Saturday, April 28, 2007

ಅಂತರಂಗ - ಇನ್ನೂರು!




ಕಳೆದ ವರ್ಷ ಜುಲೈ ೨೧ ರಂದು ನೂರನೇ ಬರಹ ಬರೆದ ಮೇಲೆ ಇದು ಹೀಗೇ ಮುಂದುವರೆಯುತ್ತೆ, ಇನ್ನೂರನ್ನು ಮುಟ್ಟುತ್ತೆ ಎನ್ನುವ ವಿಶ್ವಾಸ ಸ್ವಲ್ಪ ಮಟ್ಟಿಗೆ ಇದ್ದಿತಾದರೂ ಬಲವಾಗೇನೂ ಇರಲಿಲ್ಲ, ಇನ್ನೊಂದು ನೂರು ಬರಹಗಳಿಗೆ ವಿಷಯಗಳನ್ನ ಎಲ್ಲಿಂದ ತರೋದು? ಯಾವ ವಿಷಯವನ್ನು ಕೊಲ್ಲೋದು? ಯಾರನ್ನು ಮಟ್ಟಾ ಹಾಕೋದು? ಎಂದೆಲ್ಲಾ ಪ್ರಶ್ನೆಗಳು ತಾವೇತಾವಾಗಿ ಬಂದು ಹೋಗಿದ್ದಂತೂ ನಿಜ.

ರಾಜಕೀಯ ವಿದ್ಯಮಾನಗಳನ್ನು 'ಕಾಲಚಕ್ರ'ದಲ್ಲಿ ಬದಿಗಿಟ್ಟು, ಪ್ರಸ್ತುತ ವಿದ್ಯಮಾನಗಳಿಗೆ ಅಲ್ಲಲ್ಲಿ ಪ್ರತಿಕ್ರಿಯೆ ತೋರಿಸಿದ್ದನ್ನು ಬಿಟ್ಟರೆ ಇತ್ತೀಚಿನ ಲೇಖನಗಳಿಗೆ ಸ್ಪೂರ್ತಿ ದೊರೆತದ್ದು ಡಿಸೆಂಬರ್‌ನ ಭಾರತದ ಪ್ರಯಾಣದಿಂದಲೇ ಎಂದೇ ಹೇಳಬೇಕು. ಮೂರೂ ಮುಕ್ಕಾಲು ವರ್ಷಗಳ ನಂತರ ಭಾರತವನ್ನು ಹಲವಾರು ದೃಷ್ಟಿಕೋನಗಳಿಂದ ನೋಡಿ ಬೇಕಾಗಿಯೋ ಬೇಡವಾಗಿಯೋ ಹುಟ್ಟಿಬರುವ ಅದಮ್ಯ ಅನಿಸಿಕೆಗಳನ್ನು ಹಂಚಿಕೊಂಡಿದ್ದು ನಿಜವಾಗಿಯೂ ಹಲವಾರು ರೀತಿಯಲ್ಲಿ ನನ್ನನ್ನು ಬೆಳೆಸಿದೆ, ಚಿಂತಿಸುವಂತೆ ಮಾಡಿದೆ.

"ನೂರು ಬರಹ ದೊಡ್ಡ ವಿಷಯವೇನಲ್ಲ, ಆದರೂ ನನ್ನ ಮಟ್ಟಿಗೆ ಹೇಳೋದಾದರೆ ಒಂದು ಕಡೆ ಕನ್ನಡ ಟೈಪ್ ಮಾಡುವ ಅಥವಾ ಬರೆಯುವ ವ್ಯವಧಾನವಿರದೇ ಇರುವುದೂ ಮತ್ತೊಂದು ಕಡೆ ನನ್ನ ಪ್ರಚಂಡ ಮೈಗಳ್ಳತನವೂ ಇವುಗಳ ನಡುವೆ ನಾನು ಏನನ್ನಾದರೂ ಬರೆದಿದ್ದೇನೆಂದು ಹೇಳಿಕೊಳ್ಳೋದೇ ಒಂದು ಸಂಭ್ರಮ", ಅಂದು ಬರೆದ ವಿಷಯ ಇಂದಿಗೂ ಪ್ರಸ್ತುತ, ಹಾಗೂ ನನ್ನ ಮಟ್ಟಿಗೆ ಸಂತೋಷದ ವಿಷಯವೂ ಹೌದು.

ಜೊತೆಗೆ ಅಂದು ಬರೆದ ಸಾಲು - "ಇದುವರೆಗೆ ಬರೆದದ್ದನ್ನೆಲ್ಲ ನಾನು ಬರಿ ವಾರ್ಮ್‌ಅಪ್ ಎಂದುಕೊಳ್ಳೋದರಿಂದ ನಿಜವಾದ ಪಯಣ ಇದೀಗ ಆರಂಭವಾಗಿದೆ...ನೋಡೋಣ ಇದು ಎಲ್ಲಿಯವರೆಗೆ ಬರುತ್ತೋ ಎಂದು!" ಇಂದಿಗೂ ಪ್ರಸ್ತುತ - ಬರೆಯುವ ಹವ್ಯಾಸ ನನ್ನಲ್ಲಿ ಈಗಾಗಲೇ ಮೂಡಿಬಿಟ್ಟಿದೆ, ಇನ್ನು ಅದನ್ನು ಹೆಚ್ಚು ಎತ್ತರಕ್ಕೆ ಕೊಂಡೊಯ್ಯಬೇಕು, ಬರೆಯುವ ಪ್ರಕ್ರಿಯೆ ಓದುವುದನ್ನು ಬಿಟ್ಟು ಬಹಳ ದೂರವಿರಲಾರದಾದ್ದರಿಂದ ನನ್ನ ಓದುವಿಕೆಯನ್ನು ಇನ್ನಷ್ಟು ಚುರುಕುಗೊಳಿಸಬೇಕು ಎಂಬುದು ಮಹದಾಸೆ.

'ಅಂತರಂಗ'ವನ್ನು ಓದಿ ಹಲವಾರು ವಿಷಯಗಳಲ್ಲಿ ಸಹಾಯ ಮಾಡಿದ, ಸಹಕರಿಸಿದ, ಅಲ್ಲಲ್ಲಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ ಪ್ರತಿಯೊಬ್ಬರಿಗೂ, 'ಅಂತರಂಗ'ವನ್ನು ತಮ್ಮ ಬ್ಲಾಗ್‌ಗಳಲ್ಲಿ ಲಿಂಕ್ ಕೊಟ್ಟುಕೊಂಡು ಉಳಿದವರಿಗೆ ಪರಿಚಯಿಸಿದ ಹಾಗೂ ದಿನಕ್ಕೊಮ್ಮೆ, ವಾರಕ್ಕೊಮ್ಮೆ ಬಂದು ಓದಿದವರಿಗೆಲ್ಲರಿಗೂ ನನ್ನ ನಮನಗಳು.

'ಅಂತರಂಗ' ಇನ್ನೂರನೇ ಲೇಖನವನ್ನು ಮುಟ್ಟುವ ಹೊತ್ತಿಗೆ ಮತ್ತೊಂದು ಮುಖ್ಯವಾದ ಸಂಗತಿಯನ್ನು ಅಲಕ್ಷ್ಯ ಮಾಡುವಂತಿಲ್ಲ - ಈ ಬ್ಲಾಗಿಗೆ ಹತ್ತು ಸಾವಿರ ವೀಕ್ಷಕರು (ನನ್ನದೇ ಹಿಟ್‌ಗಳನ್ನು ಹೊರತುಪಡಿಸಿ) ಬಂದು ಹೋದದ್ದೂ ನನ್ನ ಮಟ್ಟಿಗೆ ಸಂತೋಷದ ವಿಷಯವೇ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಸರಾಸರಿ ದಿನಕ್ಕೆ ಇಪ್ಪತ್ತು ವಿಸಿಟರ್‌ಗಳು ಬಂದು ತಲೆಗೆ ಎರಡೂವರೆ ನಿಮಿಷಗಳಂತೆ ಬ್ಲಾಗ್‌ ಅನ್ನು ನೋಡಿ, ಕಾಮೆಂಟ್ ಬಿಡುವುದರ ಮೂಲಕ, ಇಮೇಲ್ ಬರೆಯುವುದರ ಮೂಲಕ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದು ಈ ರೀತಿಯ ಕನ್ನಡ ಬ್ಲಾಗಿಗೆ ದೊಡ್ಡ ವಿಷಯವೇ. 'ಅಂತರಂಗ'ದಲ್ಲಿ ಬರಹಗಳು ಉದ್ದವಾದವುಗಳು, ಒಂದು ಸ್ಕ್ರೀನ್‌ನಿಂದ ಮತ್ತೊಂದು ಸ್ಕ್ರೀನಿಗೆ ಸ್ಕ್ರೋಲ್ ಮಾಡಿಕೊಂಡು ಓದಬೇಕಾದವುಗಳು, ಹೆಚ್ಚಿನವು ಅಳುಮುಂಜಿ ಛಾಯೆಯವು, ಇನ್ನು ಕೆಲವು ವಿಚಿತ್ರ ಸಂವಾದ-ವಿಷಯಗಳನ್ನು ಹೊತ್ತುಕೊಂಡವುಗಳು. ಯಾವುದೇ ಲಾಜಿಕ್ಕಿಗೆ ನಿಲುಕದೇ ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಟರ್ನ್‌ಪೈಕ್‌ನಲ್ಲಿ ಲೇನ್ ಬದಲಾಯಿಸಿದ ಹಾಗೆ ವೀವ್ ಮಾಡಿಕೊಂಡು ಹೋಗುವಂತಹ ಬರಹಗಳು. ಕೆಲವೊಂದು ಬರಹಗಳು ಲೈಟ್ ಆಗಿದ್ದರೂ ಇನ್ನು ಕೆಲವು ಗಂಭೀರವಾದವುಗಳೆಂದು ಎಷ್ಟೋ ಜನ ಫೋನ್‌ನಲ್ಲಿ ಹೇಳಿದರೂ ಸುಲಭವಾಗಿ ಕಾಮೆಂಟ್ ಬಿಡಲಾರದವುಗಳು.

Thanks to Google - 'ಕಾಲಚಕ್ರ'ವನ್ನು 'ಅಂತರಂಗ'ದ ಒಂದು ಭಾಗವನ್ನಾಗಿ ಮಾಡಿದ್ದಕ್ಕೆ! ಇನ್ನು 'ದಾರಿ-ದೀಪ' ನಾನೆಣಿಸಿದ ವೇಗದಲ್ಲಿ ಬೆಳೆಯದೇ ಇರೋದಕ್ಕೆ - ನನ್ನ ಸೋಮಾರಿತನಕ್ಕೆ ಧನ್ಯವಾದಗಳನ್ನು ಹೇಳಬೇಕು. ಉಳಿದವರೆಲ್ಲರ ಹಾಗೆ ನನ್ನ ಅನಿಸಿಕೆಗಳನ್ನು ಬರೀ ಬ್ಲಾಗ್ ಪ್ರಪಂಚಕ್ಕೆ ಮಾತ್ರ ಸೀಮಿತವಾಗಿರಿಸದೇ ಮುಂದೆ ಆನ್‌ಲೈನ್ ಹಾಗೂ ಪ್ರಿಂಟ್ ಮಾಧ್ಯಮಗಳಲ್ಲೂ ಬರೆಯಬೇಕು ಎನ್ನುವುದು ಮುಂದಿನ ದಿನಗಳ ಸವಾಲು. ನನ್ನ ಬರಹಗಳು ಹೀಗೇ ಮುಂದುವರೆಯುವುದು ಖಂಡಿತವಾದರೂ ಮನದಲ್ಲಿ ವಿಹರಿಸುವ ಎಲ್ಲ ವಿಷಯಗಳನ್ನು ದಾಖಲಿಸಿ ಹೀಗೇ ಮುಂದುವರೆಸಿಕೊಂಡು ಹೋಗುವ ಛಲ, ಹಂಬಲ ಹೀಗೇ ಉಳಿಯಲಿ ಹಾಗೂ ಮುಂದುವರೆಯಲಿ ಎಂಬುದಷ್ಟೇ ನನ್ನ ಬೇಡಿಕೆ.

ನಿಮ್ಮೆಲ್ಲರ ಹಾರೈಕೆ, ಆಶಿರ್ವಾದ, ಕುಟುಕು, ಚಿಂತನೆ, ಅನುಭವಗಳು ನನ್ನೊಡನೆ ಸದಾ ಹೀಗೇ ಇರಲಿ, ಇನ್ನಷ್ಟು ಕನ್ನಡವನ್ನು ಓದಿ ಬರೆಯುವ ಚೈತನ್ಯ, ಹುರುಪು ನನ್ನಲ್ಲಿ ಹುಟ್ಟಲಿ!

7 comments:

  1. ಕಂಗ್ರಾಚುಲೇಷನ್ಸ್. ಮುಂದುವರೆಯಲಿ ಅಕ್ಷರ ಅಭಿಯಾನ. ಜೊತೆಗಿದ್ದೇವೆ... ನಾವೆಲ್ಲ ಸಹಚರರು!

    ReplyDelete
  2. ನೀವು ಬರೀತಾ ಇರಿ, ನಾವು ಓದ್ತಾ ಇರ್ತೀವಿ......
    ೨೦೦ರ ಮೈಲಿಗಲ್ಲನ್ನು ಮುಟ್ಟಿದ ಸಂದರ್ಭದಲ್ಲಿ ಶುಭಾಶಯಗಳು.

    ಸಂತೋಷ್

    ReplyDelete
  3. Anonymous2:04 PM

    ಅಂತರಂಗ ೨೦೦ - ಹಾರ್ದಿಕ ಅಭಿನಂದನೆಗಳು. ಅಬ್ಬಾ, ನನಗಂತೂ ಇಷ್ಟೆಲ್ಲಾ ಯಾರಾದರೂ ಹೇಗೆ ಬರೆಯುತ್ತಾರೆ ಎಂದು ಆಶ್ಚರ್ಯವಾಗುತ್ತದೆ. ಅಲ್ಲ, ನೀವು ಮೈಗಳ್ಳರ ಸಂಘಕ್ಕೆ ಮೆಂಬರಾಗ್ತೀನಿ ಅಂತ ಹೇಳಿ ಹೀಗೆ ಕೈ ಕೊಟ್ಟು ಬಿಡೋದೇ?

    ಅದಿರಲಿ, ನಾನಂದಿದ್ದು ಇನ್ನೂ ಮರೆತಿಲ್ವಾ? ಏನು ಅಂತ ನಿಮಗೆ ಗೊತ್ತು ಅಂತ ನನಗೂ ಗೊತ್ತು. :)

    ReplyDelete
  4. ಸುಪ್ತದೀಪ್ತಿ,
    ನಿಮ್ಮ ಹಾರೈಕೆ ಹಾಗೂ ಬೆಂಬಲ ಹೀಗೇ ಮುಂದುವರೆಯಲಿ, ಅಂತರಂಗ ಮುಂದಿನ ಅವತರಣಿಕೆಗಳು ನಿಮಗೆ ಬೇಸರ ತರಿಸದಿರಲಿ!

    ReplyDelete
  5. ಸಂತು,
    ನೀವ್ ಓದೋದ್ ಹೆಚ್ಚೋ ನಾನ್ ಬರೆಯೋದ್ ಹೆಚ್ಚೋ :-)
    ಧನ್ಯವಾದಗಳು.

    ReplyDelete
  6. sritri,
    ಮೈಗಳ್ಳ, ಅಳುಮುಂಜಿ - ಅಂತ ಏನೇನೋ ಬೈತೀರೇನ್ರಿ? ನೀವ್ ಹಿಂಗೇ ಮಾಡಿದ್ರೆ ಇನ್ನೊಂದ್ ನೂರು ಅಳುಮುಂಜಿ ಲೇಖನಗಳನ್ನು ಬರೆದುಬಿಟ್ಟೇನು! :-)

    ReplyDelete