Friday, May 04, 2007

ಪ್ರೀತಿ-ಪ್ರೇಮ

'ಇಂಥಾ ಅಗಾಧವಾದ ಸಬ್ಜೆಕ್ಟನ್ನ ಒಂದು ಜುಜುಬಿ ಬ್ಲಾಗ್ ಪೋಸ್ಟ್ ನಲ್ಲಿ ಹಿಡಿದು ಹಾಕಲಿಕ್ಕೆ ನೋಡ್ತಿದ್ದೀಯೇನಯ್ಯಾ ಅದೂ ಇಂಥಾ ಪ್ರಿಸ್ಟೀನ್ ಘಳಿಗೆಯಲ್ಲಿ?' ಎಂದು ಯಾರೋ ಅವಾಜ್ ಹಾಕಿದ ಹಾಗಾಯಿತು ಎಂದು ನನ್ನ ಭುಜಗಳ ಎರಡೂ ಬದಿಗೆ ನೋಡಿದ್ರೆ ಯಾರೂ ಕಾಣಿಸ್ಲಿಲ್ಲ, ಧ್ವನಿಗಳನ್ನು ಕೇಳೋದು ಕಿವಿಗಳಾದರೆ ಕಣ್ಣು ತಾನೇ ಏನು ಮಾಡೀತು ಎಂದು ಸುಮ್ಮನಾದೆ.

Why am I writing (about it) now? who in the world knows?

ಮನಃಪಟಲವೆಂಬೋ ರಜತ ಪರದೆಯ ಮೇಲೆ ಜುರ್ರನೆ ಜಾರುವ ಸನ್ನಿವೇಶಗಳು ನನ್ನನ್ನು ಬಹಳ ಹಿಂದೆ ಕರೆದುಕೊಂಡು ಹೋಗತೊಡಗಿದವು, ಹಿಪ್ನಟೈಸ್ ಮಾಡುವವನ ಧ್ವನಿಯಲ್ಲಿನ ಹಿಡಿತದಂತೆ ನನ್ನನ್ನು ಅದ್ಯಾವುದೋ ಹಳೆಯ ನೆನಪುಗಳು ಕಟ್ಟಿಹಾಕಿಕೊಂಡಿದ್ದವು - ಸುಮ್ಮನೇ ಅವುಗಳ ಬೆನ್ನು ಹತ್ತಿ ಹೋದೆ - ಟಿಕೇಟ್ ಏನೂ ತೆಗೆದುಕೊಳ್ಳಬೇಕಾಗಿಲ್ಲವಲ್ಲ ಎಲ್ಲಿಗೆ ಹೋಗಬೇಕೆಂದ್ರೂ!

ಹೈ ಸ್ಕೂಲಿನ ದಿನಗಳಲ್ಲಿ ಮೇಷ್ಟ್ರುಗಳು, ಮನೆಯವರಿಗೆ ಹೆದರಿ ತಮ್ಮೆಲ್ಲ ಭಾವನೆಗಳನ್ನು ಬಚ್ಚಿಟ್ಟುಕೊಳ್ಳುವ ಹುಡುಗ-ಹುಡುಗಿಯರಿಗೆ ಕಾಲೇಜು ಅತ್ಯಂತ ಸೊಗಸಾದ ತಾಣವಾಗಿ ಕಾಣಲು ಬೇಕಾದಷ್ಟು ಕಾರಣಗಳಿವೆ, ಅವುಗಳಲ್ಲಿ 'ನಾನು ಕಾಲೇಜಿಗೆ ಹೋಗುತ್ತಿದ್ದೇನೆ' ಎನ್ನುವ ಭಾವನೆ/ಆಲೋಚನೆ ಒಂದು ರೀತಿಯ ಸ್ವಾತಂತ್ರ್ಯವನ್ನು ತಂದುಕೊಡೋದು ಅಲ್ಲದೇ ಮುಖದ ಮೇಲೆ ಮೀಸೆ ಚಿಗುರೋ ಎಷ್ಟೋ ಹುಡುಗರಿಗೆ ಅನೇಕ ಲವಲವಿಕೆಗಳನ್ನೂ ನವಿರಾದ ಆಸೆಗಳನ್ನೂ ಸೃಷ್ಟಿಸುತ್ತದೆ.

ಆಗಿನ ದಿನಗಳಲ್ಲಿನ ಚರ್ಚಾಸ್ಪರ್ಧೆಗಳಲ್ಲಿ 'ಭಾರತಕ್ಕೆ ಅಧ್ಯಕ್ಷೀಯ ಮಾದರಿಯ ಪ್ರಜಾಪ್ರಭುತ್ವ ಒಳ್ಳೆಯದು' ಎನ್ನುವ ವಿಷಯವನ್ನು ಕುರಿತು ವಿದ್ಯಾರ್ಥಿಗಳಲ್ಲಿ ಚರ್ಚೆಯನ್ನು ಹುಟ್ಟುಹಾಕಿಸುವ ಬದಲು 'ಒಬ್ಬರನ್ನೊಬ್ಬರು ಪ್ರೇಮಿಸುವವರಲ್ಲಿ ಓಪನ್ ಕಮ್ಮ್ಯೂನಿಕೇಷನ್ ಇರುವುದು ಒಳ್ಳೆಯದು' ಎಂದು ವಿಷಯಗಳನ್ನು ಏಕೆ ಸೃಷ್ಟಿಸೋದಿಲ್ಲ ಅನ್ನೋ ಪ್ರಶ್ನೆ ಬಂದು ನನ್ನ ಮುಖದಲ್ಲಿ ಒಂದು ಸಣ್ಣ ನಗೆಯನ್ನು ಹುಟ್ಟಿಹಾಕಿ ಹಾಗೇ ಮರೆಯಾಯಿತು.

ನಮ್ಮೂರಿನ ಹುಡುಗರ ಪ್ರೇಮ ಸಂದೇಶಗಳು ಕಿಕ್ಕಿರಿದ ಬಸ್ಸಿನಲ್ಲಿ ಹಿಂದಿನಿಂದ ಬಂದ ಕಂಡಕ್ಟರಿನ ಕೀರಲಾದ 'ಇಲ್ಲ್ಯಾರ್ರೀ ಟಿಕೇಟು...' ಎಂದು ಬಸ್ಸಿನ ಹಿಂದುಗಡೆಯಿಂದ ಜನರ ತಲೆಗಳ ನಡುವೆ ಬಂದ ಪ್ರಶ್ನೆಯ ಧ್ವನಿಯಂತೆ ಬರುವಾಗಲೇ ಸಾಕಷ್ಟು ತಿಕ್ಕಾಟ ಮಾಡಿಕೊಂಡು ಟಾರ್ಗೆಟೆಡ್ ಆಡಿಯನ್ಸ್ ತಲುಪೋ ಹೊತ್ತಿಗೆ ಅನೇಕ ಇನ್‌ಫ್ಲುಯೆನ್ಸ್‌ಗಳಿಗೊಳಗಾರಿತ್ತದೆ. ನಮ್ಮೂರಿನ ಸಂವಹನ ಮಾಧ್ಯಮಗಳು ಕಿಕ್ಕಿರಿದು ತುಂಬಿ ತುಳುಕಾಡುತ್ತಿರುವಾಗ ಅಲ್ಲಲ್ಲಿ ಹೊಸ-ಹೊಸ ಅವಿಷ್ಕಾರಗಳು ಕಂಡುಬಂದರೂ ಅವೆಲ್ಲವೂ ಬಹಳ ಸೀಮಿತವಾಗಿ ಹೋಗಿ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗತೊಡಗುತ್ತದೆ.

ಹುಟ್ಟಿದಾರಭ್ಯ ಏನನ್ನೂ ಎಲ್ಲವನ್ನೂ ಬಾಯಿಬಿಟ್ಟು ಹೇಳಿ ಅಭ್ಯಾಸವಿದ್ದರೆ ತಾನೇ? ಕೃತಜ್ಞತೆ, ಧನ್ಯವಾದ, ಅಭಿನಂದನೆಗಳನ್ನು ವಿಶೇಷವಾಗಿ ಅಭಿವ್ಯಕ್ತಗೊಳಿಸಿ ಗೊತ್ತಿದ್ದರೆ ತಾನೇ?

ನನ್ನ ಸ್ನೇಹಿತ ಸದು, ಶೈಲಜಾ ಅನ್ನೋ ಹುಡುಗಿಯನ್ನ ಬಹಳ-ಬಹಳ-ಬಹಳ ಪ್ರೀತಿಸುತ್ತಿದ್ದ ಸಂದರ್ಭ - ಅದೂ ಇನ್ನೂ ಸೆಕೆಂಡ್ ಪಿಯುಸಿ ಹಂತದಲ್ಲಿರುವಾಗ - 'ಹೋಗಿ ನೇರವಾಗಿ ಹೇಳೋ...' ಅನ್ನೋ ನನ್ನ ಮಾತುಗಳು ಅವನಲ್ಲಿ ಯಾವ ಪರಿಣಾಮವನ್ನೂ ಬೀರ್ತಿರಲಿಲ್ಲ...ಬರೀ ಮನಸ್ಸಿನಲ್ಲಿ ಮಂಡಿಗೆ ತಿನ್ನೋನು, ನನ್ನಂತಹ ಕೆಲವರಿಗೆ ಮಾತ್ರ ಅವನ ಆಲೋಚನೆಗಳನ್ನ ಹಂಚಿಕೊಳ್ಳೋನು. ಓದೋದು-ಗೀದೋದು ಎಲ್ಲಾ ಸೆಕೆಂಡರಿಯಾಗಿ ಹೋಗಿತ್ತು ಆಗ. ಬೆಳಿಗ್ಗೆಯಿಂದ ಸಂಜೇವರೆಗೆ ಒಂದೇ ರಾಗ - ಅವಳು ನಾಳೆ ಎಲ್ಲಿರ್ತಾಳೆ? ಹೇಗಿರ್ತಾಳೆ? ಅವಳಿಗೆ ಹೆಂಗೆ ಹೇಳೋದು, ಹಿಂಗೆ ಹೇಳೋದು... ಇತ್ಯಾದಿ. ನಮಗೆಲ್ಲಾ ಚಿಟ್ಟ್ ಹಿಡಿದು ಹೋಗಿತ್ತಪ್ಪಾ ಅವನ ಪ್ರೇಮಾವೇಶವನ್ನು ನೋಡಿ. ಸದು ಹೋಗಿ ಶೈಲಜಾನನ್ನು ಮಾತನಾಡಿಸೋ ನನ್ನ ಪ್ರಯತ್ನಗಳು ಯಾವತ್ತು ಸಫಲವಾಗಲೇ ಇಲ್ಲ - ಅವನ ಅಗಾಧವಾದ ಪ್ರೀತಿ ಹಲವು ಕವನಗಳಾಗಿ, ಕಥೆಗಳಾಗಿ ಹುಟ್ಟಿ ಹೊರಬಂದವೇ ಹೊರತು ಅದರಿಂದ ಮತ್ತಿನ್ನೇನೂ ಆಗಲಿಲ್ಲ. ಇವತ್ತಿನ ನಿಲುವಿನಲ್ಲಿ ಸದುವಿನ ಭಾವನೆಗಳು ಅಂದಿನ ದಿನಗಳಿಗೆ ಮಾತ್ರ ಅದೆಷ್ಟು ಗಟ್ಟಿಯಾಗಿದ್ದವು ಅನ್ನಿಸಿದರೂ ಅವುಗಳು ಅಷ್ಟೇ ಬಾಲಿಶವಾದವು ಎಂದು ಜೊತೆಗೆ ಅನ್ನಿಸಿದ್ದು ಹೌದು.

ನನ್ನನ್ನ ಕೇಳಿದ್ರೆ - ಈ ಅವೇ ಲವ್ ಸ್ಟೋರಿಯನ್ನು ಚೂರುಪಾರು ಬದಲಾಯಿಸಿ ಹಲಸಿನ ಮರದ ಬದಲು ಅಕೇಷಿಯಾ ಮರಗಳನ್ನು ಸುತ್ತುವ ಪ್ರೇಮಕಥೆಗಳು ಹಾಗೂ ಅವುಗಳನ್ನು ಆಧಾರಿಸಿ ತಯಾರಿಸುವ ಚಿತ್ರಗಳನ್ನು ಸಾರಾಸಗಟಾಗಿ ಬ್ಯಾನ್ ಮಾಡಿ ಬಿಡಬೇಕು. ಒಂದು ವರ್ಷಕ್ಕೆ ಹತ್‌ಹತ್ರ ಸಾವಿರ ಸಿನಿಮಾಗಳನ್ನು ಹುಟ್ಟು ಹಾಕೋ ನಮ್ಮ ಪರಂಪರೆಯ ಮೊತ್ತ ಕೇವಲ ಇನ್‌ಎಫಿಷಿಯಂಟ್ ಆಗಿ ಕಮ್ಮ್ಯೂನಿಕೇಟ್ ಮಾಡುವ ಮರ ಸುತ್ತಿ, ಹಾಡಿ, ಹರಟಿ, ಅತ್ತು, ನಗುವ ಪ್ರೇಮಿಗಳ ಕಥೆಗಳಷ್ಟೇ ಆಗಿಬಿಡಬಾರದು ನೋಡಿ, ಅದಕ್ಕೆ. ಪ್ರೇಮಿಗಳಿಂದ ಪ್ರೇಮಕಥೆಗಳೋ, ಕಥೆಗಳಿಂದ ಪ್ರೇಮಿಗಳೋ ಅನ್ನೋದಕ್ಕಿಂತಲೂ ಕಥೆಗಳಿಂದಲೇ ಇನ್ನಷ್ಟು ಕಥೆಗಳು ಎಂದ್ರೇನೆ ಸೊಗಸು, ಯಾಕಂದ್ರೆ ಒರಿಜಿನಾಲಿಟಿ, ಸೃಜನಶೀಲತೆ ಅನ್ನೋದು ಕೆಲವರಿಗೆ ಮಾತ್ರ, ಇನ್ನೊಬ್ಬರ ಸ್ಪೂರ್ತಿಯನ್ನಾಧರಿಸಿ ಹುಟ್ಟು ಹಲವಾರು ಸ್ಯೂಡೋ ಸ್ಫೂರ್ತಿಗಳಿಗೆ ಮಾತ್ರ ಯಾವುದೇ ಮಿತಿ ಅನ್ನೋದೇನೂ ಇಲ್ಲ.

'ಥೂ ನಿನ್ನ, ಯಾವನಯ್ಯಾ ನೀನು, ನಮ್ಮೂರಿನ ಹುಡುಗ/ಹುಡುಗಿಯರಿಗೆ ಕನಸು ಕಾಣೋ ಹಕ್ಕೂ ಇಲ್ಲಾ ಅಂತ ಹೇಳ್ತಾ ಇದ್ದೀಯಲ್ಲ, ಕನಸ್ಸು ಕಾಣೋದಕ್ಕೂ ದುಡ್ಡ್ ಕೊಡಬೇಕಾ?' ಎಂದು ಇನ್ನೆಲ್ಲಿಂದಲೋ ಮತ್ತೊಂದು ಧ್ವನಿ ಕೇಳಿ ಬಂತು. ಕನಸುಗಳನ್ನ 'ಕಾಣಲಿ' ಯಾರು ಬೇಡಾ ಅಂದೋರು - ಮನಸ್ಸಿನಲ್ಲಿರೋದನ್ನ ನೆಟ್ಟಗೆ ಹೇಳಿಕೊಳ್ಳಿ, ಹಂಚಿಕೊಳ್ಳಿ ಅಂತಾ ತಾನೇ ನಾನ್ ಹೇಳ್ತಾ ಇರೋದು ಎಂದು ಯಾರನ್ನೋ ಸಮಾಧಾನ ಮಾಡಲು ನೋಡಿದೆ, ಆ ಧ್ವನಿ ನನ್ನೊಳಗೇ ಹೇಗೆ ಬಂತೋ ಹಾಗೇ ಕರಗಿ ಹೋಯ್ತು.

ಈ ಹುಡುಗ/ಹುಡುಗಿಯರದ್ದೂ ಒಂದ್ ರೀತಿ ಸರೀನೇ...ಓದೋದಕ್ಕೆ ಬೇಕಾದಷ್ಟು ಇರುತ್ತೆ, ಕಿತ್ತು ತಿನ್ನೋ ಕಾಂಪಿಟೇಷನ್ನು ಎಲ್ಲಿ ಹೋದ್ರೂ, ಅದರ ಮೇಲೆ ಆಸ್ತಿ, ಅಂತಸ್ತು, ಜಾತಿ, ಭಾಷೆ ಅಂತ ನೂರಾರು ಸಂಕೋಲೆಗಳು, ಅವುಗಳನ್ನೆಲ್ಲ ಜಯಿಸಿ, ಮೀರಿಸಿ ಹೋಗೋದಕ್ಕೆ ಆ ಎಳೆ ಮನಸ್ಸುಗಳಲ್ಲಿ ಚೈತನ್ಯವಾದ್ರೂ ಎಲ್ಲಿರುತ್ತೆ? ಈ ವಯಸ್ಸಿಗೆ ಸಹಜವಾದ ಭಾವನೆಗಳು ಬರೋವಾಗ ಈ ಸಂಕೋಲೆಗಳನ್ನು ಕೇಳಿ ಬರೋದಿಲ್ಲವಲ್ಲ? ಹೀಗೆ ಬಂದವುಗಳು ಕಾಲನ ಪರೀಕ್ಷೆಯಲ್ಲಿ ಗಟ್ಟಿಯಾದವುಗಳು ಉಳಿದುಕೊಂಡು ಜೊಳ್ಳಾದವು ತೇಲಾಡಿಕೊಂಡು ಹೋಗುದು ಸಹಜವೇ ಅಲ್ವೇ?

***

ನನಗೆ ಇವತ್ತಿಗೂ ಅನ್ಸುತ್ತೆ - ಸದು ಶೈಲಜಾ ಹತ್ರ ನೇರವಾಗಿ ಮಾತನಾಡಿ ಬಿಡಬೇಕಿತ್ತು, ತನ್ನೆಲ್ಲವನ್ನೂ ಮನಸ್ಸಿನಲ್ಲೇ ಇಟ್‌ಕೊಂಡು ಕೊರಗಬಾರ್ದಿತ್ತು, ಅವನ ಪ್ರೇಮ ಅಲ್ಲಿಗೇ ನಿಲ್ಲಬಾರ್ದಿತ್ತು ಅಂತ.

6 comments:

  1. Anonymous8:36 PM

    ಆ ಸದು ನೀವೇ ಯಾಕಾಗಿರಬಾರದು ಅಂತ ಅನುಮಾನ ನಂಗೆ :)

    ReplyDelete
  2. ಸತೀಶ್,
    ನಿಜಕ್ಕೂ ಆಗಾಧವಾದ ವಿಷಯದ ಬಗ್ಗೆ ಪ್ರಸ್ತಾಪ ಮಾಡೀದೀರಾ..

    >>ಹೈ ಸ್ಕೂಲಿನ ದಿನಗಳಲ್ಲಿ ಮೇಷ್ಟ್ರುಗಳು, ಮನೆಯವರಿಗೆ ಹೆದರಿ ತಮ್ಮೆಲ್ಲ ಭಾವನೆಗಳನ್ನು ಬಚ್ಚಿಟ್ಟುಕೊಳ್ಳುವ ಹುಡುಗ-ಹುಡುಗಿಯರಿಗೆ
    ಗುರುಗಳೇ, ಅದು ನಿಮ್ಮ-ನಮ್ಮ ಕಾಲದ ಕತೆಯಾಗಿತ್ತು.ಈಗ ನೋಡಿ, ಇನ್ನೂ ಮಿಡಿಲ್ ಸ್ಕೂಲ್ ಹತ್ತಿರಲಿಲ್ಲ, ಆಗಲೇ ಗರ್ಲ್ ಪ್ರೆಂಡ್ ಅದು ಇದು ಅಂತಿರ್ತಾವೆ..

    ಚರ್ಚಾಸ್ಪರ್ಧೆಯ ವಿಚಾರ ಚೆನ್ನಾಗಿದೆ :)

    ನಿಮ್ಮ ಲೇಖನದ ಕೊನೆ ಸಾಲು ಎಲ್ಲವನ್ನೂ ಹೇಳಿಬಿಟ್ಟಿದೆ..
    >>ಹೀಗೆ ಬಂದವುಗಳು ಕಾಲನ ಪರೀಕ್ಷೆಯಲ್ಲಿ ಗಟ್ಟಿಯಾದವುಗಳು ಉಳಿದುಕೊಂಡು ಜೊಳ್ಳಾದವು ತೇಲಾಡಿಕೊಂಡು ಹೋಗುದು ಸಹಜವೇ ಅಲ್ವೇ?

    ReplyDelete
  3. sritri,

    ಸದು (== ಸದಾನಂದ) ನಿಜವಾದ ಕ್ಯಾರೆಕ್ಟರ್, ಸುಬ್ಬ, ಮೇಷ್ಟ್ರು, ನಂಜ, ತಿಮ್ಮಕ್ಕನ ಹಾಗಲ್ಲ!

    ನಿಮ್ಮ ಕಾಮೆಂಟ್ ಓದಿದ ಮೇಲೆ ಬೇಕಾದಷ್ಟು ಜನ ಸದುವಿನ ಡಿಸ್ಕ್ರಿಪ್ಷನ್‌ಗೆ ಸೇರ್ತಾರೆ ಅನ್ನಿಸಿದ್ದು ನಿಜ!

    ReplyDelete
  4. ಶಿವಣ್ಣಾ,

    ಈಗಿನ ಹುಡುಗಾ/ಹುಡುಗೀರ್ ಕಥೇನೇ ಬೇರೆ ಅಂತ ಎಲ್ರೂ ಹೇಳೋದೂ ತಲತಲಾಂತರದಿಂದಲೂ ಸತ್ಯ ಅಂದ್‌ಮೇಲೆ ಅದು ಬದಲಾವಣೆಯ ಕೊಡುಗೆಯಾಗಿ ಸಹಜವಾಗಿ ಹೋಗುತ್ತೆ, ಅಲ್ವಾ? :-)

    ReplyDelete