Thursday, July 05, 2007

ಕ್ಲಿಷ್ಟಕರವಾದ ಸವಾಲುಗಳಿಗೆ ಉತ್ರಾ ಕಂಡ್ ಹಿಡಿ...

'ಕುಡಗೋಲು ನುಂಗ ಬ್ಯಾಡ್ರೋ ಅಂತ ನಾನು ಅವತ್ತೇ ಹೇಳಿರ್‌ಲಿಲ್ಲಾ... ಕೊನಿಗೆ ಅದು ಹೊರಗ ಬರಬೇಕಾದ್ರ ನಿಮದೇ ಹರಿತತಿ!' ಎಂದು ಸುಬ್ಬ ಯಾರ ಹತ್ರನೋ ಗಟ್ಟಿಯಾಗಿ ಫೋನ್‌ನಲ್ಲಿ ಮಾತನಾಡೋದನ್ನು ಕೇಳಿ According to Jim ನೋಡುತ್ತಾ ಕುಳಿತಿದ್ದ ನನ್ನ ಕಿವಿಗಳು ನೆಟ್ಟಗಾದವು, ಟಿವಿ ವಾಲ್ಯೂಮ್ ಕಡಿಮೆ ಮಾಡಿ ಫೋನ್ ಸಂಭಾಷಣೆಯತ್ತ ಕಿವಿಗೊಟ್ಟೆ, ಆ ಕಡೆಯ ಸಂಭಾಷಣೆ ಏನೂ ಕೇಳುತ್ತಿರಲಿಲ್ಲವಾದ್ದರಿಂದ ಒನ್‌ವೇ ಕಾನ್ವರ್‌ಸೇಷನ್ನ್ ಅನ್ನು ಊಹಿಸಿಕೊಂಡು ಮೊದಲ ಬಾರಿಗೆ ಸ್ನೇಹಿತರ ಒತ್ತಾಯಕ್ಕೆ ಹಿಂದಿ ಸಿನಿಮಾ ನೋಡುತ್ತಿದ್ದ ತಮಿಳಿನವನಂತಾಗಿತ್ತು ನನ್ನ ಊಹಾ ಶಕ್ತಿ.

'...'

'ಅದೂ ಇಲ್ಲಾ, ಗಿದೂ ಇಲ್ಲ, ಈಗೇನ್ ಮಾಡ್ತೀರಿ ಅನ್ನೋದ್ ನೋಡ್ರಿ, ನಿಮ್ಮ ಕರ್ಮ ನಿಮಗೆ... ನಾಯಿ ತಗೊಂಡ್ ಹೋಗಿ ಪಲ್ಲಕ್ಕಿ ಸೇರಿಸಿದ್ರೆ ಹೇಲ್ ಕಂಡಲ್ಲಿ ಹಾರಿತ್ತಂತೆ!' ಎಂದು ಮತ್ತೊಂದು ನುಡಿ ಮುತ್ತು ಹೊರಗೆ ಬಂತು - ನಮ್ ಸುಬ್ಬನೇ ಹೀಗೆ ಸಿಟ್ಟು ಬಂದಾಗೆಲ್ಲ ಅದೆಲ್ಲೆಲ್ಲಿಂದಲೋ ಹಿಡಿದುಕೊಂಡು ಬಂದ ಅಣಿಮುತ್ತುಗಳನ್ನು ಸಹಜವಾಗಿ ಉದುರಿಸುವವ.

'...'

'ನಾನ್ ಬರೋದು ಇನ್ನೂ ಯಾವ ಕಾಲಕ್ಕೋ, ಎಲ್ಲಾನೂ ನಿಮ್ ಕೈಯಲ್ಲೇ ಬಿಟ್ಟ್ ಬಂದೀದೀನಿ...ಒಂದಿಷ್ಟು ಪೋಲೀಸ್ ಗಿಲೀಸ್‍ರಿಗೆ ಲಂಚಾ ಕೊಟ್ಟಾದ್ರೂ ಕೆಲಸ ಮಾಡಿಸ್‌ಕೊಳ್ಳ್ರಿ, ಇಲ್ಲಾಂತಂದ್ರೆ ಕೊನಿಗೆ ಅದರ ಫಲಾ ನೀವೇ ಅನುಭವಿಸಬೇಕಾದೀತು, ಅವಾಗವಾಗ ಫೋನ್ ಮಾಡ್‌ತಿರ್‌ತೀನಿ...ಇಡಲಾ ಹಂಗರೆ?' ಎಂದು ಆ ಕಡೆಯ ಸ್ವರಕ್ಕೆ ಇನ್ನೊಂದು ಕ್ಷಣ ಕಿವಿ ಕೊಟ್ಟಂತೆ ಮಾಡಿ ಫೋನ್ ಇಟ್ಟು, ನನ್ನ ಕಡೆಗೆ ಒಮ್ಮೆ ನೋಡಿ, ಸೋಫಾದ ಪಕ್ಕದ ಚೇರ್ ಮೇಲೆ ಉಸ್ ಎಂದು ಶಬ್ದ ಮಾಡಿಕೊಂಡು ಆಸೀನನಾದ. ಏನಾದ್ರೂ ಹೇಳ್ತಾನೇನೋ ಅಂತ ನೋಡಿ ಒಂದು ನಿಮಿಷ ಸುಮ್ನೇ ಇದ್ದೇ, ಏನೋ ಅವಲೋಕನ ಮಾಡಿಕೊಳ್ಳೋನ ಹಾಗೆ ಮನಸ್ಸಲ್ಲಿ ಮಂಡಿಗೆ ತಿನ್ನೋರ ಹಾಗೆ ಕಂಡು ಬಂದ, ನಾನೇ ಪ್ರಶ್ನೆ ಹಾಕಿದೆ.

'ಏನಾಯ್ತು?'

'ಏನಿಲ್ಲ, ಮೈಲಾರಿ ಮಗನ ಮೇಲೆ ರೇಪ್ ಕೇಸ್ ಫೈಲ್ ಮಾಡವರಂತೆ!' ಒಂದು ಕ್ಷಣ ಸುಧಾರಿಸಿಕೊಂಡು, 'ದೇಸಾಯರ ಮಗಳ ಕೂಡೆ ಇವನ್ದೂ ಭಾಳಾ ದಿವಸದಿಂದ ನಡೆದಿತ್ತು, ಅವರಪ್ಪನ ಕೈ ಕಾಲು ಉದ್ದುದ್ದಕಿದಾವೆ, ಬ್ಯಾಡಲೇ ಅಂತ ಹೇಳಿದ್ರೂ, ಬೈಕ್ ಮ್ಯಾಲೆ ಕೂರಿಸಿಕೊಂಡು ಅದೆಲ್ಲಿಗೋ ಕರಕೊಂಡು ಹೊಂಟಿದ್ದೋನ ಹಿಡಿದು ನಾಕ್ ಮಂದಿ ಚೆನ್ನಾಗಿ ತದಕಿದ್ದೂ ಅಲ್ದೇ ಸ್ಟೇಷನ್ನಿಗೆ ಎಳಕೊಂಡ್ ಹೋಗಿ ಹೇರ್ ಬಾರ್ದಿದ್ ಕೇಸ್ ಎಲ್ಲಾ ಹೇರಿ ಎಫ್‌ಐಅರ್‍ ಫೈಲ್ ಮಾಡಿ ಕುಂತವರಂತೆ...'

'ಹುಡುಗಿ ಎಲ್ಲಿದ್ದಾಳೀಗ, ಅವಳೇನೂ ಅನ್ಲಿಲ್ಲವೇ?'

ಹುಬ್ಬುಗಳನ್ನು ತುರಿಸಿಕೊಳ್ಳುತ್ತಾ, 'ಅವಳನ್ನ ಅವರಪ್ಪ ಬಾಂಬೆಗೆ ಕರಕೊಂಡ್ ಹೋಗವನಂತೆ, ಈಗ ಅವಳ ಚಿಕ್ಕಪ್ಪನದೇ ಎಲ್ಲಾ ದರಬಾರು, ನಿಮ್ ಹುಡುಗನ್ನ ಸರಿ ಮಾಡ್ಲಿಲ್ಲಾ ಅಂತಂದ್ರೆ ನಿಮ್ ಮನೆ ಸರ್ವನಾಶ ಮಾಡ್ತೀವಿ ಅಂತ ಧಮಕಿ ಹಾಕಿ ಹೋಗವರಂತೆ ಅವರ ಕಡೆಯವರು...ಮೈಲಾರಿದೋ ಪಾಪ ಇತ್ಲಾಗ್ ಮಗನ್ನ ಬಿಡಕ್ಕಾಗಲ್ಲ, ಅತ್ಲಾಗ್ ದೇಸಾಯಿ ಕಡೆಯೋರ್ನ ಎದುರ್ ಹಾಕಿಕೊಳ್ಳಾಕ್ ಆಗಲ್ಲ ಅನ್ನೋ ಪರಿಸ್ಥಿತಿ'.

'ಪೋಲೀಸ್ ಗಿಲೀಸ್...'

ನನ್ನ ಮಾತನ್ನ ಅರ್ಧದಲ್ಲೇ ತಡೆದು, '...ಎಲ್ರೂ ದುಡ್ಡಿದ್ದೋರ್ ಕಡೆಯೇ'.

'ಮುಂದೆ...'

'ಮುಂದೂ ಇಲ್ಲಾ, ಹಿಂದೂ ಇಲ್ಲಾ...ನಾನು ಇತ್ಲಗೆ ಬರೋ ಮುಂದ ಹೇಳಿ ಬಂದಿದ್ದೆ, ಹಂಗೇ ಆತು. ಆ ಹುಡುಗ ಬದುಕಿ ಉಳ್ದಿದ್ದೇ ಹೆಚ್ಚು, ಇನ್ನೂ ಕಾಲೇಜ್ ಮೆಟ್ಲು ಹತ್ತಿ ಮುಗಿಸಿಲ್ಲಾ, ಥರಾವರಿ ಕೇಸು-ಗೀಸು ಅಂತ ಪೋಲೀಸ್ ಸ್ಟೇಷನ್ ಅಲೀಬೇಕು, ಕಾನೂನ್ ಏನೇ ಅಂದ್ರೂ ಇದ್ದೂರ್‍ನಾಗೆ ಅವರಪ್ಪಾಅಮ್ಮನಿಗೆ ಬಾಳಾ ಸುಮಾರ್ ಆಗುತ್ತೆ...'

ನಾನೆಂದೆ, 'ಆ ಹುಡುಗೀನ್ ಕರೆಸಿ ಕೇಳ್ರಿ...' ಅಂತ ಇವರು ಫಿರ್ಯಾದು ಹೊರಡಿಸ್‌ಬೇಕಪ್ಪಾ...

'ಏ ಸುಮ್ನಿರೋ, ನಿನಗ್ಗೊತ್ತಾಗಲ್ಲ...,ಮೈಲಾರಿ ಮಗನ ಮೇಲೆ ರೇಪ್ ಕೇಸ್ ಹೇರಿದಾರೆ ಅಂದ್ನಲ್ಲ, ಅದ್ರಲ್ಲಿ ಹುಡುಗೀನೇ ಇಲ್ಲ, ಅವಳ ಸ್ಟೇಟ್‌ಮೆಂಟೂ, ಡಾಕ್ಟರ್ ಎಕ್ಸಾಮಿನೇಷನ್ನೂ ಎಲ್ಲಾ ಪೇಪರ್ನಾಗೆ ಮುಗಿಸಿಬಿಟ್ಟವರೆ, ನನ್ನ ಬಲವಂತಾ ಮಾಡ್ದಾ ಅಂತ ಹುಡುಗೀನೇ ಸ್ಟೇಟ್‌ಮೆಂಟ್ ಕೊಟ್ಟಂಗೆ'.

'ಇನ್ನ್ ಉಳಿದಿರೋ ಉಪಾಯ...'

'ಉಪಾಯಾ ಏನೂ ಇಲ್ಲ, ಇವ್ರು ದೇಸಾಯರ ಕಾಲ್ ಹಿಡಿದು ಕೇಸ್ ವಾಪಾಸ್ ತೆಕ್ಕಬಕು, ಇನ್ನ್ ಇವರ ಹುಡುಗ ಅತ್ಲಾಗ್ ತಲೀ ಹಾಕಿ ಮಲಗಲ್ಲ ಅಂತ ಬರೆದುಕೊಡಬಕು, ಊರ್ ಜನ್ರ ಮುಂದ...ಅದ್ರೂ ಎಳೇ ಹುಡುಗನ್ನ ಸಮಾ ಹೊಡದವರಂತೆ, ಇನ್ನೊಂದ್ ಸ್ವಲ್ಪ ಆಗಿದ್ರೆ ಸತ್ತೇ ಹೋಗ್ತಿದ್ದ ಅನ್ನೋ ಹಾಗೆ'.

'ಮತ್ತೇ ಈ ಸಿನಿಮಾಗಳಲ್ಲಿ ಲವ್ ಮಾಡೋ ಹುಡುಗ್ರೆಲ್ಲಾ ವಜ್ರಮುನಿ ಹಂಗಿರೋ ದೇಸಾಯರನ್ನ ಗೆಲ್ತಾರಲ್ಲ, ಅದ್ ಹೆಂಗೆ?'

'ಅಯ್ಯೋ ಪೆಂಗೇ...ಅದ್ಕೇ ಅದನ್ನ ಸಿನಿಮಾ ಅನ್ನೋದು, ನಿಜ ಜೀವ್ನ ಅನ್ನೋದು ಬ್ಯಾರೇನೇ...ಇರೋ ನಿಜ ಜೀವ್ನಾನ ಸಿನಿಮಾ ಮಾಡಿ ತೋರಿಸ್ಲಿ, ಅಂಥದಕ್ಕೆ ರಾಷ್ಟ್ರಪ್ರಶಸ್ತಿ ಬರಬೋದೇ ವಿನಾ ಥೇಟರ್‌ನಾಗೆ ಒಂದ್ ನೊಣವೂ ಹೊಕ್ಕೋದಿಲ್ಲ...' ಈ ಸಾರಿ ಅವನ ಮಾತನ್ನ ನಾನು ಮಧ್ಯದಲ್ಲೇ ನಿಲ್ಲಿಸಿ,

'ನಿಜ ಜೀವನಕ್ಕೂ ಸಿನಿಮೀಯತೆಗೂ ಅಷ್ಟೊಂದು ವ್ಯತ್ಯಾಸ ಯಾಕಿರ್‌ಬೇಕು, ಇದ್ದದ್ದನ್ನು ಇರೋ ಹಾಗೆ ತೋರಿಸ್‌ಬೇಕಪ್ಪಾ, ನಮ್ಮಲ್ಲಿರದಿದ್ದುದನ್ನು ತೋರ್ಸಿ, ಮನುಷ್ಯರಿಗೆ ಮೀರಿದ್ದನ್ನು ಅಭಿನಯಿಸೋದನ್ನ ಮನರಂಜನೆ ಅಂಥ ಹೆಂಗ್ ಕರಿಯೋದು?'

'ನೀನ್ ತಿಳಕಂಡಂಗೆ ಜೀವ್ನಾ ಅನ್ನೋದು ಇಪ್ಪತ್ತೆರಡು ನಿಮಿಷದ According to Jim ಎಪಿಸೋಡ್ ಅಲ್ಲಾ, ಅದರ ಹಿಂದೇ ಮುಂದೇ ಬೇಕಾದಷ್ಟಿರುತ್ತೆ, ಬಾಲಿಶವಾದ ಪ್ರಶ್ನೆಗಳನ್ನು ಕೇಳೋದು ಬಿಟ್ಟು, ಕ್ಲಿಷ್ಟಕರವಾದ ಸವಾಲುಗಳಿಗೆ ಉತ್ರಾ ಕಂಡ್ ಹಿಡಿ...' ಎಂದು ನನ್ನ ಮನಸ್ಸಿನ್ನಲ್ಲಿ ಪುಂಖಾನುಪುಂಖವಾಗಿ ಏಳುತ್ತಿದ್ದ ಸಿನಿಮೀಯತೆಯ ಪ್ರಶ್ನೆಗಳಿಗೆಲ್ಲ ಒಂದು ಪೂರ್ಣವಿರಾಮವನ್ನಿಟ್ಟನು. ಇವನವ್ವನ... ಪ್ರಶ್ನೆಗಳೇ ಇನ್ನೂ ಅರ್ಥವಾಗಿಲ್ಲ, ಇನ್ನು ಉತ್ರ ಕಂಡ್ ಹಿಡಿಯೋದ್ ಎಲ್ಲಿಂದ ಎಂದು ಮನಸ್ಸು ಬೈದುಕೊಂಡಿತು.

2 comments:

  1. Anonymous8:11 AM

    ನಿಮ್ಮ ಲೇಖನ ಬಹಳ ಇಷ್ಟವಾಯಿತು. ಇದರಲ್ಲಿ ಬರುವ 'ಸ್ನೇಹಿತನ ಒತ್ತಾಯದ ಮೇಲೆ ಹಿಂದಿ ಸಿನೆಮ ನೋಡುವ ತಮಿಳನ ಹಾಗೆ' ಎನ್ನುವ ವಾಕ್ಯ ಅರ್ಥಪೂರ್ಣ. ಇದನ್ನು ಓದುವಾಗ್ ಬನವಾಸಿ ಬಳಗದ ಬ್ಲಾಗ್ ನೆನಪಾಯಿತು.

    ಪ್ರಪಂಚದ ಆಗುಹೋಗುಗಳ ಬಗ್ಗೆ ಕನ್ನಡದ ಕಣ್ಣಿನಿಂದ ಸರಿಯಾಗಿ ವಿಶ್ಲೇಷಿಸಲು ಮತ್ತು ಚರ್ಚಿಸಲು, ಕನ್ನಡ-ಕನ್ನಡಿಗ-ಕರ್ನಾಟಕದ ಏಳಿಗೆಗೆ ಬದ್ಧವಾಗಿರುವ ಬನವಾಸಿ ಬಳಗದ ಹೊಸ ಬ್ಲಾಗ್ ಬಂದಿದೆ. ಅದೇ http://enguru.blogspot.com. ಬನ್ನಿ, ಚರ್ಚೆಯಲ್ಲಿ ಭಾಗವಹಿಸಿ, ನಿಮ್ಮ ಗೆಳೆಯರನ್ನೂ ಕರೆ ತನ್ನಿ.

    -ಕಟ್ಟೇವು ಕನ್ನಡದ ನಾಡ, ಕೈ ಜೋಡಿಸು ಬಾರಾ...

    ReplyDelete