Showing posts with label ನೆರೆಹೊರೆ. Show all posts
Showing posts with label ನೆರೆಹೊರೆ. Show all posts

Tuesday, November 20, 2007

ರಸ್ತೇ ಮೇಲಿನ ಗುಂಡಿ

ನಮ್ಮನೆಯಿಂದ ಸ್ವಲ್ಪ ದೂರದಲ್ಲಿರೋ ಹೈವೇ ಮೇಲೆ ಹೋದಾಗ್ಲೆಲ್ಲಾ ಇತ್ತೀಚೆಗೆ ರಸ್ತೆ ನಡುವೆ ಬಿದ್ದಿರೋ ಒಂದು ಸಣ್ಣ ಗುಳಿ ಅಥವಾ ಹೊಂಡ ನನ್ನ ಪರಿಚಯ ಮಾಡ್ಕೊಂದಿದೆ, ಕಾರಿನ ಚಕ್ರಗಳು ಅದರ ಮೇಲೆ ಹೋದಂತೆಲ್ಲ ಅದರ ವೇಗದ ಆಧಾರದ ಮೇಲೆ ಒಂದೋ ಎರಡೋ ಪದವನ್ನು ಅದು ಅರಚುತ್ತೆ, ಕೆಲವೊಂದ್ ಸರ್ತಿ ಅದು ’ಹಾಯ್’, ’ಹಲೋ’ ಅಂಥಾ ಕೇಳ್ಸಿದ್ರೂ ಇನ್ನ್ ಕೆಲವು ಸಲ ಅದರದ್ದೇ ಏನೋ ಒಂದು ಗಾಥೆ ಇರಬಹುದೇನೋ ಅನ್ನೋ ಅನುಮಾನಾನೂ ಬಂದಿದೆ.

ನಿಮಗೆಲ್ಲಾ ಅನ್ನಿಸ್‌ಬೋದು, ಈ ರಸ್ತೆ ನಡುವಿನ ಹೊಂಡಗಳ ಜೊತೆ ನಮ್ಮದೇನ್ ಮಾತೂ ಅಂತ. ಅವುಗಳ ಮಾತಿನಲ್ಲೂ ಒಂದು ಲಾಲಿತ್ಯ ಇರುತ್ತೇ, ಪ್ರೀತಿ ಇರುತ್ತೆ ಎಲ್ಲದಕ್ಕಿಂತ ಮುಖ್ಯವಾಗಿ ನೆಟ್ಟಗೆ ಇದ್ದದ್ದನ್ನ ಸರಿಯಾಗಿ ಇಟ್ಟುಕೊಳ್ಳದೇ ಹೋದ್ರೆ ಒಂದಲ್ಲ ಒಂದು ಯಾವ ಸ್ಥಿತಿಯನ್ನು ತಲುಪಬಹುದು ಅನ್ನೋ ಸತ್ಯಾಂಶ ಇರುತ್ತೆ. ಇವುಗಳನ್ನೆಲ್ಲಾ ನೋಡಿ, ಕೇಳಿದಾಗಲೆಲ್ಲಾ ನಾನು ಅವುಗಳಿಂದ ಏನಾದ್ರೊಂದನ್ನ ಕಲಿಯೋದು ಇದ್ದೇ ಇರುತ್ತಾದ್ದರಿಂದ ಅವುಗಳ ಜೊತೆಗಿನ ಒಡನಾಟವನ್ನು ಪುರಸ್ಕರಿಸೋದು. ಉದಾಹರಣೆಗೆ, ದಿನವೂ ನಿಮಗೆ ಎದುರಾಗುವ ಸ್ನಾನದ ಕೋಣೆ ಅಥವಾ ಶವರ್‌ನ ಗೋಡೆಗಳಿಗೆ ಆತ್ಮೀಯತೆಯಿಂದ ಅಂಟಿಕೊಂಡಿರುವ ಕೂದಲುಗಳನ್ನು ಸ್ವಲ್ಪ ಸರಿಯಾಗಿ ನೋಡಿ. ಅವುಗಳಲ್ಲಿ ಅದೇನೋ ಒಂದು ಅದಮ್ಯ ಬಲವಿದೆ, ಚೈತನ್ಯವಿದೆ ಅಂತ ಅನ್ನಿಸಿದರೂ ಅನ್ನಿಸಬಹುದು. ಇಲ್ಲಾ ಅಂತಂದ್ರೆ ಎರಡು ನಿರ್ಜೀವ ವಸ್ತುಗಳ ನಡುವೆ ಒಂದು ಬಂಧ ಬೆಳೆಯೋದಾದ್ರೂ ಹೇಗೆ? ನಮಗೆ ಗೊತ್ತಿರೋ ಯಾವುದೋ ರಸಾಯನಿಕ ಅಥವಾ ಎಲೆಕ್ಟ್ರೋ ಸ್ಟ್ಯಾಟಿಕ್ ಸಂಬಂಧಗಳಿಂದ ಅಂಥಾ ಅನುಬಂಧಗಳನ್ನು ಅಳೆಯೋದಾದ್ರೂ ಹೇಗೆ? ಇಂಥಾ ಸಂಬಂಧಗಳ ಮೇಲೆ ಬೆಳಕು ಚೆಲ್ಲೋದಕ್ಕೋಸ್ಕರವೇನೋ ಎನ್ನೋ ಹಾಗೆ ನಮ್ಮಲ್ಲಿನ ಬಾತ್‌ರೂಮ್ ಟಬ್‌ಗಳನ್ನು ಬೆಳ್ಳಗೆ ಮಾಡಿರೋದು ಅನ್ನೋದು ನನ್ನ ಯಾವತ್ತಿನ ಅನುಮಾನ.

ಇನ್ನು ರಸ್ತೆ ಮೇಲಿನ ಗುಂಡಿ ವಿಚಾರಕ್ಕೆ ಬರೋಣ. ಅದರ ಆತ್ಮೀಯತೆಗೆ ನಾನು ಯಾವ ಹೆಸರನ್ನೂ ಇನ್ನೂ ಕೊಟ್ಟಿರಲಿಲ್ಲ. ಒಂದು ರೀತಿ ಅಕ್ವೇರಿಯಮ್‌ನಲ್ಲಿರೋ ಮೀನುಗಳಿಗೆ ನಾವು ಯಾವತ್ತೂ ಹೆಸರು ಕೊಟ್ಟಿಲ್ಲವೋ ಹಾಗೆ ಏಕೆಂದ್ರೆ ಅವು ಎಷ್ಟೊತ್ತಿಗೆ ಬೇಕಾದರೂ ಮರೆಯಾಗಿ ಹೋಗಬಹುದು ಅನ್ನೋ ಕಾರಣ. ಈ ಗುಂಡಿ ನನಗೆ ಹೇಳೋ ಒಂದೋ ಎರಡೋ ಪದಗಳಲ್ಲಿ ಬೇಕಾದಷ್ಟು ತತ್ವಗಳೇ ಅಡಗಿರುತ್ತೆ. ಎಲ್ಲವೂ ನೆಟ್ಟಗೆ ನುಣ್ಣಗೆ ಇದ್ದಂಥ ರಸ್ತೆಗಳಲ್ಲೂ ಹೊಂಡಗಳು ಬೀಳುತ್ತವೆ ಎನ್ನುವುದು ಅವುಗಳ ಧ್ಯೇಯವಾಕ್ಯ. ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನೂ ಪಂಚಭೂತಗಳಿಗೆ ತೆರೆದುಕೊಂಡಿರುವುದೂ ಅಲ್ಲದೇ ಪ್ರತಿ ನಿಮಿಷಗಳಿಗೊಮ್ಮೆ ತಮ್ಮ ಮೈಮೇಲೆ ಅದೆಷ್ಟೋ ಭಾರದ ವಾಹನದ ಗಾಲಿಗಳನ್ನು ಹರಿಯಬಿಡುವುದು ಸಾಮಾನ್ಯವೇನಲ್ಲ, ಅದಕ್ಕೆಂತಹ ಹತ್ತಾನೆಯ ಬಲದ ಗುಂಡಿಗೆ ಇರಬೇಡ. ಅದೇ ರಸ್ತೆಯಲ್ಲಿ ಹೋಗೋ ವಾಹನಗಳ ಜೊತೆಗೆ ಸಂವಾದಿಸುವ ಛಲವೊಂದಿದ್ದರೆ ಮಾತ್ರ ಸಾಲದು, ತನ್ನ ಮೈ ಮೇಲೆ ಒಂದು ಕ್ಷಣದ ಭಾಗದಷ್ಟು ಕಾಲ ಮಾತ್ರ ಸ್ಪರ್ಷಿಸಿ ಹೋಗೋ ಚಕ್ರಗಳನ್ನು ಮಾತಿಗೆ ತೊಡಗಿಸುವ ಚಾಕಚಕ್ಯತೆಯೂ ಇರಬೇಕು.

ಎಲ್ಲೂ ನನ್ನನ್ನು ಕೇಳ್ತಾರೆ, ’ಓಹ್, ಅಮೇರಿಕದ ರಸ್ತೆಗಳು ನುಣ್ಣಗಿರುತ್ತವಂತೆ!’, ಈ ರೀತಿಯ ಉದ್ಗಾರಗಳಿಗೆ ನಾನು ಸೊಪ್ಪು ಹಾಕೋದೇ ಇಲ್ಲ. ಅಮೇರಿಕನ್ ರಸ್ತೆಗಳ ಬಗ್ಗೆ ಹೀಗೆ ಹೇಳೋರಿಗೆ ಅವುಗಳ ಬಗ್ಗೆ ಏನು ಗೊತ್ತು? ಕಾರಿದ್ದೋರು ಹೈವೇ ಹತ್ತೋ ಹಾಗೆ ಹೈವೇಗಳು ಗುಂಡೀ ಬೀಳೋದು ಸಾಮಾನ್ಯ ಅದು ಯಾವತ್ತಿದ್ದರೂ ಎಲ್ಲಿದ್ದರೂ ಹೊಂದುವಂತಹ ಒಂದು ಸಣ್ಣ ತರ್ಕ ಹಾಗೂ ತತ್ವ. ಹಾಗಿದ್ದ ಮೇಲೆ ತಮ್ಮೂರಿನ ರಸ್ತೆಗಳಲ್ಲಿನ ಅಷ್ಟೊಂದು ಗುಂಡಿಗಳ ಜೊತೆಗೆ ಹಗಲೂ ಇರುಳೂ ಸಂವಾದವನ್ನು ನಡೆಸಿಕೊಂಡೂ ರಸ್ತೆಗಳ ಮೇಲಿನ ಗುಂಡಿಗಳಿಗೇ ಅವಮಾನವಾಗುವ ಹಾಗೇ ಅದ್ಯಾವುದೋ ಕಣ್ಣೂ ಕಾಣದ ದೂರದೂರಿನ ರಸ್ತೆಗಳು ನುಣುಪಾಗಿರುತ್ತವೆ ಎಂದುಕೊಳ್ಳುವುದು ಯಾವ ನ್ಯಾಯ. ನಮ್ಮೂರಿನಲ್ಲಿರುವ ರಸ್ತೆಗಳಲ್ಲಿ ಕಂಡುಬರುವ ಕೆಲವೊಮ್ಮೆ ರಸ್ತೆಗಳಿಗಿಂತ ಗುಂಡಿಗಳೇ ತುಂಬಿಕೊಂಡಿರುವ ಪ್ರದೇಶಗಳಲ್ಲಿ ದಿನವೂ ವಾರ್ತಾಲಾಪ ನಡೆಸಿಕೊಂಡು ಹೋಗುವುದಕ್ಕಿಂತ ಇಲ್ಲಿನ ರಸ್ತೆಗಳಲ್ಲಿನ ಒಂದೆರಡು ಗುಂಡಿಗಳ ಬದುಕಿನ ಬಗ್ಗೆ ಒಂದಿಷ್ಟು ಕುತೂಹಲವನ್ನು ತೋರಿದರೂ ಸಾಕು, ಅವುಗಳಲ್ಲಿ ಅದೆಷ್ಟೋ ದೊಡ್ಡ ದೊಡ್ಡ ಕಥೆಗಳೇ ಹುದುಗಿವೆ. ರಾತ್ರೋ ರಾತ್ರಿ ಹುಟ್ಟಿಬೆಳೆಯುವ ನಾಯಿಕೊಡೆಗಳ ಹಾಗೆ ಇವತ್ತಿರದ ಗುಂಡಿಗಳು ನಾಳೆ ಎಲ್ಲಿ ಬೇಕಂದರಲ್ಲಿ ಎದ್ದು ಬಿಟ್ಟಾವು, ಐದು-ಹತ್ತು ಟನ್ ಭಾರವನ್ನು ಹೊರುವ ಟ್ರಕ್‌ಗಳು ಮಾತ್ರ ಎಂದು ಫಲಕಗಳನ್ನು ಹಾಕಿದರೂ ಮುವತ್ತು-ನಲವತ್ತು ಟನ್ನ್ ತೂಕವನ್ನು ಬಡ ರಸ್ತೆಗಳ ಮೇಲೆ ಕೊಂಡೊಯ್ಯುವ ಮೂಢರಿರುವವರೆಗೆ. ರಾತ್ರೋ ರಾತ್ರಿ ಹುಟ್ಟುವ ಗುಂಡಿಗಳನ್ನು ರಾತ್ರೋ ರಾತ್ರಿ ಮುಚ್ಚಿ ಏನೇನೂ ಆಗಿಲ್ಲ ಎಂದು ತೋರಿಸುವಷ್ಟು ನಯ-ನಾಜೂಕಿನಿಂದ ಕೆಲಸ ಮಾಡುವವರನ್ನು ಕಲೆ ಹಾಕಿ ಈ ಗುಂಡಿಗಳಿಗೆ ಒಂದು ಕಾಯಕಲ್ಪ ಕೊಡದೇ ಹೋದರೆ ಗುಂಡಿಗಳು ಬೆಳೆದು ತಮ್ಮದೇ ಒಂದು ಸಂಘವನ್ನು ಕಟ್ಟಿಕೊಂಡು ಆಶ್ರಯ ನೀಡಿದ ರಸ್ತೆಗೇ ಕುತ್ತು ತಂದುಬಿಡಬಹುದಾದ ಆಪತ್ತಿದೆ. ಆದ್ದರಿಂದಲೇ ಅಮೇರಿಕದ ರಸ್ತೆಗಳು ಹಗಲೂ-ರಾತ್ರಿ ಎನ್ನದೇ ನಿರ್ಮಾಣಗೊಂಡವು ಜೊತೆಗೆ ಅವುಗಳ ದುರಸ್ತಿ ಕೂಡಾ ಹಾಗೇ ನಡೆದುಕೊಂಡು ಬಂದಿದೆ.

ಈ ಸಾರಿ ಈ ಹೆಸರಿಡದ ಗುಂಡಿ ಬಹಳ ಬೇಸರವಾಗಿದ್ದಂತೆ ಕಂಡುಬಂತು. ಹೆಚ್ಚು ಟ್ರಾಫಿಕ್ ಇರದಿದ್ದ ಕಾರಣ ನಾನು ನಿಧಾನಕ್ಕೆ ಅದರ ಮೇಲೆ ಕ್ರಮಿಸಿ ಒಂದು ಕ್ಷಣದ ಕಾಂಟ್ಯಾಕ್ಟ್‌ನಲ್ಲಿ ಅದರ ಮನದಾಳವನ್ನು ಕಣ್ಣಿನ ಡಾಕ್ಟರುಗಳು ರೆಟಿನಾವನ್ನು ನೋಡುವ ಹಾಗೆ ನೋಡಿದೆ. ಅದರಲ್ಲಿ ನಲಿವಿಗಿಂತಲೂ ಹೆಚ್ಚು ನೋವಿತ್ತು, ಹಿಂದಿನ ಚಕ್ರಗಳು ಅದೇ ಗುಂಡಿಯ ಮೇಲೆ ಹೋಗಿ ಕೆದಕಿ ನೋಡಲಾಗಿ ಇಂದು ರಾತ್ರಿ ಆ ಗುಂಡಿಯನ್ನು ಮುಚ್ಚಿ ಸರಿ ಮಾಡುತ್ತಾರೆ ಎನ್ನುವ ಮುನ್ಸೂಚನೆ ಸಿಕ್ಕಿತು. ನಾನಂದುಕೊಂಡಿದ್ದೆ, ಇಲ್ಲಿ ಈಗಾಗಲೇ ಸೊನ್ನೆಯ ತಾಪಮಾನ ಬಿದ್ದು ಕೊರೆಯುವ ಛಳಿ ಇದೆ, ಜೊತೆಗೆ ಒಂದೆರಡು ಬಾರಿ ಹಿಮಪಾತವೂ ಆಗಿದೆ. ಈ ಛಳಿ, ಮಳೆಯಲ್ಲಿ ರಸ್ತೆಯನ್ನು ಯಾರಾದರೂ ರಿಪೇರಿ ಮಾಡುವುದು ಸಾಧ್ಯವೇ ಎಂದು ಅನಿಸಿದ್ದರೂ ಕಡಿಮೆ ಜನರಿದ್ದೂ ಹೆಚ್ಚು ಮಷೀನುಗಳನ್ನು ಬಳಸುವಲ್ಲಿ, ಹಗಲೂ-ರಾತ್ರಿ, ಮಳೆ-ಛಳಿ-ಗಾಳಿಯಲ್ಲೂ ಕಷ್ಟಪಟ್ಟು ದುಡಿಯುವ ಇವರ ಡೆಡಿಕೇಷನ್ನ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ’ಓಹ್, ನಮ್ಮ ಸಿಟಿ, ಕೌಂಟಿಯವರು ಟ್ಯಾಕ್ಸು ತೆಗೆದುಕೊಳ್ಳುತ್ತಾರೆ, ಅವರೇನು ರಸ್ತೆ ರಿಪೇರಿ ಮಾಡಿಸೋದು ಮಹಾ’ ಎಂದು ಯಾರು ಬೇಕಾದರೂ ಮೂಗು ಮುರಿಯಲಿ ಅವರ ಗುಂಡಿಗಳನ್ನು ನಿರ್ಮೂಲನ ಮಾಡುವ ದೃಢತೆಯನ್ನು ಮೆಚ್ಚಲೇ ಬೇಕು.

ಹಿಂದೆ ನಮ್ಮ ಅಜ್ಜೀ ಮನೆಯಲ್ಲಿನ ಸಿಮೆಂಟಿನ ಜಗುಲಿಯಲ್ಲಿ ಯಾರೋ ತೆಂಗಿನಕಾಯಿ ಸುಲಿಯಲು ಹೋಗಿ ಕತ್ತಿಯ ಕಚ್ಚು ತಾಗಿ ಒಂದು ಕಡೆ ಸಿಮೆಂಟ್ ಕಿತ್ತು ಹೋಗಿತ್ತು, ಅದನ್ನು ಎಷ್ಟು ಸರಿ ಮಾಡಿದರೂ ದಿನ ಬಿಟ್ಟು ದಿನ ಅದು ದೊಡ್ಡದಾಗಿ ಬೆಳೆಯುತ್ತಲೇ ಹೋಗಿ ಕೊನೆಗೆ ಇಡೀ ಜಗುಲಿಗೇ ಕುತ್ತು ತಂದಿತ್ತು. ಹಾಗೇ ಇಲ್ಲಿಯ ಪ್ರತಿಯೊಂದು ಗುಂಡಿಯೂ ಬೆಳೆದು ದೊಡ್ಡದಾಗೋದಿಲ್ಲವಲ್ಲ ಎಂಬ ಸಂಶಯ ನನ್ನ ಬೆನ್ನ ಹಿಂದೆ ಇತ್ತು. ಏನೇ ಆಗಲಿ ಇನ್ನೊಂದು ವಾರದಲ್ಲಿ ನೋಡೇ ಬಿಡೋಣ ಎಂದು ಸಂಕಲ್ಪ ಮಾಡಿಕೊಂಡವನಿಗೆ ಮರುದಿನವೇ ಮಹದಾಶ್ಚರ್ಯ. ನನ್ನ ಸ್ನೇಹಿತ ಗುಂಡಿಯಿರಲಿ ಅದು ಈ ಹಿಂದೆ ಅಲ್ಲಿ ಇದ್ದ ಬಗ್ಗೆಯೂ ಯಾವ ಪುರಾವೆ ಇರಲಿಲ್ಲ. ರಾತ್ರೋರಾತ್ರಿ ಯಾವುದೋ ಸೈನ್ಯವೊಂದು ರಸ್ತೆಯ ಮೇಲೆ ಬೀಡು ಬಿಟ್ಟ ಪರಿಣಾಮವೋ ಎಂಬುವಂತೆ ಪೂರ್ಣ ರಸ್ತೆ ತನ್ನ ಮಾಮೂಲಿ ಸ್ಥಿತಿಗೆ ಬಂದಂತಿತ್ತು, ಎಲ್ಲವೂ ಸ್ವಚ್ಛವಾಗಿತ್ತು. ನಮ್ಮೂರಿನಲ್ಲಿ ರಸ್ತೆ ಕಾಂಟ್ರಾಕ್ಟರುಗಳು ಆಕ್ರಮವಾಗಿ ಕಾಡನ್ನು ಕಡಿದು, ಕಟ್ಟಿಗೆಯನ್ನು ಉರಿಸಿ, ಅಳಿದುಳಿದ ಟಾರಿನ ಅಂಶವನ್ನು ರಸ್ತೆ ಬದಿಗೆ ಚೆಲ್ಲಿ ಹೋದಂತೆ ಯಾವ ಗುರುತಾಗಲೀ ಸಿಗ್ನೇಚರ್ ಆಗಲೀ ಕಾಣಸಿಗಲಿಲ್ಲ. ಕಡಿಮೆ ಜನರಿರುವ ಕಡೆ ಕೆಲಸ ಹೆಚ್ಚು ಇರಬೇಕು, ಕೆಲಸ ಹೆಚ್ಚಾದಂತೆ ಧಕ್ಷತೆ ಕಡಿಮೆ ಆಗಬೇಕು ಎಂದುಕೊಂಡಿದ್ದು ಸುಳ್ಳೇ ಆಗಿ ಹೋಯಿತು.

ಏನೇ ಇರಲಿ, ಯಾರೋ ರಾತ್ರೋ ರಾತ್ರಿ ಮಾಡಿದ ಕೆಲಸದ ಗತಿಯಿಂದಾಗಿ ರಸ್ತೆ ಮೇಲಿನ ನನ್ನ ಸ್ನೇಹಿತನೊಬ್ಬನ ತಳಮಳಗಳು ಇನ್ನು ಮುಂದೆ ನನಗೆ ತಿಳಿಯದೇ ಹೋಯಿತು. ತನ್ನ ಅಲ್ಪಾವಧಿಯಲ್ಲಿ ಅದೆಷ್ಟೋ ಜನರಿಗೆ ತಮ್ಮ ಕರ್ತವ್ಯ ಪ್ರಜ್ಞೆಯನ್ನು ನೆನಪಿಸಿದ ಗುಂಡಿಯನ್ನು ನಾವು ನೆನಪಿಡಬೇಕಾದ್ದು ನ್ಯಾಯವಲ್ಲವೇ?

Sunday, November 18, 2007

ಹಿಮ ಈ ವರ್ಷ ಕರುಗುವುದೇ ಇಲ್ಲವೇನೋ...

ಮತ್ತದೇ ಮಬ್ಬು ಮುಸುಕಿಕೊಂಡು ಇರೋ ಒಂದು ಭಾನುವಾರವನ್ನೂ ಹೆಚ್ಚೂ ಕಡಿಮೆ ಕತ್ತಲೆಯಲ್ಲೇ ದೂಡಿ ಬಿಡುವ ಸಂಚನ್ನು ಯಾರು ಮಾಡಿದ್ದಾರೋ ಎನ್ನುವ ಅನುಮಾನ ಯಾರಿಗಾದರೂ ಬರುವಂತಿತ್ತು ಇವತ್ತಿನ ಹವಾಮಾನ. ಮೊನ್ನೆ ಒಂದಿಷ್ಟು ಸ್ನೋ ಫ್ಲೇಕ್ಸ್‌ಗಳನ್ನ ನೆಲಕ್ಕೆಲ್ಲಾ ಸಿಂಪಡಿಸಿ ಹಳೆಯ ನೆಂಟಸ್ತಿಕೆಯನ್ನು ಗುರುತಿಸಿಕೊಂಡು ಬರೋ ದೂರದ ಸಂಬಂಧಿಯ ಹಾಗೆ ಹೇಳದೇ ಕೇಳದೇ ಬಂದು ಹೆಚ್ಚು ಹೊತ್ತು ನಿಲ್ಲದ ಸ್ನೋ ಇವತ್ತು ಒಂದು ಮುಕ್ಕಾಲು ಇಂಚಿನಷ್ಟು ಬಂದು ಬಿದ್ದಾಗಲೇ ನಾನು ಮನಸ್ಸಿನಲ್ಲಿ ಮುಂಬರುವ ಕೆಟ್ಟ ಛಳಿಯನ್ನು ಯೋಚಿಸಿಕೊಂಡು ಒಮ್ಮೆ ನಡುಗಿ ಹೋಗಿದ್ದು. ಗ್ಲೋಬಲ್ ವಾರ್ಮಿಂಗ್ ಅಥವಾ ಎನ್ವೈರ್‌ಮೆಂಟನ್ನು ಚೆನ್ನಾಗಿಟ್ಟುಕೊಳ್ಳುವುದು ಹಾಗಿರಲಿ, ನಮ್ಮನೇ ಡೆಕ್ಕ್‌ನಲ್ಲಿರುವ ಥರ್ಮಾ ಮೀಟರ್ ಸೊನ್ನೆಯ ಆಜುಬಾಜುವಿನಲ್ಲಿ ತನ್ನೊಳಗೆ ಹುದುಗಿದ ಪಾದರಸವನ್ನು ಅದುಮಿಕೊಂಡಿರುವಾಗ ಫೈರ್‌ಪ್ಲೇಸ್‌ನಲ್ಲಿ ಬೆಂಕಿ ಉರಿಸದೇ ಬದುಕೋದಾದರೂ ಹೇಗೆ ಎಂದು ಇತ್ತೀಚೆಗಷ್ಟೇ ಅನ್ನಿಸಿದ್ದು.

ಮೊದಲೆಲ್ಲಾ ಶಾಲೆಗೆ ಹೋಗೋ ಹುಡುಗ್ರಾಗಿದ್ದಾಗ ಬೆಳ್ಳಂಬೆಳಗ್ಗೆ ಬಚ್ಚಲು ಮನೆ ಒಲೆಯ ಮುಂದೆ ಕುಳಿತೇ ಹಲ್ಲು ತಿಕ್ಕು ತಿದ್ದುದು. ಬಚ್ಚಲು ಮನೆಯ ಒಲೆಯೊಳಗೆ ಅದೆಷ್ಟು ಬಾರಿ ಗೋಡಂಬಿಯನ್ನೋ ಹಲಸಿನ ಬೀಜವನ್ನೋ ಸುಟ್ಟು ತಿಂದಿದ್ದಿಲ್ಲ. ಹಾಗೇ ಇಲ್ಲಿಯ ಫೈರ್‌ಪ್ಲೇಸ್‌ನೊಳಗೆ ಉರಿಯುವ ಜ್ವಾಲೆ ಹಳೆಯದನೆಲ್ಲ ನೆನಪಿಗೆ ತರುತ್ತದೆ. ಅಲ್ಲಿ ಬಚ್ಚಲ ಒಲೆಯ ಉರಿ ತನ್ನ ಮೇಲಿನ ತಣ್ಣೀರ ಹಂಡೆಯನ್ನು ಬಿಸಿ ಮಾಡಿಕೊಂಡಿರುತ್ತಿದ್ದರೆ ಇಲ್ಲಿಯ ಬೆಂಕಿ ತನ್ನೊಳಗಿನ ಉರಿ ಹಾಗೂ ಉಷ್ಟತೆಯನ್ನು ಚಿಮಣಿಯೊಳಗೆ ಏರಿಸಿಕೊಂಡು ಏದುಸಿರು ಬಿಡುವುದರಲ್ಲೇ ಸಂತೋಷ ಪಡುವಂತೆ ಕಾಣುತ್ತಿತ್ತು. ನಿಗಿ ನಿಗಿ ಉರಿದ ಬೆಂಕಿ, ತಾವೇ ಉರಿದು ತಮ್ಮನ್ನೇ ತಾವು ಅರ್ಪಿಸಿಕೊಳ್ಳುವ ಒಣಗಿದ ಕಟ್ಟಿಗೆ, ಕೆಂಪಾದ ಕೆಂಡ ಕಪ್ಪಾಗಿ ಮುಂದೆ ಬಿಳಿಯ ಬೂದಿಯಾಗೋದು, ಮಧ್ಯೆ ಯಾರಿಗೋ ಪಿಟಿಪಿಟಿ ಬಯ್ಯೋ ಮುದುಕಿಯ ಸ್ವರದ ಹಾಗೆ ಕಂಡು ಬರುವ ಚಟಪಟ ಸಿಡಿಯುವ ಸದ್ದು ಹೀಗೆ ನಮ್ಮನೆಯಲ್ಲಿನ ಫೈರ್‌ಪ್ಲೇಸ್‌ನ ಬೆಂಕಿಯದು ಒಂದೊಂದು ದಿನ ಒಂದೊಂದು ಕಥೆ. ಮೊದಲೆಲ್ಲಾ ಸ್ವಲ್ಪ ಬಿಸಿಯಾದ ನೀರನ್ನು ಸ್ನಾನ ಮಾಡಬಹುದಿತ್ತು, ಸ್ವಲ್ಪವೇ ಬೆಂಕಿ ಕಾಯಿಸಿಕೊಂಡಿದ್ದರೂ ಹಾಯ್ ಎನಿಸುತ್ತಿತ್ತು, ಇತ್ತೀಚೆಗಂತೂ ಎಷ್ಟು ಸುಡು ನೀರನ್ನು ಮೈ ಮೇಲೆ ಹೊಯ್ದುಕೊಂಡರೂ ಎಷ್ಟೇ ಬೆಂಕಿಯನ್ನು ಕಾಯಿಸಿಕೊಂಡರೂ ಮತ್ತಷ್ಟು ಬಿಸಿ ಬೇಕು ಎನ್ನಿಸುತಿದೆ. ಹೀಗೆ ವಯಸ್ಸು ಮಾಗುತ್ತಿರುವ ಹಾಗೆ ಚರ್ಮ ಸುಕ್ಕು ಸುಕ್ಕಾಗುತ್ತಿರುವಂತೆ ಮೈ ಮೇಲೆ ಬೀಳುವ ನೀರಿನ ಬಿಸಿಯೂ ಹೆಚ್ಚಾಗಬೇಕು, ಬೆಂಕಿಯ ಜ್ವಾಲೆಗೆ ಹತ್ತಿರ ಬರಬೇಕು, ಅಲ್ಲದೇ ಪ್ರತಿಯೊಂದು ವರ್ಷದ ಛಳಿಯ ಅನುಭವವೂ ಹಿಂದಿನ ವರ್ಷದ ಅನುಭವಕ್ಕಿಂತ ಕಟುವಾಗಬೇಕು.

ಕಿಟಕಿಯಿಂದ ಹೊರಗಡೆ ನೋಡಿದರೆ ಬಡವರ ಮೇಲೆ ದೌರ್ಜನ್ಯ ಮಾಡುವ ಬಿಳಿ ಬಟ್ಟೆ ತೊಟ್ಟ ರಾಜಕಾರಣಿಗಳ ಹಾಗೆ ಕೇವಲ ಹುಲ್ಲಿನ ಮೇಲೆ ಮಾತ್ರ ಅರ್ಧ ಅಂಗುಲದಷ್ಟು ಸ್ನೋ ಕಟ್ಟಿ ನಿಂತಿತ್ತು. ಹುಲ್ಲಿನ ಪಕ್ಕದಲ್ಲಿರುವ ಕರಿ ರಸ್ತೆಯಾಗಲೀ, ಗ್ರೇ ಬಣ್ಣದ ಸೈಡ್ ವಾಕ್ ಮೇಲಾಗಲೀ ಬೀಳುತ್ತಿದ್ದ ಸ್ನೋ ಕಟ್ಟಿ ನಿಲ್ಲುತ್ತಿರಲಿಲ್ಲ, ಅದೇ ಕಣ್ಣಿಗೆ ಕಾಣುವ ಕರಿದಾದ ಮನೆಯ ಛಾವಣಿಯ ಮೇಲೆ ಸ್ನೋ ತನ್ನ ಅಟ್ಟಹಾಸ ಸಾರುತ್ತಿತ್ತು. ನಿಸರ್ಗದತ್ತ ಕೊಡುಗೆಯಾದ ಹಿಮಕ್ಕೂ ಈ ಬಗೆಯ ಭಿನ್ನತೆ ಏಕೆ ಮನಸ್ಸಿನಲ್ಲಿ ಬಂತು ಎಂದು ನಾನೊಮ್ಮೆ ಯೋಚಿಸಿಕೊಂಡರೂ ಬೇರೇನೋ ಭೌತಿಕವಾದ ಬಲವಾದ ಕಾರಣವಿದೆ ಇದರ ಹಿಂದೆ ಎಂದು ತಲೆ ತೂಗಿಸಿ ಆ ವಸ್ತುವನ್ನು ಅಲ್ಲಿಗೇ ಬಿಟ್ಟೆ. ಬೆಳಗ್ಗಿನಿಂದ ಸಂಜೆವರೆಗೆ ಹೊರಗಡೇ ಪ್ರತಿಶತ ತೊಂಭತ್ತು ಭಾಗ ಆರ್ಧತೆ ಇರುವ ವ್ಯವಸ್ಥೆಯಲ್ಲಿನ ಮನೆಯೊಳಗೆ ಬೆಳಗ್ಗಿನಿಂದ ಸಂಜೆವರೆಗೆ ಉರಿಯುವ ಗ್ಯಾಸ್ ಹೀಟರ್‌ನ ಮಹಿಮೆಯೋ ಮತ್ತೊಂದು ಅತ್ಯಂತ ಡ್ರೈ ಹವೆಯಿರುವುದು ಮತ್ತೊಂದು ತಲೆತಿನ್ನುವ ಅಂಶ. ಬೇಕೋ ಬೇಡವಾಗಿಯೋ ತುರಿಸಿಕೊಳ್ಳಲೇ ಬೇಕು ಚರ್ಮವನ್ನು - ಕೆರೆದುಕೊಂಡಲ್ಲೆಲ್ಲಾ ಉರಿದುಕೊಳ್ಳೋದು ಸಾಮಾನ್ಯ, ಇನ್ನೇನಾದರೂ ಹೆಚ್ಚೂ ಕಡಿಮೆಯಾಗಿ ಘಾಯವಾಗಿ ಹೋದರೆ ಎನ್ನುವ ಹೆದರಿಕೆ ಬೇರೆ ಕೇಡಿಗೆ.

ಈಗಾಗಲೇ ತಮ್ಮೆಲ್ಲಾ ಎಲೆಗಳನ್ನು ಉದುರಿಸಿಕೊಂಡಿರುವ ಪ್ರತಿಯೊಂದು ಮರಗಳೂ ದಿನವಿಡೀ ಬೀಳೋ ಬಿಳೀವಸ್ತುವಿನ ಎದಿರು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿದ್ದವು. ಬೀಳುವಾಗ ಮಾತ್ರ ಶುದ್ಧ ಬಿಳಿಯಾಗಿ ಮರುದಿನದಲ್ಲೇ ಪ್ರಪಂಚದ ಕೊಳೆಯನ್ನು ತನ್ನ ಮುಖದಲ್ಲಿ ಬಿಂಬಿಸಿಕೊಳ್ಳುವ ರಸ್ತೆ ಬದಿಯ ಸ್ನೋ ಗೆ ಯಾಕೀ ಮರಗಳು ಅಷ್ಟೊಂದು ಮಹತ್ವಕೊಡುತ್ತವೆ ಎನ್ನುವುದನ್ನು ನಾನಂತೂ ಅರಿಯೆ. ತಮ್ಮ ಅಂಗುಲ ಅಂಗುಲಗಳಲ್ಲಿ ಈ ಬಿಳಿವಸ್ತುವನ್ನು ಏಕೆ ನಿಲ್ಲಿಸಿಕೊಳ್ಳಬೇಕು, ಗಾಳಿ ಬಂದ ಸಂದರ್ಭವನ್ನು ಸದುಪಯೋಗ ಪಡಿಸಿಕೊಂಡು ಝಾಡಿಸಿ ಒದ್ದು ನೂಕಿದರೆ ಹೇಗೆ ಈ ಬಿಳಿವಸ್ತುವನ್ನ ಎಂದು ಮರದ ಪರವಾಗಿ ಯೋಚಿಸುತ್ತಿದ್ದ ನನ್ನ ಮನದಲ್ಲಿ ಬಂದ ಆಲೋಚನೆ. ಮನೆಯ ಹಿಂದೆ ಹಾಗೂ ಮುಂದೆ ಇರುವ ಬರ್ಚ್ ಮರಗಳಲ್ಲಿ ಯಾವುದೇ ಧಮ್ ಇದ್ದಂತಿರಲಿಲ್ಲ. ನಳಿ ನಳಿ ಬೇಸಿಗೆಯಲ್ಲೇ ತಮ್ಮ ಭಾರವನ್ನು ತಾವೇ ಹೊರಲಾರದ ಅಶಕ್ತ ಮರಗಳು ಆರು ತಿಂಗಳ ಛಳಿಯಲ್ಲಿ ಬದುಕಿ ಉಳಿದಾವೇ ಎನ್ನುವ ಸಂಶಯವೇ ಬಲವಾಗಿರುವಾಗ ಈ ಮರಗಳ ಹೊತ್ತುಕೊಂಡು ನನ್ನದಾದರೂ ಯಾವ ವಾದ? ಈ ಅಶಕ್ತ ಮರಗಳ ಬದಲಿಗೆ ಕುಬ್ಜ ನಿತ್ಯಹರಿದ್ವರ್ಣಗಲೇ ಎಷ್ಟೋ ವಾಸಿ, ತಮ್ಮ ಮೇಲೆ ಅದೆಷ್ಟೋ ಸ್ನೋ ಬಂದರೂ ಹೊತ್ತುಕೊಂಡು ಸುಮ್ಮನಿರುತ್ತವೆ, ಛಳಿಯಲ್ಲಿ ತಮ್ಮ ಎಲೆಗಳನ್ನು ಉಳಿಸಿಕೊಂಡು.

ಸಾಮಾನ್ಯ ದಿನಗಳಲ್ಲಿ ಮೂರೋ ಸಂಜೆಯ ಹೊತ್ತಿಗೆ ಗೂಡಿಗೆ ಹಿಂತಿರುಗುತ್ತಿದ್ದ ಪಕ್ಷಿಗಳ ಧ್ವನಿ, ಕಲರವ ಇಂದು ಕೇಳಿ ಬರಲಿಲ್ಲ. ಯಾವುದೇ ಸೀಜನ್ ಬಂದರೂ, ಯಾವುದೇ ಋತುಮಾನವಿದ್ದರೂ ತಮ್ಮ ಹುಟ್ಟುಡುಗೆಯಲ್ಲೇ ಕಾಳ ಕಳೆದು ಬದುಕನ್ನು ಸಾಗಿಸುವ ಈ ಪ್ರಾಣಿ-ಪಕ್ಷಿಗಳ ಬದುಕೇ ಒಂದು ಸೋಜಿಗೆ. ಇವುಗಳಿಗೆಲ್ಲಾ ಈ ಛಳಿಯಲ್ಲಿ ಕಾಳು-ಕಡಿಯನ್ನು ಯಾರು ಇಡುವವರು? ಆದ್ದರಿಂದಲೇ ಇರಬೇಕು ಶ್ರೀಮಂತ ದೇಶಗಳು, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಛಳಿ ಹೆಚ್ಚು ಇರುವುದು. ಅಳಿಲಿನಿಂದ ಹಿಡಿದು ದೊಡ್ಡ ಕರಡಿಯವರೆಗೆ ಬೇಸಿಗೆಯಲ್ಲಿ ಠೊಣಪರಂತೆ ತಿದ್ದು ಮೈ ಬೆಳೆಸಿಕೊಳ್ಳುವ ಈ ಪ್ರಾಣಿಗಳಿಗೆ ಮೊದಲು ಹಸಿವೆಂಬುದು ಏನು ಎಂದು ಕಲಿಸಿಕೊಡಬೇಕು. ಇಲ್ಲಿ ಇವುಗಳು ಹೈಬರ್‌ನೇಟ್ ಮಾಡುವುದಿರಲಿ, ಛಳಿಗಾಲಕ್ಕೆ ಆಹಾರ ಪದಾರ್ಥಗಳನ್ನು ಕೂಡಿ ಹಾಕಿಕೊಂಡರೂ ಬೇಕಾದಷ್ಟು ಜಾಗವಿದೆ, ಬಡದೇಶಗಳಲ್ಲಿನ ಸ್ಪರ್ಧೆ ಇರಬಹುದು ಇರದೆಯೂ ಇರಬಹುದು. ಆದರೆ ಇಂದು ಸಂಜೆ ಪಕ್ಷಿಗಳು ಹಿಂತಿರುಗಲೇ ಇಲ್ಲವಲ್ಲಾ, ದಿನವಿಡೀ ಓಡಾಡುವ ಅಳಿಲುಗಳು ಕಂಡುಬರಲಿಲ್ಲವಲ್ಲಾ? ಅವುಗಳೇನಾದರೂ ಬೇರೆ ಎಲ್ಲಿಯಾದರೂ ವಲಸೆ ಹೋದವೇನು? ಅಥವಾ ತಮ್ಮ ತಮ್ಮ ಗೂಡುಗಳನ್ನು ಬಿಟ್ಟು ಹೊರಬರದೇ ಇರುವ ಶಪಥ ಮಾಡಿಕೊಂಡಿವೆಯೇನು?

ಇಲ್ಲಿನ ಮೋಡಗಳ ಅರ್ಭಟಕ್ಕೆ ಸೂರ್ಯನೂ ಇವತ್ತು ಹೆದರಿ ಸೋತು ಹೋಗಿದ್ದ. ಅವನ ಕಿರಣಗಳಿಂದಾದರೂ ನಮ್ಮ ನೆರೆಹೊರೆ ತುಸು ಗೆಲುವಾಗುತ್ತಿತ್ತು. ಇನ್ನು ಬಿದ್ದ ಬಿಳಿವಸ್ತು ನಾಳೆಗೆ ಕರಗಿ ನೀರಾಗುವುದಿರಲಿ, ಬೀಳುವಾಗ ಪುಡಿಪುಡಿಯಾಗಿದ್ದುದು ಈ ನೆಲದ ರುಚಿ ಕಂಡಕೂಡಲೇ ಗಡುಸಾಗಿ ಹೋಗುವುದು ಮತ್ತೊಂದು ವಿಶೇಷ, ತಾನು ನೆಲದ ಛಳಿಯನ್ನು ರಾತ್ರೋಹಗಲೂ ಅನುಭವಿಸಿದ ಮಾತ್ರಕ್ಕೆ ತಾನು ಎಂದು ಎಂದೆಂದಿಗೂ ಬದಲಾದ ಹಾಗೆ ಘಟ್ಟಿ ರೂಪವನ್ನು ತೋರಿಸುವುದನ್ನು ನೋಡಿದರೆ ನಮ್ಮ ನೆರೆಹೊರೆಯಲ್ಲಿ ಹಿಮ ಈ ವರ್ಷ ಕರುಗುವುದೇ ಇಲ್ಲವೇನೋ ಎನ್ನಿಸಿದ್ದು ನಿಜ. ಪ್ರಪಂಚದಾದ್ಯಂತ ಬೇಕಾದಷ್ಟಿದೆ ನೀರು, ಆದರೂ ಜನ ಬರದಲ್ಲಿ ಸಾಯುತ್ತಾರೆ. ಇಂದು ಬಿದ್ದ ಹಿಮದಿಂದ ನಮ್ಮ ನೆರೆಹೊರೆಗೂ ಅಗಾಧವಾದ ನೀರು ಬಂದಿದೆ, ನೆಲವೆಲ್ಲ ಹಸಿಯಾಗಿದೆ , ಆದರೆ ಈ ತೇವ ಹುಲ್ಲನ್ನು ಹಸಿರು ಮಾಡದೇ ಒಣಗಿಸಿ ಹಾಕುತ್ತದೆ ಎನ್ನುವುದು ಇತ್ತೀಚಿಗೆ ನಾನು ಗಮನಿಸಿದ ಸತ್ಯಗಳಲ್ಲೊಂದು.

Saturday, November 17, 2007

ಒಳ್ಳೆಯ-ಕೆಟ್ಟ ಮುಂಜಾವು

ನಿನ್ನೆ, ಆಫೀಸಿಗೆ ಹೋಗೋಕೆ ಹೊತ್ತಾಯ್ತು ಎಂದು ಘಂಟೆ ಬಜಾಯಿಸುತ್ತಿದ್ದ ಎರಡೆರಡು ಅಲಾರ್ಮ್‌ಗಳ ನಡುವೆಯ ಸ್ನೂಜ್‌ ಸಮಯದಲ್ಲಿ ಪ್ರಪಂಚದ ಅದ್ಯಾವುದೋ ನಿಗೂಢ ರಹಸ್ಯವೊಂದನ್ನು ಬೇಧಿಸುವಂತಹ ಕನಸುಗಳುಳ್ಳ ನಿದ್ರೆ, ಇನ್ನೂ ಮುಗಿಯದ ಅನೇಕ ವ್ಯಾಪಾರ ವಹಿವಾಟಿನ ಕುರುಹಾಗಿ ಹೊತ್ತು ಕಳೆದಷ್ಟೂ ಅಷ್ಟೇ ಜೋರಾಗಿ ಅಮರಿಕೊಳ್ಳುತ್ತಿದ್ದ ನಿದ್ರೆಯ ಜೊಂಪು ಎಂದರೆ ಸರಿಯಾದೀತು. ಅಷ್ಟರಲ್ಲೇ ಕಿಟಕಿಯ ಕರ್ಟನ್ನುಗಳನ್ನು ತೂರಿಕೊಂಡು ಅದೆಲ್ಲಿಂದಲೋ ಬಂತು ಸೂರ್ಯನ ಕಿರಣವೊಂದು. ದಡಕ್ಕನೇ ಎದ್ದು ಇಷ್ಟು ಹೊತ್ತಾಗಿ ಹೋಗಿ ಕಳೆದ ಸಮಯವನ್ನೆಲ್ಲ ಹಲ್ಲು ತಿಕ್ಕುವುದರಲ್ಲೇ ಉಳಿಸಿಬಿಡುವ ಆತುರದಲ್ಲಿ ಬಚ್ಚಲು ಮನೆಯ ಕಡೆಗೆ ಹೊರಟ ನನಗೆ ’ಹೊರಗಡೆ ಇಷ್ಟೊಂದು ಬೆಳಕಿದೆಯೇ?!’ ಎಂದು ಪ್ರಶ್ನೆಯೂ ಅದರ ಬೆನ್ನ ಹಿಂದೆ ಆಶ್ಚರ್ಯವೂ ಹುಟ್ಟಿ ಬಂತು.

ಈ ಫಾಲ್ ಸೀಜನ್ ಹುಟ್ಟಿದಾಗಿನಿಂದ ಅಷ್ಟೊಂದು ಬೆಳಕನ್ನು ನೋಡಿದ್ದಿರಲಿಲ್ಲ. ಪ್ರತಿ ದಿನವೂ ಮಂಜನ್ನು ಮುಸುಕಿಕೊಂಡು ಅಥವಾ ಮೋಡಗಳನ್ನು ಕಟ್ಟಿಕೊಂಡು ಪ್ರಪಂಚದ ಆಶಾಭಾವನೆಗಳು ಎಂಬ ಸೂರ್ಯನ ಕಿರಣಗಳನ್ನು ಹತ್ತಿರವೂ ಸುಳಿಯಗೊಡದ ವಾತಾವರಣವೋ ಅಥವಾ ಯಾವಾಗ ಬೇಕೋ ಆಗ ಡೇ ಲೈಟ್ ಸೇವಿಂಗ್ ಸಮಯವನ್ನು ಬದಲಾಯಿಸಿ ಕೊನೆಗೂ ಕತ್ತಲ ಸಮಯವನ್ನು ಹೆಚ್ಚು ಮಾಡಿ ಬೆಳಕನ್ನು ಹೆಚ್ಚಿಸುತ್ತೇವೆ ಎಂಬ ಲಾ ಮೇಕರ್ರುಗಳ ತಂತ್ರವೋ - ಇವೆಲ್ಲವೂ ಸೇರಿ ಇದುವರೆವಿಗೂ ಇಷ್ಟು ಬೆಳ್ಳಗಿನ ಬೆಳಕನ್ನು ನೋಡಿರಲಿಲ್ಲ ನಾನು ಈ ಕೆಲವು ತಿಂಗಳುಗಳಲ್ಲಿ ಎಂಬ ಮಾತನ್ನು ನಿಜ ಮಾಡಿದ್ದವು. ಮನೆಯ ಹೊರಗಡೆ ಬಂದು ನೋಡುತ್ತೇನೆ, ಪದೇಪದೇ ಬೀಸುವ ಗಾಳಿಯ ಹೊಡೆತಕ್ಕೆ ಸಿಕ್ಕು ತತ್ತರಿಸಿಯೂ ಅದೆಷ್ಟೋ ಮರಗಿಡಗಳು ಬದಲಾದ ತಮ್ಮ ರಂಗನ್ನು ಇನ್ನೂ ಹೊತ್ತು ನಿಂತಿದ್ದವು. ಕೆಂಪು-ಕೇಸರಿ ಬಣ್ಣಕ್ಕೆ ತಿರುಗಿದ ಎಲೆಗಳ ನಡುವೆ ಹಾದು ಹೋಗುತ್ತಿದ್ದ ಸೂರ್ಯನ ಕಿರಣಗಳು ಮನಮೋಹಕವಾಗಿ ತಮ್ಮದೇ ಆದ ಕಿನ್ನರ ಲೋಕವೊಂದನ್ನು ಸೃಷ್ಟಿಸಿದ್ದವು. ಇನ್ನೂ ಹಸಿರನ್ನು ಹೆಚ್ಚಾಗಿ ಹೊದ್ದ ಮರಗಳಿಗೂ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿ ಹೆಚ್ಚು ಕಡಿಮೆ ಬೋಳಾದ ಮರಗಳಿಗೂ ಮುಸುಡಿಯ ಮೇಲೆ ನಾಚಿಕೆಯ ಛಾಯೆ ಆವರಿಸಿದ್ದಂತಿತ್ತು. ’ಓಹ್, its a great day!' ಎನ್ನುವ ಉದ್ಗಾರ ನನಗರಿಯದಂತೆಯೇ ಹೊರಗೆ ಬಂತು.

ಮನೆಯಿಂದ ಆಫೀಸಿನ ಮಾರ್ಗಕ್ಕೆ ಹೋಗುವಲ್ಲಿ ಸಿಕ್ಕ ಸಿಕ್ಕ ಮರಗಿಡಗಳನ್ನೂ, ರಸ್ತೆ ಬದಿಯ ಪ್ರತಿಯೊಂದು ವಸ್ತುವನ್ನು ಅವುಗಳ ನೆರಳಿನ ಸಮೇತ ಇದುವರೆವಿಗೂ ಯಾವತ್ತೋ ನೋಡೇ ಇಲ್ಲ ಎನ್ನುವ ಹಾಗೆ ನೋಡಿಕೊಳ್ಳುತ್ತಲೇ ಹೋದೆ. ಇನ್ನೇನು ಮನೆಯಿಂದ ಒಂದೂವರೆ ಮೈಲು ಬಂದಿರಬಹುದು ಆಗ ನನ್ನ ಸೆಲ್ ಫೋನ್ ಹೊಡೆದುಕೊಳ್ಳಲಾರಂಭಿಸಿತು. ಒಡನೆಯೇ ನಿಸರ್ಗವನ್ನು ಆರಾಧಿಸುತ್ತಿದ್ದ ಮನಸ್ಸು ವಾಸ್ತವಕ್ಕೆ ಬಂದು ಕಾಲರ್ ಐಡಿ ನೋಡುವ ಮೊದಲೇ ಯಾರಿರಬಹುದು ಎನ್ನುವ ಊಹೆಯಂತಹ ಸರಳ ಹಾಗೂ ಕೃತ್ರಿಮ ಕೆಲಸಕ್ಕೆ ಮುಂದಾಯಿತು. ಯಾವುದೋ ಗುರುತಿಗೆ ಸಿಗದ ನಂಬರ್, ’ಹಲೋ’ ಅಂದರೂ ತಪ್ಪು, ಅನ್ನದೇ ಬಿಟ್ಟರೂ ತಪ್ಪು, ಏನಾದರಾಗಲೀ ಎಂದು ಉತ್ತರ ನೀಡಿದೆ.

’ನಿಮ್ಮ ಮನೆ ಸೆಕ್ಯುರಿಟಿಯ ಕಂಪನಿಯವರು ಕರೆ ಮಾಡುತ್ತಿದ್ದೇವೆ, ಒಂದೇ ನಿಮ್ಮ ಮನೆಯ ಮುಂದಿನ ಬಾಗಿಲೋ ಅಥವಾ ಗರಾಜಿನಿಂದ ಒಳ ಹೋಗುವ ಬಾಗಿಲೋ ತೆರೆದಿದ್ದು ಬರ್ಗ್ಲರ್ ಅಲಾರ್ಮ್ ಹೊಡೆದುಕೊಳ್ಳುತ್ತಿದೆ, ಏನು ಮಾಡಬೇಕು ಹೇಳಿ, ಪೋಲೀಸರನ್ನು ಕಳಿಸಿ ನೋಡಲು ಹೇಳೋಣವೇ?’ ಎಂಬ ಧ್ವನಿಯೊಂದು ಕೇಳಿಸಬೇಕೇ...ನನ್ನ ಎಲ್ಲ ಸೆನ್ಸುಗಳೂ ಫೋನ್ ಕರೆಯನ್ನು ಆಲಿಸುತ್ತಿದ್ದ ಕಿವಿಗೆ ಬಲವನ್ನು ನೀಡಿದವು. ನಾನು ಈಗಷ್ಟೇ ಮನೆಯಿಂದ ಹೊರಡುವಾಗ ಆಲಾರ್ಮ್ ಎನೇಬಲ್ ಮಾಡಿ ಹೊರಬಂದಿದ್ದೆ, ಎರಡರಲ್ಲೊಂದು ಬಾಗಿಲು ತೆರೆದುಕೊಂಡಿರುವುದು ಹೇಗೆ ಸಾಧ್ಯ? ’ನಾನೇ ವಾಪಾಸ್ ಹೋಗಿ ನೋಡುತ್ತೇನೆ, ನಾನು ನಿಮಗೆ ಕರೆ ಮಾಡದೇ ಇದ್ದರೆ ಎಲ್ಲವೂ ಸರಿಯಾಗಿದೇ ಎಂದುಕೊಳ್ಳಿ’ ಎಂದು ಆತನ ಧ್ವನಿಯನ್ನು ಕುಕ್ಕಿದೆ. ಯೂ ಟರ್ನ್ ತೆಗೆದುಕೊಂಡು ವಾಪಾಸು ಬಂದೆ.

ವಾಪಾಸು ಬಂದು ನೋಡಿದರೆ ಯಾವ ಕಳ್ಳ-ಕಾಕರೂ ಇರಲಿಲ್ಲ, ಗರಾಜು ಡೋರ್ ಮುಚ್ಚುವಾಗ, ಮನೆಯ ಒಳಗೆ ಹೋಗುವ ಸಣ್ಣ ಬಾಗಿಲು ಗಾಳಿಯ ಹೊಡೆತಕ್ಕೆ ತೆಗೆದುಕೊಂಡಿತ್ತು. ಅದನ್ನು ಮುಚ್ಚಿ ಮತ್ತೆ ಅಲಾರ್ಮ್ ಎನೇಬಲ್ ಮಾಡಿ ಹೊರಡುವಷ್ಟರಲ್ಲಿ ’ಓಹ್, ಆಫೀಸಿಗೆ ಲೇಟ್ ಆಗೇ ಹೋಯಿತು!’ ಎನ್ನುವ ತವಕದ ಮುಂದೆ ಇನ್ನೂ ಹೊರಗಡೆ ಭೂಲೋಕದಲ್ಲಿ ಸ್ವರ್ಗದ ಸನ್ನಿವೇಶವೊಂದರ ಶೂಟಿಂಗ್ ನಡೆಸುತ್ತಿದ್ದ ದೇವರ ಕಾರ್ಯಕ್ರಮಗಳು ಗಮನಕ್ಕೆ ಬಂದರೂ ಭೌತಿಕ ಲೋಕದ ಗಡಿಬಿಡಿ ಬೇರೆಲ್ಲವನ್ನೂ ತನ್ನಲ್ಲಿ ನುಂಗಿಕೊಂಡಿತ್ತು. ’ಛೇ, ಎಂಥಾ ಸುಂದರವಾದ ಮುಂಜಾವು...’ ಎಂದುಕೊಂಡು ಮತ್ತೆ ಗಾಡಿ ಓಡಿಸತೊಡಗಿದ್ದ ನನಗೆ ನಿರಾಶೆ ಕಾದಿತ್ತು. ಮನೆಯಿಂದ ಮತ್ತೆ ಎರಡು ಮೈಲು ಮುಂದೆ ಬರುವಷ್ಟರಲ್ಲಿ ವಿಂಡ್ ಶೀಲ್ಡಿನ ಮೇಲೆ ಹನಿಗಳು ಬೀಳ ತೊಡಗಿದ್ದವು. ಅದಕ್ಕೂ ಸ್ವಲ್ಪ ಹೊತ್ತಿನ ಮುಂಚೆ ಸೂರ್ಯನ ಕಿರಣಗಳು ಕಣ್ಣಿಗೆ ಹೊಡೆಯದಿರಲಿ ಎಂದು ಏಕಾದರೂ ಕಪ್ಪು ಕನ್ನಡಕವನ್ನು ಧರಿಸಿದೆನೋ, ಅದನ್ನು ನೋಡೇ ಸೂರ್ಯನ ಕಿರಣಗಳು ಹಿಂದಕ್ಕೆ ಸರಿದವೋ ಎನ್ನುವ ಅನುಮಾನ ಮೂಡುವ ಹಾಗೆ ಒಂದೊಂದೇ ಕಿರಣಗಳು ಅದ್ಯಾವುದೋ ಮೋಡಗಳ ಹಿಂಡಿನ ಹಿಂದೆ ಮರೆಯಾಗಿ ಹೋದವು.

ಒಂದು ಒಳ್ಳೆಯ ಮುಂಜಾವು ಕೆಟ್ಟ ಮುಂಜಾವಾಗಿ ಬದಲಾಗಲು ಅಥವಾ ಅದೇ ಸಾಧಾರಣ ಮುಂಜಾವಾಗಿ ಪರಿವರ್ತನೆ ಹೊಂದಲು ಹೆಚ್ಚು ಸಮಯವಿದೆ ಎಂದು ಅನ್ನಿಸಲೇ ಇಲ್ಲ. ಜೊತೆಗೆ ಮೊಟ್ಟ ಮೊದಲನೇ ಬಾರಿಗೆ ಸೃಷ್ಟಿಯ ಪ್ರತಿಯೊಂದೂ ಸೌಂದರ್ಯ ನೋಡುವವರ ಕಣ್ಣಿನಲ್ಲಿದೆ ಎನ್ನುವುದು ಸುಳ್ಳು ಎನಿಸಿದ್ದೂ ನಿಜವೂ ಹೌದು.

Tuesday, November 13, 2007

ಸಹೋದ್ಯೋಗಿಯೊಬ್ಬನಿಗೆ ತಗುಲಿಕೊಂಡ ಕ್ಯಾನ್ಸರ್

ಇವತ್ತು ನಮ್ಮ ಆಫೀಸಿನಲ್ಲಿ ನನ್ನ ಸಹೋದ್ಯೋಗಿಯೊಬ್ಬನಿಗೆ ಅವನ ಡಾಕ್ಟರ್ ಚರ್ಮದ ಕ್ಯಾನ್ಸರ್ ಇರುವುದಾಗಿ ಡಯಾಗ್ನೋಸ್ ಮಾಡಿದ್ದಾಗಿ ತಿಳಿಸಿದ, ನನಗೆ ಒಂದು ಕ್ಷಣ ಅವನ ಮಾತುಗಳನ್ನು ನಂಬಲು ಕಷ್ಟವಾಯಿತು. ಎಷ್ಟೊಂದು ಸಂತೋಷವಾಗಿ ಆಡಿಕೊಂಡು ಹಾಡಿಕೊಂಡು ಇದ್ದವನಿಗೆ ಚರ್ಮದ ಕ್ಯಾನ್ಸರ್ ಈಗಾಗಲೇ ಉಲ್ಬಣಗೊಂಡಿರುವುದರಿಂದ ಅರ್ಜೆಂಟಾಗಿ ಸರ್ಜರಿ ಮಾಡಿಸಬೇಕು ಹಾಗೂ ಅನೇಕ ಕ್ಯಾನ್ಸರ್ ಸಂಬಂಧಿ ಟ್ರೀಟ್‌ಮೆಂಟುಗಳನ್ನು ಕೊಡಿಸಿಕೊಳ್ಳಬೇಕು ಎಂದು ಅವನ ವೈದ್ಯರು ತಾಕೀತು ಮಾಡಿದ್ದಾರಂತೆ. ನಾವು ಕುಶಾಲಕ್ಕೆ ಮಾತನಾಡುತ್ತಿದ್ದಾಗಲೇ ಅವನು ತನ್ನ ಖಾಯಿಲೆಯ ಬಗ್ಗೆ ಸಹಜವಾಗಿ ಪ್ರಸ್ತಾಪ ಮಾಡಿದ್ದು ನನಗೆ ಆಶ್ಚರ್ಯ ತರಿಸಿದರೂ ಅವನ ಮನದಾಳದಲ್ಲಿನ ದುಗುಡ ಸ್ವಲ್ಪ ಇಣುಕಿ ನೋಡಿದವರಿಗೆ ತಿಳಿಯುವಂತಿತ್ತು.

ಮಾನವನ ವೈದ್ಯಕೀಯ ಜ್ಞಾನ ಬೆಳೆದಂತೆ ತಿಳುವಳಿಕೆ ಬೆಳೆದಂತೆ ಅವನಿಗೆ ತಗಲುವ ರೋಗಗಳೂ ಅವುಗಳ ಕಾಂಪ್ಲಿಕೇಷನ್ನುಗಳೂ ಹೆಚ್ಚೆನಿಸೋದಿಲ್ಲವೇ? ನನಗೆ ಮೊದಲೆಲ್ಲ ನೆಲಗಡಲೆಯನ್ನು ತಿಂದೂ ಅಲರ್ಜಿಯಾಗುತ್ತದೆ ಅಮೇರಿಕದಲ್ಲಿ ಕೆಲವರಿಗೆ ಎಂದು ಕೇಳಿ ಬಹಳಷ್ಟು ಆಶ್ಚರ್ಯವಾಗುತ್ತಿತ್ತು, ಆದರೆ ಇತ್ತೀಚೆಗೆ ಅಂತಹ ಅಲರ್ಜಿ ಪೀಡಿತ ವ್ಯಕ್ತಿಯೊಬ್ಬರನ್ನು ನೋಡಿದಾಗ ನನ್ನ ನಂಬಿಕೆಯನ್ನು ಬದಲಿಸಿಕೊಳ್ಳಬೇಕಾಗಿ ಬಂತು. ನಮ್ಮ ಸೀನಿಯರ್ ಮೆಂಬರ್ ಒಬ್ಬರಿಗೆ ಅವರ ರಿಟೈರ್‌ಮೆಂಟು ಎಂದು ನಾವೆಲ್ಲರೂ ಕೇಕ್ ತಂದಿರಿಸಿದರೆ ಅವರು ನನಗೆ ಗೋಧಿ ಅಲರ್ಜಿ ಇದೆ ಎಂದಾಗ ನಂಬಲು ಕಷ್ಟವಾಯಿತು. ವೈರಾಣುಗಳೂ, ಬ್ಯಾಕ್ಟೀರಿಯಾಗಳು ನಮ್ಮ ವಿರುದ್ಧ ಸಮರ ಸಾರಿರುವಂತಿದೆ. ನಾವು ಮುಂದುವರೆದಂತೆಲ್ಲ ಅವುಗಳ ತಳಿ ಅಷ್ಟೇ ಪ್ರಭಲವಾಗುತ್ತಿದೆ. ಈಗೆಲ್ಲ ಮೊದಲಿನ ಹಾಗೆ ಕ್ಷಯ, ಸಿಡುಬಿನ ಪ್ಯಾಂಡೆಮಿಕ್ ಸನ್ನಿವೇಶ ಇಲ್ಲದಿರಬಹುದು, ಪ್ರಪಂಚದಾದ್ಯಂತ ಮಿಲಿಯನ್ನ್ ಗಟ್ಟಲೆ ಜನರನ್ನು ಆಕ್ರಮಿಸಿಕೊಂಡಿರುವ ಏಯ್ಡ್ಸ್ ರೋಗವೊಂದೇ ಸಾಕು ಕೆಲವೊಮ್ಮೆ ಮಾನವ ಸಂತಾನವನ್ನು ನಿರ್ಮೂಲನ ಮಾಡಲು ಎಂದು ಒಮ್ಮೆ ಭಯವಾಗುತ್ತದೆ.

ಕ್ಯಾನ್ಸರ್ ಬರುವುದರ ಹಿಂದೆ ನೂರಾರು ಕಾರಣಗಳಿದ್ದಿರಬಹುದು. ಒಬ್ಬ ವ್ಯಕ್ತಿ ನಲವತ್ತು ವರ್ಷ ನಿರಂತರವಾಗಿ ಹೊಗೆಬತ್ತಿ ಸೇದಿ ಆತನಿಗೆ ಶ್ವಾಸಕೋಶದ ಕ್ಯಾನ್ಸರ್ ಬಂದರೆ ಅದನ್ನು ಕೇಳಿ ಆಶ್ಚರ್ಯವಾಗುವುದಕ್ಕಿಂತ ಹೆಚ್ಚು ಯಾವುದೇ ದುಶ್ಚಟ ಉಳ್ಳವರೂ, ಮಾಂಸಾಹಾರವನ್ನೂ ಮಾಡದವರೂ ಕ್ಯಾನ್ಸರ್‌ಗೆ ತುತ್ತಾಗುವುದನ್ನು ಕೇಳಿ ಬಹಳಷ್ಟು ಬೇಸರವಾಗುತ್ತದೆ. ಅವರವರ ಕರ್ಮ ಫಲ ಎಂದು ಸುಲಭವಾಗಿ ತಳ್ಳಿ ಹಾಕುವುದಕ್ಕಿಂತ ಮೊದಲು ಯಾರಿಗೂ ಹೇಳಿ ಯಾರನ್ನೂ ಕೇಳಿ ಬರದ ಈ ರೋಗಗಳಿಂದ ಮುಕ್ತಿಯನ್ನು ಪಡೆಯುವುದಾದರೂ ಎಂದು? ಚರ್ಮದ ಕ್ಯಾನ್ಸರ್ ಬಂದೀತೆಂದು ಮುಖ, ಮೈ, ಬೆನ್ನುಗಳನ್ನು ಪ್ರತೀ ದಿನವೂ ಪರೀಕ್ಷಿಸಿಕೊಳ್ಳಲಾಗುತ್ತದೆಯೇ? ಅಲ್ಲಲ್ಲಿ ಹುಟ್ಟಿ ಸಾಯುವ ಮಚ್ಚೆಗಳಿಗೆಲ್ಲ ಚರ್ಮ ರೋಗ ತಜ್ಞರ ಬಳಿ ಹೋಗಲಾಗುತ್ತದೆಯೇ? ಬಿಸಿಲಿಗೆ ಹೋದಾಗಲೆಲ್ಲ ಮುಖಕ್ಕೆ, ಮೈ ಕೈಗೆ ಸನ್‌ಸ್ಕ್ರೀನ್ ಲೋಷನ್ ಮೆತ್ತಿಕೊಳ್ಳಲಾಗುತ್ತದೆಯೇ? ಹಾಗಿದ್ದ ಮೇಲೆ ಎಲ್ಲೋ ಒಂದು ದಿನ ಕೇರ್ ಫ್ರೀ ಆಗಿ ಬದುಕುವವರು ತಮ್ಮ ಜೀವವನ್ನೇ ಆ ಒಂದು ಕೇರ್ ಫ್ರೀ ಕ್ಷಣಕ್ಕೆ ಬಲಿಕೊಡಬೇಕಾಗಿ ಬಂದಾಗ ಬದುಕು ಬಹಳ ದುಬಾರಿ ಅನ್ನಿಸೊದಿಲ್ಲವೇ? ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿ, ಕುಟುಂದ ಹಿರಿಯರನ್ನು ಕಳೆದುಕೊಂಡ ಸದಸ್ಯರು, ಅನಾಥರಾಗುವ ಮಕ್ಕಳು ಇವುಗಳಿಗೆಲ್ಲ ಕ್ಯಾನ್ಸರ್ ಎನ್ನುವ ಮಾರಕ ರೋಗ ಯಾವ ರೀತಿಯ ಪರಿಣಾಮ ಬೀರಬಲ್ಲದು ಎನ್ನಿಸಿ ಒಮ್ಮೆ ಮರುಕ ಹುಟ್ಟಿತು.

ವೈದ್ಯಕೀಯ ಪರಿಭಾಷೆಯಲ್ಲಿ ಆಯಾ ಹಂತದ ಕ್ಯಾನ್ಸರ್‌ಗಳನ್ನು ನೋಡಿ - ’ನೀನು ಸಾಯುವುದು ಗ್ಯಾರಂಟಿ’ ಎಂದು ತೀರ್ಪು ಕೊಟ್ಟಾಗ ಆ ವ್ಯಕ್ತಿಯ ಮನಸ್ಥಿತಿ ಹೇಗಿರಬಹುದು? ಅವನನ್ನು ನಂಬಿಕೊಂಡ, ಆಧರಿಸಿಕೊಂಡ ಕುಟುಂಬದವರ ಮೇಲಿನ ಪರಿಣಾಮ ಹೇಗಿರಬಹುದು? ಯಾರದೋ ತಪ್ಪಿಗೆ ಯಾರಿಗೆ ಶಿಕ್ಷೆ ಎನ್ನುವಂತೆ ಆ ವ್ಯಕ್ತಿ ಈ ರೋಗ ತನಗೇಕೆ ತಗಲಿಕೊಂಡಿತೋ ಎಂದು ಮನಪೂರ್ತಿ ಪರಿಪರಿ ಆಲೋಚಿಸುವ ರೀತಿ ಹೇಗಿರಬಹುದು? ಇವುಗಳನ್ನೆಲ್ಲ ಯೋಚಿಸಿಕೊಂಡಷ್ಟೂ ನನ್ನ ಮೇಲಿನ ನಿರಾಶೆಯ ಮೋಡ ದಟ್ಟವಾಗತೊಡಗಿತೇ ವಿನಾ ಎಲ್ಲೂ ಬೆಳಕಿನ ಕಿರಣಗಳು ಕಾಣಿಸಲಿಲ್ಲ.

ನನ್ನ ಸಹೋದ್ಯೋಗಿ, ನಮ್ಮಿಂದ ಸಹಾನುಭೂತಿ ಬಯಸದೇ ಇರಬಹುದು, ನಮ್ಮಿಂದ ಯಾವ ಸಹಾಯವನ್ನೂ ಬಯಸದೇ ಇರಬಹುದು. ಆದರೆ ಇಷ್ಟು ವರ್ಷಗಳ ನಮ್ಮೊಡನಿದ್ದು, ಅಕಸ್ಮಾತ್ ಈ ರೋಗಕ್ಕೆ ತುತ್ತಾಗಿ ಒಂದು ಇಲ್ಲವೆಂದಾಗುತ್ತಾನೆ ಎಂದು ಯೋಚಿಸಿಕೊಂಡಾಗ ಒಂದು ಕಡೆ ಜೀವನ ಕ್ಷಣಿಕ ಎನ್ನುವ ವೈರಾಗ್ಯವೂ ಮತ್ತೊಂದು ಕಡೆ ಜೀವನ ಎಷ್ಟೊಂದು ಅಮೂಲ್ಯ ಎನ್ನುವ ಶೋಧನೆಯೂ ಹೊರಕ್ಕೆ ಬಂದವು. ನನ್ನ ಸಹೋದ್ಯೋಗಿಯೇನೋ ದಿನವಿಡೀ ನಾನಾ ರೀತಿಯಲ್ಲಿ ಕ್ಯಾನ್ಸರ್ ಅನ್ನು ನೆನೆಸಿಕೊಂಡು ನಗುತ್ತಲೇ ಇದ್ದ, ಮುಂದೊಂದು ದಿನ ಆತನಿಗೆ ಅಂಟಿದ ರೋಗದಿಂದ ಅವನಿಗೆ ಮುಕ್ತಿ ಸಿಕ್ಕೀತು ಎನ್ನೋದು ನನ್ನ ಆಶಾಭಾವನೆ ಅಷ್ಟೇ.

ಕ್ಯಾನ್ಸರ್‌ಗೆ ಸಿಕ್ಕಿ ಸಾಯುವವರಿಗಿಂತ ಮೋಟಾರು ವಾಹನಗಳ ಅಫಘಾತದಲ್ಲಿ ಸಿಕ್ಕಿ ಸಾಯುವವರು ಹೆಚ್ಚಿರಬಹುದು, ಆದರೆ ಅವೆರಡೂ ಭಿನ್ನ ನೆಲೆಗಳೇ. ಸಂಖ್ಯಾ ಆಧಾರದಲ್ಲಿ ಇಂತದೊಂದು ರೋಗ ಹೆಚ್ಚು ಅಥವಾ ಕಡಿಮೆ ಎಂದು ಹೇಳುವುದು ಸುಲಭವಾಗಿರಬಹುದು. ತಮ್ಮಷ್ಟಕ್ಕೆ ದ್ವಿಗುಣ, ತ್ರಿಗುಣಗೊಂಡು ಬೆಳೆಯುವ ಜೀವ ಕೋಶಗಳು ಒಂದು ದಿನ ಏಡಿಗಂಥಿಗಳಾಗಿ ಎಲ್ಲೆಡೆ ಹರಡಿ ಮನುಷ್ಯನ ಬದುಕನ್ನು ಧಾರುಣಗೊಳಿಸುವಂತಹ ಕೆಟ್ಟ ಖಾಯಿಲೆ ಇನ್ನೊಂದಿರಲಾರದು. ಅಂತಹ ರೋಗಗಳಿಗೆ ಏನೇನೋ ಔಷಧಿ ಮತ್ತೊಂದು ಮಾಡಿ ಸಾಯುವವರೆಗೆ ಅನುಭವಿಸುವ ಬದಲು ಇದ್ದಕ್ಕಿದ್ದ ಹಾಗೆ ಹಾರ್ಟ್ ಆಟ್ಯಾಕ್ ಆಗಿ ಸಾಯುವುದೇ ಮೇಲೆಂದು ಅನ್ನಿಸಿದ್ದಂತೂ ನಿಜ!

Thursday, August 30, 2007

ಗಾಳಿ

ಏನು ಗೊತ್ತಾ? ಸುಮ್ನೇ ಗಾಳೀ ಮೇಲೆ ಬರೀ ಬೇಕು ಅಂತ ನಿನ್ನೆಯಿಂದ ಅನ್ನಿಸ್ತಿದ್ದದ್ದು ನಿಜ. ಅಂತಿಂತ ಗಾಳಿ ಬಗ್ಗೆ ಅಲ್ಲ, ಎಲ್ಲ ಥರದ ಗಾಳಿಯ ಬಗ್ಗೆ, ಪ್ರಪಂಚವನ್ನು ಅಲ್ಲೋಲಕಲ್ಲೋಲ ಮಾಡುವ ಗಾಳಿಯಿಂದ ಹಿಡಿದು ಚಿಗುರೆಲೆಗಳ ಮೈ ಸವರಿ ’ಹೇಗಿದ್ದೀರಿ?’ ಎಂದು ವಿಚಾರಿಸುವ ಗಾಳಿಯವರೆಗೆ, ಕೆಲವು ಕಡೆ ಕತ್ತಲು ಆರಂಭವಾಗುವ ಸೂಚನೆ ನೀಡುವ ಗಾಳಿಯಿಂದ ಹಿಡಿದು, ಇನ್ನೆಲ್ಲೋ ಬೆಳಕು ಹುಟ್ಟುವ ಮುನ್ಸೂಚನೆ ಕೊಡುವ ಗಾಳಿಯವರೆಗೆ.

ಎಷ್ಟೋ ಸಾರಿ ಯೋಚಿಸಿದ್ದಿದೆ ಹೀಗೆ: ಯಾವುದೋ ಒಂದು ದಿನ ಅಪರೂಪಕ್ಕೆ ಶನಿವಾರ ಸಂಜೆ ನಿದ್ರೆಯಿಂದ ಎದ್ದು ಹೊರಗೆ ನೋಡಿದರೆ ಪಕ್ಕನೆ ಒಂದು ದಿಕ್ಕಿನಲ್ಲಿ ಕಂಡು ಬರುವ ಸೂರ್ಯ, ಅವೇ ಮೋಡಗಳ ನಡುವಿನ ಕಿರಣಗಳು ಇವೆಲ್ಲ ಏಕ್ ದಂ ಆ ಸಮಯ ಹಗಲು ರಾತ್ರಿಯಾಗುತ್ತಿರುವುದೋ ಅಥವಾ ರಾತ್ರಿ ಇದ್ದದ್ದು ಹಗಲಾಗುವುದೊ ಎಂಬ ಗೊಂದಲವನ್ನು ಹುಟ್ಟಿಸುತ್ತದೆ. ನಿಮಗೆ ಹಾಗೆ ಆಗಿರಲೇ ಬೇಕೆಂದೇನೂ ಇಲ್ಲ ಆದರೆ ನನಗಂತೂ ಹಾಗೆ ಅನ್ನಿಸಿದೆ, ಸಂಜೆ ನಿದ್ರೆಯಿಂದ ಎದ್ದವನಿಗೆ ಅದೇ ತಾನೆ ಬೆಳಗು ಹರಿದ ಅನುಭವವಾಗಿದ್ದಿದೆ. ಆ ಸಮಯಕ್ಕೆ ಸಹಾಯಕ್ಕೆ ಬರುವ ಸ್ನೇಹಿತನೆಂದರೆ ಲಘುವಾಗಿ ತೀಡುವ ಗಾಳಿ, ಮುಂಜಾನೆ ಬೀಸುವ ಗಾಳಿಯಲ್ಲಿ ಒಂದು ರೀತಿಯ ಆರ್ದ್ರತೆ ಇದ್ದರೆ, ಅದೇ ಸಂಜೆ ಹೊತ್ತಿಗೆಲ್ಲಾ ಒಣಗಿ ಹೋಗುತ್ತಿರುವ ದಿನದಲ್ಲಿ ಈಗಾಗಲೇ ಅಲ್ಲಿಲ್ಲಿ ಸುಳಿದ ಗಾಳಿಯೇ ಹೆಚ್ಚು.

ಉತ್ತಮ ಗಾಳಿ ಅನ್ನೋದೇನಿದ್ದರೂ ಪಶ್ಚಿಮದಲ್ಲೇ ಹುಟ್ಟಬೇಕು, ಹಾಗೆ ಹುಟ್ಟಿ ಅದು ಪೂರ್ವಾಭಿಮುಖವಾಗಿ ಹರಿಯಬೇಕು ಅಲ್ಲಿನ ಜನರ ಸ್ಥಿತಿಗತಿಗಳನ್ನು ಅರಿತಂತೆ ಆಲಿಸಿ ಅವರನ್ನು ಆಳಬೇಕು - ಹೀಗೆ ಇತಿಹಾಸವಿದೆ, ಅನುಭವವಿದೆ. ಸೂರ್ಯ ಮೊದಲು ಹುಟ್ಟಿ ಬರುವ ನಾಡಿನಲ್ಲಿನ ಕತ್ತಲನ್ನು ಹೋಗಲಾಡಿಸಲು ಪಶ್ಚಿಮದಲ್ಲಿ ಅವರವರ ಕತ್ತಲಲ್ಲಿ ಬಳಲುತ್ತಿರುವ ಜನರೇ ಆಗಬೇಕು.

***
ಓಹ್, ಯಾಕ್ ನಿಲ್ಲಿಸ್ ಬಿಟ್ಟೇ ಅಂತೀರಾ? ಏನ್ ಹೇಳ್ತಾ ಇದ್ದೆ?

ಅದೇ ಗಾಳಿ ಬಗ್ಗೆ.

ಯಾವ್ ಗಾಳಿ?

ಅದೇ - ಕತ್ಲು, ಬೆಳಕೂ, ಪೂರ್ವಾ, ಪಶ್ಚಿಮಾ, ರಾತ್ರೀ, ಹಗಲೂ..

ಓ, ಅದಾ - ಏನಿಲ್ಲ, ಗಾಳಿ ಒಂದ್ ಕಡೇಯಿಂದ ಮತ್ತೊಂದ್ ಕಡೇ ಹೋಯ್ತು ಅಂತ ಇಟ್ಕೊಳ್ಳಿ...ಆಗ ಏನಾಗುತ್ತೇ ಅಂದ್ರೆ ಅಲ್ಲೊಂದು ನಿರ್ವಾತ ಹುಟ್ಟತ್ತೆ. ಆದ್ರೆ, ಆ ನಿರ್ವಾತವನ್ನು ತುಂಬೋದಕ್ಕೆ ಸುತ್ತಲಿನ ಗಾಳಿ ರಭಸದಿಂದ ನುಗ್ಗುತ್ತೆ. ಹಾಗೆ ಆಗೋದರಿಂದ ಎರಡು ಬದಲಾವಣೆ ಆಗುತ್ತೆ - ಒಂದು, ಹಳೇ ಗಾಳಿ ಇದ್ದಲ್ಲಿ ಹೊಸ ಗಾಳಿ ಬಂದಂತಾಯ್ತು, ಇನ್ನೊದು, ಇರೋ ಗಾಳೀನೇ ಹೆಚ್ಚು ವಾಲ್ಯೂಮ್ ತುಂಬಿಕೊಂಡು ಒತ್ತಡ ಕಡಿಮೆ ಆಯ್ತು. ಹೌದೋ ಅಲ್ವೋ.

ಹೌದು.

ಅದರಿಂದ ಏನ್ ಗೊತ್ತಾಗುತ್ತೇ?

ಏನ್ ಗೊತ್ತಾಗುತ್ತೇ?

ಅದೇ, ಇರೋ ಗಾಳಿಯ ಜಾಗದಲ್ಲಿ ಮತ್ತೆನೋ ಬಂದ್ ಸೇರ್ಕೊಂಡು, ವಾಲ್ಯೂಮ್ ಜಾಸ್ತಿ ಆಯ್ತು, ಒತ್ತಡಾ ಕಡಿಮೆ ಆಯ್ತು, ಇದರಿಂದ ಎಲ್ಲ ವೇರಿಯಬಲ್‌ಗಳು ಬದಲಾದ್ವೇ ಹೊರತು ಒಟ್ಟು ಸ್ಥಿತಿಗತಿಯಲ್ಲಿ ಏನೇನೂ ಬದಲಾವಣೇ ಅನ್ನೋದಾಗ್ಲಿಲ್ಲ ನೋಡಿ.

ಏನೋ ನನಗೆ ಅರ್ಥ ಆಗ್ಲಿಲ್ಲಪ್ಪಾ.

ನಿಮಗೆಲ್ರೀ ಅರ್ಥ ಆಗುತ್ತೇ ಇಂತಾ ಸುಲಭವಾದ ಸಮೀಕರಣಾ, ಅದೂ ಕಂಪ್ಯೂಟರ್ರ್ ಕಾಲದ ಜನ್ರಪ್ಪಾ ನೀವು, ಎಲ್ಲದಕ್ಕೂ ಕ್ಯಾಲ್ಕುಲೇಟರ್ ಬಳಸೋ ಪರಂಪರೆಯವರು.

***

ಈ ಪಂಚಭೂತಗಳಲ್ಲೊಂದಾದ ಗಾಳಿಗೆ ದುಡ್ಡು ಕೊಡಬೇಕಾಗಿಲ್ಲ ಅನ್ನೋ ಕಾಲ ಬಹಳ ಹಳೆಯದಾಯ್ತು. ನಾವು ನೀರನ್ನು ದುಡ್ಡುಕೊಟ್ಟು ಕೊಂಡು ಗೊತ್ತಿದೆ, ಆದರೆ ಗಾಳಿಗೆ ದುಡ್ಡುಕೊಟ್ಟಿಲ್ಲ ಅನ್ನೋಕಾಗಲ್ಲ. ನಾವು ಉಪಯೋಗಿಸೋ ಮ್ಯಾನುಫ್ಯಾಕ್ಚರ್ ಮಾಡಿರೋ ಪ್ರತಿಯೊಂದು ವಸ್ತುವೂ ವಾತಾವರಣಕ್ಕೆ ತನ್ನದೇ ಆದ ಕೊಡುಗೆಯನ್ನು ಕೊಡುತ್ತೆ. ಬೇಕಾದಷ್ಟು ರೀತಿಯ ಅನಿಲಗಳನ್ನು ಕಾರ್ಖಾನೆಗಳಿಂದ ಹೊರಗೆ ಬರೋದನ್ನ ನೋಡೇ ಇರ್ತೀವಿ. ಬಿಯರ್ ತಯಾರಿಕೆ, ಫರ್ಮೆಂಟೇಷನ್ ಮುಂತಾದ ಸರಳ ಮ್ಯಾನುಫ್ಯಾಕ್ಚರಿಂಗ್ ನಿಂದ ಹಿಡಿದು ಟಯರ್ ಮೊದಲಾದ ಪ್ಲಾಸ್ಟಿಕ್, ರಬ್ಬರ್ ಆಧಾರಿತ ವಸ್ತುಗಳ ಉತ್ಪಾದನೆ ಬೇಕಾದಷ್ಟು ಅನಿಲವನ್ನು ಹೊರಗಡೆ ಹರಿಯಬಿಡುತ್ತೆ. ಹೀಗೆ ಹೊರಬಂದ ಅನಿಲಗಳಲ್ಲಿ ಎಷ್ಟೋ ಒಳ್ಳೆಯವು, ಇನ್ನೆಷ್ಟೋ ಕೆಟ್ಟವು. ಅವೆಲ್ಲಾ ಸೇರಿ ಸುಮ್ಮನೇ ಇರ್ತಾವೆ ಅಂತೇನೂ ಇಲ್ಲ. ಗ್ರೀನ್‍ಹೌಸ್ ಗ್ಯಾಸ್‌ಗಳಿಂದ ಗ್ಲೋಬಲ್ ವಾರ್ಮಿಂಗ್ ಆಗೋದರ ಬಗ್ಗೆ ಎಲ್ಲರಿಗೂ ಗೊತ್ತು, ಆಸಿಡ್ ಮಳೆ ಬೀಳೋದರ ಬಗ್ಗೆ ಗೊತ್ತಿದೆ, ಇನ್ನು ವಾಯು ಮಾಲಿನ್ಯದ ಬಗ್ಗೆ ನಾವೆಲ್ಲಾ ಕೇಳೇ ಇರ್ತೀವಿ. ಹೀಗೆ ಹೊರಸೂಸಿದ ಅನಿಲಗಳ ದುಷ್ಪರಿಣಾಮವೇ ನಾವು ಗಾಳಿಗೆ ತೆರುತ್ತಿರುವ ಬೆಲೆ.

ನಮ್ಮ ಕಡೆ ದೆವ್ವ-ಭೂತ ಮೆಟ್ಟಿಕೊಂಡೋರಿಗೆ ’ಗಾಳಿ ಬಡದಿದೆ’ ಅಂತಾರೆ. ಯಾವ ಗಾಳಿಯಲ್ಲಿ ಏನೇನಿದೆಯೋ? ಆತ್ಮಗಳ ಸಂವಹನೆಗೆ, ಭೂತಗಳ ಮಾತುಕಥೆಗೆ ಈ ಗಾಳಿಯೇ ಮಾಧ್ಯಮವಾಗೇಕಿರಬಾರದು. ನೀವ್ ಮಾತ್ರ ಎಲ್ಲ್ ಹೋದ್ರೂ ಹುಶಾರಾಗಿರಿ. ಯಾವ್ ಯಾವ್ ಗಾಳೀಲೀ ಏನೇನಿದೆಯೋ? ಕೊನೆಗೆ ಬೇಡವಾದದ್ದ್ಯಾವ್ದಾದ್ರೂ ಮೆಟ್ಟಿಕೊಂಡ್ರೆ ಕಷ್ಟಾ. ಹಿಂದೆಲ್ಲಾ ಒಂದಿಷ್ಟು ಗಾಳೀಸುದ್ದೀ ಅಂತ ಹುಟ್ತಿತ್ತು, ಈಗೆಲ್ಲಾ ಟಿವಿ ಚಾನೆಲ್ಲುಗಳಿಗೆ ಜನ ಒಗ್ಗಿಕೊಂಡ್ ಹೋಗೀರೋ ಸಮಯದಲ್ಲೂ ಇನ್ನೂ ಗಾಳೀಸುದ್ದಿಯಾಗಲೀ, ಗಾಳೀಮಾತಾಗಲೀ ಪ್ರಸ್ತುತವಾಗುತ್ತಾ? ನೀವ್ ಏನೇ ಹೇಳಿ ಅವರವರು ಮೂಗಿನಲ್ಲಿ ಎಳೆದುಕೊಳ್ಳೋ ಗಾಳಿ ಅವರವರಿಗೇ ಸೇರಿದ್ದು, ನಮಗೆಲ್ಲಾ ಜೀವವಾಯುವಾದ ಆಮ್ಲಜನಕವನ್ನ ವಾತಾವರಣದಿಂದ ಯಾರಾದ್ರೂ ದೋಚಿಕೊಳ್ದೇ ಇದ್ರೆ ಸಾಕಪ್ಪಾ.

ಒಂದು ಕೆಟ್ಟ ಗಾಳಿ ಸಾಕು ಲೋಕವನ್ನ ಕಂಗೆಡಿಸೋದಕ್ಕೆ. ಅದು ಬಿರುಗಾಳಿ ಆಗಿರಬಹುದು, ಸುಂಟರಗಾಳಿ ಆಗಿರಬಹುದು, ಅಥವಾ ಮೂಡಗಾಳಿ ಆಗಿರಬಹುದು. ತುಂಬಾ ಛಳಿ ಇದ್ದಾಗ ಬೀಸೋ ಗಾಳಿ ಇಂದ ಹೇಗೆ ತೊಂದರೆ ಇದೆಯೋ ಹಾಗೇ ತುಂಬಾ ಬಿಸಿ ಇದ್ದಾಗ ಬೀಸೋ ಗಾಳಿಯಿಂದ್ಲೂ ತೊಂದರೇನೇ. ನೀವು ಎಲ್ಲೇ ಇರಿ ಹೇಗೇ ಇರಿ, ನಿಮ್ಮನ್ನ ನೀವು ಗಾಳಿಯಿಂದ ರಕ್ಷಣೆ ಮಾಡಿಕೊಳ್ಳಿ, ಅಷ್ಟೇ ಸಾಕು ಮಿಕ್ಕಿದ್ದೆಲ್ಲ ತನ್ನಷ್ಟಕ್ಕೆ ತಾನೇ ಸರಿಹೋಗುತ್ತೆ. ಯಾವುದೇ ಕೆಟ್ಟಗಾಳಿ-ಸುಳಿಗಾಳೀ ಸಹವಾಸ ಮಾಡ್ದೇ ನೀವು ಸದಾ ಒಳ್ಳೇ ವಾತಾವರಣದಲ್ಲೇ ಇರಬೇಕು ಅನ್ನೋದು ನನ್ನ ಆಶಯ.

Tuesday, August 28, 2007

ಪರಿಮಿತ ಮನಸ್ಸು ಅಪರಿಮಿತ ಜೀವಸಂಕುಲ

ಜೀವ ಸಂಕುಲ ಅನ್ನೋದು ಬಹಳ ಸ್ವಾರಸ್ಯಕರವಾದದ್ದು ಎಂದು ಅನ್ನಿಸಿದ್ದು ಪ್ರತೀ ದಿನ ಆಫೀಸಿನಿಂದ ಬರುವ ದಾರಿಯಲ್ಲಿ ಕಾಣುವ ಒಂದು ಹಸಿರುಕಟ್ಟಿದ ನೀರು ತುಂಬಿದ ಹೊಂಡವನ್ನು ನೋಡಿದಾಗ. ಮಳೆ ಬಾರದಿದ್ದ ದಿನಗಳಲ್ಲಿ ಅಲ್ಲಿ ಹೆಚ್ಚು ಪಾಚಿ ಬೆಳೆಯದೇ ಅಲ್ಲಲ್ಲಿ ತ್ಯಾಪೆ ಹಾಕಿದವರ ಹಾಗೆ ಬರಿ ನೀರು ಕಾಣಿಸುತ್ತಿತ್ತು, ಕಳೆದ ಒಂದೆರಡು ವಾರಗಳಲ್ಲಿ ಹುಲುಸಾದ ಮಳೆಯಿಂದಾಗಿ ಈಗ ಎಲ್ಲಿ ನೋಡಿದರಲ್ಲಿ ಹಸಿರೇ ಹಸಿರು, ಅಲ್ಲಿ ನೀರೇ ಇಲ್ಲವೇನೋ ಎನ್ನಿಸುವಂತೆ ಅಗಾಧವಾದ ಶಾಂತಿಯನ್ನು ತನ್ನ ಮುಖದಲ್ಲಿ ಪ್ರತಿಫಲಿಸುವ ಸಂತನ ನಿಷ್ಕಲ್ಮಷ ಮುಖದಂತೆ ಒಂದು ರೀತಿಯ ಸ್ತಬ್ದಚಿತ್ರ. ಬರೀ ಕೀಟಗಳನ್ನು ಅಧ್ಯಯನ ಮಾಡಿಯೇ ಎಷ್ಟೋ ಜನುಮಗಳನ್ನು ಕಳೆಯಬಹುದು, ಪ್ರಪಂಚದಾದ್ಯಂತ ಇರುವ ಇನ್ನೂ ಹೆಸರಿಡದ ಕೀಟಗಳ ಸಂತಾನವನ್ನು ಅವುಗಳ ಚಲನವಲನವನ್ನು ಶೋಧಿಸಿಕೊಂಡು ಹೊರಟರೆ ಕೀಟಗಳ ಸಾಮಾಜಿಕ ಬದುಕಿನ ಬಗ್ಗೆ ಏನೇನೆಲ್ಲವನ್ನು ಕಂಡುಹಿಡಿಯಬಹುದು. ಸ್ಥಿರ ಸಸ್ಯಗಳು, ನಡೆದಾಡುವ ಸಸ್ಯಗಳು, ಸಸ್ಯಗಳಂತಿರುವ ಕೀಟಗಳು, ಕೀಟದ ಹಾಗಿರುವ ಕೀಟಗಳನ್ನು ಭಕ್ಷಿಸುವ ಸಸ್ಯಗಳು ಇನ್ನೂ ಏನೇನೆಲ್ಲವನ್ನು ಅಗಾಧವಾದ ಬ್ರಹ್ಮಾಂಡ ತನ್ನ ಒಡಲಲ್ಲಿ ತುಂಬಿಕೊಂಡಿದೆ ಎಂದು ಒಮ್ಮೆ ಸೋಜಿಗವಾಯಿತು.

ಒಂದು ವೇಳೆ ಈ ಪ್ರಪಂಚದಲ್ಲಿರುವ ಅಣು ಬಾಂಬುಗಳು, ರಸಾಯನಿಕ ಬಾಂಬುಗಳು ಮತ್ತಿತರ ಆಯುಧ-ಸ್ಫೋಟಕಗಳೆಲ್ಲವನ್ನೂ ಉರಿಸಿ-ಸಿಡಿಸಿದರೆ ಏನಾಗಬಹುದು ಎಂಬ ಯೋಚನೆ ಬಂತು. ಈ ಭೂಮಿಯ ಮೇಲ್ಮೈ, ಒಳಗೆ, ನೀರಿನೊಳಗೆ ಅದೆಷ್ಟೋ ಶಾಖ ಉತ್ಪನ್ನವಾದರೂ, ಇಡೀ ಭೂಮಂಡಲದಲ್ಲಿನ ನೀರು ಕೊತಕೊತನೆ ಕುದ್ದು ಆವಿಯಾದರೂ ಅಥವಾ ಅತಿಶೀತದಲ್ಲಿ ಮಂಜುಗಡ್ಡೆಯಾಗಿ ಪರಿವರ್ತನೆಗೊಂಡು ನೂರು ವರ್ಷ ಸೂರ್ಯನ ಕಿರಣಗಳು ಕಾರ್ಮೋಡವನ್ನು ದಾಟಿ ಭೂಮಿಯನ್ನು ತಲುಪದೇ ಇದ್ದರೂ ಸಹ ಒಂದಲ್ಲಾ ಒಂದು ರೀತಿಯಲ್ಲಿ ಯಾವುದಾದರೊಂದಿಷ್ಟು ಜೀವ ಜಂತುಗಳು ಬದುಕೇ ಇರುತ್ತವೆ ಎನ್ನುವುದು ನನ್ನ ನಂಬಿಕೆಯಾಗಿ ಹೋಗಿದೆ. ಜೀವರಾಶಿಗಳಲ್ಲಿ ಮಾನವ ಅತಿಪ್ರಭಲ, ಬುದ್ಧಿಜೀವಿ ಎಂದೇನೇನೆಲ್ಲ ಖ್ಯಾತಿಯನ್ನು ಪಡೆದುಕೊಂಡಿದ್ದರೂ, ಅದೇ ತಾನೆ ಹುಟ್ಟಿದ ಮೀನಿನ ಮರಿಯಿಂದ ಹಿಡಿದು, ಮರ್ಕಟ-ಮಾರ್ಜಾಲ ಸಂತಾನಗಳಿಗೆ ತುಲನೆ ಮಾಡಿದಲ್ಲಿ ಮಾನವ ಶಿಶು ಎಷ್ಟೊಂದು ದುರ್ಬಲವಾದದ್ದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇಂದಿಲ್ಲದ ಜಾಗೆಯಲ್ಲಿ ನಾಳೆ ಹುಟ್ಟಿ ಅಂದೇ ಸತ್ತು ಜೀರ್ಣಗೊಳ್ಳುವ ನಾಯಿಕೊಡೆಗಳಿಂದ ಹಿಡಿದು, ಆಕಳಿನ ಸಗಣಿಯಲ್ಲೇ ಹುಟ್ಟಿಬೆಳೆದು ವಿಜೃಂಬಿಸುವ ಗೆದ್ದಲು ಹುಳಗಳಿಂದ ಹಿಡಿದು, ಶೀತಕಗಳಲ್ಲೂ ಸಂತಾನ ವರ್ಧಿಸುವ ಜಿರಲೆಗಳನ್ನು ನೋಡಿ ಸೋಜಿಗಗೊಂಡಿದ್ದೇನೆ. ಇಂತಹ ವಿಭಿನ್ನ ಪ್ರಾಣಿ-ಪಕ್ಷಿ ಕಶೇರುಕ-ಅಕಶೇರುಕ ಸಂತಾನಗಳ ನಡುವೆ ಅದೆಂತಹ ಸಂಭಾಷಣೆ ನಡೆದೀತು ಎಂದು ಯೋಚಿಸತೊಡಗುತ್ತೇನೆ. ಸಮುದ್ರ ತೀರದಲ್ಲಿ ನಡೆದಾಡುವವರಿಗೆ ದಿಢೀರನೆ ಸುನಾಮಿ ಅಲೆಗಳು ಕಾಣಿಸಿಕೊಂಡ ಹಾಗೆ ಬಚ್ಚಲು ಮೋರಿಯಲ್ಲಿ ಆಹಾರವನ್ನು ಹೊಂಚುತ್ತಿರುವ ಇರುವೆಗೆ ಪಕ್ಕನೆ ತನ್ನ ಮೇಲೆ ಬಿದ್ದ ನೀರು ಅದರದ್ದೇ ಆದ ಲೋಕದ ಒಂದು ಸುನಾಮಿಯ ಅನುಭವಕ್ಕೆ ಸಮನಾಗುವುದೇ ಎಂದು ತೂಗತೊಡಗುತ್ತೇನೆ.

ತಾನು ಸಾಕಿಯಾಗಲೀ, ಸಲಹಿಯಾಗಲೀ, ಬೇಟೆಯಾಡಿಯಾಗಲೀ ಉಳಿದ ಜೀವಜಂತುಗಳನ್ನು ಕೊಂದು ಬದುಕುವ ಹಕ್ಕನ್ನು ಯಾರು ಯಾರಿಗೆ ಕೊಟ್ಟರು? ಆಹಾರ ಸರಪಳಿಯ ನ್ಯಾಯದಲ್ಲಿ ಯಾರು ಯಾರನ್ನು ಬೇಕಾದರೂ ಭಕ್ಷಿಸಬಹುದಾಗಿದ್ದರೆ ಮಾನವ ಜನಾಂಗಕ್ಕೆ ಪ್ರಾಣಿಗಳಿಂದಾಗುವ ಅಪಾಯಗಳನ್ನು ವಿಶೇಷವಾಗಿ ನೋಡಬೇಕಿತ್ತೇಕೆ? ನಾವು ಯಾವ ಪ್ರಾಣಿಯ ಸಂತತಿಯನ್ನಾದರೂ ಕೊಲ್ಲಬಹುದು, ಆದರೆ ಮನುಷ್ಯನ ಸಂತತಿಗೆ ಇನ್ಯಾವುದೇ ಪ್ರಾಣಿ ಅಪಾಯ ತಂದೊಡ್ಡಿದ್ದೇ ಆದಲ್ಲಿ ಅದನ್ನು ಆಕ್ರಮಣ-ಅತಿಕ್ರಮಣ ಎಂಬ ಹಣೆಪಟ್ಟಿಯನ್ನಿಟ್ಟೇಕೆ ನೋಡುತ್ತೇವೆ?

ಪ್ರತಿಯೊಂದರಲ್ಲೂ ಜೀವವಿರುತ್ತದೆ ನೋಡುವ ಕಣ್ಣುಗಳಿದ್ದರೆ - ನಾವು ನಮ್ಮೊಳಗಿನ ಪ್ರಪಂಚದಲ್ಲೇ ಹೂತು ಹೋಗುವುದರ ಬದಲು ನಮ್ಮ ನೆರೆಹೊರಯನ್ನು ವೀಕ್ಷಿಸಿದಲ್ಲಿ ನಿಸರ್ಗದ ಒಂದು ಚಕ್ರ ಉರುಳತಲೇ ಇರುತ್ತದೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ಭುವಿಯನ್ನು ಬೆಳಗಿ ಹುಣ್ಣಿಮೆ ಚಂದ್ರ ಬರುತ್ತಾನೆ, ಒಂದು ದಿನವೂ ತಪ್ಪಿಸದೇ ಸೂರ್ಯಬರುತ್ತಾನೆ. ಈ ಸೂರ್ಯನ ಕಿರಣಗಳು ದ್ಯುತಿಸಂಶ್ಲೇಷಣೆಗೆ ಇಂಬುಕೊಡುತ್ತವೆ. ಎಂತಹ ಛಳಿ-ಮಳೆ-ಗಾಳಿಯಲ್ಲೂ ಗಿಡಮರಗಳು ಬದುಕಿ ಬಾಳುವುದೂ ಅಲ್ಲದೇ ಬುಡದಿಂದ ಹೀರಿ-ಗ್ರಹಿಸಿದ್ದನ್ನು ತಲೆಯವರೆಗೆ ಏರಿಸುವ ಯಂತ್ರರಹಿತ ತಂತ್ರವನ್ನು ತಮ್ಮೊಳಗಿಟ್ಟುಕೊಂಡಿವೆ. ಯಾರೋ ಉದುರಿಸಿ ಹಾಕಿದರೆಂದು ತಾವು ಕಟ್ಟಿದ ಜೇನುಗೂಡನ್ನು ಸಂರಕ್ಷಿಸಲು ಹೋಗಿ ಜೇನುನೊಣಗಳು ಕುಟುಕಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತವೆ, ಅಗಾಧವಾದ ಜೇನು ಹುಳಗಳ ಮಹಾಯಾಗದಲ್ಲಿ ಒಂದೇ ಒಂದು ರಾಣಿ ಜೇನು ಎಲ್ಲ ಕಾರ್ಯಗಳನ್ನೂ ನಿರ್ವಹಿಸಿ ತನ್ನ ದೊಡ್ಡತನವನ್ನು ಮೆರೆಯುತ್ತದೆ. ಈ ಕೀಟ-ಪಕ್ಷಿ-ಸಸ್ಯಗಳ ಇನ್‌ಸ್ಟಿಂಕ್ಟ್ ಏನು? ಅವುಗಳು ನಮ್ಮಂತಹ ನೀಚರ ನಡುವೆ ಬದುಕುವುದಾದರೂ ಹೇಗೆ ಎಂದೆನಿಸೋಲ್ಲವೇ?

ಯಾವುದೇ ವಾತಾವರಣದಲ್ಲಿಯೂ ಕಾರಿನ ವಿಂಡ್‌ಶೀಲ್ಡ್‌ಗೆ ಬಡಿದು ಅನೇಕ ಹುಳ-ಜೀವ-ಜಂತುಗಳ ಜೀವ ಹಾರಿ ಹೋಗುತ್ತದೆ. ಹೀಗೆ ಜೀವ ಇರುವವುಗಳಲ್ಲಿ ಒಂದು ಲೌಕಿಕ ಆತ್ಮವೆನ್ನುವುದು ಇರುವುದೇ ಹೌದಾದರೆ, ಆತ್ಮಕ್ಕೆ ಹಾಗೂ ಶರೀರಕ್ಕೆ ಸಂಬಂಧವೇ ಇಲ್ಲದೇ ಹೋದರೆ ಇರುವೆಯ ಆತ್ಮಕ್ಕೂ ಮಾನವನ ಆತ್ಮಕ್ಕೂ ವ್ಯತ್ಯಾಸವೇನು ಉಳಿಯುತ್ತದೆ ಎನ್ನುವುದು ಈ ಕ್ಷಣದ ಪ್ರಶ್ನೆ ಅಷ್ಟೇ.

ಹಸಿರುಕಟ್ಟಿದ ಪಾಚಿಯ ನೀರಿನ ಹೊಂಡ ಅಥವಾ ಕೊಳ ತನ್ನದೇ ಒಂದು ಸ್ಟೇಟ್‌ಮೆಂಟನ್ನು ಪ್ರಪಂಚಕ್ಕೆ ಪ್ರಚುರಪಡಿಸುತ್ತದೆ. ಪಾಚಿಯ ಕೆಳಗೆ ಮೇಲೆ ಹಾಗೂ ನಡುವೆ ನಡೆಯುತ್ತಿರುವ ಬೇಕಾದಷ್ಟು ಸಾಧನೆಗಳನ್ನು ನಾವು ಗಮನಿಸೋದೇ ಇಲ್ಲ. ನಮಗೆಲ್ಲ ನಮ್ಮ ನಮ್ಮ ಪ್ರಪಂಚವೇ ದೊಡ್ಡದು, ಅದರ ಸುತ್ತಮುತ್ತಲೇ ಎಲ್ಲವೂ ಸುತ್ತೋದು ಎಂದು ಪಿಚ್ಚೆನಿಸುತ್ತದೆ. ಪಾಚಿಯನ್ನು ಫೋಟೋ ತೆಗೆಯೋಣವಾ ಎಂದು ಒಮ್ಮೆ ಕ್ಯಾಮೆರಾಕ್ಕೆ ಕೈ ಚಾಚುತ್ತದೆ, ಎಲ್ಲವನ್ನೂ ಫೋಟೋ ಹೊಡೆದೂ ಹೊಡೆದೂ ನನ್ನ ಸಂಗ್ರಹಿಸಬೇಕು ಎನ್ನುವ ಸ್ವಾರ್ಥವನ್ನು ಮೊಟ್ಟಮೊದಲ ಸಾರಿ ಗೆದ್ದೆನೆಂಬ ಹರ್ಷವನ್ನು ಕಣ್ಣುಗಳು ಪ್ರತಿಬಿಂಬಿಸ ತೊಡಗುತ್ತವೆ.

Tuesday, August 21, 2007

ಇವತ್ತಲ್ಲ ನಾಳೆ ಅದೇನೋ ಬಂದು ಬೀಳುತ್ತೇ ಅನ್ನೋ ಹಾಗೆ

'ಅರೆ! ಏನಪ್ಪಾ ಇದು ಇಷ್ಟು ಬೇಗ ಬಂದೀದೀಯಾ?' ಅನ್ನೋ ಪ್ರಶ್ನೆ ಬೇರೆ ಯಾರನ್ನೂ ಕುರಿತು ಬಂದದ್ದಲ್ಲ, ಈ ಅವಧಿಗೆ ಮುಂಚೆ ಬರಬೇಕಾದ ಛಳಿಗಾಲವನ್ನು ಕುರಿತು. ಇನ್ನೂ ಸೆಪ್ಟೆಂಬರ್ ಬಂದಿಲ್ಲಾ ಆಗ್ಲೇ ಹತ್ತ್‌ಹತ್ರ ಐವತ್ತು ಡಿಗ್ರಿ (ಫ್ಯಾರನ್‌ಹೈಟ್) ವರೆಗೆ ಪಾದರಸ ಇಳಿದು ಹೋಗಿದೆಯೆಲ್ಲಾ ಏನನ್ನೋಣ? ಅದೂ ಮೊನ್ನೆ ದಿನಾ ರಾತ್ರಿ ನಲವತ್ತೊಂದರ ಹತ್ರ ಹೋಗಿ ಬಿಟ್ಟಿತ್ತು. ಬೇಸಿಗೆ ನಂಬಿ ಬದುಕೋನ್ ನಾನು, ಛಳಿಗಾಲ ಬಂತೂ ಅಂತಂದ್ರೆ ಅದೆಷ್ಟು ಜನರಿಗೆ ಕತ್ತಲು, ಕೊರೆಯೋ ಛಳಿ, ಕಿತ್ತು ತಿನ್ನೋ ಬೇಸರ ಹೆದರಿಸೋದೂ ಅಲ್ದೇ ಡಿಪ್ರೆಷ್ಷನ್ ತರುತ್ತೋ ಯಾರಿಗ್ ಗೊತ್ತು?

ಈ ಕಂಟ್ರಿ ಲಿವಿಂಗ್ ಅಂದ್ರೆ ಸುಮ್ನೇ ಬರಲ್ಲ. ನ್ಯೂ ಯಾರ್ಕ್ ಸಿಟಿಗೂ ನಮ್ಮನೇಗೂ ಕೊನೇ ಪಕ್ಷಾ ಆರೇಳ್ ಡಿಗ್ರಿನಾದ್ರೂ ವ್ಯತ್ಯಾಸಾ ಇರುತ್ತೆ, ಬೇಸಿಗೆಯಲ್ಲಿ ಎಷ್ಟು ತಣ್ಣಗಿರುತ್ತೋ ಛಳಿಯಲ್ಲೂ ಅದಕ್ಕಿಂತ ಹೆಚ್ಚು ತಣ್ಣಗಿನ ಅನುಭವವಾಗುತ್ತೆ. ಒಂಥರಾ ಈ ಅಮೇರಿಕದ ಬೇಸಿಗೆ ಅನ್ನೋದು ಕೆಟ್ಟ ಕಾನ್ಸೆಪ್ಟಪಾ, ಯಾಕೆ ಅಂದ್ರೆ ಜೂನ್ ಇಪ್ಪತ್ತೊಂದಕ್ಕೆ ಆರಂಭವಾಗೋ ಬೇಸಿಗೆ ಅದೇ ದಿನವೇ ಹೆಚ್ಚು ದೊಡ್ಡ ದಿನವಾಗಿ (ಡೇ ಲೈಟ್ ಘಂಟೆಗಳಲ್ಲಿ) ಬೇಸಿಗೆ ಆರಂಭವಾದ ದಿನದಿಂದ್ಲೇ ದಿನಗಳು ಸಂಕುಚಿತಗೊಳ್ತಾ ಹೋಗೋದು. ಒಂಥರಾ ಬಿರು ಬೇಸಿಗೆಯಲ್ಲಿ ಐಸ್ ಕ್ಯಾಂಡಿಯನ್ನು ಡಬ್ಬದಿಂದ ಹೊರಗೆ ತೆಗೆದ ಹಾಗೆ, ತೆಗೆದ ಘಳಿಗೆಯಿಂದ್ಲೂ ಅದು ಕರಗ್ತಾನೇ ಹೋಗುತ್ತೆ - ಅನುಭವಿಸಿ ಅಥವಾ ಬಿಡಿ. ಇತ್ತೀಚೆಗೆಲ್ಲಾ ಎಷ್ಟೊಂದ್ ಕತ್ಲು ಅಂತಂದ್ರೆ ಬೆಳಿಗ್ಗೆ ಏಳ್ ಘಂಟೆ ಆದ್ರೂ ಲೈಟ್ ಹಾಕ್ಕೋಂಡೇ ಇರಬೇಕು, ಸಂಜೇನೂ ಅಷ್ಟೇ ಬೇಗ ಕತ್ಲಾಗುತ್ತೆ.

ಓಹ್, ಅಮೇರಿಕದ ಬೇಸ್ಗೇನಾ? ಇಲ್ಲ್ಯಾವನೂ ಶೇಕ್ಸ್‌ಪಿಯರ್ ಇಲ್ಲಾ - Shall I Compare Thee To A Summer's Day? ಅಂತ ಬರೆಯೋಕೆ. ಅದೂ ಅಲ್ದೇ ಈ ದೊಡ್ಡ ದೇಶದಲ್ಲಿ ಕೆಲವರು ಯಾವಾಗ್ಲೂ ಬೇಸಿಗೆಯಲ್ಲೇ ನಲುಗ್ತಾ ಇದ್ರೆ, ಇನ್ನ್ ಕೆಲವರು ಛಳಿಯಲ್ಲೇ ಮುಲುಗ್ತಾ ಇರ್ತಾರೆ - ಅದೇನ್ ದೇಶಾನೋ ಕಾಣೆ. ನಮ್ ದೇಶ್ದಲ್ಲೂ ಹಿಮಾಲಯದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಥರ್ಮಾಮೀಟರ್‌ನಲ್ಲಿ ಅಗಾಧವಾದ ವೇರಿಯೇಷನ್ನೇನೋ ಇತ್ತು, ಆದ್ರೆ ಆ ಹಿಮಾಲಯಾನಾ ಯಾವ್ ಯಾವ್ದೋ ದೇಶ್ದೋರು ಹತ್ತಿ ಇಳಿಯೋಕ್ ಪ್ರಾಕ್ಟೀಸ್ ಮಾಡೋ ಜಾಗ ಮಾಡ್ಕಂಡ್ರೇ ವಿನಾ ನಾವ್ ನೋಡ್ಲೇ ಇಲ್ಲಾ ಒಂದಿನಾನು. ಅಲ್ಲಿ ಕಾಣದ ಮಂಜು, ಹಿಮವನ್ನ ಇಲ್ಲಿ ಕಾಣು ಎಂದು ಯಾರೋ ಬರೆದಿಟ್ಟ ಹಾಗೆ (ಹಣೇ ಮೇಲೆ), ಅಲ್ಲಿ ಕುಡಿಯದ ನೀರನ್ನ ಇಲ್ಲಿ ಬೇರೆ ಬೇರೆ ಫಾರ್ಮಿನಲ್ಲಿ ಕುಡಿದು ಅನುಭವಿಸು ಎಂದು ಯಾವುದೋ ಕಾನೂನಿಗೆ ಒಳಪಟ್ಟವರ ಹಾಗೆ ನಮ್ಮ ಬದುಕು...ಬ್ಯಾಡಾ ಅನ್ನೋದು ಆಪ್‌ಷನ್ನಿನ್ನಲ್ಲೇ ಇಲ್ಲಾ ಅಂತ ಪರೀಕ್ಷೆಗೆ ತಯಾರಾಗ್ತಾ ಇರೋ ಹುಡುಗನ್ನ ಹೆದರಿಸೋ ವರಸೇ ಬೇರೆ ಕೇಡಿಗೆ!

'ಏನ್ ಸಾರ್ ನೀವು? ಇಷ್ಟ್ ವರ್ಷಾ ಆಯ್ತು ಇಲ್ಲಿಗ್ ಬಂದು, ಇನ್ನೂ ಸುತ್ಲನ್ನ್ ನೋಡ್ಕಂಡ್ ಕೊರಗ್ತಾನೇ ಇರ್ತೀರಲ್ಲಾ... (ನಿಮ್ ಬಂಡ್ ಬಾಳ್ವೇಗ್ ಇಷ್ಟ್ ಬೆಂಕೀ ಹಾಕಾ). ಪುಲ್ ಪ್ಯಾಕೇಜ್ ಡೀಲ್ ಅಂತ ಪಡಕಂಡ್ ಬಂದ್ ಮೇಲೆ ಅನುಭವಿಸ್ ಬೇಕಪ್ಪಾ, ಅದನ್ನ್ ಬಿಟ್ಟು ಕೊರಗಿದ್ರೆ?' ಎಂದು ಯಾವ್ದೋ ಧ್ವನಿಯೊಂದು ಕೇಳಿಸಿದಂತಾಗಿ ಸುತ್ಲೂ ನೋಡ್ದೆ ಯಾರೂ ಕಾಣ್ಲಿಲ್ಲ. 'ಹಂಗಲ್ಲ್ ರೀ...' ಎಂದು ಸಮಾಧಾನ ಹೊರಡ್ತು, ಆದ್ರೆ ಅದು ಯಾರನ್ನ್ ಉದ್ದೇಶಿಸಿ ಎನ್ನೋ ಪ್ರಶ್ನೇ ಬಂದಿದ್ದೇ ತಡಾ ಒಂಥರಾ ಹೋಟ್ಲು ಮಾಣಿ ತಪ್ಪಾಗಿ ತಂದು ದೋಸೆಯನ್ನ ನಮ್ಮ ಮುಂದೆ ಇಟ್ಟು ಹಿಂದೆ ತೆಗೆದುಕೊಂಡು ಹೋದ ಹಾಗೆ, ಆ ಸಮಜಾಯಿಷಿ ಅಲ್ಲೇ ಅಡಗಿಕೊಂಡಿತು. ಅದ್ಯಾವ್ದೋ ಗೀತೇನಲ್ಲಿ ಬರೆದವ್ರೆ ಅನ್ನೋ ಥರ ನಮ್ಮ್ ಭಾರತೀಯರ ಮನೆಗಳಲ್ಲಿ (ಎಲ್ಲೆಲ್ಲಿ ಅವರವರೇ ಗ್ಯಾಸೂ-ಕರೆಂಟ್ ಬಿಲ್ಲ್ ಕೊಡಬೇಕೋ ಅಲ್ಲಿ) ಯಾವತ್ತಿದ್ರೂ ಒಂದ್ ಡಿಗ್ರಿ ಕಮ್ಮೀನೇ ಇರುತ್ತೇ ಥರ್ಮೋಸ್ಟ್ಯಾಟು, ಸೋ ನಡುಗೋದು ನಮ್ಮ್ ಹಣೇಬರ, ಇನ್ನು ಆರು ತಿಂಗ್ಳು.

ನಮ್ಮ್ ತಲೇಲ್ ಬರೆದಿದ್ದು ಇಷ್ಟೂ ಅಂತ ಬೇಸರಾ ಮಾಡ್ಕೊಂಡು ಕಿಟಕಿಯಿಂದ ದೂರ ನೋಡಿದ್ರೆ, ನಿಧಾನವಾಗಿ ಪಕ್ಕದ ಮರಗಳಿಂದ ಎಲೆಗಳೆಲ್ಲಾ ಒಂದೊಂದೇ ನೆಲದ ಹಾದಿ ಹಿಡಿಯುತ್ತಿದ್ದವು. ಈ ತಣ್ಣಗೆ ಕೊರೆಯೋ ಗಾಳಿ ಒಂದೇ ಒಂದು ದಿನದಲ್ಲೇ ಅದೆಷ್ಟು ಎಲೆಗಳ ಬದುಕನ್ನು ಬದಲಾಯಿಸಿಬಿಡ್ತಲ್ಲಾ ಅಂತ ಅನ್ನಿಸ್ತು. ಪಾಪ, ಈ ಛಳಿಯಲ್ಲಿ ಎಲೆ ಕಳೆದುಕೊಳ್ಳೋ ಮರಗಳೂ, ಪ್ರವಾಹದಲ್ಲಿ ಕೊಚ್ಚೆ ತುಂಬಿ ಹರಿಯೋ ನದಿಗಳಿಗೂ ಅದ್ಯಾವತ್ತ್ ಮುಕ್ತಿ ಸಿಗುತ್ತೋ, ಅದ್ಯಾವ್ ಋಷಿ ಶಾಪ ಕೊಟ್ಟಿದ್ನಪಾ? ಹೂಞ್, ಇಲ್ಲಾ, ಇಲ್ಲಾ...ಈ ಮುಂದೆ ಬೀಳೋ ಛಳಿಗೆ, ಅದ್ರಲ್ಲೂ ರಾಶಿ ರಾಶಿ ಬೀಳೋ ಹಿಮಕ್ಕೆ, ಅದರ ಭಾರಕ್ಕೆ ಮರದ ಟೊಂಗೆಗಳು ಮುರಿದು ಬೀಳದಿರಲಿ ಎಂದು ನೇಚರ್ ಕಂಡುಕೊಂಡ ಪರಿಹಾರವಿದ್ದಿರಬಹುದು...ಹಗುರವಾದವನು ಎಂತಹ ಭಾರವನ್ನೂ ಸಹಿಸಬಲ್ಲ ಎನ್ನೋ ಅದರದ್ದೇ ಆದ ತತ್ವ ಅಂತ ಏನಾದ್ರೂ ಇದ್ದಿರಬಹುದಾ ಅನ್ನೋ ಶಂಕೆ ಬಂತು. ಈ ನಿತ್ಯಹರಿದ್ವರ್ಣ (ಎವರ್‌ಗ್ರೀನ್) ಗಳದ್ದು ಇನ್ನೊಂದ್ ಪರಿ - ತಾವ್ ಎವರ್‌ಗ್ರೀನ್ ಏನೋ ಆದ್ವು, ಆದ್ರೆ ಅವು ಚಿಗುರಿ ಬೆಳೆಯೋ ಬೆಳವಣಿಗೆ ಇದೇ ನೋಡಿ ಬಾಳಾ ಸ್ಲೋ ಒಂಥರಾ ಥರ್ಡ್‍ವರ್ಲ್ಡ್ ದೇಶಗಳು ಮುಂದೆ ಬರೋ ಹಾಗೆ. ನಾವು ಏನೇ ಆದ್ರೂ ಹಸಿರಾಗೇ ಇರ್ತೀವಿ ಅಂತ ಹಠವನ್ನೇನೋ ತೊಟ್ವು, ಆದ್ರೆ ಮಂಜಿನ ಭಾರಕ್ಕೆಲ್ಲಾ ಕುಬ್ಜರಾಗಿ ಹೋದ್ವು. ಆದ್ರೂ ಅವುಗಳದ್ದೂ ಒಂದು ಧೈರ್ಯಾ ಸ್ವಾಮೀ, ಎಂಥಾ ಛಳೀನಲ್ಲೂ ಬದುಕಿ ಉಳೀತಾವೆ. ಹೊರಗಡೇ ಮೈನಸ್ ಇಪ್ಪತ್ತ್ ಡಿಗ್ರಿ ಇರೋ ಛಳೀನಲ್ಲಿ ಅದೆಂಗ್ ಬದುಕ್ತಾವೋ ಯಾರಿಗ್ಗ್ ಗೊತ್ತು?

ನಿಮ್ಮೂರಲ್ಲಿ ಹೆಂಗಿದೆ ಈಗ? ಮಳೇಬೆಳೇ ಬಗ್ಗೆ ತಲೆಕೆಡಿಸಿಕೊಳ್ತೀರೋ ಇಲ್ವೋ? ಮಳೇಬೆಳೆ ಬಗ್ಗೆ ತಲೆಕೆಡಿಸಿಕೊಂಡ್ ಯಾರಿಗ್ ಏನಾಗಿದೇ ಅಂತೀರಾ, ಅದೂ ಸರೀನೇ...ನಮ್ಮೂರ್‌ನಲ್ಲ್ ನೋಡಿ, ಯಾವತ್ತಿದ್ರೂ ಜನ ಮುಗಿಲ್ ನೋಡ್ತಾನೇ ಇರ್ತಾರೆ ಇವತ್ತಲ್ಲ ನಾಳೆ ಅದೇನೋ ಬಂದು ಬೀಳುತ್ತೇ ಅನ್ನೋ ಹಾಗೆ.