Showing posts with label ಅನುಭವ. Show all posts
Showing posts with label ಅನುಭವ. Show all posts

Monday, March 14, 2011

ಬಹಳ ದಿನಗಳ ಗೆಳೆಯ...







ಚುಕ್ಕು, ಚುಕ್ಕು, ಚುಕ್ಕು... ಸದ್ದು ಮಾಡುತ್ತಾ ಡೋವರ್‌ನಿಂದ ಹೊಬೋಕನ್ನ್ ಕಡೆಗೆ ಗಾಳಿಯನ್ನು ಎರಡು ಬಣವಾಗಿ ಇಬ್ಬಾಗಿಸಿಕೊಂಡು ಹಳಿಗಳ ಮೇಲೆ ಹುಳುವಾಗಿ ಹರಿದುಕೊಂಡು ಹೋಗುತ್ತಿದ್ದ ನಮ್ಮೂರಿನ ಲೋಕಲ್ ಟ್ರೇನು, ಬಹಳ ದಿನಗಳ ನಂತರ ಗೆಳೆಯನ ಮನೆಗೆ ಹೋಗುವ ಸಂಭ್ರಮವನ್ನು ನನ್ನ ಪಾಲಿಗೆ ತಂದುಕೊಟ್ಟಿತ್ತು. ಶುಕ್ರವಾರ (ಮಾರ್ಚ್ ೧೧) ಬೆಳ್ಳಂಬೆಳಿಗ್ಗೆಯೇ ಇಲ್ಲಿನ ರೇಡಿಯೋ ಸ್ಟೇಷನ್ನುಗಳು ಅರಚಿಕೊಂಡ ಪ್ರಕಾರ ಜಪಾನ್‌ನಲ್ಲಿ ದೊಡ್ಡದೊಂದು ಭೂಕಂಪ ಸಂಭವಿಸಿ ಅನೇಕ ಹಾನಿಗಳ ಬಗ್ಗೆ, ಸಾವು ನೋವುಗಳ ಬಗ್ಗೆ ಮನದಲ್ಲಿ ಒಂದು ಥ್ರೆಡ್ ಕೊರೆಯ ತೊಡಗಿದರೆ, ಕೈಯಲ್ಲಿ ಅಪರೂಪಕ್ಕೆ ಹಿಡಿದುಕೊಂಡ ಡಿ.ಆರ್. ನಾಗರಾಜ್‌ ಅವರ "ಸಂಸ್ಕೃತಿ ಕಥನ" ಭಾರವಾಗ ತೊಡಗಿತ್ತು, ತೊಡೆಯ ಮೇಲೆ ಮಲಗಿ ಸುಮ್ಮನಿದ್ದ ಲ್ಯಾಪ್‌ಟಾಪ್‌ ತನ್ನ ಮಡಿಲಲ್ಲಿನ ಬಿಸಿ ಬ್ಯಾಟರಿಯಿಂದ ಸುಟ್ಟು ತನ್ನ ಇರುವನ್ನು ಬ್ಯಾಗಿನೊಳಗಿಂದಲೇ ಸ್ಪಷ್ಟ ಪಡಿಸಿತ್ತು.

ಬಹಳ ದಿನಗಳ ಗೆಳೆಯನೆಂದರೆ, ನಮ್ಮೂರಿನಿಂದ ಕೇವಲ ಐವತ್ತು ಮೈಲು ದೂರದಲ್ಲಿರುವ ನ್ಯೂ ಯಾರ್ಕ್ ನಗರ! ನಮ್ಮ ಟ್ರೇನು ನೆವರ್ಕ್, ಜರ್ಸಿ ಸಿಟಿ, ಹೊಬೋಕನ್ನ್ ಮೊದಲಾದ ಹೆಚ್ಚು ಜನ ಸಾಂದ್ರತೆಯುಳ್ಳ ಪ್ರದೇಶಗಳನ್ನು ತಲುಪಿದಂತೆಲ್ಲ ಹಳಿಗಳು, ಗಾಲಿಗಳು ಆಗಾಗ್ಗೆ ತಿಕ್ಕಿಕೊಳ್ಳುತ್ತಿದ್ದ ಶಬ್ದ ಹಾಗೂ ಕಿಟಕಿಯಿಂದ ಹೊರಗೆ ಕಾಣುವ ಚಿತ್ರಣಗಳು ಇಪ್ಪತ್ತು ವರ್ಷದ ಹಿಂದಿನ ಯಶವಂತಪುರ ಮತ್ತು ಮೆಜೆಸ್ಟಿಕ್ ನಡುವಿನ ರೈಲು ಪ್ರಯಾಣದ ಅನುಭವವನ್ನು ಮನದಲ್ಲಿ ತಾಳೆ ಹಾಕಿ ಕೊಳ್ಳುತ್ತಿದ್ದವು.

ನಾಗರಾಜ್ ೧೯೯೬ ರ ನಿನಾಸಂನಲ್ಲಿ ಮಾಡಿದ ಭಾಷಣದ ಆವೃತ್ತಿಯ ನವ್ಯ ಸಾಹಿತ್ಯ ಸಂಸ್ಕೃತಿಯ ನಾಲ್ಕು ದೌರ್ಬಲ್ಯಗಳ ವಾಕ್ಯಗಳು ನನ್ನನ್ನು ಪದೇ-ಪದೇ ಓದುವಂತೆ ಮಾಡಿ ಚಿಂತನೆಗೆ ತೊಡಗಿಸಿದವು. ನಾನು ಬಹಳವಾಗಿ ಹಚ್ಚಿಕೊಂಡ ಅಡಿಗ, ಅನಂತಮೂರ್ತಿ, ಲಂಕೇಶ, ಕಂಬಾರ, ತೇಜಸ್ವಿ, ಮೊದಲಾದವರು ಶಂಬಾ ಜೋಷಿ, ಬೇಂದ್ರೆ, ಪುತಿನ, ತೀನಂಶ್ರೀ ಮೊದಲಾದವರಿಂದ ಹೇಗೆ ಭಿನ್ನರು - ಇವರ ವಿದ್ವತ್ತಿನಿಂದ ಕನ್ನಡ ಸಂಸ್ಕೃತಿಯನ್ನು ಅಖಂಡವಾಗಿ ಪುನರ್ ನಿರ್ಮಾಣ ಮಾಡಬಲ್ಲ ಒಬ್ಬ ಚಿಂತಕನೂ ನಮ್ಮಲ್ಲಿ ಮೂಡಿಬರಲಿಲ್ಲ - ಎಂಬ ವಾಕ್ಯಗಳು ಕಾಫಿ ಹೀರದ ಶುಕ್ರವಾರದ ಮುಂಜಾನೆಯ ಬಹಳ ದಿನಗಳ ನಂತರ ಕನ್ನಡವನ್ನು ಓದುತ್ತಿದ್ದ ಮನಸ್ಸಿಗೆ ಭಾರವಾಗಿ ಕಂಡುಬಂದವು. ಡಿ.ಆರ್.ಎನ್., ಎನ್ನುವ ಕನ್ನಡದ ಪ್ರವಾದಿ ಯಾರು? ನಮ್ಮಿಂದ ಅವರು ಚಿಕ್ಕ ವಯಸ್ಸಿನಲೇ ದೂರವಾದದ್ದು ಹೇಗೆ? ಯಾವಾಗಲಾದರೂ ಸಮಯ ಸಿಕ್ಕಾಗ ಅವರ ಸ್ನೇಹಿತ ಮತ್ತು ಪುಸ್ತಕದ ಸಂಪಾದಕರಾದ ಅಗ್ರಹಾರ ಕೃಷ್ಣಮೂರ್ತಿಯವರಿಗೆ ಫೋನ್ ಮಾಡಬೇಕು, ೧೯೯೭ ರಲ್ಲಿ ನಾಗರಾಜ್ ಅವರು ಚಿಕಾಗೋದಲ್ಲಿ ಉಪನ್ಯಾಸ ಮಾಡಿದ್ದ ಆಡಿಯೋ-ವೀಡಿಯೋ ಗಳಿದ್ದರೆ ಹುಡುಕಬೇಕು...ಹೀಗೆ ಅನೇಕ ಅನೇಕ ಗೊಂದಲಗಳು ತಲೆಯಲ್ಲಿ ಸುತ್ತಿಕೊಳ್ಳತೊಡಗಿದವು. ಜೊತೆಗೆ ನಾಗರಾಜ್ ಅವರ ಪುಸ್ತಕಗಳಲ್ಲಿ ಹೆಸರಿಸುವ, ಉದಾಹರಿಸುವ ಅನೇಕಾನೇಕ ಪುಸ್ತಕಗಳನ್ನೂ-ಪರಾಮರ್ಶೆಗಳನ್ನೂ ಖುದ್ದಾಗಿ ಪರಿಶೀಲಿಸಬೇಕು ಎಂಬೆಲ್ಲ ಮಲ್ಟಿ-ಜನ್ಮಗಳ ಟ್ಯಾಸ್ಕ್ ಲಿಸ್ಟುಗಳು ಹುಟ್ಟತೊಡಗಿದವು. ಜೊತೆಯಲ್ಲಿ ಒಂದು ಜನಾಂಗ, ಸಂಸ್ಕೃತಿ, ಭಾಷೆಯನ್ನು ಸ್ಥೂಲವಾಗಿ ಅರಿಯದೇ ಹುಟ್ಟಿನಿಂದ ಅದರ ಒಡನಾಟದಲ್ಲಿ ತೊಡಗದೇ ಹೊರಗಿನವರಾಗಿ ಸಂಸ್ಕೃತಿಯೊಂದನ್ನು ಅವಲೋಕಿಸುವುದರಲ್ಲಿನ ಮಿತಿಗಳು ಪರಕೀಯತೆಯನ್ನು ಹೆಚ್ಚು ದೊಡ್ಡದನ್ನಾಗಿ ಮಾಡಿ ತೋರಿಸತೊಡಗಿದ್ದು, ಒಂದು ರೀತಿ ಮ್ಯಾಪ್‌ಕ್ವೆಸ್ಟಿನಲ್ಲಿ ಚಿಕ್ಕದಾಗಿ ಕಾಣಸಿಗುವ ನ್ಯೂ ಯಾರ್ಕ್ ನಗರದ ಬಿಲ್ಡಿಂಗುಗಳು ನಮ್ಮ ಕಣ್ಣೆದುರೇ ಅವುಗಳ ಬೃಹತ್ ನೆಲೆಯನ್ನು ತೆರೆದುಕೊಂಡ ಹಾಗೆ ಬೆನ್ನ ಹುರಿಯಲ್ಲಿ ಮಿಂಚಿನ ಸಂಚಕಾರವಾಯಿತು. ನಾಗರಾಜ್ ಅವರ ಕಥನಗಳನ್ನು ಓದುತ್ತಿದ್ದ ಹಾಗೆ "ಪತ್ರಿಕೆ" ಹಾಗೂ ಅದರ ವಿಶೇಷಣಗಳ ನೆನಪುಗಳಾಗಿ - ಪುಂಡಲೀಕ ಶೇಟ್, ರವೀಂದ್ರ ರೇಶ್ಮೆ, ಕಟ್ಟೆ ಪುರಾಣ, ಬಂ, ಗುಂ, ಟೀಕೆ-ಟಿಪ್ಪಣಿ - ಮೊದಲಾದವುಗಳೆಲ್ಲ ಜಾತ್ರೆಯ ತೇರನ್ನು ಎಳೆಯಲು ತಯಾರಾಗಿ ನಿಂತ ಯುವಕರಂತೆ ಹಗ್ಗವನ್ನು ಹಿಡಿದುಕೊಂದು ಮನದಲ್ಲಿ ಪುಟಿದು ನಿಂತವು. ೧೯೯೭ರಲ್ಲಿ ಮೊದಲು ಇಂಟರ್ನೆಟ್ಟಿನಲ್ಲಿ "ಸಂಜೆವಾಣಿ"ಯನ್ನು ಓದಿದ ಪುಳಕಗಳಾಗಿ, ಅಂದೇ ಕನ್ನಡದ ಪತ್ರಿಕೋದ್ಯಮದಲ್ಲಿ ಹೊಸ ಪ್ರಯೋಗವೊಂದನ್ನು ಮಾಡಿ ಅನಿವಾಸಿ ಕನ್ನಡಿಗರಿಗೆಲ್ಲ ಹೊಸ ಹುರುಪನ್ನು ನೀಡಿದ್ದ ಮಣಿಯವರನ್ನು ವಿಶೇಷವಾಗಿ ಸ್ಮರಿಸಿಕೊಳ್ಳುವಲ್ಲಿ, ನಾಗರಾಜ್‌ರ ಅನುಭವಗಳು ಸಹಾಯಕಾರಿಯಾದವು.

ಕನ್ನಡದ ಹಿಂದಿನ ವಿದ್ವಾಂಸರ ಸಾಹಿತ್ಯ, ದಾರ್ಶನಿಕತೆ, ನವ್ಯರ ಕಲಸು ಮೇಲೋಗರ, ನವ್ಯೋತ್ತರ ಪ್ರಯೋಗಳು, ಬಂಡಾಯ-ದಲಿತರ ಧ್ವನಿಗಳು, ಜಾತಿ-ರಾಜಕೀಯದಲ್ಲಿ ಹೊರಬಂದ ಕೂಗುಗಳು, ದೊಡ್ಡ ದೊಡ್ಡ ಸಂಭ್ರಮಗಳನ್ನು ಸಣ್ಣ ಕಥೆಗಳಲ್ಲೇ ನೇಯ್ದ ಅಥವಾ ಕಟ್ಟು ಹಾಕಿದ ಬಂಧನಗಳ ರೂಪಗಳು, ಇನ್ನೂ ಹಳೆಯ ನಾಟಕಗಳಿಗೆ ಜೋತು ಬಿದ್ದು ಹೊಳಪನ್ನು ಕಾಣದ ರಂಗದ ಪರದೆಗಳು, ಸಿನಿಮಾ ಎಂಬ ಭ್ರಮಾಲೋಕಕ್ಕೆ ತನ್ನನ್ನು ತಾನು ಸಮರ್ಪಿಸಿಕೊಂಡ ಇತರ ಕಲಾ ಪ್ರಕಾರಗಳು - ಹೀಗೆ ಅನೇಕಾನೇಕ ಯೋಚನೆಗಳ ಅಲೆಗಳನ್ನು ನಾಗರಾಜ್‌ ಅವರ ಪುಸ್ತಕ ಕೇವಲ ಇಪ್ಪತ್ತು-ಮೂವತ್ತು ನಿಮಿಷಗಳಲ್ಲಿ ಏಳಿಸಿ ಚಲಿಸುತ್ತಿರುವ ಟ್ರೈನಿನಲ್ಲಿ ಚಲನೆಯಿಲ್ಲದ ದೇಹದೊಳಗೆ ಅನೇಕ ರೋಚಕತೆಗಳನ್ನು ಹುಟ್ಟುವಲ್ಲಿ ಯಶಸ್ವಿಯಾಗಿತ್ತು. ಪಂಡಿತರಲ್ಲದವರಿಂದ ಎಂತಹ ಸಾಹಿತ್ಯ ಬರುತ್ತದೆ, ಮಾರಿ ಜಾತ್ರೆಯನ್ನು ಕಾಣದ, ಕೋಣನ ಬಲಿಯನ್ನೆ ನೋಡದ, ಗಡಿ-ಮಾರಿಗಳನ್ನು ಅರ್ಥ ಮಾಡಿಕೊಳ್ಳದ ಸಂತತಿ ಈ ಸಮುದಾಯಕ್ಕೆ ಎಂತಹ ರೂಪವನ್ನು ಕೊಟ್ಟೀತು? ಚಂದ್ರಗುತ್ತಿಯಲ್ಲಿನ ಬೆತ್ತಲೆ ಪೂಜೆಯ ಸುತ್ತಣ ನಡೆದ ಸಾಮಾಜಿಕ ಚಳುವಳಿ, ಅದೆಷ್ಟೋ ದೂರದಲ್ಲಿಂದ "ಉಧೋ ಉಧೋ" ಹಾಡಿಕೊಂಡು ಹೊರಟು ಹೋಗುತ್ತಿದ್ದ ಎತ್ತಿನ ಗಾಡಿಗಳು, ಬೆತ್ತಲನ್ನು ಮುಚ್ಚಲು ಬಳಕೆಗೆ ಯಥೇಚ್ಛವಾಗಿ ಸಿಗುತ್ತಿದ್ದ ಬೇವಿನ ಸೊಪ್ಪು, ನಾಗರಿಕರಷ್ಟೇ ಗುರುತಿಸುವ ಅನಾಗರಿಕ ವರ್ತನೆ - ಇತ್ಯಾದಿಗಳೆಲ್ಲ ನರ್ತಿಸತೊಡಗಿದವು. ಯಾರೋ ಮನದೊಳಗೆ ಮಲಗಿದ್ದ ಬುಗುರಿಗೆ ಹುರಿಯನ್ನು ಸುತ್ತಿ ಎಂತಿ ಅಂತರ ಪಿಚ್ಚನ್ನು ಹಾಕಿದಂತೆ ಗಾಳಿಯಲ್ಲಿ ಸುತ್ತಿ ಬಂದು ಅಂಗೈನ ಮಧ್ಯೆಯಲ್ಲಿನ ನನ್ನ ಆಟಿಕೆ ಸುತ್ತಿ-ಸುತ್ತಿ ಗಿರುಕಿ ಹೊಡೆಯಲಾರಂಭಿಸುವ ಹೊತ್ತಿಗೆ ನ್ಯೂ ಯಾರ್ಕ್ ನಗರ ದುತ್ತನೆ ಎದುರಾಗಿತ್ತು.

***

ಅದೇ ನ್ಯೂ ಯಾರ್ಕ್ ನಗರ?! ಅಲ್ಲ, ಬದಲಾಗಿರುವ ಚಿತ್ರ, ಇಲ್ಲ, ಅವೇ ಬಿಲ್ಡಿಂಗುಗಳು, ಅಲ್ಲ, ಹೊಸ ವಿನ್ಯಾಸಗಳು, ಅಲ್ಲ, ಅದೇ ನಿರಂತರತೆ.... ಹೀಗೆ ಅನೇಕ ಅಲ್ಲ-ಇಲ್ಲಗಳ ನಂತರ ನಾನಿದ್ದೇನೆ ಇಲ್ಲಿಯೇ - ಶತಶತಮಾನಗಳಿಂದ ಎನ್ನುವ ಅಖಂಡತೆ ಅನುಭವಕ್ಕೆ ಬಂತು. ಅದರ ಸೌಂದರ್ಯ, ವಿಸ್ತಾರ, ಅಬ್ಬರದ ಮುಂದೆ ನಮ್ಮ ಅನುಭವಗಳು ಎಷ್ಟು ಕನಿಷ್ಠವಾದವುಗಳು ಎಂದೂ ಅನಿಸಿತು, ಒಂದು ರೀತಿ ನೊಣ ದೊಡ್ಡದೊಂದು ಆನೆಯ ದೇಹದ ಮೇಲೆ ಕಾಣುವ ಧೂಳಿನ ಹಾಗೆ. ಓಹ್, ಎಲ್ಲದಕ್ಕಿಂತ ಮುಖ್ಯವಾಗಿ ಅದೇ ಗಾಂಭೀರ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಎಂಪೈರ್ ಸ್ಟೇಟ್ ಬಿಲ್ಡಿಂಗ್! ಉಳಿದ ಕಟ್ಟಡಗಳು ಹಾಗೂ ಕಲರವಗಳ ನಡುವೆ ನೋಡಿದರೆ ಅದು ಅಷ್ಟೊಂದು ದೊಡ್ಡದೇ ಎಂದು ಒಮ್ಮೆ ಅನುಮಾನವಾದರೂ ಕೆಲವೊಮ್ಮೆ ದೊಡ್ಡದನ್ನು ದೂರದಿಂದ ನೋಡಿಯೇ ತಿಳಿಯಬೇಕು ಎನ್ನಿಸಿದ್ದು ನಿಜ.

ಬಿಸಿನೆಸ್ಸು ಮೀಟಿಂಗ್‌ಗೆ ಹೊಗಿ ಅಲ್ಲಿ ಕಾಫಿ ಹೀರುತ್ತಿದ್ದ ಹಾಗೆ ಸರ್ವಾಂತರ್ಯಾಮಿ ಸಿಎನ್‌ಬಿಸಿ ವರದಿಗಳೆಲ್ಲ ನನ್ನ ಸಹೋದ್ಯೋಗಿಗಳಲ್ಲೂ ಪಸರಿಸಿ ನೈಸರ್ಗಿಕ ಪ್ರಕೋಪದ ಪರಿಣಾಮದ ಚರ್ಚೆಗಳು ಜಪಾನ್‌ನಿಂದ ದೂರದ ಹವಾಯಿಯಲ್ಲಿ ಸುನಾಮಿ ಅಲೆಗಳೆದ್ದು ತೊಂದರೆಯಾದ ಬಗ್ಗೆ ವಿಸ್ತಾರಗೊಂಡಿದ್ದವು. ಎಲ್ಲೇ ಏನಾದರೂ ತಮ್ಮ ಬಾಟಮ್‌ಲೈನಿನ ಬಗ್ಗೆ ಆಲೋಚಿಸುವ ಅಮೇರಿಕನ್ನ್ ಮನಸ್ಸಿನ ಮಿತಿ ಎಂದುಕೊಂಡರೆ ತಪ್ಪಾದೀತು. ಇಂದಿನ ಗ್ಲೋಬಲ್ ವ್ಯವಸ್ಥೆಯಲ್ಲಿ ದೊಡ್ಡ-ದೊಡ್ಡ ಆಟಗಾರರಿಗೆ ನೆಗಡಿ-ಜ್ವರ ಬಂದರೇ ಕಷ್ಟವಾಗುವಾಗ ಇನ್ನು ಭೂಕಂಪ, ಸುನಾಮಿಗಳು ಬರೀ ನೀರಿನ ಅಲೆಗಳಾಗಿ ಮಾತ್ರ ತಟ್ಟದೇ ಗಾಳಿ ಹಾಗೂ ಉಳಿದ ಮಾಧ್ಯಮಗಳಲ್ಲೂ ಸಂವಹಿಸಬಲ್ಲ ಶಕ್ತಿ ಅಥವಾ ದೌರ್ಬಲ್ಯವನ್ನು ಕುರಿತು ಚಿಂತಿಸುವಂತಾಯಿತು.

ಒಟ್ಟಿನಲ್ಲಿ, ಈ ವಿಶ್ವದ ದೊಡ್ಡಣ್ಣ ನ್ಯೂ ಯಾರ್ಕ್ ನಗರದ ಒಂದು ದಿನದ ಸಹವಾಸದಿಂದಾಗಿ, ನಾಗರಾಜ್ ಅಂಥವರ ಮಹಾನ್ ಚೇತನಗಳ ಬರಹದ ದೆಸೆಯಿಂದ "ಅಂತರಂಗ"ದ ಅನಿವಾಸಿ ಮನಸ್ಸು ಒಂದು ಕ್ಷಣದ ಮಟ್ಟಿಗಾದರೂ ದಿನನಿತ್ಯದ ಜಂಜಾಟಗಳಿಂದ ದೂರಗೊಂಡು ಕನ್ನಡ-ನಮ್ಮತನ-ನಾಡಿನ ಬಗ್ಗೆ ಯೋಚಿಸುವಂತೆ ಮಾಡಿದ್ದು ದೊಡ್ಡದೆ. ಈ ಅಗಾಧತೆಗಳ ನಡುವೆ ನಮ್ಮ ನಮ್ಮ ದೊಡ್ಡದನ್ನು ಚಿಕ್ಕದಾಗಿ ಪರಿವರ್ತಿಸಬಲ್ಲ ಇಂತಹ ಮಹಾನ್ ಅವಕಾಶಗಳು ಆಗಾಗ್ಗೆ ಬರುತ್ತಿರಲಿ.

Thursday, June 17, 2010

ಗೋಲ್ಡ್ ಫಿಶ್ - 2010

 

ನಮ್ಮ ಮನೆಯಲ್ಲಿ ಒಂದು ಚಿಕ್ಕ ಅಕ್ವೇರಿಯಂ, ಅದರಲ್ಲಿ ೨೦೦೩ ರಿಂದ ನೆಲೆ ನಿಂತಿದ್ದ ಒರ್ಯಾಂಡಾ (oranda) ಜಾತಿಯ ಗೋಲ್ಡ್ ಫಿಶ್ ಮೊನ್ನೆ ಸತ್ತು ಹೋಯಿತು.  ಒಂದು ಸಾಕು ಪ್ರಾಣಿಯ ಕುರಿತು, ಅದರ ನೆಲೆಗೆ ಹೊಂದಿಕೊಂಡ ನಮ್ಮ ನಡವಳಿಕೆಗಳ ಕುರಿತು ಈ ಲೇಖನ.

 

Gold fish 2010

***

ಮಕ್ಕಳಿದ್ದವರ ಮನೆಯಲ್ಲಿ ಈ ಪ್ರಶ್ನೆ ಬಂದೇ ಬರುತ್ತೆ - ನಮ್ಮ ಮನೆಯಲ್ಲೂ ಬೇರೆ ಬೇರೆ ಸಾಕು ಪ್ರಾಣಿಗಳೇಕಿಲ್ಲ? ಎಂಬುದಾಗಿ.  ಈ ನಿಟ್ಟಿನಲ್ಲಿ ಹೆಚ್ಚಿನವರು ಒಂದು ಬೆಕ್ಕನ್ನೋ ಅಥವಾ ನಾಯಿಯನ್ನೋ ಸಾಕುವುದು ಸಾಮಾನ್ಯ, ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಮೊಲವನ್ನೋ, ಗಿಣಿಯನ್ನೋ ಇಟ್ಟುಕೊಂಡಾರು.  ಕೆಲವರು ಎಲ್ಲರನ್ನು ಮೀರಿ exotic ಪ್ರಾಣಿಗಳಾದ ಚೇಳು, ಹಾವು ಮೊದಲಾದ ಸರೀಸೃಪಗಳನ್ನು ಪೋಷಿಸಿಯಾರು.  ಆದರೆ ಇವೆಲ್ಲಕ್ಕಿಂತ ಸುಲಭವಾದ ವಿಧಾನವೊಂದಿದೆ, ಅದು ಮನೆಯಲ್ಲೇ ಅವರವರ ಸಾಮರ್ಥ್ಯ ಅನುಕೂಲಗಳಿಗೆ ತಕ್ಕಂಥ ಫಿಶ್ ಟ್ಯಾಂಕ್ ಒಂದನ್ನು ಇಟ್ಟು ಅದನ್ನು ಜೋಪಾನವಾಗಿ ನೋಡಿಕೊಳ್ಳುವುದು.

ನಮ್ಮ ಮನೆಯಲ್ಲಿ ಸುಮಾರು ೨೦೦೧ ರಿಂದ ಹೀಗೇ ನೋಡಿಕೊಂಡು ಬಂದ ಐದು ಗ್ಯಾಲನ್ ನೀರು ಹಿಡಿಯುವ ಮೀನಿನ ಒಂದು ಚಿಕ್ಕ ಟ್ಯಾಂಕ್ ಇದೆ, ಅದರಲ್ಲಿ ಗೋಲ್ಡ್ ಫಿಶ್‌ಗಳನ್ನು ಬಿಟ್ಟು ಮತ್ತೇನನ್ನೂ ನಾವು ಸಾಕಿ ನಮಗೆ ಗೊತ್ತಿಲ್ಲ.  ನಮ್ಮ ಪ್ರಯೋಗದ ಮೊದ ಮೊದಲು ಅನೇಕ ಮೀನುಗಳು ಸಾಯುತ್ತಿದ್ದವು: ಪಿ.ಎಚ್. ಅಮೋನಿಯಾ, ಕ್ಲೋರೀನ್, ನೈಟ್ರೇಟ್, ನೈಟ್ರೈಟ್ ಮೊದಲಾದ ಕೆಮಿಕಲ್ ವಸ್ತುಗಳಲ್ಲಿ ಯಾವುದೇ ಏರುಪೇರಾದರೂ ಮೀನುಗಳು ಗೊಟಕ್.  ಹೀಗೆ ಜೋಡಿಸಿಟ್ಟ ಫಿಶ್ ಟ್ಯಾಂಕ್‌ಗೆ ನಾವು ಹೊಂದಿಕೊಳ್ಳಲು ನಮಗೆ ಸುಮಾರು ಒಂದು ವರ್ಷವೇ ಬೇಕಾಯಿತು, ಜೊತೆಗೆ ಅನೇಕ ಮೀನುಗಳನ್ನು ನಮ್ಮ ಪ್ರಯೋಗಗಳಿಗೆ ಬಲಿಕೊಟ್ಟದ್ದೂ ಆಯಿತು.  ಹೀಗೆ ನಡೆದು ಬಂದ ಫಿಶ್ ಮ್ಯಾನೇಜ್‌ಮೆಂಟ್ ಅನುಭವದ ಕೊನೆಗೆ ಬಂದು ಮುಟ್ಟಿದಾಗ ಉಳಿದವು ಎರಡು ಗೋಲ್ಡ್ ಫಿಶ್‌ಗಳು - ಅದರಲ್ಲಿ ಒಂದು ಬಿಳಿ ಬಣ್ಣದ್ದು, ಮತ್ತೊಂದು ಕಿತ್ತಳೆ ಬಣ್ಣದ್ದು.  ಎರಡೂ ಕೂಡ ಚೆನ್ನಾಗಿ ರೆಕ್ಕೆಗಳನ್ನು ಉದ್ದುದ್ದವಾಗಿ ಬೆಳೆಸಿಕೊಂಡು ಟ್ಯಾಂಕ್‌ನ ಒಂದು ಕೊನೆಯಿಂದ ಮತ್ತೊಂದು ಕೊನೆಗೆ ಈಜಾಡುವುದನ್ನು ನೋಡುವುದೇ ಎಂಥವರಿಗೂ ಮುದಕೊಡುತ್ತಿತ್ತು.

ನಮ್ಮ ಚಲನವಲನಗಳು, ವೆಕೇಷನ್ನುಗಳು ಹಾಗೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನಾವು ಬದಲಾವಣೆ ಮಾಡುವುದು ಇವೆಲ್ಲ ನಮ್ಮ ಮನೆಯ ಫಿಶ್ ಟ್ಯಾಂಕ್‌ನ ನಿವಾಸಿಗಳ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತಿತ್ತು.  ನಾವು ಮೂರು ವಾರ ಭಾರತಕ್ಕೆ ವೆಕೇಷನ್ನ್ ಹೊರಟರೆ ನಮ್ಮ ಬದಲಿಗೆ ಬೇರೆ ಯಾರಾದರೂ ನಮ್ಮ ಮನೆಗೆ ಬಂದು ಈ ಮೀನುಗಳಿಗೆ ಊಟ ಹಾಕುವ ವ್ಯವಸ್ಥೆಯನ್ನು ಮಾಡಿ ಹೋಗುತ್ತಿದ್ದೆವು, ಅಥವಾ ಈ ಮೀನಿನ ಟ್ಯಾಂಕ್ ಅನ್ನೇ ಅವರ ಮನೆಯಲ್ಲಿಟ್ಟು ನಾವು ಬರುವ ತನಕ ಜೋಪಾನವಾಗಿ ಕಾಯ್ದುಕೊಂಡಿರುವಂತೆ ಮಾಡಿದ್ದೂ ಇದೆ.  ಒಟ್ಟಿನಲ್ಲಿ ಒಂದು ಕಡೆ ಸರಿಯಾಗಿ ನೆಲೆ ನಿಂತ ಇಕೋ ಸಿಸ್ಟಂ ಅನ್ನು ಮತ್ತೊಂದು ಕಡೆ ಪ್ರತಿಷ್ಠಾಪಿಸುವುದು ಅಷ್ಟು ಸುಲಭದ ಮಾತಂತೂ ಅಲ್ಲ.  ಈ ನಿಟ್ಟಿನಲ್ಲಿ ನನ್ನ ಸಹೋದ್ಯೋಗಿಗಳಿಗೆ ಹಾಗೂ ಸ್ನೇಹಿತರಿಗೆ ಸಾಕಷ್ಟು ತೊಂದರೆಯನ್ನು ಕೊಟ್ಟಿದ್ದಿದೆ.

ನಮ್ಮ ಮನೆಯಲ್ಲಿ ಇದ್ದ ಎರಡು ಮೀನುಗಳನ್ನು ಅವುಗಳ ಟ್ಯಾಂಕ್ ಹಾಗೂ ಪರಿಕರಗಳ ಸಮೇತ ವರ್ಜೀನಿಯಾದಿಂದ ನ್ಯೂ ಜೆರ್ಸಿಗೆ ೨೫೦ ಮೈಲು ದೂರ ತಂದು ನಮ್ಮ ಮನೆಯ ಸಾಮಾನುಗಳ ಜೊತೆಗೆ ಅವುಗಳನ್ನು ಜೋಡಿಸುವಾಗ ಆದ ಕಷ್ಟ ಅಷ್ಟಿಷ್ಟಲ್ಲ.  ಹೀಗೆ ಮಾಡಿ ಅನೇಕ ತಿಂಗಳುಗಳ ತರುವಾಯ ಬಿಳಿಯ ಮೀನು ಯಾವುದೋ ಖಾಯಿಲೆಗೆ ಬಲಿಯಾಗಿ ಸತ್ತು ಹೋದ ಮೇಲೆ ಉಳಿದದ್ದು ಕಿತ್ತಳೆ ಬಣ್ಣದ ಗೋಲ್ಡ್ ಫಿಶ್ ಒಂದೇ.  ಎರಡು ಮೂರು ಮನೆಗಳನ್ನು ತಿರುಗಿ ಬಂದ ಮೇಲೆ ಅದು ಟ್ಯಾಂಕ್‌ನಲ್ಲಿ ತಾನೊಂದೇ ಪ್ರಾಬಲ್ಯವನ್ನು ಮೆರೆಯುತ್ತಾ ತಂದಾಗ ಎರಡು ಅಂಗುಲ ಉದ್ದ ಇದ್ದದ್ದು ದಿನೇ ದಿನೇ ಬೆಳೆದು ಸುಮಾರು ಆರು ಅಂಗುಲ ಉದ್ದಕ್ಕೂ ಹೆಚ್ಚು ದೊಡ್ಡದಾಯಿತು.  ಕಳೆದ ವರ್ಷ ಡಿಸೆಂಬರ್ ಸಮಯದಲ್ಲಿ ಸ್ನೇಹಿತ ಗಾರ್‌ಫೀಲ್ಡ್ ಮನೆಯಲ್ಲಿ ನಾವು ವೇಕೇಷನ್ನಿಗೆ ಹೋದಾಗ ಮೊಕ್ಕಾಂ ಹೂಡಿ ಜನವರಿಯಿಂದ ಮೇ ವರೆಗೂ ಚೆನ್ನಾಗಿಯೇ ಇತ್ತು.

ಮೇ ತಿಂಗಳ ಮೊದಲ ವಾರದಲ್ಲಿ ಅದರ ಲವಲವಿಕೆ ಕುಂಠಿತಗೊಂಡಿತು, ಅದು ಆಹಾರ ಸೇವಿಸುವುದನ್ನು ಸಂಪೂರ್ಣ ಬಿಟ್ಟು ಟ್ಯಾಂಕಿನ ಬುಡದಲ್ಲಿ ಎಲ್ಲೆಂದರಲ್ಲಿ ಅಡ್ಡಾ-ದಿಡ್ಡಿ ಬಿದ್ದುಕೊಂಡಿರುತ್ತಿತ್ತು.  ಅದು ಇನ್ನೇನು ಸರಿ ಹೋದೀತು ಎಂದುಕೊಂಡವನಿಗೆ ಮುಪ್ಪಿನಿಂದ ಅದು ದಿನೇದಿನೇ ಕುಗ್ಗತೊಡಗಿದ್ದು ಗಮನಕ್ಕೆ ಬಂದು ಈ ಮೀನಿನ ಬದುಕಿಗೆ ಯಾವ ರೀತಿಯ ಅಂತ್ಯವನ್ನು ಹಾಡಬೇಕು ಎಂದು ಗೊತ್ತಾಗದೆ ಒಂದೆರೆಡು ಬಾರಿ ಟ್ಯಾಂಕಿನ ನೀರನ್ನು ಖಾಲಿ ಮಾಡಿ ಎಲ್ಲವನ್ನು ಸ್ವಚ್ಛಗೊಳಿಸಿಟ್ಟು ಹಾಗಾದರೂ ಮೀನಿನ ಲವಲವಿಕೆ ಮರುಕಳಿಸಲಿ ಎಂದುಕೊಂಡರೆ ಹಾಗಾಗಲಿಲ್ಲ.

ನನ್ನ ಸ್ನೇಹಿತರು ಹಾಗೂ ಹಿರಿಯರು ಮಾರ್ಗದರ್ಶನ ಮಾಡಿದ ಹಿನ್ನೆಲೆಯಲ್ಲಿ ಅದನ್ನು ದೊಡ್ಡ ಟ್ಯಾಂಕಿನಿಂದ ಸಣ್ಣದೊಂದು ಗಾಜಿನ ಜಾಡಿಗೆ ಬದಲಾಯಿಸಿ ಅದರ ಬದಲಿಗೆ ಬೇರೆ ಹೊಸ ಮೀನುಗಳನ್ನು ತಂದು ಹಾಕುವುದೆಂದು ಯೋಚಿಸಿ ಹಾಗೆ ಮಾಡಲನುವಾದೆ.  ಅಂಗಡಿಗೆ ಹೋಗಿ ಉತ್ಸಾಹದಿಂದ ಪುಟಿಯುತ್ತಿದ್ದ ಅವೇ ಒರ್ಯಾಂಡಾ (oranda) ಜಾತಿಯ ಥರಾವರಿ ಬಣ್ಣಗಳ ನಾಲ್ಕು ಮೀನುಗಳನ್ನು ತಂದೆ.  ಒಂದು ಕಡೆ ಹೊಸ ಮೀನುಗಳನ್ನು ಅವುಗಳನ್ನು ತಂದ ಪ್ಲಾಸ್ಟಿಕ್ ಕವರ್ ಸಮೇತ ಟ್ಯಾಂಕಿನ ನೀರಿನ ತಾಪಮಾನಕ್ಕೆ ಹೊಂದುಕೊಳ್ಳಲು ಬಿಟ್ಟು, ಮತ್ತೊಂದು ಸಣ್ಣ ಗಾಜಿನ ಜಾಡಿಯನ್ನು ಅನುಗೊಳಿಸಿದೆ.  ಅದರಲ್ಲಿ ಹಳೆಯ ಮೀನನ್ನು ಹುಷಾರಾಗಿ ಇಟ್ಟೆ, ನಾನು ತೆಗೆದು ಹಾಕುವಾಗ ಒಂದಿಷ್ಟು ಕೊಸರಾಡಿದ ಮೀನು, ಹೊಸ ಜಾಡಿಯ ತಳದಲ್ಲಿ ನಿಧಾನವಾಗಿ ಉಸಿರಾಡುತ್ತಾ ಬಿದ್ದುಕೊಂಡಿದ್ದು ನೋಡಿ ಕರುಳು ಕಿವುಚಿದಂತಾಯಿತು.  ಅದನ್ನು ಅಲ್ಲಿಗೆ ಬಿಟ್ಟು ಹೊಸ ಮೀನುಗಳನ್ನು ದೊಡ್ಡ ಟ್ಯಾಂಕ್‌ನಲ್ಲಿ ಬಿಟ್ಟಾಗ ಅವುಗಳಿಗೆ ಒಂದು ಕಡೆ ಸಂಭ್ರಮವೂ ಮತ್ತೊಂದು ಕಡೆ ಹೆದರಿಕೆಯೂ ಸೇರಿಕೊಂಡು ಟ್ಯಾಂಕಿನ ಮೂಲೆ ಮೂಲೆಗಳಲ್ಲಿ ದಿಕ್ಕಾಪಾಲಾಗಿ ಓಡತೊಡಗಿದವು.  ಸ್ವಲ್ಪ ಹೊತ್ತಿನ ತರುವಾಯ ಅವುಗಳು ತಮ್ಮ ಹೊಸ ವಾತಾವರಣಕ್ಕೆ ಹೊಂದಿಕೊಂಡ ಎಲ್ಲ ಸೂಚನೆಗಳೂ ಕಂಡು ಬಂದು, ಈ ಟ್ಯಾಂಕಿನಲ್ಲಿ ವರ್ಷಾನುಗಟ್ಟಲೆ ಮನೆ ಮಾಡಿದ್ದ ನೆಲೆ ನಿಂತಿದ್ದ ಆ ಮಹಾಶಯನ ಗುರುತು ಪರಿಚಯವೂ ವಾಸನೆಯೂ ಅವುಗಳಿಗೆ ಒಂದಿಷ್ಟು ಇರದಿದ್ದ ಮುಗ್ಧತೆಯಲ್ಲಿ ಜೀವಿಸತೊಡಗಿದವು.

ಇತ್ತ ಸಣ್ಣ ಗಾಜಿನ ಜಾಡಿಯಲ್ಲಿನ ಹಳೆಯ ಮೀನಿನ ಬದುಕಿನಲ್ಲಿ ಹೆಚ್ಚೇನೂ ಬದಲಾವಣೆಯಾಗದೇ ಅದೇ ದಿನ ರಾತ್ರಿ ಎಷ್ಟೋ ಹೊತ್ತಿಗೆ ಅದರ ಪ್ರಾಣಪಕ್ಷಿ ಹಾರಿ ಹೋಗಿದ್ದು ನಮಗೆಲ್ಲ ನಿಚ್ಛಳವಾಯಿತು.  ನಮಗೆಲ್ಲ ಇಷ್ಟೊಂದು ವರ್ಷ ಫ್ಯಾಮಿಲಿ ಮೆಂಬರಿನಂತಿದ್ದ ಮೀನಿನ ಅಂತ್ಯಕ್ರಿಯೆಗೋಸ್ಕರ ನಾನು ಶವೆಲ್ಲೊಂದನ್ನು ತೆಗೆದುಕೊಂಡು ರಾತ್ರಿ ನಮ್ಮ ಹಿತ್ತಲಿಗೆ ಹೋಗಿ ಸಣ್ಣ ತಗ್ಗನ್ನು ತೆಗೆದು ಅಲ್ಲಲ್ಲಿ ಮಿಡತೆಗಳು ಅಳುತ್ತವೆಯೇನೋ ಎನ್ನುವ ಕಿರುಗುಟ್ಟುವಿಕೆಯ ಹಿನ್ನೆಲೆಯ ನಡುವಿನ ಮೌನದ ಸಹಾಯದಿಂದ ಯಾವೊಂದು ಮಾತನಾಡದೆ ಎರಡು ಮುಷ್ಠಿ ಮಣ್ಣನ್ನು ಕೈಯಿಂದ ಹಾಕಿ ಉಳಿದದ್ದನ್ನು ಶವೆಲ್ಲಿನಿಂದಲೇ ಮುಚ್ಚಿ ಸಂಸ್ಕಾರ ಮಾಡಿದೆ.

ಮರುದಿನ ಇಂಚರ (ನಮ್ಮ ನಾಲ್ಕು ವರ್ಷದ ಮಗಳು) ಅನೇಕ ಬಾರಿ ಹಳೇ ಮೀನು ಎಲ್ಲಿ ಹೋಯಿತು? ಅದು ಏಕೆ ಸತ್ತಿತು? ಸತ್ತಾಗ ಏನಾಗುತ್ತದೆ? ಯಾಕೆ ಹಿತ್ತಲಿನಲ್ಲಿ ಮಣ್ಣು ಮಾಡಿದೆ? ನನ್ನನ್ನೇಕೆ ಕರೆಯಲಿಲ್ಲ? ಎಂದು ಕೇಳಿದ ಅನೇಕಾನೇಕ ಪ್ರಶ್ನೆಗಳಿಗೆ ನನ್ನ ಶಕ್ತಿ ಮೀರಿ ಸರಳವಾಗಿ ಉತ್ತರಿಸಿದ್ದಾಯಿತು.  ನಾವು ಹಳೇ ಮೀನಿಗೆ ಯಾವುದೇ ಹೆಸರನ್ನಿಟ್ಟಿರಲಿಲ್ಲ - Elmo’s world ನಲ್ಲಿ ಬರುವ Dorothyಯ ದೆಸೆಯಿಂದ ಇಂಚರ ಅದನ್ನು ನಮ್ಮ ಮನೆಯ ಡೊರೋತಿ ಅಂದುಕೊಂಡಿದ್ದನ್ನು ಬಿಟ್ಟರೆ, ಅದೇ ಛಾಳಿಯನ್ನು ಮುಂದುವರೆಸಿ ನಾವು ಈ ಹೊಸ ಮೀನುಗಳಿಗೂ ಹೆಸರನ್ನೂ ಇಟ್ಟಿಲ್ಲ.

ಪ್ರತಿ ದಿನ ಆಫೀಸಿನಿಂದ ಬಂದಾಗ ಶೂ ತೆಗೆದು ಅದರ ಸ್ಥಳದಲ್ಲಿಟ್ಟು ನಂತರ ಮಾಡುವ ಕೆಲಸವೇ ಈ ಮೀನಿನ ಟ್ಯಾಂಕಿನ ಲೈಟ್ ಹಾಕಿ ಅವುಗಳಿಗೆ ಪ್ಲ್ಹೇಕ್ ಫುಡ್ಡನ್ನು ಹಾಕುವುದು, ಈ ಹೊಸ ಮೀನುಗಳ ಸಹಾಯದಿಂದ ವರ್ಷಾನುಗಟ್ಟಲೆ ನಡೆದ ಬಂದ ಕಾಯಕ ಇಂದಿಗೂ ಹಾಗೇ ಮುಂದುವರೆದಿದೆ.

***

ಸಾವು-ನೋವಿನ ವಿಚಾರಕ್ಕೆ ಬಂದಾಗ ಅಮೇರಿಕದ ನಮ್ಮ ಅನುಭವ ವ್ಯಾಪ್ತಿ ಕಡಿಮೆಯೇ.  ಬೇರೆ ಯಾರೂ ರಕ್ತ ಸಂಬಂಧಿಗಳಿಲ್ಲದ ಈ ದೇಶದಲ್ಲಿ ಸಾವು ಎನ್ನುವ ಮಹತ್ವಪೂರ್ಣವಾದ ಬದುಕಿನ ಮಜಲಿನ ಅನುಭವ ನಮಗೆ ಭಾರತದಲ್ಲಿ ಇದ್ಧಾಗ ಆಗುವಂತೆ ಇಲ್ಲಿ ಆಗುವುದಿಲ್ಲ.  ನಮ್ಮ ನೆಂಟರು-ಇಷ್ಟರು-ಬಂಧು-ಬಳಗ ಇವರೆಲ್ಲರ ಮದುವೆ ಮುಂಜಿಗಳಿಗೆ, ಕಷ್ಟ-ನಷ್ಟಗಳಿಗೆ ನಾವು ಎಂದಿನ ಸಂವೇದನೆಯನ್ನು ತೋರೋದಿಲ್ಲ.  ಸಾವನ್ನು ಬೇಕು ಎಂದು ಆರಿಸಿಕೊಳ್ಳದಿದ್ದರೂ ಹುಟ್ಟು ತರುವಷ್ಟೇ ಮುಖ್ಯವಾದ ಬದಲಾವಣೆಯನ್ನು ಸಾವೂ ತರಬಲ್ಲದು.  ಈ ನಿಟ್ಟಿನಲ್ಲಿ ಸಾಕು ಪ್ರಾಣಿ ಮೀನಿನ ಸಾವು ಅದರ ಜೊತೆಗಿದ್ದ ನಮ್ಮ ವರ್ಷಾನುಗಟ್ಟಲೆಯ ಬಂಧನವನ್ನು ಕಳಚಿ ಹಾಕುವುದರ ಮೂಲಕ ದೂರದಲ್ಲಿರುವ ನಮಗೆ ಹತ್ತಿರದ ಬಂಧುವನ್ನು ಕಳೆದುಕೊಂಡ ನೆನಪನ್ನು ಎತ್ತಿ ಹಿಡಿಯಿತು.  ಸಾವಿರದ ಮನೆಯಿಂದ ಸಾಸಿವೆ ತರುವ ಪ್ರಯತ್ನವನ್ನು ಇನ್ನೂ ಯಾರಾದರೂ ಮಾಡುತ್ತಿದ್ದರೆ ಆ ದೃಷ್ಟಿಯಲ್ಲಿ ನಾವು ಹೊರಗುಳಿದಿರುವುದು ಸ್ಪಷ್ಟವಾಯಿತು.  ನಮ್ಮಂಥ ನ್ಯೂಕ್ಲಿಯರ್ ಕುಟುಂಬಗಳಿಗೆ ಈ ಸಣ್ಣ ಅಗಲಿಕೆ ಬದುಕು ಒಡ್ಡುವ ಅನೇಕ ಬದಲಾವಣೆಗಳ ನೆನಪು ಮಾಡುವಲ್ಲಿ ಯಶಸ್ವಿಯಾಯಿತು.  ಜೊತೆಯಲ್ಲಿ ನಮ್ಮ ಸಂಬಂಧಿಗಳ, ಬಂಧು-ಮಿತ್ರರ, ಒಡಹುಟ್ಟಿದವರ ನೋವು-ನಲಿವುಗಳಿಗೆ ಸಕಾಲಕ್ಕೆ ಆಗಿಬರದ ನಾವು ಊಟಕ್ಕಿಲ್ಲದ ಉಪ್ಪಿನಕಾಯಿಯಾಗಿ ಬಿಟ್ಟೆವೇನೋ ಎನ್ನಿಸಿಬಿಟ್ಟಿತು.

Monday, May 03, 2010

ಮನೆಯು ಚಿಕ್ಕದಾಗಿರಬೇಕು, ಬಾತ್ ರೂಮ್ ದೊಡ್ಡದಾಗಿರಬೇಕು...

ನಮ್ಮ ಐದು ಸಾವಿರ ವರ್ಷದ ಇತಿಹಾಸ ಮತ್ತು ಪರಂಪರೆಯಲ್ಲಿ ನಾವು ಅಡುಗೆ ಮನೆಗೆ ಕೊಟ್ಟಷ್ಟು ಪ್ರಾಶಸ್ತ್ಯವನ್ನು ಬಚ್ಚಲು ಮನೆಗೆ ಕೊಡೋದಿಲ್ಲ ಅನ್ನೋದು ನನ್ನ ಅಭಿಪ್ರಾಯ ಅಷ್ಟೇ. ನಮ್ಮ ಹಿರಿಯರ ಹಳೆ ಕಾಲದ ಮನೆಗಳನ್ನೋ ಅಥವಾ ಇತ್ತೀಚೆಗೆ ೬೦X೪೦ ಸೈಟ್‌ಗಳಲ್ಲಿ ಕಟ್ಟಿದ ಸುಂದರವಾದ ಆರ್‌ಸಿಸಿ ಮನೆಗಳನ್ನೋ ಉದಾಹರಣೆಯಾಗಿ ತೆಗೆದುಕೊಂಡರೆ ನಿಮಗೇ ಗೊತ್ತಾಗುತ್ತದೆ. ಹಳೆಯ ಕಾಲದ ಮನೆಗಳಲ್ಲಿ ಗಂಡಸರು ಮುಖಕ್ಷೌರ ಮಾಡುವುದಕ್ಕೆ ಕಿಟಕಿ ಮೇಲೆ ಸಣ್ಣ ಕನ್ನಡಿಯನ್ನಿಟ್ಟುಕೊಂಡು ಅದರ ಪಕ್ಕದಲ್ಲಿ ಬಿಂದಿಗೆ ಬಿಸಿನೀರು ಇಟ್ಟುಕೊಳ್ಳುವುದು ರೂಢಿ, ದಿನಾ ನಡೆಸೋ ನಿತ್ಯ ಕರ್ಮವಾಗಿರುವ ಮುಖ ಕ್ಷೌರಕ್ಕೆ ಯಾಕಪ್ಪಾ ಇಷ್ಟೊಂದು ಕೀಳು ಪ್ರಾಶಸ್ತ್ಯ ಅನ್ನಿಸೋದಿಲ್ಲವೇ? ಹೊಸದಾಗಿ ಕಟ್ಟಿದ ಮನೆಗಳಲ್ಲೂ ಅಷ್ಟೇ ಸಿಂಕ್ ಇದ್ದರೆ, ಅದರ ಮೇಲೆ ಒಂದು ಲೈಟ್ ಇರುತ್ತದೆ (ಹೆಚ್ಚಿನ ಪಕ್ಷ ಝೀರೋ ಕ್ಯಾಂಡಲ್ ಬಲ್ಬ್ ಹೊತ್ತಿಸಿಕೊಂಡು), ಸಿಂಕ್‌ನ ಮೇಲೆ ಸೋಪ್ ಅಥವಾ ಮತ್ತಿತರ ಸಾಮಾನುಗಳನ್ನು ಇಟ್ಟುಕೊಳ್ಳೋದಕ್ಕೆ ಜಾಗ ಇರೋದೇ ಕಡಿಮೆ.

ಮನೆಯ ವಿಚಾರದಲ್ಲಿ ಬಚ್ಚಲು/ಕಕ್ಕಸ್ಸು ಮನೆಗಳಿಗೆ ಕೊಡೋ ಪ್ರಾಶಸ್ತ್ಯ ಹಾಗಿರಲಿ, ದಿನಾ ನೂರಾರು ಜನ ಬಂದು ಹೋಗೋ ಯಾವುದೇ ಹೊಟೇಲಿಗೆ ಹೋಗಿ ನೋಡಿ ತಿನ್ನೋ ವಿಚಾರಗಳಿಗೆ ಎಷ್ಟೊಂದು ಮಹತ್ವ ಕೊಟ್ಟಿರುತ್ತಾರೆ, ತಿಂದು ಕುಡಿದದ್ದನ್ನು ವಿಸರ್ಜಿಸಲು ಮಾತ್ರ ಯಾವ ಮಹತ್ವವನ್ನೂ ಕೊಟ್ಟಿರೋ ಹಾಗೆ ಕಾಣೆ. ಯಾಕೋ ನಮ್ಮ ಜನಗಳಿಗೆ ಶುಚಿ ಅಥವಾ ಸ್ವಚ್ಛತೆ ಅನ್ನೋದು ಬಂದೇ ಇಲ್ಲವೇನೋ ಅನ್ನಿಸುತ್ತೆ. ನಮ್ಮ ಇತಿಹಾಸದ ದೃಷ್ಟಿಯಲ್ಲಿ ಸಾವಿರಾರು ವರ್ಷಗಳ ಹಿನ್ನೆಲೆಯಲ್ಲಿ ಸ್ವಚ್ಛತೆಗೆ ಆದ್ಯತೆ ಏಕೆ ಸಿಗಲಿಲ್ಲ? ಬಡತನ, ಹೆಚ್ಚಿನ ಜನಸಂಖ್ಯೆ ಕಾರಣವೋ ಅಥವಾ ನಮ್ಮಲ್ಲಿ ಮೂಲಭೂತ ಸಮಸ್ಯೆಗಳು ಇಂದಿಗೂ ಮೂಲಭೂತವಾಗಿಯೇ ಉಳಿದಿರುವುದು ಏಕೆ ಎನ್ನುವುದಕ್ಕೆ ಒಂದು ಹೆಜ್ಜೆ ನಮ್ಮ ಅಂತರಾಳವನ್ನು ಹುಡುಕಬೇಕಾಗುತ್ತದೆ.

ಅಮೇರಿಕದವರು ಕಡಿಮೆ ಜನ ಹೆಚ್ಚು ಸಂಪನ್ಮೂಲಗಳನ್ನು ಬಳಸುತ್ತಾರೆ ಎನ್ನೋದನ್ನ ಹಲವು ರೀತಿಯಲ್ಲಿ ಬಳಸಬಹುದು, ಅದನ್ನ ಒಂದು ಕಂಪ್ಲೇಟ್ ಅನ್ನಾಗಿಯೂ ನೋಡಬಹುದು ಅಥವಾ ಅದನ್ನ ಒಂದು ಮುಂದುವರೆದ ಸಂಸ್ಕೃತಿಯನ್ನಾಗಿಯಾದರೂ ಅರಿತುಕೊಳ್ಳಬಹುದು. ನಮ್ಮ ಆಫೀಸಿನ ಉದಾಹರಣೆಯನ್ನು ತೆಗೆದುಕೊಳ್ಳಿ, ನಾನು ಪವರ್‌ಪಾಯಿಂಟ್ ಸ್ಲೈಡ್‌ಗಳನ್ನು ಮಾಡಿ ಕಳಿಸಿದ್ದನ್ನ ನನ್ನ ಬಾಸ್ ಕಂಪ್ಯೂಟರ್ ಸ್ಕ್ರೀನಿನಲ್ಲಿ ನೋಡದೇ ಅದನ್ನು ಕಲರ್ ಪ್ರಿಂಟರಿನಲ್ಲಿ ಮುದ್ರಿಸಿ ಅನಂತರ ಅದರಲ್ಲಿ ತಿದ್ದು ಪಡಿಗಳನ್ನು ಮಾಡುವುದು ರೂಢಿ. ಆದರೆ ನಾನು ತಿಣುಕಿ-ತಿಣುಕಿ ಕಂಪ್ಯೂಟರ್ ಸ್ಕ್ರೀನಿನಲ್ಲಿ ಓದಿದ್ದೇ ಓದಿದ್ದು, ಆದರೆ ಮುದ್ರಿತವಾದ ಕಾಗದವನ್ನು ನಾವು ಓದುವ ದೃಷ್ಟಿಯೇ ಬೇರೆ ಹಾಗಾಗಿ ಅದರಲ್ಲಿರುವ ತಪ್ಪು-ಸರಿಗಳನ್ನು ನೋಡಿದಷ್ಟು ಸುಲಭವಾಗಿ ಕಂಪ್ಯೂಟರ್ ಸ್ಕ್ರೀನಿನಲ್ಲಿ ನೋಡಲಾಗದು ಎಂಬುದು ನನ್ನ ಅನುಭವ. ಸರಿ, ಒಂದು ಪೇಜ್ ಸ್ಲೈಡ್ ಹುಟ್ಟಬೇಕಾದರೆ ಒಂದು ನಾಲ್ಕು ಡ್ರಾಪ್ಟ್ ಪೇಜ್‌ಗಳನ್ನು ಮುದ್ರಣ ಮಾಡೋಣ, ಅದರಲ್ಲೇನಂತೆ? ರಿಸೋರ್ಸುಗಳು ಇವೆ, ಸಂಪನ್ಮೂಲಗಳ ಬಳಕೆ ಹಾಗೂ ಅದರ ವೆಚ್ಚಕ್ಕೆ ನಾವೇನೂ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ, ಪೇಪರ್ರೂ ಚೀಪು, ಪ್ರಿಂಟರ್ರೂ ಚೀಪು...ಹೀಗಾದ ಮೇಲೆ ಒಂದು ಪಬ್ಲಿಕ್ ಕಂಪನಿಯ ಆಯ-ವ್ಯಯಗಳ ಕಥೆ ಹಾಗೂ ಅವುಗಳ ದೊಡ್ಡ ಲಿಸ್ಟ್ ಇದ್ದೇ ಇರುತ್ತೆ, ಹತ್ತರ ಜೊತೆ ಹನ್ನೊಂದು ಅಂತ ಇವೂ ಸೇರಿಕೊಂಡು ಒಟ್ಟಿನಲ್ಲಿ ಸಮಯಕ್ಕೆ ಸರಿಯಾಗಿ ಒಳ್ಳೆಯ ಕ್ವಾಲಿಟಿ ಸ್ಲೈಡುಗಳನ್ನು ತಯಾರು ಮಾಡಿದರೆ ಆಯಿತಪ್ಪಾ ಅಷ್ಟೇ, ಅನ್ನಿಸೋದಿಲ್ಲವೇ?

ನಮ್ಮ ದೇಶದಲ್ಲಿ ಮನೆಗೆ ಒಂದೋ ಎರಡೋ ಪ್ಲಗ್ ಪಾಯಿಂಟುಗಳಿರುತ್ತವೆ, ಇಂದಿಗೂ ಹಳೆಯ ಕಾಲದಲ್ಲಿನ ಮನೆಗಳಲ್ಲಿ ಎಲೆಕ್ಟ್ರಿಕ್ ಇಸ್ತ್ರಿ ಪೆಟ್ಟಿಗೆಯನ್ನ ಲಿವಿಂಗ್ ರೂಮಿನಲ್ಲಿಟ್ಟು ಅಲ್ಲೇ ಬಟ್ಟೇ ಇಸ್ತ್ರಿ ಮಾಡಿಕೊಳ್ಳುವುದು ರೂಢಿ. ನನಗೆ ಗೊತ್ತಿರೋ ಹಾಗೆ ಮನೆಯಲ್ಲಿರುವ ಪ್ಲಗ್ ಪ್ಲಾಯಿಂಟುಗಳ ಲೆಕ್ಕದಲ್ಲಿ ಪ್ರತಿ ತಿಂಗಳಿಗೆ ಇಂತಿಷ್ಟು ರಿಕರ್ರಿಂಗ್ ಚಾರ್ಜಸ್ ಕೊಡಬೇಕಾಗುತ್ತದೆ. ಪ್ರತಿ ತಿಂಗಳ ಎಕ್ಸ್‌ಪೆನ್ಸ್ ಲೆಕ್ಕದಲ್ಲಿ ಯಾರಿಗೆ ತಾನೆ ಹತ್ತೋ ಇಪ್ಪತ್ತು ರೂಪಾಯಿ ಕೊಡಲು ಮನಸ್ಸಾದೀತೂ ಹೇಳಿ? ಆದರೆ ಅಮೇರಿಕದ ಮನೆಗಳಲ್ಲಿ ಪ್ರತಿ ಆರು ಅಡಿಗಳಿಗೊಂದರಂತೆ ಎಲ್ಲಾ ರೂಮುಗಳಲ್ಲೂ ಎಲೆಕ್ಟ್ರಿಕ್ ಪ್ಲಗ್ ಪಾಯಿಂಟ್‌ಗಳನ್ನು ಮನೆ ಕಟ್ಟುವಾಗಲೇ ಅಳವಡಿಸಿರುವುದು ನಮ್ಮಂಥ ಅನಿವಾಸಿಗಳ ಕಣ್ಣಿಗೆ ಮೊದಲ ದಿನವೇ ಗೊತ್ತಾಗಿರುತ್ತದೆ. ವ್ಯಾಕ್ಕ್ಯೂಮ್ ಹಾಕುವುದಿರಲಿ, ಇಸ್ತ್ರಿ ಹಾಕುವುದಿರಲಿ ಯಾವ ರೂಮಿನಲ್ಲಿ ಬೇಕಾದರೂ ಹಾಕುವ ಹಾಗಿರುತ್ತದೆ. ನಿಮಗೆ ಅಗತ್ಯಕ್ಕೆ ತಕ್ಕಂತೆ ಸೌಕರ್ಯ ಬೇಕೋ ಅದಕ್ಕೆ ತಕ್ಕಂತೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ, ಪ್ರತಿಯೊಂದನ್ನೂ "ಕಡಿಮೆ ದರ" ಎನ್ನುವ ಮಾನದಂಡ ಒಂದರಲ್ಲಿ ಮಾತ್ರ ನೋಡಿದಾಗ ಅಲ್ಲಿ ಕ್ವಾಲಿಟಿಯೋ ಮತ್ತೊಂದೋ ಬಲಿಪಶುವಾಗುತ್ತದೆ. ಇದೇ ಸಮೀಕರಣವನ್ನು ಹತ್ತು ಡಾಲರ್ ಉಳಿಸುವ ವಿಚಾರಕ್ಕೆ ಬಂದಾಗ ನಾವೆಷ್ಟು ಸಮಯ (==ಹಣ) ವನ್ನು ವ್ಯಯಿಸಬಲ್ಲೆವು ಎಂಬುದಕ್ಕೂ ಅಳವಡಿಸಬಹುದು. ನಿಮ್ಮ ಮನೆಯ ಪಕ್ಕದ ಬೀದಿಯ ಅಂಗಡಿಯೊಂದರಲ್ಲಿ ಒಂದು ವಸ್ತು ಇಪ್ಪತ್ತೈದು ಡಾಲರಿಗೆ ಸಿಗುವ ಹಾಗಿರುವಾಗ ಅದೇ ವಸ್ತು ನಿಮ್ಮ ಮನೆಯಿಂದ ಅರ್ಧ ಘಂಟೆ ದೂರದ ಅಂಗಡಿಯೊಂದರಲ್ಲಿ ಹದಿನೈದು ಡಾಲರಿಗೆ ಸಿಗುವ ಹಾಗಿದ್ದರೆ ನೀವು ಅಲ್ಲಿಗೆ ಹೋಗಿ ಬಂದು ಮಾಡುವ ಸಲುವಾಗಿ ಒಂದು ಘಂಟೆಯನ್ನು ವ್ಯಯಿಸಿ ಹತ್ತು ಡಾಲರ್ರ್ ಉಳಿಸುವ ಶ್ರಮವನ್ನು ಪಡುತ್ತೀರೊ? ಅಥವಾ ನಿಮ್ಮ ಮನೆಯ ಪಕ್ಕದ ಬೀದಿಯಲ್ಲೇ ನಿಮಗೆ ಅಗತ್ಯವಿರುವ ಆ ವಸ್ತುವನ್ನು ನಿಮಗೆ ಬೇಕಾದಾಗ ಕೊಳ್ಳುತ್ತೀರೋ?

ಇನ್ನು ಬಾತ್ ರೂಮ್ ವಿಚಾರಕ್ಕೆ ಹಿಂತಿರುಗೋಣ. ನಮ್ಮ ಸಂಸ್ಕೃತಿಯಲ್ಲಿ ಅದನ್ನು "ಬಚ್ಚಲು ಮನೆ" ಎಂದು ಕರೆದು ಮನೆಯ ಪಟ್ಟವನ್ನು ಕೊಟ್ಟರೋ ವಿನಾ ಆ ಸ್ಥಳವನ್ನು ಯಾವಾಗಲೂ ಗಾಳಿ ಬೆಳಕು ಬಾರದ ರೀತಿ, ಕತ್ತಲ ಗವಿಯಾಗಿ, ತೆಗೆದ ಹಾಗೂ ಸ್ನಾನದ ನಂತರ ಉಡುವ ಬಟ್ಟೆಗಳನ್ನು ಇಡಲೂ ಸಹ ಅಗತ್ಯವಾದ ಸೌಕರ್ಯಗಳಿಲ್ಲದೆ ಕಟ್ಟಿಬಿಟ್ಟರು. ಬಾತ್ ರೂಮ್‌ಗೆ ಈ ಸ್ಥಿತಿಯಾದರೆ ಇನ್ನು ಕಕ್ಕಸು ಕೋಣೆ/ಮನೆಯ ಪರಿಸ್ಥಿತಿಯಂತೂ ಕೇಳಲೇ ಬೇಡಿ. ನಮಗೆ ತಿಂಡಿ-ಊಟದಷ್ಟೇ ಮುಖ್ಯವಾದ ಸ್ನಾನ-ಶೌಚಗಳಿಗೆ ಯಾಕಿಷ್ಟು ಕಡಿಮೆ ಬೆಂಬಲ? ನಮ್ಮ ಬೆಳೆದ ಪರಂಪರೆಗೆ ಯಾಕೆ ಈ ರೂಮುಗಳನ್ನು ತ್ಯಾಜ್ಯವಸ್ತುವನ್ನು ನೋಡುವ ರೀತಿಯ ಮನಸ್ಥಿತಿ ಬಂದೊದಗಿದೆ ಎಂದು ಕೊರಗುತ್ತೇನೆ. ನನ್ನ ಪ್ರಕಾರ ಬಡವರಿರಲಿ ಶ್ರೀಮಂತರಿರಲಿ ಅವರವರ ಶ್ಯಕ್ಯಾನುಸಾರ ಲಿವಿಂಗ್ ರೂಮ್, ಬೆಡ್ ರೂಮ್, ಅಡುಗೆ ಮನೆಗೆ ನೀಡಿದ ಪ್ರಾಶಸ್ತ್ಯವನ್ನೇ ಬಚ್ಚಲು-ಕಕ್ಕಸು ಮನೆಗಳಿಗೂ ಕೊಡಬಹುದುಲ್ಲ? ನನಗಂತೂ ಕನ್ನಡಿಯಿಲ್ಲದ ಬಾತ್‌ರೂಮ್‌ಗಳಲ್ಲಿ ಮುಖ ಕ್ಷೌರ ಮಾಡುವ ಸಾಹಸಅ ಅರಿವಿದೆ, ಸರಿಯಾದ ಬೆಳಕಿಲ್ಲದ ಗೂಡು ದೀಪದಡಿಯಲ್ಲಿನ ಬಚ್ಚಲು ದಿಂಡೆಯ ಮೇಲೆ ಒಣ ಟವಲನ್ನಿಟ್ಟು ನಾನು ಸ್ನಾನ ಮಾಡಿದ ನೀರು ಅದರ ಮೇಲೆ ಬಿದ್ದು ನನ್ನ ಜೊತೆ ಅದೂ ನೆನೆದ ಅನುಭವವಿದೆ, ಬಚ್ಚಲು ಮನೆಯ ಮೇಲೆ ನೋಡಿದರೆ ಜೇಡರ ಬಲೆಗಳು ಕಟ್ಟಿದ ಮೂಲೆಗಳು ಕಂಡಿವೆ, ಯಾವತ್ತೂ ಧೂಳು ಹೊಡೆಯ ಮಾಳಿಗೆಗಳ ಬೇಸತ್ತ ಮುಖಗಳು ಎಂದೂ ಮರೆಯದ ಹಾಗಿವೆ.

ಯಾಕೆ ಹೀಗೆ? ಇವೆಲ್ಲವನ್ನೂ ನಾವು ಬದಲಾಯಿಸ ಬಲ್ಲೆವು, ಬದಲಾಯಿಸಬೇಕು. ನಮ್ಮ ಅಡುಗೆ ಮನೆಯಷ್ಟೇ ಶುಚಿಯಾಗಿ ಬಚ್ಚಲು ಮನೆಯೂ ಇರಬೇಕು, ಅಂಗಳದಿಂದ ಹಿತ್ತಿಲವರೆಗೆ ಮನೆಯ ಪ್ರತಿಯೊಂದು ಅಂಗವೂ ಅದರದ್ದೇ ಆದ ಪ್ರಾಮುಖ್ಯತೆಯನ್ನು ಹೊಂದಿರುವಾಗ ಅವುಗಳಿಗೆ ಸರಿಯಾದ ಮಹತ್ವವನ್ನು ಕೊಡಲೇ ಬೇಕು. ಎಲ್ಲಕ್ಕಿಂತ ಮುಖ್ಯವಾಗಿ ’ಬಾತ್ ರೂಮ್‌ಗೆ ಅಷ್ಟೊಂದು ಜಾಗ್ ಯಾಕೆ ವೇಸ್ಟ್ ಮಾಡ್ತೀರಾ...’ ಎಂದು ಹಿನ್ನೆಡೆ ತೋರುವ ಮನೆ ಕಟ್ಟುವ ಇಂಜಿನಿಯರುಗಳನ್ನು ಝಾಡಿಸಬೇಕು!

Thursday, April 01, 2010

Take (good) care of yourself...

ಸ್ಪ್ರಿಂಗ್ ತರೋ ಅಲರ್ಜಿ ಸೀಜನ್ನ್ ದೆಶೆಯಿಂದ ಈ ಮಾತನ್ನ ಹೇಳ್ತಾ ಇಲ್ಲ, ನನ್ನದೊಂದು ಫಂಡಮೆಂಟಲ್ ನಂಬಿಕೆ ಇಲ್ಲಿನ ಅನುಭವಗಳ ಮೂಲಕ ಬದಲಾದ ಬಗೆಯನ್ನು ಹೇಳ್ತಾ ಇದ್ದೇನೆ ಅಷ್ಟೇ. ನೀವು ಯಾರನ್ನಾದರೂ ’Take care...' ಎಂದು ಅಮೇರಿಕದಲ್ಲಿ ಬೀಳ್ಕೊಡಬಹುದು ಅದು ’how are you?' ಅನ್ನೋ ಔಪಚಾರಿಕ ಮಾತಿನ ಹಾಗೇ ಕಂಡು ಬಂದರೂ ನನ್ನ ಮಟ್ಟಿಗಂತೂ ಅದು ಯಾವುದೋ ಒಂದು ಫಾಸಿಟಿವ್ ಫೀಡ್‌ಬ್ಯಾಕ್ ಅನ್ನು ಆಗಾಗ್ಗೆ ರೀಇನ್‌ಫೋರ್ಸ್ ಮಾಡ್ತಾ ಇರುತ್ತೆ ಅನ್ಸುತ್ತೆ ಒಂದು ರೀತಿಯಲ್ಲಿ ಟಿವಿಯಲ್ಲಿ ಬರೋ ಕಮರ್ಷಿಯಲ್ಲ್ ನೋಡಿ ನಮಗೆ ಹೌಸ್‌ಹೋಲ್ಡ್ ಕೆಲಸಗಳು ನೆನಪಿಗೆ ಬರೋಲ್ವೇ ಹಾಗೆ.

ನಮ್ಮ ಹಿಂದಿನ ತಲೆಮಾರಿನಲ್ಲಿ ಜನರು ಒಂದೇ ಕಂಪನಿಗೆ ಅಥವಾ ಸರ್ಕಾರಕ್ಕೆ ತಮ್ಮ ಪೂರ್ಣ ಸೇವೆಯನ್ನು ಸಲ್ಲಿಸಿ ಅಲ್ಲೇ ನಿವೃತ್ತರಾಗೋ ವ್ಯವಸ್ಥೆ ಅಥವಾ ನಡವಳಿಕೆ ಇತ್ತು, ಆದರೆ ಈಗಿನ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯ ಇತಿ-ಮಿತಿಗಳು ನಮ್ಮನ್ನು ಸದಾ ’ಈ ಕೆಲಸ ಕೈ ಬಿಟ್ಟು ಹೋದರೆ ಮುಂದೇನು...’ ಅನ್ನೋ ಯೋಚನೆಯನ್ನು ಯಾವಾಗಲೂ ಜಾಗೃತವಾಗೇ ಇಟ್ಟಿರುತ್ತವೆ. ಹಿಂದಿನ ಪರಂಪರೆಯ ಹಾಗೆ ನಿಮ್ಮ ಬಾಸ್ ಆಗಲಿ ನಿಮ್ಮ ಸಹೋದ್ಯೋಗಿಗಳಾಗಲಿ ನಿಮ್ಮ ಯೋಗಕ್ಷೇಮವನ್ನು ನೋಡಿಕೊಂಡಾರು ಅನ್ನೋದು ಮರೀಚಿಕೆಯಾಗಿ ನಿಮ್ಮ ಕೆಲಸ ಹೇಗೇ ಇದ್ದರೂ ನಿಮ್ಮ ಫರ್‌ಫಾರ್ಮೆನ್ಸ್ ಯಾವ ರೀತಿ ಇದ್ದರೂ ಕಾರ್ಪೋರೇಟ್ ಲ್ಯಾಡರ್ರ್‌ನಲ್ಲಿ ಮೇಲೆ ಹೋಗಲೂ ಅನೇಕ ಕಸರತ್ತುಗಳನ್ನು ಮಾಡಬೇಕಾಗುತ್ತದೆ.

ಒಂದು ಕಡೆ ಹೊಸ ನೀರು ಅಂದರೆ ಹೊಸ ಕೆಲಸ ಮಾಡುವ ತಲೆಮಾರು ಕಂಪನಿಗಳಲ್ಲಿ ಬರುವ ಸಾಧ್ಯತೆ ಅಥವಾ ಸಂಖ್ಯೆ ಕಡಿಮೆಯಾಗಿದ್ದು, ಮತ್ತೊಂದು ಈಗಾಗಲೇ ಕಂಪನಿಯಲ್ಲಿ ಸೇರಿಕೊಂಡು ಬೆಳೆದ ತಿಮಿಂಗಲಗಳು ಅಲ್ಲೇ ಬೀಡುಬಿಟ್ಟಿರೋದರಿಂದ ಒಬ್ಬ ಮಧ್ಯ ವರ್ಗದ ಕೆಲಸಗಾರ ಮೇಲೆ ಹೋಗುವ ಸಾಧ್ಯತೆಗೆ ಕುತ್ತು ಬರುತ್ತದೆ. ತಾನು ಮಾಡುವ ಕೆಲಸವನ್ನು ಮತ್ತೊಬ್ಬರಿಗೆ ಕೊಡಲು ಅಲ್ಲಿ ತನ್ನ ಲೆವೆಲ್ಲ್‌ನಲ್ಲಿ ಬೇರೆ ಯಾರೂ ಇಲ್ಲ, ಜೊತೆಗೆ ತಾನು ಮೇಲೆ ಹೋಗಲೂ ಅವಕಾಶವಿಲ್ಲ ಎನ್ನೋ boxed up ಮನಸ್ಥಿತಿ ಎದುರಾಗುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಆದ ಆರ್ಥಿಕ ಏರುಪೇರುಗಳಲ್ಲಿ ಸುಧಾರಿಸಿಕೊಳ್ಳಲು ಕಂಪನಿಗಳು ಇನ್ನೂ ಹೆಣಗುತ್ತಿರುವಾಗ ಬೇರೆ ಕಡೆಗೆ ಅಥವಾ ಕಂಪನಿಗೆ ವಲಸೆ ಹೋಗಿ ಸೇರಿಕೊಳ್ಳುವ ಸಾಧ್ಯತೆಗಳು ಕಡಿಮೆ ಆಗುತ್ತವೆ ಅಥವಾ ರಿಸ್ಕೀ ಆಗಿರುತ್ತವೆ.

ಒಂದಂತೂ ನನಗೆ ಚೆನ್ನಾಗಿ ಮನದಟ್ಟಾಗಿದೆ: ಇಲ್ಲಿ ಯಾರೂ ನಮ್ಮ ಬಗ್ಗೆ ಕೇರ್ ಮಾಡೋದಿಲ್ಲ, ಯಾರೂ ನಮ್ಮ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳೋದಿಲ್ಲ - ನಮ್ಮ ಊರಿನ ಬಸ್ಸುಗಳಲ್ಲಿ ಬರೆದಿರುವ ಹಾಗೆ ’ನಮ್ಮ ಲಗೇಜಿಗೆ ನಾವೇ ಜವಾಬ್ದಾರರು!’. ಸರ್ಕಾರಗಳು, ಅವು ಯಾವುದೇ ಪಕ್ಷದ್ದಿರಲಿ ಯಾರ ನಾಯಕತ್ವದಲ್ಲೇ ಇರಲಿ, ತಮ್ಮ ತಮ್ಮ ಬೇಳೇಕಾಳುಗಳನ್ನು ಬೇಯಿಸಿಕೊಳ್ಳುವುದರಲ್ಲಿ ಮಗ್ನರಾಗಿರುತ್ತವೆ, ತಮ್ಮ ಓಟುಬ್ಯಾಂಕುಗಳನ್ನು ಓಲೈಸುವತ್ತ ಪಾಲಿಸಿಗಳು ವಾಲಿರುತ್ತವೆ. ಎಂಪ್ಲಾಯರ್ಸ್, ಅವರಿಗೆ ನಾವೊಂದು ಕಮಾಡಿಟಿ, ಹ್ಯೂಮನ್ ರಿಸೋರ್ಸ್, ಸ್ಪ್ರೆಡ್‌ಶೀಟ್ ಹಾಗೂ ಎಕ್ಸ್‌ಪೆನ್ಸ್ ವಿಚಾರದಲ್ಲಿ ಬಂದಾಗ ಕತ್ತರಿಸಿ ತೆಗೆದು ಬಿಸಾಡಲು ಒಂದು ಬಾಡಿ ಅಷ್ಟೇ. ಫೈನಾನ್ಶಿಯಲ್ ಅಡ್ವೈಸರ್ಸ್, ಯಾವತ್ತೂ ನಮ್ಮ ಸ್ನೇಹಿತರಂತೂ ಅಲ್ಲ, ಇವರೆಲ್ಲ hyped ಸೇಲ್ಸ್ ರೆಪ್ರೆಸೆಂಟೇಟಿವ್ಸ್ ಅಷ್ಟೇ, ನಿಮ್ಮ ದುಡ್ಡು ಕಾಸಿನ ವಿಚಾರಕ್ಕೆ ಬಂದಾಗ ಅವರ ತರ್ಕದಲ್ಲಿ ಯಾವುದೇ ಭಾವನೆಗಳಾಗಲೀ ನೋವಾಗಲಿ ಇರೋದಿಲ್ಲ. ಸಹೋದ್ಯೋಗಿಗಳು, ನಾನು ಈ ಹಿಂದೆ ಬರೆದ ಹಾಗೆ ಸ್ನೇಹಿತರೆಂದೂ ಆಗೋದಿಲ್ಲ, ಯಾವತ್ತಿದ್ದರೂ ರ್ಯಾಟ್‌ರೇಸ್ ಅನ್ನು ನೆನಪಿಸೋ ಹಾಗೆ ಅವರವರ ಏಳಿಗೆ ಅವರವರಿಗೆ ಮುಖ್ಯ. ಹೀಗೆ ನಾವು ಒಡನಾಡುವ external circle ಅನ್ನೋ ಪರೀಕ್ಷಿಸಿ ನೋಡಿದಾಗ ಎಲ್ಲರೂ ತಮ್ಮ ಕೆಲಸದಲ್ಲಿ ಮಗ್ನರು ಅನ್ನಿಸೋದಿಲ್ಲವೇ? ಇದು ಭಾರತದಲ್ಲಿ ಕೆಲಸ ಮಾಡುವವರಿಗೂ ಅನ್ವಯವಾಗಬಹುದು, ನಮ್ಮಂಥ ಅನಿವಾಸಿಗಳಿಗೆ, ಯಾಕೆಂದರೆ ಅನಿವಾಸಿತನವನ್ನು ನೋವಿರದ ನಾಗರಿಕತೆ ಎಂದು ನಾನು ಕರೆಯೋದರಿಂದ, ಇಲ್ಲಿನ ಪಾಲಿಸಿಗಳಲ್ಲಿ ಎಲ್ಲೂ feel for pain ಇದೆ ಎಂದು ಅನ್ನಿಸೋದೇ ಇಲ್ಲ.

ಅದಕ್ಕೆ, ನಮ್ಮ ಕೇರ್ ಅನ್ನು ನಾವೇ ಮಾಡಿಕೊಳ್ಳಬೇಕು, ನೋಡಿಕೊಳ್ಳಬೇಕು ಎಂದಿದ್ದು; ಬೇರೆ ಯಾರಾದರೂ ನಿಮ್ಮ ಯೋಗಕ್ಷೇಮವನ್ನು ಮಾಡುತ್ತಾರೆ ಎಂದುಕೊಂಡಿದ್ದರೆ ತಟ್ಟನೆ ಆ ಮನಸ್ಥಿತಿಯಿಂದ ಹೊರಬನ್ನಿ.

Saturday, January 30, 2010

ನಮ್ಮೊಳಗಿನ ಬದಲಾವಣೆ ದೊಡ್ಡದು...

’ಇಂಡಿಯಾ ಪ್ರವಾಸ ಹೇಗಿತ್ತು?’ ಅನ್ನೋ ಪ್ರಶ್ನೆಗೆ ’ಅದು ಪ್ರವಾಸವೇ ಅಲ್ಲ!’ ಎಂದು ಉತ್ತರ ಕೊಟ್ಟು ಪ್ರಶ್ನೆ ಕೇಳಿದವರ ಮುಖದ ಮೇಲೆ ಸಹಜವಾಗಿ ಏಳುವ ಆಶ್ಚರ್ಯದ ಅಲೆಗಳನ್ನು ನೋಡೋದಕ್ಕೆ ಒಂದು ರೀತಿ ಖುಷಿ ಅನ್ಸುತ್ತೆ. ನಮ್ಮ ಊರಿಗೆ ನಾವು ಟೈಮ್ ಸಿಕ್ಕಾಗ ಕೊಡೋ ಭೇಟಿಯನ್ನು ಯಾರಾದ್ರೂ ಪ್ರವಾಸ ಅಂತ ಕರೀತಾರೇನು? ಅದು ಯಾವತ್ತಿದ್ದರೂ ಋಣ ಕರ್ಮಗಳಿಗೆ ಅಂಟಿಕೊಂಡಂತ ಒಂದು ಬಂಧನ, ಅಥವಾ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಅದನ್ನು ಯಾವುದೋ ಒಂದು ಹೆಸರಿನಿಂದ ಕರೆಯಲೇ ಬೇಕು ಅಂತಾದರೆ ಅದನ್ನು "ಭೇಟಿ" ಎಂದು ಕರೆಯೋಣ, ಅದು ನನ್ನ ಮಟ್ಟಿಗೆ ಪ್ರವಾಸವಂತೂ ಖಂಡಿತ ಅಲ್ಲ. ಇಲ್ಲಿಂದ ಅಲ್ಲಿಗೆ ಹೋಗಿ ಮತ್ತಿನ್ಯಾವುದಾದರೂ ಯಾತ್ರಾ ಸ್ಥಳಗಳಿಗೋ ಪ್ರೇಕ್ಷಣೀಯ ಸ್ಥಾಣಗಳಿಗೋ ಹೋಗಿ ಬಂದರೆ ಅದಾದರೂ ಪ್ರವಾಸವಾದೀತು, ನಮ್ಮದೇನಿದ್ದರೂ ಏರ್‌ಪೋರ್ಟಿನಿಂದ ಮನೆ, ಮನೆಯಿಂದ ಏರ್‌ಪೋರ್ಟ್ ಅನ್ನಬಹುದು ಅಷ್ಟೇ.

’ಸಾಕಪ್ಪಾ ಸಾಕು ಆ ಗುಂಡಿ ರಸ್ತೆಗಳು...’, ’ಸಾಕಪ್ಪಾ ಆ ಟ್ರಾಫಿಕ್ ಜ್ಯಾಮು...’ ಎಂದು ಮೂಗೆಳೆಯುವವರಿಗಂತೂ ನನ್ನ ಹತ್ತಿರ ಸಿದ್ಧ ಉತ್ತರವಿದೆ. ’ಮತ್ತಿನೇನನ್ನು ತಾನೇ ನಿರೀಕ್ಷಿಸಬಲ್ಲಿರಿ? ಬದಲಾದವರು ನೀವು ಹಾಗೂ ನಿಮ್ಮ ನಿಲುವು, ನೀವು ಬದಲಾದ ಮಾತ್ರಕ್ಕೆ ಪ್ರಪಂಚವೇ ಬದಲಾಗಬೇಕೇನು? ನೀವು ಅಮೇರಿಕದವರು ಸ್ವಿಟ್ಜರ್‌ಲೆಂಡ್ ಹೋಗಿ ಬಂದಾಕ್ಷಣ ಅಲ್ಲಿಯವರ ಹಾಗೆ ಸಮಯ ಪಾಲಿಸುತ್ತೀರೇನು?’ ನಮ್ಮ ದೇಶ ಬಡ ದೇಶವಾಗಿತ್ತು, ಈಗ ನಿಧಾನವಾಗಿ ಅಭಿವೃದ್ಧಿಯ ಹಂತಕ್ಕೆ ಕಾಲಿಡುತ್ತಿದೆ. ನಾವು ಹಾಗೂ ನಮ್ಮ ತತ್ವಗಳು ಪ್ರಜಾಪ್ರಭುತ್ವವನ್ನು ಪ್ರತಿಬಿಂಬಿಸುವವು, ರಾತ್ರೋ ರಾತ್ರಿ ಕಾನೂನನ್ನು ಸೃಷ್ಟಿಸಿ ಅದನ್ನು ಎಲ್ಲರು ನಾಳೆಯಿಂದ ಪಾಲಿಸಿ ಎನ್ನಲು ನಮ್ಮದು ಸರ್ವಾಧಿಕಾರಿ ಸರ್ಕಾರವಂತೂ ಅಲ್ಲ. ರಸ್ತೆಯ ಮೇಲೆ ಉದ್ದಾನುದ್ದಕೂ ಲೇನ್‌ಗಳನ್ನು ಎಳೆದುಕೊಂಡ ಮಾತ್ರಕ್ಕೆ ಅದನ್ನು ಎಲ್ಲರೂ ಪಾಲಿಸಬೇಕು ಎನ್ನುವ ನಿಯಮವನ್ನು ಎಲ್ಲರೂ ಅನುಕರಿಸಿದ್ದೇ ಆದರೆ ಟ್ರಾಫಿಕ್ ಲೈಟ್‌ನಿಂದ ಹಿಡಿದು ರಸ್ತೆಯ ಉದ್ದಾನುದ್ದಕ್ಕೂ, ಎಲ್ಲಿ ನೋಡಿದರಲ್ಲಿ ಟ್ರಾಫಿಕ್ ಜ್ಯಾಮ್ ಆಗುವುದರಲ್ಲಿ ಸಂದೇಹವೇ ಇಲ್ಲ. ಅವೇ ದೇಶ, ಅವೇ ರಸ್ತೆಗಳು ಆದರೆ ದಿನೇ-ದಿನೇ ಹಿಗ್ಗುತ್ತಿರುವ ಜನಸಂಖ್ಯೆ ಮತ್ತು ಅದರ ಡಿಮ್ಯಾಂಡುಗಳಿಗೆ ಸ್ಪಂದಿಸೋದಕ್ಕೆ ಆ ಹಳೆಯ ಇನ್‌ಪ್ರಾಸ್ಟ್ರಕ್ಚರ್ರಿನಿಂದ ಹೇಗಾದರೂ ಸಾಧ್ಯವಿದೆ ಹೇಳಿ?

***

ಅಮೇರಿಕದಿಂದ ಭಾರತಕ್ಕೆ ಬಂದು ಲ್ಯಾಂಡ್ ಆಗುವ ವಿಮಾನಗಳು ಹಾಗೂ ಭಾರತವನ್ನು ಬಿಟ್ಟು ಹೊರಡುವ ವಿಮಾನಗಳು ಮಧ್ಯರಾತ್ರಿಯ ನಂತರ ಹಾಗೂ ಬ್ರಾಹ್ಮೀ ಮಹೂರ್ತಕ್ಕೆ ಮುಂಚೆ ಏಕೆ ಬಂದು ಹೋಗುತ್ತವೆ ಎಂದು ಯೋಚಿಸಿದ್ದಕ್ಕೆ ಈ ಸಾರಿ ಉತ್ತರ ಸಿಕ್ಕಿತು. ನಮ್ಮಂತೆ ದೇಶವನ್ನು ಅದೆಷ್ಟೋ ವರ್ಷಗಳ ನಂತರ ಅರಸಿ ಬಂದವರಿಗೆ ಏಕ್‌ದಂ ಭ್ರಮನಿರಸನವಾಗಬಾರದಲ್ಲ ಅದಕ್ಕೆ. ಉದಾಹರಣೆಗೆ ಚಿಕಾಗೋದಿಂದ ಹೊರಟ ವಿಮಾನ ಸರಿ ಬೆಳಗ್ಗೆ ಒಂಭತ್ತು ಘಂಟೆಗೆ ಬೆಂಗಳೂರನ್ನು ತಲುಪಿತು ಎಂದುಕೊಳ್ಳಿ, ಅಲ್ಲಿನ ಪೀಕ್ ಅವರ್ ನಲ್ಲಿ ನೀವು ಆ ದಿನ ಮನೆ ಸೇರುವಾಗ ಅದೆಷ್ಟು ಹೊತ್ತಾಗುತ್ತೋ ಯಾರು ಬಲ್ಲರು? ನಿಮಗೆ ಎದಿರಾಗಿ ದಿಢೀರನೆ ಉದ್ಭವಿಸೋ ಮುಷ್ಕರ ಮೆರವಣಿಗೆಗಳಿರಬಹುದು, ಯಾರೋ ಸತ್ತರು ಎಂದು ತೂರಿ ಬರುವ ಕಲ್ಲುಗಳಿಗೆ ಆಹುತಿಯಾಗುವ ಗಾಜಿನ ತುಣುಕುಗಳಿರಬಹುದು ಅಥವಾ ಸಾಮಾನ್ಯ ಟ್ರಾಫಿಕ್ಕ್ ಜಾಮೇ ನಿಮ್ಮನ್ನು ಮೊದಲ ದಿನವೇ ಹೈರಾಣಾಗಿಸಿಬಿಡಬಹುದು. ಇಲ್ಲಿ ಬರುವಾಗ ಅದೇನೇನೋ ಕನಸುಗಳನ್ನು ಕಟ್ಟಿಕೊಂಡ ನಮಗೆ ಇಲ್ಲಿ ಬರುವ ಅವಕಾಶ ಅವಸ್ಥೆಗಳೆಲ್ಲ ಒಂದು ರೀತಿಯ ಓಪನ್ ಎಂಡೆಡ್ ಪ್ರಶ್ನೆಗಳ ಥರ, ಅದೇ ಇಲ್ಲಿಂದ ಅಲ್ಲಿಗೆ ಹೋದಾಗ ನಮ್ಮ ನಿರೀಕ್ಷೆ ಮತ್ತು ನಮಗಾಗೂ ನಿರಾಶೆಗಳ ಮೂಲವೇ ಬೇರೆ.

ಪಲಾಯನವಾದ ಅನ್ನೋದು ನಮ್ಮ ಹೆಸರುಗಳಿಗೆ ನಮ್ಮ ಪ್ರತಿಭೆಗೆ ಮಾತ್ರ ಅಂಟಿದ್ದಲ್ಲ, ನಾವು ನಮ್ಮ ಮ್ಯಾನೇಜ್‌ಮೆಂಟಿನ ಸ್ಥರಗಳಲ್ಲಿ ನಮ್ಮ ಅನುಭವಗಳನ್ನು ವಿಸ್ತರಿಸಿಕೊಂಡ ಹಾಗೆಲ್ಲ ದುತ್ತನೆ ಎದುರಾಗುವ ಸಮಸ್ಯೆಗಳಿಗೆ ಥಟ್ಟನೆ ಉತ್ತರ ಹೇಳುವಲ್ಲಿ ಸೋತು ಹೋಗುತ್ತೇವೇನೋ ಅನ್ನಿಸುತ್ತದೆ. ಎಂಥ ವಾಜ್ಞಿ ರಾಜಕಾರಣಿ ಅಧಿಕಾರಕ್ಕೆ ಬಂದರೂ ಮುಂದೆ ಪಬ್ಲಿಕ್ ಸ್ಟೇಟ್‌ಮೆಂಟ್ ಕೊಡೋವಾಗ ಪದಗಳ ನಂತರ ಪದಗಳನ್ನು ಹುಷಾರಾಗಿ ಪೋಣಿಸಿ ವಾಕ್ಯಗಳನ್ನು ರಚಿಸುವಂತೆ ಭಾರತದಲ್ಲಿ ಎದಿರಾಗೋ ಸಮಸ್ಯೆಗಳಿಗೆ ಅಮೇರಿಕದಿಂದ ಹೋದೋರು ಸ್ಪಂದಿಸೋದು ಎನ್ನುವುದು ನನ್ನ ಅಭಿಪ್ರಾಯ. ನಮ್ಮ ಓರಗೆಯವರ ಬ್ಯಾಂಕ್‌ ಬ್ಯಾಲೆನ್ಸಿಗಿಂತ ನಮ್ಮದು ತುಸು ಹೆಚ್ಚಿರಬಹುದು ಎನ್ನುವಲ್ಲಿ ನಾವೇ ಮುಂದೇ ಹೊರತು ಅಲ್ಲಿಯ ಆಗು ಹೋಗುಗಳಿಗೆ ನಿಜವಾಗಿ ಸ್ಪಂದಿಸೋದಕ್ಕೆ ನಮ್ಮಿಂದ ಸಾಧ್ಯವೇ? ನಿಮ್ಮ ಮನೆಯಲ್ಲಿ ಯಾರಿಗಾದರೂ ಹುಷಾರಿಲ್ಲ ಎಂದು ಸ್ಥಳೀಯ ಸರ್ಕಾರಿ ದವಾಖಾನೆಗೆ ಕರೆದುಕೊಂಡು ಹೋಗಿ ಅಥವಾ ಕೈಲಾದರೆ ಪ್ರೈವೇಟ್ ನರ್ಸಿಂಗ್ ಹೋಮ್‌ಗಳಲ್ಲಿ ಟ್ರೀಟ್‌ಮೆಂಟ್ ಕೊಡಿಸಿ ನೋಡಿ, ಅಲ್ಲಿಯ ಚಲನವಲನ (ಲಾಜಿಸ್ಟಿಕ್ಸ್)ಗಳಿಗೆ ನಮ್ಮಿಂದ ಹೊಂದಿಕೊಳ್ಳೋದಕ್ಕೆ ಇನ್ನೊಂದು ದಶಕವೇ ಬೇಕು ಎನ್ನಿಸುತ್ತೆ ಕೆಲವೊಮ್ಮೆ. ಇಲ್ಲಿಯ ವೇಷವನ್ನು ಕಳಚಿ ಕ್ರಮೇಣ ಅಲ್ಲಿಯವರಾದಂತೆ ನಟಿಸಿದರೂ ನಮ್ಮೊಳಗಿನ ಭಿನ್ನ ಮನ ಸದಾ ಬದಲಾವಣೆಯನ್ನು ನಿರೀಕ್ಷಿಸುತ್ತದೆ, ಆದರೆ ಅಲ್ಲಿಯ ವ್ಯವಸ್ಥೆ ಮನೋ ವೇಗಕ್ಕೆ (ಅಥವಾ ರೋಗಕ್ಕೆ) ಸ್ಪಂದಿಸೋದಾದರೂ ಹೇಗೆ ಸಾಧ್ಯ?

ನಮ್ಮ ಕೈಯಲ್ಲಿ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ - ಒಂದು ಹೊತ್ತು ಉಂಡರೆ ಮತ್ತೊಂದು ಹೊತ್ತು ಊಟದ ಬಗ್ಗೆ ಕೊರಗುವ ನಾಗರಿಕತೆ ಇರುವಾಗ, ನಮ್ಮ ಸಂಪನ್ಮೂಲ ಸ್ತೀಮಿತವಾಗುತ್ತದೆ. ನಾವು ನಿರೀಕ್ಷಿಸುವ ಬದಲಾವಣೆಗಳು ಲಾರ್ಜ್‌ಸ್ಕೇಲ್‌ನಲ್ಲಿ ಇಂಪ್ಲಿಮೆಂಟ್ ಮಾಡಲಾಗದ ಪುಸ್ತಕದ ಬದನೆಕಾಯಿಯಾಗುತ್ತದೆ. ದಿನೇ-ದಿನೇ ಉಳ್ಳವರ-ಇಲ್ಲದವರ ನಡುವಿನ ಕಂದಕ ದೊಡ್ಡದಾಗುತ್ತಾ ಹೋಗುತ್ತಿರುವಾಗ ನಮ್ಮ ಧನಾತ್ಮಕ ಆಲೋಚನೆಗಳು ಮುರಿದು ಹೋದ ಚಿಕ್ಕ ಮರದ ತುಂಡನ್ನು ಅಂಟಿಸೋ ಗೋಂದಾಗುತ್ತದೆಯೇ ಹೊರತು ಅದು ದೊಡ್ಡ ಪ್ರಮಾಣದ ಬಂಧನವಾಗೋದಿಲ್ಲ. ನಾವು ಎಲ್ಲವನ್ನು ಮಾಡಲಾಗದಿದ್ದರೂ ನಮ್ಮ ಮನಸ್ಸಿನಲ್ಲಿರುವ ಕ್ವಾಲಿಟಿಗೆ ತಕ್ಕಂತೆ ಎಲ್ಲರಿಂದ ಕೆಲಸವನ್ನು ನಿರೀಕ್ಷಿಸುವುದು ಇನ್ನೂ ಕಷ್ಟದ ಮಾತೇ. ಬೆಂಗಳೂರಿನಲ್ಲಿ ಮನೆ ಕೆಲಸದವರ ಜೊತೆ ಏಗಿ ಸರಿಯಾಗಿ ಪಾತ್ರೆ ತೊಳೆಸಿಕೊಂಡು ಬಟ್ಟೆ ಒಗೆಸಿಕೊಂಡು ನೆಲವನ್ನು ಸ್ವಚ್ಛವಾಗಿಸಿಕೊಳ್ಳುವುದಕ್ಕೆ ಪೀಪಲ್ ಮ್ಯಾನೇಜ್‌ಮೆಂಟಿನಲ್ಲಿ ಹೊಸ ಡಿಗ್ರಿ ಬೇಕಾಗುತ್ತದೆ. ಆಳು ಮಾಡಿದ್ದು ಹಾಳು...ಅಂತಹ ಹಾಳು ಕೆಲಸದ ನಡುವೆ ನಮ್ಮ ಬದುಕನ್ನು ಸುಗಮವಾಗಿ ಸಾಗಿಸಿಕೊಂಡು ಹೋಗುವಾಗ ಮೈಕ್ರೋ-ಮಿನಿ ಮ್ಯಾನೇಜುಮೆಂಟುಗಳಿಗೆ ಜೋತು ಬೀಳಬೇಕಾಗುತ್ತದೆ.

***

ಭಾರತಕ್ಕೆ ಹೋಗಿ ಬರೋ ಅನುಭವ ಪ್ರವಾಸವಲ್ಲ, ಅದು ಒಂದು ದರ್ಶನ, ಒಂದು ವಾತಾವರಣದಲ್ಲಿ ಪಕ್ವಗೊಂಡ ಮನಸ್ಸು ಮತ್ತೊಂದು ವಾತಾವರಣದಲ್ಲಿ ಬೆರೆಯುವ ಯೋಗ, ತಾಯ ಮಡಿಲನ್ನು ಸೇರಿ ಹಾಯಾಗಿ ಕಣ್ಮುಚ್ಚಿ ಮಲಗುವ ಮಗುವಿಗೆ ದೊರೆತ ಒಂದು ಅವಕಾಶ. ಸಮಸ್ಯೆಗಳು ಎಲ್ಲಿಲ್ಲ, ಹಾಗಿರುವಾಗ ನಾವು ಹೋದಲೆಲ್ಲ ಸುತ್ತಲಿನ ಕೊಳೆಯನ್ನು ಮಾತ್ರ ನೋಡಿಕೊಂಡು "ಶಿಟ್" ಎಂದು ಮೂಗು ಸಿಂಡರಿಸಿದಾಕ್ಷಣ ಅಲ್ಲಿಯದೇನೂ ಬದಲಾಗೋದಿಲ್ಲ. ಬದಲಾವಣೆ ಎಲ್ಲ ಕಡೆಗಿದೆ, ಆದರೆ ಕಡಿಮೆ ಸಮಯದಲ್ಲಿ ಹೆಚ್ಚು ಬದಲಾವಣೆಗೊಳಪಟ್ಟ ನಮ್ಮ ಮನಸ್ಸು ಎಲ್ಲ ಕಡೆ ಅದನ್ನೇ ನಿರೀಕ್ಷಿಸಿದರೆ ಅದರ ಔಚಿತ್ಯವನ್ನು ಪ್ರಶ್ನಿಸಬೇಕಾಗುತ್ತದೆ. ನಮ್ಮ ಆಫೀಸಿನಿಂದ ಬಿಸಿನೆಸ್ ಗೋಸ್ಕರ ಹೋಗುವವರಿಗೆ ನಾನು ಹೇಳೋದು ಇಷ್ಟೇ: ’ಅಲ್ಲಿ ಬೇಕಾದಷ್ಟು ಸಂಸ್ಕೃತಿಗಳಿವೆ, ಒಂದು ಬಿಲಿಯನ್ನ್‌ಗಿಂತಲೂ ಹೆಚ್ಚು ಜನರಿದ್ದಾರೆ, ದೊಡ್ಡ ಸಾಗರವನ್ನು ನೋಡೋ ಹಾಗೆ ನೋಡಿ, ಅದನ್ನು ಬಿಟ್ಟು ಆಗಾಗ್ಗೆ ಬರುವ ಅಲೆಗಳಿಗೆ ತಲೆಕೆಡಿಸಿಕೊಳ್ಳಬೇಡಿ!"

Thursday, January 07, 2010

ಲಘುವಾಗೆಲೆ ಅನಿವಾಸಿ ಮನ...

ನವೆಂಬರ್ ೧೩ ರಂದು ಬರೆದ ’ಗೆಲುವಾಗೆಲೆ ಅನಿವಾಸಿ ಮನ...’ಬರಹಕ್ಕೆ ಪೂರಕವಾಗಿ ಈ ಲೇಖನ. ನವೆಂಬರ್ ೧೩ ನಾವು ಭಾರತಕ್ಕೆ ವೆಕೇಷನ್ನ್ ಹೋಗೋದರ ಹಿಂದಿನ ದಿನ, ಹಲವಾರು ಕೆಲಸಗಳ ನಡುವೆಯೂ ನಾನು ಮೂರು ವರ್ಷಗಳಲ್ಲಿ ಮಿಸ್ ಮಾಡಿಕೊಂಡಿರೋ ಭಾರತ ಈಗ ಹೇಗಿರಬಹುದು, ಏನೇನೆಲ್ಲ ಬದಲಾವಣೆಗಳಾಗಿರಬಹುದು...ಎಂದು ಯೋಚಿಸಿಕೊಳ್ಳುತ್ತಲೇ ಇಲ್ಲಿ-ಅಲ್ಲಿಯ ತವಕಗಳ ಎರಡು ಚಿತ್ರಗಳನ್ನು ತರಾತುರಿಯಾಗಿ ಕಕ್ಕಿ ಕೊಂಡು ಆ ಲೇಖನವನ್ನು ಬರೆದು ಮುಗಿಸಿದ್ದಾಯಿತು. ಈಗ ಭಾರತದ ವೆಕೇಷನ್ನ್ ಮುಗಿಸಿ ಹಿಂತಿರುಗಿ ಬಂದ ಮೇಲೆ ಹಾಗೂ ಸುಧಾರಿಸಿಕೊಂಡ ಮೇಲೆ ನನ್ನ ಅನುಭವಗಳನ್ನು ಹೊರಹಾಕಿ ಮತ್ತೊಂದು ಲೇಖನವನ್ನು ಬರೆಯಬೇಕು ಎನ್ನುವ ಆಶಯದ ಫಲವೇ ಇದು.

ಈ ಬದುಕು-ಬವಣೆಗಳು ಅದೇನೇ ಕಷ್ಟವನ್ನು ತಂದು ಒಡ್ಡಲಿ, ಜಾಗತೀಕರಣದ ಪರಿಣಾಮಗಳು ಎಷ್ಟು ದೂರ ಬೇಕಾದರೂ ಪಸರಿಸಿಕೊಂಡಿರಲಿ ನಮ್ಮ ಊರು ನಮ್ಮ ದೇಶ ನಮ್ಮ ಮನೆ...ಇವೆಲ್ಲವೂ ಎಂದಿಗೂ ಅಪ್ಯಾಯಮಾನವೇ. ನನ್ನೊಳಗೆ ಹುದುಗಿರುವ ಫಾಸಿಟಿವ್ ಸ್ಪಿರಿಟ್ಸ್ ಈ ವಿಚಾರದಲ್ಲಿ ನೆಗೆಟಿವ್ ಎಂದೂ ಆಗಲು ಸಾಧ್ಯವಿಲ್ಲ!

***

ತೊಂಭತ್ತರ ಮಧ್ಯೆ ಹಾಗೂ ಕೊನೆಯಲ್ಲಿ ಪ್ರಪಂಚವನ್ನು ಅರಸುತ್ತಾ ಬಂದಂತಹ ನನ್ನಂಥ ಟೆಕ್ಕಿಗಳಿಗೆ (ಅಂದಿನ ಕಾಲದ ಹೆಸರು) ನಮ್ಮ ಅಗತ್ಯಗಳು ಬೇರೆಯಾಗಿದ್ದವು. ಜೇಬಿನಲ್ಲಿ ಮೂರು ಸಾವಿರ ಡಾಲರ್ ಇಟ್ಟುಕೊಂಡು ಬಂದು ನೆವರ್ಕ್ ಲಿಬರ್ಟಿ ಏರ್‌ಪೋರ್ಟಿನಲ್ಲಿ ಇಳಿದ ನನ್ನ ಹಾಗಿನವರಿಗೆ ಅವರ ದೃಷ್ಟಿಕೋನ ಬೇರೆಯಾಗಿತ್ತು. Y2K ಮುಗಿದು, ಮತ್ತೊಂದು ದಶಕವೂ ಕಳೆದು ಹೋಗಿ ಹತ್ತು ವರ್ಷಗಳಿಗಿಂತಲೂ ಹೆಚ್ಚು ಇಲ್ಲಿನ ಪೈಪೋಟಿಗೆ ಏಗಿ-ಬೇಗಿ ಹಾಗೂ ಇಲ್ಲಿನ ಸಂಪನ್ಮೂಲಗಳನ್ನುಂಡು ನಮ್ಮ ಬೆಳವಣಿಗೆ ಬೇರೆ ರೀತಿಯದ್ದೇ ಆಗಿದೆ. ನನ್ನ ಜೊತೆಯವರು, ವಾರಗೆಯವರು ಇಲ್ಲಿಗೆ ಬಂದು ಈಗಾಗಲೇ ಅಮೇರಿಕನ್ ಸಿಟಿಜನ್ನ್ ಪಟ್ಟಕಟ್ಟಿಕೊಂಡಿರಬಹುದಾದ ಸಮಯದಲ್ಲಿ ಸೇಫ್‌ನಲ್ಲಿರುವ ನನ್ನ ಭಾರತದ ಪಾಸ್‌ಪೋರ್ಟ್ ಯಾವತ್ತೋ ಒಮ್ಮೆ ಭಾರತಕ್ಕೆ ಹೋಗಿ ತಿಣುಕುವ ಆಸೆಯನ್ನು ಇನ್ನೂ ಜೀವಂತವಾಗಿಟ್ಟುಕೊಂಡಿದೆ ಎಂದೇ ಹೇಳಬೇಕು. ಸೋಜಿಗದ ವಿಷಯವೆಂದರೆ ನಾವು ಬದಲಾದಂತೆ ನಮ್ಮ ಹಳೆಯ ಪಾಸ್‌ಪೋರ್ಟಿನಲ್ಲಿರುವ ಚಿತ್ರವಾಗಲೀ ಮಾಹಿತಿಯಾಗಲೀ ಬದಲಾಗುವುದೇ ಇಲ್ಲ, ಅವು ಯಾವತ್ತಿದ್ದರೂ ’ನಾನೇ’ ಎನ್ನುವ ಚಿರಂತನ ಪ್ರತಿಮೆಯನ್ನು ಎತ್ತಿ ತೋರಿಸುವ ಮಾಧ್ಯಮ.

ಈ ಒಂದು ದಶಕದಲ್ಲಿ ಬೇಕಾದಷ್ಟಾಗಿದೆ: ನಮ್ಮ ಸ್ಪ್ರೆಡ್‌ಶೀಟು, ಗ್ರಾಫು, ನಂಬರುಗಳು ತಮ್ಮನ್ನು ತಾವು ನಮ್ಮ ಎದುರು ತೋರಿಸಿಕೊಂಡು ನಮ್ಮನ್ನು ಲೇವಡಿ ಮಾಡುವ ಪರಿಸ್ಥಿತಿಯೂ ಬಂದು ಹೋಗಿದೆ. ಈ ಒಂದು ದಶಕದಲ್ಲಿ ಮಾರ್ಕೆಟ್ಟಿನ ಮುಖ್ಯ ಮೂರು ಏಳು ಬೀಳುಗಳ ಕೃಪೆಯಿಂದಾಗಿ - ಡಾಟ್ ಕಾಮ್, ರಿಯಲ್ ಎಸ್ಟೇಟ್ ಹಾಗೂ ಕ್ರೆಡಿಟ್ ಕ್ರಂಚ್ - ನಮ್ಮ ದುಡಿಮೆಯ ಫಲ ಸ್ಟ್ರೆಸ್ಸಿಗೆ ಒಳಗಾಗಿದೆ, ನಮ್ಮ ಹೂಡಿಕೆಯ ಹಣ ಇನ್‌ಫ್ಲೇಷನ್ನಿನ ಎದುರು ತಲೆ ತಗ್ಗಿಸಿ ತನ್ನ ಮೌಲ್ಯವನ್ನು ಕಳೆದುಕೊಂಡಿದೆ. ಇವೆಲ್ಲದರ ಜೊತೆಗೆ ಸೆಪ್ಟೆಂಬರ್ ೧೧, ೨೦೦೧ ರ ಭಯೋತ್ಪಾದಕತನ ನನ್ನಂಥ ಅನಿವಾಸಿಗಳಿಗೆ ಸಾಕಷ್ಟು ಕಷ್ಟ ಸುಖದ ದರ್ಶನ ಮಾಡಿಸಿದೆ.

’ವಿಜಯ ಕರ್ನಾಟಕ’ದಂತಹ ಪತ್ರಿಕೆಗಳಲ್ಲಿ ಪ್ರಕಟವಾದ "Take it easy...ಟೆಕ್ಕಿ" ಲೇಖನಗಳು ನ್ಯೂಕ್ಲಿಯರ್ ಕುಟುಂಬಗಳ ಬವಣೆಯನ್ನು ಒಂದು ಹೆಜ್ಜೆ ಮುಂದುವರೆದು ರಸ್ತೆ ಮೇಲೆ ಬಿಸಾಡಿ ಮಾನ ಕಳೆದಿವೆ, ಆಧುನಿಕ ಕುಟುಂಬಗಳಲ್ಲಿನ ಇರಿಸು-ಮುರಿಸುಗಳು ಮನ-ಮನೆಯನ್ನು ಮುರಿಯುವ ಪ್ರಸಂಗಗಳನ್ನು ಲೇವಡಿ ಮಾಡಿವೆ. ಈ ನ್ಯೂಕ್ಲಿಯರ್ ಕುಟುಂಬಗಳ ಕ್ಲೀಷೆಗಳು ಮೈನ್‌ಸ್ಟ್ರೀಮ್ ಸಮಾಜಕ್ಕೆ ಗೊತ್ತೇ ಆಗದೇ ಒಂದು ದಶಕ ಉರುಳಿ ಹೋಗಿದ್ದು ವಿಪರ್ಯಾಸ. ’ನಮ್ಮ ಮಗ ಕಾಲ್‌ಸೆಂಟರ್‌ನಲ್ಲಿ ದುಡಿಯುತ್ತಾನೆ...’ ಎನ್ನುವುದರ ಹಿಂದೆ ಬಳುವಳಿಯಾಗಿ ಬರುವ ಫಲಾಫಲಗಳನ್ನು ದೂರದ ತಂದೆ-ತಾಯಿಯರು ಯಾಕೆ ಗುರುತಿಸುವುದರಲ್ಲಿ ಸೊರಗಿ ಹೋದರೋ? ನನ್ನ ಹಾಗೆ ಹೆಚ್ಚಿನವರು ಇಲ್ಲಿ ಬಂದೇ ಕುಟುಂಬವನ್ನು ಆರಂಭಿಸಿದ್ದು ನಿಜವಾದರೆ ನಮಗೆಲ್ಲ ಸಹಬಾಳ್ವೆ ಎನ್ನೋದರ ಪರಿಕಲ್ಪನೆಯೇ ಇಲ್ಲ ಎನ್ನಬೇಕು. ನಾವು ಪರಿವಾರದವರೊಟ್ಟಿಗೆ ಮದುವೆ-ಮುಂಜಿಗಳಲ್ಲಿ ಭಾಗವಹಿಸೋದಿಲ್ಲ, ವಾರದ ದಿನಗಳನ್ನು ಒಂದು ರೀತಿ, ವಾರಾಂತ್ಯವನ್ನು ಮತ್ತೊಂದು ರೀತಿಯಲ್ಲಿ ಉರುಳಿಸಿ ವಾರ-ವರ್ಷಗಳನ್ನು ಕಳೆಯುವ ನಮಗೆ ಅವಿಭಾಜ್ಯ ಕುಟುಂಬಗಳ ಕಷ್ಟಗಳು ಹತ್ತಿರ ಸಹ ಸುಳಿಯೋದಿಲ್ಲ. ಸಹೋದರ-ಸಹೋದರಿ, ನಾದಿನಿ, ಮೈದುನ, ಅತ್ತೆ-ಮಾವ, ತಂದೆ-ತಾಯಿ, ದೊಡ್ಡಪ್ಪ-ಚಿಕ್ಕಪ್ಪ, ದೊಡ್ಡಮ್ಮ-ಚಿಕ್ಕಮ್ಮಗಳ "interference" ನಮ್ಮ ಕುಟುಂಬಗಳಿಗಿರೋದಿಲ್ಲ. ನಮ್ಮ ಮಕ್ಕಳ ಡೈಪರ್ರ್ ತೆಗೆದು ತೊಳೆಯೋದು, ಅವರ ಯೋಗ-ಕ್ಷೇಮ ನೋಡಿಕೊಳ್ಳೋದು ನಮ್ಮ ದಿನನಿತ್ಯದ ಸಾಧನೆಗಳಲ್ಲೊಂದು. ನಾವು ನಮ್ಮ ಖರ್ಚನ್ನು ಮೀರಿ ಕೂಡಿಸೋ ಹಣ ಕೆಲವರಿಗೆ ಒಂದು ರೀತಿಯಲ್ಲಿ ನಾಯಿ ಮೊಲೆಯ ಹಾಲು - ಅದು ಬಹಳಷ್ಟು ಸಾರಿ ನೆರೆಹೊರೆಯ ಕಷ್ಟಗಳಿಗೆ ಸ್ಪಂದಿಸಿರಲಾರದು, ಹಾಗೆ ಕೂಡಿಟ್ಟ ಹಣ ಭದ್ರತೆಯಿದ್ದರೂ ಅದರ ಜೊತೆ ಅಸಹಾಯಕತೆಯನ್ನೂ ಸೇರಿಸಿಕೊಂಡಿರುತ್ತದೆ. ಹಾಗೆ ಸೇರಿಕೊಂಡ ಡಾಲರ್ ಹಣ ಇಲ್ಲಿಯ ಮಿಡ್ಲ್‌ಕ್ಲಾಸ್ ಮಟ್ಟದ್ದಿದ್ದರೂ ಅದು ಭಾರತದ ರೂಪಾಯಿಗೆ ಬದಲಾದಾಗ ಒಂದು ಹೊಸ ಅರ್ಥ ಪಡೆದುಕೊಳ್ಳುತ್ತದೆಯೇ ಹೊರತು ಕ್ಲಾಸ್ ವಿಚಾರದಲ್ಲಿ ಹೆಚ್ಚು ಬದಲಾವಣೆ ಆಗೋದಿಲ್ಲ.

***

ಯಾಕೆ ಭಾರತಕ್ಕೆ ಹಿಂತಿರುಗಿ ಹೋಗಬೇಕು? ಎನ್ನುವ ಆಲೋಚನೆಗಳು ಒಂದು ದಶಕದ ನಂತರ ಆಗಾಗ್ಗೆ ನಾಯಿಕೊಡೆಗಳಂತೆ ತಲೆ ಎತ್ತುವುದು ಸಾಮಾನ್ಯವಾಗುತ್ತದೆ. ಮೊದಲೆಲ್ಲ ಯಾವತ್ತು ಹೋದೇವೋ ಎನ್ನುವ ಆಲೋಚನೆಯೇ ರೋಮಾಂಚನವನ್ನು ಮೂಡಿಸುವಂತಹ ವಿಚಾರಗಳು ಈಗ ಹತ್ತಿರ ಸುಳಿಯೋದಿಲ್ಲ. ಅದರ ಬದಲಿಗೆ ಪ್ರಾಯೋಗಿಕವಾಗಿ ಯೋಚಿಸುವ ಮನಸ್ಸು ಎಲ್ಲರಿಗಿಂತ ಮುಂದಾಗಿ ಭಾವನೆಗಳು ಹಾಗೂ ಸ್ಪಂದನಗಳೆಂಬ ಮೊದಲಾದ ಮನಸ್ಸಿನ ಲಘು ವಿಹಾರಗಳು ಕನಸಿಗೆ ಹತ್ತಿರವಾಗತೊಡಗುತ್ತವೆ. ಮೊದಲು ಎರಡು ಭುಜಗಳ ಜೊತೆಗೆ ಎರಡು ಸೂಟ್‌ಕೇಸ್ ಇಟ್ಟುಕೊಂಡು ಬಂದವರಿಗೆ ಸಂಸಾರದ ಹಲವಾರು ಇತರ ಭುಜಗಳ ಮತ್ತಿನ್ನೊಂದಿಷ್ಟು ಬ್ಯಾಗೇಜುಗಳು ಬೆನ್ನೇರುತ್ತವೆ. ಇಲ್ಲಿ ಇದ್ದೂ ಇಲ್ಲದವರ ಹಾಗೆ ಬದುಕಿ ಸುಸ್ತಾಗಿ ಹೋದ ಪರಿಣಾಮಕ್ಕೆ ನಮ್ಮ ಇಮ್ಮೂವಬೆಲ್ಲ್ ಅಸ್ಸೆಟ್ಟಿನ ಲಿಸ್ಟಿಗೆ ಇಲ್ಲಿಯ "ಮನೆ"ಯೂ ಸೇರಿಕೊಳ್ಳುತ್ತದೆ.

ಯಾಕೆ ಹೋಗಬೇಕು ಅನ್ನೋ ಪ್ರಶ್ನೆಗೆ ಒಂದೇ ಒಂದು ಬ್ರಹ್ಮಾಸ್ತ್ರದಂತಹ ಉತ್ತರವನ್ನು ನೀಡಬಹುದು - ಅದು ನಮ್ಮೂರಿನ ಹವಾಮಾನ. ಅಲ್ಲಿನವರಿಗೆ ಅದರ ಬೆಲೆ ಖಂಡಿತ ಗೊತ್ತಿಲ್ಲ ಬಿಡಿ. ನಾನಂತೂ ಡಿಸೆಂಬರಿನ ಅಲ್ಲಿನ ಛಳಿಗಾಲದ ರಾತ್ರಿ ಹಾಗೂ ಹಗಲು ಯಾವುದೇ ಹೀಟರ್ ಅಥವಾ ಏರ್‌ಕಂಡೀಷನರ್ ಇಲ್ಲದೇ ಕಳೆಯಬಹುದಾದಂಥ ಪರಿಸ್ಥಿತಿ ಯಾವತ್ತಿದ್ದರೂ ಮನಸ್ಸಿಗೆ ಮುದ ನೀಡುವ ಅನುಭವವೇ ಹೌದು. ಹವಾಮಾನದ ಜೊತೆಗೆ ನಮ್ಮವರು, ತಮ್ಮವರು, ನಮ್ಮಂತೇ ಇರುವವರು, ನಮ್ಮ ಜೊತೆ ಒಡನಾಡುವವರು, ನಮ್ಮ ಸಂಸ್ಕೃತಿ, ಸಂಸ್ಕಾರಗಳ ಹಿನ್ನೆಲೆ ಇರುವವರು - ಮೊದಲಾಗಿ ಇಡೀ ನಾಡನ್ನೇ ’ಯಾಕೆ ಹಿಂತಿರುಗಿ ಹೋಗಬೇಕು?’ ಎನ್ನುವ ಪ್ರಶ್ನೆಗೆ ಪಣವಾಗಿ ಒಡ್ಡಬಹುದು. ಆದರೆ ’ನಮ್ಮೂರು-ನಮ್ಮ ಜನ’ ಎನ್ನುವುದು ಪ್ಲಸ್ ಪಾಯಿಂಟ್ ಹೇಗೋ ಹಾಗೇ ಮೈನಸ್ಸ್ ಕೂಡ ಆಗಬಹುದು ಎನ್ನುವುದು ವಿಪರ್ಯಾಸವಲ್ಲದೇ ಮತ್ತಿನ್ನೇನು!

ಒಂದು ದಶಕಕ್ಕಿಂತ ಹೆಚ್ಚು ನ್ಯೂಕ್ಲಿಯರ್ ಫ್ಯಾಮಿಲಿಯಾಗಿ ಬದುಕಿಕೊಂಡಿದ್ದವರಿಗೆ (ಅಥವಾ ಅದನ್ನೇ ಬದುಕು ಎಂದು ನಂಬಿಕೊಂಡಿದ್ದವರಿಗೆ) ಧಿಡೀರನೇ ಮನೆಯ ಬಾಗಿಲನ್ನು ಬಡಿದು ಬರುವ ಅಥವಾ ಹಾಗೇ ಒಳನುಗ್ಗುವ ಬಂಧು-ಬಳಗದವರು ಅನಾಗರಿಕರಂತೆ ಕಂಡು ಬರಬಹುದು. ಅಥವಾ ಮದುವೆ-ಮುಂಜಿಗಳಲ್ಲಿ ನಾವು ಡಾಲರ್ ಮಹಾತ್ಮೆಯನ್ನು ಬಲ್ಲವರಾದರೂ ನಮ್ಮ ಎದುರೇ ಗುಲಗಂಜಿ ಬಂಗಾರಕ್ಕೆ ಕಿತ್ತು ತಿನ್ನುವ ಜಗಳವಾಗಬಹುದು. ’ನಾನು ಸತ್ತರೂ ನಿಮ್ಮ ಮನೆಯಲ್ಲಿ ನೀರು ಕುಡಿಯಲ್ಲ...’ ಎನ್ನುವ ವರಸೆಯೂ; ’ನೀನು ಯಾರ ಮನೆಗೆ ಹೋದ್ರೂ ಅವರ ಮನೆಗೆ ಮಾತ್ರ ಹೋಗಬೇಡ...’ ಎನ್ನುವ ಹಕ್ಕೀಕತ್ತೂ...ಹೀಗೆ ಅನೇಕಾನೇಕ ಅಗೋಚರ ಅವ್ಯಕ್ತ ಹಾಗೂ ಅಮೂರ್ತ ಮಾನವೀಯ ಸಂಬಂಧಗಳ ದರ್ಶನದ ಓವರ್‌ಲೋಡ್ ಆಗಿಬಿಡಬಹುದು. ಇವೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪರಿಸರ-ಪ್ರೈವಸಿ ಎಂಬುದರ ಬುಡವನ್ನೇ ಅಲುಗಾಡಿಸುವ ಘಟನೆಗಳು ನಡೆಯಬಹುದು. ಅಥವಾ ’ಬೆಂಡೇಕಾಯ್, ಸೋರೇಕಾಯ್...’ ಎಂದು ಬೀದಿಯಲ್ಲಿ ತರಕಾರಿ ಮಾರುವವರ ತಾರಕ ಸ್ವರದಿಂದ ಹಿಡಿದು ವಾಹನಗಳ ಹಾರ್ನ್‌ನಿಂದ ಕಮ್ಮ್ಯೂನಿಕೇಟ್ ಮಾಡುವ ಅಲ್ಲಿನ ವಾತಾವರಣ ಶಬ್ದಮಾಲಿನ್ಯವಾಗಿ ಕಾಡಬಹುದು. ಇವೆಲ್ಲದರ ಜೊತೆಯಲ್ಲಿ ಓವರ್‌ಲೋಡ್ ಆಗಿ ಓಡುವ ವಾಹನಗಳಿಂದ ಹಿಡಿದು ಲಂಗು-ಲಗಾಮಿಲ್ಲದ ಫ್ಯಾಕ್ಟರಿಗಳ ಹೊಗೆ ನಮಗೆ ಉಸಿರುಕಟ್ಟಿಸಬಹುದು. ಭಾರತದಲ್ಲಿ ಜನಸಂಖ್ಯೆ ಹೆಚ್ಚು, ಈ ಹೆಚ್ಚಿನ ಜನಸಂಖ್ಯೆ ಯಾವುದೇ ಒಂದು ಸಮಸ್ಯೆಗೂ ಅದರದ್ದೇ ಆದ ಒಂದು ಹೊಸ ಆಯಾಮವನ್ನು ಸೃಷ್ಟಿಸಬಲ್ಲದು. ಹೀಗೇ...ಅನೇಕಾನೇಕ ನೆಗೆಟಿವ್ ಕಾಂಟೆಕ್ಸ್ಟ್‌ಗಳನ್ನು ತೋರಿಸಿದರೂ ಸಹ ’ವೆದರ್’ ಎನ್ನುವ ಒಂದೇ ಒಂದು ರಾಮಬಾಣಕ್ಕೆ ನಮ್ಮ ಊರನ್ನು ಕ್ಷಣಾರ್ಧದಲ್ಲಿ ಎಲ್ಲಕ್ಕಿಂತ ಹತ್ತಿರವಾಗಿಸಬಲ್ಲ ಶಕ್ತಿ ಇರುವುದಂತೂ ನಿಜ.

ಕೇವಲ ಹವಾಮಾನದ ಬಗ್ಗೆ ನ್ಯೂ ಜೆರ್ಸಿಯಲ್ಲಿ ಈ ಕಡುವಿಂಟರಿನ ನಡುವೆ ಬೆಚ್ಚಗೆ ಕುಳಿತು ಬರೆಯೋದು ದೊಡ್ಡ ವಿಷಯವಲ್ಲ. ಜೊತೆಗೆ ನಾರ್ಥ್ ಈಸ್ಟ್ ಬಿಟ್ಟು ಈ ದೇಶದ ದಕ್ಷಿಣ ದಿಕ್ಕಿಗೆ ಮುಖ ಮಾಡಿ ನೋಡಿದರೆ ಅಲ್ಲಿ ಇಷ್ಟು ಕೆಟ್ಟ ಹವಾಮಾನ ಇಲ್ಲ. ವಾರ್ಮರ್ ಕ್ಲೈಮೇಟ್ ಬೇಕು ಎಂದರೆ ಫ್ಲೋರಿಡಾಗೆ ಹೋದರೆ ಆಗದೇ? ಬಹಳ ಸುಲಭವಾದ ಪ್ರಶ್ನೆ ಆದರೆ ಅದಕ್ಕೆ ಉತ್ತರ ಅಷ್ಟೊಂದು ಸುಲಭವಲ್ಲ. ಪ್ರತೀವರ್ಷ ಹರಿಕೇನ್‌ಗಳು ಬಂದರೂ, ಸುಂಟರಗಾಳಿ ಸುಳಿದರೂ, ಏನೇ ಹಾನಿ ಆದರೂ ಎಷ್ಟೋ ಕುಟುಂಬಗಳು ಅದೇ ಪ್ರದೇಶದಲ್ಲಿ ನೆಲೆಸೋದಿಲ್ಲವೇನು? ವೆದರ್ ಒಂದೇ ಕಾರಣವೆಂದರೆ ಇವತ್ತು ವಿಂಡೀಸಿಟಿ ಶಿಕಾಗೋ ಈ ಛಳಿಗಾಲದಲ್ಲಿ ನಿರ್ಜನಪೀಡಿತವಾಗಬೇಕಿತ್ತು. ಪ್ರತೀವರ್ಷ ಆರು ಅಡಿಗಳಷ್ಟು ಸ್ನೋ ಬಂದ ಬಫೆಲೋ ನಗರದಿಂದ ಎಲ್ಲರೂ ಗುಳೇ ಹೊರಡಬೇಕಿತ್ತು...ಹಾಗಾಗೋದಿಲ್ಲ. ಕರ್ಮವನ್ನು ಅರಸಿಬಂದ ನಮಗೆ ಒಂದು ಒಳ್ಳೆಯ ಕೆಲಸ ಬೇಕು, ಅದರ ಜೊತೆಯಲ್ಲಿ ನಮಗೆ ಅನುಕೂಲಕರವಾದ ನೆರೆಹೊರೆ ಇರಬೇಕು, ಇತ್ಯಾದಿ ಇತ್ಯಾದಿ. ಇವೆಲ್ಲವನ್ನೂ ಮೀರಿ ಒಮ್ಮೆ ಯಾರಾದರೂ ಅಮೇರಿಕದ ನೆಲದಲ್ಲಿ ಬೇರು ಬಿಡಲು ಆರಂಭಿಸಿದರೆ ಅದನ್ನು ಕಿತ್ತು ಮತ್ತೆ ಇನ್ನೇಲ್ಲೋ ನೆಲೆಸುವುದು ಕಷ್ಟದ ಮಾತೆ ಸರಿ.

***

ನಾವು ಕೇವಲ ಕರ್ಮವನ್ನು ಅರಸಿಬಂದವರು, ಅದರ ಜೊತೆಯಲ್ಲಿ ಪ್ರಾಸ್ಪೆರಿಟಿ ಕೂಡ. ಮುಂದಿನ ಹತ್ತು ವರ್ಷಗಳಲ್ಲಿ ನಮ್ಮನ್ನು ನಾವು ರಿಡಿಫೈನ್ ಮಾಡಬೇಕಾದ ಅಗತ್ಯವಿದೆ. ನಿಧಾನವಾಗಿ ಮುವತ್ತರ ಮಡಿಲಿನಿಂದ ಜಾರಿ ನಲವತ್ತರ ಹರೆಯಕ್ಕೆ ನನ್ನಂಥವರು ಬೀಳತೊಡಗುತ್ತೇವೆ. ಒಂದು ಕಾಲದಲ್ಲಿ ’ರಿಟೈರ್‌ಮೆಂಟ್ ಎಂದರೆ ನಮಗಲ್ಲ...’ ಎನ್ನುವ ಆಟಿಟ್ಯೂಡ್ ಇಟ್ಟುಕೊಂಡವರಿಗೆ ಈಗ ಮಾರ್ಕೆಟ್ಟುಗಳ ಏಳುಬೀಳುಗಳಲ್ಲಿ ಬಳಲಿದ ಮೇಲೆ ರಿಟೈರ್‌ಮೆಂಟ್ ಎನ್ನುವುದು ಮರೀಚಿಕೆಯಾಗದಿರುವಂತೆ ನೋಡಿಕೊಳ್ಳುವುದು ಅಗತ್ಯವಾಗುತ್ತದೆ. ನಮ್ಮ ಮಕ್ಕಳು ಬೆಳೆದು ದೊಡ್ಡವರಾದಂತೆ ನಮ್ಮ ಮೂಲ ಸಂಸ್ಕಾರ-ಸಂಸ್ಕೃತಿಗಳು ದಿನನಿತ್ಯದ ಅಗತ್ಯಗಳಲ್ಲೊಂದಾಗುತ್ತವೆ. ಹಣವನ್ನು ಕೂಡಿಡುವುದರ ಜೊತೆಗೆ ’ಇನ್ನು ಮುಂದೆ ಹೇಗೋ?’ ಎನ್ನುವ ಹೆದರಿಕೆ ಸೇರಿಕೊಂಡು ಕನ್ಸರ್‌ವೆಟಿವ್ ಮೈಂಡ್ ಜಾಗೃತವಾಗುತ್ತದೆ.

ಇವೆಲ್ಲ ಚಿಂತೆಗಳು ಯಾವತ್ತಿದ್ದರೂ ಇರೋವೆ, ದಿನೇದಿನೇ ಮನದಾಳದಲ್ಲಿ ಖಾಲಿಯಾಗುವ ದೂರದ ಭಾರತದ ನೆನಪು ನಾಸ್ಟಾಲ್ಜಿಯಾ ಆಗಿ ಹೋಗುತ್ತಾ ಸ್ಥಳೀಯ ಅನಿವಾಸಿ ಕರ್ಮಗಳು ಬೆನ್ನಿಗೆ ಅಂಟಿಕೊಂಡು ಹೊರೆ ಯಾವತ್ತಿಗೂ ತೂಕವಾಗೋದು ಇದ್ದೇ ಇದೆ, ಇವೆಲ್ಲದರ ನಡುವೆಯೂ ನಗುವ ಅಗತ್ಯವಿದೆ, ಸಹಜವಾಗಿ ಬದುಕುವ ತುಡಿತವಿದೆ. ಹಗುರವಾಗಬೇಕು, ಲಘುವಾಗಬೇಕು ಎಂದುಕೊಳ್ಳುತ್ತಾ ಅನಿವಾಸಿ ಮನ ಅಲ್ಲಿಯ ಹಳೆಯ ಹಾಗೂ ಇಲ್ಲಿಯ ಹೊಸ ತಲೆಮಾರುಗಳಿಗೆ ಬೆಸೆಯುವ ಕೊಂಡಿಯಾಗುತ್ತದೆ. ತನ್ನೊಳಗಿನ ತುಮುಲ-ತುಡಿತಗಳನ್ನು ಹತೋಟಿಯಲ್ಲಿಟ್ಟುಕೊಂಡೇ ಮುಂದಿನ ಸಂತತಿ ತನ್ನಂತಾಗದು ಎಂದು ಮಮ್ಮಲ ಮರಗುತ್ತದೆ, ಇವೆಲ್ಲದರ ಜೊತೆಯಲ್ಲಿ ಅಲ್ಲಿಯವರಿಗೆ ನಾವು "ಆಗಿ" ಬರಲಿಲ್ಲ ಎನ್ನುವ ಚಿಂತೆ ಕೊರೆಯತೊಡಗುತ್ತದೆ.

Friday, November 13, 2009

ಗೆಲುವಾಗೆಲೆ ಅನಿವಾಸಿ ಮನ…

ಅನಿವಾಸಿ(ಗಳ) ಮನದಲ್ಲೇನಿರುತ್ತೆ, ಅದರ ಆಳ-ವಿಸ್ತಾರವೇನು? ಅದರ ಮಿತಿಗಳೇನು ಎಂದು ಯೋಚಿಸುತ್ತಾ ಹೋದರೆ ಅದೊಂದು ಅಪರಿಮಿತ ಆವರಣವನ್ನೇ ಹೊರಹಾಕಿ ಬಿಡುತ್ತೆ.   ಅನಿವಾಸಿತನ ಅನ್ನೋದು ಲೋಕಲ್ ಆಗಿದ್ದವರಿಗೆ ಗ್ಲೋಬಲ್ ಪರಿಜ್ಞಾನ ಮೂಡಿಸುತ್ತೆ, ಜಾಗತೀಕರಣ, ಉದಾರೀಕರಣ ಅದೂ-ಇದೂ ಅನ್ನೋ ಹೊಸ ಕಾಯಕಲ್ಪಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಮಾಡುತ್ತೆ, ಜೊತೆಗೆ ಬೇಡವಾದ ಹಲವನ್ನು ತಂದು ತಲೆಯೊಳಗೆ ತುಂಬುತ್ತೆ.

 

ಅನಿವಾಸಿತನದ ಇತಿ-ಮಿತಿಗಳು ವ್ಯಕ್ತಿಗತವಾದವುಗಳು, ನನ್ನ ಮಟ್ಟಿಗೆ ಹಳೆಯ ಜೀಪ್ ಒಂದಕ್ಕೆ ಎತ್ತರದ ಹೊಸ ಚಕ್ರಗಳನ್ನು ಕೂರಿಸಿ ಕುದುರೆ ಸವಾ ಮಾಡಿಸಿದಂತೆ ಒಮ್ಮೊಮ್ಮೆ ನನ್ನ ಚಿಕ್ಕತನವನ್ನು ದೊಡ್ಡ ಪ್ರಮಾಣದಲ್ಲಿ ಅಳತೆ ಮಾಡಲಾಗಿದೆ.  ಇಷ್ಟು ವರ್ಷ ಇದ್ದು ಅದ್ಯಾವ ಸಂಗೀತ/ಹಾಡುಗಳನ್ನು ಅದೆಷ್ಟೇ ಬಾರಿ ಕೇಳಿ ನೋಡಿದರೂ ನಮ್ಮ ನೆಚ್ಚಿನ ಭಾವಗೀತೆಗಳು ನಮ್ಮನ್ನು ಜೀವನ ಪರ್ಯಂತ  ಕೂಡಿಕೊಳ್ಳುವ ಹಾಗೆ, ನಮ್ಮ ನೆಚ್ಚಿನ ಜಾನಪದಗೀತೆಗಳು ಹಳೆಯ ಸ್ನೇಹಿತರಾದ ಹಾಗೆ, ಎಷ್ಟೇ ಹೊಸ ಚಿತ್ರಗಳು ಬಂದರೂ ಹಳೆಯ ಗೀತೆಗಳು ನೆನಪಿನಲ್ಲಿ ಉಳಿಯುವ ಹಾಗೆ ಈ ಇಂಗ್ಲೀಷ್ ಸಾಹಿತ್ಯವಾಗಲೀ, ಸಂಗೀತವಾಗಲೀ ಉಳಿಯೋದೇ ಇಲ್ಲ.  ಮೊದಲ ಜನರೇಷನ್ನಿನ ನನಗೆ ಮಾತ್ರ ಹೀಗಾಗಬಹುದು, ಇಲ್ಲಿಯೇ ಹುಟ್ಟಿ ಬೆಳೆದ ನಂತರದ ಜನರೇಷನ್ನಿನ ಅಭಿರುಚಿಗಳು ಬೇರೆ ಇರಬಹುದು.

 

ಆಫೀಸಿನಲ್ಲಿನ ಸಹೋದ್ಯೋಗಿಗಳ ಸಂಖ್ಯೆ ನಮ್ಮ ಸ್ನೇಹಿತರ ಗುಂಪನ್ನು ಸೇರಲಾರದು, ಕೆಲಸದ ವಿಚಾರವನ್ನು ಹೊರತು ಪಡಿಸಿ ಆಟೋಟದ ವಿಚಾರದಲ್ಲಾಗಲೀ, ಹೊರಗಡೆಯ ಇನ್ಯಾವುದೇ ವಿಷಯದಲ್ಲಾಗಲೀ ನಮ್ಮನ್ನು ನಾವು ಕನೆಕ್ಟ್ ಮಾಡಿಕೊಳ್ಳಲಾರದಾಗುತ್ತೇವೆ.  ನಾವೂ ನೋಡಿದ, ನೋಡುವ ಟಿವಿ ಕಾರ್ಯಕ್ರಮಗಳು ಯಾವಾಗಲೂ ಕ್ಯಾಚ್ ಅಪ್ ಮೋಡ್‌ನಲ್ಲೇ ಇರುತ್ತವೆ.  ಯಾರು ಯಾವ ಆಟದಲ್ಲಿ ಗೆದ್ದರೇನು, ಬಿಟ್ಟರೇನು ಇಲ್ಲಿನ ಸ್ಥಳೀಯ ಸುದ್ದಿಯ ಮುಂದೆ ಪ್ರಜಾವಾಣಿಯ ಮುಖಪುಟದಲ್ಲಿ ಕರ್ನಾಟಕದವರು ಉತ್ತರ ಪ್ರದೇಶದ ಮೇಲೆ ರಣಜಿ ಕಪ್‌ನಲ್ಲಿ ಗೆದ್ದರು ಎಂಬುದು ಇವತ್ತಿಗೂ ಅಪ್ಯಾಯಮಾನವಾಗುತ್ತದೆ.  ಇತ್ತೀಚಿನ ಟ್ವೆಂಟಿ-ಟ್ವೆಂಟಿ ಪ್ರಂದ್ಯಗಳನ್ನು ನಾನು ಫಾಲ್ಲೋ ಮಾಡುತ್ತಿಲ್ಲವಾದರೂ ಅದರ ಸುತ್ತಲಿನ ಸುದ್ದಿಗಳಲ್ಲಿ ಭಾರತ ತಂಡದ ಹೆಸರನ್ನು ಕಣ್ಣುಗಳು ಗೊತ್ತೋ ಗೊತ್ತಿರದೆಯೋ ಹುಡುಕುತ್ತಿರುತ್ತವೆ.

 

ನಾನು ಈವರೆಗೆ ಕಾಲಿಡದ ಎಷ್ಟೋ ಅಂಗಡಿಗಳು ಇಲ್ಲಿವೆ, ಇಲ್ಲಿನವರ ದಿನಬಳಕೆಯ ಅದೆಷ್ಟೋ ಪದಾರ್ಥಗಳು ನನಗೆ ಪರಿಚಯವೇ ಇಲ್ಲವಾಗಿದೆ.  ಹಾಡು, ಸಿನಿಮಾ, ಸಂಸ್ಕೃತಿ, ಸಂಭ್ರಮಗಳನ್ನು ಒಂದಕ್ಕೊಂದು ಕನೆಕ್ಟ್ ಮಾಡಿಕೊಳ್ಳದೇ ಪರದಾಡಿದ್ದಿದೆ.  ನನ್ನಂಥ ಅನಿವಾಸಿಗಳಿಗೆ ಯಾರಾದರೂ “ನೀವು ಕೆಲಸಕ್ಕ ಹೋಗಬೇಡಿ, ಮನೆಯಲ್ಲೇ ಇರಿ ನಿಮಗೆ ಅಷ್ಟೇ ಸಂಬಳವನ್ನು ಕೊಡುತ್ತೇವೆ”, ಎಂದರೆ ಇನ್ನೇನನ್ನೂ ಮಾಡಲಿಕ್ಕಾಗೇ ಹುಚ್ಚೇ ಹಿಡಿಯುವ ಪ್ರಸಂಗ ಬಂದರೂ ಬರಬಹುದು.

 

****

 

ಮನೆ ಬಿಟ್ಟು, ದೇಶ ಬಿಟ್ಟು, ಭಾಷೆ ಬಿಟ್ಟು, ರೂಢಿ ಬಿಟ್ಟು ಮತ್ತೊಂದು ಕಡೆಗೆ ಹೋಗೋದೆಲ್ಲ ಕೆಟ್ಟದೇನಲ್ಲ.  ಅಲ್ಲಿ-ಇಲ್ಲಿ ಒಂದಿಷ್ಟು ಹೋಗಿ ನೋಡಿದರೆ ತಾನೆ ಗೊತ್ತಾಗೋದು?  ಈ ಬಂದು ಹೋಗುವ ಬದುಕಿಗೆ ಯಾವುದು ತಾತ್ಕಾಲಿಕ, ಯಾವುದು ಶಾಶ್ವತ? ಜಗತ್ತಿನ ಏನೇನೆಲ್ಲ ಸಂಸ್ಕೃತಿಗಳನ್ನೆಲ್ಲ ವಿಸ್ತರಿಸಿ ಕೊನೆಗೆ ಯಾವುದಕ್ಕೆ  ಬೇಕಾದರೂ ತಗುಲಿಕೊಳ್ಳಬಹುದು ತಾನೆ?  ನಮಗೆ ಗೊತ್ತಿರುವ ಒಂದೇ ನೆಲೆಗಟ್ಟಿಗೆ ಅಂಟಿಕೊಂಡೇ ತೊಳಲಾಡುವುದರಲ್ಲಿ ಯಾವ ದೊಡ್ಡಸ್ತಿಕೆ ಇದೆ ಹೇಳಿ?  ನಾವು ನಮ್ಮದನ್ನು ಬಿಟ್ಟು ಹೋಗದಿರುವ ಮನಸ್ಥಿತಿಗೂ ಕಾಂಪ್ಲಸೆನ್ಸಿಗೂ ಏನು ವ್ಯತ್ಯಾಸ್

 

ಏನು ಬೇಕಾದರೂ ಇರಲಿ ಇಲ್ಲದಿರಲಿ, ನಮ್ಮ ಕೆಲಸಗಳನ್ನೆಲ್ಲ ನಾವೇ ಮಾಡಿಕೊಳ್ಳುವ ಪರಿಪಾಟಲೆಗೆ ರೂಢಿ ಮಾಡಿಕೊಂಡಿರೋದು ಹಾಗೂ ನಮ್ಮ ನಮ್ಮ ಸಣ್ಣ ಪ್ರಪಂಚಗಳಲ್ಲೇ ಯಾರ ಉಸಾಬರಿಯೂ ಬೇಡವೆಂದು ನಿರ್ವಂಚನೆಯಿಂದ ಬದುಕೋದು ಅನಿವಾಸಿ ಜೀವನದ ಅವಿಭಾಜ್ಯ ಅಂಗ.  ಎಕ್ಸ್ಟೆಂಡೆಡ್ ಫ್ಯಾಮಿಲಿ ಇರುವವರದ್ದು ಒಂದು ರೀತಿಯ ಬದುಕಾದರೆ ನಮ್ಮ ನ್ಯೂಕ್ಲಿಯರ್ ಕುಟುಂಬಗಳದ್ದು ಮತ್ತೊಂದು ರೀತಿಯ ಬದುಕು.  ಭಾರತದಲ್ಲಿ ಬೆಳೆದು ಬಂದ ಪರಿಣಾಮವಾಗಿ ನಾವು ಹೋಗಿ ಬಂದಲ್ಲೆಲ್ಲ ನಾವು ಕೆಲಸ ಮಾಡುವಲ್ಲೆಲ್ಲ ಅವಕಾಶವಾದಿಗಳಾಗಿ ಕಂಡು ಬರುತ್ತೇವೆ.  ಸ್ಥಳೀಯ ಡಿ.ಎಮ್.ವಿ. ಲೈನ್‌ಗಳು ಇರುಲಿ, ಇಂಡಿಯನ್ ಎಂಬಸಿ ನೂಕು ನುಗ್ಗಲಾಗಲೀ ನಮಗ್ಯಾರೀಗೂ ಹೊಸತು ಎನ್ನಿಸುವುದಿಲ್ಲ.  ಟ್ರಾಫಿಕ್ ಜಾಮ್ ಆದಾಗಲೆಲ್ಲ ಮನಸ್ಸು ಅಡ್ಡ ದಾರಿ ಹುಡುಕುತ್ತಲೇ ಇರುತ್ತದೆ.  ಇದ್ದುದರಲ್ಲೇ ಅಡ್ಜಸ್ಟ್ ಮಾಡಿಕೊಂಡು ಬೆಳೆದು ಬಂದ ಪರಿಣಾಮ ಎಷ್ಟೇ ಇದ್ದರೂ ಕಡಿಮೆಯಲ್ಲೇ ಬದುಕುವುದು ಅಭ್ಯಾಸವಾಗಿ ಬಿಡುತ್ತದೆ.  ಹಾಸಿಗೆ ಇದ್ದಷ್ಟೇ ಕಾಲು ಚಾಚು ಅಂದವರಿಗೆ ನಾವು ಏಕೆ ಎಂದು ಕೇಳಲೇ ಇಲ್ಲ, ನನಗೆ ಇಷ್ಟ ಬಂದಲ್ಲಿ ಮಲಗುತ್ತೇನೆ ಎನ್ನುವುದು ಯಾವತ್ತೂ ಒಂದು ಆಪ್ಷನ್ನ್ ಆಗಿರಲೇ ಇಲ್ಲ.

 

ನಮ್ಮ ಮನೆಯ ಕಸವನ್ನು ಸಂಸ್ಕರಿಸಬಹುದು, ನಮ್ಮ ಕಸ ಮತ್ತೊಬ್ಬರಿಗೆ ಮಾರಕ ಎನ್ನುವುದು ನಮ್ಮ ಕಲ್ಪನೆಯಲ್ಲೇ ಇಲ್ಲ, ಇವತ್ತಿಗೂ ಸಹ ಸ್ಥಳೀ ಟೌನ್‌ಶಿಪ್‌ನವರ್ ಮ್ಯಾಂಡೇಟರಿ ಗಾರ್‌ಬೇಜ್ ಕಲೆಕ್ಷನ್ ಮಾಡದೇ ಹೋದರೆ, ಅದಕ್ಕೆ ತಕ್ಕ ದುಡ್ಡನ್ನು ತೆಗೆದುಕೊಳ್ಳುವುದು ಆಫ್ಷನಲ್ ಆದರೆ ನಾವೆಲ್ಲ ನಮ್ಮ ಗಾರ್‌ಬೇಜ್ ಅನ್ನು ಏನು ಮಾಡುತ್ತಿದ್ದೆವೋ ಎಂದು ಹೆದರಿಕೆಯಾಗುತ್ತದೆ.  ಎಲ್ಲರೂ ಕಸವನ್ನು ತೆಗೆದು ಕನ್ಸರ್‌ವೆನ್ಸಿಗೆ ಸುರಿದು ಕೈ ಕೊಡಗಿ ಕೊಂಡರೆ ಕನ್ಸರ್‌ವೆನ್ಸಿ ಕ್ಲೀನ್ ಮಾಡುವವರಾರು? ಸಾವಿರಾರು ವರ್ಷಗಳಿಂದ ಲಂಚಕೋರತನ ಇದ್ದರೂ, ಲಂಚ ನಿರ್ಮೂಲನ ಎನ್ನುವುದು ಯಾವ ಪೊಲಿಟಿಕಲ್ ಅಜೆಂಡಾದಲ್ಲಿ ಇದೆ ಎಂದು ಮಸೂರವನ್ನು ಇಟ್ಟು ನೋಡಬೇಕಾಗಿದೆ.  ಅದು ಎಂತಹ ಭ್ರಷ್ಟಾಚಾರ ಹಗರಣದಲ್ಲಿ ಭಾಗಿಯಾಗಿ ಸಿಕ್ಕುಬಿದ್ದು ಕೋರ್ಟಿನಲ್ಲಿ ಸಾಭೀತಾದರೂ ಅಂಥವರು ಮತ್ತೆ ಗೆದ್ದು ಬರುವ ಪದ್ಧತಿ ಹಾಗೂ ರೂಢಿ ಇದೆ.  ಇವುಗಳನ್ನು ಭಿನ್ನ ನೆಲೆಯಲ್ಲಿ ನೋಡುವ ದೃಷ್ಟಿಕೋನ ಪರಕೀಯವಾಗುತ್ತದೆ.

 

ಹೀಗೆ ಸರಿ-ತಪ್ಪು, ಅಲ್ಲಿ-ಇಲ್ಲಿ, ಹಾಗೆ-ಹೀಗೆ, ಚಿಕ್ಕದು-ದೊಡ್ಡದು ಎನ್ನುವ ಅನೇಕಾನೇಕ ವಿರೋಧಾಭಾಸಗಳ ಜೊತೆ ಏಗುವುದನ್ನು ಪ್ರವೃತ್ತಿಯನ್ನಾಗಿಸಿಕೊಂಡು ಬದುಕಿನ ಕರ್ಮ ಜೀವನವನ್ನು ನೂಕುವ ಅನಿವಾಸಿ ಮನಕ್ಕೆ ಗೆಲುವಾಗಲಿ!

Sunday, November 01, 2009

ಅದುಮಿಕೊಂಡ ಆಸೆ-ಆತಂಕ

B&H ಪ್ರೊಫೆಷನಲ್ ಕ್ಯಾಟಲಾಗ್ ಇಟ್ಟುಕೊಂಡು ಒಂದೊಂದೇ ಕೆಟಗರಿಯನ್ನು ನೋಡುತ್ತಾ ಇದ್ದಂತೆಲ್ಲಾ ಏನೇನ್ನನ್ನೆಲ್ಲ ಮಾಡಬಹುದು ಮಾಡಬಹುದಿತ್ತು ಎನ್ನಿಸಿತು. ಪ್ರೊಫೆಷನ್ ಆಡಿಯೋ, ವಿಡಿಯೋ, ಆಪ್ಟಿಕಲ್, ಕಂಪ್ಯೂಟರ್, ಸ್ಟೋರೇಜ್, ಕ್ಯಾಮೆರಾ...ಹೀಗೆ ವಿಧ ವಿಧವಾದ ವಸ್ತುಗಳನ್ನೆಲ್ಲ ನೋಡುತ್ತಿದ್ದ ಹಾಗೆ, ಅಯ್ಯೋ ಅದನ್ನು ಮಾಡಬಹುದಿತ್ತು, ಇದನ್ನು ಮಾಡಬಹುದಿತ್ತು...ಎನ್ನಬಹುದಾದ ಆಸೆಗಳೆಲ್ಲವೂ ಅದೆಲ್ಲೋ ಅದುಮಿಟ್ಟು ಹೊರಗೆ ಬಿಟ್ಟ ಸ್ಪ್ರಿಂಗಿನಂತೆ ತಮ್ಮೊಳಗಿನ ಪ್ರಚನ್ನ ಶಕ್ತಿಯನ್ನು ತೋರ್ಪಡಿಸತೊಡಗಿದವು.

ಟರ್ಮಿನಲ್ ಕಾಯಿಲೆಗೊಳಗಾದ ಕ್ಯಾನ್ಸರ್ ರೋಗಿಯ ಮನದಾಳದ ಆಸೆಗಳಂತಲ್ಲದಿದ್ದರೂ ಪ್ರತಿಯೊಬ್ಬರಿಗೂ ಅವರವರೊಳಗೆ ಮೂಲೆಗುಂಪು ಮಾಡಿದ ಅದೆಷ್ಟೋ ಮನದಾಳದ ಆಮಿಷಗಳಿದ್ದಾವು: ಅದು ಫೋಟೋ ತೆಗೆಯುವ ಹವ್ಯಾಸವಾಗಿರಬಹುದು, ಚಿತ್ರಕಲೆಯಾಗಿರಬಹುದು, ಸಂಗೀತದ ಸಾಧನೆಯ ವಿಷಯವಾಗಿರಬಹುದು, ಪುಸ್ತಕ ಬರೆದು ಪ್ರಕಟಿಸುವ ಹುನ್ನಾರವಿರಬಹುದು, ನಾಟಕ-ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಇರಬಹುದು, ಮ್ಯಾರಥಾನ ಓಡುವ ಕನಸಿರಬಹುದು, ದೊಡ್ಡ ಉದ್ಯಮಿಯಾಗುವ ಬಯಕೆ ಇರಬಹುದು, ಅಥವಾ ಊರಿನ ಪಂಚಾಯತಿಯ ಮುಖಂಡನೋ ದೊಡ್ಡ ರಾಜಕೀಯ ವ್ಯಕ್ತಿಯೋ...ಇನ್ನೂ ಏನೇನೋ ಕನಸುಗಳಿರಬಹುದು.

ನಮಗೆಲ್ಲ ಹೀಗೆ ಒಂದೊಂದು ಸಾಫ್ಟ್ ಕಾರ್ನರ್ ಇದೆ, ನಮ್ಮ ದಿನನಿತ್ಯದ ಗೊಂದಲವನ್ನು ಬದಿಗಿಟ್ಟು ಯಾವುದಾದರೊಂದು ರಿಸಾರ್ಟ್‌ನ ಹಾಸುಗಲ್ಲಿನ ಮೇಲೆ (ಅಥವಾ ಬೆಂಚ್‌ನ ಮೇಲೆ) ಮಲಗಿ ಅಗಾಧವಾದ ಮುಗಿಲನ್ನು ನೋಡುತ್ತಾ ಆತ್ಮಾವಲೋಕನವನ್ನು ಮಾಡಿಕೊಳ್ಳುತ್ತಾ ಇದ್ದರೆ ಒಂದು ದಿನವೋ ಅಥವಾ ಒಂದು ವಾರದ ನಂತರವಾದರೂ ಹೀಗೆ ಮಾಡಬೇಕು ಅಥವಾ ಮಾಡಬಹುದಿತ್ತು ಎನ್ನುವ ಅನೇಕಾನೇಕ ಯೋಚನೆಗಳು ಖಂಡಿತ ಬಂದೇ ಬರುತ್ತವೆ. ಆಂತೊನಿ ಬೋರ್ಡೇನ್‌ನ ಟ್ರಾವೆಲ್ ಅನುಭವದ ಬಗ್ಗೆ ಬರೆಯುತ್ತಾ ಮರಳುಗಾಡು ನಮಗೆ ಹೇಗೆ ಅತಿ ಅಗತ್ಯವಾದ ಧ್ಯಾನಕ್ಕೆ ತಕ್ಕುನಾದ ನಿಶ್ಯಬ್ದವಾದ ಒಂದು ನೆಲೆಯನ್ನು ಒದಗಿಸುವ ಬಗ್ಗೆ ಬರೆದಿದ್ದೆ. ಒಂದಲ್ಲ ಒಂದು ದಿನ ನಮ್ಮ ನಮ್ಮ ಮನಸ್ಥಿತಿಯನ್ನು ಇಂತಹ ಒಂದು ಸೈಲೆನ್ಸ್‌ಗೆ ಗುರಿಮಾಡಿ ಅದರಿಂದ ಏನು ಹೊರಬಂದೀತು ಎಂದು ಕಾದು ನೋಡುವುದು ಒಳ್ಳೆಯ ಅನುಭವವಾದೀತು.

ನನ್ನ ಹತೋಟಿಯಲ್ಲಿದ್ದ ಒಂದು ಘಂಟೆಯ ಸಮಯದಲ್ಲಿ ಸುಮಾರು ಐನೂರು ಪುಟಗಳ ಕ್ಯಾಟಲಾಗ್ ಅನ್ನು ಸೆಕ್ಷನ್ನ್‌ ನಿಂದ ಸೆಕ್ಷನ್ನ್‌ಗೆ ತಿರುವಿ ಹಾಕಿದ್ದೇ ಬಂತು: ಅದರ ಪರಿಣಾಮವಾಗಿ ನನ್ನ ಕನಸಿನ ರೆಕಾರ್ಡಿಂಗ್ ಸ್ಟುಡಿಯೋಗೆ ಬೇಕಾದ ಪರಿಕರಗಳು ಕಂಡು ಬಂದವು, ಹೆಚ್ಚಿನ ಎಕ್ಸ್‌ಟರ್ನಲ್ ಕಂಪ್ಯೂಟರ್ ಸ್ಟೋರೇಜ್ ಕಾಣಿಸಿತು, ಹಗಲು-ರಾತ್ರಿ ನೋಡಬಹುದಾದ ಬೈನಾಕ್ಯುಲರ್ ಮನದಲ್ಲಿ ಒಂದು ಕ್ಷಣ ನಿಂತಿತು, ಎಲ್ಲಾ ಮ್ಯೂಸಿಕ್ ಚಾನೆಲ್ಲಿನ ಲವಲೇಶಗಳನ್ನೂ ಬಿಡಿಬಿಡಿಯಾಗಿ ಹೊರಗೆ ಹಾಕುವ ಸುಂದರ ಹೋಮ್ ಥಿಯೇಟರ್ ಸಿಸ್ಟಮ್ಮ್‌ಗಳು ಕಂಡು ಬಂದವು, ನೂರೈವತ್ತು-ಇನ್ನೂರು ವ್ಯಾಟ್ ಪವರ್ ಇರುವ ಸ್ಪೀಕರುಗಳು ಕಂಡುಬಂದವು...ಹೀಗೆ ಪಟ್ಟಿ ಬೆಳೆಯುತ್ತಲೇ ಹೋಯಿತು.

ಇನ್ನು ಈ ಎಕ್ಸ್‌ಪ್ಲೋರೇಷನ್ನಿನ್ನ ಮುಂದುವರಿದ ಭಾಗವಾಗಿ ಒಂದೆರಡು ಅಂಶಗಳ ಬಗ್ಗೆ ಇಂಟರ್ನೆಟ್ಟಿನಲ್ಲಿ ರಿಸರ್ಚ್ ಮಾಡಿದ್ದೂ ಆಯಿತು...ಒಂದು ಘಂಟೆಯ ನಂತರ ಪ್ರಚನ್ನ ಶಕ್ತಿಯ ಬಲದಿಂದಾಗಿ ಚಿಮ್ಮಿದ ಆಸೆ-ಆಕಾಂಕ್ಷೆಗಳು ಮತ್ತೆ ಗೂಡು ಸೇರಿಕೊಂಡವು. ಅದು ಮಾಡಬಹುದು-ಇದು ಮಾಡಬಹುದು ಎನ್ನುವ ಹೇಳಿಕೆಯ ಮೊದಲೇ ಅದು ಮಾಡಬೇಕು-ಇದು ಮಾಡಬೇಕು (ಭಾನುವಾರ ಮುಗಿಯುವುದರೊಳಗೆ) ಎನ್ನುವುದು ಬಲವಾಗತೊಡಗಿತು.

***
ಇಲ್ಲಿನ ಕಿರಾಣಿ ಅಂಗಡಿಯಲ್ಲಿ ನೋಡಿ-ಕೇಳಿದ್ದು: ಮಧ್ಯಮ ವಯಸ್ಸಿನ ಕಕೇಷಿಯನ್ ದಂಪತಿಗಳಿಬ್ಬರು ಅಂಗಡಿಯಲ್ಲಿ ಮಾರಟಕ್ಕೆ ಇಟ್ಟ ರಕ್ಕಸಕಳ್ಳಿಯನ್ನು (Aloe-vera) ನೋಡಿ:
"ಇದನ್ನು ಏತಕ್ಕೆ ಮತ್ತು ಹೇಗೆ ಬಳಸುತ್ತಾರೆಂದು ನಿನಗೆ ಗೊತ್ತೇನು?"
"ಇಲ್ಲ..."
"May be we will give it a shot in our next life..."

***
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು!

Thursday, March 19, 2009

ಮೂರುಗಾಲಿ ಆಟಿಕೆ

ನಮ್ಮ ಊರುಗಳಲ್ಲಿ ಒಂದೆರೆಡು ವರ್ಷದ ಮಕ್ಕಳಿಗೆ ಆಡಿಕೊಳ್ಳಲು ಮರದಲ್ಲಿ ಮಾಡಿದ ಮೂರುಗಾಲಿಯ ಆಟದ ಸಾಮಾನು ಸಿಗುತ್ತಿತ್ತು. ಬಹಳ ಸರಳವಾಗಿ ಜೋಡಿಸಲ್ಪಟ್ಟ ಈ ಆಟಿಕೆ ಅಂಬೆ ಹರಿಯುವ ಮಕ್ಕಳಿಗೆ ಓಡಾಡಲು ಅನುಕೂಲ ಮಾಡಿಕೊಡುತ್ತಿತ್ತು. ಈ ಆಟದ ಸಾಮಾನು ಈಗಲೂ ಅಲ್ಲಿ ಸಿಗುತ್ತೋ ಬಿಡುತ್ತೋ ಗೊತ್ತಿಲ್ಲ, ಈಗೆಲ್ಲ ನಮ್ಮೂರುಗಳಲ್ಲೂ ಮೆಟ್ಟೆಲ್, ಫಿಷರ್ ಪ್ರೈಸ್ ಆಟಿಕೆಗಳು (made in china) ದ ಹಾವಳಿ!

ಇಲ್ಲಿ ನನ್ನ ಹತ್ತು ತಿಂಗಳ ಮಗನಿಗೆ ನಾನೂ ಒಂದು ಹಾಗಿರುವ ಆಟಿಕೆಯೊಂದನ್ನು ಮಾಡಬಾರದೇಕೆ ಎಂಬ ಆಲೋಚನೆ ಬಂದಿದ್ದೇ ತಡ, ಸಣ್ಣದೊಂದು ಸ್ಕೆಚ್ ಹಾಕಿಕೊಂಡೆ. ಇಲ್ಲಿನ ಹೋಮ್ ಡಿಪೋ, ಲೋವ್‌ಸ್ ಅಂಗಡಿಗಳಲ್ಲಿ ಮರ-ಮುಗ್ಗಟ್ಟು ಬಹಳ ಅಗ್ಗವಾಗಿ ಸಿಗುವುದರ ಜೊತೆಗೆ ಅವರು ನಿಮಗೆ ಯಾವ ರೀತಿ ಬೇಕೋ ಹಾಗೆ ಅದನ್ನು ಕತ್ತರಿಸಿಯೂ ಕೊಡುತ್ತಾರೆ. ಅಲ್ಲದೆ ಬೇರೆ ಬೇರೆ ರೀತಿಯ ಸೈಜುಗಳೆಲ್ಲ (ರೀಪೀಸ್) ಒಂದೇ ಸೂರಿನಡಿ ಸಿಗುತ್ತವೆಂದರೆ ಮತ್ತಿನ್ನೇನು ಬೇಕು. ಸರಿ ಮರದ ರೀಪುಗಳೇನೋ ಸಿಗುತ್ತವೆ, ಈ ಗಾಲಿಗಳನ್ನು ಎಲ್ಲಿಂದ ತರುವುದು? ಹಾಗೆ ಅಂದುಕೊಂಡ ಬೆನ್ನ ಹಿಂದೇ ಅದೇ ಅಂಗಡಿಯಲ್ಲಿ ಗಾಲಿಗಳೂ ಸಿಗಬಾರದೇಕೆ ಎನ್ನಿಸಿ ಒಮ್ಮೆ ಹೋಗಿ ನೋಡಿದ್ದೂ ಆಯಿತು. ಇನ್ನೇನು ಮರದ ತುಂಡುಗಳನ್ನು ತಂದು ಹಂತ-ಹಂತವಾಗಿ ಜೋಡಿಸಿ ಒಂದು ವೀಕ್ ಎಂಡಿನ ಅರ್ಧ ದಿನವೊಂದರಲ್ಲಿ ಜೋಡಿಸಿ ನಾನೂ ಒಂದು ಆಟದ ಸಾಮಾನನ್ನು ತಯಾರಿಸಬಾರದು ಎಂದುಕೊಂಡು ಸುಮ್ಮನಾಗಿದ್ದರೆ ಚೆನ್ನಾಗಿತ್ತು, ಆದರೆ ಆಗಿದ್ದೇ ಬೇರೆ.

ನಾನು ಯಾವತ್ತೂ ಕೆಲಸವಾಗುವುದಕ್ಕಿಂತ ಮೊದಲೇ ಅದರ ಬಗ್ಗೆ ಕೊಚ್ಚಿಕೊಳ್ಳೋದು ಹೆಚ್ಚು ಎಂದು ತೋರುತ್ತೆ. ಈ ಆಟಿಕೆಯನ್ನು ಕುರಿತು ನನ್ನ ಹೆಂಡತಿಯ ಜೊತೆ ಹೇಳಿಕೊಂಡಾಗ ಆಕೆ ಪಕಪಕನೆ ನಗಲಾರಂಭಿಸಿದಳು. ಜೊತೆಗೆ ಗಾಯಕ್ಕೆ ಉಪ್ಪು ಸವರುವ ಮಾದರಿಯಲ್ಲಿ ವಾಲ್‌ಮಾರ್ಟ್‌ನಲ್ಲಿ ಇದೇ ರೀತಿಯ ಆಟದ ಸಾಮಾನೊಂದನ್ನು ನೋಡಿದ್ದೇನೆ, ಅದನ್ನು ತರಬಾರದೇಕೆ ಎಂದಳು. ಈ ಅಲ್ಪನ ಕೈಚಳಕಕ್ಕೂ ಆ ವಾಲ್‌ಮಾರ್ಟಿನ ಸಾಧ್ಯತೆ-ಬಾಧ್ಯತೆಗಳಿಗೂ ಎಲ್ಲಿಯ ಸಮ? ಸರಿ ಸುಮಾರು ಅದೇ ದಿನ ಅಥವಾ ಮರುದಿನ ಆಕೆ ಹೋಗಿ ಬಹಳ ಮುದ್ದಾದ ಫಿಷರ್ ಪ್ರೈಸ್ ಆಟದ ಸಾಮಾನೊಂದನ್ನು ತಂದೇ ಬಿಟ್ಟಳು. ಅದರ ಮೂಲ ಬೆಲೆ ಹತ್ತೊಂಭತ್ತು ಡಾಲರ್ ಅಂತೆ, ಅದು ಏಳು ಡಾಲರ್‌ನಲ್ಲಿ ಸೇಲ್‌ ಇದ್ದುದಾಗಿಯೂ ತಿಳಿಸಿದಳು. ನಾನೇ ಅದರ ಪೆಟ್ಟಿಗೆಯನ್ನು ತೆರೆದು ಜೋಡಿಸಿದಾಗ ಒಂದೆರಡು ನಿಮಿಷದಲ್ಲಿ ನಡೆದಾಡುವ ನಾಲ್ಕು ಗಾಲಿಯ, ತನ್ನ ಮೈ ತುಂಬಾ ಸುಂದರವಾದ ಚಿತ್ರವುಳ್ಳ, ಅಲ್ಲಲ್ಲಿ ಅನೇಕ ಆಟದ ಸವಲತ್ತನ್ನು ಒದಗಿಸುವ ಬಣ್ಣಬಣ್ಣದ ಆಟಿಕೆ ತಯಾರಾಯಿತು. ಈ ಕಡೆ ನನ್ನ ಸ್ಕೆಚ್ಚು, ಪೆಚ್ಚು ಮೋರೆಯೂ ಎರಡೂ ಆ ಆಟಿಕೆಯ ಸ್ಟರ್ಡಿ ಕನ್ಸ್‌ಟ್ರಕ್ಷನ್ನನ್ನು ನೋಡಿ ಚಕಿತಗೊಂಡವು. ನಾನು ಮೊಳೆ ಅಥವಾ ಸ್ಕ್ರೂ ಹೊಡೆದು ಮಾಡಬೇಕೆಂದಿದ್ದ ಮರದ ಆಟದ ಸಾಮಾನು ಇಲ್ಲಿ ಮೊಳೆಯೇ ಇಲ್ಲ ಚೈಲ್ಡ್ ಪ್ರೂಫ್ ಪ್ಲಾಸ್ಟಿಕ್ ಆಟಿಕೆಯ ಮುಂದೆ ಯಾವ ತುಲನೆಗೂ ನಿಲುಕದಾಯಿತು.

ನನ್ನ ಮನದಲ್ಲಿ ನೆಲೆನಿಂತಿರುವ ಆ ಮರದ ಮೂರುಗಾಲಿಯ ಆಟಿಕೆ ಇಂದಿಗೆ ಇಲ್ಲದಿರಬಹುದು, ಅದರ ಸಂತತಿ ಕ್ಷೀಣಿಸಿರಬಹುದು ಅಥವಾ ಇಂದಿನ ಪ್ಲಾಸ್ಟಿಕ್ ಗ್ಲೋಬಲ್ ಯುಗದಲ್ಲಿ ನಿರ್ನಾಮವಾಗಿರಬಹುದು. ಆದರೆ ನಾನೇ ಸ್ವತಃ ಸ್ಕೆಚ್ ಹಾಕಿ ಮರವನ್ನು ಜೋಡಿಸಿ ತಯಾರಿಸಿದ ಆಟಿಕೆಯಷ್ಟು ತೃಪ್ತಿ ಈ ಹೊಸ ಫ್ಯಾನ್ಸಿ ಆಟಿಕೆ ನನಗಂತೂ ಕೊಡಲಾರದು. ಆದರೆ ನನ್ನ ಹತ್ತು ತಿಂಗಳ ಮಗನಿಗೆ ಇವು ಯಾವದರ ಪರಿವೆಯೂ ಇಲ್ಲದೆ ತನ್ನ ಹೊಸ ಆಟಿಕೆಯ ಜೊತೆ ಆಟವಾಡುತ್ತಾನೆ, ಜೊತೆಗೆ ಅದು ಮಾಡುವ ಸದ್ದಿಗೆ ಹಾಗೂ ಅದರ ಬಣ್ಣಗಳ ಮೋಡಿಗೆ ಮಾರು ಹೋಗಿದ್ದಾನೆ.

Monday, June 02, 2008

...ಪ್ರಯೋಜನಕ್ಕೆ ಬಾರದ್ದು ಅಂತ ಯಾರಂದೋರು?

ಅನುಭವ ಅನ್ನೋದರ ಲಿಮಿಟೇಷನ್ನ್ ಏನೂ ಅಂತ ನನಗೆ ಹೊಳೆದಿದ್ದು ಇತ್ತೀಚೆಗೆ ಅಂತ್ಲೇ ಹೇಳಬೇಕು, ಯಾರೋ ತಾವ್ ಕಲಿತ ಪಾಠವನ್ನು ಅನುಭವ ಅಂತ ದೊಡ್ಡ ಕರೆದುಕೊಂಡಿದ್ದಿರಬಹುದು, ಅದಕ್ಕೆ ಅದು ಇಲ್ಲದೆ ಯಾವ ಕೆಲ್ಸಾನೂ ಅಷ್ಟು ಸಲೀಸಾಗಿ ಆಗಲ್ಲ, ಒಂದ್ಸರ್ತಿ ಮಾಡಿ (ಹೊಡೆತ ತಿಂದು) ಪಾಠ ಕಲಿತ ಮೇಲೆ ಅದನ್ನೇ ಅನುಭವ ಅಂತ ದೊಡ್ಡದಾಗಿ ಬೋರ್ಡು ಬರೆಸಿ ಹಾಕ್ಕೋಬಹುದು ನೋಡಿ.

ನಮ್ಮನೇಲಿ ಒಂದೆರಡು ಕಿಟಕಿಗಳಿಗೆ ಹೊಸ ಸ್ಕ್ರೀನುಗಳನ್ನು ಹಾಕೋಣ ಅನ್ನೋ ಪ್ರಾಜೆಕ್ಟು ಹಲವಾರು ಕಾರಣಗಳಿಂದ ಮುಂದೂಡಿಕೊಂಡು ಮೊನ್ನೆ ಕೈಗೂಡಿತು ನೋಡಿ. ನಾನೋ ಹುಟ್ಟಿದಾರಭ್ಯ ಗೋಡೆಗೆ ಒಂದು ಮೊಳೆಯನ್ನೂ ಸಹ ಹೊಡೆಯದವನು, ಗೋಡೆಗೆ ಎಲ್ಲಿ ನೋವಾಗುತ್ತೋ ಅನ್ನೋ ಅರ್ಥದಿಂದಲ್ಲ, ಶಾಲೆಯಲ್ಲಿ ಮುಂದಿದ್ದ ಮಕ್ಕಳು ನಾವು ಯಾವತ್ತೂ ಹ್ಯಾಂಡಿಮ್ಯಾನ್ ಸ್ಕಿಲ್ಸ್‌ಗಳನ್ನು ರೂಢಿಸಿಕೊಳ್ಳಲೇ ಇಲ್ಲ. ಇವತ್ತಿಗೂ ಸಹ ಒಂದು ಏಣಿಯನ್ನು ಹತ್ತಿ ನಿಲ್ಲೋದು ಅಂದರೆ ಮುಜುಗರ, ಸಂಕೋಚ ಎಲ್ಲಕ್ಕಿಂತ ಮುಖ್ಯವಾಗಿ ಅದೇನೋ ಹಾಳು ಹೆದರಿಕೆ ಬೇರೆ ಕೇಡಿಗೆ. ಈ ಹ್ಯಾಂಡಿಮ್ಯಾನ್ ಕೆಲ್ಸದ ವಿಚಾರಕ್ಕೆ ಬಂದಾಗ ಒಂದಂತೂ ಗ್ಯಾರಂಟಿಯಾಗಿ ಕಲಿತುಕೊಂಡಿದ್ದೇನೆ - ಆಯಾ ಕೆಲಸಕ್ಕೆ ಸರಿಯಾದ ಟೂಲ್ಸ್ ಅನ್ನು ಇಟ್ಟುಕೊಂಡಿರುವುದು. ನಿಮ್ಮ ಬಳಿ ಸರಿಯಾದ, ಅಳತೆಗೆ ತಕ್ಕ ಟೂಲ್ಸ್ ಇಲ್ಲವೆಂದಾದರೆ ಸುಮ್ಮನೇ ನೀವು ಕೆಲಸಕ್ಕೆ ಕೈ ಹಾಕಿ ಕೆಟ್ಟಿರಿ. ಅದರ ಬದಲು ಸುಮ್ಮನಿರುವುದು ಒಳ್ಳೆಯದು ಇಲ್ಲವೆಂದರೆ ಇನ್ನೊಬ್ಬರಿಂದ ದುಡ್ಡು ಕೊಟ್ಟು ಮಾಡಿಸಿದರಾಯಿತು.

ಒಂದು ಅರವತ್ತೈದು ಡಾಲರ್ ಕೊಟ್ಟು ಆರಡಿ ಎತ್ತರದ ಏಣಿಯನ್ನು ತೆಗೆದುಕೊಂಡಿರದ ಬುದ್ಧಿವಂತನಾದ ನಾನು, ಇರುವ ಕಿಚನ್ ಸ್ಟೆಪ್‌ಸ್ಟೂಲಿನಲ್ಲೇ ಎರಡು ಮೆಟ್ಟಿಲು ಹತ್ತಿ ಭಾರವಾದ ಡ್ರಿಲ್ ಸೆಟ್ ಅನ್ನು ನನ್ನ ಭುಜಕ್ಕಿಂತಲೂ ಎತ್ತರ ಮಟ್ಟದಲ್ಲಿಟ್ಟುಕೊಂಡು ಅದೆಷ್ಟು ಡ್ರಿಲ್‌ಗಳನ್ನು ಕೊರೆಯಲಾದೀತು? ಅದೆಷ್ಟು ಸ್ಕ್ರೂಗಳನ್ನು ಲೀಲಾಜಾಲವಾಗಿ ಒಳಗೆ ಸೇರಿಸಲಾದೀತು? ಇಂತಹ ಕಷ್ಟಕರ ಸನ್ನಿವೇಶಗಳಲ್ಲಿ ನನ್ನ ಬಾಯಿಯಿಂದ ಸಹಸ್ರನಾಮಾರ್ಚನೆ ತನ್ನಷ್ಟಕ್ಕೆ ತಾನೇ ಹೊರಟು ಬರುತ್ತದೆ, ಅದರ ಬೆನ್ನ ಹಿಂದೆ ಸಮಜಾಯಿಷಿ ಕೂಡ:
- ಈ ಸುಡುಗಾಡು ಭಾರತೀಯರೆಲ್ಲ ಚಿಂಕರರು, ಪಕ್ಕದ ಮನೆಯವನು ಆರೂವರೆ ಅಡಿ ಎತ್ತರವಿದ್ದಾನೆ ಅವನೋ ನೆಲದ ಮೇಲೆ ನಿಂತೇ ಬಲ್ಬ್ ಬದಲಾಯಿಸುತ್ತಾನೆ!
(ಭಾರತೀಯರರು ಕುಳ್ಳಕಿರುವುದು ಅವರ ತಪ್ಪೇ? ಪಕ್ಕದ ಮನೆಯವನು ಎತ್ತರವಿರುವುದು ಅವನ ತಪ್ಪೇ?)
- ಈ ಥರ್ಡ್‌ಕ್ಲಾಸ್ ಅಮೇರಿಕದಲ್ಲಿ ಗರಾಜಿನಲ್ಲಿ ಅಲಂಕಾರಕ್ಕಿಡುವ ಏಣಿಯು ಅರವತ್ತೈದು ಡಾಲರ್ರೇ?
(ನಿನಗೆ ಬೇಕಾದರೆ ಹತ್ತೇ ಡಾಲರಿನ ಏಣಿಯನ್ನು ತೆಗೆದುಕೊಂಡು ಬಾ, ಯಾರು ಬೇಡಾ ಅಂದೋರು?)
- ಈ ಕಿಟಕಿಗಳಿಗೆ ಸ್ಕ್ರೀನ್ ಏಕೆ ಹಾಕಬೇಕು? ಅದರಿಂದ ಯಾವ ದೇಶ ಉದ್ದಾರವಾಗುತ್ತದೆ?
(ಹಾಕೋದೇ ಬೇಡ ಬಿಡು, ಯಾರು ಹಾಕು ಅಂತ ಗಂಟುಬಿದ್ದೋರು ಈಗ).

ಮೇಲೆ ಕೈ ಎತ್ತಿ ಹಿಡಿದೂ ಹಿಡಿದೂ ನೋವಾದ ಹಾಗೆ, ಎಂದೂ ಕೀ ಬೋರ್ಡನ್ನೇ ಕುಟ್ಟುತ್ತೇವೆ ಎಂದು ಶಪಥ ತೊಟ್ಟ ಕೈ ಬೆರಳುಗಳು ಯಾವತ್ತೋ ಒಮ್ಮೆ ಸ್ಕ್ರೂ ಡ್ರೈವರ್ರನ್ನು ತಿರುಗಿಸಿ ವ್ಯಥೆ ಪಟ್ಟು ಅವುಗಳ ಆಕ್ರಂದನ ಮುಗಿಲು ಮುಟ್ಟುತ್ತಿರುವ ಹಾಗೆ ಬಸ್ಸಿನ ಗಡಿಬಿಡಿಯಲ್ಲಿ ನಮ್ಮೂರಿನ ದೇವಸ್ಥಾನದ ಅರ್ಚಕರು ಹೈ-ಸ್ಪೀಡ್ ಅರ್ಚನೆ ಮಾಡುವ ಹಾಗೆ ನನ್ನ ಸಹಸ್ರನಾಮ ಹೊಸಹೊಸ ರೂಪವನ್ನು ಪಡೆದುಕೊಳ್ಳುತ್ತದೆ, ಆ ಹೊತ್ತಿನಲ್ಲಿ ಯಾರೇ ಕಣ್ಣಿಗೆ ಬಿದ್ದರೂ, ಏನೇ ಕಂಡರೂ ಅವುಗಳಿಗೆಲ್ಲ ಬೈಗಳು ಗ್ಯಾರಂಟಿ! ಕೊನೆಗೆ ಬೇಸತ್ತು ನನಗೆ ನಾನೆ ಬೈದುಕೊಳ್ಳುವುದೂ ಇದೆ:
- ಒಂದ್ ದಿನಾನಾದ್ರೂ ಚಿಕ್ಕ ವಯಸ್ಸಿನಲ್ಲಿ ಒಂದಿಷ್ಟು ಹ್ಯಾಂಡಿ ಸ್ಕಿಲ್ಸ್‌ಗಳನ್ನು ಕಲಿಯಲಿಲ್ಲ, ಥೂ ನಿನ್ನ ಮುಸುಡಿಗೆ ಇಷ್ಟು ಬೆಂಕಿ ಹಾಕ!
- ಅದೇನ್ ಸ್ಕೂಲ್‌ನಲ್ಲಿ ಕಿಸಿದು ಫಸ್ಟ್‌ಕ್ಲಾಸ್ ಬಂದಿದ್ದು ಅಷ್ಟರಲ್ಲೇ ಇದೆ, ಇವತ್ತಿಗೆ ನೆಟ್ಟಗೆ ಒಂದು ರೂಮಿಗೆ ಬಣ್ಣಾ ಹಚ್ಚೋಕ್ ಬರೋಲ್ವಲ್ಲೋ!
- ಗಂಡಸು ಅಂತ ಮುಖದ ಮೇಲೆ ಮೀಸೆ ಹೊತ್ತ ಮೇಲೆ ಒಂದಿಷ್ಟು ಪ್ರಿಮಿಟಿವ್ ಕೆಲ್ಸಗಳೂ ಬರ್ದೇ ಇದ್ರೆ ಆ ಮೀಸೆಗೆ ಅವಮಾನ ಅಲ್ವಾ?!

ಅಂತೂ ಇಂತೂ ಈ ಸಹಸ್ರನಾಮಾರ್ಚನೆಗಳ ಮಧ್ಯದಲ್ಲೇ (ಕಾಟಾಚಾರಕ್ಕೆ ಎನ್ನುವಂತೆ ಆರಂಭಿಸಿ ಮುಗಿಸಿದ) ಕೈಗೆತ್ತಿಕೊಂಡುದನ್ನು ಮುಗಿಸಿ ಆಯಿತು. ಮೌಂಟ್ ಎವರೆಸ್ಟ್ ಹತ್ತಿ ಇಳಿದ ತೇನ್‌ಸಿಂಗ್ ಕೂಡ ಅಷ್ಟೊಂದು ವ್ಯಥೆ ಪಟ್ಟಿರಲಾರ, ಕೆಲಸ ಮುಗಿಯುವ ಕೊನೆಯಲ್ಲಿ ಕೈ ಬೆರಳುಗಳು ಯಕ್ಷಗಾನದ ಕಾಳಿಂಗ ನಾವುಡರನ್ನು ಮೀರಿ ಭಾಗವತಿಕೆಯನ್ನು ಶುರು ಹಚ್ಚಿಕೊಂಡಿದ್ದವು. ಅದೆಷ್ಟೋ ತಪ್ಪುಗಳು, ಅವುಗಳ ನಡುವೆ ಅಲ್ಪಸ್ವಲ್ಪ ಸರಿಗಳಿಂದ ಹಿಡಿದ ಕೆಲಸವನ್ನೇನೋ ಮಾಡಿದೆ, ಕೊನೆಗೆ ಒಂದಿಷ್ಟು ಅನುಭವವಾಯ್ತು ಬಿಡು ಎಂದು ಒಮ್ಮೆ ತಂಪೆನಿಸಿತಾದರೂ - ಥೂ ಈ ಅನುಭವದ ಮನೆಗಿಷ್ಟು ಬೆಂಕೀ ಹಾಕ! ಅಂತ ಅನ್ನಿಸದೇ ಇರಲಿಲ್ಲ.

***

ನಿಮಗೆ ನನ್ನ ಮಾತಿನ ಮೇಲೆ ನಂಬಿಕೆ ಇರದಿದ್ದರೆ ಟಿವಿಯಲ್ಲಿ ಎಷ್ಟೊಂದು ಲೀಲಾಜಾಲವಾಗಿ ಸೀಲಿಂಗ್ ಪೈಂಟ್ ಮಾಡುತ್ತಾರೆ ಎಂದುಕೊಂಡು ನೀವು ನಿಮ್ಮ ಮನೆಯಲ್ಲಿನ ಒಂದು ಸಣ್ಣ ಕೊಠಡಿಯ ಸೀಲಿಂಗ್ ಅನ್ನು ಪೈಂಟ್ ಮಾಡಲು ಪ್ರಯತ್ನಿಸಿ ನೋಡಿ. ನಿಮ್ಮ ಬಳಿ ಎಂಥ ಅದ್ಭುತ ರೋಲರ್‌ಗಳು ಇದ್ದರೂ (ಪೈಂಟ್ ಹೆಂಗಾದರೂ ಇರಲಿ, ಅದರ ಕಥೆ ಬೇರೆ) ಒಂದು ಛಾವಣಿ ಮುಗಿಯುವ ಹೊತ್ತಿಗೆ ನಿಮ್ಮ ಪುಪ್ಪುಸದಲ್ಲಿನ ಗಾಳಿಯೆಲ್ಲವೂ ಬರಿದಾಗಿ ನೀವು ಇನ್ನೊಂದು ಅರ್ಧ ಘಂಟೆಯಲ್ಲಿ ಕುಸಿದು ಬೀಳುತ್ತೀರಿ ಎಂದೆನಿಸದಿದ್ದರೆ ಖಂಡಿತ ನನಗೆ ತಿಳಿಸಿ. ಸೀಲಿಂಗ್ ಪೈಂಟ್ ಮಾಡುವುದಕ್ಕೆ ಅದೆಷ್ಟು ಅಪ್ಪರ್ ಬಾಡಿ ಸ್ಟ್ರೆಂಗ್ತ್ ಬೇಕು ಎನ್ನುವುದಕ್ಕೆ ನನಗೆ ತಿಳಿದ ಯಾವ ಯುನಿಟ್ಟುಗಳಿಂದಲೂ ಮೆಜರ್ ಮಾಡುವುದಕ್ಕಾಗುತ್ತಿಲ್ಲ, ಅದೇನಿದ್ದರೂ ಅನುಭವದಿಂದಲೇ ತಿಳಿಯಬೇಕು. ಹೀಗೇ ಒಂದು ದಿನ ಪೈಂಟಿಂಗ್ ಪ್ರಾಜೆಕ್ಟ್ ಅನ್ನು ನಮ್ಮ ಅಲೆಕ್ಸಾಂಡ್ರಿಯದ ಮನೆಯಲ್ಲಿ ಕೈಗೆತ್ತಿಕೊಂಡ ನನಗೆ ನಮ್ಮ ಆ ಸಣ್ಣ ಮನೆಯ ಸೀಲಿಂಗ್ ಒಮ್ಮೊಮ್ಮೆ ಅಟ್ಲಾಂಟಿಕ್ ಮಹಾಸಾಗರಕ್ಕಿಂತಲೂ ವಿಸ್ತಾರವಾಗಿ ತೋರುತ್ತಿತ್ತು ಎನ್ನುವುದರಲ್ಲಿ ಉತ್ಪ್ರೇಕ್ಷೆ ಇದ್ದಿರಲಾರದು!

ಅದಕ್ಕೇ ಹೇಳಿದ್ದು, ಈ ಅನುಭವ ಅನ್ನೋದು ಪ್ರಯೋಜನಕ್ಕೆ ಬಾರದ್ದು ಅಂತಾ. ಒಮ್ಮೆ ಮಾಡಿ ಕೈ ಸುಟ್ಟುಕೊಂಡೋ ಹೊಡೆತ ತಿಂದ ಮೇಲೋ ಬರುವ ಭಾಗ್ಯವನ್ನು ನೀವು ಕರೆದುಕೊಳ್ಳಲು ನಾಲ್ಕಕ್ಷರದ ಸೌಭಾಗ್ಯ ಬೇಕೆಂದರೆ ಅದನ್ನು ಅನುಭವವೆಂದುಕೊಳ್ಳಿ. ಇಲ್ಲವೆಂದಾದರೆ ನನ್ನ ಹಾಗೆ ಚಪ್ಪಟೆ ಇರುವ ನಿಮ್ಮ ಹಣೆಯಲ್ಲಿ ಎರಡೆರಡು ಬಾರಿ ಗಟ್ಟಿಸಿಕೊಂಡು ಅದರ ಮೇಲೆ ಒಂದು ಕ್ಯೂಬ್ ಐಸ್ ಇಟ್ಟು ತಣ್ಣಗೆ ಮಾಡಿಕೊಳ್ಳಿ ಅಷ್ಟೇ.

ವೇಷ್ಟು ಸಾರ್, ಎಲ್ಲಾ ವೇಷ್ಟ್ ಉ. ನಮ್ಮೂರಿನ ಮಕ್ಳು ನಾಳೆ ಶಾಲೆಯಲ್ಲಿ ಫಸ್ಟ್ ಕ್ಲಾಸ್ ಬರದಿದ್ದರೂ ಪರವಾಗಿಲ್ಲ ಮನೆ ಒಳಹೊರಗಿನ ಕೆಲಸವನ್ನು ಮಾಡಿಕೊಳ್ಳಲು ಬರಲೇ ಬೇಕು ಅಂತ ಹೊಸ ಕಾನೂನು ತರಬೇಕು ಅಂತ ಹೊಸ ಸರ್ಕಾರಕ್ಕೆ ನಾನು ಶಿಫಾರಸ್ಸು ಮಾಡ್ತೀನಿ. ಅನುಭವ ಇಲ್ಲದವರು ಮೀಸೆ ಬಿಡಲು ತಕ್ಕವರಲ್ಲ ಅಂತ ಹೊಸ ಶಾಸನವನ್ನು ಕೆತ್ತಿಸ್ತೀನಿ. ಕೈಲಾಗ್ತೋನ್ ಮೈಯೆಲ್ಲ ಪರಚಿಕೊಂಡ ಅಂತಾರಲ್ಲ ಹಾಗೆ ನನ್ನ ಕೈಯಲ್ಲಿ ಏನೂ ಮಾಡೋಕ್ ಆಗ್ತೇ ಇದ್ರೂ ಅಮೇರಿಕದ ನೀರಿನ ಋಣದ ದಯೆಯಿಂದ ಯಾವತ್ತೂ ನಾನು ಉದ್ದುದ್ದವಾಗಿ ಮಾತಾಡ್ತಲೇ ಇರ್ತೀನಿ.

ಅನುಭವಗಳಿಗೆ ಧಿಕ್ಕಾರ, ಮೈಗಳ್ಳರ ಸಂಘಕ್ಕೆ ಜೈ!

Sunday, November 25, 2007

ಅನುಭವ ಅಮೃತವಾದದ್ದು ಯಾವಾಗ?

ಅನುಭವಗಳು ಅನ್ನೋದರ ದೊಡ್ಡಸ್ತಿಕೆ ಏನು ಅಂದ್ರೆ ಎಲ್ರೂ ಅಂದ್ಕೊಳ್ಳೋ ಹಾಗೆ ನಮಗೆ ಆಯಾ ವಿಷಯದ ಬಗ್ಗೆ ಆಳವಾಗಿ ಗೊತ್ತಿರೋದು ಅಥವಾ ನಮ್ಮದೇ ಆದ ಒಂದು ಪ್ರಯತ್ನ ಜೊತೆಗೆ ಸೇರಿ ಉಳಿದವರಿಗೆ ಆಯಾ ಕೆಲಸದ ಬಗ್ಗೆ ಏನೇನು ತಿಳಿದಿಲ್ಲವೋ ಅದರ ಬಗ್ಗೆ ತಕ್ಕಮಟ್ಟಿಗೆ ನಮಗೆ ತಿಳಿದಿರೋದು. ಅದೇ ಈ ಅನುಭವದ ಅಡಿಯಲ್ಲಿನ ವಿಷಾದವನ್ನು ಹೆಚ್ಚು ಜನ ಗುರುತಿಸಿದ ಹಾಗೇ ಕಾಣಿಸೋದಿಲ್ಲ, ನನ್ನ ಅನಿಸಿಕೆ ಪ್ರಕಾರ ಒಬ್ಬ ವ್ಯಕ್ತಿಗೆ ಅನುಭವಗಳು ಆಗಿ ಆಗೀ ಮತ್ತೆ ಅದೆ ವಿಷಯದ ಫಲಾನುಭವ ಪಡೆಯೋದಿರಲಿ ಉಳಿದವರಿಗೆ ಹೇಳೋದಕ್ಕೂ ತ್ರಾಣವಿಲ್ಲದ ಹಾಗೆ ವಯಸ್ಸಾಗಿ ಬಿಡೋದು. ಅಂದ್ರೆ, ನಿಮಗೆ ಅನುಭವವಾಗಿದೆ ನಿಜ ಆದರೆ ಅನುಭವವಾಗುವುದಕ್ಕಿಂತ ಮೊದಲು ನಿಮ್ಮಲ್ಲಿರೋ ಉತ್ಸಾಹ ಇಲ್ಲದೇ ಹೋಗಿದೆಯೇ ಅನ್ನೋ ಹೆದರಿಕೆ, ಒಂದ್ ರೀತಿ ಮ್ಯಾಜಿಕ್ ಶೋ ಮುಗಿದ ಮೇಲೆ ಮಾಂತ್ರಿಕ ತನ್ನೆಲ್ಲಾ ಗುಟ್ಟನ್ನು ಶ್ರೋತೃಗಳ ಜೊತೆ ಹಂಚಿಕೊಂಡ್ರೆ ಹೇಗಿರುತ್ತೋ ಹಾಗೆ.

ಮೊನ್ನೆ ಥ್ಯಾಂಕ್ಸ್‌ಗಿವಿಂಗ್‌ ಸಂದರ್ಭದಲ್ಲಿ ಹೀಗೇ ಹರಟೆ ಹೊಡೀತಿದ್ದಾಗ ಒಂದು ಉಪಮೆ ಹೊಳೆಯಿತು. ಭಾರತದಲ್ಲಿ ಜನರು ಸ್ಟಿಕ್‌ ಶಿಫ್ಟ್ ಇರೋ ಕಾರು/ವಾಹನಗಳನ್ನು ಓಡಿಸೋದು ಹೆಚ್ಚು. ಇಂಧನವನ್ನು ಉಳಿಸುವ ಪ್ರಯತ್ನವೋ, ವಾಹನದ ಎಫಿಷಿಯನ್ಸಿಯನ್ನು ಹೆಚ್ಚಿಸುವ ಯತ್ನವೋ, ಅಲ್ಲಿಯ ರಸ್ತೆಯಲ್ಲಿ ನಿಂತು ನಿಂತು ಹೋಗುವುದಕ್ಕೆ ಅನುಕೂಲವಾಗಲಿ ಎಂಬುದಕ್ಕೋ ಅಥವಾ ಮತ್ಯಾವುದೋ ಕಾರಣಕ್ಕೆ ಹೆಚ್ಚಿನ ಜನರು ತಮ್ಮ ತಮ್ಮ ವಾಹನಗಳ ಗಿಯರ್ ಅನ್ನು ಆಗಾಗ ಬದಲಾಯಿಸುತ್ತಲೇ ಇರುತ್ತಾರೆ, ಹಾಗೆ ಮಾಡದೇ ವಿಧಿಯಿಲ್ಲ. ಅಂದರೆ ಭಾರತದಲ್ಲಿ ವಾಹನದಲ್ಲಿ ಇಂಚಿಂಚು ಕದಲಿದ ಹಾಗೆ ನಮ್ಮ ಮೂವ್‌ಮೆಂಟುಗಳನ್ನು ನಾವೇ ಮೈಕ್ರೋಮ್ಯಾನೇಜ್ ಮಾಡಿಕೊಂಡಿರಬೇಕು. ಅಲ್ಲಲ್ಲಿ ನಿಂತು, ದಾರಿಯಲ್ಲಿ ಸಿಗುವ ಅಡೆತಡೆಗಳನ್ನೆಲ್ಲ ಎದುರಿಸಿ ತಲುಪಬೇಕಾದ ಸ್ಥಳ ತಲುಪುವಲ್ಲಿ ಒಂದು ಕೈ ಗಿಯರ್ ಲಿವರ್ ಮೇಲೆ ಒಂದು ಕಾಲು ಕ್ಲಚ್ ಮೇಲೆ ಇಟ್ಟು ಅದಕ್ಕೇ ಬದುಕನ್ನು ಮುಡಿಪಾಗಿಟ್ಟುಕೊಳ್ಳಬೇಕು ಎಂಬುದು ನನ್ನ ಜೋಕ್‌ಗಳಲ್ಲೊಂದು. ಅದೇ ಉತ್ತರ ಅಮೇರಿಕದಲ್ಲಿ ನೋಡಿ, ನಾವುಗಳು ಬಳಸೋ ಕಾರು/ವಾಹನಗಳಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಇರುವಂತಹವೇ ಹೆಚ್ಚು. ಮನೆಯಿಂದ ಆಫೀಸಿಗೆ ಹೊರಟರೆ ಮಧ್ಯೆ ಬೇಕಾದಷ್ಟು ಅಡೆತಡೆಗಳು ಬಂದೇ ಬರುತ್ತವೆ, ಆದರೆ ನಮ್ಮ ಬಲಗಾಲು ಬ್ರೇಕ್ ಆಕ್ಸಲೇಟರ್ ಮೇಲೆ ಆಗಾಗ್ಗೆ ತನ್ನಷ್ಟಕ್ಕೆ ತಾನು ಬದಲಾಗುತ್ತಿರುತ್ತದೆ, ಜೊತೆಗೆ ಹೆಚ್ಚಿನ ಮಟ್ಟಿಗೆ ಎಲ್ಲರೂ ಒಂದೇ ಕೈಯಲ್ಲೇ ಡ್ರೈವ್ ಮಾಡೋದು, ಮತ್ತೊಂದು ಕೈಯಲ್ಲಿ ಇನ್ನೇನು ಮಾಡದಿದ್ದರೂ ಆರಾಮವಾಗಿ ಕಾಫಿಯನ್ನಾದರೂ ಕುಡಿದುಕೊಂಡು ಹೋಗಬಹುದು. ಅಂದರೆ ನಮ್ಮ ದಿನನಿತ್ಯದ ಪ್ರಯಾಣವೆನ್ನುವ ರುಟೀನ್ ಕೆಲಸವನ್ನು ನಾವು ಮೈಕ್ರೋ ಮ್ಯಾನೇಜ್ ಮಾಡೋದೇ ಬೇಡ. ಕಾರು ಒಳ್ಳೆಯ ಕಂಡೀಷನ್ನಲ್ಲಿ ಇದ್ದರೆ ಪ್ರಯಾಣ ಯಶಸ್ವಿಯಾದಂತೆಯೇ ಲೆಕ್ಕ. ಭಾರತದಲ್ಲಿ ಪದೇಪದೇ ಗಿಯರ್ ಬದಲಾಯಿಸುವುದರ ಮೂಲಕ ಅದೆಷ್ಟು ಇಂಧನವನ್ನು ಉಳಿಸುತ್ತಾರೋ ಗೊತ್ತಿಲ್ಲ, ತಮ್ಮ ಕಾರು/ವಾಹನಗಳನ್ನು ಸುಸ್ಥಿತಿಯಲ್ಲಿಡದ ವಾಹನಗಳಿಗೆ ಅದ್ಯಾವ ಅನುಕೂಲವೋ ಯಾರಿಗೆ ಗೊತ್ತು, ಮತ್ತಿನ್ನೇನಿಲವೆಂದರೂ ಈ ಗಿಯರ್ ಬದಲಾವಣೆಯಿಂದ ಕೈ ನೋವಾದರೂ ಬಂದೀತು.

’ಮನೆ ಕಟ್ಟಿ(ಸಿ) ನೋಡು’ ಎನ್ನೋದು ನಮ್ಮೂರಿನ ನಾಣ್ಣುಡಿಗಳಲ್ಲೊಂದು. ಇಲ್ಲಿ ಈಗಿರೋ ನಮ್ಮನೆ ವಾರಂಟಿಯಲ್ಲಿ ಏನೋ ಹುಡುಕಿ ಮನೆ ಕಟ್ಟಿದ ಕಂಪನಿಯವರಿಗೆ ಕೇಳಿದ್ದಕ್ಕೆ ’ಮನೆಯ ಸ್ಟ್ರಕ್ಚರ್‌ಗೆ ಏನೇ ತೊಂದರೆ ಆದರೂ ಹತ್ತು ವರ್ಷಗಳವರೆಗೆ ಅದನ್ನು ಸರಿ ಮಾಡಿಸುವುದು ನಮ್ಮ ಜವಾಬ್ದಾರಿ’ ಎಂದರು. ನಮ್ಮೂರಿನ ಬೇಸಿಗೆಯಲ್ಲಿ ಧಾಂ ಧೂಮ್ ಓಪನಿಂಗ್ ಸೆರೆಮನಿ ಮಾಡಿಸಿಕೊಂಡು ಮಳೆಗಾಲ ಪೂರ್ತಿ ಸೋರಲು ತೊಡಗಿದ್ದ ಕೆನರಾ ಬ್ಯಾಂಕ್ ಕಟ್ಟಡ ನೆನಪಿಗೆ ಬಂತು, ಅದರಲ್ಲಿ ಇಂದಿಗೂ ಸೋರಿದ ಮಳೆ ನೀರನ್ನು ಹಿಡಿಯಲೆಂದು ರೂಫ್‌ಗೆಲ್ಲಾ ಟಾರ್ಪಾಲು ಕಟ್ಟಿರಬಹುದು, ’ಎಲ್ಲಿದೆಯೋ ವಾರಂಟೀ ಅಣ್ಣಾ, ಎಲ್ಲಿದೆಯೋ ವಾರಂಟೀ...’ ಎಂದು ಯಾವುದೋ ಬದಲಾದ ಹಾಡಿನ ತುಣುಕೊಂದು ತಟ್ಟನೆ ಮನದಲ್ಲಿ ಮಿನುಗಿತು. ಈ ಮನೆ ಕಟ್ಟಿಸಿದ ಅನುಭವವೇ ಅಂತದ್ದು, ಅದು ಸೋರಿದ ಮೇಲೆ ಹೀಗೆ ಕಟ್ಟಿದರೆ ಸೋರುತ್ತದೆ ಎಂದು ತಿಳಿಸುತ್ತದೆಯೇ ವಿನಾ ಒಮ್ಮೆ ಕಟ್ಟಿಸಿ ಸೋರಿದ ಮೇಲೆ ಮುಂದೆ ಏನೇ ಮಾಡಿದರೂ ತೇಪೆ ಹಚ್ಚುವುದೇನೂ ತಪ್ಪೋದಿಲ್ಲ. ನಮ್ಮ ಸ್ನೇಹಿತರು ಹೇಳುತ್ತಾರೆ, ’ಛೇ, ನೀವು ಕಂಡ ಇಂಡಿಯಾ ಭಾಳಾ ಬದಲಾಗಿದೇ, ನೀವ್ ಯಾವ ಜಮಾನದಲ್ಲಿದ್ದೀರಿ?’ ಇದ್ದಿರಬಹುದು, ಇಂದು ಕಟ್ಟಿಸಿದ ಕಟ್ಟಡಗಳು ಸೋರದಿರಬಹುದು, ಹಾಗೆ ಸೋರಿದರೂ ಕಟ್ಟಡದ ಕಾಂಟ್ರಾಕ್ಟರುಗಳು, ಇಂಜಿನಿಯರುಗಳು, ಇಟ್ಟಿಗೆ ಹೊರುವವರನ್ನೂ ಸೇರಿಸಿ ಎಲ್ಲರೂ ಭಾವನಾತ್ಮಕವಾಗಲ್ಲದಿದ್ದರೂ ಕಾನೂನಿನ ಕಟ್ಟಳೆಯಡಿಯಲ್ಲಿ ಜವಾಬ್ದಾರರಿದ್ದಿರಬಹುದು. ಒಮ್ಮೆ ಸೋರಿದ ಮಾಡನ್ನು ಮತ್ತೊಮ್ಮೆ ಸೋರದ ಹಾಗೆ ತಂತ್ರಜ್ಞಾನ ಬಂದಿರಬಹುದು, ಅಥವಾ ’ಹೇಗಿದ್ದರೂ ಮಾಡು ಸೋರೋದೇ ಒಂದಲ್ಲ ಒಂದು ದಿನ...’ ಎನ್ನುವ ಹೊಸ ಅನುಭವಾಮೃತ ಹುಟ್ಟಿ ಹೊಮ್ಮಿರಬಹುದು.

ಅದು ನಿಜವೇ, ನಾವು ಕಂಡ ಇಂಡಿಯಾದಲ್ಲಿ ದಾರಿಯ ಬದಿ ಎಳೆನೀರು ಮಾರುವವರಿಂದ ಹಿಡಿದು ಎಕ್ಸಿಕ್ಯೂಟಿವ್‌ಗಳವರೆಗೆ ಎಲ್ಲರೂ ಸೆಲ್‌ಫೋನ್‌ಗಳನ್ನು ಹಿಡಿದುಕೊಂಡು ಓಡಾಡಿದ್ದಿಲ್ಲ. ಇತ್ತೀಚಿಗೆ ಕಮ್ಮ್ಯೂನಿಕೇಷನ್ನ್ ಬದಲಾಗಿರಬಹುದು, ಜನರಲ್ಲಿ ಕನ್ಸ್ಯೂಮೆರಿಸ್ಸಮ್ಮ್, ಅಥವಾ ಇನ್ಯಾವ್ಯಾವುದೋ "ಇಸಮ್ಮು"ಗಳು ತುಂಬಿ ತುಳುಕಾಡುತ್ತಿರಬಹುದು. ಬಡವ-ಬಲ್ಲಿದರ ನಡುವಿನ ಅಂತರ ಕಿರಿದಾಗಿರಬಹುದು. ಸಾಮಾಜಿಕವಾಗಿ, ರಾಜಕೀಯವಾಗಿ ಭಾರತ ಬೆಳೆದಿರಬಹುದು. ಮತ್ತೆ, ನಮ್ಮ ಹಳೇ ಅನುಭವಗಳೇ ನಮ್ಮ ಬದುಕನ್ನು ರೌರವ ನರಕವನ್ನಾಗಿಸುತ್ತವೆಯೆಲ್ಲಾ ಎಂದು ಮನಸ್ಸು ಮಮ್ಮಲ ಮರುಗತೊಡಗಿತು. ಆ ಪ್ರಕಾರವಾಗಿ - ನಾವು ಆಟೋ ಡ್ರೈವರುಗಳನ್ನು ಮನಬಿಚ್ಚಿ ಮಾತನಾಡಿಸುವುದಿರಲಿ ನಂಬುವುದಾದರೂ ಹೇಗೆ? ನಾವು ಹೊರಟ ಬಸ್ಸು ಸರಿಯಾದ ಸಮಯಕ್ಕೆ ಡೆಸ್ಟಿನೇಷನ್ನನ್ನು ಮುಟ್ಟೀತು ಎಂದು ಸಂಕಲ್ಪಿಸುವುದು ಹೇಗೆ? ನಾವು ಕಟ್ಟಿಸೋ ಮನೆ ಸ್ಟ್ರಕ್ಚರಲಿ ಸೌಂಡ್ ಆಗಿರುತ್ತದೆ ಎಂದು ಊಹಿಸಿಕೊಂಡು ಹೋಮ್‌ವರ್ಕ್ ಮಾಡದಿರುವುದು ಹೇಗೆ? ವಾರಂಟಿ, ಗ್ಯಾರಂಟಿ ಎಂಬ ಪದಗಳಿಗೆ ಬೆಲೆ/ನೆಲೆ ಕಟ್ಟುವುದು ಹೇಗೆ? ಈಗಾಗಲೇ ಸುಟ್ಟುಕೊಂಡ ಬೆರಳ ತುದಿಯ ಚರ್ಮ ಚಿಗುರೋದಕ್ಕಿಂತ ಮುನ್ನವೇ ಅದೇ ಕೈಗಳಲ್ಲಿ ಮತ್ತೊಂದು ನಾಜೂಕಾದ ಕೆಲಸವನ್ನು ಮಾಡುವುದು ಹೇಗೆ? ನಮ್ಮ ವಾಹನದ ಹೊಗೆ ಪೈಪಿನಿಂದ ಯಾವುದೇ ರೆಗ್ಯುಲೇಷನ್ನ್ ಇಲ್ಲದೇ ಯಾವ್ಯಾವುದೋ ವಿಷಾನಿಲಗಳು ನಿರಂತರವಾಗಿ ವಾತಾವರಣಕ್ಕೆ ಹೊಮ್ಮಿ ನಮ್ಮ ವಾಹನದ ಇಂಜಿನ್ ಏನೇ ಸದ್ದು ಮಾಡಿಕೊಂಡಿದ್ದರೂ ಪದೇ ಪದೇ ಗಿಯರ್ ಬದಲಾಯಿಸುವ ನಮ್ಮ ಕೈಗಳು ಎಲ್ಲವನ್ನೂ ಮೀರುತ್ತದೆ ಎಂಬ ತತ್ವವನ್ನು ಮೈ ತುಂಬಿಕೊಳ್ಳುವುದು ಹೇಗೆ?

’ಎಲವೂ ಮೂರ್ಖ, ಅನುಭಾಮೃತದ ಬಗ್ಗೆ ಬಗ್ಗೆ ಬರೀತೀಯಾ ಅಂದುಕೊಂಡ್ರೆ ನಾವು ನಂಬಿದ ಭಾರತ ಹಂಗೇ ಹಿಂಗೇ ಅಂತ ಕೊರೀತೀಯೇನಯ್ಯಾ?’ ಎಂದು ಬಲ ಭುಜ ಹಾಗೂ ಕತ್ತಿನ ನಡುವಿನಿಂದ ಧ್ವನಿಯೊಂದು ಹೊರಬಂತು. ’Wait, ಅನುಭವ ಅಮೃತವಾಗಿದ್ದು ಯಾವಾಗ, ಅಂದ್ರೆ ಅದು ಸಾಯೋದೇ ಇಲ್ಲವೇನು?’ ಎಂದು ನಾನು ಧೃತಿಗೆಡದೆ ಮರುಪ್ರಶ್ನೆಯೊಂದನ್ನು ಹಾಕಿದೆ (thanks to present life! ಪ್ರಶ್ನೆ ಕೇಳೋಕೇನು ಅವನವ್ವನ). ’ಅನುಭವ ಯಾವತ್ತಿದ್ರೂ ಮನುಷ್ಯನ ಕಷ್ಟ ಕಾಲಕ್ಕೆ ಬರುತ್ತೆ ಗೊತ್ತಾ...’ ಎಂಬ ತೇಲಿಕೆಯ ಉತ್ತರ ಬರತೊಡಗಿದ್ದನ್ನು ನನ್ನ ಮನಸ್ಸು ಗ್ರಹಿಸಿತು. ಅಂತಹ ಹಾರಿಕೆಯ ಉತ್ತರಗಳು ಬಂದೊಡನೆ (I have really learnt to cut them loose) ಅವುಗಳನ್ನು ಹಾಗೆಯೇ ಹಾರಿಬಿಟ್ಟೆ. ನಾವು ಕಟ್ಟೋದು ಒಂದೇ ಒಂದು ಮನೆ, ಅದರ ಮಾಡಾದರೂ ನೆಟ್ಟಗಿರಲಿ ಎಂದು ಮನದಾಳದಿಂದ ಪ್ರಾರ್ಥನೆಯ ಮೊರೆಯೊಂದು ಹುಟ್ಟಿ ಬಂತು. ಈ ಪ್ರಪಂಚದಲ್ಲಿರೋ ಯಾವುದಾದರೂ ದೇವರು ಅದನ್ನು ಪುರಸ್ಕರಿಸಿಯಾನು ಎನ್ನುವ ನಂಬಿಕೆ ನನ್ನದು, ಕ್ಷಮಿಸಿ ಅದು ಯಾವುದೇ ಅನುಭವದಿಂದ ಬಂದುದಂತೂ ಅಲ್ಲ.

Wednesday, August 08, 2007

ಒಮ್ಮೆ ಸುರಿಯೋಕ್ ಹಿಡೀತೂ ಅಂತಂದ್ರೆ....

'...ಇವತ್ತಾದ್ರೂ ಬೇಗ್ನೇ ಮನೇಗ್ ಹೋಗ್ಬೇಕು...' ಎಂದು ವಿಂಡ್‌ಶೀಲ್ಡ್‌ನ ಮೂಲಕ ಕಣ್ಣಿಗೆ ಕಾಣುವ ರಸ್ತೆಗಿಂತಲೂ ಯಾವಾಗಲೂ ಮುಂದೆಯೇ ಇರುವ ಮನಸ್ಸನ್ನು 'ಬುಶ್ಶ್...' ಎಂದು ಒಡೆದು ಹೋದ ಟಯರ್ ಸದ್ದು ಬ್ರೇಕ್ ಹಾಕಿ ಹಿಡಿದು ನಿಲ್ಲಿಸಿದಂತಾಗಿ ಯಾವಾಗಲೂ ಓಡುತ್ತಿರುವ ಮನಸ್ಸಿನ ಹಿಡಿತಕ್ಕೆ ಒಂದು ಕ್ಷಣ ಸಿಕ್ಕು ಬೆನ್ನು-ಕುತ್ತಿಗೆ ಮುಂದೆ ಬಗ್ಗಿದಂತಾಯಿತು. ರಸ್ತೆಯ ಬದಿಯಲ್ಲಿ ಯಾರದ್ದೋ ಪ್ರೈವೇಟ್ ಡ್ರೈವ್‌ವೇ ಇದ್ದುದರಿಂದ ಕಾರನ್ನು ಬದಿಗೆ ನಿಲ್ಲಿಸಿ ಹಿಂದಿನಿಂದ ಅಷ್ಟೇ ವೇಗದಲ್ಲಿ ಬರುತ್ತಿದ್ದ ಉಳಿದ ಕಾರುಗಳಿಂದ ಆ ಮಟ್ಟಿಗೆ ತಪ್ಪಿಸಿಕೊಂಡಂತಾಯಿತು. ಆದರೂ ಈ ಒಡೆದ ಟಯರನ್ನು ಹೇಗೆ ಸರಿಪಡಿಸುವುದು? ಯಾರನ್ನು ಕರೆಯುವುದು, ಹೇಗೆ ಕರೆಯುವುದು...ಮುಂತಾದ ಪ್ರಶ್ನೆಗಳಿಗೆ ಉತ್ತರ ಹುಟ್ಟುವುದರ ಬದಲು ಅವುಗಳ ಬೆನ್ನ ಹಿಂದೆಯೇ ಏಳುತ್ತಿದ್ದ ಮತ್ತಷ್ಟು ಪ್ರಶ್ನೆಗಳು ನನ್ನನ್ನು ಇನ್ನಷ್ಟು ಕಂಗಾಲಾಗಿಸಿದವು.

ಸಮಯ: ಶುಕ್ರವಾರ ಸಂಜೆ ಐದು ಘಂಟೆ, ಮೂರು ನಿಮಿಷ...ನಾನು ಆರು ಘಂಟೆಯೊಳಗೆ ಡೇ ಕೇರ್ ತಲುಪಬೇಕು.

ಪರಿಸ್ಥಿತಿ: ಪ್ಯಾಸೆಂಜರ್ ಬದಿಯ ಮುಂದಿನ ಟಯರ್ ಒಡೆದು ಅದರಲ್ಲಿ ನನ್ನ ಕೈ ತೂರುವಷ್ಟು ದೊಡ್ಡ ತೂತಾಗಿದೆ. ಹಿಂದಿನ ಟಯರ್ ಏನಾಗಿದೆಯೋ ಎಂದು ಈ ವರೆಗೂ ನೋಡಿರದ ಉದಾಸೀನತೆ. ಇನ್ನು ಸ್ವಲ್ಪ ಹೊತ್ತಿನಲ್ಲೇ ಪ್ರಪಂಚದ ಕೊಳೆಯನ್ನೆಲ್ಲಾ ತೊಳೆಯುತ್ತೇನೆ ಎಂದು ಶಪಥ ತೊಟ್ಟಿರುವ ಮಳೆ. ಇದೇ ದಿನ ರಾತ್ರಿ ವಾರಂತ್ಯವನ್ನು ಕಳೆಯಲಿಕ್ಕೋಸ್ಕರ ಮನೆಗೆ ಕುಟುಂಬ ಸಮೇತರಾಗಿ ಇನ್ನು ಕೆಲವೇ ಘಂಟೆಗಳಲ್ಲಿ ಬರುತ್ತಿರುವ ಇಬ್ಬರು ಸ್ನೇಹಿತರು. ಮನೆಯನ್ನು ಒಪ್ಪ ಓರಣವಾಗಿ - 'ಹೀಗಿಡಬೇಕು, ಹಾಗಿಡಬೇಕು' ಎಂದು ಎಲ್ಲಿಂದಲೋ ಆರ್ಡರ್ ಕೊಟ್ಟು ಹೋಗುವ ಧ್ವನಿಗಳು.

ಉಡಾಫೆಯ ಪರಮಾವಧಿ: ಸೆಲ್ ಫೋನ್ ಬ್ಯಾಟರಿ ಖಾಲಿ, ಅಕಸ್ಮಾತ್ ಬ್ಯಾಟರಿ ಇದ್ದರೂ, ಇರುವ ಪೂರ್ಣ ದಾರಿಯಲ್ಲಿ ಮಧ್ಯೆ ಕಾಡಿನ ಒಂದು ಮಡಿಕೆಯಲ್ಲಿ ಸೆಲ್ ಕವರೇಜ್ ಎಲ್ಲಿ ಇಲ್ಲವೋ ಅಲ್ಲೇ ರಸ್ತೆ ಬದಿಯ ಕಲ್ಲಿಗೆ ಟಯರ್ ಬಡಿದು ಒಡೆದು ಹೋದ ಸ್ಥಿತಿ. ಟ್ರಿಪಲ್ ಎ ಮೆಂಬರ್‍ಶಿಪ್ ಎಕ್ಸ್‌ಪೈಯರ್ ಆದದ್ದು ಮೇ ತಿಂಗಳಿನಲ್ಲಿ, ಇನ್ನೂ ರಿನ್ಯೂ ಮಾಡಿಲ್ಲ. ಕಾರಿನಲ್ಲಿ ಇರುವ ಸ್ಪೇರ್ ಟಯರ್ ಅನ್ನು ಬಿಚ್ಚಿ ಜೀವಮಾನದಲ್ಲಿ ಇದುವರೆಗೆ ನಾನೇ ಸ್ವತಃ ಹಾಕಿಲ್ಲ. ಸ್ಪೇರ್ ಟಯರಿನ ಕೀ ಅನ್ನು ಮೊನ್ನೆ ಅಷ್ಟೇ ಕಾರ್ ಕ್ಲೀನ್ ಮಾಡುವಾಗ ಗರಾಜಿನಲ್ಲಿ ತೆಗೆದಿಟ್ಟ ನೆನಪು. ಹಾಳಾದ ಸಮಯ ಬೇರೆಓಡುತ್ತಿದೆ, ಅದಕ್ಕೆ ತಕ್ಕನಾಗಿ ತಲೆ ಓಡುತ್ತಿಲ್ಲ ಏನು ಮಾಡೋದು, ಬಿಡೋದು?

ಪ್ರಯತ್ನ: ಕಾರಿನಲ್ಲಿನ ಸ್ಪೇರ್ ಟಯರನ್ನು ಬಿಚ್ಚುವ ಹವಣಿಕೆ, ಬಿಚ್ಚಿ ಮತ್ತೆ ಪುನಃ ಟಯರ್ ಹಾಕೋಣವೆಂದರೆ, ಲಗ್ ನಟ್‌ನ ಕೀ ಮನೆಯಲ್ಲೇ ಬಿಟ್ಟುಬಂದಿದ್ದೇನೆ. ಅಕ್ಕ-ಪಕ್ಕದಲ್ಲಿರುವ ಮೂರು ಮನೆಗಳ ಬಾಗಿಲನ್ನು ಬಡಿದು, ಕಾಲಿಂಗ್ ಬೆಲ್ಲನ್ನು ಕೈ ಬೆರಳು ನೋವು ಬರುವವರೆಗೆ ಅದುಮಿದರೂ ಯಾರೂ ಉತ್ತರಿಸದ ಪರಿಸ್ಥಿತಿ...ಪಾಪ ನನ್ನ ಈ ಕಷ್ಟವನ್ನು ನೋಡಲಿಕ್ಕೋಸ್ಕರ ಅವರೇಕೆ ಐದು ಘಂಟೆಗೆಲ್ಲಾ ಆಫೀಸಿನಿಂದ ಮನೆಗೆ ಬಂದಿರಬೇಕು?

ಕಾರಿಗೆ ಹಿಂತಿರುಗಿ ಬಂದು ಹತಾಶೆಯ ನೋಟವೊಂದನ್ನು ಬೀರಿ, ನಿಟ್ಟುಸಿರೊಂದನ್ನು ಬಿಟ್ಟು ಇನ್ನು ಬೇರೆ ದಾರಿಯೇ ಇಲ್ಲದೇ ಅದೇ ದಾರಿಯಲ್ಲಿ ಬರುತ್ತಿದ್ದ ಒಂದು ಕಾರನ್ನು ತಡೆದು ನಿಲ್ಲಿಸಿದೆ, ನನ್ನ ಕಣ್ಣಿಗೆ ಬಿದ್ದ ಮೊದಲನೇ ಕಾರದು. ನಿಲ್ಲಲೋ ಬೇಡವೋ ಎಂಬ ಅನುಮಾನದಿಂದ ಕಾರು ನಿಂತಿತು, ವಿಂಡ್‌ಶೀಲ್ಡ್ ಕೆಳಗೆ ಇಳಿಯಿತು - Do you need any help? ಎಂದು ಹೆಣ್ಣು ಸ್ವರವೊಂದು ಉಲಿಯಿತು. ನಾನು ಎಲ್ಲಿಂದ ಶುರುಮಾಡಿಕೊಳ್ಳಲಿ ನನ್ನ ಕಷ್ಟವನ್ನು ತೋಡಿಕೊಳ್ಳಲು ಎಂದು ಮೇಷ್ಟ್ರ ಪ್ರಶ್ನೆಗೆ ತಪ್ಪು ಉತ್ತರ ಕೊಟ್ಟ ಹುಡುಗ ಬೆಂಚಿನ ಮೇಲೆ ನಿಲ್ಲುವಾಗ ಹೇಳುವ ಸಮಜಾಯಿಷಿಯಂತೆ ತಡವರಿಸತೊಡಗಿದೆ.

I need to make a phone call...
I have a flat...
My battery is dead, I don't have a spare tire key, my stupidity is at its peak...

ಮುಂತಾದ ಸಾಲುಗಳು ಕಣ್ಣಮುಂದೆ ಸುಳಿದು ಹೋದವು - ಸಿನಿಮಾ ರೀಲುಗಳಲ್ಲಿ ಪ್ರಯಾಣವನ್ನು ಸೂಚಿಸೋ ಹಾಗೆ. ನನ್ನ ಪ್ರಶ್ನೆ-ಉತ್ತರ-ಸಮಜಾಯಿಷಿ-ಅಹವಾಲುಗಳು ಆರಂಭವಾಗುವ ಮುನ್ನವೇ ಆಕೆಯೇ ಹೇಳಿದಳು - 'ಇಲ್ಲಿ ಸೆಲ್ ಕವರೇಜ್ ಇಲ್ಲ, ಬೇಕು ಅಂದ್ರೆ ಅರ್ಧ ಮೈಲು ದೂರದಲ್ಲಿ ಸೆಲ್ ಕವರೇಜ್ ಇದೆ, ಅಲ್ಲಿಯವರೆಗೆ ಡ್ರಾಪ್ ಕೊಟ್ಟು, ಮತ್ತೆ ಪುನಃ ಹಿಂದೆ ತಂದು ಬಿಡುತ್ತೇನೆ...' ನೀರಿನಲ್ಲಿ ಮುಳುಗಿದವನಿಗೆ ಸಿಕ್ಕ ಹುಲ್ಲುಕಡ್ಡಿಯನ್ನು ಗಟ್ಟಿಯಾಗಿ ಹಿಡಿದುಕೊಂಡು 'ಆಯಿತು' ಎಂದು ಜೋರಾಗಿ ಹೇಳಿ ಹಣೇ ಮೇಲೆ ಸುರಿಯುತ್ತಿರುವ ಬೆವರನ್ನು ಒರಿಸಿಕೊಂಡು ಮೊಟ್ಟ ಮೊದಲನೇ ಬಾರಿಗೆ ಆಗಂತುಕ-ಅಪರಿಚಿತರೊಬ್ಬರ ಕಾರಿನಲ್ಲಿ ಕುಳಿತು ಹೊರಟೆ, ಬ್ರೇಕ್ ಡೌನ್ ಆಗಿ ಬಿದ್ದ ಕಾರನ್ನು ಲಾಕ್ ಮಾಡಿ ಕೀ ಯನ್ನು ಸರಿಯಾಗಿ ಜೇಬಿನಲ್ಲಿಡಲು ಮರೆಯಲಿಲ್ಲ.

ಸೆಲ್ ಕವರೇಜ್ ಸಿಗುವ ಸ್ಥಳಕ್ಕೆ ಬಂದಾಕ್ಷಣ ಎರಡು ಕರೆಗಳನ್ನು ಮಾಡಿದೆ - ಡೇ ಕೇರ್ ಸೆಂಟರ್‌ಗೆ ನನ್ನ ಪರಿಸ್ಥಿತಿಯನ್ನು ವಿವರಿಸಿ, ಅವರಿಗೆ ನಾನು ಬರುವವರೆಗೂ ಕಾಯುವಂತೆ ಕೇಳಿಕೊಂಡೆ. ಹೆಂಡತಿಗೆ ಕರೆ ಮಾಡಿ ಹೇಳಿದರೆ ಆಕೆಗೆ ಈಗ ಬಿಡುವಿಲ್ಲ ಎಂದು ಗೊತ್ತಾಯಿತಷ್ಟೇ. ಈಗ ಮತ್ತೇನು ಮಾಡುವುದು? ಕಾರಿನ ಬಳಿಗೆ ವಾಪಾಸು ಬಂದರೂ ನನ್ನ ಬಳಿ ಲಗ್ ನಟ್‌ನ ಕೀ ಇರದಿದ್ದುದರಿಂದ ಯಾರು ಬಂದರೂ ಸ್ಪೇರ್ ಬಿಚ್ಚಿ ಹಾಕಲು ಸಾಧ್ಯವಿಲ್ಲವಾದ್ದರಿಂದ ನಾನು ಮನೆಗೆ ಆದಷ್ಟು ಬೇಗ ತಲುಪಬೇಕಾಗಿದ್ದುದು ಅನಿವಾರ್ಯ. ಈ ಆಗಂತುಕ ವ್ಯಕ್ತಿ, ಅಥವಾ ಸಹಾಯಕ್ಕೆಂದು ದೇವರ ರೂಪದಲ್ಲಿ ಬಂದ ವ್ಯಕ್ತಿಯನ್ನು ಹೇಗೆ ಕೇಳುವುದು? ಏನು ಹೇಳುವುದು ಎಂದು ಯೋಚಿಸಲು ತೊಡಗಿರುವಂತೆಯೇ ಆಕೆಯೇ ನನ್ನ ಕಷ್ಟಕ್ಕೆ ಉತ್ತರ ಕೊಟ್ಟರು...

'Where do you live? if it helps, I will drop you off at your place, you can go to day care and come to this spot with your wife's car...'

ಹಿಂದೇ ಮುಂದೇ ಯೋಚಿಸದೇ ಆ ಅವಕಾಶವನ್ನು ಅದೆಷ್ಟೋ ವರ್ಷಗಳಿಂದ ಕಾದು ಕುಳಿತಿದ್ದ ಋಷಿಯ ಹಾಗೆ ಗಬಕ್ಕನೆ ಹಿಡಿದುಕೊಂಡೆ. ಆಕೆ ನನ್ನ ಮನೆಯ ಹತ್ತಿರದವರೆಗೆ ಬಿಟ್ಟು ಹೋದರು - ಥ್ಯಾಂಕ್ಸ್ ಹೇಳಲು ಪದಗಳು ಅಥವಾ ಭಾಷೆ ಸೋಲುತ್ತದೆ ಎಂದು ನನಗೆ ಅಂದಿನವರೆಗೂ ಅನುಭವವಾದದ್ದಿಲ್ಲ. ನಂತರದ್ದೆಲ್ಲ ಸಲೀಸು...ನಾವು ಮಾಡಬೇಕಾದ್ದನ್ನು ಮಾಡಿ ಕಾರನ್ನು ತೆಗೆದುಕೊಂಡು ಮನೆಗೆ ಬರುವಾಗ ರಾತ್ರಿ ಹತ್ತು ಘಂಟೆ. ಒಬ್ಬ ಸ್ನೇಹಿತ ಕೆಟ್ಟ ಹವಾಮಾನ, ಬಹಳ ಮಳೆ ಇರುವುದರಿಂದ ಶನಿವಾರ ಬರುವುದಾಗಿಯೂ ಮತ್ತೊಬ್ಬ ಸ್ನೇಹಿತ ರಸ್ತೆಯಲ್ಲಿ ಮಳೆ ಹಾಗೂ ಟ್ರಾಫಿಕ್ ಇರುವುದರಿಂದ ತಡವಾಗಿ ಬರುತ್ತೇವೆ ಎಂದು ಮೆಸ್ಸೇಜ್ ಬಿಟ್ಟಿದ್ದರು. ಅದೇನೋ ಈ ದಿನ ದುತ್ತನೇ ಸಮಸ್ಯೆಗಳೆಲ್ಲ ಎಲ್ಲೆಲ್ಲಿಂದಲೋ ಬಂದು ತಮ್ಮಷ್ಟಕ್ಕೆ ತಾವೇ ಹೊರಟು ಹೋದವಂತೆ ಕಂಡುಬಂದವು. ಸಮಸ್ಯೆಗಳು ಕಂಡೊಡನೆ ನಾನು ಯಾವಾಗಲೂ ಬೊಬ್ಬೆ ಹೊಡೆಯಲು ಆರಂಭಿಸುವುದೇ ಹೆಚ್ಚು ಆದರೆ ಇಂದಿನ ಸಮಸ್ಯೆಗಳೆಲ್ಲಾ ನಾನು ಬಾಯಿ ಬಿಡುವ ಮೊದಲೇ ತಮ್ಮಷ್ಟಕ್ಕೇ ತಾವು ಪರಿಹಾರ ಕಂಡುಕೊಂಡಂತೆ ಕಂಡು ಬಂದವು.

ಅದೇನೋ ಹೇಳ್ತಾರಲ್ಲ, ಸಮಸ್ಯೆಗಳು ಬರೋದಾದರೆ ಒಂದರ ಹಿಂದೆ ಒಂದು ಬಂದೇ ಬರುತ್ತವೆ ಎಂದು, ಅದು ನಿಜ - ಯಾರೋ ನಮ್ಮ ವಿರುದ್ಧ ಯುದ್ಧ ಹೂಡಿದ್ದಾರೇನೋ ಎಂದು ಅಪರೂಪಕ್ಕೊಮ್ಮೆ ಅನ್ನಿಸುವುದು ನಿಜ, ಇಲ್ಲವೆಂದಾರೆ ಅದೆಷ್ಟು ಹುಡುಕಿದರೂ ಬಟ್ಟೆಯ ರಾಶಿಯಲ್ಲಿ ಮ್ಯಾಚಿಂಗ್ ಕಾಲುಚೀಲ (ಸಾಕ್ಸ್) ಸಿಗದಿರುವುದರಿಂದ ಹಿಡಿದು, ದಿನವೂ ಓಡಾಡುವ ರಸ್ತೆಯಲ್ಲಿ ಅರ್ಧ ಮೈಲು ದೂರದಲ್ಲಿ ಸೆಲ್ ಕವರೇಜ್ ಎಲ್ಲಿಲ್ಲವೋ ಅಲ್ಲಿ - ನನ್ನ ಸೆಲ್ ಫೋನ್ ಬ್ಯಾಟರಿ ಖಾಲಿ ಆಗಿರುವ ಘಳಿಗೆಯಲ್ಲಿ, ಸ್ಪೇರ್ ಟಯರಿನ ಕೀ ಇಲ್ಲದಿರುವ ಸಮಯದಲ್ಲಿ, ಇನ್ನೇನು ಜೋರಾಗಿ ಮಳೆ ಬಂದೇ ಬಿಡುತ್ತೇನೋ ಎನ್ನುವ ಹೊತ್ತಿನಲ್ಲಿ - ಎಷ್ಟೆಲ್ಲಾ ಕೆಲಸಗಳು ಬಾಕೀ ಇವೆ ಎಂದು ಕೇವಲ ಒಂದು ಘಂಟೆ ಆಫೀಸನ್ನು ಮುಂಚೆ ಬಿಟ್ಟು ಶುಕ್ರವಾರ ಸಂಜೆ ನನ್ನಷ್ಟಕ್ಕೆ ನಾನಿರುವಾಗ ಹೀಗೆಲ್ಲಾ ಆಗಬೇಕೆಂದರೆ...

Sunday, July 08, 2007

’ಅವರೊಡನೆ’ ಒಂದು ಸಂವಾದ...

ನಮ್ಮೂರಿನ್ ಪೋಸ್ಟ್ ಮಾಸ್ಟರ್ ಆಚಾರ್ರು ತಮಿಗ್ ಬರೋ ಅಷ್ಟೊಂದ್ ಕಡಿಮೆ ಸಂಬಳದಲ್ಲಿ ಅದ್‌ಹೆಂಗ್ ಜೀವ್ನಾ ನಡೆಸ್ತಿದ್ರೋ, ಮಕ್ಳೂ-ಮರಿ ಇರೋವಂತ ದೊಡ್ಡ ಸಂಸಾರಾನೇ ಅವ್ರುದ್ದು, ಅಂತ ಎಷ್ಟೋ ಸರ್ತಿ ಯೋಚ್ನೆ ಬರುತ್ತೆ. ನಾನ್ ಕೆಲ್ಸಾ ಮಾಡೋಕ್ ಶುರು ಮಾಡ್ದಾಗ್ಲಿಂದ್ಲೂ ಒಂದಲ್ಲಾ ಒಂದ್ ರೀತಿಯಿಂದ ಸಂಬ್ಳಾ ಜಾಸ್ತಿ ಆಗ್ತಾ ಹೋಗ್ತಾ ಇರೋದು ಸಹಜವಾದಷ್ಟೇ ಕೈಗ್ ಬರೋ ಕಾಸು ಕಮ್ಮೀ ಅಂತ್ಲೇ ಅನ್ನಿಸ್ತಿರೋದೂ ಅಷ್ಟೇ ಸಹಜವಾಗಿ ಬಿಟ್ಟಿದೆ! ಈ ಆಸೆಗೊಳಿಗೊಂದ್ ಮಿತಿ ಅಂತಾ ಬ್ಯಾಡ್ವಾ ಅಂತ ಬಹಳಷ್ಟ್ ಸರ್ತಿ ಅನ್ಸಿರೋದೂ ನಿಜವೇ.

ಆ ಪೋಸ್ಟ್ ಮಾಸ್ಟರ್ರುಗಳಿಗೆ ಏನ್ ಕಡಿಮೆ ಇಲ್ಲಾ ಪ್ರತೀ ಸರ್ತಿ ಮನಿ ಆರ್ಡ್ರು ಹಂಚೋಕ್ ಹೋದಾಗ್ಲೆಲ್ಲಾ ಎರಡ್ ರೂಪಾಯ್, ಐದ್ ರೂಪಾಯ್ ಅಂತ ಜನ ಕೊಡ್ತ್ಲೇ ಇದಾರೆ, ಅವರ ಮೇಲ್ ಸಂಪಾದ್ನೇ, ಅದೇ ಗಿಂಬಳಾ ಅಂತರಲ್ಲಾ ಅದಕ್ಕ್ಯಾವಾಗ್ಲೂ ಕಮ್ಮೀ ಅಂತಿಲ್ಲ. ಬರೋ ಸಂಬ್ಳದಿಂದ ಜೀವ್ನಾ ಸಾಗ್ಸೋದ್ ಅಂದ್ರೆ ಹುಡುಗಾಟ್ವೇ, ಈಗಿನ್ ಕಾಲ್ದಲ್ಲಿ ಹಂಗ್ ಯಾವಾನಾದ್ರೂ ಮಾಡ್ತಾನೆ ಅಂತಂದ್ರೆ ಅಷ್ಟೇಯಾ, ತಿಂಗ್ಳು ಕೊನಿಗೆ ಹೊಟ್ಟೇಗ್ ತಣ್ಣೀರ್ ಬಟ್ಟೆಯೇ ಗತಿ.

ಏನ್ ಮೇಲ್ಸಂಪಾದ್ನೇ ಬಂದ್ರೂ ಅಷ್ಟೇ - ಒಬ್ ಅಂಚೆ ಇಲಾಖೆ ಕೆಲ್ಸಗಾರನಿಗೆ ಬಹಳಷ್ಟು ಕನಸುಗಳೇನಾದ್ರೂ ಇರೋಕಾಗುತ್ಯೇ? ಅವೇ - ನಮ್ ಮಕ್ಳುನ್ ಇಂಜಿನಿಯರಿಂಗೂ, ಮೆಡಿಕಲ್ಲೂ ಓದಿಸ್ಬೇಕು; ದೊಡ್ಡ ಬಂಗ್ಲೇ ಕಟ್ ಬೇಕು; ಹಾಯಾಗಿ ಇರ್‌ಬೇಕು, ಇತ್ಯಾದಿ. ಗೃಹಸ್ಥಾಶ್ರಮ ಅಂದ್ರೇನು ಅಂತ ಗೊತ್ತಾಗೋದೇ ಮನೇ ತುಂಬ ಮಕ್ಳಿರೋಂಥ ಮನೆಯ ಹಿರಿಯನಾಗಿ, ಸರ್ಕಾರಿ ಶಾಲೆ ಮೇಷ್ಟ್ರೋ ಅಥವಾ ಅಂಚೆ ಇಲಾಖೆ ನೌಕರನೋ ಆಗಿಕೊಂಡು ಮನೆ ಯಜಮಾನನಾಗಿ ಇಪ್ಪತ್ತು-ಮೂವತ್ತು ವರ್ಷ ಜೀತಾ ತೇದಿ-ತೇದಿ ಹಾಕ್ದಾಗ್ಲೇ. ಮಕ್ಳೂ-ಮರಿ ಓದಿಸೋದ್ ಹಾಗಿರ್ಲಿ, ಕಾಸಿಗ್ ಕಾಸು ಕೂಡಿ ಎರಡು ಹೆಣ್ ಮಕ್ಳು ಮದುವೆ ಮಾಡಿ ಸೈ ಅನ್ನಿಸ್ಕ್ಯಳ್ಳಿ ನೋಡಾಣಾ...ಇಂಥಾ ಒಂದ್ ಗೃಹಸ್ಥಾಶ್ರಮದಲ್ಲಿ ಬದುಕಿ ಜಯಿಸಿದಾ ಅಂತಂದ್ರೆ ಎಕ್ಸಿಕ್ಯೂಟಿವ್ ಆಗಿ ಕೈ ತುಂಬಾ ಸಂಪಾದ್ನೇ ಮಾಡೋ ಹತ್ ಹತ್ತು ಕೆಲ್ಸದ ಪುಣ್ಯ ಸಿಕ್ಕ ಹಾಗೆ...ಅದು ನೋಡ್ರ್ಯಪ್ಪಾ ನಿಜವಾದ ಸಂಸಾರ ಅಂದ್ರೆ. ಪಟ್‌ಪಟ್ಟಿ, ಸ್ಕೂಟ್ರು, ಕಾರ್‌ನ್ಯಾಗೆ ಹೋಗಿ ಚೈನಿ ಮಾಡ್‌ತಿರೋ ನಮ್ಮಂತೋರಿಗೆ ಗೊತ್ತಾಗಂಗಿಲ್ಲ. ಒಂದೋ ಎರಡೋ ಹಡಕಂಡೇ ನಮ್ ಆಕ್ರಂದನ ಮುಗಿಲು ಮುಟ್ಟೋ ಹೊತ್ತಿನೊಳಗ ಹಿಂದೆ ಹೆಂಗಪ್ಪಾ ಜನ ಸಂಸಾರ ಸಾಗಿಸ್ತಿದ್ರೂ ಅನ್ಸಂಗಿಲ್ಲಾ?

ಹಾಕ್ಯಂಡ್ ಚಪ್ಲೀ ಸೈತಾ ಸವಿಯಂಗಿಲ್ಲಾ ಇದೊಂದ್ ನಮನಿ ಕೆಲ್ಸಾ ನೋಡ್ರಿ...ಅಂಗಿ ಕಾಲರ್ ಕೊಳೀ ಆಗದಿರೋಂಥ ಹವಾಮಾನದೊಳಗೆ ಬೇಯೋ ನಮಗೆ ಅತ್ಲಾಗ್ ಹೋಗಿ ಇತ್ಲಾಗ್ ಬಂದ್ರೆ ಉಸ್ಸ್ ಅನ್ನುವಂಗ್ ಆಗ್ ಹೋಗ್ತತಿ. ಮೈ ಮುರ್ದು-ಬಗ್ಸಿ ಕೆಲ್ಸಾ ಮಾಡೋ ಹೊತ್ಯ್ನ್ಯಾಗೆ ಕೂತ್ ಕಾಲಾ ಹಾಕ್ತವಿ, ಇನ್ನು ಕೂತ್ ತಿನ್ನೋ ಹೊತ್ತಿಗೆ ತೆವಳಿ ಸಾಯ್ತೇವಿ ಅನ್ಸಂಗಿಲ್ಲಾ? ಮನ್ಷಾ ಅಂದೋನ್ ಓಡಾಡ್ ಬಕು, ಮೈ ಬಗ್ಸಿ ದುಡಿಬಕು, ಹಂಗಾದ್ರೆ ಒಂದಿಷ್ಟು ಪರಿಶ್ರಮಾನಾದ್ರೂ ಆಗ್ತತಿ, ಮೈ ಮನಸು ಗಟ್ಟೀನಾರೆ ಆಗ್ತಾವೆ, ಅದು ಬಿಟ್ಟು ಬರೀ ತಲಿ ಖರ್ಚ್ ಮಾಡಿಕೊಂಡು ಪ್ರಪಂಚದ್ ಜನಾ ಎಲ್ಲಾ ಹಿಂಗ್ ಕುಂತಾ ಕಾಲಾ ತೆಗದೂ-ತೆಗದೂ ಅದ್ ಏನ್ ಉದ್ದಾರ್ ಆಗೈತಿ ಅಂತ ನೀವಾ ಹೇಳ್ರಲ್ಲಾ.

ಅದಿರ್ಲಿ ಬಿಡ್ರಿ...ಏನ್ ಮಳೀರಿ ಈ ಸರ್ತಿ ಅವನೌವ್ನು, ಎಲ್ಲಾ ಕೆರೆ ಕಟ್ಟೇ ತುಂಬಿಕ್ಯಂಡ್ ಕೋಡೀ ಬಿದ್ದ್ ಹೋಗೋಷ್ಟೋ...ಇನ್ನೂ ನಿಂತಿಲ್ಲ ನೋಡ್ರಿ ಇದರ ಅರ್ಭಟಾ...ಗೊಂಧೀ ಹೊಳೀ ತುಂಬಿ ರಸ್ತೀ ಮ್ಯಾಗ್ ನೀರ್ ಬಂದು ಎಲ್ಲಾ ಬಸ್ನೂ ನಿಲ್ಲಿಸ್ಯಾರ್ರೀ, ಹಾನಗಲ್ಲೂ, ಹುಬ್ಬಳ್ಳಿ ಹೋಗ್‌ಬಕು ಅಂದ್ರ ತಿರುಕ್ಯಂಡ್ ಹೋಗ್‌ಬಕು. ವರದಾ ನದಿ ಇಷ್ಟು ಯಾವತ್ತೂ ತುಂಬಿ ಹರಿದಿದ್ದಾ ನನ್ ಜೀವ್‌ಮಾನ್‌ದಾಗ್ ನೋಡಿದ್ದಿಲ್ರಿ. ದೇಶಾ ಪೂರ್ತಿ ತೊಳದ್ ಹೋಗೋಷ್ಟು ಮಳೀ ಬಂದ್ರೂ ನಮ್ ದೇಶದಾಗ್ ತುಂಬಿರೋ ಕೋಳೀ ಎಲ್ಲೂ ಹೋಗೋಂಗ್ ಕಾಣ್ಸಲ್ಲ. ದೊಡ್ಡ ಮನ್ಷಾರು ತಮ್ ಪಾಡಿಗ್ ತಾವ್ ಇರ್ತಾರ, ಇತ್ಲಾಗ್ ಬಡವ್ರು ಸತ್‌ಗಂತ ಕುಂತಾರೆ, ಹೇಳೋರಿಲ್ಲ ಕೇಳೋರಿಲ್ಲ ಅನ್ನಂಗಾಗಿ ಹೋಗ್ಯದೆ. ಸಾಲಾ ಸೂಲಾ ಮಾಡೀ ಕಾಳೂ-ಕಡಿ ತಂದು ಬಿತ್ತಿ ಇನ್ನೇನು ಪೈರು ಚಿಗರ್ಕ್ಯಬಕು ಅನ್ನೋಷ್ಟರಲ್ಲಿ ಇದೊಂದ್ ಹಾಳ್ ಮಳಿ ಹೊಡಕಂತ ಕುಂತತ್ ನೋಡ್ರಿ...ಸಾಲಾ ಕೊಟ್ಟೋರ್‌ಗೇನ್ ಅನ್ನಣ, ಬಡ್ಡಿ ಹೆಂಗ್ ತೀರ್ಸಣ, ಹೆಂಡ್ರೂ-ಮಕ್ಳೂ ಮೈ ಮ್ಯಾಗ್ ಅರಿವೇ-ವಸ್ತ್ರಾನ್ ಎಲ್ಲಿಂದಾ ತರಣಾ. ಅತ್ಲಾಗ್ ಜೀವಾ ಕಳಕಂತವಿ ಅಂದ್ರೂ ಒಂದ್ ನಿಮ್ಷಾ ಮಳಿ ಬಿಡವಲ್ದು, ಮನ್ಯಾಗಾ ಬಿದ್ದು ಸಾಯ್‌ಬಕು...ಅದೂ ಅಲ್ಲೀ-ಇಲ್ಲೀ ಸೋರೀ-ಸೋರಿ ಎತ್ಲಾಗ್ ನೋಡಿದ್ರೂ ಹಸೀಹಸೀ ಮುಗ್ಗುಲು ವಾಸ್ನೆ ಹಿಡದ್‌ಬಿಟ್ಟತಿ.

***

’ಯಾರಿಗೆ ಟೀ ತರ್‌ಬೇಕು? ಇಲ್ಲಿ ಯಾರೂ ಇಲ್ಲವಲ್ಲಾ...’.

’ಏ ಇವಳೇ... ಇವರಿಗೊಂದು ಕಪ್ ಚಾ ತಂದ್ ಕೊಡು...’ ಅಂತ ಇನ್ನೇನೋ ಬಡಬಡಿಸುತ್ತಾ ಇದ್ರಿ... ಯಾವ್ದಾದ್ರೂ ಕನಸೇನಾದ್ರೂ ಬಿದ್ದಿತ್ತಾ?