Monday, May 14, 2007

ಗಾಳಿಪಟ

ಒಂದು ಕಡೆ ನಮ್ಮ ಬೇರುಗಳಿಗೆ ಗಟ್ಟಿಯಾಗಿ ಹಿಡಿದುಕೊಂಡು ಉಳಿಯುವ ನಿಲುವೂ, ಮತ್ತೊಂದು ಕಡೆ ಸ್ವಚ್ಛಂದವಾಗಿ ವಿಶಾಲ ನಭದಲ್ಲಿ ಹಾರಾಡ ಬಯಸುವ ಮುಕ್ತ ಮನಸ್ಸೂ ಇವುಗಳನ್ನೆಲ್ಲ ಅವಲೋಕಿಸಿಕೊಂಡಾಗ ನನ್ನ ಕಲ್ಪನೆಗೆ ಹತ್ತಿರವಾಗಿ ಬಂದ ವಸ್ತುವೆಂದರೆ ಗಾಳಿಪಟವೊಂದೇ.

***

ಕಳೆದ ವಾರಾಂತ್ಯದಲ್ಲಿ ಹಳೆಯ ಪುಸ್ತಕಗಳನ್ನೆಲ್ಲ ಎಸೆಯುವುದಕ್ಕೊಂದು ಅವಕಾಶ ಸಿಕ್ಕಿತ್ತು. ಈ ಪುಸ್ತಕಗಳು ನಾನು ಹಿಂದೆ ಮಾಡುತ್ತಿದ್ದ ಕೆಲಸಕ್ಕೆ ಸಂಬಂಧಪಟ್ಟ ಟೆಕ್ನಿಕಲ್ ಪುಸ್ತಕಗಳು. ಇವುಗಳಲ್ಲಿ ಹೆಚ್ಚಿನವುಗಳನ್ನು ನಾನು ಭಾರತದಿಂದ ಮೊಟ್ಟ ಮೊದಲಬಾರಿಗೆ ಬರುವಾಗ ತಂದು ನಂತರ ಕಳೆದ ದಶಕದಲ್ಲಿ ನಾನು ಹೋದಲ್ಲೆಲ್ಲಾ ತೆಗೆದುಕೊಂಡು ಹೋಗಿ ಜತನದಿಂದ ಕಾಪಾಡಿಕೊಂಡವುಗಳು. ಕಳೆದೊಂದು ವರ್ಷದಿಂದ ನನ್ನ ಕಾರ್ಯಕ್ಷೇತ್ರ ಟೆಕ್ನಿಕಲ್ ಹಂತದಿಂದ ಬಿಸಿನೆಸ್ ಮ್ಯಾನೇಜ್‌ಮೆಂಟಿನ ಕಡೆಗೆ ಹೋದಂದಿನಿಂದ ಈ ಪುಸ್ತಕಗಳನ್ನು ಮುಟ್ಟಿ ನೋಡುವ ಅವಕಾಶವೂ ಸಹ ಬಂದಿದ್ದಿಲ್ಲ. ಭಾರತದಲ್ಲಿ ಆಗಿದ್ದರೆ ಅವುಗಳನ್ನು ಯಾವುದಾದರೂ ಹಳೆಯ ಟ್ರಂಕೋ, ಪುಸ್ತಕದ ರ್ಯಾಕ್‌ಗೋ ಸೇರಿಸಿ ಧೂಳು ತಿನ್ನಿಸುತ್ತಿದ್ದೆನೇನೋ ಆದರೆ ಇಲ್ಲಿ ಪುಸ್ತಕಗಳು ಕೇವಲ ವಸ್ತುಗಳಾಗಿ ತೋರುವ ಮನಸ್ಥಿತಿ ಅದ್ಯಾವಾಗಲೋ ನನ್ನಲ್ಲಿ ನಿರ್ಮಿತವಾದ್ದರಿಂದ ಒಂದು ಕಾಲದಲ್ಲಿ ಅನ್ನಕ್ಕೆ ದಾರಿಯಾದ ಪುಸ್ತಕಗಳು ಇಂದು ಸರಳ ವಸ್ತುಗಳಾಗಿ ತಿಪ್ಪೆ ಸೇರಬೇಕಾಗಿ ಬಂದುದು ಪುಸ್ತಕಗಳ ಬದಲಾದ ಸ್ಕೋಪ್‌ಗಿಂತಲೂ ನನ್ನ ಮನಸ್ಸಿಗೆ ಹಿಡಿದ ಕನ್ನಡಿಯಾಗಿತ್ತು.

ಇಲ್ಲ, ನಾನು ಬೇರೆಯ ಮನಸ್ಥಿತಿ ಉಳ್ಳವನು ಎಂದು ಸಾಧಿಸಿಕೊಳ್ಳಲು ಈ ಉದಾಹರಣೆಯನ್ನು ಕೊಡಬೇಕಾಗಿ ಬಂತು - ಇದೇ ಹತ್ತು ವರ್ಷದ ಹಿಂದೆ ರಾಮ ಮೂರ್ತಿ, ರವಿ ಹಾಗೂ ನಾನು ಒಂದು ಅಪಾರ್ಟ್‌ಮೆಂಟಿನಲ್ಲಿ ಎತ್ತರದಲ್ಲಿದ್ದ ಏನೋ ಒಂದನ್ನು ತೆಗೆಯಲು ಪ್ರಯತ್ನಿಸುತ್ತಿದ್ದಾಗ ಆಗ ನಮ್ಮ ಜೊತೆ ಇನ್ನೂ ಯಾವುದೇ ಖುರ್ಚಿ, ಮೇಜು ಇಲ್ಲದ ದಿನಗಳಲ್ಲಿ ದಪ್ಪನಾಗಿರುವ ಟೆಲಿಫೋನ್ ಎಲ್ಲೋ ಪೇಜ್ ಪುಸ್ತಕಗಳನ್ನು ಒಂದರ ಮೇಲೊಂದಾಗಿಟ್ಟುಕೊಂಡು ಅದರ ಮೇಲೆ ನಿಂತು ಎತ್ತರವನ್ನು ಮುಟ್ಟುವ ದಿನಗಳಲ್ಲಿ ರಾಮ ಮೂರ್ತಿ ಹಾಗೂ ರವಿ ಪುಸ್ತಕಗಳ ಮೇಲೆ ನಿಲ್ಲಲು ಸಾರಾಸಗಟಾಗಿ ನಿರಾಕರಿಸಿದರೆ ನಾನು ಅವುಗಳ ಮೇಲೆ ನಿಂತು ಎತ್ತರವನ್ನು ಮುಟ್ಟುವ ಮನಸ್ಥಿತಿಯನ್ನು ಆಗಲೇ ಉಳ್ಳವನಾಗಿದ್ದೆ.

ಇಲ್ಲ, ಅದೇ ಇಪ್ಪತ್ತು ವರ್ಷಗಳ ಹಿಂದೆ ನನ್ನ ಕಾಲು ಯಾರಿಗಾದರೂ ತಾಗಿದರೆ, ನಾನು ಯಾವುದೇ ಪುಸ್ತಕ-ಪೇಪರ್‌ಗಳನ್ನು ಗೊತ್ತಿಲ್ಲದೇ ತುಳಿದರೆ - ನಮ್ ಕಡೆಯಲ್ಲಿ ಹೇಳೋ ಹಾಗೆ "ಷಣ್ ಮಾಡು"ವ (ಕೈ ಬೆರಳುಗಳನ್ನು ಕಣ್ಣಿಗಳಿಗೆ ಒತ್ತಿಕೊಂಡು ನಮಸ್ಕರಿಸುವ ಅಥವಾ ಕ್ಷಮೆ ಕೇಳುವ ಕ್ರಮ?) ಕ್ರಿಯೆಗೆ ಒಗ್ಗಿಕೊಂಡು ಹೋಗಿದ್ದೆನಲ್ಲ! ಪುಸ್ತಕ-ಪೇಪರ್ ಇವುಗಳು ಸರಸ್ವತಿಯ ಸಮಾನ, ಇವುಗಳನ್ನು ಯಾವತ್ತಿದ್ದರೂ ಗೌರವಿಸಬೇಕು ಎಂಬುದು ಅಂದು ರಕ್ತವಾಹಿನಿಯಲ್ಲಿದ್ದಿತಲ್ಲಾ.

ಹಾಗಾದರೆ ಪುಸ್ತಕಗಳನ್ನು ಕೇವಲ ಜಡವಸ್ತುಗಳನ್ನಾಗಿ ನೋಡುವ, ಅವುಗಳನ್ನು ಉಪಯೋಗಿಸಿ ತಿಪ್ಪೆಗೆ ಎಸೆಯುವ ಇಂದಿನ ನನ್ನ ಕ್ರಮ ಮನಸ್ಥಿತಿಯೇ, ಬದಲಾವಣೆಯೇ, ಆಧುನಿಕತೆಯೇ ಅಥವಾ ಹೊಳೆಯ ದಾಟಿದ ಮೇಲೆ ಅಂಬಿಗನ ಮರೆಯುವ ಮರೆವೇ? ಅಥವಾ ಹಳೆಯದಕ್ಕೆ ಅಂಟಿಕೊಂಡ ಯಾವುದೋ ಶಕ್ತಿಯ ಮತ್ತೊಂದು ಮುಖವೇ? ಹಾಗಾದರೆ ಇದೇ ತತ್ವ ಸಾಗರ-ಮೈಸೂರು-ಬನಾರಸ್ಸುಗಳಿಂದ ತಂದು ಆನವಟ್ಟಿಯಲ್ಲಿ ಮನೆಯ ತುಂಬಾ ತುಂಬಿಟ್ಟ ಅಸಂಖ್ಯ ಪುಸ್ತಕಗಳಿಗೇಕೆ ಅನ್ವಯವಾಗೋದಿಲ್ಲ? ಯಾವತ್ತಾದರೂ ಆನವಟ್ಟಿಗೆ ಹೋದಾಗ ಆತ್ಮೀಯವಾಗಿ ಅವುಗಳನ್ನು ಮೈದಡವಿ ಹಳೆಯ ನೆನಪುಗಳ ಸುರುಳಿಯೊಳಗೆ ಹೊಕ್ಕಿದ್ದಿದೆಯೇ ಹೊರತೂ ಎಂದೂ ಉಪಯೋಗಕ್ಕೆ ಬಾರದ, ಈಗಾಗಲೇ ಗೆದ್ದಲಿಗೆ ಆಹಾರವಾಗುತ್ತಿರುವ, ಧೂಳು ತಿನ್ನುತ್ತಿರುವ ಅವುಗಳನ್ನೆಲ್ಲ ಎಸೆದು ಮನೆಯನ್ನು ಶುಭ್ರವಾಗೇಕಿಡುವುದಿಲ್ಲ? ಅಲ್ಲಿಯ ಮನೆಗೊಂದು ನೀತಿ, ಇಲ್ಲಿಯ ಮನೆಗೊಂದು ನೀತಿಯೇ? ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಬೇಕಾದರೆ ಘಂಟೆಗಟ್ಟಲೆ ಮಾತನಾಡುವ, ಪುಕ್ಕಟೆ ಉಪದೇಶಕೊಡುವ ನನಗೆ ಅಮೇರಿಕದ ಮನೆಗೊಂದು ನೀತಿ, ಆನವಟ್ಟಿಯ ಮನೆಗೊಂದು ನೀತಿಯೇಕೆ?

***

ಪುಸ್ತಕಗಳು, ನಮ್ಮನ್ನು ಎತ್ತಿಕಟ್ಟುವ ಒತ್ತಿ ವ್ಯಾಖ್ಯಾನಿಸುವ ವಸ್ತುಗಳು, ನಮ್ಮನ್ನು ಪೂರೈಸುವ ಸರಕುಗಳು, ಅಥವಾ ನಮ್ಮ ಒಡನಾಡಿಗಳು - ಇವುಗಳಲ್ಲೆಲ್ಲವನ್ನು ಕೇವಲ ವಸ್ತುಗಳಾಗಿ, ಸಂಗಾತಿಗಳಾಗಿ (companion), ಸಹಪ್ರಯಾಣಿಕರಾಗಿ ನೋಡುವುದು ಒಂದು ನಿಲುವು. ಅದರ ಬದಲಿಗೆ ಇಂದಿದ್ದವು ಇಂದಿಗೆ ಮುಂಬರುವ ನಾಳೆಗಳು ಭಿನ್ನ ಅಥವಾ ಮಟೀರಿಯಲಿಸ್ಟಿಕ್ ಆದ ಪ್ರಪಂಚದಲ್ಲಿ ಮಟೀರಿಯಲಿಸ್ಟಿಕ್ ನಿಲುವುಗಳನ್ನು ಹೊತ್ತು ಸಾಗುವುದು ಮತ್ತೊಂದು ನಿಲುವು.

5 comments:

  1. ಪುಸ್ತಕ, ಪೇಪರ್ ಇವುಗಳ ಬಗ್ಗೆ ನಮ್ಮಲ್ಲಿರುವ ಮನಸ್ಥಿತಿ ಒಂಥರಾ ಹರಳುಗಟ್ಟಿದೆ ಅನ್ನಿಸಿದ್ದು ನನಗೆ ಇತ್ತೀಚೆಗೆ ಗೆಳತಿಯೊಬ್ಬಳ ಮನೆಯಲ್ಲಿ.
    ಅವರ ಮನೆಯಲ್ಲಿ ಪುಟ್ಟ ಸಮಾರಂಭ. ಎಲ್ಲ ಮುಗಿದ ಮೇಲೆ ಅವಳ ಇನ್ನೊಬ್ಬ ಗೆಳತಿ ಮತ್ತು ನಾನು ಕೆಲವೊಂದು ಕಸಕಡ್ಡಿ ತೆಗೆದು ಶುದ್ಧಗೊಳಿಸುತ್ತಿದ್ದೆವು. ಒಳಗೆ-ಹೊರಗೆ ಓಡಾಡುತ್ತಿದ್ದೆವು. ಒಂದಿಷ್ಟು ಮಳೆ ಬಂದು ಹಿಂದಿನ ಅಂಗಳ ಒದ್ದೆಯಾಗಿತ್ತು. ಮನೆಯೊಳಗೆ ನೀರು, ಕೆಸರು (ಇದ್ದಷ್ಟಾದರೂ) ಬರುತ್ತದೆಂದು ಆ ಇನ್ನೊಬ್ಬ ಗೆಳತಿ ಒಳ ಬರುವಾಗ ಒಂದು ಪೇಪರ್ ಟವೆಲ್ ಹಾಸಿ ಕಾಲೊರೆಸಲು ಹೇಳಿದ್ರೆ, ಆಕೆ ಮೊದಲು ಒಪ್ಪಲಿಲ್ಲ. ಕೊನೆಗೆ "ಅಕ್ಷರವಿರುವ ಪೇಪರ್ ಸರಸ್ವತಿ ಸಮಾನ, ಇದು ಒರೆಸಲೆಂದೇ ಇರುವ ಪೇಪರ್, ಪರವಾಗಿಲ್ಲ" ಅಂತೆಲ್ಲ ಹೇಳಿದ ಮೇಲೆ ಕಾಲೊರೆಸಿಕೊಂಡು ಒಳಗೆ ಬಂದು ಆ ಪೇಪರನ್ನ ತುದಿಬೆರಳಲ್ಲಿ ಮುಟ್ಟಿ ಕಣ್ಣಿಗೊತ್ತಿಕೊಂಡರು. ನನಗೆ ಟಾಯ್ಲೆಟ್ ಪೇಪರ್ ನೆನೆದು ನಗು ಬಂತು. ಉಸಿರು ಬಿಗಿಹಿಡಿದು ನಗು ಕಟ್ಟಿಕೊಂಡು ಕೂತೆ. ನಂಬಿಕೆಗಳು ಮೌಲ್ಯ ಕಳೆದುಕೊಳ್ಳೋದು ಇಲ್ಲೇ ಅಂತ ನನಗನಿಸಿತು.

    ReplyDelete
  2. ಸುಪ್ತದೀಪ್ತಿ,

    ಇದೇ ರೀತಿ ಅನುಭವಗಳನ್ನು ಕೆಲವರಿಂದ ಕೇಳಿದಾಗಲೆಲ್ಲ ನಗದೇ ಇರಲಾಗಲಿಲ್ಲ, ಕೆಲವೊಮ್ಮೆ ಅವರವರ ನಂಬಿಕೆಗಳು ಮುಖ್ಯವಾಗುತ್ತವೆಯಾದ್ದರಿಂದ ಇನ್ನೊಬ್ಬರ ಮನಸ್ಸನ್ನು ನೋವು ಮಾಡುವುದು ಹೇಗೆ ಎಂಬ ಪ್ರಶ್ನೆ ಎದ್ದು ನಿಲ್ಲುತ್ತದೆ.

    ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು!

    ReplyDelete
  3. thumbaa chennagidhe ee vishaya.
    naanu eegaloo haage endhare naguviraa? :-D

    aadhare idhu manasige sambadhisidha vishaya aadudharindha, yaarige hEge samaadhaanavO haagidhdhare thappenilla annisuththe.eradoo manasThithigaLu sareene annisithu.

    ReplyDelete
  4. jaywalker,

    ಎಲ್ಲರೂ ಅವರವರ ನಂಬಿಕೆ, ಅನಿಸಿಕೆಗಳಿಗೆ ಬಾಧ್ಯಸ್ಥರು ಅನ್ನೋ ಹಾಗೆ...ಮನಸ್ಸಿಗೆ ಸಂಬಂಧಿಸಿದ ವಿಷಯಗಳಲ್ಲಿ ಅವರವರ ಪರಿಯಲ್ಲಿ ತಪ್ಪೇನಿಲ್ಲ ಬಿಡಿ!

    ReplyDelete