Wednesday, September 19, 2007

ಅಂತರಂಗದಲ್ಲಿ ಆಡಿಯೋ - ಇನ್ನೂರೈವತ್ತರ ಹೊಸ ಪ್ರಯೋಗ

ಬರೀ ಹದಿನೆಂಟು ತಿಂಗಳಲ್ಲಿ ’ಅಂತರಂಗ’ದಲ್ಲಿ ಇನ್ನೂರೈವತ್ತು ಲೇಖನಗಳು ಬಂದಿವೆ ಅನ್ನೋದನ್ನ ನನಗೇ ನಂಬೋಕಾಗ್ತಾ ಇಲ್ಲ...ದಿನಾ ಸಾಯೋರಿಗೆ ಅಳೋರ್ ಯಾರು ಅನ್ನೋ ಹಾಗೆ ಕೆಲವರು ಬಂದು ಮತ್ತೆ ಬಾರದೇ ಹೋದರೂ, ಇವತ್ತಿಗೂ ತುಂಬಾ ಜನ ಇಲ್ಲಿನ ಲೇಖನಗಳನ್ನ ನೋಡ್ತಾ ಇರೋದರ ಜೊತೆಗೆ ಇಲ್ಲಿಗೆ ಒಂದು ಸೀಮಿತ ವೀಕ್ಷಕರಿದ್ದಾರೆ ಅನ್ನೋದಂತೂ ಸ್ಪಷ್ಟ. ಈ ಬರಹಗಳ ಸಂಖ್ಯೆಗೇನೂ ಮಹತ್ವವಿಲ್ಲ ಬಿಡಿ, ಆದರೆ ಹೆಚ್ಚೂ ಕಡಿಮೆ ಅರ್ಧ ಘಂಟೆಯಲ್ಲಿ ಹುಟ್ಟಿ ದಾಖಲಾಗೋ ಈ ಲೇಖನಗಳಿಗೆ ಬೇಕಾದಷ್ಟು ಮಿತಿಗಳಂತೂ ಇವೆ. ಇಲ್ಲಿನ ಲೇಖನಗಳು ಪರಿಪೂರ್ಣವಂತೂ ಅಲ್ಲವೇ ಅಲ್ಲ, ಜೊತೆಯಲ್ಲಿ ಈ ಲೇಖನಗಳು ಸಾಧಿಸೋ ತರ್ಕಕ್ಕೆ ಹೆಚ್ಚಿನ ಪಕ್ಷ ಯಾವುದಾದ್ರೂ ಹುಂಬ ತರ್ಕ ಇರುತ್ತ್ಯೇ ವಿನಾ ಸರಿಯಾದ ದಾಖಲೆಗಳಾಗಲೀ ಪರಾಮರ್ಶೆಗಳಾಗಲೀ ಸಿಗೋದಿಲ್ಲ...ಯಾಕೆ ಇಲ್ಲಾ ಅಂತಂದ್ರೆ ಅವುಗಳನ್ನ ಒಟ್ಟು ಮಾಡುತ್ತಾ ಹೋದ್ರೆ ಅದಕ್ಕೆ ಸಮಯ ತಗೊಳುತ್ತೆ, ಇದಕ್ಕಿಂತ ಹೆಚ್ಚಿನ ಸಮಯ ಯಾರ ಬಳಿಯಲ್ಲಿದೆ ಹೇಳಿ!?

ತಮಾಷೆಯ ಮಾತು ಹಾಗಿರಲಿ, ಇತ್ತೀಚೆಗೆ ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ರೆ ಹೇಗೆ ಅನ್ನೋ ಆಸೆ ಬಂದಿದ್ದಂತೂ ನಿಜ. ನಿನ್ನೆ ಬರೆದ ’ಒಣದ್ರಾಕ್ಷಿ ಸ್ನೇಹಿತರ ಪರಸಂಗ’ ಲೇಖನದಲ್ಲಿ ಯಾವತ್ತೂ ಮಾತನಾಡದ ಒಣದ್ರಾಕ್ಷಿಗಳಿಂದ ಒಂದಿಷ್ಟು ಕಲ್ಪನೆಯ ಪಾತ್ರಗಳನ್ನು ಸೃಷ್ಟಿಸಿದ್ದೆ, ಹಾಗೆ ಮಾಡೋದರಿಂದ ಹೇಳೋದನ್ನ ನಿರ್ಭಿಡೆಯಿಂದ ಹೇಳಬಹುದು ನೋಡಿ ಒಂದು ರೀತಿ ಕಾರ್ಟೂನ್ ಶೋಗಳಲ್ಲಿ ಬರೋ ಪಾತ್ರಗಳ ಹಾಗೆ ಯಾರನ್ನೂ ಅಫೆಂಡ್ ಮಾಡದೆ. ಈ ದಿನ ಕನ್ನಡ ಬರಹಗಳಿಗೆ ಆಡಿಯೋ ಸ್ವರೂಪವನ್ನು ಕೊಟ್ಟರೆ ಹೇಗೆ ಎಂದು ಇಲ್ಲೊಂದು ತುಣುಕು ಎಮ್‌ಪಿ೩ ಪೈಲ್ ಅನ್ನು ಹಾಕಿದ್ದೇನೆ, ಈ ಪ್ರಯೋಗ ಮುಂದೆ ಬೆಳೆಯುತ್ತೋ ಬಿಡುತ್ತೋ ಗೊತ್ತಿಲ್ಲ, ಕೊನೇಪಕ್ಷ ಭಾಷೆಯ ಬಳಕೆಯ ಸಂದರ್ಭದಲ್ಲಿ ಬರೆದು ಸಿದ್ಧಪಡಿಸಲಾರದ್ದನ್ನು, ಸಾಧಿಸಿ ತೋರಿಸಲಾಗದ್ದನ್ನು ಹೇಳಿಯಾದರೂ ತೋರಿಸೋಣವೆಂಬ ಹುಂಬ ಕಲ್ಪನೆ ಅಷ್ಟೇ.

MP3 ಆಡಿಯೋ ಲಿಂಕ್‌ಗೆ ಇಲ್ಲಿ ಕ್ಲಿಕ್ ಮಾಡಿ

ಭಾಷೆ ಅನ್ನೋದು ಬರೆದಾಗಲೇ ಚೆಂದವಂತೆ, ಆದ್ರೆ ಒಂದು ಆಡುವ ಧ್ವನಿಯಲ್ಲಿರೋ ಜೀವಂತಿಕೆಯನ್ನ ಬರವಣಿಗೆಗೆ ಹೇಗೆ ತರೋದು? ಅದರಲ್ಲಿರೋ ಸವಾಲುಗಳೇ ಬೇರೆ. ಉದಾಹರಣೆಗೆ, ’ನಮಸ್ಕಾರ ಸಾರ್ ಹೇಗಿದ್ದೀರಾ?’ ಅನ್ನೋದನ್ನ ಬರೆದ್ರೆ ಯಾವ ಧ್ವನಿಯಲ್ಲಿ ಹೊರ ಹೊಮ್ಮುತ್ತೆ ಅಂತ ಹೇಳೋದ್ ಕಷ್ಟಾ. ಪ್ರತೀ ವಾಕ್ಯವನ್ನ ಯಾರು ಯಾವಾಗ ಯಾವ ಸಂದರ್ಭದಲ್ಲಿ ಹೇಳಿದ್ರು ಅನ್ನೋದರ ಮೇಲೆ ಆಯಾ ವಾಕ್ಯದ ಹಿಂದಿನ ಜೀವಂತಿಕೆ ನಿರ್ಣಯವಾದ್ರೂ ಅದನ್ನ ಬರೆದವರಿಗಿಂತ್ಲೂ ಓದೋರಿಗೆ ತಾನೇ ಅದು ಹೆಚ್ಚು ಅರ್ಥವಾಗಬೇಕಾದ್ದು? ಓದೋರಿಗೆ ನಿಜವಾಗ್ಲೂ ಬರವಣಿಗೆಯ ಹಿಂದಿನ ಧ್ವನಿ ತಲುಪಿಸುವ ನಿಟ್ಟಿನಲ್ಲಿ ಬರವಣಿಗೆಯ ಜೊತೆಗೆ ಶಬ್ದವನ್ನೂ ಜೊತೆ ಮಾಡಿದ್ರೆ ಹೇಗೆ ಎಂಬ ಆಲೋಚನೆ ಮೂಡಿತು. ಜೊತೆಗೆ ’ಅಂತರಂಗ’ದ ಕೆಲವು ಬರಹಗಳನ್ನ ಆಡಿಯೋ ರೂಪದಲ್ಲಿ ಹಾಕಿದ್ರೆ ಹೇಗೆ ಎನ್ನೋ ಉಪಾಯ ಹೊಳೆಯಿತು, ಅದರ ಬೆನ್ನ ಹಿಂದೆ ಒಂದಿಷ್ಟು ವೆಬ್ ಸೈಟ್‌ಗಳನ್ನು ಹುಡುಕಿಕೊಂಡು ಹೋದ ನನಗೆ ಕೆಲವು ಪುಕ್ಕಟೆ ಸಾಫ್ಟ್‌ವೇರುಗಳ ಸಹಾಯದಲ್ಲಿ ಸುಲಭವಾಗಿ MP3 ಆಡಿಯೋ ಫೈಲುಗಳನ್ನು ತಯಾರ್ಸೋಕ್ ಆಯ್ತು. ಹಾಗೆ ತಯಾರಿಸಿದ್ದನ್ನ ಅಪ್‌ಲೋಡ್ ಮಾಡಿ ಅದನ್ನ ಆಡಿಯೋ ರೂಪದಲ್ಲಿ ಲಿಂಕ್ ಮಾಡಿ, ಈಗ ನಿಮ್ಮ ಮುಂದೆ ಒಂದು ತುಣುಕನ್ನ ಇಡ್ತಾ ಇದ್ದೇನೆ. ಇದನ್ನ ನೋಡಿ/ಕೇಳಿ ನಿಮಗೇನನ್ನಿಸುತ್ತೋ ತಿಳಿಸಿ.

ನಾವು ಆಡೋ ನುಡಿ, ಅದರ ಧ್ವನಿಯಲ್ಲಿನ ಬದಲಾವಣೆಗಳು, ಆಕ್ಸೆಂಟುಗಳು, ಆಡುನುಡಿಗಳು, ಡಯಲೆಕ್ಟುಗಳು, ಕೀರಲು ಸ್ವರದಿಂದ ಹಿಡಿದು ಬೋರ್ ಹೊಡೆಸುವ ಒಂದೇ ವೇಗದ ಧ್ವನಿಗಳವರೆಗೆ ಇವೆಲ್ಲವೂ ಸಾಕಷ್ಟು ವೈವಿಧ್ಯತೆಯನ್ನು ನೀಡುತ್ತವೆ. ಬರೆಯೋ ಮಾಧ್ಯಮಕ್ಕೆ ಮಾತಿನ ಮಾಧ್ಯಮಕ್ಕಿಂತ ಸಾಕಷ್ಟು ಮಿತಿಗಳಿವೆ. ಎಷ್ಟೋ ಸಾರಿ, ನಾವು ಏನು ಹೇಳಬೇಕೆಂದುಕೊಂಡಿರುತ್ತೇವೆ ಅವೆಲ್ಲವನ್ನೂ ಹೇಳೋಕೇ ಆಗೋದಿಲ್ಲ, ಇನ್ನು ಕೆಲವು ಸಾರಿ ನಾವು ಬರೆಯೋದೇ ಒಂದು ಅದರ ಅರ್ಥವೇ ಇನ್ನೊಂದು ಎನ್ನುವಂತಾಗುವುದು ಸಾಮಾನ್ಯ ಎಂದು ನನ್ನ ಅನಿಸಿಕೆ.

ಈ ಪ್ರಯೋಗ ಯಶಸ್ವಿಯಾಗದಿದ್ದರೇನಂತೆ ನಷ್ಟವಂತೂ ಇಲ್ಲ, ಆದರೆ ಬೇಕೆನಿಸಿದ್ದನ್ನು ಮಾತಿನ ರೂಪದಲ್ಲಿ ದಾಖಲಿಸಿ ಕೊನೆಗೆ ಅದನ್ನು ಸಾವಧಾನವಾಗಿ ಟೈಪ್ ಮಾಡಿಕೊಂಡು ಯಾವತ್ತಿದ್ದರೂ ಬರವಣಿಗೆಗೆ ಇಳಿಸುವುದು ಇದ್ದೇ ಇರುತ್ತೆ. ಜೊತೆಗೆ, ನೀವು ಮಾತನಾಡಿದ್ದನ್ನು ಇನ್ನೊಬ್ಬರು ವೇಗವಾಗಿ ಟೈಪ್ ಮಾಡಿಕೊಟ್ಟರೂ ನಡೆದೀತು. ಅಕ್ಷರಗಳ ಜೊತೆಗೆ ಮಾತನ್ನೂ ತೇಲಿಬಿಡುವುದು ಒಂದು ಆಲೋಚನೆಯಾದರೆ, ಬರವಣಿಗೆಯ ಶಿಸ್ತನ್ನು ಕಾಪಾಡಿಕೊಂಡು ಬಂದ ಕೆಲವರಿಗೆ ಅವರವರ ಮಾತಿನ ಶಿಸ್ತನ್ನೂ ಕಾಪಾಡಿಕೊಂಡು ಹೋಗುವುದು ಅಗತ್ಯವಾಗುತ್ತದೆ, ಇಲ್ಲವೆಂದಾದರೆ ಮೊದಲೆಲ್ಲ ಆತ್ಮವಿಶ್ವಾಸದಿಂದ ಕನ್ನಡದಲ್ಲಿ ಮಾತನಾಡುತ್ತಿದ್ದ ನನಗೆ ಆಯಾ ಸಂದರ್ಭಕ್ಕೆ ಯೋಗ್ಯ ಪದಗಳನ್ನು ಹುಡುಕುವ ಆಭಾಸವಾದಂತಾಗುತ್ತದೆಯೇನೋ ಎನ್ನುವ ಹೆದರಿಕೆ ಇತ್ತೀಚೆಗೆ ಹೆಚ್ಚಾಗುತ್ತಿತ್ತೇಕೆ?

6 comments:

  1. ಸತೀಶ್,

    ನನಗೆ ನಿಮ್ಮ ಹೊಸ ಪ್ರಯೋಗ ಹಿಡಿಸಿತು. ಚೆನ್ನಾಗಿದೆ.

    ReplyDelete
  2. Anonymous11:56 AM

    ಚೆನ್ನಾಗಿದೆ. ಹೀಗೆ ಮುಂದುವರೆಸಿ.ಓದೋ ಕಷ್ಟಾನೂ ಉಳಿಯುತ್ತದೆ :)

    ReplyDelete
  3. ಈ idea ಚೆನ್ನಗಿದೆ. ಕನ್ನಡ ಬ್ಲಾಗ್ ಗಳಲ್ಲಿ podcast ಇರ್ಲಿಲ್ಲ ಅನ್ಸುತ್ತೆ.
    font & other technical problems ಇರೋರು ಸಹ ಈಗ ಅರಾಮಾಗಿ ಓದಬಹುದು

    -ಕೃಪೇಶ್

    ReplyDelete
  4. ಐಡಿಯಾ ಚೆನ್ನಾಗಿದೆ. ಸ್ವರ ಚೆನ್ನಾಗಿದೆ. ಮುಂದುವರಿಸಿ..
    ಸಂತು.

    ReplyDelete
  5. ರಾಜೇಶ್, sritri, ಕೃಪೇಶ್ ಮತ್ತು ಸಂತು,

    ಈ ಹೊಸ ಪ್ರಯೋಗವನ್ನು ಹಾರೈಸಿದ್ದಕ್ಕೆ ಧನ್ಯವಾದಗಳು, ನೀವೆಲ್ಲ ಒಳ್ಳೆಯ ಲೇಖನಗಳು ಎಂದು ಯಾವುದನ್ನು ಕರೆಯುತ್ತೀರೋ ಅವುಗಳೆಲ್ಲ - ಅಂತರಂಗದ ಲೇಖನಗಳಿಗಷ್ಟೇ ಸೀಮಿತವಾಗದೇ - ಪಾಡ್‌ಕ್ಯಾಸ್ಟ್ ಆಗಿ ದೊರೆಯಬೇಕು ಎನ್ನುವುದು ನನ್ನ ಆಶಯ, ಎಷ್ಟೋ ಜನ ನನ್ನ ಅನಿವಾಸಿ ಸ್ನೇಹಿತರು ಕನ್ನಡ ಓದಲಾರದೆ ತಡಪಡಿಸುತ್ತಿದ್ದಾರೆ ಅಂತಹವರಿಗೆ ಇದರಿಂದ ಬಹಳಷ್ಟು ಅನುಕೂಲವಾದೀತು ಎಂಬ ನಂಬಿಕೆ ನನ್ನದು.

    ReplyDelete