ನಮ್ಮ ಮಲೆನಾಡಿನ ಆಜುಬಾಜಿನವರು, ಈಗಾಗಲೇ ನಮ್ಮೂರಿನ ಹತ್ತಿರವಿರುವ ಜೋಗ ಗೇರುಸೊಪ್ಪೆ ಜಲಪಾತವನ್ನು ನೋಡಿದವರು ನಯಾಗರವನ್ನು ನೋಡಿ ’ಇಷ್ಟೇನಾ!’ ಎಂದು ಉದ್ಗರಿಸುವುದನ್ನು ನಾನು ಗಮನಿಸಿದ್ದೇನೆ. ಕೃತಕವಾಗಿ ನಿರ್ಮಿತಗೊಂಡ ಜಲಪಾತಗಳ ಮಜಲು ಹಾಗೂ ಮನರಂಜನೆಗೆಂದು ಹೆಚ್ಚು ನೀರನ್ನು ಹಾಯಬಿಟ್ಟಿರುವುದು ಮುಂದುವರೆದ ದೇಶಗಳಲ್ಲಿ ಕಣ್ಣಿಗೆ ಕೊಬ್ಬಿದಂತೆ ಕಾಣುವ ಎಲ್ಲ ಅಂಶಗಳಲ್ಲಿ ಒಂದಾಗುವುದಕ್ಕೆ ಮೊದಲು ನಾವು ಬೇಡವೆಂದರೂ ನಮ್ಮವರ ಮನಸ್ಸು ಒಂದಲ್ಲ ಒಂದು ತುಲನೆಯಲ್ಲಿ ತೊಡಗಿರುತ್ತದೆ. ಆ ತುಲನೆಯ ಹಿನ್ನೆಲೆಯಲ್ಲೇ ನಮ್ಮೂರಿನ ಸಹಜವಾದ ಜೋಗದ ಆರ್ಭಟದ ಮುಂದೆ ಇಲ್ಲಿನ ಕೊಬ್ಬಿನ ಜಲಪಾತಗಳು ಸಪ್ಪೆಯಾಗಿ ಕಾಣುತ್ತವೆ, ಇದು ನನ್ನೊಬ್ಬನ ಮಾತಂತೂ ಖಂಡಿತ ಅಲ್ಲ.
(ಜೊತೆಗೆ, ನಾವು ಇಲ್ಲಿ ಏನನ್ನೇ ಮಾಡಿದರೂ ದುಡಿದರೂ ಕಡಿದರೂ ಅವುಗಳಿಗೆಲ್ಲ ಒಂದು ಅರ್ಥ ಸಿಗುವುದು ನಮ್ಮ ಅದೇ ತುಲನೆಯಲ್ಲೇ ಎಂಬುದು ಇನ್ನೊಂದು ದಿನದ ವಿಚಾರವಾಗಲಿ!).

ನಯಾಗರದಿಂದ ಮರಳಿಬರುತ್ತಿರುವಾಗ ರೂಟ್ ೮೧ ರಿಂದ ರೂಟ್ ೮೦ ಕ್ಕೆ ಇನ್ನೇನು ಬಂದು ತಲುಪಬೇಕು ಎನ್ನುವ ಹೊತ್ತಿಗೆ ಪೆನ್ಸಿಲ್‌ವೇನಿಯಾ-ನ್ಯೂ ಜೆರ್ಸಿ ರಾಜ್ಯಗಳ ಗಡಿಯಲ್ಲಿ ಸಿಕ್ಕ ಕಾಮನಬಿಲ್ಲಿನ ಚಿತ್ರ.
ನಾನು ಇಂತಹ ಸುಂದರವಾದ ಕಾಮನಬಿಲ್ಲನ್ನು ನೋಡಿ ಅದೆಷ್ಟು ವರ್ಷವಾಗಿತ್ತೋ ಏನೋ? ಇತ್ತೀಚೆಗಂತೂ ಮಳೆಯಲ್ಲಿ ನೆನೆಯುವುದೂ ದಶಕಕ್ಕೊಂದು ದಿನದ ಅನುಭವವಾಗಿ ಹೋಗಿದೆ ಎನ್ನೋದು ನನ್ನೊಳಗಿನ ಮತ್ತೊಂದು ಕೊರಗು, ಇನ್ನು ಮಳೆ ಬೀಳುವಾಗ ಬಿಸಿಲಿದ್ದು, ಬಿಸಿಲಿರುವಾಗ ನಾವಿದ್ದು, ನಾವಿರುವಾಗ ಪುರುಸೊತ್ತು ಇದ್ದು, ಪುರುಸೊತ್ತು ಇದ್ದಾಗ ಹೊರಗಡೆ ಹೋಗಿ ನೋಡುವ ಮನಸ್ಸಿರುವ ಸಾಧ್ಯತೆ ಎಷ್ಟರ ಮಟ್ಟಿಗೆ ಸಾಧ್ಯ ನೀವೇ ಹೇಳಿ.
ಊಹ್ಞೂ, ’ಮಳೆ ಬಿಲ್ಲು ಬಂದರೇನು, ಮತ್ತೇನೇ ಆದರೇನು, ಕಾರು ನಿಲ್ಲೋಲ್ಲ, ಬ್ರೇಕು ಹಿಡಿಯೋಲ್ಲ’ ಎಂದು ಡ್ರೈವರ್ ಬದಿಯ ಕಿಟಕಿಯ ಗಾಜನ್ನು ಇಳಿಸಿ ಘಂಟೆಗೆ ಅರವತ್ತೈದು ಮೈಲು ವೇಗವಾಗಿ ಹೋಗುವ ಕಾರಿನಲ್ಲೇ ಈ ಚಿತ್ರವನ್ನು ಹಿಡಿಯುವಂತಾಯ್ತು. ಆ ತುದಿಯಿಂದ ಈ ತುದಿಗೆ ಬಾಗಿದ ಬಿಲ್ಲನ್ನು ಸೆರೆ ಹಿಡಿಯಲು ಹಲವಾರು ಆತಂಕಗಳು, ಅವುಗಳ ಮಧ್ಯೆ ಚಿತ್ರವನ್ನೂ ಹಿಡಿದದ್ದಾಯ್ತು, ಸುಮಾರು ಇಪ್ಪತ್ತು ನಿಮಿಷಗಳ ಕಾಲ ನಮ್ಮ ಜೊತೆಗೇ ಪಯಣಿಸಿದ ಕಾಮನಬಿಲ್ಲನ್ನು ನೋಡಿ ಹರ್ಷಿಸಿದ್ದೂ ಆಯ್ತು.
ಇನ್ನೇನು ರೂಟ್ ೮೦ ಹತ್ತಿ ಮನೆಯಿಂದ ಮುವತ್ತು ಮೈಲು ದೂರವಿದೆ ಎನ್ನುವಾಗ ಡೆಲಾವರ್ ರಿವರ್ ವ್ಯಾಲಿಯಲ್ಲಿ ಸೆರೆಹಿಡಿದದ್ದೇ ಮೂರನೇ ಚಿತ್ರ. ಈ ತಾಣ ಯಾವತ್ತೂ ನನ್ನ ಮನಸ್ಸಿಗೆ ಮುದಕೊಡುತ್ತದೆ. ನಮ್ಮ ಕೊಡಚಾದ್ರಿಯ ಚಾರಣದ ಅನುಭವವನ್ನು ಕೊಡುವ ಅನೇಕ ಹೈಕಿಂಕ್ ಟ್ರೇಲ್‌ಗಳನ್ನು ಇಲ್ಲಿ ಕಂಡುಕೊಂಡಿದ್ದೇನೆ. ಅಪರೂಪಕ್ಕೊಮ್ಮೆ ಅಲ್ಲಲ್ಲಿ ಇನ್ನೂ ಹೆಸರಿಡದ ಝರಿಗಳನ್ನು ಕಂಡು ಖುಷಿಪಟ್ಟಿದ್ದೇನೆ. ಎಂತಹ ಬೇಸಿಗೆಯಲ್ಲೂ ತನ್ನೊಡಲಲ್ಲಿ ತಂಪನ್ನು ಕಾಯ್ದುಕೊಂಡು ಇರುವ ತಾಣಗಳಲ್ಲಿ ಕೆಲವೆಡೆ ನಿಂತು ಹರಿಯುವ ಐಸ್ ಕೋಲ್ಡ್ ನೀರಿನಲ್ಲಿ ಸ್ವಚ್ಛಂದವಾಗಿ ಆಡಿದ್ದೇನೆ.

ನಯಾಗರಾದ ಚಿತ್ರ ಚೆನ್ನಾಗಿ ಬಂದಿದೆ. ನಾನು ಹಿಂದೆ ನೋಡಿದ್ದ ಎಲ್ಲ ಚಿತ್ರಗಳೂ ಮೇಲಿನಿಂದ ತೆಗೆದವಾಗಿದ್ದವು. ನೀರ ಮಟ್ಟದಿಂದ ತೆಗೆದಿರುವ ಈ ಚಿತ್ರ ನೀರಿನ ಅಗಾಧತೆಯನ್ನು ಬಿಂಬಿಸುತ್ತದೆ.
ReplyDeleteಹರೀಶ್,
ReplyDeleteಧನ್ಯವಾದಗಳು.
ನಯಾಗಾರ ಬೇರೆ, ಜೋಗ ಬೇರೆ ನಿಜ. ಆದರೂ ನಯಾಗಾರವನ್ನು ಕೆನಡಾ ಅಥವಾ ಅಮೇರಿಕಾದ ನಯಾಗಾರವಾಗಿ ನೋಡದೆ, ವಸುಂಧರೆಯ ಸಿರಿಗರ್ಭದ ಇನ್ನೊಂದು ಕೂಸೆಂಬಂತೆ ನೋಡಿ - ಆಗ ಅದರ ಸೊಗಸೇ ಬೇರೆ. ಜೋಗದ ಸಿರಿಯಾದರೂ ಅಷ್ಟೆ, ಮಲೆನಾಡಿನಾಚೆಯೂ ನಮ್ಮನ್ನು ಕಾಡುವ, ಕನ್ನಡಿಗರಲ್ಲದವರಿಗೂ ರಸದೌತಣ ನೀಡುವ ಸೃಷ್ಟಿ. ಅಲ್ವಾ.. ನಿಜವಾಗಿಯೂ ನಿಮ್ಮ ಚಿತ್ರಗಳು ಸುಂದರವಾಗಿವೆ.
ReplyDeleteಗಣಪತಿ