Saturday, January 24, 2009

ಆಹಾ, ಜನವರಿ!

ಓಹ್, ಈ ಜನವರಿಯಲ್ಲಿ ಅದೇನೇನೆಲ್ಲಾ ಆಗ್ತಾ ಇದೆ! ಓಬಾಮಾ ಪಬಾಮಾ ಪ್ರೆಸಿಡೆಂಟ್ ಆಗಿರೋ ಬಗ್ಗೆ ಬೇರೆ ಎಲ್ರೂ ಬರೀತಾ ಇರೋವಾಗ ನಾನೂ ಅದನ್ನೇ ಬರೆದ್ರೆ ಏನ್ ಪ್ರಯೋಜನ? ಈ ಜನವರಿಯ ಇಪ್ಪತ್ತನಾಲ್ಕು ದಿನಗಳಲ್ಲಿ ಆಗ್ಲೇ ಹನ್ನೊಂದು ಹನ್ನೆರಡು ಪರ್ಸೆಂಟ್ ಡೌನ್ ಆಗಿರೋ ನನ್ನ ಪೋರ್ಟ್‌ಫೋಲಿಯೋ ಬಗ್ಗೆ ಚಿಂತಿಸ್ಲೋ ಅಥವಾ ಇತ್ತೀಚೆಗೆ ನನ್ನ ಜೊತೆಯಾದ ಹೊಸ ಬಾಸ್ ಹಾಗೂ ಹೊಸ ಕೆಲಸಗಳ ಬಗ್ಗೆ ಕೊರೆದರೆ ಹೇಗೆ?

ಈ ಇಂಗ್ಲೀಷ್ ಕ್ಯಾಲೆಂಡರಿನ ಜನವರಿ ಅದೆಷ್ಟು ಹೊಸದನ್ನು ತಂದಿದೆ ಈ ವರ್ಷ - ಅಮೇರಿಕದ ಹೊಸ ಪ್ರೆಸಿಡೆಂಟ್ ಓಬಾಮ ಸಿಂಹಾಸನವನ್ನೇರಿದ್ದು, ಆ ಸಮಾರಂಭದಲ್ಲಿ ಸುಮಾರು ಇಪ್ಪತ್ತು ಲಕ್ಷ ಜನ ಸೇರಿದ್ರಂತಲ್ಲಪ್ಪ! ಅಬ್ಬಾ, ಅದೆಂತಾ ಪವರ್ ಇದ್ದಿರಬಹುದು?

’ಲೋ, ಸುಮ್ನಿರಯ್ಯಾ. ನಮ್ಮ್ ದೇವೇಗೌಡ್ರು ಮುಖ್ಯಮಂತ್ರಿ ಆದ ದಿನ ಇದಕ್ಕಿಂತ ಹೆಚ್ಚು ಜನಗಳನ್ನ ಸೇರಿಸಿರ್‌ಲಿಲ್ವಾ? ದಾವಣಗೆರೇಲಿ ಬಂಗಾರಪ್ಪ ಒಂದೇ ಸಮಾವೇಶಕ್ಕೆ ಹತ್ತು ಲಕ್ಷ ಜನ ಸೇರ್ಸಿದ್ ಮುಂದೆ ಅಮೇರಿಕದ ಮಿಲಿಯನ್ನು ಯಾವ ಲೆಕ್ಕ?’ ಎಂದು ಎಲ್ಲಿಂದಲೋ ಯಾವ್ದೋ ಧ್ವನಿ ಕೇಳಿದ ಹಾಗಾಯ್ತು, ಒಡನೇ ಸುಬ್ಬನ ಕಾಲ್ ಸ್ಪೀಕರ್ ಫೋನಿನಲ್ಲಿ ಬಂದ ಅನುಭವ, ಆದ್ರೆ ಇವೆಲ್ಲ ನನ್ನ ಭ್ರಮೆ ಅಂದ್‌ಕೊಂಡು ಮುಂದೆ ಯೋಚಿಸ್ತಾ ಹೋದೆ. ಆ ಪಾಟಿ ಜನ ವೋಟ್ ಹಾಕಿದ್ರಂತಲ್ಲ ಈ ಸರ್ತಿ, ಪಾಪ ಕರಿಯ ಮೇಲ್ ಬಂದವನೇ, ಮೊದಲ್ನೇ ಸರ್ತಿ ದಾಖಲೆ ನಿರ್ಮಿಸ್ಲಿ ಅಂತ ಇದ್ದಿರಬಹುದೋ ಏನೋ.

’ಯಾರ್ ಪ್ರೆಸಿಡೆಂಟ್ ಆದ್ರೆ ನಮಗೇನ್ ಸ್ವಾಮೀ? ದುಡಿಯೋ ಹೆಸರಿಗೆ ಬಂದ ಬಡ್ಡೀ ಹೈಕ್ಳು ನಾವು, ಅದೇ ನಮ್ ಕಾಯ್ಕ ನೋಡಿ!’ ಅಂತ ಮತ್ತೊಂದು ಧ್ವನಿ ಕೇಳಿಸ್ತು, ಈ ಸರ್ತಿ ನಿಜವಾಗ್ಲೂ ಯಾರೋ ನನ್ನ ತಲೆ ಒಳಗೆ ಸೇರಿಕೊಂಡು ನುಡಿದ ಅನುಭವ.

ಜನಗಳು ಅಂದ್ಕೊಂಡವರೆ, ಪ್ರೆಸಿಡೆಂಟ್ ಬದಲಾದ ಕೂಡ್ಲೆ ಎಲ್ಲವೂ ದಿಢೀರನೆ ಬದಲಾಗುತ್ತೆ ಅಂತ. ಡಿಸೆಂಬರ್ ಮುವತ್ತೊಂದರಿಂದ ಜನವರಿ ಒಂದರೊಳಗೆ ಏನೂ ಬದಲಾಗೋದಿಲ್ಲ, ಕ್ಯಾಲೆಂಡರ್ ಒಂದನ್ನು ಬಿಟ್ಟು. (ಅದೇ ಚೈತ್ರ ಮಾಸ ಶುರುವಾಗಲಿ ನೋಡಿ ಬೇಕಾದಷ್ಟು ಬದಲಾವಣೆಗಳು ನಿಮಗೆ ಅರಿವಿಗೆ ಬಂದೋ ಬರದೆಯೋ ನಡೆದೇ ಇರತ್ತೆ.)

ಸಾವಿರಾರು ಜನಗಳು ಕೆಲ್ಸ ಕಳೆದುಕೊಂಡ್ರು. ಭಾರತದಲ್ಲಿ ನಂಬರ್ ಮೂರನೇ ಕಂಪನಿಯ ಗುರುವಾಗಿದ್ದವರು ಶಾಪವಾದವರು. ಒಂದು ಕಾಲದಲ್ಲಿ ಯಶಸ್ಸಿನ ಉತ್ತುಂಗವನ್ನು ಮೆರೆದವರು ಇಂದು ಇತಿಹಾಸವಾಗಿ ಹೋದರು. ಎಂಟು ವರ್ಷ ಆಳ್ವಿಕೆ ಮಾಡಿ ಹೊರಗೆ ಹೋದ ಬುಷ್ ಸರ್ಕಾರದ ಲೆಕ್ಕಾಚಾರವನ್ನು ಯಾರೂ ಯಾಕೆ ಮಾಡುತ್ತಿಲ್ಲ? ಅಂದು ಹಾಗೆ ಮಾಡುತ್ತೇವೆ ಹೀಗೆ ಮಾಡುತ್ತೇವೆ ಎಂದು ಕೊಚ್ಚಿಕೊಂಡದ್ದರ ಲೆಕ್ಕವನ್ನು ಯಾರೂ ಯಾಕೆ ಕೇಳುತ್ತಿಲ್ಲ?

ಇನ್ನೇನು ಜನವರಿ ಮುಗಿಯುತ್ತಾ ಬಂದರೂ ಆರ್ಥಿಕ ಸ್ಥಿತಿಗತಿಯಲ್ಲಿ ವ್ಯತ್ಯಾಸವೇನೂ ಆಗಿಲ್ಲ. ಈಗ ಬಂದು ಹಾಗೆ ಹೋಗೋ ೨೦೦೯ ಇಸ್ವಿ ೨೦೦೮ ಕ್ಕಿಂತ ಕೆಟ್ಟದಾಗಿರುತ್ತೆ ನೋಡ್ತಾ ಇರಿ, ಅಂತ ಎಷ್ಟೋ ಜನ ಈಗಾಗ್ಲೇ ಹೆದರ್ಸಿರೋದ್ರಿಂದ್ಲೇ ಬಹಳಷ್ಟು ಜನ ಕನ್ಸರ್‌ವೇಟೀವ್ ಆಗಿ ಆಲೋಚಿಸ್ತಾ ಇರೋದು. ನೋಡೋಣ ಇನ್ನೇನು ಕಾದಿದೆ ಈ ವರ್ಷ ಅಂತ.

5 comments:

  1. ಹೌದು ಸತೀಶ,
    ಹೊಸ ವರ್ಷ ಬಂದ ಮಾತ್ರಕ್ಕೆ ಏನೂ ಬದಲಾಗುವದಿಲ್ಲ ('ಕ್ಯಾಲೆಂಡರ ಬಿಟ್ಟು!'.....ಚೆನ್ನಾಗಿ ಹೇಳಿದಿರಿ.)
    ಯಾವ ರಾಯ ಬಂದರೇನು, ರಾಗಿ ಬೀಸೋದು ತಪ್ಪೀತೆ?
    ಆದರೂ ಸಹ, ಒಂದು ಏನೋ ಭ್ರಮೆಯಲ್ಲಿ Happy New Year ಅಂತ ಹೇಳ್ತೀವಿ ಅಲ್ವೆ?

    ReplyDelete
  2. Happy New Year ಅನ್ನುವ ಮಾತಿನೊಳಗೆ ಇರುವುದು ಹಾರೈಕೆ. ಎಲ್ಲರಿಗೂ ಈ ವರ್ಷ ಹರ್ಷದಾಯಕವಾಗಿರಲಿ ಅನ್ನುವ HOPE, ಅಲ್ಲವೆ?

    ಜನವರಿಯಲ್ಲಿ ಹದಿನೈದು ದಿನಗಳೂ ಕಳೆದಿರಲಿಲ್ಲ, ನನ್ನೊಬ್ಬಳು ಗೆಳತಿ ಹೇಳಿದ್ದಳು: "ಈ ವರ್ಷ ತುಂಬಾ ಕೆಟ್ಟದ್ದಂತೆ. ಅದ್ರ ಸೂಚನೆ ಗೊತ್ತಾಗ್ತಿದೆ. ಅದಾಗ್ಲೇ ನಮ್ಮ ಕಡೆಯ, ಗುರುತಿನ ಹಲವಾರು (ಇಬ್ಬರು-ಮೂವರು!!) ಹಿರಿಯರು ತೀರಿಕೊಂಡರು..."

    ಹಾಗಾದ್ರೆ, ನಮಗೆ ಗುರುತಿಲ್ಲದ ಹಿರಿಯರು ತೀರಿಕೊಂಡರೆ ಪರವಾಗಿಲ್ಲ. ಅಥವಾ, ನಮ್ಮ ಪರಿಚಯದ ಸುತ್ತಿನಲ್ಲಿ ಯಾರೂ ತೀರಿಹೋಗಬಾರದು. ಹಾಗಿದ್ದರೆ ಮಾತ್ರ ವರ್ಷ ಒಳ್ಳೇದಾಗಿಬಿಡುತ್ತಾ? ನನ್ನ ವಾದ ಅವಳ ಮುಂದಿಡಲಿಲ್ಲ.

    ಒಂದು ವರ್ಷವೇ ನಾಲ್ಕು ಋತುಗಳ ಹೆಸರಲ್ಲಿ ಬದಲಾವಣೆ ಹೊಂದುವಾಗ, ಒಂದು ವರ್ಷದಿಂದ ಇನ್ನೊಂದು ಬದಲಾಗಬಾರದು, ಆದರೂ ಒಳ್ಳೆಯದೇ ಆಗಬೇಕು- ಅಂತೆಲ್ಲ ಭಾವಿಸುವುದು ಸರಿಯೇ? ಜಗತ್ತಿನ ಆಗುಹೋಗುಗಳನ್ನು ನಿಯಂತ್ರಿಸಲು ಸಾಧ್ಯವೆ? ಕೆಲವೊಂದು ಪ್ರಶ್ನೆಗಳಿಗೆ ಉತ್ತರಗಳಿರುವುದಿಲ್ಲ.

    ಆಶಯ ಮಾತ್ರ ಸಾರ್ವಕಾಲಿಕ. ನಿಮಗೆಲ್ಲರಿಗೂ ಒಳ್ಳೆಯದಾಗಲಿ.

    ReplyDelete
  3. ಸುನಾಥ್,
    ಮುಂದಿನ ತಿಂಗಳ ಯುಗಾದಿ ಹೊಸತನವನ್ನು ತರುತ್ತೆ ನೋಡ್ತಾ ಇರಿ, ಬೇರೇನೂ ಇಲ್ಲ ಅಂದ್ರೂ ನಮ್ಮಲ್ಲಿನ ಛಳಿಗಂತೂ ಕೊಕ್ ಗ್ಯಾರಂಟಿ!

    ಸುಪ್ತದೀಪ್ತಿ,
    ಅದರಲ್ಲಿ ಈ ವರ್ಷ ’ಹ್ಯಾಪ್ಪಿ’ ಏನೂ ಇಲ್ಲ ಬಿಡಿ.
    ನಿಮ್ಮ ಗೆಳತಿಯ ವಾದ ಹೀಗಿರಬಹುದು, ಅವರ ಮಟ್ಟಿಗೆ ಒಂದೇ ತಿಂಗಳಿನಲ್ಲಿ ಅಷ್ಟೊಂದು ಜನ ಪರಿಚಿತರು ತೀರಿಕೊಂಡದ್ದು ಇದೇ ಮೊದಲಿರಬಹುದು.
    ಈ ವರ್ಷ-ಕ್ವಾರ್ಟರುಗಳ ಬದಲಾವಣೆ ನಮ್ಮ ಜಮಾನದ್ದು - ಏಕೆಂದರೆ ಅವುಗಳ ಮೇಲೆ ನಮ್ಮ ಕಾರ್ಪೋರೇಟ್ ಸಂಸ್ಕೃತಿಯ ಅವಲಂಭನೆ, ಅಲ್ಲಿ ಕೆಲಸ ಮಾಡುವ ನಮ್ಮ ಅವಲಂಭನೆ ಇವೆಲ್ಲ ನಿಸರ್ಗದತ್ತ ವರ್ಷ, ಋತು ಎನ್ನುವುದಕ್ಕಿಂತಲೂ ಆರ್ಥಿಕ ಸ್ಥಿತಿಗತಿಗೆ ಸಂಬಂಧಿಸಿದ್ದೆಂದು ನನ್ನ ಊಹೆ.

    ReplyDelete
  4. ಪ್ರತಿ ದಿನ ಹೊಸತು.. ಪ್ರತಿ ವರ್ಷ ಕೂಡ ಹೊಸತು.. :-)

    ಏನೂ ಬದಲಾಗೊಲ್ಲ.. ನಮ್ಮನ್ನೂ ಹಿಡಿದು :-( ಅನ್ಯಾಯ ಅಲ್ವ?

    ReplyDelete