Showing posts with label ಅನಿವಾಸಿ. Show all posts
Showing posts with label ಅನಿವಾಸಿ. Show all posts

Wednesday, December 26, 2007

...ಯಾವಾಗ್ ನೋಡಿದ್ರೂ ತಮ್ ತಮ್ ಗುಂಗ್ನಲ್ಲೇ ಇರ್ತಾರೇ

ನಾನು ಒಣದ್ರಾಕ್ಷಿ ಡಬ್ಬದ ಮುಚ್ಚಳ ತೆಗೆಯೋದಕ್ಕೂ ಅದರ ಒಳಗಿನಿಂದ ಮುಂದುವರೆಯುತ್ತಿದ್ದ ಸಂಭಾಷಣೆಯ ಈ ತುಣುಕು ಕೇಳೋದಕ್ಕೂ ಸರಿಯಾದ ಸಮಯ ಬಂದಿತ್ತು, ’...ಬನ್ನಿ ಬನ್ನಿ, ಯಾವಾಗ್ ನೋಡುದ್ರೂ ಅನಿವಾಸಿಗಳ ಥರ ಬರೀ ನಿಮ್ಮದೇ ರಾಗದ ಗುಂಗಿನಲ್ಲಿ ಇರ್ತೀರಿ, ವಾಸ್ತವಕ್ಕೆ ಬನ್ನಿ ಕಾರ್ಯಕ್ರಮ ಆರಂಭ ಮಾಡೋಣ’.

ಎಲಾ ಇವನಾ, ಅನಿವಾಸಿಗಳ ಬಗ್ಗೆ ಇಷ್ಟು ಅಥಾರಿಟಿಯಿಂದ ಮಾತಾಡೋರ್ ಯಾರಪ್ಪಾ ಎಂದು ಬೆಳಕಿಗೆ ಡಬ್ಬವನು ಬಗ್ಗಿಸಿ ನೋಡಿದ್ರೆ ಸೆಪ್ಟೆಂಬರ್ ತಿಂಗಳಿನಲ್ಲಿ ಪೆಚ್ಚು ಮೋರೆಯ ದರ್ಶನ ಕೊಟ್ಟು ಕೊನೆಗೆ ದಿಢೀರನೆ ಗುಂಪಿನಲ್ಲಿ ಕರಗಿ ಹೋಗಿದ್ದ ಒಣದ್ರಾಕ್ಷಿದ್ವಯರು ಕಂಡು ಬಂದರು. ಸುಮಾರು ಇಪ್ಪತ್ತು ಉಳಿದ ದ್ರಾಕ್ಷಿಗಳನ್ನು ಒಂದೆಡೆ ಆಯೋಜಿಸಿ ಅದೇನೋ ’ಕಾರ್ಯಕ್ರಮ’ವನ್ನು ಆರಂಭಿಸುವ ಗುಂಗಿನಲ್ಲಿದ್ದವರು ಆ ಮಟ್ಟಿಗೆ ವ್ಯಸ್ತರಾಗಿ ಕಂಡುಬಂದುದು ನನಗೆ ಸ್ವಲ್ಪ ಖುಷಿ ತಂದಿತು. ಏನಿಲ್ಲವೆಂದರೂ ಈ ಹಿಂದಿನ ಅಳುಮೋರೆಗೆ ಉತ್ತರ ಕೊಡಬೇಕಾಗಿಲ್ಲವಲ್ಲ ಎಂದು ನನ್ನೊಳು ನಾನೇ ಹೇಳಿಕೊಂಡಿರುವಾಗ ನಾನು ಡಬ್ಬದ ಮುಚ್ಚಳ ತೆಗೆದ ಫಲವಾಗಿ ದಿಢೀರನೆ ಹೆಚ್ಚಿದ ಬೆಳಕನ್ನು ಕಂಡು ತಮ್ಮ ಕಾರ್ಯಕ್ರಮಕ್ಕೆ ಅದ್ಯಾರಪ್ಪಾ ಭಂಗ ತಂದವರು ಎಂದು ಹುಬ್ಬೇರಿಸುತ್ತಲೇ ನನ್ನತ್ತ ನೋಡಿದ ದ್ರಾಕ್ಷೀದ್ವಯರು, ’ಓಹ್, ಏನ್ಸಾರ್ ಬಾಳಾ ಅಪರೂಪ ಆಗಿದ್ದೀರಾ ಇತ್ತೀಚಿಗೆ!?’ ಎಂದು ಒಕ್ಕೊರಲಿನಿಂದಲೇ ತಮ್ಮ ಆಶ್ಚರ್ಯವನ್ನು ಸೂಚಿಸುತ್ತಲೇ ಪ್ರಶ್ನೆಯೊಂದನ್ನು ಎಸೆದವು.

ನಾನಿದ್ದೋನು, ’ಹೌದಲ್ವಾ, ಹೇಗಿದ್ದೀರಾ ಮತ್ತೆ? ಏನ್ಸಮಾಚಾರಾ, ಏನೋ ಗಡಿಬಿಡಿ ನಡೀತಾ ಇರೋ ಹಾಗಿದೆ?’ ಎಂದೆ.

ಆ ದ್ರಾಕ್ಷಿಗಳಲ್ಲಿ ಬಲಗಡೆ ಇದ್ದುದು ಉತ್ತರ ಕೊಡುವ ಹವಣಿಕೆ ಮಾಡುತ್ತಾ, ’ಹೀಗಿದೀವ್ ನೋಡಿ, ಸದ್ಯ ಕಳೆದ ಸರ್ತಿ ಡಬ್ಬ ಖಾಲಿ ಆದ ಹಾಗೆ ಈ ಸರ್ತಿ ಆಗ್ಲಿಲ್ಲವಲ್ಲಾ, ಒಂದಿಷ್ಟು ಜನ ಉಳಿದಿರೋದೇ ಹೆಚ್ಚು’ ಎಂದು ಸಿನಿಕತನದ ಹಾರಿಕೆ ಉತ್ತರಕೊಡುವ ಹೊತ್ತಿಗೆ ಅದರ ಜೊತೆಗಾರ, ’ಊರ್ ತುಂಬಾ ಎಷ್ಟ್ ಜನಾ ಬೇಕಾದ್ರೂ ಇರ್ಲಿ ನೋಡ್ರಿ ಕೊನೆಗೆ ನಮ್ ಕಾರ್ಯಕ್ರಮ ಅಂತಂದ್ರೆ ಇಷ್ಟೇ ಜನಾ ಬರೋದು!’ ಎಂದು ಅಸಮಧಾನವನ್ನು ವ್ಯಕ್ತಪಡಿಸಿತು.

ನಾನು, ’ಅದೇನೋ ಅನಿವಾಸಿಗಳ ಬಗ್ಗೆ ಹೇಳ್ತಾ ಇದ್ರಲ್ಲ, ಅವರುಗಳ ಬಗ್ಗೆ ನಿಮಗೇನ್ ಗೊತ್ತಿರೋದು?’ ಎಂದೆ ಕೆದಕಿ ನೋಡಿದ್ದಕ್ಕೆ,

ಇಬ್ಬರೂ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡು ಏನ್ ಹೇಳೋದೂ ಬಿಡೋದು ಗೊತ್ತಾಗದೇ ಒಂದು ಕ್ಷಣ ಅಮೇರಿಕಕ್ಕೆ ಬಂದ ಪ್ರವಾಸಿಯ ಹಾಗೆ ಗರ ಬಡೆದು ನಿಂತುಕೊಂಡವು, ಸ್ವಲ್ಪ ಸುಧಾರಿಸಿಕೊಂಡು ಬಲಗಡೆ ಇದ್ದ ದ್ರಾಕ್ಷಿ ಹೇಳಿತು, ’ನಮಗೇನ್ ಗೊತ್ತೂ ಸಾರ್, ನಾವ್ ನಮಗೆ ಕಂಡದ್ದು ಹೇಳಿದ್ವಿ ಅಷ್ಟೇ, ಅನಿವಾಸಿಗಳು ಯಾವಾಗ್ ನೋಡುದ್ರೂ ತಮ್ ತಮ್ ಗುಂಗ್ನಲ್ಲೇ ಇರ್ತಾರೇ, ಒಂದ್ ರೀತಿ ಗಮ್ಮನ್ ಗುಸಕಗಳ ಥರಾ ಯಾವಾಗ್ ನೋಡುದ್ರೂ ಅವರದ್ದೇ ಅವರಿಗೆ ಅತಿಯಾಗಿ ಹೋಗಿರುತ್ತೇ, ತಮ್ಮದೇ ದೊಡ್ಡದು ಅನ್ನೋ ಥರಾ ಆಡೋ ಅಂತಾ ಸ್ವಾರ್ಥಿಗಳನ್ನು ನಾನು ಯಾವತ್ತೂ ನೋಡೇ ಇಲ್ಲ, ಅದಕ್ಕೇ ಹಂಗದ್ದದ್ದು!’ ಎಂದು ದೊಡ್ಡ ವಾಗ್ದಾಳಿಯೊಂದನ್ನು ಮಾಡಿ ಸುಮ್ಮನಾಯಿತು.

ಆ ದ್ರಾಕ್ಷಿ ಹೀಗೆಂದ ಕೂಡಲೇ ನಾನೇನ್ ಹೇಳೋದು ಅಂತ ತಲೆ ತುರಿಸಿಕೊಂಡ್ರೆ ಏನೂ ಹೋಳೀಲಿಲ್ಲ, ಮ್ಯಾನೇಜ್‌ಮೆಂಟ್ ಎಂಪ್ಲಾಯಿ ಹೇಳೋ ಹಾಗೆ, ’ಅದು ನಿಮ್ಮ ನಿಮ್ಮ ಅನಿಸಿಕೆ ಅಭಿಪ್ರಾಯ ಅದಕ್ಕೆ ನೀವೇ ಬಾಧ್ಯಸ್ಥರು...ಅದು ಸುಳ್ಳೋ ನಿಜಾನೋ ಅಂತ ಮಾತಾಡ್ತಾ ಹೋದ್ರೇ ದೊಡ್ಡ ವಾದಾನೇ ನಡೆದು ಹೋಗುತ್ತೆ, ಅದರ ಬದಲಿಗೆ ಅದನ್ನ ಅಲ್ಲಿಗೆ ಬಿಡೋದೇ ವಾಸಿ’ ಎಂದು ಹೇಳಿ ಕೈ ತೊಳೆದುಕೊಳ್ಳಲು ನೋಡಿದೆ.

ಆಗ ಎಡಗಡೆ ಇದ್ದ ದ್ರಾಕ್ಷಿ, ’ಅಲ್ರಿ, ಹೀಗೆ ಒಂದು ಸಮೂಹದ ಮೇಲೆ ನಾವ್ ಏನಾದ್ರೂ ಹೇಳ್ಲಿ ಅದನ್ನ ಅವರವರ ಅಭಿಪ್ರಾಯ ಅಂತ ಹೇಳಿಬಿಟ್ಟು ಸುಮ್ನೇ ಕೈ ತೊಳಕೊಳಕ್ಕೆ ನೋಡ್ತೀರಲ್ಲಾ, ನಿಮಗೆ ಕೆಚ್ಚು ಅಭಿಮಾನಾ ಅನ್ನೋದ್ ಸ್ವಲ್ಪಾನೂ ಇಲ್ವೇ ಮತ್ತೆ? ಏನು ಅದನ್ನೆಲ್ಲಾ ಬಂಡವಾಳಶಾಹಿ ವ್ಯವಸ್ಥೆಯ ಏಣಿಯ ಮೆಟ್ಟಿಲುಗಳಿಗೆ ಆಪೋಷನ ಕೊಟ್ಟೋರಂಗೆ ಆಡ್ತೀರಲ್ಲಾ, ನಿಮ್ಮಂತೋರುನ್ನಾ ನಮ್ಮೂರ್ನಲ್ಲಿ ಏನಂತಾ ಕರೀತಾರೆ ಗೊತ್ತಾ?...’ ಎಂದು ಸುಮ್ಮನಾಯಿತು.

ನಾನು, ’ಏನಂತ ಕರೀತಾರೆ?’ ಎಂದರೆ,

’ಬ್ಯಾಡಾ ಬಿಡಿ, ನಾನ್ಯಾಕೆ ಹೇಳಿ ನನ್ನ ಬಾಯನ್ನ ಹೊಲ್ಸು ಮಾಡ್ಕೊಳ್ಳೀ?’ ಎನ್ನುವ ಉತ್ತರ ದೊರೆಯಿತು, ಮತ್ತೆ ಮುಂದುವರೆಸುತ್ತಾ, ’ನಾವ್ ಹೆಂಗಾರೂ ಇರ್ಲಿ ನಮ್ಮನ್ನ ಯಾವಾನಾದ್ರೂ ಸ್ವಾರ್ಥಿ ನನಮಕ್ಳು ಅಂತ ಹೇಳಿದ್ದಿದ್ರೆ ಅವರನ್ನ ಒಂದ್ ಕೈ ನೋಡಿಕಂತಿದ್ವಿ, ಏನೋ?’ ಎಂದು ಪಕ್ಕದವನ ಪಕ್ಕೆಗೆ ತಿವಿಯಿತು.

ನಾನು, ’ಥೂ, ಇದೇನಪ್ಪಾ ಗ್ರಹಚಾರ’ ಎಂದು ಮನಸ್ಸಿನಲ್ಲೇ ಶಪಿಸಿಕೊಂಡೆ, ಶಾವಿಗೆ ಪಾಯಸ ಮಾಡೋದಕ್ಕೆ ಒಣದ್ರಾಕ್ಷಿ ಹಾಕೋಣ ಅಂತ ಮುಚ್ಚಳ ತೆಗೆದೋನಿಗೆ ಈ ಇಬ್ಬರ ಜೊತೆ ವಾದಾ ಮಾಡಿ ಮೈ ಮನಸ್ಸು ಕೆದರಿಕೊಳ್ಳೋ ಕಷ್ಟಾ ಯಾವನಿಗೆ ಬೇಕಿತ್ತು?

ನಾನು ಸುಮ್ಮನಿದ್ದುದನ್ನು ನೋಡಿ ಎಡಗಡೆ ಇದ್ದ ದ್ರಾಕ್ಷಿ ಬಲಗಡೆಯವನ ಕುರಿತು, ’ಏ ಬಿಡೋ, ಈ ಅನಿವಾಸಿಗಳನ್ನ ಯಾರು ಉದ್ದಾರ ಮಾಡಿದಾರೆ. ನಮ್ಮ ಕೆಲಸ ನೋಡೋಣ ನಡಿ, ಜನಗಳು ಕಾಯ್ತಾ ಇದಾರೆ ಕಾರ್ಯಕ್ರಮಾನಾದ್ರೂ ಶುರು ಮಾಡೋಣ’ ಎಂದು ಹೇಳುತ್ತ ಇನ್ನೇನು ಅಲ್ಲಿ ಮೂಲೆಯಲ್ಲಿ ಸೇರಿದ್ದ ಉಳಿದ ದ್ರಾಕ್ಷಿಗಳ ಕಡೆಗೆ ತಿರುಗಬೇಕು ಎನ್ನುವಾಗ ನಾನೆಂದೆ,

’ಅಲ್ರೋ, ಅನಿವಾಸಿಗಳನ್ನ ಕಂಡ್ರೆ ನಿಮಗ್ಯಾಕೆ ಅಷ್ಟೊಂದು ಹೊಟ್ಟೇಕಿಚ್ಚು? ಎಲ್ಲೋ ಒಂದು ದೃಷ್ಟಿಕೋನದಿಂದ ಅವರುಗಳನ್ನು ನೋಡಿರಬಹುದಾದ ನೀವು ಪ್ರಪಂಚವನ್ನೇ ತಿಳಿದುಕೊಂಡಿರೋ ತಿಕ್ಕಲುಗಳ ಥರಾ ಆಡೋದ್ ಯಾಕೆ? ಊರು-ಮನೇ-ದೇಶ ಬಿಟ್ಟು ಬಂದು ತಮ್ಮ್ ತಮ್ಮ ಕಷ್ಟದಲ್ಲಿ ಸಿಕ್ಕಿ ಒದ್ದಾಡ್ತಿರೋರನ್ನ ಪೂರ್ತಿ ಅರ್ಥ ಮಾಡಿಕೊಳ್ಳದೇ ಬರೀ ಅವರನ್ನ ದೊಡ್ಡ ಸ್ವಾರ್ಥಿಗಳು ಅಂತೀರಲ್ಲಾ ಇದು ಯಾವ ನ್ಯಾಯ?’ ಎಂದು ಮೂರ್ನಾಲ್ಕು ಪ್ರಶ್ನೆಗಳನ್ನ ಒಂದೇ ಉಸಿರಲ್ಲಿ ಕೇಳಿ ದಂಗುಬಡಿಸಿದೆ.

ಎಡಗಡೆ ದ್ರಾಕ್ಷಿಗೆ ನನ್ನ ಮಾತೇ ಕೇಳಿ ಸಿಟ್ಟೇ ಬಂದಿತು ಅಂತ ಕಾಣ್ಸುತ್ತೆ, ’ ಅವರವರ ತೆವಲಿಗೆ ಬಂದವರು ಅವರವರ ಕಷ್ಟಗಳನ್ನ ಅನುಭವಿಸಲೇ ಬೇಕಾದ್ ನ್ಯಾಯಾ ತಾನೆ? ಯಾವಾಗ್ ನೋಡಿದ್ರೂ ಸೆಲ್ಫ್ ಸೆಂಟರ್ಡ್ ಜನ ಅಂತ ಹೇಳ್ದೇ ಇನ್ನೇನ್ ಹೇಳೋಕ್ ಆಗುತ್ತೇ? ಒಂದ್ ದಿನಾನಾದ್ರೂ ಹೊರಗಿನ ಪ್ರಪಂಚದ ಬಗ್ಗೆ ಯೋಚ್ನೇ ಮಾಡಿ ಗೊತ್ತೇನ್ರೀ ಅವರಿಗೆ? ತಾವ್ ಆಡಿದ್ದೇ ಆಟ ತಾವ್ ಮಾಡಿದ್ದೇ ಮಾಟಾ ಅನ್ನೋ ಗುಂಗ್ನಲ್ಲಿ ತಮ್ಮಲ್ಲಿರೋ ಡಾಲರ್ರೂ-ಪೌಂಡೂ-ಯೂರೋಗಳನ್ನ ಝಳಪಿಸ್ತಾನೇ ನಮ್ಮಲ್ಲಿರೋ ರುಪಾಯಿ ಎಣಿಸೋ ಜನಗಳನ್ನ ಕೊಂದು ಬಿಟ್ಟಿರೋದು. ಕಷ್ಟಾ ಇರ್ಲಿ, ಸುಖಾ ಇರ್ಲಿ ಕಂಡಿದ್ದನ್ನೆಲ್ಲ ರೊಕ್ಕದಿಂದ ಕೊಳ್ತೀವಿ ಅನ್ನೋ ಮಾತು ಎಲ್ಲೀವರೆಗೆ ನಡೆಯುತ್ತೇ ನೀವೇ ಹೇಳಿ’ ಎಂದು ನನಗೇ ತಿರುಮಂತ್ರ ಹಾಕಲು ನೋಡಿತು.

ನಾನು, ’ಓಹ್, ಪ್ರತಿಯೊಂದೂ ದುಡ್ಡಿನ ಸುತ್ಲೂ ತಿರುಗುತ್ತೇ, ಅಲ್ವೇನು?’ ಅಂದು ಸುಮ್ಮನಾದೆ.

’ನೋಡಿ ನೋಡಿ, ನಮಗೇನೋ ಅರ್ಥ ಆಗದ ಹೀಗೆ ದೊಡ್ಡದೊಂದು ವಾಕ್ಯವನ್ನ ಮಧ್ಯೆ ಸೇರಿಸಿ ಏನೂ ಎಕ್ಸ್‌ಪ್ರೆಶ್ಶನ್ನೇ ಇಲ್ದಿರೋ ಮುಖವನ್ನ ಮಾಡೋ ಕಲೆ ಅನಿವಾಸಿಗಳಿಗಲ್ದೇ ಇನ್ಯಾರಿಗೆ ಬರುತ್ತೇ?’ ಎಂದು ಬಲಗಡೆ ದ್ರಾಕ್ಷಿ ಸೊಪ್ಪು ಹಾಕಿತು.

’ದುಡ್ದಿನ ವಿಷ್ಯಾ ಎತ್ತಿದೋನು ನಾನಂತೂ ಅಲ್ಲಾ!’ ಎಂದು ಒಂದು ಕ್ಷಣ ತಡೆದು, ’ನಿಮ್ಮಗಳಲ್ಲೇ ಅಡಗಿರೋ ಭಿನ್ನತೆ, ಭಿನ್ನಾಭಿಪ್ರಾಯದ ಮಸೂರದಲ್ಲಿ ಎಲ್ರುನ್ನೂ ನೋಡೋ ಹಾಗೆ ಅನಿವಾಸಿಗಳನ್ನೂ ನೋಡಿ, ಅದರಲ್ಲಿ ಕಾಣೋದೇನಿದ್ರೂ ನಿಮಗೆ ಹಳದಿಯೇ, ಕಾಮಾಲೆ ರೋಗ ನನಗಂತೂ ಬಂದಿಲ್ಲ’ ಎಂದು ಮತ್ತೆ ಸುಮ್ಮನಾದೆ.

ಎಡಗಡೆ ಇದ್ದ ದ್ರಾಕ್ಷಿಗೆ ಈಗಂತೂ ಸಿಟ್ಟೇ ಬಂದಿತು ಅಂತಾ ಕಾಣ್ಸುತ್ತೆ, ’ಬಾರಿ ಶಾಣ್ಯಾ ಇದೀರ್ ನೋಡ್ರಿ, ಅದೆಷ್ಟು ಬೇಗ ನಮ್ಮ ಆರ್ಗ್ಯುಮೆಂಟೇ ತೆಗೆದು ನಮ್ಮ ಮೇಲೇ ಗೂಬೇ ಕೂರಿಸಿ ತಮ್ಮನ್ನ ತಾವೇ ಸರಿ ಅಂತ ಸಾಧಿಸಿಕೊಳ್ಳೋ ನಿಮ್ಮಂತೋರಿಗೆಲ್ಲಾ ಒಂದ್ ಗತಿ ಕಾಣ್ಸದೇ ಇದ್ರೆ ನೋಡಿ ಮತ್ತೆ?’ ಎಂದು ಕತ್ತಿ ಮಸೆಯಿತು.

’ಓಹ್, ಏನು...ಅನಿವಾಸಿಗಳ ನಡೆನುಡಿಯ ಬಗ್ಗೆ ಪುಸ್ತಕಾ ಬರೀತೀರೇನು?’ ಎಂದು ಜೋರಾಗಿ ನಗುವ ಧ್ವನಿಯನ್ನು ಮಾಡಿ ಕೈಯಲ್ಲಿನ ಚಮಚೆಯಿಂದ ಪಕ್ಕೆಗೆ ತಿವಿದೆ, ’ಬರೀರಿ, ಬರೀರಿ - ನಿಮ್ಮಗಳ ಸಾಹಿತ್ಯವೇ ದೊಡ್ದು, ನೀವ್ ಬರ್ದಿರೋದೇ ರಾಮಾಯಣ!’

ಆ ಎರಡೂ ದ್ರಾಕ್ಷಿಗಳು ಒಕ್ಕೊರಲಿನಿಂದ, ’ದಯವಿಟ್ಟು ಈಗ ನಮ್ಮನ್ನ ಸುಮ್ನೇ ಬಿಟ್ ಬಿಡಿ ಸಾರ್, ಕಾರ್ಯಕ್ರಮ ಶುರುವಾಗೋ ಹೊತ್ತಾಯ್ತು’ ಎಂದು ಆರ್ತರಾಗಿ ಬೇಡಿಕೊಂಡವು.

ನಾನಿದ್ದೋನು, ’ಇನ್ನೊಬ್ರ ಬದುಕಿನ ಬಗ್ಗೆ ಬೇಕಾಬಿಟ್ಟಿ ಮಾತನಾಡಿ ಅದೇನೋ ಕಾರ್ಯಕ್ರಮ ಅಂತ ಸಾಯ್ತಿರೋ ನಿಮಗೆ ಸಮಯದ ಪ್ರಜ್ಞೇ ಬೇರೆ ಕೇಡಿಗೆ’ ಎನ್ನುತ್ತಾ ಇವತ್ತು ಪಾಯಸಕ್ಕೆ ದ್ರಾಕ್ಷಿ ಹಾಕದಿದ್ರೇನೇ ಲೇಸು ಎಂದು ದ್ರಾಕ್ಷೀ ಡಬ್ಬದ ಮುಚ್ಚಳವನ್ನು ಹಾಕಿದರೂ, ದ್ರಾಕ್ಷಿ ಸ್ನೇಹಿತರು ಹೇಳಿದ ’ಅನಿವಾಸಿಗಳು ಯಾವಾಗ್ ನೋಡಿದ್ರೂ ತಮ್ ತಮ್ ಗುಂಗ್ನಲ್ಲೇ ಇರ್ತಾರೇ’ ಎನ್ನುವ ವಾಕ್ಯಗಳು ನನ್ನ ಮನದಲ್ಲಿ ಅನುರಣಿಸತೊಡಗಿದವು.

Saturday, December 08, 2007

ವಿಪರ್ಯಾಸ ಹಾಗೂ ವಿಶೇಷ

ನಿಮಗೆಲ್ಲಾ ನೆನಪಿದೆಯೋ ಇಲ್ವೋ ನಾವಂತೂ ಒಂದ್ ಕಾಲದಲ್ಲಿ ಯುಎಸ್‌ಗೆ ಬರಬೇಕು ಅಂತ ತಹತಹಿಸ್ತಾ ಇದ್ವಿ, ಸದಾಶಿವನಿಗೆ ಅದೇ ಧ್ಯಾನ ಅಂತ ಹಗಲೂ ರಾತ್ರೀ ಯಾವತ್ತ್ ಯುಎಸ್. ಗೆ ಹೋಗ್ತೀವೋ ಅಂತ ತಲೆ ಕೆಡಿಸಿಕೊಂಡಿದ್ದೇ ಕೊಂಡಿದ್ದು, ಇದ್ದ ಬದ್ದ ಟೆಕ್ನಾಲಜಿ ಪುಸ್ತಕಗಳನ್ನೆಲ್ಲ ಓದಿದ್ದೇ ಓದಿದ್ದು. ಈಗ ಪರಿಸ್ಥಿತಿ ಹೇಗಿದೆಯೋ ಗೊತ್ತಿಲ್ಲ, 1995 ರ ಹೊತ್ತಿಗೆ ಪ್ರಪಂಚದಲ್ಲಿ ಇನ್ನೂ ಉಳಿದ ದೇಶದವರು ಚೇತರಿಸಿಕೊಳ್ತಾ ಇರಬೇಕಾದ್ರೆ, Y2K ಅನ್ನೋ ಬಕಾಸುರನಿಗೆ ಮುಂದುವರೆದ ದೇಶಗಳು ಆಹಾರವನ್ನು ತಯಾರಿಸಿಕೊಳ್ಳಬೇಕು ಅನ್ನೋ ಕಲ್ಪನೆಯನ್ನು ತಲೆಯನ್ನು ಹೊಕ್ಕಿಸಿಕೊಳ್ಳೋ ಮೊದಲೇ ಭಾರತದಲ್ಲಿ ಬೇಕಾದಷ್ಟು ಉದ್ದಾಮರು ಆಧುನಿಕ ತಂತ್ರಜ್ಞಾನವನ್ನು ತಂದು ಬಿಟ್ಟಿದ್ದರು. ನಾವು ಓದಿ ಕೆಲ್ಸಾ ಮಾಡ್ತಾ ಇರೋ ಮದ್ರಾಸಿನ ಹೊರವಲಯದಲ್ಲಿರೋ ಪೆಂಟಾಫೋರ್ ಸಂಸ್ಥೆಯಲ್ಲಿ ಆಗ್ಲೇ ಎಲ್ಲಾ ಥರದ ಹಾರ್ಡ್‌ವೇರುಗಳನ್ನು ಕಲೆಹಾಕಿ, ಸಿಲಿಕಾನ್ ಗ್ರಾಫಿಕ್ಸ್ ಸಿಸ್ಟಮ್ಮ್‌ಗಳನ್ನು ಹುಟ್ಟುಹಾಕಿ, ಸಿಡಿ ಬರ್ನರ್ ಉತ್ಪಾದಕ ಘಟಕವನ್ನೂ, ಟ್ರೈನಿಂಗ್ ಸೆಂಟರನ್ನೂ ಕೋಟ್ಯಾಂತರ ರೂಪಾಯಿಯ ಬಂಡವಾಳದಲ್ಲಿ ಮೇಲೆತ್ತಿ ನಿಲ್ಲಿಸಿದ ಮುತ್ಸದ್ದಿಗಳ ದೂರದೃಷ್ಟಿಯನ್ನು ಎಂಥವರೂ ಮೆಚ್ಚಲೇ ಬೇಕು.

ತಂತ್ರಜ್ಞಾನ ಕಲಿತು ಭಾರತವನ್ನು ಬಿಟ್ಟವರ ಸಂಖ್ಯೆ ಬಹಳ - ಅದಕ್ಕಿಂತ ಹಿಂದೆ ಎಪ್ಪತ್ತು ಎಂಭತ್ತರ ದಶಕದಲ್ಲಿ ಡಾಕ್ಟರುಗಳು ಹಾಗೂ ಕೆಲವೇ ಕೆಲವು ಇಂಜಿನಿಯರುಗಳು ದೂರಕ್ಕೆ ಹೋಗುತ್ತಿದ್ದರೇನೋ. ತೊಂಭತ್ತರ ದಶಕದ ಅಂತ್ಯದಲ್ಲಂತೂ H1B ಕೋಟಾವನ್ನು ದುಪ್ಪಟ್ಟು ಹೆಚ್ಚಿಸುವಷ್ಟರ ಮಟ್ಟಿಗೆ ಭಾರತದಿಂದ ಕೆಲಸಗಾರರು ಹೊರಗೆ ಹೋಗಲಾರಂಭಿಸಿದರು. ಒಂದಿಷ್ಟು ಅಂಕಿ-ಅಂಶಗಳ ಪ್ರಕಾರ ಇದ್ದಬದ್ದ ವೀಸಾ ಕೆಟಗರಿಯಲ್ಲಿ ಭಾರತದವರದ್ದೇ ಸಿಂಹಪಾಲು (೪೬%). Y2K ಕೆಲಸಗಳೆಲ್ಲ ಮುಗಿದು ಮಿಲೆನಿಯಮ್ ನಂತರ ಒಂದಿಷ್ಟು ಜನರಿಗೆ ನಿರಾಶೆಯ ಮೋಡ ಕವಿದು ಅವರು ಕೆಲಸವಿಲ್ಲದೇ/ಸಿಗದೇ ಭಾರತಕ್ಕೆ ಹಿಂತಿರುಗಿ ಹೋಗಬೇಕಾದ್ದನ್ನೂ ನಮ್ಮ ತಲೆಮಾರು ಕಂಡಿದೆ. ಉದಯವಾಣಿಯಂತಹ ಪೇಪರುಗಳಲ್ಲಿ ಅಮೇರಿಕದಿಂದ ಹಿಂತಿರುಗಿ ಬರುತ್ತಿರುವ ಕೆಲಸಗಾರರ ಬಗ್ಗೆ ಬರೆದದ್ದನ್ನು ಓದಿ ಎಷ್ಟೋ ಜನ ಕಂಗಾಲಾಗಿದ್ದೂ ಇದೆ. ಆದರೆ ಡಾಟ್ ಕಾಮ್ ಬಬಲ್ ಒಡೆದ ಹೊಡೆತವನ್ನು ಭಾರತದ ಟೆಕ್ನಾಲಜಿ ಕಂಪನಿಗಳು ಅರಗಿಸಿಕೊಳ್ಳಲು ಹೆಚ್ಚು ಹೊತ್ತೇನೂ ಹಿಡಿಯಲಿಲ್ಲ, ಬಿಪಿಓ, ಬಿ.ಟಿ. ಮುಂತಾದವುಗಳ ದೆಸೆಯಿಂದ ಇಂದಿಗೂ ಬೇಕಾದಷ್ಟು ರೂಪಾಯಿ-ಡಾಲರನ್ನು ಗಳಿಸುತ್ತಲೇ ಇವೆ, ಇನ್ನೂ ಗಳಿಸುತ್ತವೆ.

***

ಎರಡು ಸೂಟ್‌ಕೇಸ್ ಹಿಡಿದುಕೊಂಡು ಎಲ್ಲಿಗೆ ಬೇಕಾದಲ್ಲಿ ಹೊರಡಲು ತಯಾರಿದ್ದ ನಮಗೆ ಸಿಗುತ್ತಿದ್ದ ಉಪದೇಶ-ಮಾರ್ಗದರ್ಶನ ಬಹಳಷ್ಟೇನೂ ಇರಲಿಲ್ಲ. ಆಗೇನೂ ವೆಬ್‌ಸೈಟ್‌ಗಳೂ ಅಷ್ಟು ಪ್ರಚಲಿತವಾಗಿರಲಿಲ್ಲ, ಇದ್ದರೂ ಎಲ್ಲಿಬೇಕಂದರಲ್ಲಿ ಈಗಿನ ಹಾಗೆ ಮಾಹಿತಿಗಳು ಅಷ್ಟೊಂದು ಸುಲಭವಾಗಿ ಲಭ್ಯವಾಗುತ್ತಿರಲಿಲ್ಲ. ಯಾರೋ ಪುಣ್ಯಾತ್ಮರು ನಮಗಿಂತ ಮೊದಲೇ ವಿದೇಶದ ನೀರಿನ ಋಣವನ್ನು ಅನುಭವಿಸಿದವರು, ವಿದ್ಯಾರ್ಥಿಗಳಾಗಿ ಹೋಗಿ ವೀದೇಶದಲ್ಲಿ ಪಳಗಿದವರು ಮೊದಲಾದವರಿಂದ ನಾವು ಅಮೇರಿಕದ ಬಗ್ಗೆ ’ಕೇಳಿ’ ತಿಳಿದುಕೊಳ್ಳುತ್ತಿದ್ದೆವು. ನನಗೆ ಬಾಂಬೆಯಲ್ಲಿ ವ್ಯಕ್ತಿಯೊಬ್ಬ ಸಿಕ್ಕಿದ್ದ, ಅವನು ಅಲಬಾಮಾದಲ್ಲಿ ಐದಾರು-ವರ್ಷಗಳನ್ನು ಕಳೆದು ಭಾರತಕ್ಕೆ ಹಿಂತಿರುಗಿದವನು, ಅಂದಿನ ಅವನ ಅನುಭವಕ್ಕೂ ಇಂದಿನ ನಮ್ಮ ನ್ಯೂ ಯಾರ್ಕ್ ಅನುಭವಕ್ಕೂ ಬಹಳಷ್ಟು ವ್ಯತ್ಯಾಸವಿದೆಯೆನ್ನುವುದನ್ನು ಆತ ಹೇಗೆ ತಾನೇ ವಿವರಿಸಿಯಾನು, ಅದನ್ನು ನಾವಾದರೂ ಹೇಗೆ ಅರ್ಥ ಮಾಡಿಕೊಳ್ಳಬಹುದಿತ್ತು?

ಅಮೇರಿಕದಲ್ಲಿ ನಾಲ್ಕೈದು ಟೈಮ್ ಝೋನ್‌ಗಳಿವೆಯಂತೆ, ಭಾರತದ ಮೂರನೇ ಒಂದರಷ್ಟು ಇರುವ ಜನತೆಗೆ ಭಾರತದ ವಿಸ್ತೀರ್ಣದ ನಾಲ್ಕು ಪಟ್ಟು ದೊಡ್ಡ ದೇಶ, ಅದಕ್ಕೆ ಅಲ್ಲಲ್ಲಿನ ಟೈಮುಗಳು, ಒಂದು ಕಡೆ ಸ್ನೋ ಬಿದ್ದರೆ ಇನ್ನೊಂದು ಕಡೆ ಬಿಸಿಲು, ಸುಮಾರು ಇನ್ನೂರು ವರ್ಷಕ್ಕೂ ಹೆಚ್ಚಿನ ರಾಜಕೀಯ ಇತಿಹಾಸ, ಬೇಕಾದಷ್ಟು ಸಿಗುವ ಮನರಂಜನೆ, ಥರಥರನ ಚರ್ಮದ ಬಣ್ಣ - ಇನ್ನೂ ಏನೇನೋ! ಈ ರೀತಿಯ ಕನ್ವರ್ಸೇಷನ್ನುಗಳನ್ನು ಎಷ್ಟು ಹೊತ್ತು ಬೇಕಾದರೂ ಮಾಡಿಕೊಂಡಿರಬಹುದಿತ್ತು, ಎಲ್ಲರಿಗೂ ಅವರವರ ಅನುಭವ, ಅದೇ ಅವರ ಆಸ್ತಿ.

***

ಇತ್ತೀಚೆಗೆ ಭಾರತಕ್ಕೆ ಕೆಲಸದ ನಿಮಿತ್ತ ಹೋಗಿ ಬರುವವರನ್ನು, ಅಲ್ಲೇ ಸ್ವಲ್ಪ ದಿನಗಳ ಇದ್ದವರನ್ನು ವಿಚಾರಿಸಲಾಗಿ ಎಲ್ಲರೂ ಹೇಳುವುದು ಒಂದೇ ಒಂದು ಮಾತು - ’ಭಾರತ ಬದಲಾಗಿದೆ, ನಿಮಗೆ ಅಮೇರಿಕೆಯಲ್ಲಿ ಏನೇನೆಲ್ಲ ಸಿಗುತ್ತದೆಯೋ ಅದೆಲ್ಲ ಇಲ್ಲಿ ಸಿಗುತ್ತದೆ!’ ವಿಪರ್ಯಾಸವೆಂದರೆ, ನನ್ನಂತಹವರು ಒಂದು ಕಾಲದಲ್ಲಿ ಯಾವ ದೇಶದ ಬಗ್ಗೆ ನಾವು ತಿಳಿದುಕೊಂಡಿದ್ದೇವೆ ಎಂದುಕೊಂಡಿದ್ದೆವೋ ಅದೇ ದೇಶದ ಬಗ್ಗೆ ಇಂದು ನಮ್ಮ ನೋಟ್ಸ್ ಅನ್ನು ಚೆಕ್ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಅಂದು ಬಾಡಿಶಾಪರ್ರ್‌ಗಳ ಚಾಕಚಕ್ಯತೆಗೆ ಬಲಿಯಾಗದ ಹಾಗೆ, ಸಿಹಿಯಾಗಿ ಇಂಗ್ಲೀಷ್‌ನಲ್ಲಿ ಮಾತನಾಡಿಸಿ ಬಲೆಗೆ ಬೀಳಿಸಿಕೊಳ್ಳುವ ಮೋಹಿನಿ ರಿಕ್ರ್ಯೂಟರುಗಳಿಂದ ನಮ್ಮತನ (ರೆಸ್ಯೂಮೆ)ವನ್ನು ಜೋಪಾನಮಾಡಿಕೊಳ್ಳುವ ಸೂಕ್ಷ್ಮವನ್ನು ಹರಿತ ಮಾಡಿಕೊಳ್ಳುವ ಕಾಲಬಂದೊದಗಿದೆ. ಅಂದಿನ ರೆಸ್ಯೂಮೆಗಳಲ್ಲಿ ಫೋನ್ ನಂಬರ್ ಕಾಲಮ್ ಇದ್ದರೆ ಹೆಚ್ಚಾಗುತ್ತಿತ್ತು, ಇಂದಿನ ರೆಸ್ಯೂಮೆಗಳಲ್ಲಿ ಫೋನ್ ನಂಬರ್, ಮೊಬೈಲ್ ನಂಬರ್, ಇ-ಮೇಲ್ ಇವೆಲ್ಲವೂ ಸಹಜವಾಗಿವೆ. ’ನಿಮ್ಮ ರೆಸ್ಯೂಮೆಗೆ ತಕ್ಕ ಕೆಲಸ ಬಂದಾಗ SMS ಸಂದೇಶವನ್ನು ಕಳಿಸುತ್ತೇವೆ’ ಎಂದು ಕೆಲವು ವೆಬ್ ಸೈಟ್‌ಗಳಲ್ಲಿ ನೋಡಿದಾಗ ನಾನು ಮೂರ್ಛೆ ಹೋಗದಿದ್ದುದೇ ಹೆಚ್ಚು.

ಕೈಗಾರಿಕಾ ಕ್ರಾಂತಿ, ರಾಜಕೀಯ ಕ್ರಾಂತಿ, ಧಾರ್ಮಿಕ ಕ್ರಾಂತಿ ಮುಂತಾದವುಗಳ ಯಾದಿಗೆ ಭಾರತದ ಇತ್ತೀಚಿನ ಬೆಳವಣಿಗೆಯನ್ನು ಕಮ್ಮ್ಯೂನಿಕೇಶನ್ ಕ್ರಾಂತಿಗೆ ಸೇರಿಸಿಬಿಡಬೇಕು. ಒಂದು ಕಾಲದಲ್ಲಿ ಮನೆಗೆ ಒಂದೂ ಫೋನ್ ಇರದ ಕುಟುಂಬಗಳು ಇಂದು ಎರಡೂ-ಮೂರು ಮೊಬೈಲ್ ಫೋನ್‌ಗಳನ್ನು ಉಪಯೋಗಿಸುವಷ್ಟರ ಮಟ್ಟಿಗೆ ಮುಂದುವರೆದಿವೆ. ಎಸ್ಸೆಮ್ಮೆಸ್ ಸಂದೇಶಗಳು, ಕಾಲ್‌ಬ್ಲಾಕ್ ಮುಂತಾದವುಗಳನ್ನೆಲ್ಲ ನೋಡಿದ ಮೇಲೆ, ಕೇವಲ ರಿಂಗ್‌ಟೋನ್ ಆಧರಿಸಿ ಬೆಳೆದ ವ್ಯವಹಾರವನ್ನು ಗಮನಿಸಿದ ಮೇಲೆ ನನ್ನ ಬಾಯಿಯಿಂದ ನನಗೇ ಅರಿವಿರದ ಹಾಗೆ ’It is BIG!’ ಎನ್ನುವ ಉದ್ಗಾರ ಹೊರಟುಬಂತು. ನಾವು ಕಂಡ ಭಾರತ, ನಮ್ಮ ಮನಸ್ಸಿನಲ್ಲಿರುವ ಭಾರತ ಬದಲಾಗಿದೆ, ಅದಕ್ಕೆ ತಕ್ಕ ಹಾಗೆ ಅನಿವಾಸಿಗಳ ಮನಸ್ಸಿನಲ್ಲಿನ ನಾಸ್ಟಾಲ್ಜಿಯ ದೂರ ಹೋಗಲಿ, ಜೊತೆಗೆ ಬದಲಾದ ಭಾರತವನ್ನು ನೋಡಿ ಅದಕ್ಕೆ ಆದಷ್ಟು ಬೇಗ ಹೊಂದಿಕೊಳ್ಳುವ ಮನಸ್ಥಿತಿ ಬರಲಿ. ವಿಶೇಷವೆಂದರೆ, ನಮ್ಮ ಹಳೆಯ ಭಾರತದ ಟೆಕ್ನಿಕ್ಕುಗಳು ನಮ್ಮ ಅನುಭವದ ಒಂದು ಅಂಗವಾಗಿವೆಯೇ ಹೊರತು ಈಗ ಉಪಯೋಗಕ್ಕೆ ಬರುವಷ್ಟರ ಮಟ್ಟಿಗೆ ಅವುಗಳಲ್ಲಿ ಪ್ರೌಢಿಮೆ ಇಲ್ಲ, ನಮ್ಮ ವಿದೇಶಿ ಅನುಭವ ಒಂದು ವ್ಯವಸ್ಥೆಯನ್ನು ನಂಬಿಕೊಂಡು ಅದರಲ್ಲಿ ಒಂದಾಗಿ ಹೋಗುವ ಮನಸ್ಥಿತಿಯನ್ನು ಸೃಷ್ಟಿಸಿಬಿಟ್ಟಿದೆ. ಹಿಂದೆಲ್ಲಾ ಒಮ್ಮೆ ಬಂದವರಿಗೆ ವಾಪಾಸು ಹೋಗುವಾಗ ಇದ್ದ ಸವಾಲುಗಳು ಇಂದಿನ ಪ್ರಗತಿಪರ ಯುಗದಲ್ಲಿ ದುಪ್ಪಟ್ಟಾಗಿರಬಹುದು ಎನ್ನುವುದು ನನ್ನ ಅನುಮಾನ.

Friday, November 09, 2007

ನಮ್ಮ್ ದೀಪಾವಳಿ ಆಚರಣೇನೇ ಬೆಷ್ಟ್!

ನಿಮ್ಮೂರಲ್ಲೆಲ್ಲಾ ಹೇಗೋ ಗೊತ್ತಿಲ್ಲ, ನಮ್ಮೂರಲ್ಲಂತೂ ವಾತಾವರಣ ಬಹಳಷ್ಟು ತಣ್ಣಗಾಗಿ ಹೋಗಿದೆ, ನಿನ್ನೆ ಬೆಳಿಗ್ಗೆ ಬಿಲೋ ಫ್ರೀಜಿಂಗ್, ಇಪ್ಪತ್ತಾರು-ಇಪ್ಪತ್ತೇಳು ಡಿಗ್ರಿ ಫ್ಯಾರನ್‌ಹೈಟ್ ಇದ್ದಿದ್ದು ನೋಡಿ ನನಗಂತೂ ಇದ್ದ ಛಳಿ ಇನ್ನಷ್ಟು ಹೆಚ್ಚಾಗಿ ಹೋಯಿತು. ಈಗಾಗ್ಲೇ ಒಡೆದು ಹೋಗಿರೋ ಮೈ ಕೈಗೆ ನರಕ ಚತುರ್ದಶಿ ಪ್ರಯುಕ್ತವಾಗಿ ಎಣ್ಣೆ ಸವರಿ ಸ್ನಾನ ಮಾಡಿದ್ದು ಬಹಳ ಒಳ್ಳೇದೇ ಅನ್ನಿಸ್ತು. ಸದ್ಯ ನೀರ್ ತುಂಬೋ ಹಬ್ಬಾ ಎಲ್ಲಾ ವಾರದ ದಿನದಲ್ಲೇ ಬಂತು ಆದ್ರಿಂದ ಬೇಗನೇ ಸ್ನಾನಾ ಮಾಡಿ ಆಫೀಸಿಗೆ ಓಡಿದ್ದೇ ಬಂತು, ಅದರ ಬದಲಿಗೆ ವೀಕ್‌ಎಂಡ್ ಅಂಥಾ ಏನಾದ್ರೂ ಅಂದ್ಕೊಂಡಿದ್ರೆ ನಾವೆಲ್ಲಾ ಸೂರ್ಯಾ ಕಣ್ ಬಿಟ್ಟ್ ಮೇಲೆ ಏಳೋರು, ಕೊನೆಗೆ ಚತುರ್ದಶಿ ಮುಗಿದು ಹೋಗಿ ಅಮವಾಸೆ ದಿನಾ ಮಾತ್ರ ಸ್ನಾನಾ ಮಾಡಿ ನರಕ ಮಾತ್ರ ಗ್ಯಾರಂಟಿ ಸಿಗ್ತಾ ಇತ್ತು.

ನಮ್ ದೀಪಾವಳಿ ಆಚರಣೇನೇ ಬೆಸ್ಟ್ ಅಂತೀನಿ, ವಾಹನ ಪೂಜೆ, ಅಂಗಡಿ ಪೂಜೆ ಅನ್ನೋದೇನೂ ಇಲ್ಲ ಬರೀ ನಾವೆಲ್ಲ ಲಕ್ಷ್ಮೀ ಪೂಜೆಗೆ ಒತ್ತು ಕೊಡೋರು ಯಾವತ್ತಿದ್ರೂ. ಪುರುಸೊತ್ತಿದ್ರೆ ಏನಾದ್ರೂ ವಿಶೇಷವಾಗಿ ಅಡುಗೆ ಮಾಡ್ತೀವಿ, ಇಲ್ಲಾ ಅಂತಂದ್ರೆ ದೇವಸ್ಥಾನಕ್ಕ್ ಹೋಗಿ ಅಲ್ಲಿನ ಕ್ಯಾಫೆಟೇರಿಯಾದಲ್ಲೇ ಏನಾದ್ರೂ ಸಿಹಿ ತಿಂದು ಬರ್ತೀವಿ. ಪಟಾಕಿಗಳಾಗಲೀ, ಬಾಣಬಿರುಸಾಗಲೀ ಹೊಡೆಯೋದೇ ಇಲ್ಲ, ಇನ್ನು ಸುರುಸುರು ಬತ್ತಿಯೂ ಸದ್ದೂ ಇಲ್ಲ. ಎಲ್ಲವೂ ಫೈರ್ ಪ್ರೂಪ್ ಮನೆಗಳಲ್ಲಿ ಹೆದರಿಕೊಂಡು ಉರಿಯೋ ಹಾಗಿನ ಊದಿನಬತ್ತಿಯ ಥರ, ಅದರ ಹೊಗೆಯೂ ಧಾರಾಳವಾಗಿ ಎಲ್ಲಿ ಬೇಕಂದಲ್ಲಿ ಹರಡುವಂತಿಲ್ಲ, ಸೀದಾ ದೇವರ ಕೋಣೆಯ ಮಂಟಪದಿಂದ ಕಿಟಕಿಯ ಕಡೆಗೆ ನಡೆಯಬೇಕು. ಅಲ್ದೇ ಹೊರಗಡೆ ಕೊರೆಯೋ ಛಳಿಯಲ್ಲಿ ಹೆಚ್ಚು ಹೊತ್ತು ಕಿಟಕಿ ಬಾಗಿಲನ್ನು ತೆಗೆದಿಡೋಕೂ ಆಗೋದಿಲ್ಲವಾದ್ದರಿಂದ ಪೂರ್ಣ ಊದಿನಕಡ್ಡಿ ಉರಿಯೋ ಅಷ್ಟು ವ್ಯವಧಾನವೂ ನಮಗಿದ್ದಂತಿಲ್ಲ.

ಊರಿನಲ್ಲಿರೋ ಮನೇ ಮಂದಿಗಾಗಲೀ ಸ್ನೇಹಿತರಿಗಾಗ್ಲೀ ಫೋನ್ ಮಾಡಿ ಶುಭಾಶಯಗಳನ್ನು ಹೇಳಬಹುದಿತ್ತು, ಅಂತಹ ಮಹತ್ತರ ಘಳಿಗೆಗೆಲ್ಲಾ ವೀಕ್‌ಎಂಡೇ ಸಮ. ವಾರದ ದಿನಗಳಲ್ಲಿ ಫೋನ್ ತಿರುಗಿಸಿ ನಿಧಾನವಾಗಿ ಮಾತನಾಡೋದಕ್ಕೆ ಯಾರಿಗೂ ಪುರುಸೊತ್ತು ಇದ್ದ ಹಾಗೆ ಕಾಣಿಸಲಿಲ್ಲ. ಪಾಪ, ನಮಗಿಂತ ವ್ಯಸ್ತರಾಗಿರೋ ಅವರೇ ಭಾರತದಿಂದ ಕರೆ ಮಾಡಿ, ಎಸ್‌ಎಮ್ಮೆಸ್ ಕಳಿಸಿ ಶುಭಾಶಯಗಳನ್ನು ಹಂಚಿಕೊಂಡಿದ್ದು ಇತ್ತೀಚಿನ ದಿನಗಳ ವಿಶೇಷಗಳಲ್ಲೊಂದು. ಭಾರತದಲ್ಲಂತೂ ಮೊಬೈಲ್ ಫೋನ್ ಕ್ರಾಂತಿಯೇ ಕ್ರಾಂತಿ - ಮೆಸ್ಸೇಜುಗಳನ್ನು ಇಲ್ಲಿಗಿಂತಲೂ ಅಲ್ಲಿ ಹೆಚ್ಚಾಗಿಯೇ ಬಳಸುತ್ತಾರೇನೋ ಅನ್ನಿಸಿತು, ಒಂದು ಕಾಲದಲ್ಲಿ ಕಮ್ಯೂನಿಕೇಷನ್ನ್ ಅನ್ನೋದೇ ಇರಲಿಲ್ಲವೇ ಎಂದು ಕೇಳಿಕೊಳ್ಳುವಷ್ಟರ ಮಟ್ಟಿಗೆ. ಈ ಸಂವಹನಗಳಲ್ಲಿ ಎಲ್ಲ ಥರನಾದ ಮೆಸ್ಸೇಜುಗಳಿವೆ, ನವರಸ ನವಭಾವಗಳಿಗನುಗುಣವಾಗಿ.

ನಿಮ್ಮ ದೀಪಾವಳಿ ಆಚರಣೆ ಹೇಗಿತ್ತು ಅಂತ ಬರೀರಿ. ಮನೇ ಹೊರಗಡೆ ದೀಪಗಳನ್ನು ಇಟ್ಟಿದ್ರೋ ಇಲ್ವೋ? ನಿಮ್ಮ ಮನೆಯವರಿಗೆ ಮಕ್ಕಳಿಗೆ ಹೊಸ ಬಟ್ಟೆಬರೆ ತಂದಿದ್ರೋ ಹೇಗೆ? ದೇವಸ್ಥಾನಕ್ಕೆ ಹೋಗಿದ್ರಾ, ಲಕ್ಷ್ಮೀ ಪೂಜೆ ಮಾಡಿದ್ರಾ? ನಮ್ಮ್ ಹಬ್ಬಗಳ ಯಾದಿ ಇಲ್ಲಿಗೆ ಮುಗಿದ ಹಾಗೆ ಕಾಣ್ಸುತ್ತೆ, ಇನ್ನು ಬರೋದೇನಿದ್ರೂ ಅಮೇರಿಕನ್ ಹಬ್ಬಗಳು - ವೆಟಿರನ್ಸ್ ಡೇ, ಥ್ಯಾಂಕ್ಸ್‌ಗಿವಿಂಗ್, ಕ್ರಿಸ್‍ಮಸ್, ನ್ಯೂ ಇಯರ್!

ಹ್ಯಾಪ್ಫೀ ಹಾಲಿಡೇಯ್ಸ್!

Saturday, November 03, 2007

ನಾವು ನಾನಾದದ್ದೂ, ವ್ಯಥೆಯ ಬೆನ್ನ ಹಿಂದಿನ ಸುಖವೂ...

’ಥತ್ ತೇರೀಕೇ, ನೀನೆಲ್ಲಿ ಅಮೇರಿಕ ಬಿಟ್ಟ್ ಹೋಗ್ತೀಯೋ, ಸುಮ್ನೇ ಬೆಳ್ಳಂ ಬೆಳಗ್ಗೆ ಕೊರೀತಾ ಕುತಗಂತೀ ನೋಡು!’ ಎಂದು ಯಾವುದೋ ಒಂದು ಧ್ವನಿ ನನ್ನ ಬೆನ್ನ ಹಿಂದೆ ಕೇಳಿಸಿದಂತಾಯ್ತು, ಬೆಚ್ಚಿ ಬಿದ್ದು ತಿರುಗಿ ನೋಡಿದೆ ಯಾರೂ ಕಾಣಿಸದಿದ್ದುದಕ್ಕೆ ಮತ್ತಷ್ಟು ಹೆದರಿಕೆಯಾದಂತನ್ನಿಸಿತು. ಈಗಾಗ್ಲೇ ಅಲ್ಲಲ್ಲಿ ಛಳಿ ಬಿದ್ದು ಮೈ ನಡುಕಾ ಬರೋ ಹಾಗಿದ್ರೂ ಮನೇಲಿರೋ ಯಾವ್ದೋ ಒಂದು ಶಾಲ್ ಅನ್ನು ಸುತ್ತಿಕೊಂಡು ಇನ್ನೂ ಹಬೆ ಆಡುತ್ತಿದ್ದ ಕಾಫಿ ಕಪ್ ಅನ್ನು ಹಿಡಕೊಂಡು ಡೆಕ್ ಮೇಲೆ ಹೋಗಿ ಅಲ್ಲಿರೋ ಖುರ್ಚಿಯಲ್ಲಿ ಕುಳಿತು ಸೂರ್ಯನಿಗೆ ಮುಖ ಮಾಡಿಕೊಂಡು ನನ್ನ ಯೋಚನೆ ಒಳಗೆ ನಾನೇ ಬಿದ್ದು ಹೋಗಿದ್ದೆ. ಈಗಾಗಲೇ ಸಾಕಷ್ಟು ಎಲೆಗಳನ್ನು ಕಳೆದುಕೊಂಡ ಅಕ್ಕ ಪಕ್ಕದ ಮರಗಳು ಸ್ವಲ್ಪವೇ ಗಾಳಿ ಬೀಸಿದರೂ ಇನ್ನಷ್ಟು ಎಲೆಗಳನ್ನು ಕಳೆದುಕೊಂಡು ಬೋಳಾಗುವ ದುಃಖದಲ್ಲಿದ್ದವರಂತೆ ಆಗೀಗ ಬೀಸಿ ಮಾಯವಾಗುತ್ತಿದ್ದ ಗಾಳಿಗೆ ತೊನೆಯುತಿದ್ದವು. ಇಷ್ಟು ದಿನ ಹಸಿರನ್ನು ಮೆರೆಯುತ್ತಿದ್ದ ಹುಲ್ಲು ಹಾಸಿನ ಮೇಲೆ ಅಲ್ಲಲ್ಲಿ ತೇಪೆ ಹಾಕಿದ ಕೌದಿಯನ್ನು ನೆನಪಿಸುವ ಹಾಗೆ ಹಳದಿ ಕೆಂಪು ಎಲೆಗಳು ಹರಡಿಕೊಂಡಿದ್ದವು. ಆಗಷ್ಟೇ ಚಿಗುರೊಡೆಯುತ್ತಿದ್ದ ಸೂರ್ಯನ ಕಿರಣಗಳು ಅವು ಬಿದ್ದ ವಸ್ತುಗಳ ನೆರಳನ್ನು ಯಶಸ್ವಿಯಾಗಿ ಸೃಷ್ಟಿಸುವಲ್ಲಿ ಯಶಸ್ಸು ಪಡೆದಿದ್ದವು.

ನಿನ್ನೆ ಫೋನ್‌ನಲ್ಲಿ ಯಾರಿಗೋ ಹೇಳ್ತಾ ಇದ್ದೆ - ’ಹೋಗ್ಬಿಡೋಣ, ಅಲ್ಲೇನು ಬೇಕಾದ ಹಾಗೆ ಕೆಲ್ಸಾ ಸಿಗುತ್ತೇ’ ಅಂತ. ಆದ್ರೆ ಕರೆ ಮುಗಿದ ಮೇಲೆ ಮತ್ತೆ ಅದೇ ವಾಕ್ಯಗಳನ್ನು ಮೆಲುಕು ಹಾಕಿಕೊಂಡವನಿಗೆ ವಾಸ್ತವ, ಸತ್ಯ ಇವೆರಡೂ ಹೆದರಿಸ ತೊಡಗಿದವು. ಒಂದು ಮನೆ ಕಟ್ಟಿಸೋಕೆ (ಅಪ್ಪಂತಾ ಸೈಟಿನಲ್ಲಿ) ಏನಿಲ್ಲಾ ಅಂದ್ರೂ ಒಂದು ಕೋಟಿ ರೂಪಾಯ್ ಬೇಕು ಅಂತಾರಂತೆ ಬೆಂಗ್ಳೂರಿನಲ್ಲಿ, ಅಪಾರ್ಟ್‌ಮೆಂಟುಗಳನ್ನು ತೆಗೆದುಕೊಂಡ್ರೂ ಸುಮಾರು ಐವತ್ತು ಲಕ್ಷದವರೆಗೂ ಆಗುತ್ತಂತೆ. ಅನಿವಾಸಿಗಳು ಅಂದಾಕ್ಷಣ ಅಷ್ಟೊಂದು ದುಡ್ಡು ಬಿದ್ದು ಸುರಿತಾ ಇರುತ್ತೆ ಅಂತ ಎಲ್ರೂ ಯಾಕ್ ಅಂದ್ಕೋತಾರೆ? ಕೆಲವ್ರು ಅಲ್ಲೂ ಸಾಲಾ ಮಾಡಿ ಮನೆ-ಮಠ ತಗೋತಾರಂತೆ, ಇಷ್ಟೊಂದು ವರ್ಷಾ ಕಷ್ಟಪಟ್ಟ ಮೇಲೂ ಅಲ್ಲೂ ಹೋಗೀ ಸಾಲದಲ್ಲೇ ಬದುಕೋದು ಹೇಗೆ ಸಾಧ್ಯ? ಇತ್ತೀಚಿಗಂತೂ ಅಲ್ಲಿನ ಕಂಪನಿಗಳು ಇಲ್ಲೀಗಿಂತ ಹೆಚ್ಚೇ ಕೆಲ್ಸಾ ತೆಗೀತಾರೆ, ಇನ್ನು ಅಲ್ಲಿ ಹೋಗಿ ಒದ್ದಾಡೋದ್‌ಕಿಂತ ಇಲ್ಲಿರೋ ಸ್ಟ್ಯಾಟಸ್ ಕೋ ನೇ ಸಾಕಾಗಲ್ವಾ?

ಈ ಮೇಲಿನ ಪ್ರಶ್ನೆಗಳೆಲ್ಲ ನನ್ನ ತಲೆಯನ್ನು ಬಿಸಿಮಾಡಿದ್ವು ಆದರೆ ದೇಹಕ್ಕೆ ಛಳಿ ಹೆಚ್ಚಾದಂತಾಗಿ ಇನ್ನು ಹೊರಗಡೆ ಕೂರೋದಕ್ಕೆ ಆಗೋದೇ ಇಲ್ಲ ಎಂದಾಗ ಮನೆ ಒಳಗೆ ಬಂದು ಪ್ಯಾಡಿಯೋ ಡೋರ್ ಅನ್ನು ಯಾವ್ದೋ ಶತ್ರುವನ್ನು ಮನೆಯಿಂದ ಆಚೆಗೆ ತಳ್ಳೋ ಫೋರ್ಸ್‌ನಲ್ಲಿ ಎಳೆದು ಮುಚ್ಚಿದ್ದಾಯಿತು. ಮೊಣಕೈಯಿಂದ ಮುಂಗೈವರೆಗೆ ಗೂಸ್ ಬಂಪ್ಸ್ ಬಂದು ಕೂದಲುಗಳೆಲ್ಲ ಯಾವ್ದೋ ಸಂಗೀತವನ್ನು ಆಲಿಸೋರ ಕಿವಿಗಳ ಹಾಗೆ ನಿಮಿರಿಕೊಂಡಿದ್ದವು. ಇನ್ನೂ ಮರಗಳಿಂದ ಬೀಳ್ತಾ ಇರೋ ಎಲೆಗಳು ನನ್ನ ಸೋಲನ್ನು ನೋಡಿ ಚಪ್ಪಾಳೆ ಹಾಕ್ತಾ ಇರೋರ ಹಾಗೆ ಕಂಡುಬಂದವು. ದೇಹದ ಒಳಗೆ ಕಾಫೀ ಹೋಗಿ ನರಮಂಡಲವೆಲ್ಲ ಮತ್ತಷ್ಟು ಚುರುಕಾಗಿ ಆಲೋಚನೆಗಳು ಮತ್ತಷ್ಟು ಗಾಢವಾದವು, ಆದರೆ ಹೆಚ್ಚು ಪ್ರಶ್ನೆಗಳೇ ಹೊರಬಂದವೇ ವಿನಾ ಉತ್ತರಗಳ ಸುಳಿವೂ ಕೂಡ ಅಲ್ಲಿರಲಿಲ್ಲ.

’ಅಲ್ಲಿನ್ ಶಾಲೆಗಳಿಗೆ ಮಕ್ಳುನ್ ಸೇರ್ಸೋದೂ ಅಂದ್ರೆ ಅದೇನ್ ಆಟಾ ಅಂತ ತಿಳಕೊಂಡಿದೀಯಾ?’ ಅನ್ನೋ ಮತ್ತೊಬ್ಬ ಸ್ನೇಹಿತನ ಪ್ರಶ್ನೆ. ಒಂದೊಂದು ಮಗುವಿಗೆ ವರ್ಷಕ್ಕೆ ಹೆಚ್ಚೂ ಕಡಿಮೆ ಒಂದೂವರೆ ಲಕ್ಷ ಖರ್ಚು ಮಾಡೋ ಅವನ ಹತ್ತಿರದ ಸಂಬಂಧಿಯೊಬ್ಬರ ವಿವರವನ್ನು ಹೇಳಿದ. ಆದೇನು ಅಲ್ಲಿನ ಸ್ಕೂಲೋ ನಿಯಮವೋ ನಾವು ಓದಿದ ಸರ್ಕಾರಿ ಶಾಲೆಗಳ ಜಮಾನ ಮುಗಿದಂತೇ ಎಂದು ನನಗೆ ಬಹಳ ಹಿಂದೆಯೇ ಅನ್ನಿಸಿದೆ. ಯಾವೊಬ್ಬ ಅನಿವಾಸಿ, ಅವರ ಸಂಬಂಧಿಗಳ ಮಕ್ಕಳಾಗಲೀ ಅವರ ಮಾತುಕಥೆಗಳಾಗಲೀ ಸರ್ಕಾರೀ ಶಾಲೆಯ ಹತ್ತಿರವೂ ಸುಳಿಯೋದಿಲ್ಲ. ಎಲ್ಲರೂ ಆ ಅಕಾಡೆಮಿ, ಈ ಅಕಾಡೆಮಿ ಅನ್ನೋ ಬೋರ್ಡುಗಳಿಗೆ ದುಡ್ಡು ಸುರಿಯೋರೇ. ಕಾಲ ಬದಲಾಗಿದೆ ನಿಜ, ಆದರೆ ಸರ್ಕಾರಿ ಶಾಲೆಯಲ್ಲಿ ಓದಿ ನಾವು ಮನುಷ್ಯರಾಗಲಿಲ್ಲವೇ? ನಾವು ಓದಿದ ಸರ್ಕಾರಿ ಶಾಲೆಗಳು ಸೆಕ್ಯುಲರಿಸಂ ಅನ್ನೋ ಆ ಪದದ ಅರಿವಿರದೆಯೂ ತುಂಬಾ ಚೆನ್ನಾಗಿ ಕಾಪಾಡಿಕೊಂಡು ಬಂದವುಗಳು. ನಾವು ಹಾಡುವ ನಾಡಗೀತೆ, ರಾಷ್ಟ್ರಗೀತೆಗಳನ್ನು ಬಿಟ್ಟರೆ, ವರ್ಷಕ್ಕೊಮ್ಮೆ ಹಬ್ಬ ಹರಿದಿನಗಳಲ್ಲಿ ದೇವರುಗಳನ್ನು ನೆನೆಯುವುದನ್ನು ಬಿಟ್ಟರೆ ದಿನವೂ ನಮಗೆ ದೇವರ ಪ್ರಾರ್ಥನೆ ಇರಲಿಲ್ಲ. ಅಂಥ ನಿಯಮಗಳನ್ನು ಮನೆಯಲ್ಲಿಯೇ ಕಾಪಾಡಿಕೊಂಡ ನಾವುಗಳು ಇಂದು ಯಾವ ಬೋರ್ಡು, ಕಾನ್ವೆಂಟಿನಲ್ಲಿ ಓದಿದ ಮಕ್ಕಳಿಗೆ ಕಮ್ಮಿ? ನಮ್ಮ ನುಡಿಯಲ್ಲಿ ನಾವು ’ಅಗಸ-ಆಡು’ ಓದಿಕೊಂಡು ಬಂದರೂ ಇಲ್ಲಿ A for Apple ಎಂದುಕೊಂಡೇ ಬದುಕನ್ನು ನಡೆಸಿಕೊಂಡು ಹೋಗುತ್ತಿಲ್ಲವೇ? ಇನ್ನು ಕೆಲವರ ಮಕ್ಕಳು ಹೋಗುವ ಶಾಲೆಗಳಲ್ಲಿ ಇಂಗ್ಲೀಷ್ ಬಿಟ್ಟು ಬೇರೆ ಭಾಷೆಯನ್ನಾಡಿದರೆ ದಂಡ ವಿಧಿಸುತ್ತಾರಂತೆ! ಅಮೇರಿಕ, ಬ್ರಿಟನ್ನುಗಳಲ್ಲಿ ಇಲ್ಲದ ಕಾಯಿದೆ ಇಂಡಿಯಾದವರಿಗ್ಯಾಕ್ ಬೇಕಪ್ಪಾ? ಹಾಳಾದೋರು, ಇಂಗ್ಲೀಷ್ ಕಲಿಸೀ ಕಲಿಸೀ ದೇಶಾನ ಉದ್ದಾರ ಮಾಡಿರೋದನ್ನ ನೋಡೋಕ್ ಕಾಣ್ತಾ ಇಲ್ವಾ ಕಳೆದ ಅರವತ್ತು ವರ್ಷಗಳಲ್ಲಿ? ಒಂದೊಂದು ಮಗೂಗೆ ವರ್ಷಕ್ಕೆ ಒಂದೂವರೆ ಲಕ್ಷವನ್ನ ಎಲ್ಲಿಂದ ತರ್ತಾರಂತೆ, ಇವರೆಲ್ಲಾ ಹೊಟ್ಟೆಗೇನ್ ತಿಂತಾರೆ? ನಮ್ಮತನವನ್ನ ಕಲೀಲಿ ಅಂತ ಇಲ್ಲಿಂದ ಅಲ್ಲಿಗ್ ಕರ್ಕೊಂಡ್ ಹೋಗಿ ಶಾಲೇಲ್ ಇಂಗ್ಲೀಷ್ ಮಾತಾಡು, ಮನೇಲ್ ಕನ್ನಡ ಕಲಿ ಅಂದ್ರೆ ಆ ಮಗುವಿನ್ ಮೇಲೆ ಏನೇನ್ ಪರಿಣಾಮ ಆಗುತ್ತೋ?

’ಯಾಕೆ, ಇಲ್ಲಿಂದ ಹೋದೋರೆಲ್ಲಾ ಬೆಂಗ್ಳೂರ್ನಲ್ಲೇ ಸಾಯ್‌ಬೇಕೂ ಅಂತ ವಿಧಿ ನಿಯಮಾ ಏನಾದ್ರೂ ಇದೆಯೇನು?’ ಅನ್ನೋ ಪ್ರಶ್ನೆ ಮತ್ತೆಲ್ಲಿಂದಲೋ ಬಂತು. ಅದೂ ಹೊಲಸೆದ್ದು ಹೋಗಿರೋ ನಗರ, ಮೊನ್ನೇ ಹೋದಾಗ ಬೆಳಗ್ಗೆ ಆರು ಘಂಟೆಗೆ ಎಮ್.ಜಿ.ರಸ್ತೆ ನೋಡಿ ವಾಕರಿಕೆ ಬಂದಿತ್ತು. ಎಲ್ಲೆಲ್ಲಿ ನೋಡಿದ್ರೂ ಕಸ, ಮುಸುರೆ, ಒಂದಕ್ಕೂ ರೂಲ್ಸು, ನೀತಿ-ನಿಯಮಾ ಅನ್ನೋದೇನೂ ಇದ್ದಂಗೇ ಕಾಣಿಸ್ಲಿಲ್ಲ. ಬೆಳಗ್ಗೆ ವಿಮಾನ ನಿಲ್ದಾಣದಿಂದ ಮನೆಗೆ ಹೊರಟ ನನಗೆ ಮೂರ್ನಾಲ್ಕು ಕಡೆ ಹಾರ್ಟ್ ಅಟ್ಯಾಕ್ ಆಗೋದೊಂದೇ ಬಾಕೀ ಇತ್ತು. ಎಲ್ಲೆಲ್ಲಿ ಕೆಂಪು ದೀಪಗಳು ಇದ್ದವೋ ಅಲ್ಲೆಲ್ಲಾ ಜನಗಳು ಸರಾಗವಾಗಿ ವಾಹನಗಳನ್ನು ನುಗ್ಗುಸ್ತಲೇ ಇದ್ದರು. ಇರೋ ಜನರನ್ನು ನೋಡಿಕೊಳ್ಳಲೇ ಯಾವುದೇ ವ್ಯವಸ್ಥೆ, ಪ್ಲಾನುಗಳು ಇಲ್ಲದ ಪ್ರದೇಶಕ್ಕೆ ಹೋಗಿ ಗೊತ್ತಿರೋರು, ಗೊತ್ತಿಲ್ಲದವರೆಲ್ಲ ತಗಲಾಕಿಕೊಂಡ್ರೆ ಹೇಗೆ? ಅನಿವಾಸಿಗಳು ತಮ್ಮ ತಮ್ಮ ಊರಿಗೋ ಅಥವಾ ಅವರವರ ಜಿಲ್ಲಾ ಕೇಂದ್ರಕ್ಕೋ ಹೋಗಿ ಅಲ್ಲೇ ಯಾಕೆ ವಾಸ್ತವ್ಯ ಹೂಡಬಾರ್ದು. ಅನಿವಾಸಿಗಳ ಶೋಕಿ ಜೋಕಿ ಆಚಾರ-ವಿಚಾರ ಏನೂ ಅಂತ ಎಲ್ಲರಿಗೂ ಸ್ವಲ್ಪ ತಿಳೀಲಿ. ಬೆಂಗ್ಳೂರಿನ ಅವ್ಯವಸ್ಥೆಯಲ್ಲಿ ಬದುಕೋದಕ್ಕಿಂತ ಮಂಗ್ಳೂರೋ-ಮೈಸೂರಿನ ಅವ್ಯವಸ್ಥೆಯಲ್ಲಿ ಇರೋದು ಸರಿ ಅನ್ಸಲ್ವಾ? ಅದೂ ಅಲ್ದೇ ಇಲ್ಲೆಲ್ಲಾ ಮಲ್ಟಿನ್ಯಾಷನಲ್ ಕಂಪನಿಗಳಿಗೆ ದುಡಿದವರು ಅಲ್ಲಿ ಹೋಗಿ ದೇಸೀ ಕಂಪನಿಗಳಿಗೋ ಅಥವಾ ತಮ್ಮದೇ ಆದ ಕಂಪನಿಗಳಿಗೆ ದುಡಿಯೋದು ಸರಿ ಅನ್ಸಲ್ವಾ? ನನಗ್ ಗೊತ್ತು, ನಾನು ಏನೇ ಅಂದ್ರೂ ಎಲ್ರೂ ಬೆಂಗ್ಳೂರಿಗೇ ವಾಪಸ್ ಹೋಗಿ ತಗಲ್ ಹಾಕ್ಕೋತಾರೇ ಅಂತ. ಅದ್ರಿಂದಾನೇ ಅಲ್ಲಿ ಮನೆ-ಮಠ-ಸೈಟುಗಳಿಗೆ ಅಷ್ಟೊಂದು ದುಡ್ಡಾಗಿರೋದು. ಇಲ್ಲಿ ಐದು ವರ್ಷ ಸಂಪಾದ್ಸಿ ಉಳ್ಸಿರೋ ದುಡ್ನಲ್ಲಿ ಊರ ಹೊರಗೆ ಒಂದು ಸಿಕ್ಸ್ಟೀ ಫಾರ್ಟೀ ಸೈಟ್ ತೆಗೊಂಡ್ರೇ, ಇನ್ನು ಅದ್ರಲ್ಲಿ ಮನೇ ಕಟ್ಟ್ಸೋದಕ್ಕೆ ಇನ್ನೂ ಹತ್ತು ವರ್ಷ ದುಡೀಬೇಕಾಗುತ್ತೆ. ಅಲ್ಲಿನ ಇನ್‌ಫ್ಲೇಷನ್ನುಗಳನ್ನು ಯಾರು ಕಾಯ್ಕೊಂಡಿರ್ತಾರೆ, ಇವತ್ತು ನೂರು ರುಪಾಯಿಗೆ ಸಿಗೋದು ನಾಳೆ ಸಾವ್ರ ರೂಪಾಯಿಗೂ ಸಿಗೋದಿಲ್ಲ, ಮುಂದೆ ಒಂದು ದಿನ ಒಂದು ಲೋಫ್ ಬ್ರೆಡ್ ತೆಗೊಳೋಕೂ ಒಂದು ಲಾರಿ ಲೋಡ್ ದುಡ್ಡು ತಗೊಂಡು ಹೋಗ್ಬೇಕಾಗುತ್ತೆ.

ಈಗಾಗ್ಲೇ ನಾನು ಮನೇ ಒಳಗೆ ಬಂದಿದ್ದರಿಂದ ಹೊರಗಿನ ಛಳಿ ಹೊರಗೇ ಇತ್ತು. ಪ್ಯಾಡಿಯೋ ಬಾಗಿಲ್ಲನ್ನ ಸ್ಲ್ಯಾಮ್ ಮಾಡಿದೆ ಎಂದು ಬಾಗಿಲಿಗೆ ಎದುರಾಗಿರುವ ಅಕ್ವೇರಿಯಮ್ ನಲ್ಲಿರೋ ಮೀನು ಒಂದು ಲುಕ್ ಕೊಟ್ಟಿತು, ಸದ್ಯ ಮನೆಯಲ್ಲಿ ಇದೊಂದು ಮಾತಾಡಲ್ಲ ಎಂದು ಉಸ್ ಎಂದೆ, ಆದರೂ ಏನೋ ವಟವಟಗುಟ್ಟುತ್ತಲೇ ಇತ್ತು. ನಾವು ವಾಪಾಸ್ ಹೋಗ್ಬೇಕು ಆದ್ರೆ ಫುಲ್‌ಟೈಮ್ ಕೆಲ್ಸಾ ಮಾಡ್ಬಾರ್ದು, ಮಕ್ಳು ಒಳ್ಳೇ ಶಾಲೇನಲ್ಲಿ ಓದ್ಬೇಕು ಆದ್ರೆ ಲಕ್ಷಗಟ್ಟಲೇ ಖರ್ಚಾಗಾಬಾರ್ದು, ಎಲ್ಲಿಗೆ ಹೋದ್ರೂ ಬೆಂಗ್ಳೂರಿಗೆ ಮಾತ್ರ ಹೋಗ್ಬಾರ್ದು-ಮತ್ತಿನ್ನ್ಯಾವ ಊರು ಒಳ್ಳೆಯದು, ಎಲ್ಲಾ ಇರೋಣ ನಮ್‌ತನಾನ ಉಳಿಸಿಕೊಳ್ಳೋಣ - ಎನ್ನೋ ಮಾತುಗಳೆಲ್ಲ ಚರ್ಚಾಸ್ಪರ್ಧೆಯ ವಾದ-ಪ್ರತಿವಾದಗಳಂತೆ ಕಣ್ಣ ಮುಂದೆ ಸುಳಿದುಹೋದವು. ’ನಾನು ಹೋಗೇ ಹೋಗ್ತೀನಿ’ ಅನ್ನೋ ಧ್ವನಿ ಇದ್ದಕ್ಕಿದ್ದ ಹಾಗೆ ಕ್ಷೀಣಿಸ ತೊಡಗಿದ್ದೂ ಅಲ್ದೇ ಇಷ್ಟೊತ್ತಿನವರೆಗೆ ಇದ್ದ ’ನಾವು’ ಎನ್ನುವ ಸ್ವರ ಏಕದಂ ’ನಾನು’ ಆದದ್ದಕ್ಕೆ ಒಮ್ಮೆ ವ್ಯಥೆಯಾಯಿತು, ಅದರ ಮಗ್ಗುಲಿನಲ್ಲಿ ಸುಖವೂ ಹಾಯಾಗಿ ನಿದ್ರಿಸುತಲಿತ್ತು.

Sunday, August 19, 2007

ರಿವರ್ಸ್ ಮೈಂಗ್ರಟ್ ಎನ್ನುವ ಹೊಸ ಆಯಾಮ

ಇದನ್ನು ಬರೀತಾ ಇರಬೇಕಾದ್ರೆ ಭಾನುವಾರ ಸಾಯಂಕಾಲ - ಇನ್ನೇನು ನಾಳೆ ಬರೋ ಸೋಮವಾರ ಹೆದರ್ಸೋ ಹೊತ್ತಿಗೆ ಇವತ್ತಿನ ಉಳಿದ ಭಾನುವಾರವನ್ನಾದ್ರೂ ಅನುಭವಿಸೋಣ ಎಂದುಕೊಂಡು ಕುಳಿತ್ರೆ ಹಾಳಾದ್ ಆಲೋಚ್ನೆಗಳು ಬಹಳ ದಿನಗಳ ನಂತರ ಸಿಕ್ಕಿರೋ ಸ್ನೇಹಿತ್ರ ಥರ ತಬ್ಬಿಕೊಂಡ್ ಬಿಡೋದೂ ಅಲ್ದೇ ಒಂದೇ ಉಸಿರಿನಲ್ಲಿ ಏನೇನೆಲ್ಲ ಪ್ರಶ್ನೆಗಳನ್ನು ಕೇಳೋ ಹಾಗೆ ಅಲೆಗಳನ್ನು ಹುಟ್ಟಿಸ್ತಾವೆ! ಭಾನುವಾರ ರಾತ್ರೆ ಆಗುತ್ತಿದ್ದ ಹಾಗೆ ಸುಬ್ಬನ ಆಲಾಪನೆ ಆರಂಭಿಸಿ ಹಗುರವಾದ ಹಾಸ್ಯಕ್ಕೆ ಕೈ ಹಾಕ್ಲೋ ಅಥವಾ ಮನದ ಮೂಲೆಯಲ್ಲಿ ಕೊರೀತಾ ಇರೋ ರಿವರ್ಸ್ ಮೈಗ್ರಂಟ್ ಅನ್ನೋ ಹುಳುವನ್ನು ಹೊರಕ್ಕೆ ಹಾಕ್ಲೋ ಅಂತ ಯೋಚಿಸ್ತಿದ್ದಾಗ ರಿವರ್ಸ್ ಮೈಗ್ರಂಟೇ ಫುಲ್ ಸ್ವಿಂಗ್‌ನಲ್ಲಿ ಹೊರಗ್ ಬರ್ತಾ ಇದೆ...ನಿಮ್ಮ ಕಷ್ಟ ನಿಮಗೆ!

***

ಈ ರಿವರ್ಸ್ ಮೈಗ್ರಂಟ್‌ ಅನ್ನೋ ಮಹಾನುಭಾವರು ಮತ್ಯಾರೂ ಅಲ್ಲಾ - ನಾವೂ ನೀವೂ ಹಾಗೂ ನಮ್ಮೊಳಗಿನ ಇವತ್ತಲ್ಲಾ ನಾಳೆ, ನಾಳೆ ಅಲ್ಲಾ ನಾಳಿದ್ದು ವಾಪಾಸ್ ಹೋಗ್ತೀವಿ ಅನ್ನೋ ಧ್ವನಿ ಅಷ್ಟೇ. ಯಾಕ್ ವಾಪಾಸ್ ಹೋಗ್ತೀವಿ, ಹೋಗ್ಬೇಕು ಅನ್ನೋ ಪ್ರಶ್ನೆಗಳಿಗೆ ಉತ್ರ ಸುಲಭವಾಗಿ ಮೆಲ್ನೋಟಕ್ಕೆ ಸಿಕ್ಕಂತೆ ಕಂಡ್ರೂ ಅದರ ಆಳ ಅವರವರ ಎತ್ರದಷ್ಟೇ ಇರುತ್ತೆ. ಸ್ಯಾಟಿಸ್‌ಫ್ಯಾಕ್ಷನ್ ಅಥವಾ ತೃಪ್ತಿ ಅನ್ನೋದು ಉತ್ತರಗಳ ಯಾದಿಯಲ್ಲಿ ಮೊದಲು ನಿಲ್ಲೋ ಭೂಪ ಅಷ್ಟೇ, ಅಲ್ಲಿಂದ ಆರಂಭವಾದದ್ದು - ಸುಖವಾದ ಜೀವನ (whatever that means), ಮಕ್ಕಳ ವಿದ್ಯಾಭ್ಯಾಸ, ಬಂಧು-ಬಳಗದ ಆಸರೆ ಆರೈಕೆ, ಸಾಯೋದ್ರೊಳಗೆ ಏನಾದ್ರೊಂದ್ ಮಾಡಿ ಸಾಯ್‌ಬೇಕು ಅನ್ನೋ ಬಯಕೆ, ನಮ್ ನಮಗೆ ಬೇಕಾದ ವೃತ್ತಿ-ಪ್ರವೃತ್ತಿಗಳಲ್ಲಿ ತೊಡಗಿಕೊಳ್ಳಬಹುದು ಅನ್ನೋ ಆಸೆ, ಇಲ್ಲಿಯಷ್ಟೇ ಅಲ್ಲೂ ಕಮಾಯಿಸಬಹುದು ಅನ್ನೋ ಅದಮ್ಯ ಉತ್ಸಾಹ - ಇತ್ಯಾದಿ ಹೀಗೆ ಈ ಸಾಲಿನಲ್ಲಿ ತುಂಬುವ ಪದಗಳಿಗೆ ಕೊರತೆಯೇ ಇರೋದಿಲ್ಲ. ನಾವು, ನಮ್ಮ ಸಂಸ್ಕೃತಿ, ನಮ್ಮ ಜನ, ನಮ್ಮ ನೆರೆಹೊರೆ, ನಮ್ಮ ಸಮಾಜ ಮುಂತಾಗಿ ನಮ್ಮನ್ನು ಸುತ್ತುಬಳಸಿಕೊಂಡಿರೋ ಕನಸುಗಳು ಇವತ್ತಿಗೂ ನಮ್ಮೂರಿನ ಸುತ್ಲೂ ಗಿರಕಿ ಹೊಡೆಯೋದು ನನ್ನಂತಹವರ ಅನುಭವ, ಅದಕ್ಕೆ ತದ್ವಿರುದ್ಧವಾಗಿ ಕೆಲವರಿಗೆ ಇನ್ನು ಬೇರೆಬೇರೆ ರೀತಿಯ ಕನಸುಗಳು ಇರಬಹುದು. ಕನಸುಗಳು ಹೇಗೇ ಬೀಳಲಿ - ಅವುಗಳು ಬಣ್ಣದವೋ, ಅಥವಾ ಕಪ್ಪು-ಬಿಳಿಪಿನವೋ ಯಾರು ಹೇಳಬಲ್ಲರು? ಒಂದೇ ಸಾಲಿನಲ್ಲಿ ಹೇಳಬೇಕೆಂದರೆ (ಕಡ್ಡಿ ಮುರಿದ ಹಾಗೆ), ಇಲ್ಲಿ ಬಂದು ಕಲಿತ ವಿದ್ಯೆ-ಅನುಭವವನ್ನು ಬೇರೆಡೆ ಬಳಸಿ ಅಲ್ಲಿ ಬದಲಾವಣೆಗಳನ್ನು ಮಾಡುವುದು ರಿವರ್ಸ್ ಮೈಂಗ್ರಂಟುಗಳ ಮನಸ್ಸಿನಲ್ಲಿ ಇರುವ ಮತ್ತೊಂದು ಚಿಂತನೆ.

ಭಾರತದಿಂದ ಅಮೇರಿಕಕ್ಕೆ ಬರೋದು ಹಿಂದೂ ಧರ್ಮದಿಂದ ಕ್ರೈಸ್ತ ಮತಕ್ಕೋ ಅಥವಾ ಇಸ್ಲಾಮಿಗೋ ಮತಾಂತರವಾದಷ್ಟೇ ಸುಲಭ (ಅಥವಾ ಕಷ್ಟ) - ಅದೇ ಅಮೇರಿಕದಿಂದ ಭಾರತಕ್ಕೆ ಹಿಂತಿರುಗಿ ಹೋಗೋದಿದೆಯಲ್ಲಾ ಅದು ಬೇರೆ ಯಾವುದೋ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಷ್ಟೇ ಸಂಕೀರ್ಣವಾದದ್ದು. ಹಿಂದೂ ಧರ್ಮಕ್ಕೆ ಮತಾಂತರಗೊಂಡವರು ಯಾವ ಜಾತಿಗೆ ಸೇರುತ್ತಾರೆ, ಯಾವ ಭಾಷೆ, ಸಂಸ್ಕೃತಿಯನ್ನು ಅನುಸರಿಸುತ್ತಾರೆ? ಹಾಗೇ ನಮ್ಮ ಅನಿವಾಸಿ ನೆಲೆಯಿಂದ ನಾವು ಹಿಂತಿರುಗುವುದೆಲ್ಲಿಗೆ? ಬರೀ ಭಾರತದ ಗಡಿಯೊಳಗೆ ನುಸುಳೋಣವೋ, ದೆಹಲಿ, ಬಾಂಬೆ, ಮದ್ರಾಸ್‌ನಲ್ಲಿ ನೆಲೆಸೋಣವೋ? ನಮ್ಮದಲ್ಲದ ಬೆಂಗಳೂರಿಗೆ ಹಿಂತಿರುಗೋಣವೋ? ವೃದ್ದಾಪ್ಯದ ಹೊಸ್ತಿಲಲ್ಲಿರುವವರನ್ನು ಹೊರತು ಪಡಿಸಿ ಬೇರೆ ಯಾರೂ ನಮ್ಮನ್ನು ಗುರುತಿಸದ ನಮ್ಮೂರಿಗೆ ಹೋಗೋಣವೋ? ಎಲ್ಲಿ ಕೆಲಸ ಮಾಡುವುದು? ಯಾವ ಕೆಲಸ ಮಾಡುವುದು? ಎಲ್ಲಿ ನೆಲೆಸುವುದು? ಯಾವ ಭಾಷೆ ಮಾತನಾಡುವುದು? ಹೀಗೆ ಪ್ರಶ್ನೆಗಳ ಯಾದಿ ಬೆಳೆಯುತ್ತಾ ಹೋಗುತ್ತೇ ವಿನಾ ಅವುಗಳ ಹಿಂದಿನ ಉತ್ತರದ ವ್ಯಾಪ್ತಿ ಕಡಿಮೆ ಏನೂ ಆಗೋದಿಲ್ಲ.

***

ನಾವು ಅಲ್ಲಿಗೆ ಹೋಗಿ ಮಾಡಬೇಕಾದ ಬದಲಾವಣೆಯ ಬಗ್ಗೆ, ಅಂತಹ ಉನ್ನತವಾದ ಪರಿಕಲ್ಪನೆಗಳ ಬಗ್ಗೆ ಒಂದಿಷ್ಟು ಯೋಚಿಸಬೇಕು. ನಾವು ಸಾಮಾಜಿಕ ಹರಿಕಾರರಲ್ಲ - ಬಸವಣ್ಣ, ಬುದ್ಧ, ಗಾಂಧಿಯವರು ಕಲಿಯುಗದಲ್ಲಿ ಮತ್ತೆ ಹುಟ್ಟೋಲ್ಲ. ನಮ್ಮ ನೆರೆಹೊರೆ, ನಮ್ಮ ಆಸುಪಾಸು, ನಮ್ಮ ಹಿತ್ತಲು-ಅಂಗಳಗಳನ್ನು ಶುಚಿಯಾಗಿಟ್ಟುಕೊಳ್ಳುವುದು ಒಂದು ಬದಲಾವಣೆ, ನಾವು ಶಿಸ್ತಿನ ಜೀವನವನ್ನು ಸಾಗಿಸಿಕೊಂಡು ಹೋಗಬೇಕಾದ್ದು ಮತ್ತೊಂದು ಬದಲಾವಣೆ, ದೊಡ್ಡ ಸಾಗರದ ಅಲೆಗಳಲ್ಲಿ ಮಾತ್ರ ನಮ್ಮನ್ನು ನಾವು ಕಳೆದುಕೊಳ್ಳದೇ ಅಗಾಧವಾದ ಸಮುದ್ರದಲ್ಲಿ ನಮ್ಮನ್ನು ನಾವು ಸ್ಥಾಪಿಸಿಕೊಂಡು ಅದರಲ್ಲಿ ಈಸಿ-ಜಯಿಸುವುದು ದೊಡ್ಡ ಬದಲಾವಣೆ. ಇಷ್ಟೆಲ್ಲಾ ಆಗುತ್ತಿರುವಲ್ಲೇ ಏನಾದರೊಂದನ್ನು ಮಾಡಬೇಕು ಎನ್ನುವ ತುಡಿತಕ್ಕೆ ಉತ್ತರವನ್ನು ಕಂಡುಕೊಳ್ಳಬೇಕು, ಅದು ಇನ್ನೂ ದೊಡ್ಡ ಬದಲಾವಣೆ - ಒಂಥರಾ ಕಷ್ಟಪಟ್ಟು ಜೀಕೀ ಜೀಕಿ ಹಳೆಯ ಸೈಕಲ್ಲ್‌ನಲ್ಲಿ ಬೆಟ್ಟವನ್ನು ಹತ್ತುತ್ತಿರುವ ಹುಡುಗನಿಗೆ ಹಾಗೆ ಹತ್ತುತ್ತಿರುವಾಗಲೇ ರಾಷ್ಟ್ರಗೀತೆಯನ್ನು ಹಾಡು ಎಂದು ಆದೇಶಿಸಿದ ಹಾಗೆ. ಓಹ್, ಈ ಮೇಲಿನ ವಾಕ್ಯಗಳಲ್ಲಿ ಬದಲಾವಣೆಯ ಬಗ್ಗೆ ಬರೆಯಬೇಕಿತ್ತು, ಕ್ಷಮಿಸಿ - ಸವಾಲುಗಳು ಬದಲಾವಣೆಗಳಾಗಿ ನನಗರಿವಿಲ್ಲದಂತೆಯೇ ಹೊರಬಂದುಬಿಟ್ಟವು. ಇಲ್ಲಿನದನ್ನು ಕಂಡು ಅನುಭವಿಸಿ, ಅಲ್ಲಿ ಬದಲಾವಣೆಯನ್ನು ತರಬಯಸುವ ನಾವು ಅದಕ್ಕೆ ಮೊದಲು ಅಲ್ಲಿಯದನ್ನು ಪುನಃ ಅವಲೋಕಿಸಬೇಕಾಗುತ್ತದೆ, ಏಕೆಂದರೆ ನಮ್ಮ ಅನುಭವದ ಭಾರತ ಬಹಳಷ್ಟು ಬದಲಾಗಿದೆ ಈಗಾಗಲೇ. ಮೊದಲು ಅಲ್ಲಿ ಹೋಗಿ ನೆಲೆಸಿ, ಅಲ್ಲಿಯದನ್ನು ಅನುಭವಿಸಿ, ನಂತರ ಎರಡನ್ನೂ ಕಂಡ ಮನಸ್ಸಿಗೆ ಅಲ್ಲಿನ ಸವಾಲುಗಳನ್ನು ಎದುರಿಸಿ ಇನ್ನೂ ಚೈತನ್ಯವೆನ್ನೋದೇನಾದರೂ ಉಳಿದಿದ್ದರೆ, ಮುಂದೆ ಬದಲಾವಣೆಯ ಮಾತು ಬರುತ್ತದೆ!

ನಿಮಗ್ಗೊತ್ತಾ, ಎಷ್ಟೋ ಜನ ಇಲ್ಲಿಂದ ಹಿಂತಿರುಗಿ ಹೋದವರು ಇಲ್ಲಿ ಸುಖವಾಗೇ ಇದ್ದರು - ಒಳ್ಳೆಯ ಸಂಬಳ ಮನೆ ಎಲ್ಲವೂ ಇತ್ತು. ಅಂಥಹದ್ದನ್ನು ತೊರೆದು ತಮ್ಮ ತಾಯ್ನಾಡಿಗೆ ಮರಳುವುದು ಬಹಳ ಕಷ್ಟದ ನಿರ್ಧಾರ. ಒಂದೆರಡು ವರ್ಷಗಳ ದುಡಿಮೆಗೆ ಬಂದು ಹಿಂತಿರುಗಿದವರ ಬಗ್ಗೆ ಹೇಳ್ತಾ ಇಲ್ಲಾ ನಾನು. ಸುಮಾರು ಹತ್ತು-ಹದಿನೈದು ವರ್ಷ ಇದ್ದು ಇಲ್ಲಿನದ್ದನ್ನು ಸಾಕಷ್ಟು ಕಂಡು ಅನುಭವಿಸಿ ಮುಂದೆ ಆ ಮಹತ್ತರ ನಿರ್ಧಾರವನ್ನು ಕೈಗೊಂಡ ಮಹಾನುಭಾವರ ಬಗ್ಗೆ. ಕೆಲವರು ಅವರವರ ಹೆಂಡತಿ ಮಕ್ಕಳು ತಮ್ಮ ವೃತ್ತಿಯ ಬಗ್ಗೆ ಮಾತ್ರ ಯೋಚಿಸಿ ಅಂತಹ ನಿರ್ಧಾರವನ್ನು ಸೆಪ್ಪೆಯಾಗಿಸಿಬಿಡುತ್ತಾರೆ, ಆದರೆ ಒಟ್ಟಾರೆ ಕುಟುಂಬದ ಮೇಲಿನ ಪರಿಣಾಮ - ಲಾಂಗ್‌ಟರ್ಮ್ ಹಾಗೂ ಶಾರ್ಟ್‌ಟರ್ಮ್ - ಬಹಳ ಹೆಚ್ಚಿನದ್ದು. ಹೀಗೆ ಹಿಂತಿರುಗುವ ಮನಸ್ಥಿತಿಗಳು ಹಲವು, ಅವುಗಳ ಹಿಂದಿನ ಕಾರಣಗಳು ಬೇಕಾದಷ್ಟಿರುತ್ತವೆ, ಇಂತಹ ಕಾರಣಗಳ ಹಿಂದಿನ ಸ್ವರೂಪವನ್ನು ಶೋಧಿಸಿ ನೋಡಿದಾಗ, ಅಂತಹ ಮನಸ್ಥಿತಿಗಳ ಆಳಕ್ಕೆ ಇಳಿದಾಗಲೇ ಅದರಲ್ಲಿನ ಸೊಗಸು ಗೊತ್ತಾಗೋದು. ಇಲ್ಲವೆಂದಾದರೆ ಈ ರಿವರ್ಸ್ ಮೈಂಗ್ರಂಟ್‌ಗಳ ಮನಸ್ಸು ಯಾವುದೋ ಒಂದು ಸಣ್ಣಕಥೆಯ ನಾಯಕಪಾತ್ರವಾಗಿ ಹೋದೀತು, ಅಥವಾ ಯಾರೋ ಒಬ್ಬರು ಅಮೇರಿಕವನ್ನು ಆರು ತಿಂಗಳ ಪ್ರವಾಸದಲ್ಲಿ ನೋಡಿ ಬರೆದ ಕಥನವಾದೀತು. ಮುಗಿಲಿನಿಂದ ಬೀಳುವ ಮಳೆ ಹನಿಯನ್ನು ಕೇವಲ ಕೆಲವೇ ಅಡಿಗಳ ಎತ್ತರದಲ್ಲಿ ನೋಡಿ ಅದು ನೆಲವನ್ನು ಅಪ್ಪುವುದನ್ನು ಪೂರ್ಣ ಅನುಭವ ಎಂದು ಹೇಗೆ ಒಪ್ಪಲಾದೀತು, ಆ ನೀರು ಎಲ್ಲಿಂದ ಬಂತು ಎಲ್ಲಿಗೆ ಸೇರುತ್ತೆ, ಹೇಗೆ ಸೇರುತ್ತೆ ಎಂದು ಕೆದಕಿ ನೋಡದ ಹೊರತು?

ಅದಕ್ಕೋಸ್ಕರವೇ ಅನಿವಾಸಿಗಳ ಮನಸ್ಥಿತಿ ಅನಿವಾಸಿಗಳಿಗೇ ತಿಳಿಯದಷ್ಟು ಸಂಕೀರ್ಣವಾಗಿ ಹೋಗೋದು. ನಾವು ಅಂಚೆಗೆ ಹಾಕಬೇಕಾದ ಪತ್ರಗಳು ಸಾಕಷ್ಟು ತಡವಾಗೋದು, ನಾವು ಕರೆ ಮಾಡುತ್ತೇವೆ ಎಂದು ಮಾತುಕೊಟ್ಟದ್ದು ತಪ್ಪೋದು ಅಥವಾ ವಿಳಂಬವಾಗೋದು, ಅಥವಾ ನಮ್ಮವರೊಡಗೋಡಿ ಒಂದಿಷ್ಟರ ಮಟ್ಟಿಗೆ ನಕ್ಕು ನಲಿಯದೇ ಹೋಗೋ ಹಾಗೆ ಚಪ್ಪಟೆ ಮುಖವನ್ನು ಹೊರಹಾಕೋದು, ಸಮಯವನ್ನು ಜಯಿಸುತ್ತೇವೆ ಅನ್ನೋ ಉತ್ಸಾಹ ಕ್ರಮೇಣ ಕಡಿಮೆಯಾಗೋದು, ಊಟ-ತಿಂಡಿ ಆಚಾರ-ವಿಚಾರಗಳ ವಿಷಯದಲ್ಲಿ ಸಾಕಷ್ಟು ಕಲಸುಮೇಲೋಗರವಾಗೋದು. ಇಲ್ಲವೆಂದಾದರೆ ಮನೆಯಲ್ಲಿ ಯಾವ ಆರ್ಡರಿನಲ್ಲಿ ಹುಟ್ಟಿಬೆಳೆದಿದ್ದರೂ ಉಳಿದವರೆಲ್ಲರಿಗೂ ಆದೇಶಿಸುವಷ್ಟು ದಾರ್ಷ್ಟ್ಯವೆಲ್ಲಿಂದ ಬರುತ್ತಿತ್ತು? ಪ್ರತಿಯೊಂದು ಸವಾಲುಗಳಿಗೂ ನಮ್ಮಲ್ಲಿ ಉತ್ತರವಿದೆಯೆನ್ನೋ ಭ್ರಮೆಯಲ್ಲಿ ನಾವು ಸ್ವಲ್ಪ ಕಾಲ ಬಳಲಿ, ನಮ್ಮನ್ನು ನಂಬಿದವರು ಅದನ್ನು ಕೊನೆಯವರೆಗೂ ನಂಬಿಕೊಂಡೇ ಇರುವಂತೇಕಾಗುತ್ತಿತ್ತು? ಅಥವಾ ನಾವು ಹೀಗೆ ಮಾಡುತ್ತೇವೆ, ಹಾಗೆ ಮಾಡುತ್ತೇವೆ ಎನ್ನೋ ಮಾತುಗಳು 'ಹಾಗೆ ಮಾಡಬಲ್ಲೆವು' ಎಂದು ಬದಲಾಗಿ, ಮುಂದೆ 'ಹಾಗೆ ಮಾಡಬಹುದಿತ್ತು' ಎಂದು ನಮ್ಮ ಕಣ್ಣ ಮುಂದೆಯೇ ಪರಿವರ್ತನೆಗೊಳ್ಳುತ್ತಿತ್ತೇಕೆ?

***

ರಿವರ್ಸ್ ಮೈಂಗ್ರಂಟುಗಳ ಮನದಾಳದಲ್ಲೇನಿದೆ, ಸುಖವಾಗಿ ಬದುಕುವ ಅದಮ್ಯ ಆಸೆಯೊಂದನ್ನು ಹೊರತುಪಡಿಸಿ? ಸರಿ, ಸುಖವಾಗಿ ಬದುಕುವುದು ಎಂದರೇನು - ಇಲ್ಲದ್ದನ್ನು ಊಹಿಸಿ ಕೊರಗದಿರುವುದೇ? ಇನ್ನೂ ಸರಳವಾದ ಪ್ರಶ್ನೆ - ನಮಗೆ ಎಂದಿದ್ದರೂ ಯಾವುದೋ ಒಂದು ವಸ್ತುವಿನ ಕೊರತೆ ಇದ್ದೇ ಇರುತ್ತದೆ ಎನ್ನುವುದು ಸತ್ಯವಾದರೆ, ಅದನ್ನು ಆದಷ್ಟು ಬೇಗ ಮನಗಂಡು ಅದರ ಬಗ್ಗೆ ಮುಂದೆ ಯೋಚಿಸದೇ ಇರುವಂತೇಕೆ ಸಾಧ್ಯವಾಗುವುದಿಲ್ಲ?

***

ಸದ್ಯಕ್ಕೆ ಇವೆಲ್ಲ ಪ್ರಶ್ನೆಗಳ ರೂಪದಲ್ಲೇ ಕೂತಿವೆ, ಒಂದು ರೀತಿ ತನ್ನ ಸುತ್ತಲಿನ ಎಲೆಗಳನ್ನು ಕಬಳಿಸುತ್ತಾ ಬೆಳೀತಾ ಇರೋ ಕಂಬಳಿ ಹುಳುವಿನ ಥರ. ಮುಂದೆ ಅದೊಂದು ಗೂಡನ್ನು ಸೇರಿ ಅಲ್ಲಿ ಸುಖನಿದ್ರೆಯನ್ನು ಅನುಭವಿಸುತ್ತೆ. ಒಂದುವೇಳೆ, ನಿದ್ರೆಯಿಂದ ಎಚ್ಚರವಾಗಿ ನೆರೆಹೊರೆ ಕಂಬಳಿಹುಳು ಚಿಟ್ಟೆಯಾಗುವ ಬದಲಾವಣೆಯನ್ನು ಸಹಿಸಿಕೊಳ್ಳುವುದೆಂದಾದರೆ ಒಂದಲ್ಲ ಒಂದು ಆ ಚಿಟ್ಟೆ ತನ್ನ ಪಯಣವನ್ನು ಆರಂಭಿಸುವುದು ನಿಜ - ಆದರೆ ಈ ಪರಿವರ್ತನೆ ಬಹಳ ದೊಡ್ಡದು, ಅದರ ವ್ಯಾಪ್ತಿ ಇನ್ನೂ ಹೆಚ್ಚು ಹಾಗೂ ಅದರ ಹಿಂದಿನ ಮನಸ್ಥಿತಿಯ ಸಂಕೀರ್ಣತೆ ಬಹಳ ಮುಖ್ಯವಾದದ್ದು.

Thursday, July 26, 2007

...ಬೆಂಗಳೂರಿನಲ್ಲೇ ಹಾಯಾಗಿ ಇದ್ದಿರಬೇಕಿತ್ತು...

'Life sucks!...' ಎನ್ನುವ ಪದಗಳು ಅಬ್ದಲ್ಲ್‌ನ ಬಾಯಿಯಿಂದ ತಮ್ಮಷ್ಟಕ್ಕೆ ತಾವೇ ಹೊರಬಿದ್ದವು, ತದನಂತರ ಒಂದು ಕ್ಷಣ ಧೀರ್ಘ ಮೌನ ನೆಲೆಸಿತ್ತು, ನಾನೇ ಕೇಳಿದೆ, 'ಹಾಗಾದ್ರೆ ಎಲ್ಲ್ ಹೋದ್ರೂ ನಮಗೆ ಸುಖಾ ಇಲ್ಲಾ ಅನ್ನು'. ಅದಕ್ಕವನ ಉತ್ತರ, 'ಹಾಗೇ ಅಂತ ಕಾಣ್ಸುತ್ತೆ...'

***

ಇದು ನನ್ನ ಮತ್ತು ನನ್ನ ಹತ್ತು ವರ್ಷದ ಸಹೋದ್ಯೋಗಿ-ಗೆಳೆಯ ಅಬ್ದುಲ್ಲ್‌ನ ನಡುವೆ ನಡೆದ ಕಳೆದ ಭಾನುವಾರದ ಮಾತುಕತೆಯ ಕೊನೆಯ ಒಂದೆರಡು ಸಾಲುಗಳು. ಅಬ್ದುಲ್ ಈ ದೇಶಕ್ಕೆ ಬಂದು ಹತ್ತಿರಹತ್ತಿರ ಹದಿನಾಲ್ಕು ವರ್ಷಗಳಾಗುತ್ತ ಬಂದಿರಬಹುದು, ಅವನು ಈಗ ಭಾರತಕ್ಕೆ ಹೋಗಿ ಅಲ್ಲೇ ನೆಲೆ ಊರುವ ಪ್ರಯತ್ನ ನಡೆಸಿದ್ದಾನೆ, ಅಂತಹ ಒಂದು ಬದಲಾವಣೆಗೆ ತಕ್ಕಂತೆ ನಿಧಾನವಾಗಿ ಒಂದೊಂದೇ ಅನುಕೂಲಗಳನ್ನು ಮಾಡಿಕೊಳ್ಳುತ್ತಾ ಬಂದಿದ್ದಾನೆ. ಅವನ ಜೊತೆ ಮಾತನಾಡಿದಾಗಲೆಲ್ಲ, ಮಾತಿನ ಮೊದಲು ನಾನೂ ಅವನ ಹಾಗೆ ಹಿಂತಿರುಗಿ ಒಂದಲ್ಲ ಒಂದು ದಿನ ಹೊರಡುತ್ತೇನೆ ಎನ್ನುವ ಸಂತಸ ಉಕ್ಕಿ ಬರುತ್ತದೆ, ಸಂಭಾಷಣೆಯ ಕೊನೆಕೊನೆಗೆ ಅದು ವಿರುದ್ಧ ದಿಕ್ಕಿಗೆ ಮುಖ ಮಾಡಿ ನಿಲ್ಲುತ್ತದೆ, ಹೀಗೆ ಹಲವಾರು ಬಾರಿ ಆಗಿದೆ.

***

ಮಾತಿನ ಮಧ್ಯೆ, ನಾವು ಭಾರತಕ್ಕೆ ಹಿಂತಿರುಗಿದಾಗ low-profile ನಲ್ಲಿ ಬದುಕಲು ಶುರು ಮಾಡಬೇಕು ಇಲ್ಲವೆಂದಾದರೆ ಹಲವಾರು ತೊಂದರೆಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ಹಲವಾರು ಉದಾಹರಣೆಗಳನ್ನು ಕೊಡುತ್ತಿದ್ದ. ಅವನ ಸ್ನೇಹಿತರೊಬ್ಬರು ಮದ್ರಾಸಿನ ಒಂದು ಒಳ್ಳೆಯ ಲೊಕೇಷನ್ನಲ್ಲಿ ಮನೆ ಕಟ್ಟಿಸಿಕೊಂಡಿದ್ದರಂತೆ, ಗೂಂಡಾಗಳು ದಿನವೂ ಅವರಿಗೆ ಮನೆಯನ್ನು ಮಾರುವಂತೆ ಹಿಂಸೆ ಕೊಡುತ್ತಿದ್ದರಂತೆ - ಅದೂ ಬಹಳ ಕಡಿಮೆ ಬೆಲೆಗೆ. ಈ ಗೂಂಡಾಗಳು, ಅವರ ಚೇಲಾಗಳ ಕಷ್ಟವನ್ನು ಸಹಿಸಲಾರದೆ ಅಲ್ಲಿ ಇರುವವರು ಹಲವಾರು ಮಂದಿ ಮನೆ-ನಿವೇಶನವನ್ನು ಅರ್ಧಕರ್ಧ ಬೆಲೆಗೆ ಮಾರಿದ್ದನ್ನು, ಈ ಗೂಂಡಾಗಳು ತಿರುಗಿ ಮಾರುಕಟ್ಟೆಯ ಬೆಲೆಗೆ ಬೇರೆಯವರಿಗೆ ಮಾರಿ ಬೇಕಾದಷ್ಟು ಹಣ ಸಂಪಾದಿಸುವ ಮಾರ್ಗವನ್ನು ಹಿಡಿದಿದ್ದಾರಂತೆ. ವಿದೇಶದಿಂದ ಬಂದವರು ಎಂದರೆ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕಷ್ಟಕೊಡುವವರೇ, ಮೇಲ್ನೋಟಕ್ಕೆ ಸಂತಾಪ ಸೂಚಿಸುವಂತೆ ಕಾಣಿಸುತ್ತಾರೆ, ಒಳಗೊಳಗೆ ವಿದೇಶದಿಂದ ಹಿಂತಿರುಗಿದವರೆಲ್ಲ ಮಹಾ ಶ್ರೀಮಂತರು ಎನ್ನುವ ಭ್ರಮೆಗೊಳಗಾಗಿ ಕಂಡಕಂಡಲ್ಲಿ ಸಾಕಷ್ಟು ಸುಲಿಗೆ ಮಾಡಲಾಗುತ್ತದೆ, ಬಹಳ ಜಾಗರೂಕತೆಯಿಂದಿರಬೇಕು... ಮುಂತಾಗಿ ಅವನ ಅನುಭವ, ಅವನು ಕೇಳಿ ತಿಳಿದ ಹಾಗಿನವುಗಳನ್ನೆಲ್ಲ ಕಳೆದ ಭಾನುವಾರ ನನ್ನ ಜೊತೆ ಹಂಚಿಕೊಂಡ. ಆಗಲೇ ಅನ್ನಿಸಿದ್ದು ನಮ್ಮದಲ್ಲದ ದೇಶದಲ್ಲಿ ಇರಲಾರದೆ ನಾವು ನಮ್ಮ ದೇಶಕ್ಕೆ ಹಿಂತಿರುಗಿದ್ದೇ ಹೌದಾದರೆ ಅಲ್ಲಿನ ಬದಲಾವಣೆಗಳಿಗೆ ದಿಢೀರನೆ ಸ್ಪಂದಿಸುವ ಮನಸ್ಥಿತಿಯನ್ನೂ ಜೊತೆಯಲ್ಲೇ ಕೊಂಡೊಯ್ಯಬೇಕು ಎಂಬುದಾಗಿ. ನಾವು ಇಲ್ಲಿ ಸುಖವಾಗಿ ಉಂಡು ಮಲಗಿದಾಗ ಕನಸಿನಲ್ಲಿ ಬರುವ 'ಊರಿಗೂ' ಅಲ್ಲಿನ ನಿಜಸ್ಥಿತಿಗೂ ಬಹಳಷ್ಟು ವ್ಯತ್ಯಾಸವಿರೋದಂತೂ ನಿಜ. ಭಾರತದಲ್ಲಿ ಬದುಕಿ ಜಯಿಸಬೇಕು ಎಂದರೆ ಎಲ್ಲದರಲ್ಲೂ ಸಿದ್ಧಹಸ್ತರಾಗಿರಬೇಕು, ಯಾರು ಎಷ್ಟು ಹೊತ್ತಿನಲ್ಲಿ ಹೇಗೆ ಮೋಸ ಮಾಡುತ್ತಾರೆ ಅಂತಹವರಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎನ್ನುವುದನ್ನು ಆಲೋಚಿಸಿಕೊಳ್ಳುವುದರಲ್ಲೇ ದಿನನಿತ್ಯದ ಬದುಕು ನಡೆಯುತ್ತದೆ, ನಮ್ಮ ಸೂಕ್ಷತೆ ಸೃಜನಶೀಲತೆಯೆಲ್ಲಾ ಈ ಸಣ್ಣ ವಿವರಗಳನ್ನು ನೋಡುವಲ್ಲೇ ಕರಗಿಹೋಗುತ್ತವೆ.

ಜನನಿಭಿಡ ಸ್ಥಳಗಳಲ್ಲಿನ ಜೇಬುಕಳ್ಳರಿಂದ ಹಿಡಿದು, ಎರ್ರಾಬಿರ್ರಿ ಎಲ್ಲಿ ಬೇಕಂದರಲ್ಲಿ ವಾಹನಗಳನ್ನೋಡಿಸೋ ಸರದಾರರಿಂದ ಹಿಡಿದು, ಹಾಡು ಹಗಲೇ ಸೋಗು ಹಾಕಿಕೊಂಡು ಬಂದು ಕುತ್ತಿಗೆ ಕೊಯ್ಯುವವರಿಂದ ಹಿಡಿದು, ಅಮಾಯಕರನ್ನು ಹಿಂಸಿಸಲೆಂದೇ ಅಲ್ಲಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಗೂಂಡಾ-ಪುಡಾರಿಗಳಿಂದ ಹಿಡಿದು, ಬೇಕೆಂದೇ ತಪ್ಪಾಗಿ ಗಲ್ಲಾ ಪೆಟ್ಟಿಗೆಯ ಹಿಂದೆ ಹಣವನ್ನು ಎಣಿಸಿಕೊಡುವ ಬ್ಯಾಂಕ್ ಕ್ಯಾಷಿಯರ್ರ್‌ನಿಂದ ಹಿಡಿದು, ಹತ್ತು ರೂಪಾಯ್ ಕೊಟ್ಟು ಒಂದು ಎಳೆನೀರು ಖರೀದಿ ಮಾಡಿದರೆ ಎಳನೀರನ್ನು ಆಸ್ವಾದಿಸುವ ಮುನ್ನ ಚಿಲ್ಲರೆಯನ್ನು ಸರಿಯಾಗಿ ಕೊಟ್ಟಿದ್ದಾನೆಯೇ ಎಂದು ಎಣಿಸಿ ಹುಷಾರಾಗಿ ಜೇಬಿನಲ್ಲಿಡುವುದರಿಂದ ಹಿಡಿದು, ಬಸ್‌ನಿಲ್ದಾಣ-ರೈಲ್ವೇ ನಿಲ್ದಾಣಗಳಲ್ಲಿ ಸದಾ ಲಗ್ಗೇಜನ್ನು ಕುತ್ತಿಗೆಗೆ ಸುತ್ತಿ ಹಾಕಿಕೊಂಡೇ ಕಾಲ ಕಳೆಯುವಂತಹ ಅತಿ ಬುದ್ಧಿವಂತಿಕೆಯ ಮನಸ್ಥಿತಿಯನ್ನು ಹುಟ್ಟುಹಾಕಿ ಅದನ್ನು ಕಾಯ್ದುಕೊಂಡು ಹೋಗುವಷ್ಟರಲ್ಲಿ ಭಾರತದಲ್ಲಿ ಹೋಗಿ ಅಲ್ಲೇ ಖಾಯಂ ಆಗಿ ನೆಲೆಸುವ ಕನಸುಗಳಲ್ಲೆಲ್ಲಾ ಕರಗಿ ಹೋಗುತ್ತವೆ.

***

ಭಾರತದ ಆಲೋಚನೆ, ಅದರ ಕಲ್ಪನೆಯನ್ನೆಲ್ಲಾ ನೆನೆಸಿಕೊಂಡರೆ ನನ್ನಂಥ ಅನಿವಾಸಿಗೆ ಎಂದೂ ರೋಮಾಂಚನವಾಗುತ್ತದೆ. ನಮ್ಮ ನಮ್ಮ ದೃಷ್ಟಿ ಬದಲಾಗಿದೆಯೇ ವಿನಾ ನಮ್ಮ ದೇಶ ಬದಲಾಗಿಲ್ಲ - ಈ ಹಿಂದೆಯೂ ಜೇಬುಕಳ್ಳರಿದ್ದರು, ಇಂದೂ ಇದ್ದಾರೆ, ಮುಂದೆಯೂ ಇರುತ್ತಾರೆ. ನನ್ನ ಮಟ್ಟದ ಲಂಚರಹಿತ, ಭ್ರಷ್ಟಾಚಾರ ರಹಿತ ಬದುಕನ್ನು ಅನುಭವಿಸಿದ ಅನಿವಾಸಿಗಳಿಗೆ (ಭಾರತದಲ್ಲಿನ) ಅಲ್ಲಿನ ಪರಂಪರಾನುಗತವಾದ ಒಡಂಬಡಿಕೆಗಳು ನಮ್ಮ ಬದಲಾದ ಪ್ರಬುದ್ಧತೆಯ ನೆಲೆಗಟ್ಟಿನಲ್ಲಿ ನಮ್ಮನ್ನೇ ನಾವು ಪ್ರಶ್ನಿಸುವಂತೆ ಮಾಡುತ್ತವೆ. ಉದಾಹರಣೆಗೆ, ನೀವು ಸಾವಿರ ರೂಪಾಯಿಯ ವಸ್ತುವೊಂದನ್ನು ಕೊಂಡಿರೆಂದುಕೊಳ್ಳೋಣ. ಅಂಗಡಿಯವನು ಹೇಳುತ್ತಾನೆ, ನೋಡಿ ನೀವು ಸಾವಿರ ರೂಪಾಯಿ ಕ್ಯಾಷ್ ಕೊಡಿ, ನಾನು ಟ್ಯಾಕ್ಸ್ ಸೇರಿಸೋದಿಲ್ಲ, ಇಲ್ಲವೆಂದಾದರೆ ನೀವು ಇಪ್ಪತ್ತು ಪರ್ಸೆಂಟ್ ಟ್ಯಾಕ್ಸ್ ಕೊಡಬೇಕು ಎಂಬುದಾಗಿ. ಆಗ ನೀವೇನು ಮಾಡುತ್ತೀರಿ? ಅಂಗಡಿಯವನಿಗೆ ಸಾವಿರದ ಇನ್ನೂರು ರೂಪಾಯಿ ಕೊಟ್ಟು ನ್ಯಾಯವಾಗಿ ರಶೀದಿಯನ್ನು ಪಡೆಯುತ್ತೀರೋ ಅಥವಾ ಕೇವಲ ಸಾವಿರ ರೂಪಾಯಿಯನ್ನು ಕೊಟ್ಟು ಇನ್ನೂರು ರೂಪಾಯಿಯ ತೆರಿಗೆಯನ್ನು ಉಳಿಸಿದ್ದಕ್ಕಾಗಿ ಖುಷಿ ಪಡುತ್ತೀರೋ? ಇದಕ್ಕೆ ಇನ್ನೂ ಒಂದು ಟ್ವಿಷ್ಟ್ ಕೊಡುತ್ತೇನೆ - ನೀವು ಕೊಟ್ಟ ಇನ್ನೂರು ರೂಪಾಯಿ ತೆರಿಗೆ ನ್ಯಾಯವಾಗಿ ಸರ್ಕಾರಕ್ಕೆ ಸೇರುತ್ತದೆ ಎನ್ನುವ ಗ್ಯಾರಂಟಿ ಇಲ್ಲ - ಏಕೆಂದರೆ ಅಂಗಡಿಯವನು ರಾಮನ ಲೆಕ್ಕ, ಕೃಷ್ಟನ ಲೆಕ್ಕ ಎಂಬುದಾಗಿ ಎರಡೆರಡು ಪುಸ್ತಕಗಳನ್ನಿಟ್ಟುಕೊಂಡಿರಬಹುದು, ಅಥವಾ ಅವನು ಟ್ಯಾಕ್ಸ್ ಸೇರಿಸಿಕೊಟ್ಟಿದ್ದೇನೆ ಎಂಬುದು ನಿಜವಾದ ರಶೀದಿ ಅಲ್ಲದಿರಬಹುದು - ಅಥವಾ ಅವನ ಅಂಗಡಿಯೇ ಟ್ಯ್ಹಾಕ್ಸ್ ದಾಖಲೆಗಳಲ್ಲಿ ಲೆಕ್ಕಕ್ಕಿರದಿರಬಹುದು.

ಈ ಮೇಲಿನ ಪ್ರಶ್ನೆಗಳ ಉತ್ತರದಲ್ಲೇ ಅಡಗಿದೆ ನಮ್ಮ ನ್ಯಾಯಾನ್ಯಾಯ. ನೀವು ಈ ಪ್ರಶ್ನೆಗಳಿಗೆ ಕೊಡಬಹುದಾದ ಉತ್ತರ ಎಲ್ಲಾ ದೇಶದಲ್ಲೂ ಒಂದೇ ಇರುತ್ತದೆ ಎಂದು ಹೇಳಲಾಗದು. ನಮ್ಮೂರುಗಳಲ್ಲಿ ಕಾನೂನನ್ನು ತಮಗೆ ಬೇಕಾದಂತೆ ತಿರುಗಿಸಿಕೊಳ್ಳುವ ಮಂದಿ ಹೊರದೇಶದ ನೀರು ಕುಡಿದಾಕ್ಷಣ ತಮ್ಮ ಬಾಲವನ್ನು ಕಾಲುಗಳ ನಡುವೆ ಮುದುರಿಕೊಳ್ಳುವ ನಿರೂಪಣೆಗಳು ಹೊಸದೇನಲ್ಲ. ನಾವು, ಅನಿವಾಸಿಗಳು ಸಾವಿರ ರೂಪಾಯಿಗೆ ಇನ್ನೂರು ರೂಪಾಯಿಯ ತೆರಿಗೆಯನ್ನು ಕೊಡಲು ಸಿದ್ಧರಿದ್ದೇವು, ಆದರೆ ಅಲ್ಲೇ ದುಡಿದು ಸಂಪಾದನೆ ಮಾಡುವ ಜನರಿಗೆ ತೆರಿಗೆ ಕಟ್ಟಬೇಕು ಎನ್ನುವ ಮೌಲ್ಯದ ಮುಂದೆ ಬೇಕಾದಷ್ಟು ಅಡ್ಡಿ ಆತಂಕಗಳು ಇರಬಹುದು, ಇನ್ನು ಕೆಲವರಿಗೆ ತಾವು ಏನು ಮಾಡುತ್ತಿದ್ದೇವೆ ಎಂದು ಗೊತ್ತೇ ಇರದಿರಬಹುದು. ನನ್ನನ್ನು ಕೇಳಿದರೆ, ಈವರೆಗೆ ತಮ್ಮ ತಮ್ಮ ನಿವೇಶನಗಳನ್ನು ಯಾರು ಯಾರು ಇರುವ ಬೆಲೆಗಿಂತ ಕಡಿಮೆ ಬೆಲೆಗೆ ನೋಂದಣಿ ಮಾಡಿಕೊಂಡಿದ್ದಾರೋ, ಹಾಗೆ ಮಾಡಿಸುವಲ್ಲಿ ಲಂಚವನ್ನು ಕೊಟ್ಟಿದ್ದಾರೋ ಅಂತಹವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಆಯಾ ವಿಷವರ್ತುಲದಲ್ಲಿ ಭಾಗಿಗಳೇ.

ಈ ಲಂಚ, ಭ್ರಷ್ಟಾಚಾರ ಎನ್ನುವ ಆಟದಲ್ಲಿ ಒಮ್ಮೆ ಭಾಗವಹಿಸಿದರೆ ನಮಗೆ ಯಾವಾಗ ಹಿಂದೆ ಬರಬೇಕೆನ್ನಿಸುವುದೋ ಆಗ ಹಿಂದೆ ಬರುವುದು ಕಷ್ಟ ಸಾಧ್ಯ - ರೌಡಿಗಳ ಗುಂಪಿನಲ್ಲಿರುವವನು ದಿಢೀರನೆ ಸಾಚಾ ಆಗಲು ನೋಡಿದರೆ ಅದರ ಪರಿಣಾಮವೇನಾದೀತೆಂದು ಹೆಚ್ಚಿನವರಿಗೆ ಗೊತ್ತು.

***

ಹಾಗಾದ್ರೆ, ಇಲ್ಲಿರಲಾಗದವನು ನಾನೆಲ್ಲಿಗೆ ಹೋಗಲಿ? ಹಿಂದಕ್ಕೆ ಹೋಗೋದಾದರೆ ಎಲ್ಲಿಗೆ ಹೋಗುತ್ತೇವೆ, ಏಕೆ ಹೋಗುತ್ತಿದ್ದೇವೆ, ಯಾರಿಗೋಸ್ಕರ ಹೋಗುತ್ತಿದ್ದೇವೆ. ಇಲ್ಲಿ ಸಾಧಿಸದ್ದನ್ನು ಅಲ್ಲಿ ಏನು ಸಾಧಿಸುವುದಿದೆ?

ಈ ಮೇಲಿನ ಪ್ರಶ್ನೆಗಳಿಗೆಲ್ಲ ಉತ್ತರ ದೊರಕಿಸಿಕೊಳ್ಳಲು ದಿನೇದಿನೇ ಕಡಿಮೆ ಆಗುವ ಡಾಲರ್ ಬೆಲೆಯಾಗಲೀ, ನೆನಪಿನ ಸುರುಳಿಗಳಿಂದ ಮರೆಯಾಗುವ ಮಿತ್ರರಾಗಲೀ, ಅಥವಾ ಕಾಲನ ವಶಕ್ಕೆ ಸಿಕ್ಕು ದೂರವಾಗುವ ಬಂಧು ಬಳಗವಾಗಲೀ ಸಹಾಯವೇನನ್ನೂ ಮಾಡರು. ಜೊತೆಗೆ ವಿದೇಶದ 'ಸಾಚಾ' ಹವೆಯಲ್ಲಿ ಇಷ್ಟೊಂದು ವಸಂತಗಳನ್ನು ಹಾಯಾಗಿ ಕಳೆದು ದಡ್ಡು ಬಿದ್ದ ಮೈ ಮನಗಳೂ - ಒಡನೆಯೇ ಮತ್ತೆ ಕಷ್ಟ ಪಡಬೇಕಾಗುತ್ತದೆಯೆಲ್ಲಾ ಎನ್ನೋ ಹೆದರಿಕೆಗೆ ಸಿಕ್ಕು - ಸಹಕರಿಸಲಾರವು.

ಬಾಬೂ ಥರ ಬೆಂಗಳೂರಿನಲ್ಲೇ ಹಾಯಾಗಿ ಇದ್ದಿರಬೇಕಿತ್ತು - ನಮ್ಮ ದೇಶ ಬೇಕಾದಷ್ಟು ಬೆಳೆದಿದೆ ಈ ದಶಕದಲ್ಲಿ ಅದನ್ನು ಆರಾಮವಾಗಿ ಹಾಗೂ ಸಹಜವಾಗಿ ಆಸ್ವಾದಿಸಿಕೊಂಡು ಅದರಲ್ಲೊಂದಾಗಬೇಕಿತ್ತು, ...we are at the wrong place at the wrong time...ಎಂದು ಬೇಕಾದಷ್ಟು ಸಾರಿ ಅನ್ನಿಸೋದಂತೂ ನಿಜ.