Friday, July 21, 2006

ನಿಜವಾದ ಪಯಣ ಇದೀಗ ಆರಂಭವಾಗಿದೆ...

ಬರೆಯೋದನ್ನ ರೂಢಿಸಿಕೊಳ್ಳಬೇಕು ಎಂದುಕೊಂಡು ಹಲವಾರು ಬಾರಿ ಅಲ್ಲಲ್ಲಿ ಏನೇನನ್ನೋ ಬರೆದು ಮಧ್ಯದಲ್ಲಿ ನಿಲ್ಲಿಸಿದ್ದು, ಮತ್ತೆ ಯಾವತ್ತೋ ಒಂದು ದಿನ ಉತ್ಸಾಹ ಬಂದು ಸ್ವಲ್ಪ ದಿನಗಳ ಕಾಲ ಬರೆದು ಮತ್ತೆ ನಿಲ್ಲಿಸಿದ್ದು, ಹೀಗೆ ಬರೆಯುವ-ನಿಲ್ಲಿಸುವ-ಬರೆಯುವ ಪ್ರಕ್ರಿಯೆ ಒಂದು ರೀತಿ ನಮ್ಮೂರಿನ ಲೋಕಲ್ ಬಸ್ಸುಗಳಲ್ಲಿ ಪ್ರಯಾಣ ಮಾಡಿದ ಅನುಭವದ ಹಾಗಿತ್ತು. ಈ ಪ್ರಯಾಣಕ್ಕೆ ಚಾಲನೆ ಸಿಕ್ಕಿದ್ದು ೨೦೦೫ ರ ನವೆಂಬರ್ ತಿಂಗಳಿನಲ್ಲಿ ನಾನೂ ಒಂದು ಬ್ಲಾಗ್ ಬರೆಯೋಣ ಎಂದುಕೊಂಡಾಗಿನಿಂದ. ಅಲ್ಲಿ ಒಂದು ತುಣುಕನ್ನು ಸೇರಿಸಿ ನಿದ್ರೆಗೆ ಶರಣು ಹೋದವನಿಗೆ ಮತ್ತೆ ಎಚ್ಚರವಾದದ್ದು ಮಾರ್ಚ್ ೨೦೦೬ ರಲ್ಲಿ ನನ್ನ ಸ್ನೇಹಿತ ಕೃಪೇಶ ತಿವಿದಾಗಲೇ. ಅಲ್ಲಿಂದ ಇಲ್ಲಿಯವರೆಗೆ ದಿನನಿತ್ಯವೂ ಒಂದಲ್ಲ ಒಂದು ರೀತಿಯಿಂದ 'ಅಂತರಂಗ'ದ ಬಗ್ಗೆ ಯೋಚನೆ ಮಾಡುತ್ತೇನಾದ್ದರಿಂದ ಇದು ಬದುಕಿನ ಒಂದು ಭಾಗವಾಗಿದೆ ಎಂದು ಹೇಳಲು ಸಂತೋಷಪಡುತ್ತೇನೆ. ಎಲ್ಲರಿಗೂ ಒಂದು ಹವ್ಯಾಸ ಅನ್ನೋದು ಬೆಳೆಯೋದಕ್ಕೆ ಸುಮಾರು ೨೧ ದಿನಗಳಾದರೂ ಬೇಕಂತೆ, ನನಗೆ ಕೊನೇಪಕ್ಷ ಐದು ತಿಂಗಳಾದರೂ ಹಿಡಿಯಿತು.

ಇವತ್ತಿಗೆ ಇದು ನನ್ನ ನೂರನೇ ಬರಹ. ಈ ಮೈಲಿಗಲ್ಲನ್ನು ತಲುಪುವ ಪ್ರಯಾಣದಲ್ಲಿ ಹಲವಾರು ವಿಷಯಗಳು ನನ್ನ ಸಹ ಪ್ರಯಾಣಿಕರಾಗಿವೆ, ಅವುಗಳಲ್ಲಿ ಕೆಲವು ಇನ್ನೂ ಮುಂದುವರೆಯಲಿವೆ. ನೂರು ಬರಹ ದೊಡ್ಡ ವಿಷಯವೇನಲ್ಲ, ಆದರೂ ನನ್ನ ಮಟ್ಟಿಗೆ ಹೇಳೋದಾದರೆ ಒಂದು ಕಡೆ ಕನ್ನಡ ಟೈಪ್ ಮಾಡುವ ಅಥವಾ ಬರೆಯುವ ವ್ಯವಧಾನವಿರದೇ ಇರುವುದೂ ಮತ್ತೊಂದು ಕಡೆ ನನ್ನ ಪ್ರಚಂಡ ಮೈಗಳ್ಳತನವೂ ಇವುಗಳ ನಡುವೆ ನಾನು ಏನನ್ನಾದರೂ ಬರೆದಿದ್ದೇನೆಂದು ಹೇಳಿಕೊಳ್ಳೋದೇ ಒಂದು ಸಂಭ್ರಮ.

'ಅಂತರಂಗ'ದಲ್ಲಿ ಬರೆಯಲು ತೊಡಗಿದ ಮೊದಮೊದಲು ಹಲವಾರು ಧ್ವನಿಗಳು ಬಂದು ಇಣುಕಿ ಹೋದವು:
೧) ನನ್ನಲ್ಲಿರುವ ಹತಾಶೆಗಳನ್ನು ತೋಡಿಕೊಳ್ಳಬೇಕು, ಅವಕಾಶ ಸಿಕ್ಕಲ್ಲೆಲ್ಲ ಸೂಚ್ಯವಾಗಿ ಮನಸಾ ಇಚ್ಛೆ ಬಯ್ಯಬೇಕು, ನನ್ನ ಕಣ್ಣಿಗೆ ಕಂಡ ರೀತಿಯಲ್ಲಿ ಅನ್ಯಾಯವನ್ನು ಪ್ರತಿಭಟಿಸಬೇಕು ಎಂಬುದಾಗಿ ಒಂದು ಧ್ವನಿ

೨) ಜೀವನ ಬಹಳ ಸುಂದರವಾದದ್ದು, ನನ್ನಲ್ಲಿರುವ ಕವಿಯ ಮನಸ್ಸಿಗೆ ಒಂದು ಜಾಗೃತಿಯನ್ನು ಕೊಟ್ಟು ಸುತ್ತಲನ್ನು ಕಾವ್ಯಮಯವಾಗಿ ನೋಡಿದರೆ ಹೇಗೆ ಎಂಬ ಮತ್ತೊಂದು ಧ್ವನಿ

೩) ನಮ್ಮೂರಿನ ಭಾಷೆಯಲ್ಲಿ ಹಲವಾರು 'ಸಂವಾದ'ಗಳನ್ನು ಹುಟ್ಟಿಸಿಕೊಂಡು ಬದುಕಿಗೆ ಹತ್ತಿರವಾಗಿ ನಡೆಯುವ ಮಾತುಕಥೆಗಳನ್ನು ಸೆರೆಹಿಡಿದರೆ ಹೇಗೆ ಎಂಬ ಇನ್ನೊಂದು ಧ್ವನಿ

೪) ನನ್ನ ಮನಸ್ಸಿನಲ್ಲಿ ದ್ವಿಗುಣಗೊಂಡ ಅವಕಾಶದಲ್ಲಿ ಪುಂಖಾನುಪುಂಖವಾಗಿ ಏಳುವ ಹಲವಾರು ಆಲೋಚನೆಗಳನ್ನು ಹೊರಹೊಮ್ಮಿಸಿ ಅವುಗಳ ಮೂಲಕ ನನ್ನನ್ನು ನಾನು ಅವಿಷ್ಕರಿಸಿಕೊಳ್ಳುವುದು ಎಂಬ ಮುಂತಾದ ಆಲೋಚನೆಗಳು ಮಧ್ಯೆ ಮಧ್ಯೆ ಬಂದವು, ಹೋದವು.

ಹೀಗೆ ಹಲವಾರು ಸಂವಾದಗಳು ಹುಟ್ಟಿಕೊಂಡವು, ಧಾರವಾಡ ಜಿಲ್ಲೆಯ ಗಡಿಯಿಂದ ಎಂಟು ಕಿಲೋ ಮೀಟರ್ ದೂರದಲ್ಲಿರುವ ಅರೆಮಲೆನಾಡಿನ ವಾತಾವರಣದ ಆನವಟ್ಟಿಯ ಭಾಷೆಯಲ್ಲಿ ಹಲವು ಸಂವಾದಗಳನ್ನು ಹಿಡಿದಿಟ್ಟದ್ದಾಯಿತು. ಅಲ್ಲಲ್ಲಿ ವೈಯುಕ್ತಿಕ ವಿಷಯಗಳನ್ನು ಹಂಚಿಕೊಂಡು ಇಷ್ಟು ಬೇಗನೇ ಆತ್ಮಚರಿತ್ರೆಯನ್ನು ಎಲ್ಲಿ ಬರೆದು ಬಿಡುತ್ತೇನೋ ಎನ್ನುವ ಭಯವನ್ನು ಹುಟ್ಟಿಸಿಕೊಂಡಿದ್ದೂ ಆಯಿತು, ಆದರೂ ನಾನು ಈ ಬರಹಗಳನ್ನು ವರ್ಗೀಕರಿಸಿಕೊಂಡ ಹಾಗೆ ಇಪ್ಪತ್ತಕ್ಕೂ ಹೆಚ್ಚು ಬರಹಗಳು 'ವಿಸ್ಮಯ' ಯಾದಿಯಲ್ಲಿ ಸೇರಿ ಹೋಗಿ - ಐ ವಂಡರ್ ಹೌ - ಎನ್ನುವಂತೆ ಹೊರಹೊಮ್ಮಿದೆ.

ಬರಹಗಳಲ್ಲಿ ಈ ಹಿಂದೆ ನಿಜವಾದ ಹೆಸರನ್ನು ಬಳಸುತ್ತಿರಲಿಲ್ಲ, ಈಗ ನಿಜವಾದ ಹೆಸರನ್ನು ಬಳಸಿ ಬರೆಯಲು ಹಲವಾರು ಕಾರಣಗಳಿವೆ - 'ಅಂತರಂಗಿ' ಬರೆದ ಬರಹಗಳಲ್ಲಿ ತೂಕವಿರುತ್ತಿರಲಿಲ್ಲವೋ ಏನೋ, ಕ್ರೆಡಿಬಿಲಿಟಿಯೂ ಅಷ್ಟಕಷ್ಟೇ ಇರುವಂತೆ ಭಾಸವಾಯಿತು, ಕೆಲವೊಮ್ಮೆ ವಿವರಗಳನ್ನು ಕೇಳಿದ ಕೆಲವರು ಅಂದುಕೊಂಡಂತೆ 'ಅಂತರಂಗಿ'ಯ ಹೆಸರಿನಲ್ಲಿ ಬಚ್ಚಿಟ್ಟುಕೊಂಡಂತೆ ಕಾಣಿಸಿರಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಕ್ರಿಯೆಗಳಿಗೆ ನಾನೇ ಜವಾಬ್ದಾರನಾಗುವುದು ಒಳ್ಳೆಯದು ಎನಿಸಿದ್ದರಿಂದ ನಿಜವಾದ ಹೆಸರನ್ನು ತೋರಿಸಿಕೊಳ್ಳಬೇಕಾಯಿತು.

'ಅಂತರಂಗ'ದಿಂದ ಏನಾಯಿತೋ ಬಿಟ್ಟಿತೋ, ನನಗಂತೂ ಬರೆಯುವ ಹವ್ಯಾಸವೊಂದು ಹುಟ್ಟಿತು, ಬರೆಯುವ ವಿಷಯದಲ್ಲಿ ಮೊದಲಿದ್ದ ಹಾಗೆಲ್ಲ ಮೈಗಳ್ಳತನವಿಲ್ಲ, ಹೆಚ್ಚಿನ ಬರಹಗಳು ಒಂದೇ ಭೈಠಕ್‌ನಲ್ಲಿ ಹುಟ್ಟುತ್ತಿವೆ, ಕೆಲವಕ್ಕೆ ಅರ್ಧ ಘಂಟೆಗಳಿಗಿಂತ ಹೆಚ್ಚು ತೆಗೆದುಕೊಂಡರೂ ಹೆಚ್ಚಿನವು ಅರ್ಧ ಘಂಟೆಯ ಒಳಗೆ ಬರೆಯಬಹುದಾಗಿರುವುದರಿಂದ ದಿನಕ್ಕೊಂದು ಅರ್ಧ ಘಂಟೆ ಈ ನಿಟ್ಟಿನಲ್ಲಿ ವ್ಯಯಿಸಲಾರೆನೇ ಎಂದು ಸ್ವಯಂ ತೃಪ್ತಿಪಟ್ಟುಕೊಂಡಿದ್ದೇನೆ.

'ಅಂತರಂಗ'ವನ್ನು ಮೊದಲಿನಿಂದಲೂ ಓದಿ, ಅಲ್ಲಲ್ಲಿ ನನ್ನನ್ನು ತಿದ್ದಿ, ನನ್ನ ಜೊತೆಯಲ್ಲಿ ಕಳಕಳಿಯನ್ನು ವ್ಯಕ್ತಪಡಿಸಿ, ಹೀಗೆ ಬರೆಯಿರಿ, ಹಾಗೆ ಬರೆಯಬಾರದಿತ್ತು ಎಂದೆಲ್ಲಾ ಸ್ಪಂದಿಸಿದವರಿಗೆ ನನ್ನ ದೊಡ್ಡ ನಮನಗಳು, ಅವರ ಹೆಸರುಗಳನ್ನೆಲ್ಲಾ ಹೇಳುತ್ತಾ ಹೋದರೆ ಪಟ್ಟಿ ಉದ್ದವಾಗುವುದರ ಜೊತೆಗೆ, ಕೆಲವರ ಹೆಸರನ್ನು ಮರೆವಿನಿಂದ ಬರೆಯದೇ ಅಪಚಾರಮಾಡಿದಂತಾಗುವುದು ಎನ್ನುವ ಹೆದರಿಕೆ ಇರುವುದರಿಂದ ಇಲ್ಲಿ ಯಾರ ಹೆಸರನ್ನೂ ಬರೆಯುತ್ತಿಲ್ಲ. 'ಅಂತರಂಗ'ವನ್ನು ಎಷ್ಟೋ ಜನ ತಮ್ಮ ಬ್ಲಾಗ್‌ಗಳಲ್ಲಿ, ವೆಬ್‌ಸೈಟ್‌ಗಳಲ್ಲಿ ಲಿಂಕ್ ಕೊಡುವುದರ ಮೂಲಕ ಪರಿಚಯಿಸಿದ್ದಾರೆ, ಅಲ್ಲದೇ ಕನ್ನಡಸಾಹಿತ್ಯ.ಕಾಂ ಎಡಿಟೋರಿಯಲ್‌ನಲ್ಲೂ ಶೇಖರ್ ಅವರು ಪರಿಚಯಿಸಿದ್ದಾರೆ - ಇವರೆಲ್ಲರಿಗೂ ನನ್ನ ನಮನಗಳು.

'ಅಂತರಂಗ'ವನ್ನು ನ್ಯೂ ಝೀಲ್ಯಾಂಡಿನಿಂದ ಹಿಡಿದು ಹವಾಯಿಯವರೆಗೆ ಪ್ರತಿದಿನವೂ ಸುಮಾರು ಜನ ಓದುತ್ತಾರೆ, ಅವರಲ್ಲಿ ಕೆಲವರು ಆಗಾಗ್ಗೆ ತಮ್ಮ ಅನಿಸಿಕೆಗಳನ್ನು ಬರೆಯುತ್ತಿರುತ್ತಾರೆ, ಇನ್ನು ಕೆಲವರು ನೇರವಾಗಿ ಇ-ಮೇಲ್‌ಗಳನ್ನು ಕಳಿಸುತ್ತಿರುತ್ತಾರೆ ಇವರೆಲ್ಲರಿಗೂ ನನ್ನ ನಮನಗಳು.

ನನ್ನ ಆಸೆ ಇಷ್ಟೇ - ನಾನು ಹೀಗೆ ಕನ್ನಡದಲ್ಲಿ ಬರೆಯುತ್ತಲೇ ಇರಬೇಕು, ಬರೆಯುವುದಕ್ಕಿಂತ ಹತ್ತು ಪಟ್ಟು ಓದಬೇಕು, ಓದುವುದಕ್ಕಿಂತ ಹತ್ತು ಪಟ್ಟು ನೆರೆಹೊರೆಯನ್ನು ಗಮನಿಸಬೇಕು, ಆಗು-ಹೋಗುಗಳಿಗೆ ಸ್ಪಂದಿಸಬೇಕು. ಕನ್ನಡ ಬರಹ ಬ್ಲಾಗ್‌ಪ್ರಪಂಚದಲ್ಲಿ ಈಗಷ್ಟೇ ಅಂಬೆಗಾಲಿಡುತ್ತಿದೆ, ಇದು ಹೀಗೇ ಬೆಳೆಯಬೇಕು, ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಯುವ ಸ್ನೇಹಿತ-ಸ್ನೇಹಿತೆಯರು (ತರುಣ ಮಿತ್ರರು) ಹೆಚ್ಚು ಹೆಚ್ಚು ಕನ್ನಡದಲ್ಲೇ ಓದಿ-ಬರೆಯಬೇಕು.

ಇದುವರೆಗೆ ಬರೆದದ್ದನ್ನೆಲ್ಲ ನಾನು ಬರಿ ವಾರ್ಮ್‌ಅಪ್ ಎಂದುಕೊಳ್ಳೋದರಿಂದ ನಿಜವಾದ ಪಯಣ ಇದೀಗ ಆರಂಭವಾಗಿದೆ...ನೋಡೋಣ ಇದು ಎಲ್ಲಿಯವರೆಗೆ ಬರುತ್ತೋ ಎಂದು!

8 comments:

  1. ನೂರು ಮುಟ್ಟಿದ್ದಕ್ಕೆ ಅಭಿನಂದನೆಗಳು ಸತೀಶ್!:) ಅಂತರಂಗ ಚೆನ್ನಾಗಿ ಬರ್ತಿದೆ...ಹೀಗೇ ಬರೀತಿರಿ! ಹಾ, ನೂರು ತುಂಬಿದ ಖುಷಿಯಲ್ಲಿ ಅಂತರಂಗವನ್ನ ಹೀಗೇ ಸುಮ್ಮ್ನೆ ಲಿಂಕ್ ಮಾಡ್ಕೋತಿದೀನಿ:)

    ReplyDelete
  2. ಆದ್ರೂ.... ಅಂತರಂಗಿ ಅವರೆ,
    ನೀವು ಶತಕ ಬಾರಿಸಿದ ಅಂತರಂಗಿಗೆ ಕಡ್ಡಾಯ ವಿಶ್ರಾಂತಿ ನೀಡಿದ್ದೇಕೆ?

    ನೂರಕ್ಕೆ ನೂರಾರು ಅಭಿನಂದನೆ
    ಬ್ಲಾಗಿರಿ, ಬ್ಲಾಗಿಸುತ್ತಿರಿ, ಬ್ಲಾಗ್-ಸುತ್ತುತ್ತಾ ಇರಿ..

    ReplyDelete
  3. ಹಂ... ಹಾಗೆ ಬನ್ನಿ ದಾರಿಗೆ ! ಶತಕ ಬಾರಿಸಿ ನಮ್ಮ ಭಾರತೀಯ ಧಾಂಡಿಗರ ಹಾಗೆ ಎಲ್ಲಿ 'ಔಟ್' ಆಗುವಿರೋ ಎಂಬ ಭಯ ಇತ್ತು. ನಿಮ್ಮ ಈ ಲೇಖನ ನೋಡುವ ತನಕ ದುತ್ ಅಂತ ಈ ಮಧ್ಯ ಬಂದ 'ತರ್ಡ್' ಅಂಪಯರ್ (ಮ್ಯಾನೇಜ್‍ಮೆಂಟ್) ಏನು ಗುಂಡಿ ಅದುಮುವನೋ ಎಂದು ಕಾಯುತ್ತಿದ್ದೆ. ಉಸಿರು ಬಿಗಿಹಿಡಿದು ಕಾಯುವಂತೆ ಚಮಕ್ ಅಂತೂ ಕೊಟ್ರಿ !

    ಶತಕಕ್ಕೆ ಅಭಿನಂದನೆಗಳು.

    ReplyDelete
  4. Anonymous9:39 AM

    ನೂರು ಮುಟ್ಟಿದ್ದಕ್ಕೆ ಅಭಿನಂದನೆಗಳು! ಎಲ್ಲ ಒತ್ತಡಗಳ ನಡುವೆಯೂ ಈ ಹೊಸ ಹವ್ಯಾಸವನ್ನು ಬೆಳಸಿಕೊಂಡಿದ್ದು ಅಭಿನಂದನೀಯ. ಇತ್ತೀಚಿಗೆ internet ನಲ್ಲಿ ಕನ್ನಡ ಬಳಕೆ ಹೆಚ್ಚಾಗಿತ್ತಿರುವುದನ್ನು ಕಂಡು ಸಂತೊಷವಾಗುತ್ತಿದೆ. ಅಂತರಂಗ ಮತ್ತು ಇತರ ಕನ್ನಡ ಬ್ಲಾಗುಗಳಿಗೆ ಧನ್ಯವಾದಗಳು. ೧೦೦ ಮುಟ್ಟಿ ಆಯ್ತು, ತಮ್ಮ ಬ್ಲಾಗು ಟಾಪ್ ೧೦೦ ಬ್ಲಾಗ್ ಲಿಸ್ಟು ತಲುಪಲಿ ಎಂದು ಹಾರೈಸುತ್ತ
    - ಕೃಪೇಶ್

    ReplyDelete
  5. Anonymous12:40 PM

    ಅಭಿನಂದನೆಗಳು! ನೂರು ಮೆಟ್ಟಿಲು ತಲುಪಿದ್ದಕ್ಕೆ ಮತ್ತು ಮುಖವಾಡ ಕಿತ್ತೆಸೆದು, ನಿಜ ರೂಪದಿಂದ ಮುಖಾಮುಖಿಯಾಗಿದ್ದಕ್ಕೆ :)
    (ಇಷ್ಟು ದಿನ ಬೇಕಾಯಿತೇ?)

    ReplyDelete
  6. Anonymous8:30 AM

    ಸತೀಶ್,

    ನಮಸ್ಕಾರ ಮತ್ತು ಹಾರ್ದಿಕ ಅಭಿನಂದನೆಗಳು!

    ಕನ್ನಡ ಬ್ಲಾಗಿಂಗ್‍ನಲ್ಲಿ ಶಿಸ್ತುಬದ್ಧವಾಗಿ ನಿಯಮಿತವಾಗಿ ಮತ್ತು ಪ್ರತಿಯೊಂದು ಬರಹವೂ ತೂಕವುಳ್ಳದ್ದಾಗಿ ಬಂದಿರುವುದಾದರೆ ನಿಮ್ಮ 'ಅಂತರಂಗ' ಬ್ಲಾಗ್ ಅದರ ಮುಂಚೂಣಿಯಲ್ಲಿದೆ. ಬರೆಯುವುದನ್ನು ಮುಂದುವರಿಸಿ. ಹೆಸರು ಪ್ರಕಟಿಸಿ ಬರೆಯುವುದು ಯಾವತ್ತಿಗೂ ಒಳ್ಳೆಯದೇ. ನಿಮ್ಮ ನಿರ್ಧಾರ ಯೋಗ್ಯವಾದುದಾಗಿದೆ.

    ಮತ್ತೊಮ್ಮೆ ಅಭಿನಂದನೆಗಳೊಂದಿಗೆ,

    ಶ್ರೀವತ್ಸ ಜೋಶಿ

    ReplyDelete
  7. ಇಲ್ಲಿ ಅನಿಸಿಕೆ ಬರೆದು, ಫೋನ್‌ನಲ್ಲಿ ಮಾತನಾಡಿ, ಚಾಟ್‌ ವಿಂಡೋಗಳಲ್ಲಿ ಹಾಗೂ ಇ-ಮೇಲ್‍ ಬರೆದು ಶುಭವನ್ನು ಹಾರೈಸಿದ ನಿಮಗೆಲ್ಲರಿಗೂ ನನ್ನ ವಂದನೆಗಳು.

    ReplyDelete
  8. Anonymous8:23 AM

    ಅಭಿನಂದನೆಗಳು ,

    ಆರಂಭಶೂರರಾದ /ಸೋಮಾರಿಯಾದ ನನ್ನಂಥವರಿಗೆ ಖಂಡಿತಾ ಸ್ಫೂರ್ತಿಯಾಗಿದ್ದೀರಿ .

    ನಿಮ್ಮ ಲೇಖನಗಳು ಹೀಗೆಯೇ ಮುಂದುವರೆಯಲಿ . ಹೊಸ ಹೊಸ ಮೈಲಿಗಲುಗಳನ್ನು ತಲುಪಲಿ .

    ಶ್ರೀಕಾಂತ ಮಿಶ್ರಿಕೋಟಿ.

    ReplyDelete