Wednesday, May 23, 2007

ವಿವಾಹದ ಒಳನೋಟ

ಕಳೆದ ವರ್ಷದ ಕೊನೆಯಲ್ಲಿ ತನ್ನ ಬಾಯ್‌ಫ್ರೆಂಡ್ ಪ್ರೊಪೋಸ್ ಮಾಡಿ ಎಂಗೇಜ್ ಆದಂದಿನಿಂದ ಬರುವ ಆಗಷ್ಟ್‌ನಲ್ಲಿ ಮದುವೆಯಾಗಲಿರುವ ನನ್ನ ಸಹೋದ್ಯೋಗಿ ಕ್ಯಾರೋಲೈನ್ (Caroline) ಇವತ್ತಿನವರೆಗೂ ವಿಶೇಷವಾಗಿ ತನ್ನ ವಿವಾಹ ಸಂಬಂಧಿ ಪ್ಲಾನ್‌ಗಳನ್ನು ಮಾಡುತ್ತಲೇ ಬಂದಿದ್ದಾಳೆ, ಆಕೆಯ ದಿನೇ-ದಿನೇ ಬೆಳೆದು ದಪ್ಪವಾಗುತ್ತಿರುವ ಮದುವೆಯ ಬೈಂಡರ್‌ನಲ್ಲಿ ಪ್ರತಿಯೊಂದು ಡೀಟೈಲ್‌ಗಳನ್ನು ಒಳಗೊಂಡಿರುವುದೂ ಅಲ್ಲದೆ ಮದುವೆಗೆ ಸಂಬಂಧಿಸಿದ ಎಲ್ಲ ಕೆಲಸಗಾರರು, ಎಲ್ಲ ವಿವರಗಳು, ಸ್ಥಳ, ಸಮಯ, ಮದುವೆಯಲ್ಲಿ ಭಾಗವಹಿಸಬೇಕಾದ ಫೋಟೋಗ್ರಾಫರುಗಳು ಮುಂತಾದ ಸಾವಿರಾರು ವಿವರಗಳನ್ನು ಯಾವ ತೊಂದರೆಯಿಲ್ಲದೇ ಕಂಡುಹಿಡಿಯಬಹುದು ಹಾಗೂ ಗುರುತಿಸಬಹುದು. ತನ್ನ ವಿವಾಹಕ್ಕೆ ಸಂಬಂಧಿಸಿದಂತೆ ಆಕೆ ತೋರುವ ಮುತುವರ್ಜಿಯನ್ನು ನೋಡಿ ಎಷ್ಟೋ ಜನ ಬೆರಗಾಗುವುದನ್ನು ನಾನು ನೋಡಿದ್ದೇನೆ.

ಕೆಲವು ದಿನಗಳ ಹಿಂದೆ ಶ್ರೀನಿ ತನ್ನ ರೂಮ್‌ಮೇಟ್ ಮೂಲತಃ ಒರಿಸ್ಸಾದವನಾದ ಬ್ರಜ್‌ನನ್ನು ಕರೆದುಕೊಂಡು ನಮ್ಮ ಮನೆಗೆ ಬಂದಿದ್ದ - ಮಾತಿನ ಮಧ್ಯೆ ಸಹಜವಾಗಿ 'ಈ ವರ್ಷದ ಕೊನೆಯಲ್ಲಿ ಬ್ರಜ್ ಭಾರತಕ್ಕೆ ಹೋಗುತ್ತಿದ್ದಾನೆ, ಅಲ್ಲಿ ಅವನ ಪೋಷಕರು ಒಂದು ಹುಡುಗಿಯನ್ನು ಹುಡುಕಿಟ್ಟಿರುತ್ತಾರೆ, ಎರಡು ವಾರದ ರಜೆಯಲ್ಲಿ ಅವನ ಮದುವೆಯಾಗಿ ಹೋಗುತ್ತದೆ...' ಎಂದು ಒಂದೇ ಉಸಿರಿನಲ್ಲಿ ಬ್ರಜ್‌ನ ಭಾರತದ ವೆಕೇಷನ್, ಎಂಗೇಜ್‌ಮೆಂಟ್, ಮದುವೆ, ಮುಂತಾದ ವಿವರಗಳನ್ನು ಕೇವಲ ಇಪ್ಪತ್ತೇ ನಿಮಿಷಗಳಲ್ಲಿ ಮುಗಿದೇ ಹೋಗುವ ಅಮೇರಿಕನ್ ಸಿಟ್‌ಕಾಮ್ ಹಾಗೆ ಹೇಳಿ ಮುಗಿಸಿಬಿಟ್ಟ. ಅದೇ ಕ್ಯಾರೋಲೈನ್ ತನ್ನ ಮದುವೆಯ ಬಗ್ಗೆ ಹೇಳ ತೊಡಗಿದರೆ ಹಳೆಯ ರಾಜ್‌ಕಪೂರ್ ಸಿನಿಮಾಗಳ ಹಾಗೆ ಮೂರು ಘಂಟೆಗಳಾದರೂ ಮುಗಿಯೋದಿಲ್ಲ!

ಯಾವ ಪದ್ಧತಿ, ವಿವರ, ಪರಿಸರ ಹೆಚ್ಚು-ಕಡಿಮೆ, ತಪ್ಪು-ಸರಿ ಮುಂತಾದ ಜಡ್ಜ್‌ಮೆಂಟುಗಳನ್ನು ನಾನು ಕೆದಕಲು ಹೋಗೋದಿಲ್ಲ. ಎರಡು ಮನಸ್ಥಿತಿ ಅಥವಾ ಸಂಸ್ಕೃತಿಗಳ ಸೂಕ್ಷ್ಮ ಅವಲೋಕನವನ್ನು ಮಾಡುವುದು ನನ್ನ ಉದ್ದೇಶ. ಅಮೇರಿಕನ್ನರು ವರ್ಷಗಟ್ಟಲೇ ಪ್ಲಾನ್ ಮಾಡಿ ಆಗುವ ಮದುವೆಗಳು ಅಷ್ಟೇ ಬೇಗನೇ ಕಾಲನ ಪರೀಕ್ಷೆಯಲ್ಲಿ ಉದುರಿಹೋಗುತ್ತವೆ, ಅದೇ ಭಾರತೀಯ ಮದುವೆಗಳು ಎಂದಿಗೂ ಗಟ್ಟಿಯಾಗೇ ಉಳಿಯುತ್ತವೆ ಎನ್ನುವವರಿಗೆ, you're right! ಎನ್ನುತ್ತೇನೆ.

ಬ್ರಜ್ ನಮ್ಮಲ್ಲಿ ಹಲವರನ್ನು ಪ್ರತಿನಿಧಿಸುವ ಕೇವಲ ಉದಾಹರಣೆಯಷ್ಟೇ, ನಾವು ಎಷ್ಟೋ ಜನ ಈ ನಿಟ್ಟಿನಲ್ಲಿ ಹಾದು ಬಂದಿದ್ದೇವೆ: ಜಾತಿ-ಜಾತಕಗಳು, ಪೋಷಕರ ಅಹವಾಲುಗಳು, ಆಸ್ತಿ-ಅಂತಸ್ತು-ಹಣ ಇವುಗಳು ನಮ್ಮ ನಡುವಿನ ಸಂಬಂಧಗಳನ್ನು ಪೋಣಿಸುವ ದಾರಗಳಾಗಿವೆ, ಕೆಲವು ವಾರ-ತಿಂಗಳುಗಳಲ್ಲಿ ಹುಡುಗ-ಹುಡುಗಿಯರನ್ನು ನೋಡಿ ಕೇವಲ ಹತ್ತು ನಿಮಿಷ ಮಾತನಾಡಿ ಆದ ಮದುವೆಗಳಿವೆ, ಮದುವೆಯನ್ನುವುದು ಈ ಹಿಂದೆಯೇ ಆದ ಒಂದು ಒಡಂಬಡಿಕೆ ಎನ್ನುವ ತತ್ವವಿದೆ, ಎಲ್ಲಕ್ಕಿಂತಲೂ ಹೆಚ್ಚಾಗಿ ನಮ್ಮ ಸುತ್ತಲಿನ ಸಮಾಜಕ್ಕೆ ನಾವು ಒಂದು ರೀತಿಯಲ್ಲಿ ಹೆದರಿಕೊಳ್ಳುವುದಿದೆ - 'ಅವರೇನ್ ಅಂದ್‌ಕೊಳ್ಳೋದಿಲ್ಲ...', 'ನಮ್ಮ ಮನೆತನದ ಪ್ರಶ್ನೆ...', 'ನಮ್ಮ ಜಾತಿ ಗೌರವದ ವಿಚಾರ...' ಮುಂತಾದ ಮಾತುಗಳು ಶತಶತಶತಮಾನಗಳಿಂದ ಕೇಳಿಬರುತ್ತಲೇ ಇವೆ.

ಕ್ಯಾರೋಲೈನ್ ಬೆಳೆದು ಬಂದ ಪರಿಸರ ಬಹಳಷ್ಟು ಭಿನ್ನ - ವರ್ಷಗಳ ಬಾಯ್‌ಫ್ರೆಂಡ್-ಗರ್ಲ್‌ಫ್ರೆಂಡ್ ಎನ್ನುವ ಸಂಬಂಧ, ನಿಶ್ಚಿತಾರ್ತದ ಮೊದಲೇ ಒಂದೇ ಮನೆಯಲ್ಲಿ ವಾಸ ಮಾಡುವ ಮೂಲಕ ಹರಳುಗಟ್ಟತೊಡಗುತ್ತದೆ. ಕೆಲವು ತಿಂಗಳು-ವರ್ಷಗಳ ನಂತರ ಆಗುವ ಫಾರ್ಮಲ್ ಎಂಗೇಜ್‌ಮೆಂಟ್ ಎನ್ನುವುದು ಮುಂಬರುವ ಮದುವೆಯನ್ನು ಸೂಚಿಸುತ್ತದೆ. ಎಲ್ಲಿ-ಹೇಗೆ ಎನ್ನುವ ವಿವರಗಳನ್ನೊಳಗೊಂಡ ಪ್ಲಾನ್ ಸಿದ್ಧಗೊಂಡು ಮದುವೆ ನಡೆದು ಹೋಗುತ್ತದೆ. ಮತ್ತೊಂದು ವಿಶೇಷವಾದ ಅಂಶವೆಂದರೆ ನಿಸರ್ಗ ಸಹಜವಾದ 'ಮಕ್ಕಳಾಗುವುದಕ್ಕೆ ಮದುವೆಯಾಗಬೇಕಾಗೇನೂ ಇಲ್ಲ' ಎನ್ನುವ ಅಂಶವೂ ಅಲ್ಲಲ್ಲಿ ಕಂಡುಬರುತ್ತದೆ. ಜಾತಿಯ ಬದಲು ಧರ್ಮ, ಜಾತಕಗಳ ಬದಲು ಚರ್ಮದ ಬಣ್ಣ ಅಥವಾ ಭಾಷೆ ಮುಖ್ಯವಾಗುವುದು ಸಾಮಾನ್ಯ. ಎಲ್ಲಕ್ಕಿಂತಲೂ ಮುಖ್ಯವಾಗಿ ಎರಡು ಜೀವಗಳ ಅಥವಾ ವ್ಯಕ್ತಿಗಳ ನಡುವಿನ ಕಾಮನಾಲಿಟಿಗೆ ಹೆಚ್ಚು ಪ್ರಾಶಸ್ತ್ಯ.

***

ಇನ್ನು ಕೆಲವೇ ತಿಂಗಳುಗಳಲ್ಲಿ ಕ್ಯಾರೋಲೈನ್ ಮದುವೆಯಾಗುವುದರ ಮೂಲಕ ಒಂದು ಸೋಶಿಯಲ್ ಇನ್‌ಸ್ಟಿಟ್ಯೂಟ್ ಆದ ಗಂಡ-ಹೆಂಡತಿ ಸಂಬಂಧಕ್ಕೆ ಬಡ್ತಿ ಪಡೆಯುತ್ತಾಳೆ, ಆಕೆಯ ಲಾಸ್ಟ್ ನೇಮ್ ಬದಲಾಗುತ್ತದೆ ಎನ್ನುವುದನ್ನು ಬಿಟ್ಟರೆ ಮೇಲ್ಮಟ್ಟಕ್ಕೆ ಹೆಚ್ಚು ವ್ಯತ್ಯಾಸವೇನೂ ಕಂಡುಬರೋದಿಲ್ಲ. ಬ್ರಜ್ ಮದುವೆಯಾದರೂ ಅರ್ಜೆಂಟಿಗೆ ವೀಸಾ ಸಿಗದ ಕಾರಣಕ್ಕೆ ಆತ ತನ್ನ ಹೆಂಡತಿಯನ್ನು ಅಮೇರಿಕಕ್ಕೆ ಕರೆದುಕೊಂಡು ಬರದಿರುವ ಸಾಧ್ಯತೆ ಹೆಚ್ಚು, ಡಿಸೆಂಬರ್‌ನಲ್ಲಿ ಮದುವೆಯಾಗುವ ಬ್ರಜ್‌ಗೆ ತನ್ನ ವೆಕೇಷನ್ ದಿನಗಳು ಆರಂಭವಾಗಿ ಅವು ಮುಗಿಯಲು ಇನ್ನು ೨೦ ದಿನಗಳು ಇರುವಲ್ಲಿವರೆಗೂ ತಾನು ಮದುವೆಯಾಗುವ ಹುಡುಗಿ ಯಾರು ಎಂದು ಇನ್ನೂ ಗೊತ್ತೇ ಇರುವುದಿಲ್ಲ. ಬದುಕಿನಲ್ಲಿ ಬಹು ಮುಖ್ಯವಾದ ಮದುವೆಯೆನ್ನುವ ಹಂತಕ್ಕೆ ವೀಸಾದ ಆಧಾರದ ಮೇಲೆ ದುಡಿಯುವ ಬ್ರಜ್‌ಗೆ ಕೇವಲ ಮೂರು ವಾರಗಳ ರಜೆಯಷ್ಟೇ ಸಾಕು, ಅಥವಾ ಅಷ್ಟೇ ದೊರೆಯುವವು. ಇಲ್ಲಿ ನನ್ನ ಸಹೋದ್ಯೋಗಿ ಕ್ಯಾರೋಲೈನ್ ತನ್ನ ಮದುವೆಗೆ ಸುಮಾರು ಹನ್ನೊಂದು ತಿಂಗಳ ಪ್ಲಾನ್ ರಚಿಸುತ್ತಲೇ ಬಂದಿದ್ದಾಳೆ, ಪ್ರತಿದಿನವೂ ಆಫೀಸಿನಿಂದ ಒಂದಲ್ಲ ಒಂದು ಕಾಲ್‌ಗಳನ್ನು ಮಾಡುತ್ತಲೇ ಇದ್ದಾಳೆ - ಪ್ಲೋರಲ್ ಅರೇಂಜ್‌ಮೆಂಟಿನಿಂದ ಹಿಡಿದು ಮದುವೆಗೆ ಬಳಸುವ ಸಂಗೀತದ ಬಗ್ಗೆ ಬೇಡವೆಂದರೂ ನಮ್ಮ ಕಿವಿಯ ಮೇಲೆ ಬೀಳುವ ಆಕೆಯ ಫೋನ್ ಸಂಭಾಷಣೆ, ಆಕೆಯ attention to detail ಅನ್ನು ನೋಡಿ wow! ಎನ್ನುವಂತೆ ಮಾಡುತ್ತದೆ. ಬ್ರಜ್ ಇಲ್ಲಿನ ಆಫೀಸಿನ ಸಮಯದಲ್ಲಿ ತನ್ನ ವಿವಾಹದ ವಿಷಯವಿರಲಿ ತನ್ನ ಪೋಷಕರ ಜೊತೆ ಮಾತನಾಡಿದ್ದನ್ನೂ ನಾನು ಕೇಳಿಲ್ಲ, ಆತ ತನ್ನ ಏನೇ ಮಾತುಕತೆಗಳಿದ್ದರೂ ಅವುಗಳನ್ನು ವಾರಾಂತ್ಯದ ಕಾಲಿಂಗ್‌ಕಾರ್ಡ್ ನಿಮಿಷಗಳಲ್ಲಿ ವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಲೇ ಇದ್ದಾನೆ.

ಬ್ರಜ್ ಮದುವೆಯ ವಿವರಣೆ ಒಂದು ಸಾಲು ಅಥವಾ ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿಬಿಡಬಹುದಾದ ಚುಟುಕವಾಗುತ್ತದೆ, ಕ್ಯಾರೋಲೈನ್ ಮದುವೆಯ ವಿವರ ಹೇಳಿದಷ್ಟೂ ಇನ್ನೂ ಮುಂದುವರೆಯುತ್ತಲೇ ಇರುತ್ತದೆ!

5 comments:

  1. ಬಹಳ ಸತ್ಯ.. ನಮ್ಮ ಮದುವೆ ಅನ್ನೋ ಬಹಳ crisp ಆಗಿದ್ದರೂ ಬಹಳ strong. ನಮ್ಮಲ್ಲಿ ಮದುವೆಗೆ ಆದ ವ್ಯಕ್ತಿಗೆ ಬಹಳ commitment ಇರತ್ತೆ. ಆದರೆ ಅವರಲ್ಲಿ commitment ಗಿಂತಾ expectations ಜಾಸ್ತಿ ಇರತ್ತೆ, ಹಾಗಾಗಿ ಸಂಬಂಧ ಉಳಿಯುವುದು ಕಷ್ಟ.

    ReplyDelete
  2. ಕಾರ್ತಿಕ್,

    ಬಹಳ ಸ್ಟ್ರಾಂಗ್ ಅನ್ನಿಸೋ ನಮ್ಮಲ್ಲಿನ ಸಂಬಂಧಗಳು ಒಂದು ರೀತಿ ಸಮಾಜದ ಎಳೆಗಳಲ್ಲಿ ಹಾಸುಹೊಕ್ಕು ಬಂಧನಕೊಳಪಟ್ಟಿವೆ ಎಂದು ಒಮ್ಮೊಮ್ಮೆ ಅನ್ಸಲ್ವಾ? ಮದುವೆ ಮಾಡಿಕೊಳ್ಳೋದಕ್ಕೆ, ಮಾಡಿಕೊಂಡಿದ್ದನ್ನು ಮುರಿದುಕೊಳ್ಳೋದಕ್ಕೆ ಹೇಳೋರು/ಕೇಳೋರು ಯಾರೂ ಇಲ್ಲ ಅಂತ ಅನ್ನಿಸಿದಾಗ ಆ ಸ್ವಾಂತಂತ್ರ್ಯವೇ ಸಂಬಂಧಗಳ ಅಳಿ-ಉಳಿವಿಗೆ ಕಾರಣವೂ ಆಗುತ್ತೋ ಏನೋ?

    ReplyDelete
  3. ಬಹಳ ಸತ್ಯ.. ಆದ್ರೆ ಅಲ್ಲಿನ ಸಮಾಜ ನಂಬಿರೋ ಸ್ವಾತಂತ್ರ ಕೆಲವು ಬಾರಿ ಸ್ವೇಚ್ಛೆ ಆಗತ್ತೆ ಆಲ್ವ. ಅತೀಯಾದ ಸ್ವಾತಂತ್ರ (ಅಲ್ಲಿನ ತರಹ), ಅತೀಯಾದ ಬಂಧನ (ಇಲ್ಲಿನ ತರಹ) ಎರಡರ ಮಧ್ಯೆ ನಾವೇನಾದ್ರು ಎಡೆ ಕಂಡುಕೊಂಡ್ರೆ ಅದೇ ಸ್ವರ್ಗ.. :)

    ReplyDelete
  4. ಕಾರ್ತಿಕ್,

    ಒಳ್ಳೇ ಸಲಹೆ! ಅಲ್ಲೀ-ಇಲ್ಲಿಯ ಮಿಕ್ಸ್ ಅನ್ನು ಕೆಲವರು ಪ್ರಯತ್ನಿಸಿ ಅದರ ರುಚಿಯನ್ನು ಬಲವರಾಗಿದ್ದಾರೆ, ನಿಮಗೆ ಎಲಿಜಿಬಿಲಿಟಿ ಇದ್ರೆ ನೀವೂ ಏಕೆ ಒಂದ್ ಕೈ ನೋಡ್‌ಬಾರ್ದೂ? :-)

    ReplyDelete