Friday, October 26, 2007

ಸಾರೆಕೊಪ್ಪ ಬಂಗಾರಪ್ಪನವರಿಗೆ ಎಪ್ಪತ್ತೈದರ ಸಂಭ್ರಮ

ಹ್ಞೂ, ಬಹಳ ಸ್ವಾರಸ್ಯಕರವಾಗಿದೆ, ಇವತ್ತು ಬಂಗಾರಪ್ಪನವರ ಬಗ್ಗೆ ’ಅಂತರಂಗ’ದಲ್ಲಿ ಏನೇನು ಬರೆದಿದ್ದೇನೆ ಅಂತ ಹುಡುಕಿದರೆ ಒಂದೇ ಒಂದು ಲೇಖನ ಸಿಗಲಿಲ್ಲ! ನಮ್ಮೂರು ಆನವಟ್ಟಿಯ ವಾತಾವರಣದಲ್ಲಿ ಕಳೆದ ನಾಲ್ಕು ದಶಕಗಳಲ್ಲಿ ಬಂಗಾರಪ್ಪನವರ ಪ್ರಭಾವದ ಬಗ್ಗೆ ಬರೆಯದೇ ಹೋದರೆ ಹೇಗೆ ಎಂದು ಒಮ್ಮೆಯೇ ನನಗನ್ನಿಸಿದ್ದು ಇವತ್ತು ಪ್ರಜಾವಾಣಿಯಲ್ಲಿ ಅವರ ೭೫ ನೇ ಹುಟ್ಟು ಹಬ್ಬದ ಸಂದರ್ಶನವನ್ನು ಓದಿದ ಮೇಲೆ. ಆದರೂ ಈ ಮನುಷ್ಯ ಬಹಳ ಗಟ್ಟಿಗ, ಇವತ್ತಿಗೂ ಶಟಲ್ ಬ್ಯಾಡ್‌ಮಿಂಟನ್ ಆಡೋದಿರಲಿ, ಹಿಂದೂಸ್ತಾನಿಯನ್ನು ಹಾಡೋದಿರಲಿ ನಿಲ್ಲಿಸಿದಂತೆ ಕಾಣೋದಿಲ್ಲ.

ಎಂಭತ್ತರ ದಶಕದಲ್ಲಿ ಬಂಗಾರಪ್ಪ ರಾಜ್ಯ ಮಂತ್ರಿಗಳಾಗಿದ್ದಾಗ ಯಾವತ್ತಾದರೊಂದು ದಿನ ಆನವಟ್ಟಿಯ ಬಳಿಯ ಲಕ್ಕವಳ್ಳಿಗೆ ಬಂದರೆ ಅಲ್ಲಿ ಸ್ಥಳೀಯ ಯುವಕರೊಡನೆ ಶಟಲ್ ಬ್ಯಾಡ್‌ಮಿಂಟನ್ ಆಡುತ್ತಿದ್ದುದು ನನಗಿನ್ನೂ ಚೆನ್ನಾಗಿ ನೆನಪಿದೆ, ಆ ಆಟಗಳಿಗೆ ನಮ್ಮಣ್ಣನೂ ಹೋಗುತ್ತಿದ್ದ. ಯಾರೂ ಎಷ್ಟೇ ದಣಿದರೂ ಬಂಗಾರಪ್ಪನವರಿಗೆ ಸುಸ್ತೆಂಬುದೇ ಇಲ್ಲ. ಅದೇ ರೀತಿ ಬಂಗಾರಪ್ಪನವರನ್ನು ಕೇವಲ ರಾಜಕಾರಣಿಯಾಗಿ ಬಲ್ಲವರು ಅವರು ಸಂಗೀತವನ್ನೂ ಕಲಿತಿದ್ದಾರೆ ಎಂದು ಹೇಳಿದರೆ ನಂಬಲಾರರು. ಕೋಳೀಕೆರಂಗ ಹಾಡನ್ನು ಬಂಗಾರಪ್ಪ ತಮ್ಮ ಅಭಿಮಾನಿಗಳ ಎದಿರು ಹೇಳಿ ಬೇಕಾದಷ್ಟು ಚಪ್ಪಾಳೆಯನ್ನು ಗಿಟ್ಟಿಸಿರೋದು ಸೊರಬಾ ತಾಲ್ಲೂಕಿನ ಜನರು ಮರೆಯಲಾರರು. ಡೊಳ್ಳು ಕುಣಿಯುವವರೊಡಗೂಡಿ ತಾವೇ ಡೊಳ್ಳು ಕಟ್ಟಿಕೊಂಡು ಕುಣಿದರೆ ತಮ್ಮ ಸಹಾಯಕ್ಕೆಂದು ಬಂದವರ ಕಷ್ಟವನ್ನು ಕೇಳಿ ಮರುಕಪಟ್ಟಿದ್ದೂ ಇದೆ. ಬಂಗಾರಪ್ಪನವರ ಕ್ರಿಯಾತ್ಮಕ ವೈಯಕ್ತಿಕ ಜೀವನಕ್ಕೂ ರಾಜಕೀಯ ಜೀವನಕ್ಕೂ ಬಹಳಷ್ಟು ಸಾಮ್ಯತೆ ಇದೆ. ಜನತಾಪಕ್ಷ, ಕಾಂಗ್ರೆಸ್ ಮುಂತಾದವುಗಳನ್ನು ಧಿಕ್ಕರಿಸಿ ಹಿಂದೆ ಕ್ರಾಂತಿರಂಗವೆಂಬ ಪಕ್ಷವನ್ನು ಕಟ್ಟಿದ ನೇತಾರ ಇಂದು ಮುಲಾಯಮ್ ಒಡಗೂಡಿ ಉತ್ತರ ಭಾರತದ ಸಮಾಜವಾದದ ಅಲೆಯನ್ನು ದಕ್ಷಿಣಕ್ಕೆ ತರಲು ಪ್ರಯತ್ನಿಸಿದ್ದಾರೆ.

ಬಂಗಾರಪ್ಪನವರಿಗೆ ಎಪ್ಪತ್ತೈದು ವರ್ಷಗಳು ಎಂದರೆ ನಂಬಲು ಕಷ್ಟವಾದೀತು. ಶಾಸಕರಾಗಿ ಸಂಸದರಾಗಿ ಇಂದಿಗೂ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಇವರನ್ನು ಶಿವಮೊಗ್ಗದ ಜನತೆ, ವಿಶೇಷವಾಗಿ ಸಾಗರ, ಸೊರಬದ ಜನತೆ ಖಂಡಿತವಾಗಿ ಸ್ಮರಿಸಿಕೊಳ್ಳುತ್ತದೆ. ಒಂದು ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಬಂಗಾರಪ್ಪನವರ ಪ್ರಾಬಲ್ಯ ಬಹಳಷ್ಟಿತ್ತು, ಇತ್ತೀಚೆಗಷ್ಟೇ ಅವರು ಅಲ್ಪಸಂಖ್ಯಾತ ಸಮಾಜವಾದವನ್ನು ಆಲಂಗಿಸಿಕೊಂಡ ಮೇಲೆ ಅವರ ಮಾತಿನ ಹರಿತ ಕಡಿಮೆಯಾದಂತೆ ಕಂಡುಬರುತ್ತದೆ. ಹಿಂದೆ ಬಂಗಾರಪ್ಪ ಮುಖ್ಯಮಂತ್ರಿಯಾದಾಗಈ ಸೊಟ್ಟಮೂತಿಯವನು ಏನು ಮಾಡಿಯಾನು ಎಂದು ಪ್ರಶ್ನೆ ಕೇಳುತ್ತಿದ್ದ ಜನ ಅವರ ಯೋಜನೆಗಳಲ್ಲಿ ಮುಖ್ಯವಾದ ಆಶ್ರಯ, ವಿಶ್ವ ಮುಂತಾದವುಗಳನ್ನು ಇಂದಿಗೂ ಕೊಂಡಾಡುತ್ತಾರೆ. ಬೇಕಾದಷ್ಟು ಆಸ್ತಿ-ಅಂತಸ್ತು ಮಾಡಿಟ್ಟಿದ್ದಾರೆ ರಾಜಕೀಯ ಸೇರಿಕೊಂಡು ಎಂದು ರಾಗ ಹೊರಡಿಸುವವರಿಗೆ ಸೆಡ್ಡು ಹೊಡೆಯುವಂತೆ ಬಂಗಾರಪ್ಪನವರ ಆಸ್ತಿ-ಅಂತಸ್ತು ಬೇಕಾದಷ್ಟಿದೆ. ಮಗ ಕುಮಾರ್ ಸಹ ರಾಜಕೀಯದಲ್ಲಿ ತೊಡಗಿಕೊಂಡು ಮುಂದಿನ ನಾಯಕನಾಗಿ ಕನಸನ್ನು ಕಾಣುವಂತೆ ವೇದಿಕೆಯನ್ನು ಸೃಷ್ಟಿಸಿದ್ದಾರೆ.

ಬಂಗಾರಪ್ಪನವರು ಒಂದು ಕಾಲದಲ್ಲಿ ಲೋಹಿಯಾ, ಜಯಪ್ರಕಾಶ್ ನಾರಾಯಣ್, ಗೋಪಾಲಗೌಡರ ಸಮಾಜವಾದವನ್ನು ಒಪ್ಪಿ ಅದೇ ಹಾದಿಯನ್ನು ತುಳಿದು ರಾಜಕೀಯದಲ್ಲಿ ನಲವತ್ತು ವರ್ಷಗಳನ್ನು ಕಳೆದ ಪ್ರಬುದ್ಧತೆಗೆ ಸಂದ ಗೌರವ, ಕೀರ್ತಿ ಹಾಗೂ ಉತ್ಪತ್ತಿ ಬೇಕಾದಷ್ಟಿದೆ. ಅರವತ್ತು ಎಪ್ಪತ್ತರ ದಶಕಗಳಲ್ಲಿ ಅದೇ ತಾನೇ ರಾಜಕೀಯ ಚಿಗುರೊಡೆಯುತ್ತಿದ್ದ ಕಾಲದಲ್ಲಿ ಸಮಾಜಕ್ಕೆ ನ್ಯಾಯ ಒದಗಿಸುವ, ಬೇಧ-ಭಾವವನ್ನು ಕಡಿಮೆ ಮಾಡುವ ಸಾಮಾಜಿಕ ನೆಲೆಗಟ್ಟನ್ನು ಕನಸಾಗಿ ಕಂಡವರು ಹೆಚ್ಚು ಜನ ಇನ್ನೂ ಉಳಿದಿರಲಾರರು. ಆದರೆ ಆಗ ರಾಜಕೀಯಕ್ಕೆ ಧುಮುಕಿದವರೆಲ್ಲರೂ ಇಂದು ಬೇಕಾದಷ್ಟು ಸಂಪನ್ಮೂಲಗಳನ್ನು ತಮ್ಮದಾಗಿಸಿಕೊಂಡಿದ್ದಾರೆ, ತಲೆ-ತಲೆಮಾರಿಗೆ ಸಾಕಾಗುವಷ್ಟನ್ನು ಮಾಡಿಕೊಂಡಿದ್ದಾರೆ. ಅದು ತಪ್ಪೋ ಸರಿಯೋ ಬಂಗಾರಪ್ಪನವರೂ ಎಲ್ಲರೊಳಗೊಂದಾಗಿ ಹೋದರು. ಆದರೆ ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ನಲವತ್ತು ವರ್ಷಗಳ ಕಾಲ ಒಂದು ತಾಲ್ಲೂಕು, ಜಿಲ್ಲೆಯನ್ನು ಆಳಿಕೊಂಡಿದ್ದ ಯಾವೊಬ್ಬ ರಾಜಕಾರಣಿಯಾಗಲೀ, ಅವರ ತಲೆಮಾರಾಗಲೀ ಅಲ್ಲಿ ಸಾಕಷ್ಟನ್ನು ಮಾಡಿರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸೊರಬಾ ತಾಲ್ಲೂಕಿಗೆ ಇವತ್ತಿಗೂ ಸಹ ಸರಿಯಾದ ರಸ್ತೆಗಳು ಎಂಬುವುದೇನಿಲ್ಲ. ಸೊರಬಾ ತಾಲ್ಲೂಕಿನಲ್ಲಿ ಸಾಕಷ್ಟು ಹೆಸರು ಮಾಡಿರುವ ಗುಡವಿ ಪಕ್ಷಿಧಾಮಕ್ಕೆ ಹೋಗುವ ರಸ್ತೆಯನ್ನು ನೋಡಿದರೆ ತಾಲ್ಲೂಕಿನ ಹಣೆಬರಹವನ್ನೇ ಹೇಳಿಬಿಡಬಹುದು. ಅಲ್ಲಲ್ಲಿ ಹೂಳು ತುಂಬಿ ಬೇಸಿಗೆಯಲ್ಲಿ ನೀರು ನಿಲ್ಲದ ಕೆರೆಕಟ್ಟೆಗಳನ್ನು ನೋಡಿ ಮರುಗಬಹುದು. ಮುಖ್ಯ ರಸ್ತೆಗಳಲ್ಲಿ ಕಾಣಸಿಗುವ ಶಿತಿಲಗೊಂಡ ಸೇತುವೆಗಳು, ಕಳಪೆ ಕಾಮಗಾರಿಗೆ ಸಾಕ್ಷಿ ಒದಗಿಸುವ ಸರ್ಕಾರಿ ಕಟ್ಟಡ, ವಸತಿಗೃಹ, ಕಛೇರಿಗಳನ್ನು ನೋಡಿದಾಗಲೆಲ್ಲ ನಲವತ್ತು ವರ್ಷದ ಕೌಟುಂಬಿಕ ರಾಜಕಾರಣವೇ ಸೊರಬಾ ತಾಲ್ಲೂಕಿನ ಶಾಪವೇ ಎಂದು ಅನ್ನಿಸದೇ ಇರದು. ಸೊರಬಾ ಆನವಟ್ಟಿಯ ಸುತ್ತಮುತ್ತಲು ಹಾಡುಹಗಲೂ ಕದ್ದು ಸಾಗಿಸುವ ಅರಣ್ಯ ಸಂಪತ್ತನ್ನು ತಡೆದಿದ್ದರೆ ಇಂದಿಗೂ ಸ್ವಾಭಾವಿಕವಾಗಿ ಬೆಳೆಯುವ ಗಂಧದ ಮರಗಳನ್ನು ನಾವೆಲ್ಲ ನೋಡಬಹುದಿತ್ತು. ಮಂಡಲ ಪಂಚಾಯತಿ ಮತ್ತೊಂದೇನೇ ವ್ಯವಸ್ಥೆ ಬಂದರೂ ವಾರಕ್ಕೊಮ್ಮೆ ಸಾವಿರಾರು ಜನ ಸೇರುವ ಆನವಟ್ಟಿಯ ಸಂತೇಪೇಟೆಗೆ ಒಂದು ಸದ್ಗತಿಯನ್ನು ಒದಗಿಸಿಕೊಡಬಹುದಿತ್ತು. ಮೊದಲು ಮಲೆನಾಡಿದ್ದುದು, ನಂತರ ಅರೆಮಲೆನಾಡಾಗಿ ಈಗ ಎಲ್ಲಿ ನೋಡಿದರೂ ಬಯಲು ಸೀಮೆಯ ಅವಶೇಷಗಳಾದಂತಹ ತಾಲ್ಲೂಕಿನ ನಾನಾ ಭಾಗಗಳನ್ನು ಊರ್ಜಿತಗೊಳಿಸುವುದಿರಲಿ, ಅಲ್ಲಿಂದ ಜನರು ಕಾಫೀ ಸೀಮೆಗೆ ಗುಳೆ ಹೋಗುವುದನ್ನು ತಪ್ಪಿಸಬಹುದಿತ್ತು. ಯಾವುದೂ ಬೇಡ, ಮಹಾನ್ ವಿಶ್ವೇಶ್ವರಯ್ಯನವರು ಮಾಡಿದಂತೆ ಶಿವಮೊಗ್ಗದ ಸುತ್ತಮುತ್ತಲು ಒಂದಿಷ್ಟು ಕಾರ್ಖಾನೆಗಳನ್ನು ಬಂಗಾರಪ್ಪನವರು ಮುಖ್ಯಮಂತ್ರಿಯಾದಾಗ ಕಟ್ಟಿದ್ದರೆ ಜಿಲ್ಲೆಯ ಜನ ಇವತ್ತಿಗೂ ಅವರ ಹೆಸರನ್ನು ಹೇಳಿ ನೀರು ಕುಡಿಯಬಹುದಿತ್ತು.

ಬಂಗಾರಪ್ಪನವರು ’ನಾನು ಕೋಳೀಕೆರಂಗ’ ಹಾಡಿನ ಚರಣಗಳಂತೆ ತಮ್ಮ ಹುಟ್ಟೂರನ್ನು ನೆನೆಸಿಕೊಳ್ಳುತ್ತಾರೋ ಇಲ್ಲವೋ ಅಲ್ಲಿನ ಜನರಂತೂ ಅವರನ್ನು ಖಂಡಿತ ಹಚ್ಚಿಕೊಂಡಿದ್ದಾರೆ. ಆ ನೆಲ ಹೊರಹೊಮ್ಮಿಸಿದ ಗಟ್ಟಿ ನಾಯಕ ಬಂಗಾರಪ್ಪನವರಿಗೆ ಎಪ್ಪತ್ತೈದರ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು.

6 comments:

  1. I really liked ur post, thanks for sharing. Keep writing. I discovered a good site for bloggers check out this www.blogadda.com, you can submit your blog there, you can get more auidence.

    ReplyDelete
  2. ಏನೇ ಹೇಳಿದರೂ ರಾಜ್ಯ ರಾಜಕಾರಣದಲ್ಲಿ ಬಂಗಾರಪ್ಪ ಅಪರೂಪದ ವ್ಯಕ್ತಿ.. ಸೊರಬ ಹಾಗೂ ಆನವಟ್ಟಿಯ ಜನತೆ ಬಂಗಾರಪ್ಪನವರನ್ನು ಇಂದಿಗೂ ಆತ್ಮೀಯತೆಯಿಂದಲೇ ನೋಡುತ್ತಾರೆ.

    ಆದರೆ, ಇತ್ತೀಚೆಗೆ ಅವರು ಮೌನವಾಗಿದ್ದಾರೆ ಅಂತ ಕಾಣುತ್ತೆ. ಪತ್ರಿಕೆಯಲ್ಲಿ ಅವರ statement photo ಕೂಡಾ ಕಾಣ್ತಾ ಇಲ್ಲ.

    ಬರಹ ಇಷ್ಟವಾಯಿತು..

    ಜೋಮನ್ ವರ್ಗೀಸ್.
    http://www.jomon-malehani.blogspot.com/

    ReplyDelete
  3. Anonymous1:41 PM

    ಬಂಗಾರಪ್ಪ ಜೀವನ ಪೂರ್ತಿ ಗೂಂಡ ಮಂದಿ ಹಾಕ್ಕೊಂಡು ರಾಜಕಾರಣ ಮಾಡ್ಯರ. ಕೊತ್ವಾಲ್ ರಾಮಚಂದ್ರನಿಂದ ಹಿಡ್ಕೊಂಡು ಮೊನ್ನ್ನೇ ಮೊನ್ನೆ ಬೆಳಗಾವ್ಯಾಗ encounter ನಲ್ಲಿ ಸತ್ತ ಪ್ರವೀಣ್ ಶಿನ್ತ್ರೆ ತನಕ. ೧೯೯೨ ದಾಗ ಬೆನ್ಗಳುರೆನಾಗ ಕಾವೇರಿ ಗದ್ದಲ ಮಾಡಸದವನು ಅವನ. ಆವಾಗ ಗೂಂಡ ಮಂದಿ ಬಿಟ್ಟು ನೂರಾರು ಮಂದಿ ಕೊಂದು, ಎಲ್ಲ ಕಡೆ ಬೆಂಕಿ ಹಚ್ಚಿಸಿ ಹೊಲಸ ಎಬ್ಬಿಸಿದ್ದ. corruption ದಾಗ ಅವನ್ನ ಮೀರಿಸಿದವರು ಯಾರೂ ಇಲ್ಲ. ಇನ್ನು ಜಾತಿ ದ್ವೆಷದಾಗ ಅವನ್ನ ಬಿಟ್ಟರ ಇನ್ನೊಬ್ರು ಇಲ್ಲ. ಬ್ಯಾರೆ ಮಂದಿ ಮ್ಯಾಲೆ ಮಾಟ ಮಾಡ್ಸಕ ಹೋಗಿ ಮಸಡಿ ಸೊಟ್ಟ ಮಾಡ್ಕೊಂಡನ. ಯಾವದ ಪಾರ್ಟಿ ಅಥವಾ ಯಾವದ ಮಂದಿಗೆ loyalty ಅನ್ನೋದು ಅವನ ರಕ್ತದಾಗ ಇಲ್ಲ. ಇನ್ನ ಅವನ ರಾತ್ರಿ ಕಾರನಮೆಗಳ ಬಗ್ಗೆ ಬರಕೊತ್ತ ಹೋದ್ರ ಅದು ಮುಗಿಯೋದ ಇಲ್ಲ. ಹೊಲಸ ಮನುಷ್ಯ ಹೊಲಸ ಮನುಷ್ಯ.

    - ಮಠ

    ReplyDelete
  4. ಜೋಮನ್,

    ಇನ್ನೇನು ಮಾಡ್ತಾರ್ ಹೇಳಿ, ವಯಸ್ಸೂ ಆಯ್ತು ಜೊತೆಗೆ ಇರೋದನ್ನೆಲ್ಲ ಬಿಟ್ಟು ಮುಲಾಯಮ್ ಪಕ್ಷದ ಬೆನ್ನು ಬಿದ್ದರೆ ಮತ್ತೇನ್ ಆಗುತ್ತೆ ಹೇಳಿ.

    ReplyDelete
  5. ಮಠ್,

    ಪರವಾಗಿಲ್ ಬಿಡ್ರಿ, ಬಂ ಬಗ್ಗೆ ಭಾಳಾ ತಿಳಕೊಂಡೀರಿ! ಗದ್ದಲ ಮಾಡೋದರೊಳಗೆ ಬಂ ಭಾಳಾ ನಿಸ್ಸೀಮ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷ್ಯಾನೆ ಬಿಡ್ರಿ. ನಿಮಗ ಹೆಂಗ್ ಗೊತ್ತು ಈ ಮನುಷಾ ಅಂತ ನಮಗ ಅನುಮಾನ ಹತ್ಯೇದ :-)

    ReplyDelete