕಿ, ಇಡ್ಲಿ, ವಡೆಗಳ ರುಚಿ ತೋರಿಸಿದ್ರೆ ಸಾಕು ನಮ್ಮ ಜಾಯಮಾನವೇ ನಮ್ಮ ಮೂಗಿನ ತುದಿಗೆ ಬಂದು ಅದರಲ್ಲಿ ತಪ್ಪು ಹುಡುಕುತ್ತೆ!

ಹೀಗೆ ಅಮೇರಿಕದಿಂದ ಕರ್ನಾಟಕಕ್ಕೆ (and back) ಕೇವಲ ಒಂದು ನ್ಯಾನೋ ಸೆಕೆಂಡಿನಲ್ಲಿ ಹರಿದಾಡೋ ನಾವು ಮಹಾ ಬುದ್ಧಿವಂತರಲ್ವೇನು?

- Every other sentence ಇಂಗ್ಲೀಷ್ ಮಾತನಾಡೋ ನಾವು, ’ಹೌದು/ಅಲ್ಲ’ ಅಂತ ಬಾಯಲ್ಲಿ ಬರ್ಗರ್ ಇಟ್ಟುಕೊಂಡ ಹಾಗೆ ಪ್ರೊನೌನ್ಸ್ ಮಾಡೋ ನಮ್ಮ್ ಮಕ್ಳು ಇವುಗಳಿಗೆಲ್ಲ ನಾವು ನಮ್ಮ ಸಂಸ್ಕೃತಿ, ಪರಂಪರೆ ಅಂತ ದೊಡ್ಡ ದೊಡ್ಡದಾಗಿ ಇಂಗ್ಲೀಷ್ ನಲ್ಲಿ ಏನೇನೋ ತಿಳಿ ಹೇಳ್ತೀವಿ ನೋಡಿ. ಯಾವ್ದಾದ್ರೂ ಕನ್ನಡ ಸಂಘದ ಕಾರ್ಯಕ್ರಮ ಇದ್ದಾಗ ಮಾತ್ರ ಜರತಾರಿ ಉಡ್ರಿ ಅಂದ್ರೆ ನಮ್ ಮಕ್ಳು ಹೆಂಗಾದ್ರೂ ಕೇಳ್ತಾವ್ರೀ? ಅದೆಲ್ಲಾ ಏನೂ ಬೇಡ, ವರ್ಷಕ್ಕೊಂದೆರಡು ಕನ್ನಡ ಸಂಘದ ಕಾರ್ಯಕ್ರಮ ನೋಡ್ಕೊಂಡು ಕಂಡೋರಿಗೆಲ್ಲ ನಮಸ್ಕಾರ ಅಂದು ಹಲ್ಲು ಗಿಂಜಿಕೊಂಡು ಏನೋ ದೊಡ್ಡ ಕೆಲ್ಸ ಕಡ್ದಿದೀವಿ ಅಂದುಕೊಳ್ಳೋದು ಶ್ಯಾಣೇತನ ಅಲ್ದೇ ಇನ್ನೇನ್ರಿ? ಕನ್ನಡತನ ಉಳಿಸೋ ನಿಟ್ಟಿನಲ್ಲಿ ನಮ್ಮ ಮಕ್ಳು ಕನ್ನಡ ಮಾತನಾಡ್ತಿದ್ರೂ ಪರವಾಗಿಲ್ಲ ಭರತನಾಟ್ಯ ಕಲಿಯೋದನ್ನ ಬಿಡಬಾರ್ದು ಅನ್ನೋ ಲಿಮಿಟ್ಟಿಗೆ ಬಂದು ಬಿಟ್ಟಿದ್ದೇವೆ, ಅದು ಈ ಶತಮಾನದ ಮಹಾ ಅಚೀವ್‌ಮೆಂಟೇ ಸರಿ.

ಇಂಥವನ್ನೆಲ್ಲ ಹಾಗೂ ಇನ್ನೂ ಅನೇಕಾನೇಕ ಕನ್‌ವೆನ್ಷನ್ನುಗಳನ್ನು ಹುಟ್ಟಿ ಹಾಕಿಕೊಂಡಿರೋ ನಾವು ಕನ್ನಡಿಗರು ಹಾಗೂ ಮಹಾ ಬುದ್ಧಿವಂತರು!

Sunday, July 06, 2008

ಕರಿಹೈದನ ಬರ್ಡನ್ನು

’ಏ, ಸೇರ್ಸಿಕೊಳ್ಳೋಲ್ಲ ಹೋಗೋ’
ಎಂದು ಕಂದು ತಂಡದವರು ಬೈದು ತಳ್ಳಿದಾಗಲೇ ಕರಿಹೈದನಿಗೆ ತಾನು ತನ್ನ ಹಳೆಯ ತಂಡವನ್ನು ಬಿಟ್ಟು ಬಂದು ಪೇಚಿಗೆ ಸಿಕ್ಕಿಕೊಂಡಿದ್ದು ತನ್ನ ಮೇಲೆಯೇ ಅಸಹ್ಯವನ್ನು ಮೂಡಿಸತೊಡಗಿತು.

’ಇಲ್ರೋ ನಾನು ಅದೇನೇನೋ ಹೊಸ ಹೊಸ ವರಸೆಗಳನ್ನ ಕಲಿತಿದೀನಿ, ನನ್ನನ್ನೂ ಆಟಕ್ಕ್ ಸೇರಿಸ್‌ಕೊಂಡು ನೋಡ್ರಿ, ಒಂದು ಚಾನ್ಸ್ ಕೊಡ್ರಿ...’ ಎಂದಿದ್ದನ್ನ ಕಂದು ತಂಡದವರು ಯಾರೂ ಅಷ್ಟೊಂದು ಹಚ್ಚಿಕೊಂಡಂತೆ ಅನ್ನಿಸಲೇ ಇಲ್ಲ, ಜೊತೆಗೆ ಕಂದು ತಂಡದಲ್ಲಿ ಇತ್ತೀಚೆಗೆ ಸೇರಿಸಿಕೊಂಡ ಹೊಸ ಹುರುಪಿನ ಆಟಗಾರರೆಲ್ಲ ಒಳ್ಳೇ ತರಬೇತಿ ಪಡೆದು ಕರಿಹೈದ ಆ ತಂಡವನ್ನು ಬಿಡುವಾಗ ಏನೇನು ಇರಲಿಲ್ಲ ಏನೇನು ಇದ್ದಿದ್ದರೆ ಚೆನ್ನಿತ್ತು ಎಂದು ಹಲಬುತ್ತಿದ್ದನೋ ಅದೆಲ್ಲವೂ ಅಲ್ಲಿ ಮೇಳೈಸಿದಂತಿತ್ತು.

ಯಾವ ಯಾವ ಬಗೆಗಳಿವೆ - ದೈನ್ಯದಿಂದ ಬೇಡಿಕೊಂಡಿದ್ದಾಯಿತು, ಹೊಸ ಉಪಾಯಗಳನ್ನು ಹೇಳಿಕೊಡುತ್ತೇನೆ ಎಂದು ಮೂಗಿನ ಮೇಲೆ ತುಪ್ಪ ಸವರಿದ್ದಾಯಿತು, ಇನ್ನು ಹೆದರಿಸುವುದೊಂದೇ ಬಾಕಿ ಎಂದು ಅನ್ನಿಸಿದ್ದೇ ತಡ, ಕರಿಹೈದ,
’ನೋಡ್ರೋ, ನನ್ನನ್ನೇನಾದ್ರೂ ಆಟಕ್ಕೆ ಸೇರಿಸಿಕೊಳ್ಳದೇ ಹೋದ್ರೆ you don't know what you are missing!' ಎಂದು ಬ್ರಹ್ಮಾಸ್ತ್ರವನ್ನು ಎಸೆದಷ್ಟೇ ಸುಖವಾಗಿ ಕಣ್ಣುಗಳನ್ನು ಇನ್ನೂ ದೊಡ್ಡದಾಗಿ ತೆರೆದು ನಿರೀಕ್ಷೆಯಲ್ಲಿ ಒಂದು ಕ್ಷಣದ ಮೌನವನ್ನು ಸಹಿಸಿಕೊಂಡ.

ಕಂದು ತಂಡದ ಆಟಗಾರರು ಇವನು ಹೇಳಿದ ಮಾತಿಗೆ ಒಂದು ಕ್ಷಣ ಸ್ತಂಭೀಭೂತರಾದರು, ಅವರ ಆಟದ ವರಸೆಗಳು ’ಲಂಡನ್-ಲಂಡನ್’ ಆಟದಲ್ಲಿ ಆಟಗಾರರು ಕಿಂಚಿತ್ತೂ ಅಲುಗಾಡದೇ ನಿಲ್ಲುತ್ತಿದ್ದರಲ್ಲ ಹಾಗಾದರು, ಆದರೆ ಕರಿಹೈದನ ಮೋಡಿಗೆ ಯಾರೂ ಬಿದ್ದಂತೆ ಕಾಣಲಿಲ್ಲ, ಇವನು ಹೇಳಿದ ಮಾತನ್ನು ಕೊಡಗಿಕೊಂಡು ಕಂದು ತಂಡ ಮತ್ತೆ ತಮ್ಮ ತಮ್ಮ ವರಸೆಗಳನ್ನು ಬದಲಾಯಿಸಿ ತಮ್ಮ ತಮ್ಮ ಆಟಗಳಲ್ಲಿ ಲೀನವಾದರು, ಕರಿ ಹೈದನ ಮೌನ ಅವನ ಹೊಟ್ಟೆಯೊಳಗೆ ಕಲಸುತ್ತ ಅದು ಇದ್ದಲ್ಲೇ ಹಸಿವಾದ ಹೊಟ್ಟೆಯಂತೆ ಕುರ್ ಕುರ್ ಸದ್ದು ಮಾಡಿ ಸುಮ್ಮನಾಯಿತು.

ಬಿಳಿತಂಡವನ್ನು ಬಂದು ಸೇರಿ ಅದರಲ್ಲಿದ್ದನ್ನು ಇವನಿಗೆ ತೋಚಿದಷ್ಟು ಅನುಭವಿಸಿ ಈಗ ನಡುನಡುವೆಯೇ ಕೈ ಬಿಟ್ಟು ಹಳೆಯ ಕಂದು ತಂಡವನ್ನು ಸೇರುತ್ತೇನೆ ಎನ್ನುವ ಕರಿಹೈದನ ವರಸೆಯನ್ನು ಅವನ ಸ್ನೇಹಿತರು ಹಗಲೂರಾತ್ರಿ ಆಡಿಕೊಂಡು ನಗುತ್ತಾರೆ. ಆಗಾಗ್ಗೆ, ’ಮುಠ್ಠಾಳ’ ಎಂದು ಗುನಗಾನ ಮಾಡುತ್ತಾರೆ. ’ಇಲ್ಲಿರಲಾರದವನು ಅಲ್ಲಿ ಹೋಗಿ ಮಾಡಿ ಕಡಿಯುವುದೇನು’ ಎಂದು ಛೇಡಿಸುತ್ತಾರೆ. ’ಹಸಿವೋ ಸಮೃದ್ಧಿಯೋ ನಮ್ಮದು ನಮಗೆ ಚೆಂದ’ ಎಂದು ಕರಿಹೈದ ಯಾವುದೋ ಕಾಡಕವಿಯ ಪಂಕ್ತಿಗಳನ್ನು ಅರಹುತ್ತಾ ಇಂದಲ್ಲ ನಾಳೆ ಕಂದು ತಂಡವನ್ನು ಸೇರಿಯೇ ಸೇರೇನು ಎಂದು ಕನಸು ಕಾಣುವುದನ್ನು ಮಾತ್ರ ಬಿಡಲೊಲ್ಲ.

ಕರಿಹೈದ ಮೊದಲು ಕಂದುತಂಡವನ್ನು ಬಿಟ್ಟು ಬಿಳಿತಂಡವನ್ನು ಸೇರಿಕೊಂಡಾಗ ಆತನಿಗೆ ಹೀಗೊಂದು ದಿನ ಬವಣೆಯನ್ನು ಅನುಭವಿಸಬಹುದು ಎಂದೆನಿಸಿರಲಿಲ್ಲ. ಹೀಗೆ ತಂಡಗಳನ್ನು ಬದಲಾಯಿಸಿದವರು ಯಾರೂ ಮತ್ತೆ ಪುನಃ ಪಕ್ಷಾಂತರ ಮಾಡುವುದು ಕಡಿಮೆಯಾದರೂ ಹಾಗೆ ಅಂದಿನ ಲೆಕ್ಕದಲ್ಲಿ ಸಿಕ್ಕ ಹಾಗೆ ಒಳಿತು-ಕೆಡಕುಗಳನ್ನು ಯಾರೂ ವಿವರಿಸಿ ಹೇಳಿದ್ದಂತೂ ಇಲ್ಲ. ಕರಿಹೈದ ಬೇಕಾದಷ್ಟು ತೊಳಲಾಡುತ್ತಾನೆ - ಒಮ್ಮೆ ದ್ರಾಕ್ಷಿ ಸಿಗದ ನರಿಯ ಹಾಗೆ ಆ ಹುಳಿ ದ್ರಾಕ್ಷಿ ಸಿಕ್ಕರೆಷ್ಟು ಬಿಟ್ಟರೆಷ್ಟು ಎಂದು ಹೂಂಕರಿಸುತ್ತಾನೆ, ಮತ್ತೊಮ್ಮೆ ಕಂದು ತಂಡದಲ್ಲಿ ಆಡಿಬೆಳೆದು ಓಡಿಯಾಡಿದ ಹಾಗೆ ನೆನಪಿಸಿಕೊಂಡು ನಾಸ್ಟಾಲ್ಜಿಯಾವನ್ನು ಹೊಗಳುವುದೇ ಬದುಕು ಎಂದುಕೊಳ್ಳುತ್ತಾನೆ.

ಹೆಚ್ಚಾಗಿ ವಿಷಾದ ಆವರಿಸುತ್ತದೆ, ಅದರ ಬೆಳಕಿನ ನೆರಳಿನ ಬೆನ್ನಿಗೆ ಹೊಸ ತತ್ವಗಳು ಮೂಡಿಬರುವಂತೆ ಕಾಣಿಸುತ್ತದೆ - ’ಯಾವ ತಂಡದಲ್ಲಿದ್ದು ಆಡಿದರೇನು, ವಿಶ್ವವೇ ಒಂದು ತಂಡ. ಆ ತಂಡ-ಈ ತಂಡ ಇವೆಲ್ಲ ಬರೀ ಕಾಗದ ಪತ್ರಗಳ ಮೇಲಿನ ಒಡಂಬಡಿಕೆ ಮಾತ್ರ, ಅವರವರ ಹೃದಯದಲ್ಲೇನಿದೆ ಅದು ಮುಖ್ಯ. ಬಿಳಿ ತಂಡದಲ್ಲಿದ್ದುಕೊಂಡೇ ಕಂದು ತಂಡಕ್ಕೆ ಸಪ್ಪೋರ್ಟ್ ಮಾಡಲಾಗದೇನು, ಹೊರಗಿನಿಂದ ಅವರವರ ಬೆಂಬಲವನ್ನು ಯಾರೂ ಸೂಚಿಸಬಹುದಲ್ಲ. ಈ ಆಟಗಳೇ ಹೀಗೆ - ಇದರ ಹಿಂದಿನ ಸಂಸ್ಕೃತಿ, ರಾಜಕೀಯ, ಧರ್ಮ ಇವೆಲ್ಲ ಒಂದೇ ಎಲ್ಲಿದ್ದರೂ ಹೇಗಿದ್ದರೂ!’

ಹೀಗೆ ಹಲವಾರು ತತ್ವಗಳು ಮೈತಳೆತಳೆದು ಅವುಗಳು ತಮ್ಮಷ್ಟಕ್ಕೆ ತಾವು ಒಂದಕ್ಕೊಂದು ತೀಡಿಕೊಂಡು ಕಾಡಿಕೊಂಡು ಗಡುಸಾದ ಕಪ್ಪಗಿನ ಕಲ್ಲಿದ್ದಿಲು ಕೆಂಪಾಗಿ ಬೆಂಕಿಯಾಗಿ ನಿಗಿನಿಗಿ ಕೆಂಡವಾಗಿ ಕೊನೆಗೆ ಹಗುರವಾದ ಬಿಳಿಯ ಬೂದಿಯಾಗುವಲ್ಲಿಯವರೆಗಿನ ರೂಪಾಂತರವನ್ನು ಪಡೆದುಕೊಳ್ಳುತ್ತವೆ. ಅಲ್ಲಲ್ಲಿ ಕಿಡಿಗಳೋ ಅಥವಾ ಬೆಂಕಿ ಇರುವ ತಾವೋ ತಾವಿದ್ದ ಕಡೆ ಮೊದಲು ಸುಡುವಂತೆ ಹೊಸ ತತ್ವಗಳ ಚುರುಕು ಅದೆಷ್ಟರ ಮಟ್ಟಿಗೆ ಏರುತ್ತದೆ ಎಂದರೆ ಪಕ್ಕದಲ್ಲಿನ ಏರ್‌ಕಂಡೀಷನರ್ ಬೀಸುವ ತಂಗಾಳಿಯೂ ತನ್ನ ತಂಪನ್ನು ಈ ಬಿಸಿಯಲ್ಲಿ ಕಳೆದುಕೊಳ್ಳುತ್ತದೆ.

ಕ್ಯಾನ್ಸರ್ ರೋಗಿ ತನ್ನ ಕ್ಯಾನ್ಸರ್ ಅನ್ನು ಒಪ್ಪಿಕೊಂಡು ಸಮಾಧಾನಿಯಾಗುವ ಮೊದಲು ಬೇಕಾದಷ್ಟು ಕಿರಿಚಾಡಿ ಕೂಗಾಡಿ ಅವರಿವರಿಗೆಲ್ಲ ಬೈದು ದೇವರನ್ನೂ ಸೇರಿಸಿಕೊಂಡು ಮತ್ತೆ ಸಂತನ ಮನಸ್ಥಿತಿಯನ್ನು ತಂದುಕೊಳ್ಳುವಂತೆ ಕರಿಹೈದ ಕಂದು ತಂಡದವರನ್ನು ಕುರಿತು ಸಹಸ್ರನಾಮ ಶುರುಮಾಡಿ ಸುಮ್ಮನಾಗುತ್ತಾನೆ:
’ಯಾರಿಗ್ ಬೇಕ್ ಹೋಗಿ ನಿಮ್ಮ ತಂಡದಲ್ಲಿ ಆಡೋ ಭಾಗ್ಯ. ನೀವೋ ನಿಮ್ಮ ಪ್ರಾಸೆಸ್ಸೋ ನಿಮ್ಮ ರೂಲ್ಸ್-ರೆಗ್ಯುಲೇಷನ್ನುಗಳೋ ಎಲ್ಲವೂ ಸಾಯ್ಲಿ! ನನ್ನಂತಹವರ ಯೋಗ್ಯತೆಯನ್ನು ಇವತ್ತಿಗೂ ಕಂಡು ಮಣೆಹಾಕದ ನಿಮ್ಮ ಸಂಸ್ಕೃತಿಗಿಷ್ಟು ಧಿಕ್ಕಾರವಿರಲಿ. ನನ್ನಂತೋರುನ್ನ ಸೇರಿಸಿಕೊಳ್ದೇ ಅದು ಹೆಂಗ್ ಆಡ್ತೀರೋ ಆಡ್ರಿ ನೋಡೇ ಬಿಡ್ತೀನಿ. ನಿಮ್ಮಲ್ಲಿನ ಕೆಟ್ಟ ಪರಂಪರೆಯೇ ಸಾಕು ನಿಮ್ಮವರ ಕಾಲುಗಳನ್ನು ಎಳೆದೆಳೆದು ನೀವಿದ್ದಲ್ಲೇ ನಿಮ್ಮನ್ನು ಕೂರಿಸಲು, ನೀವು ಮುಂದೆ ಬರುವ ಸಾಧ್ಯತೆಯೇ ಇಲ್ಲ - ಎಂದಿಗೂ ಯಾವತ್ತೂ. ಎಲ್ರೂ ಹಾಳಾಗ್ ಹೋಗಿ...’

ಕರಿಹೈದನ ಆಕ್ರಂದನ ಮುಗಿಲು ಮುಟ್ಟುತ್ತೆ. ನಂತರ ಧೀರ್ಘ ಸಮಾಧಾನ ಮೂಡುತ್ತೆ. ಕರಿಹೈದ ಸಂತನಂತೂ ಆಗೋದಿಲ್ಲ, ತನ್ನ ಬಿಳಿತಂಡದವರ ಜೊತೆ ಸರಿಯಾಗಿ ಮನಸಿಟ್ಟು ಆಡಲೊಲ್ಲ, ಹಳೆಯ ಕಂದುತಂಡದವರ ನೆನಪನ್ನು ಬದಿಗಿಟ್ಟು ಮುಂದಿನ ದಾರಿಯನ್ನು ಮಾತ್ರ ನೋಡೋದಿಲ್ಲ. ಹಲವಾರು ಲೇನುಗಳು ಇರುವ ನುಣುಪಾದ ರಸ್ತೆಯ ಮೇಲೆ ನಾಗಾಲೋಟದಿಂದೋಡುವ ದೊಡ್ಡ ಕಾರಿರುವ ಕರಿಹೈದ ಮುಂದಿನ ಅಗಲವಾದ ವಿಂಡ್‌ಶೀಲ್ಡನ್ನು ನೋಡಿ ತಾನು ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗುವ ನಡುನಡುವೆ ಚಿಕ್ಕದಾದ ಹಾಗೂ ಚೊಕ್ಕದಾದ ರಿಯರ್ ವ್ಯೂ ಮಿರರ್ ಅನ್ನು ಅಗತ್ಯಕ್ಕಿಂತ ಹೆಚ್ಚಾಗಿ ನೋಡಿಕೊಂಡಿರುವುದನ್ನು ಕಂಡ ಕರಿಹೈದನ ಸ್ನೇಹಿತರು ಕರಿಹೈದನ ಮನಸ್ಸಿನಲ್ಲಿರುವುದನ್ನು ಗೊತ್ತು ಮಾಡಿಕೊಂಡವರಂತೆ ಅವರೊಳಗೇ ಹಲ್ಲುಕಿರಿದುಕೊಂಡಿರುವುದನ್ನು ನೆನೆಸಿಕೊಂಡು ಕರಿಹೈದನ ಮನಸ್ಸು ಮತ್ತಷ್ಟು ಪಿಚ್ಚಾಗುತ್ತದೆ.