Monday, July 16, 2007

ನಮ್ಮೊಳಗಿನ ಧ್ವನಿ

ಇವತ್ತು 92.3 ಯನ್ನು ಕೇಳ್ಕೊಂಡ್ ಆಫೀಸ್ನಿಂದಾ ಬರ್ತಾ ಇರ್ಬೇಕಾದ್ರೆ ಯಾವ್ದೋ ಒಂದು ಟ್ಯೂನ್ ಕೇಳಿ ದೀವಾನಾ ಹಿಂದೀ ಸಿನಿಮಾದ 'ಫಾಯಾಲಿಯಾ ಹೋ ಹೋ ಹೋ ಹೋ' ಹಾಡು ನೆನಪಿಗೆ ಬಂತು. ರೆಡಿಯೋದಲ್ಲಿ ಬರ್ತಾ ಇದ್ದ ಹಾಡಿನ ಧ್ವನಿಯನ್ನು ಕಡಿಮೆ ಮಾಡಿ, ನಾನು ಫಾಯಲಿಯಾ...ಟ್ಯೂನ್ ಗೆ ಗಂಟು ಬಿದ್ದೆ, ನನಗೇನೂ ಆ ಹಾಡಿನ ಸಾಹಿತ್ಯ ಬರದಿದ್ದರೂ ಗಟ್ಟಿಯಾಗಿ ಗುನುಗುವಷ್ಟು ಅದರ ರಾಗ ಮಾತ್ರ ಬರುತ್ತಿದ್ದುದರಿಂದ ದಾರಿಯಲ್ಲಿ ಸ್ವಲ್ಪ ಹೊತ್ತು ಟೈಮ್ ಪಾಸಾಗಿತ್ತು.

ನನಗೆ ಮೊದಲಿಂದಲೂ ಯಾವುದೇ ಹಾಡನ್ನಾದರೂ ಅದರ ಮೂಲ ಗಾಯಕರ ಧ್ವನಿಯಲ್ಲಿ ಕೇಳಿ ಅದನ್ನನುಕರಿಸಿ ಪ್ರಯತ್ನಿಸೋ ಒಂದು ಕೆಟ್ಟ ಅಭ್ಯಾಸ, ಆ ಅಭ್ಯಾಸ ಬಲಕ್ಕೆ ತಕ್ಕಂತೆ ಕುಮಾರ್ ಸಾನು ಧ್ವನಿಯನ್ನು ಅನುಕರಿಸಲು ಹೋದ ನನಗೆ ಏನು ಮಾಡಿದರೂ, ಎಷ್ಟು ಪ್ರಯತ್ನ ಪಟ್ಟರೂ ಮೊದ ಮೊದಲು ಕುಮಾರ್ ಸಾನು ಥರವೇ ಧ್ವನಿಯಾಗಿ ಮೇಲೆದ್ದರೂ ಮುಂದಿನ ಸ್ವರಗಳು ಪಕ್ಕಾ ಸೌತ್ ಇಂಡಿಯನ್ನ್ ಕ್ಲಾರಿಟಿಯಲ್ಲಿ ಹೊರಬರುತ್ತಿವೆ! ಮೊದಲೇ ಲಿರಿಕ್ಸ್ ಬರೋದಿಲ್ಲ, ಇನ್ನೂ ಧ್ವನಿಯೂ ಬಾಯಿಗೆ ಬಂದಂತಾಗಿ ಹೋಗಿ ಯಾವೊಂದು ವಿಷಯ-ವಸ್ತು-ಪದವನ್ನು ಪದೇಪದೇ ಹೇಳಿಕೊಂಡು ಬಂದರೆ ಅದು ತನ್ನ ಅರ್ಥವನ್ನು ಹೇಗೆ ಕಳೆದುಕೊಳ್ಳುವುದೋ ಅಂತೆಯೇ ಈ ದಿನಕ್ಕೆ ಫಾಯಲಿಯಾ ಹಾಡಿನಲ್ಲಿ ಸತ್ವವೆಲ್ಲವೂ ಇಂಗಿ ಹೋಗಿತ್ತು.

ಮೊದಮೊದಲೆಲ್ಲಾ ಕಿಶೋರ್ ಕುಮಾರ್ ಅನುಕರಿಸುತ್ತಾರೆ ಎಂದುಕೊಂಡು ಸುದ್ದಿ ಹುಟ್ಟಿಸಿದ ಕುಮಾರ್ ಸಾನೂದೂ ಈಗೊಂದು ಭಿನ್ನ ಧ್ವನಿ, ಅಂತಹ ಭಿನ್ನ ಧ್ವನಿಯನ್ನು ಅನುಕರಿಸೋಕ್ ಹೋಗೋ ನನ್ನಂಥವರದ್ದು ಹಲವಾರು ಧ್ವನಿಗಳು.

***

ಉದಯಾದಲ್ಲಿ ಆಪ್ತಮಿತ್ರದ 'ಇದು ಹಕ್ಕೀ ಅಲ್ಲಾ...ಬಾಲಾ ಇದ್ರೂನೂ ಕೋತೀ ಅಲ್ಲಾ...' ಎಂದು ಹಾಡೊಂದು ತೂರಿಕೊಂಡು ಬರುತ್ತಿತ್ತು. ವಿಷ್ಣುವರ್ಧನ್, ಪ್ರೇಮಾ, ರಮೇಶ್ ಹಾಗೂ ಇನ್ನಿತರ ಪರಿಚಿತರ ಮುಖಗಳ ಸುಂದರವಾದ ದೃಶ್ಯಗಳು, ಯಾವೊಂದು ಕನಸೊಂದರ ಸೀಕ್ವೆನ್ಸಿನಂತೆ ಬಣ್ಣಬಣ್ಣದ ಗಾಳಿಪಟಗಳು, ಎಲ್ಲವೂ ಸರಿ...ಏನೋ ಎಡವಟ್ಟಿದೆ ಇದರಲ್ಲಿ ಎಂದು ಯೋಚಿಸಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಹಿಂದೊಮ್ಮೆ ವಿಶೇಷವಾದ ಧ್ವನಿಗಳ ಬಗ್ಗೆ ಬರೆದದ್ದು ನೆನಪಿಗೆ ಬಂತು, ಈ ಹಾಡನ್ನೂ ಉದಿತ್ ನಾರಾಯಣ್ ಹಾಡಿರೋದು ಎಂದು ತಿಳಿದುಕೊಳ್ಳಲು ಹೆಚ್ಚು ಹೊತ್ತು ಬೇಕಾಗಲೇ ಇಲ್ಲ!

ನಮ್ಮದೇ ಒಂದು ವಿಶೇಷವಾದ ಧ್ವನಿ, ಅದಕ್ಕಿಂತಲೂ ಹೆಚ್ಚು ಒಂದು ವಿಶೇಷವಾದ ಪರಂಪರೆ - ಒಂದು ಸಾಧಾರಣವಾದ ಗಾಳಿಪಟದಂತಹ ವಿಷಯವಿದ್ದಿರಬಹುದು, ಅಥವಾ ಅದರ ಹಿನ್ನೆಲೆಯಲ್ಲಿ ಮರ್ಕಟವನ್ನು ಪ್ರತಿಬಿಂಬಿಸೋ ಮನಸ್ಸಿರಬಹುದು, ಅಥವಾ ನೋಡುಗ/ಕೇಳುಗರಿಗೆ ಇನ್ನೂ ಎನನ್ನೋ ಆಲೋಚಿಸುವಂತೆ ಮಾಡುವ ಪ್ರಯತ್ನವಿರಬಹುದು. ಇವೆಲ್ಲ ಪ್ರಯತ್ನಗಳಿಗೊಂದು ನಮ್ಮೊಳಗಿನ ಧ್ವನಿಯೇ ಇಲ್ಲದಂತಾಗಿ ಹೋದರೆ ಏನೋ ಸರಿ ಇಲ್ಲ ಎಂದು ಅನ್ನಿಸೋದು ನನ್ನಂತಹವರಿಗೆ ಸಹಜ, ಅದೂ ಇಂತಹ ಧ್ವನಿಯ ಹಿಂದೆಯೇ ಗಿರಕಿ ಹೊಡೆಯುತ್ತಾ ನಿಲ್ಲಬಹುದಾದ ನನ್ನ ತರ್ಕ ಅಲ್ಲಿಂದ ಮುಂದೆ ಸರಿಯದಿರಬಹುದು.

ಎಸ್.ಪಿ.ಬಿ. ಅದೆಷ್ಟೋ ಸಾವಿರ ಕನ್ನಡ ಹಾಡುಗಳಿಗೆ ಧ್ವನಿಯಾಗಿದ್ದರೂ ಸಹ ಅವರು ಕನ್ನಡ ಮಾತಾಡೋದನ್ನ ಕೇಳಿದಾಗ ಅವರು ನಮ್ಮವರು ಎಂದೆನಿಸೋದಿಲ್ಲ, ಮುದ್ದಿನ ಮಾವ ಸಿನಿಮಾದಲ್ಲೂ ಸಹ ಅವರ ಮೃದುವಾದ ಮಾವನ ಪಾತ್ರದ ಪ್ರಯತ್ನ ಚೆನ್ನಾಗೇನೋ ಇದೆ, ಆದರೆ ಭಾಷೆಯ ವಿಚಾರದಲ್ಲಿ ಅವರು ಹೊರಗಿನವರಾಗೇ ಉಳಿದುಬಿಟ್ಟರು. ಎಸ್.ಪಿ.ಬಿ. ಧ್ವನಿ ಉತ್ತರ ಭಾರತದವರಂತೆ (ಸೋನು ನಿಗಮ್, ಉದಿತ್ ನಾರಾಯಣ್, ಕುಮಾರ್ ಸಾನೂ) ವಿಶೇಷವಾಗೇನೂ ಇರದಿದ್ದರೂ, ಅವರ ಕನ್ನಡ ಹಾಡುಗಳು ನಮ್ಮೊಳಗಿನ ಧ್ವನಿಯಂತೆಯೇ ಇವೆ, ಅವರ ಕನ್ನಡ ಮಾತುಗಳನ್ನು ಹೊರತು ಪಡಿಸಿ ಮಿಕ್ಕೆಲ್ಲದರಲ್ಲಿ ಅವರ ಪ್ರಯತ್ನ ಶ್ಲಾಘನೀಯ - ಬೆಂಕಿಯಬಲೆಯ ಚಿತ್ರದ ಹಾಡುಗಳನ್ನು ಅನಂತ್‌ನಾಗ್ ಅವರೇ ಹೇಳಿದ್ದಾರೇನೋ ಎನ್ನುವಂತೆ ಧ್ವನಿಯಲ್ಲಿ ವೇರಿಯೇಷನ್ನುಗಳನ್ನು ಹುಟ್ಟಿಸಿ, ಅದೇ ಟೆಕ್ನಿಕ್‌ ಮೂಲಕ ಶಿವರಾಜ್‌ಕುಮಾರ್ ಅವರಿಂದ ಹಿಡಿದು, ರಾಜ್‌ಕುಮಾರ್ ಒಬ್ಬರನ್ನು ಬಿಟ್ಟು ಮಿಕ್ಕೆಲ್ಲ ನಾಯಕರಿಗೆ ಅವರು ಧ್ವನಿಯಾಗಿದ್ದಾರೆ - ಈ ಒಂದು ಕಾರಣವೇ ಇದ್ದಿರಬೇಕು ಸಂಗೀತ ನಿರ್ದೇಶಕರು 'ಬಾಲೂ...ಬಾಲೂ' ಎಂದು ಅವರನ್ನು ಅಂಗಾಲಾಚಿಕೊಳ್ಳುವುದು, ಹಾಡುಗಳ ಧ್ವನಿ ಸುರುಳಿಯನ್ನು ತೆಗೆದುಕೊಂಡು ಅವರ ಮನೆ ಮುಂದೆ ಸಾಲು ನಿಲ್ಲುವುದು.

***

ಬಾಂಬೆ, ಮದ್ರಾಸು, ಹೈದರಾಬಾದು ದೊರೆಗಳನ್ನು ಪೋಷಿಸಿ ಕೈ ಹಿಡಿದು ಕನ್ನಡ ಸಿನಿಮಾಕ್ಕೆ ನಡೆಸಿಕೊಂಡು ಬರುವುದರ ಬದಲು ನಮ್ಮೊಳಗಿನ ಪ್ರತಿಭೆಗಳಿಗೆ ಜೀವ ತುಂಬಿ ಪೋಷಣೆ ನೀಡಿದ್ದರೆ...ರವಿಚಂದ್ರನ್ ಹಂಸಲೇಖರನ್ನು ಪರಿಚಯಿಸಿದ ಹಾಗೆ...ನಮ್ಮಲ್ಲಿಯೂ ಪ್ರತಿಭೆಗಳಿಗೇನೂ ಕೊರತೆ ಇಲ್ಲ ಎನ್ನುವುದನ್ನು ನಾವು ಯಾವತ್ತೋ ಸಾಧಿಸಿ ತೋರಿಸಬಹುದಿತ್ತು.

5 comments:

  1. ಪ್ರತಿಭೆಗಳನ್ನು ಹುಡುಕಬೇಕಾದ್ರೆ ಹುಡುಕುವವರಲ್ಲಿ ಪ್ರತಿಭೆ ಬೇಕಲ್ಲ ಸ್ವಾಮಿ. ಯಾರೋ ಹುಡುಕಿದ ಪ್ರತಿಭೆಗೆ ನೀರೆರೆದು ಪೋಷಿಸುವುದು ದೊಡ್ಡ ಕೆಲಸವೇನಲ್ಲ ಬಿಡಿ. ಇಲ್ಲಿರುವುದೆಲ್ಲ ಮರದೆಡೆದೆಯ ಪ್ರತಿಭೆಗಳು.

    ReplyDelete
  2. Anonymous9:34 AM

    ರಾಜ್‌ಕುಮಾರ್ ಗೂ ಎಸ್ಪಿ ಹಾಡು ಹಾಡಿದ್ದಾರೆ. ಬಹದ್ದೂರ್ ಗಂಡು ಚಿತ್ರದ “ಗಂಡು ಎಂದರೆ ಗಂಡು” ಹಾಡು. ಇನ್ನೊಂದು ಹಾಡು “ಏರಿ ಮೇಲೆ ಏರಿ, ಮೇಲೆ ಕೆಳಗೆ ಹಾರಿ, ಹಕ್ಕಿಯೊಂದು ಕುಂತೈತಲ್ಲೋ...”

    -ವಾಸು

    ReplyDelete
  3. banadi,

    ಪ್ರತಿಭೆಗಳನ್ನು ಹುಡುಕೋದು, ನೀರೆರೆದು ಪೋಷಿಸೋದು ಅಂದ್ರೆ ಒಂದು ದೊಡ್ಡ ಸಮುದಾಯಕ್ಕೆ ಕೊಡೋ ಲಾಂಗ್ ಟರ್ಮ್ ಕೊಡುಗೆಯಾದ್ದರಿಂದ ಯೋಗ್ಯತೆ ಇದ್ದವರು ಸ್ವಲ್ಪ ವ್ಯವಧಾನದಿಂದ ಹುಡುಕಿದರೆ ಪ್ರತಿಭಾನ್ವಿತರು ಸಿಕ್ಕೇ ಸಿಗ್ತಾರೆ...ಬಾಂಬೆಗೆ ಬೆಂಗಳೂರಿನಿಂದ ವಿಮಾನವೇರಿ ಹೋದಷ್ಟು ಸರಳವಲ್ಲದ ಮಾರ್ಗವದು.

    ವಾಸು,

    ಎಕ್ಸೆಪ್ಷನ್ನುಗಳು ಇವೆಯೆಂದು ಗೊತ್ತಿತ್ತು, ಈ ಹಾಡುಗಳು ನೆನಪಿನಲ್ಲಿರಲಿಲ್ಲ - ನೆನಪಿಸಿದ್ದಕ್ಕೆ ಧನ್ಯವಾದಗಳು.

    ReplyDelete
  4. Anonymous5:56 AM

    Hello, there. This is a quick summary of the goodness of buying wow gold from Purchase wow gold, Purchase wow power level, the World of Warcraft network of trust Purchase wow power leveling, Purchase warcraft power leveling and understanding for WoW PL'ers Purchase warcraft gold. Come to here for Purchase wow leveling. If you are in the mood for Final Fantasy XI gil, then please go to Purchase FFXI Gil, Purchase Buy FFXI Gil, Purchase FFXI Gil Sale, Purchase Cheapest FFXI Gil, Purchase Buy Cheap FFXI Gil, Purchase final Fantasy XI Gil, Purchase Cheap FFXI Gil.

    ReplyDelete