Thursday, December 27, 2007

ಮರೆಯಾದಳು ಭುಟ್ಟೋ

(photo source unknown)

ನಾಡಿನ ಕತ್ತಲೆ ಎಳೆಗಳು ಕಳೆದೇ ಹೋದವು
ಇನ್ನೇನು ಸುಂದರ ದಿನಗಳು ಬಂದೆ ಬಂದವು
ಸೂರ್ಯನು ಮುಳುಗಿ ಮರುದಿನ ಹುಟ್ಟೋ
ಮೊದಲೇ ಮರೆಯಾದಳು ಭುಟ್ಟೋ.

ಕಂಬಳಿ ಹುಳುವಿನ ಹಾಗೆ ಎಂಟು ವರ್ಷ
ಕೊರೆದು ತಿಂದ ಮನದಾಳದ ಬುತ್ತಿಯ ಹರ್ಷ
ಅರವತ್ತೊಂಭತ್ತು ದಿನದ ಬಣ್ಣದ ಹಾಯಿ
ಚಿಟ್ಟೆಯನ್ನ ಕೊಂದೇ ಬಿಟ್ಟರಲ್ಲ ತಾಯಿ.

ಅಪ್ಪ ತಮ್ಮಂದಿರ ಒಡಗೂಡಿ ಕಟ್ಟಿದ ಸೇನೆಗೆ
ಶೋಷಿತ ಜನರ ಸರ್ಕಾರವನು ಎತ್ತಿ ಬಾನಿಗೆ
ಸೇನಾಡಳಿತದ ವಿರೋಧವನೇ ಎದುರಿಸಿ
ಕೊನೆಗೆ ಎಲ್ಲರನ್ನೂ ಬಲಿಗೊಟ್ಟ ಕಸಿವಿಸಿ.

ಎರಡೆರಡು ಬಾರಿ ಅಧಿಕಾರ ಕಿತ್ತುಕೊಂಡೂ
ಕಾರಾಗೃಹ ವಾಸದ ನೋವ ನುಂಗಿಕೊಂಡೂ
ಸಗಣಿಯೊಳಗಿನ ಹುಳುಗಳ ಮೇಲುತ್ತುವ ತಾಯೆ
ಮತ್ತಾರಿಗೂ ಬರದು ನೀನೆಸೆಯುವ ಮಾಯೆ.

ನಿನ್ನ ಕನಸುಗಳ ನುಂಗಿ ನೀರು ಕುಡಿದ ನಾಡನ್ನು ಬಿಟ್ಟು
ಮುಂದಿನ ಜನುಮದಲ್ಲಾದರೂ ನಮ್ಮ ನಾಡಲ್ಲಿ ಹುಟ್ಟು.
***
October 18, 2007 ರಂದು ಪ್ರಕಟಿಸಿದ ಈ ಲೇಖನವನ್ನೂ ಓದಿ: ಭುಟ್ಟೋ ಬಂದಳು ಶಾಂತಿ ತಂದಳು!
...ಬೆನಜೀರ್ ಭುಟ್ಟೋ ತನ್ನ ರಾಜಕೀಯ ರ್ಯಾಲಿಗಳಲ್ಲಿ ಯಾರನ್ನು ಕುರಿತು ಹೊಗಳುತ್ತಾರೆ ತೆಗಳುತ್ತಾರೆ ಎಂಬುದನ್ನು ಕಾದು ನೋಡಬೇಕು. ಏಳೆಂಟು ವರ್ಷಗಳನ್ನು ಆಳಿದ ಮುಷಾರಫ್ ವಿರುದ್ಧದ ಅಲೆಯನ್ನು ನಾಜೂಕಾಗಿ ಹೇಗೆ ಎತ್ತಿಕೊಂಡು ಜನರ ಮತ ಹಾಗೂ ವಿಶ್ವಾಸವನ್ನು ಗಳಿಸುತ್ತಾರೆ ಎನ್ನುವುದು ದಿನದಿನವೂ ರೋಚಕವಾಗುತ್ತಿದೆ. ಒಂದು ವೇಳೆ ಅಲ್ಲಿ ಮರಳಿ ಪ್ರಜಾಪ್ರಭುತ್ವ ವ್ಯವಸ್ಥೆ ನಿರ್ಮಾಣಗೊಂಡರೆ ಪಕ್ಕದ ಭಾರತದಂತಹ ದೇಶಗಳಿಗೆ ಒಂದು ರೀತಿಯ ಸಮಾಧಾನವಾದರೂ ದೂರದ ಅಮೇರಿಕಕ್ಕೆ ಕಷ್ಟವೇ ಆಗಬಹುದು ತಮ್ಮ ನಿರ್ಣಯಗಳನ್ನು ಮುಂದುವರಿಸಲು. ಭಯೋತ್ಪಾದನೆಯನ್ನು ಹತ್ತಿಕ್ಕುವುದು ಬೆನಜೀರ್ ಅವರಿಗೆ ಬೇಕೋ ಬೇಡವೋ ಅವರ ಪ್ರಣಾಳಿಕೆಯ ಪುಟದ ಹಿನ್ನೆಲೆ. ಪ್ರಪಂಚದ ಅರ್ಥ ವ್ಯವಸ್ಥೆಯೆಲ್ಲ ಏರು ದಿಕ್ಕಿನಲ್ಲಿ ಮುಂದುವರೆಯುತ್ತಿರುವಾಗ ಪಾಕಿಸ್ತಾನ ಹಿಂದುಳಿಯದಂತೆ ಬೆನಜೀರ್ ತನ್ನ ದೇಶವನ್ನು ಮುಂದುವರಿಸುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ರಾಜಕೀಯ ರ್ಯಾಲಿಗಳಲ್ಲಿ ಯಾರೂ ತಮ್ಮ ಮೇಲೆ ಆಕ್ರಮಣ ನಡೆಸದಂತೆ ಬಿಗಿಭದ್ರತೆಯನ್ನು ಮಾಡಿಕೊಳ್ಳುವುದೂ ಅಷ್ಟೇ ಮುಖ್ಯವಾದುದು.

5 comments:

  1. Anonymous7:48 AM

    ಸತೀಶ್,

    ೧) ನಿಮ್ಮ ಬ್ಲಾಗ್‌ನ ಕೆಲವೆಲ್ಲ ಟಿಪ್ಪಣಿಗಳು ನನಗೆ ಓದಿ ಅರ್ಥೈಸಲು ಕಠಿಣವೆನಿಸಿವೆ. ೨) ಭಾವುಕ ಕವನಗಳು (ಯಾರೇ ಬರೆದರೂ) ನನಗೆ ಅರ್ಥವಾಗುವುದು ಅಷ್ಟಕ್ಕಷ್ಟೆ.

    - ಈ ಎರಡು ವಾಸ್ತವಗಳ ನಡುವೆಯೂ ನನಗೆ ಈ ಕವಿತೆ (ಬೆನಜೀರ್ ಭುಟ್ಟೊಗೆ ಶ್ರದ್ಧಾಂಜಲಿ) ಹಿಡಿಸಿತು! ನಿಮಗೆ ಮೆಚ್ಚುಗೆ ತಿಳಿಸೋಣ ಅಂತ ಕಾಮೆಂಟಿಸಿದೆ. ಅಂದಹಾಗೆ ಇದನ್ನೇ ಭಾಷಾಂತರಿಸಿ New York Times ಗೇಕೆ ನೀವು ಕಳಿಸಬಾರದು?

    ReplyDelete
  2. ಶ್ರೀವತ್ಸ ಜೋಶಿ,

    ನಿಮ್ಮ ಕಾಮೆಂಟಿಗೆ ಧನ್ಯವಾದಗಳು.
    ಈ ಕವನವನ್ನು ಅನುವಾದ ಮಾಡುವುದು ನನಗಂತೂ ಸುಲಭದ ಕೆಲಸವಲ್ಲ, ಪ್ರಯತ್ನಿಸುತ್ತೇನೆ ನೋಡೋಣ.

    ಎಲ್ಲಾ ರೀತಿಯ ಟಿಪ್ಪಣಿಗಳ ಪ್ರಯೋಗವನ್ನು ’ಅಂತರಂಗ’ದಲ್ಲಿ ಮಾಡಿದ್ದೇನೆ, ಕೆಲವು ಇಷ್ಟವಾಗುವುದು ಆಗದಿರುವುದು ಸಹಜ. ಹೀಗೇ ಆಗಾಗ್ಗೆ ಭೇಟಿ ಕೊಡುತ್ತಿರಿ.

    ReplyDelete
  3. A peom on Bhutto is good and I liked it .

    ReplyDelete
  4. vAsu,

    tuMbA thyAMks kaNayyA!

    ReplyDelete