Thursday, October 12, 2006

ಬಸಯ್ಯ್ ಮೇಷ್ಟ್ರು ಮಗಳು

ಪೈಪೋಟಿ ಅನ್ನೋದು ಎಲ್ಲಿ ಶುರುವಾಗಿತ್ತು ನನ್ನಲ್ಲಿ ಅನ್ನೋದನ್ನ ಯೋಚಿಸಿಕೊಂಡು ತಲೆ ಕೆರೆದುಕೊಳ್ಳುತ್ತಾ ಇದ್ದಂತೆ ನಾನು ಹತ್ತನೇ ತರಗತಿಯಲ್ಲಿದ್ದಾಗಿನ ಒಂದು ಘಟನೆ ತಟ್ಟನೆ ನೆನಪಿಗೆ ಬಂತು, ಆ ಘಟನೆಯ ಬೆನ್ನಿಗೆ ಬಂದ ಹಲವಾರು ಉಪಘಟನೆಗಳ ಗುಂಗಿಗೆ ಕಾರಿನಲ್ಲಿ ಕೂತಿದ್ದವನು ಕಾರ್‍‌ಟಾಕ್ ಕೇಳಿ ನಗುತ್ತಿರುವವರ ಹಾಗೆ ನನ್ನಷ್ಟಕ್ಕೆ ನಾನೆ ಜೋರಾಗಿ ನಕ್ಕು ಬಿಟ್ಟೆ, ಹಾಗೆ ನಕ್ಕಿದ್ದನ್ನು ಕಂಡು/ಕೇಳಿ ಇನ್ನಷ್ಟು ನಗು ಉಕ್ಕಿಬಂತು, ಸದ್ಯ ಅಕ್ಕಪಕ್ಕದ ಕಾರಿನಲ್ಲಿ ಯಾರೂ ನೋಡುತ್ತಿಲ್ಲವಲ್ಲ ಎಂದು ಒಮ್ಮೆ ಸಮಾಧಾನವಾಯಿತು!

ಆಗೆಲ್ಲ ದಿನವಿಡೀ ಕ್ರಿಕೇಟ್ ಆಡೋ ಸಂಭ್ರಮ, ಜೊತೆಯಲ್ಲಿ ಗೋಲಿ, ಬುಗುರಿ, ಚಿಣ್ಣಿದಾಂಡು ಹೀಗೆ ಆಟಗಳ ಮೇಲೆ ಆಟಗಳ ಸುರಿಮಳೆ ಒಂದೋ ಎರಡೋ. ಹೀಗೆ ಹೆಚ್ಚಿನ ದಿನಗಳೆಲ್ಲ ಶಾಲೆಗೆ ಹೋಗೋದು, ಪಾಠ ಮುಗಿಸಿ ಬಂದ ಮೇಲೆ ಆಟವಾಡೋದು, ಸಣ್ಣಪುಟ್ಟ ಮನೆಕೆಲಸ ಮಾಡಿ ರಾತ್ರಿ ಒಂಭತ್ತು ಘಂಟೆಯ ಹೊತ್ತಿಗೆ ನಿದ್ರಾದೇವಿಗೆ ಶರಣಾಗಿ ಸುಖನಿದ್ರೆಗೆ ಜಾರುವ ದಿನಗಳವು. ಯಾರಿಗುಂಟು ಯಾರಿಗಿಲ್ಲ ಅನ್ನೋ ಭಾಗ್ಯದ ಉತ್ತುಂಗದಲ್ಲಿರುವಾಗ ನಾನು ಹತ್ತನೇ ತರಗತಿಯ ಮೆಟ್ಟಿಲನ್ನೇರಿದ್ದೆ. ಅಲ್ಲಿಂದ ಶುರುವಾಯ್ತು ನೋಡಿ, ಬಿಡುವು ಸಿಕ್ಕಾಗೆಲ್ಲ 'ಓದಿಕೋ' ಎಂದು ಮೇಲಿನವರು ಮಾಡುವ ಆಜ್ಞೆ. ನನಗಂತೂ ಈ ಹತ್ತನೇ ತರಗತಿಯೊಂದು ಎಷ್ಟು ಬೇಗ ಮುಗಿಸಿದರೆ ಅಷ್ಟು ಸಾಕು ಎನ್ನುವಂತಾಗಿತ್ತು, ಹತ್ತನೇ ತರಗತಿಯ ನಂತರದ ವರ್ಷಗಳು ಬಹಳ ಒಳ್ಳೆಯವು ಎನ್ನುವ ಹುಂಬ ಕಲ್ಪನೆ ಬೇರೆ, ಅದು ಬೇರೆ ವಿಷಯ. ನಾನು ಒಂದರಿಂದ ಒಂಭತ್ತರವರೆಗೆ ಓದಿದ್ದಕ್ಕಿಂತ ಹೆಚ್ಚು ಹತ್ತನೇ ತರಗತಿಯಲ್ಲಿದ್ದಾಗಲೇ ಓದಿದ್ದು ಎನ್ನಬಹುದು. ಹಾಗಂತ ನನಗೆ ಯಾವ ವರ್ಷವು ಕಡಿಮೆ ಅಂಕಗಳು ಬಂದಿವೆ ಎಂದು ಅನ್ನಿಸಿಯೇ ಇಲ್ಲ, ಓದದಿದ್ದರೂ ಅದು ಹೇಗೋ ಮಾಡಿ ಒಳ್ಳೆಯ ಅಂಕಗಳು ಪ್ರತಿ ಪರೀಕ್ಷೆಯಲ್ಲಿಯೂ ಬರುತ್ತಿದ್ದವು!

ನಾನು ಎಷ್ಟೇ ಸಮಜಾಯಿಷಿ ಹೇಳಿದರು ನಮ್ಮ ಮನೆಯಲ್ಲಿ ಬಿಡಲೊಲ್ಲರು, ಅವೇ ಪಾಠಗಳನ್ನು ರಿವಿಜನ್ ಮಾಡುವಂತೆ ಎಲ್ಲರದೂ ಒಂದೇ ಕಾಟ ಶುರುವಾಗಿತ್ತು, ನನ್ನ ನಿದ್ರೆಗೆ ಸಂಚಕಾರ ಬಂದಿತ್ತು. ಸಂಜೆ ಏಳು ಘಂಟೆಗೆ ಆರಂಭವಾಗಿ ಒಂಭತ್ತು ವರೆಗೆ ಫಸ್ಟ್ ಶೋ ಸಿನಿಮಾ ಬಿಡುವ ಹೊತ್ತಿಗೆಲ್ಲಾ ಗೊರಕೆ ಹೊಡೆಯುತ್ತಿದ್ದ ನನಗೆ, ಹತ್ತು ಘಂಟೆಯ ಎರಡನೇ ಶೋ ಸಿನಿಮಾ ಅರಂಭವಾದರೂ ಮಲಗಬಾರದು ಎನ್ನುವ ಕಾಟ ಬೇರೆ. ಇವರ ಉಪಟಳ ಏನೇ ಇದ್ದರೂ ನಿದ್ರಾದೇವಿ ಯಾವಾಗಲೂ ನನ್ನ ಪರವಾದ್ದರಿಂದ ನಾನು ಹೆಚ್ಚೆಂದರೆ ಹತ್ತೂವರೆಗೆಲ್ಲ ನಿದ್ರೆಗೆ ಹೋಗುತ್ತಿದ್ದ ದಿನಗಳು ನನಗೆ ಇನ್ನೂ ಚೆನ್ನಾಗಿ ನೆನಪಿವೆ.

ನಮ್ಮ ಮನೆಯ ಹಿಂದಿನ ಬೀದಿಯಲ್ಲಿ ಟಿಸಿಎಚ್ ಕಾಲೇಜಿನ ಕನ್ನಡ ಪಂಡಿತರಾದ ಬಸಯ್ಯ ಮೇಷ್ಟ್ರು ಮನೆ ಇತ್ತು. ಅವರ ಮಗಳೂ ಅಮೃತಾ ನನ್ನ ವಯಸ್ಸಿನವಳೇ. ನಮ್ಮೂರಿನಲ್ಲಿ ಕೋ ಎಜುಕೇಷನ್ ಇರಲಿಲ್ಲವಾದ್ದರಿಂದ ನಾವು ಬೇರೆಬೇರೆ ಶಾಲೆಗಳಿಗೆ ಹೋಗುತ್ತಿದ್ದೆವು. ಓದಿನಲ್ಲಿ ಬಹಳ ಚುರುಕು ಅಮೃತಾ ಎಂದು ನನಗೆ ಕೇಳಿ ಗೊತ್ತಿತ್ತು. ಒಂದು ದಿನ ಹೀಗೇ ರಾತ್ರಿ ಎರಡು ಘಂಟೆಯ ಹೊತ್ತಿಗೆ ಇರಬಹುದು, ನಾನು ಬಹಿರ್ದೆಸೆಗೆಂದು ಎದ್ದು ನಮ್ಮ ಹಿತ್ತಲಿಗೆ ಬಂದು ನೋಡಿದಾಗ ಬಸಯ್ಯ ಮೇಷ್ಟ್ರು ಮನೆಯಲ್ಲಿ ಇನ್ನೂ ದೀಪ ಉರಿಯುತ್ತಿರುವುದು ಕಾಣಿಸಿತು. ಆಗ ಪರೀಕ್ಷೆ ಸಮಯ ನಿಧಾನವಾಗಿ ಹತ್ತಿರಹತ್ತಿರ ಬರುತ್ತಿತ್ತು, ನಮ್ಮ ತರಗತಿಯ ಪಾಠ ಪ್ರವಚನಗಳೆಲ್ಲ ಮುಗಿದಿದ್ದವಾದ್ದರಿಂದ ನಾವು ತರಗತಿಗಳಿಗೆ ಹೋಗದೆ ನಮ್ಮ ಫೈನಲ್ ಪ್ರಿಪರೇಷನ್ ಮಾಡಿಕೊಳ್ಳುತ್ತಿದ್ದೆವು. ನನ್ನ ಮನಸ್ಸಿಗೆ ಅದೇನು ಅನ್ನಿಸಿತೋ ಬಿಟ್ಟಿತೋ - ಅಬ್ಬಾ, ಅಮೃತಾ ಇನ್ನೂ ಓದುತ್ತಿದ್ದಾಳೆ, ನಾನು ಇಲ್ಲಿ ನಿದ್ದೆ ಹೊಡೆಯುತ್ತಿದ್ದೇನೆ - ಎಂದು ಅನ್ನಿಸಿದ್ದೇ ತಡ ನಾನೂ ಲಗುಬಗೆಯಿಂದ ಪುಸ್ತಕಗಳನ್ನು ತೆಗೆದು ಓದತೊಡಗಿದೆ, ಮನೆಯವರು ಇಷ್ಟೊತ್ತಿನಲ್ಲಿ ಅದೇನು ಓದ್‌ತೀಯೋ ಮಲಗೋ ಎಂದರೂ ಕೇಳದೇ ನಾನು ಬೆಳಗ್ಗಿನ ಜಾವದವರೆಗೆ ಆದಿನ ಓದಿದ ನೆನಪು. ಅಂದಿನಿಂದ ಒಂದು ಹೊಸ ಹವ್ಯಾಸವೂ ಹುಟ್ಟಿ ಬಿಟ್ಟಿತ್ತು - ಮಧ್ಯಾಹ್ನ ಒಂದಿಷ್ಟು ಹೊತ್ತು ನಿದ್ರೆ ಮಾಡಿದರೆ ಮಾತ್ರ ಸಾಕಾಗುತ್ತಿತ್ತು, ರಾತ್ರಿ ಎಲ್ಲಾ ಯಾವ ಸದ್ದು-ಗದ್ದಲವಿಲ್ಲದೇ ನಿರಂತರವಾಗಿ ಓದಬಹುದಾಗಿತ್ತು - ಬೆಳಗ್ಗಿನ ಜಾವ ಸಣ್ಣಗೆ ಜೊಂಪು ಬಂದು ಆಗಾಗ್ಗೆ ಮಲಗುವುದನ್ನು ಬಿಟ್ಟರೆ, ನನ್ನ ನಿದ್ರಾ ನಡವಳಿಕೆ ಸಂಪೂರ್ಣವಾಗಿ ಬದಲಾಗಿತ್ತು - ಅಂದಿನಿಂದ ಇಂದಿನವರೆಗೆ ನನಗೆ ನಿದ್ರೆ ಮಾಡುವುದಾಗಲಿ, ಮಾಡದೇ ಇರುವುದಾಗಲೀ ಯಾವತ್ತೂ ಸಮಸ್ಯೆ ಎಂದು ಅನ್ನಿಸಿಯೇ ಇಲ್ಲ - ನನಗೆ ಒಳ್ಳೆಯ ಅಂಕಗಳು ಬಂದಿದ್ದರ ಕ್ರ್ಡೆಡಿಟ್ ಅಮೃತಾಳಿಗೆ ಸೇರಬೇಕು.

ಹೀಗೆ ತಂಪು ಹೊತ್ತಿನಲ್ಲಿ ಬಸಯ್ಯ ಮೇಷ್ಟ್ರು ಮಗಳನ್ನು ನೆನೆಯುವುದಕ್ಕೆ ವಿಶೇಷ ಕಾರಣಗಳೇನೂ ಇಲ್ಲದಿದ್ದರೂ - ಆದಿನ ನನ್ನ ಮನಸ್ಸಿನಲ್ಲಿ ಹುಟ್ಟಿದ ಒಂದು ಮಿಥ್ಯಾ ಪೈಪೋಟಿಯ ಮನೋಭಾವ ಇಂದಿಗೂ ನನ್ನ ಮನಸ್ಸಿನಲ್ಲಿದೆ, ಅದು ಇನ್ನು ಮುಂದೆಯೂ ಇರುತ್ತದೆ. ಈ ಪೈಪೋಟಿಯಿಂದ ಏನೇನೋ ಆಗಿದೆ ಎಂದು ಯೋಚಿಸಿಕೊಂಡಂತೆಲ್ಲ ಹಲವಾರು ವಿಷಯಗಳಲ್ಲಿ ನನ್ನನ್ನು ಮೊದಲಿಗನನ್ನಾಗಿ ಕಂಡುಕೊಳ್ಳುತ್ತೇನೆ.

ನನಗೋಸ್ಕರ ನಾನು ಓದಿದ್ದರೆ, ನನ್ನ ಪಾಡಿಗೆ ನಾನು ಬದುಕಿದ್ದರೆ ಚೆನ್ನಿತ್ತು, ಅದರ ಬದಲಿಗೆ ಪೈಪೋಟಿ ಎನ್ನುವ ಮಧ್ಯವರ್ತಿಯ ಸಹವಾಸಕ್ಕೆ ಹೋದಾಗ ಬರಿ ಅಂಕೆ ಸಂಖ್ಯೆಗಳು ಮುಖ್ಯವಾಗಿ ಹೋಗುತ್ತವೆಯೇ ವಿನಾ ಆಯಾ ವಸ್ತುಗಳ ಸ್ವಾರಸ್ಯವೇ ಕಳೆದು ಹೋಗುವ ಹೆದರಿಕೆ ಇದೆ. ನಿನ್ನೆಗಳು ಎನ್ನುವ ಡ್ರಮ್‌ಗಳಲ್ಲಿ ಕುಳಿತು ಏರಿಳಿತಗಳಿರುವ ರಸ್ತೆಗಳಲ್ಲಿ ನಾಳೆಗಳು ಎಂಬ ಕನಸುಗಳ ಹೊತ್ತು ಸದ್ದು ಮಾಡುತ್ತಾ ಉರುಳಿಕೊಂಡು ಹೋಗುತ್ತಿರುವ ನನಗೆ ಪೈಪೋಟಿ ಎನ್ನುವುದು ಏರಿನಲ್ಲಿ ನೂಕುವ ತಂತ್ರವೋ ಅಥವಾ ಇಳಿಜಾರಿನಲ್ಲಿ ಜೋರಾಗಿ ಓಡುವಂತೆ ಮಾಡುವ ಅತಂತ್ರವೋ ಯಾರು ಬಲ್ಲರು?

No comments: