Monday, June 25, 2007

ಏನ್ ತಲೇ ಸಾರ್ ಇವ್ರುಗಳ್ದೂ...

ಎಷ್ಟೋ ದೂರ್‌ದಲ್ಲಿರೋ ಡಿಶ್ ಆಪರೇಟರನ್ನು ಕರೆಸಿ ನಮ್ಮನೆ ತಲೆ ಮೇಲೂ ಒಂದ್ ಡಿಶ್ ಆಂಟೆನಾ ಹಾಕ್ಸಿ ಎಂಟ್ ಸಾವ್ರ ಮೈಲ್ ದೂರದ ಸಂವೇದನೆಗಳನ್ನ ಎಲೆಕ್ಟ್ರೋಮ್ಯಾಗ್ನೆಟಿಕ್ ಅಲೆಗಳಲ್ಲಿ ಹಿಡಿದುಕೊಂಡು ಭಿತ್ತರವಾಗ್ತಿರೋ ಉದಯ ಟಿವಿ ನೋಡೋ ಭಾಗ್ಯ ಲಭಿಸಿದ್ದು ಅಮೇರಿಕದ ಕನ್ನಡಗರಿಗೆ ಆಗಿರೋ ದೊಡ್ಡ ಲಾಭ ಅಂತ್ಲೇ ಹೇಳ್‌ಬೇಕು. ಬೇರೆ ಯಾವುದಾದ್ರೂ ಚಾನೆಲ್ ಕನ್ನಡವನ್ನು ಇಲ್ಲಿಯವರೆಗೆ ಹೊತ್ತು ತಂದಿದೆಯೋ ಇಲ್ವೋ ಆದ್ರೆ ನಮ್ಮಂತಹವರನ್ನು ನೆಚ್ಚಿಕೊಂಡಿರೋ ಉದಯ ಟಿವಿಯವರ ಧೈರ್ಯವನ್ನು ಮೆಚ್ಚಲೇ ಬೇಕು, ಕನ್ನಡಿಗರನ್ನು ನಂಬಿ ಯಾವನಾದ್ರೂ ಇನ್ವೆಷ್ಟ್‌ಮೆಂಟ್ ಮಾಡಿ ಉದ್ದಾರವಾಗಿದ್ದಿದೆ ಅಂದ್ರೆ ಎಂಥೋರು ನಗಾಡಿ ಬಿಟ್ಟಾರು!

***

೨೦೦೭ ನೇ ಇಸ್ವಿ ಬಂದ್ರೂ ಇನ್ನೂ ವಿಷ್ಣುವರ್ಧನ್ ನಾಯಕನಾಗಿ ಡ್ಯುಯೆಟ್ ಹಾಡಿಕೊಂಡು ಮರಸುತ್ತುವುದನ್ನು ಬಿಡಲಿಲ್ಲವಲ್ಲಾ...ಅಕಟಕಟಾ. ಒಬ್ಬ ಒಳ್ಳೇ ನಟ ಪೋಷಕನ ಪಾತ್ರದಲ್ಲೂ ಮಿಂಚಬಹುದು ಅಂತ ಯಾರಿಗೂ ಏಕೆ ಹೊಳೆಯೋದಿಲ್ಲ. ನಮ್ಮವರೆಲ್ಲ ನಾಯಕರುಗಳ ಮೇಲಿಟ್ಟಿರುವ ಗೌರವವೆಲ್ಲ ಅವರನ್ನು ಯಾವಾಗಲೂ ’ಹೀರೋ’ಗಳಾಗೆ ಮಿಂಚುವಂತೆ ಮಾಡ್ತಾ ಇದ್ರೆ ಅದೊಂದು ಒಳ್ಳೇ ಅವಕಾಶಾನೇ ಸರಿ. ಅವರ ಮಕ್ಕಳ ವಯಸ್ಸಿನ ನಟನಾಮಣಿಯರನ್ನು ನಾಯಕಿಯರನ್ನಾಗಿ ಮಾಡಿಕೊಂಡು ಇನ್ನೂ ಇಪ್ಪತ್ತು ವರ್ಷದ ಪೋರಿಯರ ಜೊತೆ ಹಾಡಿಕೊಂಡು ನರ್ತನ ಮಾಡ್ತಾರಲ್ಲಾ...ಏನ್ ಜನಾ ಸ್ವಾಮಿ, ಇವರು!

***

ವಾರ್ತಾ ಉಧ್ಘೋಷಕಿಯರು, ಉಧ್ಘೋಷಕರು ಸ್ವಲ್ಪ ಅತಿಯಾಗೇ ಡ್ರೆಸ್ ಮಾಡ್ತಾರೆ ಅನ್ನಿಸ್ತು, ಹೊರಗಡೆ ಸುಡು ಸುಡು ಬಿಸಿಲಿದ್ರೂ ಕೋಟ್ ಹಾಕ್ಕೋಂಡೇ ವಾರ್ತೆ ಓದಬೇಕು ಅನ್ನೋದನ್ನ ಎಲ್ಲಿಂದ ನೋಡಿ ಕಲಿತರೋ ಇವ್ರುಗಳೆಲ್ಲ. ಇತರ ಚೌಚೌ ಕಾರ್ಯಕ್ರಮಗಳಲ್ಲಂತೂ ಉಧ್ಘೋಷಕಿಯರು ಅತ್ತಿಂದಿತ್ತ ಆಡಿಸೋ ತಲೆಗಳನ್ನು ನೋಡಿ ಕೀಲಿಕೊಟ್ಟ ಬೊಂಬೆಗಳೋ ಎನ್ನಿಸ್ತು, ಏನ್ ತಲೆ ಸಾರ್ ಇವ್ರುಗಳ್ದೂ...

***

ಟಿವಿ ಸೀರಿಯಲ್ಲುಗಳು ಅಂದ್ರೆ ಈ ಮಟ್ಟಕ್ಕೂ ಇರುತ್ತೆ ಅಂತ ಕೇಳಿದ್ದೆ, ಆದ್ರೆ ಇದೇ ಪ್ರಪ್ರಥಮ ಬಾರಿಗೆ ನೋಡಿ ಅನುಭವಿಸಿದಂಗಾಯ್ತು...ಇಪ್ಪತ್ತು ನಿಮಿಷ ಸೀರಿಯಲ್ಲ್‌ನಲ್ಲಿ ಐದು ನಿಮಿಷ ಟೈಟಲ್ ಸಾಂಗ್ ತೋರ್ಸಿ, ಇನ್ನುಳಿದ ಸಮಯದಲ್ಲಿ ಪ್ರತಿಯೊಂದು ಸೀನಿನಲ್ಲೂ ತೋರ್ಸಿದ್ದೇ ತೋರ್ಸಿದ್ದು ಮುಖಗಳನ್ನ...ಅದೂ ಬೇರೆ ಬೇರೆ ಆಂಗಲ್‌ನಿಂದ. ಅದ್ಯಾವನೋ ಸ್ಕ್ರಿಪ್ಟ್ ಬರೀತಾನೆ, ’...ಆ ಸುದ್ಧಿ ಬರಸಿಡಿಲಿನಂತೆ ಬಂದೆರಗಿತು...’ ಅಂತ, ಅದಕ್ಕೆ ಕ್ಯಾಮರಾಮನ್ನು ತೋರಿಸಿದ ಮುಖವನ್ನು ಹತ್ತು ಸಾರಿ ಬ್ರೈಟ್ ಲೈಟ್‌ನಲ್ಲಿ ತೋರಿಸಿಕೋತಾನೆ, ಹಿನ್ನೆಲೆ ಸಂಗೀತದವರು ತಮ್ಮ ಮುಂದಿದ್ದ ವಾದ್ಯಗಳನ್ನೆಲ್ಲ ಒಮ್ಮೆ ಢಂಡಂ ಬಡೀತಾರೆ ಅಲ್ಲಿಗೆ ಆ ಸೀನ್ ಕ್ಯಾಪ್ಛರ್ ಆಗಿಹೋಯ್ತು! ಯಾಕ್ ಸಾರ್ ಹಿಂಗ್ ಮಾಡ್ತೀರಾ...

***

ಹಂಗಂತ ಎಲ್ಲವೂ ಕೆಟ್ಟ ಕಾರ್ಯಕ್ರಮ ಅಂತ ನಾನೆಲ್ಲಿ ಹೇಳ್ದೆ? ವಾರಕ್ಕೇನಿಲ್ಲ ಅಂದ್ರೂ ಅಲ್ಲಿನ ಸುದ್ದಿಗಳು ತಾಜಾವಾಗಿ ಸಿಗೋದರ ಜೊತೆಗೆ ನೀವು ನೋಡ್ತೀರೋ ಬಿಡ್ತೀರೋ ಒಂದೆರಡು ಸಿನಿಮಾಗಳನ್ನಾದರೂ ಡಿವಿಆರ್‌ಗೆ ಹಾಕಿಟ್ಟುಕೊಳ್ಳಬಹುದು. ನಾನಂತೂ ’ಅಮ್ಮಾ ನಾಗಮ್ಮ...’ ಸೀರಿಯಲ್ಲಿಗೆ ’ಬೇಗ ಸಾಗಮ್ಮ...’ ಅಂತ ಬೇಡಿಕೊಳ್ಳುತ್ತೇನೆ. ಅಪರೂಪಕ್ಕೊಮ್ಮೆ ನಮ್ಮವರ ನಡುವಿನ ತಾಜಾ ಜೋಕೇನಾದ್ರೂ ಬಂದ್ರೆ ಹೊಟ್ಟೆ ಹುಣ್ಣಾಗುವ ಹಾಗೆ ನಗ್ತೇನೆ - ಆ ನಗುವಿನ ಹಿಂದೆ ಲೋಕಲ್ ಸೊಗಡಿದೆ, ಅಲ್ಲಿನ ಸ್ವಾರಸ್ಯವಿದೆ...ಇದ್ಯಾವ್ದೂ ಬೇಡ ಅಂದ್ರೆ ರ್ಯಾಂಡಮ್ ಆಗಿ ರಾತ್ರಿ ಇಡೀ ಹಾಡುಗಳನ್ನೂ ಹಾಕ್ತಾನೇ ಇರ್ತಾರೆ, ಅದು ಒಳ್ಳೆಯ ಟೈಮ್ ಪಾಸ್.

ಸದ್ಯ ಆಡ್ವರ್‌ಟೈಸ್‌ಮೆಂಟುಗಳನ್ನೂ ಇನ್ನೂ ನೋಡೋ ಭಾಗ್ಯ ಸಿಕ್ಕಿಲ್ಲ, ಅವುಗಳನ್ನೆಲ್ಲ ವೇಗವಾಗಿ ಹಾರಿಸಿಕೊಂಡು ಹೋಗೋ ತಂತ್ರಜ್ಞಾನ ಬಂದಿರೋದು ಬಳಕೆದಾರರನ್ನು ಉಳಿಸೋದಕ್ಕೆ ದೇವರೇ ಕಳುಹಿಸಿದ ಕೊಡುಗೆ ಎಂದುಕೊಂಡು ಕೃತಾರ್ಥನಾಗಿದ್ದೇನೆ!

8 comments:

  1. ಗುರುವೇ, ವಾರ್ತಾವಾಚಕಿಯರು ಓದುವ ಕೋಣೆ ಏರ್-ಕಂಡಿಶನ್ ಆಗಿರ್ತದೆ, ಹಾಗಾಗಿ ಅವ್ರಿಗೆ ಕೋಟ್ ಬೇಕಾಗ್ತದೆ.. :)ಅಷ್ಟಕ್ಕೂ ನಿಮಗೆ ಯಾಕೆ ಹೊಟ್ಟೆಕಿಚ್ಚು... ಅಷ್ಟೊಳ್ಳೆ ಕೋಟು ನೀವೂ ಹಾಕ್ಕೊಂಡಿರೋದು ಕಾಣ್ತೋ ಇದೆ!!!!

    ReplyDelete
  2. shree,

    ನಮಗಿಲ್ಲಿ ಆರ್ ತಿಂಗ್ಳು ಕೆಟ್ಟ ಛಳಿ ಕಾಲ ನೋಡಿ ಆದ್ರಿಂದ ಬೆಚ್ಚಗಿನ ಕೋಟು ಬೇಕಾಗುತ್ತೆ, ಕೊಠಡಿಯನ್ನು ತಂಪಾಗಿಸಿಕೊಳ್ಳೋರು ತಮ್ಮನ್ನು ತಾವು ಬೆಚ್ಚಗಿಟ್ಟುಕೊಳ್ಳಬೇಕಾಗುತ್ತಲ್ಲ ಅನ್ನೋದು ಮತ್ತೊಂದು ವಿಪರ್ಯಾಸ - ಬಿಸಿಬಿಸಿ ಸುದ್ಧಿಗಳನ್ನು ಹಂಚೀ ಹಂಚೀ ಅವ್ರೂ ಬಿಸಿಯಾಗಿರ್ತಾರೇನೋ ಅಂದ್‌ಕೊಂಡೆ!

    ReplyDelete
  3. Anonymous11:38 PM

    ಉದಯ ಟಿವಿಯನ್ನು ೧೮ ತಿಂಗಳಿನಿಂದ ನೋಡುತ್ತಿದ್ದೇನೆ.
    ಡಿ ವಿ ಆರ್‍ ಇರುವುದರಿಂದ, ಬೇಕಾದ್ದು ನೋಡಿ, ಬೇಡವಾದದ್ದು ಬಿಡಬಹುದು.
    ಹಾಗಾಗಿ ನನಗಂತೂ ಉದಯ ಸಂಜೆ/ಶನಿವಾರ ಕಳೆಯುವ ಉಪಾಯ ಆಗಿಬಿಟ್ಟಿದೆ.

    ಉಉನಾಶೆ

    ReplyDelete
  4. Anonymous12:30 PM

    ಉದಯ ಟಿವಿ ಬಂದಿದ್ದಕ್ಕೆ ಅಭಿನಂದನೆ! ಡಿವಿಆರ್ ಇರುವುದರಿಂದ ಮೂರು ಘಂಟೆ ಸಿನಿಮಾ ಸಂಕ್ಷಿಪ್ತವಾಗಿ ನೋಡಬಹುದು, ಧಾರಾವಾಹಿಗೆ ಐದು-ಹತ್ತು ನಿಮಿಷ ಸಾಕು.

    ಧಾರಾವಾಹಿ ಬಗ್ಗೆ - ಸಣ್ಣ ಪುಟ್ಟ ನಿರ್ದೇಶಕರಿರಲಿ, ನಾಗಾಭರಣರಂತಹ ಉತ್ತಮ ನಿರ್ದೇಶಕರಿಗೇನಾಗಿದೆ? ಏಕ್ತಾ ಕಪೂರ್...ಇತ್ಯಾದಿಗಳೇ ವಾಸಿ, ಅವರು ಕೊನೆ ಪಕ್ಷ ಕಥೆಯನ್ನು ಬಬಲ್ ಗಮ್ಮಿನಂತೆ ಎಳೆದರೆ ಇವರಿಗೆ ಆ ಕಷ್ಟವೂ ಬೇಕಿಲ್ಲ. ನಾಗಾಭರಣರ "ಅಪ್ಪ" ಧಾರಾವಾಹಿಯಲ್ಲಿ ಎಪಿಸೋಡ್ ಪೂರ್ತಿ ಹಿಂದಿನ ಕಥೆಯನ್ನೇ ತೋರಿಸುತ್ತಾರೆ. (ಫ್ಲಾಷ್ ಬ್ಯಾಕ್ ತರ- ಒಂದೋ ಎರಡು ದೃಶ್ಯ ತೋರಿಸುವ ಬದಲು) ಧಾರಾವಾಹಿ ಸಾವಿರ ಕಂತಿಗೆ ಎಳೆಯಲು ಈ ಹೊಸ ತಂತ್ರ ಅನುಸರಿಸುತ್ತಿರಬಹುದು!

    ReplyDelete
  5. ಉಉನಾಶೆ,

    ಟಿವಿ ನೋಡೋಕ್ ಸಿಗೋ ಸಮಯಾನೂ ಕಡಿಮೆ ಅಂತದ್ದರಲ್ಲಿ ಬರೀ ಉದಯಾ ಮುಂದೆ ಕೂತ್ರೆ ಹೇಗೆ ಸಾರ್...ಹಾಳಾದೋರು ಒಂದಿಷ್ಟು ಹಾಸ್ಯ ಧಾರಾವಾಹಿಗಳನ್ನಾದ್ರೂ ಹಾಕಬಾರ್ದಾ...ಎಲ್ಲಿ ನೋಡಿದ್ರೂ ಬರೀ ಕಣ್ಣೀರಿನ ಕೋಡೀನೇ ಹರಿಸ್ತಾರೆ ಅವೇ ತೋರಿಸಿದ ಮುಖಗಳನ್ನ ಹತ್‌ಹತ್ ಬಾರಿ ತೋರ್ಸಿ.

    ReplyDelete
  6. sritri,

    ನಮ್ ಭಾರತದ ಸಿನಿಮಾಗಳೇಕೆ ಅಷ್ಟೊಂದು ಉದ್ದಾ...ಅಂತ ಯೋಚ್ನೆ ಬರುತ್ತೇ ಎಷ್ಟೋ ಸರ್ತಿ...ಅವೇ ಹಳಸಲು ಫಾರ್ಮುಲಾಗಳು - ಒಂದೆರಡು ಫೈಟು, ಒಂದೆರಡು ಡ್ಯುಯೆಟ್ಟು - ತುಮ್ ಮೇರಾ ಬೇಟಾ ನಹಿ, ಮೈ ತೇರಾ ಬಾಪ್ ನಹೀ ಅನ್ನೋ ಕಥೆಗಳೇ ಸಿನಿಮಾಗಳಲ್ಲಿ...ಹೀರೋಗಳ ಅದ್ದೂರಿಕರಣವಂತೂ ವಾಕರಿಕೆ ತರಿಸುತ್ತೆ, ಇನ್ನವರ ಅತಿಮಾನವ ವರ್ತನೆಗಳನ್ನ ಪಕ್ಕಕ್ಕಿಟ್ಟು ನೋಡೋಣಂತೆ.

    ಜನಮರುಳೋ ಜಾತ್ರೆ ಮರುಳೋ ಅನ್ನೋ ಹಾಗೆ...

    ReplyDelete
  7. Anonymous5:57 AM

    Hello, there. This is a quick summary of the goodness of buying wow gold from Purchase wow gold, Purchase wow power level, the World of Warcraft network of trust Purchase wow power leveling, Purchase warcraft power leveling and understanding for WoW PL'ers Purchase warcraft gold. Come to here for Purchase wow leveling. If you are in the mood for Final Fantasy XI gil, then please go to Purchase FFXI Gil, Purchase Buy FFXI Gil, Purchase FFXI Gil Sale, Purchase Cheapest FFXI Gil, Purchase Buy Cheap FFXI Gil, Purchase final Fantasy XI Gil, Purchase Cheap FFXI Gil.

    ReplyDelete