Thursday, April 26, 2007

ತತ್ವಗಳು (ಥೂ ಹಾಳಾದೋವು...!)

ಡಿಸೆಂಬರ್ ತಿಂಗಳ ಒಂದು ದಿನ...ನಾನಿರೋದು ಆನವಟ್ಟಿಯಲ್ಲಾದ್ದರಿಂದ ವಿಂಟರ್ ಕೋಟಿನ ಅಗತ್ಯವಿಲ್ಲದೆ ಒಂದು ಸೊಗಸಾದ ಮುಂಜಾನೆಯ ವಾಕ್‌ನಲ್ಲಿ ಸಮಯವನ್ನು ಯಾವುದೇ ಸಂಕೋಲೆಗಳಿಲ್ಲದೇ ನನ್ನಷ್ಟಕ್ಕೆ ನಾನೇ ಕಳೆಯುವ ಒಂದು ಸಂಚು ಮನದಲ್ಲಿ ಮೂಡಿದ್ದೇ ತಡ ತಕ್ಷಣ ಡಾಕರ್ ಜೀನ್ಸು ಹಾಗೂ ಒಂದು ಟಿ ಶರ್ಟ್ ಏರಿಸಿ, ಸ್ಕೀಕರ್ ತೊಟ್ಟು ಮನೆಯಿಂದ ಹೊರಟೆ - ದಿನನಿತ್ಯದ ರೂಢಿಯಂತೆ ಶರ್ಟ್ ಅನ್ನು ಟಕ್ ಇನ್ ಮಾಡಬೇಕೋ ಬೇಡವೋ ಎನ್ನುವ ಹಂತದಲ್ಲಿ ಒಂದು ಕ್ಷಣದ ವಿಳಂಬವನ್ನು ಹೊರತು ಪಡಿಸಿದರೆ ಮತ್ತೆಲ್ಲ ಸಹಜವಾಗಿತ್ತು ಎನ್ನಬಹುದು, ಹತ್ತು-ಇಪ್ಪತ್ತು ವರ್ಷಗಳ ಹಿನ್ನೆಲೆಯಲ್ಲಿ ನೋಡಿದಾಗ ಬಹಳಷ್ಟು ಬದಲಾಗಿರಬಹುದು, ಆದರೆ ಮುಂಜಾನೆಯ ತಾಳದ ಮಟ್ಟು ಮಾತ್ರ ಇವತ್ತಿಗೂ ಬೇರೆಯೇನಾಗಿರಲಿಲ್ಲ.

ಅವೇ ಧೂಳು ತುಂಬಿದ ರಸ್ತೆಗಳು, ಊರಿನ ಉದಾಸೀನತೆಯ ಪ್ರತೀಕವೆಂಬಂತೆ ಹೊರಗೆ ಬರಲೋ ಬೇಡವೋ ಎಂದು ಮೋಡಗಳ ಮರೆಯಲ್ಲಿ ಆಗಾಗ್ಗೆ ಇಣುಕಿ ನೋಡುತ್ತಿದ್ದ ಸೂರ್ಯ...ಅಮೇರಿಕೆಯಲ್ಲಿ ದಿನಬೆಳಗಾದರೆ ಪ್ರಖರವಾಗಿ ಹಾಗೂ ವೇಗವಾಗಿ ಕೆಲಸಕ್ಕೆ ಬಂದು ಹಾಜರಾಗುವ ಸೂರ್ಯನಿಗೆ ಆನವಟ್ಟಿಯಲ್ಲಿ ಎದ್ದೇಳುವಾಗ ಮೈಗಳ್ಳತನವೇಕೆ ಎಂದು ಒಮ್ಮೆ ಅನ್ನಿಸಿದ್ದು ನಿಜ.

ಸರಿ, ಹೊರಡೋದೆಲ್ಲಿಗೆ? ಎನ್ನುವ ಪ್ರಶ್ನೆ ಎಷ್ಟು ಮುಂದೆ ಹಾಕುತ್ತಾ ಹೋದೆನೋ ಅಷ್ಟು ಮನದಲ್ಲಿ ದಟ್ಟವಾಗುತ್ತಾ ಬೆಳೆಯುತ್ತಾ ಹೋಗಿ ಉತ್ತರಿಸದೇ ಇದ್ದರೆ ತಲೆ ನೂರು ಹೋಳಾದೀತು ಎನ್ನುವ ಬೇತಾಳನ ರೂಪ ತಾಳಿಕೊಂಡಿತು, ಅದಕ್ಕುತ್ತರವೆನ್ನುವಂತೆ ಕಾಲುಗಳು ನಾನೋದಿದ ಹೈ ಸ್ಕೂಲಿನ ಕಡೆಗೆ ಚಲಿಸತೊಡಗಿದವು.

ಅದೇ ಊರು, ಕೆಲವರ ಮನೆ ಮುಂದೆ ಹೆಂಗಳೆಯರು ಬೇಗನೆದ್ದು ಬಾಗಿಲು ಸಾರಿಸಿ ರಂಗೋಲಿ ಇಡುವ ಪದ್ಧತಿಯನ್ನು ಇನ್ನೂ ಉಳಿಸಿಕೊಂಡಿದೆ, ಕೆಲವರ ಮನೆಯಲ್ಲಿ ಚೂರು-ಪಾರು ಸದ್ದುಗದ್ದಲ, ಇನ್ನು ಕೆಲವರ ಮನೆಯಲ್ಲಿ ನಿದ್ರಾ ದೇವತೆಯ ಮಡಿಲಿನಲ್ಲಿ ಸಿಹಿಕನಸಿನಲ್ಲಿ ತೇಲುತ್ತಿರುವವರು ಒಂದಿಷ್ಟು ಜನರಿದ್ದಿರಬಹುದು, ಆದರೆ ಮುಂಜಾನೆಯ ಔಟ್‌ಲುಕ್‌ನಲ್ಲಿ ನಮ್ಮೂರಂತೂ ಬದಲಾವಣೆಯಾಗಿಲ್ಲ ಎಂದುಕೊಳ್ಳುತ್ತಿರುವಾಗ ದೂರದಲ್ಲಿ ಯಾರದೋ ಒಬ್ಬರ ಮೊಬೈಲ್‌ಫೋನ್ ಧ್ವನಿ ನನ್ನ ಇಂದ್ರಿಯಗಳನ್ನು ಒಡನೆ ಜಾಗರೂಕಗೊಳಿಸುವಂತಾಯಿತು. ನಮ್ಮೂರಿನಲ್ಲಿಯೂ ಮೊಬೈಲ್ ಫೋನ್, ಎಟಿಎಮ್‌ಗಳು ಕೆಲಸ ಮಾಡುತ್ತವೆಯೇ ಎನ್ನುವ ಪ್ರಶ್ನೆಗೆ very good! ಎನ್ನುವ ಉತ್ತರ ಒಂದು ರೀತಿಯ ಖುಷಿಯನ್ನು ಬೆನ್ನುಹುರಿಯಿಂದ ಮೇಲೆ ಕಳಿಸತೊಡಗಿತು, ಅಥವಾ ಆ ಕಂಪನ ಆಗಷ್ಟೇ ಬೀಸಿದ ತಂಗಾಳಿಯ ಕೊಡುಗೆಯಾಗಿದ್ದಿರಲೂಬಹುದು.

ರಸ್ತೆಯ ಬದಿಯಲ್ಲಿ ನೋಡಿದೆ, ನಾನು ಶಾಲೆಗೆ ಹೋಗುತ್ತಿದ್ದಾಗ ಇದ್ದ ಮನೆಗಳು ಇನ್ನೂ ಹಾಗೇ ಇವೆ, ಕೆಲವೊಂದಿಷ್ಟಕ್ಕೆ ಸುಣ್ಣಬಣ್ಣ ತಾಗಿದ್ದಿರಬಹುದು, ಅವರವರ ಮನೆಯಲ್ಲಿ ನಡೆದ ಮದುವೆಯೋ ಮುಂಜಿಯ ಪ್ರತೀಕವಾಗಿ ಎನ್ನುವುದನ್ನು ಬಿಟ್ಟರೆ ಮಿಕ್ಕೆಲ್ಲವೂ ಬೆಳಗ್ಗೆ ಎದ್ದು ಮುಖ ತೊಳೆಯದೇ ಇಡೀ ದಿನ ಜೊಲ್ಲಡರಿದ ಮುಸುಡಿಯಲ್ಲಿ ಇದ್ದ ರೋಗಿಷ್ಟರಂತೆ ಬಿದ್ದುಕೊಂಡಿದ್ದವು - absolutely no maintenance - ಛೇ ಎಂದು ನನ್ನಷ್ಟಕ್ಕೆ ನಾನು ಗಟ್ಟಿಯಾಗಿ ಹೇಳಿಕೊಂಡೆ.

ಸುಲಭ, ಬಹಳ ಸುಲಭ - ಇಲ್ಲೆಲ್ಲಾದರೂ ಒಂದಿಷ್ಟು ಜಮೀನು-ತೋಟವನ್ನು ತೆಗೆದುಕೊಳ್ಳೋದು, ಅದರ ಸಾಗುವಳಿ, ಕೃಷಿಯಲ್ಲಿ ಬದುಕನ್ನು ಸವೆಸೋದು, ಬಂದ ಲಾಭಾಂಶದಲ್ಲಿ ಹಾಗೂ ಇದ್ದಿರೋ ಇಡುಗಂಟಿನಲ್ಲಿ ಜೀವನವನ್ನು ತಳ್ಳೋದು ಎಂದು ಸರಳವಾಗಿ ಒಂದೇ ಸಾಲಿನಲ್ಲಿ ಬದುಕಿನ ಕಥೆಯನ್ನು ಬರೆಯಬಲ್ಲ ನನಗೆ ಆ ಸುಂದರವಾದ ಮುಂಜಾನೆಯ ನಡಿಗೆ, ನಮ್ಮೂರಿನ ನಿರ್ಜೀವ ರಸ್ತೆಗಳ ಪಕ್ಕದಲ್ಲಿ ತೊಪ್ಪೆಗಳಂತೆ ಬಿದ್ದುಕೊಂಡಿರುವ ಮನೆಗಳು, ಅವುಗಳಲ್ಲಿ ಜೀವಂತವಾಗಿಯೋ ಅಥವಾ ನಿದ್ರೆಯಲ್ಲಿಯೋ (what difference does it make?) ತಮ್ಮದೇ ಲೋಕದಲ್ಲಿ ಪವಡಿಸಿದ ಜನರು, ಒಂದು ಕಾಲದಲ್ಲಿ ಕಾಡು, ಜೀವನಾಡಿ, ಸಹಜವಾಗಿ ಬೆಳೆದ ಶ್ರೀ ಗಂಧದ ಮರಗಳನ್ನು ರಾತ್ರೋ ರಾತ್ರಿ ಸಾಗಿಸಿ ಕಾಸುಮಾಡಿಕೊಂಡ ತಾಯ್ ಗಂಡರು, ಅನಾವಶ್ಯಕವಾಗಿ ಹಾರ್ನ್ ಬಾರಿಸಿಕೊಂಡು ಹೊಂಡ ತುಂಬಿದ ರಸ್ತೆಗಳಲ್ಲಿ ವೇಗವಾಗಿ (ಅದೂ ಘಂಟೆಗೆ ನಲವತ್ತು ಐವತ್ತು ಕಿಲೋ ಮೀಟರ್) ಧೂಳೆಬ್ಬಿಸಿ ಕುಲುಕುತ್ತಾ ಸಾಗುವ ತಗಡು ಬಸ್ಸುಗಳು, ಇನ್ನೂ ಏನೇನೋ ಇಲ್ಲಿ ಬರೆಯಲಾಗದವೆಲ್ಲ ನೆನಪಿಗೆ ಬಂದಿದ್ದೇ ತಡ ಕ್ಯಾಕ್ ಥೂ ಎಂದು ಕ್ಯಾಕರಿಸಿ ನಾನು ರಸ್ತೆಯ ಬದಿಗೆ ಉಗಿಯುವಂತಾಯಿತು.

Of course, ನಾನು ವೇಗವಾಗೇ ನಡೆಯೋದು ಎಲ್ಲಿ ಹೊರಟರೂ, ಆದರೆ ಇವತ್ತೇಕೆ ಆ ವೇಗ ಎಂದು ಪ್ರಶ್ನೆ ಹುಟ್ಟಿದ್ದೇ ತಡ ಕಾಲುಗಳು ನಿಧಾನವಾಗಿ ಹೋದವು, ತಲೆ ಇನ್ನೂ ಅದರ ವೇಗದಲ್ಲೇ ಬಂದ ಆಹಾರವನ್ನೆಲ್ಲ ಜೀರ್ಣಿಸಿಕೊಳ್ಳತೊಡಗಿತ್ತು.

ನಾನು ಹುಟ್ಟಿದ ಊರು ಯಾರಿಗೂ ಬೇಡ - ನನ್ನ ಹೆತ್ತವರು ಇನ್ನಷ್ಟು ದಿನ ಅಲ್ಲಿ ಇರೋದಿಲ್ಲ, ನನ್ನ ಒಡಹುಟ್ಟಿದವರು ಈಗಾಗಲೇ ಎಲ್ಲೆಲ್ಲೋ ತಮ್ಮನ್ನು ಕಳೆದುಕೊಂಡಿದ್ದಿರಬಹುದು, ನನಗೆ ಬೇಕಾದವರಿಗೆ ನಮ್ಮೂರಿನಲ್ಲಿ ನೆಲೆಸಬಹುದಾದ ಯಾವ ಅಸ್ಥೆಯೂ ಇಲ್ಲ, ಬರೀ ನನಗೊಬ್ಬನಿಗೇ ಆ ಮೋಹ, ಅದೆಲ್ಲಿಂದ ಹುಟ್ಟಿಕೊಳ್ಳುತ್ತೋ ಆ ರಾಗ ಯಾರಿಗೆ ಗೊತ್ತು?

ದೂರದಲ್ಲೆಲ್ಲೋ ಒಂದು ಕರಿನಾಯಿ ಬೊಗಳಿಕೊಂಡು ಓಡಿ ಬರತೊಡಗುತ್ತೆ, ಅದು ನನ್ನನ್ನು ಸಮೀಪಿಸುತ್ತಿರುವಂತೆ ಕಾಣಿಸುತ್ತೆ, ಬೀದಿನಾಯಿಯ ರಂಪಕ್ಕೆ ಹೆದರಿ ಓಡಿಹೋದರೆ ಏನಾಗಬಹುದೆಂಬ ಕಲ್ಪನೆ ನನಗಿರೋದರಿಂದ ನನ್ನ ಮನದ ಉಲ್ಬಣಗಳನ್ನು ಇದ್ದರೂ ಇರದಿದ್ದ ಹಾಗೆ ಮುಚ್ಚಿ ನನ್ನ ನಡಿಗೆಯನ್ನು ಹಾಗೆ ಮುಂದುವರಿಸುತ್ತೇನೆ, ನಾನು ಅರೆಕ್ಷಣದಲ್ಲಿ ಒಂದೇ ಕಾಲಿಗೆ ಬುದ್ಧಿಹೇಳಬಹುದು ಅಥವಾ ನಾಯಿಯನ್ನು ಝಾಡಿಸಿ ಒದೆಯಬಹುದು ಎನ್ನುವ ತತ್ವವನ್ನು ದೂರದಲ್ಲಿ ಹೊಂಚಿಹಾಕುತ್ತೇನೆ. 'ಇವನೂ ನಮ್ಮವರೊಳಗಿನವ...' ಎಂದು ನಾಯಿ ಹತ್ತಿರ ಬಂದಂತೆ ಮಾಡಿ ಹಾಗೇ ದೂರ ಹೋಗತೊಡಗುತ್ತದೆ, ನಾನು ಅದ್ಯಾವುದೋ ಕಾರಣಕ್ಕೆ ಎದೆಯ ಮೇಲೆ ಕೈ ಇಟ್ಟರೆ ಒಳಗಿಂದ ಕುಟ್, ಕುಟ್ ಶಬ್ದ ಕೇಳಿ ಆಶ್ಚರ್ಯವಾಗುತ್ತದೆ, ಅದರ ಹಿಂದೆ ತುಟಿಗಳನ್ನು ಬೇರ್ಪಡಿಸಲಾಗದ ಒಂದು ನಗೆ ಹುಟ್ಟಿ ಹಾಗೇ ಮಾಯವಾಗುತ್ತದೆ.

ಒಂದೆರಡು ಕಿಲೋಮೀಟರುಗಳನ್ನು ನಡೆದು ಹಿಂದಕ್ಕೆ ಬರುವಾಗ ಒಂದು ಮಾತ್ರ ಪಕ್ಕವಾಗುತ್ತದೆ - ಇಲ್ಲಿ ಮನೆಯನ್ನು ಕಟ್ಟಲಾರೆ, ನಾನಿರಲಾರೆ - ನಮ್ಮವರಿಲ್ಲದಿದ್ದ ಮೇಲೆ ನಾನೊಬ್ಬನೇಕೆ ಇಲ್ಲಿರಲಿ? ಯಾವ ರಾಗದ ಮೋಡಿಗೋ ಸಿಲುಕಿ ಪಡುವಾರಳ್ಳಿ ಪಾಂಡವರು ಸಿನಿಮಾದ 'ಜನ್ಮ ನೀಡಿದ ಈ ಮಣ್ಣನು ನಾ ಹೇಗೆ ತಾನೆ ತೊರೆಯಲಿ' ಹಾಡು ಕೇವಲ ಶಿಳ್ಳೆಯ (whistle) ರೂಪದಲ್ಲಿ ಮಾತ್ರ ಹೊರಗೆ ಬಂದು ಸ್ವಲ್ಪ ಹಿಂದಷ್ಟೇ ಬೇರ್ಪಡದೇ ನಕ್ಕ ತುಟಿಗಳ ಮಧ್ಯದ ಸಣ್ಣ ರಂಧ್ರದಿಂದ ಬಿಸಿಯ ಹವೆಯಾಗಿ ಹೊರಗೆ ಸೇರಿಹೋಗುತ್ತದೆ, ಅದರ ಹಿಂದಿನ ಧ್ವನಿ ನನ್ನೊಳಗೇ ಉಳಿದುಹೋಗುತ್ತದೆ.

ಮನೆ ಬಾಗಿಲನ್ನು ಹೊಕ್ಕುತ್ತಿದ್ದಂತೆ 'ಏನೋ ಎಲ್ಲಿ ಹೋಗಿದ್ಯೋ?' ಎನ್ನುವ ನಮ್ಮ ಮನೆಯವರಿಗೆ ಯಾವುದೇ ಉತ್ತರ ಕೊಡಲು ಅಸಹಾಯಕನಾಗಿ ಹೋಗುತ್ತೇನೆ, ಹೌದು, ಈ ಬಾರಿ ಇಲ್ಲಿಯವರೆಗೆ ನಾನು ಎಲ್ಲಿ ಹೋಗಿದ್ದೆ ಎನ್ನುವುದನ್ನು ಹೇಗೆ ಹೇಳಲಿ? (ಅಮೇರಿಕೆಯಲ್ಲಿನ ಟ್ರೆಡ್‌ಮಿಲ್ಲೇ ಎಷ್ಟೋ ವಾಸಿ, ಎಷ್ಟು ಮೈಲಿ ನಡೆದರೂ ನಾನೆಲ್ಲಿಗೂ ಹೋಗೋದಿಲ್ಲ, ಹಾಗೆ ಯಾರು ಪ್ರಶ್ನೆಯನ್ನೂ ಕೇಳೋದಿಲ್ಲ!)

***
'ಈ ಹಾಳಾದ್ ಬೆಂಗಳೂರಿನಲ್ಲಿ ಬದುಕೋಕ್ ಆಗೋದಿಲ್ಲಪಾ, ಎಷ್ಟು ದುಡ್ಡಿದ್ದರೂ ಸಾಕಾಗೋದಿಲ್ಲ ಈ ಊರ್ನಲ್ಲಿ' ಎಂದು ನಾನೊಬ್ಬನೇ ಅಲ್ಲ, ಬೇಕಾದಷ್ಟು ಜನ ಹೇಳ್ತಾರೆ ಅನ್ನೋದು ನನಗೆ ಚೆನ್ನಾಗಿ ಗೊತ್ತು. ನನ್ನ ಇಮಿಗ್ರೇಷನ್ ಲಾಯರ್ರು, ಪೈನಾನ್ಷಿಯಲ್ ಅಡ್ವೈಸರ್ರು ಇಬ್ರೂ 'ಇನ್ನೇನು ೨೦೦೭ ಬಂತಲ್ಲಾ, ಅಮೇರಿಕದ ಸಿಟಿಜನ್ ಆಗಿಬಿಡು!' ಅಂತ ಸಲೀಸಾಗಿ ಹೇಳ್ತಾ ಇರ್ತಾರೆ...ಈಗಾಗ್ಲೇ ಅಮೇರಿಕದಲ್ಲಿ ಪರಕೀಯನಾಗಿದ್ದೀನಿ, ಇನ್ನು ನನ್ನ ಪೂರ್ಣ ಐಡೆಂಟಿಟಿಯನ್ನು ಕಳೆದುಕೊಂಡು "ನಮ್ಮ" ದೇಶದಲ್ಲಿ ಪರದೇಶಿಯಾಗಿ ಹೋಗಲೇ? ಎಂದು ಮನಸ್ಸು ಮಮ್ಮಲಮರುಗತೊಡಗುತ್ತೆ. ಎಷ್ಟೋ ಜನ ಇಲ್ಲಿ ಬಂದು ದಶಕಗಟ್ಟಲೆ ಇದ್ದೋರು ಖುಷಿಯಾಗಿ ವಾಪ್ಸು ಹೋಗಿ ನೆಲೆಸ್ತಾ ಇಲ್ಲವೇ? ಅನ್ನೋ ಪ್ರಶ್ನೆ ಬೆನ್ನ ಹಿಂದೆ ಬರುತ್ತೆ, ಅವರೆಲ್ಲ ಎಲ್ಲಿಂದ ಎಲ್ಲಿಗ್ ಹೋಗ್ತಾರೋ? ಆದ್ರೆ ನಾನೆಲ್ಲಿಗೆ ಹೋಗ್ಲಿ?

***

ಎಲ್ಲೂ ನೆಲೆ ನಿಲ್ಲಬಾರ್ದು ಅಂತ ಅಂದ್‌ಕೊಂಡು ಬದುಕೋಕ್ ಆಗೋದಿಲ್ಲ, ಹಾಗೇ ದಿನ ಬಿಟ್ಟು ದಿನ ಬರೋ ಕಮಿಟ್‌ಮೆಂಟ್‌ಗಳೆಲ್ಲ ಒಂದು ರೀತಿ ಕಂಪದ ಭೂಮಿಯಲ್ಲಿ ನಾವ್ ಮಾಡೋ ಒದ್ದಾಟವಷ್ಟೇ, ಏನ್ ಹಾರಾಡಿದ್ರೂ ಹುದುಗಿಕೊಳ್ಳೋ ಆಳ ಕಡಿಮೆ ಏನ್ ಆಗೋದಿಲ್ಲ. ನಾಳಿನ ನಾಳೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಲಿ ಎಂದು ಇಂದಿನ ಇಂದನ್ನು ಕಡೆಗಣಿಸಿಯೋ ಅಥವಾ ಹೆಚ್ಚು ಬೆಲೆಕೊಡದೆಯೋ ಬದುಕೋದೊಂದು ತತ್ವ, ಇಂದಿನ ಇಂದೇ ದೊಡ್ದು, ನಾಳಿನ ನಾಳೆಗಳನ್ನು ನೋಡ್‌ಕೊಳ್ಳೋಣ ಎನ್ನೋದು ಇನ್ನೊಂದು ತತ್ವಾ. ದಿನದ ಎಂಟು-ಹತ್ತು ಘಂಟೆ ಮ್ಯಾನೇಜ್‌ಮೆಂಟಿನ ಪ್ರಾಸೆಸ್ಸುಗಳು, ಮಾಡೋ ಪ್ರಾಜೆಕ್ಟುಗಳು, ದಿನಚರಿ-ಸ್ಕೆಡ್ಯೂಲರ್‌ಗಳು ಒಂದು ರೀತಿ ಜೀವಾ ತಿಂತಾವೆ; ಮನೆಗೆ ಬಂದು ಕನ್ನಡದ ತಿಳಿಸಾರು-ಅನ್ನ-ಹುಳಿ-ಮೊಸರು-ಉಪ್ಪಿನಕಾಯಿ-ಹಪ್ಪಳದ ಬದುಕು (ಜೊತೆಯಲ್ಲಿ ಬ್ರೆಡ್ಡೂ, ಕಾರ್ನ್‌ಪ್ಲೇಕ್ಸೂ ಸೇರಿ) ಮತ್ತೊಂದು ರೀತಿ ಜೀವ(ನ)ವನ್ನ ಪೋಷಿಸ್ತಾವೆ. 'ಎಲ್ಲೂ ನಿಲ್ ಬೇಡ, ಮನೆ ಕಟ್ ಬೇಡ, ಅನಿಕೇತನವಾಗಿರೂ...' ಅನ್ನೋದ್ ಒಂದು ತತ್ವ; ಸೊಗಸಾಗ್ ಬದುಕ್‌ಬೇಕು, ಎಲ್ಲ ಐಶಾರಾಮ ಇರಬೇಕು (ಕಂಡಿದ್ದೆಲ್ಲ ಬೇಕು ಕುಂಡೇ ಭಟ್ಟನಿಗೆ ಅಂತಾರಲ್ಲ ಹಾಗೆ), ಚೆನ್ನಾಗ್ ದುಡ್ ಮಾಡ್‌ಬೇಕು ಅನ್ನೋದ್ ಮತ್ತೊಂದ್ ತತ್ವಾ. ಆನವಟ್ಟಿಯ ಮುಂಜಾನೆಯಲ್ಲಿ ದಿಢೀರನೆ ಬಂದು ಎದೆಬಡಿತವನ್ನು ಹೆಚ್ಚಿಸೋ ಕಪ್ಪು ನಾಯಿಗಳು ಎಲ್ಲಿ ಹೋದರಲ್ಲಿ ಒಂದಲ್ಲ ಒಂದ್ ಅವತಾರವನ್ನು ತಾಳಿಕೊಂಡು ಬಂದೇ ಬರ್ತಾವೆ, ಅಂತೋವ್ ಬಂದ್ರೂ ಧೃತಿಗೆಡದೆ ಏನೂ ಆಗದೇ ಇರೋಹಂಗೆ ಸಹಜತೆಗೆ ಸನ್ನಿಹಿತವಾಗಿ ಬದುಕು ಸಾಗ್ಸೋದೇ ಒಂದು ದೊಡ್ಡ ಸವಾಲು.

ಅಮೇರಿಕ ಬೇಡ, ಆನ್ವಟ್ಟಿ ಬೇಡ, ಯಾವೂರೂ ಬೇಡಾ ಅನ್ನೋ ಸ್ಥಿತಿಗೆ ನಾನ್ ಬರಬೇಕು ಅಂದ್ರೆ ಇನ್ನೊಂದು ಮಿಲಿಯನ್ (ಹತ್ತು ಲಕ್ಷ) ಜನ್ಮ ಎತ್ತಿ ಬರಬೇಕು ಅಂತ ಈಗಾಗ್ಲೇ ಖಾತ್ರಿ ಆಗಿ ಹೋಗಿರೋದ್ರಿಂದ್ಲೇ ಧ್ಯಾನಾ-ಪಾನಕ್ಕೆಲ್ಲ ಗುಡ್‌ಬೈ ಹೇಳಿ ಬಾಳಾ ವರ್ಷಗಳಾಗಿ ಹೋಯ್ತು! (ಕಣ್ ಮುಚ್‌ಗಂಡ್ ಕೂತ್ರೂ ಒಂದರ ಮೇಲೊಂದಾಗಿ ಬರೋ ಯೋಚ್ನೆಗಳನ್ನ ಓಡ್ಸೋದಕ್ಕೆ ಏನೂ ಮಾಡ್ದೇ ಸುಮ್ನೇ ಕೂತಿರೋದು ಅಂದ್ರೆ?!)

***

I think, life has to move on, whether or not, one knows where it is heading, or what difference does it make?

11 comments:

  1. ನೆಲೆ ನಿಲ್ಲುವ ಪ್ರಶ್ನೆ ಬಹಳ ಮೂಲಭೂತವಾದದ್ದು, ಎಲ್ಲಿ ಅನ್ನುವ ಪ್ರಶ್ನೆ ಸೂಕ್ಷ್ಮವಾದದ್ದು. ನಿಜ, ಹುಟ್ಟಿ ಬೆಳೆದ ಊರಲ್ಲಿ ನಮಗಾರೂ ಇಲ್ಲದಿದ್ದರೆ ಅಲ್ಲಿ ಹೋಗಿ ಮಾಡೋದೇನು? ನಮ್ಮ ಬಾಳನ್ನು ಜೊತೆಯಾದವರಿಗೆ ನಮ್ಮ ಇಷ್ಟಾನಿಷ್ಟಗಳು ಹಿಡಿಸದೇ ಹೋದರೆ ಮಾಡೋದೇನು? ಇವೆಲ್ಲ ಉತ್ತರಿಸಲಾಗದ ಪ್ರಶ್ನೆಗಳು. ಆದರೂ.... ಊರಿನ ಸೆಳೆತ ಹೋಗುವುದಿಲ್ಲ.

    ಧೂಳೆಬ್ಬಿಸುತ್ತಾ "ಹಾರಿ"ಹೋಗುವ ಬಸ್ಸು ಇಪ್ಪತ್ತು ವರ್ಷ ಹಿಂದೆಯೂ ಇತ್ತು. ಬೊಗಳುವ ಕರಿನಾಯಿಯೂ ಇಪ್ಪತ್ತು ವರ್ಷ ಹಿಂದೆ ಇತ್ತು. ಮಸುಕುಗಟ್ಟಿದ ಮೂಕ ಮನೆಗಳೂ ಅನಾದಿಯಿಂದಲೂ ಇದ್ದವು. ನಮ್ಮ ಬಾಲ್ಯದ ತುಣುಕುಗಳೇ ಅವೆಲ್ಲ. ಅವನ್ನೆಲ್ಲ ಬಿಟ್ಟು ನಾವು ಬೆಳೆದಿಲ್ಲ. ಈಗ ಅವು ವಿಭಿನ್ನವಾಗಿ ಕಂಡರೆ ನಮ್ಮ ನೋಟವೇ ಬದಲಾಗಿದೆ, ಅಲ್ಲವೇ? ನಮ್ಮ ಇಲ್ಲಿಯ ಬದುಕು ನಮ್ಮನ್ನು ಈ ಚಿಂತನೆಗೆ ಹಚ್ಚಿದವೇ? ಅಥವಾ ಎಲ್ಲಿದ್ದರೂ ನಾವು ಈ ಚಿಂತನೆಗೆ ಒಂದೊಮ್ಮೆ ಬಂದೇ ಬರುತ್ತಿದ್ದೆವೆ? ಗೊತ್ತಿಲ್ಲ. ಉತ್ತರ ಸಿಗುತ್ತಿಲ್ಲ. ಇದೇ ಬದುಕು- ಸಧ್ಯಕ್ಕೆ.

    ReplyDelete
  2. ನಮಸ್ಕಾರ,

    ನಿಮ್ಮ ಬ್ಲಾಗಗಳಿಗೆ ಮೊದಲ ಭೇಟಿ. ಎಲ್ಲ ಬ್ಲಾಗಗಳು ಚೆನ್ನಾಗಿವೆ. ಅಂತರಂಗ ತುಂಬಾ ಚೆನ್ನಾಗಿದೆ.
    ಸುಮಾರು ಬರಹಗಳನ್ನ ಓದಿದೆ, ಸುಮ್ನೆ ಓದಿಸಿಕೊಂಡು ಹೋದವು.

    ReplyDelete
  3. This comment has been removed by the author.

    ReplyDelete
  4. Saw Mira Nair's 'The Namesake' last week.. Saw 'My Son The Fanatic' yesterday.. Read many stories on NRIs from Jhumpa Lahiri.. Now this blog... all speak of the same confusion.. inherent probably in every NRI.. Leaving one's roots is painful.. but unavoidable...?

    ReplyDelete
  5. ಕೆಲವೊಂದು ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿದುಬಿಡುತ್ತೆ..
    ಆ ಹಾಡು 'ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕ್ಕೆ' ಅದಕ್ಕೆ ಎಕೋ ತುಂಬಾ ಇಷ್ಟವಾಗುತ್ತೆ..

    ಅಂದಾಗೆ ನಮ್ಮ ಮೇಷ್ಟ್ರುದು ಎನು ಅಭಿಪ್ರಾಯ ಇದರ ಬಗ್ಗೆ :)

    ReplyDelete
  6. ಸುಪ್ತದೀಪ್ತಿ ಅವರೇ,

    ಊರಿನ ಸೆಳೆತ ಹೋಗೋದಿಲ್ಲ, ಅದು ಯಾವತ್ತಿದ್ದರೂ ಮನದಲ್ಲಿ ಜಾಗೃತವಾಗೇ ಇರುತ್ತದೆ. ಊರೂ ಬದಲಾಗಿದೆ, ನಾವೂ ಬದಲಾಗಿದ್ದೇವೆ...ನೀವು ಹೇಳಿದ ಹಾಗೆ 'ಇದೇ ಬದುಕು' ಸದ್ಯಕ್ಕೆ ಎನ್ನುವುದು ಅಕ್ಷರಷಃ ಸತ್ಯ!

    ReplyDelete
  7. ಮನಸ್ವಿನಿಯವರೇ,

    ಇದು ನಿಮ್ಮ ಮೊದಲ ಭೇಟಿ ಎಂದು ಗೊತ್ತಿರಲಿಲ್ಲ, 'ಅಂತರಂಗ'ಕ್ಕೆ ಸ್ವಾಗತ - ಹಿಂದೆ ನಿಮ್ಮನ್ನು ನಾನು 'ಮನಸ್ವಾಮಿ' ಎಂದು ಎಲ್ಲೋ ಸಂಬೋಧಿಸದ ಹಾಗೆ ನೆನಪು!

    ಹೀಗೆ ಬಂದು ಹೋಗುತ್ತಿರಿ.

    ReplyDelete
  8. ಶ್ರೀ,

    ಹೌದು, ಅನಿವಾಸಿಗಳ ತುಮುಲಗಳಲ್ಲಿ ಹೀಗೆ ಸಾಕಷ್ಟು ಪ್ರಕಟವಾಗಿದೆ. 'painful' ಏನೋ ಸರಿ, ಆದರೆ 'unavoidable' ಹೌದೋ ಅಲ್ಲವೋ ಎಂಬುದು ಚಿಂತಿಸಬೇಕಾದ ವಿಚಾರ!

    ReplyDelete
  9. ಶ್ರೀ,

    ಹೌದು, ಅನಿವಾಸಿಗಳ ತುಮುಲಗಳಲ್ಲಿ ಹೀಗೆ ಸಾಕಷ್ಟು ಪ್ರಕಟವಾಗಿದೆ. 'painful' ಏನೋ ಸರಿ, ಆದರೆ 'unavoidable' ಹೌದೋ ಅಲ್ಲವೋ ಎಂಬುದು ಚಿಂತಿಸಬೇಕಾದ ವಿಚಾರ!

    ReplyDelete
  10. ಶಿವಣ್ಣಾ,

    ನಮ್ ಮೇಷ್ಟ್ರು 'ಅನಿವಾಸಿ'ಗಳ್ ಬಗ್ಗೆ ಬೈತಾನೇ ಇರ್ತಾರೆ, ಅವರ ಪ್ರಕಾರ ಅನಿವಾಸಿಗಳೆಲ್ಲ ದೇಶಭ್ರಷ್ಟರು, ಒಂದ್ ಸರ್ತಿ ದೇಶಾ ಬಿಟ್ಟೋರನ್ನು ಇನ್ನೊಂದ್ ಸಾರಿ ಗಡೀ ಒಳಗೆ ಸೇರಿಸ್ ಬಾರ್ದು ಅನ್ನೋ ಕ್ಯಾಷ್ಟ್ರೋ ನಿಯಮದವರು!

    ನೀವೇನಂತೀರಿ?

    ReplyDelete