Saturday, October 27, 2007

ರಾಜ್ಯೋತ್ಸವದ ಆಚರಣೇ ಕೇವಲ ಒಂದೇ ದಿನ ಇರಲಿ

ಇನ್ನೇನು ಕನ್ನಡ ರಾಜ್ಯೋತ್ಸವ ಬಂದೇ ಬಿಡ್ತು, ಆದರೆ ಹೇಳಿಕೊಳ್ಳಲಿಕ್ಕೊಂದು ಸರ್ಕಾರವಿಲ್ಲ, ರಾಜ್ಯವನ್ನು ಮುನ್ನಡೆಸುವ ನಾಯಕರಿಲ್ಲ. ಐದು ವರ್ಷಗಳ ಆಡಳಿತ ನಡೆಸುವಂತೆ ಜನತೆ ಅಭಿಮತವಿತ್ತು ಶಾಸಕರನ್ನು ಆರಿಸಿದರೆ, ಇವರುಗಳು ತಮಗೆ ಬೇಕಾದ ರೀತಿಯಲ್ಲಿ ಒಡಂಬಡಿಕೆಗಳನ್ನು ಸೃಷ್ಟಿಸಿಕೊಂಡು ತಿಂಗಳುಗಳ ಸರ್ಕಾರವನ್ನು ಮುಂದಿಡುತ್ತಲೇ ಬಂದಿದ್ದಾರೆ. ಒಟ್ಟಿನಲ್ಲಿ ಎರಡೆರಡು ವರ್ಷಗಳಿಗೊಬ್ಬ ಮುಖ್ಯಮಂತ್ರಿ ಹಾಗೂ ಅವರ ಪರಿವಾರವನ್ನು ತೃಪ್ತಿ ಪಡೆಸುವುದಷ್ಟೇ ರಾಜ್ಯದ ಗುರಿಯಾಗಿ ಹೋಯಿತು. ನಮ್ಮ ಸಮಸ್ಯೆಗಳು ಸಮಸ್ಯೆಗಳಾಗೇ ಉಳಿದು ಬಿಟ್ಟವು.

ಗಡಿ ಸಮಸ್ಯೆಯ ಮಾತಂತೂ ಇತ್ತೀಚೆಗೆ ಬಹಳ ಕೇಳಿಬರುತ್ತಿದೆ. ಉತ್ತರದಲ್ಲಿ ಮಹಾರಾಷ್ಟ್ರ ಸರ್ಕಾರದ ಹುಕುಮತ್ತಿನಲ್ಲಿ ಬೆಳಗಾವಿ ಪ್ರಾಂತ್ಯವನ್ನು ಕಿತ್ತುಕೊಳ್ಳಲು ಹವಣಿಕೆ ನಡೆಯುತ್ತಿದ್ದರೆ ಪೂರ್ವ ಹಾಗೂ ದಕ್ಷಿಣದಲ್ಲಿ ಭಾಷಾ ಹೇರಿಕೆ ನಡೆಯುತ್ತಿದೆ. ಕನ್ನಡಿಗರ ಸೊಲ್ಲೇನಿದ್ದರೂ ಅಡಗಿ ಹೋಗಿ ಎಲ್ಲಿ ನೋಡಿದರೂ ಅನ್ಯ ಭಾಷೆಯವರಿಗೇ ಪ್ರಾತಿನಿಧ್ಯ ಕಾಣುತ್ತಿದೆ. ನಾವು ದಕ್ಷಿಣದಲ್ಲಿ ಉಳಿದವರಿಗೆ ಸರಿಸಮಾನವಾಗಿ ಬೆಳೆಯದೇ ಹೋಗಿ ಹಿಂದುಳಿಯುತ್ತಿದ್ದೇವೆಯೇ ಎನ್ನೋ ಸಂಶಯ ಕೂಡ ಹುಟ್ಟುತ್ತಿದೆ. ಆಡಳಿತ ಭಾಷೆಯಾಗಿ ಕನ್ನಡವನ್ನು ಬಳಸಬೇಕು ಎಂಬುದು ಇವತ್ತಿಗೂ ವಿಶ್ ಆಗಿ ಉಳಿಯಿತೇ ವಿನಾ ಎಷ್ಟೋ ಕಡೆ ಇನ್ನೂ ಚಾಲ್ತಿಗೆ ಬಂದ ಹಾಗಿಲ್ಲ.

ಪ್ರತಿಯೊಂದಕ್ಕೂ ಅಸ್ಥಿರ ರಾಜಕೀಯ ಸ್ಥಿತಿಗತಿಯನ್ನು ಬೆರಳು ಮಾಡಿ ತೋರಿಸಲಾಗದಿದ್ದರೂ ನಮ್ಮಲ್ಲಿನ ರಾಜಕೀಯ ಮುತ್ಸದ್ದಿತನದ ಕೊರತೆಯಿಂದಾಗಿ, ಮುಂದಾಳುಗಳಾಗಲೀ, ದಾರ್ಶನಿಕರಿಲ್ಲದೇ ಕೇಂದ್ರ ಎಷ್ಟೋ ಯೋಜನೆಗಳ ಪಾಲು ಕರ್ನಾಟಕಕ್ಕೆ ಸಿಗುವಲ್ಲಿ ಮಲತಾಯಿ ಧೋರಣೆಯ ಮಾತು ಅಲ್ಲಲ್ಲಿ ಕೇಳಿಬರುತ್ತದೆ. ರಾಜ್ಯಕ್ಕೆ ಹೊಸ ರೈಲು ನಿಲ್ದಾಣಗಳಾಗಲೀ, ಮಾರ್ಗಗಳಾಗಲಿ ಕೊಡುವಲ್ಲಿ ಕೇಂದ್ರದ ತಾರತಮ್ಯ ಎದ್ದು ತೋರುತ್ತದೆ. ಅದೇ ರೀತಿ ಅನೇಕ ಯೋಜನೆಗಳಿಗೂ ಸಹ ತಕ್ಕ ಮಾನ್ಯತೆ ಸಿಕ್ಕಂತೆ ಕಂಡು ಬಂದಿಲ್ಲ. ಕೇಂದ್ರದಲ್ಲಿ ಪ್ರಭಲ ಕಾಂಗ್ರೇಸ್ ರಾಜ್ಯದಲ್ಲಿನ ಕಾಂಗ್ರೇಸೇತರ ಸರ್ಕಾರಕ್ಕೆ ಸಹಾಯ ಮಾಡೀತು ಎಂದು ನಂಬುಕೊಳ್ಳುವುದು ಕಷ್ಟದ ಮಾತು. ತಮ್ಮ ತಮ್ಮ ಒಳಜಗಳಗಳನ್ನು ಪೂರೈಸಿಕೊಳ್ಳುವುದರಲ್ಲೇ ಕಾಲಹರಣ ಮಾಡುವ ಶಾಸಕಾಂಗದ ಸದಸ್ಯರು ಯಾವ ರೀತಿಯಲ್ಲಿ ಅವರವರ ಕ್ಷೇತ್ರಗಳನ್ನು ಪ್ರತಿನಿಧಿಸಿಯಾರು ಮತ್ತೆ ಇನ್ನೆರಡು ವರ್ಷಗಳಲ್ಲಿ ಚುನಾವಣೆ ನಡೆದರೆ ತಮ್ಮ ಕ್ಷೇತ್ರದ ಜನರನ್ನು ಹೇಗೆ ಮುಖಕೊಟ್ಟು ಮಾತನಾಡಿಸಿಯಾರು ಎಂಬ ಅನುಮಾನ ಬರುತ್ತದೆ. ಚುನಾವಣೆಗೆ ಮೊದಲಿನ ಪ್ರಸ್ತಾವನೆಗಳಲ್ಲಿ, ಪ್ರಣಾಲಿಕೆಗಳಲ್ಲಿ ಕೇವಲ ಹತ್ತು ಪರ್ಸೆಂಟ್ ಕೆಲಸವನ್ನಾದರೂ ಪ್ರತಿಯೊಬ್ಬ ಶಾಸಕರು ಮಾಡಿದ್ದರೆ ಅದು ನಿಜವಾಗಿಯೂ ತೃಪ್ತಿಕರ ಕಾರ್ಯ ಎಂದು ಒಪ್ಪಿಕೊಳ್ಳುವ ಸಂದಿಗ್ಧ ಬಂದಿದೆಯಷ್ಟೇ.

ಪ್ರತಿವರ್ಷ ಇಷ್ಟೊತ್ತಿಗಾಗಲೇ ಕೇಳಿ ಬರುತ್ತಿದ್ದ ಕಾವೇರಿ ನೀರಿನ ಕೂಗು ಇನ್ನು ಸ್ವಲ್ಪ ದಿನಗಳಲ್ಲೇ ಶುರುವಾಗಬಹುದು. ದಿನೇ ದಿನೇ ಬೇಸಿಗೆ ಏರಿದಂತೆ ನಿಯೋಗದ ಮೇಲೆ ನಿಯೋಗವನ್ನು ಕಳಿಸಿ ತಮ್ಮತನವನ್ನು ಸಾಧಿಸಿಕೊಳ್ಳುವ ಪಕ್ಕದ ರಾಜ್ಯದ ಸರ್ಕಾರದ ಮುಂದೆ ನಮ್ಮವರ ಆಟ ಈ ಸಲ ಹೇಗೆ ಬೇರೆಯಾಗುವುದೋ ನೋಡಬೇಕು. ಕಾವೇರಿ ನೀರಿನ ವಿಷಯ ರಾಜಕೀಯ ಪ್ರೇರಿತವಾದದ್ದು, ಅಲ್ಲದೇ ಕೇವಲ ಕೆಲವೇ ಕೆಲವು ಜಿಲ್ಲೆಯವರು ಪ್ರತಿನಿಧಿಸುವ ಅಂಶವಾಗಿರುವುದು ಮತ್ತೊಂದು ಬೆಳವಣಿಗೆ. ನಮ್ಮಲ್ಲಿಲ್ಲದ ಒಗ್ಗಟ್ಟೇ ನಮಗೆ ಮುಳುವಾದೀತು ಎಂದರೂ ತಪ್ಪಾಗಲಾರದು.

ಕನ್ನಡಿಗರು ಹೋಮ್‌ವರ್ಕ್ ಮಾಡೋದೇ ಇಲ್ಲವೇನೋ ಎನ್ನಿಸಿಬಿಡುತ್ತದೆ ಕೆಲವೊಮ್ಮೆ. ನಮ್ಮಲ್ಲಿನ ಸುದ್ದಿಗಳು ಇತ್ತೀಚೆಗಂತೂ ಕೇವಲ ರಾಜಕೀಯವನ್ನು ಮಾತ್ರ ಕವರ್ ಮಾಡುತ್ತಿವೆಯೇನೋ ಎನ್ನುವ ಅನುಮಾನವೂ ಹುಟ್ಟುತ್ತದೆ. ಒಂದು ದಿನ ಒಬ್ಬರನ್ನೊಬ್ಬರು ಬೈದುಕೊಳ್ಳುವ ರಾಜಕಾರಣಿಗಳು ಮರುದಿನ ಹಸ್ತಲಾಘವವನ್ನು ಕೊಟ್ಟುಕೊಳ್ಳುವುದನ್ನು ನೋಡಿದರೆ, ಪ್ರತಿಯೊಬ್ಬರ ಮುಖದಲ್ಲಿನ ಅಧಿಕಾರ ಲಾಲಸೆಯನ್ನು ಕಂಡರೆ ಹೇಸಿಗೆಯಾಗುತ್ತದೆ. ಇಂಥ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನೋಡಿ ಹೇಸಿಗೆಯೂ ಬರುತ್ತದೆ. ನಿಜವಾಗಿಯೂ ಚುನಾಯಿತ ಪ್ರತಿನಿಧಿಗಳಿಗೆ ಹೇಳುವವರು ಕೇಳುವವರು ಎನ್ನುವವರು ಇದ್ದಾರೆಯೇ ಎನ್ನುವ ಸಂಶಯ ಮೂಡುತ್ತದೆ. ಸರ್ಕಾರ ಬಡವಾಗುತ್ತಾ ಹೋಗುತ್ತದೆ ಚುನಾಯಿತ ಪ್ರತಿನಿಧಿಗಳು ಅಲ್ಟ್ರಾ ಶ್ರೀಮಂತರಾಗುತ್ತಾ ಹೋಗುತ್ತಾರೆ, ಯಾರದೋ ಮನೆಯ ಸೊಸೆ ಸುಮಾರು ನೂರು ಕೋಟಿ ರೂಪಾಯಿಯನ್ನು ತೊಡಗಿಸಿ (೨೫ ಮಿಲಿಯನ್ ಡಾಲರ್) ಹೊಸ ಕನ್ನಡ ಟಿವಿ ಚಾನೆಲ್ ಒಂದನ್ನು ಹೊರತರುತ್ತಾರೆ, ಪ್ರತಿಯೊಬ್ಬ ಚುನಾಯಿತ ಪ್ರತಿನಿಧಿಗಳು, ಅವರ ಕುಟುಂಬವೂ ಬಡತನದ ರೇಖೆಯಿಂದ ಬಹಳಷ್ಟು ದೂರವೆನೂ ಇರೋದಿಲ್ಲ. ಚುನಾವಣೆಗೆ ಕಣಕ್ಕಿಳಿಯುವ ಅಭ್ಯರ್ಥಿಗಳ ಬಲಾಬಲ ಅವರವರು ಭ್ರಷ್ಟಾಚಾರಕ್ಕೆ ಮೋಸಕ್ಕೆ ಬಳಸುವ ಹಣದ ಮೇಲೆ ತೀರ್ಮಾನವಾಗುತ್ತದೆ. ನಿಜವಾದ ಆದಾಯದಿಂದ ಬದುಕುವುದೇ ದುಸ್ತರವೆನ್ನಿಸಿ ಮಧ್ಯಮ ಹಾಗೂ ಕೆಳವರ್ಗದ ಜನರಿಗೆ ಗಿಂಬಳವನ್ನಾಧರಿಸಿ ಬದುಕುವುದೇ ಬದುಕಾಗುತ್ತದೆ. ದೇಶ್ದ ಹಣದುಬ್ಬರ, ಆರ್ಥಿಕ ಪರಿಸ್ಥಿತಿ ಮುಂತಾದವುಗಳನ್ನು ಸರಿಯಾಗಿ ನಿಭಾಯಿಸದೇ ಹೋಗಿ ಬಳಸುವ ಸಾಮಗ್ರಿಗಳ ಬೆಲೆ ಗಣನೀಯವಾಗಿ ಹೆಚ್ಚಾದಂತೆ ಪ್ರತಿಯೊಬ್ಬರ ತಲಾ ಆದಾಯ ಅಷ್ಟೇನು ಹೆಚ್ಚದೆ ಲಂಚ ಮೊದಲಾದವುಗಳಿಗೆ ಕುಮ್ಮಕ್ಕು ಸಿಗುತ್ತದೆ. ಭ್ರಷ್ಟರಾಗಿ ಬದುಕುವುದು, ಲಂಚದ ಕೂಪದಲ್ಲಿ ಸಿಲುಕುವುದು ಸಹಜವಾಗಿ ಹೋಗಿ ವ್ಯವಸ್ಥೆಯ ವಿರುದ್ಧ ತಿರುಗಿ ಬೀಳುವವನು ಹಾಸ್ಯಾಸ್ಪದಕ್ಕೆ ಗುರಿಯಾಗಬೇಕಾಗುತ್ತದೆ. ಅಕಸ್ಮಾತ್ ಈಗಲ್ಲದಿದ್ದರೆ ಮುಂದೆಂದಾದರೂ ಚುನಾವಣೆ ನಡೆಯದಿದ್ದಲ್ಲಿ ಮತ್ತೆ ಯಾರಿಗೂ ನಿಚ್ಛಳ ಬಹುಮತ ಬಾರದೇ ಹೋಗಿ ದೋಸ್ತಿ ಸರಕಾರಗಳು ತಿರುಗಿ ಅಸ್ತಿತ್ವಕ್ಕೆ ಬಂದರೆ ಎಂದು ಹೆದರಿಕೆಯಾಗುತ್ತದೆ.

ಕನ್ನಡಿಗರು ಸುಮ್ಮನಿದ್ದರೆ ಇವತ್ತಲ್ಲ ನಾಳೆ ದೇಶದ ಅತ್ಯಂತ ಬಡ ಹಾಗೂ ಭ್ರಷ್ಟರಾಜ್ಯಗಳ ಯಾದಿಯಲ್ಲಿ ಕರ್ನಾಟಕವೂ ನಿಲ್ಲಬೇಕಾದೀತು ಎಂದು ಹೆದರಿಕೆಯಾಗುತ್ತದೆ. ರಾಜ್ಯೋತ್ಸವದ ಸಂಬಂಧಿಸಿದಂತೆ ಕನ್ನಡಿಗರು ಏನನ್ನಾದರೂ ಮಾಡಿಕೊಳ್ಳಲಿ, ನವೆಂಬರ್ ಒಂದರಿಂದ ಡಿಸೆಂಬರ್ ಕೊನೆಯವರೆಗೆ ರಾಜ್ಯೋತ್ಸವವನ್ನು ಆಚರಿಸದೇ ಏನೇ ಆಚರಣೆಗಳಿದ್ದರೂ ಅದನ್ನು ಕೇವಲ ಒಂದು ದಿನಕ್ಕೆ ಮೀಸಲಾಗಿಟ್ಟರೆ ಸಾಕು, ಅಷ್ಟೇ.

3 comments:

  1. Anonymous12:31 AM

    ಸರ,
    "ಆ ಕಡೆ ಎನ್ನಡ (ತಮಿಳ್), ಈ ಕಡೆ ಎಕ್ಕಡ (ತೆಲುಗು). ನಡುವೆ ಸತ್ತಿದೆ ಕನ್ನಡ." ಮಾಸ್ಟರ್ ಹೀರಣ್ಣಯ್ಯ ಅವರ ಡೈಲಾಗು ಇದು. ಆ ಕುವೆಂಪು ಕನ್ನಡಕ್ಕೆ ಕೈ ಎತ್ತ, ಕೊರಳೆತ್ತ - ಹಂಗ ಹಿಂಗ ಅಂಥ ಬೊಮ್ಮಟ ಹೊಡದ್ರು. ಈಗ ಕಂಡೀಷನ್ ಹೀಗೈತ್ಹಿ ಅಂದ್ರ ಉಟ್ಗೊನ್ಡ ಲುಂಗಿ ಎತ್ತಿ ನಾಚಗ್ಯಾಗ ಮಸಡಿ ಮುಚ್ಚೊನ್ಗ್ಡ ಹೊಂಗುವಾಗ ಆಗೈತಿ. ಇಡೀ ಕರ್ನಾಟಕದ ತುಂಬ ಕನ್ನಡಿಗರಿಗೆ ಬಾರ್ಸಕತ್ತಾರ - ಅದ ಡಿಮಡಿಮ. ಹಿಂದ ಮುಂದ ಕೂಡೆ ಬಾರ್ಸಕತ್ತಾರ.

    -ಮಠ

    ReplyDelete
  2. ಮಠ,

    ಹಿಂಗಂದ್ರ ಹೆಂಗ್ರಿ ಸರ್ರ, ಕನ್ನಡದ ಮಂದಿ ಕೈಲಾಗ್‌ದೋರು ಅಂದಂಗ ಆತಲ್ಲ...ಇತ್ತೀಚಿಗಿ ಕನ್ನಡದ ಮಂದೀನೂ ತಿರುಗಿ ಬಿದ್ಯಾರಂತ, ಗೊತ್ತಿಲನು ನಿಮಗs?

    ReplyDelete