Saturday, November 03, 2007

ನಾವು ನಾನಾದದ್ದೂ, ವ್ಯಥೆಯ ಬೆನ್ನ ಹಿಂದಿನ ಸುಖವೂ...

’ಥತ್ ತೇರೀಕೇ, ನೀನೆಲ್ಲಿ ಅಮೇರಿಕ ಬಿಟ್ಟ್ ಹೋಗ್ತೀಯೋ, ಸುಮ್ನೇ ಬೆಳ್ಳಂ ಬೆಳಗ್ಗೆ ಕೊರೀತಾ ಕುತಗಂತೀ ನೋಡು!’ ಎಂದು ಯಾವುದೋ ಒಂದು ಧ್ವನಿ ನನ್ನ ಬೆನ್ನ ಹಿಂದೆ ಕೇಳಿಸಿದಂತಾಯ್ತು, ಬೆಚ್ಚಿ ಬಿದ್ದು ತಿರುಗಿ ನೋಡಿದೆ ಯಾರೂ ಕಾಣಿಸದಿದ್ದುದಕ್ಕೆ ಮತ್ತಷ್ಟು ಹೆದರಿಕೆಯಾದಂತನ್ನಿಸಿತು. ಈಗಾಗ್ಲೇ ಅಲ್ಲಲ್ಲಿ ಛಳಿ ಬಿದ್ದು ಮೈ ನಡುಕಾ ಬರೋ ಹಾಗಿದ್ರೂ ಮನೇಲಿರೋ ಯಾವ್ದೋ ಒಂದು ಶಾಲ್ ಅನ್ನು ಸುತ್ತಿಕೊಂಡು ಇನ್ನೂ ಹಬೆ ಆಡುತ್ತಿದ್ದ ಕಾಫಿ ಕಪ್ ಅನ್ನು ಹಿಡಕೊಂಡು ಡೆಕ್ ಮೇಲೆ ಹೋಗಿ ಅಲ್ಲಿರೋ ಖುರ್ಚಿಯಲ್ಲಿ ಕುಳಿತು ಸೂರ್ಯನಿಗೆ ಮುಖ ಮಾಡಿಕೊಂಡು ನನ್ನ ಯೋಚನೆ ಒಳಗೆ ನಾನೇ ಬಿದ್ದು ಹೋಗಿದ್ದೆ. ಈಗಾಗಲೇ ಸಾಕಷ್ಟು ಎಲೆಗಳನ್ನು ಕಳೆದುಕೊಂಡ ಅಕ್ಕ ಪಕ್ಕದ ಮರಗಳು ಸ್ವಲ್ಪವೇ ಗಾಳಿ ಬೀಸಿದರೂ ಇನ್ನಷ್ಟು ಎಲೆಗಳನ್ನು ಕಳೆದುಕೊಂಡು ಬೋಳಾಗುವ ದುಃಖದಲ್ಲಿದ್ದವರಂತೆ ಆಗೀಗ ಬೀಸಿ ಮಾಯವಾಗುತ್ತಿದ್ದ ಗಾಳಿಗೆ ತೊನೆಯುತಿದ್ದವು. ಇಷ್ಟು ದಿನ ಹಸಿರನ್ನು ಮೆರೆಯುತ್ತಿದ್ದ ಹುಲ್ಲು ಹಾಸಿನ ಮೇಲೆ ಅಲ್ಲಲ್ಲಿ ತೇಪೆ ಹಾಕಿದ ಕೌದಿಯನ್ನು ನೆನಪಿಸುವ ಹಾಗೆ ಹಳದಿ ಕೆಂಪು ಎಲೆಗಳು ಹರಡಿಕೊಂಡಿದ್ದವು. ಆಗಷ್ಟೇ ಚಿಗುರೊಡೆಯುತ್ತಿದ್ದ ಸೂರ್ಯನ ಕಿರಣಗಳು ಅವು ಬಿದ್ದ ವಸ್ತುಗಳ ನೆರಳನ್ನು ಯಶಸ್ವಿಯಾಗಿ ಸೃಷ್ಟಿಸುವಲ್ಲಿ ಯಶಸ್ಸು ಪಡೆದಿದ್ದವು.

ನಿನ್ನೆ ಫೋನ್‌ನಲ್ಲಿ ಯಾರಿಗೋ ಹೇಳ್ತಾ ಇದ್ದೆ - ’ಹೋಗ್ಬಿಡೋಣ, ಅಲ್ಲೇನು ಬೇಕಾದ ಹಾಗೆ ಕೆಲ್ಸಾ ಸಿಗುತ್ತೇ’ ಅಂತ. ಆದ್ರೆ ಕರೆ ಮುಗಿದ ಮೇಲೆ ಮತ್ತೆ ಅದೇ ವಾಕ್ಯಗಳನ್ನು ಮೆಲುಕು ಹಾಕಿಕೊಂಡವನಿಗೆ ವಾಸ್ತವ, ಸತ್ಯ ಇವೆರಡೂ ಹೆದರಿಸ ತೊಡಗಿದವು. ಒಂದು ಮನೆ ಕಟ್ಟಿಸೋಕೆ (ಅಪ್ಪಂತಾ ಸೈಟಿನಲ್ಲಿ) ಏನಿಲ್ಲಾ ಅಂದ್ರೂ ಒಂದು ಕೋಟಿ ರೂಪಾಯ್ ಬೇಕು ಅಂತಾರಂತೆ ಬೆಂಗ್ಳೂರಿನಲ್ಲಿ, ಅಪಾರ್ಟ್‌ಮೆಂಟುಗಳನ್ನು ತೆಗೆದುಕೊಂಡ್ರೂ ಸುಮಾರು ಐವತ್ತು ಲಕ್ಷದವರೆಗೂ ಆಗುತ್ತಂತೆ. ಅನಿವಾಸಿಗಳು ಅಂದಾಕ್ಷಣ ಅಷ್ಟೊಂದು ದುಡ್ಡು ಬಿದ್ದು ಸುರಿತಾ ಇರುತ್ತೆ ಅಂತ ಎಲ್ರೂ ಯಾಕ್ ಅಂದ್ಕೋತಾರೆ? ಕೆಲವ್ರು ಅಲ್ಲೂ ಸಾಲಾ ಮಾಡಿ ಮನೆ-ಮಠ ತಗೋತಾರಂತೆ, ಇಷ್ಟೊಂದು ವರ್ಷಾ ಕಷ್ಟಪಟ್ಟ ಮೇಲೂ ಅಲ್ಲೂ ಹೋಗೀ ಸಾಲದಲ್ಲೇ ಬದುಕೋದು ಹೇಗೆ ಸಾಧ್ಯ? ಇತ್ತೀಚಿಗಂತೂ ಅಲ್ಲಿನ ಕಂಪನಿಗಳು ಇಲ್ಲೀಗಿಂತ ಹೆಚ್ಚೇ ಕೆಲ್ಸಾ ತೆಗೀತಾರೆ, ಇನ್ನು ಅಲ್ಲಿ ಹೋಗಿ ಒದ್ದಾಡೋದ್‌ಕಿಂತ ಇಲ್ಲಿರೋ ಸ್ಟ್ಯಾಟಸ್ ಕೋ ನೇ ಸಾಕಾಗಲ್ವಾ?

ಈ ಮೇಲಿನ ಪ್ರಶ್ನೆಗಳೆಲ್ಲ ನನ್ನ ತಲೆಯನ್ನು ಬಿಸಿಮಾಡಿದ್ವು ಆದರೆ ದೇಹಕ್ಕೆ ಛಳಿ ಹೆಚ್ಚಾದಂತಾಗಿ ಇನ್ನು ಹೊರಗಡೆ ಕೂರೋದಕ್ಕೆ ಆಗೋದೇ ಇಲ್ಲ ಎಂದಾಗ ಮನೆ ಒಳಗೆ ಬಂದು ಪ್ಯಾಡಿಯೋ ಡೋರ್ ಅನ್ನು ಯಾವ್ದೋ ಶತ್ರುವನ್ನು ಮನೆಯಿಂದ ಆಚೆಗೆ ತಳ್ಳೋ ಫೋರ್ಸ್‌ನಲ್ಲಿ ಎಳೆದು ಮುಚ್ಚಿದ್ದಾಯಿತು. ಮೊಣಕೈಯಿಂದ ಮುಂಗೈವರೆಗೆ ಗೂಸ್ ಬಂಪ್ಸ್ ಬಂದು ಕೂದಲುಗಳೆಲ್ಲ ಯಾವ್ದೋ ಸಂಗೀತವನ್ನು ಆಲಿಸೋರ ಕಿವಿಗಳ ಹಾಗೆ ನಿಮಿರಿಕೊಂಡಿದ್ದವು. ಇನ್ನೂ ಮರಗಳಿಂದ ಬೀಳ್ತಾ ಇರೋ ಎಲೆಗಳು ನನ್ನ ಸೋಲನ್ನು ನೋಡಿ ಚಪ್ಪಾಳೆ ಹಾಕ್ತಾ ಇರೋರ ಹಾಗೆ ಕಂಡುಬಂದವು. ದೇಹದ ಒಳಗೆ ಕಾಫೀ ಹೋಗಿ ನರಮಂಡಲವೆಲ್ಲ ಮತ್ತಷ್ಟು ಚುರುಕಾಗಿ ಆಲೋಚನೆಗಳು ಮತ್ತಷ್ಟು ಗಾಢವಾದವು, ಆದರೆ ಹೆಚ್ಚು ಪ್ರಶ್ನೆಗಳೇ ಹೊರಬಂದವೇ ವಿನಾ ಉತ್ತರಗಳ ಸುಳಿವೂ ಕೂಡ ಅಲ್ಲಿರಲಿಲ್ಲ.

’ಅಲ್ಲಿನ್ ಶಾಲೆಗಳಿಗೆ ಮಕ್ಳುನ್ ಸೇರ್ಸೋದೂ ಅಂದ್ರೆ ಅದೇನ್ ಆಟಾ ಅಂತ ತಿಳಕೊಂಡಿದೀಯಾ?’ ಅನ್ನೋ ಮತ್ತೊಬ್ಬ ಸ್ನೇಹಿತನ ಪ್ರಶ್ನೆ. ಒಂದೊಂದು ಮಗುವಿಗೆ ವರ್ಷಕ್ಕೆ ಹೆಚ್ಚೂ ಕಡಿಮೆ ಒಂದೂವರೆ ಲಕ್ಷ ಖರ್ಚು ಮಾಡೋ ಅವನ ಹತ್ತಿರದ ಸಂಬಂಧಿಯೊಬ್ಬರ ವಿವರವನ್ನು ಹೇಳಿದ. ಆದೇನು ಅಲ್ಲಿನ ಸ್ಕೂಲೋ ನಿಯಮವೋ ನಾವು ಓದಿದ ಸರ್ಕಾರಿ ಶಾಲೆಗಳ ಜಮಾನ ಮುಗಿದಂತೇ ಎಂದು ನನಗೆ ಬಹಳ ಹಿಂದೆಯೇ ಅನ್ನಿಸಿದೆ. ಯಾವೊಬ್ಬ ಅನಿವಾಸಿ, ಅವರ ಸಂಬಂಧಿಗಳ ಮಕ್ಕಳಾಗಲೀ ಅವರ ಮಾತುಕಥೆಗಳಾಗಲೀ ಸರ್ಕಾರೀ ಶಾಲೆಯ ಹತ್ತಿರವೂ ಸುಳಿಯೋದಿಲ್ಲ. ಎಲ್ಲರೂ ಆ ಅಕಾಡೆಮಿ, ಈ ಅಕಾಡೆಮಿ ಅನ್ನೋ ಬೋರ್ಡುಗಳಿಗೆ ದುಡ್ಡು ಸುರಿಯೋರೇ. ಕಾಲ ಬದಲಾಗಿದೆ ನಿಜ, ಆದರೆ ಸರ್ಕಾರಿ ಶಾಲೆಯಲ್ಲಿ ಓದಿ ನಾವು ಮನುಷ್ಯರಾಗಲಿಲ್ಲವೇ? ನಾವು ಓದಿದ ಸರ್ಕಾರಿ ಶಾಲೆಗಳು ಸೆಕ್ಯುಲರಿಸಂ ಅನ್ನೋ ಆ ಪದದ ಅರಿವಿರದೆಯೂ ತುಂಬಾ ಚೆನ್ನಾಗಿ ಕಾಪಾಡಿಕೊಂಡು ಬಂದವುಗಳು. ನಾವು ಹಾಡುವ ನಾಡಗೀತೆ, ರಾಷ್ಟ್ರಗೀತೆಗಳನ್ನು ಬಿಟ್ಟರೆ, ವರ್ಷಕ್ಕೊಮ್ಮೆ ಹಬ್ಬ ಹರಿದಿನಗಳಲ್ಲಿ ದೇವರುಗಳನ್ನು ನೆನೆಯುವುದನ್ನು ಬಿಟ್ಟರೆ ದಿನವೂ ನಮಗೆ ದೇವರ ಪ್ರಾರ್ಥನೆ ಇರಲಿಲ್ಲ. ಅಂಥ ನಿಯಮಗಳನ್ನು ಮನೆಯಲ್ಲಿಯೇ ಕಾಪಾಡಿಕೊಂಡ ನಾವುಗಳು ಇಂದು ಯಾವ ಬೋರ್ಡು, ಕಾನ್ವೆಂಟಿನಲ್ಲಿ ಓದಿದ ಮಕ್ಕಳಿಗೆ ಕಮ್ಮಿ? ನಮ್ಮ ನುಡಿಯಲ್ಲಿ ನಾವು ’ಅಗಸ-ಆಡು’ ಓದಿಕೊಂಡು ಬಂದರೂ ಇಲ್ಲಿ A for Apple ಎಂದುಕೊಂಡೇ ಬದುಕನ್ನು ನಡೆಸಿಕೊಂಡು ಹೋಗುತ್ತಿಲ್ಲವೇ? ಇನ್ನು ಕೆಲವರ ಮಕ್ಕಳು ಹೋಗುವ ಶಾಲೆಗಳಲ್ಲಿ ಇಂಗ್ಲೀಷ್ ಬಿಟ್ಟು ಬೇರೆ ಭಾಷೆಯನ್ನಾಡಿದರೆ ದಂಡ ವಿಧಿಸುತ್ತಾರಂತೆ! ಅಮೇರಿಕ, ಬ್ರಿಟನ್ನುಗಳಲ್ಲಿ ಇಲ್ಲದ ಕಾಯಿದೆ ಇಂಡಿಯಾದವರಿಗ್ಯಾಕ್ ಬೇಕಪ್ಪಾ? ಹಾಳಾದೋರು, ಇಂಗ್ಲೀಷ್ ಕಲಿಸೀ ಕಲಿಸೀ ದೇಶಾನ ಉದ್ದಾರ ಮಾಡಿರೋದನ್ನ ನೋಡೋಕ್ ಕಾಣ್ತಾ ಇಲ್ವಾ ಕಳೆದ ಅರವತ್ತು ವರ್ಷಗಳಲ್ಲಿ? ಒಂದೊಂದು ಮಗೂಗೆ ವರ್ಷಕ್ಕೆ ಒಂದೂವರೆ ಲಕ್ಷವನ್ನ ಎಲ್ಲಿಂದ ತರ್ತಾರಂತೆ, ಇವರೆಲ್ಲಾ ಹೊಟ್ಟೆಗೇನ್ ತಿಂತಾರೆ? ನಮ್ಮತನವನ್ನ ಕಲೀಲಿ ಅಂತ ಇಲ್ಲಿಂದ ಅಲ್ಲಿಗ್ ಕರ್ಕೊಂಡ್ ಹೋಗಿ ಶಾಲೇಲ್ ಇಂಗ್ಲೀಷ್ ಮಾತಾಡು, ಮನೇಲ್ ಕನ್ನಡ ಕಲಿ ಅಂದ್ರೆ ಆ ಮಗುವಿನ್ ಮೇಲೆ ಏನೇನ್ ಪರಿಣಾಮ ಆಗುತ್ತೋ?

’ಯಾಕೆ, ಇಲ್ಲಿಂದ ಹೋದೋರೆಲ್ಲಾ ಬೆಂಗ್ಳೂರ್ನಲ್ಲೇ ಸಾಯ್‌ಬೇಕೂ ಅಂತ ವಿಧಿ ನಿಯಮಾ ಏನಾದ್ರೂ ಇದೆಯೇನು?’ ಅನ್ನೋ ಪ್ರಶ್ನೆ ಮತ್ತೆಲ್ಲಿಂದಲೋ ಬಂತು. ಅದೂ ಹೊಲಸೆದ್ದು ಹೋಗಿರೋ ನಗರ, ಮೊನ್ನೇ ಹೋದಾಗ ಬೆಳಗ್ಗೆ ಆರು ಘಂಟೆಗೆ ಎಮ್.ಜಿ.ರಸ್ತೆ ನೋಡಿ ವಾಕರಿಕೆ ಬಂದಿತ್ತು. ಎಲ್ಲೆಲ್ಲಿ ನೋಡಿದ್ರೂ ಕಸ, ಮುಸುರೆ, ಒಂದಕ್ಕೂ ರೂಲ್ಸು, ನೀತಿ-ನಿಯಮಾ ಅನ್ನೋದೇನೂ ಇದ್ದಂಗೇ ಕಾಣಿಸ್ಲಿಲ್ಲ. ಬೆಳಗ್ಗೆ ವಿಮಾನ ನಿಲ್ದಾಣದಿಂದ ಮನೆಗೆ ಹೊರಟ ನನಗೆ ಮೂರ್ನಾಲ್ಕು ಕಡೆ ಹಾರ್ಟ್ ಅಟ್ಯಾಕ್ ಆಗೋದೊಂದೇ ಬಾಕೀ ಇತ್ತು. ಎಲ್ಲೆಲ್ಲಿ ಕೆಂಪು ದೀಪಗಳು ಇದ್ದವೋ ಅಲ್ಲೆಲ್ಲಾ ಜನಗಳು ಸರಾಗವಾಗಿ ವಾಹನಗಳನ್ನು ನುಗ್ಗುಸ್ತಲೇ ಇದ್ದರು. ಇರೋ ಜನರನ್ನು ನೋಡಿಕೊಳ್ಳಲೇ ಯಾವುದೇ ವ್ಯವಸ್ಥೆ, ಪ್ಲಾನುಗಳು ಇಲ್ಲದ ಪ್ರದೇಶಕ್ಕೆ ಹೋಗಿ ಗೊತ್ತಿರೋರು, ಗೊತ್ತಿಲ್ಲದವರೆಲ್ಲ ತಗಲಾಕಿಕೊಂಡ್ರೆ ಹೇಗೆ? ಅನಿವಾಸಿಗಳು ತಮ್ಮ ತಮ್ಮ ಊರಿಗೋ ಅಥವಾ ಅವರವರ ಜಿಲ್ಲಾ ಕೇಂದ್ರಕ್ಕೋ ಹೋಗಿ ಅಲ್ಲೇ ಯಾಕೆ ವಾಸ್ತವ್ಯ ಹೂಡಬಾರ್ದು. ಅನಿವಾಸಿಗಳ ಶೋಕಿ ಜೋಕಿ ಆಚಾರ-ವಿಚಾರ ಏನೂ ಅಂತ ಎಲ್ಲರಿಗೂ ಸ್ವಲ್ಪ ತಿಳೀಲಿ. ಬೆಂಗ್ಳೂರಿನ ಅವ್ಯವಸ್ಥೆಯಲ್ಲಿ ಬದುಕೋದಕ್ಕಿಂತ ಮಂಗ್ಳೂರೋ-ಮೈಸೂರಿನ ಅವ್ಯವಸ್ಥೆಯಲ್ಲಿ ಇರೋದು ಸರಿ ಅನ್ಸಲ್ವಾ? ಅದೂ ಅಲ್ದೇ ಇಲ್ಲೆಲ್ಲಾ ಮಲ್ಟಿನ್ಯಾಷನಲ್ ಕಂಪನಿಗಳಿಗೆ ದುಡಿದವರು ಅಲ್ಲಿ ಹೋಗಿ ದೇಸೀ ಕಂಪನಿಗಳಿಗೋ ಅಥವಾ ತಮ್ಮದೇ ಆದ ಕಂಪನಿಗಳಿಗೆ ದುಡಿಯೋದು ಸರಿ ಅನ್ಸಲ್ವಾ? ನನಗ್ ಗೊತ್ತು, ನಾನು ಏನೇ ಅಂದ್ರೂ ಎಲ್ರೂ ಬೆಂಗ್ಳೂರಿಗೇ ವಾಪಸ್ ಹೋಗಿ ತಗಲ್ ಹಾಕ್ಕೋತಾರೇ ಅಂತ. ಅದ್ರಿಂದಾನೇ ಅಲ್ಲಿ ಮನೆ-ಮಠ-ಸೈಟುಗಳಿಗೆ ಅಷ್ಟೊಂದು ದುಡ್ಡಾಗಿರೋದು. ಇಲ್ಲಿ ಐದು ವರ್ಷ ಸಂಪಾದ್ಸಿ ಉಳ್ಸಿರೋ ದುಡ್ನಲ್ಲಿ ಊರ ಹೊರಗೆ ಒಂದು ಸಿಕ್ಸ್ಟೀ ಫಾರ್ಟೀ ಸೈಟ್ ತೆಗೊಂಡ್ರೇ, ಇನ್ನು ಅದ್ರಲ್ಲಿ ಮನೇ ಕಟ್ಟ್ಸೋದಕ್ಕೆ ಇನ್ನೂ ಹತ್ತು ವರ್ಷ ದುಡೀಬೇಕಾಗುತ್ತೆ. ಅಲ್ಲಿನ ಇನ್‌ಫ್ಲೇಷನ್ನುಗಳನ್ನು ಯಾರು ಕಾಯ್ಕೊಂಡಿರ್ತಾರೆ, ಇವತ್ತು ನೂರು ರುಪಾಯಿಗೆ ಸಿಗೋದು ನಾಳೆ ಸಾವ್ರ ರೂಪಾಯಿಗೂ ಸಿಗೋದಿಲ್ಲ, ಮುಂದೆ ಒಂದು ದಿನ ಒಂದು ಲೋಫ್ ಬ್ರೆಡ್ ತೆಗೊಳೋಕೂ ಒಂದು ಲಾರಿ ಲೋಡ್ ದುಡ್ಡು ತಗೊಂಡು ಹೋಗ್ಬೇಕಾಗುತ್ತೆ.

ಈಗಾಗ್ಲೇ ನಾನು ಮನೇ ಒಳಗೆ ಬಂದಿದ್ದರಿಂದ ಹೊರಗಿನ ಛಳಿ ಹೊರಗೇ ಇತ್ತು. ಪ್ಯಾಡಿಯೋ ಬಾಗಿಲ್ಲನ್ನ ಸ್ಲ್ಯಾಮ್ ಮಾಡಿದೆ ಎಂದು ಬಾಗಿಲಿಗೆ ಎದುರಾಗಿರುವ ಅಕ್ವೇರಿಯಮ್ ನಲ್ಲಿರೋ ಮೀನು ಒಂದು ಲುಕ್ ಕೊಟ್ಟಿತು, ಸದ್ಯ ಮನೆಯಲ್ಲಿ ಇದೊಂದು ಮಾತಾಡಲ್ಲ ಎಂದು ಉಸ್ ಎಂದೆ, ಆದರೂ ಏನೋ ವಟವಟಗುಟ್ಟುತ್ತಲೇ ಇತ್ತು. ನಾವು ವಾಪಾಸ್ ಹೋಗ್ಬೇಕು ಆದ್ರೆ ಫುಲ್‌ಟೈಮ್ ಕೆಲ್ಸಾ ಮಾಡ್ಬಾರ್ದು, ಮಕ್ಳು ಒಳ್ಳೇ ಶಾಲೇನಲ್ಲಿ ಓದ್ಬೇಕು ಆದ್ರೆ ಲಕ್ಷಗಟ್ಟಲೇ ಖರ್ಚಾಗಾಬಾರ್ದು, ಎಲ್ಲಿಗೆ ಹೋದ್ರೂ ಬೆಂಗ್ಳೂರಿಗೆ ಮಾತ್ರ ಹೋಗ್ಬಾರ್ದು-ಮತ್ತಿನ್ನ್ಯಾವ ಊರು ಒಳ್ಳೆಯದು, ಎಲ್ಲಾ ಇರೋಣ ನಮ್‌ತನಾನ ಉಳಿಸಿಕೊಳ್ಳೋಣ - ಎನ್ನೋ ಮಾತುಗಳೆಲ್ಲ ಚರ್ಚಾಸ್ಪರ್ಧೆಯ ವಾದ-ಪ್ರತಿವಾದಗಳಂತೆ ಕಣ್ಣ ಮುಂದೆ ಸುಳಿದುಹೋದವು. ’ನಾನು ಹೋಗೇ ಹೋಗ್ತೀನಿ’ ಅನ್ನೋ ಧ್ವನಿ ಇದ್ದಕ್ಕಿದ್ದ ಹಾಗೆ ಕ್ಷೀಣಿಸ ತೊಡಗಿದ್ದೂ ಅಲ್ದೇ ಇಷ್ಟೊತ್ತಿನವರೆಗೆ ಇದ್ದ ’ನಾವು’ ಎನ್ನುವ ಸ್ವರ ಏಕದಂ ’ನಾನು’ ಆದದ್ದಕ್ಕೆ ಒಮ್ಮೆ ವ್ಯಥೆಯಾಯಿತು, ಅದರ ಮಗ್ಗುಲಿನಲ್ಲಿ ಸುಖವೂ ಹಾಯಾಗಿ ನಿದ್ರಿಸುತಲಿತ್ತು.

4 comments:

  1. ಇಂದಿನ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ವಾಸಿ. ಎಲ್ಲೋ ಕೆಲವು ಶಿಕ್ಷಕರನ್ನು ಬಿಟ್ಟರೆ ಎಲ್ಲರೂ ಮಕ್ಕಳಿಗೆ ಸರಿಯಾಗಿಯೇ ಕಲಿಸುತ್ತಾರೆ. ಯಾವ ಅಕಾಡೆಮಿ, ಯಾವ ಡೂನ್ ಸ್ಕೂಲ್, ಇಂಥ ಶಾಲೆಗಳಲ್ಲಿ ಕಲಿತ ಮನುಷ್ಯರು ಯಾವ ಕ್ಷೇತ್ರದಲ್ಲಿ ಅತ್ಯುನ್ನುತ ಸಾಧನೆ ಮಾಡಿದ್ದಾರೆ. ಕೇಳಿದರೆ ಶೂನ್ಯ. ಈಗ ಪ್ರಾಥಮಿಕ ಹಂತದಲ್ಲಿ ಶಿಕ್ಷಕರ ಆಯ್ಕೆಯಲ್ಲಿ ಸಿ.ಇ.ಟಿ. ಬಂದ ಮೇಲಂತೂ ಉತ್ಕೃಷ್ಟ ದರ್ಜೆಯ ಶಿಕ್ಷಕರು ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಸೇರುತ್ತಿದ್ದಾರೆ. ಸುಮಾರು ಹತ್ತು ವರ್ಷಗಳ ನಂತರ ಹಳಬ ಶಿಕ್ಷರೆಲ್ಲ ಕಳಚಿ ಹೊಸ ವಾತವಾರಣ ಆಗಬಹುದು ಎಂದು ನಿರೀಕ್ಷಿಸಬಹುದ. ಆದರೆ ಶಿಕ್ಷಣದ ವಾತವರವಣವನ್ನು ಎನೇನೋ ಸೆಮಿಸ್ಟರ್‍ ಹಾಗೆ ಹಾಗೆ ಅಂತ ಅಧಿಕಾರಿಗಳು ಕುಲಗೆಡಿಸುತ್ತಿದ್ದಾರೆ. ತಾವು ಬರೆದ ಲೇಖನ ಚೆನ್ನಾಗಿದೆ .
    ಏನೆ ಇರಲಿ ಭಾರತದಲ್ಲಿನ ಐ.ಐ.ಟಿ ; ಎನ್.ಐ.ಟಿ. ಇನ್ನಿತರ ಪ್ರತಿಷ್ಟಿತ ಸಂಸ್ಥೆಗಳು ಸರ್ಕಾರದ ಹಣ ಉಪಯೋಗಿಸಿಕೊಂಡು ಎಲ್ಲಾ ವಿದ್ಯಾರ್ಥಿಗಳನ್ನು ಅಮೇರಿಕ , ಇಂಗ್ಲೆಂಡ್ ಗೆ ಜಾಸ್ತಿ ಸಂಬಳ ತೆಗೆದುಕೊಂಡು ಅಲ್ಲಿಯೇ ಸೆಟ್ಲ್ ಆಗಿರಲು ತರಭೇತಿ ನೀಡಿ ಕಳಿಸುತ್ತಿವೆ. ಇದರಿಂದೇನು ಬಂತು ಭಾರತಕ್ಕೆ. ನಿಮ್ಮಂಥವರು ಈಗಿಲ್ಲವೇ ಅಮೇರಿಕದಲ್ಲಿ .
    ಒಟ್ಟಾರೆ ತಮ್ಮ ಲೇಖನ ಚೆನ್ನಾಗಿದೆ ಸ್ವಾಮಿ. ನಾನು ಲೇಖನ ಒದುತ್ತಿರುತ್ತೇನೆ. ಕಾಮೆಂಟ್ ಬರೆಯಲು ಆಗುವುದಿಲ್ಲ ಕ್ಷಮಿಸಿ. ತಮಗೆ ನಾನು ಈಗಾಗಲೆ ಮೇಲ್ ಮಾಡಿದ್ದೆ ತಮ್ಮಿಂದ ಉತ್ತರವಿಲ್ಲ. ಹೇಗಿದ್ದೀರಿ ರಾಯರೆ.

    ReplyDelete
  2. ವಾಸುದೇವ,

    ನೀನು ಕಾಮೆಂಟ್ ಏನೋ ಬಿಟ್ಟೆ ಆದರೆ ಬಹಳ ದೊಡ್ಡ ವಿಷಯವೊಂದನ್ನು ಹೊರ ಹಾಕಿದೆ, ಅಂದ್ರೆ ನಮ್ಮಲ್ಲಿನ ಉನ್ನತ ಸಂಸ್ಥೆಗಳು ಪ್ರತಿಭಾ ಪಲಾಯನಕ್ಕೆ ಸಹಾಯ ಮಾಡ್ತವೆ ಅಂತ ಯೋಚಿಸೋಣವೋ, ಅಥವಾ ವಿದೇಶಕ್ಕೆ ಹೋದವರು ಫಾರಿನ್ ಹಣವನ್ನು ದೇಶಕ್ಕೆ ತರ್ತಾರೆ, ದೇಶವನ್ನು ಬೆಳಸ್ತಾರೆ ಅಂದುಕೊಳ್ಳೋಣವೋ. ನಾನೂ ಸರ್ಕಾರಿ ಶಾಲೆಗಳಲ್ಲಿ ಆಗೋ ಬದಲಾವಣೆಗಳ ಬಗ್ಗೆ ಕೇಳಿದ್ದೇನೆ, ಅವೆಲ್ಲಾ ಒಳ್ಳೆಯವೋ ಕೆಟ್ಟವೋ ಎಂದು ಹೇಗೆ ಹೇಳಬಹುದು, ಎಲ್ಲಾದರೂ ತುಲನಾತ್ಮಕವಾಗಿ ಯಾರಾದರೂ ಈ ಬದಲಾವಣೆಗಳನ್ನು ಪರೀಕ್ಷಿಸಿದ್ದಾರೆಯೇ?

    ನಿನ್ನ ಇ-ಮೇಲ್ ಗೆ ಉತ್ತರ ಕೊಟ್ಟಿದ್ದೇನೆ, ಅದು ಎಲ್ಲೋ ಬಿದ್ದು ಒದ್ದಾಡ್ತಾ ಇತ್ತು, ನೋಡೇ ಇರಲಿಲ್ಲ!

    ReplyDelete
  3. Anonymous4:48 AM

    Hello, there. This is a quick summary of the goodness of buying wow gold from Purchase wow gold, Purchase wow power level, the World of Warcraft network of trust Purchase wow power leveling, Purchase warcraft power leveling and understanding for WoW PL'ers Purchase warcraft gold. Come to here for Purchase wow leveling. If you are in the mood for Final Fantasy XI gil, then please go to Purchase FFXI Gil, Purchase Buy FFXI Gil, Purchase FFXI Gil Sale, Purchase Cheapest FFXI Gil, Purchase Buy Cheap FFXI Gil, Purchase final Fantasy XI Gil, Purchase Cheap FFXI Gil.

    ReplyDelete