Sunday, December 02, 2007

ಇಂದು ರಾತ್ರಿ ಮತ್ತೆ ಆ ಮಿಣಿಮಿಣಿ ದೀಪಗಳು ಬೆಳಗದಿದ್ದರೆ ಸಾಕು!

ಈಗ್ಗೆ ಒಂದು ತಿಂಗಳಿನಿಂದ ನಾವಿರುವ ಊರಿನ ರಸ್ತೆಗಳನ್ನು ಸ್ಥಳೀಯ ಕೆಲಸಗಾರರು ಉದ್ದಕ್ಕೂ ಅಗೆಯುತ್ತಾ ಬಂದಿದ್ದಾರೆ, ಯಾವುದೋ ಪೈಪ್ ಹಾಕುವುದಕ್ಕೋ ಮತ್ತಿನ್ಯಾವುದಕ್ಕೋ ಇರಬೇಕು. ಇದರಲ್ಲಿ ಕೆಲಸ ಮಾಡುವವರದ್ದು ಕೇವಲ ರಾತ್ರಿ ಮಾತ್ರ ಡ್ಯೂಟಿ, ಹಗಲೆಲ್ಲ ರಸ್ತೆ ಅಗೆಯಲು ತೊಡಗಿದರೆ ಟ್ರಾಫಿಕ್ ನಿಲ್ಲುತ್ತದೆ, ಮತ್ತೇನೋ ಆಗುತ್ತದೆ ಎಂದು ರಾತ್ರಿ ಇಡೀ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಲೇ ಇದೆ.

ಇಂದು ಮುಂಜಾನೆ ಎರಡೂವರೆ ಹೊತ್ತಿಗೆ ಕಿಟಕಿ ಮೂಲಕ ಏನೋ ಮಿಣಿಮಿಣೀ ಬೆಳಕು ಕಂಡಿತೆಂದು ಪರದೇ ಸರಿಸಿ ನೋಡಿದರೆ ಅವರೇ ರಸ್ತೆ ಕೆಲಸಗಾರರು, ಉದ್ದಕ್ಕೂ ರಸ್ತೆಯನ್ನು ಅಗೆದು ಮುಚ್ಚುತ್ತಾ ಈಗ ನಮ್ಮ ಮನೆಯ ಮುಂದೆ ಬಂದಿದ್ದಾರೆ, ಇನ್ನು ಸ್ವಲ್ಪ ಹೊತ್ತಿನಲ್ಲೇ ಅವರ ಪಯಣ ಮತ್ತೆ ಅವ್ಯಾಹತವಾಗಿ ಮುಂದೆ ಸಾಗುತ್ತಲೇ ಇರುತ್ತದೆ, ಎಲ್ಲಿಯವರೆಗೆ ಹಿಡಿದ ಗುರಿ ಮುಟ್ಟುವವರೆಗೆ. ಬೆಳಗ್ಗೆ ಸ್ನೋ ಬೀಳುತ್ತದೆ ಎಂದು ಎಲ್ಲರೂ ಪ್ರಿಡಿಕ್ಟ್ ಮಾಡಿದ್ದರಿಂದ ವೆದರ್ ಚಾನೆಲ್ ನೋಡೋಣವೆಂದು ಟಿವಿಯನ್ನು ಚಾಲೂ ಮಾಡಿದೆ, ಅಲ್ಲಿ ನಮ್ಮೂರಿನ ದಿನದ ಉಷ್ಣಾಂಶವನ್ನು ತೋರಿಸುತ್ತಿದ್ದರು, ಅಲ್ಲಿನ ನಂಬರುಗಳನ್ನು ನೋಡಿ ಶಾಕ್ ಆದಂತಾಯಿತು - ಈ ದಿನದ ಗರಿಷ್ಠ ಉಷ್ಣಾಂಶ 27 ಡಿಗ್ರಿ ಹಾಗೂ ಕನಿಷ್ಠ ಉಷ್ಣಾಂಶ 17 ಡಿಗ್ರಿ ಫ್ಯಾರನ್‌ಹೈಟ್ - ಜೊತೆಗೆ ಬೀಸುವ ಗಾಳಿಯ ಹೊಡೆತಕ್ಕೆ ಬದಲಾಗುವ ವಿಂಡ್‌ಚಿಲ್ (feels like) ಫ್ಯಾಕ್ಟರ್ ಬೇರೆ.

ಹೀಗೆ ರಾತ್ರಿ ಇಡೀ ಕೆಲಸ ಮಾಡೋ ಕೆಲಸಗಾರರು ಅದೇನೇ ಕೋಟನ್ನು ಧರಿಸಿದ್ದರೂ ಅವರು ಒಳಗೆಳೆದುಕೊಳ್ಳುವ ಗಾಳಿಯ ಉಷ್ಣತೆ ಸೊನ್ನೆಗಿಂತ (ಸೆಂಟಿಗ್ರೇಡ್) ಕಡಿಮೆ, ಅದನ್ನವರು ಹೊರಗೆ ಬಿಡುವಾಗ 37 ಡಿಗ್ರಿ ಸೆಂಟಿಗ್ರೇಡ್ (98 ಡಿಗ್ರಿ ಫ್ಯ್ರಾರನ್‌ಹೈಟ್) ಆಗಿ ಪರಿವರ್ತಿಸಿ ಬಿಡಬೇಕಾಗುತ್ತದೆ ಎಂಬುದನ್ನು ಯೋಚಿಸಿಕೊಂಡೇ ನನ್ನ ಮೈಯಲ್ಲಿ ನಡುಕ ಹುಟ್ಟಿತು. ಎಷ್ಟೊಂದು ಅಗಾಧವಾದ ಬದಲಾವಣೆ ಉಷ್ಣತೆಯಲ್ಲಿ, ಹೀಗೆ ಪ್ರತಿ ಕ್ಷಣಕ್ಕೂ ಕಳೆದುಕೊಳ್ಳುವ ಶಕ್ತಿಯನ್ನು ಈ ಕೆಲಸಗಾರರು ಅದೆಲ್ಲಿಂದ ತುಂಬಿಕೊಳ್ಳುತ್ತಾರೋ, ಛೇ - ಪಾಪ ಎನಿಸಿತು. ನನ್ನ ಸ್ನೇಹಿತ ಕೆನ್ ಹೇಳುತ್ತಿದ್ದ ಹಾಗೆ ಅವನು ಬಲ್ಲ ಕನಷ್ಟ್ರಕ್ಷನ್ ಕೆಲಸಗಾರರು ದಿನಕ್ಕೆ ಹಲವಾರು ಊಟಗಳನ್ನು ಮಾಡುತ್ತಾರೆ, ಮುಖ್ಯವಾಗಿ ಡೋ ನಟ್ (ಸಿಹಿ) ಅನ್ನು ಬಹಳ ತಿನ್ನುತ್ತಾರೆ, ಹೀಗೆ ತಿನ್ನುವ ಹೆಚ್ಚಿನ ಗ್ಲೂಕೋಸ್ ಅಂಶ ಅವರು ಬಳಸುವ ಶಕ್ತಿಯಾಗಿ ಬದಲಾಗುತ್ತದೆ, ಮೇಲಾಗಿ ಪ್ರತಿದಿನವೂ ಹೀಗೆ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಕೊಳ್ಳುವ ಅವರ ದೇಹ ಮನಸ್ಸು ಎಲ್ಲವೂ ಛಳಿಗೆ ಹೊಂದಿಕೊಂಡಿರುತ್ತದೆ ಎಂಬುದು ನೆನಪಿಗೆ ಬಂದಿತು. ಅದೇನೇ ತಿನ್ನಲಿ ಬಿಡಲಿ, ಒಬ್ಬ ವ್ಯಕ್ತಿ ಸಬ್ ಝೀರೋ ಉಷ್ಣತೆಯಲ್ಲಿ ಘಂಟೆಗಟ್ಟಲೆ ದುಡಿಯುವುದು ಅಮಾನವೀಯ ಎಂದೆನಿಸಿದ್ದು ಆ ಮಟ್ಟಿಗಂತೂ ನಿಜ. ಇದೇ ಕನ್‌ಷ್ಟ್ರಕ್ಷನ್ ಕೆಲಸಗಾರರು, ತಾವು ಮಿಲಿಯನ್‌ಗಟ್ಟಲೆ ಹಣವನ್ನಂತೂ ದುಡಿಯೋದಿಲ್ಲ, ಮಧ್ಯ ವಯಸ್ಸು ದಾಟುತ್ತಲೇ ಇಂತಹ ಘೋರ ವಾತಾವರಣದಲ್ಲಿ ಕೆಲಸವನ್ನು ಮಾಡಿದ್ದರ ಪರಿಣಾಮವಾಗಿ ಅದೇನೇನು ಖಾಯಿಲೆಗಳು ಬರುತ್ತವೆಯೋ ಯಾರು ಬಲ್ಲರು?

ನಾನಂತೂ ವೆದರ್ ಚಾನೆಲ್ ನೋಡಿ, ಟಿಎಮ್‌ಸಿಯಲ್ಲಿ ಬರುತ್ತಿದ್ದ ಚಾರ್ಲ್ ಚಾಪ್ಲಿನ್ ಗೋಲ್ಡ್ ರಶ್ ಸಿನಿಮಾ ನೋಡಿಕೊಂಡೇನೋ ಕಾಲ ಕಳೆದು ಬೆಳಗು ಮಾಡಿದೆ, ಆದರೆ ಆ ಕನ್‌ಷ್ಟ್ರಕ್ಷನ್ ವಾಹನದ ಮಿಣಿಮಿಣಿ ದೀಪಗಳು ನಮ್ಮನೆಯ ಕಿಟಕಿಯಿಂದ ಮರೆಯಾಗುವವರೆಗೂ ಹೊರ ಮುಖ ಚಾಪ್ಲಿನ್ ಕಷ್ಟದಲ್ಲಿ ಸಿಕ್ಕಿಕೊಂಡಾಗಲೆಲ್ಲ ನಗುತ್ತಿದ್ದರೆ, ಒಳಗಡೆಯ ಮನಸ್ಸು ಆ ಕೆಲಸಗಾರರ ಬಗ್ಗೆ ಯೋಚಿಸುತ್ತಲೇ ಇತ್ತು. ಸಿನಿಮಾದಲ್ಲಿ ಚಾಪ್ಲಿನ್, ಹೊರಗಡೆ ಆ ಕೆಲಸಗಾರರು ಇಬ್ಬರೂ ಛಳಿಯಲ್ಲಿ ನಡುಗುತ್ತಿದ್ದರೆ ಒಂದು ಮನೋರಂಜನೆಯಾಗಿತ್ತು, ಮತ್ತೊಂದು ವಾಸ್ತವದ ಚಿತ್ರಣ ನೀಡುತ್ತಿತ್ತು.

ಮುಂಜಾನೆ ಎಲ್ಲಿಗೋ ವಾಹನವನ್ನು ತೆಗೆದು ಅವರುಗಳು ಕೆಲಸ ಮಾಡಿದ್ದ ರಸ್ತೆಯ ಮೇಲೆ ಚಲಿಸುವಾಗ ಸೂಕ್ಷ್ಮವಾಗಿ ಗಮನಿಸಿದೆ, ಅಗೆದು ಮುಚ್ಚಿದ್ದ ರಸ್ತೆಯ ಉದ್ದಾನುದ್ದಕ್ಕೆ ಗುಂಡಿ ಬಹಳ ಚೆನ್ನಾಗಿ ಮೈ ತುಂಬಿಕೊಂಡಿತ್ತು, ರಸ್ತೆಯ ಇಕ್ಕೆಲಗಳಲ್ಲಿ ಯಾವುದೇ ಗಲೀಜಾಗಲೀ, ಕಸಕಡ್ಡಿಗಳಾಗಲಿ ಇದ್ದಿರಲಿಲ್ಲ. ರಸ್ತೆಯ ಬದಿಯಿಂದ ಸುಮಾರು ಒಂದು ಅಡಿ ಪಕ್ಕಕ್ಕೆ ಯಾವುದೋ ಪೈಪ್ ಅನ್ನು ಹುಗಿಯಲು ತೆಗೆದ ಕಾಲುವೆ, ಮುಚ್ಚಿದ ಮೇಲೆ ತನ್ನ ಮೇಲಿನ ಹೊಸ ಟಾರ್ ಅನ್ನು ಅಲ್ಲಲ್ಲಿ ಬೀಳುವ ಬೆಳಕಿಗೆ ಪ್ರತಿಫಲಿಸಿ ಜಗಜ್ಜಾಹೀರು ಮಾಡುವ ಮುಖವನ್ನು ಹೊತ್ತುಕೊಂಡಿತ್ತು. ಹೊಳೆಯದ ಕಡೆ ಅದು ಕಷ್ಟಪಟ್ಟು ಕೆಲಸ ಮಾಡುವ ಕೆಲಸಗಾರರ ಮುಂಗೈ ಮೇಲಿನ ನರದ ಹಾಗೆ ಕಂಡುಬರುತ್ತಿತ್ತು. ಹಗಲಾಗಲೀ ರಾತ್ರಿಯಾಗಲೀ ದಿನದ ಉಷ್ಣಾಂಶದಲ್ಲೇನೂ ಅಂತಹ ಬದಲಾವಣೆ ಇಲ್ಲ, ಪ್ರಪಂಚದ ಅದ್ಯಾವ ಸೂರ್ಯರೂ ತಮ್ಮ ಬಿಸಿಯನ್ನು ತಟ್ಟಿಸದ ಹಾಗೆ ಈ ಲೋಕ ದೂರವಾಗಿದೆಯೇನೋ ಎಂದೆನಿಸಿ ಅಕಸ್ಮಾತ್ ಆ ದೂರ ಹಾಗೇ ಉಳಿದರೆ ಎಂದು ಹೆದರಿಕೆಯಾಗಿದ್ದಂತೂ ನಿಜ.

ಬಿಡಿ, ಇನ್ಯಾವತ್ತೂ ಹೇಳೋದಿಲ್ಲ ನಾನು ಮಾಡುವುದೇ ಕಷ್ಟದ ಕೆಲಸವೆಂದು. ಒಬ್ಬ ವಾಚ್‌ಮನ್‌ನಿಂದ ಹಿಡಿದು ಅಧಿಕಾರಿಯವರೆಗೆ ಆಯಾ ಕೆಲಸದ ಮಟ್ಟದ ಗೌರವವನ್ನು ನಾನು ಈ ದೇಶದಲ್ಲೇ ಕಂಡಿದ್ದು ಹಾಗೂ ಅನುಭವಿಸಿದ್ದು. ಒಬ್ಬ ಜಾನಿಟರ್‌ನ ಕೆಲಸವನ್ನು ಕೀಳು ಎಂಬುದಾಗಿ ನೋಡುವ ಮನಸ್ಥಿತಿ ನನಗೆ ಒಂದು ಕಾಲದಲ್ಲಿ ಖಂಡಿತ ಇತ್ತು, ಆದರೆ ಅದು ಬದಲಾಗಿ ಬಹಳ ವರ್ಷಗಳಾದವು. ಹೀಗೆ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯನ್ನು ಕೆಲಸ ಮಾಡದಿದ್ದರೆ ಪ್ರಪಂಚ ಪೂರ್ಣವಾಗುವುದೆಂದು, ಹಾಗಿದ್ದ ಮೇಲೆ ಪ್ರತಿಯೊಬ್ಬರ ಕೆಲಸವೂ ಅಷ್ಟೇ ಮುಖ್ಯ ಹಾಗೂ ಮಹತ್ವಪೂರ್ಣವಾದುದಲ್ಲವೇ?

ಈ ಛಳಿ ಅಥವಾ ಛಳಿಗಾಲದ ವಿಶೇಷವೇ ಹಾಗೆ, ಮೂಳೆ ಕೊರೆಯುವ ಛಳಿ ಎನ್ನುವ ಮಾತನ್ನು ನಾವೆಲ್ಲ ಕೇಳಿದ್ದೇವೆ, ನಮ್ಮ ಚರ್ಮ ಅದರಡಿಯಲ್ಲಿರುವ ಚರಬಿಯನ್ನು ಮೀರಿ ಹೋಗಬಲ್ಲುದು ಛಳಿ ಮಾತ್ರ, ಬಿಸಿಲಿಗೆ ಆ ತುಲನೆ ಸಲ್ಲದು. ವರ್ಷದ ಆರು ತಿಂಗಳ ಛಳಿ ಇಲ್ಲಿನವರಿಗೆ ಅವಿಭಾಜ್ಯ ಅಂಗ, ಅದಕ್ಕನುಗುಣವಾಗಿ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಲೇ ಬೇಕು, ಹಾಗೆ ನಡೆಯಲೇ ಬೇಕು ಎಂದು ಯೋಚಿಸಿಕೊಂಡಾಗ ಮನಸ್ಸು ತುಸು ಹಗುರವಾದಂತೆನಿಸಿತು. ಸದ್ಯ, ಇಂದು ರಾತ್ರಿ ಮತ್ತೆ ಆ ಕನ್‌ಷ್ಟ್ರಕ್ಷನ್ ವಾಹನಗಳ ಮಿಣಿಮಿಣಿ ದೀಪಗಳು ಬೆಳಗದಿದ್ದರೆ ಸಾಕು!

5 comments:

  1. Anonymous12:35 PM

    ಹಿಮ ಬಿದ್ದ ದಿನ ನಾವೆಲ್ಲಾ ಒಳಗೆ fire place ಮುಂದೆ ಬಿಸಿ ಕಾಫಿ ಕುಡಿಯುತ್ತಾ, ಮುದುರಿ ಕೂತಿದ್ದಾಗ ಹೊರಗೆ ಕರಕರ ಸದ್ದು ಮಾಡುತ್ತಾ, snow ಸರಿಸಿ ವಾಹನಗಳಿಗೆ ಜಾಗ ಮಾಡಿಕೊಡುತ್ತಿರುವರನ್ನು ಕಂಡಾಗಲೂ ಹೀಗೆಯೇ ಅನ್ನಿಸುತ್ತದೆ.

    ReplyDelete
  2. ಹಿಮ ಬಿದ್ದ ದಿನ ನಾವೆಲ್ಲಾ ಒಳಗೆ fire place ಮುಂದೆ ಬಿಸಿ ಕಾಫಿ ಕುಡಿಯುತ್ತಾ, ಮುದುರಿ ಕೂತಿದ್ದಾಗ ಹೊರಗೆ ಕರಕರ ಸದ್ದು ಮಾಡುತ್ತಾ, snow ಸರಿಸಿ ವಾಹನಗಳಿಗೆ ಜಾಗ ಮಾಡಿಕೊಡುತ್ತಿರುವರನ್ನು ಕಂಡಾಗಲೂ ಹೀಗೆಯೇ ಅನ್ನಿಸುತ್ತದೆ

    ReplyDelete
  3. sritri,

    ಜೊತೆಗೆ ಫೈರ್ ಪ್ಲೇಸ್ ಒಳಗೆ ಕಟ್ಟಿಗೆ ತುಂಬಿಸಿ ಅದರ ಶಾಖಕ್ಕೆ ಮೈ ಒಡ್ಡಿಕೊಂಡು ಆಲ್ ಗೋರ್‌ಗೆ ನೊಬೆಲ್ ಬಂದ ಬಗ್ಗೆ ನ್ಯೂಸ್ ನೋಡುವುದಕ್ಕೆ ಇನ್ನೂ ಚೆನ್ನಾಗಿರುತ್ತದೆ :-)

    ಆಲ್ ಗೋರ್‌‍ಗೆ ಪ್ರಶಸ್ತಿ ಬಂದದ್ದಕ್ಕೋ ಏನೋ ಈ ಸಾರಿ ಹವಾಮಾನ ಬಹಳಷ್ಟು ಮುನಿಸಿಕೊಂಡಿರುವಂತಿದೆ ನೋಡಿ.

    ReplyDelete
  4. Anonymous4:33 AM

    Hello, there. This is a quick summary of the goodness of buying wow gold from wow gold reviews, wow power level reviews, the World of Warcraft network of trust wow power leveling reviews, warcraft power leveling reviews and understanding for WoW PL'ers warcraft gold reviews. Come to here for wow leveling reviews. If you are in the mood for Final Fantasy XI gil, then please go to FFXI Gil reviews, Buy FFXI Gil reviews, FFXI Gil Sale reviews, Cheapest FFXI Gil reviews, Buy Cheap FFXI Gil reviews, final Fantasy XI Gil reviews, Cheap FFXI Gil reviews.

    ReplyDelete